ಲೋಕದ ಡೊಂಕ‌ ನೀವೇಕೆ ತಿದ್ದುವಿರಿ| ಡಾ. ಸರ್ವಮಂಗಳ ಸಕ್ರಿ, ರಾಯಚೂರು.

Loading

ಲೋಕದ ಡೊಂಕ‌ ನೀವೇಕೆ ತಿದ್ದುವಿರಿ?
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ;
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ.
ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ
ಕೂಡಲಸಂಗಮದೇವ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-36/ವಚನ ಸಂಖ್ಯೆ-124)

೧೨ ನೇ  ಶತಮಾನದ ವಚನ ಸಾಹಿತ್ಯ ಅಂದು ವೈಜ್ಞಾನಿಕ ಮನೋಭಾವದ ವೈಚಾರಿಕತೆಯನ್ನು ಹುಟ್ಟು ಹಾಕಿದ ಕಾಲವದು. ಭಕ್ತಿ ಸಾಹಿತ್ಯದ ಜೊತೆಗೆ ಸಾಮಾಜಿಕ ಚಿಂತನೆಯನ್ನು ಹೇಳಿದ ಶರಣರು ಸಮಾಜವನ್ನು ತಮ್ಮ ಕುಟುಂಬವೆಂದು ಸ್ವೀಕರಿಸಿದ್ದರು. ಹೀಗಾಗಿ ಲೋಕದ ತುಡಿತ ಆಶಯಗಳನ್ನು ತಮ್ಮದಾಗಿಸಿಕೊಂಡರು.

ಲೋಕವೆಂದಾಗ ಸಮಾಜ-ಜನರ ನಡುವಿನ ಸಂಬಂಧ  ಸಾಮಾಜಿಕ ಸಮಸ್ಯೆಗಳಾಗಿರುತ್ತವೆ. ಲೋಕದ ಜನರ ಮನಸ್ಥಿತಿ ಎತ್ತ ಸಾಗುತ್ತಿದೆ ಎಂಬ ಅವಲೋಕನ ಬಹಳ ಮುಖ್ಯವಾಗುತ್ತದೆ. ಲೋಕ ಕಲ್ಯಾಣದ ಅಭಿವೃದ್ಧಿಗಾಗಿ, ಉದ್ದಾರಕ್ಕಾಗಿ ತೊಡಗಿಸಿಕೊಳ್ಳುವವರು ಲೋಕದ ಸೇವೆ ಎಂದು ಸುಮ್ಮನಾಗಲು ಸಾಧ್ಯವಿಲ್ಲ. ಕುತಂತ್ರಿಗಳು ವಿಕಾರ ಮನಸ್ಸುಳ್ಳವರ ಜೊತೆಗೆ ನಾವಿದ್ದೇವೆ. ಮನುಷ್ಯರು ತಾವೇ ಶ್ರೇಷ್ಠವೆಂದು ಮುಖವಾಡ ಹೊತ್ತ ಜನಗಳ ಮಧ್ಯ ನಾವಿಂದು ಬದುಕುತ್ತಿದ್ದೇವೆ. ಸಮಾಜದ ಕಟ್ಟುಪಾಡುಗಳನ್ನು ಸ್ವೀಕರಿಸಿ ಬದುಕನ್ನು ಮುಂದುವರಿಸುವ ಅನಿವಾರ್ಯತೆ ನಮಗಿದೆ.

ಪ್ರಕೃತಿ ಮತ್ತು ಸಮಾಜ ನನಗೆ ಎಲ್ಲವನ್ನೂ ಕೊಟ್ಟಿದೆ. ಗಾಳಿ, ನೀರು, ಆಹಾರ, ವಸ್ತ್ರ, ನಮ್ಮ ಅಸ್ತಿತ್ವ, ಗೌರವ ಮತ್ತು ಸ್ಥಾನಮಾನ ಎಲ್ಲವನ್ನೂ ನೀಡಿದೆ. ಆದರೆ ಸಮಾಜಕ್ಕೆ ನಾವು ಏನು ಕೊಟ್ಟಿದ್ದೇವೆ ಎಂಬುದನ್ನು ಗಮನಿಸಬೇಕು. ಲೋಕದ ಋಣ ತೀರಿಸುವುದು ಪ್ರತಿಯೊಬ್ಬರ ಕರ್ತವ್ಯ. ಶರಣರು ನಿಸ್ವಾರ್ಥ ಸೇವೆಯೇ ಬದುಕು ಎಂದರು. ಲೋಕ ಕಲ್ಯಾಣಕ್ಕಾಗಿ ಮಾನವತೆಯ ಹಂಬಲ ಹೊತ್ತ ಶರಣರು ಲೋಕದ ಡೊಂಕ ನೀವೇಕೆ ತಿದ್ದುವಿರಿ ಎಂದು ಸಮಾಜದ ನೂನ್ಯತೆಗಳನ್ನು ಸ್ಪಷ್ಟಪಡಿಸಿ ಎಚ್ಚರಿಸಿದ್ದಾರೆ. ಮಾನವೀಯ ಸುಧಾರಣೆ ನಮ್ಮ ಧ್ಯೇಯವಾಗಬೇಕು. ಮನುಷ್ಯರಾಗಿ ಸ್ಪಂದಿಸಲೇಬೇಕು.


ಸಮಾಜದಲ್ಲಿ ಎಲ್ಲರೂ ಪರಿಪೂರ್ಣರಲ್ಲ. ಅವರನ್ನು ಪ್ರಶ್ನಿಸುವ ಅರ್ಹತೆ
  ಈ ಲೋಕದ ಜನರಿಗಿಲ್ಲ. ಸುಧಾರಣೆ ಸಮಾಜದ ನಿಯಮವಾಗಿರುವಾಗ ಸ್ಪಂದಿಸುವ ಗುಣ ಮನುಷ್ಯರಿಗೆ ಇರಬೇಕು. ಕ್ಷಮಿಸುವ ಅರ್ಹತೆ ಪಡೆದುಕೊಂಡಿರಬೇಕು. ಇಡೀ ಲೋಕವೇ ತನ್ನ  ಪರಿವಾರವೆಂದು ತಿಳಿದ ಬಸವಣ್ಣನವರು ಸಮಾನತೆ ಶರಣ ಧರ್ಮವಾಗಿದೆ. ಅನ್ಯರ ನ್ಯೂನತೆಗಳನ್ನು ಟೀಕಿಸುವುದು ಮಹಾ ಅಪರಾಧ. ಇದನ್ನೇ ಬಸವಣ್ಣನವರು ಹೇಳುವುದು “ಲೋಕದ ಡೊಂಕ ನೀವೇಕೆ ತಿದ್ದುವಿರಿ?” ಇತರರ ನ್ಯೂನ್ಯತೆಗಳನ್ನು ಲೋಪ-ದೋಷಗಳನ್ನು ಸರಿಪಡಿಸುವ  ಮೊದಲು ನಮ್ಮ ದೇಹ ಮತ್ತು ಮನಸ್ಸನ್ನು ಸರಿಪಡಿಸಿಕೊಳ್ಳಬೇಕು. ಬೇರೆಯವರನ್ನು ಸರಿಪಡಿಸಲು ಹೋದರೆ ಮೂರ್ಖತನವಾಗುತ್ತದೆ.

ದೇಹವೇ ದೇಗುಲವೆಂದು ಹೇಳುವ ಶರಣರು ಈ ಜೀವ ಚೈತನ್ಯದಲ್ಲಿ  ಶಿವನಿದ್ದಾನೆ. ತನುವಿನ ವಾಸಸ್ಥಾನವದು. ಹೀಗಾಗಿ ತನು ಮತ್ತು ಮನವನ್ನು ಗೌರವಿಸಬೇಕು. ಅನ್ಯರ ವಿಷಯ ಚರ್ಚೆ ಮಾಡದೆ  ಮೌನ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಬೇಕು. ದೇಹಕ್ಕೆ ಊನವಾದರೆ ಮನಸ್ಸಿಗೂ ಘಾಸಿಯಾಗುತ್ತದೇ. ದೈವದ ಸ್ಥಾನವಾದ ಈ ದೇಹವನ್ನು ಗೌರವಿಸಿದರೆ ನಮಗರಿವಿಲ್ಲದಂತೆ ಭಗವಂತನ ಶಕ್ತಿ ಸಂಚಯವಾಗುತ್ತದೆ. ಅದೇ ಚಿತ್‌ಬೆಳಕು. ಪ್ರಜ್ವಲತೆಯ ಸಮತೋಲನ ಕಾಪಾಡುವ ಈ ದೇಹ ಕೊಳಕಾಗಬಾರದು. ದೇಹ ಕಲ್ಮಶವಾದರೆ ಮನವು ಕೊಳಕಾಗುತ್ತದೆ. ದೇಹ ಮತ್ತು ಮನ ಸ್ವಸ್ಥವಾದ ಆರೋಗ್ಯವನ್ನು ಅಪೇಕ್ಷಿಸುತ್ತದೆ. ದೇಹ ಮತ್ತು ಮನಸ್ಸುಗಳು ಪರಿಪೂರ್ಣ ಜೀವನಕ್ಕೆ ಅಡಿಪಾಯವಾಗಿದೆ. ದೈಹಿಕ ಶಕ್ತಿಯ ಜೊತೆಗೆ ಮಾನಸಿಕ ಮತ್ತು ಆಧ್ಯಾತ್ಮ ಜೀವನದ ಅವಿಭಾಜ್ಯ ಭಾಗವಾಗಬೇಕಿದೆ.


ಶರಣರು ಬರಿ ವಚನ ಬೋಧನೆ ಮಾಡದೆ
 ಶಾರೀರಿಕ ಆರೋಗ್ಯದ ಕಡೆಗೆ ಗಮನ ಹರಿಸಲು ಹೇಳಿದ್ದಾರೆ. ಕೆಟ್ಟ ಭಾವನೆಗಳಿಂದ ನಮ್ಮ ದೇಹದಲ್ಲಿ ರಾಸಾಯನಿಕ ಕ್ರಿಯೆಗಳು ಉತ್ಪತ್ತಿಯಾಗಿ ದೇಹದ ಮೇಲೆ ಕೆಟ್ಟ ಪರಿಣಾಮ ಬೀರಲು ಪ್ರಾರಂಭಿಸುತ್ತವೆ. ಮನದ ಭಾವನೆಗಳು ಕೇವಲ ಮಾನಸಿಕವಲ್ಲ. ಅವು ಶಾರೀರಿಕವಾಗಿ ಪ್ರತಿಕ್ರಯಿಸಲು ಪ್ರಾರಂಭಿಸುತ್ತವೆ.


ಮನಸ್ಸು ಸಾಮಾನ್ಯವಾಗಿ
  ದೇಹದ ಒಡೆತನವನ್ನು ಬಯಸುತ್ತದೆ (ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ) ಈ ಜ್ಞಾನೇಂದ್ರಿಯಗಳು ಮನವನ್ನು ಕನ್ನಡಿಯಂತೆ ಗ್ರಹಿಸುತ್ತವೆ. ಇದನ್ನೇ ಶರಣರು ಅರಿವು ಎಂದು ಹೇಳಿದ್ದಾರೆ. ಅರಿವು ಎಂದರೆ ತಿಳುವಳಿಕೆ. ಬದುಕು ಶುಭ್ರವಾಗಲು ಅರಿವು ಬೇಕಾಗುತ್ತದೆ. ಅರಿವು ಸತ್ಯದ ಮಾರ್ಗದಲ್ಲಿ ಮುನ್ನಡೆಸುವ ಗುರು. ಆತ್ಮ ವಿಶ್ವಾಸದ ಹಾದಿಯದು. ಸರಳ ಬದುಕಿನಲ್ಲಿ ಸರಳತೆಯನ್ನು ಎತ್ತಿ ತೋರಿಸಿ ಯಶಸ್ವಿಯಾದವರು ಶರಣರು. ಅಜ್ಞಾನಿಯಾದವನಿಗೆ ಅರಿವು ತಾನೆಲ್ಲಿಯದು, ಸುಜ್ಞಾನಿಯಾದವಂಗೆ ಮರಹು ತಾನೆಲ್ಲಿಯದೋ ತನು ಮತ್ತು ಮನದ ಹೊಯ್ದಾಟವನ್ನು  ಗ್ರಹಿಸಿದ ಶರಣರು ನಿಮ್ಮ ತನುವನ್ನು ಸಂತೈಸಿಕೊಳ್ಳಿ, ನಿಮ್ಮ ಮನವನ್ನು ಸಂತೈಸಿಕೊಳ್ಳಿ ಎಂದು ಹೇಳಿದ್ದಾರೆ. 


ಸಕಲ ಜೀವಾತ್ಮರಿಗೆ ಲೇಸನ್ನು ಬಯಸಿದ ಶರಣರು
 ಲೋಕದ ಜನರ ಕುರಿತು ಕಾಳಜಿಯ ಅನುಕಂಪವಿದೆ. ಇಡೀ ವಚನದ ಕೊನೆಯ ಮಾತುಗಳು ನೀತಿಯನ್ನು ಬಿತ್ತರಿಸುತ್ತದೆ. ನೆರೆಮನೆಯ ದುಃಖಕ್ಕೆ ಮರುಗುವುದಕ್ಕೂ ನೆರೆಮನೆಯವರ ದುಃಖಕ್ಕೆ ಅಳುವುದಕ್ಕೂ ಅಜಗಜಾಂತರ ವ್ಯತ್ಯಾಸವನ್ನು ಕಾಣಬಹುದು. ಮರುಕದಲ್ಲೊಂದು ಕ್ರಿಯಾಶೀಲತೆ ಇರುತ್ತದೆ. ಆದರೆ ಅಳುವುದರಲ್ಲಿ ಅಸಹಾಯಕತೆ ಅಡಗಿರುತ್ತದೆ.


ಅಳುವುದೇ ಪರಿಹಾರವಲ್ಲ. ದುಃಖಿಸುವ ಮನಗಳಿಗೆ ಧೈರ್ಯ ತುಂಬುವ
 ಮಾತುಗಳನ್ನು ಆಡಬೇಕು. ಧೈರ್ಯ ಕೇವಲ ಅಪಾಯಗಳನ್ನು  ಎದುರಿಸುವುದು ಮಾತ್ರವಲ್ಲ. ಜೀವನದ ಉತ್ಸಾಹವನ್ನು ಸ್ವೀಕರಿಸುವ ಮನಸ್ಥಿತಿ ಉಂಟಾಗುತ್ತದೆ. ನೆರೆಮನೆಯವರು ನಮಗೆ ಹೊರೆಯಾಗದೆ ಪ್ರೀತಿ, ವಿಶ್ವಾಸ, ಸಂಪರ್ಕದ ಮಾತುಗಳಿಂದ ಅವರನ್ನು ಎಚ್ಚರಿಸಬೇಕು. ಆದರೆ ನೆರೆಮನೆಯವರ ದುಃಖ ಸದಾ ಸರಿಪಡಿಸಲು ಮುನ್ನುಗ್ಗಿದಾಗ ನಮ್ಮ ಮನೆ ಅಶಾಂತಿಯ ಗೂಡಾಗುತ್ತದೆ. ಸಂಯಮದ ಪ್ರೀತಿಯೇ ಶರಣ ಧರ್ಮದ ಜೀವಾಳ. ದಯವೇ ಧರ್ಮದ ಮೂಲವೆಂದು ಬಸವಣ್ಣನವರು ಹೇಳಿದ್ದನ್ನು ಸ್ಮರಿಸಿಕೊಳ್ಳುತ್ತಾ ವಿಶ್ವಾಸ ಮತ್ತು ಪ್ರೀತಿ ನಮ್ಮ ಧರ್ಮದ ಕವಚಗಳು. ಸತ್ಯ ಮತ್ತು ನೀತಿ ಕಾಳಜಿಯ ಮಾತುಗಳಾಗಿ ನಮ್ಮ ವ್ಯಕ್ತಿತ್ವವನ್ನು ಪ್ರೇರೇಪಿಸುತ್ತದೆ.

ನೆರೆಮನೆಯವರ ಒಡನಾಟವು ಸಹಕಾರ, ಸೌಹಾರ್ದತೆ, ಪ್ರೀತಿ, ವಿಶ್ವಾಸಗಳಿಂದ ಕೂಡಿರಬೇಕು. ದಿನನಿತ್ಯ ಒಬ್ಬರನ್ನೊಬ್ಬರು ಪರಸ್ಪರ ಭೇಟಿಯಾಗುವ ಸಂದರ್ಭಗಳಿರುತ್ತವೆ. ಕೆಲ ಜನರು ದ್ವೇಷ, ಅಸೂಯೆ, ಕ್ರೋದ ತುಂಬಿಕೊಂಡಿರುತ್ತಾರೆ. ಇಂಥವರ ಒಡನಾಟ ಬೆಂಕಿಯಂತೆ ಬಸವಣ್ಣನವರು ಒಂದು ಕಡೆ ಹೇಳಿದಂತೆ ಸಾರ ಸಜ್ಜನರ ಸಂಗವನು ಮಾಡುವುದು ದೂರ ದುರ್ಜನರ ಸಂಗವ ಬೇಡವಯ್ಯ ಅಂದರೆ ಅಂತರಂಗ ಬಹಿರಂಗ ಶುದ್ಧವಾದ ಜನರ ಜೊತೆ ನಮ್ಮ ಒಡನಾಟವಿರಬೇಕು.


“ನೆರೆಮನೆಯವರ ದುಃಖಕ್ಕೆ ಅಳುವವರ ಮೆಚ್ಚ ನಮ್ಮ ಕೂಡಲಸಂಗಮದೇವ” ಸದಾಚಾರ
 ವ್ಯಕ್ತಿತ್ವ ಪ್ರಾಮಾಣಿಕವಾದದ್ದು ಮತ್ತು ಅದು ವೈಯಕ್ತಿಕವೂ ಹೌದು. ನೇಮವಿಲ್ಲದ ಬದುಕು ನಿರರ್ಥಕವಾಗಿರುತ್ತದೆ. ಲೋಕಕಲ್ಯಾಣದ ಈ ಬದುಕು ಸ್ವೀಕಾರಾರ್ಹವೂ  ಹೌದು. ಸಾಮಾಜಿಕತೆಯನ್ನು ಬಿಂಬಿಸುವ ಈ ವಚನ  ಮನುಷ್ಯನ ಆತ್ಮ ಗೌರವದ ಜೊತೆಗೆ ಲೋಕ ಕಲ್ಯಾಣದ ಕಾಳಜಿಯನ್ನು ಪ್ರೇರೇಪಿಸುತ್ತದೆ.


ಡಾ. ಸರ್ವಮಂಗಳ ಸಕ್ರಿ,

ಅಧ್ಯಕ್ಷರು. ಜಾಗತಿಕ ಲಿಂಗಾಯತ ಮಹಾ ಸಭಾ,
ಮಹಿಳಾ ಘಟಕ-ರಾಯಚೂರು ಜಿಲ್ಲೆ.
ರಾಯಚೂರು.
ಮೋಬೈಲ್‌ ಸಂ. 94499 46839.

  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನಸಾಹಿತ್ಯ ಮಂದಾರ ಫೌಂಡೇಶನ್‌ (ರಿ) ದ ಸಂಚಾಲಕರನ್ನು ಸಂಪರ್ಕಿಸಬೇಕಾದ:
    • ಮೋಬೈಲ್ ನಂ. 9741 357 132
    • e-Mail ID: info@vachanamandara.in and admin@vachanamandara.in

Leave a Reply