![]()

ಸಂಕ್ಷಿಪ್ತ ಪರಿಚಯ:
ಉಳಿಯುಮೇಶ್ವರ ಚಿಕ್ಕಯ್ಯ, ಉಳಿಯುಮೇಶ್ವರ ಚಿಕ್ಕಣ್ಣ ಎಂಬ ಹೆಸರುಗಳಿಂದ ಗುರುತಿಸಿಕೊಂಡ ಇವರು 12 ನೇ ಶತಮಾನದ ವಿಶ್ವಗುರು ಬಸವಣ್ಣನವರ ಸಮಕಾಲೀನ ಶರಣರಾಗಿದ್ದಾರೆ. ಇವರು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ “ದೇವರಗುಡಿ” ಎಂಬ ಗ್ರಾಮದವರು. ಇಲ್ಲಿ ದೊರೆತಿರುವ ಒಂದು ಶಾಸನದಲ್ಲಿ 5 ದತ್ತಿಗಳ ಮಾಹಿತಿ ಇದ್ದು ಅದರಲ್ಲಿ 3, 4, 5 ದತ್ತಿಗಳಲ್ಲಿ ಈ ಶರಣರ ಕುರಿತು ಉಲ್ಲೇಖವಿದೆ. 1202 ರ ಶಾಸನವು ಇವರ ಕುರಿತು ಉಲ್ಲೇಖಿಸಿದರೆ 1279 ನೇ ಇಸ್ವಿಯ ಕಲ್ಲೇದೇವರಪುರ ಶಾಸನದಲ್ಲಿ ಅನೇಕ ಶರಣರ ಹೆಸರುಗಳ ಮಧ್ಯದಲ್ಲಿ ಇವರ ಹೆಸರು ಇರುವುದು ಕಂಡುಬಂದಿದೆ. ಕಾಳಾಮುಖ ಆಚಾರ್ಯರೂ, ಪಂಡಿತೋತ್ತಮರೂ ಆಗಿದ್ದ ಇವರು ಉಳಿಯುಮೇಶ್ವರ ದೇವಸ್ಥಾನದ ಪ್ರಧಾನ ಅಧಿಪತಿಯಾಗಿದ್ದರು. ದೇವರಗುಡಿ ಗ್ರಾಮದಲ್ಲಿ ಮಲ್ಲಿಕಾರ್ಜುನ ದೇವಸ್ಥಾನವಿದ್ದು ಇದನ್ನು “ಹುಳಿಯ” ಎಂಬುವನು ಇಲ್ಲಿ ಲಿಂಗ ಸ್ಥಾಪಿಸಿದ್ದಕ್ಕೆ ಈ ದೇವಾಲಯಕ್ಕೆ “ಹುಳಿಯುಮೇಶ್ವರ” ಎಂಬ ಹೆಸರಿದ್ದು ಜನರ ಆಡುಭಾಷೆಯಲ್ಲಿ ಅದು ಉಳಿಯುಮೇಶ್ವರ ಆಯಿತು. ಈ ಉಳಿಯುಮೇಶ್ವರರ ಭಕ್ತರಾದ ಈ ಶರಣರು ಉಳಿಯುಮೇಶ್ವರ ಚಿಕ್ಕಯ್ಯ ಎಂದು ಕರೆಯಿಸಿಕೊಂಡಿದ್ದಾರೆ. ಶಾಸನದಲ್ಲಿ ಇವರನ್ನು ಚಿಕ್ಕಯ್ಯತೀಶ, ಸಕಳಗುರು, ಹುಳಿಯುಮೇಶ್ವರ ಕರುಣದ ಭೃತ್ಯ, ಮಠದ ಆಚಾರ್ಯ, ಚಿಕ್ಕಯ್ಯ ಪಂಡಿತ ಮುಂತಾದ ಹೆಸರುಗಳಿಂದ ಕರೆಯಲಾಗಿದೆ. “ಉಳಿಯುಮೇಶ್ವರಾ” ಎಂಬ ವಚನಾಂಕಿತದಲ್ಲಿ ಇವರ 12 ವಚನಗಳು ಲಭ್ಯವಾಗಿವೆ.
ಕಲ್ಯಾಣದ ಅನುಭವ ಮಂಟಪಕ್ಕೆ ಹೋಗಿ ಬರುವ ಚರಜಂಗಮರು ಉಳಿಯುಮೇಶ್ವರ ದೇವಾಲಯದಲ್ಲಿ ಉಳಿದುಕೊಂಡು ಬಸವಣ್ಣನವರ ಅನುಭವ ಮಂಟಪದ ಅನುಭಾವದ ವಿಚಾರಗಳನ್ನು ಮಾತನಾಡುವುದನ್ನು ಕೇಳಿಸಿಕೊಂಡು ಪ್ರಭಾವಿತರಾದ ಇವರು ಕಲ್ಯಾಣಕ್ಕೆ ಬಂದು ಅಲ್ಲಿಯ ಅನುಭಾವ ಗೋಷ್ಠಿಯಲ್ಲಿ ಪಾಲ್ಗೊಂಡು, ತಾನು ಓದಿದ ಅನುಭಾವ ಶಾಸ್ತ್ರ, ಪುರಾಣ, ಆಗಮ, ತರ್ಕದ ವಿಚಾರಗಳು ಶುಷ್ಕವಾದವುಗಳು. ಶರಣರ ಸರಳ ತತ್ವ ವಿಚಾರಗಳು ಹೃದಯಸ್ಪರ್ಷಿಯಾದವುಗಳು ಎಂಬುದನ್ನು ಅರಿತುಕೊಂಡು ಪರಿವರ್ತನೆಯಾಗುತ್ತಾರೆ. ಇದಕ್ಕೆ ಕಾರಣರಾದ ಬಸವಣ್ಣನವರು ಗುರು ಸ್ವರೂಪ, ಚನ್ನಬಸವಣ್ಣನವರು ಲಿಂಗ ಸ್ವರೂಪ, ಸಿದ್ಧರಾಮೇಶ್ವರರು ಜಂಗಮ ಸ್ವರೂಪ, ಮರುಳಶಂಕರದೇವರು ಪ್ರಸಾದ ಸ್ವರೂಪ, ಪ್ರಭುದೇವರು ಜ್ಞಾನ ಸ್ವರೂಪರು ಎಂದು ಭಾವಿಸಿ ತಮ್ಮ ವಚನಗಳಲ್ಲಿ ಅವರನ್ನು ಸ್ಮರಿಸಿದ್ದಾರೆ.
ವಚನ:
ಎಲುವೊಡೆದು, ತನು ಕರಗಿ, ಮನವು ಜಜ್ಜರಂಬೋಗಿ,
ಲಿಂಗದಲ್ಲಿ ನೀರು ನೀರ ಕೂಡಿದಂತಿಬೇಕು,
ಜಂಗಮದಲ್ಲಿ ವಾರಿಕಲ್ಲಾಗಿ ಕರಗಲಿಬೇಕು.
ಸದ್ಗುರುವಿನೊಳು ಬೇರಿಲ್ಲದಂತೆ ಬೆರೆಸಬೇಕು,
ಇಂತೀ ತ್ರಿವಿಧದಲ್ಲಿ ಕೂಡಿದಲ್ಲದೆ ಸುಖವಿಲ್ಲ ನೋಡಾ,
ಸರ್ವಾಂಗ ಪುಳಕಂಗಳೊಡೆದು ಕಡಲುಗಳಾಗಿ,
ಇಂತಪ್ಪ ನಿರ್ವಾಣ ನಿಜಪದವೆಂದಪ್ಪುದೋ ಉಳಿಯುಮೇಶ್ವರಾ?
(ಸಮಗ್ರ ವಚನ ಸಂಪುಟ-6/2016/ಪುಟ. ಸಂ-1135/ವಚನ. ಸಂ. 1632)
ನಿರ್ವಚನ:
ಲಿಂಗಾಂಗ ಸಾಮರಸ್ಯದ, ಶಿವಯೋಗ ಸಾಧನೆಯ ನಿಜಪದ ಪಡೆಯಲು ಹಂಬಲಿಸುವ ವಚನವಿದು. ಗುರು, ಲಿಂಗ, ಜಂಗಮ ತತ್ವ ಮತ್ತು ಅವುಗಳ ಮಹತ್ವ ಈ ವಚನ ತಿಳಿಸುತ್ತದೆ. ಗುರುವಿಗೆ ತನುವನ್ನು, ಲಿಂಗಕ್ಕೆ ಮನವನ್ನು, ಜಂಗಮಕ್ಕೆ ಧನವನ್ನು ಸಮರ್ಪಿಸುವುದಷ್ಟೇ ಅಲ್ಲಾ, ಅದರಾಚೆ ದೇಹವು ದೇಹಭಾವ ಕರಗಿಸಿಕೊಂಡು ದೇವಭಾವ ಧರಿಸಿಕೊಂಡು, ಮನವು ಪೂರ್ವಜನ್ಮ ವಾಸನೆ ಕಳೆದುಕೊಂಡು, ಅಷ್ಟಮದ, ಅರಿಷಡ್ವರ್ಗಗಳ, ತ್ರಿಮಲದಿಂದ ಮುಕ್ತವಾಗಿ ನೀರು ನೀರಲ್ಲಿ ಬೆರೆತಂತೆ ದೇಹ ಭಾವಗಳು ಲಿಂಗದಲ್ಲಿ ಒಂದಾಗಿ ಲಿಂಗಾಂಗ ಸಾಮರಸ್ಯ ಹೊಂದಬೇಕು. ಜಂಗಮ (ಸಮಾಜ) ರೊಡನೆ ಆಲಿಕಲ್ಲು ಕರಗುವಂತೆ ಬೆರೆಯಬೇಕು. ಗುರುವಿನೊಳಗೆ ಅರಿವನ್ನು ಸಂಪಾದಿಸಿ ಅವಿನಾಭಾವ ಸಂಬಂಧ ಪಡೆಯಬೇಕು. ಗುರು-ಲಿಂಗ-ಜಂಗಮವೆಂಬ ತ್ರಿವಿಧಗಳೊಂದಿಗೆ ಅಹಂ ನಿರಸನ ಮಾಡಿಕೊಂಡು ಒಂದಾಗುವ ತತ್ವವೇ “ನಿರ್ವಾಣಸ್ಥಿತಿ”. ಅದುವೇ “ಸಮಾಧಿಸ್ಥಿತಿ”. ಅದುವೇ ಶಿವಯೋಗದ ನಿಜಪದವಿಗೇರುವ ಸ್ಥಿತಿ ಎಂಬ ಶರಣರ ತತ್ವ ಸಿದ್ಧಾಂತಗಳಲ್ಲಿ ಮುಖ್ಯವಾದ ಗುರು-ಲಿಂಗ-ಜಂಗಮದೊಂದಿಗಿನ ಒಡನಾಟವನ್ನು ಉಳಿಯುಮೇಶ್ವರ ಚಿಕ್ಕಯ್ಯನವರ ವಚನ ತಿಳಿಸುತ್ತದೆ.
ಡಾ. ಪುಷ್ಪಾವತಿ ಶಲವಡಿಮಠ,
ಕನ್ನಡ ಉಪನ್ಯಾಸಕರು,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು,
ಹಾನಗಲ್ಲ, ಹಾವೇರಿ ಜಿಲ್ಲೆ.
ಮೋಬೈಲ್. ಸಂ. 97407 38330.
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ (ರಿ) ದ ಸಂಚಾಲಕರನ್ನು ಸಂಪರ್ಕಿಸಬೇಕಾದ:
- ಮೋಬೈಲ್ ನಂ. 9741 357 132
- e-Mail ID: info@vachanamandara.in and admin@vachanamandara.in





Total views : 67055
ಮಾನ್ಯರೇ ನಮಸ್ಕಾರ
ಉಳಿಉಮೇಶ್ವರ ಚಿಕ್ಕಯ್ಯ ಶರಣರು ವಿಶ್ವಕರ್ಮ ಕುಲಸಂಜಾತರೆ?