ನೇಗಿಲಯೋಗಿ ಶರಣ ಒಕ್ಕಲಿಗ ಮುದ್ದಣ್ಣನವರ ವಚನ – ನಿರ್ವಚನ | ಶ್ರೀಮತಿ ಜಗದೇವಿ ದಾಂಡ್ರಾ, ಕಲಬುರಗಿ

ವಚನ:
ಪೈರಿಗೆ ನೀರು ಬೇಕೆಂಬಲ್ಲಿ ಉಚಿತವನರಿದು ಬಿಡಬೇಕು.
ಕ್ರೀಗೆ ಅರಿವು ಬೇಕೆಂಬಲ್ಲಿ ಉಭಯವನರಿದು ಘಟಿಸಬೇಕು.
ಏರಿ ಹಿಡಿವನ್ನಕ್ಕ ನೀರ ಹಿಡಿದಡೆ ಸುಖವಲ್ಲದೆ ಮೀರಿದರುಂಟೆ?
ಕ್ರೀಯ ಬಿಡಲಿಲ್ಲ, ಅರಿವು ಮರೆಯಲಿಲ್ಲ.
ಬೆಳೆಯ ಕೊಯಿದ ಮತ್ತೆ, ಹೊಲಕ್ಕೆ ಕಾವಲುಂಟೆ?
ಫಲವ ಹೊತ್ತ ಪೈರಿನಂತೆ, ಪೈರಿನೊಳಕೊಂಡ ಫಲದಂತೆ,
ಅರಿವು ಆಚರಣೆಯೆಲ್ಲ ನಿಂದು, ಆಚರಣೆ ಅರಿವಿನಲ್ಲಿ ಲೇಪನಾದ ಮತ್ತೆ
ಕಾಮಭೀಮ ಜೀವಧನದೊಡೆಯನೆಂಬುದ ಭಾವಿಸಲಿಲ್ಲ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-767/ವಚನ ಸಂಖ್ಯೆ-1734)

ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ:
ಕ್ರೀ: ಕ್ರಿಯೆ, ಕಾರ್ಯ, ಕೆಲಸ.
ಘಟಿಸು: ಕೂಡು, ಒಂದಾಗು, ಮಿಳಿತವಾಗು

ಒಕ್ಕಲಿಗ ಮುದ್ದಣ್ಣ ಶರಣರು ಅಂದಿನ ಕಲ್ಯಾಣದ ಅನುಭವ ಮಂಟಪದ ಅನುಭಾವಿಗಳು. ಮೂಲತಃ ಇವರು ವಿಜಯಪುರ ಜಿಲ್ಲೆಯ ಜೋಳದಹಾಳ ಗ್ರಾಮದವರು. ಮುಂದೆ ಬಸವಣ್ಣನವರ ಮಹಿಮೆಯನ್ನರಿತು ಕಲ್ಯಾಣಕ್ಕೆ ಬಂದು ಒಕ್ಕಲುತನ ಕಾಯಕ ಕೈಕೊಳ್ಳುವ ಮುಖಾಂತರ ದಾಸೋಹ ನಡೆಸಿದವರು. ಬಸವಕಲ್ಯಾಣದ ಸಮೀಪದ ನಾರಾಯಣಪುರ ಎಂಬ ಗ್ರಾಮದಲ್ಲಿ ಇವರ ಹೆಸರಿನಲ್ಲಿರುವ ದೇವಾಲಯವಿದೆ. ಅವರ ಸಮಾಧಿ ಸ್ಥಳವೆ ದೇವಾಲಯ ಆಗಿದೆ. ಆ ಊರಿನ ಕೆರೆಯ ದಂಡೆಯ ಮೇಲಿರುವ ಈ ಸ್ಥಳ ಅವರ ಕಾಯಕಕ್ಕೆ ಯೋಗ್ಯವಾದ ಸ್ಥಳವಾಗಿದೆ. “ಕಾಮಭೀಮಜೀವಧನದೊಡೆಯ” ಅಂಕಿತನಾಮದಲ್ಲಿ 12 ವಚನಗಳು ಲಭ್ಯವಾಗಿವೆ.

ನಿರ್ವಚನ:
ತಮ್ಮ ಕೃಷಿ ಕಾಯಕದ ಅನುಭವಗಳ ಸಾರವೆ ಅವರ ಈ ವಚನ. ಕಾಯಕವನ್ನು ಮುಖ್ಯವಾಗಿರಿಸಿಕೊಂಡು ಅದರ ಮೂಲಕ ಆಧ್ಯಾತ್ಮ ಪರಿಚಯಿಸುವ ಅವರ ರೀತಿ ಎಂತಹವರನ್ನು ಬೆರಗುಗೊಳಿಸುವದು. ವೈಜ್ಞಾನಿಕವಾಗಿ ಹೇಳುವ ರೀತಿಯೂ ಗಮನಿಸುವಂತಹದೇ ಆಗಿರುವದು

ಪೈರಿಗೆ ನೀರು ಬೇಕೆಂಬಲ್ಲಿ ” ಮೊದಲ ಸಾಲು ಜ್ಞಾನ ಮತ್ತು ಕ್ರಿಯೆಗಳ ಸಮನ್ವಯತೆಗೆ ಹಿಡಿದ ಕನ್ನಡಿಯಾಗಿದೆ. ಬೆಳೆಗೆ ಸಿಕ್ಕಾಪಟ್ಚೆ ನೀರು ಬಿಡುವಂತಿಲ್ಲ ಹಾಗೆ ಬಿಟ್ಟರೆ ಬೆಳೆ ಕೊಳೆತು ಹೋಗುವದೆಂಬ ಆ ಜ್ಞಾನ ಇರಬೇಕು, ಇಲ್ಲವಾದರೆ ಮಾಡುವ ಕಾಯಕ ಹಾಳಾಗುವದೆಂಬ ಲೌಕಿಕ ಸತ್ಯವನ್ನು ಆಧ್ಯಾತ್ಮಿಕ ಹಿನ್ನೆಲೆಯೊಳಗೆ ವಿವರಿಸಿರುತ್ತಾರೆ. ಹಾಗೆಯೆ ತನು ಮನಗಳಲ್ಲಿರುವ ಜ್ಞಾನ ಮತ್ತು ಕ್ರಿಯೆಗಳನ್ನು ಸಹ ಸಮತೋಲನದಿಂದ ಮತ್ತು ಸಮರ್ಪಕ ರೀತಿಯಿಂದ ಬಳಸಿಕೊಂಡಾಗ ಮಾತ್ರ ಸಾಮರಸ್ಯ ಪಡೆಯಲು ಸಾಧ್ಯವಿದೆ ಎನ್ನುತ್ತಾರೆ.

ಮುಂದುವರೆದು ಏರಿ ಅಂದರೆ ಸುತ್ತಲೂ ಕಟ್ಟಿದ ದಡಕ್ಕೆ ಸರಿಯಾಗಿ ನೀರು ತುಂಬಬೇಕು, ದಡಕ್ಕಿಂತ ನೀರು ಹೆಚ್ಚಾದರೆ ಆ ಇಡೀ ದಡ ಒಡೆದು ಹೋಗುವಂತೆ ಈ ಜ್ಞಾನ ಮತ್ತು ಕ್ರಿಯೆಗಳೆಲ್ಲವೂ ಅಷ್ಟೆ ಸಮ ಪ್ರಮಾಣದಲ್ಲಿರಬೇಕೆ ಹೊರತು ಜ್ಞಾನವಿದ್ದು ಕ್ರಿಯೆ ಇರದಿದ್ದರೆ ಕ್ರಿಯೆಯೊಳಗೆ ಜ್ಞಾನವಿರದಿದ್ದರೆ ಅದು ಒಡೆದು ಹೋದ ಕೆರೆಯಂತೆ ಎಂಬ ಎಚ್ಚರಿಕೆಯನ್ನು ಸಹ ಕೊಡುವರು.

ಮುಂದುವರಿದು ವಚನಕಾರರು ಇವೆರೆಡರ ಸಮರಸದಿಂದ ಲಿಂಗಾಂಗ ಸಾಮರಸ್ಯವಾದ ಮೇಲೆ ಮತ್ಯಾವುದರ ಅವಶ್ಯಕತೆಯಿಲ್ಲ ಎಂಬ ನಿರ್ಧಾರಕ್ಕೆ ಬರುತ್ತಾರೆ. ಬೆಳೆಯು ಕೊಯ್ದು ರಾಶಿ ಮಾಡಿಕೊಂಡ ಮೇಲೆ ಮತ್ತೆ ಹೊಲ ಕಾಯುವ ಅವಶ್ಯಕತೆಯಿಲ್ಲ. ಕಾಯುತ್ತೇನೆ ಎಂದು ಹೊರಟರೆ ಅದಕ್ಕಿಂತ ದೊಡ್ಡ ಅಜ್ಞಾನ ಇನ್ನೊಂದಿಲ್ಲ. ಹಾಗೆಯೆ ಅರಿವು ಆಚರಣೆಯಲ್ಲಿ ಅಂದರೆ ಕ್ರಿಯೆಯಲ್ಲಿ ನಿಂತು ಮಾಡುವ ಕ್ರಿಯೆ ಅರಿವಿನೊಳಗೆ ಕೂಡಿದಾಗ ಬಯಲ ಸ್ಥಿತಿ ಉಂಟಾಗುವದು. ಅಲ್ಲಿ ನಾನು ನೀನು, ಜ್ಞಾನ ಕ್ರಿಯೆ, ಅರಿವು ಆಚಾರ ಇಂತಹ ಯಾವ ವಿಷಯವು ಇರುವದಿಲ್ಲ.

ಒಟ್ಟಾರೆ ಒಕ್ಕಲಿಗ ಮುದ್ದಣ್ಣ ಶರಣರು ಪ್ರಕೃತಿಯು ಹೇರಳವಾಗಿ ನೀಡಿರುವ ನೀರನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತಮ ಫಸಲನ್ನು ಬೆಳೆದು ಸಂತೋಷದಿಂದ ದಾಸೋಹ ಮಾಡುವಂತೆ ಅನುಭಾವ ಎಂಬ ಫಸಲು ಬೆಳೆಯಬೇಕಾದರೆ ಅರಿವು ಮತ್ತು ಕ್ರಿಯೆಯೆಂಬ ನೀರಿನ ಅವಶ್ಯಕತೆಯಿದೆಂಬುದನ್ನು ವಿವರಿಸುವರು.

ಶ್ರೀಮತಿ ಜಗದೇವಿ ದಾಂಡ್ರಾ,
ಶರಣ ತತ್ವ ಚಿಂತಕರು,
ಗೋದೂತಾಯಿ ನಗರ,
ಕಲಬುರಗಿ.
ಮೋಬೈಲ್‌ ಸಂ. 98864 34308

  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ:
    • ಮೋಬೈಲ್ ನಂ. 9741 357 132.
    • e-Mail ID: admin@vachanamandara.in | info@vachanamandara.in

Loading

Leave a Reply