![]()

ಡಾ. ಫ. ಗು ಹಳಕಟ್ಟಿ ಅವರು ಕರ್ನಾಟಕದ ಮ್ಯಾಕ್ಸ್ ಮುಲ್ಲರ್ ಎಂದೆ ಪ್ರಸಿದ್ಧಿ ಪಡೆದವರು. ಕಾಲಗರ್ಭದಲ್ಲಿ ಹುದುಗಿ ಹೋಗಿದ್ದ ವಚನ ಸಾಹಿತ್ಯವೆಂಬ ಅನರ್ಘ್ಯ ರತ್ನಗಳನ್ನ ಶೋಧಿಸಿ, ಅನ್ವೇಶಿಸಿ, ಸಂಗ್ರಹಿಸಿ, ಸಂಪಾದಿಸಿ ಪ್ರಕಟಿಸಿದರು. ಈ ಮೂಲಕ ಸಂಶೋಧನಾ ಕ್ಷೇತ್ರಕ್ಕೆ ಬಹು ದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ಮನೆ, ಮಠ, ಜಗುಲಿಗಳಲ್ಲಿ ಪೂಜಿಸುತ್ತಿದ್ದ ತಾಡೊಲೆಗಳನ್ನು ಹುಡುಕಿ ತಂದು ವಚನಗಳನ್ನ ಮುದ್ರಿಸಿದರು.
ಕನ್ನಡದ ಕಣ್ವ ಶ್ರೀ. ಬಿ. ಎಂ. ಶ್ರೀಕಂಠಯ್ಯನವರಿಂದ “ವಚನ ಗುಮ್ಮಟ” ಎಂದು ಕರೆಸಿಕೊಂಡ ರಾವ್ ಬಹಾದ್ದೂರ್ ಡಾ. ಫ. ಗು ಹಳಕಟ್ಟೆಯವರು ಜನಿಸಿದ್ದು 1880 ರ ಜುಲೈ 2 ರಂದು, ಧಾರವಾಡದಲ್ಲಿ. ಇವರ ತಂದೆ ಶ್ರೀ. ಗುರುಬಸಪ್ಪನವರು ಮತ್ತು ತಾಯಿ ದಾನಮ್ಮನವರು. 3 ವರ್ಷ ಇದ್ದಾಗಲೇ ತಾಯಿಯವರನ್ನ ಕಳೆದುಕೊಳ್ಳುತ್ತಾರೆ. ಮುಂದೆ ಅಜ್ಜಿ ಬಸಮ್ಮನವರ ಆಶ್ರಯದಲ್ಲಿ ಬೆಳೆದ ಫಕೀರಪ್ಪನವರಿಗೆ ಅಜ್ಜಿಯ ಪ್ರೀತಿ ವಾತ್ಸಲ್ಯ ಅವರ ವ್ಯಕ್ತಿತ್ವ ವಿಕಸನಕ್ಕೆ ದಾರಿ ದೀಪವಾಗುತ್ತದೆ.
ಪ್ರಾಥಮಿಕ ಶಿಕ್ಷಣವನ್ನು ಧಾರವಾಡದಲ್ಲಿ ಮುಗಿಸಿ 1896 ರಲ್ಲಿ ಮ್ಯಾಟ್ರಿಕ್ ಪರೀಕ್ಷೆಯನ್ನ ಉನ್ನತ ಶ್ರೇಣಿಯಲ್ಲಿ ಪಾಸ್ ಆಗುತ್ತಾರೆ. ಮುಂದೆ ಮುಂಬೈನ ಸೇಂಟ್ ಝೆವಿಯರ್ ಕಾಲೇಜಿನಲ್ಲಿ 1896 ರಲ್ಲಿ B. Sc ಪದವಿ ಮತ್ತು 1904 ರಲ್ಲಿ L. Lb ಪದವಿಯನ್ನು ಪ್ರಥಮ ದರ್ಜೆಯಲ್ಲಿ ಪಾಸ ಆಗುತ್ತಾರೆ. ಮುಂದೆ ಜನಪ್ರಿಯ ವಕೀಲರಾಗಿ ಹೆಸರು ಮಾಡುತ್ತಾರೆ.
1923 ರಲ್ಲಿ ವಿಜಯಪುರಕ್ಕೆ ಬಂದು ನೆಲೆಸಿ, ಅಲ್ಲಿ ಪಬ್ಲಿಕ್ ಪ್ರಾಸಿಕ್ಯುಟರ್ ಮತ್ತು ಸರ್ಕಾರಿ ಪ್ಲೀಡರ್ ಆಗಿ ಸರ್ಕಾರದ ವತಿಯಿಂದ ನೇಮಕಗೊಳ್ಳುತ್ತಾರೆ. ಇದೇ ಸಮಯದಲ್ಲಿ ವೀರಶೈವ ಮಹಾಸಭಾ ಅಧ್ಯಕ್ಷರಾಗಿದ್ದ ಶಿರಸಂಗಿ ಲಿಂಗರಾಜರ ವಿಚಾರಧಾರೆಗಳಿಂದ ಪ್ರಭಾವಿತರಾಗಿ ಸಾಹಿತ್ಯ ರಚನೆಯ ಜೊತೆಗೆ ವಚನಗಳ ತಾಡೋಲೆ ಹಸ್ತಪ್ರತಿ ಸಂಗ್ರಹಣೆಗೆ ಮುಂದಾಗುತ್ತಾರೆ. ಲಿಂಗರಾಜ ದೇಸಾಯಿ ಅವರ ಸಹಕಾರದಿಂದ 1910 ರಲ್ಲಿ ಬಿಜಾಪುರದಲ್ಲಿ “ಬಿಜಾಪುರ ಡಿಸ್ಟ್ರಿಕ್ಟ್ ಎಜುಕೇಶನ್ ಅಸೋಸಿಯೇಷನ್” (ಬಿ. ಎಲ್. ಡಿ. ಇ) ಪ್ರಾರಂಭಿಸಿ ಶಿಕ್ಷಣಕ್ಕಾಗಿ ಕೊಲ್ಹಾಪುರ ಪುಣೆ ಮುಂಬೈಗಳಿಗೆ ಹೋಗುತ್ತಿದ್ದ ವಿದ್ಯಾರ್ಥಿಗಳಿಗೆ ಇಲ್ಲಿ ಅವಕಾಶ ಮಾಡಿಕೊಡುತ್ತಾರೆ
1912 ರಲ್ಲಿ “ಶ್ರೀ ಸಿದ್ದೇಶ್ವರ ಸಹಕಾರಿ” ಬ್ಯಾಂಕನ್ನು ಪ್ರಾರಂಭಿಸುತ್ತಾರೆ. ಜನರಲ್ಲಿ ಧಾರ್ಮಿಕ ಜಾಗೃತಿ ಮೂಡಿಸಲು ಶರಣ ಸಿದ್ದರಾಮೇಶ್ವರ ಹೆಸರಿನಲ್ಲಿ “ಸಿದ್ದೇಶ್ವರ ಸಂಸ್ಥೆ” ಯನ್ನು ಸ್ಥಾಪನೆ ಮಾಡುತ್ತಾರೆ. ಈ ಮೂರು ಸಂಸ್ಥೆಗಳು ಇನ್ನೂವರೆಗೂ ಯಶಸ್ವಿಯಾಗಿ ಮುಂದುವರಿದಿವೆ. ಹಳಕಟ್ಟಿ ಅವರು, ಒಂದು ದಿನ ವಿಜಯಪುರದ ಶಿವಲಿಂಗಪ್ಪ ಮಂಚಾಲಿ ಅವರ ಮನೆಗೆ ಹೋದಾಗ ಅಲ್ಲಿ “ಷಟ್ ಸ್ಥಳ ತಿಲಕ” ಮತ್ತು “ಪ್ರಭುದೇವರ ವಚನ” ಗಳ ತಾಳೆಗರಿಗಳನ್ನ ನೋಡಿದಾಗ, ನಿರ್ಲಕ್ಷದಿಂದ ಹಾಳಾಗುತ್ತಿರುವ ಇಂತಹ ತಾಡೋಲೆಗಳು, ಹೀಗೆ ಬಿಟ್ಟರೆ ಗೆದ್ದಲು ಹುಳಗಳಿಗೆ ಆಹಾರ ಆಗುತ್ತವೆ ಮತ್ತು ಒಂದು ದೊಡ್ಡ ಪರಂಪರೆ ಬೆಳಕಿಗೆ ಬಾರದೆ ನಶಿಸಿ ಹೋಗುತ್ತದೆ ಎಂದು ಮರುಗುತ್ತಾರೆ. ಅಂದಿನಿಂದ ಸಂಪೂರ್ಣವಾಗಿ ವಚನ ಸಾಹಿತ್ಯ ರಕ್ಷಣೆ ಮತ್ತು ಪ್ರಚಾರಕ್ಕೆ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ.
ಮನೆ ಮಠ ಜಗಲಿಗಳಲ್ಲಿ ಪೂಜೆಗೊಳ್ಳುತ್ತಿದ್ದ ತಾಡೋಲೆಗಳನ್ನ ಹುಡುಕಿ ತಂದು ಅದರಲ್ಲಿನ ಅರ್ಥ ಬಿಡಿಸಿ ಬರೆಯುತ್ತಾರೆ. ಸಂಗ್ರಹಿಸಿದಂತಹ ರಾಶಿ ರಾಶಿ ವಚನಗಳನ್ನು ಮುದ್ರಿಸಿ, ಈ ಸಾಹಿತ್ಯವನ್ನು ಜನರಿಗೆ ತಲುಪಿಸಲು 1923 ರಲ್ಲಿ “ಹಿತಚಿಂತಕ ಮುದ್ರಣಾಲಯ” ಪ್ರಾರಂಭಿಸುತ್ತಾರೆ. ಮುಂದೆ ಯಂತ್ರ ಖರೀದಿಸಲು ಆರ್ಥಿಕ ತೊಂದರೆ ಆದಾಗ ತಾವಿರುವ ಮನೆಯನ್ನೆ ಮಾರಿ ಬಾಡಿಗೆ ಮನೆಯಲ್ಲಿ ಜೀವನವನ್ನು ಸಾಗಿಸುತ್ತಾರೆ.
ನಂತರ “ನವ ಕರ್ನಾಟಕ” ಎಂಬ ಪತ್ರಿಕೆಯನ್ನ ಪ್ರಾರಂಭಿಸಿ, ರಾಜಕೀಯ ಸಾಮಾಜಿಕ ಶೈಕ್ಷಣಿಕ ಹಾಗೂ ಹೋಗುಗಳ ಕುರಿತು ಕನ್ನಡಿಗರಲ್ಲಿ ಜಾಗೃತಿ ಮೂಡಿಸಿ, ಕರ್ನಾಟಕ ಏಕೀಕರಣಕ್ಕೆ ಅಮೂಲ್ಯವಾದ ಕೊಡುಗೆಯನ್ನು ನೀಡುತ್ತಾರೆ. ಅವರ ಇನ್ನೊಂದು ಮಹತ್ತರ ಸಾಧನೆ ಎಂದರೆ ವಿಜಯಪುರದಲ್ಲಿ “ಭೂತನಾಳ ಕೆರೆಯ” ಸ್ಥಾಪನೆ. ಈ ಕೆರೆ ನೂರು ವರ್ಷಗಳ ನಂತರವೂ ಈಗಲೂ ವಿಜಯಪುರದ 30% ಭಾಗಕ್ಕೆ ಶುದ್ಧ ನೀರನ್ನು ಒದಗಿಸುತ್ತದೆ.
ವಚನ ಸಾಹಿತ್ಯ ಸಂಶೋಧನೆಯ ಕಾರ್ಯದಲ್ಲಿ ಎಷ್ಟು ತೊಡಗಿಸಿಕೊಂಡಿದ್ದರು ಅಂತ ಅಂದರೆ ದೂರದ ದೆಹಲಿಯಲ್ಲಿದ್ದ ಅವರ ಹಿರಿಯ ಮಗ ಅಪಘಾತದಿಂದ ತೀರಿಕೊಂಡಾಗ “ಶಿವನ ಸೊಲ್ಲು ಶಿವನಿಗೆ ಸೇರಿತು” ಅಂದು ಸ್ಥಿತಪ್ರಜ್ಞತೆಯನ್ನು ತೋರುತ್ತಾರೆ. ತಮ್ಮ ಹೊಟ್ಟೆಯ ಶಸ್ತ್ರಚಿಕಿತ್ಸೆ ಆದಾಗ ಮತ್ತು ರೈಲು ಪ್ರಯಾಣದ ಸಂದರ್ಭದಲ್ಲಿ ಕಾಲು ಮುರಿದಾಗಲೂ ವಚನ ಸಾಹಿತ್ಯ ಪ್ರಕಟಣೆಯ ಕಾಯಕವನ್ನ ನಿಲ್ಲಿಸುವುದಿಲ್ಲ. ತಾವೇ ಸ್ವತಃ ಮೊಳೆಗಳನ್ನ ಜೋಡಿಸಿ, ಅಚ್ಚು ಹಾಕಿ, ಪೆಡಲ್ ತುಳಿದು ಸುಮಾರು 250 ವಚನಕಾರರ ವಚನಗಳನ್ನ, ಸಾಹಿತ್ಯವನ್ನು ಹೊರತರುತ್ತಾರೆ. 1923 ರಲ್ಲಿ “ವಚನ ಶಾಸ್ತ್ರಸಾರ: ಭಾಗ-1” ಪ್ರಕಟವಾಗುತ್ತದೆ. 1926 ರಲ್ಲಿ ಆರಂಭಿಸಿದ “ಶಿವಾನುಭವ ಮಾಸಪತ್ರಿಕೆ” ಮತ್ತು 1927 ರಲ್ಲಿ “ನವ ಕರ್ನಾಟಕ” ಎಂಬ ವಾರಪತ್ರಿಕೆ ಆರಂಭಿಸಿದರು.
1928 ರಲ್ಲಿ ಬಳ್ಳಾರಿಯಲ್ಲಿ ನಡೆದ ಅಖಿಲ ಕರ್ನಾಟಕ ಏಕೀಕರಣದ ಸಮ್ಮೇಳನದ ಅಧ್ಯಕ್ಷರಾದರು. ಭಾರತ ಸರ್ಕಾರ “ರಾವ್ ಬಹದ್ದೂರ್” ಪದವಿಯನ್ನು ನೀಡಿ ಗೌರವಿಸಿತು. 1956 ರಲ್ಲಿ ಡಿ ಲಿಟ್ ಪದವಿಯನ್ನು ನೀಡಿದರು.
ಇಂತಹ ಅಮೋಘ ವ್ಯಕ್ತಿತ್ವದ ಡಾ. ಫ, ಗು ಹಳಕಟ್ಟಿ ಅವರು ಬಡತನದಲ್ಲಿಯೇ ಹುಟ್ಟಿ, ಬಡತನದಲ್ಲಿಯೇ ಬೆಳೆದು, ಬಾಡಿಗೆ ಮನೆಯಲ್ಲಿ ಸೈಕಲ್ ತುಳಿದು ಜೀವನ ಸಾಗಿಸಿ, ಬರಿಗೈ ಫಕೀರರಾಗಿ 1964 ನೇ ಜೂನ್ 29 ರಂದು ಲಿಂಗೈಕ್ಯರಾದರು.
ಡಾ. ಫ. ಗು. ಹಳಕಟ್ಟಿ ಅವರು ಸ್ಥಾಪಿಸಿದಂತಹ ಬಿ. ಎಲ್. ಡಿ. ಇ ಸಂಸ್ಥೆಯ ಈಗಿನ ಅಧ್ಯಕ್ಷರಾದ ಶ್ರೀ. ಎಂ ಬಿ ಪಾಟೀಲ್ ಅವರು ಹಳಕಟ್ಟಿ ಸ್ಮಾರಕ ಭವನವನ್ನ ನಿರ್ಮಿಸಿ “ವಚನ ಸಾಹಿತ್ಯ ಸಂಶೋಧನಾ ಕೇಂದ್ರ” ವನ್ನು ಪ್ರಾರಂಭಿಸಿದ್ದಾರೆ. ಡಾ. ಫ. ಗು. ಹಳಕಟ್ಟಿ ಅವರು ಜೀವಿತ ಅವಧಿಯಲ್ಲಿ ಸಂಗ್ರಹಿಸಿ, ಪ್ರಕಟಿಸಿದ ಎಲ್ಲ ಸಾಹಿತ್ಯವನ್ನ 15 ಸಮಗ್ರ ಸಂಪುಟಗಳಲ್ಲಿ, ಸುಮಾರು ಹತ್ತು ಸಾವಿರ ಪುಟಗಳಲ್ಲಿ ಹೊರತಂದಿದ್ದಾರೆ. ಅವರ ನೆನಪಿನಲ್ಲಿ ಹಳಕಟ್ಟಿ ಇಂಜಿನಿಯರಿಂಗ್ ಕಾಲೇಜನ್ನ ಸ್ಥಾಪಿಸಲಾಗಿದೆ. ಇಂತಹ ಧೀಮಂತ ವ್ಯಕ್ತಿತ್ವದ ಡಾ. ಫ. ಗು. ಹಳಕಟ್ಟಿ ಅವರ ಜನ್ಮದಿನವಾದ ಜುಲೈ 2 ನ್ನು ಸರ್ಕಾರವು “ವಚನ ಸಾಹಿತ್ಯ ಸಂರಕ್ಷಣಾ ದಿನ” ವಾಗಿ ಘೋಷಿಸುವ ಮೂಲಕ ಅವರಿಗೆ ಗೌರವವನ್ನು ಸಲ್ಲಿಸಿದೆ. ನಾವೆಲ್ಲರೂ ಕೂಡ ಅವರ ಸಂಘರ್ಷವನ್ನು, ಅವರ ತ್ಯಾಗವನ್ನು, ವಚನಗಳನ್ನು ಮತ್ತು ವಚನ ಸಾಹಿತ್ಯವನ್ನು ಮುಂದಿನ ಜನಾಂಗಕ್ಕೆ ಕೊಂಡೊಯ್ಯುವ ಮೂಲಕ ಗೌರವವನ್ನು ಸಲ್ಲಿಸೋಣ.
ಶ್ರೀಮತಿ.ಅನುಪಮ ಪಾಟೀಲ,
ನಂ. 10, ದೇಸಾಯಿ ಪಾರ್ಕ್,
ಕುಸೂಗಲ್ ರಸ್ತೆ, ಕೇಶ್ವಾಪೂರ,
ಹುಬ್ಬಳ್ಳಿ – 580 023.
ಮೋ. ಸಂ. +91 9845810708.
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ ಸಂಚಾಲಕರನ್ನು ಸಂಪರ್ಕಿಸಬೇಕಾದ:
- ಮೋಬೈಲ್ ನಂ. 9741 357 132
- e-Mail ID: info@vachanamandara.in / admin@vachanamandara.in



Total views : 67028