ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನ ಕೇಂದ್ರ, ವಿಜಯಪುರ | ಡಾ. ವಿ. ಡಿ. ಐಹೊಳ್ಳಿ,ವಿಜಯಪುರ.

Loading

12 ನೇ ಶತಮಾನದ ವಚನಕಾರರು ತಾವು ಸೃಷ್ಟಿಸಿದ ನೂತನ ಆಯಾಮಗಳನ್ನು ಅನುಷ್ಠಾನಕ್ಕೆ ತಂದು, ನುಡಿದಂತೆ ನಡೆದು ಇಹಲೋಕದಲ್ಲಿಯೇ ಎಲ್ಲವೂ ಅಡಗಿದೆ ಎಂದು ತೋರಿಸಿಕೊಟ್ಟವರು. ಶರಣರು ಸ್ವರ್ಗ, ನರಕಗಳು ಬೇರಿಲ್ಲ ಕಾಣಿರೋ ಎಂದು ತಿಳಿಸಿಕೊಟ್ಟವರು. ಆಚಾರವೇ ಸ್ವರ್ಗ, ಅನಾಚಾರವೇ ನರಕ ಎಂದು ಬದುಕಿನ ನೈಜ ಸತ್ಯವನ್ನು ಪ್ರಥಕ್ಕರಿಸಿದವರು. ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಅನುಭವ ಮಂಟಪದಲ್ಲಿ ಚರ್ಚೆಗೆ ಒಳಪಡಿಸಿದ ವಚನದ ತಾಡೋಲೆಗಳನ್ನು ಸಂಗ್ರಹಿಸಿ, ರಿಷ್ಕರಿಸಿದ ವಚನದ ಕಟ್ಟುಗಳನ್ನು ಕ್ರಾಂತಿಯ ನೆಪದಲ್ಲಿ ಅವುಗಳನ್ನು ನಾಶಗೊಳಿಸಿದರು. ಅವುಗಳಲ್ಲಿ ಅಳಿದುಳಿದಿದ್ದ ವಚನಗಳು ಮಠ-ಮಂದಿರಗಳಲ್ಲಿ, ಮನೆ-ಮನೆಗಳಲ್ಲಿ, ಶರಣರು ಹೊತ್ತೊಯ್ದು ಗವಿ-ಗಂವರಗಳಲ್ಲಿ ಜೋಕೆಯಾಗಿ ಇಟ್ಟಿರುವುದನ್ನು ಸಂಗ್ರಹಿಸಿ ಏಡೆಯೂರು ಸಿದ್ಧಲಿಂಗೇಶ್ವರ ನೇತೃತ್ವದಲ್ಲಿ ಪುನರ್ಸೃಷ್ಟಿಯಾಗಿ 101 ವಿರಕ್ತರು ಕೂಡಿ ವಚನದ ಕಟ್ಟುಗಳನ್ನು ರಚಿಸಿದರು. ಹೀಗೆಯೇ ಶರಣರ ಬಹುಮುಖ ವ್ಯಕ್ತಿತ್ವದ ದರ್ಶನವನ್ನು ಮಾಡಿಸಲು 19 ನೇ ಶತಮಾನದ ಉತ್ತರಾರ್ಧದಲ್ಲಿ, 20 ನೇ ಶತಮಾನದ ಪೂರ್ವಾರ್ಧದಲ್ಲಿ ರಾವ್‌ಬಹಾದ್ದೂರ ಡಾ. ಫ. ಗು. ಹಳಕಟ್ಟಿಯವರು ಚರಜಂಗಮರಾಗಿ ಹುಟ್ಟಿ ಬರಬೇಕಾಯಿತು.

ಲೋಕದಂತೆ ಬಾರರು, ಲೋಕದಂತೆ ಇರರು,
ಲೋಕದಂತೆ ಹೋಗರು, ನೋಡಯ್ಯ.
ಪುಣ್ಯದಂತೆ ಬಪ್ಪರು, ಜ್ಞಾನದಂತೆ ಇಪ್ಪರು,
ಮುಕ್ತಿಯಂತೆ ಹೋಹರು, ನೋಡಯ್ಯಾ.
ಉರಿಲಿಂಗದೇವಾ, ನಿಮ್ಮ ಶರಣರು ಉಪಮಾತೀತರಾಗಿ
ಉಪಮಿಸಬಾರದು.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-464/ವಚನ ಸಂಖ್ಯೆ-1255)

ಮೇಲಿನ ವಚನದಂತೆ ಡಾ. ಫ. ಗು. ಹಳಕಟ್ಟಿಯವರು ಬದುಕಿದವರು. ಲೋಕದಲ್ಲಿ ಸಾಮಾನ್ಯ ವ್ಯಕ್ತಿಯಂತೆ ಕಂಡರೂ ಅಸಾಮಾನ್ಯ ವ್ಯಕ್ತಿತ್ವ ಹೊಂದಿದವರು. ಪುಣ್ಯಾತ್ಮರಾಗಿ ಬಂದು ವಚನದ ಮೂಲಕ ಲೋಕಕ್ಕೆ ಜ್ಞಾನವನ್ನು ನೀಡಿದ ಮಹಾಂತರು. ಜೀವನದುದ್ದಕ್ಕೂ ಮುಕ್ತವಾಗಿ ಹೋಗದೆ, ಭಕ್ತರಾಗಿ ಶರಣರ ಮತ್ತು ಭಕ್ತರ ಉದ್ಧಾರಕ್ಕಾಗಿ ಮಿಂದವರು. ಯಾವುದೇ ಹೋಲಿಕೆಗೆ ಒಳಗಾಗದೇ ಆಶೆ, ಆಮಿಷಗಳಿಗೆ ಒಡ್ಡದೆ, ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ ಎಂಬ ನುಡಿಯನ್ನು ಪಾಲಿಸಿಕೊಂಡು ಬಂದ ಮಹಾತ್ಮರು.

ಡಾ. ಫ. ಗು. ಹಳಕಟ್ಟಿಯವರನ್ನು 770 ಅಮರಗಣಂಗಳಲ್ಲಿ 771 ನೆಯವರೆಂದು ಹೇಳುವುದುಂಟು. ವಚನಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿ, ರಿಷ್ಕರಿಸಿ, ವಿಮರ್ಶಿಸಿ, ಚರ್ಚಿಸಿ, ಸಂಶೋಧಿಸಿ ನಂತರ ಅವುಗಳನ್ನು ಪ್ರಕಟಿಸಿದ್ದರಿಂದ ಭುವನದ ಭಾಗ್ಯವೆನಿಸಿದರಲ್ಲದೆ ವಚನ ಪಿತಾಮಹರೆಂದೆನಿಸಿದರು.

ಇವರು ಸಿರಿವಂತ ಗೌರವಯುತ ಸಂಪ್ರದಾಯದಿಂದ ಬಂದವರು. ಬಾಲ್ಯದಲ್ಲಿ ತಾಯಿಯನ್ನು ಕಳೆದುಕೊಂಡರೂ ತಂದೆ ಮತ್ತು ಅಜ್ಜಿಯ ಆಶ್ರಯದಲ್ಲಿ ಅಪ್ರತಿಮವಾಗಿ ತಮ್ಮ ಜ್ಞಾನವನ್ನು ಪಡೆದವರು. ವಕೀಲ ವೃತ್ತಿಯಿಂದ, ನ್ಯಾಯಾಧೀ, ಪ್ರೊಸೀಕ್ಯೂಟರ ಹುದ್ದೆಯಿಂದ ನಿರ್ಗಮಿಸಿ ವಚನಗಳ ಪ್ರಸಾರ ಮಾಡುವುದೇ ತಮ್ಮ ಗುರಿಯನ್ನಾಗಿಸಿಕೊಂಡವರು. ಇಂತಹ ಮಹಾನ್ ವ್ಯಕ್ತಿ 1910 ರಲ್ಲಿ ಬಿ. ಎಲ್. ಡಿ. ಇ ಸಂಸ್ಥೆಯನ್ನು ಹುಟ್ಟು ಹಾಕಿದ್ದರಿಂದ ಇಂದು ನೂರಾರು ಸಂಸ್ಥೆಗಳು ಜಿಲ್ಲೆ, ರಾಜ್ಯದಲ್ಲಿ ತಲೆ ಎತ್ತಿಕೊಂಡಿವೆ.

ಶ್ರೀ ಎಂ. ಬಿ. ಪಾಟೀಲರು ಬಿ. ಎಲ್. ಡಿ. ಇ ಸಂಸ್ಥೆಯ ಅಧ್ಯಕ್ಷರು, ಶಿಕ್ಷಣಾಭಿಮಾನಿಗಳು, ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವವರು. ಸಂಸ್ಥೆಯ ನಿರ್ದೇಶಕರುಗಳು, ಸದಸ್ಯರು, ಸಂತರು ಮತ್ತು ನಾಡಿನ ವಿದ್ವಾಂಸರು ಕೃತಜ್ಞತಾಭಾವದಿಂದ ಡಾ. ಫ. ಗು. ಹಳಕಟ್ಟಿಯವರ ಬಗ್ಗೆ ಚಿಂತಿಸಿ, ಚರ್ಚಿಸಿ ಶ್ರೀ ಎಂ. ಬಿ. ಪಾಟೀಲರ ನೇತೃತ್ವದಲ್ಲಿ 2003 ರಲ್ಲಿ ಸ್ಮಾರಕ ಭವನವನ್ನು ನಿರ್ಮಿಸಿದರು. ಇದರ ಪಕ್ಕದಲ್ಲಿಯೇ 770 ಅಮರಗಣಂಗಳ ಲಿಂಗದ ಗುಡಿ, ಬಂಥನಾಳ ಶಿವಯೋಗಿಗಳ ಮಂದಿರ ಮತ್ತು ಡಾ. ಫ. ಗು. ಹಳಕಟ್ಟಿಯವರ ಸಮಾಧಿ ಇದೆ. ಈಗ ಭವನ ವಿದ್ಯಾರ್ಥಿಗಳಿಗೆ ಜ್ಞಾನದ ಗಣಿಯಾಗಿ, ಭಕ್ತಾಧಿಗಳಿಗೆ ತೀರ್ಥಕ್ಷೇತ್ರವಾಗಿ, ವಿದ್ವಾಂಸರಿಗೆ ಸಂಶೋಧನ ಕೇಂದ್ರವಾಗಿ, ಜನಸಾಮಾನ್ಯರಿಗೆ ಧಾರ್ಮಿಕ ಮಂದಿರವಾಗಿ ಕಾಣುತ್ತದೆ. ಒಳಗೆ ಕಾಲಿಟ್ಟರೆ ಸಾಕು ಯಾವುದೋ ಒಂದು ವಿಸ್ಮಯ ಲೋಕಕ್ಕೆ ಬಂದಿದ್ದೇವೆಂದು ಅನಿಸದೇ ಇರಲಾರದು.

ಇಲ್ಲಿ ನಿರಂತರವಾಗಿ ಅಧ್ಯಯನ, ಸಂಶೋಧನೆ, ಶಿಕ್ಷಣ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳು ನಡೆಯುವಂತೆ ಆಸ್ಪದ ನೀಡಿದವರು ಶ್ರೀ ಎಂ. ಬಿ. ಪಾಟೀಲ ಸಚಿವರು. ಡಾ. ಎಂ. ಎಂ. ಕಲಬುರ್ಗಿ ನಾಡಿನ ಅಪ್ರತಿಮ ಸಂಶೋಧಕರು. ಅವರು ತಮ್ಮ ಪದವಿಯನ್ನು ಬಿ. ಎಲ್. ಡಿ. ಇ ಸಂಸ್ಥೆಯಲ್ಲಿ ಪೂರೈಸಿದವರು. ಈ ಮಾತೃ ಸಂಸ್ಥೆಗಳಿಗೆ ಬೀಜಾಂಕುರ ಮಾಡಿದವರು ಡಾ. ಫ. ಗು. ಹಳಕಟ್ಟಿಯವರು. ಅವರ ಸಮಾಧಿ ಸ್ಥಳದಲ್ಲಿಯೇ ಒಂದು ಸ್ಮಾರಕ ಭವನ ಆಗಬೇಕೆಂದು ಸಂಕಲ್ಪ ಮಾಡಿದ್ದರಿಂದ ಶ್ರೀ. ಎಂ. ಬಿ. ಪಾಟೀಲರು ಯೋಜನೆ ರೂಪಿಸಿಕೊಂಡು ಅವರ ಕನಸನ್ನು ನನಸು ಮಾಡಿದವರು. ಡಾ. ಎಂ. ಏಂ. ಕಲಬುರ್ಗಿಯವರು ಯಾವತ್ತು ಪರಿಶ್ರಮವಹಿಸಿ ಸಾಹಿತ್ಯ ಮತ್ತು ಸಂಶೋಧನ ಕ್ಷೇತ್ರದಲ್ಲಿ ಹೆಜ್ಜೆ ಮೂಡಿಸಿದವರು. ಈ ಭವನ ಜೀವಂತವಾಗಿರಬೇಕು ಎಂದವರು. ಅಂತೆಯೇ ಅವರು ತಮ್ಮ ಪ್ರಧಾನ ಸಂಪಾದಕತ್ವದಲ್ಲಿ 15 ಜನ ವಿದ್ವಾಂಸರನ್ನು ಗುರುತಿಸಿ 15 ಬೃಹತ್ ಸಂಪುಟಗಳನ್ನು ಪ್ರಕಟಿಸುವ ಜವಾಬ್ದಾರಿ ಹೊತ್ತು ಡಾ. ಫ.ಗು.ಹಳಕಟ್ಟಿ ಸಮಗ್ರ ಸಾಹಿತ್ಯ ಎಂದು 15 ಸಂಪುಟಗಳನ್ನು ಪ್ರಕಟಿಸಿ 2008 ರ ಜನವರಿ 30 ರಂದು ಅದ್ದೂರಿಯಾಗಿ, ಅರ್ಥಪೂರ್ಣವಾಗಿ ಆ ಗ್ರಂಥಗಳನ್ನು ಬಿಡುಗಡೆಗೊಳಿಸಲಾಯಿತು. ಈ ಎಲ್ಲ ಸಂಪುಟಗಳು ಮಾರಾಟವಾಗಿವೆ. ಸದ್ಯ ಶಿವಾನುಭವ ಪತ್ರಿಕೆಯ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಕಾರ್ಯ ಚಟುವಟಿಕೆಗಳನ್ನು ಗುರುತಿಸಿದ ಹಂಪಿ ವಿಶ್ವವಿದ್ಯಾಲಯವು ಸಂಶೋಧನ ಕೇಂದ್ರವಾಗಿ ಮಾನ್ಯತೆಯನ್ನು ನೀಡಿತು. ನಂತರ Ph. D ಅಧ್ಯಯನದ ಪ್ರಕ್ರಿಯೆಯನ್ನು ಪ್ರಾರಂಭಿಸಲಾಯಿತು. ಈಗಾಗಲೇ 18 ವಿದ್ಯಾರ್ಥಿಗಳು Ph. D ಪದವಿಯನ್ನು ಪಡೆದುಕೊಂಡಿದ್ದಾರೆ. ಈಗ ಸದ್ಯ 13 ವಿದ್ಯಾರ್ಥಿಗಳು Ph. D ನೋಂದಣಿ ಪಡೆದು ಅಧ್ಯಯನದಲ್ಲಿ ನಿರತರಾಗಿದ್ದಾರೆ.

ಆದಿಲ್‌ಶಾಹಿ ಮನೆತನವು ವಿಜಯಪುರವನ್ನು ರಾಜಧಾನಿ ಮಾಡಿಕೊಂಡು ದಕ್ಷಿಣ ಭಾರತವನ್ನು ಬಹುಭಾಗ ಆಳಿ, ಶಿಲ್ಪಕಲೆ, ಸಾಹಿತ್ಯ, ಧಾರ್ಮಿಕ ಮತ್ತು ಸಂಗೀತ ಕ್ಷೇತ್ರಗಳಿಗೆ ಅವರು ನೀಡಿದ ಕೊಡುಗೆ ಅಪಾರವಾದುದು. ಆದಿಲ್‌ಶಾಹಿ ಕಾಲದ ಉರ್ದು, ಪರ್ಶಿಯನ್, ಅರೇಬಿಕ್ ಮತ್ತು ದಖನಿ ಭಾಷೆಗಳಲ್ಲಿ ರಚಿತವಾದ ಸಾಹಿತ್ಯವನ್ನು ಕನ್ನಡದಲ್ಲಿ ತರಲು ಯೋಜನೆಯನ್ನು ರೂಪಿಸಿತು. 2013 ರಲ್ಲಿ ಅರ್ಜಿಯನ್ನು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಲ್ಲಿಸಿತ್ತು. ಇಲಾಖೆಯ ಅನುಮತಿ ನೀಡಿದಲ್ಲದೆ ಅನುದಾನವನ್ನು ಪೂರೈಸಿದರು. ಇದನ್ನು ಅನುವಾದ ಮಾಡಲು ಡಾ. ಎಂ. ಎಂ. ಕಲಬುರ್ಗಿಯವರ ನೇತೃತ್ವದಲ್ಲಿ ಸಮೀತಿ ರಚಿಸಲಾಯಿತು. ಯೋಜನಾ ನಿರ್ದೇಶಕರಾಗಿ ಹಿರಿಯ ಸಾಹಿತಿ ಮತ್ತು ಸಂಶೋಧನ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿಯವರು ಕಾರ್ಯ ಪ್ರವೃತ್ತರಾದರು. ಕಾರ್ಯದರ್ಶಿಗಳಾಗಿ ಡಾ. ಎಂ. ಎಸ್. ಮದಭಾವಿಯವರು ನೇಮಕಗೊಂಡರು. ಈ ಯೋಜನೆ ಪೂರ್ತಿಗೊಂಡು 21 ಪುಸ್ತಕಗಳನ್ನು 19 ಸಂಪುಟಗಳಲ್ಲಿ ಪ್ರಕಟಿಸಿದೆ. ಈಗಾಗಲೇ ಅರ್ಧಕ್ಕಿಂತ ಹೆಚ್ಚು ಸಂಪುಟಗಳು ಮಾರಾಟವಾಗಿವೆ.

ಡಾ. ಎಂ. ಎಂ. ಕಲಬುರ್ಗಿಯವರು 20 ನೇ ಶತಮಾನದ ಉತ್ತರಾರ್ಧದಲ್ಲಿ 21 ನೇ ಶತಮಾನದ ಪೂರ್ವಾರ್ಧದಲ್ಲಿ ನಿಂತ ಮಹಾನ್, ವಿದ್ವಾಂಸ, ಸಂಶೋಧಕ, ವಿಮರ್ಶಕ, ಚಿಂತಕ ಹಾಗೂ ಸಾಹಿತ್ಯದ ಆರಾಧಕ. ಇವರ ಕುರಿತು ಸಮಗ್ರವಾಗಿ ಕಲಬುರ್ಗಿಯವರ ಸಾಹಿತ್ಯದ ಕುರಿತು ಯೋಜನೆಯನ್ನು ರೂಪಿಸಿ ಸರಕಾರಕ್ಕೆ ಕೊಡಲಾಯಿತು. 40 ಬೃಹತ್ ಸಂಪುಟಗಳನ್ನೊಳಗೊಂಡ ಡಾ. ವೀರಣ್ಣ ರಾಜೂರ ಅವರ ಪ್ರಧಾನ ಸಂಪಾದಕತ್ವದಲ್ಲಿ ಕಾರ್ಯವು ಕೈಗೂಡಿತು. ಈ ಸಂಪುಟಗಳ ಲೋಕಾರ್ಪಣೆ ಕಾರ್ಯವು ವಿಜಯಪುರದಲ್ಲಿ ಶ್ರೀ ಎಂ. ಬಿ. ಪಾಟೀಲರ ಸಾರಥ್ಯದಲ್ಲಿ 40 ಗ್ರಂಥಗಳು ದಿನಾಂಕ: 14, 15 ಅಕ್ಟೋಬರ 2025 ರಂದು ಲೋಕಾರ್ಪಣೆಗೊಂಡವು. ಇವು ಕೂಡಾ ಅರ್ಧಕ್ಕಿಂತ ಹೆಚ್ಚು ಮಾರಾಟವಾಗಿವೆ.

ದಾಸ ಸಾಹಿತ್ಯದ ಗ್ರಂಥಗಳು ಸುಮಾರು 2 ದಶಕಗಳ ಹಿಂದೆ ಪ್ರಕಟಗೊಂಡು ಅವು ಈಗ ತೀರಿ ಹೋಗಿವೆ. ಅವುಗಳ ಮರುಮುದ್ರಣ ಯೋಜನೆಯನ್ನು ರೂಪಿಸಿಕೊಂಡು 50 ಸಂಪುಟಗಳ ಮರುಮುದ್ರಣ ಕಾರ್ಯ ಮುಗಿದಿದೆ. ಅದರಂತೆ 15 ಸಂಪುಟಗಳು ನೂತನವಾಗಿ ಪ್ರಥಮ ಮುದ್ರಣ, ಹೀಗೆ ಒಟ್ಟು 65 ಸಂಪುಟಗಳ ಕಾರ್ಯವು ಪ್ರಗತಿಯಲ್ಲಿದೆ. ಇದಕ್ಕಾಗಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಅನುದಾನವಿದೆ.

ಶಿವಾನುಭವ ಪತ್ರಿಕೆಯ ಮರುಮುದ್ರಣ ಕಾರ್ಯವನ್ನು ಕೂಡಾ ಕೈಗೆತ್ತಿಕೊಳ್ಳಲಾಗಿದೆ. ಡಾ. ಫ. ಗು. ಹಳಕಟ್ಟಿಯವರು 35 ವರ್ಷಗಳವರೆಗೆ ಪತ್ರಿಕೆಗಾಗಿ ಅಹರ್ನಿಶಿ ದುಡಿದವರು. ಈಗ ಸುಮಾರು 35 ಸಂಪುಟಗಳು ಪ್ರಕಟನೆಗೊಳ್ಳಲು ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಅನುದಾನ ನೀಡಿದೆ. ಇದರ ಮುದ್ರಣ ಕಾರ್ಯವು ಕೂಡಾ ಪ್ರಗತಿಯಲ್ಲಿದೆ.

ಈ ಪ್ರಕಟನಾ ಕಾರ್ಯದ ಮಧ್ಯದಲ್ಲಿ ಶ್ರೀ. ಕೃಷ್ಣ ಕೊಲ್ಹಾರ ಕುಲಕರ್ಣಿಯವರು ಪದ್ಮಶ್ರೀ ಕಾಕಾ ಕಾರ್ಖಾನೀಸ್ ಮತ್ತು ಗ್ರಾಮ ಸ್ವರಾಜ್ಯ ಸಾಕಾರಗೊಳಿಸಿದ ಆಗಿನ ಔಂಧ ಸಂಸ್ಥಾನದ ಮುಖ್ಯಮಂತ್ರಿ ಶ್ರೀ. ರಾಮಪ್ಪ ಬಾಲಪ್ಪ ಬಿದರಿ ಅವರ ಕುರಿತು ಗ್ರಂಥಗಳು ಪ್ರಕಟನೆಗೊಂಡಿವೆ. ಇವುಗಳೊಂದಿಗೆ ವಿವಿಧ ಲೇಖಕರಿಂದ 25 ಕ್ಕಿಂತ ಹೆಚ್ಚು ಗ್ರಂಥಗಳು ಪ್ರಕಟವಾಗಿವೆ.

ಚಿಂತನ ಸಾಂಸ್ಕೃತಿಕ ಬಳಗ ಎಂದು ಸಂಘಟಿಸಿಕೊಂಡು ಸಮಾನ ಮನಸ್ಕರು ಕೂಡಿಕೊಂಡು ಸಾಹಿತ್ಯಿಕ, ಸಂಶೋಧನೆ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿಯ ವಿದ್ವಾಂಸರನ್ನು ಅನುಭಾವ-ಮರುಭೆಟ್ಟಿ ಎಂದು ವಿಶೇಷ ಉಪನ್ಯಾಸವನ್ನು ಪ್ರತಿ ತಿಂಗಳು ಕೊನೆಯ ಶನಿವಾರದಂದು ನಡೆಸಲಾಗುವುದು. ಹೀಗೆ ಹಲವಾರು ಚಟುವಟಿಕೆಗಳನ್ನು ಗಮನಿಸಿದ ಸರ್ಕಾರ ಈ ಕೇಂದ್ರಕ್ಕೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

ಡಾ. ಎಂ. ಎಂ. ಕಲಬುರ್ಗಿಯವರ ಹೆಸರಿನಿಂದ ನಡೆಯುವ ವಿವಿಧ ಪ್ರಕಟನೆಯ ಮೂಲಗಳಿಂದ ಮತ್ತು ಕೊಡುಗೆ ದಾನಿಗಳಿಂದ ಕೊಡಲ್ಪಟ್ಟಿರುವ ಸುಮಾರು 25,000 ಗ್ರಂಥಗಳು ನಮ್ಮ ಗ್ರಂಥಾಲಯದಲ್ಲಿದೆ. ಓದುಗರಿಗೆ ಮುಕ್ತ ಅವಕಾಶವಿದೆ. ವಿಶ್ವವಿದ್ಯಾಲಯ ಮತ್ತು ಮಹಾವಿದ್ಯಾಲಯದ ವಿದ್ಯಾರ್ಥಿಗಳು ಇಲ್ಲಿ ಬಂದು ತಮ್ಮ ಪ್ರೊಜೆಕ್ಟಗೆ ಗ್ರಂಥಾಲಯದ ಸಹಾಯವನ್ನು ಪಡೆಯುತ್ತಿದ್ದಾರೆ. ಕ್ಷೇತ್ರ ಧ್ಯಯನ ಕಾರ್ಯಕ್ಕಾಗಿ B. Ed ವಿದ್ಯಾರ್ಥಿಗಳು ಸಂದರ್ಶನದಿಂದ ಮಾಹಿತಿ ಪಡೆಯುತ್ತಾರೆ. ಪ್ರತಿ ವರ್ಷ ಸುಮಾರು 1,000 ದಿಂದ 1,500 ರ ವರೆಗೆ ಆಸಕ್ತರು ಬಂದು ವೀಕ್ಷಿಸಿ ಇದನ್ನು ಪ್ರಶಂಸೆಯನ್ನು ಕೂಡಾ ಮಾಡಿದ್ದಾರೆ.

ಭಾರತೀಯ ಕಲೆ ಮತ್ತು ಸಾಂಸ್ಕೃತಿಕ ಪರಂಪರೆಯ ಸಂಸ್ಥೆ ಇದು ಕೇಂದ್ರ ಸರಕಾರದ ಅಧೀನದಲ್ಲಿದೆ. ಇದು ಒದಗಿಸಿರುವ ಅನುದಾನದಿಂದ ಪ್ರತಿವರ್ಷ 2 ಅಥವಾ 3 ಸಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ. ನಗರದ ಮತ್ತು ಕೆಲವು ಗ್ರಾಮೀಣ ಪ್ರದೇಶದ 7 ರಿಂದ 10 ನೇ ವರ್ಗದ ವಿದ್ಯಾರ್ಥಿಗಳನ್ನು ಕರೆಯಿಸಿ ಸಂಸ್ಕೃತಿ ಮತ್ತು ಕಲೆಗೆ ಸಂಬಂಧಿಸಿದಂತೆ ಭಾಷಣ ಸ್ಪರ್ಧೆ, ರಸಪ್ರಶ್ನೆ ಕಾರ್ಯಕ್ರಮ, ಚಿತ್ರಕಲೆ ಮತ್ತು ಅದರ ವಿವರಣೆ, ಲೇಖನದ ಮೂಲಕ ಗಾಯನ ಸ್ಪರ್ಧೆ, ಉದಾಹರಣೆಗೆ ಮಣ್ಣಿನ ಗಡಿಗೆ ಮೇಲೆ ಚಿತ್ರ ಬಿಡಿಸುವುದು, ನಿಸರ್ಗ ಅದರ ರಕ್ಷಣೆ, ನೀರಿನ ಮಹತ್ವ, ಮುಂತಾದ ಕಾರ್ಯಚಟುವಟಿಕೆಗಳನ್ನು ಏರ್ಪಡಿಸಿ ರಾಷ್ಟ್ರ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಪ್ರಥಮ ಹಾಗೂ ದ್ವಿತೀಯ ಬಹುಮಾನವನ್ನು ಪಡೆದುಕೊಂಡಿದ್ದಾರೆ. ಇದರ ಜಿಲ್ಲಾ ಸಂಚಾಲಕರಾಗಿ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿಯವರು ಸಹಾಯಕ ಸಂಚಾಲಕರಾಗಿ ಡಾ. ವಿ. ಡಿ. ಐಹೊಳ್ಳಿ ಮತ್ತು ಪ್ರೊ. ವಿಠ್ಠಲ ಟಂಕಸಾಲಿಯವರು ಇದ್ದಾರೆ. ಈ ಸಂಪನ್ಮೂಲ ವ್ಯಕ್ತಿಗಳು ದೆಹಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಈ ಸಂಶೋಧನ ಕೇಂದ್ರಕ್ಕೆ ನಾಡಿನ, ದೇಶದ, ವಿದೇಶದ ವಿದ್ವಾಂಸರು ಭೆಟ್ಟಿ ನೀಡುತ್ತಾರೆ. ವಿಶ್ವವಿದ್ಯಾಲಯದ ಕುಲಪತಿಗಳು, ನ್ಯಾಯಾಲದ ನ್ಯಾಯಾಧೀಶರು, ಸ್ವಾಮಿಗಳು, ಗಣ್ಯ ನಾಗರಿಕರು, ಜ್ಞಾನಪೀಠ ಪ್ರಶಸ್ತಿ ವಿಜೇತರು, ಸಾಹಿತಿಗಳು, ಸಂಶೋಧಕರು, ಸಚಿವರುಗಳು ಸಂಘಸಂಸ್ಥೆಗಳ ಮುಖ್ಯಸ್ಥರು, ಪ್ರವಾಸಿಗರು ಬಂದು ಪ್ರಶಂಸೆಯ ಮಾತುಗಳನ್ನು ದಾಖಲಿಸಿ ಹೋಗುತ್ತಾರೆ. ಉದಾಹರಣೆಗೆ ಭೇಟಿ ನೀಡಿದವರು ಡಾ. ಗೀರೀಶ ಕಾರ್ನಡ, ಗಾಂಧೀಜಿಯವರ ಮೊಮ್ಮಗ ಶ್ರೀ ರಾಜಮೋಹನ ಗಾಂಧಿ ಅವರ ಪತ್ನಿ ಉಷಾವರು, ವಿದೇಶಿ ಸಂಶೋಧಕ ಬೆಂಗಳೂರಿನಲ್ಲಿಯ ರಾಭಾರಿಗಳು ಹೀಗೆ ಹಲವಾರು ಪ್ರಮುಖ ವ್ಯಕ್ತಿಗಳು ಭೆಟ್ಟಿ ಕೊಟ್ಟಿದ್ದಾರೆ.

ಕರ್ನಾಟಕ ಸರಕಾರ ಡಾ. ಫ. ಗು. ಹಳಕಟ್ಟಿಯವರ ಜನ್ಮದಿನವನ್ನು ಜುಲೈ 2 ರಂದು ವಚನ ಸಂರಕ್ಷಣ ದಿನ ವೆಂದು ಆಚರಿಸಲು ತಿಳಿಸಿದ್ದರಿಂದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಮತ್ತು ಸರಕಾರ ಮತ್ತು ಸಂಘ ಸಂಸ್ಥೆಗಳಲ್ಲಿ ಅವರ ವ್ಯಕ್ತಿತ್ವದ ಬಗ್ಗೆ ಉಪನ್ಯಾಸಗಳನ್ನು ಏರ್ಪಡಿಸಿ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಕಾಯ್ದುಕೊಂಡು ಹೋಗುವಂತೆ ಮಾಡಿದೆ.

ಒಟ್ಟಿನಲ್ಲಿ ಈ ಸಂಶೋಧನ ಕೇಂದ್ರವು ಗುಣಮಟ್ಟವನ್ನು ಕಾಯ್ದುಕೊಳ್ಳುವದರೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಪ್ರಶಸ್ತಿ ಪಡೆದವರನ್ನು ಪುರಸ್ಕರಿಸಿ ಅವರಿಗೆ ಗೌರವ ಸನ್ಮಾನ ಮಾಡಲಾಗುವುದು. ರಾಜ್ಯದ ಸಂಶೋಧನ ಕೇಂದ್ರಗಳಿಗಿಂತ ಮುನ್ನಡೆ ಇದೆ. ಅದರಂತೆ ಪ್ರತಿ ತ್ರೈಮಾಸಿಕಕ್ಕೊಮ್ಮೆ ವಿದ್ಯಮಾನ ಪತ್ರಿಕೆಯನ್ನು ಹೊರಡಿಸಲಾಗುತ್ತಿದೆ.

ವಚನಪಿತಾಮಹ ಡಾ. ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರ, ವಿಜಯಪುರದ ಸಂಯೋಜಕರಾದ ಡಾ. ವಿ. ಡಿ. ಐಹೊಳ್ಳಿಯವರು ನಮ್ಮ ವಚನಸಾಹಿತ್ಯ ಮಂದಾರದಿಂದ ಆಯೋಜಿಸಲಾಗುವ ಅಂತರರಾಷ್ಟ್ರೀಯ ಅಂತರ್ಜಾಲ ಉಪನ್ಯಾಸ ಮಾಲಿಕೆಯಲ್ಲಿ ಮಾತನಾಡಿದ್ದಾರೆ. ಅದರ YouTube Video Link ನ್ನು ಇಲ್ಲಿ ಲಗತ್ತಿಸಲಾಗಿದೆ.

ಡಾ. ವಿ. ಡಿ. ಐಹೊಳ್ಳಿ,
ಸಂಯೋಜಕರು,
ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನಾ ಕೇಂದ್ರ,
ವಿಜಯಪುರ.

  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನಸಾಹಿತ್ಯ ಮಂದಾರ ಫೌಂಡೇಶನ್ ದ ಸಂಚಾಲಕರನ್ನು ಸಂಪರ್ಕಿಸಬೇಕಾದ:
    • ಮೋಬೈಲ್ ನಂ. 9741 357 132
    • e-Mail ID: info@vachanamandara.in / admin@vachanamandara.in

Leave a Reply