
ಇವನಾರವ, ಇವನಾರವ,
ಇವನಾರವನೆಂದೆನಿಸದಿರಯ್ಯಾ.
ಇವ ನಮ್ಮವ, ಇವ ನಮ್ಮವ,
ಇವ ನಮ್ಮವನೆಂದೆನಿಸಯ್ಯಾ.
ಕೂಡಲಸಂಗಮದೇವಾ
ನಿಮ್ಮ ಮನೆಯ ಮಗನೆಂದೆನಿಸಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-20/ವಚನ ಸಂಖ್ಯೆ-62)
ಈ ವಚನವು ‘ನಾನು‘ ಎಂಬ ಅಹಂಕಾರವನ್ನು ತ್ಯಜಿಸುವ ಮಹತ್ವವನ್ನು ಹೇಳುತ್ತದೆ. “ಇವನು, ಇವನು” ಎಂದು ಬೇರೆತನವನ್ನು ನೋಡುವುದು ಅಜ್ಞಾನ. “ಇವನೇ ನಾನು” ಎಂದು ಏಕತ್ವವನ್ನು ಅರಿತಾಗ ಅಹಂಕಾರ ಕಳೆಯುತ್ತದೆ. ಕೊನೆಯಲ್ಲಿ ನಾನು-ನೀನು ಎಂಬ ಭೇದವೇ ಇಲ್ಲ, ಎಲ್ಲವೂ ಒಂದೇ ಎಂಬ ಜ್ಞಾನಕ್ಕೆ ಬರಬೇಕು ಎಂದು ಈ ವಚನದ ಸಾರವಾಗಿರುತ್ತದೆ.
ರಾಷ್ಟ್ರಕವಿ ಕುವೆಂಪು ಅವರು ಹರ್ಡೇಕರ ಮಂಜಪ್ಪನವರಿಗೆ “ಕರ್ನಾಟದ ಮಹಾತ್ಮ” ಎಂದು ಬಿರುದು ಕೊಟ್ಟಿದ್ದರು, ನಂತರ ಅವರಿಗೆ ಕರ್ನಾಟಕದ ಗಾಂಧಿ ಎಂದೂ ಕರೆಯಲಾಯಿತು. ಅವರೆ ಪ್ರಥಮ ಬಾರಿಗೆ ಸಾರ್ವಜನಿಕವಾಗಿ ಬಸವ ಜಯಂತಿಯ ಆಚರಣೆಯನ್ನು ಜಾರಿಗೆ ತಂದ ರೂವಾರಿ. ಹರ್ಡೇಕರ ಮಂಜಪ್ಪನವರು ಹುಟ್ಟಿದ್ದು 18.02.1886 ರಂದು ಶಿರಸಿಯ ಬನವಾಸಿಯಲ್ಲಿ. ತಂದೆ ಮಧುಕೇಶ್ವರಪ್ಪ ಶ್ರೇಷ್ಠ ಸಮಾಜ ಸುಧಾರಕ, ತಾಯಿ ಮಧುಕೇಶ್ವರ ದೇವಸ್ಥಾನದ ಕಸ ಗುಡಿಸುವ ಕಾಯಕದಲ್ಲಿ ನಿರತಳಾಗಿದ್ದರು. ಅಣ್ಣ ಮಧುಲಿಂಗಪ್ಪ. ಹರ್ಡೇಕರ ಮಂಜಪ್ಪನವರು ಕ್ರಿ. ಶ. 1903 ರಲ್ಲಿ ಮುಲ್ಕೀ ಪರೀಕ್ಷೆ ತೇರ್ಗಡೆಯಾದರು. 1905 ರಲ್ಲಿ ಶಾಲಾ ಶಿಕ್ಷಕರಾಗಿ ನೇಮಕವಾದಾಗ ಅವರಿಗೆ ಮಾಸಿಕ ವೇತನ ಕೇವಲ ಏಳು ರೂ. ಮಾತ್ರ.
ನೆಲನೊಂದೆ: ಹೊಲಗೇರಿ ಶಿವಾಲಯಕ್ಕೆ,
ಜಲವೊಂದೆ: ಶೌಚಾಚಮನಕ್ಕೆ,
ಕುಲವೊಂದೆ: ತನ್ನ ತಾನರಿದವಂಗೆ,
ಫಲವೊಂದೆ: ಷಡುದರುಶನ ಮುಕ್ತಿಗೆ,
ನಿಲವೊಂದೆ: ಕೂಡಲಸಂಗಮದೇವಾ,
ನಿಮ್ಮನರಿದವಂಗೆ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-248/ವಚನ ಸಂಖ್ಯೆ-879)
ಈ ವಚನದಲ್ಲಿ ಮಾನವನ ಅಹಂಕಾರ ಮತ್ತು ಅಸ್ಥಿರತೆಯನ್ನು ತೋರಿಸಲಾಗಿದೆ. ಮಾನವನು ನೆಲದ ಮೇಲೆ ಮನೆ ಕಟ್ಟಿದಂತೆ, ಜಲದ ಮೇಲೆ ಗುರುತು ಮಾಡಿದಂತೆ, ಕಾಲದ ಮುಂದೆ ಏನೂ ಶಾಶ್ವತವಲ್ಲ. ಜೀವನದ ಸಾಧನೆಗಳು, ಸಂಪತ್ತು, ಹೆಸರು, ಗೌರವ, ಪ್ರತಿಷ್ಠೆಗಳು ನಾಶವಾಗುವವು. ಆದ್ರೆ ಸದ್ಭಕ್ತಿ ಮಾತ್ರ ಶಾಶ್ವತವಾದದ್ದು. ಹಾಗೂ ದೇವರ ಅಸ್ಥಿತ್ವ, ನೆನೆಪು ಚಿರಕಾಲ ಎಂಬ ಸಂದೇಶವನ್ನು ಈ ವಚನವು ನೀಡುತ್ತದೆ.
ಅಂತೆಯೆ ಬಾಲಗಂಗಾಧರ ತಿಲಕರ ಸ್ವಾತಂತ್ರ್ಯ ಚಳುವಳಿಯ ಪ್ರೇರಣೆಯಿಂದ ಹರ್ಡೇಕರ ಮಂಜಪ್ಪನವರು ತಮ್ಮ ಶಿಕ್ಷಕ ವೃತ್ತಿಗೆ ರಾಜೀನಾಮೆ ನೀಡಿದರು. 1906 ರಲ್ಲಿ ದಾವಣಗೆರೆಯತ್ತ ಪ್ರಯಾಣ ಬೆಳೆಸಿದರು. ತಿಲಕರ ಕೃಪೆಯಿಂದಾಗಿ ಅದೇ ವರ್ಷ ಸಪ್ಟಂಬರ್ 2 ರಂದು “ಧರ್ನುಧಾರಿ” ವಾರ ಪತ್ರಿಕೆ ಆರಂಭಮಾಡಿದರು. ಲಿಂಗಾಯತ ಧರ್ಮದ ಒಳ ಪಂಗಡಗಳ ಕಿತ್ತಾಟಕ್ಕೆ ಬೇಸತ್ತು, ಅಪಮಾನಗೊಂಡ ಮಂಜಪ್ಪನವರು ವಿವಾಹವೇ ಬೇಡವೆಂದು ನಿರ್ಧರಸಿದರು. ತಮ್ಮ ಸಮಾಜ ಸೇವೆಗೆ ವಿವಾಹ ಅಡ್ಡಿಯಾಗುತ್ತದೆ ಎಂದೂ ಭಾವಸಿ, 1910 ರಲ್ಲಿ ತಮ್ಮ 25 ನೆ ವಯಸ್ಸಿನಿಂದ ಜೀವನ ಪರ್ಯಂತರ ಬ್ರಹ್ಮಚಾರಿಯಾಗಿ ಉಳಿಯಲು ದೃಢ ನಿರ್ಧಾರ ಹೊಂದಿದರು. ಅವಾಗಿನಿಂದ ಅವರ ಆಹಾರ ಸಂಸ್ಕೃತಿಯಲ್ಲಿ ಪರಿವರ್ತನೆಯಾಯಿತು. ಉಪ್ಪು, ಖಾರ, ಹುಳಿ, ಸಿಹಿ ಎಲ್ಲವನ್ನೂ ತ್ಯಜಿಸಿದರು. ಕೇವಲ ಸಪ್ಪೆ ಆಹಾರ ಸೇವನೆಗೆ ಒಗ್ಗಿಕೊಂಡರು. 1911 ರಿಂದ “ಶ್ರಾವಣ ಮಾಸದ ಉಪನ್ಯಾಸ ಮಾಲೆಯ” ಕಾರ್ಯಕ್ರಮ ಆರಂಭಿಸಿದರು. ಇದೇ ಸಂದರ್ಭದಲ್ಲಿ ಅಥಣಿ ಶಿವಯೋಗಿಗಳಿಂದ ಲಿಂಗದೀಕ್ಷೆ ಪಡೆದರು. ಶರಣ ಧರ್ಮದ ಪ್ರತಿಪಾದಕರಾದರು.
ಬಸವ ಜಯಂತಿ ಹಿನ್ನಲೆ:
ಎನಗೆ ಜನನವಾಯಿತ್ತೆಂಬರು ಎನಗೆ ಜನನವಿಲ್ಲವಯ್ಯಾ,
ಎನಗೆ ಮರಣವಾಯಿತ್ತೆಂಬರು ಎನಗೆ ಮರಣವಿಲ್ಲವಯ್ಯಾ.
ಜನನವಾದಡೆ ನಿಮ್ಮ ಪಾದೋದಕ ಪ್ರಸಾದವ ಕೊಂಬೆ,
ಮರಣವಾದಡೆ ನಿಮ್ಮ ಶ್ರೀಚರಣವನೆಯ್ದುವೆ.
ಬಾವನ್ನದ ವೃಕ್ಷವು ಊರೊಳಗಿದ್ದಡೇನು,
ಅಡವಿಯೊಳಗಿದ್ದಡೇನು
ಪರಿಮಳ ಒಂದೇ, ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-313/ವಚನ ಸಂಖ್ಯೆ-1075)
ಈ ವಚನದಲ್ಲಿ ಮಾನವನ “ಜನನ-ಮರಣ” ಎಂಬ ಸತ್ಯದ ಜೊತೆಗೆ, ಬಸವಣ್ಣನವರು ನಿಜವಾದ ಆತ್ಮಕ್ಕೆ ಜನನ-ಮರಣಗಳಿಲ್ಲ ಎಂಬ ತತ್ತ್ವವನ್ನು ವಿವರಿಸುತ್ತಾರೆ. ದೇಹಕ್ಕೆ ಮಾತ್ರ ಜನನ ಮತ್ತು ಮರಣವುಂಟು; ಆತ್ಮವು ಶಾಶ್ವತ. “ಜನನವಾದಡೆ ನಿಮ್ಮ ಪಾದೋದಕ ಪ್ರಸಾದವ ಕೊಂಬೆ”, ಅಂದರೆ ನಾನು ಜನ್ಮ ಪಡೆದಿದ್ದರೆ, ಅದು ಪರಮಾತ್ಮನ ಅನುಗ್ರಹದಿಂದ ಮಾತ್ರ. ಅವನ ದಿವ್ಯ ಕೃಪೆಯಿಂದ (ಪಾದೋದಕ) ನನ್ನ ಜೀವನಕ್ಕೆ ಆಧಾರ. “ಮರಣವಾದಡೆ ನಿಮ್ಮ ಶ್ರೀಚರಣವನಯ್ಯುವೆ”, ಮರಣ ಹೊಂದಿದರೂ ನಾನು ಭಗವಂತನ ಸಾಮಿಪ್ಯ ಸೇರುವೆನು; ಅಂದರೆ ದೇವರಲ್ಲಿಯೇ ಲೀನವಾಗುವೆನು. “ಬಾವನ್ನದೆ ವೃಕ್ಷವು ಊರೊಳಗಿದ್ದೇನು, ಅಡವಿಯೊಳಗಿದ್ದೇನು ಪರಿಮಳ ಒಂದೇ”, ಇಲ್ಲಿ ಬಸವಣ್ಣನವರು ಒಂದು ಸುಂದರ ಹೋಲಿಕೆ ಕೊಡುತ್ತಾರೆ: ಒಂದು ವೃಕ್ಷವು ಊರಲ್ಲಿರಲಿ, ಅಡವಿಯಲ್ಲಿ ಇರಲಿ ಅದರ ಪರಿಮಳ ಒಂದೇ ಆಗಿರುತ್ತದೆ. ಅದೇ ರೀತಿ, ಭಗವಂತನನ್ನು ಆರಾಧಿಸುವವರಿಗೆ ಸ್ಥಳ, ಸಮಯ, ಪರಿಸ್ಥಿತಿ ಮುಖ್ಯವಲ್ಲ; ಅವನ ಭಕ್ತಿ ಮತ್ತು ಗುಣಗಳು ಎಲ್ಲೆಡೆ ಒಂದೇ ರೀತಿಯಾಗಿರುತ್ತವೆ. ಈ ವಚನವು ಆತ್ಮದ ಅಮರತ್ವ, ದೇವರ ಕೃಪೆಯ ಮಹತ್ವ ಮತ್ತು ಭಕ್ತನ ಸ್ಥಿರವಾದ ಭಕ್ತಿಯ ಕುರಿತು ವಿವರಿಸುತ್ತದೆ. ಜನನ-ಮರಣಗಳು ದೇಹಕ್ಕೆ ಮಾತ್ರ, ಭಕ್ತನು ಯಾವ ಸ್ಥಿತಿಯಲ್ಲಿದ್ದರೂ ಕೊನೆಗೆ ಸೃಷ್ಟಿಕರ್ತನಲ್ಲಿ ಲೀನನಾಗುತ್ತಾನೆ.
ದಾವಣಗೇರೆ ವಿರಕ್ತ ಮಠವು ಚಿತ್ರದುರ್ಗ ಬೃಹನ್ಮಠದ ಶಾಖಾ ಮಠವಾಗಿತ್ತು. ತಮ್ಮ ತಾಯಿ ತೀರಿ ಹೋದ ಬಳಿಕ, ಬ್ರಹ್ಮಚಾರಿಗಳಾಗಿದ್ದ ಹರ್ಡೇಕರ ಮಂಜಪ್ಪನವರು ಆ ಮಠದಲ್ಲಿ ಕೆಲವು ವರ್ಷಗಳ ಕಾಲ ತಂಗಿದ್ದರು. ಆ ಮಠದಲ್ಲಿದ್ದು ಶರಣ ಧರ್ಮ ಪಾಲಿಸಲು ಹಾಗೂ ಬಸವ ತತ್ವ ಆಚರಣೆಯಲ್ಲಿ ತೊಡಗಿದ್ದರು. ಪಾಲ್ಕುರಿಕೆ ಸೋಮನಾಥರ ತೆಲುಗಿನ ಬಸವ ಪುರಾಣವನ್ನು ಪ್ರಥಮ ಬಾರಿಗೆ ಕನ್ನಡಕ್ಕೆ ಅನುವಾದಿಸಿದ ಭೀಮಕವಿಯ ಪುರಾವೆ ಆಧರಿಸಿ, ಹರ್ಡೇಕರ ಮಂಜಪ್ಪನವರು ಅಂದಿನ ಖ್ಯಾತ ಜ್ಯೋತಿಷಿಗಳಾದ ಕರಿಬಸವಶಾಸ್ತ್ರಿ ಸೇರಿದಂತೆ ಅನೇಕರಿಗೆ ಪತ್ರ ಬರೆದು ಬಸವಣ್ಣನವರ ಜನ್ಮ ಜಾತಕ ಹಾಗೂ ನಿಖರವಾದ ಜನ್ಮ ದಿನ ಗುರುತಿಸಲು ಕೇಳಿಕೊಂಡಿದ್ದರು. ಭೀಮಕವಿಯ ಬಸವ ಪುರಾಣದ ಷಟ್ಪದಿಯ ಆಧಾರದ ಮೇಲೆ ಬಸವಣ್ಣನವರು ಆನಂದನಾಮ ಸಂವತ್ಸರದಲ್ಲಿ ಚಾಂದ್ರಮಾನ ವೈಶಾಖ ಮಾಸ, ರೋಹಿಣಿ ನಕ್ಷತ್ರದಲ್ಲಿ ಹುಟ್ಟಿದ್ದರು. ಅಂದು ಅಕ್ಷಯ ತೃತಿಯ ಇತ್ತು ಎಂದು ಜ್ಯೋತಿಷಿಗಳಿಂದ ಕಂಡುಕೊಂಡರು. ಹೀಗಾಗಿ 30.03.1134 ಬಸವಣ್ಣನವರು ಹುಟ್ಟಿದ ವರ್ಷವೆಂದು ಪರಿಗಣಿಸಲಾಯಿತು. ಅದಕ್ಕೆಂದು ಚಿತ್ರದುರ್ಗ ಬೃಹನ್ಮಠದ ಅಂದಿನ ಜಗದ್ಗುರುಗಳಾದ ಪ್ರಮ ಪೂಜ್ಯ ಶ್ರೀ. ಜಯದೇವ ಮಹಾಸ್ವಾಮಿಗಳಿಂದ ಪ್ರಥಮ ಬಸವ ಜಯಂತಿ ಆಚರಣೆಗೆ ಅನುಮತಿ ಪಡೆದರು. ಅದರ ಇನ್ನೊಂದು ಶಾಖಾ ಮಠವಾಗಿದ್ದ ಧಾರವಾಡದ ಮುರುಘಾ ಮಠದ ಅಂದಿನ ಪೀಠಾದಿಪತಿಗಳಾಗಿದ್ದ ಪರಮ ಪೂಜ್ಯ ಶ್ರೀ. ಮೃತ್ಯುಂಜಯ ಸ್ವಾಮಿಗಳ ಉಪದೇಶ ಹಾಗೂ ಮಾರ್ಗದರ್ಶನದಂತೆ ಪ್ರಥಮ ಬಾರಿಗೆ ದಾವಣಗೆರೆಯಲ್ಲಿ ಬಸವ ಜಯಂತಿ ಆಚರಣೆಯನ್ನು ಸಾರ್ವಜನಿಕವಾಗಿ ಜಾರಿಗೊಳಿಸಿದರು. ಕ್ರಿ. ಶ. 1913 ರಿಂದ ಜಾಗತಿಕ ಮಟ್ಟದಲ್ಲಿ ಪ್ರಥಮ ಬಸವ ಜಯಂತಿ ಕಾರ್ಯಕ್ರಮ ಆರಂಭಿಸಿದ ಕೀರ್ತಿ ಹರ್ಡೇಕರ ಮಂಜಪ್ಪನವರಿಗೆ ಸಲ್ಲುತ್ತದೆ.
ಎಲ್ಲೆಲ್ಲಿ ಬಸವ ಜಯಂತಿ ಆಚರಣೆ?
ಪ್ರಸಕ್ತ ವರ್ಷ ಆಚರಣೆ ಮಾಡುತ್ತಿರುವುದು 893 ನೆ ಬಸವ ಜಯಂತಿ. ಈಗ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ತೆಲಂಗಾಣ, ಆಂದ್ರಪ್ರದೇಶ, ತಮಿಳುನಾಡು ಹಾಗೂ ನವದೆಹಲಿ ರಾಜ್ಯಗಳಲ್ಲಿ ಬಸವ ಭಕ್ತರು ಅಪಾರ ಶ್ರದ್ಧೆಯಿಂದ ಬಸವ ಜಯಂತಿ ಆಚರಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಲಂಡನ್ ನಗರದ ಥೇಮ್ಸ್ ನದಿಯ ತೀರದಲ್ಲಿ, ಲ್ಯಾಂಬೆತ್ ನಗರದಲ್ಲಿ ಹಾಗೂ ಜರ್ಮನಿ ದೇಶದ ಎರ್ಲಾಂಗ್‌ನಲ್ಲಿ, ಯು.ಎ.ಇ, ದುಬೈನಲ್ಲೂ ಬಸವ ಜಯಂತಿ ಆಚರಣೆಗೆ ಬಂದಿದೆ.
ಹೇಗೆ ಆಚರಣೆ?
ಬಸವಣ್ಣನವರ ಭಾವಚಿತ್ರ ಮೆರವಣಿಗೆ, ಪುತ್ಥಳಿಗೆ ಮಾಲಾರ್ಪಣೆ, ವಚನ ಗಾಯನ, ನೃತ್ಯ ರೂಪಕ ಪ್ರದರ್ಶನ, ಪ್ರಸಾದ ವಿನಿಯೋಗ, ವಚನ ಸಾಹಿತ್ಯ ವಿತರಣೆ, ತೊಟ್ಟಿಲೋತ್ಸವ, ಮಕ್ಕಳಿಗೆ ನಾಮಕರಣ ಉತ್ಸವ, ಸಾಧಕರಿಗೆ ಸನ್ಮಾನ, ವಚನಗಳ ಕುರಿತು ಪ್ರಬಂಧ ಸ್ಪರ್ದೆ, ಉಪನ್ಯಾಸ ಗೋಷ್ಠಿ, ಅನುಭಾವಗಳು, ನಾಟಕ ಪ್ರದರ್ಶನ ಇತ್ಯಾದಿ ಕಾರ್ಯಕ್ರಮಗಳ ಮೂಲಕ ಬಸವ ಜಯಂತಿಯನ್ನು ಆಚರಿಸುತ್ತಿದ್ದಾರೆ.
ಉಳ್ಳವರು ಶಿವಾಲಯ ಮಾಡಿಹರು,
ನಾನೇನ ಮಾಡುವೆ ಬಡವನಯ್ಯಾ.
ಎನ್ನ ಕಾಲೇ ಕಂಬ, ದೇಹವೇ ದೇಗುಲ,
ಶಿರ ಹೊನ್ನ ಕಲಶವಯ್ಯಾ.
ಕೂಡಲಸಂಗಮದೇವಾ, ಕೇಳಯ್ಯಾ
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-229/ವಚನ ಸಂಖ್ಯೆ-821)
ಈ ವಚನವು ಅಜ್ಞಾನದಿಂದ ಮಾನವನು ಮಾಡುವ ಅಹಂಕಾರ ಮತ್ತು ವ್ಯರ್ಥ ತರ್ಕವನ್ನು ಸೂಚಿಸುತ್ತದೆ. “ಈ ಮಾಯೆಯನ್ನು ಉಳ್ಳವರು ಯಾರು? ನಾನೇ ಮಾಡಿದೆ” ಎಂದು ಹೇಳುವುದು ಮೂರ್ಖತನ. ಏಕೆಂದರೆ ನಮ್ಮ ಕೈಯಲ್ಲಿ ಇರುವುದೆಲ್ಲ ದೇವರ ಕೃಪೆ. ದೇಹ, ಶಕ್ತಿ, ಬುದ್ಧಿ, ಚಿತ್ತವೂ ಅವನದೇ. ಇದನ್ನು ಅರಿಯದೆ “ನಾನು ಮಾಡಿದೆ” ಎಂದು ಹೆಮ್ಮೆ ಪಡುವುದು ಅಜ್ಞಾನ. ಆದ್ದರಿಂದ ಅಹಂಕಾರ ಬಿಟ್ಟು, ಎಲ್ಲವೂ ದೇವರ ಅನುಗ್ರಹವೆಂದು ತಿಳಿದು ವಿನಯದಿಂದ ಇರಬೇಕು ಎಂಬ ಸಂದೇಶವನ್ನು ಕೊಡುತ್ತದೆ.
ಮಂಜಪ್ಪನವರ ಸಾರ್ಥಕ ಬದುಕು:
ಕ್ರಿ.ಶ. 1919 ರಲ್ಲಿ ಗಾಂಧೀಜಿ ಆತ್ಮ ಚರಿತ್ರೆ ಪ್ರಥಮ ಬಾರಿಗೆ ಕನ್ನಡದಲ್ಲಿ ಪ್ರಕಟಗೊಳಿಸಿದರು. ಅದರಿಂದ ಗಾಂಧೀಜಿಗೆ ಆಪ್ತ ಒಡನಾಡಿಗಳಾದರು. 1923 ರಲ್ಲಿ ಹರಿಹರದ ತುಂಗಭದ್ರಾ ನದಿ ತೀರದಲ್ಲಿ ಸತ್ಯಾಗ್ರಹಿ ಆಶ್ರಮ ನಿರ್ಮಿಸಿಕೊಂಡು ಅಲ್ಲಿಯೇ ನೆಲೆಸಲು ಆರಂಭಿಸಿದರು. ಆ ಪರಿಸರದ ಪ್ರಭಾವದಿಂದ 1924 ರಲ್ಲಿ “ಸತ್ಯಾಗ್ರಹಿ ಬಸವಣ್ಣ” ಎಂಬ ಹಿಂದಿ ಭಾಷೆಯಲ್ಲಿ ಸಂಶೋಧನಾತ್ಮಕ ಗ್ರಂಥ ಪ್ರಕಟಿಸಿದರು. ಅದನ್ನು ಮಹಾತ್ಮ ಗಾಂಧೀಜಿಗೆ ಕೊಟ್ಟು ಓದಲು ಹೇಳಿ, ಬಸವಣ್ಣನವರ ವ್ಯಕ್ತಿತ್ವವನ್ನು ಪರಿಚಯಿಸಿದರು. ಹಾಗೂ ಬಸವಣ್ಣನವರ ಚಳುವಳಿಯ ಮಾದರಿಯನ್ನು ಗಾಂಧಿಜಿಗೆ ಮನವರಿಕೆ ಮಾಡಿಕೊಟ್ಟರು. ಅದೇ ವರ್ಷ ಬಸವೇಶ್ವರ ಸೇವಾದಳವನ್ನೂ ಸ್ಥಾಪಿಸಿದರು.
1925 ರಲ್ಲಿ ಬಂಥನಾಳದ ಶ್ರೀ ಸಂಗನಬಸವ ಮಹಾಸ್ವಾಮಿಯೊಂದಿಗೆ ಅಂದಿನ ಅಖಂಡ ವಿಜಯಪುರ ಜಿಲ್ಲೆಯ ಹಳ್ಳಿಗಳಲ್ಲಿ ಸಂಚಾರ ಕೈಗೊಂಡರು. ಅವರೊಂದಿಗೆ ದುಶ್ಚಟಗಳ ನಿರ್ಮೂಲನೆಗಾಗಿ ದೇಶೀ ಚಳುವಳಿ ಹುಟ್ಟು ಹಾಕಿದರು. 1926 ರಲ್ಲಿ “ಬಸವ ಬೋಧಾಮೃತ” ಎಂಬ ಗ್ರಂಥ ಪ್ರಕಟಿಸಿದರು. 1927 ರಲ್ಲಿ ಕಲ್ಬುರ್ಗಿಯಲ್ಲಿ ಗಾಂಧೀಜಿಯವರನ್ನು ಭೇಟಿಯಾಗಿ ಕೃಷ್ಣಾ ನದಿಯ ತೀರ ಪ್ರದೇಶವಾದ ಆಲಮಟ್ಟಿಯಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪನೆಗೆ ಅನುಮತಿ ಪಡೆದರು. 1928 ರಲ್ಲಿ “ಖಾದಿ ವಿಜಯ” ಎಂಬ ಪತ್ರಿಕೆ ಆರಂಭಿಸಿದರು. 1930 ರಲ್ಲಿ “ಉದ್ಯೋಗ” ಎಂಬ ಮತ್ತೊಂದು ಮಾಸ ಪತ್ರಿಕೆ ಆರಂಭಗೊಳಿಸಿದರು. 1931 ರಂದು “ಶರಣ ಸಂದೇಶ” ಎಂಬ ನೂತನ ವಾರ ಪತ್ರಿಕೆ ಪ್ರಕಟಿಸಲು ಆರಂಭ ಮಾಡಿದರು. 1933 ರಲ್ಲಿ “ಬಸವ ಸಂದೇಶ”ದ ಚಿಕ್ಕ ಚಿಕ್ಕ ಪುಸ್ತಕಗಳ 50 ಸಾವಿರ ಪ್ರತಿಗಳನ್ನು ಉಚಿತವಾಗಿ ಹಂಚಿದರು. 1935 ರಲ್ಲಿ ಸ್ತ್ರೀ ಜಾಗೃತಿಗಾಗಿ ಅಕ್ಕ ಮಹಾದೇವಿ ಜಯಂತಿಯನ್ನು ಆಚರಣೆಗೆ ತಂದರು. 1936 ರಲ್ಲಿ ಅವರ ಆತ್ಮ ಚರಿತ್ರೆಯಾದ “ಕಳೆದ 30 ವರ್ಷಗಳ ನನ್ನ ಕಾಣಿಕೆ” ಎಂಬ ಕೃತಿ ಪ್ರಕಟಿಸಿದರು.
1942 ರಲ್ಲಿ ಯುದ್ಧದ ಪರಿಣಾಮವಾಗಿ ಮುದ್ರಣ ಕಾಗದದ ಅಭಾವ ಎದುರಾಗಿತ್ತು. ಅವಾಗ ಎದೆಗುಂದದೆ ಕೈ ಕಾಗದ ತಯ್ಯಾರಿಸಿ “ಶರಣ ಸಂದೇಶ” ಪತ್ರಿಕೆಯ ಪ್ರಕಟಣೆಯನ್ನು ನಿರಂತರವಾಗಿ ಮುಂದುವರೆಸಿದರು. 1945 ರಲ್ಲಿ ಪ್ರಗತಿ ಗ್ರಂಥಮಾಲೆ ಯೋಜನೆ ಹಮ್ಮಿಕೊಂಡಿದ್ದರು. ನಂತರ ತಮ್ಮ 60 ನೇ ಜನ್ಮ ದಿನದ ಉತ್ಸವ ಸಂದರ್ಭದಲ್ಲಿ “ಪ್ರಗತಿ ಗ್ರಂಥ ಪ್ರಚಾರ ಸಮಿತಿ” ಎಂಬ ಪುಸ್ತಕ ಪ್ರಕಟಣಾ ಸಂಸ್ಥೆಯನ್ನು ಸ್ಥಾಪಿಸುವ ಉದ್ದೇಶ ಹೊಂದಿದ್ದರು. ವಿಧಿಯ ಆಟದಿಂದ ಆ ಯೋಜನೆ ಅಪೂರ್ಣವಾಗಿ ಉಳಿಯಿತು. ಅದಕ್ಕಾಗಿ ಸಂಗ್ರಹಿಸಿದ ನಿಧಿಯನು ಮುದ್ದೇಬಿಹಾಳದ ಚನ್ನವೀರಪ್ಪ ಮೋಟಗಿ ಅವರಿಗೆ ಹಸ್ತಾಂತರಿಸಿದ್ದರು. ಮೋಟಗಿಯವರು ಆ ನಿಧಿಯನ್ನು ತಮ್ಮ ಪುತ್ರರಾದ ವಿಶ್ವನಾಥ ಚನ್ನವೀರಪ್ಪ ಮೋಟಗಿ ಅವರಿಗೆ ವಹಿಸಿ ನಿಧನರಾದರು. ಬೆಳಗಾವಿಯಲ್ಲಿ ವಕೀಲರಾಗಿದ್ದ ವಿಶ್ವನಾಥರು, ಆ ಹಣವನ್ನು ಠೇವಣಿಯಾಗಿಟ್ಟು ಒಂದು ಲಕ್ಷ ರೂಪಾಯಿಗಳವರೆಗೆ ಹೆಚ್ಚಿಸಿದ್ದರು. ನಂತರ ಬ. ಗಂ ತುರುಮರಿಯವರಿಗೆ ಒಪ್ಪಿಸಿ ಪ್ರಗತಿ ಗ್ರಂಥ ಪ್ರಚಾರ ಸಂಸ್ಥೆಯ ಮೂಲಕ ಮಂಜಪ್ಪನವರ ಅನೇಕ ಮೌಲಿಕ ಗ್ರಂಥಗಳನ್ನು ಪ್ರಕಟಿಸಿದರು ಎಂಬ ದಾಖಲೆ ಲಭ್ಯವಾಗಿವೆ.
03.01.1947 ರಂದು ತಮ್ಮ 60 ನೆ ವಯಸ್ಸಿನಲ್ಲಿ ಶ್ರೀಮಾನ್ ಹರ್ಡೇಕರ ಮಂಜಪ್ಪನವರು ಲಿಂಗದಲ್ಲಿ ಆತ್ಮವನ್ನು ಐಕ್ಯಗೊಳಿಸಿ, ಶರೀರದಿಂದ ಬಯಲಾದರು. ಅವರ ಕೊನೆಯ ಸಂದೇಶ, “ಧೀರರಾಗಿರಿ, ಪವಿತ್ರರಾಗಿರಿ, ಸ್ವತಂತ್ರರಾಗಿರಿ ಎಂದಿತ್ತು. ಅದೇ ವರ್ಷ ಭಾರತಕ್ಕೆ ಸ್ವಾಂತ್ರ್ಯ ದಕ್ಕಿತ್ತು. ಅವರ ಸಾಧನೆ ಹಾಗೂ ವ್ಯಕ್ತಿತ್ವದ ಕುರಿತು ಕುವೆಂಪು, ಬೇಂದ್ರೆ, ಫ. ಗು. ಹಳಕಟ್ಟಿ, ಆಲೂರು ವೆಂಕಟರಾಯರು, ಎಸ್.ಆರ್.ಕಂಠಿ, ಸಿದ್ದಯ್ಯ ಪುರಾಣಿಕರು ತುಂಬು ಹೃದಯದಿಂದ ಕೊಂಡಾಡಿದ್ದಾರೆ.
ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯಬಡಬೇಡ,
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ.
ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ
ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-64/ವಚನ ಸಂಖ್ಯೆ-235)
ಈ ವಚನವು ಜೀವನದ ಅಸ್ಥಿರತೆ ಮತ್ತು ‘ನಾನು‘ ಎಂಬ ಅಹಂಕಾರದ ವ್ಯರ್ಥತೆಯನ್ನು ತೋರಿಸುತ್ತದೆ. ಕಳೆದದ್ದು ಹೋಗಿಬಿಟ್ಟಿದೆ, ಇರುವುದೂ ನಿಲ್ಲದು; ಹುಟ್ಟಿದುದು ಸಾಯುವುದು, ಸೇರಿದುದು ಬಿಡುವುದು, ಎಲ್ಲವೂ ಅನಿತ್ಯ. ಆದರೂ ಮಾನವನು “ಇದೇ ನಾನು, ಇದೇ ನನ್ನದು” ಎಂದು ಅಂಟಿಕೊಳ್ಳುತ್ತಾನೆ. ಕೊನೆಗೆ ಏನೂ ನಮ್ಮದು ಅಲ್ಲ ಎಂಬ ಸತ್ಯವನ್ನು ಅರಿತು, ಅಹಂಕಾರವನ್ನು ತ್ಯಜಿಸಿ, ಪರಮಾತ್ಮನಲ್ಲೇ ಶರಣಾಗಬೇಕು ಎಂಬ ಸಂದೇಶವನ್ನು ಕೊಡುತ್ತದೆ.
ಶಾಸನಗಳಲ್ಲಿ ಬಸವಣ್ಣ:
- ಕ್ರಿ. ಶ. 1271 ರಲ್ಲಿನ ಹೊಯ್ಸಳ ಸೋಮೇಶ್ವರನ ಶಾಸನ
- ಕ್ರಿ. ಶ. 1258 ರಲ್ಲಿ ಹೊಯ್ಸಳರ 3 ನೇ ನರಸಿಂಹನ ಹಿರಿಯೂರು ಶಾಸನ
- ಕ್ರಿ. ಶ. 1260 ರ ಅರ್ಜುನವಾಡ ಶಾಸನದ ಪ್ರಕಾರ ಬಸವಣ್ಣನವರ ಜನ್ಮ ಸ್ಥಳ ತರ್ದವಾಡಿ, ಅಂದರೆ ಈಗಿನ ಬಾಗೇವಾಡಿ. ಅದರಲ್ಲಿ ಪುರವರಾಧೀಶ್ವರ ಊರರಾಜ-ಆದಿರಾಜರ ಎರಡನೆ ಮಗನಾಗಿದ್ದವನುಬಸವಣ್ಣ. ಅಗ್ರಜ ಎಂದರೆ ಅಣ್ಣನ ಹೆಸರು ದೇವರಾಜ ಎಂದು ಉಲ್ಲೇಖಿಸಿದೆ.
- ಸೇವುಣರ ರಾಜ ಮಹಾದೇವನ ಚೌಡದಾನಪುರ ಶಾಸನ ಕ್ರಿ. ಶ. 1261.
- ಕ್ರಿ .ಶ. 1280 ಮರಡಿಪುರ ಶಾಸನ.
- ಕ್ರಿ. ಶ. 1280 ಕಲ್ಲೇದೇವರಪುರ ಶಾಸನ
- ಕ್ರಿ. ಶ. 1356 ರ ಸೊರಟೂರ ಶಾಸನ
- 14 ನೇ ಶತಮಾನದ ಗುಡಿಹಾಳ-ಕುಟೋಜಿ ಶಾಸನ
- ಕ್ರಿ. ಶ. 1624 ರ ಅಳಿಯ ರಾಮರಾಯನ ನಾಗಲೋಟಿ ಶಾಸನ
- ಕ್ರಿ. ಶ. 1686 ರ ಜೋಡಿದಾಸೇನಹಳ್ಳಿ ಶಾಸನ
- ಕ್ರಿ. ಶ. 1700 ರ ಕಾಲದ ತಾಮ್ರಪಟದ ಶಾಸನ.
ಇವೆಲ್ಲವೂ ವಿಶ್ವಗುರು ಬಸವಣ್ಣನವರ ಕುರಿತಿ ವಿವರಿಸುತ್ತವೆ.
ಆಧಾರ ಗ್ರಂಥಗಳು:
- ಕರ್ನಾಟಕದ ಮಹಾತ್ಮ ಹರ್ಡೇಕರ ಮಂಜಪ್ಪನವರು, ಪ್ರಕಾಶ ಗಿರಿಮಲ್ಲನವರ, ಬಸವ ಅಂತಾರಾಷ್ಟೀಯ ಪ್ರತಿಷ್ಠಾನ ಲಂಡನ್, ಬೆಂಗಳೂರು (2026)
- ಸಾರ್ವಜನಿಕವಾಗಿ ಬಸವ ಜಯಂತಿ ಆರಂಭಿಸಿದ ಹರ್ಡೇಕರ ಮಂಜಪ್ಪ, ಡಾ. ಸತೀಶ ಕೆ. ಇಟಗಿ, ಬಸವ ಮೀಡಿಯಾ (18.02.2026)
- ಹರ್ಡೇಕರ ಮಂಜಪ್ಪ (ಭಾರತೀಯ ಸಾಹಿತ್ಯ ನಿರ್ಮಾಪಕರು), ಎಸ್.ಎಸ್.ಕೋತಿನ, ಸಾಹಿತ್ಯ ಅಕಾಡೆಮಿ, ನವದೇಹಲಿ (1993)
- ತರುಣರ ಕೈಗನ್ನಡಿ (ಅನುಭಾವ ಸಾಹಿತ್ಯ ಗ್ರಂಥಮಾಲೆ-3), ನಿಷ್ಕಲ ಮಂಟಪ, ಬೈಲೂರು (2001)
- ಬಸವ ವಚನಾಂಜಲಿ, ಶ್ರೀತರಳಬಾಳು ಜಗದ್ಗುರು, ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು, ಸಾಹಿತ್ಯಸಿರಿ, ಬೃಹನ್ಠಠ ಸಿರಿಗೆರೆ (2005)
- ಶಿವಶರಣರ ವಚನ ಸಂಪಟ, ಶ್ರೀ. ತರಳಬಾಳು ಜಗದ್ಗುರು ಬೃಹನ್ಠಠ, ಸಿರಿಗೆರೆ (2022)
ಡಾ. ಸತೀಶ ಕೆ. ಇಟಗಿ,
ಪತ್ರಿಕೋದ್ಯಮ ಉಪನ್ಯಾಸಕ,
ಅಂಚೆ: ಕೋಳೂರ – 586 129
ತಾ: ಮುದ್ದೇಬಿಹಾಳ, ಜಿ: ವಿಜಯಪುರ.
ಮೋಬೈಲ್ ಸಂ: 92412 86422 ಈ-ಮೇಲ್: satshitagi10@gmail.com
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ (ರಿ) ದ ಸಂಚಾಲಕರನ್ನು ಸಂಪರ್ಕಿಸಬೇಕಾದ:
- ಮೋಬೈಲ್ ನಂ. 9741 357 132
- e-Mail ID: info@vachanamandara.in / admin@vachanamandara.in
![]()






Total views : 59806