![]()

ತನು ಕರಗದವರಲ್ಲಿ
ಮಜ್ಜನವನೊಲ್ಲೆಯಯ್ಯಾ ನೀನು.
ಮನ ಕರಗದವರಲ್ಲಿ
ಪುಷ್ಪವನೊಲ್ಲೆಯಯ್ಯಾ ನೀನು.
ಹದುಳಿಗರಲ್ಲದವರಲ್ಲಿ
ಗಂಧಾಕ್ಷತೆಯನೊಲ್ಲೆಯಯ್ಯಾ ನೀನು.
ಅರಿವು ಕಣ್ದೆರೆಯದವರಲ್ಲಿ
ಆರತಿಯನೊಲ್ಲೆಯಯ್ಯಾ ನೀನು.
ಭಾವಶುದ್ಧವಿಲ್ಲದವರಲ್ಲಿ
ಧೂಪವನೊಲ್ಲೆಯಯ್ಯಾ ನೀನು.
ಪರಿಣಾಮಿಗಳಲ್ಲದವರಲ್ಲಿ
ನೈವೇದ್ಯವನೊಲ್ಲೆಯಯ್ಯಾ ನೀನು.
ತ್ರಿಕರಣ ಶುದ್ಧವಿಲ್ಲದವರಲ್ಲಿ
ತಾಂಬೂಲವನೊಲ್ಲೆಯುಯ್ಯಾ ನೀನು.
ಹೃದಯ ಕಮಲ ಅರಳದವರಲ್ಲಿ
ಇರಲೊಲ್ಲೆಯಯ್ಯಾ ನೀನು.
ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ
ಹೇಳಾ ಚೆನ್ನಮಲ್ಲಿಕಾರ್ಜುನಯ್ಯಾ?
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-76/ವಚನ ಸಂಖ್ಯೆ-211)
ವೈರಾಗ್ಯನಿಧಿ ಅಕ್ಕಮಹಾದೇವಿಯವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಪರೂಪದ ಮಹಿಳಾ ವಚನಕಾರ್ತಿ ಎಂದೇ ಗುರುತಿಸಿ ಗೌರವಿಸುತ್ತೇವೆ. ಇಂತಹ ಉಜ್ವಲ ಮತ್ತು ಅಪರೂಪದ ವ್ಯಕ್ತಿತ್ವ ಉಳ್ಳ ಕನ್ನಡದ ಶ್ರೇಷ್ಠ ಕವಿಯತ್ರಿ. ಶಿವಮೊಗ್ಗ ಜಿಲ್ಲೆಯ ಉಡುತಡಿ ಎಂಬ ಗ್ರಾಮದ, ನಿರ್ಮಲ ಶೆಟ್ಟಿ ಮತ್ತು ಸುಮತಿ ದಂಪತಿಗಳ ಮಗಳು. ತಮ್ಮ ಆದರ್ಶಕ್ಕಾಗಿ ಸಾಮಾಜಿಕ ವ್ಯವಸ್ಥೆ ಮತ್ತು ರಾಜಪ್ರಭುತ್ವವನ್ನೇ ಧಿಕ್ಕರಿಸಿ ನಿಂತವರು. ಪುರುಷ ಪ್ರಧಾನ ಸಮಾಜದಲ್ಲಿ ಸ್ತ್ರೀಯರಿಗೆ ಸಮಾನತೆ ಇರದ ಕಾಲದಲ್ಲಿ ಸಮಾನತೆಯನ್ನು ಕೊಟ್ಟವರು ವೈರಾಗ್ಯನಿಧಿ ಅಕ್ಕಮಹಾದೇವಿಯವರು. ಶರಣ ಚಳುವಳಿಯ ಸ್ತ್ರೀ ಸ್ವಾಭಿಮಾನದ ದೈವಿಕ ಶಕ್ತಿ.. ಲೌಕಿಕ ಬದುಕನ್ನು ನಿರಾಕರಿಸಿ ಶಿವಸ್ವರೂಪಿ ಚೆನ್ನಮ್ಮಲ್ಲಿಕಾರ್ಜನನ್ನು ಪತಿಯಾಗಿ ಸ್ವೀಕರಿಸಿ ಸ್ತ್ರೀ ಸಾಧಕಿಯರಿಗೆ ಮಾದರಿಯಾಗಿದ್ದವರು.
ಪ್ರಸ್ತುತ ಈ ವಚನ ವೈರಾಗ್ಯನಿಧಿ ಅಕ್ಕಮಹಾದೇವಿಯವರ ಅತ್ಯಂತ ಜನಪ್ರಿಯ ವಚನಗಳಲ್ಲಿ ಒಂದು. ಶಿವನಿಗೆ ನಮ್ಮನ್ನು ಸಮರ್ಪಿಸಿಕೊಳ್ಳ ಬೇಕಾದರೆ, ತನು ಮತ್ತು ಮನವನ್ನು ದಂಡಿಸಬೇಕು. ವೈರಾಗ್ಯನಿಧಿ ಅಕ್ಕಮಹಾದೇವಿಯವರಿಗೆ ಶಿವನ ಜತೆಗೆ ಉಂಟಾಗುವ ದೈವಿ ಸಂಕಲ್ಪದ ಭಾವವಿದು. ಇದು ಆಧ್ಯಾತ್ಮದಲ್ಲಿ ಸ್ಥಾಯಿ ಭಾವವೆಂದು ಗುರುತಿಸಿಕೊಳ್ಳುತ್ತದೆ. ಭಕ್ತಿಯ ಕಂಪನದಲ್ಲಿ ದೇಹ ಭಾಗ ಬೇಕು. ಮನ ಶಿವನಿಗೆ ಶರಣಾಗಬೇಕು. ವೈರಾಗ್ಯನಿಧಿ ಅಕ್ಕಮಹಾದೇವಿಯವರು ಚೆನ್ನಮಲ್ಲಿಕಾರ್ಜುನನ್ನು ಸ್ತುತಿಸುತ್ತಾ ಆತ್ಮೀಯತೆಯ ಮೂಲಕ ಉತ್ತರ ಕೊಡುವುದಾಗಿದೆ. ಲೌಕಿಕ ಭಕ್ತಿಯ ತೀವ್ರತೆಯಲ್ಲಿ ಕರಸ್ಥಲದ ಲಿಂಗಕ್ಕೆ ಮಜ್ಜನ ಮಾಡಿಸುವ ಉತ್ಸುಕತೆ. ಆತ್ಮಲಿಂಗ ಪೂಜೆಗೆ ಮಜ್ಜನವ ಮಾಡಲು ಸಾಧ್ಯವಾಗದು. ಅಷ್ಟವಿದಾರ್ಚನೆ ಮಾಡುವ ಹಂಬಲದಲ್ಲಿ ಪ್ರೀತಿಯೇ ಅವರಿಗೆ ದೇವರಾಗಿದೆ. ದೇವರ ಮುಡಿಗೆ ಸೇರುವ ಪುಷ್ಪವೂ ಸಾರ್ಥಕವಾಗಬೇಕೆಂಬ ಹಂಬಲ ವೈರಾಗ್ಯನಿಧಿ ಅಕ್ಕಮಹಾದೇವಿಯವರದು.
ಅಷ್ಟವಿಧಾರ್ಚನೆ ಸಾಧಕರಲ್ಲಿ ಕಂಡುಬರುವ ಮಹಾಸುಖದ ಕೊನೆಯ ಸಂತೋಷವದು. ಅಷ್ಟವಿದಾರ್ಚನೆ ಎಂಟು ಆವರಣಗಳಿಂದ ಮಾಡುವ ಪೂಜೆಯಾಗಿದೆ. ಜಲ, ಗಂಧ, ಅಕ್ಷತೆ, ಪುಷ್ಪ, ಧೂಪ, ದೀಪ, ನೈವೇದ್ಯ, ತಾಂಬೂಲಗಳಾಗಿವೆ. ಚೆನ್ನಮಲ್ಲಿಕಾರ್ಜುನನ್ನು ಒಲಿಸಿಕೊಳ್ಳಲು ಭಕ್ತಿ ಮತ್ತು ವೈರಾಗ್ಯದ ತಾದಾತ್ಮಕ ಹಂತದಲ್ಲಿ ಮನವೆಂಬ ಪುಷ್ಪದಿಂದ ಅರ್ಚಿಸಬೇಕೆಂಬ ಧಾವಂತ ಅವರದು. ಇಂದ್ರಿಯ ನಿಗ್ರಹ ಎರಡನೇ ಪುಷ್ಪ. ಸಕಲ ಪ್ರಾಣಿಗಳ ಮೇಲೆ ದಯೆ ಕರುಣೆ ಮೂರನೇ ಪುಷ್ಪ, ಕ್ಷಮಾಗುಣವೆ ನಾಲ್ಕನೇ ಪುಷ್ಪ. ಶಾಂತಿ ಐದನೇ ಪುಷ್ಪ, ತಪಸ್ಸು ಆರನೇ ಪುಷ್ಪ, ಧ್ಯಾನ ಏಳನೇ ಪುಷ್ಪ. ಸತ್ಯವನ್ನು ನುಡಿಯುವದೇ ಎಂಟನೇ ಪುಷ್ಪ,ವಾಗಿದೆ. ಹೀಗಾಗಿ “ಹದುಳಿಗರಲ್ಲದವರಲ್ಲಿ ಪುಷ್ಪವನು ಒಲ್ಲೆಯುಯ್ಯಾ ನೀನು”
ಹದುಳ ಮತ್ತು ಗಂಧಾಕ್ಷತೆ ಬಗ್ಗೆ ಉಲ್ಲೇಖವನ್ನು ವೈರಾಗ್ಯನಿಧಿ ಅಕ್ಕಮಹಾದೇವಿಯವರು ಮಾಡುತ್ತಾರೆ. ಗಂಧಾಕ್ಷತೆ ಶಿವನ ಕಾಯವೇ ಆಗಿದೆ. ಹದುಳ ಸ್ವಾಗತ ಆಹ್ವಾನವನ್ನು ಸೂಚಿಸುವ ಪದವಿದಾಗಿದೆ (ಹದುಳ ಎಂಬ ಪದ ಕ್ಷೇಮ ಮತ್ತು ಸೌಖ್ಯ ಎನ್ನುವ ಅರ್ಥವೂ ಇದೆ.) ಬಸವಣ್ಣನವರ “ಏನು ಬಂದಿರಿ ಹದುಳವಿದ್ದೀರಿ ಎಂದರೆ ನಿಮ್ಮ ಐಸಿರಿ ಹಾರಿ ಹೋಹುದೇ?” ಈ ವಚನವನ್ನು ಹದುಳಿಗಲ್ಲದವರಲ್ಲಿ ಗಂದಾಕ್ಷತೆಯನು ಓಲ್ಲೆಯಯ್ಯ ನೀನು ಈ ಸಾಲುಗಳಿಗೆ ಹೋಲಿಸಬಹುದು. ಇದೊಂದು ತೆರನಾಗಿ ಮಾನಸಿಕ ಉನ್ಮತ್ತತೆಯ ಭಕ್ತಿಯಾಗಿದೆ. ಅಷ್ಟ ವಿದಾರ್ಚನೆ ವಚನ ಭಾಷೆಯನ್ನು ಸುಂದರಗೊಳಿಸುವ ಕಾವ್ಯತ್ಮಕ ಭಾವ ತೀವ್ರತೆಯೂ ಇದರಲ್ಲಡಗಿದೆ.
ಆಧುನಿಕರಿಗೆ ಇದೊಂದು ಭಾವಗೀತೆಯಂತೆ ಸ್ಪಷ್ಟವಾಗುತ್ತದೆ. ಗೇಯತೆ ಇದರ ಲಕ್ಷಣ. ಮಾತು ಮಾತು ಮಥಿಸಿದಾಗ ಭಾವವೇ ತತ್ವವಾಗುತ್ತದೆ. ಇಲ್ಲಿ ಕಾವ್ಯಾಂಶಕ್ಕೆ ಅಗ್ರಸ್ಥಾನ. ಭಾವನೆ ಮತ್ತು ಕಲ್ಪನೆಯಲ್ಲಿ ನಿರೂಪಿಸುವ ದೃಷ್ಟಿಕೋನ ವಿಶೇಷವಾಗಿ ಗಮನ ಸೆಳೆಯುತ್ತದೆ. ಈ ವಚನಕ್ಕಿರುವ ಸಂಗೀತದ ಮಾಧುರ್ಯ ಸಾಹಿತ್ಯಕವಾದ ಸೌಂದರ್ಯ ಮುಕ್ತತೆಯನ್ನು ಬಯಸುತ್ತದೆ. ಇನ್ನೊಬ್ಬರ ಸ್ನೇಹ ಸೌಖ್ಯವನ್ನು ಬಯಸದವರಿಂದ (ಹದುಳಿಗರಲ್ಲದವರಲ್ಲಿ) ಗಂಧಾಕ್ಷತೆಯನು ಒಲ್ಲೆಯುಯ್ಯಾ ನೀನು, ಮನದಾಳದಲ್ಲಿ ಚೆನ್ನಮಲ್ಲಿಕಾರ್ಜುನನನ್ನು ಒಲಿಸಿಕೊಳ್ಳುವ ಪ್ರಶ್ನಿಸುವ ತನ್ಮಯತೆಯಲ್ಲಿ ಲೀನವಾಗುವ ಆರಾಧನೆಯಾಗಿದೆ.
“ಅರಿವು ಕಣ್ದೆರೆಯದವರಲ್ಲಿ ಆರತಿ ಒಲ್ಲೆಯಯ್ಯ ನೀನು” ಅರಿವು ಜ್ಞಾನಕ್ಕೆ ಪರ್ಯಾಯ ಪದವಾಗಿದೆ. ಪ್ರಜ್ಞೆ ಎಂಬ ಪದವು ಅರಿವಿನ ಆವರಣಕ್ಕೆ ಸಮವಾದ ಪದ. ಅರಿವಿನ ಬೆಳಕಿನಲ್ಲಿ ಚೆನ್ನಮಲ್ಲಿಕಾರ್ಜುನನನ್ನು ಕಂಡಾಗ ಸತಿ–ಪತಿ ಭಾವದ ಮೂಲಕ ದೈವತ್ವವನ್ನು ಪಡೆದುಕೊಂಡವರು ವೈರಾಗ್ಯನಿಧಿ ಅಕ್ಕಮಹಾದೇವಿಯವರು. ಈ ವಚನ ಸರಳವೆನಿಸಿದರೂ ಕೂಡ ವಿಭಿನ್ನ ಆಯಾಮವನ್ನು ನಮ್ಮ ಮುಂದೆ ವ್ಯಾಖ್ಯಾನಿಸುತ್ತದೆ.
ಅಷ್ಟವಿದಾರ್ಚನೆಯ ಬಗ್ಗೆ ಚರ್ಚೆ ಇದ್ದರೂ ಶರಣರಿಗೆ ಪೂಜಾ ಪರಿಕರಗಳ ಬಗ್ಗೆ ನಿರಾಕಾರ ಮತ್ತು ಸಂದೇಹ. ಆದರೂ ಅಷ್ಟವಿದಾರ್ಚನೆ ಶೋಡಷೋಪಚಾರಗಳಿಂದ ಅನುಭಾವ ಗೀತೆಗಳನ್ನು ಹಾಡಿ ದೇವರನ್ನು ಒಲಿಸಿಕೊಂಡರು. ಶರಣರ ಈ ವಿಧಾನಕ್ಕೆ ಶರಣ ಸತಿ ಲಿಂಗಪತಿ ಎಂದು ಗುರುತಿಸಿಕೊಂಡಿದೆ. ಅರ್ಚನೆ ದೂಪ, ದೀಪ, ತಾಂಬೂಲಗಳು ಶರಣರ ಸಾಂಪ್ರದಾಯಿಕ ಆಚರಣೆಯಲ್ಲಿ ಮನದಾಳದ ಭಕ್ತಿ ಶ್ರದ್ಧೆಯನ್ನು ಪ್ರತಿಸ್ಪಂದಿಸಲು ಅವಕಾಶ ಮಾಡಿಕೊಡುತ್ತದೆ.
“ಹೃದಯ ಕಮಲ ಅರಳದವರಲ್ಲಿ ಇರಲೊಲ್ಲೆಯಯ್ಯಾ ನೀನು” ಎಂಬ ಧನ್ಯತೆ ವೈರಾಗ್ಯನಿಧಿ ಅಕ್ಕಮಹಾದೇವಿಯವರಲ್ಲಿದೆ. ಹೃದಯ ಕಮಲವು ಶಿವನ ವಾಸಸ್ಥಾನ. ಒಂಬತ್ತು ದಳದ ಈ ಹೃದಯ ಶಿವಬೀಜ ಮಂತ್ರವನ್ನು ಪ್ರತಿನಿಧಿಸುತ್ತದೆ. “ಒಂ” ಎಂಬ ಪ್ರಣವವು ಉಚ್ಛಾರಣೆಯಲ್ಲಿ ದೇಹ ಮತ್ತು ಮನ ಚೈತನ್ಯ ಪಡೆದುಕೊಳ್ಳುತ್ತದೆ. ಡಾಂಬಿಕ ಭಕ್ತರಲ್ಲಿ ಭಕ್ತಿಯ ತೀವ್ರತೆಯನ್ನು ಕಾಣಲು ಸಾಧ್ಯವಿಲ್ಲ. ಆಸ್ತಿಕ ಮತ್ತು ನಾಸ್ತಿಕತೆಯಲ್ಲಿ ಭಕ್ತಿಗೆ ಶರಣ ಧರ್ಮ ಅಲ್ಪವಾದರೂ ಸ್ಪಂದಿಸಲೇಬೇಕಾಗಿತ್ತು. ಹೀಗಾಗಿ ವೈರಾಗ್ಯನಿಧಿ ಅಕ್ಕಮಹಾದೇವಿಯವರ ಈ ವಚನದ ವರ್ಣನೆಯನ್ನು ಆಳವಾಗಿ ಓದಲು ಒತ್ತಾಯಿಸುತ್ತದೆ.
ಲಿಂಗ ಪೂಜೆ ಶರಣರಲ್ಲಿ ಪ್ರಮುಖವಾಗಿ ಮನನ ಧ್ಯಾನ ನಿರೀಕ್ಷೆಗಳನ್ನು ಒಳಗೊಂಡಿರುತ್ತದೆ. ಇಲ್ಲಿ ಆಡಂಬರಕ್ಕೆ ಅವಕಾಶವಿಲ್ಲ. ಬಸವಣ್ಣನವರು ತಮ್ಮ ಒಂದು ವಚನದಲ್ಲಿ ಹೇಳುತ್ತಾರೆ:
ಅಷ್ಟವಿಧಾರ್ಚನೆ ಷೋಡಶೋಪಚಾರವ
ಮಾಡುವ ಹಮ್ಮಿನಲ್ಲಿ ಬೆಂದೆನಯ್ಯಾ.
ಲಿಂಗವೆಂದರಿಯದೆ, ಜಂಗಮವೆಂದರಿಯದೆ,
ಪ್ರಸಾದವೆಂದರಿಯದೆ ಆನು ಬೆಂದೆನಯ್ಯಾ.
ಕೂಡಲಸಂಗಮದೇವಾ,
ಅನು ಮಾಡುವುದೆಲ್ಲವೂ ಉಪಚಾರವಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-100/ವಚನ ಸಂಖ್ಯೆ-385)
ಶರಣ ಸಂಪ್ರದಾಯದಲ್ಲಿ ಅಷ್ಟವಿಧಾರ್ಚನೆಗೆ ಅವಕಾಶವಿಲ್ಲ. “ಷೋಡಶೋಪಚಾರ ಮಾಡುವ ಹಮ್ಮಿನಲ್ಲಿ ಬೆಂದೆನಯ್ಯಾ” ಎಂದು ಹೇಳುವಲ್ಲಿ ಲಿಂಗ ಜಂಗಮ ಪ್ರಸಾದಗಳು ಶರಣರ ಮೌಲ್ಯ ಪ್ರಜ್ಞೆಯದು. ಲಿಂಗಕ್ಕೆ ಅರ್ಪಿಸಿದ್ದೆಲ್ಲಾ ಪ್ರಸಾದ ಲಿಂಗದ ಮೊನೆಯಲ್ಲಿ ಶರಣ ಚೈತನ್ಯದ ಬೆಳಗು ಅಡಗಿರುತ್ತದೆ. ಹೀಗಾಗಿ ಜಂಗಮ ಜಾತಿಯಲ್ಲ ಕುಲವಲ್ಲ ಜಂಗಮಕ್ಕೆರೆದರೆ ಸ್ಥಾವರ ನೆನೆಯಿತ್ತು. ಶರಣರ ಸಂದೇಹದ ಈ ಮಾತುಗಳು ಆಸಕ್ತಿ ಮತ್ತು ನಿರಾಸಕ್ತಿಯ ತರ್ಕಗಳು ಅಧ್ಯಾತ್ಮದ ಶಕ್ತಿಯನ್ನು ಹೆಚ್ಚಿಸುತ್ತದೆ. ವಚನ ಮೀಮಾಂಸೆ ಸದಾ ಅಂತರಂಗದ ಹೊಳಹನ್ನು ನೀಡುತ್ತಲೇ ಇರುತ್ತದೆ.
ಡಾ. ಸರ್ವಮಂಗಳ ಸಕ್ರಿ.
ಲೇಖಕರು,
ಜಿಲ್ಲಾಧ್ಯಕ್ಷರು-ಜಾಗತಿಕ ಲಿಂಗಾಯಿತ ಮಹಾಸಭಾ, ಮಹಿಳಾ ಘಟಕ,
ರಾಯಚೂರು.
ಮೋಬೈಲ್ ಸಂ. 94499 46839
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ ಸಂಚಾಲಕರನ್ನು ಸಂಪರ್ಕಿಸಬೇಕಾದ:
- ಮೋಬೈಲ್ ನಂ. 9741 357 132
- e-Mail ID: info@vachanamandara.in / admin@vachanamandara.in





Total views : 72760