![]()

ವಚನ:
ಲಿಂಗನಿಷ್ಠೆಯಿಲ್ಲದವರಂಗಳವ ಮೆಟ್ಟಲಾಗದು.
ಜಂಗಮಪ್ರೇಮವಿಲ್ಲದವರೊಡನೆ ಮಾತನಾಡಲಾಗದು.
ಪ್ರಸಾದವ ಪಡೆಯದವರ ಸಮಪಙ್ಞ್ತಯಲ್ಲಿ ಕುಳಿತು
ಪ್ರಸಾದ ಭೋಗವ ಮಾಡಲಾಗದು.
ಇಂತೀ ಲಿಂಗ ಜಂಗಮ ಪ್ರಸಾದ ವಿಶ್ವಾಸವಿಲ್ಲದವರಿಗೆ ನರಕ ತಪ್ಪದು.
ಅಂಥವರ ಸಂಗವ ಸತ್ಯಸಜ್ಜನರು ಮಾಡಲಾಗದು.
ಅದೇನು ಕಾರಣವೆಂದಡೆ;
ಪ್ರಾಣಲಿಂಗ ಶಿಲಾಭೇದಂ ಚರಲಿಂಗಂತು ಯೋ ನರಃ |
ಪ್ರಸಾದಂ ದ್ರವ್ಯ ಭಾವೇನ ರೌರವ ನರಕಂ ವ್ರಜೇತ್ ||
ಎಂದುದಾಗಿ, ಇಂತೀ ಲಿಂಗ ಜಂಗಮ ಪ್ರಸಾದ ಸದ್ಭಾವ
ನಂಬುಗೆಯ ಭಕ್ತಿ ಬೆಸುಗೆಯಿಲ್ಲದವರ
ಎನಗೆ ತೋರದಿರಯ್ಯ ರೇಕಣ್ಣಪ್ರಿಯ ನಾಗಿನಾಥಾ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-77/ವಚನ ಸಂಖ್ಯೆ-175)
ಶರಣ ಬಹುರೂಪಿ ಚೌಡಯ್ಯನವರು ಅಂದಿನ ಕಲ್ಯಾಣದ ಅನುಭವ ಮಂಟಪದ ಅನುಭಾವಿಗಳು. ಇವರು ಮೂಲತಃ ಆಂಧ್ರಪ್ರದೇಶದ ರೇಕಳಿಕೆ ಗ್ರಾಮದ ಬ್ರಾಹ್ಮಣ ದಂಪತಿಗಳಾದ ಜನವಶ್ಯ ಮತ್ತು ಧರ್ಮವತಿ ಅವರ ಮಗನಾಗಿ ಜನಿಸಿದವರು. ಬೀದರ ಜಿಲ್ಲೆಯ ರೇಕಳಿಕಿ ಎನ್ನುವ ಗ್ರಾಮವು ಸಹ ಚೌಡಯ್ಯನವರಿಗೆ ಸಂಬಂಧಿಸಿದ ನೆಲೆಯಾಗಿದೆಯೆಂಬುವುದು ಸಂಶೋದಕರ ಅಭಿಪ್ರಾಯ. ಬಹುರೂಪಿ ಕಾಯಕವನ್ನು ಮಾಡುತ್ತಿದ್ದು ಅಂದರೆ ವಿವಿಧ ವೇಷಗಳನ್ನು ಧರಿಸಿ ಜನರನ್ನು ರಂಜಿಸುವ ಮತ್ತು ಧರ್ಮಪ್ರಸಾರ ಮಾಡುವ ಜನಪದ ಕಲೆ ಇವರ ವೃತ್ತಿಯಾಗಿತ್ತು. ಕಲ್ಯಾಣಕ್ಕೆ ಬಂದ ಮೇಲೆ ತಮ್ಮ ಕುಲಕಸುಬನ್ನೇ ಶಿವಶರಣರ ತತ್ವಗಳ ಪ್ರಸಾರಕ್ಕೆ ಬಳಸಿಕೊಂಡು ಕೇವಲ ನಟರಷ್ಟೇ ಅಲ್ಲದೆ ಗಾಯನ ಮತ್ತು ನರ್ತನ ಕಲೆಯಲ್ಲಿಯೂ ನಿಪುಣತೆ ಪಡೆದವರು. “ರೇಕಣ್ಣಪ್ರಿಯ ನಾಗಿನಾಥ” ಎಂಬ ಅಂಕಿತನಾಮದಲ್ಲಿ ರಚಿಸಿದ ಸುಮಾರು 66 ವಚನಗಳು ಇಲ್ಲಿಯವರೆಗೆ ಲಭಿಸಿವೆ.
ಧಾರವಾಡ ಜಿಲ್ಲೆಯ ಹುಬ್ಬಳ್ಳಿಗೆ 10 ಕಿ.ಮೀ ಅಂತರದಲ್ಲಿ ಭೈರಿದೇವರಕೊಪ್ಪ ಅಥವಾ ಬಹುರೂಪಿ ದೇವರಕೊಪ್ಪದಲ್ಲಿಯೇ ಐಕ್ಯರಾದರೆಂದು ಕೆಲವು ಐತಿಹ್ಯಗಳು ಹೇಳುತ್ತವೆ. ಇನ್ನೂ ಕೆಲವು ವಿದ್ವಾಂಸರು ಆತ ಭಾಲ್ಕಿಯ ಬಳಿಯ ರೇಕಳಿಕೆಯಲ್ಲಿಯೇ ಐಕ್ಯರಾದರು ಎಂದು ಹೇಳಲಾಗುತ್ತದೆ.
ನಿರ್ವಚನ:
ಈ ವಚನದಲ್ಲಿ ಲಿಂಗ ಜಂಗಮ ಪ್ರಸಾದದ ಮಹತ್ವವನ್ನು ಹೇಳುವರು. ಲಿಂಗದ ಮೇಲೆ ನಿಷ್ಠೆ ಇಲ್ಲದವರನ್ನು, ಜಂಗಮರನ್ನು ಗೌರವಿಸಿದವರನ್ನು ಮತ್ತು ಪ್ರಸಾದದ ಮಹತ್ವ ಅರಿಯದವರ ಸಂಗಡ ಸಮಪಂಕ್ತಿಯಲ್ಲಿ ಕೂಡಲು ಆಗುವುದಿಲ್ಲ. ಅಂತವರನ್ನು ನೋಡಲು ಆಗುವುದಿಲ್ಲ. ಕಾರಣ ಲಿಂಗ ಕೇವಲ ಶಿಲೆಯಲ್ಲ, ಜಂಗಮ ಕೇವಲ ಮನುಷ್ಯನಲ್ಲ ಮತ್ತು ಪ್ರಸಾದ ಕೇವಲ ದ್ರವ್ಯ ಅಥವಾ ವಸ್ತುವಾಗಿ ಕಂಡರೆ ಅಂತವರು ರೌರವ ನರಕಕ್ಕೆ ಹೋಗುತ್ತಾರೆ ಎಂದು ಎಚ್ಚರಿಸುತ್ತಾರೆ.
ಅದಕ್ಕಾಗಿಯೇ ಸಂಸ್ಕೃತದ ಒಂದು ಶ್ಲೋಕವನ್ನು ವಚನದಲ್ಲಿ ಉಲ್ಲೇಖಿಸುತ್ತಾ “ಪ್ರಾಣಲಿಂಗ ಶಿಲಾಭೇದಂ” ಎಂದರೆ ನಮ್ಮೊಳಗಿನ ದೈವ ಅಥವಾ ಆತ್ಮಲಿಂಗ ಮತ್ತು ಶಿಲೆಯ ರೂಪದ ಲಿಂಗ ಎರಡು ಒಂದೇ ಎಂದು ಭಾವಿಸುವುದು ಮತ್ತು ಅವುಗಳ ನಡುವೆ ಬೇಧ ಕಲ್ಪಿಸಬಾರದು. ಶಿವಶರಣರ ಪ್ರಕಾರ ಲಿಂಗವು ಕೇವಲ ಶಿಲೆಯೆಲ್ಲ, ಅದು ಪರಶಿವನ ಕುರುಹು. ಅದನ್ನು ಕೇವಲ ಶಿಲೆ ಎಂದು ನೋಡದೆ ಅದರಲ್ಲಿರುವ ದೈವತ್ವವನ್ನು ಕಾಣಬೇಕು. ಇಲ್ಲಿ ಅದ್ವೈತ ಭಾವವಿದೆ ಸ್ಥಾವರಲಿಂಗ ಮತ್ತು ಚರಲಿಂಗಗಳೆರಡು ಶಿವನ ಸ್ವರೂಪಗಳೇ. ಇವುಗಳ ನಡುವೆ ವ್ಯತ್ಯಾಸ ಕಾಣುವವನು ಅಜ್ಞಾನಿಯಾಗುತ್ತಾನೆ.
ಇನ್ನು “ಚರಲಿಂಗಂತು ಯೋ ನರಃ” ಎಂದರೆ ತಿರುಗಾಡುವ ದೈವ ಸ್ವರೂಪಿಯಾದ ಜಂಗಮನನ್ನು ಕೇವಲ ಒಬ್ಬ ನರ ಅಥವಾ ಸಾಮಾನ್ಯ ಮನುಷ್ಯ ಎಂದು ಭಾವಿಸುವುದು ಸಮಾಜದಲ್ಲಿ ಸಂಚರಿಸುತ್ತಾ ಜ್ಞಾನ ಬೋಧನೆ ಮಾಡುವ ಜಂಗಮರನ್ನು ಹುಲು ಮಾನವರಂತೆ ಕಡೆಗಣಿಸಬಾರದು. ಅವರಲ್ಲಿಯೂ ಶಿವನ ಚೈತನ್ಯವಿರುತ್ತದೆ ಎಂದು ನಂಬುವುದು ಶರಣರ ಅಭಿಪ್ರಾಯ. ಒಂದು ವೇಳೆ ಬೇಧ ಕಲ್ಪಿಸಿದರೆ ನರಕಕ್ಕೆ ಹೋಗುವರು ಎನ್ನುವರು.
ಇನ್ನು “ಪ್ರಸಾದ ದ್ರವ್ಯ ಭಾವೇನ” ಎನ್ನುವಲ್ಲಿ ಪ್ರಸಾದ ಎಂದರೆ ದೇವರಿಗೆ ಅರ್ಪಿತವಾದ ವಸ್ತು. ದ್ರವ್ಯ ಭಾವ ಎಂದರೆ ಅದನ್ನು ಕೇವಲ ಒಂದು ಭೌತಿಕ ಪದಾರ್ಥ ಎಂಬ ಸಾಮಾನ್ಯ ದೃಷ್ಟಿಯಿಂದ ನೋಡುವುದು ಅದಕ್ಕಾಗಿ ಚೌಡಯ್ಯನು ಪ್ರಸಾದವನ್ನು ತಿನ್ನುವ ವಸ್ತುವೆಂದು ಭಾವಿಸಿ ರುಚಿ ಅಥವಾ ಬೆಲೆ ಬಗ್ಗೆ ತರ್ಕ ಮಾಡುವವನು ನರಕಕ್ಕೆ ಭಾಜನ ಆಗುತ್ತಾರೆ ಎನ್ನುವರು.
ಶಿವಶರಣರ ಪ್ರಕಾರ ಪ್ರಸಾದ ಎಂದರೆ ಕೇವಲ ಹಸಿವು ನೀಗಿಸುವ ಆಹಾರವಲ್ಲ. ಅದು ಶಿವನ ಕೃಪೆ ಎನ್ನುವರು. ಪ್ರಸಾದವನ್ನು ರುಚಿಯಿಂದ ನೋಡುವಂತಿಲ್ಲ. ಪ್ರಸಾದವನ್ನು ಸ್ವೀಕರಿಸುವಾಗ ಮನಸ್ಸು ನಿರ್ಮಲವಾಗಿರಬೇಕು. ಅದರಲ್ಲಿ ದ್ರವ್ಯದ ಗುಣಗಳನ್ನು ಹುಡುಕದೆ ದೈವಿಕ ಗುಣವನ್ನು ಕಾಣಬೇಕು. ಅದೊಂದು ಆಧ್ಯಾತ್ಮಿಕ ಪರಿಕಲ್ಪನೆ ಹಾಗಾಗಿ ಶರಣರು ಪ್ರಸಾದವನ್ನು ಮೂರು ವಿಧದಲ್ಲಿ ವಿಂಗಡಿಸುತ್ತಾರೆ. ಶುದ್ಧ ಪ್ರಸಾದ, ಸಿದ್ದಿ ಪ್ರಸಾದ, ಪ್ರಸಿದ್ದಿ ಪ್ರಸಾದ ಎಂದು. ಅಂದರೆ ಪ್ರಸಾದವು ಜ್ಞಾನ, ಪರಬ್ರಹ್ಮ, ಆನಂದ, ಗುರು, ಲಿಂಗ ಮತ್ತು ಜಂಗಮ ಹೀಗೆ ಎಲ್ಲವೂ ಆಗಿದೆ. ಅಂತಹ ಪ್ರಸಾದಕ್ಕೆ ನಾನು ನಮಸ್ಕರಿಸುತ್ತೇನೆ ಎನ್ನುವರು.
ಶರಣರ ತತ್ವಗಳಲ್ಲಿ ಅಚಲವಾದ ನಂಬಿಕೆ ಇಟ್ಟ ಬಹುರೂಪಿ ಚೌಡಯ್ಯನವರು ಅವುಗಳನ್ನು ಅಳವಡಿಸಿಕೊಂಡು ಬಸವಾನುಯಾಯಿಯಾಗಿ ಶರಣರ ಆಚರಣೆ ವೃತಗಳನ್ನು ಬೇರೆ ಬೇರೆ ಪಾತ್ರಗಳಲ್ಲಿ ರಸವತ್ತಾಗಿ ಮನಮುಟ್ಟುವಂತೆ ತೋರುತ್ತಿದ್ದರು. ಹಾಸ್ಯ, ಶೃಂಗಾರ, ವಿಡಂಬನೆ ಮತ್ತು ಟೀಕೆಗಳ ಅಭಿನಯಗಳ ಮೂಲಕ ಜನರನ್ನು ಎಚ್ಚರಿಸುವ ದಿಟ್ಟ ಗಣಾಚಾರ ಕಾಯಕ ಅವರದಾಗಿತ್ತು. ಜೊತೆಗೆ ಸಾಮಾಜಿಕ ಕಳಕಳಿಯೂ ಕೂಡ ಇತ್ತು. ಬಹುರೂಪಿ ಚೌಡಯ್ಯನವರ ವಚನಗಳು ತತ್ವದ ದೃಷ್ಟಿಯಿಂದ ಸಾಹಿತ್ಯದ ದೃಷ್ಟಿಯಿಂದ ಮೇಲ್ಮಟ್ಟದವುಗಳಾಗಿವೆ, ಸರಳವಾದ ಸತ್ವಪೂರ್ಣವಾದ ಭಾಷೆ, ಅರ್ಥ ಪೂರ್ಣ ಉದಾಹರಣೆಗಳು, ಸುಂದರ ಉಪಮಾನಗಳು, ರೂಪಕಗಳು ಇವು ಅವರ ವಚನಗಳ ವೈಶಿಷ್ಟಗಳು. ಶೈಲಿ ಸಹಜ ಮತ್ತು ನಿರಾಡಂಬರವಾಗಿವೆ.
ಜಾನಪದ ಕಲೆಯನ್ನು ಕಾಯಕ ರೂಪದಿಂದ ಶಿವಪೂಜೆ ಮಟ್ಟಕ್ಕೆ ಏರಿಸಿ ಅವುಗಳ ಮುಖೇನ ಸಕಲ ಜೀವಾತ್ಮರಿಗೆ ಲೇಸನೆ ಬಯಸುವ ಶರಣರ ತತ್ವಗಳನ್ನು ಜನರ ಬಾಳಿನಲ್ಲಿ ಬಿತ್ತಿ ಲೋಕ ಪೂಜ್ಯ ಎನಿಸಿದವರು ಶರಣ ಬಹುರೂಪಿ ಚೌಡಯ್ಯನವರು. ರಾಗವನ್ನು ಯೋಗವನ್ನಾಗಿಸಿದ ಮಹಾತ್ಮರಿವರು. ಜನಪದ ಕಲೆಗಳು ಶರಣ ಬಹುರೂಪಿ ಚೌಡಯ್ಯನವರಿಂದ ಬೆಳೆದು ಬದುಕಿ ಬಾಳಿದವು. ಅವರಿಂದ ಕಲಾಲೋಕದಲ್ಲಿ ಅವುಗಳಿಗೆ ವಿಶಿಷ್ಟ ಸ್ಥಾನ ದೊರಕಿತು ಎನ್ನಬಹುದು.
ಡಾ. ಶೈಲಜಾ ಎನ್. ಬಾಗೇವಾಡಿ
ಕನ್ನಡ ಉಪನ್ಯಾಸಕರು,
ಸರ್ಕಾರಿ ಪದವಿ ಕಾಲೇಜು (ಸ್ವಾಯತ್ತ),
ಕಲಬುರಗಿ.
ಮೋಬೈಲ್. ಸಂ. 94485 77901
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ದ ಸಂಚಾಲಕರನ್ನು ಸಂಪರ್ಕಿಸಬೇಕಾದ:
- ಮೋಬೈಲ್ ನಂ. 9741 357 132
- e-Mail ID: info@vachanamandara.in / admin@vachanamandara.in






Total views : 62562