![]()

ಪೀಠಿಕೆ: ಬದಲಾವಣೆಯ ಅನಿವಾರ್ಯತೆ ಮತ್ತು ಎರಡು ಯುಗಗಳು
ಹನ್ನೆರಡನೇ ಶತಮಾನದ ಕಲ್ಯಾಣ ಕ್ರಾಂತಿಯ ಹರಿಕಾರ ಮಹಾತ್ಮ ಬಸವೇಶ್ವರರ ಸಾಮಾಜೋಧಾರ್ಮಿಕ ಕ್ರಾಂತಿಕಾರಕ ತತ್ವಗಳು ಮತ್ತು ಆಧುನಿಕ ಜಗತ್ತಿನ ನಿರ್ವಹಣಾ ತಜ್ಞರಾದ ಮೈಕೇಲ್ ಹ್ಯಾಮರ್ ಮತ್ತು ಜೇಮ್ಸ್ ಚಾಂಪಿ ಅವರ ‘ಬಿಸಿನೆಸ್ ಪ್ರೊಸೆಸ್ ರಿ-ಎಂಜಿನಿಯರಿಂಗ್’ (BPR) ಸಿದ್ಧಾಂತವನ್ನು ತೌಲನಿಕವಾಗಿ ವಿಶ್ಲೇಷಿಸುವ ಲೇಖನ.
ಲೇಖನ:
ವ್ಯವಸ್ಥೆಯೊಂದು ಜಡ್ಡುಗಟ್ಟಿದಾಗ, ಆಚರಣೆಗಳು ಕರಾಳ ಎನ್ನಿಸಿ, ಸಮಾಜದ ಕೆಳವರ್ಗದ ಜನರ ಶೋಷಣೆ ತಾರಕಕ್ಕೇರಿದಾಗ ಅವುಗಳನ್ನು ಮರುರೂಪಿಸುವ ಕ್ರಾಂತಿಕಾರಿ ನಾಯಕರು ಉದಯಿಸುತ್ತಾರೆ. ಇಂತಹ ಮಹತ್ತರ ಕ್ರಾಂತಿಕಾರಕ ಬದಲಾವಣೆಯನ್ನು ಸಾಮಾಜಿಕ, ಆರ್ಥಿಕ ಮತ್ತು ಧಾರ್ಮಿಕ ಸ್ತರಗಳಲ್ಲಿ ತಂದವರು ಹನ್ನೆರಡನೇ ಶತಮಾನದ ಕ್ರಾಂತಿಕಾರಿ ವಿಶ್ವಗುರು ಎಂದು ಚಿಂತಕರು ಮನಸಾರೆ ಒಪ್ಪಿಕೊಂಡ ಬಸವೇಶ್ವರರು. ಬಸವೇಶ್ವರರ ಕ್ರಾಂತಿಯ ತತ್ವವನ್ನು ಇಪ್ಪತ್ತನೇ ಶತಮಾನದ ಕೊನೆಯ ಭಾಗದಲ್ಲಿ ಜಾಗತಿಕ ಕಾರ್ಪೊರೇಟ್ ರಂಗದ ಆಡಳಿತ ಮತ್ತು ಸಾಂಸ್ಥಿಕ ಪ್ರಕ್ರಿಯೆಗಳಲ್ಲಿ ಕಾಣಬಹುದು. ಈ ಬದಲಾವಣೆಗಳನ್ನು ತಂದವರು ಅಮೆರಿಕಾದ ಮೈಕೇಲ್ ಹ್ಯಾಮರ್ ಮತ್ತು ಜೇಮ್ಸ್ ಚಾಂಪಿ.
ಮೇಲ್ನೋಟಕ್ಕೆ 12 ನೇ ಶತಮಾನದ ಆಧ್ಯಾತ್ಮಿಕ-ಸಾಮಾಜಿಕ ಕ್ರಾಂತಿ ಹಾಗೂ 20 ನೇ ಶತಮಾನದ ಅಮೆರಿಕಾದ ಕೈಗಾರಿಕಾ ನಿರ್ವಹಣಾ ತತ್ವಗಳ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಮೇಲ್ನೋಟಕ್ಕೆ ಅನಿಸಬಹುದು. ಆದರೆ, ಇವೆರಡರ ಆಳಕ್ಕೆ ಇಳಿದಾಗ ನಮಗೆ ಕಾಣಸಿಗುವುದು ವ್ಯವಸ್ಥೆಯನ್ನು ಸಂಪೂರ್ಣವಾಗಿ ಮರುಚಿಂತನೆಗೆ ಒಳಪಡಿಸುವ ‘ರಿ-ಎಂಜಿನಿಯರಿಂಗ್’ (Re-Engineering) ಪ್ರಕ್ರಿಯೆ.
ಬಸವಣ್ಣನವರು ಅಂದಿನ ಸನಾತನ ಶೈವ ಧರ್ಮದಲ್ಲಿನ ದೋಷಗಳನ್ನು ಸಣ್ಣಪುಟ್ಟ ಸುಧಾರಣೆಗಳ (Incremental Improvements) ಮೂಲಕ ಸರಿಪಡಿಸಲು ಹೋಗಲಿಲ್ಲ. ಬದಲಿಗೆ, ಆ ಹಳೆಯ ಜಡ ವ್ಯವಸ್ಥೆಯನ್ನು ಪಕ್ಕಕ್ಕಿಟ್ಟು, ಅದರ ಮೂಲ ಸ್ವರೂಪವನ್ನೇ ಪರಿಷ್ಕರಿಸಿ, ಸಂಪೂರ್ಣ ಹೊಸದಾದ ಮತ್ತು ಸಮಾನತೆಯ ತಳಹದಿಯ ‘ಲಿಂಗಾಯತ’ ಧರ್ಮವನ್ನು ರೂಪಿಸಿ ಆಚರಣೆಗೆ ತಂದರು. ಇದರ ಜೊತೆಗೇ ಮನುಷ್ಯನ ಮೂಲಭೂತ ದುಡಿಮೆಗೆ ಕಾಯಕ ಎನ್ನುವ ಮೆರುಗನ್ನು ಕೊಟ್ಟು ಅದರ ಇನ್ನೊಂದು ಮುಖವೇ ದಾಸೋಹ ಎಂದು ರೂಪಿಸಿದರು. ಇದೊಂದು ಅದ್ಭುತ ಆರ್ಥಿಕ ಸಬಲತೆಯನ್ನೂ ಮತ್ತು ಆಧ್ಯಾತ್ಮಿಕ ಸಾಧನೆಯ ಮೆಟ್ಟಿಲನ್ನು ಏರುವ ಮಾರ್ಗವಾಯಿತು. ಇಂತದೇ ಪ್ರಕ್ರಿಯೆಯ ಕೆಲವೊಂದು ಅಂಶವನ್ನ ಮೈಕೇಲ್ ಹ್ಯಾಮರ್ ಅವರ “Don’t Automate, Obliterate” (ಹಳೆಯ ವ್ಯವಸ್ಥೆಯನ್ನು ತೇಪೆ ಹಚ್ಚಬೇಡಿ, ಅದನ್ನು ಸಂಪೂರ್ಣವಾಗಿ ತೆಗೆದು ಹೊಸದನ್ನು ಸೃಷ್ಟಿಸಿ) ಎಂಬ ಆಧುನಿಕ Business Process Re-Engineering (BPR) ತತ್ವಕ್ಕೆ ಅತ್ಯಂತ ನಿಖರವಾಗಿ ಹೋಲಿಕೆಯಾಗುತ್ತದೆ.
ಬಿಸಿನೆಸ್ ಪ್ರೊಸೆಸ್ ರಿ-ಎಂಜಿನಿಯರಿಂಗ್ (BPR) ಎಂದರೇನು?
ಮೊದಲಿಗೆ ಬಿಸಿನೆಸ್ ಪ್ರೊಸೆಸ್ ರಿ-ಎಂಜಿನಿಯರಿಂಗ್ (BPR) ಎಂದರೇನು ಎಂಬುದನ್ನು ನೋಡೋಣ. 1993 ರಲ್ಲಿ ಅಮೆರಿಕಾದ ಮೈಕೇಲ್ ಹ್ಯಾಮರ್ ಮತ್ತು ಜೇಮ್ಸ್ ಚಾಂಪಿ ಅವರು ಬರೆದ “Reengineering the Corporation: A Manifesto for Business Revolution” ಎಂಬ ಪುಸ್ತಕ ಜಾಗತಿಕ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿತ್ತು. ಅವರ ಪ್ರಕಾರ, ತಂತ್ರಜ್ಞಾನ ಬೆಳೆದಂತೆ ಕಂಪನಿಗಳು ತಮ್ಮ ಹಳೆಯ ಕೆಲಸದ ಶೈಲಿಗೆ ಕಂಪ್ಯೂಟರ್ ಅಳವಡಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಹಳೆಯ ಪ್ರಕ್ರಿಯೆಗಳನ್ನು ಸಂಪೂರ್ಣವಾಗಿ ಕಿತ್ತೆಸೆದು, ಮೊದಲಿನಿಂದ (Starting from scratch) ಹೊಸದಾಗಿ ಯೋಚಿಸುವುದೇ ರಿ-ಎಂಜಿನಿಯರಿಂಗ್.
ಇದರ ಮುಖ್ಯ ನಾಲ್ಕು ಆಧಾರ ಸ್ತಂಭಗಳೆಂದರೆ:
- ಮೂಲಭೂತ ಮರುಚಿಂತನೆ (Fundamental Rethinking): ನಾವು ಈ ಕೆಲಸವನ್ನು ಏಕೆ ಮಾಡುತ್ತಿದ್ದೇವೆ? ಇವತ್ತಿಗೆ ಇದರ ಅಗತ್ಯವಿದೆಯೇ? ಎಂದು ಪ್ರಶ್ನಿಸುವುದು.
- ಆಮೂಲಾಗ್ರ ಮರುವಿನ್ಯಾಸ (Radical Redesign): ಸಣ್ಣ ಬದಲಾವಣೆಯಲ್ಲ, ವ್ಯವಸ್ಥೆಯ ಬೇರುಗಳನ್ನೇ ಬದಲಾಯಿಸುವುದು. ಹಳೆಯದನ್ನು ಕಿತ್ತೆಸೆದು ಹೊಸ ವ್ಯವಸ್ಥೆಯನ್ನು ಅಳವಡಿಸುವುದು.
- ನಾಟಕೀಯ ಸುಧಾರಣೆ (Dramatic Improvements): ಪ್ರಗತಿಯು ಶೇಕಡಾ 10 ರಷ್ಟಿರುವುದಲ್ಲ, ಹತ್ತು ಪಟ್ಟು ಹೆಚ್ಚಾಗಬೇಕು.
- ಪ್ರಕ್ರಿಯೆಗಳ ಕೇಂದ್ರೀಕರಣ (Centrallized Processing): ವೈಯಕ್ತಿಕ ವಿಭಾಗಗಳಿಗಿಂತ ಒಟ್ಟು ಪ್ರಕ್ರಿಯೆಗೆ ಒತ್ತು ನೀಡುವುದು.
ಬಸವಣ್ಣನವರ ಸಾಮಾಜಿಕ, ಧಾರ್ಮಿಕ ಮತ್ತುಆರ್ಥಿಕ ರಿ-ಎಂಜಿನಿಯರಿಂಗ್”
ಹನ್ನೆರಡನೇ ಶತಮಾನದ ಭಾರತೀಯ ಸಮಾಜವು ಜಾತಿ ಪದ್ಧತಿ, ಲಿಂಗ ತಾರತಮ್ಯ, ಅಸ್ಪೃಶ್ಯತೆ ಮತ್ತು ಧಾರ್ಮಿಕ ಶೋಷಣೆಯ ಕತ್ತಲಲ್ಲಿ ಮುಳುಗಿತ್ತು. ಅಂದಿನ ಅನಾದಿ ಶೈವ ಧರ್ಮ ಹಾಗೂ ಸನಾತನ ಧರ್ಮದ ಶ್ರೇಣೀಕೃತ ವ್ಯವಸ್ಥೆಯಲ್ಲಿ ಕಟ್ಟಕಡೆಯ ಮನುಷ್ಯನಿಗೆ ದೇವಸ್ಥಾನ ಪ್ರವೇಶವಿರಲಿಲ್ಲ, ವೇದಗಳನ್ನು ಕೇಳುವ ಹಕ್ಕಿರಲಿಲ್ಲ.
ಬಸವಣ್ಣನವರು ಒಬ್ಬ ಶ್ರೇಷ್ಠ ಸಾಮಾಜ ವಿಜ್ಞಾನಿಯಾಗಿ, ಹೊಸದೊಂದು ಧರ್ಮದ ಪ್ರವರ್ತಕರಾಗಿ, ಆರ್ಥಿಕವಾಗಿ ಕನಿಷ್ಟ ಹಂತದಲ್ಲಿದ್ದ, ಕಟ್ಟಕಡೆಯ ಸಮಾಜದ ದುಸ್ಥಿತಿಯನ್ನು, ಪೂರಕ ವ್ಯವಸ್ಥೆಗಳನ್ನು ಕಂಡು ಮಮ್ಮಲ ಮರುಗಿದರು. ಅದನ್ನು ಅಮೂಲಾಗ್ರವಾಗಿ ಬದಲಿಸಲು ಹಂಬಲಿಸಿ ಅದರಲ್ಲಿ ಯಶಸ್ವಿಯಾದರು. ಅವರು ಕೇವಲ ಉಪದೇಶ ನೀಡುವ ಸುಧಾರಕರಾಗಲಿಲ್ಲ ಬೋಧಿಸಿದ್ದನ್ನು ಆಚರಿಸಿದರು, ತಮ್ಮ ಅನುಯಾಯಿಗಳನ್ನು ಆ ಮಾರ್ಗದಲ್ಲಿ ನಡೆಯಲು ಪ್ರೇರಕರಾಗಿದ್ದರು. ಧರ್ಮದ ಮೂಲ ಪ್ರಕ್ರಿಯೆಯನ್ನೇ ‘ರಿ-ಎಂಜಿನಿಯರ್’ ಮಾಡಿದರು.
ಶ್ರೇಣೀಕೃತ ವ್ಯವಸ್ಥೆಯ ನಾಶಮತ್ತು ಸಮಾನಾಂತರ ಸಾಂಸ್ಥಿಕ ವಿನ್ಯಾಸ (Flat Structure):
ಆಧುನಿಕ ಬಿಪಿಆರ್ ತತ್ವದಲ್ಲಿ ‘Silos’ ಅಥವಾ ಶ್ರೇಣೀಕೃತ ವಿಭಾಗಗಳನ್ನು ಮುರಿದು, ಎಲ್ಲ ನೌಕರರನ್ನು ಸಮಾನ ವೇದಿಕೆಗೆ ತರುವುದನ್ನು ‘Flat Structure’ ಎನ್ನಲಾಗುತ್ತದೆ. ಬಸವಣ್ಣನವರು ಇದನ್ನು 12 ನೇ ಶತಮಾನದಲ್ಲೇ ‘ಅನುಭವ ಮಂಟಪ’ ದ ಮೂಲಕ ಸಾಧಿಸಿದರು. ಇದು ಜಗತ್ತಿನ ಪ್ರಥಮ ಸಂಸತ್ತು ಎಂದು ಜನಜನಿತವಾಗಿದೆ. ದೆಹಲಿಯ ಸಂಸತ್ ಭವನದಲ್ಲಿ ಅನುಭವ ಮಂಟಪದ ಚಿತ್ರ ಸ್ಥಾನ ಪಡೆದಿರುವುದು ಇದೇ ಕಾರಣಕ್ಕಾಗಿ. ಇಷ್ಟಲ್ಲದೇ ಅನುಭವ ಮಂಟಪ ಅತ್ಯುತ್ತಮ ಸಮಾನಾಂತರ ಸಾಂಸ್ಥಿಕ ಮಾದರಿಯಾಗಿದೆ. ಕೇವಲ ಅನುಭವ ಮಂಟಪ ಮಾತ್ರವಲ್ಲ ಶರಣ ಸಮಾಜದ ಉಸಿರಲ್ಲೂ ಸಮಾನತೆ ಮಿಳಿತವಾಗಿತ್ತು. ಇಲ್ಲಿ ಜಾತಿ, ಲಿಂಗ, ಅಂತಸ್ತಿನ ಭೇದವಿರಲಿಲ್ಲ. ರಾಜ ಬಿಜ್ಜಳನ ಆಸ್ಥಾನದ ಪ್ರಧಾನ ಮಂತ್ರಿಯಾಗಿದ್ದ ಬಸವಣ್ಣನವರು ಚಮ್ಮಾರ ಹರಳಯ್ಯ, ಮಡಿವಾಳ ಮಾಚಯ್ಯ, ನುಲಿಯ ಚಂದಯ್ಯ, ಅಕ್ಕಮಹಾದೇವಿ ಮತ್ತು ಆಯ್ದಕ್ಕಿ ಲಕ್ಕಮ್ಮ ಅವರೊಂದಿಗೆ ಒಂದೇ ವೇದಿಕೆಯಲ್ಲಿ ಕುಳಿತು ವೈಚಾರಿಕ ಚರ್ಚೆ ನಡೆಸುತ್ತಿದ್ದರು. ಮಹಾಮನೆಯಲ್ಲಿ ಸಹ ಭೋಜನ ಕೂಡ ನಡೆಯುತ್ತಿತ್ತು. ಈ ತತ್ವವನ್ನು ಎತ್ತಿ ಹಿಡಿಯುವ ವಚನವೊಂದು ಹೀಗಿದೆ:
ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯಾ,
ಇವನಮ್ಮವ ಇವನಮ್ಮವ ಇವನಮ್ಮವನೆಂದೆನಿಸಯ್ಯಾ.
ಕೂಡಲಸಂಗಮದೇವಾ ನಿಮ್ಮ ಮನೆಯ ಮಗನೆಂದೆನಿಸಯ್ಯಾ.
ಈ ವಚನವು ಕೇವಲ ಧರ್ಮ ಬೋಧನೆಯಲ್ಲ; ಇದು ಸಮಾಜದ ಪ್ರತಿಯೊಬ್ಬ ವ್ಯಕ್ತಿಯನ್ನೂ ಸಾಂಸ್ಥಿಕ ಪ್ರಕ್ರಿಯೆಯ ಒಳಗೆ ಸೇರಿಸಿಕೊಳ್ಳುವ (Inclusive Design) ಕಾಲಾತೀತ ಜಾಗತಿಕ ಸೂತ್ರವಾಗಿದೆ.
ಮಧ್ಯವರ್ತಿಗಳ ನಿರ್ಮೂಲನೆ (Disintermediation / Removing Middlemen):
ಇಂದಿನ ಇ-ಕಾಮರ್ಸ್ ಅಥವಾ ಆಧುನಿಕ ಉದ್ಯಮಗಳಲ್ಲಿ ಗ್ರಾಹಕನಿಗೂ ಕಂಪನಿಗೂ ನಡುವೆ ಮಧ್ಯವರ್ತಿಗಳು ಇಲ್ಲದಿದ್ದರೆ ದಕ್ಷತೆ ಹೆಚ್ಚುತ್ತದೆ ಮತ್ತು ಶೋಷಣೆ ತಪ್ಪುತ್ತದೆ. ಬಸವಣ್ಣನವರು ಧರ್ಮದಲ್ಲಿದ್ದ ಪುರೋಹಿತಶಾಹಿ ಎಂಬ ಮಧ್ಯವರ್ತಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ತೆಗೆದುಹಾಕಿದರು. ದೇವಸ್ಥಾನಗಳು ಶ್ರೀಮಂತರ ಕೈಯಲ್ಲಿದ್ದು, ಬಡವರ ಶೋಷಣೆಯ ಕೇಂದ್ರಗಳಾಗಿದ್ದವು. ಇದನ್ನು ನಿಲ್ಲಿಸಲು ಬಸವಣ್ಣನವರು ಪ್ರತಿಯೊಬ್ಬ ವ್ಯಕ್ತಿಗೂ ‘ಇಷ್ಟಲಿಂಗ’ ದೀಕ್ಷೆ ನೀಡಿದರು. ಇದರಿಂದಾಗಿ ದೇವರು ಮತ್ತು ಭಕ್ತನ ನಡುವಿನ ಸಂಪರ್ಕ ನೇರವಾಯಿತು.
ಅವರು ಸಾರಿದ ತತ್ವ ಅತ್ಯಂತ ಮಾರ್ಮಿಕವಾಗಿದೆ:
“ಉಳ್ಳವರು ಶಿವಾಲಯ ಮಾಡುವರು ನಾನೇನ ಮಾಡಲಿ ಬಡವನಯ್ಯಾ?
ಎನ್ನ ಕಾಲೇ ಕಂಬ, ದೇಹವೇ ದೇಗುಲ,
ಶಿರವೇ ಹೊನ್ನ ಕಳಸವಯ್ಯಾ.
ಕೂಡಲಸಂಗಮದೇವಾ ಕೇಳಯ್ಯಾ,
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ.”
ದೇವಾಲಯ ಎಂಬ ಭೌತಿಕ ಆಸ್ತಿಯನ್ನು (Fixed Asset) ತಿರಸ್ಕರಿಸಿ, ಪ್ರತಿಯೊಬ್ಬ ಮಾನವನ ದೇಹವನ್ನೇ ಚಲಿಸುವ ದೇವಾಲಯವನ್ನಾಗಿ (Mobile Capital) ಪರಿವರ್ತಿಸಿದ ಈ ಕಲ್ಪನೆ ಭೌತಿಕ ವಿನ್ಯಾಸದ ಅತ್ಯುನ್ನತ ರಿ-ಎಂಜಿನಿಯರಿಂಗ್ ಆಗಿದೆ.
ಭಾಷಾ ಸರಳೀಕರಣ ಮತ್ತು ಮುಕ್ತ ಪ್ರವೇಶ (User-Friendly Interface):
ಮೈಕೇಲ್ ಹ್ಯಾಮರ್ ಉದ್ಯಮಗಳ ಸಾಫ್ಟ್‌ವೇರ್ ಮತ್ತು ತಂತ್ರಜ್ಞಾನಗಳು ಸಾಮಾನ್ಯ ಬಳಕೆದಾರನಿಗೆ ಸುಲಭವಾಗಿ ಅರ್ಥವಾಗುವಂತಿರಬೇಕು (User-friendly) ಎನ್ನುತ್ತಾರೆ. ಬಸವಣ್ಣನವರ ಕಾಲದಲ್ಲಿ ಧರ್ಮ, ಜ್ಞಾನ ಮತ್ತು ತತ್ವಶಾಸ್ತ್ರಗಳು ‘ಸಂಸ್ಕೃತ’ ಭಾಷೆಯಲ್ಲಿ ಮಾತ್ರ ಇದ್ದವು. ಜೊತೆಗೆ ಅದನ್ನು ಕಲಿಯುವ ಸೌಲಭ್ಯ ಪುರೋಹಿತಶಾಹಿಗೆ ಮಾತ್ರವಿತ್ತು! ಸಾಮಾನ್ಯ ಜನರಿಗೆ ನಿಷಿದ್ಧವಾಗಿತ್ತು. ಬಸವಣ್ಣನವರು ಮತ್ತು ಶರಣರು ಈ ಸಂಕೀರ್ಣತೆಯನ್ನು ಮುರಿದು, ಜನರ ಆಡುಭಾಷೆ ‘ಕನ್ನಡ’ದಲ್ಲೇ ಅತ್ಯುನ್ನತ ಧರ್ಮದ ಸಾರವನ್ನು, ಜೀವನದ ಅರ್ಥವನ್ನು ‘ವಚನಗಳ’ ರೂಪದಲ್ಲಿ ನೀಡಿದರು. ಇದು ಜ್ಞಾನದ ಪ್ರಕ್ರಿಯೆಯನ್ನು ಪ್ರಜಾಪ್ರಭುತ್ವೀಕರಣಗೊಳಿಸಿತು (Democratization of Knowledge).
ಕಾಯಕ ಮತ್ತು ದಾಸೋಹ: ಆಧುನಿಕ ಅರ್ಥಶಾಸ್ತ್ರ ಹಾಗೂ Corporate Social Responsibility (CSR) ನ ಮೂಲ:
ಹ್ಯಾಮರ್ ಮತ್ತು ಚಾಂಪಿ ಅವರ ಸಿದ್ಧಾಂತದಲ್ಲಿ, ಪ್ರತಿಯೊಂದು ಕೆಲಸವೂ ಮೌಲ್ಯವನ್ನು ಸೃಷ್ಟಿಸಬೇಕು (Value Addition). ಮೌಲ್ಯ ಸೃಷ್ಟಿಸದ ಪ್ರಕ್ರಿಯೆಗಳು ವ್ಯರ್ಥ. ಬಸವಣ್ಣನವರು ಈ ಆರ್ಥಿಕ ತತ್ವಕ್ಕೆ ಆಧ್ಯಾತ್ಮಿಕ ಮತ್ತು ಸಾಮಾಜಿಕ ಆಯಾಮ ನೀಡಿ ‘ಕಾಯಕ’ ತತ್ವವನ್ನು ಪ್ರಕಟಿಸಿದರು.
“ಕಾಯಕದಲ್ಲಿ ನಿರತನಾದಡೆ, ಗುರುದರ್ಶನವಾದಡೂ ಮರೆಯಬೇಕು,
ಲಿಂಗಪೂಜೆಯಾದಡೂ ಮರೆಯಬೇಕು,
ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು.
ಕಾಯಕವೆ ಕೈಲಾಸವಾದ ಕಾರಣ.
ಅಮರೇಶ್ವರಲಿಂಗವಾಯಿತ್ತಾದಡೂ ಕಾಯಕದೊಳಗು.”
ಬಸವಣ್ಣನವರ ದೃಷ್ಟಿಯಲ್ಲಿ ಯಾವುದೇ ಕೆಲಸ ಕೀಳಲ್ಲ, ಯಾವುದೇ ಕೆಲಸ ಮೇಲಲ್ಲ. ಶ್ರಮ ಗೌರವವನ್ನು ಎತ್ತಿಹಿಡಿಯುವ ಮೂಲಕ ಅವರು ಇಡೀ ಸಮಾಜವನ್ನು ಉತ್ಪಾದಕ ಶಕ್ತಿಯನ್ನಾಗಿ ಪರಿವರ್ತಿಸಿದರು.
ಅದೇ ರೀತಿ, ಕಾಯಕದಿಂದ ಬಂದ ಹೆಚ್ಚುವರಿ ಸಂಪತ್ತನ್ನು ಸ್ವಾರ್ಥಕ್ಕಾಗಿ ಸಂಗ್ರಹಿಸದೆ ಸಮಾಜದ ಕಲ್ಯಾಣಕ್ಕಾಗಿ ವಿನಿಯೋಗಿಸುವುದೇ ‘ದಾಸೋಹ‘. ಇದು ಇಂದಿನ ಜಾಗತಿಕ ಉದ್ಯಮ ರಂಗದಲ್ಲಿ ಕಡ್ಡಾಯವಾಗಿರುವ Corporate Social Responsibility (CSR) ಪರಿಕಲ್ಪನೆಗೆ ನೈಜ ಮುನ್ಸೂಚನೆಯಾಗಿದೆ. ಕಂಪನಿಗಳು ಸಮಾಜದಿಂದ ಗಳಿಸಿದ ಲಾಭದ ಒಂದು ಭಾಗವನ್ನು ಸಮಾಜಕ್ಕೇ ಮರುಪಾವತಿಸಬೇಕು ಎಂಬ ನಿಯಮವನ್ನು ಬಸವಣ್ಣನವರು ಹನ್ನೆರಡನೇ ಶತಮಾನದಲ್ಲೇ ಕಡ್ಡಾಯ ಸಾಮಾಜಿಕ ನಿಯಮವನ್ನಾಗಿ ಮಾಡಿದ್ದರು.
ಮೈಕೇಲ್ ಹ್ಯಾಮರ್ ತಂದ ತಲ್ಲಣಗಳು ವರ್ಸಸ್ ಕಲ್ಯಾಣದ ಕ್ರಾಂತಿ (The Backlash Theory):
ಯಾವುದೇ ವ್ಯವಸ್ಥೆಯಲ್ಲಿ ‘ಆಮೂಲಾಗ್ರ ಬದಲಾವಣೆ’ (Radical Change) ತರಲು ಹೊರಟಾಗ ಹಳೆಯ ಪಟ್ಟಭದ್ರ ಹಿತಾಸಕ್ತಿಗಳಿಂದ ತೀವ್ರ ಪ್ರತಿರೋಧ ಎದುರಾಗುವುದು ಸಹಜ. ಇದನ್ನು 12 ನೆ ಶತಮಾನ ಮತ್ತು 20 ನೆ ಶತಮಾನದಲ್ಲೂ ನಾವು ಕಾಣಬಹುದು.
ಅಮೆರಿಕಾದ ಕಾರ್ಪೊರೇಟ್ ಜಗತ್ತಿನಲ್ಲಾದ ತಲ್ಲಣಗಳು:
1990 ರ ದಶಕದಲ್ಲಿ ಅಮೆರಿಕಾದ IBM, ಫೋರ್ಡ್, ಎಟಿ ಆಂಡ್ ಟಿ ನಂತಹ ದೈತ್ಯ ಕಂಪನಿಗಳು ಹ್ಯಾಮರ್ ಅವರ ಬಿಪಿಆರ್ ಸಿದ್ಧಾಂತವನ್ನು ಅಳವಡಿಸಿಕೊಂಡವು. ಅದರ ಪರಿಣಾಮ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನರು ಕೆಲಸ ಕಳೆದುಕೊಂಡರು. ಬಿಪಿಆರ್ ಅಳವಡಿಸಿಕೊಂಡ ಕಂಪೆನಿಗಳು ತಮ್ಮಲ್ಲಿ ಅಗತ್ಯಕ್ಕಿಂತ ಹೆಚ್ಚು ಉದ್ಯೋಗಿಗಳಿದ್ದಾರೆ ಎಂದು ವಿಶ್ಲೇಷಿಸಿದರು. ಮರುವಿನ್ಯಾಸದ ಹೆಸರಿನಲ್ಲಿ ಕಂಪನಿಗಳು ವೆಚ್ಚ ಕಡಿಮೆ ಮಾಡಲು (Cost Cutting) ಲಕ್ಷಾಂತರ ಮಧ್ಯಮ ಹಂತದ ಮ್ಯಾನೇಜರ್‌ಗಳನ್ನು ಮತ್ತು ದಕ್ಷ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದವು.
ಇದರಿಂದಾಗಿ ಅಮೆರಿಕಾದಲ್ಲಿ ಬಿಪಿಆರ್ ಎಂದರೆ “Mass Downsizing” (ಬೃಹತ್ ಉದ್ಯೋಗ ಕಡಿತ) ಮತ್ತು “ಉದ್ಯೋಗ ಹಂತಕ” ಎಂಬ ಕುಖ್ಯಾತಿ ಪಡೆಯಿತು. ಇಡೀ ಅಮೆರಿಕನ್ ಕಾರ್ಪೊರೇಟ್ ವಲಯದಲ್ಲಿ ಭೀತಿ ಮತ್ತು ತಲ್ಲಣ ಉಂಟಾಯಿತು. ಕೊನೆಗೆ 1996 ರಲ್ಲಿ ಸ್ವತಃ ಮೈಕೇಲ್ ಹ್ಯಾಮರ್ ಅವರೇ ಒಪ್ಪಿಕೊಂಡರು: “ನಾವು ಪ್ರಕ್ರಿಯೆಗಳನ್ನು ಬದಲಾಯಿಸುವ ಆತುರದಲ್ಲಿ, ಅದರ ಒಳಗಿರುವ ಮನುಷ್ಯರನ್ನು ಮತ್ತು ಅವರ ಭಾವನೆಗಳನ್ನು ನಿರ್ಲಕ್ಷಿಸಿದೆವು. ಅದು ನಮ್ಮ ಸಿದ್ಧಾಂತದ ದೋಷವಲ್ಲ, ಅನುಷ್ಠಾನದ ದೋಷ.”
ಬಸವಣ್ಣನವರ ಕಲ್ಯಾಣದಲ್ಲಾದ ತಲ್ಲಣಗಳು:
ಬಸವಣ್ಣನವರ ರಿ-ಎಂಜಿನಿಯರಿಂಗ್ ಕ್ರಾಂತಿಯಲ್ಲೂ ತಲ್ಲಣ ಉಂಟಾಯಿತು. ಆದರೆ, ಅದು ಅಮೆರಿಕಾದಂತೆ ಮನುಷ್ಯರನ್ನು ಕಡೆಗಣಿಸಿದ್ದರಿಂದ ಉಂಟಾದ ತಲ್ಲಣವಲ್ಲ; ಬದಲಿಗೆ ತಳಸಮುದಾಯದ ಮನುಷ್ಯರನ್ನು ಅಪ್ಪಿಕೊಂಡಿದ್ದರಿಂದ ಉಂಟಾದ ತಲ್ಲಣ!
ಶರಣ ಹರಳಯ್ಯ (ಪರಿಶಿಷ್ಟ ಜಾತಿ) ಮತ್ತು ಶರಣ ಮಧುವರಸರ (ಬ್ರಾಹ್ಮಣ ಜಾತಿ) ಮಕ್ಕಳ ನಡುವೆ ಬಸವಣ್ಣನವರ ನೇತೃತ್ವದಲ್ಲಿ ನಡೆದ ಅಂತರ್ಜಾತಿ ವಿವಾಹ ಅಂದಿನ ಸಾಂಪ್ರದಾಯಿಕ ಸಮಾಜದ ತಳಹದಿಯನ್ನೇ ನಡುಗಿಸಿತು. ವರ್ಣಸಂಕರವಾಯಿತೆಂದು ಪುರೋಹಿತಶಾಹಿ ಬೊಬ್ಬಿಟ್ಟಿತು! ರಾಜಪ್ರಭುತ್ವ ಮತ್ತು ಪುರೋಹಿತಶಾಹಿ ವರ್ಗ ಒಟ್ಟಾಗಿ ಶರಣರ ಮೇಲೆ ದೌರ್ಜನ್ಯವೆಸಗಿದವು. ಇದು ‘ಕಲ್ಯಾಣ ಕ್ರಾಂತಿ’ ಮತ್ತು ರಕ್ತಪಾತಕ್ಕೆ ಕಾರಣವಾಯಿತು.
ಇಲ್ಲಿ ಗಮನಿಸಬೇಕಾದ ಮುಖ್ಯ ವ್ಯತ್ಯಾಸವೆಂದರೆ, ಹ್ಯಾಮರ್ ಅವರ ಸಿದ್ಧಾಂತವು ಕಾರ್ಪೊರೇಟ್ ಲಾಭಕ್ಕಾಗಿ ಮನುಷ್ಯರನ್ನು ಬಲಿಪೀಠದ ಮೇಲೆ ನಿಲ್ಲಿಸಿತು. ಆದರೆ ಬಸವಣ್ಣನವರ ಸಿದ್ಧಾಂತವು ಮನುಷ್ಯರ ಘನತೆಗಾಗಿ, ಮಾನವೀಯ ಮೌಲ್ಯಗಳಿಗಾಗಿ ಇಡೀ ವ್ಯವಸ್ಥೆಗೇ ಸವಾಲು ಒಡ್ಡಿತು.
ಬಸವಣ್ಣನವರ ವಿಷನ್ ಏಕೆ ಸಾರ್ವಕಾಲಿಕ?
ಮೈಕೇಲ್ ಹ್ಯಾಮರ್ ಅವರ ಬಿಪಿಆರ್ ಸಿದ್ಧಾಂತವು ಇಂದಿನ ಕೃತಕ ಬುದ್ಧಿಮತ್ತೆ (AI) ಮತ್ತು ಡಿಜಿಟಲ್ ಯುಗದಲ್ಲಿ ಮತ್ತಷ್ಟು ರೂಪಾಂತರಗೊಳ್ಳುತ್ತಿದೆ. ಆದರೆ ಬಸವಣ್ಣನವರ ವಿಷನ್ ಸಾರ್ವಕಾಲಿಕವಾಗಿ ಉಳಿದಿದೆ. ಅದಕ್ಕೆ ಪ್ರಮುಖ ಕಾರಣಗಳು ಇಲ್ಲಿವೆ:
- ಜಾಗತಿಕ ಮಾನವ ಹಕ್ಕುಗಳ ಮೊದಲ ಪ್ರಣಾಳಿಕೆ: ವಿಶ್ವಸಂಸ್ಥೆಯು 20 ನೇ ಶತಮಾನದಲ್ಲಿ ಘೋಷಿಸಿದ ಮಾನವ ಹಕ್ಕುಗಳ ಆಶಯಗಳನ್ನು ಬಸವಣ್ಣನವರು 12 ನೇ ಶತಮಾನದಲ್ಲೇ ಪ್ರಾಯೋಗಿಕವಾಗಿ ತಂದಿದ್ದರು.
- ನೈಜ ಸ್ತ್ರೀವಾದ (Feminism): ಮಹಿಳೆಗೆ ಧಾರ್ಮಿಕ ಮತ್ತು ಬೌದ್ಧಿಕ ಸಮಾನತೆ ನೀಡಿ, ಸಮಾಜದ ಮುಖ್ಯವಾಹಿನಿಗೆ ತಂದ ಹೆಗ್ಗಳಿಕೆ ಬಸವಣ್ಣನವರದ್ದು.
- ವೈಜ್ಞಾನಿಕ ಮನೋಭಾವ (Scientific Temperament): ಜಾತಕ, ಜ್ಯೋತಿಷ್ಯ, ಮೂಢನಂಬಿಕೆಗಳನ್ನು ತಿರಸ್ಕರಿಸಿ, ಇಂದಿನ ತಾರ್ಕಿಕ ಜಗತ್ತಿಗೆ ಬೇಕಾದ ವೈಚಾರಿಕ ಮನೋಭಾವವನ್ನು ವಚನಗಳ ಮೂಲಕ ಬಿತ್ತಿದರು.
- ಸುಸ್ಥಿರ ಜೀವನ ಶೈಲಿ (Sustainable Living): ಪರಿಸರವನ್ನು ಗೌರವಿಸುತ್ತಾ, ಲೋಭವಿಲ್ಲದೆ ಬದುಕುವ ಅವರ ತತ್ವ ಇಂದಿನ ಗ್ಲೋಬಲ್ ವಾರ್ಮಿಂಗ್ ಯುಗಕ್ಕೆ ಅತ್ಯಂತ ಅನಿವಾರ್ಯವಾಗಿದೆ.
ಕಾಲದೇಶಗಳ ಗಡಿಯನ್ನು ಮೀರಿದ ವೀಭೂತಿ ಪುರುಷ ಬಸವೇಶ್ವರರು:
ಮೈಕೇಲ್ ಹ್ಯಾಮರ್ ಮತ್ತು ಜೇಮ್ಸ್ ಚಾಂಪಿ ಅವರು ಕಾರ್ಪೊರೇಟ್ ಸಂಸ್ಥೆಗಳ ದಕ್ಷತೆ ಮತ್ತು ಲಾಭದ ದೃಷ್ಟಿಯಿಂದ ರಿ-ಎಂಜಿನಿಯರಿಂಗ್ ತತ್ವಗಳನ್ನು ಮಂಡಿಸಿದರು. ಆದರೆ ಬಸವಣ್ಣನವರು ಇಡೀ ಮಾನವ ಸಮಾಜದ ಕಲ್ಯಾಣಕ್ಕಾಗಿ, ಶೋಷಣೆಮುಕ್ತ ಬದುಕಿಗಾಗಿ ಸಮಾಜೋ-ಧಾರ್ಮಿಕ-ಆರ್ಥಿಕ ರಿ-ಎಂಜಿನಿಯರಿಂಗ್ ಮಾಡಿದರು.
ಯಾವ ಸಿದ್ಧಾಂತಗಳು ಕೇವಲ ಲಾಭ ಅಥವಾ ಭೌತಿಕ ಲಾಭದ ಮೇಲೆ ನಿಂತಿರುತ್ತವೆಯೋ ಅವು ಕಾಲಕ್ಕೆ ತಕ್ಕಂತೆ ಬದಲಾಗಬೇಕಾಗುತ್ತದೆ. ಆದರೆ, ಮನುಷ್ಯತ್ವ, ಸಮಾನತೆ ಮತ್ತು ಪ್ರಾಮಾಣಿಕ ಶ್ರಮದ ತಳಹದಿಯ ಮೇಲೆ ನಿಂತಿರುವ ಬಸವಣ್ಣನವರ ತತ್ವಗಳು ಎಂದಿಗೂ ಮಾಸುವುದಿಲ್ಲ, ಕಾಲ ಕಳೆದಂತೆ ಅವು ಪುಟಕ್ಕಿಟ್ಟ ಚಿನ್ನದಂತೆ ಹೊಳೆಯುತ್ತವೆ. ಬಸವಣ್ಣನವರು ಕೇವಲ ಹನ್ನೆರಡನೇ ಶತಮಾನದ ಸಂತರಲ್ಲ; ಅವರು ಇಂದಿಗೂ ಮುಂದಿನ ಆಧುನಿಕ ಜಗತ್ತಿಗೂ ದಾರಿದೀಪವಾಗಿರುವ ಜಗತ್ತಿನ ಶ್ರೇಷ್ಠ ಮತ್ತು ಕಾಲಾತೀತ Social Engineer.
ಪ್ರೊ. ಎಸ್. ಜಿ. ಶಿವಶಂಕರ,
ಸೀನೀಯರ್ ಮ್ಯಾನೇಜರ್ (ವಿಶ್ರಾಂತ)
L-1603, ಪೂರ್ವ ಪಾಮ್ ಬೀಚ್,
ಎಲುʼಸ್ ರೋಡ್, ಹನುಮಂತಪ್ಪ ಲೇಔಟ್,
ದೊಡ್ಡಗುಬ್ಬಿ ಮೇನ್ ರೋಡ್,
ಕ್ಯಾಲಸನಹಳ್ಳಿ, ಬೆಂಗಳೂರು – 560 077
ಮೋಬೈಲ್ ನಂ. 99000 93842.
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ (ರಿ) ದ ಸಂಚಾಲಕರನ್ನು ಸಂಪರ್ಕಿಸಬೇಕಾದ:
- ಮೋಬೈಲ್ ನಂ. 9741 357 132
- e-Mail ID: info@vachanamandara.in and admin@vachanamandara.in





Total views : 67055