ಪುರಾತನ ಕಲ್ಯಾಣದ ಚಿತ್ರಣ ಮತ್ತು ಅವನತಿಯತ್ತ ಶರಣರ ಸ್ಮಾರಕಗಳು | ಡಾ. ಸತೀಶ ಕೆ.ಇಟಗಿ, ಮುದ್ದೇಬಿಹಾಳ.

Loading

ಸ್ವಸ್ತಿ ಸಮಸ್ತ ಪ್ರಶಸ್ತಿ ಸಹಿತಂ ಶ್ರೀಮತ್ ಕಲ್ಯಾಣಪುರದ ಮಹಾತ್ಮ್ಯ
ಎಂತೆಂದಡೆ: ವಿಸ್ತರಿಸಿ ಪೇಳುವೆನು;
ಎಲ್ಲಾ ಶಿವಗಣಂಗಳು ಕೇಳಿ ಕೃತಾರ್ಥರಾಗಿರಯ್ಯಾ.
ಹದಿನಾಲ್ಕು ಭುವನಕ್ಕೆ ಕಳಸವೆಂದೆನಿಸುವ ರುದ್ರಲೋಕವೆ ಮರ್ತ್ಯಕ್ಕಿಳಿತಂದು,
ಕಲ್ಯಾಣವೆಂಬ ಪುರವಾಗಿ ಹುಟ್ಟಿತ್ತು ನೋಡಿರಯ್ಯಾ!
ಅಲ್ಲಿ ಸತ್ಯರು ಸಾತ್ತ್ವಿಕರು ನಿತ್ಯರು ನಿಜೈಕ್ಯರು ಮಹಾಜ್ಞಾನಿಗಳು
ಪರಮಶಿವಯೋಗಿಗಳು ಶಿವಾನುಭಾವ ಸಂಪನ್ನರು
ಶಿವಲಿಂಗ ಪ್ರಾಣಿಗಳು, ಶಿವಪ್ರಸಾದಪಾದೋದಕಸಂಬಂಧಿಗಳು
ಶಿವಾಚಾರವೇದ್ಯರು ಶಿವಾಗಮ ಸಾಧ್ಯರು
ಶಿವಸಮಯಪಕ್ಷರುಗಳಲ್ಲದೆ, ಮತ್ತಾರು ಅಲ್ಲಿಲ್ಲ ನೋಡಿರಯ್ಯಾ.
ಪಾಪಿಗಳು ಕೋಪಿಗಳು ಅಸತ್ಯರು ಅನಾಚಾರಗಳು
ಹೊಗಬಾರದು ಕಲ್ಯಾಣವ.
ಮೀರಿ ಹೊಕ್ಕೆಹೆವೆಂಬವರಿಗೆ ಬಾಳ ಬಾಯಧಾರೆ ನೋಡಿರಯ್ಯಾ.
ಆ ಕಲ್ಯಾಣ ಅಗಮ್ಯ ಅಗೋಚರ ನೋಡಿರಯ್ಯಾ.
ಆ ಮಹಾಕಲ್ಯಾಣದ ವಿಸ್ತೀರ್ಣ ತಾನೆಂತೆಂದಡೆ:
ಹನ್ನೆರಡು ಯೋಜನ ಪರಿಪ್ರಮಾಣದ ವಿಸ್ತ್ರೀರ್ಣ ಪಟ್ಟಣಕ್ಕೆ
ಮುನ್ನೂರರವತ್ತು ಬಾಗಿಲವಾಡ.
ಆ ಬಾಗಿಲಿಂಗೆ ನೂರ ಐವತ್ತೈದು ವಜ್ರದ ಹಾರೆಯ ಕದಂಗಳು.
ಇನ್ನೂರ ಇಪ್ಪತ್ತೈದು ಕಲುಗೆಲಸದ ದ್ವಾರವಟ್ಟಕ್ಕೆ
ನಾನೂರ ಐವತ್ತು ಸುವರ್ಣದ ಕೆಲಸದ ಕದಂಗಳು,
ಅಲ್ಲಿ ನೂರ ಹದಿನೈದು ಚೋರಗಂಡಿ;
ಅವಕ್ಕೆ ನೂರ ಹದಿನೈದು ಮೊಳೆಯ ಕದಂಗಳು.
ಇಪ್ಪತ್ತು ಬಾಗಿಲು ಆಳ್ವರಿಯೊಳಗಿಪ್ಪವಾಗಿ ಅವಕ್ಕೆ ಕದಂಗಳಿಲ್ಲ.
ಆ ಪಟ್ಟಣಕ್ಕೆ ಬಳಸಿಬಂದ ಕೋಂಟೆ
ನಾಲ್ವತ್ತೆಂಟು ಯೋಜನ ಪರಿಪ್ರಮಾಣು.
ಬಾಹತ್ತರ [ನಿಯೋಗಿಗಳ] ಮನೆ ಲಕ್ಷ; ಮಂಡಳಿಕರ ಮನೆ ಲಕ್ಷ,
ಸಾಮಂತರ ಮನೆ ಲಕ್ಷ,
ರಾಯ ರಾವುತರ ಮನೆಯೊಳಡಗಿದ ಮನೆಗಳಿಗೆ ಲೆಕ್ಕವಿಲ್ಲ.
ದ್ವಾದಶ ಯೋಜನ ವಿಸ್ತ್ರೀರ್ಣದ ಸೂರ್ಯವೀಥಿ ನೂರಿಪ್ಪತ್ತು;
ದ್ವಾದಶ ಯೋಜನದ ಸೋಮವೀಥಿ ನೂರಿಪ್ಪತ್ತೈದು.
ಅದರಿಂ ಮಿಗಿಲಾದ ಒಳಕೇರಿ ಹೊರಕೇರಿಗೆ ಗಣನೆಯಿಲ್ಲ.
ಆ ಪಟ್ಟಣದೊಳಗೆ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಶಿವಾಲಯ.
ಆ ಶಿವಾಲಯಂಗಳಿಗೆ ಮುಖ್ಯವಾದ ತ್ರಿಪುರಾಂತಕದೇವರ ಶಿವಾಲಯ.
ಮುನ್ನೂರರವತ್ತು ಪದ್ಮಪತ್ರ ತೀವಿದ ಸರೋವರಗಳು.
ಎರಡು ಲಕ್ಷವು ಎಂಬತ್ತೈದು ಸಾವಿರದ ಏಳು ನೂರೆಪ್ಪತ್ತು
ದಾಸೋಹದ ಮಠಂಗಳು.
ಆ ದಾಸೋಹದ ಮಠಂಗಳಿಗೆ ಮುಖ್ಯವಾದ
ಬಸವರಾಜದೇವರ ಮಠದ ವಿಸ್ತ್ರೀರ್ಣವೆಂತೆಂದಡೆ:
ಯೋಜನವರಿಯ ಬಿನ್ನಾಣದ ಕಲುಗೆಲಸದ ಪೌಳಿ;
ಅತಿ ಸೂಕ್ಷ್ಮದ ಕುಸುರಿಗೆಲಸದ ದ್ವಾರವಟ್ಟವೈದು.
ಅವಕ್ಕೆ ಪಂಚಾಕ್ಷರಿಯ ಶಾಸನ.
ಮಿಸುನಿಯ ಕಂಭದ ತೋರಣಗಳಲಿ ರುದ್ರಾಕ್ಷಿಯ ಸೂಸಕ
ಆ ಬಾಗಿಲುವಾಡದಲ್ಲಿ ಒಪ್ಪುತಿರ್ಪವಯ್ಯಾ,
ನಂದಿಯ ಕಂಭದ ಧ್ವಜ ಉಪ್ಪರಗುಡಿ ಪತಾಕೆ ವ್ಯಾಸಧ್ವಜ
ಒಪ್ಪುತಿರ್ಪವಯ್ಯಾ,
ಆ ಮಧ್ಯದಲ್ಲಿ ಬಸವರಾಜದೇವರ
ಸಿಂಹಾಸನದ ವಿಸ್ತ್ರೀರ್ಣದ ಪ್ರಮಾಣು:
ಸಹಸ್ರಕಂಭದ ಸುವರ್ಣದುಪ್ಪರಿಗೆ;
ಆ ಮನೆಗೆತ್ತಿದ ಹೊನ್ನಕಳಸ ಸಾವಿರ.
ಗುರುಲಿಂಗ ಜಂಗಮಕ್ಕೆ ಪಾದಾರ್ಚನೆಯ ಮಾಡುವ
ಹೊಕ್ಕರಣೆ ನಾಲ್ಕು ಪುರುಷಪ್ರಮಾಣದ ಘಾತ.
ಅಲ್ಲಿ ತುಂಬಿದ ಪಾದೋದಕದ ತುಂಬನುಚ್ಚಲು.
ಬೆಳೆವ ರಾಜಶಾಲಿಯ ಗದ್ದೆ ಹನ್ನೆರಡು ಕಂಡುಗ,
ಆ ಯೋಜನವರಿಯ ಬಿನ್ನಾಣದ ಅರಮನೆಯ
ವಿಸ್ತ್ರೀರ್ಣದೊಳಗೆ ಲಿಂಗಾರ್ಚನೆಯ ಮಾಡುವ ಮಠದ ಕಟ್ಟಳೆ
ಲಕ್ಷದ ಮೇಲೆ ತೊಂಬತ್ತಾರು ಸಾವಿರ.
ಇನ್ನು ಬಸವರಾಜದೇವರು ಮುಖ್ಯವಾದ ಅಸಂಖ್ಯಾತರ
ಮಠಂಗಳು ಆ ಕಲ್ಯಾಣದೊಳಗೆ ಎಷ್ಟು ಎಂದಡೆ:
ಹನ್ನೆರಡು ಸಾವಿರ ಕಟ್ಟಳೆಯ ನೇಮದ ಭಕ್ತರ ಮಠಂಗಳು,
ಇಪ್ಪತ್ತೆಂಟು ಸಾವಿರ ಮಹಾಮನೆಗಳು;
ಹತ್ತು ಸಾವಿರ ನಿತ್ಯನೇಮಿಗಳ ಮಠಂಗಳು;
ಹದಿನೈದು ಸಾವಿರ ಚಿಲುಮೆಯಗ್ಗವಣಿಯ ವ್ರತಸ್ಥರ ಮಠಂಗಳು,
ಐದು ಸಾವಿರ ವೀರವ್ರತನೇಮಿಗಳ ಕಟ್ಟಳೆಯ ಮಠಂಗಳು,
ಹನ್ನೆರಡು ಸಾವಿರ ಅಚ್ಚಪ್ರಸಾದಿಗಳ ಮಠಂಗಳು,
ಒಂದು ಸಾವಿರ ಅರವತ್ತು ನಾಲ್ಕು ಶೀಲಸಂಪನ್ನರ ಮಠಂಗಳು,
ನಿತ್ಯ ಸಾವಿರ ಜಂಗಮಕ್ಕೆ ಆರೋಗಣೆಯ ಮಾಡಿಸುವ
ದಾಸೋಹಿಗಳ ಮಠಂಗಳು ಮೂವತ್ತೆರಡು ಸಾವಿರ,
ನಿತ್ಯ ಐನೂರು ಜಂಗಮಕ್ಕೆ ಒಲಿದು ದಾಸೋಹವ ಮಾಡುವ
ಸತ್ಯಸದಾಚಾರಿಗಳ ಮಠಂಗಳು ಐವತ್ತೆಂಟು ಸಾವಿರ;
ನಿತ್ಯ ಸಾವಿರದೈನೂರು ಜಂಗಮಕ್ಕೆ
ಒಲಿದು ದಾಸೋಹವ ಮಾಡುವ
ದಾಸೋಹಿಗಳ ಮಠಂಗಳು ಹನ್ನೊಂದು ಸಾವಿರ;
ನಿತ್ಯ ಅವಾರಿಯಿಂದ ಮಾಡುವ
ಮಾಟಕೂಟದ ಸದ್ಭಕ್ತರ ಮಠಂಗಳು ಒಂದು ಲಕ್ಷ;
ಜಂಗಮಸಹಿತ ಸಮಯಾಚಾರದಿಂದ
ಲಿಂಗಾರ್ಚನೆಯ ಮಾಡುವ ಜಂಗಮಭಕ್ತರ
ಮಠಂಗಳು ಎರಡು ಸಾವಿರದೇಳ್ನೂರೆಪ್ಪತ್ತು;
ಅಂತು ಎರಡು ಲಕ್ಷವು ಎಂಬತ್ತೈದು ಸಾವಿರದ ಏಳುನೂರೆಪ್ಪತ್ತು.
ಇಂತಪ್ಪ ಅಸಂಖ್ಯಾತರಿಗೆ ಮುಖ್ಯವಾಗಿ ರುದ್ರಲೋಕದಿಂದಿಳಿತಂದ
ಪ್ರಮಥಗಣಂಗಳ ಮಠಂಗಳು ಏಳು ನೂರೆಪ್ಪತ್ತು.
ಇಂತೀ ಮಹಾಪ್ರಮಥರಿಗೆ ಪುರಾತರಿಗೆ
ಅಸಂಖ್ಯಾತ ಮಹಾಗಣಂಗಳಿಗೆ ಪ್ರಥಮ ನಾಯಕನಾಗಿ,
ಏಕಮುಖ, ದಶಮುಖ, ಶತಮುಖ, ಸಹಸ್ರಮುಖ,
ಲಕ್ಷಮುಖ, ಕೋಟಿಮುಖ, ಅನಂತಕೋಟಿಮುಖನಾಗಿ
ಭಕ್ತರಿಗೆ ಒಡನಾಡಿಯಾಗಿಪ್ಪನು ಸಂಗನಬಸವಣ್ಣ.
ಜಗದಾರಾಧ್ಯ ಬಸವಣ್ಣ, ಪ್ರಮಥಗುರು
ಬಸವಣ್ಣ, ಶರಣ ಸನ್ನಹಿತ ಬಸವಣ್ಣ,
ಸತ್ಯಸಾತ್ವಿಕ ಬಸವಣ್ಣ, ನಿತ್ಯ ನಿಜೈಕ್ಯ
ಬಸವಣ್ಣ, ಷಡುಸ್ಥಲ ಸಂಪನ್ನ ಬಸವಣ್ಣ,
ಸರ್ವಾಚಾರ ಸಂಪನ್ನ ಬಸವಣ್ಣ,
ಸರ್ವಾಂಗಲಿಂಗಿ ಬಸವಣ್ಣ,
ಸುಜ್ಞಾನ ಭರಿತ ಬಸವಣ್ಣ, ನಿತ್ಯಪ್ರಸಾದ ಬಸವಣ್ಣ,
ಸಚ್ಚಿದಾನಂದಮೂರ್ತಿ ಬಸವಣ್ಣ,
ಸದ್ಯೋನ್ಮುಕ್ತಿರೂಪ ಬಸವಣ್ಣ,
ಅಖಂಡಪರಿಪೂರ್ಣ ಬಸವಣ್ಣ,
ಅಭೇದ್ಯಭೇದಕ ಬಸವಣ್ಣ, ಅನಾಮಯಮೂರ್ತಿ ಬಸವಣ್ಣ,
ಮಹಾಮನೆಯ ಮಾಡಿದಾತ ಬಸವಣ್ಣ,
ರುದ್ರಲೋಕವ ಮರ್ತ್ಯಲೋಕಕ್ಕೆ ತಂದಾತ ಬಸವಣ್ಣ,
ಶಿವಚಾರದ ಘನವ ಮೆರೆದಾತ ಬಸವಣ್ಣ.
ಇಂತಹ ಬಸವಣ್ಣನ ಭಕ್ತಿಯನು ಒರೆದೊರೆದು ನೋಡುವ,
ಪ್ರಜ್ವಲಿತವ ಮಾಡುವ ಅಶ್ವಪತಿ, ಗಜಪತಿ, ನರಪತಿರಾಯ,
ರಾಜಾಧಿರಾಜ ಬಿಜ್ಜಳರಾಯನೂ ಆ ಬಸವಣ್ಣನೂ
ಆ ಕಲ್ಯಾಣಪಟ್ಟಣದೊಳಗೆ
ಸುಖಸಂಕಥಾವಿನೋದದಿಂದ ರಾಜ್ಯಂಗೆಯುತ್ತಿರಲು,
ಆ ಕಲ್ಯಾಣದ ನಾಮವಿಡಿದು ವಿವಾಹಕ್ಕೆ
ಕಲ್ಯಾಣವೆಂಬ ನಾಮವಾಯಿತ್ತು.
ಲೋಕದೊಳಗೆ ಕಲ್ಯಾಣವೆ ಕೈಲಾಸವೆನಿಸಿತ್ತು.
ಇಂತಪ್ಪ ಕಲ್ಯಾಣದ ದರುಶನವ ಮಾಡಿದಡೆ ಭವಂ ನಾಸ್ತಿ,
ಇಂತಪ್ಪ ಕಲ್ಯಾಣವ ನೆನೆದಡೆ ಪಾಪಕ್ಷಯ,
ಇಂತಪ್ಪ ಕಲ್ಯಾಣದ ಮಹಾತ್ಮೆಯಂ ಕೇಳಿದಡೆ
ಕರ್ಮಕ್ಷಯವಹುದು, ಮೋಕ್ಷ ಸಾಧ್ಯವಹುದು,
ಇದು ಕಾರಣ, ಕೂಡಲಚೆನ್ನಸಂಗಮದೇವಾ,
ನಿಮ್ಮ ಭಕ್ತ ಬಸವಣ್ಣನಿದ್ದ ಠಾವೆ ಮಹಾಕಲ್ಯಾಣವೆಂದರಿದು
ದಿವ್ಯಶಾಸನವ ಬರೆದು ಪಠಿಸಿದ ಕಾರಣ,
ಎನ್ನ ಭವಂ ನಾಸ್ತಿಯಾಯಿತ್ತಯ್ಯಾ.
(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-846/ವಚನ ಸಂಖ್ಯೆ-1731)

ಚಿಙ್ಮಯಜ್ಞಾನಿ ಚನ್ನಬಸವಣ್ಣನವರ ಈ ವಚನ ಕಲ್ಯಾಣ ಪಟ್ಟಣದ ಸುಂದರ ಚಿತ್ರಣವನ್ನು ನೀಡುತ್ತದೆ. ಈ ರೀತಿಯಾದ ಐತಿಹಾಸಿಕ ಮತ್ತು ವೈಭವದ ಕಲ್ಯಾಣದ ದಕ್ಷಿಣ ದಿಕ್ಕಿಗೆ ಸಾಗಿದರೆ “ಬಂದವರ ಓಣಿ” ಸಿಗುತ್ತದೆ. ಮುಂದೆ ಪುರಾತನ ತ್ರಿಪುರಾಂತಕ ಕೆರೆಯ ಪ್ರದೇಶವು ನಮ್ಮನ್ನು ಸೆಳೆದೊಯ್ಯುತ್ತದೆ. ಅದರ ಮಾರ್ಗವಾಗಿ ಸಂಚರಿಸಿದರೆ ಶಿವಪುರ ಮತ್ತು ನಾರಾಯಣಪುರ ಎಂಬರೆಡು ಪ್ರಕೃತಿಯಿಂದ ರಮಣೀಯವಾದ ಸ್ಥಳಗಳು ಗೋಚರಿಸುತ್ತವೆ. ಅವು ದೊರೆ ಬಿಜ್ಜಳನ ಕಾಲದಲ್ಲಿ ಅತ್ಯಂತ ಪ್ರಶಾಂತವಾದ, ಸುಂದರ ನಿಸರ್ಗದತ್ತ ಪ್ರದೇಶಗಳೆಂದು ಹೇಳಲಾಗುತ್ತಿತ್ತು. ಹೀಗಾಗಿ ಕಲ್ಯಾಣ ಬಿಜ್ಜಳ ದೊರೆಯ ರಾಜ ದರ್ಬಾರದ ಗೌಜು ಗದ್ದಲದಿಂದ ದೂರವಿದ್ದ ತಾಣಗಳೆಂದೂ ಪ್ರತೀತಿ ಇದೆ. ಕ್ರಮೇಣ ಬಸವಾದಿ ಶರಣರ ತಪೋ ಭೂಮಿಗಳಾದವು ಎಂದು ಹೇಳಲಾಗುತ್ತದೆ.

ಆ ಶಿವಪುರದಲ್ಲಿ ಮುಗ್ಧ ಸಂಗಯ್ಯನೆಂಬ ಶರಣನೋರ್ವ ಇದ್ದನು. ಅದುವೆ ಅವನ ಜನ್ಮಸ್ಥಳವಾಗಿದ್ದಕ್ಕೆ, ಅಲ್ಲಿಯೇ ಅವರ ಗದ್ದುಗೆ ನಿರ್ಮಿಸಲಾಗಿತ್ತು. ಈಗದು ಶಿಥಿಲಗೊಂಡಿದ್ದು ಗುರುತಿಸಲು ಅಸಾದ್ಯವಾಗಿದೆ. ಶರಣ ಮುಗ್ಧ ಸಂಗಯ್ಯನವರು ಶಿವಪುರದ ಗವಿಯ ಒಳಗಿನ ಜಲಮಾರ್ಗದ ಮೂಲಕ ಸಂಚರಿಸಿ, ಮಠದ ಮುಂದಿನ ಕಲ್ಲಿನ ಭಾವಿಯಲ್ಲಿ ಪವಿತ್ರ ಜಲವನ್ನು ತುಂಬಿಕೊಂಡು ನಿತ್ಯ ಇಷ್ಟಲಿಂಗ ಪೂಜೆಗಾಗಿ ಒಯ್ಯುತ್ತಿದ್ದರೆಂದು ಜಾನಪದರ ಕಥೆಗಳಿವೆ. ಕಾ ಕಳೆದಂತೆ ಆ ಭಾವಿಯೂ ಸಹ ಮಚ್ಚಿ ಹೊಗಿದೆ.

ಒಮ್ಮೆ ಶರಣ ಮುಗ್ಧ ಸಂಗಯ್ಯನವರ ಮನೆ ಮುಂದೆ ಹಸುವಿನ ಸಾವಿನ ಪ್ರಕರಣ ಸಂಭವಿಸಿತ್ತು. ಹಂತಕನೋರ್ವ ತನ್ನ ಹೊಲದಲ್ಲಿ ಅನಾಮಧೆಯ ಹಸುವೊಂದು ಬೆಳೆ ನಾಶ ಮಾಡಿದೆ ಎಂದು ಕೋಪಗೊಂಡು ಆ ಮುಗ್ಧ ಹಸುವನ್ನು ಕೊಂದು ಸಂಗಯ್ಯನವರ ಮನೆ ಮುಂದೆ ಹಾಕಿದ್ದನು. ಸಂಗಯ್ಯನವರೇ ಹತ್ಯೆ ಮಾಡಿದ್ದಾರೆಂದು ಅಪವಾದ ಕಲ್ಪಿಸಿದ್ದನು. ಆಗ ಶರಣ ಮುಗ್ಧ ಸಂಗಯ್ಯನವರು ವಿಚಲಿತರಾಗಲಿಲ್ಲ. ಎದೆಗುಂದದೆ ಶಾಂತ ಚಿತ್ತರಾಗಿ ಅಪವಾದ ಸ್ವೀಕರಿಸಿದ್ದರು. ಸ್ವಲ್ಪ ಹೊತ್ತಿನ ಬಳಿಕ ಬೆತ್ತದಿಂದ ಸತ್ತ ಆಕಳಿಗೆ ಸ್ಪರ್ಶಿಸಿ ಬದುಕಿಸಿ, ಮರು ಜನ್ಮ ನೀಡಿದ್ದರು. “ಕೊಂದವರ ಮನೆ ಮುಂದೆ ಹೋಗು, ನಿನಗೆ ಹುಲ್ಲು ನೀಡುತ್ತೇನೆ” ಎಂದರು. ಆಗ ಎದ್ದು ಸಾಗಿದ ಆಕಳು, ಕೊಂದವರ ಮನೆ ಮುಂದೆ ನಿಂತು ಮುಗ್ಧ ಸಗಯ್ಯನವರ ಹುಲ್ಲು ತಿಂದು ಪ್ರಾಣ ಬಿಟ್ಟಿತ್ತು. ಆಗ ಊರಿನ ಜನರ ನಿಂದೆಯಿಂದ ಮುಕ್ತರಾದ ಸಂಗಯ್ಯನವರು ಎಲ್ಲರಿಗೂ ಮುಗ್ಧರೆನಿಸಿದರು. ಹೀಗಾಗಿ ಚರಿತ್ರೆಯಲ್ಲಿ ಅವರಿಗೆ ಮುಗ್ಧ ಸಂಗಯ್ಯ ಎಂದು ಕರೆಯಲಾಯ್ತು.

ಆ ಅಪವಾದದ ಘಟನೆಯಿಂದ ಸಂಗಯ್ಯನವರು ಮನನೊಂದು ಶಿವಪುರ ತೊರೆದು ನಾರಾಯಣಪುರದಲ್ಲಿ ನೆಲೆಸಿದರು. ಕೆಲವು ದಿನಗಳಾದ ಬಳಿಕ ಅಲ್ಲಿಯೇ ಸಮಾದಿಯಾದರೆಂದು ಹೇಳಲಾಗುತ್ತದೆ. ಸದಾ ಸಂಚಾರಿಯಾಗಿದ್ದ ಮುಗ್ಧ ಸಂಗಯ್ಯನವರು ಅನೇಕ ಶರಣರೊಂದಿಗೆ ಅನುಭವ ಮಂಟಪದ ಸದಸ್ಯರಾಗಿದ್ದರೆಂದು ತಿಳಿದು ಬರುತ್ತದೆ. ಆದರೆ ಅವರ ಯಾವುದೇ ವಚನಗಳು ಇಲ್ಲಿಯವರೆಗೆ ಲಭ್ಯವಾಗಿಲ್ಲ. ಅವರು ಸಮಾದಿಸ್ಥರಾದ ನಾರಾಯಣಪುರದಲ್ಲಿ ಪ್ರಾಚೀನ ಶಿವದೇವಾಲಯ ಇತ್ತು. ಅಲ್ಲಿಯೇ ಮುಗ್ಧ ಸಂಗಯ್ಯನವರ ಹೆಸರಿನಲ್ಲಿ ಮಠವೊಂದು ಸ್ಥಾಪಿಸಲಾಗಿತ್ತು.

ಅವರಿಗೆ ಶರಣ ಚೌಡಯ್ಯನೆಂಬ ನಂಬಿಕಸ್ಥ ಭಕ್ತನೋರ್ವನಿದ್ದ. ಅವನು ಮುಗ್ಧ ಸಂಗಯ್ಯನವರ ಗದ್ದುಗೆ ಮತ್ತು ಮಠ ಸ್ಥಾಪನೆಗೆ ಕಾರಣನಾಗಿದ್ದನೆಂದು ಹೇಳಲಾಗುತ್ತದೆ. ತನ್ನ ಗುರುವಿನ ಉಪದೇಶದಂತೆ ನಿತ್ಯ ಇಷ್ಟಲಿಂಗದ ಪೂಜೆಯ ಬಳಿಕ, ಪರಶಿವನ ಸಾಕ್ಷಾತ್ಕಾರ ಆಗುವವರಗೆ ಅನ್ನ, ನೀರು ಸೇವಿಸುತ್ತಿದ್ದಲ್ಲವಂತೆ. ನಂತರ ಚೌಡಯ್ಯನ ಹೆಸರಿನಲ್ಲೂ ಬೃಹತ್ತಾದ ಶಿಲಾ ಭಾವಿ, ಹಾಗೂ ಗವಿ ಇತ್ತಂತೆ. ಈಗ ಅದೂ ಸಹ ಮುಚ್ಚಿ ಹೋಗಿದೆ. ಅಲ್ಲಿನ ಕಲ್ಲು ಮತ್ತು ಪುರಾತನ ಶಿಲೆಗಳನ್ನು ಸ್ಥಳೀಯರು ಕಳ್ಳತನದಿಂದ ತಮ್ಮ ಮನೆಗೆ ಬಳಸುತ್ತಿದ್ದಾರೆಂದು ಸ್ಥಳೀಯ ಬಸವ ಭಕ್ತರು ನಿವೇದಿಸುತ್ತಿದ್ದಾರೆ.

ಆಕರ ಗ್ರಂಥಗಳು:

  1. 12 ನೇ ಶತಮಾನದ ಶರಣರ ಸ್ಮಾರಕಗಳು, ಡಾ. ವೀರಣ್ಣ ದಂಡೆ ಮತ್ತು ಡಾ. ಜಯಶ್ರೀ ದಂಡೆ, ಬಸವ ಸಮಿತಿ, ಬೆಂಗಳೂರು, 2026
  2. “ಕನ್ನಡ ಶರಣರ ಕಥೆಗಳು”, ಡಾ. ಎಂ. ಎಂ. ಕಲಬುರ್ಗಿ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು. 2012,
  3. ಶೂನ್ಯಸಂಪಾದನೆ‘ (ವಿವಿಧ ಸಂಪುಟಗಳು), ಸಿದ್ಧನಂಜೇಶ, (15 ನೇ ಶತಮಾನ).ಕ್ರಿ  .ಶ. 1430.
  4. “ಶಿವಶರಣರ ವಚನಗಳು”, (ವಿವಿಧ ಸಂಪುಟಗಳು), ಡಾ. ಫ. ಗು. ಹಳಕಟ್ಟಿ, ಕ್ರಿ. ಶ. 19201950.
  5. ಸಮುಗ್ರ ವಚನ ಸಂಪುಟ, ಬಸವ ಸಮಿತಿ, ಬೆಂಗಳೂರು.

ಡಾ. ಸತೀಶ ಕೆ. ಇಟಗಿ,
ಪತ್ರಿಕೋದ್ಯಮ ಉಪನ್ಯಾಸಕರು,
ಅಂಚೆ: ಕೋಳೂರ – 586 129
ತಾ: ಮುದ್ದೇಬಿಹಾಳ, ಜಿ: ವಿಜಯಪುರ.
ಮೊ: 92412 86422
ಈ-ಮೇಲ್:‌ satshitagi10@gmail.com

  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನಸಾಹಿತ್ಯ ಮಂದಾರ ಫೌಂಡೇಶನ್‌ (ರಿ) ದ ಸಂಚಾಲಕರನ್ನು ಸಂಪರ್ಕಿಸಬೇಕಾದ:
    • ಮೋಬೈಲ್ ನಂ. 9741 357 132
    • e-Mail ID: info@vachanamandara.in / admin@vachanamandara.in

Leave a Reply