ಮೂಢತ್ವದ ತಲೆಯನ್ನು ವಚನದ ಕತ್ತಿಯಿಂದ ಸ್ವಚ್ಛ ಮಾಡಿದ ಶರಣ ಹಡಪದ ಅಪ್ಪಣ್ಣ | ಶ್ರೀ. ಶರೀಫ ಚಿಗಳ್ಳಿ, ಹುಬ್ಬಳ್ಳಿ.

Loading

ಕ್ರಾಂತಿಕಾರಿ ಶರಣ ಹಡಪದ ಅಪ್ರಪಣ್ಣನವರ ಒಂದು ನೆನಪು … …

ವಚನ ಚಳುವಳಿಯ ಹರಿಕಾರ, ಸಾಮಾಜಿಕ ಕ್ರಾಂತಿಯ ರೂವಾರಿ ಜಗಜ್ಯೋತಿ ಬಸವೇಶ್ವರರ ಆಪ್ತ ಕಾರ್ಯದರ್ಶಿಯಾದ ಹಡಪದ ಅಪ್ಪಣನವರು ಅತ್ಯುತ್ತಮ ವಚನಕಾರರಾಗಿದ್ದರು. 12 ನೇ ಶತಮಾನದಲ್ಲಿ ಪ್ರಜಾಪ್ರಭುತ್ವದ ಸಂಸತ್ತು ಎಂದೇ ಖ್ಯಾತವಾಗಿದ್ದ ಅನುಭವ ಮಂಟಪದಲ್ಲಿ ಇವರು ಸಕ್ರೀಯ ಸದಸ್ಯರಾಗಿದ್ದರು. ಇವರು ಬಸವಣ್ಣನವರ ಬಾಲ್ಯದ ಒಡನಾಡಿಗಳಲ್ಲಿ ಒಬ್ಬರಾಗಿದ್ದರು. ಅಂದು ಹಡಪದ ಅವರ ಮುಖ ನೋಡಿದರೆ ಕೆಟ್ಟದಾಗುತ್ತದೆ ಎನ್ನುವ ಕಾಲದಲ್ಲಿ ಮೂಡ ನಂಬಿಕೆ ಹೊಡೆದೋಡಿಸಲು ಸ್ವತಃ ಬಸವಣ್ಣನವರು ಮಂತ್ರಿಯಾಗಿದ್ದಾಗ ನನ್ನನ್ನು ನೋಡಲು ಬರುವವರು ಮೊದಲು ಹಡಪದ ಅಪ್ಪಣ್ಣನವರ ಮುಖ ನೋಡಿ ಬನ್ನಿ ಅಂತಾ ಅಲಿಖಿತ ನಿಯಮ ಮಾಡಿದ್ದರು. ಆದ್ದರಿಂದ ಹಡಪದ ಅಪ್ಪಣ್ಣನವರ ವಚನ, ಶಿವಭಕ್ತಿ, ಅಸಾಧಾರಣವಾಗಿತ್ತು ಅಂತಾ ತಿಳಿದು ಬರುತ್ತದೆ. ಇವರು “ಬಸವಪ್ರಿಯ ಕೂಡಲಚೆನ್ನಬಸವಣ್ಣ” ಎಂಬ ವಚನಾಂಕಿತದಿಂದ ಬರೆದ  250 ಕ್ಕೂ ಹೆಚ್ಚು ವಚನಗಳನ್ನು ಇಲ್ಲಿಯವರೆಗೆ ನಮಗೆ ಲಭ್ಯವಾಗಿವೆ.

ಹಡಪದ ಅಪ್ಪಣ್ಣನವರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕು ಮಸಬಿನಾಳ ಗ್ರಾಮದಲ್ಲಿ ತಂದೆ ಚೆನ್ನವೀರಪ್ಪ ತಾಯಿ ದೇವಕಮ್ಮ ಇವರ ಉದರದಲ್ಲಿ ಸುಮಾರು ಕ್ರಿ ಶ. 1160 ರಲ್ಲಿ ಜನಸಿದರು. ಇವರ ಹೆಂಡತಿ ಲಿಂಗಮ್ಮನವರು ಪ್ರಸಿದ್ಧ ವಚನಕಾರ್ತಿಯರಾಗಿದ್ದಾರೆ. ಶರಣೆ ಲಿಂಗಮ್ಮನವರ ವಚನಗಳು ಬೋಧೆಯ ವಚನಗಳು ಎಂದೇ ಪ್ರಸಿದ್ಧವಾಗಿವೆ. ಇವರು ಹಲವಾರು ವಿಷಯಗಳ ಮೇಲೆ ವಚನಗಳನ್ನು “ಅಪ್ಪಣ್ಪಪ್ರಿಯ ಚೆನ್ನಬಸವಣ್ಣ” ಅಂಕಿತದಲ್ಲಿ ವಚನಗಳನ್ನು ರಚನೆ ಮಾಡಿದ್ದಾರೆ.

ಹಡಪದ ಅಪ್ಪಣ್ಣನವರು ಕಲ್ಯಾಣದಲ್ಲಿ ಶಿವಭಕ್ತರಾಗಿ ಕ್ಷೌರಿಕ ವೃತ್ತಿ ಮಾಡುತ್ತಿದ್ದರು. ಹಡಪದ ಅಪ್ಪಣ್ಣನವರು ಶರಣರ ಕಾಯಕ ನಿಷ್ಠೆಯಲ್ಲಿ ಕ್ಷೌರಿಕ ವೃತ್ತಿ ಮಾಡುತ್ತಾ ಭಕ್ತಿ ಬಂಡಾರಿ ಬಸವೇಶ್ವರರ ಆಪ್ತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಾ ವಚನ ರಚನೆ ಮಾಡಿದರು. ವಿಳ್ಯದ ಡಬ್ಬಿ ಹೊಂದುವಂತಹ ಕ್ಷೌರದ ಡಬ್ಬಿ ಇದ್ದಿದ್ದರಿಂದ ವಿಳ್ಯದ ಡಬ್ಬಿಗೆ ಹಡಪ ಎಂದು ಕರೆಯುತ್ತಾರೆ. ಅದು ವಸ್ತು ವಾಚಕವಾಗಿ ವೃತ್ತಿ ಸಾಮಗ್ರಿ ಇಟ್ಟುಕೊಳ್ಳುವ ಡಬ್ಬಿ ನೋಡಿ ಹಡಪದ ಎಂದು ಕರೆದರು. ಆಗ ವೃತ್ತಿಯಿಂದ ಹಡಪದ ಅಪ್ಪಣ್ಣ ಅಂತಾ ಹೆಸರು ಬಂದು ಮುಂದೆ ಪ್ರಖ್ಯಾತ ವಚನಕಾರರಾದರು. ಅನುಭವ ಮಂಟಪದಲ್ಲಿ ಎಲ್ಲ ಶರಣರು ಇವರ ಭಕ್ತಿ ಸೇವೆ ನೋಡಿ ಮೆಚ್ಚಿ “ನಿಜಸುಖಿ ಅಪ್ಪಣ್ಣ” ಎಂದು ಪ್ರಖ್ಯಾತರಾಗಿದ್ದರು. ಕಲ್ಯಾಣ ಕ್ರಾಂತಿಯಲ್ಲಿ ಇವರು ಶಿವಶರಣರ ಮೇಲೆ ನಡೆದ ಹಲ್ಲೆಯನ್ನು ಕಠೋರ ಶಬ್ದಗಳಿಂದ ಖಂಡಿಸಿದರು. ಜಾತಿ ವ್ಯವಸ್ಥೆಯಿಂದ ಸಮಾನ ಅವಕಾಶ ಸಿಗದೆ ತೆರೆಗೆ ಸರಿದ ಸಮಯದಲ್ಲಿ ಹಡಪದ ಅಪ್ಪಣ್ಣನವರಿಗೆ ಬಸವಣ್ಣನವರು ಅತ್ಯುತ್ತಮ ಸ್ಥಾನ ನೀಡಿದರು ಅಂದರೆ ಇವರ ವಚನದ ಹರಿತದ ಕತ್ತಿ ಎಷ್ಟು ಚೂಪಾಗಿತ್ತು ಅಂತಾ ತಿಳಿಯುತ್ತದೆ.

ಅಂಗಗುಣಂಗಳನೆಲ್ಲ ಅನಲಂಗಿಕ್ಕಿ,
ಲಿಂಗಗುಣವನೆ ಗಟ್ಟಿಮಾಡಿ,
ಕಂಗಳು ಲಿಂಗ ಕರಸ್ಥಲ,
ಜಂಗಮದ ಇಂಗಿತವನರಿದರೆ,
ಬಸವಪ್ರಿಯ ಕೂಡಲಚೆನ್ನಬಸವಣ್ಣ.
(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-337/ವಚನ ಸಂಖ್ಯೆ-838)

ಅಯ್ಯಾ ನಾ ಹುಟ್ಟಿದಂದಿಂದ ಎನ್ನ ಹೊಟ್ಟೆಗೆ ಕಾಣದೆ,
ಮೂರುವಟ್ಟೆಯನೆ ಕಾದಿರ್ದೆನಯ್ಯಾ.
ಹೊಟ್ಟೆಯ ಒಡೆಯರು ಹೊಟ್ಟೆಯ ಹೊಡೆದುಹೋದರೆ,
ಎನ್ನ ಹೊಟ್ಟೆ ಏಕೆ ತುಂಬಿತ್ತೆಂದು ನೋಡಿದರೆ,
ಅಲ್ಲಿ ಬಟ್ಟಬಯಲಾಗಿರ್ದಿತ್ತು ಕಾಣಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-351/ವಚನ ಸಂಖ್ಯೆ-866)

ಆಸೆ ರೋಷವೆಂಬ ದ್ವೇಷವ ಬಿಟ್ಟು,
ದೋಷ ದುರಿತವ ಬಿಟ್ಟು, ಕ್ಲೇಶವ ಹರಿದು,
ಸಾಸಿರಮುಖದೊಳು ಸೂಸುವ ಮನವ ನಿಲ್ಲಿಸಿ,
ನಿರಾಶಿಕನಾಗಿ ನಿಂದರೆ,
ಬಸವಪ್ರಿಯ ಕೂಡಲಚೆನ್ನಬಸವಣ್ಣ.
(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-464/ವಚನ ಸಂಖ್ಯೆ-898)

ಓದಲೇತಕ್ಕೆ ಪ್ರಾಣಲಿಂಗಿಗೆ?
ಹಾಡಲೇತಕ್ಕೆ ಶರಣಂಗೆ?
ನೋಡಿ ಕೂಡಲೇತಕ್ಕೆ ಐಕ್ಯಂಗೆ?
ಆರೂಢಿಯ ಕೂಟ ಅಜಡತ್ವಂಗೆ ಬಾಹ್ಯಾಂತರಂಗೆ.
ಆಹ್ವಾನ ವಿಸರ್ಜನವೆಂದು ಭೇದಿಸದವನೆ ಪ್ರಾಣಲಿಂಗಿ,
ಪ್ರಣವ ಸ್ವರೂಪಿ, ಪರಂಜ್ಯೋತಿ,
ಬಸವಪ್ರಿಯ ಕೂಡಲಸಂಗಮದೇವ ಪ್ರಭುವೆ.
(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-373/ವಚನ ಸಂಖ್ಯೆ-922)

ವ್ಯೋಮಕಾಯ ಅಲ್ಲಮಪ್ರಭುಗಳು, ವಿಶ್ವಗುರು ಬಸವಣ್ಣನವರು, ಶಿವಯೋಗಿ ಸಿದ್ದರಾಮೇಶ್ವರರು, ವೈರಾಗ್ಯನಿಧಿ ಅಕ್ಕಮಹಾದೇವಿಯವರು, ದಿಟ್ಟ ಗಣಾಚಾರಿ ಅಂಬಿಗರ ಚೌಡಯ್ಯನವರು, ಶರಣ ಮಾದಾರ ಚನ್ನಯ್ಯನವರು ಮುಂತಾದ ಶಿವಶರಣರ ಜೊತೆಗೆ ಸಮ-ಸಮಾಜ ಸೃಷ್ಟಿಸಲು ವಚನಗಳ ಮೂಲಕ ಶ್ರಮಿಸಿದರು. ಜಾತಿ ಭೇದ ಸಾಮಾಜಿಕ ಅಸಮಾನತೆ, ಮೌಢ್ಯತೆಗಳು, ಮೂಢ ನಂಬಿಕೆಗಳು ಇತ್ಯಾದಿ ಮನು ಕುಲಕ್ಕೆ ಕಂಟಕವಾದ ಸಮಸ್ಯೆಯ ಆಗರವಾದ ವ್ಯವಸ್ಥೆಯನ್ನು ಹೋಗಲಾಡಿಸಲು ಬಸವಣ್ಣನವರ ಜೊತೆಗೆ ಬಲವಾಗಿ ಬಲಗೈ ರೀತಿ ನಿಂತು ಘರ್ಜಿಸಿದರು. ಹಡಪದ ಅಪ್ಪಣ್ಣನವರು ತಂಗಡಗಿಯಲ್ಲಿ ಐಕ್ಯರಾದರು. ಈಗಲೂ ಅವರ ಸಮಾಧಿಯನ್ನು ನಾವು ಅಲ್ಲಿ ನೋಡಬಹುದು.

ಶ್ರೀ. ಶರೀಫ. ಗಂ. ಚಿಗಳ್ಳಿ,
ಸಾಹಿತಿಗಳು,
ಬೆಳಗಲಿ,
ಹುಬ್ಬಳ್ಳಿ ತಾಲೂಕು,
ಧಾರವಾಡ ಜಿಲ್ಲೆ.
ಮೋಬೈಲ್.‌ ಸಂ. 99020 65126.

  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನಸಾಹಿತ್ಯ ಮಂದಾರ ಫೌಂಡೇಶನ್‌ (ರಿ) ದ ಸಂಚಾಲಕರನ್ನು ಸಂಪರ್ಕಿಸಬೇಕಾದ:
    • ಮೋಬೈಲ್ ನಂ. 97413 57132
    • e-Mail ID: info@vachanamandara.in / admin@vachanamandara.in

Leave a Reply