ಕಾಯಕಯೋಗಿ ನುಲಿಯ ಚಂದಯ್ಯನವರ ವಚನ ವಿಶ್ಲೇಷಣೆ | ಶ್ರೀಮತಿ. ಶಾಲಿನಿ ರುದ್ರಮುನಿ, ಹುಬ್ಬಳ್ಳಿ.

Loading

ಅವಾವ ಕಾಯಕದಲ್ಲಿ ಬಂದಡೂ ಭಾವಶುದ್ಧವಾಗಿ
ಗುರು-ಲಿಂಗ-ಜಂಗಮಕ್ಕೆ ಮಾಡುವುದೇ ಶಿವಪೂಜೆ.
ಮಾಡುವ ಮಾಟವಿಲ್ಲದೆ ಮಾತಿಂಗೆ ಮಾತಾಡುವುದು
ಅದೇತರ ಪೂಜೆ?
ಅದು ಚಂದೇಶ್ವರಲಿಂಗಕ್ಕೆ ಒಪ್ಪವಲ್ಲ,
ಮಡಿವಾಳಯ್ಯಾ.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-450/ವಚನ ಸಂಖ್ಯೆ-1285)

“ಕಾಯಕವೇ ಶಿವಸಾಧನೆ, ದುಡಿಮೆಯೇ ದಾಸೋಹ” ಎಂಬ ತತ್ವವನ್ನು ತಮ್ಮ ಜೀವನ ಮತ್ತು ವಚನಗಳ ಮೂಲಕ ಬದುಕಿದ ಶ್ರೇಷ್ಠ ಶಿವಶರಣರು ನುಲಿಯ ಚಂದಯ್ಯನವರು. ನುಲಿಯ ಚಂದಯ್ಯ ಅವರು ಬಸವಣ್ಣನವರ ಹಿರಿಯ ಸಮಕಾಲೀನ ಶರಣರಲ್ಲಿ ಒಬ್ಬರು. ಕ್ರಿ. ಶ. 1107 ರ ಸುಮಾರಿಗೆ ಇಂದಿನ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಶಿವಣಗಿ ಗ್ರಾಮದಲ್ಲಿ ಜನಿಸಿದರು. ಅವರು ಹಗ್ಗ ಹೊಸೆಯುವ ಕಾಯಕದಲ್ಲಿ ತೊಡಗಿದ್ದ ಕೊರವ (ನುಲಿ) ಸಮುದಾಯಕ್ಕೆ ಸೇರಿದವರಾಗಿದ್ದರು. “ನುಲಿ” ಎಂದರೆ ಹಗ್ಗ ಅಥವಾ ನಾರು ಎಂಬ ಅರ್ಥ.

ಅವರ ವಚನಗಳ ಅಂಕಿತ “ಚಂದೇಶ್ವರಲಿಂಗ”. ಸುಮಾರು 48 ವಚನಗಳು ಇಲ್ಲಿಯವರೆಗೆ ಲಭ್ಯವಿದ್ದು ಅವುಗಳಲ್ಲಿ ಕಾಯಕ, ದಾಸೋಹ, ಭಕ್ತಿ, ಸಮಾನತೆ ಮತ್ತು ಆತ್ಮಜ್ಞಾನಗಳ ತತ್ತ್ವಗಳು ಪ್ರಮುಖವಾಗಿವೆ. ನುಲಿಯ ಚಂದಯ್ಯನವರ ವಿಶೇಷತೆ ಎಂದರೆ ಕಾಯಕವೇ ಕೈಲಾಸ ಎಂಬ ಬಸವತತ್ವವನ್ನು ಅತ್ಯಂತ ಕಟ್ಟುನಿಟ್ಟಾಗಿ ಪಾಲಿಸಿದವರು. ಗುರು, ಲಿಂಗ, ಜಂಗಮ ಯಾರೇ ಆಗಿರಲಿ ಕಾಯಕ ಮಾಡಲೇಬೇಕು. ದುಡಿಯದೆ ಬದುಕುವ ಹಕ್ಕು ಯಾರಿಗೂ ಇಲ್ಲ ಎಂಬ ಸಂದೇಶವನ್ನು ತಮ್ಮ ವಚನಗಳಲ್ಲಿ ಬಲವಾಗಿ ಪ್ರತಿಪಾದಿಸಿದ್ದಾರೆ.

ಕಾಯಕಯೋಗಿ ನುಲಿಯ ಚಂದಯ್ಯನವರಿಗೆ ಬಸವಣ್ಣನವರ ಬಗ್ಗೆ ಅಪಾರ ಗೌರವವಿತ್ತು. ಬಸವಣ್ಣರನ್ನು ಗುರು-ಲಿಂಗ-ಜಂಗಮಗಳ ಸಮನ್ವಯ ಸ್ವರೂಪವಾಗಿ ಕಂಡು, ಅವರ ದಾಸೋಹ ಮತ್ತು ಸೇವಾ ಮನೋಭಾವವನ್ನು ತಮ್ಮ ವಚನಗಳಲ್ಲಿ ಕೊಂಡಾಡಿದ್ದಾರೆ.

ಕಲ್ಯಾಣ ಕ್ರಾಂತಿಯ ನಂತರ ಅವರು ಅಕ್ಕ ನಾಗಲಾಂಬಿಕೆಯವರನ್ನು ಸುರಕ್ಷಿತವಾಗಿ ಎಣ್ಣೆಹೊಳೆಗೆ ಕರೆತಂದು ನೆಲೆಗೊಳಿಸಿದರೆಂದು ಶರಣ ಇತಿಹಾಸದ ಪರಂಪರೆ ಹೇಳುತ್ತದೆ. ನಂತರ ಚಿತ್ರದುರ್ಗ ಜಿಲ್ಲೆಯ ನುಲೇನೂರಿನಲ್ಲಿ ನೆಲೆಸಿ ಅನುಭಾವ ಗೋಷ್ಠಿಗಳನ್ನು ನಡೆಸಿದರು. ಕ್ರಿ. ಶ. 1170 ರ ಸುಮಾರಿಗೆ ನುಲೇನೂರಿನಲ್ಲಿ ಲಿಂಗೈಕ್ಯರಾದರು. ಅವರ ಸ್ಮರಣಾರ್ಥ ಆ ಸ್ಥಳವೇ “ನುಲೇನೂರು” ಎಂದು ಪ್ರಸಿದ್ಧಿಯಾಯಿತು.

ನುಲಿಯ ಚಂದಯ್ಯನವರು ಕಾಯಕ ಮತ್ತು ದಾಸೋಹ ತತ್ವದ ಪ್ರಬಲ ಪ್ರತಿಪಾದಕರು. ಬಸವ ತತ್ವದ ನಿಷ್ಠಾವಂತ ಅನುಯಾಯಿಗಳು. ಶ್ರಮದ ಬಗ್ಗೆ ಗೌರವ ಮತ್ತು ಸಮಾನತೆಯ ಸಂದೇಶ ಸಾರಿದ ವಚನಕಾರರು. ವಚನ ಸಾಹಿತ್ಯದಲ್ಲಿ ಕಾಯಕನಿಷ್ಠೆಯ ಆದರ್ಶ ಶರಣರು.

ಪ್ರಸ್ತುತ ನುಲಿಯ ಚಂದಯ್ಯನವರ ಈ ವಚನವು ಕಾಯಕ, ಭಾವಶುದ್ಧಿ, ನಿಷ್ಠೆ ಮತ್ತು ನೈತಿಕತೆಯ ಬಗ್ಗೆ ಅತ್ಯಂತ ಗಂಭೀರವಾದ ತಾತ್ವಿಕ ಸಂದೇಶವನ್ನು ನೀಡುತ್ತದೆ. ಇದು ಕೇವಲ ಧಾರ್ಮಿಕ ಆಚರಣೆಗಳ ಕುರಿತು ಮಾತ್ರವಲ್ಲ; ಜೀವನದ ಎಲ್ಲಾ ಕ್ಷೇತ್ರಗಳಲ್ಲಿ “ನಿಷ್ಠೆಯಿಂದ ಮಾಡಿದ ಕೆಲಸವೇ ಪೂಜೆ” ಎಂಬ ಸಮಗ್ರ ಮಾನವೀಯ ತತ್ವವನ್ನು ಸಾರುತ್ತದೆ.

“ಅವಾವ ಕಾಯಕದಲ್ಲಿ ಬಂದಡೂ ಭಾವಶುದ್ಧವಾಗಿ” ಅಂದರೆ ಯಾವುದೇ ಕೆಲಸವಾಗಿರಲಿ ಅದು ಚಿಕ್ಕದಾಗಲಿ, ದೊಡ್ಡದಾಗಲಿ ಮನಸ್ಸಿನ ಶುದ್ಧತೆ, ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಮಾಡಬೇಕು. ಕಾಯಕವೇ ಕೈಲಾಸ ಶರಣತತ್ವದ ಮೂಲಭಾವನೆಯನ್ನು ಹೊಂದಿದೆ ಈ ವಚನ. “ಕಾಯಕವೇ ಕೈಲಾಸ” ಅಂದರೆ ದುಡಿಮೆಯೇ ಧ್ಯಾನ, ಸೇವೆಯೇ ಪೂಜೆ, ಪ್ರಾಮಾಣಿಕ ಕಾಯಕವೇ ಶರಣಗೆ ಮೋಕ್ಷಮಾರ್ಗ. ಇದು ಕಾಯಕ ಮಾಡುವವರ ಗೌರವವನ್ನು ಅಭಿಮಾನವನ್ನು ಮತ್ತಷ್ಟು ಹೆಚ್ಚಿಸಿದ ಕ್ರಾಂತಿಕಾರಿ ಚಿಂತನೆ. ಮಾತು ಮತ್ತು ಕೆಲಸ ಹೊಂದಿಕೆಯಾಗದಿದ್ದರೆ ಮಾನಸಿಕ ದ್ವಂದ್ವ ಅಥವಾ ಅರಿವಿನ ಅಪಶೃತಿ (Cognitive Dissonance) ಉಂಟಾಗುತ್ತದೆ.

ಲಿಯಾನ್ ಫೆಸ್ಟಿಂಗರ್(Leon Festinger|08.05.1919–11.02.1989 | Stanforrd University, California, America) ಒಬ್ಬ ಪ್ರಭಾವಶಾಲಿ ಅಮೆರಿಕನ್ ಸಾಮಾಜಿಕ ಮನಶ್ಶಾಸ್ತ್ರಜ್ಞ(Social Psychologist) ರಾಗಿದ್ದರು. ಇವರು ಪ್ರಮುಖವಾಗಿ ಅರಿವಿನ ಅಪಶ್ರುತಿ (Cognitive Dissonance) ಮತ್ತು ಸಾಮಾಜಿಕ ಹೋಲಿಕೆ (Social Comparison) ಸಿದ್ಧಾಂತಗಳನ್ನು ಪ್ರತಿಪಾದಿಸಿದ್ದಕ್ಕಾಗಿ ವಿಶ್ವವಿಖ್ಯಾತರಾಗಿದ್ದಾರೆ. ಇವರು ಪ್ರತಿಪಾದಿಸಿದ ತತ್ವ ಹೀಗಿದೆ:

  • “Cognitive Dissonance” means, where an individual is theorized to seek consistency due to internal states of inconsistency that cause discomfort.
  • ಮನುಷ್ಯನ ನಂಬಿಕೆಗಳು, ಮೌಲ್ಯಗಳು ಅಥವಾ ಆಲೋಚನೆಗಳು ಒಂದಕ್ಕೊಂದು ವಿರುದ್ಧವಾಗಿದ್ದಾಗ ಅಥವಾ ಆತನ ನಡವಳಿಕೆಗೆ ಹೊಂದಿಕೆಯಾಗದಿದ್ದಾಗ ಉಂಟಾಗುವ ಮಾನಸಿಕ ಒತ್ತಡವೇ ಅರಿವಿನ ಅಪಶ್ರುತಿ. ಈ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಮನುಷ್ಯ ತನ್ನ ವರ್ತನೆಗಳನ್ನು ಬದಲಾಯಿಸಿಕೊಳ್ಳುತ್ತಾನೆ ಅಥವಾ ಸಮರ್ಥನೆಗಳನ್ನು ಕಂಡುಕೊಳ್ಳುತ್ತಾನೆ.

ಅದು ಒತ್ತಡ ಮತ್ತು ಅಸಮಾಧಾನಕ್ಕೆ ಕಾರಣವಾಗುತ್ತದೆ. ಇದು ಆಧುನಿಕ ಮನೋವಿಜ್ಞಾನದ “ಕ್ರಿಯೆ ಮತ್ತು ನಡವಳಿಕೆಯ ಸಾಮರಸ್ಯ” (Action–Behavior Consistency) ದ ಕೆಲವು ಮೂಲಭೂತ ಸಿದ್ಧಾಂತಗಳನ್ನು ಈ ವಚನವು ನಿರೂಪಣೆ ಮಾಡುತ್ತದೆ.

ಈ ಮನೋ-ವೈಜ್ಞಾನಿಕ‌ತೆಯ ಆಧುನಿಕ ತತ್ವ ಸಿದ್ಧಾಂತಗಳನ್ನು ಕಾಯಕಯೋಗಿ ನುಲಿಯ ಚಂದಯ್ಯನವರು ಸರಿ ಸುಮಾರು 900 ವರ್ಷಗಳ ಹಿಂದೆಯೇ ಪ್ರತಿಪಾದನೆಯನ್ನು ಮಾಡಿದ್ದಾರೆ.

”ಯಾವುದು ನಮ್ಮ ಒಳಮನಸ್ಸಿನ ನಿರ್ಮಲತೆ?” ಲೋಭವಿಲ್ಲದ ಮನೋಭಾವ, ಪ್ರದರ್ಶನವಿಲ್ಲದ ಸೇವೆ, ನಿಷ್ಕಪಟ ಕಾಯಕ ಎನ್ನುವುದೇ ಭಾವಶುದ್ಧಿ ಎಂದು ಸ್ಪಷ್ಟಪಡಿಸಿದ್ದಾರೆ.

“ಗುರು-ಲಿಂಗ-ಜಂಗಮಕ್ಕೆ ಮಾಡುವುದೇ ಶಿವಪೂಜೆ” ಶರಣರ ತತ್ವದಲ್ಲಿ ಗುರು, ಲಿಂಗ ಮತ್ತು ಜಂಗಮ ಎಂಬ ತ್ರಿವಿಧ ತತ್ವಗಳಿಗೆ ಅತ್ಯಂತ ಮಹತ್ವವಿದೆ. ಇವೆಲ್ಲವೂ ಶಿವಪೂಜೆಯೇ. ಇಲ್ಲಿ ಪೂಜೆ ಎಂದರೆ ಕೇವಲ ಹೂವು, ಆರತಿ ಅಲ್ಲ. ಬದುಕಿನ ನೈತಿಕ ಕರ್ತವ್ಯ ಶಿವನನ್ನು ಕೇವಲ ದೇವಸ್ಥಾನದಲ್ಲಿರುವ ಮೂರ್ತಿಯಲ್ಲಿ ಕಾಣದೆ, ಈ ತ್ರಿವಿಧ ರೂಪಗಳಲ್ಲಿ ಅನುಭವಿಸಿ ಸೇವಿಸುವುದೇ ನಿಜವಾದ ಶಿವಪೂಜೆ ಎಂದು ಶರಣರು ಹೇಳಿದ್ದಾರೆ.

ನುಲಿಯ ಚಂದಯ್ಯ ಅವರ ಈ ವಚನವು ಕಾಯಕ, ಭಾವಶುದ್ಧಿ, ನಿಷ್ಠೆ ಮತ್ತು ನೈತಿಕತೆಯ ಬಗ್ಗೆ ಅತ್ಯಂತ ಗಂಭೀರವಾದ ತಾತ್ವಿಕ ಸಂದೇಶವನ್ನು ನೀಡುತ್ತದೆ. ಇದು ಕೇವಲ ಧಾರ್ಮಿಕ ಆಚರಣೆಗಳ ಕುರಿತು ಮಾತ್ರವಲ್ಲ, ಜೀವನದ ಎಲ್ಲಾ ಕ್ಷೇತ್ರಗಳಲ್ಲಿ “ನಿಷ್ಠೆಯಿಂದ ಮಾಡಿದ ಕೆಲಸವೇ ಪೂಜೆ” ಎಂಬ ಸಮಗ್ರ ಮಾನವೀಯ ತತ್ತ್ವವನ್ನು ಸಾರುತ್ತದೆ.

ಗುರುವು ಕೇವಲ ಜ್ಞಾನವನ್ನು ಹೇಳಿಕೊಡದೆ ತನ್ನ ಜೀವನದ ಮೂಲಕವೇ ಆದರ್ಶವನ್ನು ತೋರಿಸುತ್ತಾನೆ. ಶರಣ ಸಂಪ್ರದಾಯದಲ್ಲಿ ಗುರು ಎಂದರೆ ವ್ಯಕ್ತಿಯನ್ನು ದೇವರ ಕಡೆಗೆ ಕರೆದೊಯ್ಯುವ ಸೇತುವೆ, ಆತ್ಮೋನ್ನತಿಯ ದಾರಿಯನ್ನು ತೋರಿಸುವ ದೀಪಸ್ತಂಭ. ಗುರು ಇಲ್ಲದೆ ಆತ್ಮಸಾಕ್ಷಾತ್ಕಾರದ ಮಾರ್ಗ ಕಠಿಣವೆಂದು ಶರಣರು ಭಾವಿಸಿದ್ದಾರೆ. ಹಾಗಾಗಿ ಗುರುವಿಗೆ ಗೌರವ ಸಲ್ಲಿಸುವುದು, ಅವರ ಉಪದೇಶವನ್ನು ಪಾಲಿಸುವುದು, ಅವರಿಂದ ಪಡೆದ ಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಗುರುಪೂಜೆಯಾಗಿದೆ. ಒಂದರ್ಥದಲ್ಲಿ ಅಂತರಂಗದ ಅರಿವಿನ ಪ್ರಜ್ಞೆಯೇ ಗುರುಪೂಜೆ.

ಇನ್ನೂ ಲಿಂಗಕ್ಕೆ ಪೂಜೆ ಮಾಡುವುದು ಎಂದರೆ, ಇಷ್ಟಲಿಂಗವು ನಿರಾಕಾರ ಶಿವನ ಸಾಕ್ಷಾತ್ ಸಂಕೇತ. ಲಿಂಗಪೂಜೆ ಎಂದರೆ ಕೇವಲ ಧೂಪ, ದೀಪಗಳಿಂದ ಮಾಡುವ ಆರಾಧನೆಯಲ್ಲ. ಮನಸ್ಸಿನ ಶುದ್ಧತೆ, ಸತ್ಯನಿಷ್ಠೆ, ಸದಾಚಾರ ಮತ್ತು ಭಕ್ತಿಯಿಂದ ಲಿಂಗವನ್ನು ಸ್ಮರಿಸುವುದಾಗಿದೆ. ಲಿಂಗವು ಆತ್ಮಚೈತನ್ಯ, ಸಂಸ್ಕಾರ ಸಂಸ್ಕೃತಿಗಳ ಬಾಹ್ಯರೂಪ. ಇದು ದೇವರು ಮತ್ತು ಭಕ್ತನ ನಡುವೆ ಯಾವುದೇ ಮಧ್ಯವರ್ತಿಯ ಅಗತ್ಯವಿಲ್ಲ ಎಂಬ ತತ್ವವನ್ನು ಪ್ರತಿಪಾದಿಸುತ್ತದೆ. ಭಕ್ತನು ತನ್ನ ಆಚಾರ, ವಿಚಾರ, ನಡೆ, ನುಡಿ ಮತ್ತು ಕಾಯಕಗಳನ್ನು ಲಿಂಗಸ್ಮರಣೆಯೊಂದಿಗೆ ನಡೆಸಿದಾಗ ಜೀವನ ಪವಿತ್ರವಾಗುತ್ತದೆ. ಆದ್ದರಿಂದ ಲಿಂಗವು ಆಚಾರದ ನೆಲೆ, ಆತ್ಮಶುದ್ಧಿಯ ಸಾಧನ ಮತ್ತು ಜೀವ – ಶಿವರ ಐಕ್ಯದ ಪ್ರತೀಕವಾಗಿದೆ.

ಜಂಗಮಕ್ಕೆ ಮಾಡುವ ಪೂಜೆ ಎಂದರೆ, ಶಿವತತ್ವವನ್ನು ಅರಿತು ಅದರಂತೆ ಬದುಕುವ ಚರಸ್ವರೂಪಿ ಶಿವಭಕ್ತನಿಗೆ ಜಂಗಮ ಎನ್ನುವರು. ಮತ್ತೊಂದು ಅರ್ಥದಲ್ಲಿ ಸಮಷ್ಠಿಪ್ರಜ್ಞೆ. ಆ ಸಮಷ್ಠಿಯನ್ನು ಅಥವಾ ಜಂಗಮನನ್ನು ಗೌರವಿಸುವುದು, ದಾಸೋಹ ಮಾಡುವುದು, ಅವನ ಸೇವೆಯನ್ನು ಮಾಡುವುದು ಶಿವನ ಸೇವೆಯೇ ಆಗಿದೆ. ಏಕೆಂದರೆ ಜಂಗಮನಲ್ಲಿ ಶಿವನ ಚೈತನ್ಯ ನೆಲೆಸಿದೆ ಎಂದು ಶರಣರು ನಂಬಿದ್ದರು.

ಒಟ್ಟಿನಲ್ಲಿ “ಗುರು, ಲಿಂಗ, ಜಂಗಮಕ್ಕೆ ಮಾಡುವುದೇ ಶಿವಪೂಜೆ” ಎಂಬ ಮಾತಿನ ಅಂತರಂಗ ಸಂದೇಶವೇನೆಂದರೆ, ಗುರುವಿನಲ್ಲಿ ಜ್ಞಾನರೂಪ ಶಿವನನ್ನು ಕಾಣುವುದು, ಲಿಂಗದಲ್ಲಿ ದೈವಿಕ ಚೈತನ್ಯವನ್ನು ಅನುಭವಿಸುವುದು, ಜಂಗಮನಲ್ಲಿ ಸಾಕ್ಷಾತ್‌ ನಿರಾಕಾರ ಶಿವನನ್ನು ಸೇವಿಸುವುದು.

ಈ ಮೂರರ ಆರಾಧನೆ ಕೇವಲ ಆಚರಣೆ ಅಲ್ಲ, ಅದು ಜೀವನ ವಿಧಾನ. ಶರಣರ ಪ್ರಕಾರ ದೇವರನ್ನು ಹುಡುಕಲು ದೂರ ಹೋಗಬೇಕಾಗಿಲ್ಲ. ಜ್ಞಾನ ನೀಡುವ ಗುರುನಲ್ಲಿ, ಅಂತರಂಗದ ಲಿಂಗದಲ್ಲಿ ಮತ್ತು ಸಮಾಜದೊಳಗಿನ ಜಂಗಮನಲ್ಲಿ ಶಿವನನ್ನು ಕಾಣುವ ದೃಷ್ಟಿಯೇ ನಿಜವಾದ ಶಿವಭಕ್ತಿ. ಆದ್ದರಿಂದ ಗುರುವಿಗೆ ಗೌರವ, ಲಿಂಗಕ್ಕೆ ನಿಷ್ಠೆ, ಜಂಗಮಕ್ಕೆ ದಾಸೋಹ ಇವುಗಳ ಸಮನ್ವಯವೇ ಸಂಪೂರ್ಣ ಶಿವಪೂಜೆ. ಇದು ಕೇವಲ ಧಾರ್ಮಿಕ ವಿಧಿಯಲ್ಲ, ಮನುಷ್ಯನನ್ನು ಸತ್ಯ, ಕರುಣೆ, ಸಮತೆ ಮತ್ತು ಆತ್ಮೋನ್ನತಿಯ ಕಡೆಗೆ ಕೊಂಡೊಯ್ಯುವ ಜೀವನದರ್ಶನವಾಗಿದೆ.

ಇಲ್ಲಿ “ಪೂಜೆ” ಎಂಬ ಧಾರ್ಮಿಕ ಪದವನ್ನು ನೈತಿಕ ಕಾಯಕಕ್ಕೆ ರೂಪಕವನ್ನಾಗಿ ಮಾಡಿದ್ದಾರೆ. ಸಮಾಜದ ಸ್ಥಿರತೆ ಇರುವುದು ಮಾತಿನ ಮೇಲೆ ಅಲ್ಲ ನಂಬಿಗಸ್ತ ಕಾಯಕದ ಮೇಲೆ ನಿರ್ಮಾಣವಾಗುತ್ತದೆ. ಪ್ರಾಮಾಣಿಕ ಶಿಕ್ಷಕ, ನಿಷ್ಠಾವಂತ ವೈದ್ಯ, ನೈತಿಕ ಆಡಳಿತಗಾರ ಇಂತಹವೆಲ್ಲವು ಸಮಾಜದ ನಿಜವಾದ “ಪೂಜೆ”.

“ಮಾಡುವ ಮಾಟವಿಲ್ಲದೆ ಮಾತಿಂಗೆ ಮಾತಾಡುವುದು ಅದೇತರ ಪೂಜೆ?” “ಮಾಟಮಾತು” ಈ ಪದಪ್ರಯೋಗದಲ್ಲಿ ಲಯ, ವ್ಯಂಗ್ಯ ಮತ್ತು ಗಂಭೀರತೆ ಇರುವುದನ್ನು ಕಾಣಬಹುದು. ಕೆಲಸವಿಲ್ಲದೆ ಮಾತು ಮಾತ್ರ ಆಡಿದರೆ ಅದೇನು ಪೂಜೆ? ಇದು ಕಪಟ ಧಾರ್ಮಿಕತೆ, ವ್ತರ್ಥ ಭಾಷಣ, ನಿಷ್ಪ್ರಯೋಜಕ ಮಾತನ್ನು ಪ್ರಶ್ನಿಸುತ್ತದೆ. ಇಲ್ಲಿ ಶರಣ ನುಲಿಯ ಚಂದಯ್ಯನವರು ನೇರವಾಗಿ ಪ್ರಶ್ನೆ ಮಾಡ್ತಾರೆ. ಭಕ್ತಿಯಿಲ್ಲದ ಮಾತು, ಕಾಯಕದಲ್ಲಿ ಆಡಂಬರದ ಪ್ರದರ್ಶನ, ನೈತಿಕತೆಯಿಲ್ಲದ ಆಚರಣೆ ಇವು ನಿಜವಾದ ಶಿವಭಕ್ತಿ ಅಲ್ಲ ಎಂಬುದನ್ನು ಒತ್ತಿ ಹೇಳಿದ್ದಾರೆ. ಅಸ್ತಿತ್ವವಾದದ ದೃಷ್ಟಿಯಿಂದ ಮಾನವನು ತನ್ನ ಕ್ರಿಯೆಯಿಂದಲೇ ಅರ್ಥಪೂರ್ಣನಾಗುತ್ತಾನೆ. ಮಾತಿನಿಂದ ಅಲ್ಲ. ಕಾರ್ಯ, ಹೊಣೆಗಾರಿಕೆ, ನೈತಿಕ ನಿರ್ಧಾರ ಇವೇ ವ್ಯಕ್ತಿತ್ವವನ್ನು ನಿರ್ಮಿಸುತ್ತವೆ. ಇದು ಆಧುನಿಕ ಅಸ್ತಿತ್ವವಾದ (Existentialism) ದೊಂದಿಗೂ ಹತ್ತಿರವಾಗಿದೆ.

Existential philosophy, or existentialism, is a 19th & 20th century movement exploring the human condition. It proposes that humans exist first without an inherent purpose or nature and must actively create their own meaning and values through the choices they make in a chaotic, often absurd world.

ಅಸ್ತಿತ್ವವಾದ(Existentialism) ಎಂದರೆ ಬದುಕಿನ ಅರ್ಥ ಮತ್ತು ನಮ್ಮ ಕಾರ್ಯಗಳಿಗೆ ಜವಾಬ್ದಾರಿಯನ್ನು ತೆಗೆದುಕೊಳ್ಳುವ ನಮ್ಮ ಸ್ವಾತಂತ್ರ್ಯದ ಮೇಲೆ ಕೇಂದ್ರೀಕರಿಸುವ ತತ್ವಶಾಸ್ತ್ರವಾಗಿದೆ. ಇದು ಮನುಷ್ಯನ ಪ್ರತ್ಯೇಕ ಅಸ್ತಿತ್ವ ಮತ್ತು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತದೆ.

“ಅದು ಚಂದೇಶ್ವರಲಿಂಗಕ್ಕೆ ಒಪ್ಪವಲ್ಲ ಮಡಿವಾಳಯ್ಯಾ” ಅಂತಹ ಕಪಟಾಚರಣೆ ಶಿವತತ್ವಕ್ಕೆ ಹೊಂದುವುದಿಲ್ಲ. “ಚಂದೇಶ್ವರಲಿಂಗ” ಇಲ್ಲಿ ಪರಮಸತ್ಯದ ಸಂಕೇತ, ಅಂತರಂಗದ ದೈವ, ನೈತಿಕ ಪರಿಶುದ್ಧತೆಯ ಪ್ರತೀಕವಾಗಿದೆ. ಶರಣ ನುಲಿಯ ಚಂದಯ್ಯನವರು ಈ ವಚನದ ಮೂಲಕ ಸಂಧರ್ಭದನುಸಾರ ಮಡಿವಾಳ ಮಾಚಿದೇವರಿಗೆ “ಮಡಿವಾಳಯ್ಯಾ” ಎಂದು ಸಂಬೋದಿಸಿದ್ದಾರೆ.

ಈ ವಚನ ಇಂದಿನ ಕಾಲದಲ್ಲಿ ಇನ್ನೂ ಹೆಚ್ಚು ಪ್ರಸ್ತುತವಾಗಿದೆ. ಇಂದಿನ ಸಮಸ್ಯೆಗಳು ಅಂದರೆ ಬರಿ ಆಡಂಬರ ಪ್ರದರ್ಶವಾಗಿದೆ. ಸಾಮಾಜಿಕ ಜಾಲತಾಣದ ಕಪಟ ನೈತಿಕತೆ, ಮಾತಿನ ರಾಜಕೀಯ, ಕೆಲಸವಿಲ್ಲದ ಘೋಷಣೆಗಳು, ಭ್ರಷ್ಟಾಚಾರ ಇವೆಲ್ಲಕ್ಕೂ ಈ ವಚನ ಕನ್ನಡಿ ಹಿಡಿಯುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ವಿದ್ಯಾರ್ಥಿಗೆ ಓದಿನ ಬಗ್ಗೆ ಮಾತು ಮಾತ್ರ ಅಲ್ಲ, ನಿಯಮಿತ ಅಧ್ಯಯನವೇ ಪೂಜೆ. ಉದ್ಯೋಗಿಗೆ, ಪ್ರಾಮಾಣಿಕ ಕೆಲಸವೇ ಆಧ್ಯಾತ್ಮಿಕತೆ. ರಾಜಕಾರಣಿಗೆ ಬರಿ ಭಾಷಣವಲ್ಲ, ಜನಸೇವೆ ಮುಖ್ಯ. ಧಾರ್ಮಿಕ ವ್ಯಕ್ತಿಗೆ ಆಚರಣೆಯಿಲ್ಲದ ಭಕ್ತಿ ಅಪೂರ್ಣ ಎಂಬುವ ತಿಳುವಳಿಕೆ ನೀಡುತ್ತದೆ.

ಒಟ್ಟಿನಲ್ಲಿ ಹೇಳುವುದಾದರೆ, ನಿಷ್ಠೆಯಿಂದ ಮಾಡಿದ ಕಾಯಕವೇ ದೇವರಪೂಜೆ. ದುಡಿಮೆಗೆ ದೈವಿಕ ಗೌರವ ನೀಡಿದ ಚಿಂತನೆಯನ್ನು ಕಾಣಬಹುದು. ಮಾನವನ ಒಳ ನೈತಿಕತೆಯನ್ನು ಹೇಗೆಲ್ಲ ಕಾಪಿಡಬೇಕೆಂಬ ದರ್ಶನ. ಸಾಮಾಜಿಕ ಸಮಾನತೆಯ ಘೋಷಣೆಯು ಸಹ ಇಲ್ಲಿ ಕಾಣಬಹುದಾಗಿದೆ. ದೇವರು ದೇವಸ್ಥಾನದಲ್ಲಿ ಮಾತ್ರ ಇಲ್ಲ. ನಿಷ್ಠೆಯ ಕಾಯಕದಲ್ಲಿ ದೇವತ್ವ ಇದೆ. ಸತ್ಯಸಂಧ ಕಾರ್ಯವೇ ಭಕ್ತಿ, ಮಾತಿಗಿಂತ ಬದುಕು ದೊಡ್ಡದು ಎಂಬ ಸಾರವೇ‌ ಶರಣ ನುಲಿಯ ಚಂದಯ್ಯನವರ ಈ ವಚನ. ಇಂದಿಗೂ ಪ್ರಸ್ತುತ ಆಗುವುದರಿಂದ ಜೀವಂತವಾಗಿದೆ.

ಶ್ರೀಮತಿ. ಶಾಲಿನಿ ರುದ್ರಮುನಿ,
# 20, ರಾಜೀವನಗರ, ಎರಡನೇ ಹಂತ, ಎರಡನೇ ತಿರುವು, 
ಪೋಲಿಸ್ ವಸತಿಗೃಹ ರಸ್ತೆ, 
ವಿದ್ಯಾನಗರ,
ಹುಬ್ಬಳ್ಳಿ – 580031
ಮೊಬೈಲ್ ಸಂಖ್ಯೆ – 78921 69644

  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ:
    • ಮೋಬೈಲ್ ನಂ. 9741 357 132
    • e-Mail ID: info@vachanamandara.in / admin@vachanamandara.in

Leave a Reply