![]()

ಐತಿಹಾಸಿಕ ಮಂಗಳವೆಡೆಯಿಂದ ದೊರೆ ಬಿಜ್ಜಳನ ರಾಜದಾನಿ ಕಲ್ಯಾಣಕ್ಕೆ ಸ್ಥಳಾಂತರವಾದ ಬಳಿಕ, ಬಸವಣ್ಣನವರು ಮಹಾಮಂತ್ರಿಯಾಗಿ ಅದನ್ನು ಭೂಮಿಯ ಮೇಲಿನ ಕೈಲಾಸವಾಗಿಸಿದ್ದರು. ಅಂತರ್ಜಾತಿ ವಿವಾಹದ ಪರಿಣಾಮವಾಗಿ ಕ್ರಾಂತಿ ಸಂಭವಿಸಿದ ಬಳಿಕ ಅದು ಶರಣರಿಂದ ವಿಮುಖವಾಯಿತು. ಚಾಲುಕ್ಯರ ಆಡಳಿತದ ನಂತರ ಅದಕ್ಕೆ ಕಿಲ್ಲೆ ಕಲ್ಯಾಣವೆಂದೆ ಕರೆಯುವುದು ವಾಡಿಕೆಯಾಗಿತ್ತು. ಕರ್ನಾಟಕ ರಾಜ್ಯ ಏಕೀಕರಣಕ್ಕೂ ಮೊದಲು ಅದಕ್ಕೆ ಬಸವ ಕಲ್ಯಾಣವೆಂದು ಕರೆಯಲು ಶಿಫಾರಸು ಮಾಡಲಾಯಿತು. 12 ನೇ ಶತಮಾನದ ಬಸವಾದಿ ಶರಣರ ಕಾಲದಲ್ಲಿ ಪವಿತ್ರ ಕಲ್ಯಾಣ ಹೇಗಿತ್ತೆಂದು ತಿಳಿದುಕೊಳ್ಳಲು ಚಿನ್ಮಯ ಜ್ಞಾನಿ ಚನ್ನಬಸವಣ್ಣನವರು ರಚಿಸಿದ ಈ ವಚನವೊಂದು ಸಾಕ್ಷಿಯಾಗುತ್ತದೆ;
ಸ್ವಸ್ತಿ ಸಮಸ್ತಪ್ರಶಸ್ತಿ ಸಹಿತಂ ಶ್ರೀಮತ್ ಕಲ್ಯಾಣಪುರದ ಮಹಾತ್ಮ್ಯ
ಎಂತೆಂದಡೆ: ವಿಸ್ತರಿಸಿ ಪೇಳುವೆನು;
ಎಲ್ಲಾ ಶಿವಗಣಂಗಳು ಕೇಳಿ ಕೃತಾರ್ಥರಾಗಿರಯ್ಯಾ.
ಹದಿನಾಲ್ಕು ಭುವನಕ್ಕೆ ಕಳಸವೆಂದೆನಿಸುವ ರುದ್ರಲೋಕವೆ ಮರ್ತ್ಯಕ್ಕಿಳಿತಂದು,
ಕಲ್ಯಾಣವೆಂಬ ಪುರವಾಗಿ ಹುಟ್ಟಿತ್ತು ನೋಡಿರಯ್ಯಾ!
ಅಲ್ಲಿ ಸತ್ಯರು ಸಾತ್ತ್ವಿಕರು ನಿತ್ಯರು ನಿಜೈಕ್ಯರು ಮಹಾಜ್ಞಾನಿಗಳು
ಪರಮಶಿವಯೋಗಿಗಳು ಶಿವಾನುಭಾವಸಂಪನ್ನರು
ಶಿವಲಿಂಗಪ್ರಾಣಿಗಳು, ಶಿವಪ್ರಸಾದಪಾದೋದಕಸಂಬಂಧಿಗಳು
ಶಿವಾಚಾರವೇದ್ಯರು ಶಿವಾಗಮಸಾಧ್ಯರು
ಶಿವಸಮಯಪಕ್ಷರುಗಳಲ್ಲದೆ, ಮತ್ತಾರು ಅಲ್ಲಿಲ್ಲ ನೋಡಿರಯ್ಯಾ.
ಪಾಪಿಗಳು ಕೋಪಿಗಳು ಅಸತ್ಯರು ಅನಾಚಾರಿಗಳು
ಹೊಗಬಾರದು ಕಲ್ಯಾಣವ.
ಮೀರಿ ಹೊಕ್ಕೆಹೆವೆಂಬವರಿಗೆ ಬಾಳ ಬಾಯಧಾರೆ ನೋಡಿರಯ್ಯಾ.
ಆ ಕಲ್ಯಾಣ ಅಗಮ್ಯ ಅಗೋಚರ ನೋಡಿರಯ್ಯಾ.
ಆ ಮಹಾಕಲ್ಯಾಣದ ವಿಸ್ತೀರ್ಣ ತಾನೆಂತೆಂದಡೆ:
ಹನ್ನೆರಡು ಯೋಜನ ಪರಿಪ್ರಮಾಣದ ವಿಸ್ತ್ರೀರ್ಣ ಪಟ್ಟಣಕ್ಕೆ
ಮುನ್ನೂರರವತ್ತು ಬಾಗಿಲವಾಡ.
ಆ ಬಾಗಿಲಿಂಗೆ ನೂರ ಐವತ್ತೈದು ವಜ್ರದ ಹಾರೆಯ ಕದಂಗಳು.
ಇನ್ನೂರ ಇಪ್ಪತ್ತೈದು ಕಲುಗೆಲಸದ ದ್ವಾರವಟ್ಟಕ್ಕೆ
ನಾನೂರ ಐವತ್ತು ಸುವರ್ಣದ ಕೆಲಸದ ಕದಂಗಳು,
ಅಲ್ಲಿ ನೂರ ಹದಿನೈದು ಚೋರಗಂಡಿ;
ಅವಕ್ಕೆ ನೂರ ಹದಿನೈದು ಮೊಳೆಯ ಕದಂಗಳು.
ಇಪ್ಪತ್ತು ಬಾಗಿಲು ಆಳ್ವರಿಯೊಳಗಿಪ್ಪವಾಗಿ ಅವಕ್ಕೆ ಕದಂಗಳಿಲ್ಲ.
ಆ ಪಟ್ಟಣಕ್ಕೆ ಬಳಸಿಬಂದ ಕೋಂಟೆ
ನಾಲ್ವತ್ತೆಂಟು ಯೋಜನ ಪರಿಪ್ರಮಾಣು.
ಬಾಹತ್ತರ [ನಿಯೋಗಿಗಳ] ಮನೆ ಲಕ್ಷ; ಮಂಡಳಿಕರ ಮನೆ ಲಕ್ಷ;
ಸಾಮಂತರ ಮನೆ ಲಕ್ಷ;
ರಾಯ ರಾವುತರ ಮನೆಯೊಳಡಗಿದ ಮನೆಗಳಿಗೆ ಲೆಕ್ಕವಿಲ್ಲ.
ದ್ವಾದಶ ಯೋಜನ ವಿಸ್ತ್ರೀರ್ಣದ ಸೂರ್ಯವೀಥಿ ನೂರಿಪ್ಪತ್ತು;
ದ್ವಾದಶ ಯೋಜನದ ಸೋಮವೀಥಿ ನೂರಿಪ್ಪತ್ತೈದು.
ಅದರಿಂ ಮಿಗಿಲಾದ ಒಳಕೇರಿ ಹೊರಕೇರಿಗೆ ಗಣನೆಯಿಲ್ಲ.
ಆ ಪಟ್ಟಣದೊಳಗೆ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಶಿವಾಲಯ.
ಆ ಶಿವಾಲಯಂಗಳಿಗೆ ಮುಖ್ಯವಾದ ತ್ರಿಪುರಾಂತಕದೇವರ ಶಿವಾಲಯ.
ಮುನ್ನೂರರವತ್ತು ಪದ್ಮಪತ್ರ ತೀವಿದ ಸರೋವರಗಳು.
ಎರಡು ಲಕ್ಷವು ಎಂಬತ್ತೈದು ಸಾವಿರದ ಏಳು ನೂರೆಪ್ಪತ್ತು
ದಾಸೋಹದ ಮಠಂಗಳು.
ಆ ದಾಸೋಹದ ಮಠಂಗಳಿಗೆ ಮುಖ್ಯವಾದ
ಬಸವರಾಜದೇವರ ಮಠದ ವಿಸ್ತ್ರೀರ್ಣವೆಂತೆಂದಡೆ:
ಯೋಜನವರಿಯ ಬಿನ್ನಾಣದ ಕಲುಗೆಲಸದ ಪೌಳಿ;
ಅತಿ ಸೂಕ್ಷ್ಮದ ಕುಸುರಿಗೆಲಸದ ದ್ವಾರವಟ್ಟವೈದು.
ಅವಕ್ಕೆ ಪಂಚಾಕ್ಷರಿಯ ಶಾಸನ.
ಮಿಸುನಿಯ ಕಂಭದ ತೋರಣಗಳಲಿ ರುದ್ರಾಕ್ಷಿಯ ಸೂಸಕ
ಆ ಬಾಗಿಲುವಾಡದಲ್ಲಿ ಒಪ್ಪುತಿರ್ಪವಯ್ಯಾ,
ನಂದಿಯ ಕಂಭದ ಧ್ವಜ ಉಪ್ಪರಗುಡಿ ಪತಾಕೆ ವ್ಯಾಸಧ್ವಜ
ಒಪ್ಪುತಿರ್ಪವಯ್ಯಾ,
ಆ ಮಧ್ಯದಲ್ಲಿ ಬಸವರಾಜದೇವರ
ಸಿಂಹಾಸನದ ವಿಸ್ತ್ರೀರ್ಣದ ಪ್ರಮಾಣು:
ಸಹಸ್ರಕಂಭದ ಸುವರ್ಣದುಪ್ಪರಿಗೆ;
ಆ ಮನೆಗೆತ್ತಿದ ಹೊನ್ನಕಳಸ ಸಾವಿರ.
ಗುರುಲಿಂಗ ಜಂಗಮಕ್ಕೆ ಪಾದಾರ್ಚನೆಯ ಮಾಡುವ
ಹೊಕ್ಕರಣೆ ನಾಲ್ಕು ಪುರುಷಪ್ರಮಾಣದ ಘಾತ.
ಅಲ್ಲಿ ತುಂಬಿದ ಪಾದೋದಕದ ತುಂಬನುಚ್ಚಲು
ಬೆಳೆವ ರಾಜಶಾಲಿಯ ಗದ್ದೆ ಹನ್ನೆರಡು ಕಂಡುಗ,
ಆ ಯೋಜನವರಿಯ ಬಿನ್ನಾಣದ ಅರಮನೆಯ
ವಿಸ್ತ್ರೀರ್ಣದೊಳಗೆ ಲಿಂಗಾರ್ಚನೆಯ ಮಾಡುವ ಮಠದ ಕಟ್ಟಳೆ
ಲಕ್ಷದ ಮೇಲೆ ತೊಂಬತ್ತಾರು ಸಾವಿರ.
ಇನ್ನು ಬಸವರಾಜದೇವರು ಮುಖ್ಯವಾದ ಅಸಂಖ್ಯಾತರ
ಮಠಂಗಳು ಆ ಕಲ್ಯಾಣದೊಳಗೆ ಎಷ್ಟು ಎಂದಡೆ:
ಹನ್ನೆರಡು ಸಾವಿರ ಕಟ್ಟಳೆಯ ನೇಮದ ಭಕ್ತರ ಮಠಂಗಳು,
ಇಪ್ಪತ್ತೆಂಟು ಸಾವಿರ ಮಹಾಮನೆಗಳು;
ಹತ್ತು ಸಾವಿರ ನಿತ್ಯನೇಮಿಗಳ ಮಠಂಗಳು;
ಹದಿನೈದು ಸಾವಿರ ಚಿಲುಮೆಯಗ್ಗವಣಿಯ ವ್ರತಸ್ಥರ ಮಠಂಗಳು;
ಐದು ಸಾವಿರ ವೀರವ್ರತನೇಮಿಗಳ ಕಟ್ಟಳೆಯ ಮಠಂಗಳು;
ಹನ್ನೆರಡು ಸಾವಿರ ಅಚ್ಚಪ್ರಸಾದಿಗಳ ಮಠಂಗಳು,
ಒಂದು ಸಾವಿರ ಅರವತ್ತು ನಾಲ್ಕು ಶೀಲಸಂಪನ್ನರ ಮಠಂಗಳು;
ನಿತ್ಯ ಸಾವಿರ ಜಂಗಮಕ್ಕೆ ಆರೋಗಣೆಯ ಮಾಡಿಸುವ
ದಾಸೋಹಿಗಳ ಮಠಂಗಳು ಮೂವತ್ತೆರಡು ಸಾವಿರ,
ನಿತ್ಯ ಐನೂರು ಜಂಗಮಕ್ಕೆ ಒಲಿದು ದಾಸೋಹವ ಮಾಡುವ
ಸತ್ಯಸದಾಚಾರಿಗಳ ಮಠಂಗಳು ಐವತ್ತೆಂಟು ಸಾವಿರ;
ನಿತ್ಯ ಸಾವಿರದೈನೂರು ಜಂಗಮಕ್ಕೆ
ಒಲಿದು ದಾಸೋಹವ ಮಾಡುವ
ದಾಸೋಹಿಗಳ ಮಠಂಗಳು ಹನ್ನೊಂದು ಸಾವಿರ;
ನಿತ್ಯ ಅವಾರಿಯಿಂದ ಮಾಡುವ
ಮಾಟಕೂಟದ ಸದ್ಭಕ್ತರ ಮಠಂಗಳು ಒಂದು ಲಕ್ಷ;
ಜಂಗಮಸಹಿತ ಸಮಯಾಚಾರದಿಂದ
ಲಿಂಗಾರ್ಚನೆಯ ಮಾಡುವ ಜಂಗಮಭಕ್ತರ
ಮಠಂಗಳು ಎರಡು ಸಾವಿರದೇಳ್ನೂರೆಪ್ಪತ್ತು;
ಅಂತು ಎರಡು ಲಕ್ಷವು ಎಂಬತ್ತೈದು ಸಾವಿರದ ಏಳುನೂರೆಪ್ಪತ್ತು.
ಇಂತಪ್ಪ ಅಸಂಖ್ಯಾತರಿಗೆ ಮುಖ್ಯವಾಗಿ ರುದ್ರಲೋಕದಿಂದಿಳಿತಂದ
ಪ್ರಮಥಗಣಂಗಳ ಮಠಂಗಳು ಏಳು ನೂರೆಪ್ಪತ್ತು.
ಇಂತೀ ಮಹಾಪ್ರಮಥರಿಗೆ ಪುರಾತರಿಗೆ
ಅಸಂಖ್ಯಾತ ಮಹಾಗಣಂಗಳಿಗೆ ಪ್ರಥಮ ನಾಯಕನಾಗಿ,
ಏಕಮುಖ, ದಶಮುಖ, ಶತಮುಖ, ಸಹಸ್ರಮುಖ,
ಲಕ್ಷಮುಖ, ಕೋಟಿಮುಖ, ಅನಂತಕೋಟಿಮುಖನಾಗಿ
ಭಕ್ತರಿಗೆ ಒಡನಾಡಿಯಾಗಿಪ್ಪನು ಸಂಗನಬಸವಣ್ಣ.
ಜಗದಾರಾಧ್ಯ ಬಸವಣ್ಣ, ಪ್ರಮಥಗುರು
ಬಸವಣ್ಣ, ಶರಣಸನ್ನಹಿತ ಬಸವಣ್ಣ,
ಸತ್ಯಸಾತ್ವಿಕ ಬಸವಣ್ಣ, ನಿತ್ಯನಿಜೈಕ್ಯ
ಬಸವಣ್ಣ, ಷಡುಸ್ಥಲಸಂಪನ್ನ ಬಸವಣ್ಣ,
ಸರ್ವಾಚಾರಸಂಪನ್ನ ಬಸವಣ್ಣ,
ಸರ್ವಾಂಗಲಿಂಗಿ ಬಸವಣ್ಣ,
ಸುಜ್ಞಾನಭರಿತ ಬಸವಣ್ಣ, ನಿತ್ಯಪ್ರಸಾದ ಬಸವಣ್ಣ,
ಸಚ್ಚಿದಾನಂದಮೂರ್ತಿ ಬಸವಣ್ಣ,
ಸದ್ಯೋನ್ಮುಕ್ಮಿರೂಪ ಬಸವಣ್ಣ,
ಅಖಂಡಪರಿಪೂರ್ಣ ಬಸವಣ್ಣ,
ಅಭೇದ್ಯಭೇದಕ ಬಸವಣ್ಣ, ಅನಾಮಯಮೂರ್ತಿ ಬಸವಣ್ಣ,
ಮಹಾಮನೆಯ ಮಾಡಿದಾತ ಬಸವಣ್ಣ,
ರುದ್ರಲೋಕವ ಮರ್ತ್ಯಲೋಕಕ್ಕೆ ತಂದಾತ ಬಸವಣ್ಣ,
ಶಿವಚಾರದ ಘನವ ಮೆರೆದಾತ ಬಸವಣ್ಣ.
ಇಂತಹ ಬಸವಣ್ಣನ ಭಕ್ತಿಯನು ಒರೆದೊರೆದು ನೋಡುವ,
ಪ್ರಜ್ವಲಿತವ ಮಾಡುವ ಅಶ್ವಪತಿ, ಗಜಪತಿ, ನರಪತಿರಾಯ,
ರಾಜಾಧಿರಾಜ ಬಿಜ್ಜಳರಾಯನೂ ಆ ಬಸವಣ್ಣನೂ
ಆ ಕಲ್ಯಾಣಪಟ್ಟಣದೊಳಗೆ
ಸುಖಸಂಕಥಾವಿನೋದದಿಂದ ರಾಜ್ಯಂಗೆಯುತ್ತಿರಲು,
ಆ ಕಲ್ಯಾಣದ ನಾಮವಿಡಿದು ವಿವಾಹಕ್ಕೆ
ಕಲ್ಯಾಣವೆಂಬ ನಾಮವಾಯಿತ್ತು.
ಲೋಕದೊಳಗೆ ಕಲ್ಯಾಣವೆ ಕೈಲಾಸವೆನಿಸಿತ್ತು.
ಇಂತಪ್ಪ ಕಲ್ಯಾಣದ ದರುಶನವ ಮಾಡಿದಡೆ ಭವಂ ನಾಸ್ತಿ,
ಇಂತಪ್ಪ ಕಲ್ಯಾಣವ ನೆನೆದಡೆ ಪಾಪಕ್ಷಯ,
ಇಂತಪ್ಪ ಕಲ್ಯಾಣದ ಮಹಾತ್ಮೆಯಂ ಕೇಳಿದಡೆ
ಕರ್ಮಕ್ಷಯವಹುದು, ಮೋಕ್ಷ ಸಾಧ್ಯವಹುದು,
ಇದು ಕಾರಣ, ಕೂಡಲಚೆನ್ನಸಂಗಮದೇವಾ,
ನಿಮ್ಮ ಭಕ್ತ ಬಸವಣ್ಣನಿದ್ದ ಠಾವೆ ಮಹಾಕಲ್ಯಾಣವೆಂದರಿದು
ದಿವ್ಯಶಾಸನವ ಬರೆದು ಪರಿಸಿದ ಕಾರಣ,
ಎನ್ನ ಭವಂ ನಾಸ್ತಿಯಾಯಿತ್ತಯ್ಯಾ.
(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-846/ವಚನ ಸಂಖ್ಯೆ-1731)
ಕಲ್ಯಾಣಪುರದ ಮಹಿಮೆಯನ್ನು ಅತ್ಯಂತ ಭಕ್ತಿಭಾವದಿಂದ ವರ್ಣಿಸುತ್ತಾ ಚನ್ನಬಸವಣ್ಣನವರು “ಸ್ವಸ್ತಿ” ಎಂಬ ಸಂಸ್ಕೃತ ಪದದೊಂದಿಗೆ ಶುಭವನ್ನು ಕೋರಿ, ವಿಶ್ವಗುರು ಬಸವಣ್ಣನವರ ಕಾಲದ ಕಲ್ಯಾಣದ ಚಿತ್ರಣವನ್ನು ಕಟ್ಟಿ ಕೊಡುತ್ತಾರೆ. ಅದರ ಮಹಿಮೆಯನ್ನು ಕೇಳುವ ಶಿವಗಣದ ಸದ್ಭಕ್ತರೆಲ್ಲರಿಗೂ ಮಂಗಳವಾಗಲಿ ಹಾಗೂ ಕೃತಾರ್ಥರಾಗಲಿ ಎಂದು ಆಶಿಸುತ್ತಾರೆ. ಕಲ್ಯಾಣವನ್ನು ಸಾಮಾನ್ಯ ನಗರವೆಂದು ಪರಿಗಣಿಸುವಂತಿಲ್ಲ. ಹದಿನಾಲ್ಕು ಲೋಕಗಳಿಗೆ ಶಿರೋಮಣಿಯಾದ ರುದ್ರಲೋಕವೇ ಭೂಲೋಕಕ್ಕೆ ಇಳಿದು ‘ಕಲ್ಯಾಣ‘ ಎಂಬ ನಗರವಾಗಿ ರೂಪುಗೊಂಡಿತ್ತು. ಅಂದರೆ, ಕಲ್ಯಾಣವು ಶಿವನ ಕೃಪೆಯಿಂದ ಪವಿತ್ರಗೊಂಡ ದಿವ್ಯ ಕ್ಷೇತ್ರವಾಗಿದ್ದು, ಶಿವಲೋಕದ ಪ್ರತಿರೂಪವಾಗಿ, ಶರಣ ಸಂಸ್ಕೃತಿ, ಅನುಭವ ಮಂಟಪ ಮತ್ತು ಬಸವಣ್ಣರ ಸಾಮಾಜಿಕ ಕ್ರಾಂತಿಗೆ ಕೇಂದ್ರವಾಗಿತ್ತು. ಅಲ್ಲಿ ಶಿವಭಕ್ತರು, ಶರಣರು ಹಾಗೂ ಮಹಾತ್ಮರು ನೆಲೆಸಿ ಶರಣ ಧರ್ಮ, ಶಿವಜ್ಞಾನ ಮತ್ತು ಸರ್ವ ಸಮಾನತೆಯ ಸಂದೇಶವನ್ನು ಇಡೀ ವಿಶ್ವಕ್ಕೆ ಸಾರಿದರು ಎಂಬುದು ತಿಳಿದು ಬರುತ್ತದೆ.
ಕಲ್ಯಾಣದಲ್ಲಿ ವಾಸಿಸುವವರು ಸತ್ಯವಂತರೂ, ಸಾತ್ವಿಕ ಸ್ವಭಾವದವರೂ, ಸದಾ ಶಿವನೊಂದಿಗೆ ಐಕ್ಯಭಾವ ಹೊಂದಿದವರೂ ಆಗಿದ್ದರು. ಅವರು ಮಹಾಜ್ಞಾನಿಗಳಾಗಿದ್ದು, ಪರಮ ಶಿವಯೋಗದ ಅನುಭವವನ್ನು ಪಡೆದವರಾಗಿದ್ದರು. ಅವರು ಕೇವಲ ಶಿವಭಕ್ತರಾಗಿರಲಿಲ್ಲ. ಇಷ್ಟಲಿಂಗವನ್ನು ಪ್ರಾಣಕ್ಕಿಂತಲೂ ಮಿಗಿಲಾಗಿ ಆರಾಧಿಸುವ ಲಿಂಗ ಪ್ರಾಣಿಗಳು. ಶಿವಪ್ರಸಾದ ಮತ್ತು ಪಾದೋದಕವನ್ನು ಪವಿತ್ರವೆಂದು ಭಾವಿಸಿ, ಗುರು–ಲಿಂಗ–ಜಂಗಮ ತತ್ತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡವರಾಗಿದ್ದರು. ಶಿವಾಚಾರವನ್ನು ತಿಳಿದವರು, ಶಿವಾಗಮದ ಸಾರವನ್ನು ಜೀವನದಲ್ಲಿ ಅನುಷ್ಠಾನಗೊಳಿಸಿದವರು ಹಾಗೂ ಶರಣ ಧರ್ಮದ ಪರಿಪಾಲಕರಾಗಿದ್ದರು. ಆದ್ದರಿಂದ, ಕಲ್ಯಾಣದಲ್ಲಿ ಇಂತಹ ಶಿವಭಕ್ತರು ಮತ್ತು ಶರಣರನ್ನು ಹೊರತುಪಡಿಸಿ, ಅನ್ಯ ಸ್ವಭಾವದ ಜನರು ಇರಲಿಲ್ಲ. ಅದು ಕೇವಲ ಒಂದು ನಗರವಾಗಿರಲಿಲ್ಲ, ಶರಣ ಸಂಸ್ಕೃತಿಯ ಆದರ್ಶ ಸಮಾಜವಾಗಿತ್ತು. ಸತ್ಯ, ಸಮಾನತೆ, ಶಿವಾನುಭವ, ಕಾಯಕ, ದಾಸೋಹ ಮತ್ತು ಆಚಾರ, ವಿಚಾರಗಳಲ್ಲಿ ಪರಿಶುದ್ಧತೆ ಹೊಂದಿದ ಜನರೇ ಕಲ್ಯಾಣದ ನಿಜವಾದ ಸತ್ಪ್ರಜೆಗಳಾಗಿದ್ದರು. ಪಾಪ ಕೃತ್ಯಗಳಲ್ಲಿ ತೊಡಗಿರುವವರು, ಕ್ರೋಧ ಸ್ವಭಾವದವರು, ಸುಳ್ಳು ಹೇಳುವವರು ಹಾಗೂ ಅನಾಚಾರಿಗಳು ಕಲ್ಯಾಣ ಪ್ರವೇಶಿಸಲು ಯೋಗ್ಯರಲ್ಲ. ಅಂತಹವರು ಅಲ್ಲಿ ಹೋಗವಂತಿರಿರಲಿಲ್ಲ. ಅವರು ತಮ್ಮ ದುರ್ಗುಣಗಳನ್ನು ಬಿಟ್ಟು ಸತ್ಯ, ಸದಾಚಾರ ಮತ್ತು ಶಿವಭಕ್ತಿಯ ಮಾರ್ಗವನ್ನು ಅನುಸರಿಸಿದಾಗ ಮಾತ್ರ ಕಲ್ಯಾಣದ ನಿಜವಾದ ಮಹಿಮೆಯನ್ನು ಅನುಭವಿಸಲು ಪ್ರವೇಶ ಪಡೆಯುತ್ತಿದ್ದರು. ಯಾರಾದರೂ ತಮ್ಮ ದುಷ್ಟ ಸ್ವಭಾವವನ್ನು ಬದಲಾಯಿಸದೆ ಅಹಂಕಾರದಿಂದ ಕಲ್ಯಾಣವನ್ನು ಪ್ರವೇಶಿಸಿದರೆ, ಅವರಿಗೆ ಸಂಕಷ್ಟಗಳು ಅಕ್ರಮಿಸಿಕೊಳ್ಳುತ್ತಿದ್ದವು ಹಾಗೂ ಬದುಕಿನಲ್ಲಿ ಕಠಿಣ ಪ್ರಸಂಗಗಳು ಎದುರಿಸುತ್ತಿದ್ದರು. “ಆ ಕಲ್ಯಾಣ ಅಗಮ್ಯ, ಅಗೋಚರ” ಇದರ ಅರ್ಥ, ಕಲ್ಯಾಣದ ನಿಜವಾದ ಮಹತ್ವವನ್ನು ಹೊರ ನೋಟದಿಂದ ಅರಿಯಲು ಸಾಧ್ಯವಿಲ್ಲ. ಅದು ಶುದ್ಧ ಮನಸ್ಸಿನ ಶಿವಭಕ್ತಿ, ಸತ್ಯಾಚರಣೆ ಮತ್ತು ಆತ್ಮಾನುಭವದ ಮೂಲಕವೇ ಗ್ರಹಿಸಬಹುದಾದ ಆಧ್ಯಾತ್ಮಿಕ ಕ್ಷೇತ್ರವಾಗಿತ್ತು.
ಕಲ್ಯಾಣವು ಸುಮಾರು ಹನ್ನೆರಡು ಯೋಜನಗಳಷ್ಟು ವಿಶಾಲವಾದ ಮಹಾನಗರವಾಗಿತ್ತು. ಇಲ್ಲಿ “ಯೋಜನ” ಎಂಬುದು ಪ್ರಾಚೀನ ಭಾರತೀಯ ದೂರದ ಅಳತೆಯಾಗಿದೆ. ಈ ಅಳತೆಯನ್ನು ನಗರದ ಅಪಾರ ವಿಸ್ತಾರವನ್ನು ಸೂಚಿಸಲು ಬಳಸಲಾಗಿದೆ. ಕಲ್ಯಾಣ ನಗರಕ್ಕೆ 360 ಬಾಗಿಲುಗಳು ಇದ್ದವು. ಆ ಬಾಗಿಲುಗಳಿಗೆ 155 ವಜ್ರದ ಹಾರೆಯ ಕದಗಳು (ಅತ್ಯಂತ ಬಲಿಷ್ಠ ಮತ್ತು ಅಮೂಲ್ಯವಾದ ಬಾಗಿಲುಗಳು) ಇದ್ದವು. ಕಲ್ಯಾಣಪುರವು ವಿಶಾಲ, ಸಮೃದ್ಧ, ಸುಭದ್ರ ಮತ್ತು ವೈಭವಶಾಲಿ ರಾಜಧಾನಿಯಾಗಿತ್ತು ಎಂಬ ಭಾವನೆಯನ್ನು ಮೂಡಿಸುತ್ತದೆ. ಹಾಗೂ ಕಲ್ಯಾಣಪುರದ ಕೋಟೆಯಲ್ಲಿ ಸುಮಾರು 225 ಕಲ್ಲಿನ ಕಲಾಕೃತಿಗಳಿಂದ ಅಲಂಕರಿಸಲ್ಪಟ್ಟ ದ್ವಾರಗಳು ಇದ್ದವು. ಆ ದ್ವಾರಗಳಿಗೆ 450 ಚಿನ್ನದ ಕೆಲಸಗಳಿಂದ ಅಲಂಕರಿಸಿದ ಬಾಗಿಲುಗಳು ಇದ್ದವು. ನಗರದಲ್ಲಿ 115 ಚೋರಗಂಡಿಗಳು (ರಹಸ್ಯ ದಾರಿಗಳು, ಸಣ್ಣ ಪ್ರವೇಶ ಮಾರ್ಗಗಳು) ಇದ್ದವು. ಅವುಗಳಿಗೆ 115 ಬಲಿಷ್ಠ ಮೊಳೆಯ ಕದಗಳು ಇದ್ದವು. ಇವು ತುರ್ತು ಸಂದರ್ಭಗಳಲ್ಲಿ ಸಂಚಾರ ಮತ್ತು ರಕ್ಷಣೆಗೆ ಬಳಸಲ್ಪಡುತ್ತಿದ್ದವು. ಇದಲ್ಲದೆ, 25 ಬಾಗಿಲುಗಳು ಆಳವಾದ ಕಂದಕ (ಆಳ್ವರಿ) ಕಡೆಗೆ ತೆರೆದಿದ್ದವು. ಅವಕ್ಕೆ ಪ್ರತ್ಯೇಕ ಕದಗಳೇ ಇರಲಿಲ್ಲ. ಏಕೆಂದರೆ ಆಳವಾದ ಕಂದಕವೇ ಸಹಜ ರಕ್ಷಣಾ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತಿತ್ತು. ಕಲ್ಯಾಣವು ಸುಂದರ ವಾಸ್ತುಶಿಲ್ಪ, ಭವ್ಯ ಕೋಟೆ, ಕಲಾತ್ಮಕ ಬಾಗಿಲುಗಳು ಮತ್ತು ಅತ್ಯುತ್ತಮ ರಕ್ಷಣಾ ವ್ಯವಸ್ಥೆಯನ್ನು ಹೊಂದಿದ್ದ ರಾಜಧಾನಿ ಎಂಬುದನ್ನು ಚಿತ್ರಿಸುತ್ತದೆ. ಇದು ಕಲ್ಯಾಣದ ರಾಜಕೀಯ ವೈಭವ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನೂ ಪ್ರತಿಬಿಂಬಿಸುತ್ತದೆ.
ಕಲ್ಯಾಣ ನಗರದ ಸುತ್ತಲೂ ಸುಮಾರು 48 ಯೋಜನಗಳಷ್ಟು ವಿಸ್ತಾರವಾದ ಕೋಟೆ ಮತ್ತು ರಕ್ಷಣಾ ವ್ಯವಸ್ಥೆ ಇತ್ತು. ಕಲ್ಯಾಣದಲ್ಲಿ 72 ನಿಯೋಗಿಗಳು (ರಾಜ್ಯ ಆಡಳಿತದ ಪ್ರಮುಖ ಅಧಿಕಾರಿಗಳು), ಮಂಡಳಿಕರು (ಪ್ರಾಂತೀಯ ಆಡಳಿತಗಾರರು), ಸಾಮಂತರು (ಅಧೀನ ರಾಜರು) ಮತ್ತು ರಾಯ-ರಾವುತರು (ಸೇನಾಧಿಕಾರಿಗಳು, ಉನ್ನತ ವರ್ಗದ ಅಧಿಕಾರಿಗಳು) ವಾಸಿಸುತ್ತಿದ್ದರು. ಅವರ ಮನೆಗಳು ಅಪಾರ ಸಂಖ್ಯೆಯಲ್ಲಿದ್ದು, ಅವುಗಳನ್ನು ಎಣಿಸಲು ಸಾಧ್ಯವಿಲ್ಲದಷ್ಟು ಹೆಚ್ಚಿದ್ದವು. ನಗರದಲ್ಲಿ ಸೂರ್ಯವೀಥಿ ಮತ್ತು ಸೋಮವೀಥಿ ಎಂಬ ಪ್ರಮುಖ ರಾಜಮಾರ್ಗಗಳು ಇದ್ದವು. ಅವು ವಿಶಾಲವಾಗಿದ್ದು, ಎರಡೂ ಬದಿಗಳಲ್ಲೂ ಸುಂದರ ಕಟ್ಟಡಗಳು, ಮಾರುಕಟ್ಟೆಗಳು ಮತ್ತು ಜನವಸತಿ ಪ್ರದೇಶಗಳು ಇದ್ದವು. ಇವುಗಳ ಹೊರತಾಗಿ ಅನೇಕ ಒಳ ಕೇರಿಗಳು (ನಗರದ ಒಳಭಾಗದ ವಸತಿಗಳು) ಮತ್ತು ಹೊರ ಕೇರಿಗಳು (ಹೊರವಲಯದ ವಸತಿಗಳು) ಇದ್ದವು. ಅವುಗಳ ಸಂಖ್ಯೆಯನ್ನು ಲೆಕ್ಕ ಹಾಕಲಾಗದಷ್ಟು ಹೆಚ್ಚಿನದಾಗಿತ್ತು. ಕಲ್ಯಾಣ ರಾಜ್ಯದಲ್ಲಿ 1,96,000 ಶಿವಾಲಯಗಳು ಇದ್ದವು. ಅವುಗಳಲ್ಲಿ ತ್ರಿಪುರಾಂತಕ ದೇವಸ್ಥಾನ ಅತ್ಯಂತ ಪ್ರಮುಖವಾದ ದೇವಾಲಯವಾಗಿತ್ತು. ನಗರದಲ್ಲಿ 360 ಕಮಲಗಳಿಂದ ಅಲಂಕರಿಸಲ್ಪಟ್ಟ ತೀರ್ಥ ಸರೋವರಗಳು ಇದ್ದದರಿಂದ ನಗರದ ನೀರಾವರಿ ವ್ಯವಸ್ಥೆ, ಪವಿತ್ರ ತೀರ್ಥಗಳು ಮತ್ತು ಸೌಂದರ್ಯವನ್ನು ಕೊಂಡಾಡುತ್ತದೆ. ಕಲ್ಯಾಣ ರಾಜ್ಯದಲ್ಲಿ 2,85,770 ದಾಸೋಹ ಮಠಗಳು ಇದ್ದವು. ಈ ಮಠಗಳಲ್ಲಿ ಅನ್ನ ದಾಸೋಹ, ಜ್ಞಾನ ದಾಸೋಹ ಮತ್ತು ಭಕ್ತ ಸೇವೆಯಂತಹ ಕಾರ್ಯಗಳು ನಿರಂತರವಾಗಿ ನಡೆಯುತ್ತಿದ್ದವು.
ಕಲ್ಯಾಣ ರಾಜ್ಯದ ಎಲ್ಲ ಮಠಗಳಲ್ಲಿ ಬಸವರಾಜದೇವರ ಮಠವೇ ಅತ್ಯಂತ ಪ್ರಮುಖವಾದದ್ದು. ಬಸವಣ್ಣರ ಮಠವು ವಿಶಾಲ ಆವರಣ, ಕಲ್ಲಿನ ಸುಂದರ ಪೌಳಿ (ಪ್ರಾಕಾರ) ಮತ್ತು ಭವ್ಯ ವಾಸ್ತುಶಿಲ್ಪವನ್ನು ಹೊಂದಿತ್ತು. ಮಠಕ್ಕೆ ಐದು ಮುಖ್ಯ ಪ್ರವೇಶದ್ವಾರಗಳು ಇದ್ದವು. ಅವು ಅತ್ಯಂತ ಸೂಕ್ಷ್ಮವಾದ ಕುಸುರಿ (ಕೆತ್ತನೆ) ಕೆಲಸದಿಂದ ಅಲಂಕರಿಸಲ್ಪಟ್ಟಿದ್ದವು. ಆ ದ್ವಾರಗಳ ಮೇಲೆ “ನಮಃ ಶಿವಾಯ” ಎಂಬ ಪಂಚಾಕ್ಷರಿ ಮಂತ್ರ ಕೆತ್ತಲಾಗಿತ್ತು. ಇದರಿಂದ ಮಠಕ್ಕೆ ಪ್ರವೇಶಿಸುವ ಪ್ರತಿಯೊಬ್ಬರಿಗೂ ಶಿವಸ್ಮರಣೆ ಉಂಟಾಗುವಂತೆ ವ್ಯವಸ್ಥೆ ಮಾಡಲಾಗಿತ್ತು. ದ್ವಾರಗಳ ಕಂಬಗಳು ಮತ್ತು ತೋರಣಗಳಲ್ಲಿ ರುದ್ರಾಕ್ಷಿ ಮಾಲೆಯಂತಿರುವ ಕೆತ್ತನೆಗಳು ಇದ್ದವು. ಮಠದ ಮುಂಭಾಗದಲ್ಲಿ ನಂದಿಧ್ವಜ ಹಾರಾಡುತ್ತಿತ್ತು. ನಂದಿಯು ಶಿವನ ವಾಹನವಾಗಿರುವುದರಿಂದ ಅದು ಭಕ್ತಿ, ಧರ್ಮ ಮತ್ತು ಸ್ಥಿರತೆಯ ಸಂಕೇತವಾಗಿದೆ. ಜೊತೆಗೆ ಉಪ್ಪರಗುಡಿ ಪತಾಕೆ ಮತ್ತು ವ್ಯಾಸಧ್ವಜಗಳು ಹಾರುತ್ತಿದ್ದವು. ಇವುಗಳನ್ನು ಗಮನಿಸಿದಾಗ ಮಠವು ಕೇವಲ ಪೂಜೆಯ ಕೇಂದ್ರವಲ್ಲ, ಜ್ಞಾನ, ಧರ್ಮ ಮತ್ತು ಸಂಸ್ಕೃತಿಯ ಕೇಂದ್ರವೂ ಆಗಿತ್ತು ಎಂಬುದನ್ನು ಸೂಚಿಸುತ್ತವೆ. ಪ್ರತಿಯೊಂದು ವಾಸ್ತು ಅಂಶವೂ ಒಂದು ಸಂಕೇತವಾಗಿದೆ. ಇಲ್ಲಿ ಐದು ದ್ವಾರಗಳು ಎಂದರೆ ಪಂಚೇಂದ್ರಿಯಗಳ ಶುದ್ಧೀಕರಣ ಅಥವಾ ಪಂಚಾಚಾರಗಳ ಸಂಕೇತವೆಂದು ಅರ್ಥೈಸಬಹುದು. ಹಾಗೂ ಪಂಚಾಕ್ಷರಿ ಶಾಸನವು ಶಿವಸ್ಮರಣೆ ಮತ್ತು ಆತ್ಮ ಶುದ್ಧಿಯ ಪ್ರತೀಕವಾಗಿತ್ತು. ರುದ್ರಾಕ್ಷಿ ಅಲಂಕಾರವು ಶಿವಭಕ್ತಿ, ತಪಸ್ಸು ಮತ್ತು ವೈರಾಗ್ಯದ ಸಂಕೇತವಾದರೆ, ನಂದಿಧ್ವಜವು ಧರ್ಮ, ನಿಷ್ಠೆ ಮತ್ತು ಸೇವೆಯ ಸಂಕೇತವೆಂದೂ ಹಾಗೂ ವ್ಯಾಸಧ್ವಜವನ್ನು ಜ್ಞಾನ ಮತ್ತು ಉಪದೇಶದ ಪ್ರತೀಕವಾಗಿದ್ದವುಗಳೆಂದು ಪರಿಭಾವಿಸಬೇಕಿದೆ. ಮಠದ ಮಧ್ಯ ಭಾಗದಲ್ಲಿ ಬಸವರಾಜದೇವರ ಸಿಂಹಾಸನ ಇತ್ತು. ಅದು ಅತ್ಯಂತ ವಿಶಾಲ ಮತ್ತು ಭವ್ಯವಾಗಿತ್ತು. ಅದರ ಸುತ್ತಲೂ ಸಾವಿರ ಕಂಬಗಳಿದ್ದ ಸುವರ್ಣ ಮಂಟಪ ನಿರ್ಮಿಸಲಾಗಿತ್ತು. ಈ ಮಂಟಪದ ಮೇಲ್ಭಾಗದಲ್ಲಿ ಸಾವಿರ ಚಿನ್ನದ ಕಳಶಗಳು ಅಲಂಕರಿಸಿದ್ದವು. ಮಠದಲ್ಲಿ ಗುರು, ಲಿಂಗ ಮತ್ತು ಜಂಗಮರಿಗೆ ಪಾದಪೂಜೆ (ಪಾದಾರ್ಚನೆ) ಮಾಡಲು ವಿಶೇಷವಾದ ಹೊಕ್ಕರಣೆ (ಜಲಸಂಗ್ರಹ ಕುಂಡ, ತೊಟ್ಟಿ) ಇತ್ತು. ಅದು ಸುಮಾರು ನಾಲ್ಕು ಪುರುಷರ ಎತ್ತರದಷ್ಟು ಆಳವಾಗಿತ್ತು. ಇದು ಪಾದಪೂಜೆಗೆ ಅಗತ್ಯವಾದ ನೀರಿನ ವ್ಯವಸ್ಥೆ ಹಾಗೂ ದಾಸೋಹದ ವೈಭವವನ್ನು ಸೂಚಿಸುತ್ತದೆ. ಈ ವರ್ಣನೆಯ ಹಿಂದೆ ಶರಣ ತತ್ವದ ಆಳವಾದ ಸಂದೇಶ ಅಡಗಿದೆ. ಹೇಗೆಂದರೆ , ಸಿಂಹಾಸನವು ಬಸವಣ್ಣರ ವೈಯಕ್ತಿಕ ಅಧಿಕಾರದ ಸಂಕೇತವಾಗಿರಲಿಲ್ಲ. ಅವರು ಪ್ರತಿಪಾದಿಸಿದ ಶರಣ ಧರ್ಮ, ಜಾತಿ, ವರ್ಣ, ಲಿಂಗ ಸಮಾನತೆ ಮತ್ತು ಜ್ಞಾನ ಸ್ಥಾನದ ಸಂಕೇತವೆಂದು ತಿಳಿಯಬೇಕಿದೆ. ಇನ್ನೂ ಸಾವಿರ ಕಂಬಗಳೆಂದರೆ ಅನೇಕ ಶರಣರು, ಅನೇಕ ವಿಚಾರಗಳು ಮತ್ತು ಸಮಾಜದ ವಿವಿಧ ವರ್ಗಗಳ ಸಹಭಾಗಿತ್ವವನ್ನು ಸೂಚಿಸುತ್ತವೆ. ಹಾಗೂ ಸಾವಿರ ಕಳಶಗಳು ಎಂದರೆ ಮಂಗಳ, ಸಮೃದ್ಧಿ ಮತ್ತು ಆಧ್ಯಾತ್ಮಿಕ ಐಶ್ವರ್ಯದ ಪ್ರತೀಕ. ಗುರು-ಲಿಂಗ-ಜಂಗಮ ಪಾದಾರ್ಚನೆಯು ಶರಣ ಧರ್ಮದ ತ್ರಿವಿಧ ಆಧ್ಯಾತ್ಮಿಕ ಸಂಬಂಧವನ್ನು ಪ್ರತಿನಿಧಿಸುತ್ತದೆ. ಬಸವರಾಜದೇವರ ಮಠದಲ್ಲಿ ಗುರು, ಲಿಂಗ ಮತ್ತು ಜಂಗಮರ ಪಾದಪೂಜೆಯಿಂದ ದೊರೆಯುವ ಪಾದೋದಕವು ಸದಾ ಸಮೃದ್ಧವಾಗಿರುತ್ತಿತ್ತು. ಅದು “ತುಂಬನುಚ್ಚಲು”, ಎಂದಿಗೂ ಬರಿದಾಗದಷ್ಟು ನಿರಂತರವಾಗಿ ಲಭ್ಯವಿತ್ತು. ಮಠದ ನಿರ್ವಹಣೆ ಮತ್ತು ದಾಸೋಹಕ್ಕಾಗಿ ಹನ್ನೆರಡು ಕಂಡುಗ (ವಿಶಾಲ ವಿಸ್ತೀರ್ಣದ) ಫಲವತ್ತಾದ ಭತ್ತದ ಗದ್ದೆಗಳು ಇದ್ದವು. ಇವುಗಳಿಂದ ದೊರೆಯುವ ಧಾನ್ಯವನ್ನು ಅನ್ನ ದಾಸೋಹ ಮತ್ತು ಮಠದ ಇತರ ಕಾರ್ಯಗಳಿಗೆ ಬಳಸಲಾಗುತ್ತಿತ್ತು. ಅತ್ಯಂತ ವಿಶಾಲವಾದ ಅರಮನೆ ಹಾಗೂ ಮಠದ ಆವರಣದಲ್ಲಿ “ಲಕ್ಷದ ಮೇಲೆ ತೊಂಬತ್ತಾರು ಸಾವಿರ” ಶರಣರು ತಮ್ಮ ಇಷ್ಟಲಿಂಗವನ್ನು ಆರಾಧಿಸುತ್ತಿದ್ದ ಆಧ್ಯಾತ್ಮಿಕ ಕೇಂದ್ರಗಳ ಸಮೃದ್ಧಿಯನ್ನು ಹೊಂದಿತ್ತು.
ಕಲ್ಯಾಣ ರಾಜ್ಯದಲ್ಲಿ ಬಸವರಾಜದೇವರ ಮಠದ ನೇತೃತ್ವದಲ್ಲಿ ಅನೇಕ ವಿಧದ ಶರಣ ಸಮುದಾಯದ ಮಠಗಳು ಇದ್ದವು. ಅವುಗಳಲ್ಲಿ 12,000 ಕಟ್ಟಳೆಯ ನೇಮದ ಭಕ್ತರು ಎಂದರೆ ನಿಗದಿತ ಧಾರ್ಮಿಕ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಿದ್ದ ಭಕ್ತರು. 28,000 ಮಹಾಮನೆಗಳು ಎಂದರೆ ಶರಣರಿಗೆ ಆಶ್ರಯ, ದಾಸೋಹ, ಶರಣ ಧರ್ಮ ಚರ್ಚೆ ಮತ್ತು ಸಮಾಜ ಸೇವೆಯ ಕೇಂದ್ರಗಳಾಗಿದ್ದ ದೊಡ್ಡ ಮಠಗಳು ಅಥವಾ ಕೇಂದ್ರಗಳೆಂದು ತಿಳಿಯಬಹುದಾಗಿದೆ. ಹಾಗೂ 10,000 ನಿತ್ಯ ನೇಮಿಗಳೆಂದರೆ ಪ್ರತಿದಿನ ನಿಯಮಿತವಾಗಿ ಇಷ್ಟಲಿಂಗ ಪೂಜೆ, ಜಪ, ಧ್ಯಾನ ಮತ್ತು ಶಿವಾಚಾರವನ್ನು ಪಾಲಿಸುತ್ತಿದ್ದ ಶರಣರು. 15,000 ಚಿಲುಮೆಯಗ್ಗವಣಿಯ ವ್ರತಸ್ಥರು ಎಂದರೆ ವೈರಾಗ್ಯ, ತಪಸ್ಸು ಮತ್ತು ಕಠಿಣ ವ್ರತಗಳನ್ನು ಆಚರಿಸುತ್ತಿದ್ದ ಸಾಧಕರು ಎಂದರ್ಥ. 5,000 ವೀರವ್ರತ ನೇಮಿಗಳು ಇದ್ದರು ಎಂದರೆ ಶರಣ ಧರ್ಮಕ್ಕಾಗಿ ನಿಷ್ಠೆಯಿಂದ ವ್ರತ ಪಾಲಿಸುತ್ತಿದ್ದ ವೀರ ಜಂಗಮ ವಟುಗಳು. 12,000 ಅಚ್ಚಪ್ರಸಾದಿಗಳು – ಪ್ರಸಾದವನ್ನು ಪವಿತ್ರವಾಗಿ ಸ್ವೀಕರಿಸಿ, ಪ್ರಸಾದದ ತತ್ವವನ್ನು ಜೀವನದಲ್ಲಿ ಅನುಸರಿಸುತ್ತಿದ್ದ ಶರಣರು. ಇಂತಹ ವಿವಿಧ ಆಧ್ಯಾತ್ಮಿಕ ಸಮುದಾಯಗಳಿಂದ ಕಲ್ಯಾಣವು ಸದಾ ಭಕ್ತಿ ಮತ್ತು ದಾಸೋಹದ ಚಟುವಟಿಕೆಗಳಿಂದ ಜೀವಂತವಾಗಿತ್ತು. ಇಲ್ಲಿ ಉಲ್ಲೇಖಿಸಿರುವ ಮಠಗಳು ಕೇವಲ ಪೂಜಾ ಸ್ಥಳಗಳಲ್ಲ. ಅವು ಜ್ಞಾನ ವಿನಿಮಯದ ಕೇಂದ್ರಗಳು, ಅನ್ನ ದಾಸೋಹದ, ಸಮಾಜ ಸುಧಾರಣೆಯ, ಇಷ್ಟಲಿಂಗ ಆರಾಧನೆಯ, ಶರಣರ ಸಮಾನತೆಯ ಬದುಕಿನ ಕೇಂದ್ರಗಳಾಗಿದ್ದವು ಎಂಬುದರ ಕುರಿತು ಮನವರಿಕೆಯಾಗುತ್ತದೆ.
ಕಲ್ಯಾಣ ಸೇರಿದಂತೆ ಆ ರಾಜ್ಯದಲ್ಲಿ ವಿವಿಧ ರೀತಿಯ ಶರಣರ ಮಠಗಳು ಇದ್ದವು. ಅವುಗಳಲ್ಲಿ 1,064 ಶೀಲ ಸಂಪನ್ನರ ಮಠಗಳಲ್ಲಿ ವಾಸಿಸುತ್ತಿದ್ದ ಶರಣರು ಉತ್ತಮ ನಡತೆ, ಸತ್ಯ, ವಿನಯ ಮತ್ತು ಸದಾಚಾರವನ್ನು ಜೀವನದ ಆದರ್ಶವನ್ನಾಗಿ ಮಾಡಿಕೊಂಡಿದ್ದರು. ಪ್ರತಿದಿನ 1,000 ಕ್ಕೂ ಹೆಚ್ಚು ಜಂಗಮರಿಗೆ ಅನ್ನ ದಾಸೋಹ ಮತ್ತು ಸೇವೆ ಸಲ್ಲಿಸುತ್ತಿದ್ದ ದಾಸೋಹಿಗಳ ಮಠಗಳು 32,000 ಇದ್ದವು. ಈ ಮಠಗಳಲ್ಲಿ ಜಂಗಮರಿಗೆ ಆಹಾರ, ಆಶ್ರಯ ಮತ್ತು ಅಗತ್ಯ ಸೇವೆಗಳನ್ನು ಪ್ರೀತಿಯಿಂದ ನೀಡಲಾಗುತ್ತಿತ್ತು. ಅದೇ ರೀತಿ, ಸತ್ಯ ಮತ್ತು ಸದಾಚಾರವನ್ನು ಪಾಲಿಸುತ್ತಿದ್ದ ಶರಣರು ಪ್ರತಿದಿನ 500 ಜಂಗಮರಿಗೆ ದಾಸೋಹ ಮಾಡುತ್ತಿದ್ದ ಸತ್ಯ ಸದಾಚಾರಿಗಳ ಮಠಗಳು 58,000. ಇನ್ನೂ 11,000 ಮಠಗಳಲ್ಲಿ ಪ್ರತಿದಿನ 1,500 ಜಂಗಮರಿಗೆ ದಾಸೋಹ ನಡೆಯುತ್ತಿತ್ತು. ಇದರಿಂದ ಕಲ್ಯಾಣ ರಾಜ್ಯದಲ್ಲಿ ದಾಸೋಹವು ಕೇವಲ ಧಾರ್ಮಿಕ ಆಚರಣೆಯಾಗಿರಲಿಲ್ಲ. ಅದು ಒಂದು ಸಂಘಟಿತ ಸಾಮಾಜಿಕ ವ್ಯವಸ್ಥೆಯಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ. ಪ್ರತಿದಿನ ಮಾಟಕೂಟ (ಶರಣರ ಧಾರ್ಮಿಕ ಚರ್ಚೆ, ವಚನ ಸಂವಾದ ಮತ್ತು ತತ್ತ್ವಚಿಂತನೆ) ನಡೆಸುತ್ತಿದ್ದ ಸದ್ಭಕ್ತರ 1,00,000 ಮಠಗಳು ಇದ್ದವು. 2,720 ಮಠಗಳಲ್ಲಿ ಶಿವಭಕ್ತರು ಸೇರಿ ಶರಣ ಧರ್ಮ, ಜೀವನ, ಕಾಯಕ ಮತ್ತು ಶಿವಾನುಭವದ ಕುರಿತು ವಿಚಾರ ವಿನಿಮಯ ನಡೆಸುತ್ತಿದ್ದರು. ಅದೇ ರೀತಿ, ಜಂಗಮರ ಸಾನ್ನಿಧ್ಯದಲ್ಲಿ ಸಮಯಾಚಾರವನ್ನು ಪಾಲಿಸಿಕೊಂಡು ಇಷ್ಟಲಿಂಗ ಆರಾಧನೆ ಮಾಡುತ್ತಿದ್ದ ಜಂಗಮ ಭಕ್ತರ 2,85,720 (ಎರಡು ಲಕ್ಷ ಎಂಬತ್ತೈದು ಸಾವಿರದ ಏಳುನೂರೆಪ್ಪತ್ತು) ರಾಜ್ಯದಲ್ಲಿ ಮಠಗಳು ಸಹ ಇದ್ದವು. ಇಲ್ಲಿ ಶರಣರು ಗುರು-ಲಿಂಗ-ಜಂಗಮ ತತ್ವವನ್ನು ನಿಷ್ಠೆಯಿಂದ ಪಾಲಿಸುತ್ತಿದ್ದರು. ಈ ಎಲ್ಲ ಮಠಗಳಲ್ಲಿ ಅತ್ಯಂತ ಪ್ರಮುಖವಾದವು ರುದ್ರಲೋಕದಿಂದ ಭೂಲೋಕಕ್ಕೆ ಇಳಿದು ಬಂದ ಪ್ರಮಥ ಗಣಗಳ 720 ಮಠಗಳು. ಅಂದರೆ, ಕಲ್ಯಾಣದಲ್ಲಿ ವಾಸಿಸುತ್ತಿದ್ದ ಶರಣರು ಸಾಮಾನ್ಯ ಮನುಷ್ಯರಲ್ಲ, ಶಿವನ ಗಣಗಳೇ ಮಾನವರ ರೂಪದಲ್ಲಿ ಭೂಮಿಗೆ ಬಂದವರು ಎಂಬ ಭಾವ ವ್ಯಕ್ತವಾಗುತ್ತದೆ.
ಬಸವಣ್ಣನವರನ್ನು ಶಿವನ ಪ್ರಮಥ ಗಣಗಳ ಪ್ರಧಾನ ನಾಯಕ ಎಂದು, ಶಿವನ ಅಸಂಖ್ಯಾತ ಗಣಗಳಿಗೆ ನಾಯಕರಾಗಿ, ಭಕ್ತರೊಂದಿಗೆ ಸದಾ ಒಡನಾಟ ಹೊಂದಿದ ಮಹಾಪುರುಷರಾಗಿ ಅವರನ್ನು ಚಿತ್ರಿಸಲಾಗಿದೆ. ಏಕಮುಖ, ದಶಮುಖ, ಶತಮುಖ, ಸಹಸ್ರಮುಖ, ಲಕ್ಷಮುಖ, ಕೋಟಿಮುಖ, ಅನಂತಕೋಟಿ ಮುಖ ಎಂಬ ಪದಗಳು ಬಸವಣ್ಣರು ಅನೇಕ ರೂಪಗಳಲ್ಲಿ ಭಕ್ತರನ್ನು ರಕ್ಷಿಸುವ, ಅವರ ಸಂಕಷ್ಟಗಳಿಗೆ ಸ್ಪಂದಿಸುವ ವಿಶ್ವವ್ಯಾಪಕ ವ್ಯಕ್ತಿತ್ವವನ್ನು ಸೂಚಿಸುವ ಅಲಂಕಾರಗಳಾಗಿವೆ. ನಂತರ ಬಸವಣ್ಣನವರ ಗುಣಗಳನ್ನು ಒಂದೊಂದಾಗಿ ಈ ರೀತಿ ಕೊಂಡಾಡುತ್ತಾರೆ; ಜಗದಾರಾಧ್ಯ – ಜಗತ್ತಿನ ಆರಾಧ್ಯ ಮಹಾತ್ಮ. ಪ್ರಮಥಗುರು – ಶಿವಗಣಗಳಿಗೂ ಗುರುವಾದವರು. ಶರಣ ಸನ್ನಹಿತ – ಶರಣರಿಗೆ ಅತ್ಯಂತ ಹತ್ತಿರದವರು. ಸತ್ಯ ಸಾತ್ವಿಕ – ಸತ್ಯ ಮತ್ತು ಸಾತ್ವಿಕ ಗುಣಗಳ ಮೂರ್ತಿ. ನಿತ್ಯ ನಿಜೈಕ್ಯ – ಸದಾ ಶಿವನೊಂದಿಗೆ ಐಕ್ಯಸ್ಥಿತಿಯಲ್ಲಿರುವವರು. ಷಡುಸ್ಥಲ ಸಂಪನ್ನ-ಷಟ್ಸ್ಥಲ ತತ್ತ್ವವನ್ನು ಸಂಪೂರ್ಣವಾಗಿ ಸಾಧಿಸಿದವರು. ಸರ್ವಾಚಾರ ಸಂಪನ್ನ – ಶಿವಾಚಾರದ ಎಲ್ಲ ನಿಯಮಗಳನ್ನು ಅನುಸರಿಸಿದವರು. ಸರ್ವಾಂಗ ಲಿಂಗಿ – ದೇಹ, ಮನಸ್ಸು, ಆತ್ಮ ಎಲ್ಲವೂ ಶಿವಮಯವಾದವರು. ಸುಜ್ಞಾನ ಭರಿತ – ಪರಿಪೂರ್ಣ ಜ್ಞಾನದಿಂದ ಕೂಡಿದವರು. ನಿತ್ಯಪ್ರಸಾದ – ಸದಾ ಶಿವಕೃಪೆಗೆ ಪಾತ್ರರಾದವರು. ಸಚ್ಚಿದಾನಂದಮೂರ್ತಿ – ಸತ್, ಚಿತ್ ಮತ್ತು ಆನಂದದ ಸ್ವರೂಪ. ಸದ್ಯೋನ್ಮುಕ್ತಿ ರೂಪ – ಜೀವಂತವಾಗಿಯೇ ಮುಕ್ತಿಯನ್ನು ಪಡೆದ ಮಹಾತ್ಮ. ಅಖಂಡ ಪರಿಪೂರ್ಣ – ಪರಿಪೂರ್ಣತೆಯ ಪ್ರತೀಕ. ಅಭೇದ್ಯ ಭೇದಕ – ಅಜ್ಞಾನವನ್ನು ಭೇದಿಸಿ ಸತ್ಯವನ್ನು ಬೋಧಿಸಿದವರು. ಅನಾಮಯ ಮೂರ್ತಿ – ದೋಷÀ ರಹಿತ, ನಿರ್ಮಲ ವ್ಯಕ್ತಿತ್ವ. ಮಹಾಮನೆಯ ಮಾಡಿದಾತ – ಮಹಾಮನೆಯಂತಹ ದಾಸೋಹ ಮತ್ತು ಸಮಾನತೆಯ ವ್ಯವಸ್ಥೆಯನ್ನು ಸ್ಥಾಪಿಸಿದವರು. ರುದ್ರಲೋಕವನ್ನು ಮರ್ತ್ಯಲೋಕಕ್ಕೆ ತಂದಾತ – ಶರಣ ಧರ್ಮದ ಆದರ್ಶ ಸಮಾಜವನ್ನು ಭೂಮಿಯಲ್ಲೇ ನಿರ್ಮಿಸಿದವರು. ಶಿವಾಚಾರದ ಘನತೆಯನ್ನು ಮೆರೆದಾತ – ಶಿವಾಚಾರವನ್ನು ಸಮಾಜದಲ್ಲಿ ಪ್ರತಿಷ್ಠಾಪಿಸಿದವರು.
ಬಸವಣ್ಣನವರ ಅಸಾಧಾರಣ ಭಕ್ತಿ, ಜ್ಞಾನ, ದಾಸೋಹ ಮತ್ತು ಶಿವಾಚಾರವನ್ನು ಕಂಡು ಅಶ್ವಪತಿ, ಗಜಪತಿ, ನರಪತಿ ಹಾಗೂ ರಾಜಾಧಿರಾಜ ಬಿಜ್ಜಳ ಸಹ ಅವರನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದರು. ಬಿಜ್ಜಳ ಮತ್ತು ಬಸವಣ್ಣನವರು ಉಭಯತರು ಕಲ್ಯಾಣದಲ್ಲಿ ಪರಸ್ಪರ ಸಹಕಾರದಿಂದ ರಾಜ್ಯಭಾರ ನಡೆಸುತ್ತಿದ್ದ ಕಾಲದಲ್ಲಿ, ಕಲ್ಯಾಣ ನಗರವು ಧರ್ಮ, ಜ್ಞಾನ, ನ್ಯಾಯ ಮತ್ತು ಸಮೃದ್ಧಿಯಿಂದ ಕಂಗೊಳಿಸಿತ್ತು. ಆದ್ದರಿಂದ “ಕಲ್ಯಾಣ” ಎಂಬ ಪದವೇ ಮಂಗಳ, ಶುಭ ಮತ್ತು ವಿವಾಹದ ಸಂಕೇತವಾಗಿ ಪ್ರಸಿದ್ಧಿಯಾಯಿತು. “ಕಲ್ಯಾಣವೇ ಭೂಲೋಕದ ಕೈಲಾಸ” ಎಂದು ಪವಿತ್ರ ಕಲ್ಯಾಣದ ದರ್ಶನ ಮಾಡಿದರೆ ಸಂಸಾರ ಬಂಧನ ನಿವೃತ್ತಿಯಾಗುತ್ತದೆ. ಅದನ್ನು ನೆನೆದರೆ ಪಾಪಗಳು ಕ್ಷಯಿಸುತ್ತವೆ. ಅದರ ಮಹಿಮೆಯನ್ನು ಕೇಳಿದರೆ ಕರ್ಮ ಬಂಧನ ಕರಗಿ ಮೋಕ್ಷ ಪ್ರಾಪ್ತಿಯಾಗುತ್ತದೆ. ಕೊನೆಯಲ್ಲಿ ಕೂಡಲಚೆನ್ನಸಂಗಮದೇವ “ನಿಮ್ಮ ಭಕ್ತ ಬಸವಣ್ಣರು ವಾಸಿಸಿದ ಈ ಸ್ಥಳ ಮಹಾಕಲ್ಯಾಣವೆಂದು ಅದರ ಮಹಿಮೆಯನ್ನು ನಾನು ದಿವ್ಯ ಶಾಸನವಾಗಿ ಬರೆದು ಪಠಿಸಿದ್ದರಿಂದ ನನ್ನ ಸಂಸಾರ ಬಂಧನವೂ ಮುಕ್ತಿಯಾಯಿತು”, ಎಂದು ಚಿನ್ಮಯ ಜ್ಞಾನಿ ಚನ್ನಬಸವಣ್ಣನವರು ವಿನಮ್ರವಾಗಿ ವಿನಯದಿಂದ ಪ್ರಾರ್ಥಿಸಿದ್ದು ತಿಳಿಯಬಹುದಾಗಿದೆ.
ಆಕರ ಗ್ರಂಥಗಳು:
- ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-846/ವಚನ ಸಂಖ್ಯೆ-1731 | ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.
- ಶಿವಶರಣರ ಸಮುಗ್ರ ವಚನ ಸಂಪುಟ, ತರಳಬಾಳು ಮಠ, ಸಿರಿಗೆರೆ-2022. (ವಚನ ಸಂಖ್ಯೆ: 1729)
- “ಕನ್ನಡ ಶರಣರ ಕಥೆಗಳು”, ಎಂ. ಎಂ. ಕಲಬುರ್ಗಿ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು. 2012,
- ಶೂನ್ಯಸಂಪಾದನೆ| ವಿವಿಧ ಸಂಪುಟಗಳು | ಸಿದ್ಧನಂಜೇಶ| ಕ್ರಿ. ಶ. 1430.
- “ಶಿವಶರಣರ ವಚನಗಳು” | ವಿವಿಧ ಸಂಪುಟಗಳು|ಡಾ. ಫ. ಗು. ಹಳಕಟ್ಟಿ, ಕ್ರಿ. ಶ. 1920–1950.
ಡಾ. ಸತೀಶ ಕೆ. ಇಟಗಿ
ಪತ್ರಿಕೋದ್ಯಮ ಉಪನ್ಯಾಸಕ
ಅಂಚೆ: ಕೋಳೂರ – 586 129
ತಾ: ಮುದ್ದೇಬಿಹಾಳ, ಜಿ: ವಿಜಯಪುರ.
ಮೊ: 92412 86422
ಈ-ಮೇಲ್: satshitagi10@gmail.com
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ (ರಿ) ದ ಸಂಚಾಲಕರನ್ನು ಸಂಪರ್ಕಿಸಬೇಕಾದ:
- ಮೋಬೈಲ್ ನಂ. 9741 357 132
- e-Mail ID: info@vachanamandara.in / admin@vachanamandara.in






Total views : 69171