ನೀರಲಕೇರಿ ಬಸವಲಿಂಗ ಶಿವಯೋಗಿಗಳು | ಡಾ. ಕೆ ಶಶಿಕಾಂತ, ಲಿಂಗಸೂಗೂರು.

Loading

ಕನ್ನಡವು ಭಾರತೀಯ ಸಂಸ್ಕೃತಿಯ ಭವ್ಯ ಪರಂಪರೆಯ ಅನೇಕ ವಿಧಗಳಿಗೆ ಮಾತೃಭೂಮಿಯಾಗಿದೆ. ಕಲೆ, ವಿಜ್ಞಾನ, ಸಾಹಿತ್ಯ, ಸಂಗೀತ, ಆಧ್ಯಾತ್ಮ, ಧರ್ಮ, ಸಂಸ್ಕೃತಿಯೇ ಮೊದಲಾದವುಗಳಿಗೆ ತಾಯಿ ಬೇರು ಈ ಕನ್ನಡವೇ ಆಗಿದೆ. ಇಂಥ ವಿವಿಧ ಪರಂಪರೆಯಲ್ಲಿ ವಿಶ್ವಕ್ಕೆ ಶ್ರೇಷ್ಠ ಎನಿಸಿದೆ. 12 ನೇ ಶತಮಾನದಲ್ಲಿ ಕಲ್ಯಾಣದಲ್ಲಿ ಆಗಿ ಹೋದ ಬಸವಾದಿ ಶರಣ ಶರಣೆಯರ  ಪ್ರಣೀತವಾದ ವಚನ ಸಾಹಿತ್ಯ ಮಿಗಿಲಾದುದಾಗಿದೆ. ಜಾಗತಿಕವಾದ ತತ್ವಜ್ಞಾನ ಮತ್ತು ಸಾಹಿತ್ಯ ಪರಂಪರೆಯಲ್ಲಿ ಈ ‘ವಚನ’ ಸಾಹಿತ್ಯವು ಬಹುಮುಖಿ ಕಾರಣವಾಗಿ ಕನ್ನಡದ ಅಸ್ಮಿತೆಯಾಗಿದೆ.

‘ವಚನ’ ಎಂದರೆ ಸಾಮಾನ್ಯ ಅರ್ಥದಲ್ಲಿ ‘ಮಾತು’, ‘ಪ್ರಮಾಣ’ ಎಂದರ್ಥ. ಆದರೆ ಇದನ್ನೊಂದು ‘ಸಾಹಿತ್ಯ’ ಮತ್ತು ‘ಸಿದ್ಧಾಂತ’ ರೂಪವಾಗಿ ಬಳಸಿದ ಶರಣರು ಇದನ್ನು ‘ಸೂಳ್ನುಡಿ’ ಎಂದರೆ ‘ಪವಿತ್ರವಾದ ಮಾತು’ ಎಂತಲೂ, ‘ಜ್ಯೋತಿರ್ಲಿಂಗ ‘ಎಂತಲೂ ಕರೆದಿದ್ದಾರೆ. ಅಷ್ಟೇ ಅಲ್ಲ, ಶರಣರು ನುಡಿದ ಈ ‘ವಚನ’ ಮನುಷ್ಯನ ಎಲ್ಲಾ ‘ಸೂತಕ’ಗಳನ್ನು ಮೀರಿದ್ದುದು ಎಂದು ಅಲ್ಲಮಪ್ರಭುಗಳು ಹೇಳುತ್ತಾರೆ.

ಇಂಥ ‘ವಚನ’ವು ಕಲ್ಯಾಣದ ಅನುಭವ ಮಂಟಪದಲ್ಲಿ ಅಲ್ಲಮ ಪ್ರಭುದೇವರ ನೇತೃತ್ವದಲ್ಲಿ ಬಸವಾದಿ ಶರಣ ಶರಣೆಯರಿಂದ ಮೈದಳೆದು, ಜಗತ್ತಿನ ಬೆರಗಾಗಿ ಎಂದೆಂದಿಗೂ ಈ ಜಗದಲ್ಲಿ ಉಳಿಯುವಂಥದ್ದಾಗಿದೆ. ಬದುಕಿನ ಎಲ್ಲಾ ಅನುಭವಗಳನ್ನು ‘ಸಿದ್ಧಾಂತ’ವಾಗಿ ನಿರೂಪಿಸಿದ ಈ ವಚನಗಳು, ‘ಭಾಷೆ’ ಮತ್ತು ‘ನಿರೂಪಣೆ’ಯ ದೃಷ್ಟಿಯಿಂದ ಸರಳ ಮತ್ತು ವಿಶೇಷ ಎನಿಸಿವೆ.

ಈ ವಚನಗಳು ನೋಟಕ್ಕೆ ಗದ್ಯವೆನಿಸಿದರೂ ಕೂಡ ಇವುಗಳಲ್ಲಿ ಬಹಳಷ್ಟು ಗೇಯತೆ ತುಂಬಿಕೊಂಡಿರುವುದನ್ನು ಕಾಣುತ್ತೇವೆ. ಅಲ್ಲದೇ ಕೆಲವಷ್ಟು ವಚನಗಳಂತೂ ರಾಗ-ತಾಳ ನಿರ್ದೇಶನದೊಂದಿಗೆ ಶುದ್ಧ ಹಾಡಿನ ರೂಪದಲ್ಲಿರುವುದನ್ನು ಕಾಣುತ್ತೇವೆ. ಹಿರಿಯರಾದ ಜೇಡರ ದಾಸಿಮಯ್ಯ, ಬಸವಾದಿ ಶರಣ ಶರಣೆಯರು ಆಗಾಗ ‘ಆಗಳಾಗಳಿನ ಸಂಗತಿ’ಗಳನ್ನು ಹಾಡಾಗಿಸಿ, ಕೈಯಲ್ಲಿ ದಂಡಿಗೆ, ವೀಣೆ ಮೊದಲಾದ ವಾದ್ಯಗಳನ್ನು ಹಿಡಿದು ತಮ್ಮ ರಚನೆಗಳನ್ನು ಹಾಡಿನ ರೂಪವಾಗಿ ಹಾಡುತ್ತಿದ್ದ ಬಗ್ಗೆ ತಿಳಿಯುತ್ತದೆ. ಹಾಗಾಗಿ ಶರಣರು ಗದ್ಯ ರೂಪದ ‘ವಚನ’ಗಳನ್ನು ರಚಿಸಿದಂತೆ, ಹಾಡಿನ ರೂಪದ ‘ಸ್ವರ ವಚನ’ಗಳನ್ನು ರಚಿಸಿದರೆಂಬುದಾಗಿ ತಿಳಿದು ಬರುತ್ತದೆ. ಆದರೆ ಇವರ ‘ವಚನ’ಗಳಲ್ಲಿನ ಸರಳತೆ, ಸ್ಪಷ್ಟತೆಗಳು ಅವರವೇ ಆದ ‘ಸ್ವರ ವಚನ’ಗಳಲ್ಲಿ ಕಾಣಲಾರದ್ದರಿಂದಾಗಿ ಶರಣರ ‘ವಚನ’ಗಳಷ್ಟು ‘ಸ್ವರ ವಚನಗಳು’ ಜನಪ್ರಿಯವಾಗಲಿಲ್ಲವೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ.

ಭಕ್ತಿ, ಆಧ್ಯಾತ್ಮಗಳ ನಿವೇದನೆ, ಅಂತರಂಗದ ಅನಾವರಣ, ಸಾಮಾಜಿಕ ಬದುಕಿನ ನಿರೂಪಣೆಯಂಥ ವಿಷಯಗಳ ಪರಿಣಾಮಕಾರಿಯಾದ ಪ್ರಕಟಣೆಗೆ ಸಂಗೀತಾತ್ಮಕವಾದ ಗೇಯ ಸಾಹಿತ್ಯ ಬಹು ಪರಿಣಾಮಕಾರಿಯಾದುದಾಗಿದೆ. ಹಾಗಾಗಿ ನಮ್ಮ ಶರಣರು ಇದನ್ನು ಅಳವಡಿಸಿಕೊಂಡಿದ್ದರು. ಆದರೆ ಅವರ ಈ ರಚನಾ ಶೈಲಿ ಜನಪ್ರಿಯವಾಗದೇ ಇದ್ದಾಗ, ಮುಂದೆ ನಿಜಗುಣ ಶಿವಯೋಗಿಗಳವರು ಈ ‘ಗೇಯ’ ಅಂದರೆ ಹಾಡಿನ ರೂಪವನ್ನು ಬಹು ಪರಿಣಾಮಕಾರಿಯಾಗಿ ಅಳವಡಿಸಿಕೊಂಡು ‘ಅನುಭಾವ ಸಾಹಿತ್ಯ’ ಎಂಬ ಹೆಸರಿನಿಂದ “ಕೈವಲ್ಯ ಪದ್ಧತಿ” ಎಂಬ ಹೆಸರಿನ ಕೃತಿಯಲ್ಲಿ ‘ಐದು ಸ್ಥಲ’ಗಳಲ್ಲಿ ನೂರಾರು ಹಾಡುಗಳನ್ನು ರಾಗ -ತಾಳಗಳ ನಿರ್ದೇಶನದೊಂದಿಗೆ ಸಂಯೋಜಿಸಿ ರಚಿಸಿದರು. ಇದು ಅತ್ಯಂತ ಜನಪ್ರಿಯವಾಯಿತು. ಇವರ ಬಳಿವಿಡಿದೇ ಸರ್ಪಭೂಷಣ ಶಿವಯೋಗಿಗಳವರು “ಕೈವಲ್ಯ ದರ್ಪಣ”, ಬಾಲಲೀಲಾ  ಮಹಾಂತ ಶಿವಯೋಗಿಗಳು “ಕೈವಲ್ಯ ನವನೀತ” ಎಂಬ ಹೆಸರುಗಳನ್ನು ನೀಡಿ ‘ಕೈವಲ್ಯ’ ಅಂದರೆ ‘ಮೋಕ್ಷ’ ಸಾಧನೆಯೇ ಈ ಹಾಡುಗಳ ‘ಪರಮ ಗಮ್ಯ’ ಎಂಬ ಉದ್ದೇಶದೊಂದಿಗೆ ನಿಜಗುಣ ಶಿವಯೋಗಿಗಳವರ ‘ಅನುಭಾವ ಸಾಹಿತ್ಯ’ ಪರಂಪರೆಯನ್ನು ಸಮರ್ಥವಾಗಿ ಮುಂದುವರಿಸಿದರು. ಅಂದರೆ ‘ಸ್ವರ ವಚನ’ವೆಂದು ಆರಂಭಿಸಿದ 12 ನೇ ಶತಮಾನದ ಬಸವಾದಿ ಶರಣ ಶರಣೆಯರು, ‘ಅನುಭಾವ ಸಾಹಿತ್ಯ’ದೊಂದಿಗೆ ಹೊಸ ಮೆರಗು ತುಂಬಿ ಪರಿಪುಷ್ಠಗೊಳಿಸಿ ಮರು ರಚಿಸಿದ 16 ನೇ ಶತಮಾನದ ನಿಜಗುಣ ಶಿವಯೋಗಗಳವರ ‘ಕೈವಲ್ಯ ಸಾಹಿತ್ಯ’ ಪರಂಪರೆಯ ಎರಡೂ ಕಾಲ ಘಟ್ಟದವರು ಪರಿಪೂರ್ಣವಾಗಿ ಕಲ್ಯಾಣದ ಶರಣರ ಪರಂಪರೆಯವರೇ ಆಗಿದ್ದಾರೆ.

ಹೀಗೆ 12 ನೇ ಶತಮಾನದಲ್ಲಿ “ಸ್ವರ ವಚನ” ಹೆಸರಿನಿಂದ ಆರಂಭಗೊಂಡ ಈ ಸಾಹಿತ್ಯ ಪರಂಪರೆ, ಮುಂದೆ 1617 ನೇ ಶತಮಾನದಲ್ಲಿ ಶರಣ ಪರಂಪರೆಯವರೇ ಆದ ನಿಜಗುಣ ಶಿವಯೋಗಿಗಳವರಿಂದ ‘ಅನುಭಾವ ಸಾಹಿತ್ಯ’ ಎಂಬ ಹೆಸರಿನಿಂದ ಪುನರಾರಂಭಗೊಂಡು ಬಹುಜನಪ್ರಿಯತೆಯನ್ನು ಪಡೆದುಕೊಂಡಿತು. ಈ ಎರಡೂ ಕಾಲಘಟ್ಟದಲ್ಲಿನ ಇದರ ಕರ್ತೃಗಳನ್ನು ನಮ್ಮ ವಿದ್ವಾಂಸರು “ಶಿಷ್ಟ ಪರಂಪರೆ”ಯವರೆಂದು ಗುರುತಿಸುತ್ತಾರೆ. ಮತ್ತೆ ಮುಂದೆ ಇದು ಶರಣ ಪರಂಪರೆಯವರಿಗಷ್ಟೇ ಸೀಮಿತವಾಗದೆ, 1819 ನೇ ಶತಮಾನದಿಂದ ಬೇರೆ ಬೇರೆ ಧರ್ಮ ಮತ್ತು ಪಂಥಗಳವರು, ಅವಧೂತ ಸಂಪ್ರದಾಯದವರು ಇದರ ರಚನೆಯಲ್ಲಿ ತೊಡಗಿ ಇದನ್ನು “ತತ್ವಪದ ಸಾಹಿತ್ಯ” ಎಂಬ ಹೆಸರಿನಿಂದ ಬಹು ಜನಪ್ರಿಯಗೊಳಿಸಿದರು. ನಮ್ಮ ವಿದ್ವಾಂಸರು 1819 ನೇ ಶತಮಾನದಿಂದ “ತತ್ವಪದ ಸಾಹಿತ್ಯ” ಎಂಬ ಹೆಸರಿನಿಂದ ಈ ಪರಂಪರೆಯನ್ನು ಮುಂದುವರಿಸಿದವರನ್ನು ‘ಜನಪದ ಪರಂಪರೆ’ಯವರೆಂದು ಗುರುತಿಸುತ್ತಾ, ಈ ಕಾಲದಲ್ಲಿ ಇದು ಅತ್ಯಂತ ವಿಫುಲವಾಗಿ ರಚನೆಗೊಂಡದ್ದರಿಂದ ಈ ಕಾಲಘಟ್ಟವನ್ನು ಈ ಸಾಹಿತ್ಯ ಪರಂಪರೆಯ “ಸುವರ್ಣ ಯುಗ “ವೆಂದು ಕರೆಯುತ್ತಾರೆ. ಈ ಅವಧಿಯಲ್ಲಿ ಕಡಕೋಳ ಮಡಿವಾಳಪ್ಪ, ಕೂಡಲೂರು ಬಸವಲಿಂಗಪ್ಪ, ಶಿಶುನಾಳ ಶರೀಫರು, ಖೈನೂರ ಕೃಷ್ಣಪ್ಪ, ಘನಮಠ ಶಿವಯೋಗಿಗಳು, ಬಳಗಾನೂರು ಮರಿ ಸ್ವಾಮಿಗಳು, ವೆಂಕಟಾಪುರ ಖೇಮಣ್ಣ, ಗಬ್ಬೂರ ಮಾರ್ತಾಂಡಪ್ಪ, ದೇವದುರ್ಗದ ಚೆನ್ನಮಲ್ಲ ಕವಿ, ಆದಿ ಅಮಾತೆಪ್ಪ, ಹೇರೂರು ವಿರುಪನಗೌಡರು, ರಾಯಚೂರ ಜಾಹೀರಾಬಾದನ ತಿಪ್ಪಣ್ಣ ತಾತ, ಹೊಸೂರ ತಿಪ್ಪಣ್ಣ ತಾತ, ಅರೋಲಿ ಬಿಜಲಿ ವಸ್ತಾದಿ, ರಾಯಚೂರಿನ ಹನುಮವ್ವ (ಹನುಮಾವಧೂತರು), ರಾಯಚೂರಿನ ಯರಿಮಾರೆಪ್ಪ, ಅಂಕಲಿಮಠದ ನಿರುಪಾಧೀಶ್ವರರು ಮತ್ತು ಸೂಗೂರೇಶ್ವರರೇ ಮುಂತಾಗಿ ನೂರಾರು ಜನ ‘ತತ್ವಪದಕಾರರು’ ಈ ಅವಧಿಯಲ್ಲಿ ಸೇರುತ್ತಾರೆ.

ಈ ಕಾಲ ಘಟ್ಟದ ತತ್ವಪದಕಾರರು ನಿಜಗುಣ ಶಿವಯೋಗಿಗಳವರು ಮತ್ತು ಸರ್ಪಭೂಷಣರಂತೆ ತಮ್ಮ ಈ ಹಾಡುಗಳ ಸಂಕಲನಕ್ಕೆ ಶೀರ್ಷಿಕೆಯನ್ನಾಗಲೀ, ರಾಗ- ತಾಳಗಳನ್ನಾಗಲಿ ಸೂಚಿಸಿಲ್ಲ. ಇವರೆಲ್ಲ ‘ಆಶು ಕವಿ’ಗಳಾಗಿ ಹಾಡಿದವರು. ಇವರು ಹಾಡಿದಂತೆಲ್ಲ ಅವುಗಳನ್ನು ಭಕ್ತ ಜನ ದೇವರ ಸನ್ನಿಧಾನದಲ್ಲಿ ಭಜನೆ ಮಾಡುವಾಗ ಹಾಡತೊಡಗಿದರು. ಹಾಗಾಗಿ “ಭಜನೆ ಹಾಡು”ಗಳೆಂದು ಕರೆಯಲಾಗುವ ಇವುಗಳನ್ನು  ತಮ್ಮ ನಾಲಿಗೆಯಲ್ಲಿ ಉಳಿಸಿಕೊಂಡ “ತೋಂಡಿ” ಸಂಪ್ರದಾಯದ ಜನರಿಂದ ಮುಂದೆ ವಿದ್ವಾಂಸರು, ಆಸಕ್ತರು ಅವುಗಳನ್ನು ಸಂಗ್ರಹಿಸಿ, ಕೆಲವೊಮ್ಮೆ ತಾವೇ ಆ ಕೃತಿಗಳಿಗೆ ಶೀರ್ಷಿಕೆಯನ್ನು ಕೊಟ್ಟು, ಇಲ್ಲವೇ ಆ ಕರ್ತೃಗಳ ಹೆಸರುಗಳಿಂದ ಅವುಗಳನ್ನು ಸಂಕಲಿಸಿದರು.

ಹೀಗೆ ‘ಜಾನಪದ ಪರಂಪರೆ’ಯಲ್ಲಿ ಗುರುತಿಸಿಕೊಂಡಿರುವ ‘ಅನುಭಾವಿ’ಗಳೂ, ‘ತತ್ವಪದಕಾರರು’ ಎಂದು ಕರೆಯಿಸಿಕೊಳ್ಳುವರಲ್ಲಿ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ನೀರಲಕೇರಿಯ ಸಾವಿರ ದೇವರಮಠ ಅಥವಾ ಪಂಚಾಕ್ಷರಮಠದ ಚರ ಪಟ್ಟಾಧ್ಯಕ್ಷರಾಗಿದ್ದ ಲಿಂಗೈಕ್ಯ ನೀರಲಕೇರಿ ಬಸವಲಿಂಗ ಶಿವಯೋಗಿಗಳೂ ಒಬ್ಬರು.

ಜೀವನ ವಿಚಾರ:
ನೀರಲಕೇರಿ ಬಸವಲಿಂಗ ಶಿವಯೋಗಿಗಳವರು ಈಗಿನ ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಗುಡೂರನವರು. ಅಲ್ಲಿನ ಬಡ ಕುಟುಂಬವಾದ ವೀರಶೈವ ಜಂಗಮ ವಂಶದವರಾದ ಶ್ರೀ ರಾಚಯ್ಯ ಹಾಗೂ ಶ್ರೀಮತಿ ಮಹದೇವಮ್ಮ ಎಂಬ ದಂಪತಿಗಳ ಮಗ. ಮೊದಲೇ ಕಿತ್ತು ತಿನ್ನುವ ಬಡತನ; ಬಹುಶಃ 19 ನೇ ಶತಮಾನದ ಆರಂಭಿಕ ದಶಕದ ಕಾಲ. ಭಾರಿ ಭಯಾನಕವೂ, ಜೀವ ವಿನಾಶಕಾರಕವೂ ಆದ ‘ಡೋವಿ ಬರ’ ಸಂಭವಿಸಿದಂತಹ ಸಂದರ್ಭ. ಇಂಥ ಭಯಂಕರ ಕ್ಷಾಮದಲ್ಲಿ ಮೊದಲೇ ಬಡತನದಲ್ಲಿ ಬಾಳುತ್ತಿದ್ದ ಈ ಕುಟುಂಬಕ್ಕೆ ಆಧಾರವೇ ಆದಂಥ ಶ್ರೀ ರಾಚಯ್ಯ ಹಾಗೂ ಶ್ರೀಮತಿ ಮಹದೇವಮ್ಮನವರು ಮರಣ ಹೊಂದುತ್ತಾರಂತೆ. ಹೀಗಾಗಿ ಆಗಿನ್ನೂ ಚಿಕ್ಕ ಬಾಲಕನಾಗಿದ್ದ ಈ ಬಸವಲಿಂಗಯ್ಯ ಅಕ್ಷರಶಃ ಅನಾಥನಾಗುತ್ತಾನೆ. ಹೀಗಾದಾಗ ಈ ಹುಡುಗನನ್ನು ಸಾಕುವರಾರು? ಎಂಬ ಪ್ರಶ್ನೆ ಸಮಾಜದವರ ಮುಂದೆ ಬರುತ್ತದೆ. ಆಗ ಸಮಾಜದ ಕೆಲವರು ಬಡ ಜಂಗಮ ವಂಶದ ಈ ಅನಾಥ ಬಾಲಕನನ್ನು ಚಿತ್ತರಗಿ-ಇಲಕಲ್ಲ ಮಠದ ಬಹುಶಃ 14 ನೇ ಪೀಠಾಧಿಪತಿಗಳಾಗಿದ್ದ ಪೂಜ್ಯ ಶ್ರೀ ಮಹಾಂತ ಸ್ವಾಮಿಗಳವರಲ್ಲಿಗೆ ಕರೆತಂದು, ಆತನನ್ನು ಸಾಕುವ ಜವಾಬ್ದಾರಿಯನ್ನು ವಹಿಸುತ್ತಾರೆ. ಆಗ ಚಿತ್ತರಗಿ ಮಹಾಂತ ಪೂಜ್ಯರು ಈ ಬಾಲಕನ ಪೂರ್ವಾಪರವನ್ನು ತಿಳಿದುಕೊಳ್ಳುತ್ತಿರುವಾಗ, ಈತನ ಮನೆಯ ಗುರುಗಳು ಲಿಂಗಸೂಗೂರು ಅಂದರೆ ಈಗಿನ ಕಸಬಾ ಲಿಂಗಸೂಗೂರನ ಶ್ರೀ ಸಾವಿರ ದೇವರಮಠ ಅಥವಾ ಶ್ರೀ ಪಂಚಾಕ್ಷರಮಠದ ಶ್ರೀ ಪಂಚಾಕ್ಷರ ಸ್ವಾಮಿಗಳವರು ಎಂಬುದು ತಿಳಿಯುತ್ತದೆ. ಈ ಊರಿನಲ್ಲಿ ಅವರ ಚಿತ್ತರಗಿ-ಇಲಕಲ್ಲ ಶ್ರೀ ವಿಜಯ ಮಹಾಂತೇಶ್ವರ ಮಠದ ಶಾಖಾ ಮಠವೂ, ಜಮೀನು ಹಾಗೂ ತಪೋವನವೂ ಇದ್ದುದರಿಂದ ಅವರು ಆಗಾಗ ಇಲ್ಲಿಗೆ ಬರುತ್ತಿರುತ್ತಾರೆ. ಹಾಗಾಗಿ ಸಹಜವಾಗಿ ಪೂಜ್ಯಶ್ರೀ ಪಂಚಾಕ್ಷರ ಸ್ವಾಮಿಗಳವರೊಂದಿಗೆ ಇವರ ಒಡನಾಟ ಇರುತ್ತದೆ. ಹಾಗಾಗಿ ಕೂಡಲೇ ಬಾಲಕ ಬಸವಲಿಂಗಯ್ಯನನ್ನು ಲಿಂಗಸೂಗೂರಗೆ ಕರೆತಂದು ಅವರ ಮನೆಯ ಗುರುಗಳಾದ ಶ್ರೀ ಪಂಚಾಕ್ಷರಸ್ವಾಮಿಗಳವರಿಗೆ ಪರಿಸ್ಥಿತಿಯನ್ನೆಲ್ಲಾ ವಿವರಿಸಿ ತಿಳಿಸಿ ಬಾಲಕನನ್ನು ಒಪ್ಪಿಸುತ್ತಾರೆ.

ಬಹು ಚುರುಕಾಗಿದ್ದ ಈ ಹುಡುಗನನ್ನು ಗುರುಗಳಾದ ಶ್ರೀ ಪಂಚಾಕ್ಷರಸ್ವಾಮಿಗಳವರು ದೃಷ್ಟಿನೆಟ್ಟು ನೋಡಿದರು. ಅವರು ಗೃಹಸ್ಥರಾಗಿದ್ದರೂ ಸಹ ಶಿವಯೋಗ ಸಿದ್ಧಿ ಪುರುಷರಾಗಿದ್ದರು; ಬಹು ಪ್ರಭಾವಶಾಲಿಗಳಾಗಿದ್ದರು. ಇವರಿಂದಾಗಿ ಶ್ರೀ ಪಂಚಾಕ್ಷರಿ ಮಠದ ವರ್ಚಸ್ಸು ಬಹುವಾಗಿತ್ತು. ಗೃಹಸ್ಥಾಶ್ರಮದ ಗುರುಗಳೆ ಇಲ್ಲಿಯವರೆಗೆ ಧರ್ಮ ಮತ್ತು ಸಮಾಜವನ್ನು ಈ ಮಠದ ಮೂಲಕ ಮುನ್ನಡೆಸಿಕೊಂಡು ಬಂದಿದ್ದು ಈಗ ಪುತ್ರವರ್ಗದ ಸನ್ಯಾಸ ‘ಗುರು ಪರಂಪರೆ’ಯನ್ನು ಶ್ರೀಮಠದಲ್ಲಿ ಆರಂಭಿಸಲು ಭಕ್ತರ ಅಪೇಕ್ಷೆಯ ಮೇರೆಗೆ ನಿರ್ಧರಿಸಿದ್ದರು. ಹಾಗಾಗಿ ತಮ್ಮ ಸುಪುತ್ರರಾದ ಶ್ರೀ ಚನ್ನಬಸವಯ್ಯ ಎಂಬುವರನ್ನು ಶ್ರೀ ಗುರು ಪಂಚಾಕ್ಷರ ಸ್ವಾಮಿಗಳು ಎಂಬ ‘ಅಭಿದಾನ’ದಿಂದ ಪಟ್ಟ ಕಟ್ಟಲು ನಿಶ್ಚಯಿಸಿದ್ದರು. ಇಂತಹ ಸಮಯದಲ್ಲಿ ಗೂಡೂರನಿಂದ ಶಿಷ್ಯನಾದ ಈ ಬಾಲಕ ಬಸವಲಿಂಗಯ್ಯ ಈ ಮಠಕ್ಕೆ ಪ್ರವೇಶಿಸಿದನು. ಅತ್ಯಂತ ಚುರುಕು ಬುದ್ಧಿಯವನಾದ ಈ ಹುಡುಗ ಗುರುಗಳವರಾದ ಶ್ರೀ ಪಂಚಾಕ್ಷರಸ್ವಾಮಿಗಳನ್ನು ಹಾಗೂ ಊರಿನ ಭಕ್ತರನ್ನು ಆಕರ್ಷಿಸಿ ಬಿಟ್ಟನು. ಈ ಹುಡುಗನ ಯೋಗ್ಯತೆಗೆ ಮನಸೋತ ಒಂದಷ್ಟು ಜನ ಭಕ್ತರು ಈತನನ್ನೇ ಮಠಕ್ಕೆ ಪಟ್ಟವ ಕಟ್ಟಲು ಅಪೇಕ್ಷಿಸಿ ಗುರುಗಳವರಲ್ಲಿ ಭಿನ್ನವಿಸಿದ್ದರು. ಅಷ್ಟೇ ಅಲ್ಲ ಈ ಭಕ್ತರಲ್ಲಿ ಎರಡು ಗುಂಪುಗಳಾಗಿ ಕೆಲವರು ಶ್ರೀ ಚೆನ್ನಬಸವಯ್ಯನವರ ಪರವಾಗಿ, ಕೆಲವರು ಶ್ರೀ ಬಸವಲಿಂಗರ ಪರವಾಗಿ ಬಲವಾಗಿ ವಾದಿಸತೊಡಗಿದಾಗ, ಛಾವಣಿಯಲ್ಲಿದ್ದ ನಿಜಾಂ ಸರಕಾರದ ಬಾಲಮೀನ್ ಸಾಹೇಬನು ಮಧ್ಯೆ ಪ್ರವೇಶಿಸಿ  ಲಾಟರಿ ವಿಧಾನದ ಮೂಲಕ ಈ ನ್ಯಾಯವನ್ನು ಇತ್ಯರ್ಥ ಮಾಡಿದಾಗ, ಗುರುಗಳಾದ ಶ್ರೀ ಪಂಚಾಕ್ಷರ ಸ್ವಾಮಿಗಳವರು ಬಾಲಮೀನ್ ಸಾಹೇಬರ ಆದೇಶದಂತೆ ಮೂಲಮಠವಾದ ಲಿಂಗಸೂಗೂರನ ಶ್ರೀ ಸಾವಿರದೇವರಮಠ ಅಂದರೆ ಪಂಚಾಕ್ಷರ ಮಠಕ್ಕೆ ತಮ್ಮ ಮಗನಾದ ಚನ್ನಬಸವಯ್ಯನವರನ್ನು “ಸ್ಥಿರ ಪಟ್ಟಾ ಧ್ಯಕ್ಷ”ರನ್ನಾಗಿಯೂ, ನೀರಲಕೇರಿಯಲ್ಲಿರುವ ತಮ್ಮ ಶಾಖಾ ಮಠಕ್ಕೆ ಶ್ರೀ ಬಸವಲಿಂಗರನ್ನು “ಚರ ಪಟ್ಟಾಧ್ಯಕ್ಷ”ರನ್ನಾಗಿಯೂ ನೇಮಿಸಿ ಪಟ್ಟಾಭಿಷೇಕಗೈದರು. ಹಾಗಾಗಿ ಸ್ಥಿರ ಪಟ್ಟಾಧ್ಯಕ್ಷರಾದಂತ ಚನ್ನಬಸವಯ್ಯನವರು “ಗುರು ಪಂಚಾಕ್ಷರ ಶಿವಾಚಾರ್ಯ ಸ್ವಾಮಿಗಳು” ಎಂದು, ನೀರಲಕೇರಿಯ ಚರ ಪಟ್ಟಾಧ್ಯಕ್ಷರಾದ ಶ್ರೀ ಬಸವಲಿಂಗರು “ಬಸವಲಿಂಗ ಶಿವಾಚಾರ್ಯ ಸ್ವಾಮಿಗಳು” ಎಂದು ನಾಮಧೇಯವನ್ನು  ಪಡೆದುಕೊಂಡು ಪಟ್ಟಾಭಿಷಕ್ತರಾದರು.

ಬಸವಲಿಂಗ ಶಿವಯೋಗಿಗಳವರು ತಮ್ಮ ಹಾಡುಗಳಲ್ಲಿ ಆಗಾಗ ಕನಕಗಿರಿಯ ಹಾಲಪ್ಪಯ್ಯ ಮತ್ತು ಸಿದ್ಧಲಿಂಗ ಎಂಬ ಇಬ್ಬರು ಗುರುಗಳವರನ್ನು ನೆನೆಯುತ್ತಾರೆ. ಕಾರಣವೆಂದರೆ ಇವರಿಬ್ಬರೂ ಇವರ ದೀಕ್ಷಾ ಗುರುಗಳೆಂದು ಹೇಳಲಾಗುತ್ತದೆ. ಅದರಲ್ಲೂ ಕೆಲವರು ದೀಕ್ಷಾ ಗುರುಗಳು ಕನಕಗಿರಿಯ ಶ್ರೀ ಹಾಲಪ್ಪಯ್ಯನವರೆಂದೂ, ಕೆಲವರು ಶ್ರೀ ಸಿದ್ಧಲಿಂಗರೆಂದೂ ಹೇಳುತ್ತಾರೆ. ಆದರೆ ಇವರಿಬ್ಬರಲ್ಲಿ ದೀಕ್ಷಾ ಗುರುಗಳು ಯಾರು? ಎಂಬುದು ಮತ್ತು ಇನ್ನೊಬ್ಬ ಗುರುಗಳಾದ ಶ್ರೀ ಸಿದ್ಧಲಿಂಗರು ಎಲ್ಲಿಯವರೆಂಬುದರ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ. ಮಠಾಧಿಕಾರ ಸಂಪ್ರದಾಯದಲ್ಲಿ ಆ ಮಠದ ಹಿಂದಿನ ಗುರುಗಳು ಇಲ್ಲದಾಗ ಕೆಲವು ಬಾರಿ ಹೊಸದಾಗಿ ಪಟ್ಟವೇರುವವರಿಗೆ ಸನ್ಯಾಸ ದೀಕ್ಷೆ ಮತ್ತು ಪೀಠಾಧಿಕಾರಗಳೆರಡನ್ನೂ ಕೊಡುವವರು ಒಬ್ಬರೇ ಆಗಿರುತ್ತಾರೆ. ಇನ್ನೂ ಕೆಲವು ಸಂದರ್ಭಗಳಲ್ಲಿ ಬೇರೆ ಬೇರೆ ಇಬ್ಬರು ಆಗಿರುತ್ತಾರೆ. ಇಲ್ಲಿ ದೀಕ್ಷೆ ಮತ್ತು ಪೀಠಾಧಿಕಾರ ಕೊಡುವ ಗುರುಗಳು ಒಬ್ಬರೇ ಇರಲಿ, ಇಬ್ಬರೇ ಇರಲಿ ಅವರು ಹಿರಿಯರೂ, ಅನುಭವಿಗಳೂ, ಶಿವಯೋಗ ಸಾಧಕರೂ ಮತ್ತು ತ್ರಿಕಾಲ ಲಿಂಗ ಪೂಜಾ ನಿಷ್ಠರಾಗಿರಬೇಕೆಂಬ ಅರ್ಹತೆ ಉಳ್ಳವರಾಗಿತ್ತಾರೆ. ಈ ಹಿನ್ನೆಲೆಯಲ್ಲಿ ಕನಕಗಿರಿಯ ಶ್ರೀ ಹಾಲಪ್ಪಯ್ಯನವರು ಮತ್ತು ಶ್ರೀ ಸಿದ್ಧಲಿಂಗರು ಹೊಸದಾಗಿ ಸನ್ಯಾಸ ಪರಂಪರೆ ಆರಂಭವಾಗುತ್ತಿರುವ ಈ ಮಠದ ಅಧಿಪತಿಯಾಗುತ್ತಿರುವ ಶ್ರೀ ಬಸವಲಿಂಗ ಶಿವಯೋಗಿಗಳವರಿಗೆ ಒಬ್ಬರು ದೀಕ್ಷಾ ಗುರುಗಳೂ, ಇನ್ನೊಬ್ಬರು ಪೀಠಾಧಿಕಾರ ನೀಡಿದ ಗುರುಗಳೂ ಆಗಿರಬೇಕೆನಿಸುತ್ತದೆ.

ಬಸವಲಿಂಗರು ಬಾಲ್ಯದಿಂದಲೂ ಬಲು ಚುರುಕು ಬುದ್ಧಿಯವರು; ಅಭ್ಯಾಸಿಗರು, ಸಾಧಕರು, ಜ್ಞಾನಿಗಳು. ಗುರುಗಳ ಮಾರ್ಗದರ್ಶನದಲ್ಲಿ ತಮ್ಮಲ್ಲಿನ ಈ ಎಲ್ಲಾ ಶಕ್ತಿಗಳನ್ನು ಬಹುವಾಗಿ ಬೆಳೆಸಿಕೊಂಡರು. ಇದರಿಂದಾಗಿ ಭಕ್ತ ಪ್ರೇಮಿ ಆದರು, ಬಹು ಪ್ರಭಾವಿತರಾದರು. ದೇವಿ ಉಪಾಸಕರಾಗಿ ಆಕೆಯನ್ನು ಸಾಕ್ಷಾತ್ಕಾರ ಮಾಡಿಕೊಂಡಿದ್ದರೆಂದೂ ಹೇಳಲಾಗುತ್ತದೆ. ಅಷ್ಟೇ ಅಲ್ಲ ಆಕೆಯೊಂದಿಗೆ ಸಂಭಾಷಿಸುತ್ತಿದ್ದರು ಎಂಬುದಾಗಿಯೂ ತಿಳಿಯುತ್ತದೆ. ಅಪಾರವಾದ ಪಾಂಡಿತ್ಯ, ಶಿವಯೋಗ ಸಾಧನೆ, ಶ್ರೀದೇವಿಯ ಉಪಾಸನೆ ಹಾಗೂ ಸಾಕ್ಷಾತ್ಕಾರಗಳ ಬಲದಿಂದಾಗಿ “ಗಡಿಯ ನೀರಲಕೇರಿ ಒಡೆಯ ಪಂಚಾಕ್ಷರಿ” ಅಂಕಿತದಿಂದ ನೂರಾರು ಅನುಭಾವದ ಹಾಡುಗಳನ್ನು ರಚಿಸಿದರು. ಜನರು ಇವರು ರಚಿಸಿದ ಈ ಹಾಡುಗಳನ್ನು ಭಜನೆಗಳಲ್ಲಿ ಹಾಡಲಾರಂಭಿಸಿದರು. ಮೂಲತ: ಪಂಡಿತರಾಗಿದ್ದರೂ ಕೂಡ ತಮ್ಮ ಈ ಅನುಭಾವದ ಹಾಡುಗಳನ್ನು ಉದ್ದೇಶಪೂರ್ವಕವಾಗಿ ಬರೆದವರಲ್ಲ. ಸಾಂದರ್ಭಿಕವಾಗಿ ಆಶುಕವಿತ್ವದಿಂದ ಹಾಡಿದವರು. ಇವರ ಇಂಥ ಈ ಹಾಡುಗಳು ಕೇವಲ ಈ ಭಾಗದಲ್ಲಷ್ಟೇ ಅಲ್ಲದೇ ಮೈಸೂರು ಪ್ರಾಂತ್ಯದವರೆಗೂ ಪಸರಿಸಿ ಜನಪ್ರಿಯವಾದವು; ಪ್ರಸಿದ್ಧವಾದವು.

ಹೀಗೆ ತಮ್ಮ ಅಪಾರವಾದ ವಿದ್ವತ್ತು, ಪ್ರತಿಭೆ, ಶಿವಯೋಗ ಸಾಧನೆ, ಚಿದಾನಂದ ಅವಧೂತರ ಕೃತಿ “ಶ್ರೀ ದೇವಿ ಮಹಾತ್ಮೆ” ಗ್ರಂಥದ ನಿತ್ಯ ಪಾರಾಯಣದೊಂದಿಗೆ (ಈ ಹಸ್ತ ಪ್ರತಿ ಈಗಲೂ ಐದನಾಳದ ಭಕ್ತರೊಬ್ಬರು ಮನೆಯಲ್ಲಿದೆ.) ಶಕ್ತಿ ಉಪಾಸನೆ -ಸಾಕ್ಷಾತ್ಕಾರ ಇವೆಲ್ಲವುಗಳ ಬಲದಿಂದಾಗಿ ಅತ್ಯಂತ ಪ್ರಸಿದ್ಧರಾದ ನೀರಲಕೇರಿಯ ಬಸವಲಿಂಗ ಶಿವಯೋಗಿಗಳವರ  ಸಾಧನೆ-ಬೆಳವಣಿಗೆ ಬಹುಶಃ ಸಮಾಜದ ಸಹಜ ಗುಣ ಎನ್ನುವಂತೆ ಲಿಂಗಸೂಗೂರು ಅಂದರೆ ಅವರ ಮೂಲ ಮಠವಿರುವಂತಹ ಊರು ಮತ್ತು ಅವರ ಚರ ಪಟ್ಟದ ಸ್ಥಳವಾದ  ನೀರಲಕೇರಿ ಎರಡು ಊರುಗಳಲ್ಲಿನ ಜನರಿಗೆ ಸಹ್ಯ ಅನಿಸಿರಲಿಕ್ಕಿಲ್ಲ. ಹಾಗಾಗಿ ಆ ಎರಡು ಊರುಗಳಲ್ಲಿ ಕೆಲವು ಜನ ಬಹಳಷ್ಟು ತೊಂದರೆ ಕೊಡುತ್ತಾರೆ; ಕಾಡುತ್ತಾರೆ. ಎಲ್ಲಿಯವರೆಗೆ ಅಂದರೆ ಒಬ್ಬ ಮಠಾಧಿಪತಿ ಆದವನಿಗೆ ಆತನದೇ ಆದ ಆಚಾರಗಳು, ರೀತಿ-ರಿವಾಜುಗಳು ಇರುತ್ತವೆ. ಅವರು ತ್ರಿಕಾಲ ಲಿಂಗ ಪೂಜೆ ಇಲ್ಲದೆ  ಬದುಕುವುದು ಕಷ್ಟ. ಅದು ಅವರ ನಿಯಮ. ಅಂಥದ್ದರಲ್ಲಿ ಜನ ಒಮ್ಮೆ ಲಿಂಗಸೂಗೂರನ ಶ್ರೀ ವಿಜಯ ಮಹಾಂತೇಶ್ವರ ಮಠದಲ್ಲಿ ಗಣಾರಾಧನೆಯನ್ನು ಏರ್ಪಡಿಸಿ ಅದಕ್ಕಾಗಿ ಇವರನ್ನು ಕರೆಸಿ ರಾತ್ರಿ ಪ್ರಸಾದ(ಊಟ)ದಲ್ಲಿ ಅಫೀಮು ಬೆರೆಸಿ ಕೊಟ್ಟರಂತೆ. ಹೀಗಾಗಿ ಅವರು ಪ್ರಜ್ಞೆ ಇಲ್ಲದೇ ಮಲಗಿದಾಗ ಅವರ ಕೊರಳಲ್ಲಿನ ಇಷ್ಟಲಿಂಗವನ್ನು ಕದ್ದು ಬಿಟ್ಟರಂತೆ. ಇದರಿಂದಾಗಿ ಬಹುವಾಗಿ ನೊಂದುಕೊಂಡು ಆಚಾರ ಸಂಪನ್ನರಾದ ಶ್ರೀ ಬಸವಲಿಂಗರು ಇಷ್ಟಲಿಂಗಾರ್ಚನೆಯನ್ನು ಲಿಂಗಯ್ಯನಿಗೆ ನೈವೇದ್ಯವನ್ನು ಎಡೆಮಾಡಿಯೇ ಪ್ರಸಾದ್(ಊಟ) ಮಾಡುವ ತಮ್ಮ ಆಚಾರ ನೀತಿಯಲ್ಲಿರುವಾಗ ಕೊರಳಲ್ಲಿ ಇಷ್ಟಲಿಂಗವೇ ಇಲ್ಲದೆ ಅದನ್ನು ಪೂಜಿಸುವುದು, ಅದಕ್ಕೆ ನೈವೇದ್ಯ ಎಡೆ ಮಾಡುವದು ಸಾಧ್ಯವಿಲ್ಲದ ಮಾತು; ಹೀಗಾದಾಗ ತಮ್ಮ (ಪ್ರಸಾದ)ವೂ ಸಾಧ್ಯವಿಲ್ಲ. ಆದ್ದರಿಂದ ಅವರು ಒಂಭತ್ತು ದಿನಗಳವರೆಗೆ ಪೂಜೆ-ಪ್ರಸಾದವಿಲ್ಲದೇ ಹಾಗೇ ಉಪವಾಸವಿರುತ್ತಾರೆ. ಇದರಿಂದಾಗಿ ಇವರ ಇಷ್ಟಲಿಂಗ ಕದ್ದವನ ಮನ ಕರಗಿ, ತನ್ನ ತಪ್ಪಿನ ಅರಿವಾಗಿ ಇವರೆಲ್ಲರಿಗೆ ಬಂದು ಇಷ್ಟಲಿಂಗವನ್ನು ಮರಳಿಸಿ ಕ್ಷಮೆ ಕೋರಿ ಸಾಷ್ಟಾಂಗ ನಮಸ್ಕಾರ ಮಾಡುತ್ತಾನೆ. ಆಗ ಶ್ರೀ ಬಸವಲಿಂಗರು ಇಷ್ಟಲಿಂಗವನ್ನು ಮರು ಧರಿಸಿಕೊಂಡು ಪೂಜೆಗೈದು ತಮ್ಮ ಆಚಾರ ಪದ್ಧತಿಯಂತೆ ಪ್ರಸಾದ ಸ್ವೀಕರಿಸುತ್ತಾರೆ. ಅಷ್ಟೇ ಅಲ್ಲ ಅವರು ಶ್ರೀದೇವಿಯನ್ನು ಸಾಕ್ಷಾತ್ಕಾರ ಮಾಡಿಕೊಂಡಿರುವುದರೊಂದಿಗೆ ಆಕೆಯೊಂದಿಗೆ ಮಾತನಾಡುತ್ತಿದ್ದರಂತೆ; ಆಕೆ ಹೆಣ್ಣಾಗಿ ಲೋಕದ ಕಣ್ಣಿಗೆ ಇವರೊಂದಿಗೆ ಕಾಣುತ್ತಿದ್ದಳಂತೆ. ಇದು ಜನರಲ್ಲಿ ತಪ್ಪು ತಿಳುವಳಿಕೆಗೆ ಕಾರಣವಾಗಿ ಅವರಲ್ಲಿ ಒಂದು ಅನೈತಿಕ ಸಂಬಂಧದ ಪರಿಭಾವನೆಯಿಂದ ಜನ ಅವರನ್ನು ದೂಷಣೆ ಮಾಡುತ್ತ ಬೆನ್ನು ಹಿಡಿದು  ಕಾಡಲು ಪ್ರಾರಂಭ ಮಾಡುತ್ತಾರೆ. ಜನ ಒಬ್ಬ ವ್ಯಕ್ತಿಯನ್ನು ಎಷ್ಟೊಂದು ತುಚ್ಛೀಕರಿಸಿ ಅವಮಾನಿಸುತ್ತಾರೋ, ಅಷ್ಟೇ ವೈಭವೀಕರಿಸಿ ಮೆರೆಸುತ್ತಾರೆ. ಈ ಸಮಾಜ ಎರಡರಲ್ಲೂ ಅತಿರೇಕತನವನ್ನು ತೋರುತ್ತದೆ. ಬಸವಲಿಂಗ ಶಿವಯೋಗಿಗಳವರಿಗೆ ಲಿಂಗಸೂಗೂರು ಮತ್ತು ನೀರಲಕೇರಿ ಎರಡೂ ಊರುಗಳಲ್ಲೂ ಸಮಾಜದ ಕೆಲವು ಜನ ಅವರನ್ನು ಇಷ್ಟೊಂದು ಹೀನಾಯಮಾನವಾಗಿ ಅವಮಾನಿಸುವ  ಪ್ರಯತ್ನ ಮಾಡುತ್ತಾರೆ. ಬಹಳಷ್ಟು ಸಾಧಕರು-ಸಾತ್ವಿಕರುಗಳಿಗೆ  ದ್ವೇಷ-ಮತ್ಸರ ಅವು ಯಾವವೂ ಇರುವುದಿಲ್ಲ. ಆದರೆ ಆ ಸಾತ್ವಿಕ ಕೋಪ ಇಂಥ ಸಂದರ್ಭದಲ್ಲಿ ದುಷ್ಪರಿಣಾಮವಾಗಿ ಪರಿಣಮಿಸುತ್ತದೆ. ಹಾಗಾಗಿ ತಮ್ಮನ್ನು ಅತ್ಯಂತ ಹೀನಾಯವಾಗಿ ನಿಂದಿಸಿದಂಥ ಈ ಊರುಗಳಿಗೆ ವಿಶೇಷವಾಗಿ ‘ಲಿಂಗಸೂಗೂರಿಗೆ ನಿಂದಕರ ಊರು’ ಅಂತೆಯೂ ‘ನೀರಲಕೇರಿ ಹೇಲಕೇರಿ ಆಗಲಿ’ ಎಂತಲೂ ಶಾಪವಿತ್ತರಂತೆ. ಹಾಗಾಗಿ ಇವತ್ತಿಗೂ ಆ ಊರುಗಳು ಬೆಳವಣಿಗೆ ಆಗುತ್ತಿಲ್ಲ ಎಂದು ಆ ಊರುಗಳ ಹಿರಿಯರು ಅನ್ನುತ್ತಿರುತ್ತಾರೆ.

ಹೀಗೆ ಶಿವಯೋಗದ ಕಳೆ ಹಾಗೂ ಪ್ರತಿಭಾ ಕಳೆಗಳ ಸಂಪನ್ನರಾದ ಶ್ರೀ ನೀರಲಕೇರಿ ಬಸವಲಿಂಗ ಶಿವಯೋಗಿಗಳು ಕ್ರಿ. ಶ. 1812 ರಿಂದ 1872 ರವರೆಗೆ ಬಾಳಿದ್ದಾರೆ ಎಂದು ಹೇಳಲಾಗುತ್ತದೆ. ಇದು ಅಂದಾಜು ಕಾಲ. ಅವರ ಈ ಜನನ ಮತ್ತು ಮರಣಗಳ ಕಾಲಗಳೆರಡೂ ನಿಶ್ಚಿತವಾದವುಗಳಲ್ಲ. ಅದರಲ್ಲೂ ಅವರು ಕ್ರಿ. ಶ. 1872 ರಲ್ಲಿ ಲಿಂಗೈಕ್ಯರಾದರೆಂಬುದು ಖಂಡಿತವಾಗಿಯೂ ತಪ್ಪು. ನೆರೆಯ ಆಂಧ್ರದಲ್ಲಿ ಜನಿಸಿ ವೀರ ವಿರಾಗಿಯಾಗಿ, ಬಸವಾನುಯಾಯಿಯಾಗಿ, ಕೃಷಿ ವಿಜ್ಞಾನಿಯಾಗಿ ಈ ನಾಡಿಗೆ ಬಂದು, ಕನ್ನಡ ಕಲಿತು, ಕನ್ನಡದಲ್ಲೇ ಸ್ವರ ವಚನಗಳನ್ನು ಆಶುಕವಿತ್ವದಿಂದ ಹಾಡುತ್ತಾ, ಬರಗಾಲದಿಂದ ತತ್ತರಿಸುವ ಈ ಭಾಗದ ಒಕ್ಕಲುತನದ ಪರಿಸ್ಥಿತಿಯನ್ನು ಕಂಡು ಅರಗಾಲ, ಬರಗಾಲದಲ್ಲಿ ಸಾವಯವ ಕೃಷಿ ಪದ್ಧತಿಯ ಅನುಸಾರ ‘ಜೀರಾಯತ’ ಮತ್ತು ‘ಭಾಗಾಯತ’ ಅಂದರೆ ಒಣ ಬೇಸಾಯ ಮತ್ತು ನೀರಾವರಿ ಬೇಸಾಯಗಳ ವೈಜ್ಞಾನಿಕ ಪದ್ಧತಿಯನ್ನು ರೈತರಿಗೆ ತಿಳಿಸುತ್ತ, ನಿರಂತರವಾದ ತಮ್ಮ ಸಂಚಾರದಲ್ಲಿ ಊರೂರುಗಳಲ್ಲಿ ಪ್ರವಚನದ ಮೂಲಕ ಬಸವ ತತ್ವ ಬೋಧೆ ಮಾಡುತ್ತ, ಜೊತೆ ಜೊತೆಗೆ ಆಗಾಗ ತಿಂಗಳುಗಟ್ಟಲೆ ಶಿವಯೋಗ ಅನುಷ್ಠಾನಗೈಯುತ್ತ, ನಾಡನೆಲ್ಲ ಸುತ್ತಿದ ಶ್ರೀ ಘನಮಠ ಶಿವಯೋಗಿಗಳುವರು ಕೊನೆಯಲ್ಲಿ ಸಂತೆಕೆಲ್ಲೂರಿಗೆ ಬಂದು ನೆಲೆಯಾಗುವಾಗ ಹತ್ತಿರದ ಹಾಗೂ ಬಸವಲಿಂಗ ಶಿವಯೋಗಿಗಳವರ ಮೂಲ ಮಠವಿರುವ ಊರಾದ ಲಿಂಗಸೂಗೂರಗೆ ಬರುತ್ತಾರೆ. ಆಗ ಅಲ್ಲಿರುವಾಗ ಪಕ್ಕದ ನೀರಲಕೇರಿಯ ಮಠಾಧಿಪತಿಗಳಾದ ಈ ಬಸವಲಿಂಗ ಶಿವಯೋಗಿಗಳವರ ಬಗ್ಗೆ ತಿಳಿದು  ನೀರಲಕೇರಿಗೆ ಬಂದು ಅವರನ್ನು ಭೇಟಿಯಾಗುತ್ತಾರೆ. ಈ ಭೇಟಿಯ ಕಾಲವೇ ಕ್ರಿ. ಶ. 1881 ರ ಫೆಬ್ರುವರಿ ನಂತರದ್ದಾಗಿದೆ. ಇಲ್ಲಿ ಘನಮಠ ಶಿವಯೋಗಿಗಳವರ ಲಿಂಗೈಕ್ಯದ ದಿನಾಂಕವೇ ನಿಖರವಾಗಿಲ್ಲ. ಏಕೆಂದರೆ ಘನಮಠ ಶಿವಯೋಗಿಗಳು ತಮ್ಮ ಸಂಚಾರದ ಸಮಯದಲ್ಲೇ ಈ ಭಾಗದ ಒಕ್ಕಲುತನದ ದು:ಸ್ಥಿತಿಯನ್ನು ಕಂಡು ಇಲ್ಲಿನ ರೈತರಿಗೆ ಪ್ರಯೋಜನವಾಗಲಿ ಎಂದು, ಸಂಚಾರದ ಸಮಯದಲ್ಲಿ ಪರಿಚಯವಾಗಿದ್ದ, ಕೃಷಿಯಲ್ಲಿ ಅಗಾಧವಾದ ಅನುಭವವುಳ್ಳ ಸಿಂದಗಿ ತಾಲ್ಲೂಕಿನ ಬೆಕಿನಾಳ ಗ್ರಾಮದ ಕುನ್ನಾಳ ಸಿದ್ಧರಾಮಪ್ಪ ಎಂಬ ಭಕ್ತನಿಗೆ ತಮ್ಮ ಕೃಷಿ ಜ್ಞಾನವನ್ನು ಧಾರೆಯೆರೆದು ಅದನ್ನು ಗ್ರಂಥ ರೂಪದಲ್ಲಿ ರಚಿಸಲು ತಿಳಿಸಿ ತಾವು ಸಂಚಾರವನ್ನು ಮುಂದುವರೆಸಿರುತ್ತಾರೆ. ಮುಂದೆ ಅವರು ಕ್ರಿ. ಶ. 1879 ರ ಆಗಷ್ಟ ತಿಂಗಳಿನಿಂದ ಹುನಗುಂದ ಭಾಗದಲ್ಲಿ ಸಂಚರಿಸುತ್ತಾ, ಹುನಗುಂದದ ಪರಮ‌ ಭಕ್ತ ಮನೆತನವಾದ ನಾಗರಾಳ ಕುಟುಂಬದ ದೊಡ್ಡಪ್ಪನವರ ಮನೆಯಲ್ಲಿ ನೆಲೆಸಿರುತ್ತಾರೆ. ಹೀಗಿದ್ದಾಗ ಕ್ರಿ. ಶ. 1881 ರ ಫೆಬ್ರುವರಿ ತಿಂಗಳಲ್ಲಿ ಕುನ್ನಾಳ ಸಿದ್ಧರಾಮಪ್ಪ ಗುರುಗಳಾದ ಶ್ರೀ ಘನಮಠರ ಆದೇಶ ಮತ್ತು ಮಾರ್ಗದರ್ಶನದ ಮೇರೆಗೆ ರಚಿಸಿದ “ಕೃಷಿ ಜ್ಞಾನ ಪ್ರದೀಪಿಕೆ” ಕೃತಿಯನ್ನು ಪೂರ್ಣಗೊಳಿಸಿಕೊಂಡು ಅವರಿಗೆ ಒಪ್ಪಿಸಲೆಂದು ಇವರು ಇಲ್ಲಿರುವ ಮಾಹಿತಿಯ ಮೇರೆಗೆ ಹುನಗುಂದಕ್ಕೆ  ಬರುತ್ತಾರೆ. ಇದನ್ನು ಕಂಡು ಬಹು ಸಂತೋಷಗೊಂಡ ಶ್ರೀ ಘನಮಠ ಶಿವಯೋಗಿಗಳು ಅದೇ ಫೆಬ್ರುವರಿಯಲ್ಲಿ ಬರುವ ಭಾರತ ಹುಣ್ಣಿಮೆಯ ದಿನದಂದು ಅದಕ್ಕೆ ಮಂಗಲಾಶೀರ್ವಾದ ಬರೆದು, ಮೂರು ಪ್ರತಿಗಳನ್ನಾಗಿಸಿ ಒಂದನ್ನು ನಾಗರಾಳ ದೊಡ್ಡಪ್ಪನವರಿಗೆ, ಮತ್ತೊಂದನ್ನು ಅದನ್ನು ಬರೆದ ಕುನ್ನಾಳು ಸಿದ್ಧರಾಮಪ್ಪನಿಗೆ ಕೊಟ್ಟು, ಉಳಿದ ಒಂದನ್ನು ತಮ್ಮಲ್ಲಿ ಇಟ್ಟುಕೊಳ್ಳುತ್ತಾರೆ. ಇದೆಲ್ಲ ಆದ ನಂತರ ಅವರು ಹುನಗುಂದದಿಂದ ಸಂಚಾರ ಆರಂಭಿಸಿ,  ಸಂತೆಕೆಲ್ಲೂರ ಹತ್ತಿರದ ಲಿಂಗಸೂಗೂರಗೆ ಬಂದು ಇಲ್ಲಿ ಊರ ಗೌಡರಾದ ಶ್ರೀ  ಪಿಡ್ಡನಗೌಡರ ಅಪೇಕ್ಷೆಯಂತೆ ಕೆಲವು ದಿನಗಳವರೆಗೆ ಇಲ್ಲೇ ಇದ್ದು, ಒಮ್ಮೆ ನೀರಲಕೇರಿಗೆ ಹೋಗಿ ಬಸವಲಿಂಗ ಶಿವಯೋಗಿಗಳವರನ್ನು ಭೇಟಿಯಾಗುತ್ತಾರೆ. ಅಲ್ಲಿಂದ ಲಿಂಗಸೂಗೂರಿಗೆ ಮರಳಿ ನಂತರ ದಾರಿಯಲ್ಲಿ ತಮಗೆ ಜೊತೆಯಾಗಿದ್ದ ಅಂಕುಶದೊಡ್ಡಿಯ ಭಕ್ತ ವೀರಭದ್ರಪ್ಪನ ಅಪೇಕ್ಷೆಯಂತೆ ಅಂಕುಶದೊಡ್ಡಿಗೆ ಪಯಣ ಕೈಗೊಳ್ಳುತ್ತಾರೆ. ಆದರೆ ಇವರು ಸಂತೆಕೆಲ್ಲೂರು ಸಮೀಪಿಸಿದಾಗ ಹಸಮಕಲ್ಲನ ಸಂತ ಖಾನ ಸಹಾಬರ ಸೂಚನೆಯಂತೆ ಸಂತೆಕೆಲ್ಲೂರನ ಹಿರಿಯರಾದ ಹೆಸರೂರ ದೊಡ್ಡಪ್ಪ, ಲೇವಡಿ ಚನ್ನಪ್ಪ, ಪೀಪಿ ರುದ್ರಪ್ಪ ಮೊದಲಾದವರು ಊರ ಹತ್ತಿರದ ಗೋಧಿ ರಾಶಿ ಹೊಲದ ಹತ್ತಿರ ಬಂದು ಇವರಿಗಾಗಿ ಕಾಯುತ್ತಿರುವಾಗ ಅಲ್ಲಿಗೆ ಬಂದ ಘನಮಠ ಶಿವಯೋಗಿಗಳವರನ್ನು ಸಂತೆಕೆಲ್ಲೂರಗೆ ಕರೆದುಕೊಂಡು ಹೋಗಿ ಅಲ್ಲಿರುವ ಲಿಂಗಸೂಗೂರು-ಅಮೀನಗಡ ಪರಂಪರೆಯ ಶ್ರೀ ತೋಂಟದಾರ್ಯ ಮಠದಲ್ಲಿ ನೆಲೆಯಾಗಿಸುತ್ತಾರೆ. ಹೀಗಾಗಿ ಅಲ್ಲಿ ನೆಲೆಸಿದ ಘನಮಠ ಶಿವಯೋಗಿಗಳು ಸುಮ್ಮನೆ ಕೂಡದೆ ಮಠದ ಪಕ್ಕದಲ್ಲಿರುವ ವಿಶಾಲ ಬಯಲಿನ ಶ್ರೀ ವೀರಭದ್ರೇಶ್ವರ ದೇವಾಲಯದಲ್ಲಿ “ವೀರಭದ್ರ ವಿಜಯ “ಎಂಬ ಪುರಾಣ ಕಾರ್ಯಕ್ರಮ ಏರ್ಪಡಿಸುತ್ತಾರೆ. ಇದು ಒಂದು ತಿಂಗಳಿನದೆಂದು ಕೆಲವರು, ಮೂರು ತಿಂಗಳಿನದೆಂದು ಕೆಲವರು ಹೇಳುತ್ತಾರೆ. ಈ ಪುರಾಣ ಮಂಗಲವಾದ ನಂತರ (ಅದರ ಕಾಲ ತಿಳಿದಿಲ್ಲ) ಹಿಂದೆ ಸಂಚಾರದ ಸಮಯದಲ್ಲಿ ನೀರಡಗಂಭ ಮಠದಲ್ಲಿ ನಡೆದಿದ್ದ ಆ ಮಠದ ಸಿದ್ಧಲಿಂಗ ಸ್ವಾಮಿಗಳು, ಷಂಶಾಬಾದಿಯ ಚನ್ನಬಸವ ಸ್ವಾಮಿಗಳವರೊಂದಿಗಿನ ‘ಜ್ಞಾನ’ ಮತ್ತು ‘ಕ್ರಿಯೆ’ಗಳಲ್ಲಿ ಯಾವುದು ಮೇಲು ಎಂಬ ಚರ್ಚೆ ಅಪೂರ್ಣವಾದದ್ದರಿಂದ, ಅದರ ನಿರ್ಣಯ ಶಿವನ ಸನ್ನಿಧಿಯಲ್ಲಿ ಆಗಲೆಂಬ ಭಕ್ತರಾದ ಶಾಂತವೀರಪ್ಪ ಗೌಡರ ಸಮಕ್ಷಮದ ತೀರ್ಮಾನದಂತೆ ಒಂದು ದಿನ  ಆ ಮೂರು ಜನ ಲಿಂಗೈಕ್ಯರಾಗಿ, ಆ ತೀರ್ಮಾನಕ್ಕಾಗಿ ನಿಮ್ಮನ್ನು ಕೈಲಾಸದಲ್ಲಿ ಕಾಯುತ್ತಿರುವುದಾಗಿ ಸ್ವಪ್ನದಲ್ಲಿ ಬಂದು ಇವರಿಗೆ ಹೇಳಿದ್ದರಿಂದ ಇವರು ಕೂಡಲೇ ಎದ್ದು ಸ್ನಾನ ಮಾಡಿ ಇಷ್ಟಲಿಂಗವನ್ನು ನಿರೀಕ್ಷಿಸುತ್ತಲೇ ದೇಹ ಬಿಡುತ್ತಾರೆ. ಈ ಘಟನೆ ನಡೆದ ಕಾಲ ಯಾವದೆಂಬುದೂ ತಿಳಿದಿಲ್ಲ. ಆದರೂ ಮಠದವರು ಕ್ರಿ. ಶ. 1879 ಎಂದು ಪುಣ್ಯ ಸ್ಮರಣೋತ್ಸವ ಆಚರಿಸುತ್ತಾರೆ. ಆ ಸಮಯದಲ್ಲಿ ಈ ನೀರಲಕೇರಿ ಬಸವಲಿಂಗ ಶಿವಯೋಗಿಗಳು ಇನ್ನೂ ಜೀವಂತವಾಗಿದ್ದುದು ಸತ್ಯ. ಹೀಗೆ ಘನಮಠ ಶಿವಯೋಗಿಗಳವರ ಕಾಲದ ಬಗೆಗೆ ಲಿಂಗೈಕ್ಯ ಡಾ. ಫ. ಗು. ಹಳಕಟ್ಟಿಯವರು ಕ್ರಿ. ಶ. 1884 ರಿಂದ 1885 ರವರೆಗೆ ಜೀವಿಸಿದ್ದರೆಂದು ಹೇಳುತ್ತಾರೆ.

ಇನ್ನು ನೀರಲಕೇರಿ ಬಸವಲಿಂಗ ಶಿವಯೋಗಿಗಳವರ ಕೊನೆಯ ದಿನಗಳು ಬಹು ಕುತೂಹಲಕಾರಿಯೂ, ವಿಶೇಷವಾದವುಗಳೂ ಆಗಿವೆ. ಇವರು ಸಾಧನೆ-ಸಿದ್ಧಿಗಳು ಮತ್ತು ಜೀವನ ರೀತಿಗಳಿಂದಾಗಿ ಇವರನ್ನು ಲಿಂಗಸೂಗೂರು ಮತ್ತು ನೀರಲಕೇರಿ ಎರಡೂ ಊರುಗಳಲ್ಲಿ ಜನ ಸಹಿಸದೇ ಉಪಟಳ ನೀಡುತ್ತಿದ್ದಾಗ, ಇದರಿಂದ ಬೇಸರಗೊಂಡ ಇವರು ಈ ಎರಡೂ ಊರುಗಳನ್ನು ಬಿಟ್ಟು ಹತ್ತಿರದ ಐದನಾಳ ಎಂಬ ಊರಿಗೆ ಬಂದು ನೆಲೆಯಾಗುತ್ತಾರೆ. ಈ ಊರಿಗೆ ಹೊಂದಿಕೊಂಡಂತೆ ಊರಿನ ಪೂರ್ವ ಮತ್ತು ಪಶ್ಚಿಮ ಭಾಗಗಳಲ್ಲಿ ಯಲಗಲದಿನ್ನಿ ಮತ್ತು ಕಾಳಾಪುರ ಎಂಬ ಊರುಗಳು ಇದ್ದು, ಈ ಊರುಗಳ ಭಕ್ತರು ಇವರಿಗೆ ಅತ್ಯಂತ ನಿಷ್ಠಾವಂತರಾಗಿರುತ್ತಾರೆ. ಹೀಗಿರುವಾಗ ಶ್ರೀ ಬಸವಲಿಂಗ ಶಿವಯೋಗಿಗಳು ಕೊನೆಗೆ ಐದನಾಳದಲ್ಲೇ ಲಿಂಗೈಕ್ಯರಾಗುತ್ತಾರೆ. ಆಗ ಭಕ್ತರಿಗೆ ಒಂದು ಚಮತ್ಕಾರ ಗೋಚರಿಸುತ್ತದೆ. ಇವರು ಐದನಾಳದಲ್ಲಿ ಲಿಂಗೈಕ್ಯರಾಗಿ ಅಂತ್ಯಕ್ರಿಯೆ ಅಲ್ಲಿಯೇ ಆದರೂ ಕೂಡ, ಅದೇ ವೇಳೆಗೆ ಇವರ ಪ್ರೀತಿಯ ಶಿಷ್ಯರ ಊರುಗಳಾದ ಯಲಗಲದಿನ್ನಿ ಮತ್ತು ಕಾಳಾಪುರಗಳಲ್ಲಿ, ಅಲ್ಲದೇ ಅವರ ಮಠವಿರುವ ನೀರಲಕೇರಿ ಹಾಗೂ ಈ ಭಾಗದ ಪ್ರಸಿದ್ಧ ಕ್ಷೇತ್ರವಾದ ಗುಡಗುಂಟಿ ಅಮರೇಶ್ವರಗಳಲ್ಲಿ ಇವರ ದೇಹದ ಚಿತ್ಕಳೆ ತೋರಿದ್ದರಿಂದ ಐದನಾಳವೂ ಸೇರಿದಂತೆ ಉಳಿದ ಈ ನಾಲ್ಕೂ ನೆಲೆಗಳಲ್ಲಿ ಇವರ ತೋರು ಗದ್ದುಗೆಗಳು ನಿರ್ಮಾಣಗೊಂಡು ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಜಾತ್ರೆ ನಡೆಯುತ್ತದೆ.

ಶ್ರೀ ಬಸವಲಿಂಗರ ತತ್ವಪದಗಳು:
ಶ್ರೀ ಬಸವಲಿಂಗ ಶಿವಯೋಗಿಗಳವರು ಬಾಲ್ಯದಿಂದಲೂ ಪ್ರತಿಭಾವಂತರು, ಪಂಡಿತರು; ತಮ್ಮ ಇಪ್ಪತ್ತೈದನೆಯ ವಯಸ್ಸಿನಲ್ಲಿ ಮಠದ ಪಟ್ಟಾಧಿಕಾರಿಯಾಗಿ ನೇಮಕಗೊಂಡು ಈ ಸಮಾಜವನ್ನು ಧರ್ಮ ಮತ್ತು ತತ್ವಗಳ ತಳಹದಿಯ ಮೇಲೆಯೇ ಕಟ್ಟುವ ಉದ್ದೇಶದಿಂದ ಅದರ ಓರೆ ಕೋರೆಗಳನ್ನು ತಿದ್ದಲು ಗೇಯ ರೂಪದ ಸಾಹಿತ್ಯ ಮಾಧ್ಯಮವೇ ಸೂಕ್ತ ಮತ್ತು ಪರಿಣಾಮಕಾರಿಯಾದುದೆಂದು ತಿಳಿದು ಆ ಕಾಲದ ಪ್ರಭಾವಿ ಕಾವ್ಯ ರೂಪವಾದ ತತ್ವಪದಗಳನ್ನು ಸಂದರ್ಭೋಚಿತವಾಗಿ ತಮ್ಮ ಆಶುಕವಿತ್ವದ ಬಲದಿಂದ ಹಾಡತೊಡಗಿದರು. ತಮ್ಮ ಗುರುಗಳವರ ಹೆಸರಿನಿಂದ “ಗಡಿಯ ನೀರಲಕೇರಿ ಒಡೆಯ ಪಂಚಾಕ್ಷರಿ” ಎಂಬ ಅಂಕಿತದೊಂದಿಗೆ ತತ್ವಪದಗಳ್ಳನ್ನು ಕಟ್ಟಿ ಹಾಡತೊಡಗಿದರು. ಇವರ ಈ ಹಾಡುಗಳಲ್ಲಿ ಗುರು ಸ್ತುತಿ-ಮಹಿಮೆ,

ಅವರು ಸಾಕ್ಷಾತ್ಕಾರ ಮಾಡಿಕೊಂಡಿದ್ದರು ಎನ್ನಲಾದ ಶ್ರೀ ದೇವಿಯ‌ಮಹಿಮೆ-ಆಕೆಯೊಂದಿಗಿನ ಸಂವಾದ, ಶಿವ ಪಾರಮ್ಯತೆ, ಶಿವಯೋಗ, ಸಾಮಾಜಿಕ ಸ್ಥಿತಿ, ಲೌಕಿಕ ಜೀವನದ ಸಾರ್ಥಕ್ಯ, ಕ್ಷಣಿಕತೆ-ನಿಸ್ಸಾರತೆ, ಅನುಭಾವ, ಕಾಕು ಜನತೆಯ ಗುಣ-ವರ್ತನೆಗಳು, ಸೌಹಾರ್ದ ಜೀವನ, ಕೈಲಾಸ-ಮುಕ್ತಿ, ಮಂಗಳಾರತಿಯೇ ಮುಂತಾದ ಅನೇಕ ವಿಷಯಗಳ ಬಗೆಗಿನ 180 ಹಾಡುಗಳು ದೊರೆತಿವೆ. ಈ ಹಾಡುಗಳು ಮೊದಲು 1954 ರಲ್ಲಿ ಶ್ರೀ ಕೆಂಬಾವಿ ಗುರುಲಿಂಗಯ್ಯನವರ ಕಾಳಜಿಯಿಂದಾಗಿ ಪ್ರಕಟಗೊಂಡಿವೆ. ಕೋಟೆ ಸಜ್ಜನಶೆಟ್ಟಿ ಬಸವಲಿಂಗಪ್ಪನವರೆಂಬ ಸದ್ಭಕ್ತರು ಮೊದಲು ಈ ಹಾಡುಗಳನ್ನು ಪ್ರಕಟಿಸಬೇಕೆಂದು ಬಹುವಾಗಿ ಹಂಬಲಿಸಿದ್ದರು. ಆದರೆ ಅವರಿಗೆ ಇವುಗಳನ್ನು ಸಂಗ್ರಹಿಸಲು ಸಾಧ್ಯವಾಗಲಿಲ್ಲ. ತಮ್ಮ ಜೀವಿತದ ಕಾಲದಲ್ಲಿ ಇದು ಸಾಧ್ಯವಾಗಲಿಲ್ಲ ಎಂದು ಕೊರಗುತ್ತಿದ್ದ ಇವರು ತಮ್ಮ ಕೊನೆಯ ಕಾಲದಲ್ಲಿ ಮಗನಾದ ಶ್ರೀ ಗುರುಲಿಂಗಪ್ಪನವರಿಗೆ ತಮ್ಮ ಮನೋಭಿಲಾಷೆಯನ್ನು ತಿಳಿಸಿರುತ್ತಾರೆ. ಹೀಗಿದ್ದಾಗ, ಕೆಂಭಾವಿಯ ಗುರುಲಿಂಗಾರ್ಯ ಎಂಬುವವರನ್ನು ಕಾಳಾಪುರದ ಮಾಲಿ ಪಾಟೀಲರಾದ ಶ್ರೀ ನಾಗನಗೌಡರು ಐದನಾಳಗೆ ಕರೆತರುತ್ತಾರೆ. ಮೂಲತ: ಸೇವಾಭಾವದವರಾದ ಇವರು ಶ್ರೀ ಬಸವಲಿಂಗ ಶಿವಯೋಗಿಗಳವರ ಮೇಲಿನ ಭಕ್ತಿ -ಗೌರವಗಳ ಕಾರಣವಾಗಿ ಐದನಾಳದಲ್ಲಿನ ಅವರ ಗದ್ದುಗೆಯ ದರ್ಶನಕ್ಕೆ ಬರುವ ಭಕ್ತರ ವಸತಿ ಮತ್ತು  ವಿಶ್ರಾಂತಿಗಾಗಿ ಪೌಳಿಯನ್ನು ನಿರ್ಮಿಸುತ್ತಾರೆ. ಹೂತು ಹೋಗಿರುವ ಗದ್ದುಗೆಯ ಮುಂದಿರುವ ಬಾವಿಯನ್ನು ಸ್ವಚ್ಛಗೊಳಿಸಿ ಅದನ್ನು ಕಟ್ಟಿಸಿ ಸದಾ ನೀರು ಇರುವಂತೆ ಮಾಡಿದ್ದಾರೆ.

ಇಂಥ ಶ್ರೀ ಗುರುಲಿಂಗಾರ್ಯರಿಗೆ ಕೋಟೆ ಸಜ್ಜನಶೆಟ್ಟಿ ಬಸವಲಿಂಗಪ್ಪನವರ ಮಗನಾದ ಶ್ರೀ ಗುರುಲಿಂಗಪ್ಪನವರು ಐದನಾಳದ ಬಸವಲಿಂಗ ಶಿವಯೋಗಿಗಳವರ ಗದ್ದುಗೆಯಲ್ಲಿ ಭೇಟಿಯಾಗಿ ಬಸವಲಿಂಗ ಶಿವಯೋಗಿಗಳವರ ಕುರಿತಾಗಿ ಮಾತನಾಡುತ್ತಿರುವಾಗ, ಶಿವಯೋಗಿಗಳವರು ರಚಿಸಿದ ಹಾಡುಗಳನ್ನು ಸಂಗ್ರಹಿಸಿ ಪ್ರಕಟಿಸುವ ಅವಶ್ಯಕತೆ ಇದೆ ಎಂದು ಶ್ರೀ ಗುರುಲಿಂಗಾರ್ಯರು ಅಪೇಕ್ಷೆ ವ್ಯಕ್ತಪಡಿಸುತ್ತಾರೆ. ಆಗ ಕೋಟೆ ಸಜ್ಜನಶೆಟ್ಟಿ ಗುರುಲಿಂಗಪ್ಪನವರು ಸಂತಸಗೊಂಡು ಇದನ್ನೇ ಅಪೇಕ್ಷಿಸಿದ್ದ ತಮ್ಮ ತಂದೆಯವರ ಅಭಿಲಾಷೆಯನ್ನು ನೆನೆದುಕೊಂಡು ಇದಕ್ಕಾಗಿ ನಾನು ನಿಮಗೆ ಸಹಾಯ ಮಾಡುತ್ತೇನೆ ತಾವು ಹಾಡುಗಳನ್ನು ಸಂಗ್ರಹಿಸಿರಿ ಎನ್ನುತ್ತಾರೆ. ಇದರಿಂದ ಉತ್ತೇಜಿತರಾದ ಶ್ರೀ ಗುರುಲಿಂಗಾರ್ಯರು, ಕೋಟೆಯ ಶ್ರೀ ಅಡವೆಯ್ಯಸ್ವಾಮಿಗಳವರು ಸೇರಿ ಹಳ್ಳಿಗಳಲ್ಲಿ ಸುತ್ತಾಡಿ ಬಸವಲಿಂಗ ಶಿವಯೋಗಿಗಳವರ ಹಾಡುಗಳ ಸಂಗ್ರಹಣೆಗೆ ತೊಡಗುತ್ತಾರೆ. ಬಹು ಕಠಿಣತರವಾದ ಈ ಕಾರ್ಯವನ್ನು ಬಿಡದೇ ಶ್ರಮವಹಿಸಿದಾಗ ಒಟ್ಟು 180  ಹಾಡುಗಳು ಮಾತ್ರ ದೊರೆಯುತ್ತವೆ. ಇವುಗಳೊಂದಿಗೆ ಕೊನೆಯಲ್ಲಿ ಷಡಕ್ಷರಿ ಕವಿಗಳು ಬಸವಲಿಂಗ ಶಿವಯೋಗಿಗಳವರ ಕುರಿತಾಗಿ ಬರೆದ ಎರಡು ಮಂಗಳಾರತಿ ಹಾಡುಗಳನ್ನು ಸೇರಿಸಿ ಒಟ್ಟು 182 ಹಾಡುಗಳ ಸಂಗ್ರಹಕ್ಕೆ “ಜ್ಞಾನ ಗೀತ” ಎಂಬ ಹೆಸರನಿಟ್ಟು, ಆ ಕಾಲದ ನಮ್ಮ ಜಿಲ್ಲೆಯ ಪ್ರಸಿದ್ಧ ಪುರಾಣ ಕವಿಗಳಾದ ಶ್ರೀ ಚಾಗಿ ಚನ್ನಬಸವ ಶಾಸ್ತ್ರಿಗಳವರ ಮುನ್ನುಡಿಯೊಂದಿಗೆ 1954 (ಬಹುಶಃ ಮಾರ್ಚ್ ತಿಂಗಳಲ್ಲಿ) ರಲ್ಲಿ ಪ್ರಕಟಿಸುತ್ತಾರೆ.

ಮುಂದೆ ಈ “ಜ್ಞಾನಗೀತ” ಕೃತಿ ಸಿಗದಂತಾದಾಗ 1999 ರಲ್ಲಿ ನಮ್ಮ ಜಿಲ್ಲೆಯ ವಿದ್ವಾಂಸರಾದ ಡಾ. ಬಸವಲಿಂಗ ಸೊಪ್ಪಿಮಠ ಅವರು ಇದರಲ್ಲಿರುವ ಅದೇ 180 ಹಾಡುಗಳನ್ನು ಮರು ಸಂಗ್ರಹಿಸಿ “ನೀರಲಕೇರಿ ಬಸವಲಿಂಗ ಶಿವಯೋಗಿಗಳವರ ಸ್ವರ ವಚನಗಳು” ಹೆಸರಿನಿಂದ ಗದುಗಿನ ಶ್ರೀ ಜಗದ್ಗುರು ತೋಂಟದಾರ್ಯ ಮಠದ ಲಿಂಗಾಯತ ಅಧ್ಯಯನ ಸಂಸ್ಥೆಯ ಮೂಲಕ ಪ್ರಕಟಿಸಿದ್ದಾರೆ. ಈ ಎರಡೂ ಸಂಗ್ರಹಗಳಲ್ಲಿರುವ ವಿವಿಧ ವಿಷಯಗಳುಳ್ಳ ಹಾಡಗಳನ್ನು ಗಮನಿಸಿ, ಅವುಗಳಲ್ಲಿ ಕೆಲವನ್ನು ಆಯ್ದುಕೊಂಡು ಇಲ್ಲಿ ಅರ್ಥೈಸಿಕೊಳ್ಳಲಾಗಿದೆ.

1. ಗುರು ಪಂಚಾಕ್ಷರರ ಸ್ತುತಿ.

ನಾಮ ರಹಿತ ನಿಷ್ಕಾಮ ನಿರಂಜನ ನೇಮದೂರನೇ ನೀ ಕಾಯೊ,
ಕಾಮಿತವ ಕಣ್ಣಾರೆ ಕೊಡುವ ನಿಸ್ಸೀಮ ಭಕ್ತ ಜನ ಪ್ರೇಮಿ
ಪಂಚಾಕ್ಷರ ಸ್ವಾಮಿಯೇ ಕಾಯೊ || ಪಲ್ಲವಿ ||

ಸೊಗಸಿನಿಂದಲಿ ಜಗವ ರಕ್ಷಿಸಲು ನಿಗಮಾತೀತನೇ ನೀ ಬಂದಿ
ಯುಗದೂರನೆ ನೀನಗಣಿತ ಮಹಿಮನೆ ಬಗೆಬಗೆ ರೂಪವ ನೀ ತಂದಿ
ಅಗಜೆಯರಸ ನಿನ್ನ ಬಗೆ ತಿಳಿಯದು ಮೃಗಧರ ಜೂಟನೆ
ಜಗದಧಿಪತಿಯೆ ಪಂಚಾಕ್ಷರ ಸ್ವಾಮಿಯೆ ನೀ ಕಾಯೊ || 1 || 

ಸಾಮಗಾನಪ್ರಿಯ ಶಾಮಾಂಗಸಖನಾದ ಸೋಮಕಳಾನಿಧಿ
ವ್ಯೋಮ ಸದೃಶ ಸುಖಸ್ತೋಮ ನೇಮಕ್ಕೊಲಿದ ವಿನೋದ
ಕಾಮದಹನ ಶುಭಧಾಮ ಭೀಮ ಸುನಾಮ ಲಲಾಮ
ಪಂಚಾಕ್ಷರ ಸ್ವಾಮಿಯೆ ನೀ ಕಾಯೊ || 2 ||

ಸಂತರಾಳುವನೆ ನಿಶ್ಚಿಂತ ಮಂತ್ರಾಧಿದೈವ ಯಂತ್ರಮೂರುತಿ
ಮಹಿಮ ಸ್ವಂತರಂಗ ಧೀಮಂತ ಸ್ವತಂತ್ರಿಕ ಚಿಂತಿಪರನು
ಕೂಲನೆ ಶಾಂತ ನೀರಲಕೆರೆ ಯಂತಿನ ಗಡಿ ಬಿಡದಿಂತು ಕುಣಿಸುವ
ನಂತ ಜೀವಗಳ ಪಂಚಾಕ್ಷರ ಸ್ವಾಮಿಯೆ ನೀ ಕಾಯೊ || 3 ||
(ಪುಟ:1 | ಪದ್ಯ:1)

ಈ ಹಾಡು ಸ್ವತಃ ಅವರ ಗುರುಗಳಾದ ಲಿಂಗಸೂಗೂರನ ಶ್ರೀ ಪಂಚಾಕ್ಷರ ಸ್ವಾಮಿಗಳವರ ಮೇಲಿನ ಅಪಾರವಾದ ಭಕ್ತಿಯನ್ನು ನಿರೂಪಿಸುವುದಾಗಿದೆ. ನಮ: ಶಿವಾಯ ಎನ್ನುವ ಐದಕ್ಷರಗಳಿಂದ ಕರೆಯಲ್ಪಡುವ ಈ ಗುರು ಬರೀ ದೇಹ ರೂಪಿಯಲ್ಲ, ಇದು ಈತನ ಹೆಸರೂ ಅಲ್ಲ, ಯಾವ ಅಪೇಕ್ಷೆಗಳೂ ಇಲ್ಲದ, ನಿರಂಜನನಾದ, ಪ್ರೀತಿಯ ಭಕ್ತರಿಗೆ ಇಚ್ಛಿತ ಫಲವನ್ನು ತಕ್ಷಣವೇ ಕಣ್ಮುಂದೆ ತಂದಿಡುವ ಭಕ್ತಜನ ಪ್ರೇಮಿ, ನಿಸ್ಸೀಮ ಈ  ಗುರು. ತನ್ನ ಇಂಥ ಅಗಣಿತ ಮಹಿಮಾ ಶಕ್ತಿಯಿಂದಾಗಿ ಈ ಜಗದಲ್ಲಿ ನಾನಾ ರೂಪ ತಳೆದು ಬಹು ಲೇಸಾಗಿ ಜಗವ ರಕ್ಷಿಸುತ್ತಿದ್ದಾನೆ ಎಂದೆಲ್ಲ ತಮ್ಮ ಗುರು ಮಹಿಮೆಯನ್ನು ಬಣ್ಣಿಸುತ್ತಾರೆ.

ಇಂಥ ದೈವಿ ಕಳೆಯೇ ಮೈವೆತ್ತ ಗುರು ನಮ್ಮ ಮುಂದೆಯೇ ಇದ್ದರೂ ಕೂಡ ಬಹು ಬುದ್ಧಿವಂತನೆನಿಸಿಕೊಂಡ ಮನುಷ್ಯ ಜಗದ ಆಗು ಹೋಗುಗಳನ್ನು, ಅದರ ಒಳ‌ ಹೊರಗುಗಳನ್ನು ಕೂಲಂಕುಷವಾಗಿ ತಿಳಿದುಕೊಳ್ಳುತ್ತಾನೆ, ಆದರೆ ತನ್ನನ್ನೇ ತಾನು ಮರೆತು ಬಾಳುತ್ತಾನೆ ಎನ್ನುವುದನ್ನು

ನಿನ್ನ ನೀನೇ ತಿಳಿಯೋ ಈಗ
ನಿನ್ನ ನಿಜವ ಅತಿ ಬೇಗ.

ನೀನು ನಿನ್ನನರಿಯಲು ಅಜ್ಞಾನ ನಿನಗಿಲ್ಲ
ಏನು ಕಾರಣ ಮಾನವನಾದಿ ಅನುಮಾನಿಸದೆ ಹೋದಿ || 1 ||

ಬಾಳೆ ವಾಸನೆಯ ಸಂಸಾರ ಮಾಡಿ
ಖೂಳನಾದೆಲ್ಲೋ ಖೋಡಿ ಕಾಲಗೇನ್ಹೇಳ್ತಿ ನೋಡಿ || 2 ||

ಗಡಿ ನೀರಲಕೆರೆ ಗೊತ್ತಿನ ಒಡೆಯನಡಿ ಹೊಂದಿ
ಬಿಡದೆ ಸದ್ಗತಿಯನು ಕೇಳೋ ದೃಢವಾಗಿ ಬಾಳೋ || 3 || 
(ಪುಟ:5 | ಪದ್ಯ:3)

ಎನ್ನುತ್ತ, ಅನಿಶ್ಚಿತವಾದ ಈ ಜೀವನದ ಕಾಲವನ್ನು ಅನಾವಶ್ಯಕವಾದ ಚಿಂತೆ-ಚಿಂತನೆಯಲ್ಲೇ ಕಳೆಯುವ ಮನುಷ್ಯ, ತನ್ನ ಈ ವಿಚಾರ ಶಕ್ತಿಯನ್ನು ತನ್ನ ತಾನರಿಯಲು ಬಳಸಿಕೊಳ್ಳುತ್ತಿಲ್ಲ, ಇಲ್ಲ ಆ ಬಗೆಗೆ ಆಲೋಚಿಸುವ ಶಕ್ತಿಯೇ ಇಲ್ಲವಾದ ಕಾರಣ ಈ ವಾಸನೆಯ ಮತ್ತು ರಂಜನೆಯ ಬಾಳನ್ನೇ ಬಹುವಾಗಿ ನಂಬಿ ಕೆಡುತ್ತಿದ್ದಾನೆ. ಮಹಾದೇವನಾಗಬಲ್ಲ ಮಾನವ ವ್ಯರ್ಥವಾಗಿ ತನ್ನನ್ನು ತಾನು ಹಾಳು ಮಾಡಿಕೊಳ್ಳದೇ ಗುರುವಿನ ಕರುಣೆಯ ಪಡೆದು ಜೀವನವನ್ನು ಸಾರ್ಥಕವಾಗಿಸಿಕೊಂಡು ಸದ್ಗತಿಯನ್ನು ಹೊಂದಬೇಕೆಂದು ತಿಳಿಸುತ್ತಾರೆ.

ಈ ಸಂಸಾರವೆಂಬುದು ತೀರಾ ಬೂಟಾಟಿಕೆಯದು, ನಿರರ್ಥಕವಾದುದು; ಅಷ್ಟೇ ಅಲ್ಲ ತನ್ನ ಬುದ್ಧಿಗೇಡಿತನದ ವರ್ತನೆಗಳ ಕಾರಣವಾಗಿ ನಗೆ ಪಾಟಲಿಗೀಡಾಗುವಂಥದ್ದು. ಇಂಥ ಜೀವನದ ಬಗ್ಗೆ ಮನುಷ್ಯನ ತಿಳುವಳಿಕೆ ಹೇಗಿರಬೇಕೆಂಬುದನ್ನು

ನಗಾರಿ ಮೇಲೆ ಕೈ ಹಾಕೋ ನಗೆಗೇಡಿ ಸಂಸಾರ
ಇನ್ನೇಕೋ ಜಗಜಗಿಸುವ ಪ್ರಭೆ ಜಗದಗಲಾಗಿದೆ
ವಿಗಡ ಮಾಯೆ ಎಲ್ಲಿರಬೇಕೊ || ಪಲ್ಲವಿ ||

ಎತ್ತ ನೋಡೇ ಬ್ರಹ್ಮಿತ್ತಾಗಿ ಹಿಂದಿತ್ತೇನಿದು ಸತ್ತಿತ್ತಾಗಿ
ಚಿತ್ತನೊಳರಿ ಎತ್ತೆತ್ತಾಗಿ ಮತ್ತುತ್ತರಿಸು ಉತ್ತರ ನೀಗಿ. || 1 ||

ಕಲ್ಪ ಕಾಲ ಕಲ್ಪಿತವೆಲ್ಲ ಅಲ್ಪ ಬುದ್ಧಿಯವಗೆ ಸಲ್ಲ
ಬಲ್ವದ ಜ್ಞಾನದೊಳಿದ್ದಿಲ್ಲ ಸ್ವಲ್ಪಾಲಿಸು ನಾ ಸುಳ್ಳು ಬಿದ್ದಿಲ್ಲ. || 2 ||

ನಡೆ ನೀರಲಕೆರೆ ಗಡಿಗೆ ನಡೆ-ನುಡಿಯ ತೊಡಕು ಬಿಡದಾಗೆ
ಒಡೆಯನೊಲಿಸಲು ಆ ಶಿವಯೋಗಿ ಅಡಗಿದನಲ್ಲೇ ಏಕಾಗಿ. || 3 ||
(ಪುಟ:16 | ಪದ್ಯ:25)

ಎಂದು ಹೇಳುತ್ತಾ, ಈ ಸಂಸಾರವೇ ಅರ್ಥಹೀನವಾದದ್ದು, ನಿಸ್ಸಾರವಾದದ್ದು; ಮನುಷ್ಯನಲ್ಲಿ ಇಷ್ಟೆಲ್ಲ ತಿಳುವಳಿಕೆ ಇದ್ದಾಗಲೂ ಕೂಡ ಈ ಬಣ್ಣದ ಜಗತ್ತಿಗೆ ಮರುಳಾಗುತ್ತಾನೆ; ಚಿತ್ತ ಭ್ರಮೆಗೆ ಈಡಾಗಿ, ಜೀವನದ ಸತ್ಯಕ್ಕೆ ದೈವದ ಸತ್ಯಕ್ಕೆ ಉತ್ತರವಾಗದೆ ತತ್ತರಿಸುತ್ತಿದ್ದಾನೆ. ಹಾಗಾಗಿ ತನ್ನಲ್ಲೇ ಆ ದೈವಿ ಕಾರಣವಾಗಿ, ಗುರುವಿನ ಕಾರಣವಾಗಿ ಇರುವಂತಹ ಜ್ಞಾನವನ್ನು ಸದ್ಬಳಕೆ ಮಾಡಿಕೊಂಡು ಈ ಅರ್ಥಹೀನವಾದ, ಸಾರಹೀನವಾದ ಈ ಜೀವನ ಅನ್ನೋದು ವ್ಯರ್ಥ ಎನ್ನುವುದನ್ನು ಈ ಮನುಷ್ಯನೇ ಜಗತ್ತಿಗೆ ನಗಾರಿ ಬಾರಿಸುವುದರ ಮೂಲಕ ಅದರ ಸದ್ದಿನ ಮೂಲಕ ಸಾರಿ ಸಾರಿ ಹೇಳಬೇಕಾಗಿದೆ ಎಂದು ಹೇಳುತ್ತಾರೆ.

ಈ ಭೂಮಿಯ ಮೇಲೆ ಮೈತಳೆದ ಮನುಷ್ಯ ಹುಟ್ಟುವಾಗ ಕೇವಲ ಮನುಷ್ಯನಾಗಿರುತ್ತಾನೆ. ಆದರೆ ಬೆಳೆದಂತೆಲ್ಲ ಬದುಕಿನ ಲಾಭ ನಷ್ಟಗಳ ಲೆಕ್ಕಾಚಾರ ಕಾರಣವಾಗಿ ಜಾತಿ ಧರ್ಮ ಸಂಬಂಧಗಳನ್ನು ಅಳವಡಿಸಿಕೊಂಡು ತನಗೆ ಪ್ರಯೋಜನಕಾರಿ ಎನಿಸಿದಾಗ ಅವುಗಳೊಂದಿಗೆ ಒಡನಾಡಿ, ಹೊಗಳಿ, ಪ್ರಾಣಕ್ಕೆ ಪ್ರಾಣವಾಗಿ ಪ್ರೀತಿಸುತ್ತಾನೆ; ನಿಷ್ಪ್ರಯೋಜಕ ಎನಿಸಿದಾಗ ಅವುಗಳನ್ನು ಮನಸೋ ಇಚ್ಛೆ ಜರಿದು, ನಿಂದಿಸಿ ದೂರವಾಗುತ್ತಾನೆ. ಈ ಎರಡೂ ನೆಲೆಯ ಅತಿರೇಕದ ಸ್ವಭಾವ ಮಾನವ ಜೀವನಕ್ಕೆ ಮಾರಕವಾದುದು. ಮನುಷ್ಯನ ಕಷ್ಟ-ಸುಖಗಳಿಗೆ ಮನುಷ್ಯ ಹಬರೀ ಮನುಷ್ಯರೊಂದಿಗಷ್ಟೇ ಅಲ್ಲದೇ ಇತರ ಜೀವಿಗಳೊಂದಿಗೂ ಹೊಂದಾಣಿಕೆಯಿಂದ ಬದುಕಬೇಕು. ಇದು ಅವಶ್ಯಕ ಮತ್ತು ಅನಿವಾರ್ಯ. ಆದರೂ ಸಹ ನಾವು ಕಾಲಾನುಕಾಲದಿಂದ ಈ ವಾಸ್ತವವನ್ನು ತಿಳಿದರೂ ಸಹ ಸಮಯ ಸಾಧಕತನದ ಸ್ವಭಾವವನ್ನು ಬಿಡುತ್ತಿಲ್ಲ. ಅದೇ ಅರ್ಥವಿಲ್ಲದ ಕೌಟುಂಬಿಕ, ಧಾರ್ಮಿಕ ಮತ್ತು ಜಾತಿಯ ಸಂಘರ್ಷಗಳನ್ನು ಮುಂದುವರೆಸಿಕೊಂಡೇ ನಡೆದಿದ್ದೇವೆ. ಇದಕ್ಕೆ ಮೊಹರಂ ಸಂದರ್ಭವನ್ನೇ ಉದಾಹರಣೆಯಾಗಿಸಿಕೊಂಡು ಧಾರ್ಮಿಕ ಸಂಘರ್ಷತನದ ಬಗೆಗೆ ಹೇಳುತ್ತಾ

ಅಲಾವಿನಾಡಿರೊ ಪೀರನ ಅಲಾವಿನಾಡಿರೊ
ಬವ‌ಸೈ ಕೆವಸೈ ದೂಲ ಯಾಲ ಅನ್ನಿರಿ ಜನರೇ. || ಪಲ್ಲವಿ ||

ಹದಿನೆಂಟು ಕುಲದ ದೈವವು ಕೂಡಿ
ಲಿಂಗದ ಮೇಲೆ ಲಾಡಿ ಹಾಕುವಿರಿ

ತುರುಕರ ಲಾಡಿ ಕೊರಳೊಳು ಹಾಕಿ
ಮುಟ್ಟೀರಿ ತಟ್ಟೀರಿ ಎಂಬುವುದೇಕೆ. || 1 ||

ಅಡವಿಯೊಳಿರುವ ಕಲ್ಲನು ತಂದು
ಕೆತ್ತಿ ಲಿಂಗವ ಮಾಡಿ ಕಟ್ಟಿದಿರಿ
ಮುನ್ನೂರರುವತ್ತು ನಾಡಿಯನೆಳೆದು
ನಾಡಿಗೊಂದು ಲಿಂಗವ ತೋರುವುದೇಕೊ. || 2 ||

ದಂಡು ನೀರಲಕೇರಿ ಗಂಡುಮೆಟ್ಟು
ನೋಡಿ ಹಿಡಕೊಂಡಿರಿ
ಪುಂಡ ಪಂಚಾಕ್ಷರ ಗಂಡನ ನುಡಿ ಕೇಳಿ
ಬಂಡು ಆದಿರಿ ದೈವವು ಎಲ್ಲ. || 3 ||
(ಪುಟ:90 | ಪದ್ಯ:164)

ಎನ್ನುತ್ತ ಮೈ ಮೇಲೆ ಧರಿಸುವ ಲಿಂಗ-ಲಾಡಿಗಳೆಲ್ಲ ಕೇವಲ ಧಾರ್ಮಿಕ ಲಾಂಛನಗಳು. ಅವು ಬೇರೆ ಬೇರೆ ಸ್ವರೂಪದವುಗಳಾದರೂ ಸಹ ಅವುಗಳನ್ನು ಧರಿಸುವ ದೇಹ ಒಂದೇ ಸ್ವರೂಪದ್ದಾಗಿದೆ. ಲಿಂಗಾಯತರ ಮಂತ್ರ ಮತ್ತು ಜೈಕಾರಗಳಾಗಲಿ, ಮುಸ್ಲೀಮರ ದೀನ್ ಅನ್ನುವ ಪರಾಕುಗಳಾಗಲೀ ಬೇರೆ ಬೇರೆ ಭಾಷೆಗಳಲ್ಲಿನ ನಿರಾಕಾರ ಸ್ವರೂಪನಾದ ದೇವರನ್ನು ಸ್ತುತಿಸುವ, ಆತನ ಹೆಸರಿನಿಂದ ಸಂಭ್ರಮಿಸುವ ಧ್ವನಿಗಳೇ ಆಗಿವೆ. ಹೀಗಿದ್ದಾಗ ಎಲ್ಲರೂ ಆ ದೇವನ ಮಕ್ಕಳೆಂದೇ ನಂಬಿದ ನಮ್ಮಲ್ಲಿ ಧರ್ಮ ಮತ್ತು ದೇವರ ನೆಲೆಯಲ್ಲಿ ಭೇದವೆಣಿಸುವದು, ಸಂಘರ್ಷಕ್ಕಿಳಿಯುವದು ಬುದ್ಧಿವಂತನೆನಿಸಿದ ಮನುಷ್ಯನ ಸಣ್ಣತನವಾಗುತ್ತದೆ. ಇದು ಧರ್ಮ- ಭಾಷೆಗಳನ್ನು ಮೀರಿದ ದೇವನಿಗೆ ಅಪ್ರಿಯವಾದುದಾಗಿದೆ. ಹಾಗಾಗಿ ದೇವರನ್ನೊಲಿಸಿಕೊಳ್ಳುವದೇ ಪರಮ ಗುರಿಯಾಗಿರುವ ನಮಗೆ ಆಗ ದೇವರನ್ನು ತಿಳಿಯುವ,ಆತನನ್ನು ತಲುಪುವ ರಾಜಮಾರ್ಗ ಎನಿಸಿದ ಧರ್ಮವನ್ನು ಸಂಘರ್ಷಕ್ಕೆ ಎಳೆಸದೇ ನಾವೆಲ್ಲರೂ ಒಂದಾಗುವ, ದೇವರಿಗಾಗಿ ಚೆಂದಾಗುವ ಸಾಮರಸ್ಯಕ್ಕಾಗಿ ಬಳಸಬೇಕೆನ್ನುತ್ತಾರೆ.

ಹಾಗೆ ನೋಡಿದರೆ ಸಾಮರಸ್ಯದಿಂದ ಬದುಕುವ ಸ್ವಭಾವ ನಮಗೆ ನಮ್ಮ ತಂದೆ ಎನಿಸಿದ ಆ ದೇವನಿಂದಲೇ ಬಂದಿದೆ. ನಾವೆಲ್ಲರೂ ದೇವನ ಮಕ್ಕಳೆಂದು ಆಗಾಗ ನಾವೇ ಸಹಜವಾಗಿ ಅನ್ನುತ್ತಿರುತ್ತೇವೆ. ಇದನ್ನೇ ನೀರಲಕೆರಿ ಬಸವಲಿಂಗ ಶಿವಯೋಗಿಗಳವರು ನಮಗೆ ಮತ್ತೊಮ್ಮೆ ನೆನಪಿಸುತ್ತ

ನಮ್ಮಪ್ಪ ಇವ ನಮ್ಮಪ್ಪ ಜಗ ತನ್ನಂತೆ ತಿಳಿದವ ನಮ್ಮಪ್ಪ. || ಪಲ್ಲವಿ ||

ಸಾಧಿಸಿ ಬ್ರಹ್ಮದ ಭೇದವ ತಿಳಿದು ಸ್ವಾದವ ಕುಡಿದವ ನಮ್ಮಪ್ಪ. || ಅನು ಪಲ್ಲವಿ ||

ವಾದವನಳಿದವ ನಮ್ಮಪ್ಪ ಜಗದಾದಿಯ ತಿಳಿದವ ನಮ್ಮಪ್ಪ
ಗಾದಿಯ ಮನುಜರ ಹಾದಿಯ ಬಿಟ್ಟು ವಿನೋದದಲಿದ್ದವ ನಮ್ಮಪ್ಪ. || 1 ||

ತ್ರಿಕೂಟ ಸಂಗಮನು ನಮ್ಮಪ್ಪ ತ್ರಿಕೋಣಿಯೊಳಿದ್ದವ ನಮ್ಮಪ್ಪ
ಅಕಳಂಕ ರೂಪನು ನಮ್ಮಪ್ಪ ಶಿಖಾ ಪಶ್ಚಿಮ ಚಕ್ರವು ನಮ್ಮಪ್ಪ. || 2 ||

ಸಂಚಲವಳಿದವ ನಮ್ಮಪ್ಪ ಗುರು ವಂಚಕರಿಗೆ ಸಿಗನು ನಮ್ಮಪ್ಪ
ಗೊಂಚಲು ಮುಕ್ತಿ ಪ್ರಭೆಯನು ಬೀರುತ ಪಂಚಾಕ್ಷರ ದೇವ ನಮ್ಮಪ್ಪ. || 3 ||
(ಪುಟ:51 | ಪದ್ಯ:92)

ಎಂದೆನ್ನುತ್ತಾ, ದೇವನು ತಾನೇ ನಿರ್ಮಿಸಿದ ಈ ಜಗವನೆಲ್ಲ ತನ್ನಂತೆಯೇ ಇದೆ ಎಂದು ಭಾವಿಸಿದ ಮುಗ್ಧ ಸ್ವಭಾವದವನು. ಈ ಸೃಷ್ಪಿ ಭಿನ್ನ ಭಿನ್ನವಾದ ರುಚಿಯನ್ನುಳ್ಳದಾದರೂ ಏಕೋ ರೂಪವಾದ ಬ್ರಹ್ಮವನ್ನು ತಿಳಿಯಲು ಇದೇ ಪೂರಕವಾದುದು. ಅಂತೆಯೇ ಸ್ವತಃ ಈ ದೇವನೇ ಅಂಥ ರುಚಿಯನ್ನುಂಡು ಈ ಲೋಕವನ್ನು ಅಭೇದವಾಗಿ ಪಾಲಿಸುತ್ತಿದ್ದಾನೆ. ಪರ ವಿರೋಧದ ಮಾತುಗಳಿರುವ ವಾದಕ್ಕಿಳಿಯದೇ, ಅಜ್ಞಾನ ಕಾರಣವಾಗಿ ಹಾಗೆ ವಾದ ಮಾಡುತ್ತಿರುವ ಮನುಷ್ಯನನ್ನು ಕಂಡು ನಗುತ್ತಾನೆಯೇ ವಿನಃ ಕೋಪಿಸಿಕೊಳ್ಳುವವನಲ್ಲ. ಮನದ ಚಂಚಲತನವನಳಿದು ಸದಾ ಯೋಗ ಸಮಾಧಿಯಲ್ಲೇ ತನ್ಮಯನಾಗಿ, ಗುರುವಿನ ಮಗನೆಂದು ಸಾರುತ್ತಾ, ಗುರುವಿಗೇ ಮೋಸ ಮಾಡುವವರಿಂದ ಯಾವತ್ತೂ ದೂರವಿದ್ದುಕೊಂಡು, ತನ್ನನ್ನು ನಂಬಿದವರಿಗೆ ಮುಕ್ತಿಯನು ತೋರುವ ಆ ದೇವನೇ ನಮ್ಮ ನಿಜವಾದ ತಂದೆಯಾಗಿದ್ದಾನೆ ಎಂದು ಹೇಳುತ್ತಾರೆ.

ಹೀಗೆಲ್ಲ ಬದುಕಿನ ಸಾರ್ಥಕತೆಯ ಕುರಿತಾಗಿ ತಿಳಿಹೇಳುವ ಶ್ರೀ ಬಸವಲಿಂಗ ಶಿವಯೋಗಿಗಳು ಮನುಷ್ಯ ತನ್ನ ಜ್ಞಾನ ಮತ್ತು ಸಾಧನೆಯ ಬಲದಿಂದ ಸ್ವರ್ಗ ಪಡೆಯಲಷ್ಟೇ ಬಹು ಉತ್ಸುಕನಾಗುತ್ತಾನೆ. ಭೂಮಿಯ ಜೀವನಕ್ಕಿಂತ ಸ್ವರ್ಗದ ಜೀವನವೇ ಮಿಗಿಲೆಂದು ಭಾವಿಸುತ್ತಾನೆ. ಅಷ್ಟೇ ಅಲ್ಲ ಅದು ಸಾಕ್ಷಾತ್ ಶಿವನ ನೆಲೆ ಎಂದೇ ಬಲವಾಗಿ ನಂಬಿದ್ದಾನೆ. ಆದರೆ ಸ್ವರ್ಗವನ್ನು ಸಾಧಿಸಬಲ್ಲ ಶಕ್ತಿ ಇರುವ ಮನುಷ್ಯನಿಗೆ ಜೀವನವನ್ನು ಸಾರ್ಥಕವಾಗಿಸುವ, ಪರಿಪೂರ್ಣವಾಗಿಸುವ ಇನ್ನೊಂದು ಅಂತಿಮ ನೆಲೆ ಇರುವ ಬಗ್ಗೆ ಗೊತ್ತಿದ್ದರೂ ಕೂಡ ಅದನ್ನು ಅಷ್ಟಾಗಿ ಬಯಸದಿರುವದನ್ನು ಕಂಡು

ಕೈಲಾಸ ಬಯಸಬೇಡೊ ಕೈವಲ್ಯ ಪಡೆದು ನೋಡೊ
ಸುಯ್ಗರಿವುತ ಹಲುಬುಗಟ್ಟಿ ಮನದಿ || ಪಲ್ಲವಿ ||

ಮೈ ಕೈ ಮೊಗ ಸೈ ಬಾಯಿ ಸವಿಗಳ ಬಿಟ್ಟು
ಬಯಲ ಗುರಿಯ ಮಾಡಿ ಭವವ ಅಳಿದುಳಿ. || 1 ||

ದು:ಖ ಸಂಸಾರಕ್ಕೆ ಎದೆಗೊಡದಿರು ನದ
ರಿಕ್ಕಿ ಚಿತ್ಕಳೆ ರಸವುಕ್ಕಿ ಹೃದಯದೊಳು. || 2 ||

ಉತ್ತಮ ನೀರಲಕೆರೆ ಗೊತ್ತಿನಾಲಯದ ಗುರುವ
ಉತ್ತಮನ ಅಡಿವಿಡಿದತ್ತ ಹಂಬಲಿಸುತ. || 3 ||
(ಪುಟ:32 | ಪದ್ಯ:57)

ಎಂದು ಕೈಲಾಸ/ಸ್ವರ್ಗ ಎನ್ನುವದೂ ಸಹ ಮರ್ತ್ಯ ಪಾತಾಳಗಳಂತೆ ಐಹಿಕ ಜೀವನದ ನೆಲೆಗಳೇ ಆಗಿವೆ. ಈ ಮೂರೂ ನೆಲೆಗಳಲ್ಲಿ ಹುಟ್ಟು-ಸಾವುಗಳಿವೆ. ಈ ಹುಟ್ಟು ಮತ್ತು ಸಾವುಗಳಿದ್ದಲ್ಲಿ ಜೀವನದಲ್ಲಿ ಸುಖ-ನೆಮ್ಮದಿ ಸಾಧ್ಯವಿಲ್ಲ. ಮನುಷ್ಯನ ಪಾರಮಾರ್ಥ ಸಾಧನೆಯ ಉದ್ದೇಶವೆಂದರೆ ಈ ಹುಟ್ಟು ಹಾಗೂ ಸಾವುಗಳು ಜಂಜಡ ಮತ್ತು ತೊಳಲಾಟಗಳಿಂದ ಬಿಡುಗಡೆಗೊಳ್ಳುವದು. ಇಂಥ ಬಿಡುಗಡೆಯ ನೆಲೆ ಎಂದರೆ ಅದು ಸ್ವರ್ಗವನ್ನು ಮೀರಿದ್ದುದು. ಇದನ್ನೇ ಮೋಕ್ಷವೆಂತಲೂ, ಮುಕ್ತಿ ಎಂತಲೂ, ಕೈವಲ್ಯ ಎಂತಲೂ ಕರೆಯುತ್ತಾರೆ. ಇಂಥ ಮುಕ್ತಿ ಅಥವಾ ಮೋಕ್ಷ ಸಂಸಾರಿಗಳು ಮತ್ತು ಸನ್ಯಾಸಿಗಳು ಈ ಇಬ್ಬರಿಗೂ ಅಪೇಕ್ಷಿತವಾದದ್ದು; ಅವಶ್ಯವಾದದ್ದು ಮತ್ತು ಜೀವನದ ಪರಮ ಗಮ್ಯವಾದದ್ದು. ಹಾಗಾಗಿಯೇ ಜಗತ್ತಿನ ಎಲ್ಲಾ ದಾರ್ಶನಿಕರು, ಮಹಾತ್ಮರು ಇದನ್ನೇ ಜಗತ್ತಿಗೆ ಮುಖ್ಯವಾಗಿ ಬೋಧಿಸುತ್ತಾರೆ. ಇದರಂತೆ ನಮ್ಮ ನೀರಲಕೇರಿ ಬಸವಲಿಂಗ ಶಿವಯೋಗಿಗಳು ಕೂಡ ಮನುಷ್ಯನಾದವನು ಕ್ಷಣಿಕ ಸುಖವಾಗಿರುವ ಬಗೆಬಗೆಯ ಇಂದ್ರಿಯಾತ್ಮಕವಾದ ಲೌಕಿಕ ಸುಖಗಳಿಗೆ ಹಾತೊರೆದು, ಅದರಿಂದಾಗುವ ನಾನಾ ದುಃಖಗಳಿಗೀಡಾಗದೇ ಅವುಗಳ ವಾಸನೆಯಳಿದು ಅಂದರೆ ಅವುಗಳ ಹಂಗು ಹರಿದು ನಿರ್ಲಿಪ್ತ ಮನಸ್ಥಿತಿಗೆ ತಲುಪುವ ಮೂಲಕ ಲೌಕಿಕ ಜಂಜಡಗಳಿಂದ ಬಿಡುಗಡೆಗೊಳಿಸುವ ಮುಕ್ತಿಯ ನೆಲೆಗೆ ಸೇರಿ ಈ ಐಹಿಕ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಲು ಕರೆ ನೀಡುತ್ತಾರೆ.

ಹೀಗೆ ಜಗಕ್ಕೆ ಬರೀ ಬೋಧೆ ಮಾಡುವದಷ್ಟೇ ಅಲ್ಲ, ಸ್ವತಃ ತಾವೇ ಅರಿವಿನಿಂದ ಜಾಗೃತಗೊಂಡು ಮುಕ್ತಿಯ ಪಥದಲ್ಲಿ ನಡೆಯುತ್ತಿರುವುದಾಗಿ ಹೀಗೆ ಹೇಳಿಕೊಳ್ಳುತ್ತಾರೆ.

ಗುರುವಿನ ಮಗ ನಾನು ಸದ್ಗುರುವಿನ ಮಗ ನಾನು
ಅರಿವಿನಾತ್ಮನ ಕುರುವಿಡಿದರಿದೆನು ಮರಳೆನು ಮರ್ತ್ಯಕೆ. || ಪಲ್ಲವಿ ||

ಸಾಧು ಬಳಗ ಕೂಡಿ ಭೇದಿಸಿ ಶ್ರವಣ ಮನನ ಮಾಡಿ
ವಾದಿ ಮೂರ್ಖರೊಳು ವಾದಿಸದೆ ನಾದ ಬ್ರಹ್ಮದಿ ಮೈಮರೆದಿಹ. || 1 ||

ಹಸಿವು ತೃಷೆಗಳನಳಿದು ಮೋಹದ ವಿಷಯಗಳ ಕಳೆದು
ಮುಸುಕಿದ ಮಹದಾನಂದದ ಸೊಬಗನುಸುರದೆ
ವಸುಧೆಯ ಜನರಂತಿರುತಿಹ. || 2 ||

ಹಿಡಿದೆನು ಗಡಿ ಗ್ರಾಮ ನೀರಲಕೆರೆ ನಡುನಾಡಿಗೆ ಪ್ರೇಮ
ಜಡದೇಹದ ಜಡರಳಿದು ಸುಖೋನ್ಮಯ ಕನಕಗಿರಿ ಒಡೆಯ. || 3 ||
(ಪುಟ:37 | ಪದ್ಯ:69)

ಎನ್ನುತ್ತಾ ಜೀವನು ಅಥವ ಸಾಧಕನು ಮುಕ್ತಿಗಾಗಿ ಪಕ್ಕಾಗಬೇಕಾದರೆ ಆತ ಮೊದಲು ಗುರು(ಅರಿ)ವಿನ ಮಗನಾಗಬೇಕು. ಅಂದಾಗಲೇ ಆತ್ಮನ ಕುರುಹಿಡಿಯಲು ಅಂದರೆ ತಾನಾರು ಎಂಬುದನು ತಿಳಿಯಲು ಸಾಧ್ಯವಾಗುತ್ತದೆ. ಇಂಥ ಅರಿವನ್ನು ಸಂಪಾದಿಸಿಕೊಳ್ಳಬೇಕಾದರೆ ಮೂರ್ಖರೊಡನಾಡದೆ, ಅವರೊಡನೆ ವಾದಿಸದೆ ಸದಾ ‌ಸಾಧು ಬಳಗದೊಳಿದ್ದು ಅರಿವನ್ನು ಮನನ ಮಾಡಿಕೊಳ್ಳುತ್ತ ನಾದ ಬ್ರಹ್ಮದಿ ಮೈ ಮರೆತು ಇರಬೇಕು; ಇದಕ್ಕಾಗಿ ಹಸಿವು, ತೃಷೆ, ಮೋಹಾದಿ ವಿಷಯಗಳನಳಿದು ಮನೋಮಂದಿರವನ್ನು ಆವರಿಸಿರುವ ಮಹದಾನಂದದ ಸೊಬಗನು ಆರಿಗೂ ತೋರಗೊಡದೆ ಅಂತರ್ಮುಖಿಯಾಗಿ ಲೋಕದ ದೃಷ್ಪಿಯಲ್ಲಿ ತೀರಾ ಸಾಮಾನ್ಯನಂತೆ ಬದುಕಬೇಕು. ಅಂದಾಗಲೇ ಮುಕ್ತಿಯ ನೆಲೆಗೆ ತಲುಪಲು ಸಾಧ್ಯ ಎಂದು ತಮ್ಮ ಸ್ವಾನುಭವದ ಮೂಲಕ ನಿರೂಪಿಸುತ್ತಾರೆ.

ಈ ಗುರು-ಶಿಷ್ಯ ಸಂಬಂಧ ಎನ್ನುವದು ಇಬ್ಬರು ವ್ಯಕ್ತಿಗಳು ಇದಿರು ಬದಿರಾಗಿ ಕುಳಿತು ಗುರುವಾದವನು ಬೋಧಿಸುವ, ಶಿಷ್ಯನಾದವನು ಅದನ್ನು ಆಲಿಸುವ, ತಿಳಿದುಕೊಳ್ಳುವ ಬರೀ ಕ್ರಿಯೆಯಲ್ಲ. ಅದು ಪರಸ್ಪರರನ್ನು ಆವಾಹಿಸಿಕೊಳ್ಳುವ, ಅನುಭವಿಸಿ ಅನುಭಾವಿಸುವ ಅದಮ್ಯಾನುಭವವಾಗುವಂಥದ್ದು. ಈ ಸಂಬಂಧ ಹೀಗಾದಾಗಲೇ ನಿಜ ಜ್ಞಾನದ ದರ್ಶನವಾಗುತ್ತದೆ; ಅನುಭವವನ್ನು ಮೀರಿ ಸಾಕ್ಷಾತ್ಕಾರವಾಗುತ್ತದೆ. ಆಗಲೇ ಗುರುವಿನ ಮಹತ್ವ, ಮಹಿಮೆ ಶಿಷ್ಯನ ಮೂಲಕ ಲೋಕದಲಿ ಪ್ರಕಟಗೊಂಡು ಇಹದ ಬದುಕಿನ ಸಾರ್ಥಕತೆಗೆ ಸಾಧ್ಯವಾಗುತ್ತದೆ. ಗುರು-ಶಿಷ್ಯರ ಸಂಬಂಧದ ಇಂಥ ಪರಿಯನ್ನು

ಎಂಥಾತ ಗುರುನಾಥನು ಬಹಳಂತ: ಕರಣುಳ್ಳಾತನು. || ಪಲ್ಲವಿ ||

ಕಾಂತೆ ನೀ ಬಾರೆಂದು ಏಕಾಂತಕೆ ಕರೆದೊಯ್ದು
ಎಂಥ ಮಾತ ಹೇಳಿದನು. || ಅನು ಪಲ್ಲವಿ ||

ಸಾಧುರನ ನೆನೆಯೆಂದನು ಅವರ ಪಾದಕ್ಕೆ ಎರಗೆಂದನು
ಸಾಧು ಸತ್ಪುರುಷರ ಭೇದವ ತಿಳಿದರೆ ಬಾಧೆ ನಿನಗಿಲ್ಲೆಂದನು. || 1 ||

ಆರು ಗುಣ ಅಳಿಯೆಂದನು ಮತ್ತೆ ಮೂರು ಗುಣ ತಿಳಿಯೆಂದನು
ಆರು ಮೂರೊಂಭತ್ತು ಭೇದವ ತಿಳಕೊಂಡು ಪಾರಾಗು ನೀನೆಂದನು. || 2 ||

ಬಯಲಿಗೆ ಬಯಲೆಂದನು ನಿರ್ಬಯಲೊಳಗಾಡೆಂದನು
ಬಯಲು ನೀರಲಕೆರೆಯಾಲಯದೊಳು ನೀ ಲೀಲೆಯೊಳಿರು ಎಂದನು. || 3 ||
(ಪುಟ:87 | ಪದ್ಯ:158)

ಗುರು ಅತ್ಯಂತ ಕರುಣಾಮಯಿ, ಆತನದು ಶಿಷ್ಯರ ಮೇಲೆ ನಿರ್ವ್ಯಾಜ ಪ್ರೇಮ; ಅಷ್ಟೇ ಇವರಿಬ್ಬರದು ಪ್ರೇಮಿಗಳ ಸಂಬಂಧ. ಗುರು-ಶಿಷ್ಯರು ಸಂವಾದಿಸುವದು ನಲ್ಲ ನಲ್ಲೆಯರಂತೆ ಏಕಾಂತದಲ್ಲೇ ಹೊರತು, ಜನ ನಿಬಿಡವಾದ ಸ್ಥಳದಲ್ಲದಲ್ಲಲ್ಲ; ಗುರೂಪದೇಶದ ಸ್ಥಳವೂ ಅದಲ್ಲ. ಅದಕ್ಕೆ ಸೂಕ್ತವಾದ ಏಕಾಂತದ ಸ್ಥಳದಲ್ಲಿ ಗುರು ಶಿಷ್ಯನಿಗೆ ಕಲಿಸುವ ಮುಖ್ಯ ಸಂಗತಿಗಳು ಕೆಲವು ಮಾತ್ರ.ಅವು,

1. ಶಿಷ್ಯನಾದವನು ಸದಾ ಶಿವನ ಅಂದರೆ ಅರಿವಿನ ಧ್ಯಾನದಲ್ಲೇ ಇರುವ ಸಾಧುಗಳ ಸ್ಮರಣೆಯಲ್ಲಿರಬೇಕು. ಅಂದಾಗಲೇ ಅವನ ಮನಸ್ಸು ನಿಶ್ಚಲವಾಗುತ್ತದೆ, ಅದಕ್ಕಾಗಿ ಪಕ್ಕಾಗುತ್ತದೆ. ಮುಂದುವರಿದು ಅರಿವಿನ ಮೂರ್ತಿಗಳಾದ ಆ ಸಾಧುಗಳಿಗೆ ಸದಾ ವಿನೀತನಾಗಿರಬೇಕು. ಇದು ಕಲಿಯುವವನ ಅಂದರೆ ಶಿಷ್ಯನಾಗುವವನಲ್ಲಿರಬೇಕಾದ ಮೂಲ ಮತ್ತು ಮುಖ್ಯ ಗುಣ. ಶಿಷ್ಯನಾದವನು ತನ್ನಲ್ಲಿ ಪರಾತ್ಪರ ಅರಿವನ್ನು ಸಾಕ್ಷಾತ್ಕರಿಸಿಕೊಳ್ಳಬೇಕಾದರೆ ಅರಿವಿನ ಮೂರ್ತಿಗಳೆನಿಸಿದ ಸಾಧುಗಳು ಮತ್ತು ಸಾಧಕರು, ಸಜ್ಜನರು ಎನಿಸಿದ ಸತ್ಪುರುಷರುಗಳ ನಡುವಿನ ವ್ಯತ್ಯಾಸವನ್ನು ತಿಳಿದುಕೊಂಡು ಅವರೀರ್ವರಿಂದ ಅವರವರಲ್ಲಿನ ಶಕ್ತಿಯನ್ನು ಪಡೆದುಕೊಳ್ಳಬೇಕು.

2. ವಿಶೇಷವಾಗಿ ಅಜ್ಞಾನ,ಅಹಂಕಾರಗಳ ಕಾರಣವಾಗಿ ಅಂಟಿಕೊಂಡಿರುವ ಕಾಮ, ಕ್ರೋಧ, ಲೋಭ, ಮೋಹ,ಮದ ಮತ್ತು ಮಾತ್ಸರ್ಯಗಳೆಂಬ ಅರಿಷಡ್ವರ್ಗಗಳನ್ನು ಕಳೆದುಕೊಂಡು, ಗುರು, ಲಿಂಗ ಮತ್ತು ಜಂಗಮಗಳನ್ನು ಸರಿಯಾಗಿ ಅರಿತುಕೊಂಡು ಈ ಭವ ಬಂಧನದಿಂದ ಪಾರಾಗಬೇಕು.

3. ನಮ್ಮ ಸುತ್ತಲಿನ ಈ ಜಗವೆಲ್ಲಾ ಬಯಲಿನ ಮೊತ್ತ. ಇಲ್ಲಿ ಕಾಣುವ ಬಗೆಬಗೆಯ ರೂಪಗಳೆಲ್ಲ ಸುಳ್ಳು ಎಂಬುದನ್ನು ದೃಢವಾಗಿ ತಿಳಿದಾಗ ಮಾತ್ರ ನಮ್ಮ ಬದುಕಿನ ಅಂದರೆ ಗುರುವಿನ ಮೂಲ ನೆಲೆಯಾದ ಬಯಲು ನಮಗೆ ಪ್ರಾಪ್ತವಾಗುತ್ತದೆ. ಆಗಲೇ ನಾವು ಗುರುವಿನೊಡನೆ ಬೆರೆಯಲು ಸಾಧ್ಯವಾಗುತ್ತದೆ.

ಹೀಗೆಂದು ಗುರುವಿನೊಂದಿಗಿನ ತಮ್ಮ ಅನುಭವವನ್ನು ಅನುಭಾವದ ನೆಲೆಯಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ನಿರೂಪಿಸುತ್ತಾರೆ.

ನೀರಲಕೆರೆ ಶ್ರೀ ಬಸವಲಿಂಗ ಶಿವಯೋಗಿಗಳು ತಮ್ಮ ಬಹುತೇಕ ಹಾಡುಗಳನ್ನು ತಾವು ಪ್ರತ್ಯಕ್ಷವಾಗಿ ಕಂಡ ದೃಶ್ಯ ಮತ್ತು ಸಂದರ್ಭಗಳಲ್ಲಿಯೇ ಸೃಷ್ಟಿಸಿದ್ದಾರೆ. ಜನಪದ ಪರಂಪರೆಯವರೆಲ್ಲರೂ ಆಶುಕವಿಗಳೇ ಆದವರು. ಅದರಂತೆ ಇವರೂ ಕೂಡ ತಮ್ಮ ಆಶುಕವಿತ್ವದಿಂದ ಅನೇಕ ಹಾಡುಗಳನ್ನು ಹಾಡಿದ್ದಾರೆ. ಅಂಥವುಗಳಲ್ಲಿ ಒಂದೆರಡು ವಿಶೇಷ ಸಂದರ್ಭಗಳಲ್ಲಿ ರಚಿತವಾದ ಹಾಡುಗಳನ್ನು ಗಮನಿ‌ಬಹುದಾಗಿದೆ.

ಒಮ್ಮೆ ಅವರ ಊರಾದ ನೀರಲಕೆರೆಯಲ್ಲಿ ಇವರ ಭಕ್ತರ ಮನೆಯ ಒಂದು ಹೆಣ್ಣು ಮಗು ಅನಾರೋಗ್ಯದಿಂದಾಗಿ ಅಕಾಲಿಕವಾಗಿ ಸಾವನ್ನಪ್ಪಿತ್ತು. ಇದರಿಂದಾಗಿ ಸಹಜವಾಗಿ ಆ ಮಗುವಿನ ಹೆತ್ತವರು ಮತ್ತು ಪೋಷಕರಿಗೆ ದುಃಖ-ಸಂಕಟವಾಗಿ ಬಹುವಾಗಿ ಅಳುತ್ತಿದ್ದರು. ಈ ಸುದ್ದಿ ತಿಳಿದ ಶ್ರೀ ಬಸವಲಿಂಗ ಶಿವಯೋಗಿಗಳು ಅವರ ಮನೆಗೆ ಹೋಗಿ ಆ ದೃಶ್ಯವನ್ನು ಕಣ್ಣಾರೆ ಕಂಡರು. ತಮಗೆ ಅತ್ಯಂತ ಪ್ರೀತಿಯ ಒಡನಾಡಿಯಾಗಿದ್ದ ಆ ಮಗು ಈಗ ನಿರ್ಜೀವವಾಗಿ ಮಲಗಿರುವದನ್ನು ಕಂಡು ಆ ಮಗುವಿನೊಂದಿಗಿನ ತಮ್ಮ ಒಡನಾಟದ ನೆನಪು ಇವರ ಕಣ್ಮುಂದೆ ‌ಸುಳಿಯತೊಡಗುತ್ತದೆ. ಆಗ ಆ ಮಗುವಿನ ಬಗೆಗಿನ ತಮ್ಮ ಭಾವನೆಗಳನ್ನು ಆ ಸ್ಥಳದಲ್ಲೇ ಹಾಡಾಗಿಸುತ್ತಾರೆ.

ಮರೆಯುವ ಮಗಳಲ್ಲ ಮಾತಿನ ವಿಚಾರ ಬಲ್ಲಾಕಿ || ಪಲ್ಲವಿ ||

ಸೊಟ್ಟ ಹುಟ್ಟಲಿಲ್ಲ ಮಗಳ ದೃಷ್ಟಿಯು ಬಿಡಲಿಲ್ಲ
ಕೊಟ್ಟಂತ ಶಿವ ತಾ ಕಟ್ಟಿಕೊಂಡು ಹೋಗುವಾಗ

ಹೊಟ್ಟೆಕಿಚ್ಚಿಗಳುತೀ ಮಗಳೆ. || 1 ||

ಚಂದ್ರನಂಥ ಕೂಸೇ ಬಯಲಿಗೆ ಬಂದರೆ ಬಹು ಲೇಸೇ
ಸುಂದರ ಕಂದನ ಚಂದೇನ ಹೇಳಲಿ ಬಂದ
ಬೇನೆಯು ಬಿಡಲಿಲ್ಲ ಮಗಳೆ. || 2 ||

ಕಂಗಳೂರಿನ ಮಡದಿ ಲಿಂಗ ಸಂಗಯ್ಯನ ಹೊಟ್ಟೀಲಿ ಹುಟ್ಟಿದಿ
ಮಂಗಲ ನೀರಲಕೆರೆ ಬಸವೇಶ ಲಿಂಗನ ಮೋಹದ
ಪಾದಕೆ ಹೊಂದಿದಿ ಮಗಳೆ. || 3 ||
(ಪುಟ:88 | ಪದ್ಯ:162)

ಎನ್ನುವ ಈ ಹಾಡಿನಲ್ಲಿ ಆ ಮಗುವಿನ ರೂಪ ಮತ್ತು ಬುದ್ಧಿಶಕ್ತಿಗಳ ಗುಣಗಾನವನ್ನು ಕಾಣುತ್ತೇವೆ. ಈ ಎರಡು ಕಾರಣವಾಗಿ ಆ ಮಗು ಕೇವಲ ಹೆತ್ತವರಿಗಷ್ಟೇ ಮರೆಯಲಾಗದಂಥದ್ದಲ್ಲ. ಅವರೊಂದಿಗೆ ಒಡನಾಡಿಗಳಾದ ಈ ಸನ್ಯಾಸಿಗಳಿಗೂ ಸಹ ಮರೆಯಲಸಾಧ್ಯವಾದದ್ದು. ಕಾರಣ ಈ ಮಗಳು ಬಾಲ್ಯದಲ್ಲೇ ಆಡುತ್ತಿದ್ದ ಎಂಥವರನ್ನಾದರೂ ಬೆರಗುಗೊಳಿಸುತ್ತಿದ್ದ ತಿಳುವಳಿಕೆಯಿಂದ ತುಂಬಿರುತ್ತಿದ್ದ ಮಾತುಗಾರಳು; ಲೋಕದ ಕಣ್ಣಿಗೆ ಹೆಣ್ಣಾಗಿ ರೂಪವತಿಯಾದವಳು, ಅದಕ್ಕಾಗೇ ಲೌಕಿಕವಾದ ದೃಷ್ಟಿದೋಷಕ್ಕೀಡಾಗುತ್ತಿದ್ದವಳು. ಆದರೇನಂತೆ ಗುಣಮುಖವಾಗದ ರೋಗಕ್ಕೀಡಾಗಿ ಈಗ ಪ್ರಾಣವನ್ನೇ ಬಿಟ್ಟಿದ್ದಾಳೆ. ಈಕೆಯ ಅಗಲಿಕೆ ಯಾರಿಗೂ ಅಸಹನೀಯವೇ.ಆದರೇನು? ಹುಟ್ಟಿಗೆ ಕಾರಣನಾದ ದೇವನೇ ಈಗ ಸಾವನ್ನಿತ್ತಿದ್ದಾನೆ. ಈಗ ಇದಕ್ಕೆ ಪರಿಹಾರವೇ ಇಲ್ಲ. ಹಾಗಾಗಿ ಈಗ ಅವಳ ಬದುಕಿನ ಗುಣಗಾನದೊಂದಿಗೆ, ದೈವ ಸ್ವರೂಪನಾದ ಗುರುವಿನ ಪಾದವನು ಹೊಂದಿದ ಆಕೆಯ ಸಾವಿಗಾಗಿ ಸಮಾಧಾನ ತಾಳುವದೇ ಪರಿಹಾರ ಎಂಬ ಸಂದೇಶವನ್ನು ಸಾರುತ್ತಾರೆ.

ಈ ಹಾಡಿನಲ್ಲಿ ಶ್ರೀ ಬಸವಲಿಂಗ ಶಿವಯೋಗಿಗಳು ಅಲೌಕಿಕವಾದ ಮತ್ತು ಸೈದ್ಧಾಂತಿಕವಾದ ತಮ್ಮ ಬಹುತೇಕ ಹಾಡುಗಳಿಗಿಂತ ಭಿನ್ನವಾಗಿ ಈ ಹಾಡು ಹಾಡಿರುವದು ಬಹು ವಿಶೇಷವೆನಿಸುತ್ತದೆ.

ಇನ್ನೊಂದು ವಿಶೇಷ ಸಂದರ್ಭದ ಹಾಡು, ಶ್ರೀ ಘನಮಠ ಶಿವಯೋಗಿಗಳವರು ಹುನಗುಂದದಿಂದ ತಮ್ಮ ಸಂಚಾರವನ್ನು ಮುಂದುವರೆಸಿ ಲಿಂಗಸೂಗೂರುಗೆ ಬಂದು, ಆ ಊರಿನ ಹಿರಿಯರೂ, ಮಾಲಿಗೌಡರೂ ಆದ ಶ್ರೀ ಪಿಡ್ಡನಗೌಡರ ಅಪೇಕ್ಷೆಯಂತೆ ಕೆಲವು ದಿನಗಳು ಲಿಂಗಸೂಗೂರನಲ್ಲಿಯೇ ಇರುತ್ತಾರೆ. ಆಗ ಅದೇ ಶ್ರೀ ಸಾವಿರ ದೇವರ (ಪಂಚಾಕ್ಷರಿ) ಮಠದ ನೀರಲಕೆರೆ ಶಾಖಾ ಮಠದ ಅಧಿಪತಿ, ಅನುಭಾವಿ, ಸಿದ್ಧಿ ಪುರುಷ ನೀರಲಕೆರೆ  ಶ್ರೀ ಬಸವಲಿಂಗ ಶಿವಯೋಗಿಗಳವರ ಬಗೆಗೆ ತಿಳಿದಾಗ ಅವರನ್ನು ಭೇಟಿಯಾಗಲು ಅಪೇಕ್ಷಿಸಿ ಅಲ್ಲಿಂದ ಸುಮಾರು ಆರು ಮೈಲುಗಳಷ್ಟು ದೂರದ ನೀರಲಕೆರೆಗೆ ಬರುತ್ತಾರೆ. ಊರು ಪ್ರವೇಶಿಸಲು ಸ್ವಲ್ಪ ಹತ್ತಿರದಲ್ಲಿ ದಾರಿಯ ಹೊಲದಲ್ಲಿ ಒಬ್ಬ ವ್ಯಕ್ತಿಯನ್ನು ಕಂಡು ಆತನಿಂದ ಬಸವಲಿಂಗ ಶಿವಯೋಗಿಗಳ ಬಗೆಗೆ ಮಾಹಿತಿ ಪಡೆಯಲು ಬಯಸಿ, “ಇಲ್ಲಿ ನೀರಲಕೆರೆ ಬಸವಲಿಂಗಪ್ಪನವರು ಎಂದರೆ ಯಾರು? ಅವರು ಎಲ್ಲಿರುತ್ತಾರೆ? ಏನು ಮಾಡುತ್ತಾರೆ? ಎಂಬ ಪ್ರಶ್ನೆಗಳೊಂದಿಗೆ ಮಾತನಾಡಿಸುತ್ತಾರೆ. ಆಗ

ತಮ್ಮ ಕೇಳೋ ಎನ್ನ ಉದ್ಯೋಗ ತಮ್ಮ ಕೇಳೋ ಎನ್ನ ವ್ಯವಹಾರ
ಹಮ್ಮನಳಿದು ಪರಬ್ರಹ್ಮ ಚಿಂತೆಯೊಳು ಸುಮ್ಮನಿರುತ
ಎರಡೆಮ್ಮೆಯ ಕಾಯುತೀನಿ. || ಪಲ್ಲವಿ ||

ಸಕಲರು ಅರಿಯದ ಉದ್ಯೋಗ ತುಸು ಕಕುಲತೆಯಿಲ್ಲದ ಉದ್ಯೋಗ
ಮುಕುತಿಯೆಂಬ ಸ್ತ್ರೀ ಸುಖ ಸ್ವರೂಪದಿ ಇರೆ ವಿಕಳಮತಿಗೆ ತಾ ಸಾಕ್ಷಿಯಾಗಿಹ. || 1 ||

ಒಂದೆರಡಾಗದ ಉದ್ಯೋಗ ಎಂದೆಂದಿಗೆ ತೀರದ ಉದ್ಯೋಗ
ಕುಂದದೆ ‌ಹೆಚ್ಚದೆ ಸುಖ ಸ್ವರೂಪದೊಳೆಂದೆಂದಿಗೆ ತಾನಿದ್ದಂತಿರುತಿಹ. || 2 ||

ತಟ್ಟದ ಮುಟ್ಟದ ಉದ್ಯೋಗ ತುಸು ಕಟ್ಟಳೆಯಿಲ್ಲದ ಉದ್ಯೋಗ
ಶ್ರೇಷ್ಠನೆನಿಪ ಗುರು ಪಂಚಾಕ್ಷರನನು ಮುಟ್ಟಿ ಮರಳಿ ಹುಟ್ಟದಲಿರುತಿಹ. || 3 ||
(ಪುಟ:94 | ಪದ್ಯ:169)

ಎಂದು ಹಾಡತೊಡುಗುತ್ತಾರೆ.

ವಾಸ್ತವವಾಗಿ ಅವರು ಆ ಊರ ಮುಂದಿನ ಹೊಲದಲ್ಲಿ ಎಮ್ಮೆಗಳನ್ನು ಕಾಯುತ್ತಲೇ ಕುಳಿತಿರುತ್ತಾರೆ. ಆದರೆ ಈ ಎಮ್ಮೆ ಕಾಯುವಿಕೆ ಇವರಿಗೆ ಕೇವಲ ಲೌಕಿಕವಾದ ಒಂದು ಕೆಲಸವಲ್ಲ. ಎಮ್ಮೆ ಕಾಯುತ್ತಿದ್ದರೂ ಸಹ ಈ ಲೋಕ ವ್ಯವಹಾರದಿಂದ ದೂರವಿದ್ದು ಸದಾ ಪರಬ್ರಹ್ಮದ ಚಿಂತೆ ಅಂದರೆ ಧ್ಯಾನದಲ್ಲಿ ಇರುವದು ಇವರ ಸ್ವಭಾವ. ಇವರ ಇಂಥ ಈ ಉದ್ಯೋಗ ಸಾಮಾನ್ಯವಾಗಿ ಲೋಕದವರೆಲ್ಲರೂ ಎಮ್ಮೆ ಕಾಯುವಂಥದ್ದಲ್ಲ. ಪರಬ್ರಹ್ಮದ ಧ್ಯಾನವೆನ್ನುವದು ಎಲ್ಲರಿಗೂ ಸಿದ್ಧಿಸುವಂಥದ್ದಲ್ಲ. ಅಷ್ಟೇ ಲೌಕಿಕವಾಗಿ ಕಕ್ಕುಲತೆ ಅಂದರೆ ಅಪೇಕ್ಷಿತವಾದುದೂ ಅಲ್ಲ. ಈ ಉದ್ಯೋಗದಲ್ಲಿ ಲೌಕಿಕದಂತೆ ಯಾವಾಗಲೂ ಭೇದ-ವೈವಿಧ್ಯತೆಗಳಿಲ್ಲ. ಲಾಭ-ನಷ್ಟಗಳ ಗೊಡವೆ ಇಲ್ಲ, ಯಾರು ಬೇಕಾದವರು ಮಾಡುವಂಥ ವ್ಯವಹಾರ-ಉದ್ಯೋಗಗಳಂಥದ್ದಲ್ಲ, ಇದೇ ಸ್ಥಳ, ಇದೇ ಸರಕು, ಇದೇ ಪರಿಕರ ಇರಬೇಕೆಂಬ ನಿಯಮಗಳದ್ದಲ್ಲ. ಪಂಚಾಕ್ಷರ ಗುರುವಿನ ಕರುಣೆ-ಕೃಪೆಗಳಿದ್ದರೆ ಎಲ್ಲಿಯೇ ಆಗಲಿ, ಯಾವಾಗಲೇ ಆಗಲಿ ಈ ಉದ್ಯೋಗವನ್ನು ಸಾಧಕರಾದವರು ಮಾಡಬಹುದು ಎಂಬುದಾಗಿ ಹೇಳುತ್ತಾ ತಮ್ಮ ಪರಿಚಯ ಚಯ ಮಾಡಿಕೊಳ್ಳುತ್ತಾರೆ. ಆಗ  ಶ್ರೀ ಘನಮಠ ಶಿವಯೋಗಿಗಳು ಅವರು ಶ್ರೀ ಬಸವಲಿಂಗ ಶಿವಯೋಗಿಗಳವರ ಆಧ್ಯಾತ್ಮ ಶಕ್ತಿಯನ್ನು ಕಂಡು ಬೆರಗಾಗುತ್ತಾರೆ.

ಹೀಗೆ ಇಂಥ ಅನೇಕ ಪ್ರಸಂಗಗಳು ಇವರಲ್ಲಿ ಆಶುಕವಿತ್ವದಿಂದ ಅನುಭಾವದ ಹಾಡಾಗಿ ಹೊಮ್ಮಿರುವದನ್ನು ಇವರ ಚರಿತ್ರೆ ಹಾಗೂ ಹಾಡುಗಳ ಮೂಲಕ ನಾವು ಅರಿಯುತ್ತೇವೆ.

ಶ್ರೀ ಬಸವಲಿಂಗ ಶಿವಯೋಗಿಗಳವರ ಹಾಡುಗಳು ತತ್ವ, ದೈವೀ ಸಾಕ್ಷಾತ್ಕಾರತ್ವ ಹಾಗೂ ಅನುಭಾವ ಗಮ್ಯತೆಯಿಂದ ಕೂಡಿದ್ದು, ಭಾಷೆ ಮತ್ತು ನಿರೂಪಣ ಶೈಲಿಗಳಿಂದ ಅತ್ಯಂತ ಸರಳತೆಯಿಂದ ತುಂಬಿಕೊಂಡಿವೆ. ಓದಲು, ಕಂಠಪಾಠ ಮಾಡಲು ಸುಲಭವಾಗಲೆಂಬಂತೆ ಈ ಹಾಡುಗಳು ದೀರ್ಘವಾಗಿರದೇ ಕೇವಲ ಮೂರೇ ನುಡಿ(ಪದ್ಯ)ಗಳಲ್ಲಿ ರಚನೆಗೊಂಡಿರುವದು ಇವರ ಸಾಹಿತ್ಯಕ ವಿಶೇಷವಾಗಿದೆ.

ಒಟ್ಟಿನಲ್ಲಿ ರೋಚಕವಾದ ಜೀವನ ಮತ್ತು ವಿಶಿಷ್ಟವಾದ ಸಾಹಿತ್ಯದ ಕಾರಣವಾಗಿ ನೀರಲಕೆರೆ ಶ್ರೀ ಬಸವಲಿಂಗ ಶಿವಯೋಗಿಗಳವರ ಜೀವನ ಮತ್ತು ಸಾಹಿತ್ಯಗಳನ್ನು ವಿಶೇಷವಾದ ಅಧ್ಯಯನಕ್ಕೊಳಪಡಿಸಬೇಕಾದ ಅವಶ್ಯಕತೆ ಇದೆ. ಅಲ್ಲದೇ ಈವರೆಗೆ ಪ್ರಕಟಗೊಂಡಿರುವ ಇವರ ಈ ತತ್ವಪದಗಳ ಸಂಕಲನವು ಶಾಸ್ತ್ರೀಯವಾದ ಸಂಪಾದನೆಯೊಂದಿಗೆ ಪ್ರಕಟಗೊಳ್ಳಬೇಕಾಗಿದೆ.

ಈ ಕಾರಣಗಳಿಗಾಗಿ ನನ್ನ ಈ ಲೇಖನವು ಒಂದು ತೋರು ಬೆರಳಾಗಲೆಂಬುದು ನನ್ನ ಆಶಯವಾಗಿದೆ.

ಡಾ. ಶಶಿಕಾಂತ ಕಾಡ್ಲೂರ,
ಲಿಂಗಸೂಗೂರ.
ಮೋಬೈಲ್‌ ಸಂ. 94485 71565.

  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನಸಾಹಿತ್ಯ ಮಂದಾರ ಫೌಂಡೇಶನ್‌ (ರಿ) ದ ಸಂಚಾಲಕರನ್ನು ಸಂಪರ್ಕಿಸಬೇಕಾದ:
    • ಮೋಬೈಲ್ ನಂ. 9741 357 132
    • e-Mail ID: info@vachanamandara.in and admin@vachanamandara.in

Leave a Reply