![]()

ಪ್ರಕೃತಿ ಮತ್ತು ಮನುಷ್ಯರ ನಡುವೆ ಅವಿನಾಭಾವ ಸಂಬಂಧವಿದೆ. ಪ್ರಕೃತಿಯನ್ನು ಅವಲಂಬಿಸಿದ ಮನುಷ್ಯ ಆಹಾರ ನೀರು ಗಾಳಿಯನ್ನು ದೇವರೆಂದೇ ಅರಿತವನಾಗಿದ್ದ. 12 ನೇ ಶತಮಾನದಲ್ಲಿ ಶರಣರು ತಮ್ಮ ವಚನಗಳ ಮೂಲಕ ಪ್ರಕೃತಿಯ ವಿಶಾಲ ಸೂಕ್ಷ್ಮತೆಯನ್ನು ಮನಗಂಡಿದ್ದರು. ಬ್ರಾಹ್ಮಣರಾದ ಬಿಬ್ಬಿ ಬಾಚರಸರು ಮರ ಹೂ ಗಿಡ ಹಣ್ಣು ಕಾಯಿಗಳನ್ನು ತತ್ವದ ಆಧಾರದಲ್ಲಿ ಗ್ರಹಿಸುತ್ತಾರೆ.
ಮರನ ಹೂ ನುಂಗಿ, ಅಡಿಯೊಡಗಿ ಹಣ್ಣಾಯಿತ್ತು.
ಹಣ್ಣು ಎಳಗಾಯಿ ನುಂಗಿ, ಹೂ ಮರನ ಉಗುಳಿತ್ತು.
ಮರ ಮರಣಕ್ಕೆ ತೆರಹಿಲ್ಲ,
ಏಣಾಂಕಧರ ಸೋಮೇಶ್ವರಲಿಂಗವನರಿತಿಹೆನೆಂದು.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-135/ವಚನ ಸಂಖ್ಯೆ-321)
ಶರಣರು ಪ್ರಕೃತಿಯ ಹೊರ ರೂಪಕ್ಕಿಂತ ಅದರೊಳಗಿನ ತತ್ವವೇ ಮುಖ್ಯವೆಂದು ಅದ್ವೈತ ನೆಲೆಯಲ್ಲಿ ಗ್ರಹಿಸಿದ್ದಾರೆ. ಹೀಗಾಗಿ ಪರಿಸರದ ಹುಡುಕಾಟದಲ್ಲಿ ಶಿವತ್ವವನ್ನು ಕಂಡವರಾಗಿದ್ದರು. ಹೂ ಪ್ರಕೃತಿದತ್ತವಾಗಿ ತಾನೆ ಅರಳಬೇಕು. ಅಧ್ಯಾತ್ಮದಲ್ಲಿ ಮರ ಪವಿತ್ರ ಮತ್ತು ಜ್ಞಾನವನ್ನು ನೀಡುವ ಶಕ್ತಿಯನ್ನು ಹೊಂದಿದೆ. ಪ್ರಸಾದ ತತ್ವಕ್ಕೆ ನಿಷ್ಠರಾದ ಬಿಬ್ಬಿ ಬಾಚಯ್ಯನವರು ಪ್ರಸಾದದ ಮೇರು ಮಟ್ಟವನ್ನು ಅರಿಯಲು ಅನುಭಾವದ ನೆಲೆಯಲ್ಲಿ ಸ್ವೀಕರಿಸಲು ಮೂರು ಮಾರ್ಗಗಳನ್ನುಆಯ್ಕೆ ಮಾಡಿಕೊಳ್ಳುತ್ತಾರೆ. ಒಂದು ಕಾಯದ ಮೂಲಕ ಇನ್ನೊಂದು ಪ್ರಕೃತಿಯ ಮೂಲಕ ಮತ್ತೊಂದು ಸ್ವಾನುಭಾವದ ಮೂಲಕವಾಗಿರುತ್ತದೆ.
ಶರಣರು ಮರ ಗಿಡ ಬಳ್ಳಿಗಳ ಮೇಲೆ ಕರುಳ ಬಳ್ಳಿಯ ಸಂಬಂಧವನ್ನು ಇಟ್ಟುಕೊಂಡವರಾಗಿದ್ದರು. ಅಧ್ಯಾತ್ಮದಲ್ಲಿ ಪ್ರಕೃತಿಯ ಸತ್ವ ರಜ ತಮ ಗುಣಗಳನ್ನು ಒಳಗೊಂಡಿರುತ್ತದೆ. ನಿಸರ್ಗದ ಸೃಜನ ಸೃಷ್ಟಿಯನ್ನು ಗ್ರಹಿಸಿದ ಶರಣರು ಮರ ಹೂವು ಹಣ್ಣು ಕಾಯಿಗಳಲ್ಲಿ ದೈವತ್ವವನ್ನು ಕಂಡಂತಹ ಶರಣರು ಮರದ ಗಟ್ಟಿಯಾದ ಬೇರುಗಳ ಕಡೆಗೆ ಅವರ ಗಮನವಿರುತ್ತದೆ. ಏಕೆಂದರೆ ಫಲ ನೀಡುವ ಮರದ ಆರೋಗ್ಯವನ್ನು ಅರಿಯಲು ಅಡಿಯಲ್ಲಿ ಬಿದ್ದ ಹೂವಿನ ತರಗಲೆಯ ಹಾಸಿಗೆಯನ್ನು ಅದರ ಅಡಿಯಲ್ಲಿ ಬಿದ್ದ ಕ್ರಿಮಿ ಕೀಟಗಳನ್ನುಅಧ್ಯಾತ್ಮದ ಮೂಲಕ ನೋಡಬಲ್ಲರು.
ಈ ಕ್ರಿಮಿ ಕೀಟಗಳು ಅಹಂ ದುರಾಸೆ ಕೋಪ ಸುಳ್ಳು ಇವೆಲ್ಲವೂ ಮನದ ತರಗಲೆಯಲ್ಲಿ ವಾಸವಾದ ಮನುಷ್ಯನ ಸ್ವಭಾವಗಳಾಗಿದ್ದವು. ಬಿಬ್ಬಿ ಬಾಚರಸರು ಮನದ ಹೂವನ್ನುವಿಶಿಷ್ಟ ಅರ್ಥದಲ್ಲಿಸೆಳೆಯಬಲ್ಲರು. ಸ್ವಾನು ಭಾವವಾದ ಮನದ ಹೂವು ಪ್ರಾಣ ಲಿಂಗದ ಅನುಭೂತಿಯನ್ನು ಪಡೆದುಕೊಂಡಿರುತ್ತದೆ. ಪ್ರಕೃತಿಯ ಮೂಲಕ ನಮ್ಮದಾಗಿಸಿಕೊಳ್ಳಬೇಕಾದರೆ ಅಂತರಂಗದ ಅರಿವಿನ ತತ್ವವನ್ನು ಅರಿತುಕೊಳ್ಳಬೇಕು. ಮರ ಹೂವನ್ನು ಪ್ರತ್ಯೇಕವಾಗಿ ನೋಡುವುದಿಲ್ಲ. ಅದರ ಸದ್ವಾಸನೆಯನ್ನು ಗ್ರಹಿಸುವ ಅಧ್ಯಾತ್ಮದ ಸತ್ಯ ಪ್ರಧಾನ ಪಾತ್ರ ವಹಿಸುತ್ತದೆ. “ಆಡಿಯೊಳಡಗಿದ” ಈ ಅನುಭಾವವು ಪರಶಿವನನ್ನು ಕಂಡಾಗ ಆಗುವ ಮನದ ಪರಿವರ್ತನೆಯನ್ನು ಸೂಚಿಸುತ್ತದೆ. ಮನದ ಪರಿಶುಭ್ರತೆಯನ್ನು ದೈವಶಕ್ತಿಯ ಮೂಲಕ ಬಲಪಡಿಸಲು ಸ್ವಾನುಭಾವ ಸದ್ವಾಸನೆಯ ಶಕ್ತಿ ಸದಾ ಕ್ರಿಯಾಶೀಲವಾಗಿರಬೇಕು. ಶರಣರ ಮನಸ್ಸು ಹಣ್ಣಾಗಬೇಕು. ಪ್ರಕೃತಿ ತತ್ವದ ಈ ಕಾಯ ಫಲ ನೀಡುವ ಹಣ್ಣಾಗಿದೆ. ಈ ಕಾಯ ರೂಪದ ಪ್ರಸಾದವನ್ನು ಪ್ರಕೃತಿಗೆ ಅರ್ಪಿಸಬೇಕು. ಮಣ್ಣಲ್ಲಿ ಮಣ್ಣಾಗಿ ಹೋಗುವ ಈ ಕಾಯ ಮತ್ತೆ ಪ್ರಕೃತಿಯ ಮೂಲಕ ಹುಟ್ಟುತ್ತದೆ. ಅದೇ ಗಿಡವಾಗಿ ಮರವಾಗಿ ಅಧ್ಯಾತ್ಮದ ನೆರಳಾಗಿ ವಿಶಾಲವಾಗುತ್ತದೆ. ಅಧ್ಯಾತ್ಮದ ವ್ಯಕ್ತಿತ್ವವು ಮನದ ಕೊಳೆಯನ್ನು ತೆಗೆಯಲು ಹೂವು ಕಾಯಿ ಹಣ್ಣು ರೂಪಕಗಳಾಗಿವೆ. ಕಾಯಿ ಸಾಧನೆಯ ಫಲವಾಗಿ ಪ್ರಾಣ ಲಿಂಗ ಪೂಜೆಗೆ ನೈವೇದ್ಯಕ್ಕಾಗಿ ಅರ್ಪಿಸುವ ಹಂತವಿದು.
“ಮರ ಮರಣಕ್ಕೆ ತೆರಹಿಲ್ಲ” ವೃಕ್ಷ ಸ್ವರೂಪರಾದ ಶರಣರು ಮರವಾಗಿ ಸಮಾಜಕ್ಕೆ ನೆರಳಾಗುವರು. ಸುಜ್ಞಾನವೆಂಬ ಮರವನ್ನು ರಕ್ಷಿಸಿಕೊಳ್ಳಬೇಕಾದದ್ದು ನಮ್ಮ ನಮ್ಮ ಕರ್ತವ್ಯವಾಗಿದೆ. ಶರಣರ ಮಾನಸಿಕ ಪಯಣ ಆತ್ಮಜ್ಞಾನವಾಗಿ ಸಮಾಜಕ್ಕೆ ಪರಿಚಯಿಸುತ್ತದೆ.
ಹೀಗಾಗಿ ಶರಣರು ಮರಣದ ನಂತರವೂ ಕೂಡ ಜೀವಂತವಾಗಿದ್ದಾರೆ ಎಂದರೆ ಅವರ ವಚನಗಳು ಹಿರಿದಾದ ಅನುಭಾವದ ವ್ಯಾಪ್ತಿಯ ಸಾಗರವದು. ಇದನ್ನೇ ಶರಣರು ಹೇಳಿದ್ದು. ಶರಣರ ಬದುಕು ಮರಣದಲ್ಲಿ ನೋಡು ಎಂದು. ಶರಣರ ನಿಸ್ವಾರ್ಥ ಬದುಕು ಸರಳ ಜೀವನ ಅಂತಿಮ ಯಾತ್ರೆಯಲ್ಲಿ ಕಾಣಲು ಸಾಧ್ಯ. ಮರಣದಲ್ಲಿ ಕಾಣುವ ಗೌರವ ಪ್ರೀತಿ ಸದಾ ಶಾಶ್ವತವಾಗಿರುತ್ತದೆ. ಹೀಗಾಗಿ ಹೂವು ಅರಳುವ ಮೊದಲು ಮೊಗ್ಗಾಗಿ ನಂತರ ಅರಳುವುದು. ಶರಣತ್ವದ ಸಾಧನೆಯ ಹಾಗೆ ಪ್ರಕೃತಿದತ್ತವಾಗಿ ಬರುವುದಿಲ್ಲ. ಐಕ್ಯಸ್ಥಲದವರೆಗೆ ಹಣ್ಣಾಗುವ ಮಾಗುವ ವಿಕಾಸದ ಪಯಣವಾಗುತ್ತದೆ.
ಡಾ. ಸರ್ವಮಂಗಳ ಸಕ್ರಿ.
ಅಧ್ಯಕ್ಷರು. ಜಾಗತಿಕ ಲಿಂಗಾಯತ ಮಹಾ ಸಭಾ
ಮಹಿಳಾ ಘಟಕ-ರಾಯಚೂರು ಜಿಲ್ಲೆ
ರಾಯಚೂರು.
ಮೋಬೈಲ್ ಸಂ. 94499 46839.
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ (ರಿ) ದ ಸಂಚಾಲಕರನ್ನು ಸಂಪರ್ಕಿಸಬೇಕಾದ:
- ಮೋಬೈಲ್ ನಂ. 97413 57132
- e-Mail ID: info@vachanamandara.in and admin@vachanamandara.in




Total views : 71572