“ಬಸವಣ್ಣನವರ ವಚನಗಳಲ್ಲಿ ವ್ಯಕ್ತಿತ್ವ ವಿಕಾಸ”/ಡಾ. ಅಶೋಕ ನರೋಡೆ
ವಚನ ಸಾಹಿತ್ಯವು ಕನ್ನಡ ನಾಡಿನ ಪ್ರಪ್ರಥಮ ಪ್ರಜಾಸಾಹಿತ್ಯ. 12 ನೇ ಶತಮಾನದಲ್ಲಿ ಜರುಗಿದ ಸಮಾಜೋ-ಧಾರ್ಮಿಕ ಆಂದೋಲನವು ಯುಗದ ಧ್ವನಿ ಆಯಿತು. ಸಮಾಜದ ಸರ್ವಸ್ಥರಗಳಲ್ಲಿ ಬದಲಾವಣೆಗೆ ಕಾರಣವಾಯಿತು. ಹೊಸ ಸಮಾಜವನ್ನು ಕಟ್ಟಬಯಸಿದ ಶಿವಶರಣರು, ತಮ್ಮ ಸಾದನೆಗಾಗಿ ವಚನಗಳನ್ನು ಮಾಧ್ಯಮವಾಗಿ ಬಳಸಿಕೊಂಡರು. ವಚನ ರಚನೆ ಅವರ ಪ್ರಾಥಮಿಕ ಉದ್ದೇಶವಾಗಿರದೆ ಸಮಾಜ ಸುಧಾರಣೆ ಅವರ ಪ್ರಾಶಸ್ತ್ಯವಾಗಿತ್ತು. ವಚನವೆಂಬುದು ಚಳುವಳಿ ಸಾಹಿತ್ಯ ಪ್ರಕಾರವಾಗಿದೆ. ಆತ್ಮ ಕಲ್ಯಾಣದೊಂದಿಗೆ ಸಮಾಜ ಕಲ್ಯಾಣವನ್ನು ಕಾರ್ಯಗೊಳಿಸಲು ಹೋರಾಡಿದ ಹುತಾತ್ಮರ ಸಾಹಸಗಾಥೆಯಾಗಿದೆ. ರಾಜಶಾಹಿ, ಪರೋಹಿತಶಾಹಿ, ಪುರುಷಶಾಹಿಗಳ ವಿರುದ್ಧ ಹೋರಾಡಿ ಸರ್ವ ಸಮಾನತೆ ಪ್ರತಿಪಾದಿಸುವ ಸಾಹಿತ್ಯ. ಸಮಾಜದ ಎಲ್ಲ ಸ್ಥರದ ಚಳುವಳಿಯಲ್ಲಿ…