![]()

ಅಂಗದ ಮೇಲೆ ಲಿಂಗ,
ಲಿಂಗದ ಮೇಲೆ ಅಂಗವಿದೇನೊ?
ಮನದ ಮೇಲೆ ಅರಿವು,
ಅರಿವಿನ ಮೇಲೆ ಕುರುಹು ಇದೇನೊ?
ನೀನೆಂಬಲ್ಲಿ ನಾನು, ನಾನೆಂಬಲ್ಲಿ ನೀನು,
“ನೀ” “ನಾ” ಎಂಬುದಕ್ಕೆ ತೆರಹಿಲ್ಲ ಗುಹೇಶ್ವರಾ.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-103/ವಚನ ಸಂಖ್ಯೆ-310)
ಈ ವಚನದಲ್ಲಿ ವ್ಯೋಮಕಾಯ ಅಲ್ಲಮ ಪ್ರಭುಗಳು ದೇಹದ (ಅಂಗ) ಮೇಲೆ ಲಿಂಗವಿದೆಯೋ ಅಥವಾ ಲಿಂಗದ ಮೇಲೆ ದೇಹವಿದೆಯೋ ಎಂದು ಪ್ರಶ್ನಿಸುವ ಮೂಲಕ ಇವೆರಡನ್ನು ಬೇರ್ಪಡಿಸಿ ನೋಡುವುದು ಸರಿಯಲ್ಲ ಎಂಬ ಸಂದೇಶವನ್ನು ನೀಡುತ್ತಾರೆ. ಭಕ್ತನ ದೇಹ ಮತ್ತು ಅವನು ಆರಾಧಿಸುವ ಲಿಂಗ ಎರಡೂ ಒಂದೇ ಪರಮ ತತ್ತ್ವದ ಅಭಿವ್ಯಕ್ತಿಗಳಾಗಿವೆ. ಅದೇ ರೀತಿ, ಮನಸ್ಸಿನ ಮೇಲೆ ಅರಿವಿದೆಯೋ ಅಥವಾ ಅರಿವಿನ ಮೇಲೆ ಮನಸ್ಸಿದೆಯೋ ಎಂಬ ಪ್ರಶ್ನೆಯ ಮೂಲಕ, ಜ್ಞಾನ ಮತ್ತು ಮನಸ್ಸು ಪರಸ್ಪರ ಅವಿನಾಭಾವ ಸಂಬಂಧ ಹೊಂದಿವೆ ಎಂದು ಹೇಳುತ್ತಾರೆ. ಅರಿವಿಗೆ ಪ್ರತ್ಯೇಕವಾದ ಗುರುತು (ಕುರುಹು) ಇಲ್ಲ. ಅದು ಅನುಭವದಲ್ಲೇ ವ್ಯಕ್ತವಾಗುತ್ತದೆ. ಕೊನೆಯಲ್ಲಿ, “ನೀನೆಂಬಲ್ಲಿ ನಾನು, ನಾನೆಂಬಲ್ಲಿ ನೀನು” ಎಂದು ಹೇಳುವ ಮೂಲಕ, ಭಕ್ತ ಮತ್ತು ಪರಮಾತ್ಮರ ನಡುವೆ ಯಾವುದೇ ಭೇದವಿಲ್ಲ ಎಂಬ ಅದ್ವೈತ ಅನುಭವವನ್ನು ವ್ಯಕ್ತಪಡಿಸುತ್ತಾರೆ. “ನಾನು” ಮತ್ತು “ನೀನು” ಎಂಬ ಭಾವನೆಗಳೇ ಅಜ್ಞಾನದಿಂದ ಉಂಟಾಗಿರುವ ಕಲ್ಪನೆಗಳು. ನಿಜವಾದ ಆಧ್ಯಾತ್ಮಿಕ ಅನುಭವದಲ್ಲಿ ಅವು ಕರಗಿಹೋಗುತ್ತವೆ. “ತೆರಹಿಲ್ಲ ಗುಹೇಶ್ವರಾ” ಎಂಬ ಅಂತಿಮ ಸಾಲಿನ ಅರ್ಥ, ಈ ಅನುಭವವನ್ನು ಪದಗಳಿಂದ ವಿವರಿಸಲು ಸಾಧ್ಯವಿಲ್ಲ. ಅದು ಕೇವಲ ಆಂತರಿಕ ಅನುಭೂತಿಯ ಮೂಲಕವೇ ಗ್ರಹಿಸಬಹುದಾದ ದಿವ್ಯ ಸತ್ಯ ಎಂಬುದಾಗಿದೆ. ಜೀವ–ಶಿವ ಐಕ್ಯತೆ, ಮನಸ್ಸು–ಅರಿವಿನ ಅವಿನಾಭಾವ ಸಂಬಂಧ ಹಾಗೂ “ನಾನು–ನೀನು” ಎಂಬ ದ್ವೈತ ಭಾವವನ್ನು ಮೀರಿದ ಪರಮ ಆಧ್ಯಾತ್ಮಿಕ ಅನುಭವವನ್ನು ಪ್ರತಿಪಾದಿಸುತ್ತದೆ. ಭಕ್ತನ ಅಂತಿಮ ಗುರಿ ತನ್ನೊಳಗಿನ ಪರಮಾತ್ಮನೊಂದಿಗೆ ಒಂದಾಗುವುದು ಎಂಬುದನ್ನು ವಚನಕಾರ ವ್ಯೋಮಕಾಯ ಅಲ್ಲಮ ಪ್ರಭುಗಳು ಇಲ್ಲಿ ಸಾರುತ್ತಾರೆ.
ಅಲ್ಲಮರ ಈ ವಚನವು ಜೀವ, ಶಿವ ಐಕ್ಯತೆ, ಮನಸ್ಸು, ಅರಿವಿನ ಅವಿನಾಭಾವ ಸಂಬಂಧ ಹಾಗೂ ನಾನು-ನೀನು ಎಂಬ ದ್ವೈತ ಭಾವವನ್ನು ಮೀರಿದ ಪರಮ ಆಧ್ಯಾತ್ಮಿಕ ಅನುಭವವನ್ನು ಪ್ರತಿಪಾದಿಸುತ್ತದೆ. ಭಕ್ತನ ಅಂತಿಮ ಗುರಿ ತನ್ನೊಳಿಗಿನ ಪರಮಾತ್ಮನೊಂದಿಗೆ ಒಂದಾಗುವುದೇ ಅಂತಿಮ ಸತ್ಯವೆಂದು ಸಾರುತ್ತದೆ. ಬಸವಾದಿ ಶರಣರು ಆತ್ಮಾನುಭೂತಿ, ಪರಶಿವನ ಸಾಕ್ಷಾತ್ಕಾರ ಹಾಗೂ ಜೀವನದ ಪರಿಪೂರ್ಣತೆಯೇ ಅರಿವು ಎಂದು ಎಂದಿದ್ದಾರೆ, ಬಾಹ್ಯ ಹಾಗೂ ಆಡಂಬರದ ಗುರುವಿಗಿಂತ ಅಂತರಂಗದ ಅನುಭವವೆಂಬ ಗುರುವೇ ಪರಮೋಚ್ಚ. ಆ ಅರಿವೇ ಗುರುವಾಗುತ್ತದೆ ಎಂದು ಪ್ರತಿಪಾದಿಸಿದ್ದಾರೆ. 84 ಕೋಟಿ ಜೀವರಾಶಿಗಳಲ್ಲಿ ಮಾನವನೇ ಅರಿವುಳ್ಳ ಪ್ರಾಣಿ. ನರ ಮಾನವರ ಹಸಿವು, ನೀರಡಿಕೆ, ಅಸನ, ವ್ಯಸನಗಳಿಗೆ ಪ್ರಕೃತಿ ಸಹಜ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವುದೇ ಅರಿವಿನ ಮಾರ್ಗ ಅಥವಾ ತಿಳುವಳಿಕೆ ಎನ್ನಲಾಗುತ್ತದೆ.
ಸಿಡಿಲೊಡನೆ ಕಾದುವಂಗೆ ಕೊಡೆಯೊಂದು ಮರೆಯೆ?
ಪರ್ವತವ ಹೊರುವಂಗೆ ಸಿಂಬಿಯೊಂದು ಸಹಾಯವೆ?
ಸಕ್ಕರೆಯ ಸವಿವುದಕ್ಕೆ ಬೇರೊಂದು ಪದಾರ್ಥವೆ?
ಗುಹೇಶ್ವರನ ಅರಿವುದಕ್ಕೆ ಕುರುಹು ಮುನ್ನೇಕೆ?
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-595/ವಚನ ಸಂಖ್ಯೆ-1560)
ಈ ವಚನದಲ್ಲಿ ಅಲ್ಲಮರು ಅರಿವಿನ ಕುರಿತು ಸ್ಪಷ್ಟವಾದ ಪರಿಜ್ಞಾನ ನೀಡಿದ್ದಾರೆ. ಪರಶಿವನ ಅರಿವು ಹೊರಗಿನ ಆಚರಣೆ, ಆಡಂಬರ ಅಥವಾ ಬಾಹ್ಯ ಕುರುಹುಗಳಿಂದ ಸಿಗುವುದಿಲ್ಲ. ಅದು ಸ್ವಾನುಭವ ಹಾಗೂ ಅಂತರಂಗದ ಪರಿಶುದ್ಧತೆಯಿಂದ ಮತ್ತು ನೇರ ಆಧ್ಯಾತ್ಮಿಕ ಅನುಭವದಿಂದ ಮಾತ್ರ ಸಾಧ್ಯ. ಹೇಗೆ ಸಕ್ಕರೆಯ ಸಿಹಿಯನ್ನು ಸವಿದಾಗಲೆ ತಿಳಿಯುತ್ತದೆಯೋ, ಹಾಗೇಯೇ ದೇವರ ಕುರಿತು ಅನುಭವದಿಂದಲೇ ಅರಿವಾಗುತ್ತದೆ. ಅದಕ್ಕಾಗಿ ಅರಿವೆಂಬ ಗುರು ಪ್ರತಿಯೊಬ್ಬರಿಗೂ ಅಗತ್ಯ. ಪರಮಾತ್ಮನ ಅರಿವು ಅಥವಾ ಆತ್ಮ ಜ್ಞಾನವು ಹೊರಗಿನ ಆಧಾರಗಳಿಂದ ದೊರೆಯುವುದಿಲ್ಲ ಎಂಬುದನ್ನು ರೂಪಕಗಳ ಮೂಲಕ ವಿವರಿಸುತ್ತಾರೆ.
ಮೊದಲ ಸಾಲಿನಲ್ಲಿ, ಸಿಡಿಲು-ಮಿಂಚಿನಂತಹ ಪ್ರಬಲ ಶಕ್ತಿಯನ್ನು ಒಂದು ಚಿಕ್ಕ ಕೋಡೆ (ಛತ್ರಿ) ಮುಚ್ಚಲು ಸಾಧ್ಯವೇ? ಎಂದು ಪ್ರಶ್ನಿಸುತ್ತಾರೆ. ಎರಡನೆಯ ಸಾಲಿನಲ್ಲಿ, ಬೃಹತ್ ಪರ್ವತವನ್ನು ಹೊರುವವನಿಗೆ ಒಂದು ಸಣ್ಣ ಸಿಂಬಿ (ಆಧಾರ) ನೆರವಾಗಬಹುದೇ? ಎಂದು ಕೇಳುತ್ತಾರೆ. ಇಂತಹ ಅಸಾಧ್ಯ ಸಂಗತಿಗಳನ್ನು ಉದಾಹರಿಸಿ, ಪರಮ ಸತ್ಯವನ್ನು ಸಾಮಾನ್ಯ ಬಾಹ್ಯ ಸಾಧನಗಳಿಂದ ಅರಿಯಲು ಸಾಧ್ಯವಿಲ್ಲ ಎಂಬುದನ್ನು ಸೂಚಿಸುತ್ತಾರೆ.
ಮುಂದೆ, ಸಕ್ಕರೆಯ ಸವಿಯನ್ನು ಅನುಭವಿಸಲು ಬೇರೆ ಯಾವುದಾದರೂ ಪದಾರ್ಥ ಬೇಕೇ? ಎಂದು ಪ್ರಶ್ನಿಸುತ್ತಾರೆ. ಸಕ್ಕರೆಯ ಸಿಹಿಯನ್ನು ತಿಳಿಯಲು ಅದನ್ನೇ ಸವಿಯಬೇಕು. ಅದಕ್ಕೆ ಬೇರೆ ಪ್ರಮಾಣ ಅಥವಾ ಸಾಕ್ಷಿ ಬೇಕಾಗಿಲ್ಲ. ಅದೇ ರೀತಿ, ದೇವರ ಅನುಭವವೂ ನೇರವಾದ ಆಂತರಿಕ ಅನುಭವವೇ ಹೊರತು, ಬಾಹ್ಯ ಗುರುತುಗಳು, ಚಿಹ್ನೆಗಳು ಅಥವಾ ಆಢಂಬರಗಳಿಂದ ದೊರೆಯುವುದಿಲ್ಲ.
ಕೊನೆಯ ಸಾಲಿನಲ್ಲಿ, “ಗುಹೇಶ್ವರನ ಅರಿವುದಕ್ಕೆ ಕುರುಹು ಮುನ್ನೇಕೆ?” ಎಂದು ಹೇಳುವ ಮೂಲಕ, ಪರಮಾತ್ಮನ ಅನುಭವಕ್ಕೆ ಯಾವುದೇ ಬಾಹ್ಯ ಕುರುಹು, ಚಿಹ್ನೆ ಅಥವಾ ಪ್ರಮಾಣದ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸುತ್ತಾರೆ. ಮನಸ್ಸು ಶುದ್ಧವಾಗಿ, ಭಕ್ತಿ ಮತ್ತು ಅನುಭವದಿಂದ ತುಂಬಿದಾಗ, ಗುಹೇಶ್ವರನು ಸ್ವತಃ ಅಂತರಂಗದಲ್ಲಿ ಪ್ರಕಾಶಿಸುತ್ತಾನೆ. ಪರಮಾತ್ಮನ ಅರಿವು ಹೊರಗಿನ ಆಚರಣೆ, ಆಢಂಬರ ಅಥವಾ ಬಾಹ್ಯ ಕುರುಹುಗಳಿಂದ ಸಿಗುವುದಿಲ್ಲ; ಅದು ಸ್ವಾನುಭವ, ಅಂತರಂಗದ ಶುದ್ಧತೆ ಮತ್ತು ನೇರ ಆಧ್ಯಾತ್ಮಿಕ ಅನುಭವದಿಂದ ಮಾತ್ರ ಸಾಧ್ಯ ಎಂಬ ಸಂದೇಶವನ್ನು ಸಾರುತ್ತದೆ. ಹೇಗೆ ಸಕ್ಕರೆಯ ಸಿಹಿಯನ್ನು ಸವಿದಾಗಲೇ ತಿಳಿಯುತ್ತದೆಯೋ, ಹಾಗೆಯೇ ದೇವರ ಸತ್ಯವೂ ಅನುಭವದಿಂದಲೇ ಅರಿವಾಗುತ್ತದೆ.
ಕರದಲ್ಲಿ ಇಷ್ಟಲಿಂಗದ ಕುರುಹು ಸಿಕ್ಕಾಗ ಆತ್ಮಾನುಭೂತಿಯ ಅರಿವಾಗುತ್ತದೆ. ಅದು ಪೂರ್ಣವಾದಾಗ ನೆನಹು ಅಳಿದು ಹೋಗುತ್ತದೆ. ಬೆಳಕು ಪ್ರಕಾಶಿಸುತ್ತದೆ. ಅರಿವಿಗಾಗಿ ಬಹಿರಂಗ ಶುದ್ಧಿಯ ನಂತರ ಅಂತರಂಗ ಶುದ್ಧಿಯಿಂದ ಸಾಧಕ ಪರಿಶುದ್ಧನಾಗುತ್ತಾನೆ. ಹೀಗಾಗಿ ಅರಿವು ಬಾಹ್ಯವಾಗಿ ಪ್ರವೇಶಿಸುವುದಲ್ಲ. ಪ್ರತಿಯೊಬ್ಬ ವಿವೇಕದಲ್ಲಿಯೆ ಇರುತ್ತದೆ. ಅದನ್ನು ಸಾಧಿಸಿದವನೇ ನಿಜವಾದ ಸಾಧಕ. ಶರೀರ ಕಾಯದಲ್ಲಿ ಅರಿಷಡ್ವರ್ಗಗಳನ್ನು ತುಂಬಿಕೊಂಡಿದ್ದರೆ, ಅರಿವು ಅಸಾಧ್ಯ. ತಪ್ಪು ಎಸಗುವುದೇ ಅಜ್ಞಾನ. ಅದು ಮರೆವು ಮತ್ತು ಮೌಡ್ಯದಿಂದ ಜರುಗುತ್ತದೆ. ಆ ಪರಿಯನ್ನು ಹರಿದುಕೊಂಡಲ್ಲಿ ಸಂಪೂರ್ಣ ಅರಿವಾಗುತ್ತದೆ. ಅದುವೇ ಜ್ಞಾನ, ಪ್ರಜ್ಞೆ.
ಅರಿವು ಅರಿವು ಎನುತಿಪ್ಪಿರಿ, ಅರಿವು ಸಾಮಾನ್ಯವೇ?
ಹಿಂದಣ ಹೆಜ್ಜೆಯ ನೋಡಿಕಂಡಲ್ಲದೆ
ನಿಂದ ಹೆಜ್ಜೆಯನರಿಯಬಾರದು.
ಮುಂದಣ ಹೆಜ್ಜೆ[ಯು]ಳಿದಲ್ಲದೆ,
ಒಂದು ಪಾದ ನೆಲೆಗೊಳ್ಳದು.
ನೆಲವ ಬಿಟ್ಟು ಆಕಾಶದಲ್ಲಿ ನಿಂದು
ಮುಗಿಲೊಳಗೆ ಮಿಂಚಿದಲ್ಲದೆ ತಾನಾಗಬಾರದು,
ಗುಹೇಶ್ವರನೆಂಬುದು ಬರಿದೆ ಬಹುದೆ ಹೇಳಿರೆ.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-150/ವಚನ ಸಂಖ್ಯೆ-475)
ಈ ವಚನದಲ್ಲಿ ಅಲ್ಲಮಪ್ರಭುಗಳು ನಿಜವಾದ ಅರಿವಿನ (ಜ್ಞಾನದ) ಮಹತ್ವವನ್ನು ವಿವರಿಸುತ್ತಾರೆ. ಜನರು “ಅರಿವು ಅರಿವು” ಎಂದು ಹೇಳಿಕೊಳ್ಳುತ್ತಾರೆ. ಆದರೆ ನಿಜವಾದ ಅರಿವು ಸಾಮಾನ್ಯವಾದ ವಿಷಯವಲ್ಲ. ಅದು ಅನುಭವ, ಆತ್ಮ ಚಿಂತನೆ ಮತ್ತು ಸಾಧನೆಯ ಮೂಲಕವೇ ದೊರೆಯುತ್ತದೆ. ಒಬ್ಬ ವ್ಯಕ್ತಿ ಮುಂದೆ ಹೆಜ್ಜೆ ಇಡಬೇಕಾದರೆ, ಮೊದಲು ಹಿಂದೆ ಇಟ್ಟ ಹೆಜ್ಜೆಯ ಆಧಾರ ಇರಬೇಕು. ಅದೇ ರೀತಿ ಜೀವನದಲ್ಲಿಯೂ ಪೂರ್ವಾನುಭವ ಮತ್ತು ಆತ್ಮ ಪರಿಶೀಲನೆ ಇಲ್ಲದೆ ಮುಂದಿನ ಹಂತದ ಜ್ಞಾನವನ್ನು ಪಡೆಯಲು ಸಾಧ್ಯವಿಲ್ಲ. ಭೂಮಿಯ ಆಧಾರವನ್ನು ಬಿಟ್ಟು ಆಕಾಶದಲ್ಲಿ ನಿಲ್ಲಲು ಸಾಧ್ಯವಿಲ್ಲದಂತೆ, ಬದುಕಿನ ವಾಸ್ತವ ಅನುಭವ ಮತ್ತು ಆಧ್ಯಾತ್ಮಿಕ ಸಾಧನೆಯನ್ನು ಬಿಟ್ಟು ಕೇವಲ ಮಾತಿನಿಂದ ಅಥವಾ ಕಲ್ಪನೆಯಿಂದ ಪರಮ ಸತ್ಯವನ್ನು ಅರಿಯಲು ಸಾಧ್ಯವಿಲ್ಲ. “ಗುಹೇಶ್ವರ” (ಪರಮಾತ್ಮ) ಎನ್ನುವುದು ಬಾಯಲ್ಲಿ ಹೇಳುವ ಪದ ಮಾತ್ರವಲ್ಲ. ಅದನ್ನು ಸ್ವಾನುಭವದಿಂದ ಸಾಕ್ಷಾತ್ಕರಿಸಬೇಕು. ನಿಜವಾದ ಜ್ಞಾನವು ಕೇವಲ ಮಾತು ಅಥವಾ ಪುಸ್ತಕದ ತಿಳುವಳಿಕೆಯಿಂದ ಸಿಗುವುದಿಲ್ಲ. ಕ್ರಮ ಬದ್ಧವಾದ ಅನುಭವ, ಸಾಧನೆ ಮತ್ತು ಆತ್ಮಾನುಭೂತಿಯ ಮೂಲಕವೇ ಪರಮ ಸತ್ಯದ ಅರಿವು ದೊರೆಯುತ್ತದೆ. “ಗುಹೇಶ್ವರ” ನನ್ನು ತಿಳಿಯುವುದೂ ಇದೇ ರೀತಿಯ ಆಂತರಿಕ ಅನುಭವದ ಫಲವಾಗಿದೆ.
ಆಕರ ಗ್ರಂಥಗಳು:
- ಶಿವಶರಣರ ವಚನಗಳು (ವಿವಿಧ ಸಂಪುಟಗಳು) | ಡಾ. ಫ. ಗು. ಹಳಕಟ್ಟಿ | ಕ್ರಿ. ಶ. 1920–1950.
- 12 ನೇ ಶತಮಾನದ ಶರಣರ ಸ್ಮಾರಕಗಳು (ವಿವಿದ ಸಂಪುಟಗಳು) | ಡಾ. ವೀರಣ್ಣ ದಂಡೆ ಮತ್ತು ಡಾ. ಜಯಶ್ರೀ ದಂಡೆ | ಬಸವ ಸಮಿತಿ, ಬೆಂಗಳೂರು-2026.
- ಶರಣರ ಜೀವನ ಚರಿತ್ರೆ ಮತ್ತು ಕಲ್ಯಾಣ ಕ್ರಾಂತಿ | ಡಾ. ಎಂ. ಎಂ. ಕಲ್ಬುರ್ಗಿ | ಕನ್ನಡ ವಿಶ್ವವಿದ್ಯಾಲಯ-1998.
- ವಿಷಯ ವಚನ ಸಂಪುಟಗಳು: ಸಂಪುಟ-1 | ಲಿಂಗ, ಅನುಭಾವ, ಅರಿವು | ಸಂ: ಡಾ. ಸಂಗಮೇಶ ಸವದತ್ತಿಮಠ | ಪ್ರಕಾಶಕರು: ಶ್ರೀಚನ್ನಬಸವೆಶ್ವರ ಸಂಸ್ಥಾನ ಹಿರೇಮಠ, ಹಾರಕೂಡ, ಬೀದರ ಜಿಲ್ಲೆ | 2014.
- ಗುರು ವಚನ, ಲಿಂಗಾಯತ ಧರ್ಮಗ್ರಂಥ | ಸಂಪಾದಕರು: ಅಕ್ಕ ಅನ್ನಪೂರ್ಣ | ಬಸವ ಸೇವಾ ಪ್ರತಿಷ್ಠಾನ, ಬಸವ ಗಿರಿ, ಬೀದರ- 2016.
- ವಚನ ಸಾಹಿತ್ಯ ಸಂಪುಟ–2021 | ಕರ್ನಾಟಕ ಸಾಹಿತ್ಯ ಅಕ್ಯಾಡೆಮಿ, ಬೆಂಗಳೂರು.
ಡಾ. ಸತೀಶ ಕೆ. ಇಟಗಿ
ಪತ್ರಿಕೋದ್ಯಮ ಉಪನ್ಯಾಸಕ
ಅಂಚೆ: ಕೋಳೂರ – 586 129
ತಾ: ಮುದ್ದೇಬಿಹಾಳ, ಜಿ: ವಿಜಯಪುರ.
ಮೊ: 92412 86422
ಈ-ಮೇಲ್: satshitagi10@gmail.com
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ (ರಿ) ದ ಸಂಚಾಲಕರನ್ನು ಸಂಪರ್ಕಿಸಬೇಕಾದ:
- ಮೋಬೈಲ್ ನಂ. 9741 357 132
- e-Mail ID: info@vachanamandara.in / admin@vachanamandara.in





Total views : 65574