ಮರ್ತ್ಯಕ್ಕೆ ಗುರುವಾಗಿ ಬಂದ ಬಸವಣ್ಣನವರು | ಡಾ. ಸತೀಶ ಕೆ. ಇಟಗಿ,ಮುದ್ದೇಬಿಹಾಳ.

Loading

ನಮಃ ಶಿವಾಯ ಲಿಂಗವು,
ಓಂ ನಮಃ ಶಿವಾಯ ಬಸವಣ್ಣನು.
ನೀನೆ ಎನ್ನ ಮನಸ್ಥಲದಲ್ಲಿ ನಿಂದು
ಬೆಳಗಿ ತೋರಿದೆಯಾಗಿ,
ಇದು ಕಾರಣ, ಕೂಡಲಚೆನ್ನಸಂಗಯ್ಯ
ಆದಿಯಾಧಾರವಿಲ್ಲದಂದು
“ಓಂ ನಮಃ ಶಿವಾಯ” ಎನುತಿರ್ದೆನು.
(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-10/ವಚನ ಸಂಖ್ಯೆ-16)

ಈ ವಚನದಲ್ಲಿ ಅವಿರಳಜ್ಞಾನಿ ಚನ್ನಬಸವಣ್ಣನವರು, “ನಮಃ ಶಿವಾಯವೇ ಶಿವಲಿಂಗ ಮಂತ್ರದ ಸ್ವರೂಪ, ಬಸವಣ್ಣನವರೂ ಅದೇ ಓಂ ನಮಃ ಶಿವಾಯತ್ವದ ಪ್ರತಿರೂಪ. ಮನಸ್ಸಿನೊಳಗಣ ಅಂಧಃಕಾರತ್ವ ಹಾಗೂ ಅಜ್ಞಾನವನ್ನು ಹೋಗಲಾಡಿಸಲು ಇದೇ ಮಂತ್ರ ನೆರವಾಗಿದ್ದು, ಜ್ಞಾನದ ಬೆಳಕನ್ನು ತೋರಿಸುತ್ತದೆ. ಅದಕ್ಕಾಗಿ ನಮಃ ಶಿವಾಯ ಮಂತ್ರದೊಂದಿಗೆ ಬಸವಣ್ಣನವರೂ ಸಹ, ಭಕ್ತನ ಮನದ ಮುಂದನ ಕತ್ತಲು ಹೋಗಲಾಡಿಸಲು ಎರಡೂ ಒಂದೇ ಆಗಿವೆ ಎನ್ನುತ್ತಾರೆ. ಆದ್ದರಿಂದ, ಆದಿ-ಅಂತ್ಯವಿಲ್ಲದ ಪರಶಿವ (ಕೂಡಲಚೆನ್ನಸಂಗಯ್ಯ) ನನ್ನು ಸ್ಮರಿಸುತ್ತಾ ಸದಾ ಓಂ ನಮಃ ಶಿವಾಯಎಂದು ಜಪಿಸಬೇಕು. ನಾನು ಹಾಗೆ ಮಾಡಿದ್ದರಿಂದ ಬದುಕಿನ ಅಜ್ಞಾನದ ಮಾಯೇ ಹೊಗಲಾಡಿಸಲು ಹಾಗೂ ಜ್ಞಾನದ ಬೆಳಕನ್ನು ಕಾಣಲು ಸಾಧ್ಯವಾಗಿದೆ ಎನ್ನುತ್ತಾರೆ. ಅಲ್ಲದೆ, ಈ ವಚನವು ಪಂಚಾಕ್ಷರಿ ಮಂತ್ರವಾದ ಓಂ ನಮಃ ಶಿವಾಯದ ಮಹಿಮೆ, ಬಸವಣ್ಣನವರು ಶಿವಸ್ವರೂಪತೆ ಹಾಗೂ ಗುರುವಿನ ಕೃಪೆಯಿಂದ ಅಜ್ಞಾನ ನಿವಾರಣೆಯಾಗಿ ಜ್ಞಾನೋದಯವಾಗುವುದು ಎಂಬ ಸಂದೇಶವನ್ನು ಸಾರುತ್ತದೆ. ಕೊನೆಯಲ್ಲಿ, ಪರಶಿವನ ನಿರಂತರ ಸ್ಮರಣೆಯೇ ಜೀವನದ ಆಧಾರ ಎಂಬುದನ್ನು ಚನ್ನಬಸವಣ್ಣನವರು ಒತ್ತಿಹೇಳಿದ್ದಾರೆ.

ಹರ ತನ್ನ ರೂಪ ತೋರಬೇಕೆಂದು,
ಮರ್ತ್ಯಕ್ಕೆ ಶ್ರೀ ಗುರುರೂಪಾಗಿ ಬಂದು
ಮನಸ್ಥಲಕ್ಕೆ ಮಂತ್ರವಾದ, ತನುಸ್ಥಲಕ್ಕೆ ಪ್ರಸಾದವಾದ,
ಕರಸ್ಥಲಕ್ಕೆ ಲಿಂಗವಾದ, ಪ್ರಾಣಕ್ಕೆ ಜಂಗಮವಾದ.
ಇಂತಿ ಚತುರ್ವಿಧ ಸಾಹಿತ್ಯವಾದನಯ್ಯಾ
ಕೂಡಲಚೆನ್ನಸಂಗನ[ಲ್ಲಿ] ಬಸವಣ್ಣನು.
(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-13/ವಚನ ಸಂಖ್ಯೆ-22)

ವಿಶ್ವಗುರು ಬಸವಣ್ಣನವರು ಕೇವಲ ರಕ್ತ ಸಂಬಂಧಿಯಾಗಿರದೆ ತನಗೂ ಪರಮ ಗುರುವಾಗಿದ್ದರೆಂದು ಈ ವಚನದಲ್ಲಿ ಸ್ವತಃ ಚನ್ನಬಸವಣ್ಣನವರು ಹೇಳಿಕೊಂಡಿದ್ದಾರೆ. ನನ್ನೊಂದಿಗೆ ಭವ ಬಂಧನವ ಬಿಡಿಸಲು ಇಡೀ ಮರ್ತ್ಯಕ್ಕೆ ಗುರುವಾಗಿ ಅವತರಿಸಿದ್ದರೆಂದು ಹೇಳುತ್ತಾರೆ. ಜೊತೆಗೆ ಗುರು-ಲಿಂಗ-ಜಂಗಮ-ಪ್ರಸಾದ ಎಂಬ ಪ್ರಮುಖ ತತ್ವಗಳನ್ನು ವಿವರಿಸುತ್ತಾರೆ. ಅವುಗಳ ಕುರಿತು ಪರಿಜ್ಞಾನ ನೀಡಿದ್ದೆ ಬಸವಣ್ಣನವರು. ಪರಶಿವನು ತನ್ನ ನಿಜ ಸ್ವರೂಪವನ್ನು ಭಕ್ತನಿಗೆ ತಿಳಿಸಲು ಶ್ರೀಗುರುವಿನ ರೂಪದಲ್ಲಿ ಪ್ರತ್ಯಕ್ಷನಾಗುತ್ತಾನೆ. ಹಾಗೆಯೇ ಬಸವಣ್ಣನವರು ಆ ಸ್ವರೂಪವನ್ನು ಪಡೆದವರು.  ಗುರುವಾಗಿ ಮನಸ್ಸಿಗೆ ಮಂತ್ರವಾಗಿ, ಅಂದರೆ ಅಂತರಂಗವನ್ನು ಶುದ್ಧಗೊಳಿಸುವ ಜ್ಞಾನವನ್ನು ನೀಡಿದ ಕೀರ್ತಿ ಅವರಿಗಿದೆ. ಶರೀರ ಕಾಯಕ್ಕೆ ಪ್ರಸಾದವಾಗಿ, ಜೀವನವನ್ನು ಪವಿತ್ರಗೊಳಿಸಿದ್ದಾರೆ. ಕರಸ್ಥಲದಲ್ಲಿ ಧರಿಸುವ ಇಷ್ಟಲಿಂಗವಾಗಿ ಸದಾ ಶಿವ ಸಾನ್ನಿಧ್ಯವನ್ನು ಅನುಭವಿಸುವಂತೆ ಮಾಡುವವನೇ ನಿಜವಾದ ಗುರು. ಅದರ ಕೃಪೆ ಬಸವಣ್ಣನವರಿಗೆ ಸಲ್ಲುತ್ತದೆ. ಪ್ರಾಣಕ್ಕೆ ಜಂಗಮವಾಗಿ, ಚೈತನ್ಯದ ಶಿವಸ್ವರೂಪನಾಗಿ ಮಾರ್ಗದರ್ಶನ ಮಾಡಿದ್ದಾರೆ. ಹೀಗೆ ಗುರು, ಲಿಂಗ, ಜಂಗಮ, ಪ್ರಸಾದ ಎಂಬ ನಾಲ್ಕು ರೂಪಗಳಲ್ಲಿ ಶಿವನೇ ಭಕ್ತನ ಜೀವನದಲ್ಲಿ ನೆಲೆಸಿದ್ದಾನೆ ಎಂದು ಸಾಬೀತು ಪಡಿಸಿದ ಮೇಲೆ ಅವರು ಹರನ ರೂಪವಾಗಿ ಗುರು ಸ್ಥಾನ ಪಡೆದಿದ್ದಾರೆ ಎಂದು ಈ ವಚನದಲ್ಲಿ ಪ್ರತಿಪಾದಿಸಿದ್ದಾರೆ. ಈ ವಚನವು ಗುರು-ಲಿಂಗ-ಜಂಗಮ-ಪ್ರಸಾದ ಎಂಬ ನಾಲ್ಕು ತತ್ವಗಳು ಪರಮಶಿವನ ವಿವಿಧ ಅನುಗ್ರಹ ರೂಪಗಳಾಗಿವೆ. ಅವುಗಳ ಮೂಲಕವೇ ಭಕ್ತನು ಶಿವನ ಸಾಕ್ಷಾತ್ಕಾರವನ್ನು ಪಡೆಯುತ್ತಾನೆ ಎಂಬ ಸಂದೇಶವನ್ನು ನೀಡುತ್ತದೆ.

ಒಮ್ಮೆಯೂ ಶ್ರೀಗುರುವಿನ
ಶ್ರೀ ಚರಣವ ನೆನೆಯಲೊಡನೆ
ಭವಬಂಧನ ಬಿಡುವುದು.
ಶ್ರೀ ಗುರುವೇ ಶರಣು, ಗುರುಲಿಂಗವೇ ಶರಣು
ಹರಿಬ್ರಹ್ಮಾದಿಗಳಿಗಗೋಚರವಾದ
ಕೂಡಲಚೆನ್ನಸಂಗಯ್ಯನೆಂಬ ಲಿಂಗವ
ತೋರಿದ ಬಸವಣ್ಣ ಗುರುವೇ ಶರಣು.
(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-16/ವಚನ ಸಂಖ್ಯೆ-27)

ಈ ವಚನದಲ್ಲಿ ಗುರುವಿನ ಮಹಿಮೆಯೊಂದಿಗೆ ಮತ್ತು ಶರಣಾಗತಿಯ ಮಹತ್ವದ ಕುರಿತು ಅರಿವು ಮೂಡಿಸಿದ್ದಾರೆ. ಒಮ್ಮೆ ಮನಃಪೂರ್ವಕವಾಗಿ ಶ್ರೀಗುರುವಿನ ಪವಿತ್ರ ಚರಣಗಳನ್ನು ಸ್ಮರಿಸಿದರೂ, ಜನನ-ಮರಣಗಳ ಚಕ್ರವಾದ ಭವಬಂಧನದಿಂದ ಮುಕ್ತಿ ದೊರೆಯುತ್ತದೆ. ಆದ್ದರಿಂದ ಶ್ರೀಗುರುವೇ ನನ್ನ ಶರಣು; ಗುರುಲಿಂಗವೇ ನನ್ನ ಶರಣು ಎಂದು ಚನ್ನಬಸವಣ್ಣನವರು ಉದ್ಘಾರ ತೆಗೆದಿದ್ದಾರೆ. ಹರಿಯಂತಹ ದೇವತೆಗಳಿಗೂ, ಬ್ರಹ್ಮನಿಗೂ ಸುಲಭವಾಗಿ ಅರಿಯಲಾಗದ ಕೂಡಲಚೆನ್ನಸಂಗಯ್ಯನ ಲಿಂಗ ಸ್ವರೂಪವನ್ನು ಗುರುವಾಗಿ ಭುವಿಗೆ ಬಂದು ಬಸವಣ್ಣನವರು ತೋರಿಸಿದ್ದಾರೆ. ಹೀಗಾಗಿ, ಶಿವನನ್ನು ಪರಿಚಯಿಸುವ, ಆತ್ಮಜ್ಞಾನಕ್ಕೆ ದಾರಿ ತೋರಿಸುವ ಬಸವ ಗುರುವಿಗೆ ಸಾವಿರ ಸಾವಿರ ಶರಣು ಎಂದು ಚನ್ನಬಸವಣ್ಣನವರು ಸ್ಮರಿಸಿದ್ದಾರೆ.  ಈ ವಚನದ ಪ್ರಮುಖ ಸಂದೇಶವೆಂದರೆ ಗುರುವೇ ಮೋಕ್ಷದ ಮಾರ್ಗದರ್ಶಿ. ಗುರುವಿನ ಕೃಪೆಯಿಂದಲೇ ಲಿಂಗತತ್ವದ ಅರಿವು ಉಂಟಾಗುತ್ತದೆ, ಶಿವ ಸಾಕ್ಷಾತ್ಕಾರ ಸಾಧ್ಯವಾಗುತ್ತದೆ ಮತ್ತು ಭವಬಂಧನದಿಂದ ವಿಮೋಚನೆ ದೊರೆಯುತ್ತದೆ. ಆದ್ದರಿಂದ ಗುರು ಮತ್ತು ಗುರುಲಿಂಗದಲ್ಲಿ ಸಂಪೂರ್ಣ ಶರಣಾಗತಿ ಹೊಂದುವುದೆ ಲಿಂಗಾಯತ ತತ್ತ್ವದ ಮೂಲಾಧಾರವಾಗಿದೆ.

“ಗುರು ಲಿಂಗ ಒಂದೆ” ಎಂಬ,
ಸಂತೆಯ ಸುದ್ಧಿಯ
ಬಾಲ ಭಾಷೆಯ ಕೇಳಲಾಗದು.
ಲಿಂಗಸಹಿತ ಪ್ರಸಾದ ಭೋಗ, ಲಿಂಗಸಹಿತ ನಿದ್ರೆ.
ಗುರು ಲಿಂಗ ಒಂದೆಯೆಂದು ಕಂಡರೆ
ಅಘೋರನರಕ ಕೂಡಲಚೆನ್ನಸಂಗಮದೇವಾ.
(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-16/ವಚನ ಸಂಖ್ಯೆ-28)

ಈ ವಚನದಲ್ಲಿ ಚನ್ನಬಸವಣ್ಣನವರು ಗುರು ಮತ್ತು ಲಿಂಗ ಎರಡೂ ಬೇರೆ ಬೇರೆ ಅಲ್ಲ, ಒಂದೇ ಪರಮತತ್ತ್ವದ ಎರಡು ಅಭಿವ್ಯಕ್ತಿಗಳು ಎಂದು ಪ್ರತಿಪಾಧಿಸಿದ್ದಾರೆ. ಗುರು ಮತ್ತು ಲಿಂಗ ಒಂದೇ ಎಂಬ ಮಾತು ಕೇವಲ ಬಾಯಿ ಮಾತಿನ ವಿಷಯವಲ್ಲ; ಅದನ್ನು ಅಂತರಾಳದಿಂದ ಅನುಭವಿಸಬೇಕಾದ ಸತ್ಯ. ಗುರುವಿನ ಕೃಪೆಯಿಂದ ಲಿಂಗದ ನಿಜ ರೂಪ ಲಭಿಸುತ್ತದೆ, ಪರಶಿವನ ಸ್ವರೂಪ ತಿಳಿಯುತ್ತದೆ. ಲಿಂಗಾರಾಧನೆಯಿಂದ ಗುರುವಿನ ಉಪದೇಶವೂ ಸಾರ್ಥಕವಾಗುತ್ತದೆ. ಲಿಂಗದೊಂದಿಗೆ ಇರುವ ಜೀವನವೇ ನಿಜವಾದ ಪ್ರಸಾದ, ಅದೇ ನಿಜವಾದ ಆಧ್ಯಾತ್ಮಿಕ ಸಂಪತ್ತು (ನಿಧಿ). ಗುರು ಮತ್ತು ಲಿಂಗ ಒಂದೇ ಎಂಬ ಅನುಭವ ಉಂಟಾದಾಗ ಅಪರೋಕ್ಷ ಜ್ಞಾನ, ನೇರ ದೈವಾನುಭವ ದೊರೆಯುತ್ತದೆ ಎಂದು ಹೇಳಿದ್ದಾರೆ. 

ಇಲ್ಲಿ ಗುರು ಲಿಂಗ ಒಂದೇ ಎಂದರೆ ಗುರು ಮತ್ತು ಲಿಂಗವು ಒಂದೇ ವಸ್ತು, ಒಂದೇ ವ್ಯಕ್ತಿ ಎಂದು ಅರ್ಥವಲ್ಲ. ಗುರು, ಲಿಂಗ ಮತ್ತು ಜಂಗಮ ಇವುಗಳ ಮಹತ್ವ ಒಂದೇ ಎಂಬ ಆಧ್ಯಾತ್ಮಿಕ ತತ್ವವನ್ನು ಅರಿಯಬೇಕು. ಆದರೆ ಆ ತತ್ವವನ್ನು ತಿಳಿಯದೆ, ಗುರುವನ್ನೇ ಲಿಂಗವೆಂದು ಅಥವಾ ಲಿಂಗವನ್ನೇ ಗುರುವೆಂದು ಭೌತಿಕವಾಗಿ ಒಂದಾಗಿಸಿ ನೋಡುವುದು ತಪ್ಪು. ಸಂತೆಯ ಸುದ್ಧಿಯ ಬಾಲ ಭಾಷೆಯ ಕೇಳಲಾಗದು ಎಂಬುದು, ಜನಪ್ರಿಯ ಮಾತುಗಳು ಅಥವಾ ಮೇಲ್ನೋಟದ ವ್ಯಾಖ್ಯಾನಗಳನ್ನು ನಂಬದೆ, ಅನುಭವಿಗಳಿಂದ ತತ್ವವನ್ನು ತಿಳಿಯಬೇಕು ಎಂಬ ಸೂಚನೆ. “ಲಿಂಗಸಹಿತ ಪ್ರಸಾದ ಭೋಗ, ಲಿಂಗಸಹಿತ ನಿದ್ರೆ” ಎಂದರೆ ಜೀವನದ ಎಲ್ಲ ಅನುಭವ, ಸಂಪತ್ತು, ಪ್ರಸಾದ, ಭೋಗಗಳು ಇಷ್ಟಲಿಂಗದ ಸ್ಮರಣೆ ಮತ್ತು ಶಿವಾನುಭವದೊಂದಿಗೆ ಇರಬೇಕು. ಗುರು ಲಿಂಗ ಒಂದೆಯೆಂದು ಕಂಡರೆ ಅಘೋರ ನರಕ ಎಂಬುದರ ಆಶಯವೇನೆಂದರೆ, ಗುರು-ಲಿಂಗ ತತ್ವದ ಭೇದ ಭಾವದ  ಸಂಬಂಧವನ್ನು ಅರಿಯದೆ, ಅವೆರಡನ್ನೂ ಸರಳ ಭೌತಿಕ ಅರ್ಥದಲ್ಲಿ ಒಂದೇ ಎಂದು ಗ್ರಹಿಸುವುದು ಆಧ್ಯಾತ್ಮಿಕ ದಾರಿ ತಪ್ಪುವಿಕೆಗೆ ಕಾರಣವಾಗುತ್ತದೆ. ಈ ವಚನವು ಗುರು ಮತ್ತು ಲಿಂಗದ ಪರಸ್ಪರ ಸಂಬಂಧವನ್ನು ಸರಿಯಾಗಿ ಅರಿಯಬೇಕು; ತ್ವವನ್ನು ಅರ್ಥಮಾಡಿಕೊಳ್ಳದೆ ಒಂದೇ ಎಂಬ ಮಾತನ್ನು ಮೇಲ್ನೋಟದಲ್ಲಿ ಸ್ವೀಕರಿಸಬಾರದು ಎಂಬ ಸಂದೇಶವನ್ನು ನೀಡುತ್ತದೆ.

ಗುರುಶಿಷ್ಯ ಸಂಬಂಧವನು
ಏನೆಂದುಪಮಿಸುವೆನಯ್ಯ!
ಗುರುವಿನ ಒಂದಾಗಿ ಹೋಗಲು ಬಾರದು,
ಅವರಿದ್ದೂರಲಿರಲಾಗದು.
ಗಣತಿಂಥಿಣಿಯಲಿ ಕುಳ್ಳಿರಲಾಗದು,
ಅವರ ಸಹಪಂಕ್ತಿಯಲ್ಲಿ ಕುಳಿತು
ಲಿಂಗಾರ್ಚನೆ ಮಾಡಲಾಗದು.
ಅವರಂಥವರಿಂಥವರೆಂದು
ಕನಸಿನಲ್ಲಿ ಮನಸಿನಲ್ಲಿ ನೆನೆದಡೆ
ಅಘೋರನರಕವಯ್ಯಾ ಕೂಡಲಚೆನ್ನಸಂಗಯ್ಯ.
(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-16/ವಚನ ಸಂಖ್ಯೆ-29)

ಈ ವಚನದಲ್ಲಿ ಗುರುಶಿಷ್ಯರ ಸಂಬಂಧದ ಪಾವಿತ್ರ‍್ಯತೆ ಮತ್ತು ಅವರಲ್ಲಿರಬೇಕಾದ ಸದ್ಗುಣಗಳನ್ನು ವ್ಯಕ್ತಪಡಿಸಿದ್ದಾರೆ. ಗುರು-ಶಿಷ್ಯ ಸಂಬಂಧವು ಸಾಮಾನ್ಯರಂತೆ ನರ ಮಾನವರ ಸಂಬಂಧವಲ್ಲ. ಅದು ಅತ್ಯಂತ ಪವಿತ್ರವಾದ ದೈವಾತೀತವಾದ ಆಧ್ಯಾತ್ಮಿಕ ಸಂಬಂಧ. ಶಿಷ್ಯನು ಗುರುವನ್ನು ತನಗೆ ಹಾಗೂ ತನ್ನ ಸಮಾನನೆಂದು ಭಾವಿಸಬಾರದು ಹಾಗೂ ಅವನೊಂದಿಗೆ ಅಹಂಕಾರದಿಂದ ವರ್ತಿಸಬಾರದು. ಅವರೊಂದಿಗೆ ವೇದಿಕೆ ಹಂಚಿಕೊಳ್ಳಬಾರದು. ಅವರೊಂದಿಗೆ ಲಿಂಗಾರ್ಚನೆ ಹಾಗೂ ಪ್ರಸಾದ ಸೇವನೆಯ ಕಾರ್ಯದಲ್ಲಿ ತೊಡಗಬಾರದು. ಯಾವುದೇ ಕಾರಣಕ್ಕೂ ಗುರುವಿನ ಅವಗುಣಗಳನ್ನು ಶೋಧಿಸಿ ಅಪನಿಂದನೆ ಆಡಬಾರದು. ಹಾಗೇ ಮಾಡಿದ್ದಲ್ಲಿ ಗುರುವಿನ ವಿದ್ಯೆ ತಲೆಕೆಳಗಾಗಿ ಅಗೌರವದಿಂದ ವರ್ತಿಸಿದಂತಾಗುತ್ತದೆ. ಹಾಗೂ ಗುರು, ಶಿಷ್ಯರ ಸಂಬಂಧದಲ್ಲಿ ಅಘೋರ ನರಕ ಯಾತನೆ ಅನುಭವಿಸಬೇಕಾಗುತ್ತದೆ. ಅದಕ್ಕೆಂದು ಗುರುವಿನ ಸಾನ್ನಿಧ್ಯದಲ್ಲಿ ಸದಾ ಭಕ್ತಿ, ಗೌರವ ಮತ್ತು ವಿನಯದಿಂದ ನಡೆದುಕೊಳ್ಳಬೇಕು. ಗುರುವಿನೊಂದಿಗೆ ಸ್ಪರ್ಧೆ, ಸಮಾನತೆ ಸಾಧಿಸಬಾರದು. ಅಥವಾ ಅವಮಾನಕರ ಮನೋಭಾವ ಹೊಂದಿದರೆ ಅದು ಆಧ್ಯಾತ್ಮಿಕ ಪ್ರಗತಿಗೆ ಅಡ್ಡಿಯಾಗುತ್ತದೆ. ಕನಸಿನಲ್ಲಿಯೂ, ಮನಸ್ಸಿನಲ್ಲಿಯೂ ಗುರುವನ್ನು ಕೀಳಾಗಿ ಕಾಣಬಾರದು. ಅಂತಹ ಮನೋಭಾವ ಆಧ್ಯಾತ್ಮಿಕ ಪತನಕ್ಕೆ ಕಾರಣವಾಗುತ್ತದೆ ಎಂದು ಚನ್ನಬಸವಣ್ಣನವರು ಎಚ್ಚರಿಸುತ್ತಾರೆ.

ಹಸಿವಿನ ಹಂಗಿಗೆ ಭವಿಪಾಕಕ್ಕಿಚ್ಚೆಯ ಮಾಡುವರು.
ಮಥನದ ಹಂಗಿಗೆ ಭವಿಯ ಸಂಗಕ್ಕಿಚ್ಛೆಯ ಮಾಡುವರು.
ಶ್ರೋತ್ರ, ನೇತ್ರ, ಪ್ರಾಣ ಸುಖವ ಭುಂಜಿಸುವನ್ನಕ್ಕ
ಭಕ್ತನೆಂತೆಂಬೆ? ಲಿಂಗೈಕ್ಯನೆಂತೆಂಬೆ?
ಕೂಡಲಚೆನ್ನಸಂಗಯ್ಯ,
ಅವರ ಸಮಯಾಚಾರಕ್ಕೆ ದೂರ ನೋಡಯ್ಯ.
(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-18/ವಚನ ಸಂಖ್ಯೆ-33)

ಈ ವಚನದಲ್ಲಿ ಗುರು ಮತ್ತು ಶಿಷ್ಯರಲ್ಲಿನ ಇಂದ್ರಿಯಾಸಕ್ತಿ ಮತ್ತು ಭೋಗಾಸಕ್ತಿಯನ್ನು ಚನ್ನಬಸವಣ್ಣನವರು ಟೀಕಿಸಿದ್ದಾರೆ. ಹಸಿವಿಗಾಗಿ ಮಾತ್ರ ಬದುಕುವವನು ಆಹಾರವನ್ನೇ ಜೀವನದ ಗುರಿಯನ್ನಾಗಿಸಿಕೊಳ್ಳುತ್ತಾರೆ. ಕಾಮದಾಸೆಗಾಗಿ ಬದುಕುವವರು ವಿಷಯ ಸುಖಗಳ ಹಿಂದೆ ಓಡುತ್ತಾರೆ. ಕಿವಿ, ಕಣ್ಣು ಮತ್ತು ಇತರೆ ಇಂದ್ರಿಯಗಳ ಸುಖವನ್ನೇ ಜೀವನದ ಪರಮ ಗುರಿಯೆಂದು ಭಾವಿಸುವವರು ಸಾತ್ವಿಕ ಗುರು ಹಾಗೂ ನಿಜವಾದ ಭಕ್ತರೆಂದು ಹೇಗೆ ಗುರುತಿಸಬಹುದು? ಅಂತಹ ಕಪಟದ ವ್ಯಕ್ತಿಗಳಿಗೆ ಲಿಂಗಭಕ್ತಿ ಲಭಿಸುವುದಾದರೂ ಹೇಗೆ ಸಾಧ್ಯ? ಎಂದು ಚನ್ನಬಸವಣ್ಣನವರು ಪ್ರಶ್ನಿಸುತ್ತಾರೆ. ನಿಜವಾದ ಗುರು-ಶಿಷ್ಯರು ಹಾಗೂ ಲಿಂಗ ಭಕ್ತರು ಇಂದ್ರಿಯ ಭೋಗಗಳಿಗೆ ದಾಸರಾಗದೆ, ಮನಸ್ಸು ಮತ್ತು ಹೃದಯವನ್ನು ಪರಶಿವನ ಆರಾಧನೆಯಲ್ಲಿ ಕೇಂದ್ರಿಕರಿಸಬೇಕು. ಶಿವತತ್ವದ ಕಡೆಗೆ ತಿರುಗಿಸಿ ಲಿಂಗಾರಾಧನೆಯಲ್ಲಿ ತೊಡಗಿರಬೇಕು. ಅಂತಹ ಲಿಂಗ ಭಕ್ತರ ಜೀವವು ಪಾವನವಾಗಬಲ್ಲುದು. ಹಾಗೂ ಅವರ ನಿಜವಾದ ಮೌಲ್ಯದ ಗುಣಗಳನ್ನು ಸ್ವತಃ ಸೃಷ್ಠಿಕರ್ತ (ಕೂಡಲಚೆನ್ನಸಂಗಯ್ಯ) ನೇ ಅರಿಯಬಲ್ಲನು ಎಂದು ಉಪದೇಶಿಸಿದ್ದಾರೆ.  

ಈ ರೀತಿಯಾಗಿ ಚನ್ನಬಸವಣ್ಣನವರು ತಮ್ಮ ಬಹುತೇಕ ವಚನಗಳಲ್ಲಿ ಹೆಚ್ಚಾಗಿ ಶರಣ, ಗುರು, ಲಿಂಗ, ಜಂಗಮ, ಪ್ರಸಾದ ಮಹೇಶ, ಐಕ್ಯ, ಟ್‌ಸ್ಥಲಗಳನ್ನು ಉದ್ದೇಶಿಸಿ ಪ್ರಸ್ತಾಪಿಸಿದ್ದಾರೆ. ಅವೆಲ್ಲವೂ ಪರಮ ಗುರುವಿನ ಕಾರುಣ್ಯದಿಂದ ಅರಿತು ಆಚರಿಸಬೇಕೆಂದು ಉಪದೇಶಿಸಿದ್ದಾರೆ. ಅವರ ವಚನಗಳ ಕೇಂದ್ರ ವಿಷವೇ ಶರಣ ಧರ್ಮ ಹಾಗೂ ಲಿಂಗಾಯತ ತತ್ವವಾಗಿದೆ. ಅಂತಹ ತಾತ್ವಿಕ ಪರಿಕಲ್ಪನೆಗಳಿಗೆ ಹೆಚ್ಚಿನ ಒತ್ತು ನೀಡಿದ್ದು ಅವರ ಬಹುತೇಕ ವಚನಗಳಿಂದ ತಿಳಿಯಬಹುದಾಗಿದೆ.

ಆಧಾರ ಗ್ರಂಥಗಳು:

  • ಸಂಕೀರ್ಣ ವಚನ ಸಂಪುಟ, ಪ್ರಕಾಶಕರು: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರ್ಕಾರ ಬೆಂಗಳೂರು (೪ನೆಯ ಆವೃತ್ತಿ) – 2021
  • ಶತಮಾನೋತ್ಸವ ಸಂದೇಶ, ಶ್ರೀ ತರಳಬಾಳು ಜಗದ್ಗುರು, ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು. ಪ್ರಕಾಶಕರು: ಸಾಹಿತ್ಯಸಿರಿ, ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ – 2018.
  • ಬಸವ ವಚನಾಂಜಲಿ, ಸಂಪಾದಕರು: ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು. ಪ್ರಕಾಶಕರು: ಸಾಹಿತ್ಯಸಿರಿ, ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ – 2005.
  • ಅಮರಗಣಂಗಳ ಕಾಯಕ ಚಿತ್ರ ದರ್ಶನ, ಸಂಪುಟ 1. ಸಂಪಾದಕರು: ಶಾಮಲಿಂಗ ಜವಳಗಿ, ಪ್ರಕಾಶಕರು: ಜನಸ್ನೇಹಿ, (ಸಮಾನ ಮನಸ್ಕ ಚಿಂತಕರ ವೇದಿಕೆ), ಬೆಂಗಳೂರು -560 086.
  • ಶಿವಶರಣರ ವಚನ ಸಂಪುಟ, ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ

ಡಾ. ಸತೀಶ ಕೆ. ಇಟಗಿ,
ಪತ್ರಿಕೋದ್ಯಮ ಉಪನ್ಯಾಸಕ,
ಅಂಚೆ: ಕೋಳೂರ – 586 129.
ತಾ: ಮುದ್ದೇಬಿಹಾಳ, ಜಿ: ವಿಜಯಪುರ.
ಮೊ: 92412 86422
ಈ-ಮೇಲ್:‌ satshitagi10@gmail.com

  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನಸಾಹಿತ್ಯ ಮಂದಾರ ಫೌಂಡೇಶನ್‌ (ರಿ) ದ ಸಂಚಾಲಕರನ್ನು ಸಂಪರ್ಕಿಸಬೇಕಾದ:
    • ಮೋಬೈಲ್ ನಂ. 9741 357 132
    • e-Mail ID: info@vachanamandara.in / admin@vachanamandara.in

Leave a Reply