![]()
ಸರ್ವಸಂಗವ ಪರಿತ್ಯಾಗವ ಮಾಡಿ,
ಅರಣ್ಯದಲ್ಲಿದ್ದರೆ ಮೃಗವೆಂಬರು.
ಊರಿಗೆ ಬಂದರೆ ಸಂಸಾರಿ ಎಂಬರು.
ಭೋಗಿಸಿದರೆ ಕಾಮಿ ಎಂಬರು,
ಹೆಣ್ಣ ಬಿಟ್ಟರೆ ಹೊನ್ನಿಲ್ಲ ಎಂಬರು,
ಹೊನ್ನ ಬಿಟ್ಟರೆ ಮಣ್ಣಿಲ್ಲ ಎಂಬರು,
ಪುಣ್ಯವ ಬಿಟ್ಟರೆ ಪೂರ್ವದ ಕರ್ಮಿ ಎಂಬರು,
ಮಾತನಾಡದಿದ್ದರೆ ಮೂಗನೆಂಬರು,
ಸಹಜವ ನುಡಿದರೆ ಅಂಜುವನೆಂಬರು,
ಇದು ಕಾರಣ ನಿರಾಳಪ್ರಿಯ ಸೊಡ್ಡಳಯ್ಯ
ನಿಮ್ಮ ನನ್ನ ಮಚ್ಚು ಜಗಕ್ಕೊಂದಚ್ಚು.
(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-630/ವಚನ ಸಂಖ್ಯೆ-1352)
“ಸೊಡ್ಡಳ” ಎನ್ನುವ ಶಬ್ದವು ವಚನಕಾರರನ್ನು ಕುರಿತಂತೆ ಬಹಳಷ್ಟು ಗೊಂದಲವನ್ನುಂಟು ಮಾಡುತ್ತದೆ. “ಸೊಡ್ಡಳ” ಎನ್ನುವ ಶಬ್ದವು ಬಸವಣ್ಣನವರ ಸಮಕಾಲೀನ ಶರಣ ಸೊಡ್ಡಳ ಬಾಚರಸರ ಜೊತೆಗೆ “ಸಂಕೀರ್ಣ ಸಮಗ್ರ ವಚನ ಸಂಪುಟದ-4” ರ 9ನೇ ಸಂಪುಟದಲ್ಲಿ ಅಜ್ಞಾತ ಶರಣರೆಂದು ಗುರುತಿಸಿದ ಇಬ್ಬರು ಜನರ ಜೊತೆಗೆ ತಳುಕು ಹಾಕಿಕೊಂಡಿರುವದನ್ನು ಗಮನಿಸಬಹುದು.
- ಸೊಡ್ಡಳ ಬಾಚರಸ – ವಚನಾಂಕಿತ: ಸೊಡ್ಡಳ
- -?- ಏಕಾಂತ ವೀರಸೊಡ್ಡಳ – ವಚನಾಂಕಿತ: ಏಕಾಂತ ವೀರಸೊಡ್ಡಳ.
- -?- ನಿರಾಳಪ್ರಿಯ ಸೊಡ್ಡಳಯ್ಯ – ವಚನಾಂಕಿತ: ನಿರಾಳಪ್ರಿಯ ಸೊಡ್ಡಳಯ್ಯ.
ಶರಣ ಸೊಡ್ಡಳ ಬಾಚರಸರು ಬಸವಣ್ಣನವರ ಸಮಕಾಲೀನರಾಗಿದ್ದು ಬಿಜ್ಜಳನ ಅರಮನೆಯಲ್ಲಿರುವ ಧಾನ್ಯಗಳ ಉಗ್ರಾಣದಲ್ಲಿ ಧಾನ್ಯಗಳನ್ನು ವಿತರಿಸುವ ಕರಣಿಕರಾಗಿ ಕಾಯಕ ಕೈಗೊಂಡಿದ್ದರು ಎಂದು ತಿಳಿದು ಬರುತ್ತದೆ. ಇವರು “ಸೊಡ್ಡಳ” ವಚನಾಂಕಿತದಿಂದ ರಚಿಸಿರುವ 108ವಚನಗಳು ಇಲ್ಲಿಯವರೆಗೆ ಲಭ್ಯವಾಗಿವೆ. ಉಳಿದ ಇಬ್ಬರು ವಚನಕಾರರ ಕುರಿತು ಯಾವುದೇ ಮಾಹಿತಿ ಇಲ್ಲಿಯವರೆಗೆ ಲಭ್ಯವಾಗಿಲ್ಲ.
“-?- ಏಕಾಂತ ವೀರಸೊಡ್ಡಳ” – ವಚನಾಂಕಿತ: ಏಕಾಂತ ವೀರಸೊಡ್ಡಳ. ಲಭ್ಯವಾಗಿರುವ ವಚನಗಳು 2.
ಲೋಕಾಂತವಳಿದು ಏಕಾಂತ ಉಳಿದಲ್ಲಿ
ಏಕೈಕಮೂರ್ತಿಯ ಸಂಗ ಸಮನಿಸಿತ್ತೆನಗೆ
ಎನ್ನ ನುಡಿ ಆತನ ಕಿವಿಗೆ ಇನಿದಾಯಿತ್ತು.
ಆತನ ನುಡಿ ಎನ್ನ ಕಿವಿಗೆ ಇನಿದಾಯಿತ್ತು
ಇಬ್ಬರ ನುಡಿಯೂ ಒಂದೇಯಾಗಿ ನಿಶಬ್ದವೇಧಿಸಿತ್ತು
ಈ ಸುಖದ ಸೋಂಕಿನ ಪುಣ್ಯದ ಫಲದಿಂದ
ಅನುಪಮಚರಿತ್ರ ಪ್ರಭುದೇವರ ನಿಲವ ಕಂಡು,
ನಾನು ಧನ್ಯನಾದೆನು ಕಾಣಾ, ಏಕಾಂತ ವೀರಸೊಡ್ಡಳಾ.
(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-527/ವಚನ ಸಂಖ್ಯೆ-1232)
ಬಂದ ಬಟ್ಟೆಯ ಹೊದ್ದಾತ ಲಿಂಗೈಕ್ಯನು
ಹಿಂದು ಮುಂದರತು, ಸಂದೇಹವಿಲ್ಲದಾತ ಲಿಂಗೈಕ್ಯನು
ಶ್ರೀಗುರು ಏಕಾಂತ ವೀರಸೊಡ್ಡಳನಲ್ಲಿ
ತನ್ನ ತಾ ಮರೆದಾತ ಲಿಂಗೈಕ್ಯನು.
(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-527/ವಚನ ಸಂಖ್ಯೆ-1233)
-?- ನಿರಾಳಪ್ರಿಯ ಸೊಡ್ಡಳಯ್ಯ – ವಚನಾಂಕಿತ: ನಿರಾಳಪ್ರಿಯ ಸೊಡ್ಡಳಯ್ಯ. ಲಭ್ಯವಾಗಿರುವ ವಚನಗಳು 1.
ಸರ್ವಸಂಗವ ಪರಿತ್ಯಾಗವ ಮಾಡಿ,
ಅರಣ್ಯದಲ್ಲಿದ್ದರೆ ಮೃಗವೆಂಬರು.
ಊರಿಗೆ ಬಂದರೆ ಸಂಸಾರಿ ಎಂಬರು.
ಭೋಗಿಸಿದರೆ ಕಾಮಿ ಎಂಬರು,
ಹೆಣ್ಣ ಬಿಟ್ಟರೆ ಹೊನ್ನಿಲ್ಲ ಎಂಬರು,
ಹೊನ್ನ ಬಿಟ್ಟರೆ ಮಣ್ಣಿಲ್ಲ ಎಂಬರು,
ಪುಣ್ಯವ ಬಿಟ್ಟರೆ ಪೂರ್ವದ ಕರ್ಮಿ ಎಂಬರು,
ಮಾತನಾಡದಿದ್ದರೆ ಮೂಗನೆಂಬರು,
ಸಹಜವ ನುಡಿದರೆ ಅಂಜುವನೆಂಬರು,
ಇದು ಕಾರಣ ನಿರಾಳಪ್ರಿಯ ಸೊಡ್ಡಳಯ್ಯ
ನಿಮ್ಮ ನನ್ನ ಮಚ್ಚು ಜಗಕ್ಕೊಂದಚ್ಚು.
(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-630/ವಚನ ಸಂಖ್ಯೆ-1352)
ವಚನ ಚಳುವಳಿ ಕನ್ನಡ ನಾಡಿನ ಮಹತ್ವದ ಸಮಾಜೋ-ಧಾರ್ಮಿಕ ಚಳುವಳಿಯಾಗಿದೆ. ಈ ಚಳುವಳಿಯಲ್ಲಿ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಮುಂತಾದ ಪ್ರಸಿದ್ಧ ಶರಣರ ಜೊತೆಗೆ ಅನೇಕ ಅಜ್ಞಾತ ಶರಣರೂ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಇವರ ಬಗ್ಗೆ ಹೆಚ್ಚಿನ ಐತಿಹಾಸಿಕ ಮಾಹಿತಿ ದೊರೆಯದಿದ್ದರೂ, ಅವರ ವಚನಗಳು ಮತ್ತು ಕೆಲವು ಕಾವ್ಯ, ಪುರಾಣಗಳಲ್ಲಿ ಸಿಗುವ ಉಲ್ಲೇಖಗಳ ಮೂಲಕ ಅವರ ಚಿಂತನೆಗಳನ್ನು ತಿಳಿಯಬಹುದು.
ವಚನ ಚಳುವಳಿಯ ವಿಶೇಷತೆ ಎಂದರೆ ಸಾಮಾನ್ಯ ಜನರಿಗೂ ಸಾಹಿತ್ಯ ರಚಿಸುವ ಅವಕಾಶ ದೊರಕಿದ್ದು. ಅಜ್ಞಾತ ಶರಣರು ಸಹ ಜನಸಾಮಾನ್ಯರ ಆಡುಭಾಷೆಯಲ್ಲೇ ತಮ್ಮ ಅನುಭವ ಮತ್ತು ವಿಚಾರಗಳನ್ನು ವ್ಯಕ್ತಪಡಿಸಿದರು. ಹೀಗಾಗಿ ಅವರ ವಚನಗಳು ಕೇವಲ ಭಕ್ತಿಯ ಅಭಿವ್ಯಕ್ತಿಯಾಗಿರದೆ, ಸಮಾಜ ಸುಧಾರಣೆಯ ಸಂದೇಶಗಳಾಗಿವೆ. ಅಜ್ಞಾತ ಶರಣರು ವಚನ ಸಾಹಿತ್ಯದ ಮೌನ ಶಿಲ್ಪಿಗಳಿದ್ದಂತೆ. ಅವರ ವಚನಗಳಲ್ಲಿ ಸಮಾನತೆ, ಮಾನವೀಯತೆ, ಕಾಯಕ, ದಾಸೋಹ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳು ಸ್ಪಷ್ಟವಾಗಿ ವ್ಯಕ್ತವಾಗಿವೆ. ಕನ್ನಡ ಸಮಾಜದಲ್ಲಿ ಮಾನವತಾವಾದಿ ಚಿಂತನೆ ಬೆಳೆಯಲು ಅವರ ಕೊಡುಗೆ ಮಹತ್ವದ್ದಾಗಿದೆ.
ಬಸವಪೂರ್ವ ಕಾಲದಲ್ಲಿಯೇ ಕೆಂಬಾವಿ ಭೋಗಣ್ಣನವರಂತಹ ಶರಣರು ಜಾತಿ, ವರ್ಣ ಭೇದವನ್ನು ತಿರಸ್ಕರಿಸಿದ್ದಾರೆ. ಇಷ್ಟಲಿಂಗವನ್ನು ಧರಿಸಿದ ಎಲ್ಲರನ್ನೂ ಸಮಾನರೆಂದು ಗೌರವಿಸಿದ ಬಸವಣ್ಣನವರು ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದರು. ಹಾಗಾಗಿ ಇಂತಹ ಶರಣರ ಜೀವನ ಮತ್ತು ವಚನಗಳು ವಚನ ಚಳುವಳಿಯ ಸಾಮಾಜಿಕ ನೆಲೆಗಟ್ಟನ್ನು ರೂಪಿಸಲು ಸಹಾಯ ಮಾಡಿವೆ.
ಅಜ್ಞಾತ ಶರಣರಲ್ಲಿ ಒಬ್ಬರಾದ ಶರಣ ನಿರಾಳಪ್ರಿಯ ಸೊಡ್ಡಳಯ್ಯನವರು “ನಿರಾಳಪ್ರಿಯ ಸೊಡ್ಡಳʼ ವಚನಾಂಕಿತದಿಂದ ಬರೆದ 1 ವಚನ ಇಲ್ಲಿಯವರೆಗೆ ಲಭ್ಯವಾಗಿದೆ. ಪ್ರಸ್ತುತ ಈ ವಚನವನ್ನು ತಿಳಿಯುವುದಕ್ಕಿಂತ ಮೊದಲು ಒಂದು ಕಥೆ.
ಒಂದು ಊರಿನಲ್ಲಿ ಒಬ್ಬ ಸಾಧು ವಾಸಿಸುತ್ತಿದ್ದ. ಅವನು ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತಿದ್ದ. ಒಂದು ದಿನ “ಜನರ ಗದ್ದಲದಿಂದ ದೂರವಿದ್ದು ಧ್ಯಾನ ಮಾಡಬೇಕು” ಎಂದು ಕಾಡಿಗೆ ಹೋದ. ಊರಿನ ಜನರು “ನೋಡಿ, ನೋಡಿ, ಮನುಷ್ಯರ ಜೊತೆ ಬೆರೆಯೋಕೆ ಆಗದೆ ಕಾಡಿಗೆ ಓಡಿಹೋಗಿದ್ದಾನೆ. ಇವನಿಂದ ಸಮಾಜಕ್ಕೆ ಏನು ಪ್ರಯೋಜನವಿಲ್ಲ” ಎಂದು ಆಡಿಕೊಳ್ಳುತ್ತಾರೆ. ಕೆಲವು ವರ್ಷಗಳ ನಂತರ ಸಾಧು ಮತ್ತೆ ಊರಿಗೆ ಬಂದು ಜನರಿಗೆ ಧರ್ಮೋಪದೇಶ ಮಾಡೋಕೆ ಆರಂಭಿಸಿದ. ಆಗ ಅದೇ ಜನರು ಮತ್ತೆ ಮಾತಾಡಿಕೊಂಡರು. “ಅಯ್ಯೋ! ಕಾಡಿನಲ್ಲಿ ಇದ್ದಾಗ ಸಾಧುಗಳು ಎನ್ನುತ್ತಿದ್ದೆವು. ಈಗ ಊರಿಗೆ ಬಂದು ಹೆಸರು ಮಾಡಿಕೊಳ್ಳಲು ಬಂದಿದ್ದಾನೆ” ಅಂತ ಮಾತಾಡಿದರು. ಸಾಧು ಮಾತ್ರ ಸುಮ್ಮನೆ ನಗುತ್ತಿದ್ದ. ಹೀಗೆ ಒಂದು ದಿನ ಊರಿನ ಒಬ್ಬ ಯುವಕ ಕೇಳಿದ “ಸ್ವಾಮೀ, ನೀವು ಏನು ಮಾಡಿದರೂ ಜನರು ಟೀಕೆ ಮಾಡುತ್ತಾರೆ. ನಿಮಗೆ ಬೇಸರವಾಗುವುದಿಲ್ಲವೇ?” ಅಂತ. ಸಾಧು ಹತ್ತಿರದಲ್ಲಿದ್ದ ಕನ್ನಡಿಯನ್ನು ತೆಗೆದು ಯುವಕನ ಕೈಗೆ ಕೊಟ್ಟು ಹೇಳಿದ:
ಈ ಕನ್ನಡಿಯಲ್ಲಿ ನಿನ್ನ ಮುಖ ಕಾಣುತ್ತದೆ. ಆದರೆ ಕನ್ನಡಿಯ ಮುಂದೆ ನಿಂತ ಪ್ರತಿಯೊಬ್ಬನ ಮುಖ ಬೇರೆ ಬೇರೆನೆ. ಇದು ಕನ್ನಡಿಯ ತಪ್ಪಲ್ಲ, ನೋಡುವವರ ಮುಖವೇ ಬೇರೆ. ಹಾಗೆಯೇ ಜನರ ಮಾತುಗಳು ಅವರ ಮನಸ್ಸಿನ ಪ್ರತಿಬಿಂಬ. ನನ್ನ ಸತ್ಯವನ್ನು ಅದು ಬದಲಾಯಿಸಲಾರದು, ಹಾಗಾಗಿ ಜನರ ಅಭಿಪ್ರಾಯಗಳು ಬದಲಾಗುತ್ತಲೇ ಇರುತ್ತವೆ. ಸತ್ಯದ ಮಾರ್ಗದಲ್ಲಿ ನಡೆಯುವವನು ಹೊಗಳಿಕೆಯಿಂದ ಹಿಗ್ಗಬಾರದು, ಟೀಕೆಯಿಂದ ಕುಗ್ಗಬಾರದು. ಆತ್ಮಸಾಕ್ಷಿಯೇ ನಿಜವಾದ ಮಾರ್ಗದರ್ಶಿ”
ಎಂದನು.
ಇದೇ ಈ ವಚನದ ಕೇಂದ್ರ ವಿಚಾರ “ಲೋಕನಿಂದೆ”. ಸಮಾಜದಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಆದ ಅಭಿಪ್ರಾಯ ಇರುತ್ತದೆ. ಒಬ್ಬ ವ್ಯಕ್ತಿ ಯಾವ ನಿರ್ಧಾರ ತೆಗೆದುಕೊಂಡರೂ ಅದನ್ನು ಟೀಕಿಸುವವರು ಇದ್ದೇ ಇರುತ್ತಾರೆ. ಒಬ್ಬನು ಕಾಡಿನಲ್ಲಿ ಇದ್ದರೆ ತಪ್ಪು.ಊರಿನಲ್ಲಿ ಇದ್ದರೂ ತಪ್ಪು. ಭೋಗ ಮಾಡಿದರೆ ತಪ್ಪು. ಭೋಗ ತ್ಯಜಿಸಿದರೂ ತಪ್ಪು. ಮಾತನಾಡಿದರೆ ತಪ್ಪು.ಮಾತನಾಡದಿದ್ದರೂ ತಪ್ಪು. ಇದರಿಂದ ಜನರ ಅಭಿಪ್ರಾಯಗಳು ಎಷ್ಟು ವಿರೋಧಾಭಾಸದಿಂದ ಕೂಡಿವೆ ಎಂಬುದು ಗೊತ್ತಾಗುತ್ತದೆ. ಇದೊಂಥರ ವ್ಯಕ್ತಿಯ ಸ್ವಾತಂತ್ರ್ಯಕ್ಕೆ ಸವಾಲು.
ಸಮಾಜದ ಅಭಿಪ್ರಾಯಗಳ ಭಯದಿಂದ ಅನೇಕರು ತಮ್ಮ ನಿಜವಾದ ಆಸಕ್ತಿ ಮತ್ತು ಕನಸುಗಳನ್ನು ಬಿಟ್ಟುಬಿಡುತ್ತಾರೆ. “ಜನ ಏನು ಹೇಳುತ್ತಾರೆ?” ಎಂಬ ಪ್ರಶ್ನೆ ಅನೇಕ ಪ್ರತಿಭೆಗಳನ್ನು ನಾಶ ಮಾಡಿದೆ.
ಸಮಾಜಕ್ಕೆ ಇತರರನ್ನು ಅಳೆಯುವ, ನಿರ್ಣಯಿಸುವ ಸ್ವಭಾವವಿದೆ. ಒಬ್ಬ ವ್ಯಕ್ತಿಯ ಜೀವನದ ಸಂಪೂರ್ಣ ಸತ್ಯ ತಿಳಿಯದಿದ್ದರೂ ಅವನ ಬಗ್ಗೆ ತಕ್ಷಣ ತೀರ್ಪು ಕೊಡುತ್ತದೆ. ಜನರು ತಮ್ಮ ಅಭಿಪ್ರಾಯವನ್ನೇ ಸತ್ಯವೆಂದು ಭಾವಿಸುತ್ತಾರೆ. ಇದನ್ನೆ ಮನೋವೈಜ್ಞಾನಿಕ ಪ್ರವೃತಿ ಎನ್ನಬಹುದು. ಸಮಾಜವು ಸಾಮಾನ್ಯವಾಗಿ ತನ್ನಂತೆ ತನ್ನ ರೂಢಿಯಂತೆ ಬದುಕುವವರನ್ನು ಒಪ್ಪಿಕೊಳ್ಳುತ್ತದೆ. ವಿಭಿನ್ನವಾಗಿ ಬದುಕುವವರನ್ನು ಅನುಮಾನದಿಂದ ನೋಡುತ್ತದೆ. ಮದುವೆಯಾಗದಿದ್ದರೆ ಪ್ರಶ್ನೆ. ಮದುವೆಯಾದರೆ ಮತ್ತೊಂದು ಪ್ರಶ್ನೆ. ಮಕ್ಕಳಿಲ್ಲದಿದ್ದರೆ ಟೀಕೆ. ಹೆಚ್ಚು ಮಕ್ಕಳಿದ್ದರೂ ಟೀಕೆ. ಅಂದರೆ ವ್ಯಕ್ತಿಯ ಆಯ್ಕೆಗಿಂತ ಸಮಾಜದ ನಿರೀಕ್ಷೆಯೇ ಮುಖ್ಯವಾಗಿಬಿಡುತ್ತದೆ. ಒಮ್ಮೊಮ್ಮೆ ಜನರು ಸ್ವತಃ ಯೋಚಿಸುವುದಕ್ಕಿಂತ ಗುಂಪಿನ ಅಭಿಪ್ರಾಯವನ್ನು ಅನುಸರಿಸುತ್ತಾರೆ. ಒಬ್ಬನು ಯಾರನ್ನಾದರೂ ಟೀಕಿಸಿದರೆ, ಉಳಿದವರೂ ಅದೇ ಟೀಕೆಯನ್ನು ಪುನರಾವರ್ತಿಸುತ್ತಾರೆ. ಈ ಕಾರಣದಿಂದಲೇ ಅನೇಕ ಮಹನೀಯರು ತಮ್ಮ ಕಾಲದಲ್ಲಿ ಟೀಕೆಗೊಳಗಾಗಿ ಅವಮಾನದಿಂದ ಕುಗ್ಗಿದ್ದಾರೆ.
ಶರಣ ನಿರಾಳಪ್ರಿಯ ಸೊಡ್ಡಳಯ್ಯನವರು ಈ ಮನಸ್ಥಿತಿಯಿಂದ ಹೊರಬರುವಂತೆ ಈ ವಚನದಲ್ಲಿ ತಿಳಿಸಿದ್ದಾರೆ. ಈ ವಚನವು ಕೇವಲ ಧಾರ್ಮಿಕ ಸಂದೇಶವಲ್ಲ. ಇದು ಆಳವಾದ ಸಾಮಾಜಿಕ ಮತ್ತು ಮಾನಸಿಕ ವಿಶ್ಲೇಷಣೆಯಾಗಿದೆ. ಶರಣ ನಿರಾಳಪ್ರಿಯ ಸೊಡ್ಡಳಯ್ಯನವರು ಮಾನವನ ಮನಸ್ಸಿನ ಒಂದು ಶಾಶ್ವತ ಸತ್ಯವನ್ನು ಹಿಡಿದಿಟ್ಟಿದ್ದಾರೆ. ಈ ವಚನದಲ್ಲಿ ವ್ಯಂಗ್ಯವೂ ಇದೆ. ಜನರ ದ್ವಂದ್ವ ಮನೋಭಾವವನ್ನು ಅವರು ಕನ್ನಡಿಯಂತೆ ತೋರಿಸಿದ್ದಾರೆ. ಶರಣರ ಪ್ರಕಾರ, ಮನುಷ್ಯನು ಜನರ ಮೆಚ್ಚುಗೆಗಾಗಿ ಬದುಕಬಾರದು. ತನ್ನ ಆತ್ಮಸಾಕ್ಷಿಗೆ ಸರಿ ಎನಿಸುವ ಮಾರ್ಗದಲ್ಲಿ ನಡೆಯಬೇಕು. ಲೋಕದ ಮೆಚ್ಚುಗೆ ಕ್ಷಣಿಕ, ಆತ್ಮತೃಪ್ತಿ ಶಾಶ್ವತ.
ಈ ವಚನದ ಒಂದೊಂದು ಸಾಲಿನ ವಿಶ್ಲೇಷಣೆಯನ್ನು ಮಾಡೋಣ:
“ಸರ್ವಸಂಗ ಪರಿತ್ಯಾಗವ ಮಾಡಿ” ಅಂದರೆ ಎಲ್ಲ ಆಸೆ, ಆಕಾಂಕ್ಷೆಗಳನ್ನು ತ್ಯಜಿಸಿದರೂ ಕೂಡ ಅರಣ್ಯದಲ್ಲಿದ್ದರೆ ಮೃಗವೆಂಬರು, ಕಾಡಿನಲ್ಲಿ ಇದ್ದರೆ ಆತ ಮನುಷ್ಯನಲ್ಲ, ಮೃಗದಂತೆ ಬದುಕುತ್ತಿದ್ದಾನೆ ಎನ್ನುತ್ತಾರೆ. “ಊರಿಗೆ ಬಂದರೆ ಸಂಸಾರಿ ಎಂಬರು ಅಂದರೆ ಜನರ ನಡುವೆ ಇದ್ದರೆ ಇವನು ಸಂಸಾರಸ್ಥ ಎನ್ನುತ್ತಾರೆ. “ಭೋಗಿಸಿದರೆ ಕಾಮಿ ಎಂಬರು ಅಂದರೆ ಜೀವನದ ಸುಖಗಳನ್ನು ಅನುಭವಿಸಿದರೆ ಇವ ಕಾಮುಕ ಎನ್ನುತ್ತಾರೆ. “ಹೆಣ್ಣ ಬಿಟ್ಟರೆ ಹೊನ್ನಿಲ್ಲ ಎಂಬರು” ಅಂದರೆ ಸ್ತ್ರೀಸಂಗವನ್ನು ತ್ಯಜಿಸಿದರೆ ಹಣದ ಮೋಹ ಎಂದು ಟೀಕಿಸುತ್ತಾರೆ. ಇಲ್ಲಿ ಹೆಣ್ಣು ಮತ್ತು ಹೊನ್ನು ಕೇವಲ ಸ್ತ್ರೀ ಮತ್ತು ಹಣವನ್ನು ಮಾತ್ರ ಸೂಚಿಸುವುದಿಲ್ಲ. ಅವು ಭೋಗ, ಆಸೆ, ಬಂಧನ ಮತ್ತು ಲೋಕದ ಮೋಹಗಳ ಸಂಕೇತಗಳು. ಸಾಧಕನು ಒಂದು ಮೋಹವನ್ನು ಬಿಟ್ಟರೆ, ಜನರು ಅವನಿಗೆ ಇನ್ನೊಂದು ಮೋಹದಿಂದ ಆರೋಪಿಸುತ್ತಾರೆ. “ಹೊನ್ನ ಬಿಟ್ಟರೆ ಮಣ್ಣಿಲ್ಲ” ಎಂಬರು ಅಂದರೆ ಹಣ, ಸಂಪತ್ತನ್ನು ಬಿಟ್ಟರೆ ಬದುಕಿನ ಬಗ್ಗೆ ಒಂದು ಸ್ವಲ್ಪವೂ ಅರಿವಿಲ್ಲಎನ್ನುತ್ತಾರೆ.
“ಪುಣ್ಯವ ಬಿಟ್ಟರೆ ಪೂರ್ವದ ಕರ್ಮಿ ಎಂಬರು” ಅಂದರೆ ಪುಣ್ಯ, ಪಾಪಗಳ ಲೆಕ್ಕವನ್ನೂ ಮೀರಿ ಬದುಕಿದರೆ ಹಿಂದೆ ಮಾಡಿದ ಕರ್ಮ ಕೈಹಿಡಿದಿದೆ ಎನ್ನುತ್ತಾರೆ. “ಮಾತನಾಡದಿದ್ದರೆ ಮೂಗನೆಂಬರು” ಅಂದರೆ ಮೌನವಾಗಿದ್ದರೆ ಮಾತೇ ಬಾರದವನು ಎನ್ನುತ್ತಾರೆ. “ಸಹಜವ ನುಡಿದರೆ ಅಂಜುವನೆಂಬರು” ಅಂದರೆ ನೇರವಾಗಿ ಸತ್ಯವನ್ನು ಹೇಳಿದರೆ ಭಯಪಡುವವನು ಇವನು ಅಂಜುಬುರುಕ, ದುರ್ಬಲನು ಎನ್ನುತ್ತಾರೆ. “ಇದು ಕಾರಣ ನಿರಾಳಪ್ರಿಯ ಸೊಡ್ಡಳಯ್ಯ ನಿಮ್ಮ ನನ್ನ ಮಚ್ಚು ಜಗಕ್ಕೊಂದಚ್ಚು” ಅಂದರೆ ನಮ್ಮ ಅಂತರಂಗದ ಸತ್ಯ ಮತ್ತು ದೇವರ ಸಾಕ್ಷಿಯೇ ಮುಖ್ಯ. ಜಗತ್ತಿನ ಮೆಚ್ಚುಗೆ ಅಥವಾ ಟೀಕೆ ಶಾಶ್ವತವಲ್ಲ. ಲೋಕದ ಅಭಿಪ್ರಾಯಗಳ ಹಿಂದೆ ಓಡದೆ, ಸತ್ಯ, ಪ್ರಾಮಾಣಿಕತೆ ಮತ್ತು ಆತ್ಮಸಾಕ್ಷಿಯ ಮಾರ್ಗದಲ್ಲಿ ನಡೆಯುವುದೇ ನಿಜವಾದ ಜೀವನ ಎಂಬುದಾಗಿದೆ.
ಜನರು ಏನು ಮಾಡಿದರೂ ಟೀಕಿಸುತ್ತಾರೆ. ಆದ್ದರಿಂದ ಜನರ ಮೆಚ್ಚುಗೆ-ಟೀಕೆಗಳಿಗೆ ಅಂಟಿಕೊಳ್ಳದೆ, ತನ್ನ ಅಂತರಂಗದ ಸತ್ಯದಂತೆ ಬದುಕುವುದೇ ಶ್ರೇಷ್ಠ. ಜನರ ಮಾತುಗಳಿಗೆ ಅಂತ್ಯವೇ ಇಲ್ಲ. ಆದ್ದರಿಂದ ಮನುಷ್ಯನು ಲೋಕದ ಟೀಕೆ, ಪ್ರಶಂಸೆಗಳಿಗೆ ಅಂಟಿಕೊಳ್ಳದೆ ತನ್ನ ಧರ್ಮದಂತೆ ಬದುಕಬೇಕು ಎಂದು ಶರಣರು ಹೇಳುತ್ತಾರೆ.
12 ನೇ ಶತಮಾನದಲ್ಲಿ ಶರಣ ನಿರಾಳಪ್ರಿಯ ಸೊಡ್ಡಳಯ್ಯನವರು ಹೇಳಿದ ಈ ಸಂದೇಶ ಇಂದಿನ ಸಾಮಾಜಿಕ ಜಾಲತಾಣಗಳ ಯುಗದಲ್ಲಿಯೂ ಅಷ್ಟೇ ಸತ್ಯವಾಗಿದೆ. ಜನರ ಟೀಕೆಗಳನ್ನು ಮೀರಿ ತನ್ನ ಮೌಲ್ಯಗಳಂತೆ ಬದುಕುವವನ ಜೀವನವೇ ನಿಜವಾದ ಮುಕ್ತ ಜೀವನ ಮತ್ತು ಬದುಕಿನ ನಿರಾಳ ಸ್ಥಿತಿಯನ್ನು ಅನುಭವಿಸಬಹುದು ಎಂಬುದಾಗಿದೆ …
ಶ್ರೀಮತಿ. ಶಾಲಿನಿ ರುದ್ರಮುನಿ,
# 20, ರಾಜೀವನಗರ, ಎರಡನೇ ಹಂತ, ಎರಡನೇ ತಿರುವು,
ಪೋಲಿಸ್ ವಸತಿಗೃಹ ರಸ್ತೆ,
ವಿದ್ಯಾನಗರ,
ಹುಬ್ಬಳ್ಳಿ – 580031
ಮೊಬೈಲ್ ಸಂಖ್ಯೆ – 78921 69644
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ:
- ಮೋಬೈಲ್ ನಂ. 9741 357 132
- e-Mail ID: info@vachanamandara.in / admin@vachanamandara.in






Total views : 65581