
ಚನ್ನಮ್ಮನ ಕಿತ್ತೂರು ತಾಲೂಕಿನ ತಿಗಡೊಳ್ಳಿ ಗ್ರಾಮದ ಗಾಂಧೀ ಮಡ್ಡಿಯಲ್ಲಿ ಬೃಹಾದಾಕಾರದಲ್ಲಿ ಬೆಳೆದು ನಿಂತ ಗಾಂಧೀ ಗಿಡ (ಆಲದ ಮರ).

ದಾರವಾಡ ಮತ್ತು ಬೆಳಗಾವಿ ನಗರಗಳ ಮಧ್ಯ ಮಲೆನಾಡಿನ ಅಂಚಿನಲ್ಲಿ ಪೂಣೆ-ಬೆಂಗಳೂರು ರಾಷ್ಟೀಯ ಹೆದ್ದಾರಿ-4 ರಿಂದ ಸುಮಾರು 7 ಕಿ.ಮೀ ದೂರದಲ್ಲಿ ತಿಗಡೊಳ್ಳಿ ಎಂಬ ಗ್ರಾಮ ಇದೆ. ಈ ಗ್ರಾಮ ಸ್ವಾತಂತ್ರ್ಯ ಪೂರ್ವದಿಂದಲೂ ಮಹೋನ್ನತ ಇತಿಹಾಸ ಹೊಂದಿದೆ. ಸ್ವಾತಂತ್ರ ಹೋರಾಟ, ಆರ್ಥಿಕವಾಗಿ, ಸಾಹಿತ್ಯಿಕವಾಗಿ, ರಾಜಕೀಯವಾಗಿ ವೈಭವದಿಂದ ಮೆರೆದ ಗ್ರಾಮ. ತಿಗಡೊಳ್ಳಿ ಗ್ರಾಮವು ಸ್ವಾತಂತ್ರ ಹೋರಾಟದಲ್ಲಿ ತನ್ನದೆ ಆದ ಛಾಪು ಮೂಡಿಸಿ 1942 ರ ಚಲೇಜಾವ್ ಚಳುವಳಿಯ ಕಾಲದಲ್ಲಿ ಮಹತ್ವದ ಪಾತ್ರ ವಹಿಸಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿತ್ತು. ಶ್ರೀ. ಶಿವಪ್ಪ ಮಲಶೆಟ್ಟಿ ಎಂಬ ದೈತ್ಯ ಸ್ವಾತಂತ್ರ ಹೋರಾಟಗಾರನ ನೇತೃತ್ವದಲ್ಲಿ ಸುಮಾರು 30 ಜನ ಹೋರಾಟಗಾರರ ದಂಡು ಬ್ರಿಟಿಷರ ನಿದ್ದೆ ಕೆಡಿಸಿತ್ತು. ಸ್ವಾತಂತ್ರಕ್ಕಾಗಿ ಯಾವ ಕೆಲಸಕ್ಕೂ ಹಿಂದೆ ಮುಂದೆ ನೋಡದೆ ಭಾಗಿಯಾಗಿ ಅವರಲ್ಲಿ ಅನೇಕರು ಜೈಲುವಾಸ ಅನುಭವಿಸಿದರೆ ಇನ್ನೂ ಕೆಲವರು ವೀರ ಮರಣ ಹೊಂದಿದರು.
ಸ್ವಾತಂತ್ರಾನಂತರ 1948 ರಲ್ಲಿ ಶಾಂತಿಯ ಪ್ರತಿಪಾದಕರು ಸ್ವಾತಂತ್ರ ಹೋರಾಟದ ಮುಂದಾಳತ್ವ ವಹಿಸಿದ್ದ ರಾಷ್ಟಪಿತ ಮಹಾತ್ಮಾ ಗಾಂಧೀಜಿ ಅವರ ಹತ್ಯೆಯಾಯಿತು. ದೇಶದಾದ್ಯಂತ ಅವರ ಚಿತಾಭಸ್ಮವನ್ನು ಹೊತ್ತು ಯಾತ್ರೆ ಪ್ರಾರಂಭವಾಗಿತ್ತು. ಅವರ ಚಿತಾಭಸ್ಮವನ್ನು ಬೆಳಗಾವಿ ಕಾಂಗ್ರೆಸ್ ಕಚೇರಿಗೆ ಕಳುಹಿಸಲಾಗಿತ್ತು. ಅದನ್ನು ತಿಗಡೊಳ್ಳಿ ಗ್ರಾಮದ ಕೆಲ ಹೋರಾಟಗಾರರು ಹೋಗಿ ಅದರಲ್ಲಿರುವ ಸ್ವಲ್ಪ ಭಸ್ಮವನ್ನು ತಂದರು. ಅದನ್ನು ಮರುದಿನ ಬೆಳಿಗ್ಗೆ ಶಾಲಾ ಮಕ್ಕಳೊಂದಿಗೆ ಪ್ರಭಾತ ಪೇರಿ ಮಾಡುತ್ತಾ ಹೋಗಿ ಊರ ಹೊರಗಿನ ಎತ್ತರದ ಜಾಗದಲ್ಲಿ ಶ್ರೀ. ಅರ್ಜುನಪ್ಪ ಕ್ಯಾತನವರ ಅವರ ಜಮೀನಿನಲ್ಲಿ ಆಲದ ಸಸಿ ನೆಟ್ಟು ಭಸ್ಮವನ್ನು ಗೊಬ್ಬರ ಮತ್ತು ಮಣ್ಣಿನೊಂದಿಗೆ ಬೆರಸಿ ನೆಡಲಾಯಿತು. ಇಂದು ಆ ಸಸಿ ಬೃಹದಾಕಾರದಲ್ಲಿ ಬೆಳೆದು ಹೆಮ್ಮರವಾಗಿ “ಗಾಂಧೀ ಗಿಡ” ಎಂದೇ ಪ್ರಸಿದ್ದಿಯನ್ನು ಪಡೆದಿದೆ.
ಇಂತಹ ದೇಶಾಭಿಮಾನಿ ಗಾಂಧೀವಾದಿಗಳ ನೆಲೆಯಾದ ತಿಗಡೊಳ್ಳಿಯಲ್ಲಿ ಗಾಂಧೀ ಮಡ್ಡಿಯಲ್ಲಿರುವ ಗಾಂಧೀಗಿಡಕ್ಕೆ ಸ್ವಾತಂತ್ರ ಹೋರಾಟಗಾರರು ಶಿಕ್ಷಕರು ಆದ ಶ್ರೀ. ಕುಬೇರಪ್ಪ ಕಲಗೌಡರು ನೀರು ಗೊಬ್ಬರ ಹಾಕಿ ಬೆಳಸಿದರು. ಅದು ಈಗ ಹೆಮ್ಮರವಾಗಿ ಬೆಳೆದಿದೆ. ಈಗ ಇಲ್ಲಿ ಪ್ರತಿವರ್ಷ ಅಕ್ಟೋಬರ 2 ರಂದು ಗಾಂಧೀ ಜಯಂತಿಯ ಪಾವನ ದಿನದಂದು ಶಾಲಾ ಮಕ್ಕಳು, ಶಿಕ್ಷಕರು, ತಿಗಡೊಳ್ಳಿ ಮತ್ತು ಸುತ್ತಮುತ್ತಲಿನ ಹಲವಾರು ಗ್ರಾಮಸ್ಥರು, ಗ್ರಾಮದ ಅನೇಕ ಸೇವಾ ಸಂಸ್ಥೆಗಳು, ಪ್ರಭಾತ ಪೇರಿ ಮಾಡುತ್ತಾ ಸುಮಾರು 2 ಕಿಮಿ ನಡೆದುಕೊಂಡು ಹೋಗುತ್ತಾರೆ. ನಂತರ ಅಲ್ಲಿ ಪ್ರಾರ್ಥನೆ, ಪೂಜೆಗಳನ್ನು ಮಾಡಿ ಬಹಳ ಅರ್ಥಪೂರ್ಣವಾಗಿ ಗಾಂಧೀ ಜಯಂತಿಯನ್ನು ಆಚರಿಸುತ್ತಾರೆ. ಇದು ಇಂದು ಪವಿತ್ರ ತಾಣವಾಗಿ ಬದಲಾಗಿದೆ.
ಇಂತ ಐತಿಹಾಸಿಕ ಸ್ಥಳವನ್ನು ಜಿಲ್ಲಾಡಳಿತ, ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳು ಗಾಂಧೀ ಗಿಡದ ಹಿಂದಿನ ಗಾಂಧೀಜಿಯವರ ನೆನಪು, ಸ್ವಾತಂತ್ರ ಹೋರಾಟ, ದೇಶ ಪ್ರೇಮವನ್ನು ನಾಡಿಗೆ ಬಿತ್ತರಿಸುವ ಹೊಣೆಗಾರಿಕೆ ಹೊರಬೇಕಿದೆ. ಇದು ನಮ್ಮ ನಿಮ್ಮೆಲ್ಲರ ಕರ್ತವ್ಯವೂ ಹೌದು ಹಾಗೂ ತಮ್ಮ ಇಡೀ ಬದುಕನ್ನು ಭಾರತದ ಸ್ವಾತಂತ್ರ್ಯಕ್ಕಾಗಿ ಮುಡುಪಿಟ್ಟಂಥ ಮಹಾತಾ ಗಾಂಧೀಜಿಯವರಿಗೆ ಸಲ್ಲಿಸುವ ಗೌರವವೂ ಹೌದು.
ಶ್ರೀ. ಬಸವರಾಜ ಚಿನಗುಡಿ,
ಚನ್ನಮ್ಮನ ಕಿತ್ತೂರ,
ಬೆಳಗಾವಿ ಜಿಲ್ಲೆ.
ಫೋನ್ ನಂ: +91 90088 69423