![]()

ತನುವಿನಲ್ಲಿ ನಿರ್ಮೋಹ, ಮನದಲ್ಲಿ ನಿರಹಂಕಾರ,
ಪ್ರಾಣದಲ್ಲಿ ನಿರ್ಭಯ, ಚಿತ್ತದಲಿ ನಿರಪೇಕ್ಷೆ.
ವಿಷಯಗಳಲ್ಲಿ ಉದಾಸೀನ, ಭಾವದಲ್ಲಿ ದಿಗಂಬರ,
ಜ್ಞಾನದಲ್ಲಿ ಪರಮಾನಂದವೆಡೆಗೊಂಡ ಬಳಿಕ
ಸೌರಾಷ್ಟ್ರ ಸೋಮೇಶ್ವರನೆಂಬ ಲಿಂಗವು ಬೇರಿಲ್ಲ ಕಾಣಿರೋ.
(ಸಮಗ್ರ ವಚನ ಸಂಪುಟ-ಆರು/2021/ಪುಟ. ಸಂ-346/ವಚನ. ಸಂ. 954)
ಶರಣ ಆದಯ್ಯನವರು 12 ನೇ ಶತಮಾನದ ಅನುಭವ ಮಂಟಪದ ಅನುಭಾವಿಗಳಲ್ಲಿ ಒಬ್ಬರಾಗಿದ್ದಾರೆ. ಇವರು ತಮ್ಮ ವಚನಗಳಲ್ಲಿ ಬಸವಣ್ಣ, ಮಡಿವಾಳ, ಅಲ್ಲಮಪ್ರಭುದೇವರು, ಮಡಿವಾಳ ಮಾಚಿದೇವರು ಮುಂತಾದ ಶರಣರನ್ನು ಸ್ಮರಿಸಿರುವದರಿಂದ ಇವರು ಬಸವಣ್ಣನವರ ಸಮಕಾಲೀನರು ಎನ್ನಬಹುದು. ಶರಣ ಆದಯ್ಯನವರು ಮೂಲತ ಸೌರಾಷ್ಟ್ರ ಅಂದರೆ ಗುಜರಾತಿನವರು. ತಂದೆ ಪಾರದತ್ತ, ತಾಯಿ ಪುಣ್ಯವತಿ. ಇವರ ಕಾಯಕ ಚಿನ್ನ ಮುತ್ತಿನ (ಹರದಿಕೆ) ವ್ಯಾಪಾರ. ಈ ವ್ಯಾಪಾರ ನಿಮಿತ್ತ ಅವರು ಕರ್ನಾಟಕದ ಪುಲಿಗೇರಿಗೆ ಬಂದಾಗ ಅವರ ಜೀವನದಲ್ಲಿ ಬದಲಾವಣೆಗಳು ನಡೆಯುತ್ತವೆ. ಇಲ್ಲಿಯೆ ಜೈನ ಧರ್ಮದ ಪದ್ಮಾವತಿಯವರನ್ನು ಲಗ್ನವಾಗಿ ಮುಂದೆ ಅನುಭವ ಮಂಟಪಕ್ಕೆ ಬಂದು ವಚನ ರಚಿಸಿರುವರು. “ಸೌರಾಷ್ಟ್ರ ಸೋಮೇಶ್ವರ” ವಚನಾಂಕಿತದಿಂದ ಬರೆದ ಇಲ್ಲಿಯವರೆಗೆ ಲಭ್ಯವಾಗಿರುವ ವಚನಗಳು 403.
ನಿರ್ವಚನ:
ಈ ವಚನವು ಶರಣರಾದವರ ಲಕ್ಷಣಗಳನ್ನು ತಿಳಿಸಿಕೊಡುವದು. ಬಹಿರಂಗದ ವ್ಯಾಮೋಹಗಳನ್ನು ಕಳೆದುಕೊಂಡ ಶರಣರ ಇರುವಿಕೆ ಅರ್ಥಪೂರ್ಣವಾಗಿ ಈ ವಚನ ತಿಳಿಸಿ ಕೊಡುವದು. ತನು ಪ್ರಸಾದಕಾಯವೆಂಬುದು ಒಪ್ಪಿಕೊಂಡ ಶರಣರು ಯಾವ ಆಶೆ–ಆಮಿಷಗಳಿಲ್ಲದೆ ನಿರ್ಮೋಹಿಗಳಾಗಿ ಬಾಳುವರು. ಅಂತರಂಗದ ಮದಗಳನ್ನೆಲ್ಲ ಬಹಿರಂಗದ ಅಷ್ಟಾವರಣಗಳಿಂದ ಭಸ್ಮಗೊಳಿಸಿ ಕಾಯಕಗೈಯುತ್ತಾ ದಾಸೋಹಿಗಳಾಗುವರು. ಇದ್ದರೂ ಅಷ್ಟೆ ಇರದಿದ್ದರೂ ಅಷ್ಟೆ ನಿರಹಂಕಾರ ಸ್ವರೂಪಿಗಳಾಗಿದ್ದರು. ಇದ್ದಾಗ ಅಹಂಕಾರಿಗಳಾಗಲಿಲ್ಲ, ಇಲ್ಲದಿದ್ದರೆ ಕೈಚಾಚಿ ಬದುಕಲಿಲ್ಲ.
ಸ್ಥಿತಪ್ರಜ್ಞೆತೆಯಿಂದ ಅವರು ಬಾಳಿದವರೆಂದು ಹೇಳುತ್ತ ಅಂಜಿಕೆ, ಭಯ ಅವರ ಸಮೀಪ ಸುಳಿಯುವದಿಲ್ಲ ಎನ್ನುತ್ತಾರೆ. ಏಕೆಂದರೆ ಅವೆಲ್ಲ ಆಸೆಕೋರನಿಗೆ ಎನ್ನುತ್ತಾರೆ. ಎಲ್ಲ ಆಸೆ ಆಮಿಷಗಳನ್ನು ಗೆದ್ದ ಶರಣರು ಹೆದರುವದು ಯಾರಿಗೆ ಎಂದು ಪ್ರಶ್ನಿಸುತ್ತಾರೆ ಶರಣ ಆದಯ್ಯನವರು. ಅವರಿಗೆ ಮರಣವೇ ಮಹಾನವಮಿ. ಹೀಗಾಗಿಯೆ ಶರಣರಲ್ಲಿ ಅಂಜಿಕೆ ಇರುವದಿಲ್ಲವೆಂಬುದು ಅನುಭವಿಸಿ ನುಡಿಯುವರು.
ಮುಂದುವರಿದು ಶರಣರು ಚಿತ್ತದಲ್ಲಿ ನಿರಪೇಕ್ಷೆ, ವಿಷಯಂಗಳಲ್ಲಿ ಉದಾಸೀನರಾಗಿರುತ್ತಾರೆಂದು ಹೇಳುತ್ತಾರೆ. ಹೀಗೆಂದ ಮಾತ್ರಕ್ಕೆ ಅವರು ಆಸಕ್ತಿಯನ್ನು ಕಳೆದುಕೊಂಡು ಎಲ್ಲಡೆಯೂ ಯಾವಾಗಲೂ ಉದಾಸೀನರಾಗಿರುತ್ತಾರೆಂಬ ಅರ್ಥವಲ್ಲ. ಇದ್ದೂ ಇಲ್ಲದಂತೆ ಇರುವರು, ಕಮಲದ ಹೂವಿನ ಹಾಗೆ. ಕೆಸರಲ್ಲಿದ್ದರೂ ಅದಕ್ಕೆ ಅಂಟಿಕೊಳ್ಳದೆ ಅರಳುವ ಕಮಲದಂತೆ ಸಂಸಾರದಲ್ಲಿದ್ದರೂ ಯಾವ ಅರಿಷಡ್ವರ್ಗಗಳೂ ಅವರಿಗೆ ಕಾಡುವುದಿಲ್ಲ ಎನ್ನುತ್ತ ದೇಹಕ್ಕೆ ಮಾತ್ರ ದಿಗಂಬರವಲ್ಲ, ಅವರೊಳಗಿರುವ ಭಾವವು ಕೂಡಾ ದಿಗಂಬರವಾಗಿರುತ್ತದೆ ಎಂದು ಅಭಿಪ್ರಾಯ ಪಡುತ್ತಾರೆ.
ಇಂತಹ ಗುಣಗಳು ಅಳವಡುವದಕ್ಕೆ ಮುಖ್ಯ ಕಾರಣವೆಂದರೆ ಅವರು ಜ್ಞಾನಿಗಳಾಗಿದ್ದವರು, ಜ್ಞಾನದೊಳು ಅಳವಡಿಸಿಕೊಂಡಿರುವದನ್ನು ಕ್ರಿಯೆಯೊಳು ತಂದು ಅರಿವಿನ ಗಣಿಗಳಾಗಿರುವರು. ಜ್ಞಾನ ಮತ್ತು ಕ್ರಿಯೆ ಇವರೆಡು ಅಂದಿನ ಶರಣರ ಮೂಲ ತತ್ವಗಳಾಗಿದ್ದವು. ಕೇವಲ ಶುಷ್ಕ ಜ್ಞಾನಿಗಳಾಗಲಿಲ್ಲ, ಕ್ರಿಯೆಯೊಳಗೆ ತಂದು ಆದರ್ಶರಾಗಿದ್ದಾರೆನ್ನುತ್ತಾರೆ ಆದಯ್ಯ ಶರಣರು.
ಶ್ರೀಮತಿ ಸುರೇಖಾ ಶೀರಪಾಟೀಲ,
ಶರಣ ತತ್ವ ಚಿಂತಕರು,
ಗೋದೂತಾಯಿ ನಗರ,
ಕಲಬುರಗಿ.
ಮೋಬೈಲ್ ನಂ. 70196 85031
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ದ ಸಂಚಾಲಕರನ್ನು ಸಂಪರ್ಕಿಸಬೇಕಾದ:
- ಮೋಬೈಲ್ ನಂ. 9741 357 132
- e-Mail ID: info@vachanamandara.in / admin@vachanamandara.in






Total views : 62471