![]()

ಗುರುವೆಂಬೆನೆ ಹಲಬರ ಮಗ,
ಲಿಂಗವೆಂಬೆನೆ ಕಲುಕುಟಿಕನ ಮಗ,
ಪ್ರಸಾದವೆಂಬೆನೆ ಒಕ್ಕಲಿಗನ ಮಗ,
ಪಾದೋದಕವೆಂಬೆನೆ ದೇವೇಂದ್ರನ ಮಗ,
ಈಸುವ ಹಿಡಿಯಲೂ ಇಲ್ಲ, ಬಿಡಲೂ ಇಲ್ಲ,
ತನ್ನೊಳಗ ನೋಡೆಂದನಂಬಿಗ ಚೌಡಯ್ಯ.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-55/ವಚನ ಸಂಖ್ಯೆ-137)
ದೋಣಿಯಿಂದ ನದಿಯನ್ನು ದಾಟಿಸಿದ ದಿಟ್ಟ ಗಣಾಚಾರಿ ಶರಣ ಅಂಬಿಗರ ಚೌಡಯ್ಯನವರು ತಮ್ಮ ವಚನಗಳ ಮೂಲಕ ಅಜ್ಞಾನ ಮತ್ತು ಅಂಧಶ್ರದ್ಧೆಯ ಸಾಗರದಿಂದ ಜನರನ್ನು ದಾಟಿಸಲು ಪ್ರಯತ್ನಿಸಿದ ಮಹಾನ್ ಶಿವಶರಣರು.
ಶರಣ ಅಂಬಿಗರ ಚೌಡಯ್ಯನವರು 12 ನೇ ಶತಮಾನದ ಪ್ರಮುಖ ಶಿವಶರಣರು ಹಾಗೂ ವಚನಕಾರರು. ಮೈಲಾರ ಶಾಸನದ ಪ್ರಕಾರ ಮತ್ತು ಶಿಶುನಾಳ ಶರೀಫರು ಬರೆದಂಥ “ಶಿವದೇವ ವಿಜಯಂ” ಎಂಬ ಗ್ರಂಥದಲ್ಲಿ ಉಲ್ಲೇಖವಾದಂತೆ ಹಾವೇರಿ ಜಿಲ್ಲೆಯ ರಾಣಿಬೆನ್ನೂರ ತಾಲೂಕಿನ ಶಿವಪುರ (ಈಗಿನ ಚೌಡಯ್ಯದಾನಪುರ) ಅಂಬಿಗರ ಚೌಡಯ್ಯನವರ ಜನ್ಮಸ್ಥಳ. ಇವರ ತಂದೆ ವಿರೂಪಾಕ್ಷ, ತಾಯಿ ಪಂಪಾದೇವಿ. ಇವರ ಮೂಲ ಹೆಸರು ಚೌಡೇಶ. ಚೌಡಯ್ಯನವರಿಗೆ “ಪುರವಂತ” ಎಂಬ ಹೆಸರಿನ ಮಗನಿದ್ದನು ಎನ್ನಲಾಗಿದೆ. ಇವರ ಧರ್ಮಗುರು ಮತ್ತು ಆಧ್ಯಾತ್ಮ ಗುರುಗಳು ಉದ್ದಾಲಕ ಅಥವಾ ಶಿವದೇವಮುನಿ. ಅವರ ಗೌರವಾರ್ಥಕ್ಕಾಗಿಯೇ ಈ ಗ್ರಾಮಕ್ಕೆ ಶಿವಪುರವೆಂಬ ಹೆಸರನ್ನು ಅಂಬಿಗರ ಚೌಡಯ್ಯನವರು ನಾಮಕರಣ ಮಾಡಿದ್ದರು ಎನ್ನಲಾಗಿದೆ. ವೃತ್ತಿಯಿಂದ ಇವರು ಅಂಬಿಗರು ಅಂದರೆ ದೋಣಿ ನಡೆಸುವವರು. ಇವರು ಬಸವಣ್ಣನವರ ಸಮಕಾಲೀನರಾಗಿದ್ದು, ಅನುಭವ ಮಂಟಪದ ಪ್ರಮುಖ ಶರಣರಲ್ಲಿ ಒಬ್ಬರಾಗಿದ್ದರು. ತಮ್ಮ ವೃತ್ತಿಯ ಹೆಸರನ್ನೇ ಅಂಕಿತನಾಮವನ್ನಾಗಿ ಮಾಡಿಕೊಂಡು “ಅಂಬಿಗರ ಚೌಡಯ್ಯ” ಎಂಬ ಹೆಸರಿನಲ್ಲಿ ವಚನಗಳನ್ನು ರಚಿಸಿದರು.
ಅಂಬಿಗರ ಚೌಡಯ್ಯನವರ ವಚನಗಳ ಪ್ರಮುಖ ಲಕ್ಷಣವೆಂದರೆ ಅವರ ನೇರ, ನಿರ್ಭೀತ ಮತ್ತು ಕಟುವಾದ ನುಡಿ. ಸಮಾಜದಲ್ಲಿದ್ದ ಜಾತಿಭೇದ, ಅಂಧಶ್ರದ್ಧೆ, ಢಾಂಭಿಕತೆ, ಅನ್ಯಾಯ ಮತ್ತು ಕಪಟಾಚಾರಗಳನ್ನು ಅವರು ಯಾವುದೇ ಮುಲಾಜಿಲ್ಲದೆ ಟೀಕಿಸಿದರು. ಅವರ ವಚನಗಳಲ್ಲಿ ಶರಣನ ಭಕ್ತಿ ಮಾತ್ರವಲ್ಲದೆ, ಸಮಾಜ ಸುಧಾರಣೆಯ ತತ್ವಗಳೂ ನಿರೂಪಣೆಯಾಗಿವೆ.
ಗ್ರಾಮೀಣ ಸೊಗಡಿನ ಜೊತೆಗೆ ವಿಚಾರದಲ್ಲಿ ದಿಟ್ಟತನ ಮತ್ತು ವಿಮರ್ಶೆಯಲ್ಲಿ ನಿರ್ದಾಕ್ಷಿಣ್ಯತೆ ಇವರ ವಚನಗಳ ವೈಶಿಷ್ಟ್ಯವಾಗಿದೆ. ಆದ್ದರಿಂದ ಕನ್ನಡ ವಚನ ಸಾಹಿತ್ಯದಲ್ಲಿ ಶರಣ ಅಂಬಿಗರ ಚೌಡಯ್ಯನವರು ಕೆಚ್ಚೆದೆಯ, ಕ್ರಾಂತಿಕಾರಿ ಮತ್ತು ಸಮಾಜಮುಖಿ ವಚನಕಾರರಾಗಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ.
ಪ್ರಸ್ತುತ ಶರಣ ಅಂಬಿಗರ ಚೌಡಯ್ಯನವರ ಈ ವಚನವು ಕೇವಲ ಜಾತಿ ವ್ಯವಸ್ಥೆಯ ವಿಮರ್ಶೆಯಲ್ಲ. ಅದು ಮಾನವನ ಮನಸ್ಸಿನ ಆಳದಲ್ಲಿರುವ ಪೂರ್ವಾಗ್ರಹ (Prejudice), ಗುರುತಿನ ಮೋಹ (Identity Bias), ಮತ್ತು ಅಹಂಕಾರದ (Ego) ಗಳ ಮನೋವಿಜ್ಞಾನವನ್ನೂ ಕೂಡ ಬಿಚ್ಚಿಡುತ್ತದೆ. ಸಮಾಜದಲ್ಲಿ ಬೆಳೆದು ಬಂದ ಜಾತಿ, ಕುಲ, ವರ್ಗದ ಅಹಂಕಾರವನ್ನು ತೀವ್ರವಾಗಿ ಪ್ರಶ್ನಿಸುತ್ತಾರೆ. ಗುರು, ಲಿಂಗ, ಪ್ರಸಾದ, ಪಾದೋದಕ ಮುಂತಾದ ಪವಿತ್ರ ಆಧ್ಯಾತ್ಮಿಕ ತತ್ವಗಳಿಗೂ ಜಾತಿಯ ಗುರುತು ಅಂಟಿಸಿ ನೋಡುವ ಮಾನವರ ಮನೋವಿಕಾರವನ್ನು ಖಂಡಿಸುತ್ತಾರೆ.
12 ನೇ ಶತಮಾನದಲ್ಲಿ ಸಮಾಜದಲ್ಲಿ ಜಾತಿ ಆಧಾರಿತ ಅಸಮಾನತೆ ತೀವ್ರವಾಗಿತ್ತು. ಅಂದು ಜ್ಞಾನಕ್ಕೆ ಜಾತಿ, ದೇವರಿಗೆ ಜಾತಿ, ಪೂಜೆಗೆ ಜಾತಿ, ಆಹಾರಕ್ಕೆ ಜಾತಿ ಎನ್ನುವ ಪರಿಸ್ಥಿತಿ ಇತ್ತು ಎನ್ನುವುದು ಇತಿಹಾಸದ ಪುಟಗಳಿಂದ ನಮಗೆ ತಿಳಿಯುತ್ತದೆ. ಈ ವಚನವು ಆ ಜಿಡ್ಡುಗಟ್ಟಿದ ವ್ಯವಸ್ಥೆಯ ವಿರುದ್ಧದ ಪ್ರಬಲ ಘೋಷಣೆಯಾಗಿದೆ. ಆದರೆ ಇಂದಿನ ಪ್ರಸ್ತುತತೆನಲ್ಲಿ ಕೂಡ ಜಾತಿ ಮಾತ್ರವಲ್ಲ, ಬೇರೆ ಬೇರೆ ರೂಪಗಳಲ್ಲಿಯೂ ಇದೇ ಮನೋಭಾವವನ್ನು ನಾವು ಕಾಣಬಹುದು. ಪದವಿಯಿಂದ ವ್ಯಕ್ತಿಯ ಮೌಲ್ಯ ಅಳೆಯುವುದು, ಉದ್ಯೋಗದಿಂದ ಗೌರವ ನಿರ್ಧರಿಸುವುದು, ಹಣದಿಂದ ವ್ಯಕ್ತಿತ್ವ ಅಳೆಯುವುದು, ಧರ್ಮ ಅಥವಾ ಭಾಷೆಯಿಂದ ತೀರ್ಪು ನೀಡುವುದು ಇವೆಲ್ಲವನ್ನೂ ಈ ವಚನವು ವಿರೋಧಿಸುವ ಮನಸ್ಥಿತಿಯೇ. ಶರಣ ಅಂಬಿಗರ ಚೌಡಯ್ಯನವರ ಈ ವಚನದ ಸಂದೇಶ ಇವತ್ತಿಗು ಅನ್ವಯಿಸುತ್ತದೆ. “ವ್ಯಕ್ತಿಯ ಹೊರಗಿನ ಗುರುತುಗಳನ್ನು ನೋಡಬೇಡ, ಒಳಗಿನ ಮಾನವೀಯತೆಯನ್ನು ನೋಡಿ ಗೌರವಿಸು” ಎಂಬುದಾಗಿದೆ.
“ಗುರುವೆಂಬೆನೆ ಹಲಬರ ಮಗ” ಎನ್ನುವ ಸಾಲಿನಲ್ಲಿ ಹಲಬರ ಮಗ ಎಂದರೆ ಮೇಲ್ವರ್ಗದವರು ಜಾತೀಯತೆಯನ್ನು, ಮೂಢನಂಬಿಕೆಗಳನ್ನು ಮತ್ತು ಸಂಪ್ರದಾಯವಾದದಿಂದ ಶ್ರೇಣೀಕೃತ ಸಮಾಜದಲ್ಲಿ ಅತ್ಯಂತ ಕೆಳಸ್ಥರದವರನ್ನು ಶೋಷಿಸುವವರು. “ಲಿಂಗವೆಂಬೆನೆ ಕಲ್ಲಿಕುಟಿಕನ ಮಗ” ಕಲ್ಲುಕುಟಿಗ ಅಂದರೆ ಸೃಷ್ಟಿಕರ್ತ ಅಥವಾ ಶಿಲ್ಪಕಾರ ಅಥವಾ ಬ್ರಹ್ಮ. ಗುರುವಿನ ಜ್ಞಾನ, ಅನುಭವ, ಆತ್ಮಸಾಕ್ಷಾತ್ಕಾರವನ್ನು ನೋಡದೆ, ಅವನು ಯಾವ ಜಾತಿಯಲ್ಲಿ ಹುಟ್ಟಿದ್ದಾನೆ ಎಂದು ನೋಡುವ ಮನೋಭಾವ. ಶಿವಲಿಂಗದಂತಹ ಪರಮತತ್ತ್ವವನ್ನೂ ನಿರ್ಮಿಸಿದವನನ್ನು ಜಾತಿಯ ಕಣ್ಣಿನಿಂದ ನೋಡುವುದು. ಅಂದರೆ ನಿರ್ದಿಷ್ಠವಾದ ದೇವರುಗಳ ಮೂಲಕ ನೋಡುವಂತಹ ಮನಸ್ಸು. ಮಾನವನ ಮನಸ್ಸು ಯಾವುದನ್ನಾದರೂ ಅದರ ನಿಜ ಸ್ವರೂಪದಲ್ಲಿ ನೋಡುವುದಕ್ಕಿಂತ ಅದಕ್ಕೆ ಒಂದು ಗುರುತು ಅಥವಾ ಲೇಬಲ್ ಅಂಟಿಸಿ ನೋಡಲು ಇಷ್ಟಪಡುತ್ತದೆ. ಇವನು ಈ ಜಾತಿಯವನು, ಇವನು ಬಡವ, ಇವನು ಶ್ರೀಮಂತ, ಇವನು ಈ ಧರ್ಮದವನು ಎಂದು ಮನಸ್ಸು ಮೊದಲು ವರ್ಗೀಕರಿಸುತ್ತದೆ. ನಂತರ ಆ ವ್ಯಕ್ತಿಯ ಬಗ್ಗೆ ಅಭಿಪ್ರಾಯ ರೂಪಿಸುತ್ತದೆ. ಹಾಗಾಗಿ ಒಂದಿ ನಿರ್ದಿಷ್ಠ ಮನೋಸೂಚಕ, ವ್ಯಕ್ತಿಸೂಚಕ ಆಧಾರಿತ ಪರಿಕಲ್ಪನೆ. ಮನೋವಿಜ್ಞಾನದಲ್ಲಿ ಇದನ್ನು Stereotype Mentality ಎನ್ನುತ್ತಾರೆ. ಬೇರೆಯವರ ಅಭಿಪ್ರಾಯ ಮತ್ತು ನಡೆ-ನುಡಿಗಳಿಗೆ ಮಣ್ಣನೆ ನೀಡದ ಒಂದು ಮಾನಸಿಕ ಸ್ಥಿತಿ.
“ಪ್ರಸಾದವೆಂಬೆನೆ ಒಕ್ಕಲಿಗನ ಮಗ” ಪ್ರಸಾದದ ಪಾವಿತ್ರ್ಯಕ್ಕಿಂತ ಅದನ್ನು ಕೊಟ್ಟವನ ರೈತನ ಜಾತಿಯೇ ಮುಖ್ಯವೆಂದು ಭಾವಿಸುವ ಮನಸ್ಥಿತಿ. ಇದು ಸತ್ಯವನ್ನು ನೋಡದ ಮನಸ್ಸು. ಗುರುವನ್ನು ಗುರುವಾಗಿ ಕಾಣದೆ “ಹಲಬರ ಮಗ” ಎಂದು ನೋಡಿದಾಗ, ಗುರುವಿನ ಜ್ಞಾನ ಕಾಣುವುದಿಲ್ಲ. ಪ್ರಸಾದವನ್ನು ಪ್ರಸಾದವಾಗಿ ಕಾಣದೆ “ಒಕ್ಕಲಿಗನ ಮಗ ಕೊಟ್ಟದ್ದು” ಎಂದು ನೋಡಿದಾಗ, ಅದರ ಪಾವಿತ್ರ್ಯ ಕಾಣುವುದಿಲ್ಲ. ಅಂದರೆ ಮನಸ್ಸು ವಸ್ತುವಿನ ಸತ್ಯಕ್ಕಿಂತ ತನ್ನ ಪೂರ್ವನಿರ್ಧರಿತ ಕಲ್ಪನೆಗಳನ್ನು ನೋಡುತ್ತದೆ. ಶರಣ ಅಂಬಿಗರ ಚೌಡಯ್ಯನವರು ಇದೇ ಮನಃಸ್ಥಿತಿಯ ಭ್ರಮೆಯನ್ನು ಪ್ರಶ್ನಿಸುತ್ತಾರೆ.
“ಪಾದೋದಕವೆಂಬೆನೆ ದೇವೇಂದ್ರನ ಮಗ” ಹಿಂದೂ ಪುರಾಣದಲ್ಲಿ ದೇವೇಂದ್ರ ಎಂದರೆ ದೇವತೆಗಳ ರಾಜನಾದ “ಇಂದ್ರ”. ಸ್ವರ್ಗದ ಅಧಿಪತಿಯಾಗಿ ದೇವತೆಗಳನ್ನು ಮತ್ತು ಸ್ವರ್ಗಲೋಕವನ್ನು ರಕ್ಷಿಸುವುದು ಆತನ ಪ್ರಮುಖ ಕರ್ತವ್ಯ. ಇದರ ಜೊತೆಗೆ ಮಳೆ ಮತ್ತು ಪ್ರಕೃತಿಯ ನಿಯಂತ್ರಕ. ಮಳೆ, ಗಾಳಿ, ಸಿಡಿಲು ಮತ್ತು ಮಿಂಚುಗಳ ನಿಯಂತ್ರಕನಾಗಿ ಇಂದ್ರನನ್ನು ಪೂಜಿಸಲಾಗುತ್ತದೆ. ಇದು ಭೂಮಿಯ ಮೇಲೆ ಸಮೃದ್ಧವಾದ ಬೆಳೆ ಹಾಗೂ ಜೀವಸಂಕುಲಕ್ಕೆ ನೆರವಾಗುತ್ತದೆ ಎಂದು ಪುರಾಣ ಪುಣ್ಯಕಥೆಗಳಲ್ಲಿ ಉಕ್ತವಾದ ಸಂಗತಿ. ಗುರುವಿನ ಪಾದೋದಕವನ್ನೂ ಅದರ ಆಧ್ಯಾತ್ಮಿಕ ಮಹತ್ವದಿಂದಲ್ಲ, ಅದನ್ನು ನೀಡಿದ ವ್ಯಕ್ತಿಯ ಹಿನ್ನೆಲೆಯಿಂದ ಅಳೆಯುವುದು ಎಂಬ ಅರ್ಥದ ಸಾಲು ಇದಾಗಿದೆ.
“ಈಸುವ ಹಿಡಿಯಲೂ ಇಲ್ಲ, ಬಿಡಲೂ ಇಲ್ಲ”. “ಈಸು” ಎಂದರೆ ಮೀನು ಹಿಡಿಯುವ ಗಾಳ. ಮೀನು ಗಾಳಕ್ಕೆ ಸಿಕ್ಕಿಕೊಂಡಂತೆ ಮನುಷ್ಯ ಜಾತಿ, ಅಹಂಕಾರ, ಪೂರ್ವಾಗ್ರಹಗಳ ಬಲೆಗೆ ಸಿಕ್ಕಿದ್ದಾನೆ. ಅದನ್ನು ಸಂಪೂರ್ಣ ಹಿಡಿದು ಅರಿಯಲೂ ಆಗುತ್ತಿಲ್ಲ, ಬಿಡಲೂ ಆಗುತ್ತಿಲ್ಲ. ಇಲ್ಲಿ ಸ್ಪಷ್ಟವಾದ ಅಹಂಕಾರದ ಬಲೆಯ ಚಿತ್ರಣ ಕಟ್ಟಿಕೊಡ್ತಾರೆ. ಇದು ಮಾನವನ ಮಾನಸಿಕ ಸ್ಥಿತಿಯ ಅತ್ಯಂತ ಸೂಕ್ಷ್ಮ ಚಿತ್ರಣವೂ ಹೌದು. ಮನಸ್ಸು ತನ್ನ ನಂಬಿಕೆಗಳು ಮತ್ತು ಅಹಂಕಾರಕ್ಕೆ ಅಂಟಿಕೊಂಡಿರುತ್ತದೆ. ಅವು ತಪ್ಪೆಂದು ಸಂಪೂರ್ಣ ಒಪ್ಪಿಕೊಳ್ಳುವುದಿಲ್ಲ. ಅವುಗಳನ್ನು ಸಂಪೂರ್ಣ ಬಿಡಲೂ ಸಾಧ್ಯವಾಗುವುದಿಲ್ಲ. ಇದನ್ನೇ ಇಂದಿನ ಮನೋವಿಜ್ಞಾನದಲ್ಲಿ Cognitive Bias ಎಂದು ಕರೆಯುತ್ತಾರೆ.
“ತನ್ನೊಳಗ ನೋಡೆಂದನಂಬಿಗ ಚೌಡಯ್ಯ”. ಇದು ಜಾತಿ, ಕುಲ, ಸ್ಥಾನಮಾನಗಳನ್ನು ನೋಡುವುದನ್ನು ಬಿಟ್ಟು, ತನ್ನ ಅಂತರಂಗವನ್ನು ಪರಿಶೀಲಿಸು ಎಂಬ ನಿಜವಾದ ಆಧ್ಯಾತ್ಮಿಕತೆ ಆತ್ಮಾವಲೋಕನವನ್ನು ಇಲ್ಲಿ ಕಟ್ಟಿ ಕೊಟ್ಟಿದ್ದಾರೆ. ಹೊರಮುಖದ ಮನಸ್ಸು ಮತ್ತು ಅಂತರ್ಮುಖದ ಜ್ಞಾನ “ತನ್ನೊಳಗೆ ನೋಡೆಂದ”. ಸಾಮಾನ್ಯವಾಗಿ ಮನುಷ್ಯನ ಗಮನ ಸದಾ ಹೊರಗಿರುತ್ತದೆ. ಇವನು ಯಾರು, ಅವನ ಜಾತಿ ಏನು? ಅವನ ಸ್ಥಾನಮಾನ ಏನು ಎಂಬುದು. ಆದರೆ ಶರಣರು ಕೇಳುವ ಪ್ರಶ್ನೆಯೇ ಬೇರೆ. “ನೀನು ಯಾರು? ನಿನ್ನೊಳಗಿನ ದ್ವೇಷ, ಅಹಂಕಾರ, ಪೂರ್ವಾಗ್ರಹ ಎಲ್ಲಿಂದ ಬಂದವು? ಎಂಬುದು. ಇದೊಂದು ಆತ್ಮಾವಲೋಕನದ (Self-awareness) ಆರಂಭವನ್ನು ಬಿಂಬಿಸುತ್ತದೆ. ತನ್ನನ್ನು ತಾನು ತೋರಿಕೊಳ್ಳುವುದಕ್ಕೆ ಮನೋವಿಜ್ಞಾನದಲ್ಲಿ Projection ಅಂತಾರೆ. ನಮ್ಮೊಳಗಿರುವ ಭಯ, ಅಹಂಕಾರ, ಅಸುರಕ್ಷಿತ ಭಾವನೆಗಳನ್ನು ನಾವು ಇತರರ ಮೇಲೆ ಆರೋಪಿಸುತ್ತೇವೆ. ತನ್ನೊಳಗಿನ ಅಜ್ಞಾನವನ್ನು ನೋಡೋಕೆ ಇಷ್ಟಪಡದವನು ಇತರರ ಜಾತಿ, ಕುಲ, ಸ್ಥಾನಮಾನಗಳನ್ನು ಹುಡುಕುತ್ತಾನೆ.
ಹಾಗಾಗಿ ಅಂಬಿಗರ ಚೌಡಯ್ಯನವರು ಹೊರಗಿನ ಪರಿಶೀಲನೆಗಿಂತ ಒಳಗಿನ ಪರಿಶೀಲನೆಯನ್ನು ಈ ವಚನದ ಮೂಲಕ ಒತ್ತಿಹೇಳುತ್ತಾರೆ. ತತ್ವಕ್ಕೆ ಜಾತಿಯಿಲ್ಲ, ಆತ್ಮಕ್ಕೆ ಕುಲವಿಲ್ಲ ಎಂಬುದೇ ಆಗಿದೆ. ಗುರು, ಲಿಂಗ, ಪ್ರಸಾದ, ಪಾದೋದಕ ಇವೆಲ್ಲವೂ ಆತ್ಮೋನ್ನತಿಯ ಸಾಧನಗಳು. ಆದರೆ ಮನುಷ್ಯ ಅವುಗಳ ಸಾರವನ್ನು ಅರಿಯದೆ ಅವುಗಳಿಗೆ ಸಾಮಾಜಿಕ ಗುರುತುಗಳನ್ನು ಅಂಟಿಸುತ್ತಾನೆ. ಶರಣ ಅಂಬಿಗರ ಚೌಡಯ್ಯನವರು ಹೇಳುವುದು “ನೀನು ಗುರುವನ್ನು ನೋಡುತ್ತಿದ್ದೀಯಾ ಅಥವಾ ಗುರುನ ಜಾತಿಯನ್ನು ನೋಡುತ್ತಿದ್ದೀಯಾ?” ಎಂದು. ಇದು ಆಧ್ಯಾತ್ಮಿಕತೆಯ ಹೆಸರಿನಲ್ಲಿ ನಡೆಯುವ ಭೇದಭಾವದ ಮೇಲೆ ಮಾಡಿದ ಕಟು ವಿಮರ್ಶೆಯಾಗಿದೆ.
“ನಿನ್ನ ಕಣ್ಣಿನ ಮೇಲೆ ಇರುವ ಪೂರ್ವಾಗ್ರಹದ ಕನ್ನಡಕವನ್ನು ತೆಗೆ” ಎನ್ನುತ್ತಾರೆ. ಒಂದು ಶಾಲೆಯಲ್ಲಿ ಇಬ್ಬರು ಶಿಕ್ಷಕರಿದ್ದರು. ಒಬ್ಬರು ಶ್ರೀಮಂತ ಕುಟುಂಬದಿಂದ ಬಂದವರು. ಇನ್ನೊಬ್ಬರು ಸಾಮಾನ್ಯ ಕೂಲಿ ಕಾರ್ಮಿಕರ ಮಗ. ವಿದ್ಯಾರ್ಥಿಗಳು ಮೊದಲ ಶಿಕ್ಷಕರಿಗೆ ಹೆಚ್ಚು ಗೌರವ ಕೊಡುತ್ತಿದ್ದರು. ಆದರೆ ಕಾಲ ಕಳೆದಂತೆ ಎರಡನೇ ಶಿಕ್ಷಕರೇ ಹೆಚ್ಚು ಜ್ಞಾನ, ಪ್ರೀತಿ ಮತ್ತು ಮಾರ್ಗದರ್ಶನ ನೀಡುತ್ತಿರುವುದು ತಿಳಿಯಿತು. ಆಗ ವಿದ್ಯಾರ್ಥಿಗಳಿಗೆ ಅರಿವಾಯಿತು. “ಮನುಷ್ಯನ ಮೌಲ್ಯ ಅವನ ಹುಟ್ಟಿನಲ್ಲಿ ಇಲ್ಲ, ಅವನ ಗುಣಗಳಲ್ಲಿ ಇದೆ” ಎಂದು.
ಇದೇ ಅಂಬಿಗರ ಚೌಡಯ್ಯನವರ ವಚನದ ಸಾರ. ಒಟ್ಟಾರೆಯಾಗಿ ಗುರು, ಲಿಂಗ, ಪ್ರಸಾದ, ಪಾದೋದಕಗಳಿಗೆ ಜಾತಿಯಿಲ್ಲ. ಆಧ್ಯಾತ್ಮಿಕತೆಯ ಸಾರ ಅಂತರಂಗದ ಶುದ್ಧಿಯಲ್ಲಿ ಇದೆ. ಪೂರ್ವಾಗ್ರಹಗಳು ಸತ್ಯವನ್ನು ಕಾಣದಂತೆ ಮಾಡುತ್ತವೆ. ವ್ಯಕ್ತಿಯನ್ನು ಅವನ ಜನ್ಮದಿಂದಲ್ಲ, ಗುಣ ಮತ್ತು ಜ್ಞಾನದಿಂದ ಅಳೆಯಬೇಕು. ಕೊನೆಯಲ್ಲಿ “ತನ್ನೊಳಗ ನೋಡು” ಎಂಬುದು ಈ ವಚನದ ಪರಮ ಸಂದೇಶ. ಈ ಸಾಲು ಇಡೀ ಮನೋವಿಜ್ಞಾನದ ಸಾರವನ್ನೇ ಒಳಗೊಂಡಿದೆ. ನೀನು ಜಗತ್ತನ್ನು ಹೇಗೆ ನೋಡುತ್ತೀಯೋ ಅದಕ್ಕಿಂತ ಮುಖ್ಯವಾದುದು ನಿನ್ನ ಮನಸ್ಸು ಹೇಗೆ ನೋಡುತ್ತಿದೆ ಎಂಬುದು ತಿಳಿದುಕೋ ಎಂಬುದಾಗಿದೆ. ಹೊರಗಿನ ಗುರುತುಗಳನ್ನು ಮೀರಿ, ಒಳಗಿನ ಸತ್ಯವನ್ನು ಕಾಣುವುದು ಶರಣರ ಧರ್ಮವಾಗಿದೆ.
ಒಟ್ಟಾರೆಯಾಗಿ ಆತ್ಮಾವಲೋಕನವೇ ಮಾನಸಿಕ ಮುಕ್ತಿಯ ಮೊದಲ ಹೆಜ್ಜೆ. ಇತರರನ್ನು ಅಳೆಯುವ ಮೊದಲು ತನ್ನ ಮನಸ್ಸನ್ನು ಅರಿಯಬೇಕು. ಇದು ಅಂಬಿಗರ ಚೌಡಯ್ಯನವರ ಧೀಮಂತ ನಿಲುವು ವಚನದಲ್ಲಿ ಹೀಗೆ ಅಭಿವ್ಯಕ್ತಗೊಳಿಸಿದ್ದಾರೆ.
ಶ್ರೀಮತಿ. ಶಾಲಿನಿ ರುದ್ರಮುನಿ,
# 20, ರಾಜೀವನಗರ, ಎರಡನೇ ಹಂತ, ಎರಡನೇ ತಿರುವು,
ಪೋಲಿಸ್ ವಸತಿಗೃಹ ರಸ್ತೆ,
ವಿದ್ಯಾನಗರ,
ಹುಬ್ಬಳ್ಳಿ – 580031
ಮೊಬೈಲ್ ಸಂಖ್ಯೆ – 78921 69644
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ:
- ಮೋಬೈಲ್ ನಂ. 9741 357 132
- e-Mail ID: info@vachanamandara.in / admin@vachanamandara.in






Total views : 65582