![]()

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ 12 ನೇ ಶತಮಾನದ ಸೃಜನ ಅನುಭಾವದ ಭಾಷೆಯಾಗಿ ನಮ್ಮನ್ನು ಆಕರ್ಷಿಸುತ್ತದೆ. ಸಂಸ್ಕೃತ ಭಾಷೆಯ ಭೂಯಿಷ್ಟತೆಯನ್ನು ನಿರಾಕರಿಸಿ ಸರಳ ಸುಲಲಿತ ಹೊಸಗನ್ನಡಕ್ಕೆ ಸಮೀಪವಾಗುವ ದೇಸಿ ಅಧ್ಯಾತ್ಮದ ಪಡೆ ನುಡಿಗಳಾಗಿ ಪ್ರತಿಕ್ರಿಸುಯಿಸುತ್ತವೆ. ಅಕ್ಷರ ಸಂಸ್ಕೃತಿಯನ್ನು ಅಸ್ತ್ರವಾಗಿಸಿಕೊಂಡದ್ದೇ ಒಂದು ರೋಮಾಂಚನ. ಆಸ್ಥಾನದ ಪಂಡಿತರಿಗೆ ಭಾಷೆಯ ಮೂಲಕ ಕ್ರಾಂತಿಯನ್ನು ಸೃಷ್ಟಿಸಿ ಪ್ರತ್ಯುತ್ತರ ನೀಡಿದವರು ವಚನಕಾರರು. ಆಡು ನುಡಿಯ ದೇಸಿ ಭಾಷೆ ಎಂದರೆ ಮೈಲಿಗೆಯಾಗಿ ಕಂಡಂತಹ ಆ ಕಾಲಘಟ್ಟದಲ್ಲಿ ಬಸವಣ್ಣನವರ ನಾಯಕತ್ವತ್ವದಲ್ಲಿ ಹಲವಾರು ಶರಣರು ವಚನಗಳನ್ನು ರಚಿಸಿ ಯಶಸ್ವಿಯಾದರು.
12ನೇ ಶತಮಾನದ ಅನುಭಾವಿ ಕವಿ ದಾರ್ಶನಿಕ ಶಿಕ್ಷಣ ತಜ್ಞರೆಂದೇ ಚಿರಪರಿಚಿತ ನಮಗೆ. ಬಸವಣ್ಣನವರ ಭಾಷಾ ಸೌಂದರ್ಯವನ್ನು ಚರ್ಚೆಗೆತ್ತಿಕೊಳ್ಳುವುದು ಸವಾಲಿನ ಕೆಲಸ. ಅವರ ವಚನಗಳ ಪ್ರವೇಶ ಸಾಹಿತ್ಯದ ಶೋಧವು ಹೌದು. ಅನುಭಾವ ಮತ್ತು ಭಾಷಾಶೋಧದ ಮುಖಾಮುಖಿಯಲ್ಲಿ ಕನ್ನಡದ ದೇವ ಭಾಷೆ ಎಂದೇ ಗುರುತಿಸಿಕೊಂಡ ವಚನ ಸಾಹಿತ್ಯ ಸ್ವತಂತ್ರ ವಚನ ಮೀಮಾಂಸಶಾಸ್ತ್ರ ಸಾಹಿತ್ಯವಾಗಿ ಪರಿಚಯಿಸುತ್ತದೆ.
ದೇವರಿಗೆ ಕನ್ನಡವನ್ನು ಕಲಿಸಿದವರೇ ಶರಣರು ಎಂಬ ಗಾದೆ ಬಹು ಪ್ರಚಲಿತ. ಹಾಗೆನೆ ಸಮಂಜಸವು ಹೌದು. ಏಕೆಂದರೆ ಬಸವಣ್ಣನಂತ ಭಾಷಾತಜ್ಞರ ಬಗ್ಗೆ ಅಧ್ಯಯನ ಮಾಡುವಾಗ ಲೌಕಿಕ ಜ್ಞಾನದ ಅನುಭಾವ ಭಾಷೆಯ ಸಮರ್ಥನೆಯನ್ನು ಕಾಣುತ್ತೇವೆ. ದಂಡಿ ಎಂಬ ಸಂಸ್ಕೃತ ಕವಿ ಹೇಳುವಂತೆ:
ಇದಮಂಧಂ ತಮಃ ಕೃತ್ಸ್ನಂ ಜಾಯೇತ ಭುವನತ್ರಯಂ |
ಯದಿ ಶಬ್ದಾಹ್ವಯಂ ಜ್ಯೋತಿರಾಸಂಸಾರಾನ್ನ ದೀಪ್ಯತೇ ||
(ಮಹಾಕವಿ ದಂಡಿ ಬರೆದಿರುವ “ಕಾವ್ಯಾದರ್ಶಿ” ಕೃತಿಯಲ್ಲಿ ಉಲ್ಲೇಖವಾಗಿರುವ ಶ್ಲೋಕ)ಕೃತ್ಸ್ನಂ’ (Kritsnam) ಎಂಬುದು ಸಂಸ್ಕೃತ ಪದವಾಗಿದೆ. ಈ ಪದವನ್ನು ಬಿಡಿಸಿದಾಗ ‘ಕೃತ್ಸ್ನ + ಅಮ್’ ಆಗುತ್ತದೆ. ಇದು ಸಂಸ್ಕೃತ ವ್ಯಾಕರಣದ ಅನುಸ್ವಾರ ಸಂಧಿಗೆ ಉದಾಹರಣೆಯಾಗಿದೆ. ಮಾತು ಅಥವಾ ಭಾಷೆ ಎಂಬ ಜ್ಯೋತಿಯು (ಬೆಳಕು) ಈ ಸಂಸಾರದಲ್ಲಿ ಬೆಳಗದೇ ಇದ್ದರೆ, ಮೂರು ಲೋಕಗಳೂ ಸಂಪೂರ್ಣ ಕಗ್ಗತ್ತಲೆಯಲ್ಲಿ ಮುಳುಗಿಹೋಗುತ್ತಿದ್ದವು.
ಎಂಬ ಹೇಳಿಕೆ ಕನ್ನಡದ ವಚನ ಭಾಷೆಗೆ ಸಲ್ಲುತ್ತದೆ. ಕಾರಣ ವಚನಗಳು ಜಗತ್ತಿನ 54 ಭಾಷೆಗಳಿಗೆ ಅನುವಾದವಾಗಿವೆ. ವಚನಗಳ ಈ ಭಾಷಾ ಸಂಸ್ಕೃತಿಯನ್ನು ಗೌರವಿಸುವುದು ಅಧ್ಯಯನ ಮಾಡುವುದು ಭಾಷಾ ಓದುಗರಿಗೆ ತಿಳಿದ ವಿಚಾರವಾಗಿದೆ
ಜನಸಾಮಾನ್ಯ ಓದುಗರಿಗೂ ಅರ್ಥವಾಗುವಂತೆ ಗದ್ಯ ಮತ್ತು ಪದ್ಯದ ಸಮ್ಮಿಶ್ರಣದ ಆವರಣವಿದಾಗಿದೆ. ನಡುಗನ್ನಡ ಕವಿಗಳಾದ ಹರಿಹರ, ರಾಘವಾಂಕ, ಚಾಮರಸ, ಕುಮಾರವ್ಯಾಸರ ಭಾಷಾ ಪ್ರಯೋಗಕ್ಕಿಂತಲೂ ಆಧುನಿಕ ಕನ್ನಡ ಭಾಷಾ ಸೃಜನಶೀಲತೆ ವಚನಗಳ ನಿರೂಪಕ ಪ್ರಜ್ಞೆ ಆಕರ್ಷಕವಾಗಿ ಕಾಣುತ್ತವೆ. ಬಸವಣ್ಣನವರ ವಚನ ಭಾಷೆ ಕಲ್ಯಾಣ ನಾಡನ್ನು ಎತ್ತರಿಸುವ ಶ್ರೀಮಂತ ಸಂವಹನ ಭಾಷೆಯಾಗಿದೆ. ಭಾಷಾ ಸಮರ್ಥನೆಯಲ್ಲಿ ಸಾಮಾಜಿಕ, ರಾಜಕೀಯ, ಆರ್ಥಿಕ ಆಯಾಮಗಳಿದ್ದರೂ ಅಭಿವ್ಯಕ್ತತೆಯ ಕ್ರಮದಲ್ಲಿ ಶ್ರೀಮಂತ ಪದಪ್ರಯೋಗಗಳ ಜ್ಞಾನ ಸಂಪತ್ತಾಗಿದೆ. ಹೀಗಾಗಿ ಶರಣರ ಪರಿಭಾಷೆಗೆ ಸಂವಹನ ಸಂಸ್ಕೃತಿಯಾಗಿ ಅಭಿವ್ಯಕ್ತಿಸುತ್ತದೆ.
ಡಾ. ಡಿ. ಆರ್. ನಾಗರಾಜ್ ಅವರು (ರಾಷ್ಟ್ರೀಯತೆಯ) ಈ ಬರಹದಲ್ಲಿ ಹೀಗೆ ಹೇಳುತ್ತಾರೆ: ನೆನಪುಗಳನ್ನು ದಾಖಲಿಸುವುದು, ಹೊಸ ನೆನಪುಗಳನ್ನು ಸೃಷ್ಟಿಸುವುದು. ಭಾಷೆಯ ಪ್ರಮುಖ ಉದ್ದೇಶ. ಭಾಷೆ ಸತ್ವಯುತವಾಗಿದ್ದಷ್ಟು ಆ ನೆನಪುಗಳು ಸೃಜನಶೀಲ ಕೆಲಸ ವೇಗವಾಗಿ ನಡೆಯುತ್ತಿರುತ್ತದೆ.
ಈ ಮಾತುಗಳು ಬಸವಣ್ಣನವರ ಭಾಷೆಗೂ ಅನ್ವಯಿಸುತ್ತದೆ.
ಶರಣರ ಭಾಷಾ ದೋರಣೆ ಕುರಿತು ಡಾ. ಜಿ. ಎಸ್. ಶಿವರುದ್ರಪ್ಪನವರು ಈ ರೀತಿ ವಿವರಿಸುತ್ತಾರೆ:
ವಚನಕಾರರು ಹಿಂದಿನ ಕಾವ್ಯ ಪರಂಪರೆಯೊಂದಿಗೆ ತಮ್ಮ ಸಂಬಂಧವನ್ನು ಕಳಚಿಕೊಂಡಿದ್ದರೂ ಸ್ವತಂತ್ರ ವ್ಯಕ್ತಿತ್ವದ ಮೂಲಕ ವಿಪುಲ ಪ್ರತಿಮಾ ಸಂಪತ್ತನ್ನು ನಿರ್ಮಾಣ ಮಾಡಿದ್ದಾರೆ. ಕಾವ್ಯಭಿವ್ಯಕ್ತಿಗೆ ಗದ್ಯದ ತತ್ವವನ್ನು ಕೂಡಿಸಿಕೊಂಡು ಆಡುಭಾಷೆಯನ್ನು ತಾಯಿ ಭಾಷೆಯಾಗಿಯೇ ಉಳಿಸಿಕೊಂಡು ಪದ್ಯದ ಸೊಗಸನ್ನು ವಚನಗಳಲ್ಲಿ ಕಾಣಿಸಿರುವುದು ಮಹತ್ವದ ಸಂಗತಿಯಾಗಿದೆ. ಬಸವಣ್ಣನವರು, ಅಕ್ಕಮಹಾದೇವಿಯವರು, ಅಲ್ಲಮ ಪ್ರಭುದೇವರು ಜೇಡರ ದಾಸಿಮಯ್ಯನವರು ಮುಂತಾದ ವಚನಕಾರರ ವಚನಗಳಲ್ಲಿ ಸೂಕ್ತಿ ಸದೃಶ್ಯವಾದ ಉಕ್ತಿಗಳು ಉಪಮಾ ರೂಪಕಗಳು ಪ್ರತಿಮಾ ಪರಂಪರೆಗಳು ಮಾತಿನ ಹೊಂದಾಣಿಕೆಯಲ್ಲಿ ಕಂಡು ಬರುವ ಅನುಪ್ರಾಸ, ಅಂತ್ಯಪ್ರಾಸಗಳ ರಮ್ಯತೆ ಇವುಗಳಲ್ಲಿ ಅಂತರ್ಗತವಾಗಿರುವ ಅನೇಕ ಛಂದೋ ವೈವಿಧ್ಯಗಳು ಗೋಚರವಾಗುತ್ತವೆ. ವಚನ ಭಾಷೆಯ ಕಾವ್ಯ ಸೌಂದರ್ಯವು ಪರಂಪರಾಗತವಾದ ಕಾವ್ಯ ಸೌಂದರ್ಯದಿಂದ ಬೇರೆಯಾಗಿ ಜೀವನವೇ ಕಾವ್ಯವಾದಾಗ ಸಂಭವಿಸುವ ಸೌಂದರ್ಯದ ಪ್ರತೀಕವಾಗಿದೆ. ಹೀಗಾಗಿ ಶರಣರು ವೇದಾಧ್ಯಯನದ ಮೂಲಕ ಸ್ವತಂತ್ರ ವಚನಮಾರ್ಗವನ್ನು ಹುಟ್ಟು ಹಾಕಿದರು. ವೈದಿಕ ಅಧ್ಯಯನದ ಆಡಂಬರತೆಯನ್ನು ಖಂಡಿಸಿದರು.
ವೇದಶಾಸ್ತ್ರದವರ ಹಿರಿಯರೆನ್ನೆ,
ಮಾಯಾಭ್ರಾಂತಿ ಕವಿದ ಗೀತಜ್ಞರ ಹಿರಿಯರೆನ್ನೆ,
ಇವರು ಹಿರಿಯರುಗಳೇ? ಯಾಗನಟ್ಟುವಿಗಪಾಣರು,
ಇವರಿಂದಧಿಕವ ಸಾಧಿಸುವರೇನು ಕಿರಿಯರೆ?
ಇಂತು ವಿದ್ಯೆ ಗುಣ ಜ್ಞಾನ ಧರ್ಮ ಆಚಾರ ಶೀಲಂಗಳ,
ನಮ್ಮ ಕೂಡಲಸಂಗನ ಶರಣರು ಸಾಧಿಸಿದ ಸಾಧನೆಯನೆ
ಸಾಧಿಸುವುದು.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-166/ವಚನ ಸಂಖ್ಯೆ-612)
ಬಸವಣ್ಣನವರ ಈ ವಚನ ಸಂಸ್ಕೃತ ಮತ್ತು ಕನ್ನಡ ಭಾಷಾ ತೌಲನಿಕ ಅಧ್ಯಯನಕ್ಕೆ ಸ್ಪಷ್ಟ ಉದಾಹರಣೆ ಈ ವಚನವಾಗಿದೆ. ಸಂಸ್ಕೃತ ಅಧ್ಯಯನ ಮೀಮಾಂಸ ಪ್ರಸ್ತಾನಗಳನ್ನು ಬಳಸಿದರೂ ರಸಪ್ರಸ್ಥಾನವಾಗಿ ಮುಖಾಮುಖಿಯಾಗುತ್ತವೆ. ಧ್ವನಿ, ಶಬ್ದ, ಅಲಂಕಾರ ರೀತಿಗಳಲ್ಲಿ ಅನೇಕ ಮೀಮಾಂಸ ಅರ್ಥಗಳು ಬರುತ್ತವೆ. ಆದರೆ ವಚನಗಳ ಭಾಷೆ ಹಾಗಲ್ಲ. ಮೀಮಾಂಸ ವ್ಯಾಖ್ಯಾನಗಳ ಕಾಯವನ್ನು ಶೋಧಿಸಿ ಪ್ರಾಣಲಿಂಗದಂತಹ ಪಾರಿಭಾಷಿಕ ಪದಗಳನ್ನು ಹುಟ್ಟು ಹಾಕಿದರು. ಅಂದರೆ ಸಂಸ್ಕೃತ ಸಿದ್ದಾಂತ ರಸವಾದರೆ ವಚನಗಳು ಸುಲಲಿತಾ ದ್ರವವಾಗಿ ವಚನ ಶಬ್ದಗಳ ಅಗಣಿತ ಅಪ್ರತಿಮಾ ಭಾಷಾ ಭಂಡಾರವಾಗಿ ಹೊಸಗನ್ನಡ ಭಾಷೆಯಲ್ಲಿ ಏಕವಾಯಿತು. ಇದು ಆಶ್ಚರ್ಯವಲ್ಲ, ಉತ್ಪ್ರೇಕ್ಷೆಯಂತೂ ಅಲ್ಲವೇ ಅಲ್ಲ. ಇದು ವಚನಕಾರರ ಭಾಷಾ ಪರಿಶ್ರಮದ ಶೋಧವಿದು. ಹೀಗಾಗಿ ವೇದಗಳನ್ನು ಸಮರ್ಪಣಾ ಭಾವದಿಂದ ಕಂಡವರು ವೈದಿಕರಾಗಿದ್ದರು. ಅಂದು ಅವರು ತಮ್ಮದೇ ಪ್ರತ್ಯೇಕ ವರ್ಗವನ್ನು ಹುಟ್ಟು ಹಾಕಿದ್ದರು. ಬಸವಣ್ಣನವರು ಈ ವಚನದಲ್ಲಿ ಹೇಳುವಂತೆ ವೇದಾಧ್ಯಯನ ಮಾಡಿದವರೆಲ್ಲ ಹಿರಿಯರೆ ಎಂದು ಪ್ರಶ್ನಿಸಿದರು. ಹೆಣ್ಣು, ಹೊನ್ನು, ಮಣ್ಣು, ಮಾಯೆಯಲ್ಲಿ ತೇಲುವವರು ಭಗವದ್ಗೀತೆಯ ವಾರಸುದಾರರೇ? ದೈವಗಳ ಪೂಜಿಸುವ ಪಾಣರು ಪ್ರಕೃತಿಯ ರಕ್ಷಕರೆ? ದೈವರಾದನೆ ಮಾಡುವವರು ಹಿರಿಯರೇ? ಈ ನಿಗೂಢ ಭಾಷಾ ಪಥವನ್ನು ಸಾಮಾನ್ಯ ಭಾಷಿಗರಿಗೆ ಅರ್ಥವಾಗುವಂತೆ ವಿವೇಚಿಸಿದ್ದಾರೆ. ತಮ್ಮ ನಡೆ ನುಡಿಗಳ ಮೂಲಕ ಸಂಸ್ಕೃತ ಭಾಷೆಯ ವಿರುದ್ಧ ಬಂಡಾಯ ಧೋರಣೆಯನ್ನು ವ್ಯಕ್ತಪಡಿಸಿದರು. ಹೀಗಾಗಿ ವಚನ ಭಾಷೆಯಲ್ಲಿ ಹೊಸಗನ್ನಡ ಮಾರ್ಗದ ನವೋದಯ ಪ್ರಗತಿಶೀಲ ದಲಿತ ಬಂಡಾಯದ ಸಾಹಿತ್ಯ ಸೂಕ್ಷ್ಮತೆಯ ಒಳನೋಟಗಳು ಇಲ್ಲಿವೆ. ಈ ಭಾಷಾ ಕ್ರಾಂತಿ ಹಳಗನ್ನಡದ ಕವಿಗಳಿಗೂ ತಾಗದಿರಲಿಲ್ಲ.
ಮನಕ್ಕೆ ನಾಚದ ವಚನ, ವಚನಕ್ಕೆ ನಾಚದ ಮನ!
ಕುಂದು-ಹೆಚ್ಚ ನುಡಿವೆ.
ಒಂದು ಮಾತಿನ ಗೆಲ್ಲಸೋಲಕ್ಕೆ ಹಿಡಿದು ಹೋರುವೆ,
ಕೂಡಲಸಂಗನ ಶರಣರ ಎನ್ನಾಳ್ದರೆಂಬೆ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-69/ವಚನ ಸಂಖ್ಯೆ-256)
ಈ ಭಾಷಾ ಶೋಧದಲ್ಲಿ ಮನಕ್ಕೆ ನಾಚದ ವಚನ … ವಚನ ಎಂದರ ಆಣೆ, ಪ್ರಮಾಣ, ಮಾತು ಅರ್ಥಗಳಿದ್ದರೂ ಶಬ್ದದ ಬಳಕೆಯಲ್ಲಿ ವ್ಯತ್ಯಾಸ ಕಾಣಲಾಗುತ್ತದೆ. ಈ ಮನಸ್ಸು ಅನೇಕ ಕಲ್ಮಶದಿಂದ ಕೂಡಿದ್ದರೂ ಮಾತು ತನ್ನದೇ ಸರಿ ಎಂಬ ವಿರೋಧ ವ್ಯಕ್ತಪಡಿಸುತ್ತದೆ. ಭಾಷೆಯ ದುಗುಡಕ್ಕೆ ಮನದ ಭಿತ್ತಿ ಇರದಿದ್ದರೆ ಶಬ್ದಗಳ ಕಟ್ಟಡ ಕಟ್ಟಲು ಸಾಧ್ಯವಿಲ್ಲ. 12 ನೇ ಶತಮಾನದಲ್ಲಿ ಭಾಷೆ ಶೋಷಣೆಗೆ ಒಳಗಾಗಿರಲಿಲ್ಲ. ರಾಜರ ಆಡಳಿತದಲ್ಲಿ ಪ್ರಭುತ್ವಗಳು ಬದಲಾಗುತ್ತಿದ್ದವು. ಭಾಷೆಯ ಬದಲಾವಣೆ ಅಂದು ಇರಲಿಲ್ಲ. ಹೀಗಾಗಿ ವಚನದ ಮಾತು ಸಾಮಾನ್ಯರ ಭಾಷೆಯಾಗಿತ್ತು. ಅಣ್ಣನವರ ನುಡಿದರೆ ಮುತ್ತಿನ ಹಾರದಂತಿರಬೇಕು ಎಂಬ ವಾಸ್ತವತೆಯಲ್ಲಿ ಕನ್ನಡಕ್ಕೆ ಬೇಕಾಗಿರುವ ಸ್ವತಂತ್ರ ಲಯ ಪ್ರಾಸ ಪ್ರಧಾನ ಪದಗಳನ್ನು ಗೌರವಿಸಿ ನಿಜಾರ್ಥಗಳನ್ನು ಸಮರ್ಥಿಸಿದರು.
ನುಡಿದಡೆ ಮುತ್ತಿನ ಹಾರದಂತಿರಬೇಕು.
ನುಡಿದಡೆ ಮಾಣಿಕ್ಯದ ದೀಪ್ತಿಯಂತಿರಬೇಕು.
ನುಡಿದಡೆ ಸ್ಫಟಿಕದ ಸಲಾಕೆಯಂತಿರಬೇಕು.
ನುಡಿದಡೆ ಲಿಂಗ ಮೆಚ್ಚಿ ಅಹುದಹುದನಬೇಕು.
ನುಡಿಯೊಳಗಾಗಿ ನಡೆಯದಿದ್ದಡೆ,
ಕೂಡಲಸಂಗಮದೇವನೆಂತೊಲಿವನಯ್ಯಾ?
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-224/ವಚನ ಸಂಖ್ಯೆ-803)
ಅನುಭವ ಮತ್ತು ಅಭಿವ್ಯಕ್ತತೆಯಲ್ಲಿ ಭಾವ ಮತ್ತು ಭಾಷೆಯ ತೀವ್ರತೆ ಅಡಗಿರುತ್ತದೆ. ಮುತ್ತಿನಹಾರ, ಮಾಣಿಕ್ಯದ ದೀಪ್ತಿ, ಸ್ಪಟಿಕದ ಸಲಾಕೆ ತಾಯಿ ಭಾಷೆಗೆ ಶಿಷ್ಟತೆಯ ಸೌಂದರ್ಯವನ್ನು ಕಟ್ಟಿಕೊಡುತ್ತದೆ. ಹಾಡಿದರೆ ಹಾಡಾಗುವ, ಓದಿದರೆ ಅರಿವಿನ ಸಾಹಿತ್ಯವಾಗುವ ಅಧ್ಯಾತ್ಮದ ಅನುಭಾವದ ಗೀತೆಗಳಾಗಿವೆ. ಹೀಗಾಗಿ ಇಂದು ಕನ್ನಡ ಭಾಷೆ ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಭಾರತದ ಶ್ರೀಮಂತ ಭಾಷೆಯಾಗಿ ಗುರುತಿಸಿಕೊಂಡಿದೆ. ಇದಕ್ಕೆ ಕಾರಣ ನಮ್ಮ ಕವಿಗಳ ವಚನ ಸಂಸ್ಕೃತಿ ಅಧ್ಯಯನದ ಅಳ, ವಿಸ್ತಾರ ಪ್ರೀತಿ ಎಂಬುದನ್ನು ಮನಗಾಣಬೇಕು. ವರಕವಿ ಡಾ. ದ, ರಾ. ಬೇಂದ್ರೆಯವರ ಮಾತೃಭಾಷೆ ಮರಾಠಿ, ಕನ್ನಡದ ಆಸ್ತಿ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರರ ಮಾತೃಭಾಷೆ ತಮಿಳು. ಈ ಕವಿಗಳ ವಚನ ಭಾಷೆಯ ಬರವಣಿಗೆ ಅಸಾಧಾರಣ ಮತ್ತು ಆತ್ಮೀಯ ಪರಿಭಾಷೆಯಾಗಿದೆ.
ರಾಷ್ಟ್ರಕವಿ ಕುವೆಂಪು ಅವರ ಈ ಭಾವಗೀತೆ ತಾತ್ವಿಕತೆಯ ಶೋಧ ರೋಮಾಂಚನದ ಅನುಭೂತಿ ಅದು.
ಕಾರ್ತಿಕದ ಕತ್ತಲಲ್ಲಿ ಆಕಾಶ ದೀಪವಾಗಿ ನೀ ಬಂದೆ
ಬಟ್ಟೆಗೆಟ್ಟವರಿಗೊಂದು ದೊಂದು ದಿಕ್ಕಾಗಿ
ಎಂಟು ಶತಮಾನಗಳ ಹಿಂದೆ ಅಗ್ನಿ ಖಡ್ಗವನಾಂತು
ಓ ಆಧ್ಯಾತ್ಮ ಕ್ರಾಂತಿ ವೀರ ದೇವ ದಯೆಯೊಂದು
ಹೇ ಧೀರಾವತಾರ ಶ್ರೀ ಗುರು ಬಸವೇಶ್ವರ
ಜಾತಿ ಪದ್ಧತಿಯ ಹೋಮ ಕೂಪಕ್ಕೆ ಬಿದ್ದು
ವೈದಿಕರ ಯಜ್ಞತಾಪಕ್ಕೆ ಬಲಿವೋದ
ದಲಿತರ ಜೀವನ ರೆತ್ತಿ ಮತಿ ವಿಚಾರಕ್ಕೆ
ಕಾಯಕದ ದಿವ್ಯ ತತ್ವದ ಸುಕ್ಷೇಮ
ಧರ್ಮನಾಕಕ್ಕೆ ನಡೆಸಿದ ಮಹಾತ್ಮನೆ
ನಿನಗೆ ನಮೋ ನಮಃ
ಅಜ್ಞಾನವೆಂಬ ಕತ್ತಲು ತಾಂಡವವಾಡುತ್ತಿರುವಾಗ ಬಂದವರು ಬಸವಣ್ಣ. ಅಜ್ಞಾನಿ, ಸೋಮಾರಿ ವರ್ಗದವರನ್ನು ಎಚ್ಚರಿಸಲು ಆಕಾಶ ದೀಪವಾಗಿ ಬಂದವರು ಅಣ್ಣ ಬಸವಣ್ಣನವರು. ಅಗ್ನಿ ಖಡ್ಗ ಕ್ರಾಂತಿ … ಬಸವ ಭಾಷೆಯ ಶಬ್ದ ಒಂದರ ಶಕ್ತಿಯ ಸನ್ನಿವೇಶದ ಸ್ವರೂಪ. ಕುವೆಂಪುರವರು ಹೇಳುವಂತೆ ಬಸವ ಶಕ್ತಿ ಇರುವುದು ಶಬ್ದ ಮತ್ತು ಅರ್ಥಗಳಲ್ಲಿ. ಬಸವ ವಿರೋಧಿಗಳಿಗೆ ಸ್ಪಷ್ಟವಾದ ಅರ್ಥವನ್ನು ನೀಡಿದ್ದಾರೆ. ಹೀಗಾಗಿ ಬಸವ ಭಾಷಾ ಆರಾಧಕರಿಗೆ ಈ ಕವನ ಬಹು ಪ್ರೀತಿ ಅಕ್ಕರೆಯನ್ನು ಬಿಂಬಿಸುತ್ತದೆ.
ಹೀಗಾಗಿ ಭಾಷೆಯೊಂದು ತನ್ನ ಒಡಲು ತುಂಬಿಕೊಳ್ಳಲು ಅನ್ಯ ಭಾಷೆಯನ್ನು ಆಶ್ರಯಿಸಲೇಬೇಕಾಗುತ್ತದೆ. ಫ್ರೆಂಚ್, ಜರ್ಮನ್, ಇಂಗ್ಲಿಷ್ ಭಾಷೆಗಳು ಇದೇ ಕೆಲಸವನ್ನು ಮಾಡಿವೆ. ಹೊಸತನ್ನು ಸೇರಿಸಿಕೊಂಡು ಉಭಯ ಭಾಷಾ ತಜ್ಞತೆಯನ್ನು ಕನ್ನಡ ಭಾಷಾ ವಚನಕಾರರು ಕರ್ನಾಟಕದ ಅನೇಕ ಕವಿಗಳು ಭಾಷಾ ವಿಸ್ತರತೆಯನ್ನು ವಿಶಾಲವಾಗಿಸಿದರು.
ಭಕ್ತಿ ಮತ್ತು ಭಾಷೆಯ ಸಂಗಮದಲ್ಲಿ ಶಬ್ದಗಳ ಬಳಕೆ ಬಹು ಸೂಕ್ಷ್ಮವಾಗಿರುತ್ತದೆ. ಹೀಗಾಗಿ ಶರಣರ ಅನುಭವ ಮಂಟಪದಲ್ಲಿ ಲೇಖನಿ ಮತ್ತು ವಾಕ್ ಸ್ವಾತಂತ್ರವೂ ಒಂದು.
ಅಲಗಲಗು ಮೋಹಿಸಿದಲ್ಲದೆ ಕಲಿತನವ ಕಾಣಬಾರದು,
ನುಡಿದ ನುಡಿ ಜಾರಿದಡೆ ಮನಕ್ಕೆ ಮನ ನಾಚಬೇಕು.
ಶಬ್ದಲೊಟ್ಟೆಯತನದಲ್ಲಿ ಎಂತಪ್ಪುದಯ್ಯ ಭಕ್ತಿ?
ಪಾಪಿಯ ಕೂಸನೆತ್ತಿದಂತೆ
ಕೂಡಲಸಂಗಮದೇವರ ಭಕ್ತಿ
ಅಳಿಮನದವರಿಗೆ ಅಳವಡದಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-224/ವಚನ ಸಂಖ್ಯೆ-803)
ಶರಣರ ನಡೆ-ನುಡಿ ಸ್ವಾಭಿಮಾನದ ಧರ್ಮವಾಗಿ ಬದಲಾಗಬೇಕು. ವಚನಾಭಿಮಾನದ ಓದುಗರಿಗೆ ವಚನ ಸೌಂದರ್ಯ ಸಂಸ್ಕೃತಿಯ ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಮಾತಿಗೆ ಪೂರಕವಾಗಿ ಗಾಂಧೀಜಿಯವರ ಈ ಮಾತು ನೆನಪಿಸಿಕೊಳ್ಳಬೇಕು. “ಬೇರೆ ಸಂಸ್ಕೃತಿಯನ್ನು ಪ್ರೀತಿಸು. ನಮ್ಮ ಸಂಸ್ಕೃತಿಯಲ್ಲಿ ಜೀವಿಸು”. ಹೀಗಾಗಿ ಶರಣ ಸಂಸ್ಕೃತಿ ಅಭಿಯಾನ ಒಂದು ತಿಂಗಳ ಪರ್ಯಂತ ನಡೆದ ಉತ್ಸವ ವಚನ ಭಾಷಾಭಿಮಾನಿಗಳಿಗೆ ಶರಣರ ಉತ್ಸವ ಹಬ್ಬದಷ್ಟು ಸಡಗರ ಸಂತೋಷ ನೀಡಿತ್ತು. ಬಸವ ಶಕ್ತಿ ಸಮಾವೇಶ ಭಾಷಾ ಸಂಸ್ಕೃತಿಯನ್ನು ಹಿರಿದಾಗಿಸಿದ್ದನ್ನು ನೆನಪಿಸಿಕೊಳ್ಳಬೇಕು.
ಅಲಗಿನ ಮೊನೆಯಲ್ಲಿ ಕಲಿತನ ವಿರುತ್ತದೆ. ಕೆಲವರ ಮಾತು ಚುಚ್ಚುವ ಮೊನಚಾದ ಮಾತುಗಳಾಗಿರತ್ತವೆ. ಮಾತಿನಲ್ಲಿ ಸಮರ ಸಾರುವವರು ಅವರಾಗಿರುತ್ತಾರೆ. ಶರಣರ ಕನ್ನಡತನವನ್ನು ಸ್ಫುರಿಸುವ ಭಾಷೆ. ಪಾಪಿಯು ಕೂಸನ್ನೆತ್ತಿದಂತೆ ಎಂಬ ಮಾತಿಗೆ ಮನ ಶುದ್ಧತೆಗೆ ಪ್ರಥಮ ಆಧ್ಯತೆ. ಭಾಷೆ ಮತ್ತು ಶಬ್ದಗಳ ಅನುಕರಣೆ ವೈಭವೀಕರಣದಲ್ಲಿ ಪಾಪಿ ಕೂಸನೆತ್ತಿಕೊಂಡರೂ ಮಗುವಿನ ಬಗ್ಗೆ ಪ್ರೀತಿ ಇರುವುದಿಲ್ಲ. ಹಾಗೆಯೇ ಭಾಷೆಯ ಬಗ್ಗೆ ಪ್ರೀತಿ ಇರದವರು ಭಾಷಾ ಪ್ರದರ್ಶನದಲ್ಲಿ ಕೃತಕತೆ ಇರುತ್ತದೆ. ಆಡಂಬರದ ಭಾಷೆಯನ್ನು ಸಹಿಸದ ಶರಣರು ಅಳಿಮನದವರಿಗೆ ಸಲ್ಲದಯ್ಯಾ ದೇವಾ ಎಂಬ ವಾಸ್ತವತೆಯನ್ನು ಗಮನಿಸಬೇಕು.
ವಚನಗಳು ಜನಪದ ಹಾಡುಗಳ ಪ್ರಭಾವ:
ದೇಸಿ ಕನ್ನಡ ಭಾಷೆಯ ಸತ್ವ ಸಮಾಜದ ನೈತಿಕ ಮೌಲ್ಯಗಳು ಧರ್ಮ ಮತ್ತು ಭಕ್ತಿ ಜನರ ಭಾವನೆಗಳನ್ನು ಪಸರಿಸಲು ಕಾರಣವಾಗಿವೆ. ಈ ಭಾಷೆಯಲ್ಲಿ ಭಾವಗೀತೆಯ ನಿವೇದನೆ ಸಂಗೀತದ ಮಾಧುರ್ಯಗಳನ್ನು ಬಿಂಬಿಸುತ್ತವೆ. ಶಬ್ದ ಮತ್ತು ಧ್ವನಿ ಒಂದು ಶಕ್ತಿಶಾಲಿ ಅಸ್ತ್ರ. ಹೀಗಾಗಿ ವಚನ ಭಾಷೆಗೆ ಶಬ್ದ ಮತ್ತು ವಾಕ್ಯಗಳಲ್ಲಿ ಪರಿಣಾಮಕಾರಿ ಶಕ್ತಿ ಅಡಗಿರುತ್ತದೆ. ಶಬ್ದದ ಲೊಟ್ಟೆತನದಲ್ಲಿ ಎಂತಹುದಯ್ಯ ಭಕ್ತಿ. ಶಬ್ದಗಳ ಗುಚ್ಛದಲ್ಲಿ ನಿಷ್ಠುರವಾದ ವ್ಯಂಗ್ಯಾರ್ಥ ಅಡಗಿರುತ್ತದೆ.
ಬತ್ತಲೆ ಇದ್ದವರೆಲ್ಲ ಕತ್ತೆಯ ಮಕ್ಕಳು.
ತಲೆ ಬೋಬೋಳಾದವರೆಲ್ಲ ಮುಂಡೆಯ ಮಕ್ಕಳು.
ತಲೆ ಜಗಟ್ಟಿದವರೆಲ್ಲ ಹೊಲೆಯರ ಸಂತಾನ.
ಆವ ಪ್ರಕಾರವಾದಡೇನು ಅರಿವೇ ಮುಖ್ಯವಯ್ಯಾ,
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-196/ವಚನ ಸಂಖ್ಯೆ-523)
ಇದು ಜನಪದರ ಸಾಮಾನ್ಯ ಬೈಗುಳದ ಮೂಲಕ ಮಾಡುವ ಖಂಡನೆಯ ವಚನವಿದು. ಇಂತಹ ವಚನಗಳಲ್ಲಿ ಸಹಜ ಗ್ರಾಮ್ಯ ಬೈಗುಳ ಭಾಷೆಯಾಗಿ ಪ್ರತಿಕ್ರಿಯೆ ನೀಡುತ್ತದೆ. ಕನ್ನಡತನದ ಸತ್ವ ವಚನ ಮೀಮಾಂಸೆಯ ತಾರ್ಕಿಕ ಒಳನೋಟಗಳನ್ನು ಕಾಣುತ್ತೇವೆ. ಪ್ರಾಮಾಣಿಕತೆಯನ್ನು ಒತ್ತಿ ಹೇಳುವ ಕಾಯಕಶ್ರದ್ಧೆ, ದಾಸೋಹಪ್ರಜ್ಞೆ, ಏಕದೇವಾನಿಷ್ಠೆ, ಜಾತಿಯ ಮನೋಧರ್ಮ, ಸಕಲ ಜೀವಗಳಿಗೆ ಹಿತ ಬಯಸುವ ಈ ಎಲ್ಲಾ ಭಾಷಿಕ ಮೌಲ್ಯಗಳು ವಚನ ಭಾಷೆಯ ಮೇರುಮುಕುಟ ಎನ್ನಬಹುದು.
ಈ ಎಲ್ಲಾ ಅಂಶಗಳನ್ನು ಅವಲೋಕಿಸಿದರೆ ಬದುಕು, ಭಾಷೆ, ಬರಹ ಸಂಸ್ಕೃತಿ ಭಿನ್ನವಲ್ಲ. ಅದು ಕನ್ನಡ ಭಾಷೆಯ ಹೆಮ್ಮೆಯ ಸಂಪತ್ತು ವಚನಗಳಾಗಿವೆ.
ಬಸವಣ್ಣನವರ ಆಪ್ತ ಮತ್ತು ಶರಣ ಸಂಕುಲದಲ್ಲಿ ಶ್ರೇಷ್ಠರೆಂದೇ ಗುರುತಿಸಿಕೊಂಡವರು ಮಾದಾರ ಚೆನ್ನಯ್ಯನವರಾಗಿದ್ದರು. ಚೆನ್ನಯ್ಯನ ಮನೆಯ ದಾಸನ ಮಗನಯ್ಯ ನಾನೆಂದು ಬಸವಣ್ಣನವರು ಗೌರವಿಸಿದ್ದರು. ಗುಪ್ತಭಕ್ತಿಯಿಂದ ಶಿವನ ಒಲುಮೆಗೆ ಪಾತ್ರರಾದ ಶರಣ ಮಾದಾರ ಚೆನ್ನಯ್ಯನವರನ್ನು ಕುರಿತು ತಮ್ಮ ವಚನಗಳಲ್ಲಿ ಸ್ಮರಿಸಿದ್ದಾರೆ. ಓದಿನ ಶಕ್ತಿ ಬದುಕನ್ನು ಉನ್ನತೀಕರಿಸುವ ವ್ಯಕ್ತಿತ್ವದ ವಿಕಾಸಕ್ಕೆ ದಾರಿ ಮಾಡಿಕೊಡುವ ಹಂತ … ಓದಿನ ಫಲದ ಸಾರ್ಥಕತೆ ಹೀಗೂ ಕಂಡು ಬರುತ್ತದೆ.
ಓದಿದಡೇನು, ಕೇಳಿದಡೇನು, ಶಿವಪಥವನರಿಯದನ್ನಕ್ಕ?
ಓದಿತ್ತು ಕಾಣಿರೋ ಶುಕನು, ಶಿವಜ್ಞಾನವನರಿಯದನ್ನಕ್ಕ.
ಓದಿದ ಫಲವು ಮಾದಾರ ಚೆನ್ನಂಗಾಯಿತ್ತು.
ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-41/ವಚನ ಸಂಖ್ಯೆ-143)
ಬಸವಣ್ಣನವರು ಈ ಆತ್ಮೀಯ ಸನ್ನಿವೇಶದಲ್ಲಿ ಶರಣ ಮಾದಾರ ಚೆನ್ನಯ್ಯನವರ ವ್ಯಕ್ತಿತ್ವವನ್ನು ವಚನಭಾಷೆಯಿಂದ ಕಟ್ಟಿಕೊಟ್ಟಿದ್ದಾರೆ. ಓದಿದ ಫಲವು ಶರಣ ಮಾದಾರ ಮಾದರ ಚೆನ್ನಯ್ಯನಿಗಾಯಿತ್ತು. ಈ ಮಾತನ್ನು ಅಂದಿನ ಸಮಾಜದಲ್ಲಿ ಹೇಳುವುದು ಅಷ್ಟು ಸುಲಭವಾಗಿರಲಿಲ್ಲ. ಏಕೆಂದರೆ ಬಡತನ ಹಸಿವಿನ ಸಂಕೋಲೆಗಳ ನಡುವೆ ಬಂಧಿತರಾದ ಈ ವರ್ಗದವರ ಬಿಡುಗಡೆಗೆ ವಚನಗಳ ಮೂಲಕ ದಾಖಲಿಸಿದ್ದಾರೆ. ಅಸಮಾನತೆ ಅಮಾನವೀಯತೆ ಬೆನ್ನಿಗೆ ನಿಂತಿರುವ ಸಂಸ್ಕೃತಿಗಳು ಅಕ್ಷರ ವಂಚಿತರನ್ನಾಗಿಸಿದ್ದವು. ಹೀಗಾಗಿ ವಚನ ಭಾಷೆಯನ್ನು ಪ್ರಖರವಾಗಿ ಬೆಳೆಸಿದವರು ಕಾಯಕ ಶರಣರೆಂದು ಗುರುತಿಸಿಕೊಂಡ ಕೆಳವರ್ಗದವರಾಗಿದ್ದರು. ಅಕ್ಷರ ಓದು ಪಂಡಿತರ ಭಾಷೆಯಾಗಿತ್ತು. ಶಿವಪಥ ಲಿಂಗ ಮತಗಳ ರೂಪಕಗಳು. ಶರಣರ ಭಾಷೆಯ ಸಾಮಿಪ್ಯದಲ್ಲಿ ಮುಕ್ತವಾದ ಯಶಸ್ಸನ್ನು ಪಡೆದುಕೊಂಡಿತು. ಓದಿನ ಭಾಷೆ ಆಸ್ಥಾನ ಪಂಡಿತರದ್ದಾದರೆ ಅರಿವಿನ ಭಾಷೆ ಶರಣರದ್ದಾಗಿತ್ತು.
ಅಂದು ವಚನ ಭಾಷೆಯ ಉಗಮದಲ್ಲಿ ಜಾತಿ ಪದ್ಧತಿ ವಿಪರೀತವಾಗಿತ್ತು. ಜಾತಿ ಸಮುದಾಯದವರು ಒಂದೊಂದು ಗುಂಪುಗಳಾಗಿ ಬದುಕಿದ್ದರು. ಅವರ ಭಾಷೆಯನ್ನು ಗಮನಿಸಿದಾಗ ಕಸಬಗೇರಿ ಹೊಲಗೇರಿ ಹದಿನೆಂಟು ಜಾತಿಗಳು ದಿನಬಳಕೆಯ ಶಬ್ದಗಳಾಗಿದ್ದವು. ಮೇಲ್ವರ್ಗದ ಸಮಾಜದೊಂದಿಗೆ ವ್ಯಕ್ತಿ ಉತ್ತರ ಕೊಡಲು ಸರಳ ಭಾಷೆಯಲ್ಲಿ ಸಾಮಾನ್ಯರ ಭಾಷಾಪ್ರಯೋಗದ ಅವಶ್ಯಕತೆ ಅಂದಿತ್ತು.
ಆದ್ಯರ ವಚನ ಪುರುಷವೆಂಬೆನು,
ಆ ಪರುಷವೆನಗೆಂತು ದೊರೆಕೊಂಬುದಯ್ಯಾ?
ತನು ಮನ ಧನವ ವಿವರಿಸಿ ನುಡಿವೆ,
ಸೋಂಕಿಂಗೆ ಸೈರಿಸಲಾರೆ,
ಹೊಲೆಯರ ಮದ್ದಳೆಯಂತೆ ನುಡಿವ ಡಂಬಕ ನಾನಯ್ಯಾ.
ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-83/ವಚನ ಸಂಖ್ಯೆ-313)
ಸಾಮಾನ್ಯ ಭಾಷಾ ಪ್ರಯೋಗದ ಚಿತ್ರಣ ಹೊಲೆಯರ ಮದ್ದಳೆಯಂತೆ ನುಡಿವ ಈ ನುಡಿಗಟ್ಟನ್ನು ಗಮನಿಸಬೇಕು. ಆದ್ಯರ ಪ್ರಮಥರ ಕಠಿಣ ಭಾಷೆಯನ್ನು ಪುಟಕ್ಕಿಟ್ಟ ಚಿನ್ನದಂತೆ ಪರುಷಮಣಿಯಾಗಿಸುವ ಆತ್ಮಭಾಷೆಯದು. ತನು ಮನ ಧನಗಳ ಅರಿವನ್ನು ಹೆಚ್ಚಿಸುವ ಪಾಮರರ ಭಾಷೆಯದು. ನೊಂದು ಬೆಂದ ಮನಗಳಿಗೆ “ಹೊಲೆಯರ ಮದ್ದಳೆಯಂತೆ ನುಡಿವ ಡಂಬಕ ನಾನಯ್ಯ”. ಜನಪದರ ಈ ಗಾದೆ ಮಾತನ್ನು ಬಳಸಿ ಸಾಮಾನ್ಯರಿಗೆ ಇನ್ನೂ ಹತ್ತಿರವಾದರು.
ಅಂಬಿಗರ ಚೌಡಯ್ಯನವರ ಈ ವಚನದ ಭಾಷೆಯನ್ನು ಗಮನಿಸಬೇಕು.
ಹೊಲೆಯ ಹೊಲೆಯ ಎಂದಡೆ ಹೊಲೆಯರೆಂತಪ್ಪರಯ್ಯಾ?
ಹೊಲೆಯ ಹೊರಕೇರಿಯಲ್ಲಿರುವನು,
ಊರೊಳಗಿಲ್ಲವೆ ಅಯ್ಯಾ, ಹೊಲೆಯರು?
ತಾಯಿಗೆ ಬೈದವನೇ ಹೊಲೆಯ,
ತಂದೆಗೆ ಉತ್ತರ ಕೊಟ್ಟವನೆ ಹೊಲೆಯ,
ತಂದೆಗೆ ಬೈದವನೇ ಹೊಲೆಯ,
ಕೊಡುವ ದಾನಕ್ಕೆ ಅಡ್ಡ ಬಂದವನೆ ಹೊಲೆಯ,
ನಡೆವ ದಾರಿಗೆ ಮುಳ್ಳ ಹಚ್ಚಿದವನೇ ಹೊಲೆಯ,
ಬ್ರಾಹ್ಮಣನ ಕುತ್ತಿಗೆಯ ಕೊಯ್ದವನೇ ಹೊಲೆಯ,
ಹತ್ತು ಆಡಿದರೆ ಒಂದು ನಿಜವಿಲ್ಲದವನೇ ಹೊಲೆಯ,
ಚಿತ್ತದಲ್ಲಿ ಪರಸತಿಯ ಬಯಸಿದವನೇ ಹೊಲೆಯ,
ಲಿಂಗಮುದ್ರೆಯ ಕಿತ್ತಿದವನೇ ಹೊಲೆಯ,
ಲಿಂಗವ ಬಿಟ್ಟು ತಿರುಗುವವನೇ ಹೊಲೆಯ,
ಧರ್ಮವ ಮಾಡದವನೇ ಹೊಲೆಯ,
ಬಸವನ ಕೊಂದವನೇ ಹೊಲೆಯ,
ಬಸವನ ಇರಿದವನೇ ಹೊಲೆಯ,
ಲಿಂಗಪೂಜೆಯ ಮಾಡದವನೇ ಹೊಲೆಯ.
ಇಂತಪ್ಪ ಹೊಲೆಯರು ಊರ ತುಂಬ ಇರಲಾಗಿ
ಹೊರಕೇರಿಯವರಿಗೆ ಹೊಲೆಯರೆನಬಹುದೇ?
ಹೊಲೆ ಹುಟ್ಟಿದ ಮೂರು ದಿನಕ್ಕೆ ಪಿಂಡಕ್ಕೆ ನೆಲೆಯಾಯಿತ್ತು,
ಹಿಪ್ಪೆಯನುಂಡ ತೊಗಲು ಹರಿಗೋಲವಾಯಿತ್ತು.
ಗುರುಗಳಿಗೆ ಚಮ್ಮಾವುಗೆಯಾಯಿತ್ತು.
ಹೂಡಲಿಕ್ಕೆ ಮಿಣಿಯಾಯಿತ್ತು.
ಹೊಡೆಯಲಿಕ್ಕೆ ಬಾರುಕೋಲವಾಯಿತ್ತು.
ಬಂಡಿಗೆ ಮಿಣಿಯಾಯಿತ್ತು.
ಅರಸರಿಗೆ ಮೃದಂಗವಾಯಿತ್ತು.
ಡೋಲು ನಗಾರಿಯಾಯಿತ್ತು.
ತುಪ್ಪ ತುಂಬಲಿಕ್ಕೆ ಸಿದ್ದಲಿಕೆ,
ಎಣ್ಣೆ ತುಂಬಲಿಕೆ ಬುದ್ದಲಿಕೆಯಾಯಿತ್ತು.
ಸಿದ್ದಲಿಕೇನ ತುಪ್ಪ, ಬುದ್ದಲಿಕೇನ ಎಣ್ಣೆ
ಕಲ್ಲಿಶೆಟ್ಟಿ ಮಲ್ಲಿಶೆಟ್ಟಿಗಳು ಕೂಡಿ,
ನಾ ಶೀಲವಂತ ತಾ ಶೀಲವಂತ ಎಂದು
ಶುದ್ಧೈಸಿಕೊಂಡು ತಿಂದು ಬಂದು,
ಜಗಳ ಬಂದಾಗ ನನ್ನ ಕುಲ ಹೆಚ್ಚು, ನಿನ್ನ ಕುಲ ಹೆಚ್ಚು
ಎಂದು ಬಡಿದಾಡುವ ಕುನ್ನಿ ನಾಯಿಗಳ ಮೋರೆಯ ಮೇಲೆ
ನಮ್ಮ ಪಡಿಹಾರಿ ಉತ್ತಣ್ಣಗಳ ವಾಮಪಾದುಕೆಯ ಕೊಂಡು
ಅವರ ಅಂಗಳ ಮೆಟ್ಟಿ ಫಡಫಡನೆ ಹೊಡಿ ಎಂದಾತ
ನಮ್ಮ ದಿಟ್ಟ ಅಂಬಿಗರ ಚೌಡಯ್ಯ ನಿಜಶರಣನು.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-107/ವಚನ ಸಂಖ್ಯೆ-286)
ಶರಣರು ಈ ಭಾಷೆಯನ್ನು ಪ್ರೀತಿಸಲು ಕಾರಣ ಯತೇಚ್ಛ ಗಾದೆಗಳ ಬಳಕೆಯಿಂದ ವಚನ ಭಾಷೆಯನ್ನು ಸತ್ವಯುತವಾಗಿ ಬಳಸಲು ಕಾರಣರಾಗಿದ್ದರು.
- ತುಪ್ಪದ ಸವಿಗೆ ಅಲಗ ನೆಕ್ಕುವ ಸೊಣಗದಂತೆ.
- ಮೂಂಗೈಯ ಕಂಕಣಕ್ಕೆ ಕನ್ನಡಿಯ ತೋರುವಂತೆ.
- ಮಡಕೆಯ ಮಾಡುವಡೆ ಮಣ್ಣೇ ಮೊದಲು.
- ಸಂತನಿದ್ದ ಮನೆಗೆ ಕೊಂತವ ತಂದಂತೆ.
- ಕಂಬಳಿಯಲ್ಲಿ ಕಣಕವನಾದಿದಂತೆ
- ಹರನೀವ ಕಾಲಕ್ಕೆ ಸಿರಿಯು ಬೆನ್ನಲಿ ಬರ್ಕು
- ಊರ ಮುಂದೆ ಹಾಲ ಹಳ್ಳ ಹರಿವುತ್ತಿರಲು
- ಬಂಜೆ ಬೇನೆಯನರಿಯಳು
- ಮಲತಾಯಿ ಮುದ್ದ ಬಲ್ಲಳೆ?
ಬಸವಣ್ಣನವರ ಸಾಮಾಜಿಕ ಕಾಳಜಿ ಜೊತೆಗೆ ಸಾಮಾನ್ಯ ಭಾಷೆಯ ಆತ್ಮ ವಿಮರ್ಶೆಯ ನುಡಿಗಟ್ಟುಗಳು ಬದುಕಿನ ಅವಿಭಾಜ್ಯ ಅಂಗವಾಗಿ ನೋಡಿದರು. ಅವರ ಬದುಕು ಮತ್ತು ಭಾಷೆ ಭಾವಗಳಾಗಿ ಹೊರಹೊಮ್ಮಿದವು. ಎಲ್ಲಾ ವಚನಕಾರರ ಭಾಷೆಯಲ್ಲಿ ಏಕರೂಪ ಅಭಿವ್ಯಕ್ತತೆ ಕಂಡು ಬಂದರೂ ಭಾಷೆಯ ಅವಲೋಕನದಲ್ಲಿ ಆಯಾ ವಚನಕಾರರ ವೈವಿಧ್ಯತೆ ಥಟ್ಟನೆ ಅರಿವಿಗೆ ಬರುತ್ತದೆ. ವ್ಯೋಮಕಾಯ ಅಲ್ಲಮ ಪ್ರಭುವಿನ ಭಾಷೆಯಲ್ಲಿ ಬೆಡಗಿನ ಅನುಭಾವ ನಿಷ್ಠುರ ಸತ್ಯಗಳು ಕಾಣಲು ಸಾಧ್ಯವಾಗುತ್ತದೆ. ಬಸವಣ್ಣನವರ ಮತ್ತು ವೈರಾಗ್ಯನಿಧಿ ಅಕ್ಕಮಹಾದೇವಿಯವರ ವಚನಗಳಲ್ಲಿ ಮೃದು ನಿಷ್ಟೂರತೆ ಇಂಪಾದ ಪ್ರಾಸ ಲಯಬದ್ದವಾದ ಕಾವ್ಯತ್ಮಕ ಭಾಷಾ ಅಂಶಗಳನ್ನು ಕಾಣಲು ಸಾಧ್ಯ.
ಕೆಳವರ್ಗದ ವಚನಕಾರರಲ್ಲಿ ತಮ್ಮ ವೃತ್ತಿ ಅಥವಾ ಕಸುಬಿನ ಪರಿಕರಗಳನ್ನು ರೂಪಕ ಉಪಮೆಗಳಾಗಿ ಬಳಸಿದ್ದಾರೆ. ಅಸಾಮಾನತೆ ಮೌಡ್ಯ ಹಾಗೂ ಡಾ0ಭಿಕತೆಯ ವಿರುದ್ಧ ಸಿಡಿಮದ್ದಿನಂತ ಭಾಷೆಯನ್ನು ಬಳಸಿದ್ದಾರೆ. ಭಾಷೆಗೆ ತನ್ನದೇ ಆದಂತಹ ನುಡಿಯ ಆವಿಷ್ಕಾರಗಳು ಇರುತ್ತವೆ. ಹೀಗಾಗಿ ನೈತಿಕತೆ ಅಧ್ಯಾತ್ಮದ ಅನುಭಾವದ ಚಿಂತನೆಗೆ ಮನಪರಿವರ್ತನೆಗೆ ಸುಭಾಷಿತಗಳು ಹುಟ್ಟಿಕೊಂಡಿವೆ. ಬಸವಣ್ಣನವರ ವಚನಗಳು ಇದಕ್ಕೆ ಹೊರತಲ್ಲ.
ಭಕ್ತಿ ಸುಭಾಷೆಯ ನುಡಿಯ ನುಡಿವೆ,
ನುಡಿದಂತೆ ನಡೆವೆ,
ನಡೆಯೊಳಗೆ ನುಡಿಯ ಪೂರೈಸುವೆ,
ಮೇಲೆ ತೂಗುವ ತ್ರಾಸು ಕಟ್ಟಳೆ ನಿಮ್ಮ ಕೈಯಲ್ಲಿ,
ಒಂದು ಜವೆ ಕೊರತೆಯಾದಡೆ
ಎನ್ನನದ್ದಿ ನೀನೆದ್ದು ಹೋಗು,
ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-115/ವಚನ ಸಂಖ್ಯೆ-441)
ಭಾಷೆಯ ಸುಂದರತೆಯನ್ನು ಹೆಚ್ಚಿಸುವ ಈ ಸುಭಾಷಿತಗಳು ಸಂಸ್ಕೃತದ ಕಾವ್ಯ ನಾಟಕ ಮತ್ತು ನೀತಿ ಕಥೆಗಳಿಂದ ಪ್ರೇರಿತವಾದವುಗಳಾಗಿವೆ. ಬದುಕಿನ ಸತ್ಯದ ಮಗ್ಗಲುಗಳನ್ನು ಪರಿಚಯಿಸಲು ಬಳಸಲಾಗುತ್ತದೆ. “ನುಡಿಯ ನುಡಿವೆ ನುಡಿದಂತೆ ನಡೆವೆ ನಡೆಯೊಳಗೆ ನುಡಿಯ ಪೂರೈಸುವೆ”. ಒಳ್ಳೆಯ ನುಡಿ ಧ್ವನಿಪೂರ್ಣವಾಗಿ ಪದ್ಯ ರೂಪದಲ್ಲಿ ಶಬ್ದಗಳನ್ನು ಹೆಣೆದ ಹಾಗೆ ಅದು ಸುಭಾಷಿತವಾಗುತ್ತದೆ. ಮನುಷ್ಯನ ಕಷ್ಟಗಳು ತಕ್ಕಡಿಯಂತೆ ತೂಗುತ್ತಿರುತ್ತವೆ. ತಕ್ಕಡಿಯಲ್ಲಿ ಒಂದು ಗೋದಿಕಾಳಿನಷ್ಟು ವ್ಯತ್ಯಾಸವಾದರೆ ನನ್ನನ್ನು ಮುಳುಗಿಸಿ, ನೀನು ಎದ್ದು ಹೋಗು ಎಂಬ ನಮ್ಮ ನಿವೇದನೆ ಬಸವಣ್ಣನವರಾದಾಗಿತ್ತು.
ಅಂದರೆ ಶರಣರು ವಚನ ಭಾಷೆಯನ್ನು ಲೋಕನೀತಿ ಧರ್ಮ ಕರ್ಮ ಸುಖ ಸಂತೋಷ ದುಃಖಗಳ ಕುರಿತು ತಕ್ಕಡಿಯಂತೆ ತೂಗಿದ್ದಾರೆ. ಶರಣರ ಈ ಭಾಷೆಯ ಉದ್ದೇಶ ಬದುಕಿನಲ್ಲಿ ಕಂಡ ಸಂಕಷ್ಟಗಳನ್ನು ಸರಿಪಡಿಸಲು ಸನ್ಮಾರ್ಗದಲ್ಲಿ ನಡೆಯಲು ವಚನಭಾಷೆ ಪ್ರೇರೇಪಿಸುತ್ತದೆ. ಶರಣರು ಇದನ್ನು ಅರಿತಿದ್ದರು. ಹೀಗಾಗಿ ಭಾಷೆ ನಿರಾಭರಣ ಸುಂದರ ನುಡಿಮುತ್ತುಗಳ ಹಾರವೆಂದರೂ ಸರಿ.
19 ನೇ ಶತಮಾನದಲ್ಲಿ ಆಧುನಿಕ ವಚನಗಳನ್ನು ಬರೆಯುವ ಪ್ರೇರಣೆ 12 ನೇ ಶತಮಾನದ ವಚನ ಭಾಷೆಯಾಗಿದೆ. ವಚನಗಳನ್ನು ಬರೆಯುವ ಅನೇಕ ಆಧುನಿಕ ಕವಿಗಳ ಭಾಷೆಯಲ್ಲಿ ಪರಿವರ್ತನೆಯಾಗುತ್ತಲೇ ಇರುತ್ತದೆ. ಓದಿದಷ್ಟು ಕಾಡುವ, ವಿವೇಚಿಸಿದಷ್ಟು ವಿಸ್ತಾರವಾಗುವ, ತರ್ಕಿಸಿದಷ್ಟು ಪುಟಕ್ಕಿಂಟ ಚಿನ್ನದಂತೆ ಹೊಳಪು ಕೊಡುವ ಕನ್ನಡದ ಅನುಭಾವ ಭಾಷೆಯಾಗಿದೆ. ಇಲ್ಲಿಯ ಪಾರಿಭಾಷಕ ಪದಗಳಾದ ಅಷ್ಟಾವರಣಗಳು, ಪಂಚಾಚಾರಗಳು, ಷಟ್‌ಸ್ಥಲಗಳು, ಕಾಯಕ, ದಾಸೋಹ, ಇಷ್ಟಲಿಂಗ, ಪ್ರಾಣಲಿಂಗ, ನಾದಬಿಂದುಕಳೆ, ಅರಿವು, ಆಚಾರ, ಬಯಲು, ಶೂನ್ಯ, ನಿರಾಕಾರ, ಅನುಭಾವ, ಮಹಾಮನೆ ಈ ಎಲ್ಲಾ ಪದಗಳು ಶರಣ ಧರ್ಮದ ಶಿಷ್ಟ ಸಂಸ್ಕೃತಿಯನ್ನು ಬಿಂಬಿಸುತ್ತವೆ.
ವಚನ ಭಾಷೆಯ ಶಬ್ದಗಳು ಧ್ವನಿಯಾದರೆ ಪದಗಳು ನಿರ್ದಿಷ್ಟ ಅರ್ಥವನ್ನು ಹೆಚ್ಚಿಸುವ ಭಾಷೆಯ ಜೀವಕೋಶವದು. ಒಂದು ಬೀಜ ಬಿತ್ತಿದರೆ ಹಲವಾರು ವಚನ ಪದಗಳು ಹುಟ್ಟುವ ಪದಗಳ ಕೋಶವೆಂದರೆ ವಚನ ಭಾಷೆಯಾಗಿದೆ. ವಚನಭಾಷೆ ಉಳಿಯಬೇಕಾದರೆ ವಚನಗಳ ಅಧ್ಯಯನ ಅವಶ್ಯವಾಗಿ ಬೇಕಾಗುತ್ತದೆ. ಕೆಲವು ಶಬ್ದಗಳ ಅರ್ಥ ಶಬ್ದಕೋಶದಲ್ಲಿ ಸಿಗುವುದಿಲ್ಲ. ಅಂತಹ ಪ್ರಭುದ್ಧ ಶ್ರೀಮಂತ ವಚನ ಭಾಷೆಯಾಗಿದೆ.
ಡಾ. ಸರ್ವಮಂಗಳ ಸಕ್ರಿ.
ಕನ್ನಡ ಉಪನ್ಯಾಸಕರು (ನಿ).
ಅಧ್ಯಕ್ಷರು. ಜಾಗತಿಕ ಲಿಂಗಾಯತ ಮಹಾ ಸಭಾ
ಮಹಿಳಾ ಘಟಕ-ರಾಯಚೂರು ಜಿಲ್ಲೆ
ರಾಯಚೂರು.
ಮೋಬೈಲ್ ಸಂ. 94499 46839.
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ (ರಿ) ದ ಸಂಚಾಲಕರನ್ನು ಸಂಪರ್ಕಿಸಬೇಕಾದ:
- ಮೋಬೈಲ್ ನಂ. 97413 57132
- e-Mail ID: info@vachanamandara.in and admin@vachanamandara.in






Total views : 65536