ಮೃತ್ತಿಕೆಯೊಂದರಲ್ಲಿ ಮಡಿಕೆಗಳು ನೂರಾರು | ಶಿವಯೋಗಿ ಸಿದ್ಧರಾಮೇಶ್ವರರ ವಚನ ವಿಶ್ಲೇಷಣೆ | ಶ್ರೀಮತಿ, ಶಾಲಿನಿ ರುದ್ರಮುನಿ, ಹುಬ್ಬಳ್ಳಿ.

Loading

ವಚನ:
ಮೃತ್ತಿಕೆಯೊಂದರಲ್ಲಿ ಮಡಕೆಗಳು ನೂರಾರು,
ಮನವೊಂದರಲ್ಲಿ ಕ್ರಿಯಾಗಳು ನೂರಾರು,
ಜನಕನೊಬ್ಬನಲ್ಲಿ ಸಂತತಿಗಳು ನೂರಾರು,
ಘನಕ್ಕೆ ಘನನಾದ ಚಿನ್ಮಯ ಕಪಿಲಸಿದ್ಧಾಮಲ್ಲಿಕಾರ್ಜುನನಲ್ಲಿ
ಜಗತ್ತುಗಳು ನೂರಾರು.
(ಸಮಗ್ರ ವಚನ ಸಂಪುಟ: ನಾಲ್ಕು-2021/ವಚನ ಸಂಖ್ಯೆ-1953)

ಈ ವಚನದ ತಾತ್ಪರ್ಯ ನೋಡುವುದಾದರೆ ಒಂದೇ ಮಣ್ಣಿನಿಂದ ಅನೇಕ ವಿಧದ ಮಡಕೆಗಳು ರೂಪುಗೊಳ್ಳುತ್ತವೆ. ಒಂದೇ ಮನಸ್ಸಿನಿಂದ ಅನೇಕ ಆಲೋಚನೆಗಳು ಮತ್ತು ಕಾರ್ಯಗಳು ಹುಟ್ಟುತ್ತವೆ. ಒಬ್ಬ ತಂದೆಯಿಂದ ಅನೇಕ ಮಕ್ಕಳು ಜನಿಸುತ್ತವೆ. ಹಾಗೆಯೇ ಪರಮ ಚೈತನ್ಯ ಸ್ವರೂಪಿಯಾದ ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ ಅನೇಕ ಜಗತ್ತುಗಳು ಅಸ್ತಿತ್ವ ಪಡೆದಿವೆ ಎಂಬುದಾಗಿದೆ.

ಈ ವಚನವು ಏಕತ್ವ ಮತ್ತು ಅನೇಕತ್ವದ ಸಂಬಂಧವನ್ನು ವಿವರಿಸುತ್ತದೆ. ಏಕತ್ವ (Oneness) ಮತ್ತು ಅನೇಕತ್ವ (Diversity) ಎಂಬುವುದು ಭಾರತೀಯ ತತ್ತ್ವಶಾಸ್ತ್ರದ ಮೂಲಭೂತ ಪರಿಕಲ್ಪನೆಗಳಾಗಿವೆ. ಜಗತ್ತಿನಲ್ಲಿ ಕಾಣುವ ಎಲ್ಲಾ ಭಿನ್ನತೆಗಳು, ವೈವಿಧ್ಯಗಳು, ರೂಪಗಳು, ಹೆಸರುಗಳು ಅನೇಕತ್ವವನ್ನು ಸೂಚಿಸಿದರೆ, ಅವುಗಳ ಅಂತರಾಳದಲ್ಲಿರುವ ಮೂಲ ಸತ್ಯ ಒಂದು ಚೈತನ್ಯ. ಈ ಎರಡೂ ಪರಸ್ಪರ ವಿರೋಧಿಗಳಲ್ಲ. ಪರಸ್ಪರ ಪೂರಕವಾದ ಸತ್ಯಗಳಾಗಿವೆ.

ವಚನಕಾರರು ಜಾತಿ, ವರ್ಣ, ಲಿಂಗ, ವೃತ್ತಿ ಮುಂತಾದ ಭೇದಗಳನ್ನು ಒಪ್ಪಿಕೊಂಡರೂ ಅವುಗಳನ್ನು ಅಂತಿಮ ಸತ್ಯವೆಂದು ಪರಿಗಣಿಸಲಿಲ್ಲ. ಬಸವಣ್ಣನವರು ಎಲ್ಲ ಜೀವಿಗಳಲ್ಲಿಯೂ ಶಿವತತ್ವವಿದೆ ಎಂದು ತಿಳಿಸಿದರು. ಅಲ್ಲಮಪ್ರಭುಗಳು ರೂಪ-ನಾಮಗಳ ಮಿತಿಯನ್ನು ದಾಟಿ ನಿರಾಕಾರ ಸತ್ಯವನ್ನು ಅನುಭವಿಸಲು ಹೇಳಿದರು. ಹಾಗೆಯೇ, ನೂರಾರು ಮಡಕೆಗಳು ವಿಭಿನ್ನ ಆಕಾರದಲ್ಲಿದ್ದರೂ ಕೂಡ ಅವುಗಳ ಮೂಲ ಮಣ್ಣು. ಜೀವಿಗಳು ಬೇರೆ ಬೇರೆ, ಧರ್ಮಗಳು ಬೇರೆ ಬೇರೆ, ಭಾಷೆಗಳು ಬೇರೆ ಬೇರೆ, ಆದರೆ ಮೂಲ ಚೈತನ್ಯ ಒಂದೇ. ಮನಸ್ಸು ಮತ್ತು ಕ್ರಿಯೆಗಳು ಕೂಡ, ಮನಸ್ಸು ಒಂದೇ ಆದರ ಕಲ್ಪನೆಗಳು ಅನೇಕ, ಭಾವನೆಗಳು ಅನೇಕ, ಕಾರ್ಯಗಳು ಅನೇಕ.

ಹೀಗಾಗಿ ವೈವಿಧ್ಯತೆಯ ಹಿಂದೆ ಏಕತ್ವ ಅಡಗಿದೆ. ಪರಮಾತ್ಮ ಮತ್ತು ಜಗತ್ತು, ಜಗತ್ತಿನ ಅನೇಕ ರೂಪಗಳ ಹಿಂದೆ ಒಂದೇ ಪರಮಸತ್ಯವಿದೆ ಎಂಬುದು ವಚನದ  ಮೂಲ ಸಂದೇಶ. “ಒಂದರಿಂದ ಅನೇಕ, ಅನೇಕದಲ್ಲಿ ಒಂದು” ಎಂಬ ಮಹಾಸೂತ್ರವನ್ನು ವ್ಯಕ್ತಪಡಿಸುತ್ತದೆ. ವೈವಿಧ್ಯತೆಯ ಹಿಂದೆ ಏಕತ್ವ ಅಡಗಿದೆ. ಮಾನವರು ಬಾಹ್ಯ ಭಿನ್ನತೆಗಳನ್ನು ನೋಡುತ್ತಾರೆ, ಜ್ಞಾನಿಗಳು ಮೂಲ ಏಕತ್ವವನ್ನು ಕಾಣುತ್ತಾರೆ. ಆದ್ದರಿಂದ ಜಾತಿಭೇದಕ್ಕೆ ಇಲ್ಲಿ ಸ್ಥಾನವಿಲ್ಲ. ಧರ್ಮದ್ವೇಷಕ್ಕೆ ಇಲ್ಲಿ ಅವಕಾಶವಿಲ್ಲ. ಮಾನವೀಯತೆಯೇ ಪರಮಸತ್ಯ. ಹೀಗಾಗಿ ಶರಣರ ದೃಷ್ಟಿಯಲ್ಲಿ ಅನೇಕತ್ವವು ಜೀವನದ ಹೊರರೂಪವಾಗಿದೆ. ಏಕತ್ವವು ಅದರ ಆತ್ಮಸ್ವರೂಪ. ಏಕತ್ವ ಮತ್ತು ಅನೇಕತ್ವವು ಒಂದೇ ಸತ್ಯದ ಎರಡು ಆಯಾಮಗಳು. ಅನೇಕತ್ವವು ದೃಶ್ಯಮಾನ ಜಗತ್ತಿನ ರೂಪವಾಗಿದ್ದರೆ, ಏಕತ್ವವು ಅದರ ಅಂತರಂಗದ ಸಾರವಾಗಿದೆ. ಆದ್ದರಿಂದ “ಅನೇಕದಲ್ಲಿ ಒಂದು, ಒಂದರಲ್ಲಿ ಅನೇಕ” ಎಂಬ ಅರಿವೇ ಭಾರತೀಯ ತತ್ತ್ವಚಿಂತನೆಯ ಹೃದಯವಾಗಿದೆ.

ಶರಣರ ಅನುಭವದ ತಾತ್ವಿಕ ಸಾರವೂ ಕೂಡ ಇದೇ ಆಗಿದೆ. ಆದರೆ ಇಂದು ಸಮಾಜವು ಜಾತಿಯಿಂದ ವಿಭಜಿತವಾಗಿದೆ, ಧರ್ಮದಿಂದ ಸಂಘರ್ಷಿತವಾಗಿದೆ, ಭಾಷೆಯಿಂದ ಪ್ರತ್ಯೇಕಿತವಾಗಿದೆ. ಈ ವಚನ ನಮಗೆ ಹೇಳುವುದು, ಮಡಿಕೆಗಳು ನೂರಾದರೂ ಮಣ್ಣು ಒಂದು. ಮಾನವಕುಲದ ಏಕತೆಯ ಸಂದೇಶವಿದು. ಇಂದಿಗೂ ಅತ್ಯಂತ ಪ್ರಸ್ತುತವಾಗಿದೆ. ಒಂದೇ ಬೆಳಕು ಬಲ್ಬುಗಳು ಸಾವಿರರು,ನದಿಗಳು ನೂರು ಇದ್ದರು ಸಾಗರ ಒಂದೇ.ಭಾಷೆಗಳು ಹಲವಾರು, ಭಾವ ಒಂದೇ.ಮುಖಗಳು ಕೋಟಿ ,ಉಸಿರು ಒಂದೇ.ಹೆಸರಿನ ಗೋಡೆಗಳು ಕುಸಿದಾಗ ಕಾಣುವುದು ಒಂದೇ ಸತ್ಯ . ಎಲ್ಲರೊಳಗೂ ಹೊಳೆಯುವುದು ಒಂದೇ ಚೈತನ್ಯದ ಜ್ಯೋತಿ.

ವಚನಗಳು ಕೇವಲ ಭಕ್ತಿಪರ ಕಾವ್ಯವಲ್ಲ. ವ್ಯಕ್ತಿಯ ಅಂತರಂಗವನ್ನು ಜಾಗೃತಗೊಳಿಸುವ, ಸಮಾಜಕ್ಕೆ ಸಮಾನತೆ ಮತ್ತು ವಿವೇಕದ ದಾರಿಯನ್ನು ತೋರಿಸುವ ಶಾಶ್ವತ ಮಾನವೀಯ ಘೋಷಣೆಗಳಾಗಿವೆ.

ಶ್ರೀಮತಿ. ಶಾಲಿನಿ ರುದ್ರಮುನಿ,
# 20, ರಾಜೀವನಗರ, ಎರಡನೇ ಹಂತ, ಎರಡನೇ ತಿರುವು, 
ಪೋಲಿಸ್ ವಸತಿಗೃಹ ರಸ್ತೆ, 
ವಿದ್ಯಾನಗರ,
ಹುಬ್ಬಳ್ಳಿ – 580031
ಮೊಬೈಲ್ ಸಂಖ್ಯೆ: 78921 69644

  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ:
    • ಮೋಬೈಲ್ ನಂ. 9741 357 132
    • e-Mail ID: info@vachanamandara.in / admin@vachanamandara.in

Leave a Reply