ಡಾ. ಎಂ. ಎಂ. ಕಲಬುರ್ಗಿಯವರನ್ನೇ ಹೀಯಾಳಿಸುತ್ತಿರುವ ವಚನ ಸಾಹಿತ್ಯದ ಪ್ರಕಾಂಡ ಪಂಡಿತ ಸೋಮೇಶ ಕುಲಕರ್ಣಿ | ಡಾ. ವಿಜಯಕುಮಾರ ಕಮ್ಮಾರ, ತುಮಕೂರು.

Loading

https://youtu.be/PqBEOo1m7RA
(ಸೋಮೇಶ ಕುಲಕರ್ಣಿ)

ತನ್ನನ್ನು ತಾನು ವಚನ ಸಾಹಿತ್ಯದ ಜಗತ್ಪ್ರಸಿದ್ಧ ವಿದ್ವಾಂಸನೆಂದು TV Camera ಎದುರು ಕುಳಿತು ಬಿಂಬಿಸಿಕೊಳ್ಳುತ್ತಿರುವ ಸೋಮೇಶ ಕುಲರ್ಣಿ ಅವರು ಮಾತನಾಡಿರುವ YouTube Channel ನಲ್ಲಿ ಹರಿದಾಡುತ್ತಿರುವ ಸಂದರ್ಶನದ Video ವನ್ನು ಒಂದು ಸಾರಿ ಗಮನಿಸಿ ಇದರಲ್ಲಿ ಪ್ರತಿಪಾದಿತವಾಗಿರುವ ಸುಳ್ಳುಗಳ ಸರಮಾಲೆಗಳಿಗೆ ಸೋಮೇಶ ಕುಲಕರ್ಣಿ ಅವರ ಭಾಷೆಯಲ್ಲಿಯೇ ಉತ್ತರವನ್ನು ಕೊಡುವ ಸಣ್ಣ ಪ್ರಯತ್ನ. ಹಾಗೆಂದ ಮಾತ್ರಕ್ಕೆ ನಾನೇನು ಜಗತ್ಪ್ರಸಿದ್ಧ ವಚನ ಸಾಹಿತ್ಯ ವಿದ್ವಾಂಸನೂ ಅಲ್ಲಾ, ನೋಬೆಲ್‌ ಪ್ರಶಸ್ತಿ ಪಡೆದ ಸೃಜನಶೀಲ ಸಾಹಿತಿಯೂ ಅಲ್ಲ. ನನ್ನ ತಂದೆ ಲಿಂ. ಶ್ರೀ. ಈಶ್ವರ ಕಮ್ಮಾರ ಅವರು ನನಗೆ ಬಾಲ್ಯದಿಂದಲೂ ವಚನ ಸಾಹಿತ್ಯ ಕುರಿತಂತೆ ತಿಳಿಸಿಕೊಟ್ಟ ಕೆಲವು ವಿಷಯಗಳನ್ನು ಮಾತ್ರ ಅರಿತಿದ್ದೇನೆ. ಈ ಲೇಖನದಲ್ಲಿಯೂ ಕೂಡ ತಪ್ಪುಗಳು ಇರುವ ಸಾಧ್ಯತೆಗಳು ಇರುವುದರಿಂದ ಪ್ರಾಜ್ಞರು ಪರಾಮರ್ಶಿಸಿ ತಿಳಿಸಿದರೆ ಸೂಕ್ತ ತಿದ್ದುಪಡಿ ಮಾಡುತ್ತೇನೆ. ಎಲ್ಲದಕ್ಕೂ ಕಾಲವೇ ಉತ್ತರಿಸಲಿದೆ. ಇಷ್ಟು ಪೀಠಿಕೆಯೊಂದಿಗೆ ಈ ಸೋಮೇಶ ಕುಲಕರ್ಣಿ ಎನ್ನುವ ಮಹಾನುಭಾವನ ಈ ದೃಶ್ಯಮಾಧ್ಯಮದ ಸುರುಳಿಯನ್ನು ಕೇಳಿಸಿಕೊಂಡು ಅಕ್ಷರೀಕರಣ ಮಾಡಿ ಉತ್ತರವನ್ನು ಕೊಡೋಣ. Let us begin … …

ಕೆ. ಎಸ್. ಎನ್. ಸ್ವಾಮಿ ಹೊಸದಿಗಂತ ಚಾನಲ್ಲನ ಸಂಪಾದಕ: ಜಾಮದಾರ ಥರದವರು ಹೇಳುವಂತದ್ದು ಅಥವಾ ಆ ರೀತಿಯ ಮಾತುಕತೆ ಆಡುವಂತವರೆಲ್ಲ ಹೇಳುವಂತದ್ದು ಲಿಂಗಾಯತ ಅನ್ನೋದನ್ನ ಬಸವಣ್ಣನವರೇ ಸ್ವತಃ ಸ್ಥಾಪಿಸಿದಂತ ಪ್ರತ್ಯೇಕ ಧರ್ಮ ನಮ್ದು ಅನ್ನುವಂತ ಮಾತನ್ನು ಹೇಳ್ತಾರೆ. ಅದು ಯಾವುದು ಹಿಂದೆ ಇರಲಿಲ್ಲ, ಬಸವಣ್ಣನವರೇ ಹೊಸದಾಗಿ ಅದು ಲಿಂಗಾಯತ ಧರ್ಮವನ್ನ ಸ್ಥಾಪಿಸಿದ್ರು ಅಂತ. So, ನಿಮ್ಮ ಪ್ರಕಾರ ಅದು ಎಷ್ಟು ಸರಿ.

ಸೋಮೇಶ್‌ ಕುಲಕರ್ಣಿ: ನೋಡಿ ಸರ್ ಲಿಂಗಾಯತ ಅನ್ನುವಂತದ್ದು ವೀರಶೈವದ ಪರ್ಯಾಯ ಪದ. ವೀರಶೈವದ ಪರ್ಯಾಯ ಪದ ಹೇಗೆ ಅಂತ ಕೇಳಿದ್ರೆ ವೀರಶೈವ ಅನ್ನುವಂತದ್ದು ಶಾಸ್ತ್ರಗಳಲ್ಲಿ ಬಳಕೆಯಾದಂತ ಪದ. ಲಿಂಗಾಯತ ಅನ್ನುವುದು ಜನರೂಢಿಯಲ್ಲಿ ಬಳಕೆಯಾದ ಪದ.

ಡಾ. ವಿಜಯಕುಮಾರ ಕಮ್ಮಾರ: ಮಿಸ್ಟರ್‌ ಸೋಮೇಶ ಕುಲಕರ್ಣಿಯವರು ವೀರಶೈವ ವೀರಶೈವ ಎನ್ನುವ ಶಬ್ದವನ್ನು ಪದೇ ಪದೇ ಈ ಸಂದರ್ಶನದುದ್ದಕ್ಕೂ ಹೇಳಿದ್ದಾರೆ. ಹಾಗಾದರೆ ಈ ವೀರಶೈವ ಶಬ್ದ ಅಥವಾ ಇದನ್ನು ಧರ್ಮ, ಜಾತಿ ಅಥವಾ ಪಂಥವೆನ್ನುವ ಇವರ ಈ ಶಬ್ದದ ಅರ್ಥವನ್ನು ತಿಳಿದುಕೊಳ್ಳೋಣ. ಪದೇ ಪದೇ ನಾನು ಹೇಳೋದು ನಾನಿಲ್ಲಿ ನಾನು ಓದಿರುವ ಮತ್ತು ನನಗೆ ಗೊತ್ತಿರುವ ಸಂಗತಿಗಳನ್ನು ಮಾತ್ರ ಹೇಳತಾ ಇದೀನಿ, ಇದೇ ಸತ್ಯ ಎಂದು ಪ್ರತಿಪಾದಿಸುವಷ್ಟು ಮೂರ್ಖನಲ್ಲ. ಇದರಲ್ಲಿಯೂ ತಪ್ಪುಗಳು ಇರಬಹುದು.

ಸಾಕ್ಷಾತ್‌ ಶಿವನಿಂದಲೇ ವೀರಶೈವಧರ್ಮ ಸ್ಥಾಪನೆಯಾಗಿದೆ ಮತ್ತು ಈ ಧರ್ಮಕ್ಕೆ ಶಿವನಷ್ಟೇ ವಯಸ್ಸಾಗಿದೆ ಎಂದು ವೀರಶೈವರು ಹುಟ್ಟು ಹಾಕಿರುವ ಕೆಲವು ಸಂಸ್ಕೃತ ಭೂಯಿಷ್ಠ ಗ್ರಂಥಗಳು ಹೇಳುತ್ತವೆ. ವೀರಶೈವ ಧರ್ಮಸಂಸ್ಥಾಪಕರಾದ ರೇಣುಕರು ಕಲ್ಲಿನಿಂದ ಉದ್ಭವವಾದರು. ರೇಣುಕರು ಭೂಮಿ ಹುಟ್ಟಿದಾಗಲೇ ಹುಟ್ಟಿದರು. ಈ ಧರ್ಮವು ಸ್ಥಾಪನೆಯಾಗಿದ್ದು ಕೃತಯುಗ ಎನ್ನುವ ಮೊದಲ ಯುಗದಲ್ಲಿ ಅಂತಾ ಅವರ ಧರ್ಮಗ್ರಂಥಗಳಲ್ಲಿ ಉಲ್ಲೇಖವಾಗಿದೆ ಅಂತಾ ಹೇಳುತ್ತಾರೆ. ಇಂಥ ಕಾಲಘಟ್ಟವನ್ನು ಕುರಿತು ಪೌರಾಣಿಕ ಅಂದಾಜಿನ ಪ್ರಕಾರ, ಕೃತಯುಗವು ಆರಂಭವಾದದ್ದು 43 ಲಕ್ಷದ 20 ಸಾವಿರ ವರ್ಷಗಳ ಹಿಂದೆ. ಹಾಗಾಗಿ ಪಂಚಾಚಾರ್ಯರು ಹೇಳುವಂತೆ ವೀರಶೈವವು 43 ಲಕ್ಷದ 20 ಸಾವಿರ ವರ್ಷಗಳಷ್ಟು ಹಳೆಯದು! ಈ ವಿಷಯದ ಕುರಿತಾಗಿ ಜೀವವಿಜ್ಞಾನದ ವಿವಿಧ ಶಾಖೆಗಳು ಏನನ್ನು ಪ್ರತಿಪಾದಿಸುತ್ತವೆ ಎನ್ನುವುದನ್ನು ನೋಡೋಣ.

 “Physical anthropology” is concerned with all expects of how humans came to be and how we adapt physiologically to the external environment”.
 “ಭೌತಿಕ ಮಾನವಶಾಸ್ತ್ರ” ವು ಮಾನವರು ಹೇಗೆ ಬಂದರು ಮತ್ತು ನಾವು ಬಾಹ್ಯ ಪರಿಸರಕ್ಕೆ ಶಾರೀರಿಕವಾಗಿ ಹೇಗೆ ಹೊಂದಿಕೊಳ್ಳುತ್ತೇವೆ ಮತ್ತು ವಿಕಸನ ಪ್ರಕ್ರಿಯೆಯ ವಿವರಗಳನ್ನು ಅರ್ಥಮಾಡಿಕೊಳ್ಳುವ ಅಧ್ಯಯನ.
 ಸಮಯ ಮತ್ತು ಬಾಹ್ಯಾಕಾಶ (Space and Time) ಆಯಾಮಗಳಲ್ಲಿ ಮಾನವ ಜೀವನದ ಅಧ್ಯಯನವನ್ನು ಪ್ರಮುಖವಾಗಿ ಮಾನವಶಾಸ್ತ್ರ (Anthropology), ಭೂಗೋಳಶಾಸ್ತ್ರ (Geography) ಮತ್ತು ಸಮಾಜಶಾಸ್ತ್ರ (Sociology) ದಂತಹ ವಿಷಯಗಳಲ್ಲಿ ವ್ಯಾಪಕವಾಗಿ ನಡೆಸಲಾಗುತ್ತದೆ. ಇದು ಮಾನವನ ಮೂಲ, ವಿಕಾಸ, ಸಂಸ್ಕೃತಿ ಮತ್ತು ನಡವಳಿಕೆಯನ್ನು ಅರ್ಥೈಸಲು ಸಹಾಯ ಮಾಡುತ್ತದೆ.

ಮಾನವ ಜೀವ ವಿಕಾಸದ ಬಗ್ಗೆ ವಿಸ್ತಾರವಾಗಿ 1859 ರಲ್ಲಿ ಬಣ್ಣಿಸಿದವರು ಚಾರ್ಲ್ಸ್ ಡಾರ್ವಿನ್. ಇವರ ನಂತರ ಥಾಮಸ್ ಹಕ್ಸ್‌ಲೀ 1863 ರಲ್ಲಿ ತಮ್ಮ ” Evidence as to Man’s Place in Nature” (ಪ್ರಕೃತಿಯಲ್ಲಿ ಮಾನವನ ಸ್ಥಾನದ ಬಗ್ಗೆ ಪುರಾವೆಗಳು) ಪುಸ್ತಕದಲ್ಲಿ ಮಾನವ ಮತ್ತು ಪ್ರಸ್ತುತ ವಾನರರ ಹೋಲಿಕೆಗಳನ್ನು ವಿಶಾಲವಾಗಿ ವಿವರಿಸಿದರು.

ಈ ಎಲ್ಲಾ ಅಧ್ಯಯನಗಳ ಆಧಾರದ ಮೇಲೆ ಮಾನವ ಜೀವ ವಿಕಾಸದ ಕಾಲಕ್ರಮ ಈ ರೀತಿಯಲ್ಲಿ ಇದೆ:
ಮಾನವ ವಿಕಾಸವು ಸುಮಾರು 50 ಲಕ್ಷ ದಿಂದ 80 ಲಕ್ಷ ವರ್ಷಗಳ ಹಿಂದೆ ಅಥವಾ ಅದಕ್ಕೂ ಮೊದಲು ಆಫ್ರಿಕಾ ಖಂಡದಲ್ಲಿ ಉದಯಿಸಿದ ಒಂದು ಜಾತಿಯ ವಾನರ. ಈಗಿನ ಗೊರಿಲ್ಲಾ, ಚಿಂಪಾಜಿ, ಮತ್ತು ಮಾನವನ ಮೂಲ ಜೀವಿಯೆಂದು ತರ್ಕಿಸಿದ್ದಾರೆ. ಆನಂತರ ಆ ಬಗೆಯ ಅನೇಕ ಸಂತತಿಗಳು ಉದಯಸಿದರೂ ಅವಲ್ಲಾ ಅಳಿದು, ಕೇವಲ ಒಂದು ಸಂತತಿ ಮಾತ್ರ ಉಳಿದು ಇಂದಿನ ಮಾನವ ಕುಲಕ್ಕೆ (ಹೋಮೋಸೇಪಿಯನ್ಸ್) ಕಾರಣವಾಗಿದೆ ಎಂದು ತರ್ಕಿಸಿದ್ದಾರೆ. ಇದಕ್ಕೆ ಇದುವರೆಗೆ ಮಣ್ಣಿನಲ್ಲಿ ಕಲ್ಲಿನ ಪದರುಗಳಲ್ಲಿ ಗುಹೆಗಳಲ್ಲಿ ದೊರೆತ ನೂರಾರು ಅಥವಾ ಸಾವಿರಾರು ಪ್ರಾಚೀನ ಮಾನವ ಸಂತತಿಯವರ ಎಲುಬುಗೂಡು, ತಲೆ ಬುರುಡೆಗಳೇ ಆಧಾರ.

“ಯುವಲ್ ನೋಹ್ ಹರಾರಿ” ಅವರು ಇಸ್ರೇಲ ದೇಶದ ಮಧ್ಯಕಾಲೀನವಾದಿ, ಮಿಲಿಟರಿ ಇತಿಹಾಸಕಾರ ಮತ್ತು ಜನಪ್ರಿಯ ವಿಜ್ಞಾನ ಬರಹಗಾರ. ಅವರು ಜೆರುಸಲೆಮ್‌ನ ಹೀಬ್ರೂ ವಿಶ್ವವಿದ್ಯಾಲಯದಲ್ಲಿ ಇತಿಹಾಸದ ಪ್ರಾಧ್ಯಾಪಕರಾಗಿದ್ದಾರೆ. ಮಾನವ ಜೀವ ವಿಕಾಸ ಕುರಿತಂತೆ ಅವರ ಪ್ರಸಿದ್ಧ ಪುಸ್ತಕ “Sepians: A Brief History of Human Kind” ದಲ್ಲಿ ಬರೀತಾರೆ: ಆಧುನಿಕ ಮಾನವ ಮತ್ತು ಮಾನವ ಸಮಾಜ ವಿಕಾಸಗೊಂಡದ್ದೇ 40 ಸಾವಿರ ವರ್ಷಗಳಿಂದ ಈಚೆಗೆ.

ಹಾಗಾದರೆ, ರೇಣುಕರು ಮಾನವನ ಜೀವ ಮತ್ತು ಪ್ರಜ್ಞಾ ವಿಕಾಸವಾಗುವ ಮೊದಲು ವೀರಶೈವ ಧರ್ಮವನ್ನು ಬೋಧಿಸಿದ್ದು ಯಾರಿಗೆ? ಯಾವಾಗ? ವಿಶ್ವದಲ್ಲಿ ಮಾನವರೇ ಇಲ್ಲದಿದ್ದಾಗ ರೇಣುಕರು ತನ್ನ ಧರ್ಮವನ್ನು ಯಾರಿಗೆ ಬೋಧಿಸುತ್ತಿದ್ದರು? ಹಾಗಾಗಿ ಈ ವೀರಶೈವರು ಹುಟ್ಟು ಹಾಕಿದ ಭೂಮಿ ಹುಟ್ಟಿದಾಗಲೇ ಹುಟ್ಟಿರುವ ರೇಣುಕರು ಮತ್ತು ವೀರಶೈವ ಧರ್ಮ ಕೋಟ್ಯಾಂತರ ವರ್ಷಗಳಷ್ಟು ಹಳೆಯ ಧರ್ಮ ಎನ್ನುವುದು ಕೇವಲ ಕಾಲ್ಪನಿಕ ಸಂಗತಿ.

ಅತ್ಯಂತ ವಿಚಿತ್ರವೆಂದರೆ, ಶಿವನೇ ವೀರಶೈವ ಧರ್ಮವನ್ನು ಸ್ಥಾಪಿಸಿದ ಎನ್ನುವುದು. ವಿಶ್ವವನ್ನು ಸೃಷ್ಟಿಸಿದ ಶಿವ ವೀರಶೈವ ಧರ್ಮವನ್ನು ಮಾತ್ರ ಏಕೆ ಸ್ಥಾಪಿಸಿದ? ಬೇರೆ ಬೇರೆ ಧರ್ಮಗಳನ್ನು ಯಾಕೆ ಹುಟ್ಟು ಹಾಕಲಿಲ್ಲಾ. ವಾಸ್ತವ ಸಂಗತಿಯೆಂದರೆ, ಯಾವುದೇ ಕಾಲಘಟ್ಟದಲ್ಲಾದರೂ ಎಲ್ಲ ಧರ್ಮಗಳೂ ಕೇವಲ ಮಾನವರಿಂದ ಅಥವಾ ಐತಿಹಾಸಿಕ ಪುರುಷರಿಂದ ಮಾತ್ರ ಧರ್ಮಸ್ಥಾಪನೆಗಳಾಗಿವೆ ಎನ್ನುವುದನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬೇಕು. ಪೌರಾಣಿಕ ಪುರುಷರು ಮತ್ತು ಅವೈಜ್ಞಾನಿಕವಾಗಿ ಕಲ್ಲಲ್ಲಿ ಹುಟ್ಟಿದವರು ಒಂದು ಧರ್ಮ ಸ್ಥಾಪನೆಯನ್ನು ಮಾಡಲು ಸಾಧ್ಯವೇ ಇಲ್ಲಾ. ಧರ್ಮವನ್ನು ಹುಟ್ಟುಹಾಕಿದವರೆಲ್ಲರೂ ಐತಿಹಾಸಿಕ ಮಹಾಪುರುಷರು. ಅಂತಹ ಧರ್ಮಸ್ಥಾಪಕರಲ್ಲಿ ಕೆಲವರು ತಾವು ದೇವದೂತರು ಅಥವಾ ದೇವರ ಪುತ್ರರು ಎಂದು ಹೇಳಿಕೊಂಡಿದ್ದಾರೆ.

ವಾಸ್ತವವಾಗಿ, ದೇವರಿಂದಲೇ ನೇರವಾಗಿ ಸ್ಥಾಪನೆಗೊಂಡ ಯಾವ ಧರ್ಮವೂ ಪ್ರಪಂಚದಲ್ಲಿ ಇಲ್ಲ. ಜಗತ್ತಿನಲ್ಲಿ ಇರುವ ಪ್ರಮುಖ ಧರ್ಮಗಳ ಸ್ಥಾಪಕರು ಯಾರೆಂಬುದು ಎಲ್ಲರಿಗೂ ಗೊತ್ತಿದೆ.

  1. ಕ್ರಿ. ಪೂ. 2000: ಜೂಯಿಷ್ ಧರ್ಮವನ್ನು ಸ್ಥಾಪಿಸಿದವನು ಅಬ್ರಹಾಂ. ಅವನ ದೇವರು ಯಾವೋಹ (ಜೇವೊನ್ಹಾ).
  2. ಕ್ರಿ. ಪೂ. 600: ಪಾರ್ಸಿ ಧರ್ಮಸ್ಥಾಪಕ ಜೊರಾಷ್ಟ್ರ. ಅವನ ದೇವರು ಅಹುರ್‌ಮು.
  3. ಕ್ರಿ. ಪೂ. 585: ಬೌದ್ಧಧರ್ಮ ಸ್ಥಾಪನೆಯಾಗಿದ್ದು ಗೌತಮ ಬುದ್ಧನಿಂದ. ಅವನಿಗೆ ದೇವರಿರಲಿಲ್ಲ.
  4. ಕ್ರಿ. ಪೂ. 580: ಜೈನಧರ್ಮವನ್ನು ಪುನರುತ್ಥಾನಗೊಳಿಸಿದವನು ಮಹಾವೀರ. ಅವನಿಗೂ ದೇವರಿಲ್ಲ.
  5. ಸುಮಾರು 2000 ವರ್ಷಗಳ ಹಿಂದೆ ಕ್ರೈಸ್ತಧರ್ಮದ ಸ್ಥಾಪಕ ಏಸುಕ್ರಿಸ್ತ. ಯವೋಹಾ ಅವನೇ ದೇವರು.
  6. ಕ್ರಿ. ಶ. 610: ಇಸ್ಲಾಮಿನ ಧರ್ಮಪಿತ ಪ್ರವಾದಿ ಮಹಮ್ಮದ್ ಪೈಗಂಬರ್. ಅವರ ದೇವರು ಅಲ್ಲಾ,
  7. 15 ನೇ ಶತಮಾನ: ಸಿಖ್ ಧರ್ಮಸ್ಥಾಪಕ ಗುರುನಾನಕ್, ಅವನ ದೇವರು ಹರ.

ಈಗ ಹೇಳಿ ಸೋಮೇಶ ಕುಲಕರ್ಣಿಯವರೆ, ವೀರಶೈವ ವೀರಶೈವ ಅಂತ ಬಂಬಡಾ ಬಜಾಯಿಸುತ್ತಿರುವ ನೀವು ವೀರಶೈವದ ಉಗಮದ ನಿಖರತೆಯನ್ನು ಹೇಳಿ ಮತ್ತು ಭೂಮಿ ಹುಟ್ಟಿದಾಗ ಕಲ್ಲೋದ್ಭವರಾದ ರೇಣುಕರು ವೀರಶೈವ ಧರ್ಮವನ್ನು ಸ್ಥಾಪಿಸಿ ವೀರಶೈವ ತತ್ವಬೋಧನೆಗಳನ್ನು ಯಾರಿಗೆ ಬೋಧಿಸಿದರು? ಹಾಗಾಗಿ ಲಿಂಗಾಯತರಿಗೆ ಅವಮಾನ ಮಾಡುವಂಥ ಎಡಬಿಡಂಗಿ ಕೆಲಸ ಮಾಡಬೇಡಿ ಅಂತಾ ನಮ್ಮ ಕಳಕಳಿಯ ವಿನಂತಿ.

ಸೋಮೇಶ್‌ ಕುಲಕರ್ಣಿ: ಓಕೆ. ಲಿಂಗ ಎನ್ನುವ ಶಬ್ದವೇ ಮೂಲದಲ್ಲಿ ಸಂಸ್ಕೃತ. ಲಿಂಗ ಪುರಾಣ ಅಂತನೆ ನಮ್ಮಲ್ಲಿ ಪುರಾಣ ಕಾಲದ 18 ಪುರಾಣಗಳಲ್ಲಿ ಇರೋದು ಆಯತ ಅನ್ನೋದನ್ನ ಸ್ವೀಕಾರ ಮಾಡಿಕೊಳ್ಳೋದು ಅಂತ. ಹಾಗಾಗಿ ಸ್ವತಹ ಕನ್ನಡ ನಾಡಿನ ಪರಮಪೂಜ್ಯ ಶ್ರೇಷ್ಠರಾಗಿರತಕ್ಕಂತ ನಮ್ಮ ಸಿದ್ದಗಂಗಾ ಶ್ರೀಗಳೇ ಹೇಳಿದರು. ವೀರಶೈವ ಲಿಂಗಾಯತ ಬೇರೆ ಬೇರೆ ಅಲ್ಲ. ಅದು ಜನಪದೀಯ ಶಬ್ದ ಲಿಂಗಾಯತ. ವೀರಶೈವ ಅನ್ನೋದು ಶಾಸ್ತ್ರೀಯ ಶಬ್ದ ಅಂತ ಹೇಳಿದ್ರು.

ಡಾ. ವಿಜಯಕುಮಾರ ಕಮ್ಮಾರ: ಮಿಸ್ಟರ್‌ ಸೋಮೇಶ ಕುಲಕರ್ಣಿಯವರು ಇಲ್ಲಿ ಮೂರು ಶಬ್ದಗಳನ್ನು ಉಚ್ಛರಿಸಿದ್ದಾರೆ. ವೀರಶೈವ, ಲಿಂಗಾಯತ ಮತ್ತು ಲಿಂಗ. ಲಿಂಗಾಯತ ಎನ್ನುವುದು ವೀರಶೈವಕ್ಕೆ ಪರ್ಯಾಯ ಪದ. ಪುರಾಣಗಳಲ್ಲಿ ಲಿಂಗ ಆಯತವನ್ನು ಉಲ್ಲೇಖಿಸಿದ್ದಾರೆ ಎಂದು ಮಾತನಾಡಿದ್ದಾರೆ.

ನನಗೆ 1990 ರಿಂದ ಅವರು ಲಿಂಗೈಕ್ಯರಾಗುವ ತನಕ ಆಶೀರ್ವದಿಸಿದ್ದ ಪರಮ ಪೂಜ್ಯ ಶೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರೇ ಸ್ವತಃ ಲಿಂಗಾಯತ ವೀರಶೈವ ಒಂದೇ ಎಂದು ಹೇಳಿದ್ದಾರೆ ಎನ್ನುವುದನ್ನೂ ಕೂಡ ಸೋಮೇಶ ಕುಲಕರ್ಣಿ ಮಹಾನುಭಾವರು ಹೇಳಿದ್ದಾರೆ. ಪರಮ ಪೂಜ್ಯ ಸ್ವಾಮೀಜಿಯವರು ಈಗ ಇಲ್ಲ. ಹಾಗಾಗಿ ನಾನು ಏನೇ ಬರೆದರೂ ತಪ್ಪಾಗುತ್ತೆ. ಹಾಗಾಗಿ ಈ ಕುರಿತು I am Liplocked.

ಮೇಲಿನ ಮಾತುಗಳನ್ನು ಕೇಳಿದಾಗ “ನಾನು ಶೈವನಿದ್ದೆ ವೀರಶೈವನಾದೆ ಎಂದು ಬಸವಣ್ಣನವರು ಹೇಳಿದ್ದಾರೆ. ಆದರೆ ಅವರ ವಚನಗಳಲ್ಲಿ ಎಲ್ಲಿಯೂ ಲಿಂಗಾಯತ ಪದ ಬಳಕೆಯಾಗಿಲ್ಲ” ಎಂದು ಶತಮಾನಗಳಿಂದ ಪಂಚಾಚಾರ್ಯರು ಮತ್ತು ತೀರ ಇತ್ತೀಚೆಗೆ ಸೋಮೇಶ ಕುಲಕರ್ಣಿಯವರಂಥ ವಚನ ಸಾಹಿತ್ಯದ ಮಹಾಜ್ಞಾನಿಗಳು ಹೇಳುತ್ತಲೇ ಇದ್ದಾರೆ. ಇದರಿಂದಾಗಿ ಜನರಲ್ಲಿ ಸಹಜವಾಗಿಯೆ ಗೊಂದಲ ಸೃಷ್ಟಿಯಾಗುತ್ತಿದೆ. ಮೊಟ್ಟ ಮೊದಲನೇಯದಾಗಿ ವೀರಶೈವ, ಲಿಂಗಾಯತ ಮತ್ತು ಲಿಂಗ ಪದಗಳ ಅರ್ಥ, ಸ್ವರೂಪ ಮತ್ತು ಸಿದ್ಧಾಂತಗಳನ್ನು ಪರಿಚಿಯಿಸುವದು ನಮ್ಮ ಕರ್ತವ್ಯ.

12 ನೇ ಶತಮಾನದಲ್ಲಿ ರಚನೆಯಾದ ವಚನ ಸಾಹಿತ್ಯ ಸರಿ ಸುಮಾರು 300 ವರ್ಷಗಳಷ್ಟು ದೀರ್ಘ ಕಾಲ ಮಣ್ಣಿನಲ್ಲಿ ಹೂತು ಹೋಗಿತ್ತು. ಇದಕ್ಕೆ ಕಾರಣ ವೈದಿಕಶಾಹಿಗಳು, ಪುರೋಹಿತ ವರ್ಗಗಳು ನಡೆಸಿದ ಶರಣರ ಕಗ್ಗೊಲೆ ಮತ್ತು ಹಿಂಸಾಚಾರ. ಈ ದಾಂಧಲೆ ಎಷ್ಟು ಭೀಕರವಾಗಿತ್ತು ಎಂದರೆ ಕಗ್ಗೊಲೆಯಾದಂಥ ಸ್ಥಳಗಳಲ್ಲಿ ಬಿದ್ದಂಥ ಹೆಣದ ರಾಶಿಯನ್ನು ಅಂತ್ಯ ಸಂಸ್ಕಾರವನ್ನೂ ಮಾಡಲು ಈ ಮೇಲ್ವರ್ಗದ ಜನರು ಬಿಟ್ಟಿರಲಿಲ್ಲ. ಎಲ್ಲ ಹೆಣಗಳನ್ನು ಕಾಡುಪ್ರಾಣಿಗಳು, ನಾಯಿನರಿಗಳು, ರಣಹದ್ದುಗಳು ತಿನ್ನಲಿ ಎಂದು ಹಾಗೆಯೇ ಬಿಟ್ಟಿದ್ದರೆಂದರೆ ಇದರ ಭೀಕರತೆ ನಿಮಗೆ ಆಗಬಹುದು. ಯಾಕೆಂದರೆ ಮೇಲ್ವರ್ಗದ ಜನರನ್ನು ಎದುರು ಹಾಕಿಕೊಂಡರೆ ಯಾವ ಶಿಕ್ಷೆ ಅನುಭವಿಸಬೇಕಾಗಿ ಬರುತ್ತದೆ ಎನ್ನುವುದನ್ನು ಜಗತ್ತಿಗೆ ತೋರಿಸುವುದು ಇವರ ಉದ್ದೇಶವಾಗಿತ್ತು. ಹಾಗಾಗಿ ಜನಸಾಮಾನ್ಯರು ಬಸವಣ್ಣ ಎಂದು ಹೆಸರು ಹಿಡಿದು ಕರೆಯುವುದೂ ಅಪರಾಧ ಎನ್ನುವಂತೆ ಭೀಕರ ದಾಂಧಲೆ ಮಾಡಿಸಿದ್ದು ಇತಿಹಾಸ ಪುಟಗಳಲ್ಲಿ ದಾಖಲೆಯಾದಂಥ ಸಂಗತಿ.

ಈ ಕಗ್ಗೊಲೆಗೆ ಶಾಸನಗಳ ಮತ್ತು Documentory Evidence ಕೊಡಿ ಅಂತಾ ಕೆಲವೇ ಕೆಲವು ಜನಿವಾರಧಾರಿ ವಿದ್ವಾಂಸರು ಕೇಳುತ್ತಿದ್ದಾರೆ. ಅದೂ ಇವರು Facebook, YouTube Channel ಮತ್ತಿತರ ಮಾಧ್ಯಮಗಳ ಮೂಲಕ. ಇಂಥ ಅನಾಗರೀಕರಿಗೆ ಹೇಗೆ ಮತ್ತು ಏನು ಉತ್ತರ ನೀಡಬೇಕೋ ಅರ್ಥಾ ಅಗುತ್ತಿಲ್ಲ. ಎಂತ ದರಿದ್ರ ಮನಃಸ್ಥಿತಿಯವರ ಜೊತೆಗೆ ನಾವು ಹೋರಾಟ ಮಾಡಬೇಕು ಎನ್ನುವುದು ತೀರ ತೀರ ಅಸಹ್ಯ ಹುಟ್ಟಿಸುವಂಥ ಸಂಗತಿ. ಇವರುಗಳಿಗೆ ಕಲ್ಯಾಣದಿಂದ ಉಳವಿಯವರೆಗಿನ ಹತ್ಯಕಾಂಡದ ಪ್ರಕರಣಗಳು ಗೊತ್ತಿದ್ದೂ ಇಂಥ ಹೀನಾಯ ಮಾತುಗಳನ್ನು ಆಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಗೊತ್ತಾಗುತ್ತದೆ.

ಈಗ ಮತ್ತೆ ಈ ಮೇಲ್ವರ್ಗದ ಜನರು ಈ ವಚನ ಸಾಹಿತ್ಯವನ್ನು ಹೀಯಾಳಿಸಿ ಬರೆಯುವುದು, Video ಮಾಡಿ ತಿರುಚುವುದನ್ನು ಮಾಡುವ ಕೆಲಸಕ್ಕೆ ಕೈ ಹಾಕಿದ್ದಾರೆ. Its very simple, they want to recreate the 12th Century Genoside again.

ಸುಮಾರು 300 ವರ್ಷಗಳಷ್ಟು ದೀರ್ಘ ಕಾಲ ಮಣ್ಣಿನಲ್ಲಿ ಹೂತು ಹೋಗಿದ್ದ ವಚನ ಸಾಹಿತ್ಯವನ್ನು ಪುನರುಜ್ಜೀವನಗೊಳಿಸಿದವರು 15 ನೇ ಶತಮಾನದ ವೀರಶೈವ ಹಾಗೂ ವೈದಿಕ ಪರಂಪರೆಯನ್ನು ಹೆಗಲು ಮೇಲೆ ಹೊತ್ತುಕೊಂಡಂಥ ಅತ್ಯಂತ ಶ್ರೇಷ್ಠ ಕುಲಸಂಜಾತರು ಎಂದು ಹೇಳಿಕೋಳ್ಳುವ ಶ್ರೇಣೀಕೃತ ಸಮಾಜದ ಮೇಲ್ವರ್ಗದ ಸಾಹಿತಿಗಳು.

ಹೀಗೆ 12 ನೇ ಶತಮಾನದಲ್ಲಿ ರಚನೆಯಾದ ವಚನ ಸಾಹಿತ್ಯವನ್ನು 15 ನೇ ಶತಮಾನದಲ್ಲಿ ಸಂಕಲನ ಮಾಡುವಲ್ಲಿ ಎಲ್ಲ ವೈದಿಕ ಕವಿಗಳು ಮಾಡಿದರು. ಸಂಕಲನ ಮಾಡಿ ಅಷ್ಟಕ್ಕೆ ಬಿಟ್ಟಿದ್ದರೆ ಅಧ್ವಾನಗಳು ನಡೆಯುತ್ತಿರಲಿಲ್ಲ. ಈ ಸಮಯದಲ್ಲಿ ಸಂದರ್ಭದಲ್ಲಿ ಬಸವಣ್ಣ, ಅಲ್ಲಮ ಪ್ರಭು ಮತ್ತು ಚೆನ್ನಬಸವಣ್ಣನವರ ವಚನಗಳನ್ನು ಷಟ್‌ಸ್ಥಲಕ್ಕನುಸಾರವಾಗಿ ವಿಂಗಡಿಸಿದರು. ಈ ಸಂಕಲನಗಳು ಮಠಮಾನ್ಯಗಳಲ್ಲಿ, ವಿದ್ವಜ್ಜನರ ಮತ್ತು ಶ್ರೀಮಂತರ ಮನೆಗಳಲ್ಲಿ ಸಂರಕ್ಷಿಸಲ್ಪಟ್ಟವು. ಇದೇ ಕಾರಣದಿಂದ ಈ ಷಟ್‌ಸ್ಥಲಕ್ಕನುಸಾರವಾಗಿ ಕಟ್ಟಲ್ಪಟ್ಟ ವಚನಗಳನ್ನು ತಮ್ಮ ಇಚ್ಛೆಗನುಸಾರವಾಗಿ ತಿದ್ದುವ ಸಾಹಸವನ್ನು ಈ ಪ್ರತಿಗಾಮಿ ವೈದಿಕ ಸಾಹಿತಿಗಳು ಮಾಡಲಿಲ್ಲ. ಹಾಗಾಗಿ ವೀರಶೈವ ಪದ ಈ ವಚನಗಳಲ್ಲಿ ಕಾಣುವುದಿಲ್ಲ.

ಬಸವಾದಿ ಶರಣರ ಚಿತ್ರಣಗಳನ್ನು ಕಟ್ಟಿಕೊಟ್ಟಂತಹ ಕವಿಗಳಾದ ಹರಿಹರ, ರಾಘವಾಂಕ ಮುಂತಾದ ಕವಿಗಳ ಸಾಹಿತ್ಯದಲ್ಲಿ ವೀರಶೈವ ಪದಪ್ರಯೋಗ ಕಂಡುಬರುವುದಿಲ್ಲ. ಬಸವಣ್ಣನವರ ಸಮಕಾಲೀನರಾದ ಪಂಡಿತಾರಾಧ್ಯರ ಕೃತಿಗಳಲ್ಲಿ, ಪಾಲ್ಕುರಿಕೆ ಸೋಮನಾಥನ ಕೃತಿಗಳಲ್ಲಿ ಕೂಡ ಅಪ್ಪಿತಪ್ಪಿ ವೀರಶೈವ ಪದ ಕಂಡುಬರುವುದಿಲ್ಲ. ತೆಲುಗಿನಲ್ಲಿ ರಚನೆಯಾದ ಪಾಲ್ಕುರಿಕೆ ಸೋಮನಾಥನ ಬಸವ ಪುರಾಣಮು ಕೃತಿಯನ್ನು ಕ್ರಿ. ಶ. 1368 ರಲ್ಲಿ ಭೀಮಕವಿ ಕನ್ನಡಕ್ಕೆ ಅನುವಾದ ಮಾಡುತ್ತಾನೆ. ಪಾಲ್ಕುರಿಕೆ ಸೋಮನಾಥ ಬಳಸಿದ “ವೀರಮಾಹೇಶ್ವರ” ಪದದ ಬದಲಿಗೆ ಭೀಮಕವಿ “ವೀರಶೈವ” ಪದ ಪ್ರಯೋಗ ಮಾಡಿದ.

ಎಲ್ಲದಕ್ಕಿಂತ ಪ್ರಮುಖ ವಿಚಾರವೆಂದರೆ ವೀರಶೈವ ವ್ರತವನ್ನು ಆಚರಿಸುವವರಿಗೆ “ವೀರವ್ರತಿ” ಗಳು ಎನ್ನುವುದು ಆ ಕಾಲಘಟ್ಟದಲ್ಲಿ ರೂಢಿಯೊಳಗಿತ್ತು. ಇಂಥ ವೀರವ್ರತಿಗಳನ್ನು ಬಸವಣ್ಣನವರು ತಮ್ಮ ವಚನಗಳಲ್ಲಿ ವಿಡಂಬನೆ ಮಾಡಿದ್ದಾರೆ.

ವೀರ ವ್ರತಿ ಭಕ್ತನೆಂದು ಹೊಗಳಿಕೊಂಬಿರಿ ಕೇಳಿರಯ್ಯಾ;
ವೀರನಾದಡೆ ವೈರಿಗಳು ಮೆಚ್ಚಬೇಕು,
ವ್ರತಿಯಾದಡೆ ಅಂಗನೆಯರು ಮೆಚ್ಚಬೇಕು,
ಭಕ್ತನಾದಡೆ ಜಂಗಮವೆ ಮೆಚ್ಚಬೇಕು.
ಈ ನುಡಿಯೊಳಗೆ ತನ್ನ ಬಗೆಯಿರೆ
ಬೇಡಿದ ಪದವಿಯನೀವ ಕೂಡಲಸಂಗಮದೇವ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-182/ವಚನ ಸಂಖ್ಯೆ-672)

ಬಸವಣ್ಣನವರು ಈ ವಚನದ ಮೂಲಕ ”ವೀರವ್ರತಿ ಎನ್ನಿಸಿಕೊಳ್ಳುವ ಭಕ್ತನು ವೀರನೂ ಅಲ್ಲ, ವ್ರತಿಯೂ ಅಲ್ಲ ಮತ್ತು ಭಕ್ತನೂ ಅಲ್ಲ” ಎಂಬುದನ್ನು ಸೂಚಿಸಿದ್ದಾರೆ. ಶರಣರು ವೀರಶೈವವ್ರತವನ್ನು ಮತ್ತು ವೀರವ್ರತಿಗಳನ್ನು ತಿರಸ್ಕರಿಸಿದ್ದರು ಎಂಬುದಕ್ಕೆ ಈ ವಚನಗಳು ಸಾಕ್ಷಿಯಾಗಿವೆ.

ವಚನ ಸಾಹಿತ್ಯಕ್ಕೆ ತಮ್ಮ ಬದುಕನ್ನೇ ಗಂಧವ್ರತದಂತೆ ಪಾಲಿಸಿಕೊಂಡು ಬಂದ ಡಾ, ವೀರಣ್ಣ ರಾಜೂರ ಅವರ ವೀರಶೈವ ಮತ್ತು ಲಿಂಗಾಯತ ಪದಬಳಕೆ ಕುರಿತಂತೆ ಮೌಲಿಕವಾದ ಲೇಖನವನ್ನು ಬರೆದಿದ್ದಾರೆ. ಈ ಲೇಖನವನ್ನು ನಮ್ಮ ವಚನಸಾಹಿತ್ಯ ಮಂದಾರ ಫೌಂಡೇಶನ್‌ (ರಿ) Website ನಲ್ಲಿ ಓದಬಹುದು.

https://vachanamandara.in/ವಚನಗಳಲ್ಲಿ-ವೀರಶೈವ-ಮತ್ತು-ಲ/
(ವಚನಗಳಲ್ಲಿ ವೀರಶೈವ ಮತ್ತು ಲಿಂಗಾಯತ (ಲಿಂಗವಂತ) ಪದಬಳಕೆ: ಒಂದು ಪರಾಮರ್ಶೆ | ಡಾ. ವೀರಣ್ಣ ರಾಜೂರ, ಧಾರವಾಡ)

  1. ವಚನ ಸಾಹಿತ್ಯ 12 ನೇ ಶತಮಾನದಲ್ಲಿ ಕಾಯಕಜೀವಿಗಳೆನಿಸಿದ ಬಸವಾದಿ ಶರಣರು ಗೈದ ಸಮಾಜೋ-ಧಾರ್ಮಿಕ ಚಳವಳಿಯ ಸಮರ್ಥ ಮಾಧ್ಯಮವಾಗಿ ಸೃಷ್ಟಿಯಾದ ಒಂದು ವಿನೂತನ – ಸ್ವತಂತ್ರ ಸಾಹಿತ್ಯ ಪ್ರಕಾರ.
  2. ಇದು ಯಾವುದೇ ಪಾರಂಪರಿಕ ಛಂದೋಬದ್ಧ ಕಾವ್ಯ ಲಕ್ಷಣದ ಬಂಧನಕ್ಕೆ ಒಳಗಾಗದ ಮುಕ್ತರೂಪ. ಸರಳತೆ, ಸಹಜತೆ, ಸ್ವಚ್ಛಂದತೆ ಇದರ ಸ್ವರೂಪ. ಹೀಗಾಗಿ ಇದರಲ್ಲಿ ಯಾರಾದರೂ ಹೆಚ್ಚಿನದನ್ನು ಸೇರಿಸಲು, ಇಲ್ಲವೇ ಕಡಿಮೆ ಮಾಡಲು ಅಥವಾ ಇಡಿಯಾಗಿ ಹೊಸದನ್ನೇ ಬರೆದು ಜೋಡಿಸಲು ಅವಕಾಶ ಉಂಟು.
  3. ಈ ಕಾರಣದಿಂದ ವಚನಗಳಲ್ಲಿ ಉದ್ದೇಶಿತ ಇಲ್ಲವೆ ಅನುದ್ದೇಶಿತ, ಸಕಾರಣ ಇಲ್ಲವೆ ವಿನಾಕಾರಣ; ಸದುದ್ದೇಶ ಇಲ್ಲವೇ ದುರುದ್ದೇಶದಿಂದ ಅನೇಕ ಪಾಠಾಂತರ, ಪ್ರಕ್ಷಿಪ್ತಗಳು ಉಂಟಾಗಿ ವಚನ ಸಾಹಿತ್ಯದ ಶುದ್ಧೀಕರಣ ಇಂದು ಒಂದು ಜಟಿಲವಾದ ಸಮಸ್ಯೆಯಾಗಿ ಪರಿಣಮಿಸಿದೆ.
  4. 12 ನೇ ಶತಮಾನದಲ್ಲಿ ಅನೇಕ ಶರಣರಿಂದ ಅಪಾರವಾಗಿ ಸೃಷ್ಟಿಯಾದ ವಚನ ಸಾಹಿತ್ಯ ಕಲ್ಯಾಣದ ಕ್ರಾಂತಿಯಿಂದಾಗಿ ಬಹುಪಾಲು ನಷ್ಟವಾಯಿತು; ಕೆಲವು ಭಾಗ, ಚದುರಿ ಹೋದ ಶರಣರ ಜೊತೆ ನಾಡಿನ ಬೇರೆ ಬೇರೆ ಕಡೆಗೆ ಹಂಚಿಹೋಯಿತು. 13 ಮತ್ತು 14 ಈ ಎರಡು ಶತಮಾನ ಕಾಲ ಗುಪ್ತ ನಿಧಿಯಂತೆ ಅಜ್ಞಾತವಾಸ ಅನುಭವಿಸಿತು.
  5. 15 ನೇ ಶತಮಾನ ವಚನ ಸಾಹಿತ್ಯದ ಪುನರುಜ್ಜೀವನದ ಕಾಲ. ಆಗ ಲಿಂಗಾಯತ ದೊರೆ ಪ್ರೌಢದೇವರಾಯ ವಿಜಯನಗರ ಸಾಮ್ರಾಜ್ಯದ ಅಧಿಪತಿಯಾಗಿದ್ದ. ಆತನ ಆಶ್ರಯದಲ್ಲಿ ನೂರೊಂದು ವಿರಕ್ತರೆಂಬ ಅನುಭಾವಿಗಳು ವಿರಾಜಮಾನರಾಗಿದ್ದರು. ಅವರು ದಿಕ್ಕು ದಿಕ್ಕಿಗೆ ಚದುರಿಹೋಗಿ ಅಲ್ಲಲ್ಲಿ ಅಡಗಿ ಕುಳಿತಿದ್ದ ಬಸವಾದಿ ಶರಣರ ಜ್ಞಾನನಿಧಿಯೆನಿಸಿದ ವಚನ ಸಾಹಿತ್ಯವನ್ನು ಸಂಗ್ರಹಿಸುವ ಕಾರ್ಯ ಕೈಕೊಂಡರು. ಆ ಕಾರಣದಿಂದ ಅನೇಕ ವಚನ ಕಟ್ಟುಗಳು ಒಂದೆಡೆ ರಾಶಿಗೊಂಡವು.
  6. ಹಾಗೆ ರಾಶಿಗೊಂಡ ವಚನ ಸಾಹಿತ್ಯವನ್ನು ಅಧ್ಯಯನಕ್ಕೆ ಒಳಪಡಿಸಿದ ಅವರು ಮುಕ್ತವಾಗಿದ್ದ ಅವುಗಳನ್ನು ತಮ್ಮ ತಮ್ಮ ಅನುಭವದ ಇತಿಮಿತಿಗಳ ಹಿನ್ನೆಲೆಯಲ್ಲಿ ಬೇರೆ ಬೇರೆ ತಾತ್ವಿಕ ಸ್ಥಲಕಟ್ಟಿನ ಬಂಧನಕ್ಕೆ ಅಳವಡಿಸಿದರು. ಹೀಗಾಗಿ ಸಕಲ ಪುರಾತನರ ವಚನಗಳು ಎಂಬ ಸಂಗ್ರಹಗಳು; ಷಟ್‌ಸ್ಥಲ, ಏಕೋತ್ತರ ಶತಸ್ಥಲ, ಮಿಶ್ರಷಟ್‌ಸ್ಥಲ ಎಂಬಂಥ ಸಂಕಲನಗಳು, ಶೂನ್ಯಸಂಪಾದನೆ – ಎಂಬಂಥ ಸಂಪಾದನೆಗಳು ಹುಟ್ಟಿಕೊಂಡವು.
  7. ಈ ಸಂದರ್ಭದಲ್ಲಿ ಸಂಕಲನಕಾರನ ಆಶಯಕ್ಕನುಗುಣವಾಗಿ ಕೆಲವು ವಚನಗಳು ತಿದ್ದುಪಡಿಗೊಳಗಾದವು; ಮತ್ತೆ ಕೆಲವು ವಚನಗಳು ಹೊಸದಾಗಿ ಸೇರಿಕೊಂಡವು, ಇನ್ನೂ ಕೆಲವು ವಚನಗಳಲ್ಲಿ ಮೂಲದಲ್ಲಿ ಇಲ್ಲದ ಸಂಸ್ಕೃತ ಶ್ಲೋಕಗಳು ಪ್ರವೇಶ ಪಡೆದವು. ಇದರಿಂದಾಗಿ ಮೂಲ ಶರಣರ ಮೂಲವಚನದ ಸ್ವರೂಪವನ್ನು ಕಂಡು ಹಿಡಿಯುವುದು ಕಷ್ಟ ಸಾಧ್ಯದ ಕಾರ್ಯವಾಗಿ ಪರಿಣಮಿಸಿತು.
  8. ಇಂದು ನಮಗೆ 12 ನೇ ಶತಮಾನದಲ್ಲಿ ಬರವಣಿಗೆಗೊಂಡ ಮೂಲ ಹಸ್ತಪ್ರತಿಗಳು ದೊರೆಯುತ್ತಿಲ್ಲ. ಈಗಿರುವವೆಲ್ಲ 15 ನೇ ಶತಮಾನದಿಂದೀಚೆಗೆ ನಕಲು-ಪ್ರತಿನಕಲು ಮಾಡಿದ ಹಸ್ತಪ್ರತಿಗಳು. ಅವುಗಳಲ್ಲಿಯೇ ಎಲ್ಲ ಪುರಾತನರ ವಚನಗಳು, ಷಟ್‌ಸ್ಥಲ ವಚನಗಳು ಹೆಚ್ಚು ಮಟ್ಟಿಗೆ ಮೂಲ ಸ್ವರೂಪವನ್ನು ಕಾಯ್ದುಕೊಂಡು ಬಂದಿವೆ ಎನಿಸಿದರೆ, ಉಳಿದ ವಿವಿಧ ನೆಲೆಯ ತಾತ್ವಿಕ ಸ್ಥಲಕಟ್ಟಿನ ಕೃತಿಗಳು ತಿದ್ದುಪಡಿಗೆ ಒಳಗಾಗಿವೆ ಎಂಬುದು ಎರಡರ ತೌಲನಿಕ ಅಧ್ಯಯನದಿಂದ ಸ್ಪಷ್ಟವಾಗುತ್ತದೆ.

ಉದಾಹರಣೆಗೆ:
ಬಸವಣ್ಣನವರ ಷಟ್‌ಸ್ಥಲ ಕಟ್ಟಿನಲ್ಲಿರುವ:
ಜ್ಞಾನದ ಬಲದಿಂದ ಬಲದಿಂದ ಅಜ್ಞಾನದ ಕೇಡು ನೋಡಯ್ಯ
ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯ
ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯ
ಪರುಷದ ಬಲದಿಂದ ಅವಲೋಹದ ಕೇಡು ನೋಡಯ್ಯ
ಕೂಡಲಸಂಗನ ಶರಣರ ಅನುಭಾವದ ಬಲದಿಂದ
ಎನ್ನ ಭವದ ಕೇಡು ನೋಡಯ್ಯಾ. (ವ. ಸಂ. 842)

ಎಂಬ ವಚನ ಗುಬ್ಬಿ ಮಲ್ಲಣ್ಣನ “ಗಣಭಾಷಿತ ರತ್ನಮಾಲೆ” ಎಂಬ ಸಂಕಲನದಲ್ಲಿ ಹೀಗೆ ಪಾಠಾಂತರಗೊಂಡಿದೆ:
ಜ್ಞಾನದ ಬಲದಿಂದ ಅಜ್ಞಾನ ಕೆಡುವುದು ನೋಡಯ್ಯ
ಜ್ಯೋತಿಯ ಬಲದಿಂದ ಕತ್ತಲೆ ಕೆಡುವುದು ನೋಡಯ್ಯ
ಪರುಷದ ಬಲದಿಂದ ಅವಲೋಹವು ಕೆಡುವುದು ನೋಡಯ್ಯ
ಕೂಡಲಸಂಗಮದೇವಯ್ಯ, ನಿಮ್ಮ ಅನುಭಾವಿಗಳ ಸಂಗದಿಂದ
ಎನ್ನ ಭವ ಕೆಡುವುದು ನೋಡಯ್ಯಾ. (ವ. ಸಂ. 11)

ಅಕ್ಕಮಹಾದೇವಿಯ ಈ ಕೆಳಗಿನ ವಚನ:
ಲಿಂಗ ಸಂಗ ಸುಖದಲ್ಲಿ ಮನ ವೇದ್ಯವಾಯಿತ್ತು
ಇನ್ನೆಲ್ಲಿಯಯ್ಯಾ ಎನಗೆ ನಿಮ್ಮಲ್ಲಿ ನಿರವಯವು ?
ಇನ್ನೆಲ್ಲಿಯಯ್ಯಾ ಎನಗೆ ನಿಮ್ಮಲ್ಲಿ ಕೂಡುವುದು ?
ಪರಮಸುಖ ಪರಿಣಾಮ ಮನ ಮೇರೆದಪ್ಪಿ
ನಾನು ನಿಜವನೈದುವ ಠಾವ ಹೇಳಾ ಚೆನ್ನಮಲ್ಲಿಕಾರ್ಜುನ (ವ.ಸಂ. 358)

ಹಲಗೆದೇವನ “ಶೂನ್ಯ ಸಂಪಾದನೆ”ಯಲ್ಲಿ ಈ ಕೆಳಗಿನಂತೆ ವಿಸ್ತಾರಗೊಂಡಿದೆ:
ಲಿಂಗಾಂಗ ಸಂಗಸುಖ ಸಮರಸ ಸುಖದಲ್ಲಿ ಮನ ವೇದ್ಯವಾಯಿತ್ತು
ನಿಮ್ಮ ಶರಣರ ಅನುಭಾವ ಸಂಗದಿಂದ
ಎನ್ನ ತನುಮನ ಪ್ರಾಣ ಪದಾರ್ಥವ ಗುರುಲಿಂಗಜಂಗಮಕ್ಕಿತ್ತು
ಶುದ್ಧಸಿದ್ಧ ಪ್ರಸಿದ್ಧ ಪ್ರಸಾದಿಯಾದೆನು.
ಆ ಮಹಾಪ್ರಸಾದದ ರೂಪು ರುಚಿ ತೃಪ್ತಿಯ
ಇಷ್ಟ ಪ್ರಾಣ ಭಾವಲಿಂಗದಲ್ಲಿ ಸಾವಧಾನದಿಂದರ್ಪಿಸಿ
ಮಹಾಘನ ಪ್ರಸಾದಿಯಾದೆನು.
ಇಂತೀ ಸರ್ವಾಚಾರ ಸಂಪತ್ತು ಎನ್ನ ತನುಮನ ವೇದ್ಯವಾಯಿತ್ತು
ಇನ್ನೆಲ್ಲಿಯಯ್ಯಾ ಎನಗೆ ನಿಮ್ಮಲ್ಲಿ ನಿರವಯವು?
ಇನ್ನೆಲ್ಲಿಯಯ್ಯಾ ನಿಮ್ಮಲ್ಲಿ ಕೂಡುವುದು?
ಪರಮಸುಖದ ಪರಿಣಾಮ ಮನ ಮೇರೆದಪ್ಪಿ
ನಾನು ನಿಜವನೈದುವ ಠಾವ ಹೇಳಾ ಚೆನ್ನಮಲ್ಲಿಕಾರ್ಜುನ ಪ್ರಭುವೆ. (ವ. ಸಂ. 1067)

ಚೆನ್ನಬಸವಣ್ಣನವರ ಈ ಕೆಳಗಿನ ವಚನ:
ಉಪದೇಶವ ಮಾಡಿದ ಗುರು ಒಂದೆ ಲಿಂಗವೊಂದೆಯಲ್ಲದೆ
ಸತಿಗೊಂದು ಲಿಂಗ, ಸುತಗೊಂದು ಲಿಂಗ
ಸೋದರಗೊಂದು ಲಿಂಗ, ದಾಸಿಗೊಂದು ಲಿಂಗ
ಇಂತು ಒಂದು ಮನೆಗೆ ಗುರುಲಿಂಗವನೆಂದು ಮಾಡಿದರೆ
ಮೆಚ್ಚರು ನಮ್ಮ ಕೂಡಲಚೆನ್ನಸಂಗನ ಶರಣರು. (ವ. ಸಂ. 172)

ಇದು ಗುಬ್ಬಿ ಮಲ್ಲಣ್ಣನ “ಗಣಭಾಷಿತ ರತ್ನಮಾಲೆ” ಸಂಕಲನದಲ್ಲಿ ಸಂಸ್ಕೃತ ಶ್ಲೋಕಗಳನ್ನು ಸೇರಿಸಿಕೊಂಡು ಕೆಳಗಿನಂತೆ ಬೆಳೆದು ನಿಂತಿದೆ:
ಉಪದೇಶ ಮಾಡುವ ಗುರು ಒಬ್ಬನಲ್ಲದೆ, ಲಿಂಗವೊಂದೆಯಲ್ಲದೆ
ಪತಿಗೊಂದು ಲಿಂಗ, ಸತಿಗೊಂದು ಲಿಂಗ, ಸುತಗೊಂದು ಲಿಂಗ
ಸೋದರಗೊಂದು ಲಿಂಗ, ದಾಸಿಗೊಂದು ಲಿಂಗ, ಭೃತ್ಯಗೊಂದು ಲಿಂಗ
ಇಂತೀ ಒಂದು ಮನೆಗೆ ಎರಡು ಲಿಂಗ ಉಂಟೆ?
ಅದೆಂತೆಂದಡೆ – ಶಿವನವಾಕ್ಯ:
“ದಾಸೀಗೋಪಾಲ ಭೃತ್ಯಾನಾಂ ಗೃಹಸ್ಥ ಸುತಯೋಃ ಶಿವಃ |
ಲಿಂಗ ಸಾಹಿತ್ಯಃ ಸರ್ವೇಕ್ಷಾಮನ್ಯಶ್ಚಾಂಡಾಲ ತದ್ಗೃಹಮ್ ||
ಮತ್ತೆಯು-
ಗುರುರೇಕೋ ಲಿಂಗಮೇಕಂ ದೀಕ್ಷೈಕಾ ತು ಪ್ರಸಾದಕಮ್|
ಏತದ್ವಯಮದಂ ದೇವ ವಿಶೇಷಂ ಪಾತಕಂ ಭವೇತ್ ||
ಎಂದುದಾಗಿ, ಇಂತೀ ಒಂದು ಮನೆಗೆ ಗುರು ಲಿಂಗವೆರಡಮಾಡಿ ನಡೆದರೆ
ಅಘೋರ ನರಕದಲ್ಲಿಕ್ಕುವ ನೋಡಾ ನಮ್ಮ ಕೂಡಲಚನ್ನಸಂಗಮದೇವರು. (ವ. ಸಂ. 228)

ಬಸವಣ್ಣನವರ ಈ ಕೆಳಗಿನ ವಚನ:
ಉಂಬಲ್ಲಿ ಉಡುವಲ್ಲಿ ಕ್ರೀಯಳಿಯಿತ್ತೆಂಬರು,
ಕೊಂಬಲ್ಲಿ ಕೊಡುವಲ್ಲಿ ಕುಲವನರಸುವರು.
ಎಂತಯ್ಯಾ, ಅವರ ಭಕ್ತರೆಂತೆಂಬೆ?
ಎಂತಯ್ಯಾ ಅವರ ಯುಕ್ತರೆಂತೆಂಬೆ?
ಕೂಡಲಸಂಗಮದೇವ ಕೇಳಯ್ಯಾ?
ಹೊಲತಿ ಶುದ್ಧನೀರ ಮಿಂದಂತಾಯಿತ್ತಯ್ಯಾ. (ವ. ಸಂ. 628)

ಇದು ಗುಬ್ಬಿ ಮಲ್ಲಣ್ಣನ “ಗಣಭಾಷಿತ ರತ್ನಮಾಲೆ” ಸಂಕಲನದಲ್ಲಿ ಸಂಸ್ಕೃತ ಶ್ಲೋಕಗಳನ್ನು ಸೇರಿಸಿಕೊಂಡು ಅನೇಕ ಪಾಠಾಂತರಗಳಿಂದ ಕೂಡಿ ನಿಂತಿದೆ:
ಉಂಬಲ್ಲಿ ಉಡುವಲ್ಲಿ ಕುಲವು ಅಳಿಯಿತೆಂಬಿರಿ
ಕೊಂಬಲ್ಲಿ ಕೊಡುವಲ್ಲಿ ಕುಲವನರಸುವ ಮಾದಿಗರನೇನೆಂಬೆನಯ್ಯಾ?
ಇವರನೆಂತು ಭಕ್ತರೆಂಬೆನಯ್ಯಾ? ಇವರನೆಂದು ಮುಕ್ತರೆಂಬೆನಯ್ಯಾ?
ಇವರು ಒಚ್ಚೊಚ್ಚಿ ಭಕ್ತರು, ಒಚ್ಚೊಚ್ಚಿ ಭವಿಗಳು
ಅದೆಂತೆಂದಡೆ – ಲೈಂಗ್ಯೇ:
“ಸ್ತ್ರೀವಾಥ ಪುರುಷಃ ಷಂಡಶ್ಚಂಡಾಲೋ ದ್ವಿಜವಂಶಜಃ |
ನಜಾತಿಭೇದೋ ಲಿಂಗಾರ್ಚೇ ಸರ್ವೇರುದ್ರಗಣಾಃ ಸ್ಮೃತಃ ||’
ಎಂದುದಾಗಿ, ಇಂತೆಂಬ ಪುರಾಣವಾಕ್ಯವ ತಿಳಿದುನೋಡಿರೆ,
ಸರ್ವರು ರುದ್ರಗಣಂಗಳೆಂದೇ, ಸರ್ವರು ಸದ್ಭಕ್ತರೆಂದೇ,
ಅವರಲ್ಲಿ ಕುಲವನೋಡದೆ, ಆಚಾರವ ನೋಡಿ,
ಅವರಿಗೆ ಬೇಕಾದ ಹೆಣ್ಣುಕೊಟ್ಟು
ತನಗೆ ಬೇಕಾದ ಹೆಣ್ಣು ತಂದುಕೊಂಬುದು.
ಈ ಕ್ರಮವನರಿಯದವರ ಭಕ್ತಿ
ಹೊಲತಿ ಶುದ್ಧನೀರ ಮಿಂದಂತಾಯಿತ್ತು ಕೂಡಲಸಂಗಮದೇವಾ. (ವ. ಸಂ. 278)

ಇವು ಕೇವಲ ಒಂದೆರಡು ಉದಾಹರಣೆಗಳು ಮಾತ್ರ. ಇಂಥ ಇನ್ನೂ ನೂರಾರು ದೃಷ್ಟಾಂತಗಳು ವಚನ ಸಾಹಿತ್ಯ ರಾಶಿಯನ್ನು ಬಗೆದು ನೋಡಿದಾಗ ಕಣ್ಣಿಗೆ ಹೊಡೆದು ಕಾಣುತ್ತವೆ.

  1. ಇದರಿಂದ ವ್ಯಕ್ತವಾಗುವ ಅಭಿಪ್ರಾಯವೇನೆಂದರೆ, ಈಗ ದೊರೆತು ಪ್ರಕಟವಾಗಿರುವ ವಚನಗಳಲ್ಲಿ “ನಿಜವಚನ” ಮತ್ತು “ಪ್ರಕ್ಷಿಪ್ತ ವಚನಗಳು” ಕಲಸು ಮೇಲೋಗರವಾಗಿವೆ ಎಂಬುದು. ಇವುಗಳನ್ನು ಬೇರ್ಪಡಿಸಲು ಅನೇಕ ವಿದ್ವಾಂಸರಿಂದ ಪ್ರಯತ್ನಗಳು ನಡೆಯುತ್ತ ಬಂದಿವೆ. ಆದರೂ ಇನ್ನೂ ಸಂಪೂರ್ಣ ಶುದ್ಧೀಕರಣ ಕಾರ್ಯ ಸಾಧ್ಯವಾಗಿಲ್ಲ. ಈ ಸತ್ಯ ಅರಿಯದೆ ಕೆಲವರು, ಅರಿತೂ ಕೆಲವರು ವಚನಗಳನ್ನು ತಮ್ಮ ತಮ್ಮ ಅಭಿಪ್ರಾಯಕ್ಕೆ (ಮೂಗಿನ ನೇರಕ್ಕೆ) ಪೂರಕವಾಗುವಂತೆ-ಅನುಕೂಲವಾಗುವಂತೆ ಬಳಸಿಕೊಳ್ಳುತ್ತ ನಡೆದಿದ್ದಾರೆ. ಹೀಗಾಗಿ ವಚನಗಳಲ್ಲಿ ಬಳಕೆಯಾದ ಅನೇಕ ಪದಗಳ ಸತ್ಯಾಸತ್ಯತೆಯ ಬಗೆಗೆ ಗೊಂದಲ ಸೃಷ್ಟಿಯಾಗಲು ಕಾರಣವಾಗಿದೆ.
  2. ಈಗ ಉಂಟಾಗಿರುವ ವಚನಗಳಲ್ಲಿ “ವೀರಶೈವ” ಮತ್ತು “ಲಿಂಗಾಯತ” ಪದಗಳ ಬಳಕೆಗೆ ಸಂಬಂಧಿಸಿದಂತೆ ಸಮಸ್ಯೆಗೆ ಸಂಬಂಧಿಸಿದಂತೆ ಈ ಕೆಳಗಿನಂತೆ ಸ್ಪಷ್ಟೀಕರಣ ನೀಡಲು ಬಯಸುತ್ತೇನೆ.
  3. ಕರ್ನಾಟಕ ಸರ್ಕಾರ ಪ್ರಕಟಿಸಿದ ಸಮಗ್ರ ವಚನ ಸಾಹಿತ್ಯ ಸಂಪುಟಗಳಲ್ಲಿ (ಬೈಬಲ್ ಮಾದರಿಯ 2 ಸಂಪುಟಗಳಲ್ಲಿ–ಈ ಮೊದಲು 15 ಸಂಪುಟಗಳಲ್ಲಿ ಪ್ರಕಟವಾಗಿದ್ದವು) 252 ಶರಣರ ಒಟ್ಟು 22,845 ವಚನಗಳು ಸಂಗ್ರಹವಾಗಿವೆ. ಅವುಗಳಲ್ಲಿ ಬಸವಯುಗಕ್ಕೆ ಸಂಬಂಧಿಸಿದ ವಚನಗಳು-14,895; ಬಸವೋತ್ತರ ಯುಗಕ್ಕೆ ಸಂಬಂಧಿಸಿದ ವಚನಗಳು-7,950.

ಈ ವಚನಗಳನ್ನು 15 ನೇ ಶತಮಾನದಿಂದ 18 ನೇ ಶತಮಾನದವರೆಗೆ ರಚಿತವಾದ ಸುಮಾರು 125 ಸ್ಥಲಕಟ್ಟಿನ ವಿವಿಧ ವಚನ ಸಂಕಲನಗಳಿಂದ ಸಂಗ್ರಹಿಸಲಾಗಿದೆ. ಈ ಸಂಕಲನಗಳಲ್ಲಿ ಕೆಲವು ಏಕವ್ಯಕ್ತಿ ಷಟ್‌ಸ್ಥಲ ವಚನಗಳಾದರೆ (ಬಸವಣ್ಣ, ಪ್ರಭುದೇವ, ಚೆನ್ನಬಸವಣ್ಣನವರ ಷಟ್‌ಸ್ಥಲ ವಚನಗಳು), ಹೆಚ್ಚಿನವು ಅನೇಕ ವ್ಯಕ್ತಿಗಳ ವಚನಗಳನ್ನು ಮಿಶ್ರಗೊಳಿಸಿ ಸಿದ್ಧಪಡಿಸಿದ ವಿವಿಧ ವಿಷಯ ಸಂಬಂಧಿ ಸ್ಥಲಕಟ್ಟಿನ ಕೃತಿಗಳಾಗಿವೆ. ಇವುಗಳಲ್ಲಿ ಏಕವ್ಯಕ್ತಿ ಷಟ್‌ಸ್ಥಲ ವಚನಗಳು ಹೆಚ್ಚು ಮಟ್ಟಿಗೆ ಶುದ್ಧರೂಪದವೆಂದೂ, ಇತರ ಸ್ಥಲಕಟ್ಟಿನ ಸಂಕಲನಗಳು ಸಮ್ಮಿಶ್ರ ಮತ್ತು ಅವುಗಳಲ್ಲಿ ಕೆಲವು ಪ್ರಕ್ಷಿಪ್ತವಾದುವು ಎಂದು ವಿದ್ವಾಂಸರು ಗುರುತಿಸಿದ್ದಾರೆ.

ಸದ್ಯದ ಮಟ್ಟಿಗೆ ಈ ಕೆಳಗಿನ ಕೃತಿಗಳನ್ನು “ಕೂಟವಚನ ಸಂಕಲನ” ಗಳೆಂದು ಗುರುತಿಸಿ ಹೊರಗಿಡಲಾಗಿದೆ.

  1. ಮುಕ್ತಿಕಂಠಾಭರಣ – ಅಜ್ಞಾತ ಕೃರ್ತ.
  2. ಸಿದ್ಧರಾಮೇಶ್ವರ ಷಟ್‌ಸ್ಥಲವಚನಗಳು – ಅಜ್ಞಾತ ಕರ್ತೃ
  3. ದೀಕ್ಷಾ ಬೋಧೆ – ಅಜ್ಞಾತ ಕರ್ತೃ
  4. ಭಕ್ತಿ ಶಿಖಾಮಣಿ – ಅಜ್ಞಾತ ಕರ್ತೃ
  5. ಸಿದ್ಧರಾಮ ಶಾಂತಶೆಟ್ಟಿ ವಾದದ ವಚನಗಳು – ಅಜ್ಞಾತ ಕರ್ತೃ
  6. ಸಿದ್ಧರಾಮ ಪ್ರಭು ವಾದದ ವಚನಗಳು – ಅಜ್ಞಾತ ಕರ್ತೃ
  7. ಮಡಿವಾಳಸ್ತೋತ್ರ – ಅಜ್ಞಾತ ಕರ್ತೃ

ಇವುಗಳ ಜೊತೆಗೆ
 ಶೀಲಸಂಪಾದನೆ.
 ಷಟ್ಪ್ರಕಾರ ಸಂಗ್ರಹ.
 ಗಣಭಾಷಿತ ರತ್ನಮಾಲೆ.
 ಶಿವಯೋಗ ಚಿಂತಾಮಣಿ.
 ಜ್ಞಾನಷಟ್‌ಸ್ಥಲಸಾರ.
 ಚಿದೈಶ್ವರ್ಯ ಚಿದಾಭರಣ.
 ವೀರಶೈವ ಚಿಂತಾಮಣಿ.
 ಲಿಂಗಚಿದಮೃತಬೋಧೆ.
 ಷಟ್‌ಸ್ಥಲಾಡಂಬರ.

ಮೊದಲಾದ ಸಂಕಲನಗಳಲ್ಲಿಯೂ ಅನೇಕ ಖೋಟಾ ವಚನಗಳು ಸೇರ್ಪಡೆಯಾಗಿರುವುದರಿಂದ ಇವುಗಳನ್ನು “ಅರೆಕೂಟವಚನ ಸಂಕಲನ” ಗಳೆಂದು ಗುರುತಿಸಬಹುದಾಗಿದೆ.

ಹೀಗಾಗಿ ಸರ್ಕಾರಿ ವಚನ ಸಂಪುಟಗಳಲ್ಲಿ “ಷಟ್‌ಸ್ಥಲ ವಚನಗಳು” ಮತ್ತು “ಹೆಚ್ಚಿನ ವಚನಗಳು” ಎಂದು ಪ್ರತ್ಯೇಕಿಸಿ ಸಂಗ್ರಹಿಸಲಾಗಿದೆ. ಹೆಚ್ಚಿನ ವಚನಗಳಲ್ಲಿ ಪ್ರಕ್ಷಿಪ್ತ ವಚನಗಳು ಉಳಿದುಕೊಂಡಿವೆ.

ವಚನಗಳಲ್ಲಿ ವೀರಶೈವ ಪದ ಬಳಕೆ

  1. ಈಗ ಪ್ರಸ್ತುತವಾಗಿರುವ “ವೀರಶೈವ” ಮತ್ತು “ಲಿಂಗಾಯತ” ಪದಗಳು ಬಳಕೆಯಾದ ವಚನಗಳನ್ನು ಕುರಿತು ನೋಡಬಹುದು. (ಇಲ್ಲಿ ಬಸವಯುಗದ ವಚನಕಾರರ ವಚನಗಳನ್ನು ಮಾತ್ರ ಅನುಲಕ್ಷಿಸಲಾಗಿದೆ).
    • ವೀರಶೈವ ಪದ ಬಸವಯುಗದ 16 ಜನ ವಚನಕಾರರ 66 ವಚನಗಳಲ್ಲಿ ಬಳಕೆಯಾದುದು ಕಂಡುಬರುತ್ತದೆ. ಈ ವಚನಗಳು ಷಟ್‌ಸ್ಥಲ ವಚನಗಳಲ್ಲಿ ಸೇರಿಲ್ಲ; ಎಲ್ಲವೂ ಮಿಶ್ರವಚನ ಸಂಕಲನಗಳಲ್ಲಿ ಬಂದಿವೆ. ಅದರಲ್ಲಿಯೂ “ಅರೆಕೂಟವಚನ ಸಂಕಲನ” ಗಳಲ್ಲಿ ಸಮಾವೇಶಗೊಂಡಿವೆ.
    • ಇವು ಹೆಚ್ಚು ದೀರ್ಘವಾಗಿವೆ; ತತ್ವಭೂಯಿಷ್ಠ ಎನಿಸಿವೆ; ಸಂಸ್ಕೃತ ಶ್ಲೋಕಗಳನ್ನು ಸೇರಿಸಿಕೊಂಡಿವೆ; ಶಿಥಿಲ ಬಂಧದಿಂದ ಕೂಡಿವೆ; ಆಯಾ ಶರಣನ ವಚನ ರಚನಾ ಶೈಲಿಗೆ ಅನುಗುಣವಾಗಿಲ್ಲ. ಕೆಲವು ಶರಣತತ್ವಕ್ಕೆ ವಿರೋಧವಾಗಿವೆ; ವಿರೋಧಾಭಾಸವೆನಿಸಿವೆ.
    • ಹೀಗಾಗಿ ಇವು ಶರಣರು ರಚಿಸಿದ ನಿಜವಚನಗಳಲ್ಲ; ಸಂಕಲನಕಾರರು ಬರೆದು ಸೇರಿಸಿದ ಪ್ರಕ್ಷಿಪ್ತ ವಚನಗಳು; ಅದೂ 16–17 ನೇ ಶತಮಾನದಲ್ಲಿ ರಚಿತವಾದ ಸ್ಥಲಕಟ್ಟಿನ ಕೃತಿಗಳಲ್ಲಿ ಮಾತ್ರ ಇವು ದೊರಯುತ್ತವೆ. ಇವು ಸೇರಿದ ಕೆಲವು ಸಂಕಲನಕಾರರ ಹೆಸರೇ ಇಲ್ಲದಿರುವುದು, ಇವನ್ನು ಉದ್ದೇಶ ಪೂರ್ವಕವಾಗಿ ಅಳವಡಿಸಲಾಗಿದೆ ಎಂಬುದು ಮನದಟ್ಟಾಗುತ್ತದೆ.
    • ಇವು ಬಸವಾದಿ ಶರಣರ ರಚನೆಗಳಲ್ಲ ಎಂಬುದನ್ನು ಅವರ ಉಳಿದ ವಚನಗಳ ಜೊತೆ ಹೋಲಿಸಿ ನೋಡಿ ಸ್ಪಷ್ಟಪಡಿಸಿಕೊಳ್ಳಬಹುದಾಗಿದೆ.
  2. ಬಸವಣ್ಣನವರ 3 ವಚನಗಳಲ್ಲಿ “ವೀರಶೈವ” ಪದ ಬಳಕೆಯಾಗಿದೆ. ಈ ವಚನಗಳು ಷಟ್‌ಸ್ಥಲ ಕಟ್ಟುಗಳಲ್ಲಿ ಇಲ್ಲ. ಈ ಮೊದಲು ಬಸವಣ್ಣನವರ ವಚನಗಳನ್ನು ಸಂಪಾದಿಸಿ ಪ್ರಕಟಿಸಿದ ಡಾ. ಫ. ಗು. ಹಳಕಟ್ಟಿ, ಪ್ರೊ. ಶಿ. ಶಿ. ಬಸವನಾಳ, ಡಾ. ಆರ್. ಸಿ. ಹಿರೇಮಠ, ಡಾ. ಎಲ್. ಬಸವರಾಜು ಇವರಾರ ಕೃತಿಗಳಲ್ಲಿಯೂ ಸೇರಿಲ್ಲ. ಹಾಗಾದರೆ ಇವುಗಳ ಮೂಲ ಆಕರ ಯಾವುದು ಎಂದು ಹುಡುಕುತ್ತ ಹೋದಾಗ 17 ನೇ ಶತಮಾನದಲ್ಲಿ ಸಂಕಲನಗೊಂಡ ಅಜ್ಞಾತ ಕರ್ತೃವಿನ “ಶೀಲಸಂಪಾದನೆ” ಎಂಬ ಏಕೈಕ ಕಾಗದ ಹಸ್ತಪ್ರತಿಯಿಂದ ಸಂಪಾದಿಸಿದ ಕೃತಿಯಲ್ಲಿ ಎರಡು, ಅದೇ ಕಾಲದ ಶಾಂತದೇವನ ಷಟ್ಪ್ರಕಾರ ಸಂಗ್ರಹ ಎಂಬ ಕೃತಿಯಲ್ಲಿ ಒಂದು ವಚನ ಅಳವಟ್ಟಿರುವುದು ಅರಿತಕ್ಕೆ ಬರುತ್ತದೆ.

ಈ ವಚನಗಳು ದೀರ್ಘವಾಗಿವೆ. ಶಿಥಿಲಬಂಧದಿಂದ ಕೂಡಿವೆ. ತಾತ್ವಿಕ ವಿಷಯವನ್ನು ಹೇಳುತ್ತವೆ. ಒಂದರಲ್ಲಿ ಸಂಸ್ಕೃತ ಶ್ಲೋಕ ಬಳಕೆಯಾಗಿದೆ. ಬಸವಣ್ಣನವರ ವಚನಗಳು ನಮಗೆಲ್ಲ ಗೊತ್ತಿರುವಂತೆ ಹೆಚ್ಚು ಸರಳ, ಸಂಕ್ಷಿಪ್ತ ಸೂತ್ರಬದ್ಧವಾಗಿರುತ್ತವೆ. ತತ್ವನಿರೂಪಣೆಗಿಂತ ಹೆಚ್ಚಾಗಿ ಸಮಾಜಮುಖಿ, ಅನುಭಾವಮುಖಿ ಚಿಂತನೆ ಹಾಗೂ ಸಾಹಿತ್ಯಿಕ ಸತ್ವದಿಂದ ಕೂಡಿರುತ್ತವೆ. ಈ ಯಾವ ಲಕ್ಷಣವೂ ಈ ಮೂರು ವಚನಗಳಲ್ಲಿ ಕಂಡುಬರುವುದಿಲ್ಲ. ಓದುವುದಿರಲಿ, ಹಾಗೇ ನೋಡಿದ ತಕ್ಷಣವೇ ಇವು ಬೇರೆ ಯಾರೋ ಬರೆದು ಸೇರಿಸಿದವು ಎಂದು ಅನ್ನಿಸುತ್ತದೆ.

ಉದಾಹಣೆಗೆ:
ಅಂಗಲಿಂಗ ಸಂಗ ಸುಖ ಸಾರಾಯದನುಭಾವ
ಲಿಂಗವಂತಂಗಲ್ಲದೆ ಸಾಧ್ಯವಾಗದು ನೋಡಾ.
ಸ್ವಯಲಿಂಗಾರ್ಚನೋಪಚಾರ ಅರ್ಪಿತ ಪ್ರಸಾದ ಭೋಗಿಯಾಗಿ
ವೀರಶೈವಸಂಪನ್ನನೆನಿಸಿ ಲಿಂಗವಂತನಾದ ಬಳಿಕ
ತನ್ನಂಗಲಿಂಗ ಸಂಬಂಧಕನ್ಯವಾದ ಜಡಭೌತಿಕ ಪ್ರತಿಷ್ಠೆಯನ್ನುಳ್ಳ
ಭವಿಶೈವ ದೈವ ಕ್ಷೇತ್ರ ತೀರ್ಥಂಗಳಾದಿಯಾದ ಹಲವು ಲಿಂಗಾರ್ಚನೆಯ
ಮನದಲ್ಲಿ ನೆನೆಯಲಿಲ್ಲ; ಮಾಡಲೆಂತೂ ಬಾರದು.
ಇಷ್ಟೂ ಗುಣವಳವಟ್ಟಿತ್ತಾದಡೆ
ಆತನೀಗ ಏಕಲಿಂಗ ನಿಷ್ಠಾಚಾರಯುಕ್ತನಾದ ವೀರಮಾಹೇಶ್ವರನು.
ಇವರೊಳಗೆ ಅನುಸರಿಸಿಕೊಂಡು ನಡೆದನಾದಡೆ
ಗುರುಲಿಂಗಜಂಗಮ ಪಾದೋದಕ ಪ್ರಸಾದ ಸದ್ಭಕ್ತಿಯುಕ್ತವಾದ
ವೀರಶೈವ ಷಡುಸ್ಥಲಕ್ಕೆ ಹೊರಗಾಗೆ ನರಕಕ್ಕಿಳಿವನು ಕಾಣಾ
ಕೂಡಲಸಂಗಮದೇವಾ. (ಹೆ. ವ. 966)

ಏಕಲಿಂಗ ನಿಷ್ಠೆಯನ್ನು ಕುರಿತು ಹೇಳುವ ಈ ವಚನದಲ್ಲಿ “ಲಿಂಗವಂತ”, “ವೀರಶೈವ” ಪದಗಳು ಎರಡೆರಡು ಬಾರಿ, “ವೀರಮಾಹೇಶ್ವರ” ಎಂಬುದು ಒಂದು ಬಾರಿ ಬಂದಿದೆ. ಇಲ್ಲಿ “ವೀರಶೈವ” ಪದವನ್ನು ಒತ್ತಾಯದಿಂದ ಸೇರಿಸಿದುದು ಕಂಡುಬರುತ್ತದೆ. ಅದನ್ನು ತೆಗೆದು ಓದಿದರೆ ವಚನದ ಅರ್ಥ- ಆಶಯಗಳಿಗೆ ಯಾವುದೇ ಭಂಗ ಉಂಟಾಗುವುದಿಲ್ಲ. ಬದಲಾಗಿ ಅರ್ಥ ಗೊಂದಲದಿಂದ ಬಿಡುಗಡೆ ಹೊಂದುತ್ತದೆ. ಇಲ್ಲಿ ಬಳಸಿರುವ “ವೀರಶೈವ ಸಂಪನ್ನನೆನಿಸಿ ಲಿಂಗವಂತನಾದಬಳಿಕ” ಎಂಬುದರ ಅರ್ಥವೇನು? “ಸ್ವಯಲಿಂಗಾರ್ಚನೋಪಚಾರ ಅರ್ಪಿತ ಪ್ರಸಾದ ಭೋಗಿಯಾಗಿ ಲಿಂಗವಂತನಾದ ಬಳಿಕ” ಎಂದರೆ ಸಹಜವೆನಿಸುವದಿಲ್ಲವೆ? ಹಾಗೆಯೆ “ಷಡುಸ್ಥಲಕ್ಕೆ” “ವೀರಶೈವ” ಎಂಬ ವಿಶೇಷಣದ ಅಗತ್ಯವಿದೆಯೆ? ಇಷ್ಟಾಗಿಯೂ ಈ ರೀತಿಯ ರಚನೆಯನ್ನು ಚೆನ್ನಬಸವಣ್ಣನಲ್ಲಿ ಕಾಣಬಹುದಲ್ಲದೆ, ಬಸವಣ್ಣನಲ್ಲಿ ಕಾಣಲು ಸಾಧ್ಯವಿಲ್ಲ. ಹೀಗಾಗಿ ಇದು ಖಂಡಿತವಾಗಿ ಬಸವಣ್ಣನವರ ವಚನವಲ್ಲ.

ಇನ್ನು “ಶೀಲಸಂಪಾದನೆ” ಸಂಕಲನದಲ್ಲಿ ಮಾತ್ರ ಬರುವ –
ಎನ್ನ ಬಂದ ಭವಂಗಳನು ಪರಿಹರಿಸಿ ಎನಗೆ ಭಕ್ತಿ ಘನವೆತ್ತಿ ತೋರಿ
ಎನ್ನ ಹೊಂದಿದ ಶೈವಮಾರ್ಗಂಗಳನತಿಗೆಳೆದು
ನಿಜವೀರಶೈವಾಚಾರವನರುಹಿಗತೋರಿ … … (ಹೆ. ವ. 1093)

ಎಂದು ಆರಂಭವಾಗುವ ವಚನವಂತೂ ಅನೇಕ ಆಭಾಸಗಳಿಂದ ಕೂಡಿದೆ. ಒಂದು ಶೈವ ಪ್ರಭೇದಗಳಲ್ಲಿಯೇ ಒಂದಾದ ವೀರಶೈವವನ್ನು-ಶೈವಮಾರ್ಗವನ್ನು ಅತಿಗಳೆದು ಅರುಹಿ ತೋರುವುದೆಂದರೇನು? ಶೈವಮಾರ್ಗವನ್ನು ತಿರಸ್ಕರಿಸುವುದೆಂದರೆ, ವೀರಶೈವವನ್ನೂ ತಿರಸ್ಕರಿಸಿದಂತಲ್ಲವೆ? ಎರಡು: ಗುರುಸ್ವರೂಪನೂ, ಮಾವನೂ ಎನಿಸಿದ ಬಸವಣ್ಣನವರು ಚೆನ್ನಬಸವಣ್ಣನವರಿಂದ ಭಕ್ತಿ-ಜ್ಞಾನ-ಆಚಾರ ಮಾರ್ಗವನ್ನು ತಿಳಿದುಕೊಂಡರು ಎಂಬುದು ಎಷ್ಟು ಸಮಂಜಸ? ಶರಣರಲ್ಲಿ “ಅರಿವಿಂಗೆ ಹಿರಿದುಕಿರಿದೆಂಬುದಿಲ್ಲ” ನಿಜ. ಆದರೆ ಈ ವಚನದ ನಿರೂಪಣೆಯ ಕ್ರಮ ಬಸವಣ್ಣನವರಿಂದ ಚೆನ್ನಬಸವಣ್ಣ ಉಪದೇಶ ಪಡೆದನೆಂಬುದಕ್ಕೆ ಸರಿಹೊಂದುತ್ತದೆಯೇ ವಿನಃ ಚೆನ್ನಬಸವಣ್ಣನಿಂದ ಬಸವಣ್ಣನವರು ಪಡೆದರು ಎಂಬುದಕ್ಕೆ ಹೊಂದಿಕೆಯಾಗುವುದಿಲ್ಲ. ಅದೇನಿದ್ದರೂ ವಚನದ ರಚನಾ ಶಿಲ್ಪವಂತೂ ಬಸವಣ್ಣನವರದಲ್ಲ.

ಇದೇ ಸಂಕಲನದಲ್ಲಿ ಬರುವ “ಜನನಸೂತಕ ಕುಲಸೂತಕ ರಜಸೂತಕ” (ಹೆಚ್ಚಿನ ವಚನಗಳು ವ. 1196) ಎಂದು ಆರಂಭವಾಗುವ ವಚನವಂತೂ 27 ಸಾಲುಗಳಷ್ಟು ದೀರ್ಘವಾಗಿದ್ದು, ಪಂಚಸೂತಕಗಳ ಬಗೆಗೆ ನಿರೂಪಿಸುತ್ತಿದ್ದು, ಮಧ್ಯ ಒಂದು ಸಂಸ್ಕೃತ ಶ್ಲೋಕವನ್ನು ಸೇರಿಸಿಕೊಂಡು ಬಸವಣ್ಣನವರ ರಚನೆಯ ಯಾವ ಲಕ್ಷಣವನ್ನೂ ಪಡೆದುಕೊಂಡಿಲ್ಲ. ಇದರಲ್ಲಿ “ವೀರಶೈವ” ಪದ ಸಂಸ್ಕೃತ ಶ್ಲೋಕದಲ್ಲಿ ಮಾತ್ರ ಬಳಕೆಯಾಗಿದೆ. ಶ್ಲೋಕಗಳು ಮೂಲತಃ ವಚನಕಾರರು ಅಳವಡಿಸಿದುವಲ್ಲ. ಅನಂತರದ ಸಂಕಲನಕಾರರು ಸೇರಿಸಿದುವು ಎಂಬುದಕ್ಕೆ ಸಾಕಷ್ಟು ಆಧಾರಗಳಿವೆ.

  1. ಪ್ರಭುದೇವರ 5 ವಚನಗಳಲ್ಲಿ ‘ವೀರಶೈವ’ ಪದ ಬಳಕೆಯಾದುದು ಕಂಡುಬರುತ್ತದೆ. ಅವುಗಳಲ್ಲಿ ಒಂದು ವಚನ ಹೀಗಿದೆ:
    ಅಯ್ಯಾ, ಅನುಭಾವವಿಲ್ಲದ ವಿರಕ್ತಿ ಆಯುಧವಿಲ್ಲದ ವೀರನಂತೆ
    ಅನುಭಾವವಿಲ್ಲದ ಷಟ್‌ಸ್ಥಲವು ಕಣ್ಣಿಲ್ಲದ ಕುರುಡನಂತೆ
    ಅನುಭಾವವಿಲ್ಲದ ಜಂಗಮವು ಕಾಲಿಲ್ಲದ ಹೆಳವನಂತೆ
    ಅನುಭಾವವಿಲ್ಲದ ಶಿವಪೂಜೆಯ ಎಷ್ಟು ಮಾಡಿದಡೆಯೂ ಪ್ರಯೋಜನಕ್ಕೆ ಬಾರದು.
    ಅನುಭಾವವಿಲ್ಲದ ಲಿಂಗಪೂಜೆ ಬರಿಕೈಯಲ್ಲಿ
    ಹುಡಿಮಣ್ಣ ಹೊಯ್ದುಕೊಂಡಂತೆ –
    ಇದು ಕಾರಣ,
    ಭಕ್ತಿಗೆ, ವಿರಕ್ತಿಗೆ, ಮುಕ್ತಿಗೆ, ವೀರಶೈವಕ್ಕೆ ಜಂಗಮಕ್ಕೆ ಅನುಭಾವವಿರಬೇಕು.
    ಅನುಭಾವವಿಲ್ಲದ ವಿರಕ್ತನಲ್ಲಿ ಪಾದೋದಕ ಪ್ರಸಾದವ ಕೊಳಲಾಗದು
    ಅನುಭಾವವುಳ್ಳ ಸದಾಚಾರ ಸಂಪನ್ನನಾದ ಸದ್ಭಕ್ತನಲ್ಲಿ
    ಅನಾದಿ ಪಾದೋದಕ ಪ್ರಸಾದವ ಕೊಂಡವರು ಪರಮ ಮುಕ್ತರಾದರಯ್ಯ.
    ನಿಜಗುರು ಗುಹೇಶ್ವರಲಿಂಗದಲ್ಲಿ ಚೆನ್ನಬಸವಣ್ಣಾ. (ಹೆ. ವ. 773)

ಇಲ್ಲಿ “ವೀರಶೈವ” ಎಂಬ ಪದವನ್ನು ಮುದ್ದಾಂ ಆಗಿ ಸೇರಿಸಲಾಗಿದೆ. ಅದನ್ನು ತೆಗೆದು ಹಾಕಿದರೆ ವಚನದ ಭಾವಕ್ಕೆ ಯಾವುದೇ ಬಾಧೆ ಬರುವುದಿಲ್ಲ. ಹಾಗೆಯೇ ಈ ಕೆಳಗಿನ ವಚನವನ್ನು ನೋಡಿ:
ಪರುಷವ ತಂದು ಕಬ್ಬುನಕ್ಕೆ ಮುಟ್ಟಿಸಲು
ಚಿನ್ನವಪ್ಪುದಲ್ಲದೆ ಪರುಷವಾಗಬಲ್ಲುದೆ ?
ಈ ಲೋಕದ ಮನುಜರು ಶಿವಲಿಂಗವ ಕಟ್ಟಿದರೇನು
ಲಿಂಗವಂತರಲ್ಲದೆ ಪ್ರಾಣಲಿಂಗ ಸಂಬಂಧಿಗಳಾಗಬಲ್ಲರೆ?
ಶರಣ ಆವ ಕುಲದಲ್ಲಿ ಹುಟ್ಟಿದರೇನು ಆತನು
ಆಚಾರ ವೀರಶೈವ ಸಂಪನ್ನ ಸಿದ್ಧಾಂತ
ಕ್ರಿಯಾ ಜ್ಞಾನ ಅನುಭಾವಯುಕ್ತವಾದ ಪ್ರಾಣಲಿಂಗಸಂಪನ್ನ
ಆದಿ ಅನಾದಿಯಿಲ್ಲದಂದಿನ ನಿಃಕಲ ನಿಶ್ಶೂನ್ಯ ನಿರ್ಭೇದ್ಯ
ನಿರಾಳ ನಿರಂಜನ ಪರಾತ್ಪರನು ತಾನೆ ನೋಡಾ
ಅಂತಪ್ಪ ಮಹಾತ್ಮನ ಕುಲಜನಕುಲಜನೆಂದು
ಸಂದೇಹ ಸಂಕಲ್ಪದಿಂದ ದೂಸಿಸಿ ಜರೆವ
ದುರಾಚಾರಿಗಳ ಬಾಯಲ್ಲಿ ಹುಳ ಸುರಿಯದೆ
ಮಾಣ್ಬುದೆ ಗುಹೇಶ್ವರಾ? (ಹೆ. ವ. 1347)

ಇಲ್ಲಿ ಸೇರಿದ “ಆಚಾರವೀರಶೈವ ಸಂಪನ್ನ ಸಿದ್ಧಾಂತ” ಎಳ್ಳಷ್ಟೂ ಹೊಂದಿಕೆಯಾಗಿಲ್ಲ. ಒತ್ತಾಯಪೂರ್ವಕ ಸೇರಿಸಿದ್ದು ಎಂದು ಯಾರಿಗಾದರೂ ಮೇಲ್ನೋಟಕ್ಕೇ ಅರಿತಕ್ಕೆ ಬರುತ್ತದೆ.

ಇನ್ನು “ಯೋಗ ಶಿವಯೋಗಗಳ ಹೊಲಬನರಿಯದೆ” (ಹೆ. ವ. 1484) ಎಂದು ಆರಂಭವಾಗುವ ವಚನವಂತೂ 36 ಸಾಲುಗಳಷ್ಟು ದೀರ್ಘವಾಗಿದ್ದು, 10 ಸಾಲಿನ ಸಂಸ್ಕೃತ ಶ್ಲೋಕವನ್ನು ಅಳವಡಿಸಿಕೊಂಡು ತತ್ವಭೂಯಿಷ್ಠವಾಗಿದೆ. ಇದು ಈವರೆಗಿನ ಯಾವುದೇ ಪ್ರಭುದೇವರ ಷಟ್‌ಸ್ಥಲವಚನಗಳಲ್ಲಾಗಲಿ, ಇತರ ಸಂಕಲನಗಳಲ್ಲಾಗಲಿ ಬಂದಿಲ್ಲ. ಅಜ್ಞಾತವಾಗಿರುವ ಅಜ್ಞಾತ ಕರ್ತೃವಿನ “ಷಟ್‌ಸ್ಥಲಾಡಂಬರ” ಎಂಬ ಸಂಕಲನದಲ್ಲಿ ಮಾತ್ರ ಸೇರಿಕೊಂಡಿದೆ. ಅನುಭಾವವನ್ನು ಬೆಡಗಿನ ಪರಿಭಾಷೆಯಲ್ಲಿ ತುಂಬ ಸಾಂದ್ರವಾಗಿ ಹೇಳುವ ಪ್ರಭುದೇವನಿಂದ ಈ ವಚನ ರಚನೆಯಾಗಿದೆಯೆಂದು ಹೇಳಿದರೆ ಯಾರೂ ನಂಬುವಂತಿಲ್ಲ. – ಹೀಗಾಗಿ ಪ್ರಭುದೇವರ ಷಟ್‌ಸ್ಥಲ ವಚನಗಳಲ್ಲಿ ಎಡೆಪಡೆಯದೆ, ಹೆಚ್ಚಿನ ವಚನಗಳಲ್ಲಿ ಮಾತ್ರ ಸಂಗ್ರಹಿಸಲಾದ ಈ ಐದೂ ವಚನಗಳು ಮೂಲತಃ ಪ್ರಭುದೇವರ ರಚನೆಗಳಲ್ಲ ಎಂದು ಹೇಳಲು ಯಾವ ಅನುಮಾನವನ್ನೂ ಪಡಬೇಕಾಗಿಲ್ಲ.

  1. ಚೆನ್ನಬಸವಣ್ಣನವರ 25 ವಚನಗಳಲ್ಲಿ “ವೀರಶೈವ” ಪದ ಬಳಕೆಯಾದುದು ತೋರುತ್ತದೆ. ಎಲ್ಲ ವಚನಗಳು ತಾತ್ವಿಕವೆನಿಸಿವೆ. ಹೆಚ್ಚು ದೀರ್ಘವಾಗಿವೆ. ಹೆಜ್ಜೆ-ಹೆಜ್ಜೆಗೆ ಸಂಸ್ಕೃತ ಶ್ಲೋಕಗಳನ್ನು ಬಳಸಿಕೊಂಡಿವೆ. ಚೆನ್ನಬಸವಣ್ಣನವರ ವಚನಗಳು ಹೆಚ್ಚು ತಾತ್ವಿಕವಾದುವಾಗಿರುವದರಿಂದ ಇಲ್ಲಿ ಸಂಕಲನಕಾರರಿಗೆ ತಮಗೆ ಬೇಕಾದುದನ್ನು ಸೇರಿಸಲು ಹೆಚ್ಚಿನ ಅವಕಾಶ ದೊರೆತಿದೆ. ಹೀಗಾಗಿ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ವೀರಶೈವ ಪದವನ್ನು ಸೇರ್ಪಡೆ ಮಾಡುತ್ತ ಬಂದಿದ್ದಾರೆ. ಅದರಲ್ಲಿಯೂ ಹೆಚ್ಚಾಗಿ ಈ ವಚನಗಳು ದೊರೆತುದು “ಅರೆಕೂಟವಚನ” ಸಂಕಲನಗಳೆನಿಸಿದ ಶೀಲಸಂಪಾದನೆ, ಷಟ್ಪ್ರಕಾರಸಂಗ್ರಹ, ಚಿದೈಶ್ರ‍್ಯ ಚಿದಾಭರಣ, ಜ್ಞಾನಷಟ್‌ಸ್ಥಲಸಾರ, ಷಟ್‌ಸ್ಥಲಾಡಂಬರ ಮೊದಲಾದವುಗಳಲ್ಲಿ ಎಂಬುದನ್ನು ಗಮನಿಸಬೇಕು. ಇಲ್ಲಿ ಬಳಕೆಯಾದ ಪದ ಹೆಚ್ಚಾಗಿ “ನಿಜವೀರಶೈವ” ಎಂಬುದಾಗಿದೆ. ಅಂದರೆ ಸಂಕಲನಕಾರರ ದೃಷ್ಟಿಯಲ್ಲಿ “ಸುಳ್ಳುವೀರಶೈವ” ಎಂಬುದೂ ಒಂದು ಇತ್ತು ಎಂದು ವೇದ್ಯವಾಗುತ್ತದೆ.
  2. ಸಿದ್ಧರಾಮನ ಆರು ವಚನಗಳಲ್ಲಿ “ವೀರಶೈವ” ಪದ ಬಳಕೆಯಾಗಿದೆ. ಅದು ಸಹಜವಾದುದಲ್ಲ. “ಶರಣ” ಎಂಬ ಪದದ ಸ್ಥಾನದಲ್ಲಿ ಉದ್ದೇಶಪೂರ್ವಕವಾಗಿ ಸೇರಿಸಿದುದಾಗಿದೆ. ಉದಾಹರಣೆಗೆ:
    ಚತುರ್ವರ್ಣಿಯಾದಡೇನು
    ಚತುರ್ವರ್ಣಾತೀತನೆ ವೀರಶೈವ ನೋಡಾ. (ವ. ಸಂ. 1701) ಕುಲದಲ್ಲಿ ಶೂದ್ರನಾದಡೇನು
    ಮನದಲ್ಲಿ ಮಹಾದೇವ ನೆಲೆಗೊಂಡವನೆ ವೀರಶೈವ ನೋಡಾ. (ವ. ಸಂ. 1814)

ಇಲ್ಲಿ “ವೀರಶೈವ” ದ ಸ್ಥಾನದಲ್ಲಿ “ಶರಣ” ಪದವಿರಬೇಕು. ಅದನ್ನು ಪಲ್ಲಟಗೊಳಿಸಲಾಗಿದೆ.
• ಸಿದ್ಧರಾಮನಷ್ಟು ದಾಳಿಗೆ ತುತ್ತಾದ ಶರಣ ಮತ್ತೊಬ್ಬನಿಲ್ಲ. ಅವನ ಚರಿತ್ರೆಯನ್ನು ವಿಕೃತಗೊಳಿಸಿದ್ದು, ವಚನಗಳಲ್ಲಿ ಹೇರಳವಾದ ಪ್ರಕ್ಷಿಪ್ತಗಳನ್ನು ಸೇರಿಸಿದ್ದು ನಮ್ಮ ಕಣ್ಣ ಮುಂದಿನ ಸತ್ಯವೇ ಆಗಿದೆ.
• ಸಿದ್ಧರಾಮನ ವಚನಗಳ ಶುದ್ಧೀಕರಣಕ್ಕಾಗಿಯೇ ತಮ್ಮ ಇಡೀ ಬದುಕನ್ನು ಮೀಸಲಾಗಿಟ್ಟ ಮೈಸೂರಿನ ಶ್ರೀ. ಪಿ. ಎಂ. ಗಿರಿರಾಜು ಅವರು ಸದ್ಯ ಪ್ರಕಟವಾದ ಸಿದ್ಧರಾಮನ 1,992 ವಚನಗಳಲ್ಲಿ 804 ಪ್ರಕ್ಷಿಪ್ತ ವಚನಗಳೆಂದು ಗುರುತಿಸಿದ್ದಾರೆ. 2008 ರಲ್ಲಿ “ಸೊನ್ನಲಾಪುರದ ಸಂತ ಸಿದ್ಧರಾಮನ ನಿಜವಚನಗಳು” (ವ್ಯಾಖ್ಯಾನ ಸಹಿತ) ಎಂಬ ಗ್ರಂಥವನ್ನು ಪ್ರಕಟಿಸಿದ ಡಾ. ಎಲ್. ಬಸವರಾಜು ಅವರು ಕರ್ನಾಟಕ ವಿಶ್ವವಿದ್ಯಾಲಯ ಪ್ರಕಟಿಸಿದ ಸಿದ್ಧರಾಮನ 1,378 ವಚನಗಳಲ್ಲಿ 1077 ಕೋಟಾ ವಚನಗಳೆಂದು ಗುರುತಿಸಿ, 301 ಮಾತ್ರ ನಿಜವಚನಗಳು ಎಂದು ನಿರ್ಧರಿಸಿದ್ದಾರೆ. ಹೀಗಾಗಿ “ವೀರಶೈವ” ಪದ ಬಳಕೆಯಾದ ಸಿದ್ಧರಾಮನ ಆರೂ ವಚನಗಳು ಪ್ರಕ್ಷಿಪ್ತ ವಚನಗಳಲ್ಲಿ ಸೇರುತ್ತವೆ.

  1. ಅಕ್ಕಮಹಾದೇವಿಯ 3 ವಚನಗಳಲ್ಲಿ ವೀರಶೈವ ಪದ ಸೇರಿದೆ. ಈ ಮೂರು ವಚನಗಳಲ್ಲಿ “ಅಯ್ಯಾ ಸದಾಚಾರ ಸದ್ಭಕ್ತಿ … … ’(ವ. ಸಂ. 36) ಎಂದು ಆರಂಭವಾಗುವ ವಚನ ಚಿದೈಶ್ರ‍್ಯರ್ಯ ಚಿದಾಭರಣದಲ್ಲಿ ಮಾತ್ರ ಬಂದಿದೆ. “ಭವಿಯಾಚಾರವ ಬಿಡದೆ … …’(ವ. ಸಂ. 314) ಎಂದು ಆರಂಭವಾಗುವ ವಚನ “ಷಟ್‌ಸ್ಥಲಾಡಂಬರ” ಎಂಬ ಅಜ್ಞಾತ ಸಂಕಲನದಲ್ಲಿ ಮಾತ್ರ ಸೇರಿದೆ. ಇದು “ಶ್ರೀ ಗಿರಿಚೆನ್ನಮಲ್ಲಿಕಾರ್ಜುನಯ್ಯ” ಎಂಬ ಅಂಕಿತವನ್ನು ಹೊಂದಿದ್ದು, 6 ಸಂಸ್ಕೃತ ಶ್ಲೋಕಗಳನ್ನು ಅಳವಡಿಸಿಕೊಂಡು ಸಾಕಷ್ಟು ದೀರ್ಘವಾಗಿದೆ. ವೀರಶೈವ ಪದ ಶ್ಲೋಕದಲ್ಲಿ ಬಳಕೆಯಾಗಿದೆ. ವಚನ ರಚನೆ ಸಾಕಷ್ಟು ಶಿಥಿಲವಾಗಿದೆ. ಹೀಗಾಗಿ ಹೆಚ್ಚಾಗಿ ಚೆನ್ನಮಲ್ಲಿಕಾರ್ಜುನನನ್ನು ಕೇಂದ್ರವಾಗಿಟ್ಟುಕೊಂಡು ಸತಿಪತಿ ಭಾವದ ಸರಳ ಸಂಕ್ಷಿಪ್ತ ವಚನಗಳನ್ನು ಬರೆದ ಅಕ್ಕಮಹಾದೇವಿ ಇಂಥ ವಚನವನ್ನು ಸುತಾರಾಂ ಬರೆದಿರಲು ಸಾಧ್ಯವಿಲ್ಲ.
    • ಇನ್ನು “ಶಿವ ಶಿವಾ ಆದಿ ಅನಾದಿಗಳೆಂಬೆರಡಿಲ್ಲದ ನಿರವಯ ಶಿವ” (ವ. ಸಂ. 378) ಎಂದು ಆರಂಭವಾಗುವ ವಚನದ ಮಧ್ಯದಲ್ಲಿ ಬರುವ “ಜಗದ್ಧಿತಾರ್ಥವಾಗಿ ಮರ್ತ್ಯಕ್ಕೆ ಅವತರಿಸಿ ವೀರಶೈವ ಮಾರ್ಗವನರುಪುವುದಕ್ಕೆ ಭಾವನ್ನವಿವರವನೊಳಕೊಂಡು ಚರಿಸಿದನದೆಂತೆಂದಡೆ” ಎಂಬಲ್ಲಿ ಬಳಸಿದ “ವೀರಶೈವಮಾರ್ಗ” ಎಂಬುದು ಮೂಲತಃ “ಶರಣಮಾರ್ಗ” ಎಂದಿರಬೇಕು. ಹೀಗಾಗಿ ಅಕ್ಕಮಹಾದೇವಿಯೂ ತನ್ನ ವಚನಗಳಲ್ಲಿ ‘ವೀರಶೈವ’ ಪದವನ್ನು ಬಳಸಿಲ್ಲವೆಂದೇ ಹೇಳಬೇಕಾಗುತ್ತದೆ.

ಇನ್ನುಳಿದ ಅಮುಗೆ ರಾಯಮ್ಮ, ಅಂಬಿಗರ ಚೌಡಯ್ಯ, ಆದಯ್ಯ, ಚಂದಿಮರಸ, ಘಟ್ಟಿವಾಳಯ್ಯ, ಬಹುರೂಪಿ ಚೌಡಯ್ಯ, ಪ್ರಸಾದಿ ಭೋಗಣ್ಣ, ಮಡಿವಾಳ ಮಾಚಿದೇವ, ಮೋಳಿಗೆ ಮಾರಯ್ಯನವರ ವಚನಗಳಲ್ಲಿ ಬಳಕೆಯಾದ ʼವೀರಶೈವ” ಪದವೂ ಹೀಗೆಯೇ ಉದ್ದೇಶಪೂರ್ವಕವಾಗಿ ಸೇರಿಸಿದುದಾಗಿದೆ ಎಂಬುದನ್ನು ಸಾಬೀತುಪಡಿಸಬಹುದಾಗಿದೆ.

ವಚನಗಳಲ್ಲಿ ಲಿಂಗಾಯತ – ಲಿಂಗವಂತ ಪದ ಬಳಕೆ

  1. 12 ನೇ ಶತಮಾನದ ಶರಣರ ವಚನಗಳಲ್ಲಿ “ವೀರಶೈವ” ಪದ ಉದ್ದೇಶ ಪೂರ್ವಕವಾಗಿ ಸೇರಿಸಿದ್ದೆನಿಸಿದರೆ, “ಲಿಂಗವಂತ” ಮತ್ತು “ಲಿಂಗಾಯತ” ಪದಗಳು ಸಹಜವಾಗಿ ಬಳಕೆಗೊಂಡುವೆನಿಸುತ್ತವೆ .
  2. ಸದ್ಯ ಈ ಕೆಳಗಿನ 19 ಜನ ವಚನಕಾರರ 101 ವಚನಗಳಲ್ಲಿ ಲಿಂಗವಂತ ಪದ 167 ಬಾರಿ (ಲಿಂಗಾಯತ-6 ಸಲ, ಲಿಂಗವಂತ–161 ಸಲ) ಬಳಕೆಯಾಗಿದೆ.
    o ಬಸವಣ್ಣ-5,
    o ಪ್ರಭುದೇವ-6,
    o ಚೆನ್ನಬಸವಣ್ಣ–20,
    o ಸಿದ್ಧರಾಮ–4,
    o ಅಕ್ಕಮ್ಮ–3,
    o ಅಮುಗೆ ರಾಯಮ್ಮ–2,
    o ಕೇತಲದೇವಿ-1,
    o ಅಂಬಿಗರ ಚೌಡಯ್ಯ–1,
    o ಅವಸರದ ರೇಕಣ್ಣ–2,
    o ಉರಿಲಿಂಗಪೆದ್ದಿ–34,
    o ಏಲೇಶ್ವರದ ಕೇತಯ್ಯ–1,
    o ಗಜೇಶ ಮಸಣಯ್ಯ–1,
    o ಮಡಿವಾಳ ಮಾಚಯ್ಯ–5,
    o ಮನುಮುನಿ ಗುಮ್ಮಟದೇವ–1,
    o ಮರುಳಶಂಕರದೇವ–5,
    o ಮೋಳಿಗೆ ಮಾರಯ್ಯ–3,
    o ಸಕಳೇಶ ಮಾದರಸ-1.
    o ಹೊಡೆಹುಲ್ಲ ಬಂಕಣ್ಣ–1,
    o ನಿರಾಲಂಬಪ್ರಭು–1.
  3. ಚೆನ್ನಬಸವಣ್ಣ ಮತ್ತು ಉರಿಲಿಂಗಪೆದ್ದಿಯ ಒಂದೆರಡು ವಚನಗಳನ್ನು ಬಿಟ್ಟರೆ ಉಳಿದುವೆಲ್ಲವೂ ಸಂಕ್ಷಿಪ್ತವಾಗಿವೆ; ಶರಣತತ್ವ ಸಮ್ಮತವಾಗಿವೆ. ಆಯಾ ಶರಣರ ವಚನ ಶೈಲಿಗೆ ಅನುಗುಣವಾಗಿವೆ; ಸರಳ ನಿರೂಪಣೆಯಿಂದ ಕೂಡಿವೆ; ಸಂಸ್ಕೃತ ಶ್ಲೋಕಗಳಿಂದ ಮುಕ್ತವಾಗಿವೆ.
  4. ಬಸವಣ್ಣ, ಪ್ರಭುದೇವ, ಚೆನ್ನಬಸವಣ್ಣನವರ ಷಟ್‌ಸ್ಥಲ ವಚನಗಳಲ್ಲಿಯೂ ಹಾಗೂ ಹೆಚ್ಚಿನ ವಚನಗಳಲ್ಲಿಯೂ ಈ ಪದ (ಲಿಂಗವಂತ) ಉಚಿತವಾಗಿ ಬಳಕೆಯಾಗಿದೆ.
  5. ಕೆಲವು ಉದಾಹರಣೆಗಳಿಂದ ಇದನ್ನು ಸ್ಪಷ್ಟಪಡಿಸಿಕೊಳ್ಳಬಹುದು:
    ಬಸವಣ್ಣ:
    ಗಿರಿಗಳ ಮೇಲೆ ಹಲವು ತರುಮರಾದಿಗಳಿದ್ದು
    ಶ್ರೀಗಂಧದ ಸನ್ನಿಧಿಯಲ್ಲಿ ಪರಿಮಳವಾಗವೇ?
    ಲಿಂಗವಂತನ ಸನ್ನಿಧಿಯಿಂದ
    ಹಿಂದಣ ದುಸ್ಸಂಗವು ಕೆಡುವುದು.
    ಕೂಡಲಸಂಗಮದೇವಯ್ಯಾ
    ಸಿರಿಯಾಳನ ಸಾರಿರ್ದ ನರರೆಲ್ಲ ಸುರರಾಗರೆ? (ಷಟ್‌ಸ್ಥಲ ವಚನ ಸಂ. 151) ತಂದೆ ಮಕ್ಕಳಿಗೆ ಬುದ್ಧಿಯ ಹೇಳುವಲ್ಲಿ
    ತಪ್ಪಿಂಗೆ ಮುನಿವನಲ್ಲದೆ ಪ್ರಾಣಕ್ಕೆ ಮುನಿಯ.
    ಲಿಂಗವಂತನು ಲಿಂಗವಂತಂಗೆ ಬುದ್ಧಿಯ ಹೇಳುವಲ್ಲಿ
    ಅವಗುಣಕ್ಕೆ ಮುನಿವನಲ್ಲದೆ ಲಾಂಛನಕ್ಕೆ ಮುನಿಯ.
    ಲಿಂಗಭಕ್ತನು ಲಿಂಗಪಥವ ಹೇಳಿದಡೆ
    ಮತ್ಸರಿಸುವರ ಮೆಚ್ಚ ಕೂಡಲಸಂಗಮದೇವ (ಅದೇ ವ. 653) ಲಿಂಗವಶದಿಂದ ಬಂದ ನಡೆಗಳು
    ಲಿಂಗವಶದಿಂದ ಬಂದ ನುಡಿಗಳು
    ಲಿಂಗವಂತರು ತಾವು ಅಂಜಲದೇಕೆ?
    ಕೂಡಲಸಂಗಮದೇವ
    ಭಕ್ತರಭಿಮಾನ ತನ್ನದೆಂಬನಾಗಿ. (ಅದೇ ವ. 685) ಲಿಂಗವಿದ್ದಲ್ಲಿ ನಿಂದೆಯಿರದು,
    ನಿಂದೆಯಿದ್ದಲ್ಲಿ ಲಿಂಗವಿರದು.
    ಅವರೆಂತಿದ್ದರೇನು? ಹೇಗಿದ್ದರೇನು ?
    ಲಿಂಗವಂತರವರು
    ಉಪಮಿಸಬಾರದ ಮಹಾಘನವು
    ಕೂಡಲಸಂಗನ ಶರಣರು. (ಹೆ. ವ. 1336) ಪ್ರಭುದೇವ:
    ಲಿಂಗವಂತರಿಗೆ ಲಿಂಗವಾರ್ತೆಯ ನುಡಿವುದೇ ಬಂಗ.
    ಹಂಗು ನೋಡಾ, ಹಂಗಿನ ಶಬ್ದ ನೋಡಾ.
    ಕೊಡನತುಂಬಿದ ಹಾಲನೊಡೆದು ಹಾಯಿಕಿ
    ಇನ್ನು ಉಡುಗಿಹೆನೆಂದಡೆ ಉಂಟೆ, ಗುಹೇಶ್ವರಾ? (ಷಟ್‌ಸ್ಥಲ ವಚನ-628) ಪೌರ್ಣಮಿ ಬಪ್ಪನಕ್ಕ
    ಬಾಯಿಬಂಧನದಲ್ಲಿದ್ದ ಚಕೋರನಂತಿದ್ದೆನಯ್ಯಾ.
    ಉಣಲಾಗದೆಂಬ ಶಾಸ್ತ್ರವಿಡಿದು ಇದ್ದವನಲ್ಲ
    ಉಣಲಾಗದೆಂಬ ಶಾಸ್ತ್ರವುಂಟೆ ಲಿಂಗವಂತಗೆ?
    … … … ಗುಹೇಶ್ವರಂಗೆ. (ಹೆ. ವ. 1346) ಚೆನ್ನಬಸವಣ್ಣ:
    ಉದಯ ಮುಖದಲ್ಲಿ ಲಿಂಗದರುಶನ
    ಹಗಲಿನ ಮುಖದಲ್ಲಿ ಜಂಗಮದರುಶನ
    ಲೇಸು ಲೇಸು, ಲಿಂಗವಂತಂಗೆ ಇದೆ ಪಥವು
    ಸದ್ಭಕ್ತಂಗೆ ಇದೇ ಪಥವು.
    ಲೇಸು ಲೇಸು, ಕೂಡಲಚೆನ್ನಸಂಗಯ್ಯನಲ್ಲಿ
    ಅಚ್ಚ ಲಿಂಗೈಕ್ಯಂಗೆ. (ಷಟ್‌ಸ್ಥಲ ವಚನ–59) ಶೀಲವಂತರೆಲ್ಲ ಶೀಲವಂತರಯ್ಯಾ
    ಭಾಷೆವಂತರೆಲ್ಲ ಭಾಷೆವಂತರಯ್ಯಾ
    ವೃತವಂತರೆಲ್ಲ ವೃತವಂತರಯ್ಯಾ
    ನೇಮವಂತರೆಲ್ಲಾ ನೇಮವಂತರಯ್ಯಾ
    ಕೂಡಲಚೆನ್ನಸಂಗಮದೇವಯ್ಯಾ
    ಸಂಗನಬಸವಣ್ಣನೊಬ್ಬನೇ ಲಿಂಗವಂತ. (ಅದೇ. ವ. 608) ಕರಸ್ಥಲದಲ್ಲಿ ಲಿಂಗವ ಧರಿಸಿ
    ಅನ್ಯದೈವಕ್ಕೆ ತಲೆಬಾಗದಾತನ ಲಿಂಗವಂತನೆಂಬೆನಯ್ಯಾ
    ಕರಸ್ಥಲದಲ್ಲಿ ಲಿಂಗವಧರಿಸಿ
    ಭವಿಸಂಗವಮಾಡದಾತನ ಲಿಂಗವಂತನೆಂಬೆನಯ್ಯಾ. (ಹೆ. ವ. 1125) ಸಿದ್ಧರಾಮ:
    ಲಿಂಗವಂತರು ತಾವಾದ ಬಳಿಕ
    ಅಂಗನೆಯರ ನಡೆನುಡಿಗೊಮ್ಮೆ
    ಲಿಂಗದ ರಾಣಿಯರೆಂದು ಭಾವಿಸಬೇಕು
    ಲಿಂಗವಂತರು ತಾವಾದಬಳಿಕ
    ಅನುಭವ ವಚನಗಳ ಹಾಡಿ
    ಸುಖ ದುಃಖಗಳಿಗಭೇದ್ಯವಾಗಿರಬೇಕು.
    ಲಿಂಗವಂತರು ತಾವಾದಬಳಿಕ
    ಜಂಗಮವ ಪೂಜಿಸಿ ಸದಾ ಲಿಂಗೈಕ್ಯ ಸುಖಿಗಳಾಗಿರಬೇಕು ನೋಡಾ
    ಕಪಿಲಸಿದ್ಧಮಲ್ಲಿಕಾರ್ಜುನ. (ವ. ಸಂ. 1866) ಅಮುಗೆರಾಯಮ್ಮ:
    ಅಂಗದ ಮೇಲೆ ಲಿಂಗವಿಲ್ಲದವರಲ್ಲಿ
    ಲಿಂಗಾರ್ಪಿತವ ಬೇಡಲೇಕೆ?
    ಅಂಗದ ಮೇಲೆ ಲಿಂಗವುಳ್ಳ ಲಿಂಗವಂತರಲ್ಲಿ
    ಲಿಂಗಾರ್ಪಿತವ ಬಿಡಲೇಕೆ? (ವ. ಸಂ. 590) ಗುಂಡಯ್ಯಗಳ ಪುಣ್ಯಸ್ತ್ರೀ ಕೇತಲದೇವಿ:
    ಲಿಂಗವಂತರ ಲಿಂಗಾಚಾರಿಗಳ ಅಂಗಳಕ್ಕೆ ಹೋಗಿ
    ಲಿಂಗಾರ್ಪಿತವ ಮಾಡುವಲ್ಲಿ ಸಂದೇಹವಿಲ್ಲದಿರಬೇಕು. (ವ. ಸಂ. 772) ಉರಿಲಿಂಗಪೆದ್ದಿ:
    ಲಿಂಗವನರಿದ ಲಿಂಗವಂತನು ಸರ್ವಾಂಗಲಿಂಗಮೂರ್ತಿ
    ಆತನನುಡಿಯೇ ವೇದ,
    ಆತನ ನಡೆಯೇ ಶಾಸ್ತ್ರ ಪುರಾಣ ಆಗಮ ಚರಿತ್ರವು.
    ಆ ಮಹಾ ಮಹಿಮನ ನುಡಿಯಲ್ಲಿ ತರ್ಕವ ಮಾಡಲಾಗದು.
    ನಡೆಯಲ್ಲಿ ನಾಸ್ತಿಕವ ಮಾಡಿದಡೆ ನರಕ ತಪ್ಪದಯ್ಯಾ.
    ಲಿಂಗವನರಿದ ಮಹಾಮಹಿಮಂಗೆ ನಮೋ ಎಂಬೆನು.
    ಉರಿಲಿಂಗಪೆದ್ದಿ ಪ್ರಿಯ ವಿಶ್ವೇಶ್ವರಾ. (ವ. ಸಂ. 1511) ಲಿಂಗವಂತನ ಕ್ರೀ ಎಲ್ಲವೂ ಲಿಂಗಕ್ರೀ
    ಲಿಂಗ ಮಾಡಿತ್ತೇ ಅರ್ಪಿತ
    ಲಿಂಗವಂತನ ಆರೋಗಣೆ ಲಿಂಗದಾರೋಗಣೆ. (ಅದೇ 1568) ಮಡಿವಾಳ ಮಾಚಯ್ಯ:
    ಲಿಂಗವಂತಂಗೆ ಸೂತಕವೆಂಬ ನುಡಿಯ ಕೇಳಲಾಗದು. (ವ. 512)
    ನಮಗೆ ಲಿಂಗವುಂಟು
    ನಾವು ಲಿಂಗವಂತರೆಂದು ನುಡಿವರು
    ಮತ್ತೆ ಮರಳಿ ಭವಿಶೈವದೈವಂಗಳಿಗೆರಗುವ
    ಈ ಮಂಗಮಾನವರನೇನೆಂಬೆನಯ್ಯಾ
    ಕಲಿದೇವಯ್ಯ? (ವ. 638) ಸಕಳೇಶ ಮಾದರಸ:
    ಪಂಚಮಹಾಶೈವರು ಭ್ರಷ್ಟರಾಗಿ ಹೋದರು
    ಎಂತು ಲಿಂಗವಂತಂಗೆ ಸರಿಯೆಂಬೆ? (ವ. ಸಂ. 415)

ಇದುವರೆಗಿನ ಪರಾಮರ್ಶೆಯಿಂದ ಈ ಕೆಳಗಿನ ಅಂಶಗಳು ಬೆಳಕಿಗೆ ಬಂದಂತಾಗಿದೆ:

  1. ಹನ್ನೆರಡನೆಯ ಶತಮಾನದ ಶರಣರ ವಚನಗಳಲ್ಲಿ “ವೀರಶೈವ”, “ಲಿಂಗವಂತ” ಎಂಬ ಎರಡೂ ಪದಗಳು ಬಳಕೆಯಾದುದು ಕಂಡುಬಂದರೂ “ವೀರಶೈವ” ಪದ ಬಳಕೆ ಅಸಹಜ, ಲಿಂಗವಂತ ಪದ ಬಳಕೆ ಸಹಜವೆನಿಸಿದೆ. ಅಂದರೆ ವೀರಶೈವ ಪದ ಸಂಕಲನಕಾರರು ರಚಿಸಿ ಸೇರಿಸಿದ ಪ್ರಕ್ಷಿಪ್ತ ವಚನಗಳಲ್ಲಿ ಕಂಡುಬಂದರೆ, ಲಿಂಗವಂತ ಪದ ಶರಣರೇ ರಚಿಸಿದ ನಿಜವಚನಗಳಲ್ಲಿ ಕಂಡುಬರುತ್ತದೆ.
  2. ವೀರಶೈವ ಪದ ಬಳಕೆಯಾದ ವಚನಗಳೆಲ್ಲ ಹೆಚ್ಚು ತಾತ್ವಿಕವಾಗಿವೆ; ದೀರ್ಘವಾಗಿವೆ, ಸಂಸ್ಕೃತ ಶ್ಲೋಕಗಳಿಂದ ಕೂಡಿವೆ; ಶಿಥಿಲವಾಗಿವೆ; ಆಯಾ ಶರಣರ ವಚನ ಶೈಲಿಗೆ ಅನುಗುಣವಾಗಿಯಿಲ್ಲ. ಲಿಂಗವಂತ ಪದಬಳಕೆಯಾದ ವಚನಗಳಲ್ಲಿ ಕೆಲವನ್ನು ಬಿಟ್ಟರೆ ಹೆಚ್ಚಿನವು ಸರಳವಾಗಿವೆ; ಸಂಕ್ಷಿಪ್ತವಾಗಿವೆ, ಸೂತ್ರಬದ್ಧವೆನಿಸಿವೆ; ಆಯಾ ಶರಣರ ರಚನಾಶೈಲಿಗೆ ಹೊಂದಿಕೊಂಡಿವೆ.
  3. ವೀರಶೈವ ಪದ ಹೆಚ್ಚಾಗಿ ವಚನಗಳಲ್ಲಿ ಸೇರಿದ ಸಂಸ್ಕೃತ ಶ್ಲೋಕಗಳಲ್ಲಿ ಕಂಡುಬರುತ್ತದೆ. ಸಂಸ್ಕೃತ ಶ್ಲೋಕಗಳು ಮೂಲತಃ ಶರಣರು ಬಳಸಿಕೊಂಡುವಲ್ಲ. ಅನಂತರದ (15 ನೇ ಶತಮಾನದ ನಂತರದ) ಸಂಕಲನಕಾರರು ಉದ್ದೇಶಪೂರ್ವಕವಾಗಿ ಸೇರಿಸಿದುವು. ಹೀಗಾಗಿ ಆಯಾ ವಚನಕಾರರೇ ವೀರಶೈವ ಪದವನ್ನು ಬಳಸಿದ್ದಾರೆಂದು ಹೇಳಲು ಬರುವುದಿಲ್ಲ. ಈ ಕಾರಣದಿಂದ ಹನ್ನೆರಡನೆಯ ಶತಮಾನದ ಬಸವಾದಿ ವಚನಕಾರರು ವೀರಶೈವ ಪದವನ್ನು ಬಳಸಿದ್ದಾರೆ ಎಂಬ ವಾದ ಬಿದ್ದುಹೋಗುತ್ತದೆ.
  4. ಈಗ ನಮಗೆ ದೊರಕುವ ಆಧಾರಗಳ ಮೇಲಿಂದ ಹೇಳುವುದಾದರೆ “ವೀರಶೈವ” ಪದ ಕನ್ನಡದಲ್ಲಿ ಮೊದಲು ಬಳಕೆಯಾದದ್ದು 13 ನೇ ಶತಮಾನದ ಭೀಮಕವಿಯ ಬಸವಪುರಾಣದಲ್ಲಿ. ಅವನಿಗಿಂತ ಪೂರ್ವದ ಹರಿಹರನ ರಗಳೆಗಳಲ್ಲಿ “ವೀರಮಾಹೇಶ್ವರ” ಎಂಬ ಪದ ಬಳಕೆಯಾಗಿದೆ. ಜೊತೆಗೆ “ಲಿಂಗವಂತ” ಎಂಬ ಪದವೂ ಬಳಕೆಯಾಗಿದೆ. (ಬಾಲಕ ಬಸವಣ್ಣನನ್ನು ಹರಿಹರ ತನ್ನ ಬಸವರಾಜದೇವರ ರಗಳೆಯಲ್ಲಿ “ಹೊಂಗಡಗದ ಲಿಂಗವಂತ” ಎಂದು ಕರೆದಿದ್ದಾನೆ).
  5. 14 ನೇ ಶತಮಾನದ ನಂತರದ ಕಾವ್ಯಗಳಲ್ಲಿ ಮತ್ತು ವಚನಗಳಲ್ಲಿ ವೀರಶೈವ ಪದ ಬಳಕೆ-ಆಂಧ್ರದ ಆರಾಧ್ಯರಿಂದ ಹೆಚ್ಚು ಬಳಕೆಗೆ ಬಂದುದು ಕಂಡುಬರುತ್ತದೆ.
  6. ಈ ಸಂದರ್ಭದಲ್ಲಿ ಅವರು ವೀರಶೈವ ಶಿರೋನಾಮೆಯ ಅನೇಕ ಸಂಸ್ಕೃತ ಗ್ರಂಥಗಳನ್ನು ರಚಿಸಿ ಹೆಚ್ಚು ಪ್ರಚಾರ ಮಾಡಿದರು. ಸಂಸ್ಕೃತ ಮೂಲದ ಆಕರ್ಷಕವೆನಿಸಿದ “ವೀರಶೈವ” ಎಂಬ ಈ ಪದವನ್ನು ನಮ್ಮ ಕವಿಗಳು ಒಪ್ಪಿಕೊಂಡರು. ಹೀಗಾಗಿ ಬಸವಾದಿ ಶರಣರ “ಲಿಂಗವಂತ” ಪದ ಮರೆಯಾಗಿ “ವೀರಶೈವ” ಪದ ವಿಜೃಂಭಿಸತೊಡಗಿತು.
  7. ಇದು ಆಧುನಿಕ ವಿದ್ವಾಂಸರನ್ನೂ ಆಕರ್ಷಿಸಿ ತಮ್ಮ ಬರವಣಿಗೆಯಲ್ಲಿ ಲಿಂಗಾಯತಕ್ಕೆ ಬದಲಾಗಿ ಇದನ್ನು ಬಳಸಲು ಪ್ರೇರಣೆ ನೀಡಿತು.
  8. ಇತ್ತೀಚಿಗೆ ವಚನ ಸಾಹಿತ್ಯ ಸಮಗ್ರವಾಗಿ ಪ್ರಕಟವಾಗಿ, ಅದರ ವಿಭಿನ್ನ ನೆಲೆಯ ಅಧ್ಯಯನ ನಡೆದಾಗ “ವೀರಶೈವ” “ಲಿಂಗಾಯತ” ಎರಡಲ್ಲಿಯ ಅಂತರ ಸ್ಪಷ್ಟವಾಯಿತು.
  9. “ವೀರಶೈವ” ಶೈವಧರ್ಮದ ಒಂದು ಪ್ರಭೇದ. “ಲಿಂಗಾಯತ” ಬಸವಾದಿ ಶರಣರು ಸೃಷ್ಟಿಸಿದ ಸ್ವತಂತ್ರ ಧರ್ಮ.
  10. “ವೀರಶೈವ” ಶೈವದ ಒಂದು ಪ್ರಭೇದವಾಗಿರುವುದರಿಂದ ಅದು ಹಿಂದೂ ಧರ್ಮದ ಒಂದು ಭಾಗವಾಗಿ ಪರಿಗಣಿಸಲ್ಪಡುತ್ತದೆ. ಹಿಂದೂ ವೇದ ಪ್ರಮಾಣ ಧರ್ಮ. ವರ್ಣಾಶ್ರಮಗಳ ಅನುಸರಣೆ, ಬಹುದೇವೋಪಾಸನೆ, ಯಜ್ಞಯಾಗಾದಿ ಕರ್ಮಗಳ ಪಾಲನೆ, ಜ್ಯೋತಿಷ್ಯಾದಿಗಳಲ್ಲಿ ನಿಷ್ಠೆ, ಅನೇಕ ಕಂದಾಚಾರಗಳಲ್ಲಿ ನಂಬಿಕೆ–ಈ ಧರ್ಮದ ಪ್ರಮುಖ ಲಕ್ಷಣಗಳು. ವೀರಶೈವವೂ ಇವುಗಳನ್ನು ಪಾಲಿಸುತ್ತಿದೆ.
  11. ಆದರೆ ಲಿಂಗವಂತಧರ್ಮ ಇವೆಲ್ಲವನ್ನೂ ವಿರೋಧಿಸುತ್ತದೆ. ಇದು ಇಷ್ಟಲಿಂಗನಿಷ್ಠ ಧರ್ಮ. ಬಸವಾದಿ ಶರಣರು ರಚಿಸಿದ ವಚನಗಳೇ ಇದರ ಪ್ರಮಾಣಗ್ರಂಥಗಳು. ವರ್ಗ-ವರ್ಣ-ಲಿಂಗಭೇದ ಇಲ್ಲಿಲ್ಲ. ಸಮಾನತೆ-ಸ್ವಾತಂತ್ರ್ಯ-ಸಹೋದರತ್ವ ಇದರ ಧ್ಯೇಯ. ಸಕಲಜೀವಾತ್ಮರ ಲೇಸು ಇದರ ಗುರಿ. ಜ್ಯೋತಿಷ್ಯ–ಯಜ್ಞಯಾಗ–ಮೂಢನಂಬಿಕೆ-ಸ್ಪೃಶ್ಯಾಸ್ಪೃಶ್ಯತೆಗಳಿಗೆ ಇಲ್ಲಿ ಅವಕಾಶವಿಲ್ಲ. ಹೀಗಾಗಿ “ಲಿಂಗಾಯತ” ವು ಹಿಂದೂ ಧರ್ಮದ ಒಂದು ಭಾಗವಲ್ಲ; ಹಿಂದೂ ಧರ್ಮಾಚರಣೆಗಳನ್ನು ಅನುಸರಿಸುವ ವೀರಶೈವದ ಒಂದು ಭಾಗವೂ ಅಲ್ಲ. ತನ್ನದೇ ಆದ ಸ್ವತಂತ್ರ ತತ್ವ-ಧ್ಯೇಯ-ಧೋರಣೆ, ಸಾಹಿತ್ಯ-ಸಮಾಜ-ಸಂಸ್ಕೃತಿಗಳನ್ನು ಹೊಂದಿದ ಪ್ರತ್ಯೇಕ ಧರ್ಮ. ಕನ್ನಡಿಗರಾದ ಕಾಯಕ ಜೀವಿಗಳು. 12 ನೇ ಶತಮಾನದಲ್ಲಿಯೇ ಸೃಷ್ಟಿಸಿದ ಕರ್ನಾಟಕದ ಮೊದಲ ಸ್ವತಂತ್ರ ಧರ್ಮ.
  12. ಈ ಹಿನ್ನೆಲೆಯಲ್ಲಿ ಬೌದ್ಧ, ಜೈನ, ಸಿಖ್ ಧರ್ಮಗಳಂತೆ ಸ್ವತಂತ್ರ ಧರ್ಮದ ಮಾನ್ಯತೆಯನ್ನು ಪಡೆಯಲು “ಲಿಂಗಾಯತ ಧರ್ಮ” ಎಲ್ಲ ದೃಷ್ಟಿಯಿಂದಲೂ ಅರ್ಹತೆಯನ್ನು ಪಡೆದಿದೆ.

ಸೋಮೇಶ್‌ ಕುಲಕರ್ಣಿ: ಸರಿ ಅದನ್ನು ಒಂದು ಸರಿ ನೋಡೋದಾದರೆ ಸ್ವತಹ ಡಾಕ್ಟರ್ ಎಂ ಎಂ ಕಲ್ಬುರ್ಗಿ ಅವರು ಏನು ಅದೇ ಬುಕ್ ಅದೇ ಪುಸ್ತಕ ಅವರು ತಮ್ಮ ಅಭಿಪ್ರಾಯವನ್ನ ಪ್ರಸ್ತಾವನೆಯಲ್ಲಿ ಬರೀತಾರೆ. ಇಡೀ ವಚನ ಸಾಹಿತ್ಯ ಮತ್ತು ಎಲ್ಲ ಈ ವಚನ ಸಾಹಿತ್ಯದ ಕುರಿತಾದಂತ ಅಭಿಪ್ರಾಯ ವ್ಯಕ್ತಪಡಿಸುವಾಗ ಪ್ರಸ್ತಾವನೆಯಲ್ಲಿ ಎಂ ಎಂ ಕಲ್ಬುರ್ಗಿ ಅವರು ಹೇಳ್ತಾರೆ ವ್ಯಕ್ತಿತ್ವದ ಒಳಪದರಿನಲ್ಲಿ ವಿಕಾರಗಳಿರುವಂತೆ ಸಮಾಜದ ಒಳ ಒಳ ರಚನೆಯಲ್ಲಿಯೂ ನಿಯಮಗಳ ಹೆಸರಿನಲ್ಲಿ ಅನ್ಯಾಯಗಳು ನಿರ್ಮಾಣವಾಗಿರುತ್ತವೆ ಇದರಿಂದಾಗಿ ಸಮಾಜ ಜೀವನವು ಅಶುದ್ಧವಾಗುತ್ತದೆ. ಭಾರತದಲ್ಲಿ ಈ ಇದರ ಶುದ್ಧೀಕರಣದ ಕಡೆಗೆ ಅಂದರೆ ಯಾವುದು ಜೀವನದಲ್ಲಿ ಅಶುದ್ಧ ಆಗಿದೆ ಇದರ ಶುದ್ಧೀಕರಣದ ಕಡೆಗೆ ಬಹುಶಃ ಬೌದ್ಧ ಧರ್ಮವನ್ನು ಬಿಟ್ಟರೆ ವೀರಶೈವೇತರ ಧರ್ಮಗಳು ಮೊದಲಿನಿಂದಲೂ ಗಮನ ಕೊಡಲಿಲ್ಲ ಅಂತ ಹೇಳ್ತಾರೆ. ಅಂದರೆ ವೀರಶೈವರೇ ಈ ಅಶುದ್ಧತೆಯನ್ನು ಸರಿ ಮಾಡುವ ಪ್ರಯತ್ನ ಮಾಡಿದರು. ಈಗ ಇವರು ಹೇಳ್ತಿರೋದು ಏನು ಲಿಂಗಾಯತನೇ ಈ ವೈದಿಕದಲ್ಲಿರುವ ಅಶುದ್ಧತೆಯನ್ನು ಸರಿ ಮಾಡೋ ಪ್ರಯತ್ನ ಮಾಡಿದರು ಅಂತ ಅಲ್ವಾ. ಇಲ್ಲಿ ವೀರಶೈವ ಅನ್ನೋ ಹೆಸರನ್ನೇ ಬಳಸಿ ಕಲ್ಬುರ್ಗಿ ಅವರು ಹೇಳ್ತಾರೆ.

ಡಾ. ವಿಜಯಕುಮಾರ ಕಮ್ಮಾರ: ಸೋಮೇಶ ಅವರು ಉಲ್ಲೇಖಿಸಿರುವ ಡಾ. ಎಂ. ಎಂ. ಕಲಬುರ್ಗಿಯವರ ಯಾವ ಪುಸ್ತಕ ಅಂತಾ ಗೊತ್ತಿಲ್ಲಾ. ಆ ಪುಸ್ತಕದ ಹೆಸರನ್ನು ಹೇಳುವ ಗೋಜಿಗೆ ಸೋಮೇಶ ಕುಲಕರ್ಣಿ ಹೋಗಿಲ್ಲ. ಯಾವ Context ನಲ್ಲಿ ಈ ಸಾಲುಗಳು ಬಂದಿವೆ ಮತ್ತು ಈ ಸಾಲುಗಳ ಹಿಂದಿನ ಮತ್ತು ಮುಂದಿನ ಸಾಲುಗಳೂ ಕೂಡ Important ಆಗತಾವೆ. ಹಾಗಾಗಿ ಈ ಸಾಲುಗಳನ್ನು Appeasement Selective ಆಗಿ ಉಲ್ಲೇಖ ಮಾಡಿ ಡಾ. ಎಮ್. ಎಮ್. ಕಲಬುರ್ಗಿಯವರು ವೀರಶೈವರ ಪರವಾಗಿದ್ದಾರೆ ಎನ್ನುವ ಪ್ರಯತ್ನ ಎನ್ನಬಹುದು. ಇರಲಿ. ಇವರು ಉಲ್ಲೇಖ ಮಾಡಿರುವ ವೀರಶೈವ ಪದದ ವಿಸ್ತೃತ ರೂಪವನ್ನು ತಿಳಿದುಕೊಳ್ಳೋಣ.

ವಚನ ಸಾಹಿತ್ಯವನ್ನು ರೂಪಿಸುವುದರ ಮೂಲಕ ಕ್ರಾಂತಿಯನ್ನು ಮಾಡಿ ಸಮ ಸಮಾಜವನ್ನು ಕಟ್ಟಲು ಶರಣರು ಸ್ಥಾಪಿಸಿದ ಲಿಂಗಾಯತ ಧರ್ಮವನ್ನು ವೈದಿಕರು ಮತ್ತು ವೀರಶೈವರು ಕಡೆಗಣಿಸಿ ತಮ್ಮದೇ ಆದ ವೇದ, ಆಗಮ, ಉಪನಿಷತ್ತುಗಳ ಆಧಾರದ ಮೇಲೆ ಅವತಾರಗೊಂಡ ವೀರಶೈವ ಎನ್ನುವ ಮೌಢ್ಯಾಧಾರಿತ ಧರ್ಮವನ್ನು 15 ನೇ ಶತಮಾನದ ಹೊತ್ತಿಗೆ ಸಮಾಜದಲ್ಲಿ ಬಿತ್ತಿದರು. ಇದೇ ಕಾಲಘಟ್ಟದಲ್ಲಿ ಸಿದ್ಧಾಂತ ಶಿಖಾಮಣಿಯನ್ನು ಸಂಸ್ಕೃತದಲ್ಲಿ ರಚನೆ ಮಾಡಿ ಅದನ್ನು ಧರ್ಮಗ್ರಂಥವೆಂದು ಬಿಂಬಿಸತೊಡಗಿದರು. ವೀರಶೈವ ಪದವನ್ನು ಹೆಚ್ಚು ಹೆಚ್ಚು ಸಮಾಜದಲ್ಲಿ ಬಲವಂತವಾಗಿ ಬಳಕೆಯಾಗುವಂತೆ ನೋಡಿಕೊಂಡರು. ಇದರ ಜೊತೆ ಜೊತೆಗೆ ಶರಣರ ಹೆಚ್ಚಿನ ವಚನಗಳಲ್ಲಿ ಮಾತ್ರ ಸಾಧ್ಯವಾದ ಕಡೆಗಳಲ್ಲೆಲ್ಲ ಲಿಂಗಾಯತ ಮತ್ತು ಲಿಂಗವಂತ ಪದಗಳ ಬದಲಿಗೆ ವೀರಶೈವ ಪದಗಳನ್ನು ಬಲವಂತವಾಗಿ ಸೇರಿಸಿ ವಚನಗಳ ಹಸ್ತಪ್ರತಿಗಳನ್ನು ಸಿದ್ಧಪಡಿಸಲಾಯಿತು. ಆದರೆ ಅವರಿಗೆ ಬಹುಪ್ರಚಾರದಲ್ಲಿದ್ದ ಷಟ್ಸ್ಥಲ ವಚನಕಟ್ಟುಗಳಲ್ಲಿ ಒಂದು ಕಡೆಯೂ ವೀರಶೈವ ಪದ ಸೇರಿಸಲಿಕ್ಕಾಗಲಿಲ್ಲ ಎಂಬುದು ಗಮನಾರ್ಹವಾಗಿದೆ.

ಸಪ್ತಶೈವಗಳೆಂಬ ಶೈವರಲ್ಲಿ 7 ಪ್ರಬೇಧಗಳಿವೆ.

  1. ಅನಾದಿಶೈವ.
  2. ಆದಿಶೈವ.
  3. ಮಹಾಶೈವ.
  4. ಅನುಶೈವ.
  5. ಅಂತರಶೈವ.
  6. ಪ್ರವರಶೈವ.
  7. ಅಂತ್ಯಶೈವ

ವೀರಶೈವವು 28 ಆಗಮಗಳ ಮೂಲದಿಂದ ಸೃಷ್ಟಿಯಾದದ್ದು ಒಂದು ಪುರಾಣದ ಕಥೆ. ಹೀಗೆ ಸಪ್ತಶೈವಗಳ ಪ್ರಬೇಧಗಳಲ್ಲಿ 4 ಉಪಶಾಖೆಗಳಿವೆ.

  1. ಸಾಮಾನ್ಯಶೈವ.
  2. ಮಿಶ್ರಶೈವ.
  3. ಶುದ್ಧಶೈವ.
  4. ವೀರಶೈವ.

ವೀರಶೈವದಲ್ಲಿ ಮತ್ತೆ 3 ಶಾಖೆಗಳನ್ನು ಕಾಣಬಹುದು.

  1. ಸಾಮಾನ್ಯ ವೀರಶೈವ.
  2. ವಿಶೇಷ ವೀರಶೈವ.
  3. ನಿರಾಬಾರಿ ವೀರಶೈವ.

ಇಷ್ಟು ವೈವಿಧ್ತಮಯ ರೀತಿಯಲ್ಲಿ ವಿಂಗಡಿಸಲ್ಪಟ್ಟ ಆಗಮೋಕ್ತ ವೀರಶೈವಕ್ಕೂ ಲಿಂಗಾಯತಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಬಸವಣ್ಣನವರು ಸ್ಥಾಪಿತವಾದ ಲಿಂಗಾಯತ ಧರ್ಮ ವಚನಗಳು ಮೂಲಕ Promote ಆದ ಧರ್ಮವಾಗಿದೆ. ಲಿಂಗಾಯತವು ಶರಣರ ಅನುಭವದ ಮೂಲಕ ಅನುಭಾವದ ಎತ್ತರಕ್ಕೆ ಏರಿದ ವಚನಗಳಿಂದ ಮೂಡಿ ಬಂದಿದೆ. ಆದರೆ ಅನೇಕ ಜನಿವಾರಧಾರಿಗಳು, ವೀರಶೈವರು ಮತ್ತು ವೈದಿಕರು ಲಿಂಗಾಯತಕ್ಕೆ ವೀರಶೈವವನ್ನು ಸಮಾನಾರ್ಥದಲ್ಲಿ ಬಳಸಿ ಗೊಂದಲ ಸೃಷ್ಟಿಸಿದ್ದಾರೆ.

ನಾನೇ ಏಕೈಕ ಜಗತ್‌ಪ್ರಸಿದ್ಧ ವಚನ ವಿದ್ವಾಂಸನೆಂದು ಬಿಂಬಿಸಿಕೊಂಡು ಲಿಂಗಾಯತ ವೀರಶೈವ ಸಮಾನ ಎಂದು ಬಂಬಡಾ ಬಾರಿಸುತ್ತಿರುವ ಸೋಮೇಶ ಕುಲಕರ್ಣಿಗೆ ಇಷ್ಟು ಸಾಕು ಅಂತ ಅನಿಸುತ್ತದೆ.

ಸೋಮೇಶ್‌ ಕುಲಕರ್ಣಿ: ಅಷ್ಟಲ್ಲದೇನೆ ಸ್ವತಃ ಎಂ ಎಂ ಕಲ್ಬುರ್ಗಿ ಅವರು ಯಾವ ವಚನ ಸಾಹಿತ್ಯವನ್ನು ರಚನೆ ಮಾಡಿದ್ದಾರೆ ಇದರೊಳಗೆ ಬರತಕಂತ 198 ನೇ ವಚನ ಬಸವಣ್ಣವರ ವಚನ ಇತರೆ ವಚನಗಳಲ್ಲಿ ಇರತಕಂತ ವಚನ

ಎನ್ನ ಬಂದ ಭವಂಗಳನು ಪರಿಹರಿಸಿ, ಎನಗೆ ಭಕ್ತಿಘನವೆತ್ತಿ ತೋರಿ,
ಎನ್ನ ಹೊಂದಿದ ಶೈವಮಾರ್ಗಂಗಳನತಿಗಳೆದು,
ನಿಜವೀರಶೈವಾಚಾರವನರುಹಿ ತೋರಿ,
ಎನ್ನ ಕರಸ್ಥಲದ ಸಂಗಮನಾಥನಲ್ಲಿ ಮಾಡುವ
ಜಪ ಧ್ಯಾನ ಅರ್ಚನೆ ಉಪಚರಿಯ ಅರ್ಪಿತ
ಪ್ರಸಾದಭೋಗಂಗಳಲ್ಲಿ ಸಂದಿಸಿದ ಶೈವಕರ್ಮವ ಕಳೆದು,
ಭವಮಾಲೆಯ ಹರಿದು, ಭಕ್ತಿಮಾಲೆಯನಿತ್ತು,
ಭವಜ್ಞಾನವ ಕೆಡೆಮೆಟ್ಟಿ, ಭಕ್ತಿಜ್ಞಾನವ ಗಟ್ಟಿಗೊಳಿಸಿ,
ಭವಮಾಟಕೂಟವ ಬಿಡಿಸಿ, ಭಕ್ತಿಮಾಟಕೂಟವ ಹಿಡಿಸಿ,
ಭವಶೇಷವನುತ್ತರಿಸಿ, ಭಕ್ತಿಶೇಷವನಿತ್ತು,
ಎನಗೆ, ಎನ್ನ ಬಳಿವಿಡಿದು ಬಂದ ಶರಣಗಣಂಗಳೆಲ್ಲರಿಗೆ
ಶಿವಸದಾಚಾರದ ಘನವನರುಹಿ ತೋರಿ,
ಮತ್ರ್ಯಲೋಕದಲ್ಲಿ ಸತ್ಯಸದಾಚಾರವನು ಹರಿಸಿ,
ಶಿವಭಕ್ತಿಯನುದ್ಧರಿಸಿ, ಕೂಡಲಸಂಗಮದೇವರಲ್ಲಿ
ಚೆನ್ನಬಸವಣ್ಣ ಎನ್ನನಾಗುಮಾಡಿ ಉಳುಹಿದನಾಗಿ
ಇನ್ನೆನಗೆ ಭವವಿಲ್ಲದೆ, ಬಂಧನವಿಲ್ಲದೆ,
ಭಕ್ತಿ ಮಾಟಕೂಟದ ಗೊತ್ತಿನಲ್ಲಿರ್ದು
ನಾನು ಚೆನ್ನಬಸವಣ್ಣನ ಶ್ರೀಪಾದಕ್ಕೆ
ನಮೋ ನಮೋ ಎಂದು ಬದುಕುವೆನು.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-319/ವಚನ ಸಂಖ್ಯೆ-1093)

ಅಂತ ಹೇಳ್ತಾರೆ. ಓಕೆ. ಈ ವಚನದಲ್ಲಿ ಸ್ಪಷ್ಟವಾಗಿ ಹೇಳ್ತಾರಲ್ವ ಎನ್ನ ಹೊಂದಿದ ಶೈವ ಮಾರ್ಗಗಳನತಿಗಳು, ನಾನು ಶೈವ ಮಾರ್ಗಗಳನ್ನು ಆಚರಿಸುತ್ತಿದ್ದೆ, ಅವುಗಳನತಿಗಳು ನಿಜ ನಿಜವೀರ ಶೈವಾಚಾರವನ್ನು ಅರುಹಿತರೆದಾತ ಚನ್ನಬಸವಣ್ಣ ಅಂತ ಹೇಳ್ತಾರೆ.

ಕೆ. ಎಸ್. ಎನ್. ಸ್ವಾಮಿ ಹೊಸದಿಗಂತ ಚಾನಲ್ಲನ ಸಂಪಾದಕ: ಅಂದರೆ ಚೆನ್ನಬಸವಣ್ಣನ ಬಗ್ಗೆ ಹೇಳ್ತಿರುವಂತದ್ದು.

ಸೋಮೇಶ್‌ ಕುಲಕರ್ಣಿ: ಇದು ಬಸವಣ್ಣ ಅಂದ್ರೆ ಅವರು ನನ್ನ ಶೈವ ಮಾರ್ಗಗಳನ್ನು ದೂರಾಗಿ ನಾನು ನಿಜವೀರ ಶೈವನಾಗುದಕ್ಕೆ ಕಾರಣೀಕರ್ತರು ಅವರು ತೋರಿಸಿದ ಮಾರ್ಗ. ಭವಮಾಲೆ ಇತ್ತು ನಂದು ಮೊದಲು ಶೈವ ಮಾರ್ಗಗಳನ್ನು ಮಾಡುವಾಗ. ಭಕ್ತಿ ಮಾಲೆಯನ್ನು ತೋರಿಸಿದ. ಅಂದರೆ ವೀರಶೈವಕ್ಕೆ ಬಂದು ನಾನು ಭಕ್ತನಾದೆ. ಮೊದಲು ಭವಜ್ಞಾನವನ್ನು ಕೆಡೆಮಿಟ್ಟಿ ಭಕ್ತಿ ಜ್ಞಾನವನ್ನು ಗಟ್ಟಿಗೊಳಿಸಿದ. ಶೈವ ಮಾರ್ಗಗಳ ನತಿಗಳದು ವೀರಶೈವನಾದಾಗ.

ಡಾ. ವಿಜಯಕುಮಾರ ಕಮ್ಮಾರ ಅವರ ಉತ್ತರ: ಮೇಲೆ ತಿಳಿಸಿದಂತೆ ಡಾ. ವೀರಣ್ಣ ರಾಜೂರ ಅವರ ಲೇಖನದಲ್ಲಿ ಈ ಪ್ರಕ್ಷಿಪ್ತ ವಚನಗಳ ಅಧ್ವಾನಗಳನ್ನು ಕುರಿತು ವಿಶ್ಲೇಷಣೆ ಮಾಡಲಾಗಿದೆ. ಪ್ರಕ್ಷಿಪ್ತ ವಚನಗಳನ್ನೇ Quote ಮಾಡುತ್ತಾ ವಿಕೃತಿ ಮೆರೆಯುವವರಿಗೆ ಮಂಡೆ ಸರಿಯಿಲ್ಲ ಎನ್ನಬಹುದಷ್ಟೆ. ಇದಕ್ಕಿಂತ ಹೆಚ್ಚಿನ ಉತ್ತರ ಅವರಿಗೆ ಕೊಡುವುದು ಬೇಕಾಗಿಲ್ಲ.

ಸೋಮೇಶ್‌ ಕುಲಕರ್ಣಿ: ಯಾಕೆಂತಂದ್ರೆ ಶೈವಮಾರ್ಗ ನಮಗೆಲ್ಲ ತಿಳಿದಿರುವಂತೆ ಸಹಜವಾಗಿಯೇ ಅದು ಒಂದು ಆ ನಮ್ಮ ಸನಾತನ ಪರಂಪರೆಯ ಮತ ಪರಂಪರೆಗಳಲ್ಲಿ ಒಂದು ಶೈವಮಾರ್ಗ, ವೈಷ್ಣವ ಮಾರ್ಗಗಳು ಸಹಜವಾಗಿಯೂ ಕೂಡ ನಮ್ಮ ದೇಶದಲ್ಲಿ ಕಾಲಕಾಲಕ್ರಮೇಣ ಕಾಲ ಪ್ರವಾಹದಲ್ಲಿ ಬಂದಾಗೆ ಅವು ಒಂದು ಚೌಕಟ್ಟಿಗೆ ಒಳಪಟ್ಟಂತಹ ಕೆಲವು ಕಾಲದಲ್ಲಿ ಅವು ಸಮಾಜಕ್ಕೆ ಒಪ್ಪಲಾಗದಂತಹ ಇವುಗಳನ್ನ ಆಚರಿಸುತ್ತಾ ಬಂದವು ಮೂಲದಲ್ಲಿ ಹಾಗಿಲ್ಲ ಆದರೂ ಕೂಡ ಕಾಲಕ್ರಮೇಣದಲ್ಲಿ ಆ ತರಹ ಇದ್ವು ಅದರ ಪರಿಣಾಮ ಹೆಣ್ಣುಮಕ್ಕಳಿಗೆ ಸಂಸ್ಕಾರ ಕೊಡದೆ ಇರುವ ಅಸ್ಪೃಶತೆ ಆಚರಿಸುವ ಅವುಗಳಿಂದ ದೂರ ಇರುವ ಕೆಲವು ಜಡತ್ವಗಳಿಗೆ ಹೊಂದುಕೊಂಡಿದ್ವು ಆದರೆ ಅವುಗಳನ್ನ ಮೀರಿದಂತಹ ಒಂದು ವಿಚಾರಧಾರೆ ಒಂದು ಒಂದು ಪ್ರತ್ಯೇಕ ಅನುಕೂಲತೆ ಅಥವಾ ಪ್ರತ್ಯೇಕ ಮಾರ್ಗ ಒಂದು ಬಸವಣ್ಣವರಿಗೆ ಕಾಣಿಸತು ಆ ಕಾಣಿಸಿದಂತ ಮಾರ್ಗವನ್ನೇ ಅವರು ಆಯ್ಕೆ ಮಾಡಿಕೊಂಡರು ಅನ್ನುವಂತದ್ದು ಇಲ್ಲಿ ಸ್ಪಷ್ಟ ಇದೆ.

ಡಾ. ವಿಜಯಕುಮಾರ ಕಮ್ಮಾರ ಅವರ ಉತ್ತರ: ಶೂನ್ಯ ಸಂಪಾದನೆಗಳು, ಪುರಾಣಗಳು, ರಗಳೆಗಳು, ಮಹಾಕಾವ್ಯಗಳು ಆಯಾ ಕಾಲಘಟ್ಟದಲ್ಲಿ ಸುಪ್ರಸಿದ್ಧವಾದಂಥ ಸಾಹಿತ್ಯ ಪ್ರಕಾರಗಳು. ಇವುಗಳಿಗೆ ರಾಜಾಶ್ರಯದ ಜೊತೆಗೆ ಪ್ರಸಿದ್ಧಿಯನ್ನು ತಂದುಕೊಟ್ಟಂಥ ಕೃತಿಗಳು. ಸಹಜವಾಗಿಯೇ ಅಲ್ಲಿ ಕಾಲ್ಪನಿಕ ಕಥೆಗಳ ವೈಭವೀಕರಣವಾಗಿರುತ್ತದೆ. ಈ ಶೂನ್ಯ ಸಂಪಾದನೆಗಳು, ಪುರಾಣಗಳು, ರಗಳೆಗಳು, ಮಹಾಕಾವ್ಯಗಳು ಪ್ರಾರಂಭವಾಗುವುದೇ ಶಿವನ ಒಡ್ಡೋಲಗದಲ್ಲಿನ ಒಂದು ಸಭೆಯ ಮೂಲಕವಾಗಿಯೇ. ಪವಾಡಗಳ ರೀತಿಯಲ್ಲಿ ಬಿಂಬಿತವಾದ ಕಥೆಗಳಿಗೆ ಐತಿಹಾಸಿಕ ಮಹತ್ವ ಕೊಡಬೇಕಾಗಿಲ್ಲ. ಈ ಎಲ್ಲ ಸಾಹಿತ್ಯದಲ್ಲಿ ಬಸವಾದಿ ಶರಣರು ಇದ್ದ ಕಾಲಘಟ್ಟದ ಸಾಮಾಜಿಕ, ಆರ್ಥಿಕ, ಔದ್ಯೋಗಿಕ ಮತ್ತು ಜ್ವಲಂತ ವಿಷಯಗಳನ್ನು ಅರಿಯುವ ಪ್ರಯತ್ನವಾಗಬೇಕೆ ಹೊರತು ಪೌರಾಣಿಕ ಹಿನ್ನೆಲೆಯಲ್ಲಿ ಪವಾಡ ಪುರುಷರಂತೆ ನೋಡೋದು ಅರ್ಥಹೀನ. ಶೈವಮಾರ್ಗ ಮತ್ತು ವೈಷ್ಣವಮಾರ್ಗದಲ್ಲಿ ಮಹಿಳೆಯರಿಗೆ ಎಂಥ ಹೀನಸ್ಥಾನವನ್ನು ನೀಡಿದ್ದರು ಎನ್ನುವುದು ಸಹಸ್ರಾರು ವರ್ಷಗಳಿಂದ ಚರ್ಚಿತವಾದ ವಿಷಯ. ಮಹಿಳೆಯರಿಗೆ ಉನ್ನತ ಸ್ಥಾನಮಾನ ನೀಡಿದ್ದು ಶೈವ ಮತ್ತು ವೈಷ್ಣವರಿಗೆ ಸರಿ ಬರಲಿಲ್ಲವಾದ್ದರಿಂದ ಅಂದಿನಿಂದ ಈ ಸೋಮೇಶ ಕುಲಕರ್ಣಿಯಂಥ ಎಡಬಿಡಂಗಿಗಳಿಗೆ ಬಸವಣ್ಣನವರು Villain ಆಗಿ ಕಂಡಿದ್ದರು ಎನ್ನುವುದು ಜನಜನಿತವಾದ ಸಂಗತಿ. ಈ ಸೋಮೇಶ ಕುಲಕರ್ಣಿ ಹೇಳುವ ಸಂಗತಿಗಳು ಇಂಥ ಅಧ್ವಾನಗಳ ಒಂದು ಚಿತ್ರಣ ಅಷ್ಟೇ. ಹಾಗಾಗಿ ಈತನ ಮಾತುಗಳಿಗೆ ಮಹತ್ವ ನೀಡಬೇಕಾಗಿಲ್ಲ.

ಸೋಮೇಶ್‌ ಕುಲಕರ್ಣಿ: ಅಷ್ಟು ಮಾತ್ರ ಅಲ್ಲ ಬಸವ ಪುರಾಣದಲ್ಲಿ ಆಗಿರಲಿ ಅಥವಾ ಸಿಂಗಿರಾಜ ಪುರಾಣದಲ್ಲಿ ಆಗಿರಲಿ ಆ ಎಲ್ಲ ಕಡೆಗೂ ಕೂಡ ಬಸವಣ್ಣನವರು ಈ ರೀತಿಯ ವಿಚಾರವನ್ನು ಆಯ್ಕೆ ಮಾಡಿಕೊಂಡದಕ್ಕೆ ಅವರಿಗ ಒಬ್ಬರು ಗುರುಗಳು ಇದ್ರು ಅನ್ನೋದನ್ನು ಉಲ್ಲೇಖ ಮಾಡ್ತಾರೆ. ಓಕೆ, ಅಲ್ಲಿರತಕ್ಕಂತ ಕಪ್ಪಡಿ ಸಂಗಯ್ಯ ಅನ್ನುವಂತ ಗುರುಗಳಿಂದ ಅವರಿಗೆ ಈಶಾನ ಗುರು ಅಂತ ಕರೀತಿದ್ರು ಜಾತವೇದ ಮುನಿಗಳು ಅಂತ ಕರೀತಿದ್ರು ಅನ್ನುವಂತದ್ದು ಸಂಶೋಧನೆಯಿಂದ ಸಾಕಷ್ಟು ಆಧಾರಗಳು ಸಿಗುತವೆ. ಅದರ ನಂತರ ಸ್ವತಃ ಮಡಿವಾಳ ಮಾಚಿದೇವನೇ ತನ್ನ ಒಂದು ವಚನದಲ್ಲಿ ಕಪ್ಪಡಿ ಸಂಗಯ್ಯ ಅನ್ನುವಂತ ಗುರುವಿನಿಂದ ಬಸವಣ್ಣನವರು ಪ್ರಭಾವಿತರಾದರು ಅನ್ನುವಂತದ್ದನ್ನ ಹೇಳ್ತಾರೆ ಹೀಗಿರಬೇಕಾದರೆ ಒಂದು ಪ್ರತ್ಯೇಕ ಮಾರ್ಗ ಸಿಕ್ತು. ಇವೆಲ್ಲವುಗಳಿಗಿಂತಲೂ ಸಹಿತ ಭಿನ್ನವಾದಂತಹ ಮತ್ತು ಎಲ್ಲರಿಗೂ ಸಮಾನತೆ ಸಿಗತಕಂತ ಅಂತ ಒಂದು ವ್ಯವಸ್ಥೆ ಸಿಕ್ತು. ಅಂದಾಗ ಬಸವಣ್ಣವರು ಅದನ್ನ ಸ್ವೀಕಾರ ಮಾಡಿದ್ರು ಅನ್ನೋದಕ್ಕೆ ಇದಕ್ಕಿಂತಲೂ ಬೇರೆ ಹೆಚ್ಚಿನ ಆಧಾರಗಳು ಏನು ಬೇಕು?

ಡಾ. ವಿಜಯಕುಮಾರ ಕಮ್ಮಾರ ಅವರ ಉತ್ತರ: ಬಸವಣ್ಣನವರು ಸಂಗಮಕ್ಕೆ ಬರುವ ಉದ್ದೇಶ ಕಲ್ಯಾಣ ಕಟ್ಟುವುದು ಮತ್ತು ಸುಜ್ಞಾನವನ್ನು ಪಡೆಯುವುದಕ್ಕಾಗಿ ಅಂತ ಜಾನಪದರು ಭಾವತುಂಬಿ ಹಾಡಿನ ಮೂಲಕ ಕಟ್ಟಿ ಕೊಟ್ಟಿದ್ದಾರೆ.

ಹುಟ್ಟಿ ಬಂದನು ಬಸವ | ಕಟ್ಟುದಕ ಕಲ್ಯಾಣ ||
ಬಿಟ್ಟು ಬಾಗೋಡಿ | ನಾಗಾಯಿಯೊಡಗೂಡಿ ||
ಮೆಟ್ಟು ಮಾಡಿದನು | ಸಂಗಮಕೆ ||

ಬಸವಣ್ಣನವರು ಹೆತ್ತ ತಂದೆ-ತಾಯಿಯವರನ್ನೂ, ಹುಟ್ಟಿದ ಊರನ್ನೂ ಬಿಟ್ಟು ಅಕ್ಕ ನಾಗಲಾಂಬಿಕೆಯವರ ಜೊತೆಗೆ ಸಂಗಮಕ್ಕೆ ಬರುತ್ತಾರೆ. ಕೂಡಲಸಂಗಮದಲ್ಲಿ ಮೆಟ್ಟು ಮಾಡಿದರು ಅಂದರೆ ನೆಲೆಯೂರಿದರು.

ಬಸವ ಸಾಲಿಯ ಕಲಿತ | ಎಸೆವ ಸಂಗಮದೊಳಗೆ ||
ಹೆಸರು ಪಡಕೊಂಡ | ಜಗದೊಳಗ ||
ವರಸಂಗ ಹಸುಮಗನ | ಹರಸಿ ಸಲುಹಿದನು ||

ಕೂಡಲಸಂಗಮದಲ್ಲಿ ಬಸವಣ್ಣನವರು ತಮ್ಮ ಎಲ್ಲ ವಿದ್ಯಾಭ್ಯಾಸವನ್ನು ಪೂರೈಸಿದ್ದರು. ಕೂಡಲಸಂಗಮದೇವರು ಬಸವಣ್ಣನವರನ್ನು ಸಂಗಮದೊಳಗೆ ಶೋಭಿಸುವಂತೆ ಹಸು ಮಗುವಿನಂತೆ ಹರಸಿ ಸಲುಹಿದರು ಅಂತ ಜಾನಪದರು ಹೇಳುತ್ತಾರೆ. ಇಂಥ ಪುಣ್ಯ ತಾಣವಾದಂಥ ಕೂಡಲಸಂಗಮದ ಗುರುಕುಲದೊಳಗೆ ಬಸವಣ್ಣನವರು 12 ವರ್ಷದವರೆಗೆ ವಿದ್ಯಾಭ್ಯಾಸವನ್ನು ಮಾಡತಾರೆ. ಅವರ ಬದುಕಿನ ಕೊನೆಯ ದಿನಗಳನ್ನು ಇಲ್ಲಿಯೇ ಕಳೆದು ಲಿಂಗೈಕ್ಯರಾದ ಪವಿತ್ರ ಭೂಮಿ. ಒಟ್ಟಾರೆಯಾಗಿ ಕೂಡಲಸಂಗಮಕ್ಕೆ ಒಂದು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಮೆರಗನ್ನು ಒದಗಿಸಿದ್ದು ಬಸವಣ್ಣನವರೆಂಬ ಚೈತನ್ಯದ ಚಿಲುಮೆ ಅಂತ ಹೇಳಬಹುದು.

ಬಸವಣ್ಣನವರು ಕೂಡಲಸಂಗಮಕ್ಕೆ ಬಂದಿದ್ದನ್ನು ಹರಿಹರ ಕವಿ ವಿರಚಿತ ಬಸವರಾಜದೇವರ ರಗಳೆಯಲ್ಲಿ ಮನೋಜ್ಞವಾಗಿ ನಿರೂಪಿಸಿದ್ದಾರೆ.

ಹರಿಹರ ಕವಿಯ ವಿರಚಿತ ಬಸವರಾಜದೇವರ ರಗಳೆ – ಟಿ. ಎಸ್. ವೆಂಕಣ್ಣಯ್ಯ

ಅಂದಿನ ಕಾಲಘಟ್ಟದ ಶ್ರೇಷ್ಠ ಜ್ಞಾನಿ ಮತ್ತು ಗುರುಗಳೆಂದು ಹೆಸರಾಗಿದ್ದ ಜಾತವೇದ ಮುನಿಗಳು ಕಪ್ಪಡಿ ಸಂಗಮ ಕ್ಷೇತ್ರದ ಶೈಕ್ಷಣಿಕ ವಿದ್ಯಾ ಪೀಠದ ಪ್ರಮುಖ ಗುರುಗಳು. ಇವರ ಆಶ್ರಯದಲ್ಲಿ ಬಸವಣ್ಣ, ಅಕ್ಕನಾಗಮ್ಮ, ಶಿವಸ್ವಾಮಿ ಮುಂತಾದ ಶರಣ ಶ್ರೇಷ್ಠರು ವಿದ್ಯಾಭ್ಯಾಸ ಮಾಡಿದ್ದರೆಂದು ತಿಳಿದು ಬರುತ್ತದೆ. ಬಸವಣ್ಣನವರ ಪ್ರಬುದ್ಧ ವ್ಯಕ್ತಿತ್ವ ರೂಪುಗೊಳ್ಳಲು ಕೂಡಲಸಂಗಮ ಕ್ಷೇತ್ರದಲ್ಲಿನ ಮಾರ್ಗದರ್ಶನ ಬಹುಮಟ್ಟಿಗೂ ಕಾರಣವಾಗಿದೆ ಎನ್ನಲಾಗಿದೆ.

ಭೀಮಕವಿ ರಚಿಸಿದ “ಬಸವ ಪುರಾಣ” ದಲ್ಲಿ ಉಲ್ಲೇಖವಾದಂತೆ ಜಾತವೇದ ಮುನಿಗಳನ್ನು ಕಪ್ಪಡಿ ಸಂಗಮನಾಥನೆಂದು ಬರೆದಿದ್ದಾನೆ.

ಧರೆಗೆ ಕಪ್ಪಡಿಸಂಗಮೇಶ್ವರ
ಪುರವೆಸೆವುದಲ್ಲಿ ಪ್ರಸಿದ್ಧೋ
ದ್ಧರಣ ಕೂಡಲಸಂಗಮೇಶನ ಮಂದಿರಕೆ ಪೋಗಿ
ನೆರೆದ ಭಕ್ತರು ತನ್ನ ನಿದಿರ್ಗೊಳು
ತಿರೆ ತದೀಯದ್ವಾರದೊಳು ಸ
ದ್ಗುರುಪದಕೆ ಸಾಷ್ಟಾಂಗವೆರಗಿಯಲರ್ದು ಪೊಡವಂಟು
ಆಗಮ ಪುರಾಣಾರ್ಥ ವಿಹಿತ ವಿ
ಭಾಗ ಸೂಕ್ತಿಗಳಿಂದೆ ಮಂಜುಳ
ರಾಗರಸವೊಸೆರ್ದೆಸೆಯಲನುರಾಗಿಸಿ ನುತಿಸುತಿರಲು
ಆಗ ಮುನ್ನಿನ ವೇಷವೊಪ್ಪಿರ
ಲಾಗಿ ಸಂಗಮದೇವದೇವನು
ದೇಗುಲದ ಬಾಗಿಲ ಹೊರಗೆ ತಲೆದೋರಿದನು ಬಂದು

ಹರಿಹರ ಕವಿಯ “ಬಸವರಾಜ ದೇವರ ರಗಳೆ” ಯಲ್ಲಿ ಜಾತವೇದ ಮುನಿಗಳನ್ನು ಈಶಾನ್ಯ ಗುರುಗಳೆಂದು ಕರೆಯಲಾಗಿದೆ. ಸಿಂಗಿರಾಜನ “ಬಸವರಾಜ ಚಾರಿತ್ರ್ಯ” ಗ್ರಂಥದಲ್ಲಿ ಜಾತವೇದ ಮುನಿಗಳ ಉಲ್ಲೇಖವಿದೆ. ಕಪ್ಪಡಿಯ ಸಂಗಮೇಶ್ವರ ಗುಡಿಯ ಬಲಭಾಗದಲ್ಲಿ ಜಾತವೇದ ಮುನಿಗಳ ಮಠ ಈಗಲೂ ಇದೆ.

ವಿದ್ಯಾಭ್ಯಾಸದ ಸಂದರ್ಭದಲ್ಲಿ ಅನೇಕ ವಿದ್ವಾಂಸರುಗಳು ಗುರುಗಳು ಬಸವಣ್ಣನವರ ವಿದ್ಯಾಭ್ಯಾಸಕ್ಕೆ ನೆರವಾಗಿರಬಹುದು. ಜಾತವೇದಮುನಿಗಳು, ಈಶಾನ್ಯಮುನಿಗಳು ಮತ್ತು ಕಪ್ಪಡಿ ಸಂಗಣ್ಣವರು ಬಸವಣ್ಣನವರಿಗೆ ವಿದ್ಯೆ ಕಲಿಸಿದ ಮಾತ್ರಕ್ಕೆ ಬಸವಣ್ಣನವರಿಗೆ ಮತ್ತೊಮ್ಮೆ ಜನಿವಾರ ತೊಡಿಸಬಹುದೆಂದು ಸೋಮೇಶ ಕುಲಕರ್ಣಿಯವರು ತಿಳಿದುಕೊಂಡಿದ್ದರೆ ಅದು ಮೂರ್ಖತನ. ಲಿಂಗಾಯತ ತತ್ವಸಿದ್ಧಾಂತಗಳನ್ನು ಪ್ರತಿಪಾದಿಸುವ ಸಂದರ್ಭದಲ್ಲಿ ವಿದ್ಯಾಗುರುಗಳೇ ಬೇರೆ ಅವರ ಪ್ರಭಾವವೇ ಬೇರೆ.

ನನ್ನ ಶಾಲಾ ಕಾಲೇಜು ದಿನಗಳಲ್ಲಿ ಬ್ರಾಹ್ಮಣ, ಮುಸ್ಲಿಂ, ಕ್ರಿಶ್ಚಿಯನ್‌, ಲಿಂಗಾಯತ, ಜೈನ, ಐನಾರ ಮುಂತಾದ ಹಲವಾರು ಗುರುಗಳು ನನಗೆ ಪಾಠ ಮಾಡಿದ್ದಾರೆ. ಹಾಗೆಂದ ಮಾತ್ರಕ್ಕೆ ನಾನು ಬ್ರಾಹ್ಮಣ, ಮುಸ್ಲಿಂ, ಕ್ರಿಶ್ಚಿಯನ್‌, ಲಿಂಗಾಯತ, ಜೈನ, ಐನಾರ ಮುಂತಾದ ಜಾತಿಯವನು ಆಗಲು ಸಾಧ್ಯವೇ? ತೀರ ಇಷ್ಟೊಂದು Sensitive ವಿಷಯವನ್ನು ಸೋಮೇಶ ಕುಲಕರ್ಣಿಯಂಥ ದರಿದ್ರ ಎಡಬಿಡಂಗಿಗಳು ತಮ್ಮ ಮೂಗಿನ ನೇರಕ್ಕೆ ವಿಶ್ಲೇಷಣೆ ಮಾಡುತ್ತಾ ಬಸವಣ್ಣನಿಗೆ ಜನಿವಾರ ಹಾಕುವುದಕ್ಕೆ ನೋಡಿದರೆ ಹಾಸ್ಯಾಸ್ಪದವೆನಿಸುತ್ತದೆ.

ಹಿಂದೂ ಸನಾತನ ವೈದಿಕ ಪರಂಪರೆ ಪುನರುಜ್ಜೀವನಗೊಂಡಂಥಾ ಸಂಕ್ರಮಣ ಕಾಲದಲ್ಲಿ, ಶ್ರೇಣೀಕೃತ ಸಮಾಜದಲ್ಲಿ ಪ್ರಭಾವಶಾಲಿ ವೈದಿಕ ಪರಂಪರೆಯ ಮೇಲುಸ್ತರದ ಜನರು ಕೀಳು ಸಮಾಜದವರ ಮೇಲೆ ದಲಿತರ ಮೇಲೆ ಅನೇಕ ರೀತಿಯ ಶೋಷಣೆಗಳನ್ನು ಅಂದರೆ ಅಸ್ಪೃಷ್ಯತೆ, ಅಸಮಾನತೆಯಂಥ ಅಸಹಜ ಆಚರಣೆಗಳನ್ನು ಹೇರಿದ್ದರು. ಪ್ರಾಣಿಬಲಿ, ಷೋಡಷೋಪಚಾರ ಮತ್ತು ದಾನಗಳು, ಹೋಮ-ಹವನಗಳು, ಪೂಜೆ-ಪುನಸ್ಕಾರಗಳು ಮುಂತಾದ ಆಚರಣೆಗಳನ್ನು ತರುವುದರ ಮೂಲಕ ಮೂಢನಂಬಿಕೆಗಳಿಗೆ ವಿಸ್ತಾರ ಕೊಡತಾ ಬಂದರು. ಇಂಥ ಸಂಘರ್ಷಪೂರ್ಣ ಸಮಯದಲ್ಲಿ ಬಸವಣ್ಣನವರು ಒಂದು ಪ್ರಭಾವಶಾಲಿ ಬ್ರಾಹ್ಮಣರ ಮನೆತನದಲ್ಲಿ ಜನಿಸಿ ವೈದಿಕ ವಿಧಿ-ವಿಧಾನಗಳನ್ನು ತಿರಸ್ಕರಿಸಿ ಕೂಡಲಸಂಗಮಕ್ಕೆ ಆಗಮಿಸುತ್ತಾರೆ.

ಕೂಡಲಸಂಗಮನಾಥ ದೇವಸ್ಥಾನ, ಕೂಡಲಸಂಗಮ (ಚಿತ್ರ: ಅಂತರ್ಜಾಲ ಕೃಪೆ)

ಒಡೆಯರು ಬಂದಡೆ | ಗುಡಿ ತೋರಣವ ಕಟ್ಟಿ ||
ನೆಂಟರು ಬಂದಡೆ ಸಮಯವಿಲ್ಲೆನ್ನಿ | ಅಂದೇಕೆ ಬಾರರು? ||
ನೀರಿಂಗೆ ನೇಣಿಂಗೆ | ಹೊರಗಾದಂದು ||
ಸಮಯಾಚಾರಕ್ಕೆ | ಒಳಗಾದಂದು ||
ಪರುಷ ಮುಟ್ಟಲು ಕಬ್ಬುನ | ಸುವರ್ಣವಾಯಿತ್ತು ||
ಬಳಿಕ ಬಂಧುಗಳುಂಟೆ | ಕೂಡಲಸಂಗಮದೇವಾ? ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-44 / ವಚನ ಸಂಖ್ಯೆ-449)

ಬಸವಣ್ಣನವರು ಕೂಡಲಸಂಗಮ ಕ್ಷೇತ್ರಕ್ಕೆ ಯಾಕೆ ಬಂದರು ಎನ್ನುವುದಕ್ಕೆ ಈ ಮೇಲಿನ ವಚನ ಮತ್ತು ಕೂಡಲಸಂಗಮ ಪರಿಸರದ ಧಾರ್ಮಿಕ ಚಿಂತನೆ ಮಹತ್ವದ ಸ್ಥಾನವನ್ನು ಪಡೆಯುತ್ತದೆ. ಬಸವಣ್ಣನವರು ಜನಿಸಿದ್ದು ಆಗಮಿಕ ಶುದ್ಧಶೈವ ಬ್ರಾಹ್ಮಣರ ವೈದಿಕ ಪರಂಪರೆಯ ಮನೆತನದಲ್ಲಿ. ವೈದಿಕರ ಧಾರ್ಮಿಕ ಕಟ್ಟಳೆಗಳನ್ನು ವಿರೋಧಿಸಿದ ಬಸವಣ್ಣನವರು ಸಮಯಾಚಾರವೆನ್ನುವ ನಾಥಪಂಥವನ್ನು ಅಪ್ಪಿಕೊಂಡಿರಬಹುದು. ಕೂಡಲಸಂಗಮ ಪರಿಸರದಲ್ಲಿ ನಾಥ ಪರಂಪರೆ ತನ್ನ ಉಚ್ಛ್ರಾಯ ಸ್ಥಿತಿಯಲ್ಲಿತ್ತು ಎನ್ನುವುದನ್ನು ಬಸವಾದಿ ಶರಣರ ಹಲವಾರು ವಚನಗಳ ಮೂಲಕ ತಿಳಿದುಕೊಳ್ಳಬಹುದು. ಕ್ಷೇತ್ರಾಧಿಪತಿಯ ಹೆಸರು ಕೂಡಲಸಂಗಮನಾಥ ಎನ್ನುವುದು ನಾಥ ಪರಂಪರೆಯ ಪರಿಸರ ಕೂಡಲಸಂಗಮದಲ್ಲಿತ್ತು ಎನ್ನುವದನ್ನು ಪುಷ್ಟೀಕರಿಸುತ್ತದೆ.

“ಸಂಯಮ” ಮತ್ತು “ಯತಿ” ಶಬ್ದಗಳ ಸಂಯುಕ್ತಾಕ್ಷರವೇ ಸಮಯಾಚಾರ. ಶಿವ ಮತ್ತು ಶಕ್ತಿಗಳ ಸಂಗಮವೇ ಸಮಯಾಚಾರವೆನ್ನುವ ನಾಥಪಂಥ. ಸಮಯಾಚಾರ, ಕುಲಾಚಾರ ಮತ್ತು ಮಿಶ್ರಾಚಾರ ಎಂದು ಮೂರು ರೀತಿಯ ಆಚರಣೆಯ ಸಂಪ್ರದಾಯ ಈ ಪಂಥದಲ್ಲಿದೆ. ಈ ಪಂಥದಲ್ಲಿ 5 ವಿಧಗಳು:

  1. ಅಧಿಷ್ಠಾನಸಾಮ್ಯ
  2. ಅವಸ್ಥಾನಸಾಮ್ಯ
  3. ಅನುಷ್ಠಾನಸಾಮ್ಯ
  4. ರೂಪಸಾಮ್ಯ
  5. ನಾಮಸಾಮ್ಯ

ಅಂತರಂಗದ ಉಪಾಸನೆ ಸಮಯಾಚಾರ ಪರಂಪರೆಯ ಮಹತ್ವ. ಬಹಿರಂಗದ ಆಚರಣೆಯು ಈ ಪಂಥದಲ್ಲಿ ನಿಷಿದ್ಧ. ಜಪ-ತಪ, ಹೋಮ-ಹವನ ಮುಂತಾದ ವೈದಿಕ ಆಚರಣೆಗಳು ಸಮಯಾಚಾರ ಪಂಥದ ಪ್ರಮುಖ ತತ್ವಾದರ್ಶಗಳು.

ಸಮಯೋ ಗುಪ್ತಃ | ಸಂಕೇತಃ ಸಾಧನಪದ್ಧತಿಃ ||
ಸಮಯೋ ರಾಶಿ | ಪ್ರೋಕ್ತಃ ||
ಕಾಲೇ ಕರ್ಮಕ್ಷಮೆ | ಅಪಿ ಚ ||

ಸಮಯಾಚಾರ ಅಂದರೆ ಅಂತರಂಗದ ಗುಪ್ತ ಧಾರ್ಮಿಕ ಆಚರಣೆಯಿಂದ ಅರ್ಹ ಮಹಾತ್ವಾಕಾಂಕ್ಷೆಯುಳ್ಳ ಭಕ್ತನಿಗೆ ತೆರೆದುಕೊಳ್ಳುವ ಆನಂದದಾಯಕ ಅನುಭೂತಿಯ ಅದ್ಭುತ ಲೋಕ.

ಬಸವಣ್ಣನವರು ಕೂಡಲಸಂಗಮದ ಪರಿಸರದ ಎಲ್ಲ ಸಮಜೋ-ಧಾರ್ಮಿಕ ಧರ್ಮಗಳು ಮತ್ತು ವಿಶೇಷವಾಗಿ ನಾಥಪಂಥದ ಸಮಯಾಚಾರವನ್ನು ಆಳವಾಗಿ ಅಭ್ಯಾಸ ಮತ್ತು ಅಧ್ಯಯನ ನಡೆಸಿದಂತೆ ಕಾಣುತ್ತದೆ. ಹಾಗಾಗಿ ಬಸವಣ್ಣನವರು ಸಾಮಾಜಿಕ ಮಹತ್ವ ಪಡೆಯುವ ಎಲ್ಲ ತತ್ವಸಿದ್ಧಾಂತಗಳನ್ನು ಕ್ರೋಢೀಕರಿಸಿ ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ “ಲಿಂಗಾಯತ ಧರ್ಮ” ಎನ್ನುವ ಹೊಸಧರ್ಮವನ್ನು ಹುಟ್ಟು ಹಾಕುವ ಅಥವಾ ನಿರ್ಮಾಣ ಮಾಡುವ ಯೋಚನೆ ಮತ್ತು ಯೋಜನೆಯ ನೀಲನಕ್ಷೆ ತಯಾರಿಸಿದ್ದರು ಎನ್ನುವುದರಲ್ಲಿ ಸಂಶಯವೇ ಇಲ್ಲಾ. ಹಾಗಾಗಿ ಲಿಂಗಾಯತರಿಗೆ ಕೂಡಲಸಂಗಮ ಕ್ಷೇತ್ರ ಅತ್ಯಂತ ಪವಿತ್ರ ಮತ್ತು ಧಾರ್ಮಿಕ ಚಿಂತನೆ ಮಾಡುವಲ್ಲಿ ಮಹತ್ವದ ಸ್ಥಾನವನ್ನು ಪಡೆಯುತ್ತದೆ.

ಸೋಮೇಶ್‌ ಕುಲಕರ್ಣಿ: ಇವೆಲ್ಲವುಗಳಿಗಿಂತಲೂ ಸಹಿತ ಭಿನ್ನವಾದಂತಹ ಮತ್ತು ಎಲ್ಲರಿಗೂ ಸಮಾನತೆ ಸಿಗತಕಂತ ಅಂತ ಒಂದು ವ್ಯವಸ್ಥೆ ಸಿಕ್ತು ಅಂದಾಗ ಬಸವಣ್ಣವರು ಅದನ್ನ ಸ್ವೀಕಾರ ಮಾಡಿದ್ರು ಅನ್ನೋದಕ್ಕೆ ಇದಕ್ಕಿಂತಲೂ ಬೇರೆ ಹೆಚ್ಚಿನ ಆಧಾರಗಳು ಏನು ಬೇಕು ಒಂದು ಇನ್ನ ಎರಡನೇದು ಏನು ಅಂತ ಕೇಳಿದ್ರೆ ಬಸವಣ್ಣನವರು ತಮ್ಮ ಇಡೀ ವಚನಗಳಲ್ಲಿ ಎಲ್ಲಿಯೂ ಕೂಡ ಲಿಂಗಾಯತ ಎನ್ನುವ ಶಬ್ದವನ್ನೇ ಬಳಸಿಲ್ಲ.

ಓಕೆ. ಬಸವಣ್ಣನವರು ಎಲ್ಲ ವಚನಗಳಲ್ಲಿ ಇರುವ ವಚನಗಳಲ್ಲಿ ಎರಡು ಕಡೆ ವೀರಶೈವ ಅನ್ನುವ ಪದವನ್ನು ಬಳಸುತ್ತಾರೆ. ಓಕೆ. ಯಾವ ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪಿಸಿದರು ಅಂತ ಹೇಳ್ತಾರೋ ಆ ಲಿಂಗಾಯತೆ ಎನ್ನುವ ಶಬ್ದವನ್ನೇ ಬಳಸಿಲ್ಲ ಅಂದಾಗ ತಾವು ಧರ್ಮ ಸ್ಥಾಪಿಸಿದ ಧರ್ಮದ ಹೆಸರನ್ನೇ ಅವರು ಬಳಸಿಲ್ಲ ಅನ್ನೋದನ್ನ ನಂಬಲಿಕ್ಕೆ ಸಾಧ್ಯ ಇದೆಯಾ?

ಕೆ. ಎಸ್. ಎನ್. ಸ್ವಾಮಿ ಹೊಸದಿಗಂತ ಚಾನಲ್ಲನ ಸಂಪಾದಕ: ಅಂದ್ರೆ ಇದರ ಅರ್ಥ ಏನು ನಿಮ್ಮ ಪ್ರಕಾರ.

ಸೋಮೇಶ್‌ ಕುಲಕರ್ಣಿ: ಇದರ ಅರ್ಥ ಏನು ಅಂತ ಕೇಳಿದ್ರೆ ಅವರು ಶಾಸ್ತ್ರೀಯ ಪದಗಳಲ್ಲಿ ಬಳಸಿ ಇದ್ದಂತಹ ವೀರಶೈವವನ್ನೇ ಅವರು ಸಾಹಿತ್ಯದಲ್ಲಿ ಬಳಸುದಕ್ಕೆ ಸಾಧ್ಯ ಆಯಿತೆ ಹೊರತು ಲಿಂಗಾಯತ ಅನ್ನುವಂತ ಶಾಸ್ತ್ರೀಯ ಪದವಲ್ಲದ ಶಬ್ದವನ್ನು ಬಳಸಿಲ್ಲ ಅನ್ನೋದು ಮಾತ್ರ ಇದರಿಂದ ಅರ್ಥ ಆಗುತ್ತೆ. ಆದರೆ ಲಿಂಗಾಯತ ಅನ್ನುವ ಶಬ್ದವನ್ನು ನೇರವಾಗಿ ಬಳಸಿದೆ ಹೋದರು ಕೂಡ ಸಾಕಷ್ಟು ಜನ ಶರಣರು ಲಿಂಗವಂತ ಅನ್ನುವ ಶಬ್ದಗಳನ್ನು ಅಲ್ಲಲ್ಲಿ ಬೇರೆ ಬೇರೆ ವಚನಗಳಲ್ಲಿ ಬಳಸಿದ ಉದಾಹರಣೆಗಳಿವೆ. ಆದರೆ ಲಿಂಗವಂತ ಲಿಂಗ ಸಮೀಪವಾದ ಪದಗಳಿಗಿಂತಲೂ ಹತ್ತು ಪಟ್ಟು ಹೆಚ್ಚು ವೀರಶೈವ ಎನ್ನುವ ಪದವನ್ನ ಬಳಸಿದ್ದಾರೆ ಅನ್ನೋದನ್ನ ನಾವು ನೋಡಬೇಕು.

ಕೆ. ಎಸ್. ಎನ್. ಸ್ವಾಮಿ ಹೊಸದಿಗಂತ ಚಾನಲ್ಲನ ಸಂಪಾದಕ: ಎಲ್ಲ ವಚನಕಾರರು.

ಸೋಮೇಶ್‌ ಕುಲಕರ್ಣಿ: ಎಲ್ಲ ವಚನಕಾರರು. ಓಕೆ. ಹಾಗಾಗಿ ಅದಕ್ಕೆ ಇನ್ನೊಂದು ನಾನು ಉದಾಹರಣೆಯನ್ನು ಕೊಡಬಹುದು ಅಮ್ಮುಗೆ ರಾಯಮ್ಮ ಅನ್ನುವಂತ ಒಬ್ಬ ಶ್ರೇಷ್ಠ ವಚನಕಾರ್ತಿ. ಆಕೆ ಹೇಳ್ತಕ್ಕಂತ ವಚನ ಸಮಗ್ರ ವಚನ ಸಂಪುಟದಲ್ಲಿ ಇರತಕ್ಕಂತಹ 695 ನೇ ವಚನ ಪುಟ 865 ಇದರಲ್ಲಿ ಹೇಳ್ತಾಳೆ ಆಕೆ ಸರ್ವಾಗಮ ಶೃತಿ ಸ್ಮೃತಿ ಪುರಾಣ ಪಾಠಕನಾದಡೇನು ಸರ್ವ ಮಂತ್ರ ತಂತ್ರ ಸಿದ್ಧಿ ಮರ್ಮವರಿತಡೇನು ನಿತ್ಯ ಶಿವಾರ್ಚನೆ ತ್ರಿಕಾಲವಿಲ್ಲ ಅಂದ್ರೆ ಲಿಂಗಾಯತರು ಹೇಳೋದೇನು ತ್ರಿಕಾಲ ಪೂಜಾನಿಷ್ಟರಾಗಿರಬೇಕು ಇಷ್ಟಲಿಂಗವನ್ನ ಮೂರು ಕಾಲ ಪೂಜೆ ಮಾಡಬೇಕು ಅನ್ನುವಂತದ್ದನ್ನ ಹೇಳ್ತಾರೆ ಈಕೆ ಹೇಳ್ತಾಳೆ ನಿತ್ಯ ಶಿವಾರ್ಚನೆ ತ್ರಿಕಾಲವಿಲ್ಲ ನಿತ್ಯ ಪಾದೋದಕ ಪ್ರಸಾದ ಸೇವನೆ ಇಲ್ಲ ಅಂದರೆ ನೀನು ಬಹಳ ಜ್ಞಾನಿ ಇದೆಯಪ್ಪ ಶರುತಿ ಸ್ಮೃತಿ ಪುರಾಣ ಪಾಠಕ ಆಗಿದ್ದಿ ಏನು ಬಂತು ಪ್ರಯೋಜನ ಅಷ್ಟಲ್ಲ ಸರ್ವ ಮಂತ್ರತಿಂತ ಎಲ್ಲ ಮಂತ್ರ ತಂತ್ರ ಮರ್ಮ ಅರತುಬಿಟ್ಟಿ ಏನು ಬಂತು ಪ್ರಯೋಜನ ಮೂರು ಕಾಲು ಪೂಜೆ ಮೂರು ಕಾಲ ಪೂಜೆ ಮಾಡುವಲ್ಲಿ ಆಕ ಹೇಳೋದು ನಿತ್ಯ ಪ್ರಾದೋದಕ ಪ್ರಸಾದ ತಗೊಳ್ತಾ ಇಲ್ಲ ನೀನು ಇದೇತರ ವೀರಶೈವವೃತ. ಇದು ಯಾವ ರೀತಿ ವೀರಶೈವ ವೃತ ಕಣಯ್ಯ ನೀನು ಮಾಡೋದು. ಮೂರು ಕಾಲ ಪೂಜೆ ಮಾಡುವಲ್ಲಿ ಪಾದದಕ್ಕ ಪ್ರಸಾದ ತಗೊಳ್ಳುವಲ್ಲಿ ಇದ ಇದೇ ತರ ಜನ್ಮ ಸಾಫಲ್ಯ ನಿನ್ನ ಜನ್ಮ ಸಾರ್ಥಕ ಆಗುತ್ತಾ ಇದರಿಂದ ಅಮುಗೇಶ್ವರ ಲಿಂಗವೇ ಅಂತ ಹೇಳ್ತಾಳೆ. ಅಂದ್ರೆ ಇದರ ಅರ್ಥ ಏನು ವೀರಶೈವನಾದವನು ತ್ರಿಕಾಲ ಪೂಜೆ ಮಾಡಬೇಕು. ಲಿಂಗಾಯತರು ತ್ರಿಕಾಲ ಪೂಜೆ ಮಾಡಬೇಕು. ಯಾಕೆ ಪಾದೋದಕ ಪ್ರಸಾದ ನೀನು ತಗೊಳ್ತಾ ಇಲ್ಲ. ನೀನು ಯಾವ ವೀರಶೈವ ಅಂತ ಹೇಳ್ತಾಳೆ ಆಕಿ.

ಸರ್ವಾಗಮ ಶ್ರುತಿ ಸ್ಮೃತಿ ಪುರಾಣ ಪಾಠಕನಾದಡೇನು ?
ಸರ್ವಮಂತ್ರತಂತ್ರಸಿದ್ಭಿ ಮರ್ಮವರಿತಡೇನು ?
ನಿತ್ಯಶಿವಾರ್ಚನೆ ತ್ರಿಕಾಲವಿಲ್ಲ;
ನಿತ್ಯಪಾದೋದಕ ಪ್ರಸಾದ ಸೇವನೆಯಿಲ್ಲ.
ಇದೇತರ ವೀರಶೈವವ್ರತ, ಇದೇತರ ಜನ್ಮಸಾಫಲ್ಯ ಅಮುಗೇಶ್ವರಲಿಂಗವೆ?

ಡಾ. ವಿಜಯಕುಮಾರ ಕಮ್ಮಾರ ಅವರ ಉತ್ತರ: ಬಸವಾದಿ ಶರಣರ ವಚನಗಳಲ್ಲಿ ಲಿಂಗಾಯತ ಶಬ್ದ ಪ್ರಯೋಗ ಕುರಿತು ಮೇಲೆಯೇ ಉತ್ತರ ನೀಡಿ ಆಗಿದೆ. So, no need to repeat it. ಮುಂದುವರೆದು ಶರಣೆ ಅಮುಗಿ ರಾಯಮ್ಮನವರ ವಚನವನ್ನು Quote ಮಾಡುತ್ತಾ ವೀರಶೈವ ವ್ರತವನ್ನು ಶರಣ-ಶರಣೆಯರು ಬೋಧಿಸಿದರು ಎನ್ನುವಂತೆ ಈ ಸೋಮೇಶ ಕುಲಕರ್ಣಿ ಹೇಳತಾ ಇದ್ದಾನೆ. ಶರಣೆ ಅಮುಗಿ ರಾಯಮ್ಮನವರ ವಚನದ ಪೂರ್ಣ ಪಠ್ಯ ಹೀಗಿದೆ.

ಸರ್ವಾಗಮ ಶ್ರುತಿ ಸ್ಮೃತಿ ಪುರಾಣ ಪಾಠಕನಾದಡೇನು ?
ಸರ್ವಮಂತ್ರತಂತ್ರಸಿದ್ಭಿ ಮರ್ಮವರಿತಡೇನು ?
ನಿತ್ಯಶಿವಾರ್ಚನೆ ತ್ರಿಕಾಲವಿಲ್ಲ;
ನಿತ್ಯಪಾದೋದಕ ಪ್ರಸಾದ ಸೇವನೆಯಿಲ್ಲ.
ಇದೇತರ ವೀರಶೈವವ್ರತ, ಇದೇತರ ಜನ್ಮಸಾಫಲ್ಯ
ಅಮುಗೇಶ್ವರಲಿಂಗವೆ?

ವಚನಗಳಲ್ಲಿ ವೀರಶೈವ ಶಬ್ದಪ್ರಯೋಗದ ಅಧ್ವಾನವನ್ನು ಕುರಿತಂತೆ ಮೇಲೆಯೇ ತಿಳಿಸಿ ಆಗಿದೆ.

ಸೋಮೇಶ್‌ ಕುಲಕರ್ಣಿ: ಇಲ್ಲಿ ಲಿಂಗಾಯತ ಬೇರೆ ವೀರಶೈವ ಬೇರೆ ಅನ್ನೋದಕ್ಕೆ ಅರ್ಥ ಏನು ಉಳಿತು. ಅಂದ್ರೆ ವೀರಶೈಯವರು ಅದೇ ಇದನ್ನ ಅನುಸರಿಸಿಕೊಂಡು ಬರ್ತಾ ಇದ್ರು. ಲಿಂಗಾಯತರು ಅದನ್ನೇ ಮಾಡ್ತಾ ಇದ್ದಾರೆ. ಎರಡು ಒಂದೇ. ಒಬ್ಬರಿಗೆ ಎರಡು ಹೆಸರು ಇರಲ್ವಾ. ಇಸ್ಲಾಂ ಮುಸ್ಲಿಂ ಎರಡು ಹೆಸರು ಇರಲ್ವಾ. ಹಾಗೆ ಇರುವಂತೆ ಇಸ್ಲಾಂ ಮತಕ್ಕೆ ಎರಡೆರಡು ಹೆಸರು ಇರುವಂತೆ ವೀರಶೈವರಿಗೆ ಎರಡು ಹೆಸರಿತ್ತು ಅಷ್ಟೇ ಇದರ ಅರ್ಥ.

ಡಾ. ವಿಜಯಕುಮಾರ ಕಮ್ಮಾರ ಅವರ ಉತ್ತರ: ಸೋಮೇಶ ಕುಲಕರ್ಣಿಯವರೇ ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ಎನ್ನುವುದಕ್ಕೆ ಯಾವ Low Level ಗೆ ಇಳೀತೀರಿ ಅನ್ನೋದನ್ನು ನಿರೂಪಿಸಿ ಬಿಟ್ಟಿರಿ ಸರ. ಧನ್ಯವಾದಗಳು ತಮ್ಮ ವಿಚಾರ ವಿನಿಮಯಕ್ಕೆ. ಇಸ್ಲಾಂ ಮತ್ತು ಮುಸ್ಲಿಂನ ದೇವರು ಒಬ್ಬನೇ ಅದು ಅಲ್ಲಾಹ ಮಾತ್ರ. ಕ್ರೈಸ್ತ ಮತ್ತು ಕ್ರಿಶ್ಚಿಯನ್‌ ಅವರ ದೇವರು ಒಬ್ಬನೇ. ಆದರೆ ಲಿಂಗಾಯತರ ಶಿವ ಅಂದರೆ ಅಂತರಂಗದ ಅರಿವು ಹಾಗೂ ವೀರಶೈವರ ಶಿವ ಅಂದರೆ ರೇಣುಕರು. ದೇವರು ಇಬ್ಬರಾದರೂ ಕೂಡ ಇವರಿಬ್ಬರ ಸಿದ್ಧಾಂತ ಒಂದೇ ಅಂತಾ ನಿಮ್ಮ ತರ್ಕ ಅಲ್ಲವೇ. ಅಲ್ಲಿಗೆ ನಿಮ್ಮ ಪ್ರಕಾರ ದ್ವೈತ ಮತ್ತು ಅದ್ವೈತ ಎರಡೂ ಒಂದೆ ಅಂದಂಗಾಯಿತು. ಇರಲಿ ಬಿಡಪಾ ದೊರೆ ನಿಮ್ಮ ಗುರುಗಳನ್ನು ಅಥವಾ ವೀರಶೈವ ಪಂಚಪೀಠದ ಜಗದ್ಗುರುಗಳನ್ನು ಓಲೈಸಿ ಲಿಂಗಾಯತರ ಶಿವ ಮತ್ತು ವೀರಶೈವರ ರೇಣುಕ ಒಂದೇ. ಹಾಗಾಗಿ ನಾವೆಲ್ಲ ವೀರಶೈವರು ಸಾರಾಸಗಟಾಗಿ ಬಸವಣ್ಣನವರನ್ನು ಗುರು ಎಂದು ನಂಬಿ ಲಿಂಗಾಯತರಾಗೋಣ ಎಂದು ಒಪ್ಪಿಸಿಬಿಡಿ. ಅಲ್ಲಿಗೆ ಈ ಎಲ್ಲ ರಗಳೆಗಳೂ ಏಕದಂ ಬಂದ್.

ಕೆ. ಎಸ್. ಎನ್. ಸ್ವಾಮಿ ಹೊಸದಿಗಂತ ಚಾನಲ್ಲನ ಸಂಪಾದಕ: ಈಗ ನೀವು ಹೇಳುವಾಗ ಶೈವ ಕರ್ಮ ಅನ್ನುವಂತ ಮಾತನ್ನು ಬಳಸಿದ್ರಿ ಅಂದ್ರೆ ಲಿಂಗಾಯತರ ಧರ್ಮದ ಪ್ರತಿಪಾದಕರು ಹೇಳುವಂತದ್ದು ವೀರಶೈವರು ಕರ್ಮ ಸಿದ್ಧಾಂತವನ್ನು ಒಪ್ಪುವಂತವರು ನಾವು ಲಿಂಗಾಯತರು ಕಾಯಕ ಸಿದ್ಧಾಂತವನ್ನು ಒಪ್ಪುವಂತವರು ಅಂತ ಏನು ಅದರ ವ್ಯತ್ಯಾಸ ಏನು?

ಸೋಮೇಶ್‌ ಕುಲಕರ್ಣಿ: ಈಗ ಕರ್ಮ ಸಿದ್ಧಾಂತ ಅನ್ನುವಂತದ್ದು ಏನಿದೆ ಅದು ನಮ್ಮ ಪ್ರಾಚೀನ ಪರಂಪರೆಯಿಂದ ಸನಾತನ ಪರಂಪರೆಯಿಂದ ಕರ್ಮ ಸಿದ್ಧಾಂತವನ್ನ ನಾವು ನಂಬುತೀವಿ. ಸ್ವತಃ ಭಗವದ್ಗೀತೆಯಲ್ಲೂ ಸಹಿತ ಕರ್ಮ ಸಿದ್ಧಾಂತದ ಕುರಿತು ಕೃಷ್ಣ ಹೇಳ್ತಾನೆ. ಅದರದೇನೆ ಇದ್ದಾಗೂ ಕೂಡ ಕೆಲವು ಕಾಲಮಾನದಲ್ಲಿ ಕರ್ಮ ಸಿದ್ಧಾಂತದ ಹೆಸರಿನಲ್ಲೂ ಕೂಡ.

ಕೆ. ಎಸ್. ಎನ್. ಸ್ವಾಮಿ ಹೊಸದಿಗಂತ ಚಾನಲ್ಲನ ಸಂಪಾದಕ: ಅಂದರೆ ಕರ್ಮ ಸಿದ್ಧಾಂತ ಅಂದ್ರೆ ನಮ್ಮ ವೀಕ್ಷಕರಿಗೆ ಕರ್ಮ ಸಿದ್ಧಾಂತ ಸರಳವಾಗಿ ಹೇಳೋದಾದರೆ ಹೇಳಿ.

ಸೋಮೇಶ್‌ ಕುಲಕರ್ಣಿ: ಕರ್ಮ ಸಿದ್ಧಾಂತ ಅಂದ್ರೆ ಜನ್ಮ ಜನ್ಮಗಳಲ್ಲೂ ಸಹಿತ ಅವನು ಅವತಾರ ಎತ್ತುವುದು. ಇದು 84 ಲಕ್ಷ ಜೀವರಾಶಿಗಳಲ್ಲಿ ಮನುಷ್ಯ ಹುಟ್ಟಿ ಬರ್ತಾನೆ. ಅವನು ಪಾಪ ಕರ್ಮದ ನಿಮಿತ್ತ 84 ಲಕ್ಷಗಳ ಜೀವರಾಶಿಗಳಲ್ಲಿ ಹುಟ್ಟಿ ಬರ್ತಾನೆ. ಅವನು ತುಂಬಾ ಶ್ರೇಷ್ಠವಾದಂತ ಕರ್ಮದ ಕಾರಣದಿಂದಾಗಿ ಮಾನವನಾಗಿ ಹುಟ್ಟಿ ಬರುತ್ತಾರೆ. ಮಾನವ ಜನ್ಮವಿದು ಬಹುಶ್ರೇಷ್ಠವಾದದ್ದು. ಇದನ್ನು ಹಾಳು ಮಾಡಿಕೊಳ್ಳದಿರಿ ಹುಚ್ಚಪ್ಪಗಳಿರ ಅಂತ ಹೇಳ್ತಾರೆ. ಅಂದ್ರೆ ಈ ಜನ್ಮ ಎತ್ತು ಬರುದು ಇದು ಕರ್ಮ ಸಿದ್ಧಾಂತ. ನಾವು ಮಾಡುವ ಕರ್ಮಫಲಕ್ಕೆ ತಕ್ಕಂತೆ ನಮಗೆ ಜನ್ಮಗಳು ಸಿಗುತ್ತವೆ ಅನ್ನುವಂತ.

ಕೆ. ಎಸ್. ಎನ್. ಸ್ವಾಮಿ ಹೊಸದಿಗಂತ ಚಾನಲ್ಲನ ಸಂಪಾದಕ: ಪುನರ್ಜನ್ಮ.

ಸೋಮೇಶ್‌ ಕುಲಕರ್ಣಿ: ಪುನರ್ಜನ್ಮ ಅನ್ನು ಇದು ಸನಾತನ ಪರಂಪರೆ. ಇದು ಹಾಗಾದರೆ ವೀರಶೈವರಿಗೆ ಇದು ಇರಲಿಲ್ಲ ಅಥವಾ ಲಿಂಗಾಯತರಿಗೆ ಇದು ಇರಲಿಲ್ಲ ಬಸವಣ್ಣವರು ಈ ಕರ್ಮ ಸಿದ್ಧಾಂತವನ್ನು ಒಪ್ಪಲೇ ಇಲ್ಲ ಅಂತ ಹೇಳ್ತಾರೆ. ಆದರೆ ಬಸವಣ್ಣನವರು ಇದನ್ನ ಟೀಕೆ ಮಾಡಿದ್ದು ನಿಜ. ಯಾಕೆಂದ್ರೆ ಕರ್ಮ ಸಿದ್ಧಾಂತದ ಹೆಸರಿನಲ್ಲಿ ಜನರು ಜಡತ್ವಕ್ಕೆ ಹೋಗ್ತಿದ್ದರು ಅನ್ನು ಅಪಾಯವು ಇತ್ತು. ಅದನ್ನ ಜಾಗೃತಗೊಳಿಸುವುದಕ್ಕಾಗಿ ಬಸವಣ್ಣವರು ಇದನ್ನ ಹೇಳಿದ್ದು ನಿಜ.

ಆದರೆ ಬಸವಣ್ಣವರು ಕರ್ಮ ಸಿದ್ಧಾಂತವನ್ನು ಒಪ್ಪಿಕೊಂಡೆ ಇಲ್ವಾ. ನಿಶ್ಚಿತವಾಗಿ ಬಸವಣ್ಣವರು ಅದನ್ನು ಒಪ್ಪಿಕೊಂಡಿದ್ದಾರೆ. ಬಸವಣ್ಣನವರದ್ದೇ ವಚನ ಇದೆ. ಬಸವಣ್ಣನವರ ಪಿಂಡಜ್ಞಾನಸ್ಥಳ ಇದೆ. ಬಸವಣ್ಣವರ ಪಿಂಡಜ್ಞಾನಸ್ಥಳದಲ್ಲಿ ಬಸವಣ್ಣವರು ಒಂದು ವಚನದಲ್ಲಿ ಹೇಳ್ತಾರೆ. ನಾಲ್ಕನೇ ವಚನ ಪಿಂಡಜ್ಞಾನಸ್ಥಳ ಪುಟ ಸಂಖ್ಯೆ ನಾಲ್ಕು. ಬಸವಣ್ಣವರು ಹೇಳೋದು ವಚನ “ಏಳೇಳು ಜನ್ಮದಲ್ಲಿ ಶೋಭಕ್ತನಾಗಿ ಬಾರದಿದ್ದರೆ ನಿಮ್ಮ ಆಣೆ ನಿಮ್ಮ ಪ್ರಮತರಾಣೆ” ಬಸವಣ್ಣವರು ಹೇಳಿದರು. “ನಿಮ್ಮ ಪ್ರಸಾದಕ್ಕಲ್ಲದೆ ಬಾಯ್ದೆರೇನಯ್ಯ ಪ್ರಥಮ ಭವಾಂತರದಲ್ಲಿ” ಅಂದ್ರೆ ಮೊದಲನೇ ಜನ್ಮದಲ್ಲಿ ಅವರು ಹೇಳಿದರು “ಪ್ರಥಮ ಭವಾಂತರದಲ್ಲಿ ಶಿಲಾದನೆಂಬ ಗಣೇಶ್ವರನ ಮಾಡಿ ಹೆಸರಿಟ್ಟು ಕರೆದು ನಿಮ್ಮ ಬೃತ್ಯನ ಮಾಡಿ ಎನ್ನನಿರಿಸಿಕೊಂಡಿದ್ದೀರಯ್ಯ” ಬಸವಣ್ಣ ಹೇಳೋದು. “ಎರಡನೇ ಭವಂತರದಲ್ಲಿ” ಎರಡನೇ ಜನ್ಮದಲ್ಲಿ ಅವರು ಹೇಳೋದು. “ಸ್ಕಂದನೆಂಬ ಗಣೇಶ್ವರನ ಮಾಡಿ ಹೆಸರಿಟ್ಟು ಕರೆದು ನಿಮ್ಮ ಕಾರುಣ್ಯವ ಮಾಡಿರಿಸಿಕೊಂಡಿದ್ದೀರಯ್ಯ” ಬಸಣ್ಣವರು ಹೇಳಿದರು. “ಮೂರನೇ ಭವಾಂತರದಲ್ಲಿ ನೀಲೋಹಿತನೆಂಬ ಗಣೇಶ್ವರನು ಮಾಡಿ ಹೆಸರಿಟ್ಟು ಕರೆದು ನಿಮ್ಮ ಲೀಲಾ ವಿನೋದವ ನಿರಿಸಿಕೊಂಡಿದ್ದೀರಯ್ಯ” ನಾಲ್ಕನೇ ಭವಾಂತರ ಹೇಳ್ತಾರೆ. ಹೀಗೆ ಐದನೇ ಭವಾಂತರ, ಆರನೇ ಭವಾಂತರ ಅಂತ ಹೇಳಿ ಏಳನೇ ಭವಾಂತರ ಹೇಳ್ತಾರೆ. ಅವರು “ಏಳನೇ ಭವಂತರದಲ್ಲಿ ಬಸವದಣ್ಣಾಯಕನೆಂಬ” ಅಂದ್ರೆ ಈ ಬಸವಣ್ಣನಾಗಿ ಹುಟ್ಟು ಬಂದೀನಿ ಅಂತ. “ಬಸವದಣ್ಣಾಯಕನೆಂಬ ಗಣೇಶ್ವರನ ಮಾಡಿ ಹೆಸರಿಟ್ಟು ಕರೆದು ನಿಮ್ಮ ಒಕ್ಕುದ ಮಿಕ್ಕುದಕ್ಕೆ ಯೋಗ್ಯನಾಗಲೆಂದಿರಿಸಿಕೊಂಡಿದ್ದೀರಯ್ಯ ಇದು ಕಾರಣ ಕೂಡಲ ಸಂಗಮದೇವ ನೀವು ಬರಿಸಿದ ಭವಾಂತರಗಳಲ್ಲಿ” ಅಂದರೆ ಈ ಜನ್ಮ ಜನ್ಮಾಂತರಗಳಲ್ಲಿ ನಾನು ಬರುತ್ತಿದ್ದೇನಯ್ಯ. ಹಾಗಾದರೆ ಬಸವಣ್ಣನವರು ಕರ್ಮ ಸಿದ್ಧಾಂತದ ವಿರೋಧಿಗಳು ಹೇಗಾದರು. ಬಸವಣ್ಣನವರ ಕರ್ಮ ಸಿದ್ಧಾಂತದ ವಿರುದ್ಧ ಹೇಗಾಗಲಿಕ್ಕೆ ಸಾಧ್ಯ.

ಡಾ. ವಿಜಯಕುಮಾರ ಕಮ್ಮಾರ ಅವರ ಉತ್ತರ: ಡಾ. ಬಸವರಾಜ ಸಬರದ ಅವರು ನಮ್ಮ https\vachanamandara.in Website ನಲ್ಲಿ ಈ ಕುರಿತು ವಿಸ್ತೃತವಾದ ಲೇಖನವನ್ನು ಬರೆದಿದ್ದಾರೆ. ಎಲ್ಲರೂ ಓದಬಹುದು.

https://vachanamandara.in/ಬಸವಣ್ಣನವರು-ಪುನರ್ಜನ್ಮವನ್/
(ಬಸವಣ್ಣನವರು ಪುನರ್ಜನ್ಮವನ್ನು ನಂಬಿದ್ದರೆ? | ಡಾ. ಬಸವರಾಜ ಸಬರದ, ಬೆಂಗಳೂರು.)

ಈ ಲೇಖನದ ಪೂರ್ಣಪಠ್ಯ ಇಲ್ಲಿದೆ.
ಬಸವಣ್ಣನವರು ಪುನರ್ಜನ್ಮವನ್ನು ನಂಬಿದ್ದರೆ? ಇದೊಂದು ಪ್ರಶ್ನೆ. ಆದರೆ ಇಂದು ಇದು ಪ್ರಶ್ನೆಯಾಗಿ ಉಳಿದಿಲ್ಲ. ಬಸವಣ್ಣನವರು ಪುನರ್ಜನ್ಮವನ್ನು ನಂಬಿರಲಿಲ್ಲವೆಂಬುದಕ್ಕೆ ಅನೇಕ ಆಕರಗಳು ಸಿಗುತ್ತವೆ. ಆದರೆ ಕೆಲವರು ಬಸವಣ್ಣನವರ ಪ್ರಕ್ಷಿಪ್ತ ವಚನಗಳನ್ನಿಟ್ಟುಕೊಂಡು ಬಸವಣ್ಣನವರು ಪುನರ್ಜನ್ಮವನ್ನು ನಂಬಿದ್ದರೆಂದು ಹೇಳಿದ್ದಾರೆ. ಬಸವ ತತ್ವದ ಕೇಂದ್ರವಾದ ಭಾಲ್ಕಿ ಹಿರೇಮಠ ಸಂಸ್ಥಾನ ತರುತ್ತಿರುವ “ಶಾಂತಿಕಿರಣ” ಮಾಸಿಕ ಪ್ರತಿಕೆಯಲ್ಲಿ (ಮೇ-2025) “ಬಸವಣ್ಣನವರ ವಚನಗಳಲ್ಲಿ ಜನ್ಮಾಂತರ ವಿಚಾರ” ಎಂಬ ಲೇಖನ ಪ್ರಕಟವಾಗಿದೆ. ಡಾ. ವಿ. ವಿ. ಹೆಬ್ಬಳ್ಳಿ ಎಂಬುವವರು ಈ ಲೇಖನವನ್ನು ಬರೆದಿದ್ದಾರೆ. ಇಂತಹ ಲೇಖನವನ್ನು ಪ್ರಕಟಿಸುವುದರ ಮೂಲಕ ಭಾಲ್ಕಿ ಹಿರೇಮಠ ಸಂಸ್ಥಾನ ಮತ್ತು ಆ ಪತ್ರಿಕೆಯ ಸಂಪಾದಕ ಮಂಡಳಿ ಇಂದು ಚರ್ಚೆಗೆ ಗ್ರಾಸವಾಗಿದೆ.

ರಾವ್‌ ಬಹಾದ್ದೂರ ಡಾ. ಫ. ಗು. ಹಳಕಟ್ಟಿಯವರಿಂದ ಹಿಡಿದು ಡಾ. ಎಂ. ಎಂ. ಕಲಬುರ್ಗಿಯವರು ಸಂಪಾದಿಸಿ ಪ್ರಕಟಿಸಿರುವ ವಚನ ಸಂಪುಟಗಳಲ್ಲಿ ಅನೇಕ ಪ್ರಕ್ಷಿಪ್ತ (ಖೊಟ್ಟಿ) ವಚನಗಳಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 1993 ರಲ್ಲಿ ಸಮಗ್ರ ವಚನ ಸಂಪುಟಗಳನ್ನು ಪ್ರಕಟಿಸುವ ಸಂದರ್ಭದಲ್ಲಿಯೇ ನಾನು ಡಾ. ಎಂ. ಎಂ. ಕಲಬುರ್ಗಿಯುವರೊಂದಿಗೆ ಚರ್ಚಿಸಿದ್ದೆ.

“ಶರಣರು ರಚಿಸಿರುವ ವಚನಗಳಲ್ಲಿ ಅನೇಕ ಪ್ರಕ್ಷಿಪ್ತ ವಚನಗಳಿವೆ. ಯಾವುದು ನಿಜವಾದ ವಚನ, ಯಾವುದು ಪ್ರಕ್ಷಿಪ್ತ ವಚನ ಎಂಬುದು ಮೊದಲು ನಿರ್ಣಯವಾಗಬೇಕು. ಅದಕ್ಕಾಗಿ ಒಂದು ಸಂಶೋಧನಾ ಸಮಿತಿ ರಚಿಸಬೇಕು. ಸಂಶೋಧಕರು ಸಮಗ್ರವಾಗಿ ಚರ್ಚಿಸಿದ ನಂತರ ಸಮಗ್ರ ಸಂಪುಟಗಳನ್ನು ಪ್ರಕಟಿಸಬೇಕು”

ಎಂದು ನಾನು ಹೇಳಿದ್ದೆ. ಡಾ. ಎಂ. ಎಂ. ಕಲಬುರ್ಗಿಯವರು ನನ್ನ ಮಾತನ್ನು ಒಪ್ಪಿಕೊಂಡರಾದರೂ ಈಗ ಸದ್ಯ ಆ ಕೆಲಸವಾಗವುದಿಲ್ಲ. ಸಮಗ್ರ ಸಂಪುಟಗಳು ಬಂದು ಬಿಡಲಿ. ಅಮೇಲೆ ಆ ಕಾರ್ಯ ಮಾಡೋಣ. ಅದಕ್ಕೆ ಕಾಲಾವಕಾಶ ಬೇಕಾಗುತ್ತದೆ ಎಂದು ಹೇಳಿದ್ದರು. ಆ ನಂತರದಲ್ಲಿ ಆ ಕೆಲಸವಾಗಲೇ ಇಲ್ಲ. “ಶೂನ್ಯ ಸಂಪಾದನೆಯ ಪ್ರಸ್ತುತ ಸವಾಲುಗಳು” ಎಂಬ ನನ್ನ ಪುಸ್ತಕ 2007 ರಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ ಪ್ರಕಟವಾಯಿತು. ಅದರಲ್ಲಿ ನಾನು ಅನೇಕ ಪ್ರಕ್ಷಿಪ್ತ ವಚನಗಳನ್ನು ಗುರುತಿಸಿದ್ದೇನೆ. ಆ ಪುಸ್ತಕ ನೋಡಿದ ನಂತರ ಡಾ. ಎಂ. ಎಂ. ಕಲಬುರ್ಗಿಯವರು ಅವೆಲ್ಲ ಪ್ರಕ್ಷಿಪ್ತ ವಚನಗಳೆಂದು ಒಪ್ಪಿಕೊಂಡರು. ಡಾ. ಬಿ. ವಿ. ಶಿರೂರ ಅವರೂ ಕೂಡ ಈ ಪ್ರಕ್ಷಿಪ್ತ ವಚನಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಶೂನ್ಯ ಸಂಪಾದನೆಗಳು ಬಸವಣ್ಣನವರ 300 ವಚನಗಳನ್ನು ಬಳಸಿಕೊಂಡಿವೆ. ಅವುಗಳಲ್ಲಿ 200 ವಚನಗಳು ಪ್ರಕ್ಷಿಪ್ತ ವಚನಗಳಾಗಿವೆ.

“ಹಾಗೆ ಬಸವಣ್ಣನವರ 300 ವಚನಗಳಲ್ಲಿ 200 ವಚನಗಳು ಸಂಪಾದನಾಕಾರರ ಸೃಷ್ಟಿಯಾಗಿರುವುದು ನಿಜವಾಗಿದ್ದರೆ, ಶೂನ್ಯ ಸಂಪಾದನೆಯ ಮೂರರಲ್ಲಿ ಎರಡು ಪಾಲು ಕೂಡ ವಚನಗಳನ್ನೊಂಡಿವೆ ಎಂಬ ಅಭಿಪ್ರಾಯಕ್ಕೆ ಬರಬೇಕಾಗುತ್ತದೆ”

ಎಂದು ಡಾ. ಎಂ. ಎಂ. ಕಲಬುರ್ಗಿಯವರು “ಮಾರ್ಗ/ಸಂಪುಟ-1” ರಲ್ಲಿ ಹೇಳಿದ್ದಾರೆ (ಪುಟ-607, 1988). ಹೀಗೆ ವಚನ ಸಂಪುಟಗಳಲ್ಲಿ ಈ ಪ್ರಕ್ಷಿಪ್ತ ವಚನಗಳ ಹಾವಳಿ ಜಾಸ್ತಿಯಾಗಿದೆ. ಅಂತಹ ಎರಡು ಪ್ರಕ್ಷಿಪ್ತ ವಚನಗಳನ್ನಿಟ್ಟುಕೊಂಡು, ಡಾ. ವಿ. ವಿ. ಹೆಬ್ಬಳ್ಳಿಯವರು “ಶಾಂತಿ ಕಿರಣ” ದಲ್ಲಿ ಲೇಖನ ಬರೆದಿದ್ದಾರೆ. ಅವರು ಹೇಳಿರುವ ಆ ಎರಡು ವಚನಗಳು ಹೀಗಿವೆ.

ಅಯ್ಯಾ, ಏಳೇಳು ಜನ್ಮದಲ್ಲಿ ಶಿವಭಕ್ತನಾಗಿ ಬಾರದಿರ್ದಡೆ
ನಿಮ್ಮಾಣೆ, ನಿಮ್ಮ ಪ್ರಮಥರಾಣೆ!
ನಿಮ್ಮ ಪ್ರಸಾದಕ್ಕಲ್ಲದೆ ಬಾಯ್ದೆರೆಯೆನಯ್ಯಾ.
ಪ್ರಥಮಭವಾಂತರದಲ್ಲಿ
ಶಿಲಾದನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು
ನಿಮ್ಮ ಭೃತ್ಯನ ಮಾಡಿ ಎನನ್ನಿರಿಸಿಕೊಂಡಿರ್ದಿರಯ್ಯಾ.
ಎರಡನೆಯ ಭವಾಂತರದಲ್ಲಿ
ಸ್ಕಂದನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು
ನಿಮ್ಮ ಕಾರುಣ್ಯವ ಮಾಡಿರಿಸಿಕೊಂಡಿರ್ದಿರಯ್ಯಾ.
ಮೂರನೆಯ ಭವಾಂತರದಲ್ಲಿ
ನೀಲಲೋಹಿತನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು
ನಿಮ್ಮ ಲೀಲಾವಿನೋದದಿಂದಿರಿಸಿಕೊಂಡಿರ್ದಿರಯ್ಯಾ.
ನಾಲ್ಕನೆಯ ಭವಾಂತರದಲ್ಲಿ
ಮನೋಹರನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು
ನಿಮ್ಮ ಮನಃಪ್ರೇರಕನಾಗಲೆಂದಿರಿಸಿಕೊಂಡಿರ್ದಿರಯ್ಯಾ.
ಐದನೆಯ ಭವಾಂತರದಲ್ಲಿ
ಕಾಲಲೋಚನನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು
ಸರ್ವಕಾಲಸಂಹಾರವ ಮಾಡಿಸುತ್ತಿರ್ದಿರಯ್ಯಾ.
ಆರನೆಯ ಭವಾಂತರದಲ್ಲಿ
ವೃಷಭನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು
ನಿಮಗೇರಲು ವಾಹನವಾಗಲೆಂದಿರಿಸಿಕೊಂಡಿರ್ದಿರಯ್ಯಾ.
ಏಳನೆಯ ಭವಾಂತರದಲ್ಲಿ
ಬಸವದಣ್ಣಾಯಕನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು
ನಿಮ್ಮ ಒಕ್ಕುದ ಮಿಕ್ಕುದಕ್ಕೆ ಯೋಗ್ಯನಾಗಲೆಂದಿರಿಸಿಕೊಂಡಿರ್ದಿರಯ್ಯಾ.
ಇದು ಕಾರಣ ಕೂಡಲಸಂಗಮದೇವಾ,
ನೀವು ಬರಿಸಿದ ಭವಾಂತರದಲ್ಲಿ ನಾನು ಬರುತಿರ್ದೆನಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-4/ವಚನ ಸಂಖ್ಯೆ-4)

ಭವ ಬಂಧನ ಭವಪಾಶವಾದ ಕಾರಣವೇನಯ್ಯಾ?
ಹಿಂದಣ ಜನ್ಮದಲ್ಲಿ ಲಿಂಗವ ಮರೆದನಾಗಿ, ಅರಿದಡೀ ಸಂಸಾರವ ಹೊದ್ದಲೀವೆನೆ,
ಕೂಡಲ ಸಂಗಮದೇವಾ?
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-6/ವಚನ ಸಂಖ್ಯೆ-7)

ಈ ಎರಡು ವಚನಗಳನ್ನಿಟ್ಟುಕೊಂಡು ಡಾ. ವಿ. ವಿ. ಹೆಬ್ಬಳ್ಳಿಯವರು ಲೇಖನ ಬರೆದಿದ್ದಾರೆ. “ಲಿಂಗಾಯತ ಧಾರ್ಮಿಕ ಶರಣರಲ್ಲಿ ಜನ್ಮಾಂತರ ಕಲ್ಪನೆಯಿದೆ” ಎಂದು ಒತ್ತಿ ಹೇಳಿದ್ದಾರೆ. ತಾವು ಈ ಲೇಖನ ಬರೆಯಲು ಆಯ್ದುಕೊಂಡಿರುವ ವಚನಗಳ ಸಂಖ್ಯೆಯನ್ನು ನಮೂದಿಸುವ, ಸಂಶೋಧನೆಯ ಕನಿಷ್ಠ ಶಿಸ್ತು ಕೂಡ ಈ ಲೇಖಕರಿಗಿಲ್ಲ; ಲೇಖನದ ಕೊನೆಯಲ್ಲಿ ಡಾ. ವಿ. ವಿ. ಹೆಬ್ಬಳ್ಳಿಯವರು ಹೀಗೆ ಫರ್ಮಾನು ಹೊರಡಿಸುತ್ತಾರೆ:

“ಅನೇಕ ಜನ್ಮಾಂತರದ ಕಥೆಗಳು ಧರ್ಮಶಾಸ್ತ್ರಗಳಲ್ಲಿ ವರ್ಣಿತವಾಗಿವೆ. ಇವುಗಳು ವಿಶ್ವನೀಯವಲ್ಲವೆಂದು ತಿಳಿಯುವುದು ಸಂಸ್ಕೃತಿಯ ಮೇಲೆ ಪ್ರಹಾರ ಮಾಡಿದಂತಾಗುತ್ತದೆ”.
(ಶಾಂತಿಕಿರಣ | ಮೇ-2025 | ಪುಟ-26)

ಈ ರೀತಿಯ ಲೇಖನಗಳನ್ನು ಪ್ರಕಟಿಸುವುದರ ಮೂಲಕ “ಶಾಂತಿ ಕಿರಣ’ ಪತ್ರಿಕೆಯು ಚರ್ಚೆಗೆ ಅನುವು ಮಾಡಿಕೊಟ್ಟಿದೆ. ಆ ಲೇಖಕರ ಅಭಿಪ್ರಾಯಗಳನ್ನು ಖಂಡಿಸಿ ನಾನು ಈ ಲೇಖನ ಬರೆದಿದ್ದೇನೆ.

ಡಾ. ವಿ. ವಿ. ಹೆಬ್ಬಳ್ಳಿಯವರು ಉಲ್ಲೇಖಿಸಿರುವ ಈ ಎರಡೂ ವಚನಗಳು ಪ್ರಕ್ಷಿಪ್ತ ವಚನಗಳಾಗಿವೆ. “ಕಣ್ಣರಿಯದಿದ್ದರೂ ಕರುಳರಿಯದೆ?” ಎಂಬ ಗಾದೆ ಮಾತೊಂದಿದೆ. ಈ ಗಾದೆ ಮಾತು ಬಹಳ ಮಹತ್ವದ್ದಾಗಿದೆ. ಕಣ್ಣಿಗೆ ಇವೆರಡೂ ವಚನಗಳು ಬಸವಣ್ಣನವರ ವಚನಗಳೇ ಎಂದೆನಿಸಬಹುದು. ಆದರೆ ಬಸವಣ್ಣನವರ ವ್ಯಕ್ತಿತ್ವವನ್ನು ತಿಳಿದುಕೊಂಡ ಯಾರೂ ಕೂಡ ಇವು ಬಸವಣ್ಣನವರು ರಚಿಸಿರುವ ವಚನಗಳಲ್ಲವೆಂದು ಹೇಳುತ್ತಾರೆ.

ಮೊದಲನೇ ವಚನದಲ್ಲಿ, ಏಳು ಜನ್ಮಗಳಲ್ಲಿ ಬಸವಣ್ಣನವರು ಯಾವ ಯಾವ ಹೆಸರಿನಲ್ಲಿ ಹುಟ್ಟಿ ಬಂದರೆಂಬ ವಿವರವಿದೆ.

  1. ಪ್ರಥಮ ಭವಾಂತರದಲ್ಲಿ ಶಿಲಾದರನೆಂಬ ಗಣೇಶ್ವರ.
  2. ಎರಡನೇ ಭವಾಂತರದಲ್ಲಿ ಸ್ಕಂದನೆಂಬ ಗಣೇಶ್ವರ.
  3. ಮೂರನೇ ಭವಾಂತರದಲ್ಲಿ ನೀಲಲೋಹಿತನೆಂಬ ಗಣೇಶ್ವರ.
  4. ನಾಲ್ಕನೇ ಭವಾಂತರದಲ್ಲಿ ಮನೋಹರನೆಂಬ ಗಣೇಶ್ವರ.
  5. ಐದನೇ ಭವಾಂತರದಲ್ಲಿ ಕಾಲಲೋಚನೆಂಬ ಗಣೇಶ್ವರ.
  6. ಆರನೇ ಭವಾಂತರದಲ್ಲಿ ವೃಷಭನೆಂಬ ಗಣೇಶ್ವರ.
  7. ಏಳನೇ ಭವಾಂತರದಲ್ಲಿ ಬಸವಣ್ಣಾಯಕನೆಂಬ ಗಣೇಶ್ವರ.

ಹೀಗೆ ಏಳು ಜನ್ಮಗಳ ಹೆಸರುಗಳು ಇಲ್ಲಿವೆ. ಇಲ್ಲಿ ಏಳನೇ ಜನ್ಮದ ಬಸವಣ್ಣನವರೊಬ್ಬರ ಹೆಸರನ್ನು ಬಿಟ್ಟರೆ, ಉಳಿದೆಲ್ಲ ಹೆಸರುಗಳು ಪುರಾಣದ ಹೆಸರುಗಳಾಗಿವೆ. ಏಳನೇ ಹೆಸರು ಬಸವಣ್ಣನವರದು ಮಾತ್ರ ಐತಿಹಾಸಿಕವಾದ ಹೆಸರಾಗಿದೆ. ಈ ಆರು ಪುರಾಣದ ಹೆಸರುಗಳೊಂದಿಗೆ ಏಳನೆಯದು ಬಸವಣ್ಣನವರ ಹೆಸರಾಗಿದೆ. ಇದು ಹೇಗೆ ಸಾಧ್ಯ? ಶಿಲಾದರ, ಸ್ಕಂದ, ನೀಲಲೋಹಿತ, ಮನೋಹರ, ಕಾಲಲೋಚನ, ವೃಷಭ ಹೀಗೆ ಈ ಆರೂ ಹೆಸರುಗಳು ಪೌರಾಣಿಕ ಹೆಸರುಗಳಾಗಿವೆ. ಇವರಾರೂ ಜನ್ಮ ತಳೆದು ಭೂಲೋಕದಲ್ಲಿ ಹುಟ್ಟಿ ಬಂದವರಲ್ಲ. ಆದರೆ ಏಳನೇ ಹೆಸರಾದ ಬಸವಣ್ಣನವರು ಮಾತ್ರ ಚರಿತ್ರೆಯ ವ್ಯಕ್ತಿಗಳಾಗಿದ್ದಾರೆ. ಇದು ಹೇಗೆ ಸಾಧ್ಯವಾಗುತ್ತದೆ? ಜನ್ಮಾಂತರವೆಂಬುದು ಇದ್ದಿದ್ದರೆ, ಹಿಂದಿನ ಆರು ವ್ಯಕ್ತಿಗಳೂ ಈ ಭೂಲೋಕದಲ್ಲಿ ಹುಟ್ಟಿ ಬರಬೇಕಾಗಿತ್ತು. ಆದರೆ ಇಲ್ಲಿ ಹಾಗಾಗಿಲ್ಲ. ಬಸವಣ್ಣನವರು ಮಾತ್ರ ಹುಟ್ಟಿ ಬಂದಿದ್ದಾರೆ. ಅವರ ಹಿಂದಿನ ಜನ್ಮಾಂತರದ ವ್ಯಕ್ತಿಗಳೂ ಹುಟ್ಟಿ ಬಂದಿಲ್ಲ. ಸತ್ಯ ಸಂಗತಿ ಹೀಗಿದ್ದಾಗ ಇದು ನಿಜವಚನ ಹೇಗಾಗುತ್ತದೆ? ಉದ್ದೇಶಪೂರ್ವಕವಾಗಿ ಪುನರ್ಜನ್ಮವನ್ನು ಸ್ಥಾಪಿಸಲೆಂದೇ ಖೊಟ್ಟಿ ವಚನಕಾರ ಈ ವಚನವನ್ನು ರಚಿಸಿ ಬಸವಣ್ಣನವರ ಹೆಸರಿನಲ್ಲಿ ಸೇರಿಸಿದ್ದಾನೆ. ಸರ್ವಜ್ಞನ ಅನೇಕ (ತ್ರಿಪದಿ) ವಚನಗಳು ಪ್ರಕ್ಷಿಪ್ರ ವಚನಗಳಾಗಿವೆ. ಈ ಸತ್ಯವನ್ನರಿಯದ ಡಾ. ಹೆಬ್ಬಳ್ಳಿಯವರು ಇದು ಬಸವಣ್ಣನವರೇ ರಚಿಸಿರುವ ವಚನವೆಂದು ನಂಬಿ ಈ ಲೇಖನ ಬರೆದಿದ್ದಾರೆ.

ಅವರು ಆರಿಸಿಕೊಂಡಿರುವ ಇನ್ನೊಂದು ವಚನ ಕೂಡ ಪ್ರಕ್ಷಿಪ್ತ ವಚನವೇ ಆಗಿದೆ. ಬಸವಣ್ಣನವರಿಗೆ ಭವಬಂಧನವೆಂದೂ ಭವಪಾಶವಾಗಿಲ್ಲ. ಹೀಗಾಗಿ ಹಿಂದಣ ಜನ್ಮದಲ್ಲಿ ಲಿಂಗವನ್ನು ಮರೆಯುವುದು, ಜಂಗಮನನ್ನು ಮರೆಯುವುದು ಸಾಧ್ಯವೇ ಇಲ್ಲ. ಬಸವಣ್ಣನವರು ಭವವನ್ನು ಗೆದ್ದವರು. ಇಹದ ಮೂಲಕ ಪರವನ್ನು ಕಂಡವರು. ಲೌಕಿಕದ ಮೂಲಕ, ಅಲೌಕಿಕವನ್ನು ಕಂಡವರು. “ಶಿವನಿಗಿಂತ ಶಿವಶರಣನಧಿಕ” ಎಂದು ಸ್ಪಷ್ಟವಾಗಿ ಹೇಳಿದವರು. ಇಂತಹವರು ಭವಪಾಶದಲ್ಲಿ ಸಿಲುಕಲು ಸಾಧ್ಯವೆ? ಹಿಂದಿನ ಜನ್ಮದ ಬಗೆಗೆ ನಂಬಲು ಸಾಧ್ಯವೆ? ಈ ಎರಡು ಪ್ರಕ್ಷಿಪ್ತ ವಚನಗಳನ್ನಿಟ್ಟುಕೊಂಡು ಬಸವಣ್ಣನವರ ವಚನಗಳಲ್ಲಿ ಜನ್ಮಾಂತರದ ವಿಚಾರಗಳಿವೆಯೆಂದು ಹೇಳುವುದು ಸೂಕ್ತವಲ್ಲ.

ತಾಳ ಮಾನ ಸರಿಸವನರಿಯೆ,
ಓಜೆ ಬಜಾವಣೆ ಲೆಕ್ಕವನರಿಯೆ,
ಅಮೃತಗಣ ದೇವಗಣವನರಿಯೆ,
ಕೂಡಲಸಂಗಮದೇವಾ,
ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-129/ವಚನ ಸಂಖ್ಯೆ-494)

ಎಂದು ಹೇಳಿರುವ ಬಸವಣ್ಣನವರು, ಗಣೇಶ್ವರನ್ನು ನಂಬಲು ಸಾಧ್ಯವೆ?

ಸುರರು ಕಿನ್ನರರು ಕಿಂಪುರುಷರೆಂಬವರನಾರು ಬಲ್ಲರು
ಎನ್ನ ಚಿತ್ತವು ನಿಮ್ಮ ಮೇಲೆ ಸಂಗಯ್ಯಾ,
ಎನ್ನ ಚಿತ್ತವು ನಿಮ್ಮ ಮೇಲೆ ಲಿಂಗಯ್ಯಾ.
ಕೂಡಲಸಂಗಮದೇವಾ
ಅನ್ಯವೆಂಬುದನರಿಯೆನಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2021/ವಚನ ಸಂಖ್ಯೆ-496)

“ಸುರರು ಕಿನ್ನರರು ಕಿಂಪುರುಷರೆಂಬುವರನಾರು ಬಲ್ಲರು?” ಎಂದು ತಿಳಿಸಿರುವ ಬಸವಣ್ಣನವರು ಪುರಾಣದ ಪರಿಕಲ್ಪನೆಗಳನ್ನು ಒಪ್ಪಲು ಸಾಧ್ಯವೆ?

ನಾರಾಯಣನೆಂಬವನ ಕಾಣೆ, ಗೀರಾಯಣನೆಂಬವನ ಕಾಣೆ
ಬೊಮ್ಮನೆಂಬವನ ಕಾಣೆ, ಗಿಮ್ಮನೆಂಬವನ ಕಾಣೆ.
ವಿಷವಟ್ಟಿ ಸುಡುವಲ್ಲಿ, ವೀರಭದ್ರ ಬಡಿವಲ್ಲಿ
ಕೂಡಲಸಂಗಯ್ಯಂಗೆ ಶರಣೆಂದು ಮೊರೆಯಿಟ್ಟರೆಲ್ಲರು.
(ಸಮಗ್ರ ವಚನ ಸಂಪುಟ: ಒಂದು-2021/ವಚನ ಸಂಖ್ಯೆ-549)

ಎಂದು ಗಟ್ಟಿಧ್ವನಿಯಲ್ಲಿ ಹೇಳಿದ ಬಸವಣ್ಣನವರು ವೈದಿಕರ ಪುನರ್ಜನ್ಮವನ್ನು ಒಪ್ಪಲುಂಟೆ? ಕಣ್ಣಿಗೆ ಕಾಣುವುದು ಮಾತ್ರ ಸತ್ಯವಲ್ಲ. ಅವರ ಹೆಸರಿನಲ್ಲಿ ವಚನ ಸಿಕ್ಕರೆ ಮಾತ್ರ ಮುಖ್ಯವಲ್ಲ ಅದು ಅವರದೊ, ಮತ್ಯಾರದೊ ಎಂಬುದನ್ನು ಮೊದಲು ನಿರ್ಣಯಿಸಬೇಕು.

ಮುತ್ತು ನೀರಲ್ಲಿ ಹುಟ್ಟಿ ಮತ್ತೆ ನೀರಪ್ಪುದೆ
ಗುರುಕಾರುಣ್ಯವ ಹಡೆದ ಭಕ್ತನು ಹಿಂದಣ ಪೂರ್ವಾಶ್ರಯವ ಬೆರಸಿದಡೆ,
ಗುರುದ್ರೋಹ ಲಿಂಗದ್ರೋಹ ಜಂಗಮದ್ರೋಹ
ಆಚಾರದ್ರೋಹ ಪ್ರಸಾದದ್ರೋಹ.
ಇಂತೀ ಪಂಚಮಹಾಪಾತಕಂಗಳು
ಭಕ್ತಂಗಲ್ಲದೆ ಭವಿಗೆಲ್ಲಿಯದೊ
ಗುರುವಿದು, ಲಿಂಗವಿದು, ಜಂಗಮವಿದು
ಆಚಾರವಿದು, ಪ್ರಸಾದವಿದೆಂದರಿಯದಿದ್ದಡೆ
ಕುಂಭಿಪಾತಕ ನಾಯಕನರಕ
ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ವಚನ ಸಂಖ್ಯೆ-768)

ಹಿಂದಣ ಪೂರ್ವಾಶ್ರಯವ ಬರೆಸಬಾರದೆಂದು ಹೇಳಿರುವ ಬಸವಣ್ಣನವರು ಪುನರ್ಜನ್ಮವನ್ನು ಒಪ್ಪಲು ಸಾಧ್ಯವೆ? ಅವರು ಪುನರ್ಜನ್ಮವನ್ನು ನಂಬಿರಲಿಲ್ಲ ಎಂಬುದಕ್ಕೆ ಇನ್ನೂ ಹಲವು ವಚನಗಳನ್ನು ಉದಾಹರಿಸಬಹುದು.

ಜನ್ಮ ಜನ್ಮಕ್ಕೆ ಹೋಗಲೀಯದೆ,
ಸೋ[s]ಹಂ ಎಂದೆನಿಸದೆದಾಸೋ[s]ಹಂ ಎಂದೆನಿಸಯ್ಯಾ.
ಲಿಂಗಜಂಗಮಪ್ರಸಾದದ ನಿಲವ ತೋರಿ ಬದುಕಿಸಯ್ಯಾ,
ಕೂಡಲಸಂಗಮದೇವಾ, ನಿಮ್ಮ ಧರ್ಮ.
(ಸಮಗ್ರ ವಚನ ಸಂಪುಟ: ಒಂದು-2021/ವಚನ ಸಂಖ್ಯೆ-834)

ಈ ವಚನದಲ್ಲಿ ಬಸವಣ್ಣನವರು “ಜನ್ಮ ಜನ್ಮಕ್ಕೆ ಹೋಗಲಿಯದೆ” ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ‘ಸೋಹಂ’ ಎಂದೆನಿಸದೆ, ‘ದಾಸೋಹಂ’ ಎಂದೆನಿಸಯ್ಯಾ ಎಂಬುದು ಅವರ ಕೋರಿಕೆಯಾಗಿದೆ.

ಪೂರ್ವಜನ್ಮನಿವೃತ್ತಿಯಾಗಿ ಗುರುಕರುಣವಿಡಿದಂಗೆ
ಬಂಧನವೆಲ್ಲಿಯದೊ
ಭವಬಂಧನವೆಲ್ಲಿಯದೊ
ಸಂಕಲ್ಪ-ವಿಕಲ್ಪವೆಂಬ ಸಂದೇಹ ಕಳೆದುಳಿದಂಗೆ
ಕೂಡಲಸಂಗಮದೇವರ ತ್ರಿಸಂಧ್ಯಾಕಾಲದಲ್ಲಿ ಮಾಣದೆ ನೆನೆವಂಗೆ!
(ಸಮಗ್ರ ವಚನ ಸಂಪುಟ: ಒಂದು-2021/ವಚನ ಸಂಖ್ಯೆ-871)

ಎಂದು ಇನ್ನೊಂದು ವಚನದಲ್ಲಿ ಹೇಳಿದ್ದಾರೆ. ಇಲ್ಲಿ ಬಳಸಿರುವ ಪೂರ್ವಜನ್ಮವೆಂಬುದು ಪೂರ್ವಾಶ್ರಮವಾಗಿದೆ. ಒಂದು ಸಲ ಭಕ್ತನಾದವ ತನ್ನ ಪೂರ್ವಾಶ್ರಮವನ್ನು ಬಿಟ್ಟು ಶರಣನಾದಾಗ ಆತನಿಗೆ ಯಾವ ಬಂಧನವೂ ಇಲ್ಲವೆಂದು ತಿಳಿಸಿದ್ದಾರೆ. ಇಲ್ಲಿ ಪೂರ್ವಾಶ್ರಮವೆಂದರೆ ಆತನ ಜಾತಿಯಾಗಿರಬಹುದು. ಆತನ ಸಂಬಂಧಗಳಾಗಿರಬಹುದು. ಆತನ ಆಸ್ತಿ-ಅಂತಸ್ತುಗಳಾಗಿರಬಹುದು. ಇವೆಲ್ಲ ಬರುತ್ತವೆ. ಶರಣನಾದ ಬಳಿಕ ಪೂರ್ವಾಶ್ರಮವನ್ನೇ ಮರೆಯಬೇಕೆಂದು ಹೇಳಿರುವ ಬಸವಣ್ಣನವರು ಪೂರ್ವಜನ್ಮವನ್ನು ಒಪ್ಪಲು ಸಾಧ್ಯವೆ? ಇಂತಹ ಅನೇಕ ವಚನಗಳಲ್ಲಿ ಬಸವಣ್ಣನವರು ಪೂರ್ವಾಶ್ರಮವನ್ನು, ಪುನರ್ಜನ್ಮವನ್ನು ತಿರಸ್ಕರಿಸಿದ್ದಾರೆ.

ಸತ್ತು ಹುಟ್ಟುವನಲ್ಲ, ಸಂದೇಹ ಸೂತಕಿಯಲ್ಲ
ಆಕಾರ ನಿರಾಕಾರ ನೋಡಯ್ಯಾ !
ಕಾಯವಂಚಕನಲ್ಲ, ಜೀವವಂಚಕನಲ್ಲ
ನಿರಂತರ ಸಹಜ ನೋಡಯ್ಯಾ !
ಶಂಕೆಯಿಲ್ಲದ ಮಹಿಮನು ನೋಡಯ್ಯಾ,
ಕೂಡಲಸಂಗನ ಶರಣನುಪಮಾತೀತ ನೋಡಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2021/ವಚನ ಸಂಖ್ಯೆ-941)

ಇದು ಬಸವಣ್ಣನವರ ಮಹತ್ವದ ವಚನವಾಗಿದೆ.

“ಸತ್ತು ಹುಟ್ಟುವನಲ್ಲ” ಎಂಬ ನುಡಿ ಅತ್ಯಂತ ಮಹತ್ವದ್ದಾಗಿದೆ. ಸತ್ತು ಹುಟ್ಟುವುದು, ಸಂದೇಹ ಸೂತಕಿಯಾಗಿರುವುದು ಶರಣರಲ್ಲಿ ಸಾಧ್ಯವೇ ಇಲ್ಲ. “ಇದೇ ಜನ್ಮ ಕಡೆ” ಎಂದು ಹೇಳಿರುವ ಶರಣರು ಪುನರ್ಜನ್ಮವನ್ನು ನಂಬಲು ಸಾಧ್ಯವೆ? ಶರಣರ ಇಂತಹ ಇನ್ನೂ ಅನೇಕ ವಚನಗಳನ್ನು ಉದಾಹರಿಸಬಹುದಾಗಿದೆ. ಶರಣರು ಪುನರ್ಜನ್ಮವನ್ನು ನಂಬುತ್ತಿರಲಿಲ್ಲವೆಂಬುದಕ್ಕೆ ಅನೇಕ ಉದಾಹರಣೆಗಳನ್ನು ಕೊಡಬಹುದಾಗಿದೆ. ಆ ವಿವರಗಳಿಗೆ ನಾನಿಲ್ಲಿ ಹೋಗುವುದಿಲ್ಲ. ಈ ಎಲ್ಲ ಆಕರಗಳನ್ನಿಟ್ಟುಕೊಂಡು ಬಸವಣ್ಣನವರು ಪುನರ್ಜನ್ಮವನ್ನು ನಂಬುತ್ತಿರಲಿಲ್ಲವಂದು ಸ್ಪಷ್ಟಪಡಿಸಬಯಸುತ್ತೇನೆ. ಡಾ. ವಿ. ವಿ. ಹೆಬ್ಬಳ್ಳಿಯವರು ಆಯ್ದುಕೊಂಡಿರುವ ವಚನಗಳು ಬೊಟ್ಟಿ ವಚನಗಳೆಂದು ಹೇಳಲು ಬಯಸುತ್ತೇನೆ.

ಡಾ. ವಿ. ವಿ. ಹೆಬ್ಬಳ್ಳಿಯವರು ಮಾತ್ರವಲ್ಲ, ಇನ್ನೂ ಕೆಲವು ಲೇಖಕರು ಈ ರೀತಿಯ ಲೇಖನಗಳನ್ನು ಬರೆದಿದ್ದಾರೆ. ಶರಣರು ಜಾತಿಯನ್ನೇ ನಿರಾಕರಿಸಿಲ್ಲವೆಂದು ಹೇಳಿರುವ ಮಹಾತ್ಮರೂ ಇದ್ದಾರೆ. ಶರಣರು ಹುಟ್ಟಿರಲೇ ಇಲ್ಲ, ಇದೆಲ್ಲಾ ಊಹಾಪೋಹ ಎಂದು ಹೇಳಿರುವ ಪುಣ್ಯಾತ್ಮರೂ ಇದ್ದಾರೆ. ಇತ್ತೀಚಿಗೆ ಪ್ರಕಟವಾಗಿರುವ “ಬಸವ ದರ್ಶನ” ಕೃತಿಯಲ್ಲಿ ಬಂದಿರುವ ಲೇಖನಗಳನ್ನು ಓದಿದಾಗ ಈ ಪರೋಹಿತಶಾಹಿಗಳ ಕೊಳಕು ಮನಸ್ಸು ಹೇಗಿದೆಯೆಂಬುದು ಗಮನಕ್ಕೆ ಯಾವ ಶರಣರು ಪುನರ್ಜನ್ಮವನ್ನು ನಿರಾಕರಿಸಿದರೂ ಅವರ ಮೂಲಕವೇ ಮತ್ತೆ ಗಮನಕ್ಕೆ ಬರುತ್ತದೆ. ಯಾವ ಶರಣರು ಮೌಢ್ಯತೆಯನ್ನು ವಿರೋಧಿಸಿದರೋ, ಅದೇ ಮೌಢ್ಯತೆಯನ್ನು ಬಿತ್ತುವ ಕೆಲಸ ಉದ್ದೇಶಪೂರ್ವಕವಾಗಿ ನಡೆದಿದೆ. ನಮ್ಮವರ ಮೂಲಕವೇ ನಮ್ಮ ಸಿದ್ಧಾಂತಗಳನ್ನು ತಿರುಚುವ ಕಾರ್ಯ ನಡೆದಿದೆ.

ಲಿಂಗಾಯತ ಧರ್ಮ ಸಂಸ್ಥಾಪಕರಾದ ಬಸವಣ್ಣನವರೇ ಪುನರ್ಜನ್ಮವನ್ನು ನಂಬುತ್ತಿದ್ದರು, ಜಾತಿವ್ಯವಸ್ಥೆಯನ್ನು ಅವರು ವಿರೋಧಿಸಿರಲಿಲ್ಲ. ಅವರು ಕ್ರಾಂತಿಕಾರಿಗಳಲ್ಲ ಎಂಬ ಹೇಳಿಕೆಗಳ ಹಿಂದೆ ದೊಡ್ಡ ರಾಜಕೀಯವೇ ಇದೆ. “ಬಸವ ದರ್ಶನ” ಪುಸ್ತಕದ ಹಿಂದೆ ಮತೀಯವಾದಿಗಳ ಕೈವಾಡವಿದೆಯೆಂಬ ಸತ್ಯ ಈಗಾಗಲೇ ಜಗಜ್ಜಾಹಿರವಾಗಿದೆ.

ಪುರೋಹಿತಶಾಹಿಯೆಂಬುದು ಯಾವಾಗಲೂ ನಮ್ಮವರ ಮೂಲಕವೇ ನಮ್ಮನ್ನು ಛಿದ್ರಛಿದ್ರಗೊಳಿಸುತ್ತದೆ. “ವಚನ ದರ್ಶನ” ಕೃತಿಯ ಹಿಂದೆ ಪುರೋಹಿತಶಾಹಿ ಹಾಗೂ ಮತೀಯವಾದಿಗಳ ಕೈವಾಡವಿದೆ. ಲಿಂಗಾಯತ ಸ್ವತಂತ್ರ ಧರ್ಮವಾಗುವುದು ಪುರೋಹಿತಶಾಹಿಗಳಿಗೆ ಬೇಕಾಗಿಲ್ಲ. ನೂರಾರು ಉಪಜಾತಿಗಳು ಲಿಂಗಾಯತ ಧರ್ಮದಲ್ಲಿವೆ. ಅವುಗಳಲ್ಲಿ ಭೇದ ಹುಟ್ಟಿಸಿ, ಒಡೆದಾಳುವುದೇ ಪುರೋಹಿತಶಾಹಿಯ ಮುಖ್ಯ ಉದ್ದೇಶವಾಗಿದೆ. ಹೀಗಾಗಿ ಅದು ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ರೂಪಗಳಲ್ಲಿ ಪ್ರಕಟವಾಗುತ್ತದೆ. ಲಿಂಗಾಯತ ಸ್ವತಂತ್ರ ಧರ್ಮವಾಗುವುದನ್ನು ತಪ್ಪಿಸಿದವರು, ಪುರೋಹಿತ ಮಠಾಧೀಶರು ಹಾಗೂ ಕೇಂದ್ರದ ಮತೀಯವಾದಿಗಳೇ ಆಗಿದ್ದಾರೆ. ಈ ಸತ್ಯವನ್ನು ಬಸವಾನುಯಾಯಿಗಳು ಅರಿಯಬೇಕಾಗಿದೆ. ನಮ್ಮವರ ಮೂಲಕವೇ ನಮ್ಮ ಶರಣರನ್ನು ಮೂಲೆಗುಂಪು ಮಾಡುವ ಕೆಲಸ ಬಹಿರಂಗವಾಗಿಯೇ ನಡೆದಿದೆ. ಈ ಸತ್ಯವನ್ನು ಪ್ರತಿಯೊಬ್ಬ ಲಿಂಗಾಯತರೂ ಅರ್ಥಮಾಡಿಕೊಳ್ಳಬೇಕಾಗಿದೆ.

ಪ್ರಕಟಿಸುವ ಮೊದಲು ಬೊಟ್ಟಿ ವಚನಗಳನ್ನು ತೆಗೆದುಹಾಕಬೇಕಾಗಿದೆ. ಅದಕ್ಕಾಗಿ ಒಂದು ಸಂಶೋಧಕರ ಸಮಿತಿಯನ್ನು ಸರಕಾರ ನೇಮಿಸಬೇಕು. ಇಲ್ಲದಿದ್ದರೆ ಇನ್ನೂ ಹೆಚ್ಚು ಅವಾಂತರಗಳು ನಡೆಯುತ್ತವೆ. ಇನ್ನೂ ಹತ್ತು ಸಂಪುಟಗಳಾಗುವಷ್ಟು ಹೊಸ ವಚನಗಳು ದೊರಕಿವೆ. ಅವುಗಳನ್ನು ಪರಿಷ್ಕರಿಸುವ, ಕಾರ್ಯವಾಗಬೇಕಾಗಿದೆ. ಇದಕ್ಕಾಗಿ “ಶರಣಸಾಹಿತ್ಯ ಸಂಶೋಧನಾ ಪ್ರಾಧಿಕಾರ” ಪ್ರಾರಂಭಿಸಬೇಕೆಂದು ಒಂದು ಸಭೆಯಲ್ಲಿ ನಾನು ಮುಖ್ಯಮಂತ್ರಿಗಳನ್ನು ವಿನಂತಿಸಿದ್ದೆ. ಆದರೆ ಅದಕ್ಕವರು ಏನೂ ಹೇಳಲಿಲ್ಲ. “ಬಸವಣ್ಣ ಸಾಂಸ್ಕೃತಿಕ ನಾಯಕ” ನೆಂದು ಹೇಳಿದರೆ ಸಾಲದು. ಬಸವಾದಿ ಶರಣರ ನಿಜ ಸತ್ವವನ್ನು ಮುಂದಿನ ಜನಾಂಗ ಅರಿತುಕೊಳ್ಳುವಂತೆ ಮಾಡಬೇಕು.

2025 ರಲ್ಲಿ “ಬಸವ ವಚನ” ಎಂಬ ಕೃತಿ ಬೀದರದ ಬಸವ ಕಾಯಕ ದಾಸೋಹ ಫೌಂಡೇಶನ್‌ದಿಂದ ಪ್ರಕಟವಾಗಿದೆ. ಡಾ. ಸೋಮನಾಥ ಯಳವಾರ ಮತ್ತು ಡಾ. ರಘುಶಂಖ ಭಾತಂಬ್ರಾ ಈ ಕೃತಿಯ ಸಂಪಾದಕರಾಗಿದ್ದಾರೆ. ಬಸವಣ್ಣನವರ 48 ಖೊಟ್ಟಿ ವಚನಗಳನ್ನು ತೆಗೆದು ಹಾಕಿ ಈ ಪುಸ್ತಕವನ್ನು ಪ್ರಕಟಿಸಿರುವುದಾಗಿ ಡಾ. ಸೋಮನಾಥ ಯಳವಾರ ಅವರು ನನಗೆ ತಿಳಿಸಿದರು. ಇದು ಅತ್ಯಂತ ಸ್ತುತ್ಯಾರ್ಹ ಕಾರ್ಯವಾಗಿದೆ. ಇವರು ಕೈಬಿಟ್ಟಿರುವ 48 ಕೊಟ್ಟಿ ವಚನಗಳಲ್ಲಿ ಡಾ. ವಿ. ವಿ. ಹೆಬ್ಬಳ್ಳಿಯವರು ಆಯ್ದುಕೊಂಡಿರುವ ವಚನವೂ ಸೇರಿದೆ. ಹೀಗಾಗಿ ಇದು ಖೊಟ್ಟಿ ವಚನವೆಂಬುದು ಈಗ ಸ್ಪಷ್ಟವಾಗಿದೆ. ಈ 48 ಹೊಟ್ಟಿ ವಚನಗಳನ್ನು ತೆಗೆದು ಹಾಕಿ ಬಸವಣ್ಣನವರ ವಚನಗಳನ್ನು ಪ್ರಕಟಿಸಿರುವ ಈ ಸಂಪಾದಕರು ಅಭಿನಂದನಾರ್ಹರಾಗಿದ್ದಾರೆ. ಈ ಕಾರ್ಯ ಸಮಗ್ರವಾಗಿ, ಪೂರ್ಣ ಪ್ರಮಾಣದಲ್ಲಿ ನಡೆಯಬೇಕಾದರೆ “ಶರಣಸಾಹಿತ್ಯ ಸಂಶೋಧನಾ ಪ್ರಾಧಿಕಾರ” ವನ್ನು ಸರ್ಕಾರ ಸ್ಥಾಪಿಸಬೇಕು. ಆ ಮೂಲಕ ಶರಣರ ವಚನಗಳ ಸಂಗ್ರಹ, ಸಂಸ್ಕರಣ. ಪರಿಷ್ಕರಣ, ಸಂಪಾದನೆ, ಪ್ರಕಟನೆಯ ಕಾರ್ಯ ನಡೆಯಲು ಸಾಧ್ಯವಾಗುತ್ತದೆ. ಇದಕ್ಕಾಗಿ ಲಿಂಗಾಯತ ನಾಯಕರು ಸರಕಾರವನ್ನು ಒತ್ತಾಯಿಸಬೇಕಾಗಿದೆ. ಶರಣರ ಸಾಹಿತ್ಯವನ್ನು 21 ನೇ ಶತಮಾನದಲ್ಲಿಟ್ಟು ಹೊಸ ಓದು ಪ್ರಾರಂಭಿಸುವ ಕೆಲಸವೂ ಆಗಬೇಕಾಗಿದೆ. ಒಂದು ಸಲ ಈ ಖೊಟ್ಟಿ ವಚನಗಳನ್ನು ತೆಗೆದು ಹಾಕಿಬಿಟ್ಟರೆ, ಇಂತಹ ಅವಘಡಗಳು ನಡೆಯುವುದಿಲ್ಲ. ಈ ಕಾರ್ಯ ತುರ್ತಾಗಿ ನಡೆಯಬೇಕಾಗಿದೆ. ಈ ವಿಷಯದತ್ತ ಜಾಗತಿಕ ಲಿಂಗಾಯತ ಮಹಾಸಭಾ, ಬಸವದಳ, ಬಸವ ಕೇಂದ್ರಗಳು, ಬಸವ ಸಮಿತಿ ಹಾಗೂ ಶರಣ ಸಾಹಿತ್ಯ ಪರಿಷತ್ತು ಮತ್ತು ಶರಣರ ಹೆಸರಿನಲ್ಲಿ ಸಕ್ರಿಯವಾಗಿರುವ ಎಲ್ಲ ಸಂಘ ಸಂಸ್ಥೆಗಳು ಜಾಗೃತರಾಗಿ ಸಂಘಟಿತರಾಗಬೇಕಾಗಿದೆ. ಇಲ್ಲದಿದ್ದರೆ ನಮ್ಮವರಿಂದಲೇ ನಮ್ಮನ್ನು ನಿರ್ನಾಮ ಮಾಡುವ ಕಾರ್ಯವನ್ನು ಮತೀಯ ಶಕ್ತಿಗಳು, ಪುರೋಹಿತಶಾಹಿಗಳು ಮಾಡುತ್ತಲೇ ಇರುತ್ತವೆ. ಕೇವಲ ಲಿಂಗಾಯತರು ಮಾತ್ರವಲ್ಲ, ಪ್ರಜಾಪ್ರಭುತ್ವದ ಬಗ್ಗೆ, ಸಂವಿಧಾನದ ಬಗ್ಗೆ ನಂಬಿಕೆ ಇದ್ದವರೆಲ್ಲ ಕೂಡಿ ಇಂತಹ ಜನಪರ ಹೋರಾಟಗಳನ್ನು ಹುಟ್ಟು ಹಾಕಬೇಕಾಗಿದೆ.

ಡಾ. ಬಸವರಾಜ ಸಬರದ,
ಮನೆ ನಂ. 1, 2 ನೇ ಮೇನ್‌, 2 ನೇ ಕ್ರಾಸ್‌,
ಅಮರಜ್ಯೋತಿ ಲೇ ಔಟ್, ಕುಪ್ಪಸ್ವಾಮಿ ಪಾರ್ಕ್,
ಹೆಬ್ಬಾಳ,
ಬೆಂಗಳೂರು-560032,
ಮೋಬೈಲ್‌ ಸಂ. 98866 19220

ಮಿಸ್ಟರ್‌ ಸೋಮೇಶ ಕುಲಕರ್ಣಿ ನಿಮ್ಮಂಥ ಅರೆಬೆಂದ ಸಾಹಿತಿಗಳಿಂದ ನಾವೇನೂ ಕಲಿಯಬೇಕಾಗಿಲ್ಲಾ. ನಿಮ್ಮ ಜ್ಞಾನವನ್ನು ಕಾಲ್ಪನಿಕ ರೇಣುಕರನ್ನು ಅತಳ ಸುತಳ ತಳಾತಳ ಏಳೂ ಲೋಕದೆತ್ತರಕ್ಕೆ ಬೆಳೆಸಿ ನಮ್ಮದೇನೂ ಅಭ್ಯಂತರವಿಲ್ಲ. ಆದರೆ ಬಸವಣ್ಣನವರ ಘನತೆಗೆ ಕಳಂಕ ತರುವ ಪ್ರಯತ್ನಗಳನ್ನು ಮಾತ್ರ ಮಾಡಬೇಡಿ. ಅದು ನಿಮ್ಮ ಗೌರವ ಘನತೆಗೂ ಹಾನಿ ಎನ್ನುವುದನ್ನು ಸ್ಪಷ್ಟವಾಗಿ ಅರಿತುಕೊಳ್ಳಿ. ನಿಮಗೆ ಈ ಉತ್ತರ ಸಾಕು ಅಂತಾ ಅನಿಸುತ್ತದೆ.

ಕೆ. ಎಸ್. ಎನ್. ಸ್ವಾಮಿ ಹೊಸದಿಗಂತ ಚಾನಲ್ಲನ ಸಂಪಾದಕ: ಕಾಯಕ ಸಿದ್ಧಾಂತ ಅಂತಾ ಅವರು ಪ್ರತಿಪಾದಿಸುವುದೇನು?

ಡಾ. ವಿಜಯಕುಮಾರ ಕಮ್ಮಾರ ಅವರ ಉತ್ತರ: ಇನ್ನು ಈ ಎಡಬಿಡಂಗಿ ಸೋಮೇಶ ಕುಲಕರ್ಣಿ ಶರಣರ ಕಾಯಕದ ಕುರಿತಂತೆ ಹಲವಾರು ಅಪಸವ್ಯಗಳನ್ನು ಹರಿಬಿಟ್ಟಿದ್ದಾನೆ. They are self explanatory. ಹಾಗಾಗಿ ಇದರ ಕುರಿತಂತೆ ನನಗೆ ಸಮಝಾಯಿಸಿ ಹೇಳುವುದಕ್ಕೆ ಏನೂ ಇಲ್ಲ.

ಕೆ. ಎಸ್. ಎನ್. ಸ್ವಾಮಿ ಹೊಸದಿಗಂತ ಚಾನಲ್ಲನ ಸಂಪಾದಕ: ಇನ್ನೊಂದು ವಾದ ಏನು ಅಂತಂದ್ರೆ ವೀರಶೈವರು ಮೆಚ್ಚುವಂತಹ ವೀರಶೈವರು ನಂಬುವಂತಹ ಶಿವ ಪೌರಾಣಿಕ ಶಿವ. ನಾವು ನಮ್ಮ ಶಿವ ನಿರಾಕಾರಿ ಶಿವ ಅನ್ನುವಂತದ್ದು. ಈ ವಾದವನ್ನ ನೀವು ಹೇಗೆ ನೋಡ್ತೀರಿ?

ಸೋಮೇಶ್‌ ಕುಲಕರ್ಣಿ: ಅಲ್ಲ. ಈ ನಿರಾಕಾರದ ಕಲ್ಪನೆ ಪ್ರಾಚೀನ ಕಾಲದಿಂದಲೂ ಹಿಂದುಗಳಲ್ಲೇ ಇದೆ. ಪರಬ್ರಹ್ಮವನ್ನ ಹಾಗೆ ಹೇಳೋದು ಪರಬ್ರಹ್ಮ ಸ್ವರೂಪವನ್ನ ಯಾವುದೋ ಒಂದು ರೂಪದಲ್ಲಿ ಹೇಳೋದಿಲ್ಲ. ಆದರೆ ಆ ಪರಬ್ರಹ್ಮ ಸ್ವರೂಪಕ್ಕೆ ರೂಪವನ್ನು ಕೊಟ್ಟಾಗ ಸಾಕಾರ ನಿರಾಕಾರ ಎರಡರ ಆರಾಧನೆಯು ನಮ್ಮ ಪರಂಪರೆ ಸನಾತನ ಪರಂಪರೆಯಲ್ಲಿದೆ. ನಮ್ಮ ವೇದಗಳಲ್ಲೂ ಸಹಿತ ವೇದ ಮಂತ್ರಗಳಲ್ಲೂ ಸಹಿತ ಇದು ಉಲ್ಲೇಖ ಇದೆ ಉದಾಹರಣೆಗೆ ಪುರುಷಸೂಕ್ತದಲ್ಲಿ ಸಹಸ್ರ ಓಂ ಸಹಸ್ರ ಶೀರ್ಷ ಪುರುಷ ಸಹಸ್ರಕ್ಷ ಸಹಸ್ರಪಾತ ಸಭಿಶತ ಅತ್ಯಷ್ಟ ದಶಾಂಗುಲ ಹೀಗೆ ಹೇಳ್ತಾರೆ. ಸಹಸ್ರ ಶಿರಸುಳ್ಳವನು ನೀನು ಸಹಸ್ರ ಕಣ್ಣುಳ್ಳವನು ನೀನು ವಿಶ್ವ ವ್ಯಾಪಕ ನೀನು ಅಂತ ಹೇಳಿ ಅದನ್ನು ವರ್ಣಿಸುತ್ತಾರೆ. ನೀನು ಎಣಿಕೆಗೆ ನಿಲಕನಾಗದವನು ನೀನು. ಅದನ್ನೇ ಬಸವಣ್ಣವರು ಜಗದಗಲ ಮುಗಿಲಗಲ ಮಿಗಿಯಗಲ ನಿಮ್ಮಗಲ ಪಾತಾಳದಿಂದ ಅತ್ತ ನಿಮ್ಮ ಶ್ರೀಚರಣ ಬ್ರಹ್ಮಾಂಡದಿಂದ ಅತ್ತ ನಿಮ್ಮ ಶ್ರೀ ಮುಕುಟ ಅಗಮ್ಯ ಅಗೋಚರ ಅಪ್ರತಿಮಲಿಂಗವೇ ಕೂಡಲ ಸಂಗಮದೇವ ಎನ್ನ ಕರಸ್ಥಲಕ್ಕೆ ಬಂದು ಚುಳುಕಾದರಯ್ಯ ಅಂತ ಹೇಳ್ತಾರೆ. ಅಂದರೆ ನೀನು ವಿಶ್ವವ್ಯಾಪಕ ನಿರಾಕಾರಿ ಆದರೆ ನಿರಾಕಾರಿಯಾಗಿರುವ ನಿನ್ನನ್ನ ಆರಾಧನೆ ಮಾಡಕ್ಕೆ ನನಗೆ ಏನೋ ಒಂದು ಸಂಕೇತ ಬೇಕು. ಆ ಸಂಕೇತವೇ ನನ್ನ ಅಂಗಯಲ್ಲಿ ಇರತಕ್ಕಂತಹ ಚುಳುಕಾದ ಲಿಂಗ ಅನ್ನೋದನ್ನ ಅವರು ಹೇಳ್ತಾರೆ.

ಡಾ. ವಿಜಯಕುಮಾರ ಕಮ್ಮಾರ ಅವರ ಉತ್ತರ: ಈ ಸೋಮೇಶ ಕುಲಕರ್ಣಿಗೆ ಲಿಂಗಾಯತರ ಶಿವ ಅಂದರೇನೇ ಗೊತ್ತಿಲ್ಲಾ. ವೇದ ಪುರಾಣಗಳಿಂದ ಲಿಂಗಾಯತರ ಶಿವನಿಗೆ Definition ಕೊಟ್ಟರೆ ಅದು ಅಜ್ಞಾನದ ಪರಮಾವಧಿ. ಹಾಗಾಗಿ ಈ ಶಿಖಾಮಣಿಗೆ ಲಿಂಗಾಯರತ ಶಿವ ಯಾರು ಎಂದು ತಿಳಿಸೋಣ.

ಲಿಂಗವನರಿಯದೆ ಏನನರಿತರೂ ಫಲವಿಲ್ಲ ಎನ್ನುವುದನ್ನು ಅರಿವಿನ ಮಾರಿತಂದೆಯವರು ತಮ್ಮ ಈ ವಚನದಲ್ಲಿ ನಿರೂಪಣೆ ಮಾಡುತ್ತಾರೆ.

ಇಷ್ಟಲಿಂಗ ಪ್ರಾಣಲಿಂಗವೆಂದು
ಬೇರೊಂದು ಕಟ್ಟಳೆಯ ಮಾಡಬಹುದೇ ಅಯ್ಯಾ?
ಬೀಜವೊಡೆದು ಮೊಳೆ ತಲೆದೋರುವಂತೆ,
ಬೀಜಕ್ಕೂ ಅಂಕುರಕ್ಕೂ ಭಿನ್ನವುಂಟೆ ಅಯ್ಯಾ?
ಇಷ್ಟದ ಕುರುಹಿನಲ್ಲಿ ಚಿತ್ತ ನಿಂದು ಮಿಕ್ಕ ಗುಣಂಗಳ ನರಿಯಬೇಕು.
ಇದೇ ನಿಶ್ಚಯ, ಸದಾಶಿವಮೂರ್ತಿಲಿಂಗವು ತಾನಾಗಿ.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-152/ವಚನ ಸಂಖ್ಯೆ-397)

ಬಸವಾದಿ ಶಿವಶರಣರ ಆರಾಧ್ಯದೈವ ಇಷ್ಟಲಿಂಗ. ಇದು ಅರಿವಿನ ಕುರುಹು, ಅಂಗ ಗುಣಗಳನ್ನು ಅಳಿದು ಲಿಂಗ ಗುಣಗಳನ್ನು ಸಂಪಾದಿಸಲು ಒಂದು ಸಾಧನವಾಗಿ ಅಂಗದಮೇಲೆ ಧರಿಸಿಕೊಳ್ಳುವ ನಿರಾಕಾರ ಪರಮಾತ್ಮನ ಕುರುಹು ಇಷ್ಟಲಿಂಗ. ಇದು ಬ್ರಹ್ಮಾಂಡವನ್ನು ಆವರಿಸಿರುವ ವಿಶ್ವ ಚೈತನ್ಯ. ವಿಶ್ವ ಚೈತನ್ಯದ ವಂಶವೇ ಜೀವಚೈತನ್ಯ. ಶಿವ ಜೀವೈಕ್ಯವೇ ಇಷ್ಟಲಿಂಗ ಪೂಜೆಯ ಉದ್ದೇಶ. ಇಷ್ಟಲಿಂಗ ಪೂಜೆಯಿಂದ ದೇಹ ಬಾವ ಅಳಿಯುತ್ತದೆ. ದೇಹ ಭಾವ ಅಳಿದಾಗ ಪ್ರಾಣಲಿಂಗದ ಪ್ರಜ್ಞೆ ಆಗುತ್ತದೆ. ದೇಹ ಪ್ರಾಣ ಎರಡನ್ನೂ ಮೀರಿದ ಕಾರಣ ಭಾವ ಲಿಂಗದ ಪ್ರಜ್ಞೆ ಅಳವಡುತ್ತದೆ. ಮೂರನ್ನು ಏಕೀಭವಿಸಿದಾಗ ಆತ್ಮ ಪರಮಾತ್ಮನಲ್ಲಿ ಬೆರೆತು ಒಂದಾಗಿ ನಿಲ್ಲುವದು ಸಾಧಕನ ಮುಖ್ಯ ಗುರಿಯಾಗಿರುತ್ತದೆ. ಸಾಧಕನ ಅಂಗ ಕ್ರಿಯೆಗಳೆಲ್ಲವೂ ಲಿಂಗ ಕ್ರಿಯೆಗಳಾಗುತ್ತವೆ. ಲಿಂಗ ಕ್ರಿಯೆಗಳೆಲ್ಲವೂ ಆತನ ಬದುಕನ್ನು ವ್ಯಾಪಿಸಿದಾಗ ಲಿಂಗದ ಚಿತ್ ಪ್ರಭೆಯಲ್ಲಿ ಸಾಧಕ ನಿಲ್ಲುತ್ತಾನೆ. ಕುರುಹು ಅರಿವಿಂಗೆ ಆಶ್ರಯ, ಅರಿವು ಕುರುಹಿಗೆ ಆಶ್ರಯವಾಗಿ ಅಭೇದ್ಯ ಭಾವ ಬಲಿತು ನಿಂತಾಗ ಸಾಧಕ ಸರ್ವಾಂಗ ಲಿಂಗಿ ಶರಣಾಗುತ್ತಾನೆ. ಇದನ್ನನೆ ಶರಣ ಅರಿವಿನ ಮಾರಿತಂದೆ‌ ಉಪಮೆಗಳ ಮೂಲಕ ಲಿಂಗದ ಅರಿವು ಮೂಡಿಸುತ್ತಾನೆ.

ಲಿಂಗಾಯತ ಸಿದ್ಧಾಂತದ ಪ್ರಕಾರ ಶಿವನೆಂದರೆ ತ್ರಿಮೂರ್ತಿಗಳಲ್ಲಿ ಒಬ್ಬನಲ್ಲ. ಅದು ಪರವಸ್ತು “ಒಡಲಿಲ್ಲದ ಬಯಲು”. ಇದಕ್ಕೊಂದು ಅಲ್ಲಮ ಪ್ರಭುಗಳ ವಚನ ಅತ್ಯಂತ ಸೂಕ್ತವೆನಿಸುತ್ತದೆ.

ಕಣ್ಗೆ ಕಾಬಡೆ ರೂಪಲ್ಲ, ಕೈಗೆ ಸಿಲುಕವಡೆ ದೇಹಿಯಲ್ಲ.
ನಡೆವಡೆ ಗಮನಿಯಲ್ಲ, ನುಡಿವಡೆ ವಾಚಾಳನಲ್ಲ.
ನಿಂದಿಸಿದಡೆ ಹಗೆಯಲ್ಲ, ಹೊಗಳಿದವರಿಗೆ ಕೆಳೆಯಲ್ಲ.
ಗುಹೇಶ್ವರನ ನಿಲುವು ಮಾತಿನ ಮಾಲೆಗೆ ಸಿಲುಕುವುದೆ?
ಸಿದ್ಧರಾಮಯ್ಯ, ನೀನು ಮರುಳಾದೆಯಲ್ಲಾ.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-391/ವಚನ ಸಂಖ್ಯೆ-1043)

ಶಿವ ಅಂದರೆ ಸ್ವಯಂಜ್ಯೋತಿ ಸ್ವರೂಪ, ನಿರಂಜನ ಸ್ವರೂಪ, ನಿರಾಕಾರ ಸ್ವರೂಪ, ಅದಕ್ಕೆ ಹೆಸರು, ಲಿಂಗ, ರೂಪ, ಕ್ರಿಯಾದಿಗಳಿಲ್ಲ. ಇದು ಅಲ್ಲಮ ಪ್ರಭುವಿನ ನಿರಾಕಾರ ನಿರ್ಗುಣದ ಶಿವ – ಶೂನ್ಯ ಎಂಬಂತೆ – ಶಿವ ಎಂದರೆ ‘ಶೂನ್ಯ’ ಎಂಬುದು ಅಲ್ಲಮನ ಸಿದ್ದಾಂತ. ಶಿವ ಕೈಲಾಸವಾಸಿಯಲ್ಲ, ಅವನಿಗೆ ಹೆಂಡಿರು ಮಕ್ಕಳಿಲ್ಲ. ಆತ ನಿರ್ಗುಣ, ನಿರಾಕಾರ ಶಿವ ಎಂದರೆ ಮಂಗಳ, ಆಭ್ಯುದಯ, ಲೇಸು, ಒಳಿತು, ಹಿತ, ಕಲ್ಯಾಣ, ನಮ್ಮ ಶಿವ ಸ್ಥಾವರ ಪ್ರತಿಮೆಯಲ್ಲ ಆವನು ಜಂಗಮಸ್ವರೂಪಿ ಅವನು ಗುಡಿಯಲ್ಲಿಲ್ಲ. ಪ್ರತಿಯೊಬ್ಬರ ದೇಹದಲ್ಲಿ ಜಂಗಮರೂಪಿಯಾಗಿ, ಇಷ್ಟಲಿಂಗರೂಪಿಯಾಗಿ ಇದ್ದಾನೆ, ಲಿಂಗಾಯತ ಧರ್ಮದಲ್ಲಿ ಕೈಲಾಸ, ಸ್ವರ್ಗ, ನರಕಗಳಿಗೆ ಸ್ಥಾನವೇ ಇಲ್ಲ ಶಿವಯೋಗಿ ಸಿದ್ದರಾಮೇಶ್ವರರು ಹೇಳುವ ಹಾಗೆ:

ಕೈಲಾಸ ಕೈಲಾಸವೆಂದು ಬಡಿದಾಡುವ
ಅಣ್ಣಗಳಿರಾ, ಕೇಳಿರಯ್ಯಾ.
ಕೈಲಾಸವೆಂಬುದೊಂದು ಭೂಮಿಯೊಳಿರುವ ಹಾಳುಬೆಟ್ಟ.
ಅಲ್ಲಿರುವ ಮುನಿಗಳೆಲ್ಲ ಜೀವಗಳ್ಳರು.
ಅಲ್ಲಿರ್ದ ಚಂದ್ರಶೇಖರನು ಬಹು ಎಡ್ಡ.
ಇದರಾಡಂಬರವೇಕಯ್ಯಾ?
ಎಮ್ಮ ಪುರಾತರಿಗೆ ಸದಾಚಾರದಿಂದ ವರ್ತಿಸಿ,
ಅಂಗಾಂಗ ಸಾಮರಸ್ಯವ ತಿಳಿದು,
ನಿಮ್ಮ ಪಾದಪದ್ಮದೊಳು
ಬಯಲಾದ ಪದವೆ ಕೈಲಾಸವಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
(ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-460/ವಚನ ಸಂಖ್ಯೆ-1468)

ಕೈಲಾಸವೆಂಬುದು ಹಾಳು ಬೆಟ್ಟ ಆಲ್ಲಿರುವ ಮುನಿಗಳು ಜೀವಗಳ್ಳರು, ಅಲ್ಲಿರುವ ಶಿವನೊಬ್ಬ ಹೆಡ್ಡ. ಬಸವಣ್ಣನವರು ಆಚಾರವೇ ಸ್ವರ್ಗ, ಅನಾಚಾರವೇ ನರಕ. ಆಯ್ಯಾ ಎಂದರೆ ಸ್ವರ್ಗ ಎಲವೋ ಎಂದರೆ ನರಕ ಎನ್ನುವರು. ಶಿವ ಜಗದಗಲ, ಮುಗಿಲಗಲ ಎತ್ತೆತ್ತ ನೋಡಿದರೂ ಅತ್ತ ಶಿ ಕಾಣುತ್ತಾನೆ.

ಬಸವಣ್ಣನವರ ವಚನಗಳಲ್ಲಿ ವಿಶೇಷವಾಗಿ ಕಂಡುಬರುವ ಮತ್ತೊಂದು ಪ್ರಧಾನ ಅಂಶ ಭಕ್ತಿಪ್ರತಿಪಾದನೆ. “ಭಕ್ತಿಭಂಡಾರಿ” ಎಂಬ ವಿಶೇಷಣಕ್ಕೆ ಇವರ ವಚನಗಳು ಸಮರ್ಥವಾಗಿ ಪೋಷಣೆ ನೀಡುತ್ತವೆ. ನಾಮಸಂಕೀರ್ತನೆಯ ಹಿರಿಮೆ, ಸರ್ವಸಮರ್ಪಣೆಯ ಭಾವ, ಸತಿಪತಿ ಭಾವ ಹೀಗೆ ಭಕ್ತಿಯ ಆಚರಣೆಯ ವಿವಿಧ ಮುಖಗಳನ್ನು ಅವುಗಳಲ್ಲಿ ಕಾಣುತ್ತೇವೆ. ಅವುಗಳಲ್ಲಿ ಭಾವದ ತೀವ್ರತೆಯಿದೆ, ಆಳವಾದ ಅನುಭವದ ಪ್ರತಿಫಲನವಿದೆ.

ಉದಕದೊಳಗೆ ಬಯ್ಚಿಟ್ಟ ಬಯ್ಕೆಯ ಕಿಚ್ಚಿನಂತಿದ್ದಿತ್ತು.
ಸಸಿಯೊಳಗಣ ರಸದ ರುಚಿಯಂತಿದ್ದಿತ್ತು.
ನನೆಯೊಳಗಣ ಪರಿಮಳದಂತೆ ಇದ್ದಿತ್ತು.
ಕೂಡಲಸಂಗಮದೇವ ಕನ್ನೆಯ ಸ್ನೇಹದಂತಿದ್ದಿತ್ತು.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-5/ವಚನ ಸಂಖ್ಯೆ-1)

ಉದಕದೊಳಗೆ ಬೈಚಿಟ್ಟ ಬಯಕೆಯ ಕಿಚ್ಚಿನಂತಿದ್ದಿತ್ತು. ಸಸಿಯೊಳಗಣ ರಸದ ರುಚಿಯಂತೆ ಇದ್ದಿತ್ತು. ನನೆಯೊಳಗಣ ಪರಿಮಳದಂತೆ ಇದ್ದಿತ್ತು ಕೂಡಲಸಂಗಮದೇವರ ನಿಲವು ಕನ್ನೆಯ ಸ್ನೇಹದಂತಿದ್ದಿತ್ತು ಎಂದು ಶಿವನನ್ನು ಕುರಿತು ತಮ್ಮ ದರ್ಶನಾನುಭವವನ್ನು ವರ್ಣಿಸುತ್ತಾರೆ.

ಪಾರಿಭಾಷಿಕ ಶಬ್ದದಲ್ಲಿ ಹುಡುಕಿದರೆ ಶಿವ ಎಂದರೆ ಮಂಗಲ, ಶುಭ, ಪವಿತ್ರ ಎಂಬ ಅರ್ಥಗಳು ನಮಗೆ ಸಿಗುತ್ತವೆ. ಆಧ್ಯಾತ್ಮಿಕವಾಗಿ ನೋಡಿದರೆ ಶಿವ ಎಂದರೆ ಚೈತನ್ಯ, ಪ್ರಣವ ಸ್ವರೂಪ, ಅನಿಕೇತನ ಎನ್ನುವ ಅರ್ಥಗಳೂ ಇವೆ. ಶಿವ ಎನ್ನುವ ತತ್ವ ಸಿದ್ಧಾಂತವನ್ನು ವಚನಗಳಲ್ಲಿ ನೂರಾರು ರೂಪಗಳಲ್ಲಿ ಬಸವಣ್ಣನವರು ಹಾಗೂ ಬಸವಾದಿ ಶರಣರು ವ್ಯಕ್ತಪಡಿಸಿರುವುದನ್ನು ಕಾಣಬಹುದು. ಅದರಲ್ಲಿ ಒಂದು ವಚನ ಈ ಲೇಖನದ ಕೇಂದ್ರಬಿಂದು.

ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ,
ಪಾತಾಳದಿಂದ ಅತ್ತತ್ತ ನಿಮ್ಮ ಶ್ರೀಚರಣ,
ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮುಕುಟ,
ಅಗಮ್ಯ ಅಗೋಚರ ಅಪ್ರತಿಮ ಲಿಂಗವೇ.
ಕೂಡಲಸಂಗಮದೇವಯ್ಯಾ,
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-202/ವಚನ ಸಂಖ್ಯೆ-744)

ಶರಣರೊಬ್ಬರು ಲೋಕ ಸಂಚಾರ ಮಾಡುತ್ತಾ ಕಲ್ಯಾಣದ ಮಹಾಮಾರ್ಗದಲ್ಲಿ ನಡೆದು ಹೊರಟಿದ್ದರು. ಅನೇಕರು ಅವರನ್ನು ನೋಡಿ ಮಾತಾಡಿಸುತ್ತಾ ತಮ್ಮ ಕಷ್ಟ-ಸುಖಗಳನ್ನು ಹೇಳಿಕೊಳ್ಳುತ್ತಿದ್ದರು. ಒಬ್ಬ ವ್ಯಕ್ತಿ ಶರಣರನ್ನು ಉದ್ದೇಶಿಸಿ “ತಾವು ಈ ಲೋಕಸಂಚಾರ ಏಕೆ ಕೈಗೊಂಡಿರುವಿರಿ” ಅಂತ ಕೇಳತಾರೆ. ಅವರು ನಗುತ್ತ ಅವರು ವಿಡಂಬನಾತ್ಮಕವಾಗಿ “ತಮ್ಮಾ ಜನರನ್ನು ಮಲಗಿಸುವುದಕ್ಕೆ, ಮತ್ತೆ ಎಚ್ಚರ ಮಾಡುವುದಕ್ಕೆ” ಎಂದು ಉತ್ತರಿಸಿದರು.

ಆಶ್ಚರ್ಯಚಕಿತರಾದ ಜನರು “ಸ್ವಾಮಿ, ಜನರನ್ನು ಎಚ್ಚರ ಮಾಡುವುದೇನೊ ಸರಿ. ಆದರೆ ಮಲಗಿಸುವುದು ಅಂತೀರಲ್ಲಾ ಯಾಕೆ?” ಅಂತ ಕೇಳತಾರೆ. ಆಗ ಅವರು:

“ಈ ಜಗತ್ತಿನಲ್ಲಿ ನಿದ್ರೆ ಹತ್ತಿದವರನ್ನು ಎಚ್ಚರಿಸಬಹುದು, ಆದರೆ ನಿದ್ರೆ ಹತ್ತಿದಂತೆ ನಾಟಕ ಮಾಡುವವರನ್ನು ಎಚ್ಚರಿಸಲಾಗದು, ಅಂಥ ಜನರು ಅಜ್ಞಾನ, ಅವಿವೇಕ, ಅಂಧ ಶ್ರದ್ಧೆ, ಅರಾಜಕತೆ ಬಿತ್ತುತ್ತಾರೆ. ಅಂಥವರು ವೇಶ ಡಂಬಕರು. ಇಲ್ಲಿ ಎಚ್ಚರಾಗಿ ಏನು ಪ್ರಯೋಜನ ಹೇಳಿ? ಅವರು ನಿರಂತರ ಮಲಗಿದರೆ ನಾಡಿಗೇ ಒಳ್ಳೆಯದು. ಯಾರು ದೇಶ, ಭಾಷೆ, ನಾಡು, ಸುಜ್ಞಾನ, ಸೇವೆ, ಶಿವಸಂಸ್ಕೃತಿ ಬಿತ್ತುತ್ತಾರೋ ಅಂಥವರು ನಿತ್ಯ ಜಾಗೃತರಾಗಿರಬೇಕು, ಮತ್ತೆ ಎಚ್ಚರವಾಗಬೇಕು. ಅಂಥವರನ್ನು ಎಚ್ಚರಿಸುವುದೇ ನನ್ನ ಕಾಯಕ” ಎಂದರು.

ಹಾಗಾಗಿ ಶಿವ ಎಂದರೆ ಮತ್ತೆ ಮತ್ತೆ ನಮ್ಮೊಳಗೆ ಎಚ್ಚರವಾಗುವುದು. ನಮ್ಮ ಅಂತರಂಗದಲ್ಲಿನ ಅರಿವನ್ನು ಜಾಗೃತಗೊಳಿಸುವುದು. ನಮ್ಮಲ್ಲಿರುವ ಜಡತ್ವ, ಅಜ್ಞಾನ, ಅವಿವೇಕ, ಅಂಧಶ್ರದ್ಧೆಯಿಂದ ನಾವುಗಳು ಎಚ್ಚೆತ್ತು ಸಹನೆ, ಸನ್ನಡತೆ, ಕಾಯಕ, ದಾಸೋಹ, ಸ್ನೇಹ, ಬಂಧುತ್ವ, ವಿಶ್ವಪ್ರಜ್ಞೆಗಳ ಮೂಲಕ ನಾವು ಇಂದು ಶಿವನ ಅರಿವಿನ ಜಾಗೃತಿಯ ಬೆಳಕು ಮೂಡಿಸಿಕೊಳ್ಳಬೇಕು.

ಶಿವಪಥವಲ್ಲದೆ ಬೇರೆ ಪಥವನ್ನು ಅನುಸರಿಸದೆ ಅಂಗ ಅರಿವು ಆಚಾರಗಳಲ್ಲಿ ಶಿವಸಂಸ್ಕೃತಿಯನ್ನು ತುಂಬಿಕೊಂಡು ನಾವು ಶಿವಾಯತರಾಗಬೇಕು. ಎಲ್ಲ ಚೇತನಗಳ ಮೂಲ ಶಕ್ತಿಯೇ ಶಿವ. ಎಲ್ಲ ಸಂಸ್ಕೃತಿಗಳ ಮೂಲ ದ್ರವ್ಯವೇ ಶಿವ ಸಂಸ್ಕೃತಿ. ಈ ಮೂಲ ತತ್ವದ ಶಿವ ಸಿದ್ಧಾಂತವೇ ನಮ್ಮೆಲ್ಲರ ಉಸಿರಾಗಬೇಕು. ಹೌದು, ನಾವು ಮಾಡುವ ಆಚಾರ, ವಿಚಾರಗಳು, ಕೇವಲ ತೋರಿಕೆಯ ತೊರು ದೀಪಗಳಾಗದೆ ಬಾಳ ಬದುಕಿಗೆ ಮಾರ್ಗ ತೋರುವ ನಿಜದ ನೆಲೆಯಾಗಬೇಕು, ಬಾಳ ಕಲೆಯಾಗಬೇಕು.

ಸೋಮೇಶ್‌ ಕುಲಕರ್ಣಿ: ನಮ್ಮ ಹಿರಿಯರು ಕೂಡ ಈ ಜಗತ್ತಿನಲ್ಲಿರುವ ಮೂರ್ತಿ ಪೂಜೆಯ ರೂಪವೋ ಇನ್ಯಾವುದು ಆರಾಧನೆ ಪದ್ಧತಿಯೋ ಅದೇ ರೀತಿಯ ಸಂಕೇತದಿಂದ ಬಂದಿದ್ದು. ಆ ಭಗವಂತನ ಈ ಶ್ರೇಷ್ಠವಾಗಿರತಕಂತ ನಿರಾಕಾರವನ್ನು ಆರಾಧನೆ ಮಾಡತಕಂತ ಸಂಕೇತವಾಗಿರುವ ಅದು ಕೂಡ ಆತನನ್ನು ಆರಾಧಿಸುವಷ್ಟೇ ಶ್ರದ್ಧೆಗೊಳಗಾಗುವಂತದ್ದು ಗೌರವಕ್ಕೆ ಒಳಗಾಗುವಂತದ್ದು. ಹಾಗಾಗಿ ನಮ್ಮಲ್ಲಿ ಮೂರ್ತಿ ಪೂಜನೆ ಬಂದಿದ್ದು. ಹಾಗಾದರೆ ಬಸವಣ್ಣವರು ಆ ರೀತಿಯ ಪೌರಾಣಿಕ ನಂಬಿಕೆಯ ವಿಚಾರಗಳನ್ನು ಒಪ್ಪೆ ಇಲ್ವಾ. ಬಸವಣ್ಣವರು ಆ ರೀತಿಯ ಅಭಿಪ್ರಾಯವನ್ನು ಹೇಳೆ ಇಲ್ವಾ ಅನ್ನೋದನ್ನ ನೋಡೋದಾದರೆ, ಸ್ವತಃ ಬಸವಣ್ಣವರು ತಮ್ಮ ಒಂದು ವಚನದಲ್ಲಿ ಹೀಗೆ ಹೇಳ್ತಾರೆ “ಕಾಳಿಯ ಕಂಕಾಳದಿಂದ ಮುನ್ನ ತ್ರಿಪುರ ಸಂಹಾರದಿಂದ ಮುನ್ನ” ಅಂದರೆ ಶಿವ ನಮ್ಮ ಪೌರಾಣಿಕ ಶಿವ ತ್ರಿಪುರನ ವಧೆ ಮಾಡಿದ ಅನ್ನೋದು ಜನಪ್ರಿಯವಾದ ಸತ್ಯ. ಹಾಗಾದರೆ ಬಸವಣ್ಣವರು ತಮ್ಮ ವಚನದಲ್ಲಿ ಹೇಳ್ತಾರೆ, “ತ್ರಿಪುರ ಸಂಹಾರಕ್ಕಿಂತಲೂ ಮುಂಚೆ ಕಾಳಿಯ ಕಂಕಾಳದಕ್ಕಿಂತಲೂ ಮುಂಚೆ ಹರಿವಿರಂಚಿಗಳಿಂತ ಹರಿವಿರಂಚಿಗಳಿಂದ ಮುನ್ನ” ಅದಕ್ಕಿಂತ ಮುಂಚೆ “ಉಮೆಯ ಕಲ್ಯಾಣದಿಂದ ಮುನ್ನ” ಅಂದ್ರೆ ಯಾವ ಉಮೆಯನ್ನ ಪಾರ್ವತಿಯನ್ನ ನೀನು ಮದುವೆ ಆದಿಯೋ ಅದಕ್ಕಿಂತ ಮುಂಚೆ “ಮುನ್ನ ಮುನ್ನ ಮುನ್ನ” ಒಂದು ಸಲಿ ಹೇಳಿಲ್ಲ ಮೂರು ಸಲಿ ಮುನ್ನ ಮುನ್ನ ಮುನ್ನ ಅಂದಿಂಗ ಗೆಳೆಯ ನೀನು. ಅವತ್ತೇ ನಿನ್ನ ಫ್ರೆಂಡ್ ಬಸವಣ್ಣ ಹೇಳೋದು. “ಅಂದಿಂಗೆ ಗೆಳೆಯ ನೀನು ಹಳೆಯ ನಾನು” ನಿನಗೆ ಹಳೆ ಫ್ರೆಂಡ್. “ಮಹಾದಾನಿ ಕೂಡಲ ಸಂಗಮದೇವ” ಆ ಕೂಡಲ ಸಂಗಮದೇವನನ್ನ ಪೌರಾಣಿಕ ಶಿವನಾಗಿ ಬಸವಣ್ಣ ಒಪ್ಪಿಲ್ವಾ. ಇನ್ನು ಸಾಕಷ್ಟು ವಚನ ಹೇಳಬಹುದು. ಹಾಗಾಗಿ ಬಸವಣ್ಣವರು ಆ ರೀತಿ ಅಭಿಪ್ರಾಯವನ್ನು ಹೇಳಿದ್ರು ಅನ್ನೋದು ಇದು ವಾಸ್ತವ ಸತ್ಯಕ್ಕೆ ಸುಳ್ಳು ಅನ್ನೋದಕ್ಕೆ ಇದು ಸ್ಪಷ್ಟವಾದ ಉದಾಹರಣೆ. ವಾಸ್ತವ ಸತ್ಯಕ್ಕೆ ವಿರುದ್ಧವಾದದ್ದು ಇದು ಅನ್ನೋದು ಸ್ಪಷ್ಟ ಆಗುತ್ತೆ.

ಕಾಳಿಯ ಕಂಕಾಳದಿಂದ ಮುನ್ನ,
ತ್ರಿಪುರಸಂಹಾರದಿಂದ ಮುನ್ನ,
ಹರಿ ವಿರಿಂಚಿಗಳಿಂದ ಮುನ್ನ,
ಉಮೆಯ ಕಲ್ಯಾಣದಿಂದ ಮುನ್ನ,
ಮುನ್ನ ಮುನ್ನ ಮುನ್ನ-
ಅಂದಿಂಗೆಳೆಯ ನೀನು, ಹಳೆಯ ನಾನು
ಮಹಾದಾನಿ ಕೂಡಲಸಂಗಮದೇವಾ. ವಚನ ಸಂ. 2

ಡಾ. ವಿಜಯಕುಮಾರ ಕಮ್ಮಾರ ಅವರ ಉತ್ತರ: ಅರೆಬೆಂದ ಎಡಬಿಡಂಗಿ ಸಾಹಿತಿ ವಚನವನ್ನು ಎಷ್ಟು ಅಧ್ವಾನ ಮಾಡಬಹುದು ಎನ್ನುವುದಕ್ಕೆ ಈ ದರಿದ್ರ ಸೋಮೇಶ ಕುಲಕರ್ಣಿಯೇ ಸಾಕ್ಷಿ. “ಅಂದಿಂಗೆಳೆಯ” ಎನ್ನುವ ಶಬ್ದವನ್ನು ಆ ಕಾಲದಲ್ಲಿಯೇ ಗೆಳೆಯ ಅಂತ ಅರ್ಥೈಸಿದರೆ ಆಗುವ ಅನಾಹುತ ಪ್ರಳಯದಂತೆ. ಈ ಶಬ್ದವನ್ನು ವ್ಯಾಕರಣಾತ್ಮಕವಾಗಿ ಬಿಡಿಸಿದರೆ “ಅಂದಿಂಗೆ ಎಳೆಯ ನೀನು” ಎಂದು ಅರ್ಥ. ಇಷ್ಟು ಸರಳವಿರುವ ಸಂಧಿಯನ್ನು ತನ್ನ ಮೂಗಿನ ನೇರಕ್ಕೆ ಎಳೆದುಕೊಂಡು Friend ಅಂತಾ ಹೇಳತಾನಲ್ಲಾ ಈತ ಹೊಟ್ಟೆಗೆ ಏನು ತಿಂತಾನೆ ಅನ್ನೋದೇ Million Dollar Question. ಹಾಗಾಗಿ ಈ ವಚನದ ಅಲೌಕಿಕ ವಿಶ್ಲೇಷಣೆ ಮಾಡೋಣ.

ಬಸವಣ್ಣನವರ ಈ ವಚನವು ಜೀವ ಮತ್ತು ಶಿವರ ಅಂದರೆ ಜೀವಾತ್ಮ ಮತ್ತು ಪರಮಾತ್ಮನ ನಡುವಿನ ಅನಾದಿ ಹಾಗೂ ಅವಿನಾಭಾವ ಸಂಬಂಧವನ್ನು ಅತ್ಯಂತ ಆಳವಾದ ತಾತ್ವಿಕ ಹಿನ್ನೆಲೆಯಲ್ಲಿ ವಿವರಿಸುತ್ತದೆ.

ಈ ವಚನದಲ್ಲಿ “ಮುನ್ನ” (ಮೊದಲು) ಎಂಬ ಪದವು ಪದೇ ಪದೇ ಬಳಕೆಯಾಗಿದೆ. ಕಾಳಿಯ ಉಗಮಕ್ಕಿಂತಲೂ ಮೊದಲು, ತ್ರಿಪುರ ಸಂಹಾರದಂತಹ ಪೌರಾಣಿಕ ಘಟನೆಗಳು ನಡೆಯುವುದಕ್ಕಿಂತಲೂ ಮೊದಲು, ಸೃಷ್ಟಿಕರ್ತರಾದ ಹರಿ (ವಿಷ್ಣು) ಮತ್ತು ವಿರಿಂಚಿ (ಬ್ರಹ್ಮ) ಉದಯಿಸುವುದಕ್ಕಿಂತಲೂ ಮೊದಲು ಹಾಗೂ ಉಮೆ (ಪಾರ್ವತಿ) ಯ ಮದುವೆಗಿಂತಲೂ ಮೊದಲೇ ಜೀವಾತ್ಮ ಮತ್ತು ಪರಮಾತ್ಮನ ಬಾಂಧವ್ಯವಿತ್ತು ಎಂದು ಹೇಳುವ ಮೂಲಕ, ದೇವರು ಮತ್ತು ಭಕ್ತನ ಸಂಬಂಧವು ಕಾಲಾತೀತವಾದುದು ಎನ್ನುವುದನ್ನು ನಿರೂಪಿಸಲಾಗಿದೆ. ಇಲ್ಲಿ ಮತ್ತೆ ಮತ್ತೆ ನಾನು ಒತ್ತಿ ಒತ್ತಿ ಹೇಳುವುದೆಂದರೆ ಎಲ್ಲ ಪುರಾಣ ಪುಣ್ಯಕಥೆಗಳನ್ನು ಬಸವಣ್ಣನವರು ನಿರಾಕರಿಸುವ ವಿಡಂಬನಾತ್ಮಕ ವಿವರಣೆ ಈ ವಚನದಲ್ಲಿದೆ. ವೀರಶೈವರು ಇದನ್ನೇ ತಿರುಚಿ ಬಸವಣ್ಣನವರು ಬ್ರಹ್ಮ, ವಿಷ್ಣು, ಮಹೇಶ್ವರನೆಂಬುದನ್ನು ಒಪ್ಪಿದ್ದಾರೆ ಎಂದು ಹೇಳುತ್ತಾರೆ ಎನ್ನುವ ಉದ್ದೇಶಕ್ಕಾಗಿ ಇದನ್ನು ಉಲ್ಲೇಖಿಸಿದ್ದೇನೆ.

ಬಸವಣ್ಣನವರು ದೇವರನ್ನು “ಎಳೆಯ ನೀನು” ಎಂದು ಕರೆಯುತ್ತಾರೆ. ಇದರರ್ಥ ಅಂತರಂಗದ ಅರಿವಿನ ಶಿವನು ಯಾವಾಗಲೂ ವಿನೂತನ ಮತ್ತು ನಿತ್ಯ ನಿರಂಜನ. ಅದೇ ರೀತಿ ತಮ್ಮನ್ನು “ಹಳೆಯ ನಾನು” ಎಂದು ಕರೆದುಕೊಳ್ಳುವ ಮೂಲಕ, ಭಕ್ತನು ಎಲ್ಲ ಕಾಲಕ್ಕೂ ಪರಶಿವನನ್ನೇ ಅಂದರೇ ಅಂತರಂಗದ ಅರಿವನ್ನೇ ನಂಬಿದ್ದಾನೆ ಅಥವಾ ಈ ಅಧ್ಯಾತ್ಮಿಕ ಸಂಬಂಧವು ಅನಾದಿಕಾಲದಿಂದಲೂ ಬೆಳೆದು ಬಂದಿದೆ ಎಂಬ ವಿನಯದ ಭಾವವನ್ನು ತೋರುತ್ತಾರೆ.

ಕೂಡಲಸಂಗಮದೇವನನ್ನು ಇಲ್ಲಿ “ಮಹಾದಾನಿ” ಎಂದು ಕರೆದಿದ್ದಾರೆ. ಲೌಕಿಕ ದಾನಗಳಿಗಿಂತ ಮಿಗಿಲಾಗಿ, ತನ್ನನ್ನು ತಾನು ಭಕ್ತನಿಗೆ ಒಪ್ಪಿಸಿಕೊಡುವ ಮತ್ತು ಈ ಅನಾದಿ ಸಂಬಂಧವನ್ನು ನೆನಪಿಸಿಕೊಡುವ ದಿವ್ಯ ಜ್ಞಾನವನ್ನು ಶಿವ ಅಂದರೆ ಅಂತರಂಗದ ಅರಿವು ನೀಡುವುದರಿಂದ ಆತನು ಮಹಾದಾನಿಯಾಗಿದ್ದಾನೆ.

ಒಟ್ಟಾರೆ ಈ ವಚನದ ಅಲೌಕಿಕ ಅರ್ಥವೆಂದರೆ, ಮನುಷ್ಯ ಮತ್ತು ದೇವರ ಸಂಬಂಧವು ಕಾಲಾತೀತವಾದದ್ದು ಅಥವಾ ಯಾವುದೋ ಒಂದು ಪೌರಾಣಿಕ ಘಟನೆಯಿಂದ ಆರಂಭವಾದುದಲ್ಲ. ಭಕ್ತಿಯು ಕೇವಲ ಕ್ರಿಯೆಯಲ್ಲ, ಅದು ಆತ್ಮವು ತನ್ನ ಮೂಲ ನೆಲೆಗೆ ಮರಳಿ ಹೋಗುವ ಹಂಬಲ ಮತ್ತು ಆ ಮೂಲದೊಂದಿಗೆ ತನಗಿರುವ ಶಾಶ್ವತ ಸಂಬಂಧದ ಗುರುತಿಸುವಿಕೆಯಾಗಿದೆ.

ಬಸವಣ್ಣನವರ ಈ ವಚನದಲ್ಲಿ ‘ಮುನ್ನ ಮುನ್ನ ಮುನ್ನ’ ಎಂದು ಪದೇ ಪದೇ ಹೇಳುವ ಉದ್ದೇಶವು ಭಕ್ತ ಮತ್ತು ಭಗವಂತನ ನಡುವಿನ ಬಾಂಧವ್ಯದ ಅನಾದಿತ್ವವನ್ನು (Extremely Ancient) ಮತ್ತು ಅದರ ಆಳವನ್ನು ಒತ್ತಿ ಹೇಳುವುದಾಗಿದೆ. ಇದರ “ಮುನ್ನ” ಎಂದರೆ “ಮೊದಲು” ಎಂದು ಅರ್ಥ. ಪೌರಾಣಿಕವಾಗಿ ಅತ್ಯಂತ ಹಳೆಯದು ಎಂದು ಭಾವಿಸಲಾದ ಕಾಳಿಯ ಉಗಮ, ತ್ರಿಪುರ ಸಂಹಾರ, ಸೃಷ್ಟಿಕರ್ತರಾದ ಹರಿ-ವಿರಿಂಚಿಗಳ ಉದಯ ಹಾಗೂ ಪಾರ್ವತಿಯ ಕಲ್ಯಾಣಕ್ಕಿಂತಲೂ ಮೊದಲೇ ಈ ಸಂಬಂಧವಿತ್ತು ಎಂದು ಹೇಳುವ ಮೂಲಕ, ಇದು ಯಾವುದೇ ಲೌಕಿಕ ಕಾಲಕ್ಕೆ ಮೀರಿದ ಅತೀತ ಸಂಬಂಧ ಎಂಬುದನ್ನು ಇಲ್ಲಿ ಸ್ಪಷ್ಟಪಡಿಸಲಾಗಿದೆ.

ಮಿಸ್ಟರ್‌ ಸೋಮೇಶ ಕುಲಕರ್ಣಿಯವರೇ ವಚನಗಳ ಬೆಡಗಿನ ಭಾಷೆ ನಿಮಗೆ ಅರ್ಥವಾಗುವುದಿಲ್ಲ ಅಂತ ಮೇಲ್ನೋಟಕ್ಕೆ ಭಾಸವಾಗುತ್ತಿದೆ. ಕೇವಲ ಲೌಕಿಕ ಅರ್ಥವನ್ನು ಹೆಕ್ಕಿ ಹೆಕ್ಕಿ ತೆಗೆದು ಬಸವಾದಿ ಶರಣರ ವಚನಗಳನ್ನು ತಿರುಚಿ ತಿರುಚಿ ಹಾಳುಗೆಡುವುವತ್ತ ನಿಮ್ಮ ಚಿಂತನೆ ಸಾಗಿದೆ ಎನ್ನುವುದು ಸೂರ್ಯ ಚಂದ್ರರಷ್ಟೇ ಸತ್ಯವಾದದ್ದು. ಆದಷ್ಟು ಬೇಗ ನೀವು ವಚನ ಸಾಹಿತ್ಯದಲ್ಲಿ ಅಲೌಕಿಕ ವಿಚಾರಗಳನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡಿ. ಮುಂದಿನ ದಿನಮಾನಗಳಲ್ಲಿ ನಿಮ್ಮ ಬುದ್ಧಿಶಕ್ತಿಯು ವಿಸ್ತಾರವಾಗಲಿ ಅಂತ ಹಾರೈಸುತ್ತಾ ಈ ಲೇಖನಕ್ಕೆ ವಿರಾಮವನ್ನು ಹೇಳುತ್ತೇನೆ.

ಶರಣು ಶರಣಾರ್ಥಿಗಳು …

ಸಂಗ್ರಹ ಮತ್ತು ಲೇಖನ:
ಡಾ. ವಿಜಯಕುಮಾರ ಕಮ್ಮಾರ
ತುಮಕೂರು – 572 104
ಮೋಬೈಲ್‌ ನಂ: 97413 57132.
ಈ-ಮೇಲ್‌: vijikammar@gmail.com

 ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
 ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ:
o ಮೋಬೈಲ್ ನಂ. 9741 357 132
o e-Mail ID: info@vachanamandara.in / admin@vachanamandara.in

Leave a Reply