ವಚನ ಸಾಹಿತ್ಯದಲ್ಲಿ ಕಾಯಕ ತತ್ವ / ಡಾ. ಮಲ್ಲಿಕಾರ್ಜುನ ಕೆ.
ವಚನ ಸಾಹಿತ್ಯದ ಕಾಲವು ಕನ್ನಡ ಸಾಹಿತ್ಯದ ಪರ್ವಕಾಲ, ಸುವರ್ಣಯುಗ ಕಾಲವೆಂದು ಕರೆಯಬಹುದು. ಹಾಗಾಗಿ ೧೨ನೇ ಶತಮಾನಕ್ಕೆ ವಿಶಿಷ್ಟ ಸ್ಥಾನವಿದೆ. ವೇದಗಳ ಕಾಲದಿಂದಲೂ ಸಾಹಿತ್ಯ ಪಂಡಿತರ, ವಿದ್ವಾಂಸರ ಸ್ವತ್ತಾಗಿ, ಸಂಸ್ಕೃತ ಭೂಯಿಷ್ಠವಾಗಿದ್ದು, ಶ್ರೀಸಾಮಾನ್ಯರಿಗೆ ಇವರ ರಚನೆಗಳು ಅರ್ಥವಾಗುತ್ತಿರಲಿಲ್ಲ. ಶತ ಶತಮಾನಗಳಿಂದಲೂ ಸಮಾಜದಲ್ಲಿ ಹೆಣ್ಣಿನ ಬಗೆಗಿದ್ದ ಪೂರ್ವಾಗ್ರಹವನ್ನು ಸರಿಪಡಿಸಿದ ಕೀರ್ತಿ ವಚನಕಾರರಿಗೆ ಸಲ್ಲುತ್ತದೆ. ಬಸವಯುಗದ ಶರಣೆಯರ ಅಮೋಘ ಕೊಡುಗೆಯನ್ನು ಬಹುಶಃ ಯಾವ ಶತಮಾನವೂ ಕಂಡಿರಲಿಲ್ಲ. ಈ ಕಾಲ ಘಟ್ಟದಲ್ಲಿ ಜಾತಿ-ಮತ, ಹೆಣ್ಣು-ಗಂಡು ಎಂಬ ಭೇದವಿಲ್ಲದೆ ‘ಅನುಭವ ಮಂಟಪ'ದಲ್ಲಿ ಸೇರಿ ವಾದ-ಸಂವಾದ, ಚರ್ಚೆಗಳಲ್ಲಿ ಪಾಲ್ಗೊಂಡಿರುವುದನ್ನು ಕಾಣುತ್ತೇವೆ. ವಚನಕಾರ್ತಿಯಲ್ಲಿ ಅಕ್ಕಮಹಾದೇವಿ ಮತ್ತು ಮುಕ್ತಾಯಕ್ಕರಂತೆ…