![]()

ತುಮಕೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಈಗ ನಿವೃತ್ತರು. ಕನ್ನಡದ ಸಂಸ್ಕೃತಿ ಚಿಂತಕ-ಸಂಶೋಧಕರಲ್ಲಿ ಒಬ್ಬರು. ಬುದ್ಧಚಿಂತನೆಯನ್ನು ಹರಳುಗೊಳಿಸಿದ ನಾಗಾರ್ಜುನನ ‘ಮೂಲಮಧ್ಯಮಕಾರಿಕಾ’ವನ್ನು ಕನ್ನಡಕ್ಕೆ ಅನುವಾದಿಸಿದವರು. ಕರ್ನಾಟಕದ ಸಂಸ್ಕೃತಿ ರೂಪಿಸುವಲ್ಲಿ ಶ್ರಮಣ ಧಾರೆಗಳು ವಹಿಸಿದ ಪ್ರಮುಖ ಪಾತ್ರಗಳ ಬಗ್ಗೆ ವಿಶೇಷ ಒಲವು ಉಳ್ಳವರು. ಕರ್ನಾಟಕ ಸರಕಾರ ಪ್ರಕಟಿಸಿದ ಸಮಗ್ರ ತತ್ವಪದ ಸಾಹಿತ್ಯ ಯೋಜನೆಯ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದು, ಕನ್ನಡ ಸಾಹಿತ್ಯ ಮೀಮಾಂಸೆಯ ಕುರಿತು ಹಲವು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
ವಚನಗಳನ್ನು ಏಕೆ ಓದುತ್ತಿದ್ದೇವೆ ಮತ್ತು ಹೇಗೆ ಓದುತ್ತಿದ್ದೇವೆ? ಎನ್ನುವ ಪ್ರಶ್ನೆಯನ್ನು ಇದಿರಾಗದೆ ಗತ್ಯಂತರವಿಲ್ಲ. ವಚನಗಳನ್ನು ಓದುವವರೆಲ್ಲ ಅದರ ಅನುಸಂಧಾನಕ್ಕೆ, ಪಾಲನೆಗೆ ಅಥವಾ ಅನ್ವಯಿಸಿಕೊಳ್ಳುವುದಕ್ಕೆ ಓದುತ್ತಾರೆ ಎಂದೇನಿಲ್ಲ. ವಚನಗಳು ಒಂದು ಸಾಂಸ್ಕೃತಿಕ ಆಕರ. ಹಾಗಾಗಿ ಅದಕ್ಕೊಂದು ಶಕ್ತಿಯಿದೆ. ಅದನ್ನು ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಬಳಸಿಕೊಳ್ಳಲು ಸಾಧ್ಯವಿದೆ. ಅನೇಕ ಶಕ್ತಿ ಕೇಂದ್ರಗಳು ಈಗ ವಚನಗಳನ್ನು ನಿಯಂತ್ರಿಸುತ್ತಿವೆ. ವಚನ ಕಟ್ಟಿ ಬಾಳಿದ ವಚನಕಾರರು ಇದನ್ನೇನೂ ನಿಯಂತ್ರಿಸಲಾರರು. ಇಡಿಯಾಗಿ ವಚನ ಸಾಹಿತ್ಯವನ್ನು ಷಟ್‍ಸ್ಥಲವೋ, ಗುರು-ಲಿಂಗ-ಜಂಗಮ ತ್ರೈವಿಧ್ಯವೋ, ಕುರುಹನ್ನು ಹಿಡಿದು ಕುರುಹ ದಾಟುವ ಲಿಂಗಾಯತವೋ – ಇಂತಹ ಒಂದು ಓದಿಗೆ ಸೀಮಿತಗೊಳಿಸಲಾಗದು.
ವಚನಗಳನ್ನು ವಚನ ಚಳವಳಿಯನ್ನು ಓದುವ ಪರಿಭಾವಿಸುವ ಅನೇಕ ಮಾದರಿಗಳು ನಮ್ಮ ನಡುವೆ ಇವೆ. ವಚನಗಳನ್ನು ಓದಿ ವ್ಯಾಖ್ಯಾನಿಸುವ ಒಂದು ದೀರ್ಘವಾದ ಸಂಪ್ರದಾಯವೇ ಇದೆ. ಈ ಹೊತ್ತಿನ ಸಾಂಸ್ಕೃತಿಕ, ಸಾಮಾಜಿಕ ಮತ್ತು ತಾತ್ವಿಕ ತುರ್ತುಗಳಿಗೆ ದಂದುಗಗಳಿಗೆ ಅಗತ್ಯಕ್ಕೆ ಅನುಗುಣವಾಗಿ ಓದಬೇಡಿ. ಅಂದಿನ ಸಂದರ್ಭದಲ್ಲಿಯೇ ಇಟ್ಟು ಓದಿ ಎನ್ನುವ ಒತ್ತಾಯಗಳೂ ಇವೆ. ಆದರೆ ನನಗೆ ವಚನ ಮತ್ತು ವಚನ ಚಳವಳಿ ಒಂದು ಸಾಂಸ್ಕೃತಿಕ ವಸಾಹತುಶಾಹಿಯ ವಿರುದ್ಧ ನಡೆದ ಸ್ವಾಂತಂತ್ರ್ಯ ಚಳವಳಿಯಂತೆಯೇ ಗೋಚರಿಸುತ್ತದೆ. ಏಕೆಂದರೆ ಅದೇ ಸಾಂಸ್ಕೃತಿಕ ವಸಾಹತುಶಾಹಿಯ ಅಡಿಯಲ್ಲಿಯೇ ಇಂದಿಗೂ ಈ ನೆಲ ನಲುಗುತ್ತಲೇ ಇದೆ. ಈ ನಾಡಿಗೆ ಸ್ವಾಂತಂತ್ರ್ಯೋತ್ತರ ಕಾಲವೆನ್ನುವುದು ಇಂದಿಗೂ ಪ್ರಾಪ್ತವಾಗಿಲ್ಲದೇ ಇರುವುದರಿಂದ ವಚನಗಳು ಮತ್ತು ಆ ಚಳವಳಿ ಈ ಹೊತ್ತಿನ ಅಗತ್ಯವಾಗಿಯೂ ನಮ್ಮ ಕಣ್ಣೆದುರಿಗೆ ಇದೆ.
ನಮ್ಮದು ಸುಮಾರು ಮೂರ್ನಾಲ್ಕು ಸಾವಿರ ವರುಷಗಳ ಸಾಂಸ್ಕೃತಿಕ ವಸಾಹತು. ಈ ದೃಷ್ಟಿಯಿಂದ ನೋಡಿದರೆ 12 ನೇ ಶತಮಾನ ಮತ್ತು 21 ನೇ ಶತಮಾನದ ನಡುವೆ ಅಂತಹ ವ್ಯತ್ಯಾಸವೇನೂ ಇಲ್ಲವೆಂದೇ ಅನ್ನಿಸುತ್ತದೆ. ವಚನ ಯುಗದ ಸಾಂಸ್ಕೃತಿಕ ಪಲ್ಲಟಗಳನ್ನು ಕುರಿತು ಮಾತನಾಡುವಾಗ ತಾತ್ವಿಕತೆ ಮತ್ತು ಅನ್ವಯಗಳೆರಡರಲ್ಲಿಯೂ ಉಂಟಾದ ಪ್ರಮುಖ ಪಲ್ಲಟಗಳು ತೀವ್ರವಾದ ತಲ್ಲಣಗಳಿಗೆ ಕಾರಣವಾಗಿವೆ ಎನ್ನುವುದಂತೂ ನಿಶ್ಚಿತ. ಹಾಗಾಗಿ ಇಂತಹ ಸಂಗತಿಗಳನ್ನು ಇದಿರಾಗುವುದೆಂದರೆ ಗಂಭೀರವಾದ ವಾಗ್ವಾದ ಮತ್ತು ಸಂಘರ್ಷ ಅನಿರೀಕ್ಷಿತವೇನಲ್ಲ.
ನನಗೆ ಕಲ್ಯಾಣವೆನ್ನುವುದು ವಚನವೆನ್ನುವುದು ಒಂದು ಸಂವಿಧಾನ. ಈ ನೆಲದ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಬಿಕ್ಕಟ್ಟುಗಳನ್ನು ತೆಗೆದುಕೊಂಡು ಪರಿಹಾರಕ್ಕಾಗಿ ಕಲ್ಯಾಣದ ಬಾಗಿಲಿಗೆ ಹೋಗುವುದು ಇಲ್ಲಿಯ ಜಾಯಮಾನ. ಇಂದಿಗೂ ಕಲ್ಯಾಣವೆಂದರೆ ಎಲ್ಲರನ್ನೂ ಅಪ್ಪಿ ಒಳಗೆ ಕರೆದ ಆವರಣ. ಗಮನಿಸಿ ಕೆಲವು ಕಡೆ ಭಕ್ತರ ಧನ ಬೇಕು, ಭಕ್ತಿ ಬೇಕು, ಹಾಡು ಬೇಕು, ಸಂಗೀತ ಬೇಕು. ಆದರೆ ನೀಡಿದ ಮನುಷ್ಯ ಬೇಡ. ಹಾಗೆ ಹೊರಗೆ ನಿಲ್ಲಿಸಲ್ಪಟ್ಟವರು ಯಾರು ಎಂದು ಗಮನಿಸಿ. ಅವರೆಲ್ಲ ಹಿಂದೂಗಳಾಗಿದ್ದರೆ? ಈಗಲಾದರೂ ಹಾಗೆ ಅವರನ್ನು (ಅವರನ್ನು ಎನ್ನುವುದಕ್ಕಿಂತ ನಮ್ಮನ್ನು ಎಂದುಕೊಳ್ಳುವುದೇ ಸರಿ) ಹಿಂದೂಗಳೆಂದು ಗುರುತಿಸಿದ್ದಾರಾ? ವ್ಯಕ್ತಿಯನ್ನು ಮೊದಲು ಯಾವ ಜಾತಿ ಎಂದು ಗುರುತಿಸಿ ಅದನ್ನು ಒಪ್ಪಿಕೊಂಡ ಮೇಲಷ್ಟೆ ಧರ್ಮದ ಪ್ರಶ್ನೆ. ಮೊದಲನೆಯದಕ್ಕೆ ನಾವು ಒಪ್ಪಿಗೆ ಕೊಟ್ಟ ಮೇಲೆ ನಮ್ಮನ್ನು ಮುಟ್ಟಬಹುದೆ? ಮುಟ್ಟಬಾರದೆ? ಒಳಗೆ ಬಿಡಬಹುದೆ? ಅಥವಾ ಹೊರಗೆ ನಿಲ್ಲಿಸಬೇಕೆ? ಎಂಬುದರ ತೀರ್ಮಾನ. ಇದು ವಚನ ಚಳವಳಿಯ ಮುಖ್ಯವಾದ ಪಲ್ಲಟ ಮತ್ತು ತಲ್ಲಣದ ಆಯಾಮವಾಗಿರುವುದರಿಂದ ಇಂದಿಗೂ ಅದರ ಪ್ರಸ್ತುತತೆ ಇದೆ ಎನ್ನುವುದು ನಿರ್ವಿವಾದ.
ಹೊರಗಿನ ಈ ವಸಾಹತುಶಾಹಿ ಈ ನೆಲದ ಪ್ರಮುಖ ಅಸ್ಮಿತೆಯ ಮೇಲೆ ಗುರಿಯಿಟ್ಟು ನಡೆಸಿದ ಆಕ್ರಮಣದ ನಿಲುವುಗಳನ್ನು ಗಮನಿಸಿದರೆ ಇದರ ಒಳ ಹೊರಗುಗಳು ಅರಿವಿಗೆ ಬರುತ್ತವೆ. ವಸಾಹತುಶಾಹಿಯ ಆಕ್ರಮಣಕಾರಿ ನಿಲುವುಗಳು ಮತ್ತು ಅದಕ್ಕೆ ಶರಣರು ತೋರಿದ ಪ್ರತಿಕ್ರಿಯೆಯೇ ಈ ಮಾತುಕತೆಯ ಮುಖ್ಯ ಆಯಾಮ.
ವರ್ಣಾಶ್ರಮದ ಹೇರಿಕೆ:
ಈ ಹೊತ್ತಿಗೂ ಭಾರತದ ಬದುಕನ್ನು ನಿಯಂತ್ರಿಸುತ್ತಿರುವ ಸಾಂಸ್ಕೃತಿಕ ಸಂವಿಧಾನವೆಂದರೆ ಋಗ್ವೇದದ 10 ನೇಯ ಮಂಡಲದ 90 ನೇಯ ಸೂತ್ರವಾದ ಪುರುಷ ಸೂಕ್ತವೆ. ಇದನ್ನು ನಾವು ನೀವು ಓದಿರಲಿ, ಓದಿಲ್ಲದಿರಲಿ, ಪಾಲನೆಯನ್ನಂತೂ ನಮ್ಮಿಂದ ಮಾಡಿಸಲಾಗುತ್ತಿದೆ. ಜಾತಿ ಶ್ರೇಣೀಕರಣಕ್ಕೆ ಇದರ ಮೂಲಕ ಪಡೆದ ಒಪ್ಪಿಗೆಯನ್ನು ನಾವು ಇನ್ನೂ ಹಿಂಪಡೆಯಲು ಆಗಿಲ್ಲ. ಅಲ್ಲಲ್ಲೆ ಉದಾಹರಣೆಗೆ ವಚನ ಚಳವಳಿಯಂತಹ ನಡೆಗಳು ಇಂತಹ ಹಿಂಪಡೆಯುವ ಪ್ರಯತ್ನಗಳನ್ನು ಮಾಡಿವೆ. ನಂತರದ ದಿನಮಾನಗಳಲ್ಲಿ ಮತ್ತೆ ಅದನ್ನೆ ಗಟ್ಟಿಗೊಳಿಸಿರುವುದೂ ಉಂಟು. “ಕರ್ಣದಲ್ಲಿ ಜನಿಸಿದವರುಂಟೆ?” ಎಂದು ಕಟುವಾಗಿ ಪ್ರಶ್ನಿಸಿದ ವಚನವನ್ನೇ ನಾನು ಮುಂದುಮಾಡುತ್ತಿದ್ದೇನೆ.
ಗೋತ್ರ ನಾಮವ ಬೆಸಗೊಂಡಡೆ
ಮಾತು ನೂಕದೆ ಸುಮ್ಮನಿದ್ದಿರೇನಯ್ಯಾ?
ತಲೆಯ ಕುತ್ತಿ ನೆಲನ ಬರೆವುತ್ತಿದ್ದಿರಿದೇನಯ್ಯಾ?
ಗೋತ್ರನಾಮ, ಮಾದಾರ ಚೆನ್ನಯ್ಯ
ಡೋಹರ ಕಕ್ಕಯ್ಯನೆಂಬುದೇನು, ಕೂಡಲಸಂಗಯ್ಯಾ?
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-202/ವಚನ ಸಂಖ್ಯೆ-745)
… … ವಿಶ್ವಗುರು ಬಸವಣ್ಣ.
ಹೊಕ್ಕಲ್ಲಿ ಹೊಕ್ಕು ನಿಮ್ಮೊಕ್ಕುದನುಂಬವನ ಕುಲವೇನೋ!
ದೇವಾ ನೀನೊಲಿದವನ, ಸ್ವಾಮೀ ನೀ ಹಿಡಿದವನ ಕುಲವೇನೋ!
ಕುಲಕ್ಕೆ ತಿಲಕ ನಮ್ಮ ಮಾದಾರ ಚೆನ್ನಯ್ಯ,
ನಿಮ್ಮಿಂದಧಿಕ ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-199/ವಚನ ಸಂಖ್ಯೆ-732)
… … ವಿಶ್ವಗುರು ಬಸವಣ್ಣ.
ವೇದದವರನೊಲ್ಲದೆ ನಮ್ಮ ಮಾದಾರ ಚೆನ್ನಯ್ಯಂಗೊಲಿದ.
ಶಾಸ್ತ್ರದವರನೊಲ್ಲದೆ ನಮ್ಮ ಶಿವರಾತ್ರಿಯ ಸಂಕಣ್ಣಂಗೊಲಿದ.
ಆಗಮದವರನೊಲ್ಲದೆ ನಮ್ಮ ತೆಲುಗು ಜೊಮ್ಮಯ್ಯಂಗೊಲಿದ.
ಪುರಾಣಕರ್ಮಿಗಳೆಂಬ ವಿಶಿಷ್ಟ ಬ್ರಹ್ಮರನೊಲ್ಲದೆ ಉದ್ಭಟಯ್ಯಂಗೊಲಿದ.
ಅಣ್ಣ ಕೇಳಾ ಸೋಜಿಗವ!
ದಾಸ ದುಗ್ಗಳೆಯರಿಗೊಲಿದ ಮುಕ್ಕಣ್ಣ ಸೊಡ್ಡಳ.
ಹಾರುವಣ್ಣಗಳಿಗೆ ಹೇಸಿ ಕದವನಿಕ್ಕಿಕೊಂಡನು.
(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-327/ವಚನ ಸಂಖ್ಯೆ-815)
… … ಶರಣ ಸೊಡ್ಡಳ ಬಾಚರಸ.
ವಚನಗಳ ಓದನ್ನು ನಿಯಂತ್ರಿಸುವ ಸಂಪಾದನಾ ರಾಜಕಾರಣವೊಂದು ನಮ್ಮಿಂದ ವಚನಗಳನ್ನು ನಿರ್ದಿಷ್ಟವಾದ ಕ್ರಮದಲ್ಲಿಯೇ ಓದಲು ಒತ್ತಾಯಿಸುವ ಮತ್ತು ಅಂತಹ ಓದಿಗೆ ಒಂದು ರೀತಿಯ ಒಪ್ಪಿಗೆಯನ್ನು ಉತ್ಪಾದಿಸಿಕೊಂಡಿದೆ. ಇದನ್ನು ದಾಟಿ ವಚನಗಳನ್ನು ನೋಡದ ಹೊರತು ನಮಗೆ ಭಿನ್ನ ನೋಟಗಳು ದೊರಕಲಾರವು. ಮೊದಲನೆಯದಾಗಿ ವಚನಗಳ ಓದಿನ ಶ್ರೇಣೀಕರಣವನ್ನು ಮುರಿಯದ ಹೊರತು ಮತ್ತು ವಚನಗಳನ್ನು ಸಮಾನಾಂತರ ಕ್ರಮದಲ್ಲಿ ಓದದ ಹೊರತು ಇಂತಹ ಹೊಸ ವಿಸ್ತರಣೆಗಳು ನಮಗೆ ದೊರಕಲಾರವು. ವಚನ ಚಳವಳಿಯ ಸಮಸ್ತ ಏಳುಬೀಳುಗಳನ್ನು ಅಲ್ಲಮನ ಮೂಲಕ, ಮಾದಾರ ಧೂಳಯ್ಯ, ಮಾದಾರ ಚೆನ್ನಯ್ಯ, ಹಡಪದ ಅಪ್ಪಣ್ಣ, ಕನ್ನಡಿ ಕಾಯಕಯ ಅಮ್ಮಿದೇವ, ಸೊಡ್ಡಳ ಬಾಚರಸರ ಮೂಲಕ, ಹೆಂಡದ ಮಾರಿತಂದೆ, ಅಂಬಿಗರ ಚೌಡಯ್ಯ ಮುಂತಾದವರ ಮೂಲಕ ಗ್ರಹಿಸುವ ಓದುಗಳನ್ನು ಇದಿರಾಗಬೇಕಾಗಿದೆ.
ಹೊರಗೆ ನಿಂತವರನ್ನೆಲ್ಲ ಕರೆದು ಮಾತನಾಡಿಸಿದ್ದು ನಿಜವಾಗಿ ವಚನ ಚಳವಳಿಯ ಘನತೆಯ ಪ್ರತೀಕ. ಹಾಗೆಂದ ಮಾತ್ರಕ್ಕೆ ಅವರು ಪ್ರತಿಪಾದಿಸಿದ ತಾತ್ವಿಕ ನಿಲುವುಗಳಿಗೂ ಮಾನ್ಯತೆ ದೊರಕಿತೆ? ಎನ್ನುವುದು ಕೂಡ ಅಷ್ಟೇ ಗಂಭೀರವಾಗಿ ಚರ್ಚಿಸಬೇಕಾದ ಸಂಗತಿ. ಮಾದಾರ ಚೆನ್ನಯ್ಯ, ಅಂಬಿಗರ ಚೌಡಯ್ಯ, ವಡ್ಡರ ಸಿದ್ಧರಾಮ, ಒಕ್ಕಲಿಗರ ಮುದ್ದಣ್ಣ, ಹಡಪದ ಅಪ್ಪಣ್ಣ, ಮಡಿವಾಳ ಮಾಚಯ್ಯ, ಕುಂಬಾರ ಗುಂಡಯ್ಯ, ಗಾಣಿಗರ ದಾಸಯ್ಯ, ಕುರುಬರ ಬೀರಯ್ಯ, ದೊಂಬರ ಕ್ಯಾತಯ್ಯ, ಹಗ್ಗ ನುಲಿಯೋ ಚಂದಯ್ಯ, ಹೆಂಡದ ಮಾರಿತಂದೆ, ಕನ್ನದ ಮಾರಿತಂದೆ ಇವರ ತಾತ್ವಿಕತೆಗೆ ಕಲ್ಯಾಣದೊಳಕ್ಕೆ ಪ್ರವೇಶ ಸಿಕ್ಕಿತೆ? ಸಿಕ್ಕಿದ್ದರೆ ಮಂಟೇದಲ್ಲಮ ಗುರುವು ಕಲ್ಯಾಣವನ್ನು ತೊರೆದು ಮಾದರ ಕೇರಿಗೆ ತಾನೂ ಹೋದುದಲ್ಲದೆ, ಬಸವಣ್ಣ ನೀಲಾಂಬಿಕೆಯರನ್ನು ಕರೆತರಬೇಕಿತ್ತೆ? ಈ ಕೆಳಜಾತಿಯ ವಚನಕಾರರನ್ನು ತತ್ವಶಾಸ್ತ್ರದ ಪ್ರಧಾನ ಧಾರೆಗಳಾಗಲೀ ಕಿರು ಧಾರೆಗಳಾಗಲೀ ಅಷ್ಟೇ ಏಕೆ ಸ್ವತಃ ವಚನ ಪಂಥಿಗಳೇ ತಿರುಗಿ ನೋಡುವುದಿಲ್ಲ.
ಸಂಪಾದನಾಕಾರರು ಅಲ್ಲಮನನ್ನು ಕೇಂದ್ರದಲ್ಲಿರಿಸಿಕೊಂಡು ಸಂಪಾದನೆಯನ್ನು ಓದನ್ನು ನಡೆಸಿದರೂ ನಂತರದಲ್ಲಿ ಲಿಂಗಾಯಿತ ನಡೆಯಲ್ಲಿ ಆಚಾರದಲ್ಲಿ ಉಳಿದ ಶರಣರೆಂದರೆ ಬಸವಣ್ಣ, ಚೆನ್ನಬಸವಣ್ಣ ಮತ್ತು ಸಿದ್ಧರಾಮ ಮಾತ್ರ. ಅಲ್ಲಮನಾಗಲೀ, ಅಕ್ಕನಾಗಲೀ, ಮಾದಾರ ಧೂಳಯ್ಯನಾಗಲೀ, ಹಡಪದ ಅಪ್ಪಣ್ಣನಾಗಲೀ ಇಲ್ಲ. ಅವರೆಲ್ಲ ಕೇವಲ ವಿಚಾರದಲ್ಲಿ ಇದ್ದಾರೆ ಎನ್ನಲಡ್ಡಿಯಿಲ್ಲ.
ವಚನಕಾರರ ಅತ್ಯಂತ ಪ್ರಮುಖ ನಿಲುವಾದ ಶಬ್ದಪ್ರಮಾಣ ನಿರಾಕರಣೆ (ವೇದೋಪನಿಷತ್ತುಗಳು) ಮತ್ತು ವೈದಿಕ ಆಚರಣೆಗಳ ನಿರಾಕರಣೆಯು ಇಂದು ಹಿನ್ನೆಲೆಗೆ ಸಂದಿದೆ. ಹಾಗೆ ಮಾಡಲು ರಾಜಕೀಯ ನಿಲುವುಗಳು ಪರೋಕ್ಷವಾಗಿ ಪ್ರಭಾವಿಸುತ್ತಿವೆ. ಕೆಳಗಿನ ವಚನಗಳು ಕೇವಲ ಓದುಪಠ್ಯಗಳಾಗಿ ನಮ್ಮ ನಡುವೆ ಇವೆ:
ವೇದೋಪನಿಷತ್ತುಗಳೆಂಬ ಪ್ರಮಾಣಗಳ ನಿರಾಕರಣೆ:
ಶಾಸ್ತ್ರ ಘನವೆಂಬೆನೆ? ಕರ್ಮವ ಭಜಿಸುತ್ತಿದೆ.
ವೇದ ಘನವೆಂಬೆನೆ? ಪ್ರಾಣಿವಧೆಯ ಹೇಳುತ್ತಿದೆ.
ಸ್ಮೃತಿ ಘನವೆಂಬೆನೆ? ಮುಂದಿಟ್ಟು ಅರಸುತ್ತಿದೆ.
ಅಲ್ಲೆಲ್ಲಿಯೂ ನೀವಿಲ್ಲದ ಕಾರಣ,
ತ್ರಿವಿಧ ದಾಸೋಹದಲಲ್ಲದೆ ಕಾಣಬಾರದು
ಕೂಡಲಸಂಗಮದೇವನ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-57/ವಚನ ಸಂಖ್ಯೆ-208)
… … ವಿಶ್ವಗುರು ಬಸವಣ್ಣ.
ಆದಿಪುರಾಣ ಅಸುರರಿಗೆ ಮಾರಿ,
ವೇದಪುರಾಣ ಹೋತಿಂಗೆ ಮಾರಿ,
ರಾಮಪುರಾಣ ರಕ್ಕಸರಿಗೆ ಮಾರಿ,
ಭಾರತಪುರಾಣ ಗೋತ್ರಕ್ಕೆ ಮಾರಿ,
ಎಲ್ಲಾ ಪುರಾಣ ಕರ್ಮಕ್ಕೆ ಮೊದಲು,
ನಿಮ್ಮ ಪುರಾಣಕ್ಕೆ ಪ್ರತಿಯಿಲ್ಲ
ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-154/ವಚನ ಸಂಖ್ಯೆ-571)
… … ವಿಶ್ವಗುರು ಬಸವಣ್ಣ.
ಹೊಲೆಯೊಳಗೆ ಹುಟ್ಟಿ ಕುಲವನರಸುವೆ,
ಎಲವೋ, ಮಾತಂಗಿಯ ಮಗ ನೀನು,
ಸತ್ತುದನೆಳೆವನೆತ್ತಣ ಹೊಲೆಯ?
ಹೊತ್ತು ತಂದು ನೀವು ಕೊಲುವಿರಿ.
ಶಾಸ್ತ್ರವೆಂಬುದು ಹೋತಿಂಗೆ ಮಾರಿ,
ವೇದವೆಂಬುದು ನಿಮಗೆ ತಿಳಿಯದು
ನಮ್ಮ ಕೂಡಲಸಂಗನ ಶರಣರು
ಕರ್ಮವಿರಹಿತರು ಶರಣ ಸನ್ನಿಹಿತರು,
ಅನುಪಮಚಾರಿತ್ರರು,
ಅವರಿಗೆ ತೋರಲು ಪ್ರತಿ ಇಲ್ಲವೋ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-155/ವಚನ ಸಂಖ್ಯೆ-576)
… … ವಿಶ್ವಗುರು ಬಸವಣ್ಣ.
ಇಟ್ಟಿಯ ಹಣ್ಣ ನರಿ ತಿಂದು ಸೃಷ್ಟಿ ತಿರುಗಿತ್ತೆಂಬಂತೆ
ಮಟ್ಟಿಯನಿಟ್ಟ ದ್ವಿಜರ ಮಾತದೇಕೆ?
ಹಗಲುಗಾಣದ ಗೂಗೆ ಇರುಳಾಯಿತ್ತೆಂದಡೆ,
ಜಗಕ್ಕೆ ಇರುಳಪ್ಪುದೆ ಮರುಳೆ?
ಹೋಮದ ನೆವದಲ್ಲಿ ಹೋತನು ಕೊಂದು ತಿಂಬ
ಅನಾಮಿಕರೊಡನಾಡಿ ಗೆಲುವದೇನು
ಕೂಡಲಸಂಗಮದೇವಾ?
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-156/ವಚನ ಸಂಖ್ಯೆ-577)
… … ವಿಶ್ವಗುರು ಬಸವಣ್ಣ.
ವಿಷ್ಣು ವರಾಹವತಾರದಲ್ಲಿ
ಹಂದಿಯಂ ತಿಂಬುದಾವಾಚಾರವೋ?
ವಿಷ್ಣು ಮತ್ಸ್ಯಾವತಾರದಲ್ಲಿ
ಮೀನಂ ತಿಂಬುದಾವಾಚಾರವೋ?
ವಿಷ್ಣು ಕೂರ್ಮಾವತಾರದಲ್ಲಿ
ಆಮೆಯ ತಿಂಬುದಾವಾಚಾರವೋ?
ವಿಷ್ಣು ಹರಿಣಾವತಾರದಲ್ಲಿ
ಎರಳೆಯ ತಿಂಬುದಾವಾಚಾರವೋ?
ಇಂತಿವನೆಲ್ಲ ಅರಿಯದೆ ತಿಂದರು.
ಅರಿದರಿದು ನಾಲ್ಕು ವೇದ, ಹದಿನಾರು ಶಾಸ್ತ್ರ,
ಹದಿನೆಂಟು ಪುರಾಣ, ಇಪ್ಪತ್ತೆಂಟಾಗಮ
ಇಂತಿವೆಲ್ಲನೋದಿ, ಕೇಳಿ, ಹೋಮವನಿಕ್ಕಿ ಹೋತನ ಕೊಂದು
ತಿಂಬುದಾವಾಚಾರದೊಳಗೋ?
ಇಂತೀ ಶ್ರುತಿಗಳ ವಿಧಿಯ ಜಗವೆಲ್ಲ ನೋಡಿರೆ,
ನಮ್ಮ ಕೂಡಲಸಂಗಮದೇವಂಗೆ
ಅಧಿದೇವತೆಗಳ ಸರಿಯೆಂಬವರ ಬಾಯಲ್ಲಿ
ಸುರಿಯುವೆ ಬಾಲಹುಳುಗಳ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-405/ವಚನ ಸಂಖ್ಯೆ-1351)
… … ವಿಶ್ವಗುರು ಬಸವಣ್ಣ.
ವೇದ ಶಾಸ್ತ್ರ ಆಗಮ ಪುರಾಣಗಳೆಲ್ಲವು
ಕೊಟ್ಟಣವ ಕುಟ್ಟಿದ ನುಚ್ಚು ತೌಡು ಕಾಣಿಭೋ.
ಇವ ಕುಟ್ಟಲೇಕೆ ಕುಸಕಲೇಕೆ?
ಅತ್ತಲಿತ್ತ ಹರಿವ ಮನದ ಶಿರವನರಿದಡೆ
ಬಚ್ಚಬರಿಯ ಬಯಲು ಚೆನ್ನಮಲ್ಲಿಕಾರ್ಜುನ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-129/ವಚನ ಸಂಖ್ಯೆ-568)
… … ವೈರಾಗ್ಯನಿಧಿ ಅಕ್ಕ ಮಹಾದೇವಿ.
ವೇದ ಹುಟ್ಟುವುದಕ್ಕೆ ಮುನ್ನವೆ ಓದಿದವರಾರು?
ಶಾಸ್ತ್ರ ಹುಟುವುದಕ್ಕೆ ಮುನ್ನವೆ ಕಲಿತವರಾರು?
ಪುರಾಣ ಹುಟ್ಟುವುದಕ್ಕೆ ಮುನ್ನವೆ ಕೇಳಿದವರಾರು?
ಉತ್ಪತ್ತಿ ಸ್ಥಿತಿ ಲಯಕ್ಕೆ ಮುನ್ನವೆ ನಾನೆಂಬುವರಾರು.
ಮನಸಂದ ಮಾರೇಶ್ವರಾ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-371/ವಚನ ಸಂಖ್ಯೆ-982)
… … ಶರಣ ಮನಸಂದ ಮಾರಿತಂದೆ.
ವೇದ ಪ್ರಮಾಣವಲ್ಲ, ಕಾಣಿ ಭೋ!
ಆಗಮ ಪ್ರಮಾಣವಲ್ಲ, ಕಾಣಿ ಭೋ!
ಪುರಾಣ ಪ್ರಮಾಣವಲ್ಲ, ಕಾಣಿ ಭೋ!
ಶಾಸ್ತ್ರ ಪ್ರಮಾಣವಲ್ಲ, ಕಾಣಿ ಭೋ!
ಶಬ್ದ ಪ್ರಮಾಣಲ್ಲವ, ಕಾಣಿ ಭೋ ಲಿಂಗಕ್ಕೆ!
ಅಂಗ ಅಂಗಸಂಗದ ಮಧ್ಯದಲ್ಲಿದ್ದುದ ಬೈಚಿಟ್ಟು ಬಳಸಿದ
ಗುಹೇಶ್ವರಾ ನಿಮ್ಮ ಶರಣ.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-92/ವಚನ ಸಂಖ್ಯೆ-269)
… … ವ್ಯೋಮಕಾಯ ಅಲ್ಲಮಪ್ರಭು.
ವೇದ ವೇಧಿಸಲರಿಯದೆ ಕೆಟ್ಟವು,
ಶಾಸ್ತ್ರ ಸಾಧಿಸಲರಿಯದೆ ಕೆಟ್ಟವು,
ಆಗಮ ಆಗುಹೋಗಲರಿಯದೆ ಕೆಟ್ಟವು,
ಪುರಾಣ ಪೂರೈಸಲರಿಯದೆ ಕೆಟ್ಟವು,
ಹಿರಿಯರು ತಮ್ಮ ತಾವು ಅರಿಯದೆ ಕೆಟ್ಟರು;
ತಮ್ಮ ಬುದ್ದಿ ತಮ್ಮನೆ ತಿಂದಿತ್ತು.
ನಿಮ್ಮನೆತ್ತ ಬಲ್ಲರೊ ಗುಹೇಶ್ವರಾ?.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-92/ವಚನ ಸಂಖ್ಯೆ-269)
… … ವ್ಯೋಮಕಾಯ ಅಲ್ಲಮಪ್ರಭು.
ವೇದವೆಂಬುದು ಓದಿನ ಮಾತು.
ಶಾಸ್ತ್ರವೆಂಬುದು ಸಂತೆಯ ಸುದ್ದಿ.
ಪುರಾಣವೆಂಬುದು ಪುಂಡರ ಗೋಷ್ಠಿ.
ಆಗನವೆಂಬುದು ಅನ್ನತದ ನುಡಿ.
ತರ್ಕವೆಂಬುದು ತಗರ ಹೋರಟೆ.
ಭಕ್ತಿ ಎಂಬುದು ತೋರಿ ಉಂಬ ಲಾಭ.
ಗುಹೇಶ್ವರನೆಂಬುದು ಮೀರಿದ ಘನವು.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-147/ವಚನ ಸಂಖ್ಯೆ-465)
… … ವ್ಯೋಮಕಾಯ ಅಲ್ಲಮಪ್ರಭು.
ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳನಿಕ್ಕುವೆ,
ತರ್ಕದ ಬೆನ್ನ ಬಾರನೆತ್ತುವೆ,
ಆಗಮದ ಮೂಗ ಕೊಯಿವೆ, ನೋಡಯ್ಯ,
ಮಹಾದಾನಿ ಕೂಡಲಸಂಗಮದೇವಾ,
ಮಾದಾರಚೆ ನ್ನಯ್ಯನ ಮನೆಯ ಮಗ ನಾನಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-195/ವಚನ ಸಂಖ್ಯೆ-717)
… … ವಿಶ್ವಗುರು ಬಸವಣ್ಣ.
ಹುಟ್ಟು ಮತ್ತು ಹುಟ್ಟನ್ನಾಧರಿಸಿದ ಸಂಸ್ಕಾರದ ಆರೋಪದಲ್ಲಿ ನೆಲೆಗೊಳಿಸಲಾದ ಗುರುತುಗಳ ಮೂಲಕ ದೇಹವನ್ನು ವಿಭಜಿಸುವಲ್ಲಿ ಈ ಶಬ್ದ ಪ್ರಮಾಣದ ಕೊಡುಗೆ ವಿಶೇಷವಾದುದು. ಜನಿವಾರ ಅಂತಹ ಗುರುತುಗಳಲ್ಲೊಂದು. ಹರಿಹರನ ಬಸವರಾಜದೇವರ ರಗಳೆಯಲ್ಲಿ ‘ಕರ್ಮಲತೆಯಂತಿದ್ದ ಜನಿವಾರವನ್ನು ಕಿತ್ತೆಸೆಯುವ’ ಸಂಕೇತ ನಿರಾಕರಣೆಯಿದೆ. ಆದರೆ ಈ ಗುರುತಿನ ರಾಜಕಾರಣ ಕೇವಲ ವೈದಿಕಕ್ಕಷ್ಟೇ ಸೀಮಿತವಲ್ಲ. ಬಯಲನ್ನೇ ಧ್ಯಾನಿಸಿದ ಶರಣ ಚಳುವಳಿಯೂ ಈ ಮೋಸಕ್ಕೆ ತುತ್ತಾದುದು ಚಾರಿತ್ರಿಕ ಸತ್ಯ. ಆದರೆ ಸಂಕೇತಗಳ ನಿರಾಕರಣವು ಕನ್ನಡ ವಿವೇಕದ ಸಹಜ ಉದ್ಯೋಗ. ಹಾಗಾಗಿ ಅದು ಇದನ್ನೂ ಸಮರ್ಥವಾಗಿಯೇ ಎದುರಾಗಿದೆ. ಉದಾಹರಣೆಗೆ ವಚನಕಾರರ ಮುಂದುವರಿಕೆಯಂತೆ ಕಂಡೂ ತಾತ್ವಿಕವಾಗಿ ಅದರ ಮುಂದುವರಿಕೆ ಎನಿಸದ ಕೊಡೇಕಲ್ ಬಸವಣ್ಣನ ಪರಂಪರೆಯು “ಮಠೀಯವಾಗುತ್ತಾ, ಮತೀಯವಾಗುತ್ತಾ ಹೋದ ವೀರಶೈವಕ್ಕೆ ಅನುಭಾವಿಗಳು ಕೊಟ್ಟ ಉತ್ತರದಂತೆ” (ರಹಮತ್ ತರೀಕೆರೆ: ಕರ್ನಾಟಕದ ಸೂಫಿಗಳು, ಪು. 85) ಲಿಂಗಧಾರಣ ಆಚರಣೆಯನ್ನೇ ನಿಷ್ಠೂರ ವಿಮರ್ಶೆಗೆ ಒಳಪಡಿಸುತ್ತದೆ. ಮಂಟೇಸ್ವಾಮಿ ಕಾವ್ಯದಲ್ಲಂತೂ ಈ ಸಂಕೇತ ನಿರಾಕರಣೆ ಇನ್ನೂ ನಿಷ್ಠೂರವಾಗಿದೆ. ಅಲ್ಲಿ ಧರೆಗೆ ದೊಡ್ಡೋರಾದ ಮಂಟೇದಲ್ಲಮನ ಕಲ್ಯಾಣ ಪ್ರವೇಶವೇ, ‘ಏನೀ ಬಸವಣ್ಣ, ಕೋಳೀಗ್ ಲಿಂಗ, ಕೋತೀಗ್ ಲಿಂಗ, ನಾಯಿಗೆ ಲಿಂಗ, ನರೀಗ್ ಲಿಂಗ. ಸಿಕ್ಕ ಸಿಕ್ಕದವ್ರಿಗೆಲ್ಲಾ ಲಿಂಗ ಕಟ್ಕೊಂಡ್ ಕಲ್ಯಾಣ ಅಂತ ಮಾಡ್ಕೊಂಡಿದ್ನಲ್ಲಾ ಇದನ್ ನೋಡ್ಬೇಕು ಅಂತ” (ಕೃಪೆ: ನೀಲಗಾರ ಗುರುರಾಜ ಮೈಸೂರು ಹಾಡಿದ ಮಂಟೇಸ್ವಾಮಿ ಪಠ್ಯ). ಹೀಗೆ ಬಂದ ಮಂಟೇದಲ್ಲಮ ಬಸವಣ್ಣನ ಕಲ್ಯಾಣಕ್ಕೆ ಕೊರಳಲ್ಲ್ ಲಿಂಗ ಇದ್ದವರಿಗಷ್ಟೇ ಪ್ರವೇಶ ಅನ್ನೋ ಸುದ್ದಿ ಕೇಳಿದ್ದೇ ‘ನಿಂತಜಾಗದಲ್ಲೇ ಶರೀರವಾದ ಶರೀರವೇ ಗತನಾತ ಹೊಡೆಯುವ ನೊಣ ಸೊಳ್ಳೆ ಸೊಂಯ್ಯೋ ಅಂತ ಕಿರುಚ್ತಾ ಇರೋ ಹಂಗೆ, ಕುಷ್ಟ್ರೋಗ ಹಿಡ್ದ್ ಕೀವುರಕ್ತ ಸೋರುವ ಶರೀರವಾಗಿ ನಿಲ್ಲುತ್ತಾನೆ!”. ಲಿಂಗ ಕಟ್ಟೋ ಶರೀರವೇ ಗತನಾತ ಹೊಡೆಯುವ ಶರೀರವಾಗುವ ಈ ಚಿತ್ರಕ್ಕೇ ನಿಲ್ಲದೆ, ಕಾವ್ಯದಲ್ಲಿ ಮಂಟೇದಲ್ಲಮಪ್ರಭೂ ಕಲ್ಯಾಣದಲ್ಲಿ ಮಾಡಿದ ಘನಕಾರ್ಯಗಳೂ ಪ್ರಸ್ತಾಪಿತವಾಗುತ್ತವೆ.
ಮುಖ್ಯವಾಗಿ ಕಟ್ಟಿದ್ದ ಲಿಂಗಗಳನ್ನು ಕಳಚಿಸುವುದು, ಲಿಂಗವನ್ನು ಸಮಗಾರ ಹರಳಯ್ಯನವರ ಮನೆಯ ಮುಂದಿದ್ದ ಚರ್ಮ ಹದಮಾಡುವ ಉಗುನಿ ಗುಂಡಿಯಲ್ಲಿ ತೊಳೆದು ಶುದ್ಧಿ ಮಾಡಿದ್ದು ಮತ್ತು ಕಲ್ಯಾಣದ ಕಲ್ಯಾಣಿಯಲ್ಲಿದ್ದ ಅದೆಷ್ಟೋ ವರ್ಷಗಳ ಕೊಚ್ಚೆ ನೀರನ್ನು ರಂಡುಪುಂಡು ಜಂಗಮರ ಕೈಲಿ ಖಾಲಿ ಮಾಡಿಸಿ ಹೊಸ ಪನ್ನೀರು ಬರುವಂತೆ ಮಾಡಿದ್ದು. ಅದರ ಜೊತೆಗೆ ಕಲ್ಯಾಣಕ್ಕಾಗಮಿಸಿದ ಅಲ್ಲಮಪ್ರಭುವಿನ ಚಿತ್ರವೂ ಶೂನ್ಯಸಂಪಾದನೆಗಿಂತ ಭಿನ್ನವಾಗುತ್ತದೆ. ಶೂನ್ಯಸಂಪಾದನೆಯಲ್ಲಿ ಪ್ರಭು ಕಲ್ಯಾಣಕ್ಕೆ ಬಂದಾಗ ಇದ್ದ ನಿಜ ಶರಣರೆಂದರೆ ಬಸವರಾಜದೇವರು, ಹಡಪದ ಅಪ್ಪಣ್ಣ, ಸಿದ್ಧರಾಮಯ್ಯದೇವರು, ಚಿಕ್ಕದಣ್ಣಾಯಕ ಚೆನ್ನಬಸವಣ್ಣನವರು, ಸೊಡ್ಡಳ ಬಾಚರಸ, ಕಿನ್ನರಿ ಬೊಮ್ಮಣ್ಣ ಮುಂತಾದವರು. ಆದರೆ ಮಂಟೇಸ್ವಾಮಿ ಕಾವ್ಯದಲ್ಲಿ ಪರಂಜ್ಯೋತಿ ಮಂಟೇದಲ್ಲಯ್ಯ ಕಲ್ಯಾಣ ಪಟ್ಟಣಕ್ಕೆ ಬಂದಾಗ ನಿಜ ಶರಣರಾದ ಭಗುತಿವುಳ್ಳ ಬಸವಣ್ಣ, ಹೊಲಿಯರ ಹೊನ್ನಪ್ಪ, ಮಾದಿಗರ ಚೆನ್ನಯ್ಯ, ಮಡಿವಾಳ ಮಾಚಪ್ಪ, ಕುಂಬಾರ ಗುಂಡಯ್ಯ, ಗಾಣಿಗರ ದಾಸಯ್ಯ, ಕುರುಬರ ಬೀರಪ್ಪ, ದೊಂಬರ ಕ್ಯಾತಯ್ಯ, ತುರುಕರ ಬೀರಯ್ಯ, ಅಂಬಿಗರ ಚೌಡಯ್ಯ ಹಾಗೂ ಅವರ ಜೊತೆ ಅಂಗಾಲ ಜಡೆಯವರು, ಮುಂಗಾಲ ಜಡೆಯವರು, ರಂಡು ಪುಂಡು ಜಂಗಮರು ಪಿತಿಪಿತಿ ಅನ್ನುತ್ತಿದ್ದರು ಎನ್ನುವ ಮೂಲಕ ಅದು ಅಧಿಕಾರದ ಮುದ್ರೆಯಿರದ ನೆಲಮೂಲದ ಕುಲಗಳನ್ನೆಲ್ಲಾ ಒಂದು ತೆಕ್ಕೆಯಲ್ಲಿ ತಂದುಕೊಳ್ಳುತ್ತದೆ. ಎಂದೂ ಅಧಿಕಾರದ ಜೊತೆಗಿರದ, ಸಂಕೇತದ ಕಷ್ಟವಿರದ, ಆದರೆ ದೇಹಶ್ರಮದ ದಟ್ಟ ಕ್ರಿಯಾಶೀಲತೆಯ ಸಮೂಹವನ್ನು ಕೂಡಿಕೊಳ್ಳುತ್ತದೆ. ಇಂತಹ ವಚನದ ಓದುಗಳು ಮತ್ತೆ ಮುನ್ನೆಲೆಗೆ ಬರಲು ಸಾಧ್ಯವೆ?
ಡಾ. ನಟರಾಜ ಬೂದಾಳು,
ಕನ್ನಡ ಪ್ರಾಧ್ಯಾಪಕರು (ವಿಶ್ರಾಂತ),
ಸರಕಾರಿ ಪ್ರಥಮ ದರ್ಜೆ ಕಾಲೇಜು,
ತುಮಕೂರು.
ಮೋಬೈಲ್. ಸಂ. 98443 87175.
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ (ರಿ) ದ ಸಂಚಾಲಕರನ್ನು ಸಂಪರ್ಕಿಸಬೇಕಾದ:
- ಮೋಬೈಲ್ ನಂ. 97413 57132
- e-Mail ID: info@vachanamandara.in / admin@vachanamandara.in





Total views : 67055