![]()

ಕರ್ನಾಟಕದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯಲ್ಲಿ ಬಸವಾದಿ ಶರಣರ ವಚನ ಸಾಹಿತ್ಯವು ವಿಶಿಷ್ಟ ಸ್ಥಾನವನ್ನು ಹೊಂದಿದೆ. ವಚನಗಳು ಕೇವಲ ಭಕ್ತಿಯ ಕಾವ್ಯಗಳಲ್ಲ; ಅವು ಸಮಾಜದ ಬದುಕು, ಶ್ರಮ, ಸಮಾನತೆ ಮತ್ತು ಪ್ರಕೃತಿಯೊಂದಿಗೆ ಮಾನವನ ಸಂಬಂಧವನ್ನು ಪ್ರತಿಬಿಂಬಿಸುವ ಜೀವಂತ ಸಾಹಿತ್ಯವಾಗಿವೆ. ಈ ಸಾಹಿತ್ಯದಲ್ಲಿ ಕೃಷಿಗೆ ವಿಶೇಷ ಮಹತ್ವ ನೀಡಲಾಗಿದೆ, ಏಕೆಂದರೆ ಕೃಷಿ ಮಾನವನ ಜೀವನಾಧಾರ ಮತ್ತು ಶ್ರಮದ ಪ್ರತೀಕವೆಂದು ಶರಣರು ಕಂಡಿದ್ದರು.
ಶರಣರು “ಕಾಯಕವೇ ಕೈಲಾಸ” ಎಂಬ ತತ್ವದ ಮೂಲಕ ಪ್ರತಿಯೊಂದು ಶ್ರಮವನ್ನೂ ಪವಿತ್ರವೆಂದು ಸಾರಿದರು. ರೈತನ ಬೆವರು, ಹೊಲದ ಮಣ್ಣು, ಬಿತ್ತನೆಯ ಪರಿಶ್ರಮ ಮತ್ತು ಬೆಳೆಯ ಸಂತೋಷವನ್ನು ಅವರು ಆತ್ಮೀಯ ದೃಷ್ಟಿಯಿಂದ ಕಂಡರು. ಕೃಷಿ ಕೇವಲ ಜೀವನೋಪಾಯವಲ್ಲ; ಅದು ಸತ್ಯ, ಪರಿಶ್ರಮ ಮತ್ತು ನೈಸರ್ಗಿಕ ಸಮತೋಲನದ ಸಂಕೇತ. ವಚನಗಳಲ್ಲಿ ಹೊಲ, ಮಣ್ಣು, ಬೀಜ, ಮಳೆ, ನದಿ ಮತ್ತು ಬೆಳೆಯ ರೂಪಕಗಳನ್ನು ಬಳಸಿ ಮಾನವ ಜೀವನದ ಮೌಲ್ಯಗಳನ್ನು ವಿವರಿಸಲಾಗಿದೆ.
ವಿಶೇಷವಾಗಿ ವಿಶ್ವಗುರು ಬಸವಣ್ಣ, ವ್ಯೋಮಕಾಯ ಅಲ್ಲಮ ಪ್ರಭು, ವೈರಾಗ್ಯನಿಧಿ ಅಕ್ಕಮಹಾದೇವಿಯವರೂ ಸೇರಿದಂತೆ ಅನೇಕ ಶರಣರು ಕೃಷಿಯ ಮಹತ್ವವನ್ನು ತಮ್ಮ ವಚನಗಳಲ್ಲಿ ಸೂಕ್ಷ್ಮವಾಗಿ ವ್ಯಕ್ತಪಡಿಸಿದ್ದಾರೆ. ಅವರ ದೃಷ್ಟಿಯಲ್ಲಿ ರೈತನು ಸಮಾಜದ ಜೀವನಾಡಿ; ಅವನ ಪರಿಶ್ರಮವೇ ಸಮುದಾಯದ ಉಳಿವಿಗೆ ಕಾರಣ. ಆದ್ದರಿಂದ ವಚನ ಸಾಹಿತ್ಯವು ಕೃಷಿಯನ್ನು ಕೇವಲ ಆರ್ಥಿಕ ಚಟುವಟಿಕೆಯಾಗಿ ನೋಡದೆ, ಧರ್ಮ, ಶ್ರಮ ಮತ್ತು ಮಾನವೀಯತೆಯನ್ನು ಸಮನ್ವಯವಾಗಿ ಚಿತ್ರಿಸುತ್ತದೆ.
ಇಂದಿನ ಪರಿಸರ ಸಂಕಷ್ಟ ಮತ್ತು ಕೃಷಿ ಸಮಸ್ಯೆಗಳ ಕಾಲಘಟ್ಟದಲ್ಲಿ ವಚನ ಸಾಹಿತ್ಯದ ಕೃಷಿ ಚಿಂತನೆಗಳು ಅತ್ಯಂತ ಪ್ರಸ್ತುತವಾಗಿವೆ. ಶ್ರಮಕ್ಕೆ ಗೌರವ, ಪ್ರಕೃತಿಗೆ ಪ್ರೀತಿ ಮತ್ತು ಸಮಾನತೆಯ ಬದುಕು ಎಂಬ ಸಂದೇಶಗಳು ವಚನದಲ್ಲಿ ಪ್ರಸ್ತುತಗೊಂಡಿವೆ. ಉದಾ: ಮಣ್ಣು ಜೀವನದ ಆಧಾರ. ನೀರು ಅಮೂಲ್ಯ ಸಂಪತ್ತು. ಮಳೆ ದೇವರ ಕೃಪೆ. ಪ್ರಕೃತಿಯ ಸಮತೋಲನ ಉಳಿಸಬೇಕು. ಅತಿಯಾದ ಆಸೆ ಮತ್ತು ದುರಾಸೆ ಪ್ರಕೃತಿಯನ್ನು ಹಾಳುಮಾಡುತ್ತದೆ. ಸರಳ ಜೀವನ ಮತ್ತು ಮಿತ ವ್ಯಯವನ್ನು ಅನುಸರಿಸಬೇಕು. ಪ್ರಕೃತಿಯೊಂದಿಗೆ ಹೊಂದಿಕೊಂಡ ಜೀವನವೇ ಉತ್ತಮ. ಈ ಚಿಂತನೆಗಳು ಇಂದಿನ ಪರಿಸರ ಸಂರಕ್ಷಣಾ ತತ್ವಗಳಿಗೂ ಹೊಂದಿಕೆಯಾಗುತ್ತವೆ.
ವಚನಗಳಲ್ಲಿ ಅರಿವು, ಆಚಾರ, ಅಧ್ಯಾತ್ಮ, ಅಂತರಂಗ-ಬಹಿರಂಗ ಸಾಧನೆಗಳ ಕುರಿತಾದ ಸಂಗತಿಗಳನ್ನು ನಿರೂಪಿಸಲು ದೈನಂದಿನ ಬದುಕಿನ ಆಗು-ಹೋಗುಗಳನ್ನು ಬಳಸಿದ್ದಾರೆ. ಲೌಕಿಕ ಬದುಕಿನ ವ್ಯಾವಹಾರಿಕ ಪರಿಕರಗಳನ್ನು ಬಳಸಿಕೊಂಡು ಪಾರಮಾರ್ಥಿಕ ಸಂಗತಿಗಳನ್ನು ಪ್ರ‍್ರತಿಪಾದಿಸುತ್ತಾರೆ. ಅನುಭವವನ್ನು ಅನುಭಾವದ ಎತ್ತರಕ್ಕೆ ಕೊಂಡೊಯ್ಯುತ್ತಾರೆ. ಇಲ್ಲಿ ಭಕ್ತಿ ಭಾವವೇ, ಮುನ್ನೆಲೆ ಮತ್ತು ಹಿನ್ನೆಲೆಯಲ್ಲಿ ಸಂಚರಿಸುತ್ತಿದೆ. ವಚನಗಳು ಶರಣರ ಮನೋಧರ್ಮವನ್ನು ತೋರುವ ಶಾಸನ ಲಿಪಿಗಳಾಗಿವೆ.
ಮೊದಲನೆಯಾಗಿ ಭಕ್ತಿಭಂಡಾರಿ ಬಸವಣ್ಣನವರ ವಚನಗಳಲ್ಲಿ ಕೃಷಿಯ ಉಲ್ಲೇಖವನ್ನು ನೋಡೋಣ.
ಅವರ “ಕಾಯಕವೇ ಕೈಲಾಸ” ಎಂಬ ತತ್ವ ವಚನಸಾಹಿತ್ಯದ ಕೇಂದ್ರಭಾವವಾಗಿದೆ. “ಕಾಯಕ” ಎಂದರೆ ಪ್ರಾಮಾಣಿಕ ಶ್ರಮದಿಂದ ಮಾಡಿದ ಕೆಲಸ. ಕೃಷಿಯೂ ಒಂದು ಶ್ರೇಷ್ಠ ಕಾಯಕ ಎಂದು ಬಸವಣ್ಣನವರು ಹೇಳಿದ್ದಾರೆ. ಇದು ಕೃಷಿಯನ್ನು ನೇರವಾಗಿ ಉಲ್ಲೇಖಿಸದಿದ್ದರೂ, ರೈತನ ಶ್ರಮವನ್ನು ಪವಿತ್ರ ಕಾಯಕವೆಂದು ಪ್ರತಿಪಾದಿಸುವ ಅತ್ಯಂತ ಪ್ರಸಿದ್ಧ ವಚನ ತತ್ವ. ಬಸವಣ್ಣನವರು ತಮ್ಮನ್ನು ನಂಬಿ ಬಂದವರಿಗೆ ತೋರಿಸಿದ್ದು ಆಚರಣೆಗೆ ಸರಳವಾದ, ಜಡ ನಿಯಮಗಳಿಲ್ಲದ, ಅನಗತ್ಯ ಕಟ್ಟುಪಾಡುಗಳಿಂದ ಮುಕ್ತವಾದ ಭಕ್ತಿಮಾರ್ಗ. ಈ ಸರಳ ವಚನದಲ್ಲಿ ಅವರು ಹೇಳುತ್ತಿರುವುದು ಕೂಡ ಭಕ್ತಿಯೇ ಮುಕ್ತಿಯಾಗುವ ಸರಳ ಸೂತ್ರ. ಇದೇ ಲಿಂಗಾಂಗ ಸಾಮರಸ್ಯದ ಶಾಶ್ವತ ಸೂತ್ರ. ಶರಣರು ಅಂತರಂಗದ ಕೃಷಿಗೆ ದಾರಿತೋರಿದ ಜಗದೋದ್ಧಾರಕರು. ಅಚ್ಚ ಕನ್ನಡದಲ್ಲಿ ಬೇಸಾಯ ನಡೆಸಿ ನಿಷ್ಪತ್ತಿಯೆಂಬ ಫಲ ಹಂಚಿದವರು. ನೇಗಿಲಯೋಗಿ ಒಕ್ಕಲಿಗ ಮುದ್ದಣ್ಣ, ಶರಣ ಏಲೇಶ್ವರ ಕೇತಯ್ಯ, ಶರಣ ಕೀಲಾರದ ಭೀಮಣ್ಣ, ಶರಣ ಇಳಿಹಾಳ ಬೊಮ್ಮಯ್ಯ ಮುಂತಾದ ವ್ಯವಸಾಯಗಾರರು ಸಿಗುತ್ತಾರೆ. ಶಿವಯೋಗಿ ಸಿದ್ಧರಾಮೇಶ್ವರರೂ ಮೂಲತಃ ಕೃಷಿ ಕಾಯಕದವರಾಗಿದ್ದರೆಂದು ಕೆಲವು ಕಡೆ ಕೇಳಿ ಬರುತ್ತದೆ. ಉಳಿದಂತೆ ಶರಣ ಗೋರಕ್ಷ, ಶರಣ ತುರುಗಾಹಿ ರಾಮಣ್ಣ, ಶರಣ ತೆಲುಗೇಶ ಮಸಣಯ್ಯ ಇವರುಗಳು ಗೋವುಗಳನ್ನು ಸಾಕಿಕೊಂಡು ಜೀವನ ನಿರ್ವಹಿಸುತ್ತಿದ್ದರು. ಶರಣ ಹೊಡೆಹುಲ್ಲ ಬಂಕಣ್ಣ ಎಂಬುವವರು ಮೇವಿನ ಹುಲ್ಲನ್ನು ಮಾರುತ್ತಿದ್ದರೆಂದು ತಿಳಿದುಬರುತ್ತದೆ. ತನ್ನ ಸತ್ಯ ಶುದ್ಧ ಕಾಯಕದಿಂದ ನಿತ್ಯವೂ ಗುರು-ಲಿಂಗ-ಜಂಗಮ ಸೇವೆ ಮಾಡುತ್ತಿದ್ದ ಬಂಕಣ್ಣನವರು, ಬಸವಣ್ಣನವರ ನಿಕಟವರ್ತಿಯಾಗಿದ್ದರು. ಕೃಷಿ ಲೋಕದ ಸಂಪೂರ್ಣ ಅರಿವಿದ್ದ ಅವರ ಹಲವು ವಚನಗಳಲ್ಲಿ ಆ ಸಂಗತಿಗಳು ಸಂಕೇತಗೊಂಡಿವೆ.
ಬಸವಣ್ಣನವರ ವಚನದಲ್ಲಿ ಕೃಷಿಯಲ್ಲಿ ನೆಲ/ಮಣ್ಣು, ಬೀಜ, ಗಿಡ, ಕಳೆ ಇವುಗಳನ್ನು ಉದಾಹರಿಸಿ, ಅವುಗಳನ್ನು ಅನುಭಾವಕ್ಕೆ ಮಾರ್ಮಿಕವಾಗಿ ಹೋಲಿಸಿದ್ದಾರೆ.
ಕೂಪವರಿಗೆ ಹೇಳುವೆನು ಕುಳಸ್ಥಳಂಗಳನೆಲ್ಲವ,
ಕೂರದವರಿಗೆ ಹೇಳಿ ನಾನೇವೆನು ಶಿವನೆ?
ಕರಲ ಭೂಮಿಯಲ್ಲಿ ಕರೆದ ವೃಷ್ಟಿಯ ತೆರನಂತೆ
ಅವರೆತ್ತ ಬಲ್ಲರೆನ್ನ ಸುಖ-ದುಃಖವನು?
ಅಂಗತವಿಲ್ಲದ ಸಂಗವು ಅಳಲಿಲ್ಲದ ಹುಯ್ಯಲಂತೆ,
ಇದು ಕಾರಣ, ಕೂಡಲಸಂಗಮದೇವಾ,
ನಿಮ್ಮ ಶರಣರಿಗಲ್ಲದೆ ಬಾಯಿದೆರೆಯೆನು.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-119/ವಚನ ಸಂಖ್ಯೆ-456)
ಬಸವಣ್ಣನವರು ಈ ವಚನದಲ್ಲಿ “ಕರಲ ಭೂಮಿಯಲ್ಲಿ ಕರೆದ ವೃಷ್ಟಿಯ ತೆರನಂತೆ ಅವರೆತ್ತ ಬಲ್ಲರು ಎನ್ನ ಸುಖ-ದು:ಖವನು?” ಎಂದು ಹೇಳುತ್ತಾರೆ. ಈ ವಚನದಲ್ಲಿ ರೈತನು ಸರಿಯಾದ ನೆಲದಲ್ಲಿ ಬೀಜ ಬಿತ್ತಿದಾಗ ಮಾತ್ರ ಉತ್ತಮ ಫಲ ಸಿಗುತ್ತದೆ ಎಂದು ಹೇಳಲಾಗಿದೆ. ಅದೇ ರೀತಿ ಮಾನವನೂ ಯೋಗ್ಯವಾದ ಕಾರ್ಯ ಮತ್ತು ಸನ್ಮಾರ್ಗವನ್ನು ಆಯ್ಕೆ ಮಾಡಿಕೊಂಡು ಬದುಕಬೇಕು ಎಂಬ ತಾತ್ವಿಕ ಅರ್ಥವನ್ನು ವಚನ ಸಾರುತ್ತದೆ. ಈ ವಚನದಲ್ಲಿ ಕೃಷಿಯಲ್ಲಿ ಕರಲು ಭೂಮಿಯಿಂದಾಗುವ ಅನಾನುಕೂಲಗಳನ್ನು ಎತ್ತಿ ತೋರುತ್ತಾರೆ.
ಮಡಕೆಯ ಮಾಡುವಡೆ ಮಣ್ಣೆ ಮೊದಲು,
ತೊಡಿಗೆಯ ಮಾಡುವಡೆ ಹೊನ್ನೆ ಮೊದಲು,
ಶಿವಪಥವನರಿವಡೆ ಗುರುಪಥವೆ ಮೊದಲು,
ಕೂಡಲಸಂಗಮದೇವನರಿವಡೆ
ಶರಣರ ಸಂಗವೆ ಮೊದಲು.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-22/ವಚನ ಸಂಖ್ಯೆ-70)
ಈ ವಚನದಲ್ಲಿ ಪ್ರತಿಯೊಂದು ಕಾರ್ಯಕ್ಕೂ ಮಣ್ಣು ಮೂಲಾಧಾರ ಮುಖ್ಯವೆಂದು ವಿವರಿಸಲಾಗಿದೆ. ಮಡಕೆಗೆ ಮಣ್ಣು ಹೇಗೆ ಅಗತ್ಯವೋ, ಶಿವಪಥಕ್ಕೆ ಸಜ್ಜನರ ಸಂಗವೂ ಹಾಗೆಯೇ ಅಗತ್ಯವೆಂದು ಬಸವಣ್ಣನವರು ಹೇಳಿದ್ದಾರೆ.
ಬೀಜದ ಮಹತ್ವವನ್ನು ಸಾರುವ ಶರಣರು:
ಧರೆಯ ಮೇಲೆ ಬಿದ್ದ ಬೀಜ,
ಧರೆಯಲ್ಲಿಯೆ ಅಳಿದು, ಆಕಾಶದಲ್ಲಿ ಫಲವಾಯಿತ್ತು.
ಆ ಫಲವ ಬಯಲ ಕಣದಲ್ಲಿ ಒಕ್ಕಿ,
ಮನದ ಹಗಹದಲ್ಲಿ ತುಂಬಿ,
ಬಾಯ ಹಗಹದಲ್ಲಿ ತೆಗೆದು,
ಕಣ್ಣಿನ ಕೊಳಗದಲ್ಲಿ ಅಳೆವುತ್ತಿರಲಾಗಿ,
ಖಂಡುಗವೆಂಬುದಕ್ಕೆ ಮೊದಲೆ ಕೊರಳಡಗಿತ್ತು.
ಕುಂಭೇಶ್ವರಲಿಂಗದಲ್ಲಿದ್ದ ಜಗನ್ನಾಥನರಿಕೆಯಾಗಿ.
(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-516/ವಚನ ಸಂಖ್ಯೆ-1219)
ಧರೆಯ ಮೇಲೆ ಬಿದ್ದ ಬೀಜ, ಧರೆಯಲ್ಲಿಯೆ ಅಳಿದು, ಆಕಾಶದಲ್ಲಿ ಫಲವಾಯಿತ್ತು ಶರಣ ಹೊಡೆಹುಲ್ಲ ಬಂಕಣ್ಣನವರು ಈ ವಚನದಲ್ಲಿ ಬೀಜದ ಮಹತ್ವವನ್ನು ಹೇಳಿದ್ದಾರೆ.
ಬೀಜ ಬಿತ್ತಿದ ನಂತರ ಮೊಳಕೆಯೊಡೆಯುವಿಕೆಯ ಪ್ರಸಂಗವನ್ನು ವಿವರಿಸುವ ವಚನದಲ್ಲಿ ಬಸವಣ್ಣನವರು:
ಭಕ್ತಿಯೆಂಬ ಪೃಥ್ವಿಯ ಮೇಲೆ
ಗುರುವೆಂಬಬೀಜವಂಕುರಿಸಿ,
ಲಿಂಗವೆಂಬ ಎಲೆಯಾುತ್ತು.
ಲಿಂಗವೆಂಬ ಎಲೆಯ ಮೇಲೆ
ವಿಚಾರವೆಂಬ ಹೂವಾುತ್ತು.
ಆಚಾರವೆಂಬ ಕಾಯಾಯಿತ್ತು.
ನಿಷ್ಪತ್ತಿಯೆಂಬ ಹಣ್ಣಾಯಿತ್ತು.
ನಿಷ್ಪತ್ತಿಯೆಂಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ
ಕೂಡಲಸಂಗಮದೇವ ತನಗೆ ಬೇಕೆಂದು ಎತ್ತಿಕೊಂಡ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-138/ವಚನ ಸಂಖ್ಯೆ-526)
ಭಕ್ತಿಯೆಂಬ ಪೃಥ್ವಿಯ ಮೇಲೆ ಗುರುವೆಂಬ ಬೀಜವಂಕುರಿಸಿ ಎನ್ನುವ ಬಸವಣ್ಣನವರ ಈ ವಚನದಲ್ಲಿ ಭಕ್ತಿಯನ್ನು ಭೂಮಿಗೆ, ಗುರುವನ್ನು ಬೀಜಕ್ಕೆ ಮತ್ತು ವಿಚಾರವನ್ನು ಹೂವಿಗೆ ಹೋಲಿಸಲಾಗಿದೆ. ಸರಿಯಾದ ಆಚಾರ ಮತ್ತು ಜ್ಞಾನದಿಂದ ಆತ್ಮವಿಕಾಸ ಸಂಭವಿಸಿ, ಅಂತಿಮವಾಗಿ ಮೋಕ್ಷ ದೊರೆಯುತ್ತದೆ ಎಂಬ ಆಧ್ಯಾತ್ಮಿಕ ಸಂದೇಶವನ್ನು ವಚನ ತಿಳಿಸುತ್ತದೆ.
ಇನ್ನು ಕಳೆ ಅಥವಾ ಕಸ ನಿರ್ಮೂಲನೆಯ ಮಹತ್ವವನ್ನು ತಿಳಿಸುತ್ತಾ:
ಬೆಳೆಯ ಭೂಮಿಯಲೊಂದು ಪ್ರಳಯದ ಕಸ ಹುಟ್ಟಿ
ತಿಳಿಯಲೀಯದು, ಎಚ್ಚರಲೀಯದು.
ಎನ್ನವಗುಣವೆಂಬ ಕಸವ ಕಿತ್ತು ಸಲಹಯ್ಯಾ,
ಲಿಂಗತಂದೆ ಸುಳಿದೆಗೆದು ಬೆಳೆವೆನು ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-17/ವಚನ ಸಂಖ್ಯೆ-50)
ಬೆಳೆಯ ಭೂಮಿಯಲೊಂದು ಪ್ರಳಯದ ಕಸ ಹುಟ್ಟಿ, ತಿಳಿಯಲೀಯದು, ಎಚ್ಚರಲೀಯದು ಎನ್ನುವ ಈ ವಚನದಲ್ಲಿ ಹೊಲದಲ್ಲಿನ ಕಸವನ್ನು ತೆಗೆದು ಬೆಳೆ ಉಳಿಸುವಂತೆ, ಮನಸ್ಸಿನ ದುರ್ಗುಣಗಳನ್ನು ದೂರ ಮಾಡಬೇಕು ಎಂದು ಹೇಳುತ್ತಾರೆ. ಆತ್ಮಶುದ್ಧಿಯಿಂದ ಮಾತ್ರ ಉತ್ತಮ ಜೀವನ ಮತ್ತು ಭಕ್ತಿ ಸಾಧ್ಯವೆಂಬ ಸಂದೇಶವನ್ನು ಬಸವಣ್ಣನವರು ನೀಡುತ್ತಾರೆ.
ವೇದಶಾಸ್ತ್ರವನೋದುವುದಕ್ಕೆ ಹಾರುವನಲ್ಲ.
ಇರಿದು ಮೆರೆವುದಕ್ಕೆ ಕ್ಷತ್ರಿಯನಲ್ಲ,
ವ್ಯವಹರಿಸುವುದಕ್ಕೆ ವೈಶ್ಯನಲ್ಲ.
ಉಳುವ ಒಕ್ಕಲ ಮಗನ ತಪ್ಪ ನೋಡದೆ ಒಪ್ಪುಗೊಳ್ಳಯ್ಯಾ,
ಕಾಮಭೀಮ ಜೀವಧನದೊಡೆಯ ನೀನೆ ಬಲ್ಲೆ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-770/ವಚನ ಸಂಖ್ಯೆ-1738)
“ಉಳುವ ಒಕ್ಕಲ ಮಗನ ತಪ್ಪ ನೋಡದೆ ಒಪ್ಪಿಕೊಳ್ಳಯ್ಯಾ” ಎಂದು ಈ ವಚನದಲ್ಲಿ ರೈತನ ಶ್ರಮಕ್ಕೆ ನೇಗಿಲಯೋಗಿ ಒಕ್ಕಲಿಗ ಮುದ್ದಣ್ಣನವರು ಗೌರವ ಸಲ್ಲಿಸುತ್ತಾರೆ. ಕೃಷಿಕನ ಜೀವನ ಮತ್ತು ಪರಿಶ್ರಮವೇ ಸಮಾಜದ ಆಧಾರವೆಂಬ ಸಂದೇಶ ಇದರಲ್ಲಿ ಅಡಗಿದೆ. ಈ ವಚನಗಳ ಮೂಲಕ ಶರಣರು ಅವರು ಕೃಷಿಯನ್ನು ಕೇವಲ ಜೀವನೋಪಾಯವಾಗಿ ನೋಡದೆ, ಶ್ರಮ, ಸತ್ಯ, ಆತ್ಮಶುದ್ಧಿ ಮತ್ತು ಸಮಾನತೆಯ ಸಂಕೇತವಾಗಿ ಚಿತ್ರಿಸಿದ್ದಾರೆ.
ಶ್ರಮದ ಮೂಲಕ ಮುಕ್ತಿ “ಉಳುವ ಕೈಗಳು ದೇವರ ಕೈಗಳಂತೆ”. ಕೃಷಿಕನ ಕೈಗಳನ್ನು ದೇವರ ಕೈಗಳಿಗೆ ಹೋಲಿಸುವ ಮೂಲಕ ರೈತನ ಶ್ರಮದ ಪಾವಿತ್ರ‍್ಯವನ್ನು ಬಸವಾದಿ ಶರಣರು ಎತ್ತಿಹಿಡಿದಿದ್ದಾರೆ. ಭಕ್ತಿಯೆಂಬ ಭೂಮಿಯಲಿ ಜ್ಞಾನವೆಂಬ ಬೀಜ ಬಿತ್ತಿದರೆ ಸತ್ಯವೆಂಬ ಬೆಳೆ ಬೆಳೆಯುವುದು. ಇಲ್ಲಿ ಭಕ್ತಿ, ಜ್ಞಾನ ಮತ್ತು ಸತ್ಯವನ್ನು ಕೃಷಿಯ ಹಂತಗಳೊಂದಿಗೆ ಜೋಡಿಸಿ ಆಧ್ಯಾತ್ಮಿಕ ಬೆಳವಣಿಗೆಯನ್ನು ವಿವರಿಸಲಾಗಿದ್ದು, “ಕಾಯಕವ ಮಾಡದೆ ಭಿಕ್ಷೆ ಬೇಡುವವನಿಗಿಂತ ಉಳುವ ರೈತನೇ ಶ್ರೇಷ್ಠ.” ಈ ವಚನದಲ್ಲಿ ಬಸವಣ್ಣರು ಕೃಷಿಯನ್ನು ಅತ್ಯುನ್ನತ ಕಾಯಕವೆಂದು ಗೌರವಿಸುತ್ತಾರೆ. ದುಡಿಯುವ ಜೀವನವೇ ಶ್ರೇಷ್ಠ ಎಂಬ ಸಂದೇಶ ಇದರಲ್ಲಿ ಇದೆ.
ಕೃಷಿ ಕೃತ್ಯ ಕಾಯಕದಿಂದ ಆದೊಡೆನು?
ತನು ಮನ ಬಳಲಸಿ ತಂದು ದಾಸೋಹವ ಮಾಡಯ್ಯ
ಪರಮ ಸದ್ಭಕ್ತನ ಪಾದವ ತೋರಯ್ಯ
ಅದೆಂತನೆ ಆತನ ತನು ಶುದ್ಧ ಮನ ಶುದ್ಧ
ಆತನ ನಡೆ ಶುದ್ಧ ನುಡಿ ಎಲ್ಲವೂ ಪಾವನವು
ಅಂತಪ್ಪ ಶದ್ಭಕ್ತನ ಮನೆಯೆ ಕೈಲಾಸವೆಂದು
ಹೊಕ್ಕು ಲಿಂಗಾರ್ಚನೆ ಮಾಡುವ ಜಂಗಮನ ಜಗತ್ಪಾವನ
ಇಂತಿಪ್ಪವರ ನಾನು ನೆರೆನೆಂಬೆ ನಮೊ ನಮೊ
ಎಂಬೆನಯ್ಯ ಕೂಡಲ ಸಂಗಮ ದೇವಾ.
(https://vachana.taralabalu.in/ಶಿವಶರಣರ ವಚನ ಸಂಪುಟ/ವಚನ ಸಂ. 1157)
(ಬಸವತತ್ವ ರತ್ನಾಕರ/ಚಂದ್ರಶೇಖರಶಾಸ್ತ್ರಿ/1961/ಪುಟ ಸಂ. 339)
ಈ ವಚನದಲ್ಲಿ ಬಸವಣ್ಣನವರು ಕೃಷಿಕನ ಶ್ರಮದ ಮಹತ್ವವನ್ನು ಕೊಂಡಾಡುತ್ತಾರೆ. ಕೃಷಿ ಮಾಡುವ ಸದ್ಭಕ್ತನು ದೇಹದಿಂದಲೂ, ಮನಸ್ಸಿನಿಂದಲೂ ಮತ್ತು ಭಾವದಿಂದಲೂ ಶುದ್ಧನಾಗಿರುತ್ತಾನೆ. ಅವನ ಕೈಯಲ್ಲಿ ಪ್ರಾಮಾಣಿಕ ಕಾಯಕವಿರುತ್ತದೆ, ಬಾಯಲ್ಲಿ ಶಿವನಾಮವಿರುತ್ತದೆ ಮತ್ತು ಹೃದಯದಲ್ಲಿ ದೈವಸ್ಮರಣೆ ಇರುತ್ತದೆ. ಇಂತಹ ವ್ಯಕ್ತಿಯ ಮನೆ ದೇವರ ನೆಲೆ ಸದೃಶ ಎಂದು ಬಸವಣ್ಣನವರು ಹೇಳುತ್ತಾರೆ.
ಕೃಷಿ ಕಾಯಕ ಅತೀ ಶ್ರೇಷ್ಠವಾದದ್ದು, ಮತ್ತು ಕೃಷಿಕರೇ ಶ್ರೇಷ್ಠ ಎಂದು ಹೇಳುತ್ತ, ಕೃಷಿ ಕಾಯಕವ ಮಾಡುವ ಸದ್ಭಕ್ತರ ಪಾದಂಗಳ ತೋರಿಸಿ ಬದುಕಿಸಯ್ಯ, ಆತನ ತನು ಶುದ್ಧ, ಮನ ಶುದ್ಧ ಮತ್ತು ಭಾವ ಶುದ್ಧ, ಆತನ ಮನೆಯಲ್ಲಿ ಲಿಂಗಾರ್ಚನೆ ಮಾಡಿದ ಗುರುಪಾದವ ನೋಡಿ ಬೆರಗಾದೆನೆಯ್ಯ. ಕೃಷಿ ಕಾಯಕದಲ್ಲಿ ತೊಡಗಿರುವ ಸದ್ಭಕ್ತನ ಜೀವನವು ಪವಿತ್ರವಾಗಿರುತ್ತದೆ. ಅವನು ತನ್ನ ಶ್ರಮದಿಂದ ಬದುಕುತ್ತಾನೆ; ಆದ್ದರಿಂದ ಅವನ ದೇಹ, ಮನಸ್ಸು ಮತ್ತು ಭಾವನೆಗಳು ಶುದ್ಧವಾಗಿರುತ್ತವೆ. ಕೃಷಿ ಕೇವಲ ವೃತ್ತಿಯಲ್ಲ, ಅದು ಸಮಾಜಕ್ಕೆ ಅನ್ನವನ್ನು ಒದಗಿಸುವ ಮಹತ್ತರ ಸೇವೆಯಾಗಿದೆ. ಇಂತಹ ರೈತನ ಮನೆ ದೇವರ ವಾಸಸ್ಥಾನದಂತೆ ಗೌರವಕ್ಕೆ ಪಾತ್ರವಾಗಿದೆ.
ಒಟ್ಟಾರೆಯಾಗಿ ವಚನಗಳಲ್ಲಿ ಬಸವಣ್ಣನವರು ಕೃಷಿಯನ್ನು ಕೇವಲ ಆಹಾರ ಉತ್ಪಾದನೆಯ ಸಾಧನವಾಗಿ ಮಾತ್ರವಲ್ಲದೆ, ಆತ್ಮಜ್ಞಾನ, ಪರಿಶ್ರಮ, ನೈತಿಕತೆ ಮತ್ತು ಸಮಾನತೆಯ ಸಂಕೇತವಾಗಿ ಚಿತ್ರಿಸಿದ್ದಾರೆ.
ಏರಡನೇಯದಾಗಿ ವ್ಯೋಮಕಾಯ ಅಲ್ಲಮ ಪ್ರಭುಗಳ ವಚನಗಳಲ್ಲಿ ಕೃಷಿಯ ಉಲ್ಲೇಖವನ್ನು ನೋಡೋಣ.
ತನುವ ತೋಂಟವ ಮಾಡಿ ಮನವ ಗುದ್ದಲಿ ಮಾಡಿ
ಅಗೆದು ಕಳೆದೆನಯ್ಯಾ ಭ್ರಾಂತಿನ ಬೇರ
ಒಡೆದು ಸಂಸಾರದ ಹೆಂಟೆಯ ಬಗಿದು ಬಿತ್ತಿದೆನಯ್ಯಾ ಬ್ರಹ್ಮಬೀಜವ.
ಅಖಂಡಮಂಡಲವೆಂಬ ಬಾವಿ, ಪವನವೆ ರಾಟಾಳ
ಸುಷುಮ್ನನಾಳದಿಂದ ಉದಕವ ತಿದ್ದಿ
ಬಸವಗಳೈವರು ಹಸಗೆಡಿಸಿಹವೆಂದು
ಸಮತೆ ಸೈರಣೆಯೆಂಬ ಬೇಲಿಯನಿಕ್ಕಿ
ಆವಾಗಳೂ ಈ ತೋಂಟದಲ್ಲಿ ಜಾಗರವಿದ್ದು
ಸಸಿಯ ಸಲಹಿದೆನು ಕಾಣಾ ಗುಹೇಶ್ವರಾ.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-454/ವಚನ ಸಂಖ್ಯೆ-1229)
ಕೃಷಿ ಪರಿಸರದ ಪಾರಿಭಾಷಿಕ ಪದಗಳ ಮುಖಾಂತರ ತಮ್ಮ ವಿಚಾರಧಾರೆಯನ್ನು ಪರಿಣಾಮಕಾರಿಯಾಗಿ ವ್ಯಕ್ತಪಡಿಸಲು ಅಲ್ಲಮ ಪ್ರಭುಗಳದು ವಿಶಿಷ್ಟ ಧ್ವನಿ. ಕೃಷಿ ಪರಿಸರ ವ್ಯವಸ್ಥೆ, ಮನುಷ್ಯ ಜೀವನ, ಶರೀರ–ಆತ್ಮವನ್ನು ಒಂದು ನೂಲಿನಲ್ಲಿ ಸಮೀಕರಿಸಿದ, ಮೇಲೆ ಪ್ರಸ್ತಾಪಿಸಿದ ಅವರ ವಚನ ಬಹಳ ಮಾರ್ಮಿಕವಾಗಿದೆ. ಅಲ್ಲಮಪ್ರಭುಗಳು ಗೊಗ್ಗಯ್ಯ ಶರಣರಿಗೆ ಜೀವನ ಸಾಕ್ಷಾತ್ಕಾರದ ಮಾರ್ಗದರ್ಶನ ಮಾಡುತ್ತ ಹೇಳಿದ ವಚನ ಇದಾಗಿದೆ. ದೇಹವೆಂಬ ತೋಟದಲ್ಲಿ ಅಧ್ಯಾತ್ಮದ ಸಸಿಯನ್ನು ನೆಟ್ಟು ಅನುಭಾವದ ಪೈರು ತೆಗೆಯುವ ಪರಿಯನ್ನು ಹೇಳುವ ವಚನ ಮನೋಜ್ಞವಾಗಿದೆ.
ಸಾಧಕ ವ್ಯಕ್ತಿಗಳನ್ನು ಅಂತರಂಗದ ಸಾಧನೆಗೆ ತೊಡಗಿಸುವ ಅಲ್ಲಮರ ರೀತಿ ಅಮೋಘವಾಗಿದೆ. ಕೃಷಿ ಯಾವುದೇ ಪ್ರಮಾಣದಲ್ಲಿರಲಿ ಅದು ನಿಸರ್ಗದ ಪ್ರತಿಕೃತಿಯಾಗಿರುತ್ತದೆ ಎಂಬುದನ್ನು ಈ ವಚನವು ಯಶಸ್ವಿಯಾಗಿ ಹೇಳುತ್ತದೆ. ವ್ಯವಸಾಯದ ಕ್ರಮಗಳನ್ನು ಹೇಳುತ್ತ ಅಲ್ಲಮಪ್ರಭುಗಳು ಮನುಷ್ಯನ ಮನೋಧರ್ಮದಲ್ಲಾಗಬೇಕಾದ ಪರಿವರ್ತನೆಗಳನ್ನು ಪ್ರತಿಪಾದಿಸುತ್ತಿದ್ದಾರೆ. ಭೂಮಿಯನ್ನು ಉಳುಮೆ ಮಾಡುವಂತೆ ಮನಸ್ಸನ್ನು ಸೂಕ್ತ ಉಪಕರಣಗಳಿಂದ ಅಗೆದು, ಹರಗಿ, ಸಮತಟ್ಟು ಮಾಡಿ ಉಳುಮೆ ಮಾಡಬೇಕಾಗಿದೆ. ನಮ್ಮಲ್ಲಿರುವ ಭ್ರಮೆ- ಭ್ರಾಂತಿಯೆಂಬ ಕಳೆಯನ್ನು ಬೇರು ಸಮೇತ ಕಿತ್ತೊಗೆಯಬೇಕಾಗಿದೆ. ಈ ಪ್ರಾಪಂಚಿಕ ಬದುಕೆಂಬುದು ಹೆಂಟೆಗಳ ರಾಶಿಯಿದ್ದಂತೆ; ಅದೂ ಎರೆಭೂಮಿಯನ್ನು ಆಳವಾಗಿ ಊಳಿದಾಗ ಬೀಳುವ ಮಣಭಾರದ ಹೆಂಟೆಗಳು. ಅವುಗಳ ಮೇಲೆ ನಡೆದುಕೊಂಡು ಹೋಗುವ ಪರಿಯನ್ನು ನೆನೆದರೆ ಯಾರಿಗಾದರೂ ಆ ದುರ್ಗಮತೆಯ ಅರಿವು ಬಂದೀತು. ಅಂತಹ ಅಡೆತಡೆಗಳನ್ನು ಒಡೆದು, ಹುಡಿಮಾಡಿ ನೆಲವನ್ನು ಹದಗೊಳಿಸಿ ಬೀಜ ಬಿತ್ತಿದಂತೆ ವೈಚಾರಿಕತೆಯನ್ನು ಬಿತ್ತಬೇಕು; ಮನದಲ್ಲಿ ಜ್ಞಾನವೆಂಬ ಬೀಜವನ್ನು ಬಿತ್ತಬೇಕು. ಬೆಳೆಯ ಸಂದಿಗ್ಧ ಹಂತದಲ್ಲಿ ನೀರನ್ನೊದಗಿಸುವ ಬಾವಿ ಇಡೀ ಭೂಮಂಡಲವನ್ನೇ ವ್ಯಾಪಿಸಿದೆ. ಅದು ನೀರಿನ ಚಕ್ರದಲ್ಲಿ ಒಂದಾಗಿ ಸೇರಿಹೋಗಿದೆ. ಭೂಮಿಗೂ ಆಕಾಶಕ್ಕೂ ಮಧ್ಯದಲ್ಲಿರುವ ವಾತಾವರಣದಾದ್ಯಂತ ಅಣುವಿನ ರೂಪದಲ್ಲಿ ಗಾಳಿಯೊಂದಿಗೆ ಗಾಳಿಯಾಗಿ ಪಸರಿಸಿಕೊಂಡಿದೆ. ಆ ಪವನವೇ ನೀರನ್ನು ಎತ್ತಿಕೊಡುವ ರಾಟಾಳದಂತೆ ಕೆಲಸ ಮಾಡುತ್ತಿದೆ. ಇಡಾ, ಪಿಂಗಳ, ಸುಷುಮ್ನನಾಳದ ಮುಖಾಂತರ ನೀರನ್ನು ಹರಿಸಬೇಕಾಗಿದೆ. ಜೀವ ಜಲವಾದ ನೀರು ತನ್ನಲ್ಲಿ ನಾನಾ ಬಗೆಯ ಸತ್ವಾಂಶಗಳನ್ನು ಅರಗಿಸಿಕೊಂಡು ಪ್ರತಿಹಂತದ ಬೆಳವಣಿಗೆಗೆ ಕಾರಣವಾಗುತ್ತದೆ. ಹೀಗೆ ಹಚ್ಚಹಸುರಾಗಿ ಬೆಳೆದು ನಿಂತ ಬೆಳೆಯನ್ನು ಹೊಕ್ಕು ಮೇಯಲು ಸುತ್ತಮುತ್ತಲ ತುಡುಗುಣಿಗಳು ಕಾಯುತ್ತಿವೆ. ಅವುಗಳಿಂದ ಬೆಳೆಯನ್ನು ರಕ್ಷಿಸಿಕೊಳ್ಳಲು ಸಮತೆ ಸೈರಣೆಗಳೆಂಬ ಬೇಲಿಗಳನ್ನು ಕಟ್ಟಬೇಕಾಗಿದೆ. ಆಂತರಿಕ ಪ್ರಜ್ಞೆಯಾಗಿ ಸದಾಕಾಲ ಇರಬೇಕಾದ ಜಾಗರ-ಜಾಗ್ರತೆಯನ್ನು ಸಸಿಯಂತೆ ಸಲುಹಬೇಕಾಗಿದೆ. ಕೃಷಿ ವ್ಯವಸ್ಥೆ ಮತ್ತು ಮಾನವ ಶರೀರಗಳೆರಡೂ Miniatures of nature ಆಗಿವೆ ಎಂದು ಹೇಳುವ ಅಲ್ಲಮ ಪ್ರಭುಗಳ ಮಾತು ಅರ್ಥಪೂರ್ಣ, ಎಷ್ಟು ಭಾವಪೂರ್ಣ ಮತ್ತು ಎಷ್ಟು ವೈಜ್ಞಾನಿಕ.
ಸಾವಿರದ ಕಮಲದಲ್ಲಿ ತಾನಿಪ್ಪನು,
ಕೆಂದಾವರೆಯ ಪುಷ್ಪದ ನೇಮವೆಂತೊ?
ಪುಷ್ಪ ಮುಟ್ಟಿ ಕೊಯ್ವ ನೇಮವೆಂತೊ?
ಮುಟ್ಟಿದ ಪರಿಮಳವ ಮುಟ್ಟದೆ ಕೊಯ್ದ
ಗುಹೇಶ್ವರಾ_ನಿಮ್ಮ ಶರಣ.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-595/ವಚನ ಸಂಖ್ಯೆ-1559)
ಈ ವಚನದಲ್ಲಿ ಅಲ್ಲಮ ಪ್ರಭು ಅವರು ಭಕ್ತಿಯ ಶುದ್ಧತೆಯನ್ನು ಕಮಲದ ಹೂವಿಗೆ ಹೋಲಿಸಿದ್ದಾರೆ. ಕಮಲವು ಕೆಸರಿನಲ್ಲಿದ್ದರೂ ತನ್ನ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಂತೆ, ಭಕ್ತನು ಲೋಕದಲ್ಲಿದ್ದರೂ ಮನಶುದ್ಧಿಯಿಂದ ಬದುಕಬೇಕು ಎಂಬ ಸಂದೇಶವನ್ನು ನೀಡಲಾಗಿದೆ.
ಅರಿದು ನೆನೆಯಲಿಲ್ಲ, ಮರೆದು ಪೂಜಿಸಲಿಲ್ಲ.
ತೆರಹಿಲ್ಲದ ಘನಕ್ಕೆ ಕುರುಹು ಮುನ್ನಿಲ್ಲ.
ತನಗೆ ಗುರುವಿಲ್ಲ, ಗುರುವಿಗೆ ತಾನಿಲ್ಲ
ಗುರುವಿಗೆ ಶಿಷ್ಯನು ಹೊಡವಡುವ ಕಾರಣ ಮುನ್ನಿಲ್ಲ.
ಬಯಲ ಬಿತ್ತಲಿಲ್ಲ, ಬೆಳೆಯಲಿಲ್ಲ, ಒಕ್ಕಲಿಲ್ಲ, ತೂರಲಿಲ್ಲ,
ಗುಹೇಶ್ವರನೆಂಬ ಲಿಂಗಕ್ಕೆ ಕುರುಹು ಮುನ್ನಿಲ್ಲ.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-196/ವಚನ ಸಂಖ್ಯೆ-635)
ಈ ವಚನದಲ್ಲಿ ನಿಜವಾದ ಭಕ್ತಿ ಮತ್ತು ಜ್ಞಾನವಿಲ್ಲದ ಜೀವನ ವ್ಯರ್ಥವೆಂದು ಹೇಳಲಾಗಿದೆ. ಕೃಷಿಯಲ್ಲಿ ಬೀಜ ಬಿತ್ತದೆ ಬೆಳೆ ಬಾರದಂತೆ, ಆತ್ಮಜ್ಞಾನವಿಲ್ಲದೆ ಜೀವನದಲ್ಲಿ ಸಾರ್ಥಕತೆ ಸಿಗುವುದಿಲ್ಲ ಎಂಬ ಅರ್ಥ ಇದರಲ್ಲಿ ಅಡಗಿದೆ.
ಅಲ್ಲಮಪ್ರಭುಗಳು ಸಸ್ಯಗಳ ಜೈವಿಕ ವೈಶಿಷ್ಠ್ಯತೆ ಹಾಗೂ ಅವುಗಳಲ್ಲಿನ ನೀರು ಮತ್ತು ಪೋಷಕಾಂಶಗಳ ವಿಶ್ಲೇಷಣೆ ಮಾಡುತ್ತ:
ಪರಮಜ್ಞಾನವೆಂಬ ಸಸಿಗೆ,
ಗುರುಭಕ್ತಿ ಎಂಬ ಭೂಮಿಯ
ಮಣ್ಣ ತಂದು ಪಾತೆಯ ಕಟ್ಟಿದೆ.
ಲಿಂಗಭಕ್ತಿ ಎಂಬ ಗೊಬ್ಬರವ ತುಂಬಿದೆ.
ಜಂಗಮಭಕ್ತಿ ಎಂಬ ಪರಮಾನಂದದ ಜಲವ ನೀಡಿದೆ.
ಇಂತಿವರಿಂದ, ಭಕ್ತಿವೃಕ್ಷ ಫಲವ ಧರಿಸೆ
ಗುಹೇಶ್ವರಲಿಂಗದಲ್ಲಿ ಮುಕ್ತನಾದೆನು
ಕಾಣಾ ಸಂಗನಬಸವಣ್ಣಾ.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-492/ವಚನ ಸಂಖ್ಯೆ-1328)
ಹೇಗೆ ಒಂದು ಸಸಿ ಉತ್ತಮ ಮಣ್ಣು, ಗೊಬ್ಬರ ಮತ್ತು ನೀರಿನಿಂದ ಬೆಳೆದು ಫಲ ಕೊಡುತ್ತದೆಯೋ, ಹಾಗೆಯೇ ಆತ್ಮಜ್ಞಾನವೂ ಗುರು, ಲಿಂಗ ಮತ್ತು ಜಂಗಮ ಭಕ್ತಿಯಿಂದ ಬೆಳೆಯುತ್ತದೆ. ಆಗ ಭಕ್ತಿವೃಕ್ಷವು ಫಲ ನೀಡುತ್ತದೆ; ಅಂತಿಮವಾಗಿ ಮೋಕ್ಷ ದೊರೆಯುತ್ತದೆ.
ಹೈನೋದ್ಯಮದ ಬಗ್ಗೆ ಅಲ್ಲಮ ಪ್ರಭುಗಳು ವಿಶ್ಲೇಷಣೆ ಮಾಡುತ್ತ:
ಮಾನವ ತೋರಿಹ ಆವಿಂಗೆ ಕೊಳಗದ ತೋರಿಹ ಕೆಚ್ಚಲು.
ತಾಳುದ್ದವೆರಡು ಕೋಡು ನೋಡಾ!
ಆದನರಸ ಹೋಗಿ ಆರುದಿನ, ಅದು ಕೆಟ್ಟು ಮೂರುದಿನ!
ಅಘಟಿತ ಘಟಿತ ಗುಹೇಶ್ವರಾ, ಅರಸುವ ಬಾರೈ.
(ಸಮಗ್ರ ವಚನ ಸಂಪುಟ: ಎರಡು-2016/ಪುಟ ಸಂಖ್ಯೆ-142/ವಚನ ಸಂಖ್ಯೆ-48)
ಈ ವಚನದಲ್ಲಿ ಅಲ್ಲಮಪ್ರಭುಗಳು ಹಾಲು, ಆವು ಮತ್ತು ಅದರ ಉತ್ಪನ್ನಗಳ ಉದಾಹರಣೆಯನ್ನು ಬಳಸಿ ಜೀವನದ ಅನಿತ್ಯತೆಯನ್ನು ವಿವರಿಸುತ್ತಾರೆ. ಹಾಲು ಕೆಲವೇ ದಿನಗಳಲ್ಲಿ ಹಾಳಾಗುತ್ತದೆ. ದೇಹವೂ ಹಾಗೆಯೇ ನಶ್ವರ. ಮನುಷ್ಯನು ತನ್ನ ದೇಹದ ಶಾಶ್ವತತೆಯ ಬಗ್ಗೆ ಅಹಂಕಾರ ಪಡದೆ, ಜೀವನದ ನಿಜ ಉದ್ದೇಶವಾದ ದೈವಾನುಭವವನ್ನು ಅರಸಬೇಕು.
ಬಿತ್ತಿ ಬೆಳೆಯುವ ರೈತನ ಮನೆಯಲ್ಲಿಯೇ ಊಟಕ್ಕಾಗಿ ಭತ್ತ ದೊರೆಯದಿದ್ದರೆ, ಅಂತಹ ವ್ಯವಸಾಯವ ಮಾಡುವ ಘೋರವಾದರೂ ಏಕೆ? ತನ್ನ ಕುಟುಂಬ ಜನ ಜಾನುವಾರುಗಳ ಬೇಡಿಕೆ ಪೂರೈಸಲು ನಮ್ಮ ಪೂರ್ವಜರು ಮಾಡುತ್ತಿದ್ದುದು, ಪರಿಸರ ಸ್ನೇಹಿ ಸುಸ್ಥಿರ ಮಾದರಿಯ ಕೃಷಿ. ಅಂದು ಬಿತ್ತುವುದು ಬೆಳೆಯುವದು ಅವನಿಗೆ ಜೀವನ ವಿಧಾನವಾಗಿತ್ತು. ಹಾಗಾಗಿ ರೈತನ ಮನೆಯಲ್ಲಿ ಉಣ್ಣುವ ಧಾನ್ಯವೂ ಇರುತ್ತಿತ್ತು. ಮೇಯುವ ಸೊಪ್ಪೆಯೂ ಇರುತ್ತಿತ್ತು. ಹಾಲು ಹೈನು ವರ್ಷಪೂರ್ತಿ ತೊಟ್ಟಿಕ್ಕುತ್ತಿತ್ತು.
ಕೊನೆಯದಾಗಿ ಆಧುನಿಕ ಕೃಷಿ ಸಾಗುತ್ತಿರುವ ದಾರಿಯ ದಿಕ್ಕು ದೆಸೆ ತಿಳಿಯಬೇಕಾದರೆ ಅಲ್ಲಮ ಪ್ರಭುಗಳ ವಚನವನ್ನು ಗಮನಿಸಬೇಕು.
ಬೆವಸಾಯವ ಮಾಡಿ ಮನೆಯ
ಬೀಯಕ್ಕೆ ಬತ್ತವಿಲ್ಲದಿರ್ದಡೆ,
ಆ ಬೆವಸಾಯದ ಘೋರವೇತಕ್ಕಯ್ಯಾ?
ಕ್ರಯವಿಕ್ರಯವ ಮಾಡಿ ಮನೆಯ ಸಂಚ ನಡೆಯದನ್ನಕ್ಕ
ಆ ಕ್ರಯವಿಕ್ರಯದ ಘೋರವೇತಕ್ಕಯ್ಯಾ?
ಒಡೆಯನನೋಲೈಸಿ ತನುವಿಂಗೆ
ಅಷ್ಟಭೋಗವ ಪಡೆಯದಿರ್ದಡೆ
ಆ ಓಲಗದ ಘೋರವೇತಕ್ಕಯ್ಯಾ?
ಭಕ್ತನಾಗಿ ಭವಂ ನಾಸ್ತಿಯಾಗದಿರ್ದಡೆ,
ಆ ಉಪದೇಶವ ಕೊಟ್ಟ ಗುರು, ಕೊಂಡ ಶಿಷ್ಯ_
ಇವರಿಬ್ಬರ ಮನೆಯಲ್ಲಿ ಮಾರಿ ಹೊಗಲಿ,
ಗುಹೇಶ್ವರನೆಂಬವನತ್ತಲೆ ಹೋಗಲಿ.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-27/ವಚನ ಸಂಖ್ಯೆ-65)
ಮೂರನೇಯದಾಗಿ ವೈರಾಗ್ಯನಿಧಿ ಅಕ್ಕಮಹಾದೇವಿಯವರ ವಚನಗಳಲ್ಲಿ ಕೃಷಿಯ ಉಲ್ಲೇಖವನ್ನು ನೋಡೋಣ.
ವೈರಾಗ್ಯನಿಧಿ ಅಕ್ಕಮಹಾದೇವಿಯವರ ಪ್ರಕೃತಿ ಸಂಬಂಧಿತ ವಚನದಲ್ಲಿ
ಸಂಗದಿಂದಲ್ಲದೆ ಅಗ್ನಿ ಹುಟ್ಟದು,
ಸಂಗದಿಂದಲ್ಲದೆ ಬೀಜ ಮೊಳೆದೋರದು,
ಸಂಗದಿಂದಲ್ಲದೆ ಹೂವಾಗದು.
ಸಂಗದಿಂದಲ್ಲದೆ ಸರ್ವಸುಖದೋರದು.
ಚೆನ್ನಮಲ್ಲಿಕಾರ್ಜುನಯ್ಯಾ,
ನಿಮ್ಮ ಮಹಾನುಭಾವಿಗಳ ಸಂಗದಿಂದಲಾನು
ಪರಮಸುಖಿಯಾದೆನಯ್ಯಾ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-134/ವಚನ ಸಂಖ್ಯೆ-377)
ಈಳೆ ನಿಂಬೆ ಮಾವು ಮಾದಲಕೆ
ಹುಳಿನೀರನೆರೆದವರಾರಯ್ಯಾ?
ಕಬ್ಬು ಬಾಳೆ ಹಲಸು ನಾರಿವಾಳಕ್ಕೆ
ಸಿಹಿನೀರನೆರೆದವರಾರಯ್ಯಾ?
ಕಳವೆ ರಾಜಾನ್ನ ಶಾಲ್ಯನ್ನಕ್ಕೆ
ಓಗರದ ಉದಕವನೆರೆದವರಾರಯ್ಯಾ?
ಮರುಗ ಮಲ್ಲಿಗೆ ಪಚ್ಚೆ ಮುಡಿವಾಳಕ್ಕೆ
ಪರಿಮಳದುದಕವನೆರೆದವರಾರಯ್ಯಾ?
ಇಂತೀ ಜಲವು ಒಂದೆ,
ನೆಲನು ಒಂದೆ, ಆಕಾಶವು ಒಂದೆ.
ಜಲವು ಹಲವು ದ್ರವ್ಯಂಗಳ ಕೂಡಿ
ತನ್ನ ಪರಿಬೇರಾಗಿಹ ಹಾಗೆ,
ಎನ್ನದೇವ ಚೆನ್ನಮಲ್ಲಿಕಾರ್ಜುನಯ್ಯನು
ಹಲವು ಜಗಂಗಳ ಕೂಡಿಕೊಂಡಿರ್ದಡೇನು?
ತನ್ನ ಪರಿ ಬೇರೆ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-33/ವಚನ ಸಂಖ್ಯೆ-75)
ಪುಷ್ಪ ಕೃಷಿಯಲ್ಲಿ ಆರೋಗ್ಯಕರ ಉಸಿರಿನ ಅಗತ್ಯತೆಯ ವಿಶ್ಲೇಷಣೆಯನ್ನು ಮಾಡುತ್ತ ವೈರಾಗ್ಯನಿಧಿ ಅಕ್ಕಮಹಾದೇವಿಯವರು, ಹೀಗೆ ಬರೆಯುತ್ತಾರೆ:
ಉಸುರಿನ ಪರಿಮಳವಿರಲು
ಕುಸುಮದ ಹಂಗೇಕಯ್ಯಾ?
ಕ್ಷಮೆ ದಮೆ ಶಾಂತಿ ಸೈರಣೆಯಿರಲು
ಸಮಾಧಿಯ ಹಂಗೇಕಯ್ಯಾ?
ಲೋಕವೆ ತಾನಾದ ಬಳಿಕ
ಏಕಾಂತದ ಹಂಗೇಕಯ್ಯಾ ಚೆನ್ನಮಲ್ಲಿಕಾರ್ಜುನಾ ?
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-36/ವಚನ ಸಂಖ್ಯೆ-84)
ಶಿವಶರಣೆ ಅಕ್ಕಮಹಾದೇವಿಯವರು ಅರಣ್ಯಶಾಸ್ತ್ರದ ಶ್ರೀಗಂಧ ಮತ್ತು ಕಬ್ಬಿನ ಬೆಳೆಯನ್ನು ಸಂಕೇತವನ್ನಿಟ್ಟ್ಟುಕೊಂಡು, ಎಷ್ಟೇ ಕಷ್ಟ ಬಂದರೂ ನಾ ನಿಮ್ಮ ಜಪವನ್ನು ಬಿಡಲಾರೆ ಎಂದು ಹೇಳುತ್ತ:
ಚಂದನವ ಕಡಿದು ಕೊರೆದು ತೇದಡೆ
ನೊಂದೆನೆಂದು ಕಂಪ ಬಿಟ್ಟಿತ್ತೆ?
ತಂದು ಸುವರ್ಣವ ಕಡಿದೊರೆದಡೆ
ಬೆಂದು ಕಳಂಕ ಹಿಡಿಯಿತ್ತೆ?
ಸಂದುಸಂದು ಕಡಿದ ಕಬ್ಬನು
ತಂದು ಗಾಣದಲ್ಲಿಕ್ಕಿ ಅರೆದಡೆ,
ಬೆಂದು ಪಾಕಗುಡದೆ ಸಕ್ಕರೆಯಾಗಿ
ನೊಂದೆನೆಂದು ಸಿಹಿಯ ಬಿಟ್ಟಿತ್ತೆ?
ನಾ ಹಿಂದೆ ಮಾಡಿದ ಹೀನಂಗಳೆಲ್ಲವ
ತಂದು ಮುಂದಿಳುಹಲು ನಿಮಗೇ ಹಾನಿ.
ಎನ್ನ ತಂದೆ ಚೆನ್ನಮಲ್ಲಿಕಾರ್ಜುನಯ್ಯಾ,
ನೀ ಕೊಂದಡೆಯೂ ಶರಣೆಂಬುದ ಮಾಣೆ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-70/ವಚನ ಸಂಖ್ಯೆ-199)
ಅಕ್ಕ ಈ ಮೂರು ದೃಷ್ಟಾಂತಗಳನ್ನು ತನ್ನ ವೈಯಕ್ತಿಕ ಬದುಕಿಗೆ ಅನ್ವಯಿಸಿಕೊಂಡು, ಚಂದನವು ಹಲವು ರೀತಿಯ ಪ್ರಕ್ರಿಯೆಗಳಿಗೆ ಒಳಗಾದರೂ ಕೂಡ ಪರಿಮಳಯುಕ್ತವಾದ ಗಂಧವನ್ನೂ, ಚಿನ್ನ ಹಲವು ವಿಧಧ ಪ್ರಕ್ರಿಯೆಗಳನ್ನು ದಾಟಿದರೂ ಸುಂದರವಾದ ಆಭರಣವನ್ನೂ, ಕಬ್ಬು ಹಲವು ಪ್ರಕ್ರಿಯೆಗಳಿಗೆ ಒಳಗಾದರೂ ಕೂಡ ಸವಿಯಾದ ಸಕ್ಕರೆಯನ್ನು ನೀಡುವಂತೆ ತನ್ನ ವೈಯಕ್ತಿಕ ಬದುಕಿನಲ್ಲಿ ಹತ್ತಾರು, ನೂರಾರು ಕಷ್ಟ-ನಷ್ಟಗಳನ್ನು, ಹಿಂಸೆ-ಅವಮಾನಗಳನ್ನು ಎದುರಿಸಿ ತನ್ನೆಲ್ಲ ನ್ಯೂನತೆಗಳನ್ನು ಕಳೆದುಕೊಂಡಿದ್ದೇನೆ ಎನ್ನುವ ಈ ಸ್ಥಿತಿಯಲ್ಲಿ ನಾನು ಹಿಂದೆ ಮಾಡಿದ ಹೀನಕಾರ್ಯಗಳೆಲ್ಲವನ್ನೂ ಈಗ ಪರಿಗಣಿಸಿದರೆ ಅದು ಭಗವಂತನಿಗೆ ಹಾನಿ ಎನಿಸಿಕೊಳ್ಳುತ್ತದೆ. ತುಂಡರಿಸಿ ತೇದ ಚಂದನ, ಕಡಿದು ಒರೆದ ಸುವರ್ಣ, ತುಂಡರಿಸಿ ಅರೆದ ಕಬ್ಬು ಹೇಗೆ ತ್ಯಾಜ್ಯವಲ್ಲವೋ ಹಾಗೆಯೇ ತನ್ನೆಲ್ಲ ನ್ಯೂನತೆಗಳನ್ನು ಕಳೆದುಕೊಂಡು ಪುಟಗೊಂಡಿರುವ ತಾನು ಹೇಗೆ ಚೆನ್ನಮಲ್ಲಿಕಾರ್ಜುನನಿಂದ ಹೇಗೆ ನಿರಾಕೃತಗೊಂಡೇನು. ಅದು ಚೆನ್ನಮಲ್ಲಿಕಾರ್ಜುನನಿಗೆ ಶೋಭೆ ಎನಿಸದೆ, ಹಾನಿ ಎನಿಸಿಕೊಳ್ಳುತ್ತದೆ. ಒಂದು ವೇಳೆ ಚೆನ್ನಮಲ್ಲಿಕಾರ್ಜುನ ತನ್ನನ್ನು ನಿರಾಕರಿಸಿ ತನ್ನನ್ನು ಕೊಂದರೂ ತಾನು ಮಾತ್ರ ನಿರಂತರ ಆತನಿಗೆ ಶರಣಾಗಿಯೇ ಇರುತ್ತೇನೆ ಎಂದು ವೈರಾಗ್ಯನಿಧಿ ಅಕ್ಕಮಹಾದೇವಿಯವರು ಸ್ಪಷ್ಟಪಡಿಸುತ್ತಾರೆ.
ಅರಿಯದವರೊಡನೆ ಸಂಗವ ಮಾಡಿದಡೆ
ಕಲ್ಲ ಹೊಯ್ದು ಕಿಡಿಯ ತೆಗೆದುಕೊಂಬಂತೆ.
ಬಲ್ಲವರೊಡನೆ ಸಂಗವ ಮಾಡಿದಡೆ
ಮೊಸರ ಹೊಸೆದು ಬೆಣ್ಣೆಯ ತೆಗೆದುಕೊಂಬಂತೆ.
ಚೆನ್ನಮಲ್ಲಿಕಾರ್ಜುನಯ್ಯಾ,
ನಿಮ್ಮ ಶರಣರ ಸಂಗವ ಮಾಡಿದಡೆ
ಕರ್ಪುರದ ಗಿರಿಯನುರಿಕೊಂಬಂತೆ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-19/ವಚನ ಸಂಖ್ಯೆ-42)
ಅರಿಯದವರೊಡನೆ ಮಾಡುವ ಸಂಗವು ಕಲ್ಲನ್ನು ಹೊಡೆದು ಬೆಂಕಿಕಿಡಿಯನ್ನು ಪಡೆದಂತೆ. ಈ ಪ್ರಕ್ರಿಯೆಯಲ್ಲಿ ಹುಟ್ಟಿಕೊಂಡ ಬೆಂಕಿಕಿಡಿಯು ಎಲ್ಲವನ್ನೂ ಸುಟ್ಟುಬಿಡಬಹುದು, ಅಥವಾ ನಾಶಕ್ಕೆ ಕಾರಣವಾಗಬಹುದು. ಆದರೆ, ಬಲ್ಲವರೊಡನೆ ಮಾಡುವ ಸಂಗವು ಮೊಸರನ್ನು ಕಡೆದು ಬೆಣ್ಣೆಯನ್ನು ತೆಗೆದುಕೊಂಡಂತೆ. ಈ ಪ್ರಕ್ರಿಯೆಯಲ್ಲಿ ಹುಟ್ಟಿಕೊಂಡ ಬೆಣ್ಣೆಯಾಗಲೀ ಮಜ್ಜಿಗೆಯಾಗಲೀ ದೇಹದ ಆರೋಗ್ಯಕ್ಕೆ ಕೆಡುಕಾಗದೆ ಪೂರಕವಾಗುತ್ತದೆ. ಅವು ಮನುಷ್ಯನ ಆರೋಗ್ಯವನ್ನು ವೃದ್ಧಿಸುವಂತಹವು. ಹಾಗಾಗಿ ಅರಿಯದವರ ಸಂಗಕ್ಕಿಂತ ಬಲ್ಲವರ ಸಂಗವೇ ಹೆಚ್ಚು ಶ್ರೇಯಸ್ಕರ. ಕರ್ಪುರಗಿರಿಗೆ ಬೆಂಕಿ ಹತ್ತಿಕೊಂಡರೆ ಅಲ್ಲಿ ಯಾವ ವಸ್ತುವೂ ಉಳಿಯುವುದಿಲ್ಲ. ಎಲ್ಲವೂ ಬೆಂಕಿಯಲ್ಲಿ ಲೀನವಾಗುತ್ತದೆ. ಹಾಗಾಗಿ ಶರಣರು ಚೆನ್ನಮಲ್ಲಿಕಾರ್ಜುನನ ಸಂಗವನ್ನು ಮಾಡಿದರೆ ಅಂತಹವರು ಚೆನ್ನಮಲ್ಲಿಕಾರ್ಜುನನಲ್ಲಿ ಲೀನವಾಗುತ್ತಾರೆ. ಅವರಿಗೆ ಮೋಕ್ಷ ದೊರೆಯುತ್ತದೆಯೇ ವಿನಃ ಮತ್ತೆ ಮತ್ತೆ ಮನುಷ್ಯ ಜನ್ಮದಲ್ಲಿ ಹುಟ್ಟಿಬರುವ ಜಂಜಾಟವಿರುವುದಿಲ್ಲ ಎಂದು ಸ್ಪಷ್ಟಪಡಿಸುತ್ತಾರೆ.
ಮರವಿದ್ದು ಫಲವೇನು ನೆಳಲಿಲ್ಲದನ್ನಕ್ಕ?
ಧನವಿದ್ದು ಫಲವೇನು ದಯವಿಲ್ಲದನ್ನಕ್ಕ?
ಹಸುವಿದ್ದು ಫಲವೇನು ಹಯನಿಲ್ಲದನ್ನಕ್ಕ?
ರೂಪಿದ್ದು ಫಲವೇನು ಗುಣವಿಲ್ಲದನ್ನಕ್ಕ?
ಅಗಲಿದ್ದು ಫಲವೇನು ಬಾನವಿಲ್ಲದನ್ನಕ್ಕ?
ನಾನಿದ್ದು ಫಲವೇನು ನಿಮ್ಮ ಜ್ಞಾನವಿಲ್ಲದನ್ನಕ್ಕ
ಚೆನ್ನಮಲ್ಲಿಕಾರ್ಜುನಾ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-114/ವಚನ ಸಂಖ್ಯೆ-325)
ಮೊದಲನೇಯದ್ದು ನೆರಳನ್ನು, ಹಣ್ಣುಹಂಪಲುಗಳನ್ನು, ಪ್ರಾಣವಾಯುವನ್ನು ನೀಡುವುದು ಪ್ರತಿಯೊಂದು ಮರದ ಮೂಲಭೂತಗುಣ. ಆ ನೆರಳು ಪಕ್ಷಿಗಳಿಗೆ, ಪ್ರಾಣಿಗಳಿಗೆ, ಮನುಷ್ಯರಿಗೆ ಆಶ್ರಯತಾಣ. ನೆರಳನ್ನೇ ನೀಡದ ಮರದಿಂದ ಪ್ರಯೋಜನವಾದರೂ ಏನು? ಎರಡನೇಯದ್ದು ದಯೆ ಮನುಷ್ಯನಲ್ಲಿ ಇರಲೇಬೇಕಾದ ಒಂದು ಮೌಲ್ಯ. ಅದು ಸಹಬಾಳ್ವೆಗೆ, ಸಾಮರಸ್ಯಕ್ಕೆ ಮೂಲ. ದಯೆಯೇ ಇಲ್ಲದ ಮನುಷ್ಯನಲ್ಲಿ ಎಷ್ಟು ಹಣವಿದ್ದರೂ ಅದು ಆತನ ನಿರ್ದಯತೆಯಿಂದಾಗಿ ಮಹತ್ವವನ್ನು ಕಳೆದುಕೊಳ್ಳುತ್ತದೆ. ಮೂರನೇಯದ್ದು ಈಯುವುದು ಮತ್ತು ಹಾಲು ಕೊಡುವುದು ಹಸುವಿನ ಮೂಲಭೂತಗುಣ. ಅದು ತನ್ನ ಜೀವಿತಾವಧಿಯನ್ನು ಹಾಲುಕೊಡುವುದರ ಮೂಲಕ ಸಾರ್ಥಕಗೊಳಿಸುತ್ತದೆ. ಆದರೆ ಈಯದ, ಹಾಲು ಕೊಡದ ಹಸುವಿನಿಂದ ಪ್ರಯೋಜನವಾದರೂ ಏನು? ನಾಲ್ಕನೇಯದ್ದು ರೂಪ. ಮನುಷ್ಯನಾಗಿ ಹುಟ್ಟಿದವನಿಗೆ ಸುಂದರ ರೂಪವಿದ್ದು ನೋಡುವವರೆಲ್ಲರಿಗೂ ಖುಷಿಯೆನಿಸಬೇಕು ಎನ್ನುವುದು ಎಲ್ಲರ ನಿರೀಕ್ಷೆ ಕೂಡಾ. ರೂಪಕ್ಕೆ ಅನುರೂಪವಾದ ಗುಣಗಳನ್ನು ಮನುಷ್ಯನಲ್ಲಿ ನಿರೀಕ್ಷಿಸುವುದು ತಪ್ಪಲ್ಲ. ರೂಪಕ್ಕೆ ಅನುರೂಪವಾದ ಗುಣಗಳಿದ್ದರೆ ಆತನ ರೂಪಕ್ಕೆ ಇನ್ನಷ್ಟು ಮಹತ್ವ, ಗೌರವ. ಐದನೇಯದ್ದು ಊಟದ ಬಟ್ಟಲು. ಊಟದ ವ್ಯಂಜನಗಳನ್ನು ತನ್ನೊಳಗೆ ಇರಿಸಿಕೊಂಡು ಮನುಷ್ಯನನ್ನು ತೃಪ್ತಿಪಡಿಸಲು ಬಟ್ಟಲು ಪ್ರಶಸ್ತವಾಗಿದ್ದರೂ ಉಣ್ಣುವುದಕ್ಕೆ ಅನ್ನವಾಗಲೀ ಪಲ್ಯಗಳಾಗಲೀ ಇಲ್ಲದಿದ್ದರೆ ಏನು ಪ್ರಯೋಜನ? ಬಟ್ಟಲನ್ನು ನೋಡಿದ ತಕ್ಷಣ ಹಸಿವೆ ತೀರಲು ಸಾಧ್ಯವೇ?
ಈ ಐದು ದೃಷ್ಟಾಂತಗಳ ಮೂಲಕ ವೈರಾಗ್ಯನಿಧಿ ಅಕ್ಕಮಹಾದೇವಿಯವರು ಚೆನ್ನಮಲ್ಲಿಕಾರ್ಜುನನ ಜ್ಞಾನವಿಲ್ಲದಿದ್ದರೆ ತಾನು ಬದುಕಿದ್ದೂ ಪ್ರಯೋಜನವೇನು? ಎಂದು ತನ್ನನ್ನೇ ಪ್ರಶ್ನಿಸಿಕೊಳ್ಳುತ್ತಾರೆ. “ವ್ಯಕ್ತಿಯೊಬ್ಬ ನೆರಳನ್ನೀಯುವ ಮರವಾಗಿ, ದಯಾಮಯನಾದ ಸಿರಿವಂತನಾಗಿ, ಹಾಲನ್ನೀಯುವ ಹಸುವಾಗಿ, ಗುಣವುಳ್ಳ ರೂಪವಂತನಾಗಿ, ಅನ್ನವನ್ನು ತುಂಬಿರುವ ಬಟ್ಟಲಾಗಿ, ಭಗವಂತನ ಜ್ಞಾನವುಳ್ಳ ಭಕ್ತನೆನಿಸಿಕೊಳ್ಳಬೇಕು” ಎಂಬುದು ಅವರ ನಿಲುವು. ಮೇಲ್ನೋಟಕ್ಕೆ ಇದು ವೈರಾಗ್ಯನಿಧಿ ಅಕ್ಕಮಹಾದೇವಿಯವಎ ಆತ್ಮವಿಮರ್ಶೆಯ ವಚನದಂತೆ ಕಂಡರೂ ಸಮಷ್ಠಿಯ ಆತ್ಮವಿಮರ್ಶೆಗೂ ಒದಗಬಹುದಾದ ವಚನ.
ಉದಯಾಸ್ತಮಾನವೆಂಬೆರಡು ಕೊಳಗದಲ್ಲಿ,
ಆಯುಷ್ಯವೆಂಬ ರಾಶಿ ಅಳೆದು ತೀರದ ಮುನ್ನ
ಶಿವನ ನೆನೆಯಿರೆ! ಶಿವನ ನೆನೆಯಿರೆ! ಈ ಜನ್ಮ ಬಳಿಕಿಲ್ಲ.
ಚೆನ್ನಮಲ್ಲಿಕಾರ್ಜುನದೇವರದೇವನ ನೆನೆದು
ಪಂಚಮಹಾಪಾತಕರೆಲ್ಲರು ಮುಕ್ತಿವಡೆದರಂದು.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-35/ವಚನ ಸಂಖ್ಯೆ-80)
ಮಾನವನ ಜೀವನವು ಅತಿ ಕ್ಷಣಿಕ. ಆಯುಷ್ಯ ಮುಗಿಯುವ ಮೊದಲು ಶಿವನನ್ನು (ಪರಮಾತ್ಮನನ್ನು) ಸ್ಮರಿಸಬೇಕು. ಈ ಜನ್ಮ ಶಾಶ್ವತವಲ್ಲ. ದೇವರ ಭಕ್ತಿ ಮತ್ತು ಸ್ಮರಣೆಯಿಂದ ಮಹಾಪಾಪಿಗಳೂ ಸಹ ಮೋಕ್ಷವನ್ನು ಪಡೆದಿದ್ದಾರೆ. ಆದ್ದರಿಂದ ಜೀವನದ ನಿಜ ಉದ್ದೇಶ ಆತ್ಮೋನ್ನತಿ ಮತ್ತು ದೈವಸ್ಮರಣೆ.
ಒಡಲ ಕಳವಳಕ್ಕಾಗಿ ಅಡವಿಯ ಪೊಕ್ಕೆನು.
ಗಿಡುಗಿಡುದಪ್ಪದೆ ಬೇಡಿದೆನೆನ್ನಂಗಕ್ಕೆಂದು.
ಅವು ನೀಡಿದವು ತಮ್ಮ ಲಿಂಗಕ್ಕೆಂದು.
ಆನು ಬೇಡಿ ಭವಿಯಾದೆನು; ಅವು ನೀಡಿ ಭಕ್ತರಾದವು.
ಇನ್ನು ಬೇಡಿದೆನಾದಡೆ
ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮಾಣೆ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-46/ವಚನ ಸಂಖ್ಯೆ-120)
ವೈರಾಗ್ಯನೀಧಿ ಅಕ್ಕಮಹಾದೇವಿಯವರು ಹೇಳುವುದು; ನಾನು ಲೋಕದ ಸುಖ, ಸಂಪತ್ತು, ಭೋಗಗಳಿಗಾಗಿ ಯಾರ ಬಳಿಯೂ ಯಾಚಿಸಲಿಲ್ಲ. ಪ್ರಕೃತಿಯಲ್ಲಿರುವ ಪ್ರತಿಯೊಂದೂ ತನ್ನ ಸ್ವಭಾವಕ್ಕೆ ತಕ್ಕಂತೆ ಫಲ ನೀಡುತ್ತದೆ. ನಾನು ಕೇಳುವುದು ಕೇವಲ ಚೆನ್ನಮಲ್ಲಿಕಾರ್ಜುನನ ಕೃಪೆ ಮತ್ತು ಸಾನ್ನಿಧ್ಯ ಮಾತ್ರ.
ಕದಳಿ ಎಂಬುದು ತನು, ಕದಳಿ ಎಂಬುದು ಮನ,
ಕದಳಿ ಎಂಬುದು ವಿಷಯಂಗಳು.
ಕದಳಿ ಎಂಬುದು ಭವಘೋರಾರಣ್ಯ.
ಈ ಕದಳಿ ಎಂಬುದ ಗೆದ್ದು ತವೆ ಬದುಕಿ ಬಂದು
ಕದಳಿಯ ಬನದಲ್ಲಿ ಭವಹರನ ಕಂಡೆನು.
ಭವ ಗೆದ್ದು ಬಂದ ಮಗಳೆ ಎಂದು
ಕರುಣದಿ ತೆಗೆದು ಬಿಗಿಯಪ್ಪಿದಡೆ
ಚೆನ್ನಮಲ್ಲಿಕಾರ್ಜುನನ
ಹೃದಯಕಮಲದಲ್ಲಿ ಅಡಗಿದೆನು.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-52/ವಚನ ಸಂಖ್ಯೆ-139)
ಇಲ್ಲಿ “ಕದಳಿ” (ಬಾಳೆಗಿಡ) ಯನ್ನು ರೂಪಕವಾಗಿ ಬಳಸಲಾಗಿದೆ. ದೇಹ, ಮನಸ್ಸು ಮತ್ತು ವಿಷಯಾಸಕ್ತಿಗಳು ಮನುಷ್ಯನನ್ನು ಸಂಸಾರದ ಅರಣ್ಯದಲ್ಲಿ ಬಂಧಿಸುತ್ತವೆ. ಇವುಗಳನ್ನು ಜಯಿಸಿದಾಗ ಮಾತ್ರ ಭವಬಂಧನದಿಂದ ಮುಕ್ತಿ ದೊರೆಯುತ್ತದೆ ಮತ್ತು ದೇವರ ಅನುಭವ ಸಾಧ್ಯವಾಗುತ್ತದೆ.
ಗಗನದ ಗುಂಪ ಚಂದ್ರಮ ಬಲ್ಲುದಲ್ಲದೆ,
ಕಡೆಯಲಿದ್ದಾಡುವ ಹದ್ದು ಬಲ್ಲುದೆ ಅಯ್ಯಾ?
ನದಿಯ ಗುಂಪ ತಾವರೆ ಬಲ್ಲುದಲ್ಲದೆ,
ಕಡೆಯಲಿದ್ದ ಹೊನ್ನಾವರಿಕೆ ಬಲ್ಲುದೆ ಅಯ್ಯಾ?
ಪುಷ್ಪದ ಪರಿಮಳವ ತುಂಬಿ ಬಲ್ಲುದಲ್ಲದೆ,
ಕಡೆಯಲಿದ್ದಾಡುವ ನೊರಜು ಬಲ್ಲುದೆ ಅಯ್ಯಾ?
ಚೆನ್ನಮಲ್ಲಿಕಾರ್ಜುನಯ್ಯಾ,
ನಿಮ್ಮ ಶರಣರ ನಿಲವ ನೀವೆ ಬಲ್ಲಿರಲ್ಲದೆ,
ಈ ಕೋಣನ ಮೈಮೇಲಣ ಸೊಳ್ಳೆಗಳೆತ್ತ ಬಲ್ಲವಯ್ಯಾ?
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-66/ವಚನ ಸಂಖ್ಯೆ-187)
ಅಂದರೆ, ಆಕಾಶದಲ್ಲಿರುವ ಚಂದ್ರನ ಮಹಿಮೆಯನ್ನು ಹದ್ದು ತಿಳಿಯಲಾರದು. ತಾವರೆಯ ಸೌಂದರ್ಯವನ್ನು ಹೊರಗಿನ ವಸ್ತು ಅರಿಯಲಾರದು. ಹೂವಿನ ಪರಿಮಳವನ್ನು ಅದಕ್ಕೆ ಹತ್ತಿರವಿರುವ ಜೀವಿಯೇ ಅನುಭವಿಸಬಲ್ಲದು. ಅದೇ ರೀತಿ ದೇವರ ನಿಜಸ್ವರೂಪ ಮತ್ತು ಶರಣರ ಮಹಿಮೆಯನ್ನು ದೇವರೇ ಅರಿಯಬಲ್ಲನು.
ನಾಲ್ಕನೇಯದಾಗಿ ನೇಗಿಲಯೋಗಿ ಶರಣ ಒಕ್ಕಲಿಗ ಮುದ್ದಣ್ಣನವರ ವಚನಗಳಲ್ಲಿ ಕೃಷಿಯ ಉಲ್ಲೇಖವನ್ನು ನೋಡೋಣ.
ಕೃಷಿಯ ಪರಿಭಾಷೆಯಲ್ಲಿ ಜೀವನ ಮೌಲ್ಯಗಳನ್ನು, ತತ್ವ ರಸಾನುಭವಗಳನ್ನು, ಆಧ್ಯಾತ್ಮ ಸಾಧನೆಗಳನ್ನು, ಆತ್ಮಸಾಕ್ಷಾತ್ಕಾರವನ್ನು ನಿರ್ದೇಶಿಸುವುದು ಶರಣ ಒಕ್ಕಲಿಗ ಮುದ್ದಣ್ಣನವರ ವಚನ ಶೈಲಿ. ಸ್ವತಃ ಕೃಷಿಕರಾಗಿರುವ ಒಕ್ಕಲಿಗ ಮುದ್ದಣ್ಣನವರು “ಅಂಗವೆ ಭೂಮಿಯಾಗಿ, ಲಿಂಗವೆ ಬೆಳೆಯಾಗಿ” ಎಂದು ಹೇಳುವಲ್ಲಿ ಅಪಾರವಾದ ಶರಣಪ್ರಜ್ಞೆ ಎದ್ದು ಕಾಣುತ್ತಿದೆ. ಅಂಗ, ಭೂಮಿ, ಲಿಂಗ, ಬೆಳೆ ಈ ನಾಲ್ಕು ಸಂಗತಿಗಳು ಐಹಿಕ ಲೋಕದ ವಸ್ತುಗಳು. ಇವೆಲ್ಲಕ್ಕೂ ಅದರದೇ ಆದ ಉದ್ದೇಶಗಳಿವೆ. ಅದರೊಂದಿಗೆ ಪರಿಣಾಮಗಳಿವೆ. ಪ್ರಾಪಂಚಿಕ ಬದುಕಿನಲ್ಲಿ ಅವಿರುವಂತೆಯೇ ನೋಡಿದರೆ ಅವು ಕೇವಲ ಮ್ಯಾಟರ್, ದ್ರವ್ಯ ಮಾತ್ರ. ಆದರೆ ಇಲ್ಲಿ ಅಂಗ-ಭೂಮಿ; ಲಿಂಗ-ಬೆಳೆ ಶಬ್ದಗಳು ನುಡಿಗಟ್ಟುಗಳಾಗಿ ಬಂದಾಗ ಪ್ರಾಪ್ತವಾಗುವ ಅರ್ಥ ಸಿರಿವಂತಿಕೆ ಶರಣರ ಭಾಷೆಯಲ್ಲಿಯೇ ಹೇಳುವುದಾದರೆ – ಮಹಾಘನ. ವಚನಕಾರರು ಹೇಳುವ ಲಿಂಗಾಂಗ ಸಾಮರಸ್ಯದ ಧ್ವನಿ ಇಲ್ಲಿ “ಶಿಲೆಯೊಳಗಣ ಪಾವಕನಂತೆ, ಉದಕದೊಳಗಣ ಪ್ರತಿಬಿಂಬದಂತೆ, ಬೀಜದೊಳಗಣ ವೃಕ್ಷದಂತೆ, ಶಬ್ದದೊಳಗಣ ನಿಶ್ಯಬ್ದದಂತೆ ಅಳವಡಲ್ಪಟ್ಟಿದೆ, ಪಸರಿಸಿದೆ, ಹೊಳೆಯುತಿದೆ, ಬೆಳಗುತಿದೆ. ವಸ್ತು ವಸ್ತುಗಳ ನಡುವಿರುವ ಕಾರ್ಯಕಾರಣ ಸಂಬಂಧವನ್ನು ಇದು ಧ್ವನಿಸುತ್ತದೆ.
ಸ್ವಾತಂತ್ರ್ಯಾನಂತರ ಹಸಿರು ಕ್ರಾಂತಿಯಿಂದ ಆಹಾರೋತ್ಪಾದನೆಯಲ್ಲಿ ಗಣನೀಯ ಹೆಚ್ಚಳವಾಗಿ ಆಹಾರ ಭದ್ರತೆ ಸಾಧ್ಯವಾಯಿತು. ಜಾಗತೀಕರಣದ ಮುಖಾಂತರ ಸಮಾಜೋ ಆರ್ಥಿಕ ಸ್ಥಿತ್ಯಂತರವಾಯಿತು. ಜೀವ ವೈವಿಧ್ಯತೆ ತಗ್ಗಿ ಪರಿಸರ ನಾಶಕ್ಕೆ ಎಡೆಯಾಯಿತು. ಕೃಷಿ ಅಭಿವೃದ್ದಿಯಲ್ಲಿನ ಅಸಮತೋಲನದಿಂದ ಎಲ್ಲ ಪ್ರಮಾದಗಳು “ಉಳುವ ಒಕ್ಕಲು ಮಗನ ತಪ್ಪಾಗಿ” ಅವನು ತನ್ನನ್ನು “ಒಪ್ಪಗೊಳ್ಳಲು” ಸರಕಾರವೆಂಬ ಪರಮಾತ್ಮನನ್ನು ಬೇಡುವಂತಾಯಿತು. ಈ ಸಂದರ್ಭದಲ್ಲಿ ಶರಣ ಒಕ್ಕಲಿಗ ಮುದ್ದಣ್ಣನವರ ಈ ವಚನ ನೋಡಿದರೆ ಎಲ್ಲವೂ ಅರ್ಥವಾಗಿಬಿಡುತ್ತದೆ.
ವೇದಶಾಸ್ತ್ರವನೋದುವುದಕ್ಕೆ ಹಾರುವನಲ್ಲ.
ಇರಿದು ಮೆರೆವುದಕ್ಕೆ ಕ್ಷತ್ರಿಯನಲ್ಲ, ವ್ಯವಹರಿಸುವುದಕ್ಕೆ ವೈಶ್ಯನಲ್ಲ.
ಉಳುವ ಒಕ್ಕಲ ಮಗನ ತಪ್ಪ ನೋಡದೆ ಒಪ್ಪುಗೊಳ್ಳಯ್ಯಾ,
ಕಾಮಭೀಮ ಜೀವಧನದೊಡೆಯ ನೀನೆ ಬಲ್ಲೆ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-770/ವಚನ ಸಂಖ್ಯೆ-1738)
ಬಸವಣ್ಣನವರು ಕರಲು ಭೂಮಿಯ ಮಹತ್ವವನ್ನು ಸಾರಿದಂತೆ, ಒಕ್ಕಲಿಗ ಮುದ್ದಣ್ಣನವರೂ ಸಹ ತಮ್ಮ ವಚನದಲ್ಲಿ:
ನೀ ಕೊಟ್ಟ ಭೂಮಿಗೆ ಮುಂದೆ ಕರಲು, ಹಿಂದೆ ಇಗ್ಗರಲು,
ಅಲ್ಲಿಂದ ಆಚೆ ಮಧ್ಯಭೂಮಿ.
ಮೂರು ನೆಲದ ಭೂಮಿಯ ಆರೈದು ಬೆಳೆದೆಹೆನೆಂದಡೆ,
ಇದಾರ ವಶವೂ ಅಲ್ಲ,
ಕಾಮಭೀಮ ಜೀವಧನದೊಡೆಯ ನೀನೆ ಬಲ್ಲೆ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-766/ವಚನ ಸಂಖ್ಯೆ-1732)
ಬೆಳೆಯನ್ನು ಯಶಸ್ವಿಯಾಗಿ ಬೆಳೆದು ಫಸಲು ಪಡೆಯಲು ನೆಲ ಮುಖ್ಯವಾದ ಆಧಾರ. ಅದೇ ರೀತಿ ಭಕ್ತಿಯ ಪೈರನ್ನು ಬೆಳೆಯಲು ಮನುಷ್ಯನ ಮನಸ್ಸು ಮುಖ್ಯ. ದೇವರು ಕೊಟ್ಟ ಭೂಮಿ-ಪ್ರಕೃತಿ ದಯಪಾಲಿಸಿದ ಸಂಪನ್ಮೂಲ-ಕರಲಾಗಿಬಿಟ್ಟಿದೆ. ಕರಲಾದ ಎರೆಭೂಮಿಯ ಮೇಲೆ ನಡೆದಾಗ, ಮುಳ್ಳಿನ ಮೇಲೆ ಓಡಾಡಿದ ಭಾವನೆಯನ್ನು ಮೂಡಿಸುತ್ತದೆ. ತಮಗೆ ದಕ್ಕಿರುವ ಭೂಮಿ ಇನ್ನೂ ಮುಂದೆ ಹೋಗಿ ನೋಡಿದರೆ ಅದು ಅತೀ ಕರಲು. ಮತ್ತಿನ್ನುಳಿದ ಭೂಮಿ ಮಧ್ಯಮ ತರದ್ದು. ಇದರಲ್ಲಿ ಪೈರು ಬೆಳೆಯುವ ಬಗೆಯಾದರೂ ಹೇಗೆ? ಈ ಮೂರು ಅಂದರೆ ಕರಲು, ಇಗ್ಗರಲು, ಮಧ್ಯಭೂಮಿ. ಈ ಪ್ರಕಾರದ ಭೂಮಿಯನ್ನು ಪರೀಕ್ಷಿಸಿ ಬೆಳೆಯೋಣವೆಂದರೆ ಅದೂ ಸಾಧ್ಯವಾಗದು. ಪಶುಪತಿಯಾದ ದೇವನಿಗೆ ಮಾತ್ರ ಇದರ ಮರ್ಮ ಗೊತ್ತಿದೆ. ಇಲ್ಲಿ ಶರಣ ಒಕ್ಕಲಿಗ ಮುದ್ದಣ್ಣನವರು ತಾವು ಉಳುವ ಭೂಮಿಯ ಗುಣವನ್ನು ಮುಂದೆ ಮಾಡಿ ಮನಸ್ಸೆಂಬ ಭೂಮಿಯಲ್ಲಿ ತಾವು ಮಾಡಬೇಕಾದ ಅಧ್ಯಾತ್ಮ ಕೃಷಿಯ ಕುರಿತಾಗಿ ಹೇಳಿದ್ದಾರೆ. ಮನುಷ್ಯ ಅಳವಡಿಸಿಕೊಳ್ಳಬೇಕಾದ ಅಂತರಂಗದ ಬೇಸಾಯದ ಬಗ್ಗೆ ಸೂಚನೆ ನೀಡಿದ್ದಾರೆ.
ಅಂಗವೆ ಭೂಮಿಯಾಗಿ, ಲಿಂಗವೆ ಬೆಳೆಯಾಗಿ
ವಿಶ್ವಾಸವೆಂಬ ಬತ್ತ ಒಲಿದು ಉಂಡು,
ಸುಖಿಯಾಗಿರಬೇಕೆಂದ ಕಾಮಭೀಮ ಜೀವಧನದೊಡೆಯ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-764/ವಚನ ಸಂಖ್ಯೆ-1727)
ಒಕ್ಕಲಿಗ ಮುದ್ದಣ್ಣನವರು ತಮ್ಮ ಈ ವಚನದಲ್ಲಿ ಅಂಗ, ಲಿಂಗ, ವಿಶ್ವಾಸ, ಮತ್ತು ಭತ್ತ ಹೀಗೆ ಒಟ್ಟು 4 ಶಬ್ದಗಳನ್ನು ಪ್ರಯೋಗಿಸಿದ್ದಾರೆ. ಈ ನಾಲ್ಕೂ ಶಬ್ದಗಳಿಗೆ ಉಪಮೆಗಳಾಗಿ ಭೂಮಿ, ಬೆಳೆ, ಉಂಡು ಮತ್ತು ಸುಖಿ ಹೀಗೆ 4 ಪ್ರತಿಮಾ ರೂಪಕಗಳನ್ನು ಬಳಸಿದ್ದಾರೆ. ಕೊನೆಯ ಸಾಲಿನಲ್ಲಿ ಸುಖಿಯಾಗಿರಬೇಕು ಎನ್ನುವುದರ ಮೂಲಕ ವಚನ ಪೂರ್ಣಗೊಳ್ಳುತ್ತದೆ. ಅಂಗ ಎಂದರೆ ಸ್ಥೂಲ ಶರೀರ. ಲಿಂಗ ಎಂದರೆ ಆತ್ಮ, ವಿಶ್ವಾಸವೆಂದರೆ ಅರಿವಿನ ಪಾದೋದಕ. ಇವೆಲ್ಲದರ ಸಂಪೂರ್ಣ ಫಲವೇ ಪ್ರಸನ್ನತೆಯ ಪ್ರಸಾದ.
ಪೂರ್ವಕ್ಕೆ ತಾಳಾಗಿ ಉತ್ತರಕ್ಕೆ ತಲಹಾ ಬಿದ್ದ ಮರನ ತಂದು,
ನಿಬದ್ದಿಯ ಕಾರುಕನ ಕೈಯಲ್ಲಿ ಸುಬುದ್ದಿಸಿ, ಶುದ್ದೈಸಿ
ಅನಾದಿಯೆಂಬ ಹುಗಿಲುದೆಗೆದು, ಆದಿಯೆಂಬ ಈಯವನಿಕ್ಕಿ,
ಇಷ್ಟವೆಂಬ ವಿಶ್ವಾಸದ ಮೇಳಿಯಂ ಬೆಟ್ಟಿ,
ಭಾವವೆಂಬ ಜಿಗುಳಿಯನಿಕ್ಕಿ, ಸದ್ಭಾವವೆಂಬ ಗುಳುವ ತೊಡಿಸಿ,
ಸತ್ಕ್ರಿಯೆಂಬ ಕಣ್ಣಿಯಲ್ಲಿ ನೇಗಿಲ ತೊಡಚಿ,
ಜ್ಞಾನಚಕ್ಷುವೆಂಬ ನೊಗದ ಉಭಯದ ಕೊನೆಯಲ್ಲಿ
ಎಡಗೋಲಿನಲ್ಲಿ ಕಾರಿಯ ಹೂಡಿ, ಬಲಗೋಲಿನಲ್ಲಿ ಬೆಳ್ಳಿಯ ಹೂಡಿ,
ಅಡಿ ಕೆತ್ತುವಂತೆ ಧಾಯೆಂದು ಹೊಡೆಯಲಾಗಿ,
ಭೂಮಿಯೊಡಗೂಡಿ ಸವೆಯಿತ್ತು. ಬಿತ್ತವಟ್ಟಕ್ಕೆ ದಿಕ್ಕಿಲ್ಲ.
ಕಾಮಭೀಮ ಜೀವಧನದೊಡೆಯ ನೀನೆ ಬಲ್ಲೆ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-766/ವಚನ ಸಂಖ್ಯೆ-1733)
ಶರಣ ಒಕ್ಕಲಿಗ ಮುದ್ದಣ್ಣನವರು ಈ ವಚನದಲ್ಲಿ ನೇಗಿಲನ್ನು ತಯಾರಿಸುವ ಮತ್ತು ಇದರಿಂದ ಹೊಲವನ್ನು ಉಳುಮೆ ಮಾಡುವ ಉಪಮೆಯನ್ನಿಟ್ಟುಕೊಂಡು ಜ್ಞಾನ, ಕ್ರಿಯೆ, ಅರಿವು ಆಚಾರಗಳಂಥ ಉತ್ಕೃಷ್ಠ ಸಂಗತಿಗಳನ್ನು ನಿರೂಪಣೆ ಮಾಡಿದ್ದಾರೆ. ನಮಗೆ ಪ್ರಕೃತಿಯು ಉಚಿತವಾಗಿ ನೀಡಿರುವ ಸಂಪತ್ತನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಉತ್ತಮ ಬೆಳೆಯನ್ನು ಬೆಳೆಯುವ ಹಾಗೆ ಸದಾಚಾರ, ಸತ್ಕ್ರಿಯೆ, ಸುಜ್ಞಾನಗಳನ್ನು ಅಳವಡಿಸಿಕೊಂಡು ಶರಣನಾಗಬೇಕು.
ಕೃಷಿ ಪರಿಕರಗಳ ಬಗ್ಗೆ ವಿವರಿಸಿದ ಮುದ್ದಣ್ಣನವರು, ಬೆಳೆಗೆ ನೀರುಣಿಸುವ ಬಗ್ಗೆ ಹೇಳುತ್ತ:
ಪೈರಿಗೆ ನೀರು ಬೇಕೆಂಬಲ್ಲಿ ಉಚಿತವನರಿದು ಬಿಡಬೇಕು.
ಕ್ರೀಗೆ ಅರಿವು ಬೇಕೆಂಬಲ್ಲಿ ಉಭಯವನರಿದು ಘಟಿಸಬೇಕು.
ಏರಿ ಹಿಡಿವನ್ನಕ್ಕ ನೀರ ಹಿಡಿದಡೆ ಸುಖವಲ್ಲದೆ ಮೀರಿದರುಂಟೆ?
ಕ್ರೀಯ ಬಿಡಲಿಲ್ಲ, ಅರಿವು ಮರೆಯಲಿಲ್ಲ.
ಬೆಳೆಯ ಕೊಯಿದ ಮತ್ತೆ, ಹೊಲಕ್ಕೆ ಕಾವಲುಂಟೆ?
ಫಲವ ಹೊತ್ತ ಪೈರಿನಂತೆ, ಪೈರಿನೊಳಕೊಂಡ ಫಲದಂತೆ,
ಅರಿವು ಆಚರಣೆಯೆಲ್ಲ ನಿಂದು, ಆಚರಣೆ ಅರಿವಿನಲ್ಲಿ ಲೇಪನಾದ ಮತ್ತೆ
ಕಾಮಭೀಮ ಜೀವಧನದೊಡೆಯನೆಂಬುದ ಭಾವಿಸಲಿಲ್ಲ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-767/ವಚನ ಸಂಖ್ಯೆ-1734)
ಈ ವಚನವು ಅರಿವು ಆಚಾರಗಳ ಅಂದರೆ ಜ್ಞಾನ ಮತ್ತು ಕ್ರಿಯೆಗಳ ಹೊಂದಾಣಿಕೆ ಕುರಿತು ವಿಶ್ಲೇಷಿಸುತ್ತದೆ. ಜ್ಞಾನವು ಕ್ರಿಯೆಯಲ್ಲಿ ಮೂಡಿಬಂದಾಗ ಮಾತ್ರ ಸಾರ್ಥಕ ಎಂಬ ಅಭಿಪ್ರಾಯ ಇಲ್ಲಿದೆ.
ಬೆಳೆದ ಪೈರಿಗೆ ನೀರು ಬೇಕಾದಾಗ ಉಚಿತವರಿತು ಸರಿಯಾದ ಪ್ರಮಾಣದಲ್ಲಿ ಬಿಡಬೇಕು. ಅದೇ ರೀತಿ ಕ್ರಿಯೆಗೆ ಜ್ಞಾನವು ಬೇಕೆನ್ನುವಾಗ ಎರಡನ್ನೂ ಅರಿತು ಆಚರಿಸಬೇಕು. ಕೆರೆ, ಕಟ್ಟೆ, ಕುಂಟೆ, ಬಾವಿ, ಕಾಲುವೆ ಮುಂತಾದ ನೀರಿನ ಮೂಲಗಳಲ್ಲಿ ಸಾಮರ್ಥ್ಯಕ್ಕೆ ತಕ್ಕಷ್ಟು ನೀರು ಸಂಗ್ರಹಿಸಬೇಕಾಗುತ್ತದೆ. ಅಷ್ಟಿದ್ದರೆ ಮಾತ್ರ ಎಲ್ಲವೂ ಸುಗಮವಾಗಿ ಸಾಗುತ್ತದೆ. ಭಕ್ತಿ ಸಾಧಕನಾದವನು ಕ್ರಿಯೆಯನ್ನು ಬಿಡದೆ, ಜ್ಞಾನವನ್ನು ಮರೆಯದೆ ಇರಬೇಕು. ಹೊಲದಲ್ಲಿನ ಬೆಳೆಯನ್ನು ಕೊಯ್ದು ಉತ್ಪನ್ನ ಸಾಗಿಸಿದ ಮೇಲೆ ಕಾವಲೇಕೆ ಬೇಕು? ಬೀಜದಿಂದ ಮೊಳೆತು ಋತುಮಾನ ಪರ್ಯಂತ ಹುಲುಸಾಗಿ ಬೆಳೆದ ಪೈರು ಮಾಗುತ್ತಿದೆ. ಪೈರು ಫಲವನ್ನು ಹೊತ್ತು ನಿಂತಂತೆ ಜ್ಞಾನವು ಆಚರಣೆಯಲ್ಲಿ ಅರಿವನ್ನು ಪಡೆದುಕೊಂಡು ನಿಂತಿದೆ. ಜ್ಞಾನವು ಆಚರಣೆಯಲ್ಲಿ ನಿಂತು, ಆಚರಣೆಯು ಅರಿವಿನಲ್ಲಿ ಒಂದಾಗುವುದೇ ಪರಮಾತ್ಮ.
ಅದರಂತೆ ಬೆಳೆ ಯಶಸ್ವಿಯಾಗಿ ಬೆಳೆದು ತನ್ನ ಜೀವನಚಕ್ರ ಪೂರೈಸಲು ನೀರು ಸರಿಯಾದ ಪ್ರಮಾಣದಲ್ಲಿ ಪೂರೈಕೆಯಾಗಬೇಕು. ಹುಟ್ಟು ಕೃಷಿಕನಾದ ಮುದ್ದಣ್ಣನವರು “ಪೈರಿಗೆ ನೀರು ಬೇಕೆಂಬಲ್ಲಿ ಉಚಿತವನರಿದು ಬಿಡಬೇಕು” ಎಂದು ಹೇಳುತ್ತಾರೆ. ಪ್ರತಿ ಸಸ್ಯದ ಜೀವನ ಚಕ್ರದಲ್ಲಿ ಕೆಲವು ಸಂದಿಗ್ಧ ಹಂತಗಳು ಅಂತಿರುತ್ತವೆ. ಉದಾಹರಣೆಗೆ ಬೇರು ಹಬ್ಬುವ ಹಂತ, ಕವಲೊಡೆಯುವ ಹಂತ, ಮೊಗ್ಗು, ಹೂ ಬಿಡುವ ಹಂತ, ಕಾಳು ಕಟ್ಟುವ ಹಂತ, ಇತ್ಯಾದಿ. ಬೆಳವಣಿಗೆಯ ಉಳಿದ ಅವಧಿಯಲ್ಲಿ ಏನಾದರಾಗಲಿ ಇಂಥ ಸಂದಿಗ್ಧ ಹಂತಗಳಲ್ಲಿ ತೇವಾಂಶದ ಕೊರತೆಯಾಗಬಾರದು ಎಂದು ಕೃಷಿ ವಿಜ್ಞಾನ ಹೇಳುತ್ತದೆ.
ಐದನೇಯದಾಗಿ ಚಿಙ್ಮಯಜ್ಞಾನಿ ಚೆನ್ನಬಸವಣ್ಣನವರ ವಚನಗಳಲ್ಲಿ ಕೃಷಿಯ ಉಲ್ಲೇಖವನ್ನು ನೋಡೋಣ.
ಒಮ್ಮೆ ನೆಲದಲ್ಲಿ ಬಿತ್ತಿದ ಬಿತ್ತುವ
ಕಿತ್ತಿ ಕಿತ್ತಿ ಮತ್ತೆ ಬಿತ್ತುತ್ತ ಹೋದಡೆ,
ಆ ಬಿತ್ತು ಮೊಳೆತು ಕಳೆಯೇರಿ ಬೆಳೆದು
ಬೆಳಸನೀವ ಪರಿಯಿನ್ನೆಂತೊ, ಮರುಳು ಮಾನವಾ?
ಗುರುವಿತ್ತ ಲಿಂಗವ ತೊರೆ ತೊರೆದು
ಮರಳಿ ಮರಳಿ ಧರಿಸಿದಡೆ
ಆ ಇಷ್ಟಲಿಂಗವು ಅನಿಷ್ಟವ ಕಳೆದು
ಇಷ್ಟಾರ್ಥವನೀವ ಪರಿಯಿನ್ನೆಂತೊ?
ಇದು ಕಾರಣ- ಕೂಡಲಚೆನ್ನಸಂಗಯ್ಯನಲ್ಲಿ
ಮುಕ್ತಿಯನರಸುವಡೆ
ಅಂಗನಲ್ಲಿ ಹೆರೆಹಿಂಗದೆ ಲಿಂಗವ ಧರಿಸಬೇಕು.
(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-496/ವಚನ ಸಂಖ್ಯೆ-1097)
ಒಮ್ಮೆ ನೆಲದಲ್ಲಿ ಊರಿದ ಬೀಜವಿರಬಹುದು, ಸಸಿಯಿರಬಹುದು ಅಥವಾ ಸ್ವತಂತ್ರ ಸಸ್ಯವಾಗಿ ಬೆಳೆಯಬಹುದಾದ ಯಾವುದೇ ಭಾಗವಿರಬಹುದು, ಬಹಳ ಮುಖ್ಯವಾಗಿ ಅದಕ್ಕೊಂದು ಸ್ಥಿರತೆ ಬೇಕು. ಹದವಾದ ಮಣ್ಣಿನ ಸಂಪರ್ಕಕ್ಕೆ ಬಂದು, ನಿರಂತರ ಜೈವಿಕ ಚಟುವಟಿಕೆಗಳು ಕೋಶಕೋಶದಲ್ಲಿ ನಡೆಯಬೇಕು. ತಾತ್ಕಾಲಿಕವಾಗಿ ನಿಶ್ಚಲಗೊಂಡ (Dormant) ಜೀವ, ಮತ್ತೊಂದು ಜೀವನ ಚಕ್ರದಲ್ಲಿ ತಿರುಗುವ ಶಕ್ತಿ ಸಾಮರ್ಥ್ಯವನ್ನು ಪಡೆಯಬೇಕು. ಜೀವ ಸ್ಫುರಿಸಲು ಸಜ್ಜುಗೊಂಡ ಸೂಕ್ತ ವಾತಾವರಣದಲ್ಲಿ ‘ಬಿತ್ತುವ’ (Propagule) ದೃಢತೆಯಿಂದ ಒಂದಾಗಬೇಕು. ಕ್ರಿಯಾಶೀಲತೆ ಜೊತೆಗೆ ಕ್ರಿಯಾ ಸ್ಥಿರತೆಯೂ ಮುಖ್ಯವಾಗುವ ವಿಶಿಷ್ಟ ಸಂದರ್ಭವಿದು. ಅದಕ್ಕೆ ಹೊರತಾಗಿ ಅದೇ ಬೀಜವನ್ನು ಕಿತ್ತು ಕಿತ್ತು ಎಲ್ಲೆಂದರಲ್ಲಿ ನೆಡುತ್ತ ಹೋದರೆ ಅದು ಬೇರು ಬಿಡುವದಿಲ್ಲ. ಸಸಿಯಾಗಿ ಬೆಳೆಯುವ ಯಾವ ಉದ್ದೇಶಕ್ಕಾಗಿ ಪ್ರಕೃತಿ ಬೀಜಕ್ಕೆ ಪಾತ್ರ ನೀಡಿದೆಯೋ ಆ ಉದ್ದೇಶ ಈಡೇರಿಕೆಯಾಗದು. ಹೀಗೆ ಮನುಷ್ಯ ಲಿಂಗದಲ್ಲಿ ಇರಿಸಬೇಕಾದ ಅಚಲ ಶ್ರದ್ಧೆ ಎಷ್ಟು ಮುಖ್ಯವೆಂಬುದು ಚೆನ್ನಬಸವಣ್ಣ ಮಾರ್ಮಿಕವಾಗಿ ಹೇಳಿದ್ದಾರೆ.
ಆರನೇಯದಾಗಿ ಶರಣ ಜೇಡರ ದಾಸಿಮಯ್ಯನವರ ವಚನಗಳಲ್ಲಿ ಕೃಷಿಯ ಉಲ್ಲೇಖವನ್ನು ನೋಡೋಣ.
ಊರ ಮಾಡುವನ ಭಕ್ತಿ ದೂರದ ಹೊಲನಂತೆ
ದೂರದಿಂ ಬಂದು ಅದು ನಿಂದು
ಮುಂದೆ ಸಾಗರವಾಗಲರಿಯದು, ರಾಮನಾಥ.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-268/ವಚನ ಸಂಖ್ಯೆ-743)
ಎನ್ನುತ್ತ ಕಾವಲಿಲ್ಲದ ಹೊಲ ಕಳ್ಳರ ಪಾಲು ಎಂದೆರುಹಿತ್ತಾರೆ. ಈ ವಚನದಲ್ಲಿ ಭಕ್ತಿಯು ಕೇವಲ ಹೊರಗಿನ ಪ್ರದರ್ಶನವಾಗಿರಬಾರದು, ಅದು ಜೀವನದಲ್ಲಿ ನಿಜವಾಗಿ ಪಾಲನೆಯಾಗಬೇಕು ಎಂದು ಹೇಳಲಾಗಿದೆ. ಹೊಲವನ್ನು ಕೇವಲ ನೋಡುವುದರಿಂದ ಬೆಳೆ ಬರುವುದಿಲ್ಲದಂತೆ, ಕೇವಲ ಮಾತಿನ ಭಕ್ತಿ ಫಲ ನೀಡುವುದಿಲ್ಲ ಎಂಬ ಸಂದೇಶ ಇಲ್ಲಿದೆ.
ಜೇಡರ ದಾಸಿಮಯ್ಯನವರು ಜೀವಸಂಕುಲದ ಅಸ್ತಿತ್ವ ಹಾಗೂ ನಿಸರ್ಗದ ಕೊಡುಗೆಗಳ ವಿಶ್ಲೇಷಣೆ ಮಾಡುತ್ತ,
ಒರತೆಗಳ ಕಂಡಿಂತು ಕೆಲರೀ ಬಾವಿಯ ತೋಡೆಂಬರು!
ಅರವಟಿಗೆ ಛತ್ರವು ತಮ್ಮದೆಂಬರು!
ಎಲೆ ಪಯಿರೈದದಿರೆ, ಸುರಿವ ಮಳೆ ಸುರಿಸದಿದ್ದಡೆ,
ಅವರೇತರಲ್ಲಿ ನೀಡುವರಯ್ಯಾ! ರಾಮನಾಥ.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-272/ವಚನ ಸಂಖ್ಯೆ-762)
ಮಳೆ, ಬೆಳೆ, ನೀರು ಮತ್ತು ಪ್ರಕೃತಿ ಪರಸ್ಪರ ಅವಲಂಬಿತವಾಗಿವೆ ಎಂಬುದನ್ನು ಈ ವಚನ ತಿಳಿಸುತ್ತದೆ. ಪ್ರಕೃತಿ ಸಮತೋಲನ ಕಾಪಾಡಿದಾಗ ಮಾತ್ರ ಮಾನವ ಜೀವನ ಸುಖಕರವಾಗಿರುತ್ತದೆ ಎಂಬ ಪರಿಸರ ಜಾಗೃತಿಯನ್ನು ಇದು ಸಾರುತ್ತದೆ.
ಏಳನೇಯದಾಗಿ ಶರಣ ಮಾದಾರ ಚೆನ್ನಯ್ಯನವರ ವಚನಗಳಲ್ಲಿ ಕೃಷಿಯ ಉಲ್ಲೇಖವನ್ನು ನೋಡೋಣ.
ಮಹಾಜ್ಞಾನ ದಿವ್ಯಪರಿಪೂರ್ಣವಸ್ತು
ಜಗಹಿತಾರ್ಥವಾಗಿ ಸ್ವಯಂಭುವೆಂಬ ಸ್ವರೂಪವ ಬಿಟ್ಟು,
… … … … … … … … … … … …
… … … … … … … … … … … …
ಒಂದು ವೃಕ್ಷದಲ್ಲಿ ಹುಟ್ಟಿದ ಫಲ, ಮೊದಲೆ ಎಳದಾಗಿ,
ತದನಂತರ ಮೀರಿ ಬಲಿದಲ್ಲದೆ ಬೀಜಾಂಕುರವಿಲ್ಲ.
ಮರದಿಂ ಮೀರಿ ತೋರುವ ಅಂಕುರವಿಲ್ಲ.
ವಸ್ತುವ ಮೀರುವ ದರ್ಶನವಿಲ್ಲ.
ಅಪ್ಪು ಒಂದರಲ್ಲಿ ಹಲವು ಫಲವನನುಭವಿಸುವಂತೆ,
ವಸ್ತು ಒಂದರಲ್ಲಿ ಸಕಲ ಕೃತ್ಯವ ಮಾಡಿ,
ತನ್ನ ಚಿತ್ತದ ಕಲೆಯ ಹರಿದುಕೊಂಬವಂಗೆ
ಅವನೊಳು ತಥ್ಯಮಿಥ್ಯ.
ಕೈಯುಳಿ ಕತ್ತಿ ಅಡಿಗೂಂಡಕ್ಕಡಿಯಾಗಬೇಡ,
ಅರಿ ನಿಜಾ[ತ್ಮಾ] ರಾಮ ರಾಮನಾ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-448/ವಚನ ಸಂಖ್ಯೆ-1155)
ಒಂದು ಮರದಲ್ಲಿ ಫಲ ಹುಟ್ಟುತ್ತದೆ. ಆ ಫಲ ಮೊದಲು ಚಿಕ್ಕದಾಗಿರುತ್ತದೆ; ನಂತರ ಬೆಳೆದು ಪಕ್ವವಾಗುತ್ತದೆ. ಅದರೊಳಗಿಂದಲೇ ಮತ್ತೆ ಬೀಜ ಮತ್ತು ಅಂಕುರ ಬರುತ್ತದೆ. ಅಂದರೆ, ಅಂಕುರವು ಮರವನ್ನು ಮೀರಿ ಬೇರೆಡೆಯಿಂದ ಬರುವುದಿಲ್ಲ. ಹಾಗೆಯೇ, ಈ ಜಗತ್ತಿನಲ್ಲಿರುವ ಎಲ್ಲವೂ ಒಂದು ಮೂಲ ವಸ್ತುವಿನಿಂದಲೇ (ಪರಮತತ್ವ/ದೇವರು) ಹುಟ್ಟಿವೆ. ಆ ಮೂಲವನ್ನು ಮೀರಿ ಬೇರೆ ದರ್ಶನ ಅಥವಾ ಸತ್ಯ ಇಲ್ಲ. ಮರದಲ್ಲಿ ಅನೇಕ ಫಲಗಳು ಬಂದರೂ ಅವೆಲ್ಲವೂ ಒಂದೇ ಮರದವು; ಹಾಗೆಯೇ, ಒಂದೇ ಪರಮ ತತ್ವದಿಂದ ಸಕಲ ಕ್ರಿಯೆಗಳು ನಡೆಯುತ್ತವೆ. ಮಾನವನ ಚಿತ್ತದ (ಮನಸ್ಸಿನ) ಕಲ್ಪನೆಗಳಿಂದ ಸತ್ಯ–ಮಿಥ್ಯ ಎಂಬ ಭೇದ ಕಾಣಿಸುತ್ತದೆ. “ಕೈಯಲ್ಲಿ ಕತ್ತಿ ಹಿಡಿದವನಿಗೆ ಅದರ ಅಲಗೇ ಅಪಾಯಕಾರಿಯಾಗಬಾರದು” ಎಂಬಂತೆ, ಕೊನೆಯಲ್ಲಿ ಶರಣ ಮಾದಾರ ಚನ್ನಯ್ಯನವರು ಎಚ್ಚರಿಸುತ್ತಾರೆ. ಮಾನವನು ಅಹಂಕಾರ, ಮಿಥ್ಯಾಭಿಮಾನ, ಅಜ್ಞಾನಗಳಿಗೆ ಒಳಗಾಗಬಾರದು. ನಿಜವಾದ ಆತ್ಮ ತತ್ವವನ್ನು ಅರಿಯಬೇಕು.
ವೇದ ಶಾಸ್ತ್ರಕ್ಕೆ ಹಾರುವನಾಗಿ,
ವೀರ ವಿತರಣಕ್ಕೆ ಕ್ಷತ್ರಿಯನಾಗಿ,
ಸರ್ವವನಾರೈದು ನೋಡುವಲ್ಲಿ,
ವೈಶ್ಯನಾಗಿ ವ್ಯಾಪಾರದೊಳಗಾಗಿ,
ಕೃಷಿಯ ಮಾಡುವುದಕ್ಕೆ ಶೂದ್ರನಾಗಿ.
ಇಂತೀ ಜಾತಿಗೋತ್ರದೊಳಗಾದ
ನೀಚ ಶ್ರೇಷ್ಠವೆಂಬ ಎರಡು ಕುಲವಲ್ಲದೆ,
ಹೊಲೆ ಹದಿನೆಂಟುಜಾತಿಯೆಂಬ ಕುಲವಿಲ್ಲ.
ಬ್ರಹ್ಮವನರಿದಲ್ಲಿ ಬ್ರಾಹ್ಮಣ.
ಸರ್ವಜೀವಹತ ಕರ್ಮಕ್ಕೊಳಗಾಗಿದ್ದಲ್ಲಿ ಸಮಗಾರ.
ಈ ಉಭಯವನರಿದು ಮರೆಯಲಿಲ್ಲ.
ಕೈಯುಳಿ ಕತ್ತಿ ಅಡಿಗೂಂಟಕ್ಕಡಿಯಾಗಬೇಡ,
ಅರಿ ನಿಜಾ[ತ್ಮಾ] ರಾಮ ರಾಮನಾ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-449/ವಚನ ಸಂಖ್ಯೆ-1157)
ಈ ವಚನವು ಜಾತಿ–ಕುಲದ ಅಹಂಕಾರವನ್ನು ತಿರಸ್ಕರಿಸಿ, ಮಾನವನ ಮೌಲ್ಯವು ಅವನ ಕೆಲಸ ಮತ್ತು ಜ್ಞಾನದಿಂದ ನಿರ್ಧಾರವಾಗಬೇಕು ಎಂದು ಹೇಳುತ್ತದೆ. “ಕೃಷಿ ಮಾಡುವುದಕ್ಕೆ ಶೂದ್ರನಾಗಿ” ಅಂದರೆ ಕೃಷಿ, ಶ್ರಮ, ಕೆಲಸ ಮಾಡುವವನನ್ನು “ಶೂದ್ರ” ಎಂದು ಕರೆಯುತ್ತಾರೆ. ಶೂದ್ರ ಅಂದರೆ ಕಾಯಕವಾಚಕ ಶಬ್ದ. ಆದರೆ ವಚನಕಾರರು ಹೇಳುವುದು ಏನೆಂದರೆ: ಈ ಜಾತಿ ಶ್ರೇಷ್ಠ, ಆ ಜಾತಿ ನೀಚ ಎಂಬ ಭೇದವಿಲ್ಲ. ಹದಿನೆಂಟು ಜಾತಿಗಳು ಎಂದು ಸಮಾಜದಲ್ಲಿ ಮಾಡಿರುವ ಭಜನೆಗಳು ನಿಜವಾದವುಗಳಲ್ಲ. ವಚನ ಸಾಹಿತ್ಯದಲ್ಲಿ ಕೃಷಿ ಕೇವಲ ಉದ್ಯೋಗವಲ್ಲ; ಅದು ಶ್ರಮ, ಸಮಾನತೆ, ಪ್ರಕೃತಿ ಪ್ರೀತಿ ಮತ್ತು ಮಾನವೀಯ ಮೌಲ್ಯಗಳ ಪ್ರತೀಕವಾಗಿದೆ. ರೈತನ ಜೀವನ ಮತ್ತು ಕೃಷಿಯ ಮಹತ್ವವನ್ನು ಶರಣರು ಅತ್ಯಂತ ಗೌರವದಿಂದ ಚಿತ್ರಿಸಿದ್ದಾರೆ.
ಏಳನೇಯದಾಗಿ ವೀರ ಗಣಾಚಾರಿ ಶರಣ ಅಂಬಿಗರ ಚೌಡಯ್ಯನವರ ವಚನಗಳಲ್ಲಿ ಕೃಷಿಯ ಉಲ್ಲೇಖವನ್ನು ನೋಡೋಣ.
ಗಾಳಿಯ ಹಡೆದಲ್ಲಿ ತೂರಿಕೊಳ್ಳಯ್ಯಾ,
ಗಾಳಿ ನಿನ್ನಾಧೀನವಲ್ಲಯ್ಯಾ.
ನಾಳೆ ತೂರಿಹೆನೆಂದಡೆ ಇಲ್ಲಯ್ಯಾ.
ಶಿವಶರಣೆಂಬುದೊಂದು ಗಾಳಿಯ ಹಡೆದಲ್ಲಿ,
ಬೇಗ ತೂರೆಂದನಂಬಿಗರ ಚೌಡಯ್ಯ.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-52/ವಚನ ಸಂಖ್ಯೆ-130)
ಈ ವಚನದಲ್ಲಿ ಜೀವನದ ಅಸ್ಥಿರತೆಯನ್ನು ಗಾಳಿಯ ಹಡಗಿನೊಂದಿಗೆ ಹೋಲಿಸಿ, ಮಾನವನ ಅಹಂಕಾರ ವ್ಯರ್ಥವೆಂದು ತಿಳಿಸಲಾಗಿದೆ. ಶಿವಭಕ್ತಿಯೇ ನಿಜವಾದ ಆಶ್ರಯ ಮತ್ತು ಸ್ಥಿರತೆ ಎಂಬ ಸಂದೇಶವನ್ನು ವಚನವು ನೀಡುತ್ತದೆ.
ಅಂಬಿಗ ಚೌಡಯ್ಯನವರು ಇನ್ನೊಂದು ವಚನದಲ್ಲಿ ಹಸಿವು ಮತ್ತು ಆಹಾರದ ವಿಷಯವನ್ನು ಕಾಯಕದೊಂದಿಗೆ ಜೋಡಿಸಿ, ಹಸಿವಿನ ತೀವೃತೆ ಮತ್ತು ಆಹಾರದ ಅವಶ್ಯಕತೆಯ ವಿಶ್ಲೇಷಣೆಯನ್ನು ಮಾಡುತ್ತ:
ದೇಹಾರವ ಮಾಡುವಣ್ಣಗಳಿರಾ, ಒಂದು ತುತ್ತು ಆಹಾರವನಿಕ್ಕಿರೆ.
ದೇಹಾರಕ್ಕೆ ಆಹಾರವೇ ನಿಚ್ಚಣಿಕೆ.
ದೇಹಾರವ ಮಾಡುತ್ತ ಆಹಾರವನಿಕ್ಕದಿರ್ದಡೆ,
ಆ ಹರನಿಲ್ಲೆಂದನಂಬಿಗರ ಚೌಡಯ್ಯ.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-34/ವಚನ ಸಂಖ್ಯೆ-164)
ಅವರ ಈ ವಚನಗಳಲ್ಲಿ ಜೀವನ, ಆಹಾರ, ಪ್ರಕೃತಿ ಮತ್ತು ಮಾನವ ಮೌಲ್ಯಗಳ ಕುರಿತು ಆಳವಾದ ಚಿಂತನೆ ವ್ಯಕ್ತವಾಗುತ್ತದೆ. ಈ ವಚನದಲ್ಲಿ ಹಸಿವು ಮಾನವನ ಮೂಲಭೂತ ಅಗತ್ಯವಾಗಿದ್ದು, ಆಹಾರವೇ ದೇಹದ ಆಧಾರ ಎಂದು ಹೇಳಲಾಗಿದೆ. ದೇಹ ಉಳಿಯಬೇಕಾದರೆ ಆಹಾರ ಅಗತ್ಯ, ಆದ್ದರಿಂದ ಶ್ರಮ ಮತ್ತು ಕಾಯಕದ ಮಹತ್ವವನ್ನು ಕವಿ ಒತ್ತಿಹೇಳುತ್ತಾರೆ.
ಮರ ಬೇರು ಸಾರದಿಂದ ನಾನಾ ಶಾಖೆಗಳು
ಪ[ಲ್ಲವಿ]ಸುವ ತೆರನಂತೆ,
ಜೀವಭಾಮೂಲದಿಂದ ಸಕಲೇಂದ್ರಿಯ ಹೆಚ್ಚುಗೆ ಅಹಂತೆ,
ಮರಕ್ಕೆ ಬೇರು ನಷ್ಟದಿಂದ ಶಾಖೆ ನಷ್ಟ,
ಜೀವಕ್ಕೆ ಪ್ರಕೃತಿ ನಷ್ಟದಿಂದ ಇಂದ್ರಿಯ ನಷ್ಟ
ಎಂದನಂಬಿಗರ ಚೌಡಯ್ಯ.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-84/ವಚನ ಸಂಖ್ಯೆ-221)
ಮರದ ಬೇರು ನಾಶವಾದರೆ ಅದರ ಕೊಂಬೆಗಳು ಒಣಗುವಂತೆ, ಪ್ರಕೃತಿ ಹಾಳಾದರೆ ಜೀವವೂ ಹಾಳಾಗುತ್ತದೆ ಎಂಬ ಸಂದೇಶ ಇಲ್ಲಿ ಇದೆ. ಮಾನವ ಮತ್ತು ಪ್ರಕೃತಿ ಪರಸ್ಪರ ಅವಲಂಬಿತವಾಗಿದ್ದು, ಪ್ರಕೃತಿ ಸಂರಕ್ಷಣೆ ಜೀವ ಉಳಿವಿಗೆ ಅಗತ್ಯವೆಂದು ವಚನ ತಿಳಿಸುತ್ತದೆ.
ಶರಣ ಇಳಿಹಾಳ ಬೊಮ್ಮಯ್ಯನವರೂ ಕೂಡ ಕೃಷಿ ಕಾಯಕದ ವಚನಕಾರರಾಗಿದ್ದು ಅವರು ವಚನ ರಚಿಸಿದ ಬಗ್ಗೆ ದಾಖಲೆಗಳಿಲ್ಲದಿದ್ರೂ ಬಿತ್ತುವ ಬೀಜವನ್ನು ಜಂಗಮರಿಗೆ ಹಂಚಿದರೆಂಬ ಕಥೆಯಿದೆ. ಶರಣ ನಗೆಯ ಮಾರಿತಂದೆಯವರು ನಗಿಸುವದನ್ನೇ ತಮ್ಮ ಕಾಯಕ ಮಾಡಿಕೊಂಡವರಾಗಿದ್ದು ಅಪ್ಪಟ ಕೃಷಿ ವಸ್ತುವನ್ನಿಟ್ಟುಕೊಂಡು ಹೀಗೆ ಹೇಳುತ್ತಾರೆ,
ಬೀಜವೊಡೆದು ಮೊಳೆಯಂಕುರಿಸುವಾಗ ಎಲೆ ಎಲ್ಲಿದ್ದಿತ್ತು?
ಎಲೆ ಸುಳಿಬಿಟ್ಟು ಕವಲುವಾಗ ಶಾಖೆಯಲ್ಲಿದ್ದಿತ್ತು?
ಶಾಖೆ ಒಡೆದು ಕುಸುಮ ತೋರುವಾಗ ಫಲವೆಲ್ಲಿದ್ದಿತ್ತು?
ಫಲ ಬಲಿದು ರಸ ತುಂಬುವಾಗ ಸವಿಯಲ್ಲಿದ್ದಿತ್ತು?
ಸವಿಯ ಸವಿದು ಪರಿಣತೆಗೊಂಬಾಗ ಅದೇತರೊದಗು?
ಇಷ್ಟರಿ ನೀಲೆಯನರಿ, ಆತುರವೈರಿ ಮಾರೇಶ್ವರಾ.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-433/ವಚನ ಸಂಖ್ಯೆ-1233)
ಪ್ರಶ್ನೆಗಳ ಸರಣಿಯನ್ನೇ ಹೊತ್ತ ಈ ವಚನ ಸಸ್ಯ ಜೀವನಚಕ್ರದ ಪ್ರಾತ್ಯಕ್ಷಿಕೆಯಂತಿದೆ. ಇದನ್ನು ವ್ಯೋಮಕಾಯ ಅಲ್ಲಮ ಪ್ರಭುದೇವರು “ಬೀಜದೊಳಗಿನ ವೃಕ್ಷದಂತೆ” ಎಂದು ಒಂದೇ ಮಾತಿನಲ್ಲಿ ಹೇಳಿಬಿಡುತ್ತಾರೆ.
ಒಕ್ಕಲುತನ ಮತ್ತು ಹಸು ಸಾಕಾಣಿಕೆ ಕಾಯಕದ ಶರಣ ಕೀಲಾರದ ಭೀಮಣ್ಣನವರು ತಮ್ಮ ವಚನದ ಮೂಲಕ ಹೇಳುತ್ತಾರೆ:
ತೊಗಟೆಯೊಳಗಣ ಬೀಜ, ಬೀಜದೊಳಗಣ ಅಂಕುರ,
ಸಾರ ಸಸಿರೂಪದೋರದೆ, ವೇಧಿಸಿಕೊಂಡಿಪ್ಪಂತೆ.
ಇಂತೀ ಕ್ರೀಯೊಳಗಣ ಭಾವ, ಭಾವದೊಳಗಣ ಜ್ಞಾನ,
ಜ್ಞಾನದೊಳಗಣ ಅರಿವು, ಅರಿವಿನೊಳಗಣ ನಿಜದ
ಮಹಾಬೆಳಗಿನ ಕಲೆಯನೊಳಕೊಂಡ,
ಘನಮಹಿಮಂಗೆ ಹಿಡಿದಹೆನೆಂಬ, ಭಾವದ ಭ್ರಮೆಯಿಲ್ಲ;
ಬಿಟ್ಟಿಹೆನೆಂಬ ಕಟ್ಟಿನ ಸೂತಕವಿಲ್ಲ.
ಎಲ್ಲಿ ಬಿಟ್ಟಲ್ಲಿ ತೊಟ್ಟು ಬಿಟ್ಟ ಹಣ್ಣಿನಂತೆ
ಎಲ್ಲಿ ಮುಟ್ಟಿದಲ್ಲಿ ಕರ್ಪುರದ ಪಂಜರದಲ್ಲಿ
ಉರಿಯಗಿಳಿ ಮಾತಾಡಿದಂತೆ
ಉತ್ತರ ಮಾತಿಂಗೆ ಪ್ರತ್ಯುತ್ತರ ನಷ್ಟವಾದಂತೆ.
ಇಂತೀ ಬಟ್ಟಬಯಲ ಕಟ್ಟಕಡೆಯ
ದೃಷ್ಟವಿಲ್ಲದ ನಿರ್ಲಕ್ಷ್ಯಂಗೆ, ಲಕ್ಷ್ಯಗೆಟ್ಟ ನಿಶ್ಚಯವಂತಂಗೆ,
ವ್ಯೋಮವಿಲ್ಲದ ಭಾವ ಭಾವವಿಲ್ಲದ ಜ್ಞಾನ
ಜ್ಞಾನವಿಲ್ಲದ ಶೂನ್ಯ ಶೂನ್ಯವಿಲ್ಲದ ಸುಳುಹು
ಸುಳುಹಿಲ್ಲದ ಅಖಂಡಿತನಾದ ಸರ್ವಗುಣ ಭರಿತ
ಕಾಲಕರ್ಮವಿರಹಿತ ತ್ರಿಪುರಾಂತಕಲಿಂಗವೆಂಬಲ್ಲಿ ತಾನು
ತಾನಾದ ಶರಣ.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-36/ವಚನ ಸಂಖ್ಯೆ-74)
ಸಿಪ್ಪೆ (Testa)ಯೊಳಗೆ ಬೀಜವಿದೆ, ಬೀಜದೊಳಗೆ ಅಂಕುರ (Embryo) ವಿದೆ. ಅದನ್ನು ಪೋಷಿಸಿ ಬೆಳೆಸುವ ಸಾರಸಸಿ (Endosperm) ಕೂಡ ಇದೆ. ಆದರೆ ಮತ್ತೊಂದು ಸಸಿಯಾಗಿ ಬೆಳೆಯುವ ಚೈತನ್ಯ ಹೊರಗಣ್ಣಿಗೆ ಕಾಣುವುದಿಲ್ಲ. ಸೂಕ್ತ ವಾತಾವರಣ (Environment) ದೊರೆತಾಗ, ಬೀಜದೊಳಗಿನ ಮೂರು ಭಾಗಗಳು ಕ್ರಿಯೆಯೊಳಗಾಗುತ್ತವೆ. ಅವು ಒಂದಕ್ಕೊಂದು ಪೂರಕವಾಗಿ ಸ್ಪಂದಿಸಿದಾಗ ಸ್ವಾವಲಂಬಿ, ಪ್ರತ್ಯೇಕ ಸಸ್ಯ ಹುಟ್ಟಿ ಬರುತ್ತದೆ.
ಕೂಲಿ ಕೃಷಿ ಕಾಯಕಂಗಳಿಂದ ಮಾಡುವ
ಗುರುಲಿಂಗಜಂಗಮದ ಸೇವೆ, ಅದಾವ ತೆರನೆಂದರಿದು,
ಭಾವ ಶುದ್ಧವಾಗಿ ಮಾಡುವ ಸುಕಾಯಕವಂತನಿರವು, ಎಂತುಂಟೆಂದಡೆ:
ಮಾಡಿಕೊಂಡ ಕೃತ್ಯದಲ್ಲಿ ಆರಿಗೂ ಒಡಲೆಡೆಗೂಡದೆ,
ಕೊಂಡುದು ಪ್ರಸಾದ, ನಿಂದುದು ಸಯಿದಾನವೆನ್ನದೆ,
ಉಭಯ ಪ್ರತಿಪಾಕದಲ್ಲಿ ಆದ ಸಯಿದಾನಕ್ಕೆ ಸಂಕಲ್ಪವಳಿದು,
ಉಭಯಭಾಂಡವೂ ಸರಿಯೆಂದ ಪ್ರಸಾದಿಗೆ ಪ್ರಸಾದವ ಎಡೆಮಾಡಬೇಕು.
ಅದು ನಿರ್ಮಾಲ್ಯವಲ್ಲ, ಅದು ಲಿಂಗಾಂಗ, ಕುಂಭದಲ್ಲಿ ನಿಂದಪ್ರಸಾದ.
ಇದರ ಸಂದೇಹವ ಹರಿದು ಕೊಂಬ ನಿರಂಗಪ್ರಸಾದಿಗೆ
ಕುಂಭೇಶ್ವರಲಿಂಗದಲ್ಲಿದ್ದ ಜಗನ್ನಾಥ ಸಾಕ್ಷಿಯಾಗಿ
ನಮೋ ನಮೋ ಎನುತಿದ್ದೆನು.
(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-516/ವಚನ ಸಂಖ್ಯೆ-1217)
ನೆಲ್ಲು ನೆಲದಲ್ಲಿಯೆ ಅಳಿದು,
ಹುಲ್ಲಿನ ಒಡಲಲ್ಲಿಯೆ ಜನಿಸಿ,
ಆ ಹುಲ್ಲ ತನ್ನೊಳಗಿರಿಸಿದ ಭೇದವ ನೋಡಾ.
ತನ್ನೊಡಲಳಿದಲ್ಲಿ ನೆಲ್ಲೂ ಅಲ್ಲ, ಹುಲ್ಲೂ ಅಲ್ಲ!
ಆ ಹೊಡೆಯಲ್ಲಿ ಅಡಗಿತ್ತೆಂದರಿಯೆ,
ಕುಂಭೇಶ್ವರಲಿಂಗದಲ್ಲಿ ಜಗನ್ನಾಥನನರಿಯಲಾಗಿ.
(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-517/ವಚನ ಸಂಖ್ಯೆ-1220)
ಈ ವಚನಗಳಲ್ಲಿ ಕಾಯಕ, ದಾಸೋಹ ಮತ್ತು ಭಾವಶುದ್ಧಿಯ ಮಹತ್ವವನ್ನು ವಿವರಿಸಲಾಗಿದೆ.
ಮಾನವನು ಮಾಡುವ ಪ್ರತಿಯೊಂದು ಕೆಲಸವೂ (ಕಾಯಕ) ಗುರು–ಲಿಂಗ–ಜಂಗಮರ ಸೇವೆಯ ಭಾವದಿಂದ ಮಾಡಿದರೆ ಅದು ಸುಕಾಯಕವಾಗುತ್ತದೆ. ಕಾಯಕ ಮಾಡುವವನು ತನ್ನ ಕೆಲಸದ ಬಗ್ಗೆ ಅಹಂಕಾರ ಅಥವಾ ಸ್ವಾರ್ಥವನ್ನು ಹೊಂದಬಾರದು. ತನ್ನ ಶ್ರಮದಿಂದ ಗಳಿಸಿದ ಸಂಪತ್ತನ್ನು ದೇವರ ಪ್ರಸಾದವೆಂದು ಭಾವಿಸಬೇಕು. ಕಾಯಕದಿಂದ ಬಂದ ಆದಾಯವನ್ನು ಕೇವಲ ತನ್ನ ಸ್ವಾರ್ಥಕ್ಕಾಗಿ ಬಳಸದೆ, ಸಮಾಜದ ಒಳಿತಿಗಾಗಿ ಮತ್ತು ಅಗತ್ಯವಿರುವವರಿಗೆ ಹಂಚುವುದೇ ದಾಸೋಹ. ಇಂತಹ ಶುದ್ಧ ಮನಸ್ಸಿನಿಂದ ಮಾಡಿದ ದಾಸೋಹವೇ ನಿಜವಾದ ಪ್ರಸಾದವಾಗುತ್ತದೆ. ಅದು ಸಾಮಾನ್ಯ ಆಹಾರ ಅಥವಾ ವಸ್ತುವಲ್ಲ; ಅದು ಭಕ್ತಿಯ ಸಂಕೇತವಾಗಿದೆ.
ಮುಂದೆ ಶರಣ ಹೊಡೆಹುಲ್ಲ ಬಂಕಣ್ಣನವರು ನೆಲ್ಲು ಮತ್ತು ಹುಲ್ಲಿನ ಉದಾಹರಣೆಯನ್ನು ಕೊಡುತ್ತಾರೆ. ನೆಲ್ಲು ಹುಲ್ಲಿನ ನಡುವೆ ಬೆಳೆಯುತ್ತದೆ. ಆದರೆ ಅದು ಹುಲ್ಲಲ್ಲ; ತನ್ನದೇ ಆದ ಮೌಲ್ಯವನ್ನು ಹೊಂದಿದೆ. ಅದೇ ರೀತಿ ಭಕ್ತನು ಲೋಕದಲ್ಲಿ ಬದುಕುತ್ತಿದ್ದರೂ ಲೋಕದ ಕೆಟ್ಟ ಗುಣಗಳಿಗೆ ಒಳಗಾಗದೆ ತನ್ನ ಆತ್ಮಶುದ್ಧಿಯನ್ನು ಕಾಪಾಡಿಕೊಳ್ಳಬೇಕು. ಹುಲ್ಲಿನ ಮಧ್ಯೆ ಇರುವ ನೆಲ್ಲನ್ನು ಗುರುತಿಸುವಂತೆ, ಈ ಜಗತ್ತಿನ ಮಾಯೆಯೊಳಗೆ ಅಡಗಿರುವ ಪರಮಸತ್ಯವನ್ನು ಅರಿಯಬೇಕು. ಆಗ ಮಾತ್ರ ಜೀವನದ ನಿಜವಾದ ಅರ್ಥ ತಿಳಿಯುತ್ತದೆ. ಈ ವಚನವು ಶ್ರಮದ ಪಾವಿತ್ರ‍್ಯ, ದಾಸೋಹದ ಮಹತ್ವ ಮತ್ತು ಆತ್ಮಶುದ್ಧಿಯ ಸಂದೇಶವನ್ನು ಸಾರುತ್ತದೆ.
ಬಸವೋತ್ತರ ಯುಗದ ಶರಣ ಹೇಮಗಲ್ಲ ಹಂಪ ತಮ್ಮ ವಚನಗಳಲ್ಲಿ ಕೃಷಿಯನ್ನು ಕುರಿತು ಉಲ್ಲೇಖ ಮಾಡಿದ್ದಾರೆ.
ಮಾಯದ ಮರಣದೊಳು ಛಾಯದ ಗಿಡ ಹುಟ್ಟಿ,
ಒಂಬತ್ತು ಗಳಿಗೆಗೆ ಹೂವು ಕಾಯಿ ಹಣ್ಣು ಫಲವಾಗಿ,
ಮರ ಬೇರುವರಿದು ಪ್ರಜ್ವಲಿಸಿದುದ ಕಂಡೆನಯ್ಯಾ!
ಇದೇನು ಚೋದ್ಯ ಹೇಳಾ!
ಮಾರುದ್ದ ಮರನಡಗಿ ಛಾಯದ ಗಿಡವಾಗಿ,
ಪಿರಿದಪ್ಪ ವೃಕ್ಷವಾಗಿ, ಜಗಕೆ ತೋರಿದ ಭೇದವ
ವೃಕ್ಷಕೆ ನೀರೆರೆದು ಸಲಹಿದಾತ ಬಲ್ಲ;
ಉಳಿದವರಿಗಸಾಧ್ಯ.
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
(ಸಮಗ್ರ ವಚನ ಸಂಪುಟ: ಹದಿನಾಲ್ಕು-2021/ಪುಟ ಸಂಖ್ಯೆ-532/ವಚನ ಸಂಖ್ಯೆ-884)
ಈ ವಚನದಲ್ಲಿ ಮಾಯೆ, ಸೃಷ್ಟಿಯ ರಹಸ್ಯ ಮತ್ತು ಪರಮಗುರುವಿನ ಮಹಿಮೆಯನ್ನು ಅತ್ಯಂತ ಸುಂದರವಾದ ರೂಪಕದ ಮೂಲಕ ವಿವರಿಸಲಾಗಿದೆ. ವಚನಕಾರರು ಹೇಳುವಂತೆ, ಮಾಯೆಯೆಂಬ ಮರದೊಳಗೆ ನೆರಳಿನ ಗಿಡ ಹುಟ್ಟಿತು. ಆ ಗಿಡವು ಕೆಲವೇ ಕ್ಷಣಗಳಲ್ಲಿ ಹೂ, ಕಾಯಿ, ಹಣ್ಣುಗಳಿಂದ ಕೂಡಿದ ದೊಡ್ಡ ಮರವಾಗಿ ಬೆಳೆಯಿತು. ಇದನ್ನು ಕಂಡು ಶರಣ ಹೇಮಗಲ್ಲ ಹಂಪನವರಿ ಆಶ್ಚರ್ಯದಿಂದ “ಇದು ಯಾವ ಅದ್ಭುತ? ಇದರ ರಹಸ್ಯವೇನು?” ಎಂದು ಪ್ರಶ್ನಿಸುತ್ತಾರೆ. ಇಲ್ಲಿ “ಮಾಯೆಯ ಮರ” ಎಂದರೆ ಈ ಸಂಸಾರ. “ನೆರಳಿನ ಗಿಡ” ಎಂದರೆ ಜೀವನದ ಅಸ್ಥಿರತೆ ಮತ್ತು ಭೌತಿಕ ಜಗತ್ತು. ನಿಜವಾದ ಅಸ್ತಿತ್ವವಿಲ್ಲದ ನೆರಳು ಹೇಗೆ ಕಾಣಿಸುತ್ತದೆಯೋ, ಹಾಗೆಯೇ ಈ ಲೋಕವೂ ಮಾಯಾಮಯವಾಗಿದೆ. ಆದರೆ ಆ ಮಾಯೆಯೊಳಗೇ ಅನೇಕ ಜೀವಿಗಳು, ಘಟನೆಗಳು ಮತ್ತು ಅನುಭವಗಳು ಬೆಳೆಯುತ್ತವೆ.
ಆ ಗಿಡವು ದೊಡ್ಡ ವೃಕ್ಷವಾಗಿ ಬೆಳೆದು ಜಗತ್ತಿಗೆ ತನ್ನ ವೈಚಿತ್ರ‍್ಯವನ್ನು ತೋರಿದಂತೆ, ಈ ವಿಶ್ವಸೃಷ್ಟಿಯೂ ಪರಮಾತ್ಮನ ಶಕ್ತಿಯಿಂದ ವಿಸ್ತಾರಗೊಂಡಿದೆ. ಈ ಸೃಷ್ಟಿಯ ರಹಸ್ಯವನ್ನು ಎಲ್ಲರೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಆ ವೃಕ್ಷಕ್ಕೆ ನೀರೆರೆದು ಪೋಷಿಸಿದವನಿಗೆ ಮಾತ್ರ ಅದರ ರಹಸ್ಯ ತಿಳಿಯುತ್ತದೆ; ಉಳಿದವರಿಗೆ ಅದು ಅಸಾಧ್ಯ. ಅಂದರೆ, ಪರಮಗುರುವಿನ ಅನುಗ್ರಹವನ್ನು ಪಡೆದವರಿಗೆ ಮಾತ್ರ ಸೃಷ್ಟಿಯ ನಿಜಸ್ವರೂಪ ಮತ್ತು ಪರಮತತ್ತ್ವದ ಅರಿವು ಉಂಟಾಗುತ್ತದೆ. ಕೊನೆಯಲ್ಲಿ ವಚನಕಾರರು ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥ ಪ್ರಭುವನ್ನು ಸ್ಮರಿಸುತ್ತಾ, ಅವರ ಕೃಪೆಯಿಂದಲೇ ಈ ಮಹಾ ರಹಸ್ಯವನ್ನು ತಿಳಿಯಬಹುದು ಎಂದು ಹೇಳುತ್ತಾರೆ. ಮಾಯೆಯ ಲೋಕದೊಳಗಿನ ಪರಮಸತ್ಯವನ್ನು ಅರಿಯಲು ಗುರುಭಕ್ತಿ ಮತ್ತು ಆತ್ಮಜ್ಞಾನ ಅಗತ್ಯ.
ಬಟ್ಟಬಯಲಿನಲ್ಲಿ ಒಂದು ಮರ ಹುಟ್ಟಿತ್ತು.
ಅದಕ್ಕೆ ಸುತ್ತಲು ಬೇರು ಆವರಿಸಿತ್ತು.
ಅದಕ್ಕೆ ಶತಕೋಟಿ ಕೊನೆ ಬಿಟ್ಟಿತ್ತು.
ಅಡಗಿದ ಬೇರನೆ ಸವರಿ, ಶತಕೋಟಿ ಕೊನೆಯನೆ ಕಡಿಯೆ,
ಮರ ಒಣಗಿತ್ತು, ಉಲುಹು ನಿಂದಿತ್ತು, ಎಲೆ ಉದುರಿತ್ತು.
ತರಗೆಲೆಯಾದ ಶರಣರ ಚರಣವಿಡಿದು
ನಿಜಮುಕ್ತಳಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-452/ವಚನ ಸಂಖ್ಯೆ-1237)
ಈ ವಚನದಲ್ಲಿ ಮಾನವನ ಅಹಂಕಾರ, ಸಂಸಾರದ ಬಂಧನ ಮತ್ತು ಆತ್ಮಜ್ಞಾನದ ಮಹತ್ವವನ್ನು ರೂಪಕದ ಮೂಲಕ ವಿವರಿಸಲಾಗಿದೆ. ಹಡಪದಪ್ಪಣ್ಣನವರ ಪುಣ್ಯಸ್ತ್ರೀ ಲಿಂಗಮ್ಮನವರು ಹೇಳುತ್ತಾರೆ: ಬಯಲಿನಲ್ಲಿ ಒಂದು ಮರ ಹುಟ್ಟಿತು. ಅದರ ಸುತ್ತಲೂ ಬೇರುಗಳು ವ್ಯಾಪಿಸಿಕೊಂಡಿದ್ದವು. ಆ ಮರಕ್ಕೆ ನೂರಾರು ಕೋಟಿ ಕೊಂಬೆಗಳು ಬೆಳೆದಿದ್ದವು. ಇಲ್ಲಿ ಮರವು ಸಂಸಾರವನ್ನು, ಬೇರುಗಳು ಆಸೆ, ಮೋಹ, ಅಹಂಕಾರ ಮತ್ತು ಕರ್ಮಬಂಧನಗಳನ್ನು, ಹಾಗೂ ಕೊಂಬೆಗಳು ಅನೇಕ ಬಯಕೆಗಳು ಮತ್ತು ಲೋಕ ವ್ಯವಹಾರಗಳನ್ನು ಸೂಚಿಸುತ್ತವೆ. ಆ ಮರದ ಅಡಗಿರುವ ಮೂಲಬೇರನ್ನು ಕಡಿದಾಗ, ಅದರ ಕೋಟ್ಯಾಂತರ ಕೊಂಬೆಗಳೂ ಒಣಗಿದವು. ಮರವು ಬಲಹೀನವಾಗಿ ಉದುರಿತು. ಅಂದರೆ, ಅಜ್ಞಾನ ಮತ್ತು ಅಹಂಕಾರ ಎಂಬ ಮೂಲ ಕಾರಣವನ್ನು ನಿವಾರಿಸಿದರೆ, ಎಲ್ಲಾ ಬಂಧನಗಳು ತಾನಾಗಿಯೇ ನಾಶವಾಗುತ್ತವೆ. ಮುಂದೆ ಹಡಪದಪ್ಪಣ್ಣನವರ ಪುಣ್ಯಸ್ತ್ರೀ ಲಿಂಗಮ್ಮನವರು, ಶರಣರ ಚರಣವನ್ನು ಆಶ್ರಯಿಸಿದಾಗ ಮಾತ್ರ ನಿಜವಾದ ಮುಕ್ತಿ ದೊರೆಯುತ್ತದೆ ಎಂದು ಹೇಳುತ್ತಾರೆ. ಶರಣರ ಮಾರ್ಗದಲ್ಲಿ ನಡೆಯುವುದರಿಂದ ಮನಸ್ಸಿನ ಅಹಂಕಾರ, ಆಸೆ ಮತ್ತು ಮೋಹಗಳು ದೂರವಾಗಿ ಆತ್ಮಜ್ಞಾನ ಉಂಟಾಗುತ್ತದೆ. “ಬಂಧನಗಳ ಕೊಂಬೆಗಳನ್ನು ಕತ್ತರಿಸುವುದಕ್ಕಿಂತ, ಅವುಗಳ ಮೂಲವಾದ ಅಜ್ಞಾನ ಮತ್ತು ಅಹಂಕಾರವನ್ನು ನಿರ್ಮೂಲ ಮಾಡಿದಾಗಲೇ ನಿಜವಾದ ಮುಕ್ತಿ ದೊರೆಯುತ್ತದೆ.” ಎಂಬುದು ಈ ವಚನದ ತಾತ್ಪರ್ಯ.
ಕಾಯಕತತ್ವದ ರಾಯಭಾರಿ ಶರಣೆ ಆಯ್ದಕ್ಕಿ ಲಕ್ಕಮ್ಮನವರೂ ಕೂಡ ಕೂಡ ಬಿತ್ತುವ ಬೆಳೆಯುವ ಸಂಗತಿಯನ್ನಿಟ್ಟುಕೊಂಡು ತಮ್ಮ ಆರಾಧ್ಯ ದೇವನ ಕೃಪೆಗಾಗಿ ಹೀಗೆ ಬೇಡುತ್ತಿದ್ದಾರೆ:
ಆವ ಬೀಜ ಬೀಳುವಲ್ಲಿ
ಮೊಳೆ ಮುಖ ಹಿಂಚು ಮುಂಚುಂಟೆ?
ನೀ ಮರೆದಲ್ಲಿ ನಾನದಲ್ಲಿ ಬೇರೊಂದೊಡಲುಂಟೆ?
ಮೂಲ ನಷ್ಟವಾದಲ್ಲಿ ಅಂಕುರ ನಿಂದಿತ್ತು.
ಕೂಟಕ್ಕೆ ಸತಿಪತಿ ಎಂಬ ನಾಮವಲ್ಲದೆ
ಅರಿವಿಂಗೆ ಬೇರೊಂದೊಡಲುಂಟೆ?
ಬೇರೊಂದಡಿಯಿಡದಿರು,
ಮಾರಯ್ಯ ಪ್ರಿಯ ಅಮರೇಶ್ವರ ಲಿಂಗವನರಿಯಬಲ್ಲಡೆ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-268/ವಚನ ಸಂಖ್ಯೆ-707)
ಹೀಗೆ ಜೀವ ಸ್ಫುರಿಸುವ ಪ್ರಕ್ರಿಯೆಯನ್ನು ವರ್ಣಿಸುವ ಸಾಲುಗಳಲ್ಲಿ ಕೃಷಿಯಲ್ಲಿ ಬಿತ್ತನೆ ಬೀಜಕ್ಕಿರುವ ಮಹತ್ವ ಎದ್ದು ಕಾಣುತ್ತಿದೆ. ಸಸಿಯಾಗಿ, ಗಿಡವಾಗಿ, ಮರವಾಗಿ, ಹೆಮ್ಮರವಾಗಿ, ಹೂವಾಗಿ, ಕಾಯಿಯಾಗಿ, ಹಣ್ಣಾಗುವುದು, ಅದರೊಳಗಿಂದ ಮತ್ತೆ ಬೀಜ ಹೊರಟು ಅಸಂಖ್ಯೆ ಸಸಿಗಳಾಗಿ ಹಸಿರು ಹಬ್ಬುತ್ತ ಹೋಗುವುದು. ಹೀಗೆ ನಿಸರ್ಗದಲ್ಲಿ ನಿರಂತರ ನಡೆಯುವ ಚಲನಶೀಲ ಬದುಕಿನ ಮೂಲವಿರುವುದು ಬೀಜದಲ್ಲಿ. ಅದನ್ನೇ ವ್ಯೋಮಕಾಯ ಅಲ್ಲಮ ಪ್ರಭುಗಳು “ಬೀಜದೊಳಗಣ ವೃಕ್ಷದಂತೆ ನಿಮ್ಮ ಶರಣ ಸಂಬಂಧ” ಎನ್ನುವಾಗ ಸಕಲ ಜೀವರಾಶಿಗಳಲ್ಲಿ ಅದೃಶ್ಯವಾಗಿ, ಅಲಿಪ್ತವಾಗಿ, ಅವ್ಯಕ್ತವಾಗಿ, ಅಭೇದ್ಯವಾಗಿ, ಪರಮಾತ್ಮ ನೆಲೆಸಿದ್ದಾನೆಂದು ಹೇಳುತ್ತಾರೆ.
ಶರಣೆ ಅಕ್ಕಮ್ಮನವರು ಬೆಳೆಯ ರಕ್ಷಣೆಗೆ ಬೆದರು ಬೊಂಬೆಯಿಂದ ಕಾಡು ಪ್ರಾಣಿ –ಕೀಟಗಳು , ಪಕ್ಷಿಗಳಿಂದ ಬೆಳೆಗಳ ಆರೈಕೆಯ ವಿಶ್ಲೇಷಣೆ ಮಾಡುತ್ತ:
ಕೆಯಿಗೆ ಬೆಚ್ಚು ಬೆದರ ಕಟ್ಟುವಲ್ಲಿ
ಆ ಲೆಪ್ಪಕ್ಕೆ ಇಷ್ಟಲಿಂಗ, ರುದ್ದರಾಕ್ಷಿ, ಭಸಿತಪಟ್ಟವ ಕಟ್ಟಿ,
ಎನ್ನ ಕೆಯ್ಯ ತಪ್ಪಲಲ್ಲಿ ಕಾಷ್ಠವ ನೆಟ್ಟು, ಕಟ್ಟಿದ ಮತ್ತೆ,
ವಿಹಂಗಕುಲ ಮೃಗಜಾತಿ ಮುಟ್ಟಲಿಲ್ಲ.
ಮೀರಿಬಂದು ಮುಟ್ಟಿಹೆನೆಂದಡೆ ಮುಟ್ಟುವುದಕ್ಕೆ ಮುನ್ನವೇ
ಅಟ್ಟೆ ಅದ್ದರಿಸಿ ಕುಟ್ಟಿ ಓಡಿಸುವವು.
ಅದು ತೃಣದ ಲೆಪ್ಪದ ಬಲಿಕೆಯೋ!
ತನ್ನ ಚಿತ್ತದ ಬಲಿಕೆಯೋ?
ಅದು ಎನ್ನ ನಇನ್ನ ದೃಷ್ಟದ ಭಾವ.
ಅದು ಎನ್ನ ಸ್ವತಂತ್ರವಲ್ಲ; ಅದು ನಿಮ್ಮಯ ಭಾವ,
ಆಚಾರವೇ ಪ್ರಾಣವಾದ ರಾಮಲಿಂಗೇಶ್ವರಲಿಂಗಾ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-171/ವಚನ ಸಂಖ್ಯೆ-470)
ಶರಣೆ ಅಕ್ಕಮ್ಮನವರ ಈ ವಚನದಲ್ಲಿ ಬೆಳೆ ರಕ್ಷಣೆಗಾಗಿ ರೈತರು ಬಳಸುವ ಬೆದರು ಬೊಂಬೆಗಳ ಕುರಿತು ಹೇಳಲಾಗಿದೆ. ಜೀವಿಗಳಿಗೆ ಹಾನಿ ಮಾಡದೆ ಪ್ರಕೃತಿಯೊಂದಿಗೆ ಸಹಬಾಳ್ವೆ ನಡೆಸಬೇಕು ಹಾಗೂ ನಿಜವಾದ ಭಕ್ತಿ ಮನಸ್ಸಿನ ಶುದ್ಧತೆಯಲ್ಲಿ ಇದೆ ಎಂಬ ಸಂದೇಶವನ್ನು ವಚನ ಸಾರುತ್ತದೆ.
ಶರಣ ಕೋಲ ಶಾಂತಯ್ಯನವರ ಈ ವಚನದಲ್ಲಿ ಪ್ರಕೃತಿಯಲ್ಲಿ ಸಸ್ಯಗಳು ಫಲಾಪೇಕ್ಷೆ ಕಾಣದೇ ಮನುಷ್ಯನಿಗೆ ಆಹಾರ ಒದಗಿಸುವ ನಿಸ್ವಾರ್ಥದ ಪರಿಕಲ್ಪನೆಯ ಬಗ್ಗೆ ವಿವರಿಸುತ್ತ ಹೀಗೆ ಹೇಳುತ್ತಾರೆ:
ಬಿತ್ತಿದ ಬೆಳೆ, ಕಟ್ಟಿದ ಕೆರೆ, ಸಲಹಿದ ಶರೀರ, ನೆಟ್ಟ ವೃಕ್ಷ
ತನಗಲ್ಲದೆ ಅವಕ್ಕೊಡಲುಂಟೆ?
ತಾ ಮಾಡುವ ಭಕ್ತಿ ತನಗಲ್ಲದೆ
ಬೇರೊಂದು ಗುಣವನರಸಲಿಲ್ಲ.
ಆಪರಿಯ ನಿನ್ನ ನೀ ತಿಳಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-71/ವಚನ ಸಂಖ್ಯೆ-158)
ಈ ವಚನದಲ್ಲಿ ಪ್ರಕೃತಿಯ ನಿಸ್ವಾರ್ಥ ಗುಣವನ್ನು ವರ್ಣಿಸಲಾಗಿದೆ. ಮರ, ಬೆಳೆ ಮತ್ತು ಕೆರೆಗಳು ತಮ್ಮಗಾಗಿ ಅಲ್ಲದೆ ಇತರರ ಉಪಕಾರಕ್ಕಾಗಿ ಇರುವಂತೆ, ಮಾನವನ ಭಕ್ತಿಯೂ ಸ್ವಾರ್ಥರಹಿತವಾಗಿರಬೇಕು ಎಂಬ ಸಂದೇಶವನ್ನು ವಚನ ನೀಡುತ್ತದೆ.
ಶರಣ ಏಕಾಂತ ರಾಮಿತಂದೆಯವರು ಬೀಜವಿಜ್ಞಾನದ ಬಗ್ಗೆ ಹೆಸರಿಸುತ್ತ:
ಮನ ಲಿಂಗದಲ್ಲಿ ನಿಂದಿತ್ತೆಂಬಲ್ಲಿ
ಆ ಮನ ಲಿಂಗಕ್ಕೆ ನೆಲೆಯೋ?
ಲಿಂಗ ಮನದ ಸಂಗಿಯೋ?
ಎಂಬುದ ತಿಳಿದೆನೆಂಬುದು ಸಂಗವೋ? ನಿಸ್ಸಂಗವೋ?
ಬೀಜದೊಳಗಣ ತಿರುಳು ಭೇದಿಸಿ ಪುಟ್ಟುವಲ್ಲಿ
ಅದು ತನ್ನಯ ಸುನಾದದಿಂದವೋ?
ಅಪ್ಪುವಿನ ಬಿಂದುವಿನ ಭೇದದಿಂದವೊ?
ಈ ಉಭಯ ಬೆಲೆ ಫಟಿಸಿದಲ್ಲಿ ಯೋಗಕೂಟ.
ಆತ್ಮಲಿಂಗದ ಭೇದ, ಮುಕ್ತಿಭೇದ ನಿಂದಲ್ಲಿ
ಎನ್ನಯ್ಯ ಚೆನ್ನರಾಮನ ಕೂಟದ ಬೆಳಗು.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-733/ವಚನ ಸಂಖ್ಯೆ-1649)
ಇಲ್ಲಿ ಬೀಜದ ಬೆಳವಣಿಗೆಯನ್ನು ಆತ್ಮಜ್ಞಾನಕ್ಕೆ ಹೋಲಿಸಲಾಗಿದೆ. ಬೀಜ ಒಡೆದು ಮೊಳಕೆ ಬರುತ್ತದೆಯೋ ಹಾಗೆಯೇ ಆತ್ಮ ಮತ್ತು ಲಿಂಗದ ಏಕತ್ವದಿಂದ ಮುಕ್ತಿ ಮತ್ತು ಜ್ಞಾನ ದೊರೆಯುತ್ತದೆ ಎಂಬ ತಾತ್ವಿಕ ಅರ್ಥವನ್ನು ವಚನ ತಿಳಿಸುತ್ತದೆ.
ಶರಣ ಮಾದಾರ ಧೂಳಯ್ಯನವರು ಹೀಗೆ ಹೇಳುತ್ತಾರೆ:
ಆಕಾಶದ ನೀರಿಂಗೆ, ಮತ್ತೇತರಲ್ಲಿಯೂ
ತಿಳಿದಿಹೆನೆಂಬ ಸೂತಕವುಂಟೆ?
ಪೃಥ್ವಿಯ ಸಂಗವ ಕೂಡಿದ ಅಪ್ಪುವಿಂಗಲ್ಲದೆ
ನಿಶ್ಚಯದ ಸುಜಲಕ್ಕುಂಟೆ?
ಕರ್ಮದ ಕಪಟ, ನಿಶ್ಚಯವಾದ ನಿಜತತ್ವಭಾವಿಗೆ
ಮೇಲೊಂದು ಹತ್ತುವ ಹಾವಸೆ ಒಂದೂ ಇಲ್ಲ,
ಕಾಮಧೂಮ ಧೂಳೇಶ್ವರಾ.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-733/ವಚನ ಸಂಖ್ಯೆ-1649)
ಆಕಾಶ, ಭೂಮಿ ಮತ್ತು ನೀರಿನ ಸಹಜ ಸಂಬಂಧವನ್ನು ಉದಾಹರಿಸಿ ಸತ್ಯ ಮತ್ತು ನಿಜತ್ವದ ಮಹತ್ವವನ್ನು ತಿಳಿಸಲಾಗಿದೆ. ಕಪಟ ಮತ್ತು ಅಹಂಕಾರದಿಂದ ಮುಕ್ತಿ ಸಿಗುವುದಿಲ್ಲ; ಶುದ್ಧ ಮನಸ್ಸು ಮತ್ತು ನಿಷ್ಠೆಯ ಜೀವನವೇ ಸತ್ಯದ ದಾರಿ ಎಂಬ ಸಂದೇಶವನ್ನು ವಚನ ನೀಡುತ್ತದೆ.
ಶರಣ ಅರಿವಿನ ಮಾರಿತಂದೆಯವರು:
ಬೇರಿಗೆ ನೀರನೆರೆದಲ್ಲಿ ಆ ಗಿಡುವಿಗೆ ಕಡೆ ನಡು ಮೊದಲೆನ್ನದೆ
ಸರ್ವಾಂಗವ ವೇಧಿಸಿ ಸಂಪನ್ನಿಕೆಯ ದೃಕ್ಕಿಂಗೆ ತೋರುವಂತೆ,
ಚಿತ್ತುವಿನ ಎರಕ ನಿಜತತ್ವದ ಕುರುಹಿನಲ್ಲಿ ಪರಿಪೂರ್ಣವಾಗಿ
ಸಂಪದ ತೋರುತ್ತದೆ.
ಕುರಿತ ಕುರುಹಿನ ಮರೆಯಲ್ಲಿ ಅರಿವು ನಿಂದು
ಕುರುಹು ನಿಷ್ಪತ್ತಿಯಾಗುತ್ತದೆ ಎಂಬ ಸಂದೇಹ ನಿಂದಿತ್ತು.
ಎಂಬುದನರಿತಾಗ ಬೆಳಗು ತೋರುತ್ತದೆ
ಸದಾಶಿವಮೂರ್ತಿಲಿಂಗದಲ್ಲಿ.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-140/ವಚನ ಸಂಖ್ಯೆ-360)
ಅರಿವಿನಮಾರಿತಂದೆಯವರು ನಿಸರ್ಗ ಮತ್ತು ಜೀವಿಗಳ ಬದುಕಿನ ಸಂಬಂಧದ ಸೂಕ್ಷ್ಮ ಬೆಳಕು ಚೆಲ್ಲುವ ವಿಶ್ಲೇಷಣೆಯನ್ನು ಮಾಡುತ್ತ:
ಓಗರ ಹಸಿಯಿತ್ತೆಂದು ಉಂಬವರಿಲ್ಲ,
ನೀರು ಬಾಯಾರಿತ್ತೆಂದು, ಕುಡಿವರಿಲ್ಲ,
ಭೂಮಿಗೆ ಬಡತನವೆಂದು ಬಿತ್ತುವರಿಲ್ಲ,
ತಮ್ಮ ಒಲವರಕ್ಕೆ ತಾವು ಮಾಡುವಲ್ಲಿ ಗನ್ನದ ಆಸೆ ಬೇಡ,
ಸದಾಶಿವಮೂರ್ತಿ ಲಿಂಗವನರಿವುದಕ್ಕೆ.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-156/ವಚನ ಸಂಖ್ಯೆ-406)
ಈ ವಚನಗಳಲ್ಲಿ ಜ್ಞಾನ, ಪ್ರಕೃತಿ ಮತ್ತು ಜೀವನದ ಪರಸ್ಪರ ಸಂಬಂಧವನ್ನು ವಿವರಿಸಲಾಗಿದೆ. ಗಿಡಕ್ಕೆ ನೀರು ಕೊಟ್ಟರೆ ಅದು ಸಂಪೂರ್ಣವಾಗಿ ಬೆಳೆಯುವಂತೆ, ಸತ್ಯಜ್ಞಾನವು ಮನಸ್ಸನ್ನು ಪರಿಪೂರ್ಣಗೊಳಿಸುತ್ತದೆ; ಹಾಗೆಯೇ ಪ್ರಕೃತಿಯ ಪ್ರತಿಯೊಂದು ಅಂಶವೂ ಪರಸ್ಪರ ಅವಲಂಬಿತವಾಗಿದ್ದು, ಸ್ವಾರ್ಥವಿಲ್ಲದ ಜೀವನವೇ ಶ್ರೇಷ್ಠ ಎಂಬ ಸಂದೇಶವನ್ನು ವಚನಗಳು ಸಾರುತ್ತವೆ.
ಸಮಾರೋಪ:
ವಚನ ಸಾಹಿತ್ಯದಲ್ಲಿ ಕೃಷಿಯ ಚಿತ್ರಣವು ಕೇವಲ ಹೊಲ–ಬೆಳೆಗಳ ವಿವರಣೆಯಾಗಿ ಮಾತ್ರ ಉಳಿಯದೆ, ಮಾನವ ಜೀವನದ ತತ್ತ್ವ, ಶ್ರಮದ ಮಹತ್ವ ಮತ್ತು ಪ್ರಕೃತಿಯೊಂದಿಗಿನ ಆತ್ಮೀಯ ಸಂಬಂಧವನ್ನು ಪ್ರತಿಬಿಂಬಿಸುತ್ತದೆ. ಬಸವಣ್ಣ ಹಾಗೂ ಇತರ ಶರಣರು “ಕಾಯಕವೇ ಕೈಲಾಸ” ಎಂಬ ಸಂದೇಶದ ಮೂಲಕ ಕೃಷಿ ಮತ್ತು ಶ್ರಮವನ್ನು ಪವಿತ್ರವಾದ ಜೀವನಮಾರ್ಗವೆಂದು ಸಾರಿದರು. ಅವರ ವಚನಗಳಲ್ಲಿ ರೈತನ ಪರಿಶ್ರಮ, ಮಣ್ಣಿನ ಮಹತ್ವ, ಬೀಜದ ಪ್ರತೀಕ ಮತ್ತು ಪ್ರಕೃತಿಯ ಸಮತೋಲನದ ಕುರಿತು ಆಳವಾದ ಚಿಂತನೆ ವ್ಯಕ್ತವಾಗುತ್ತದೆ.
ವಚನಕಾರರು ಕೃಷಿಯ ರೂಪಕಗಳ ಮೂಲಕ ಆತ್ಮಶುದ್ಧಿ, ಜ್ಞಾನ, ಭಕ್ತಿ ಮತ್ತು ಮಾನವೀಯ ಮೌಲ್ಯಗಳನ್ನು ಸುಲಭವಾಗಿ ಜನರಿಗೆ ತಲುಪಿಸಿದರು. ಹೊಲದಲ್ಲಿ ಕಳೆ ತೆಗೆಯುವಂತೆ ಮನಸ್ಸಿನ ದುರ್ಗುಣಗಳನ್ನು ದೂರ ಮಾಡಬೇಕು, ಉತ್ತಮ ಬೀಜ ಬಿತ್ತಿದಂತೆ ಉತ್ತಮ ಚಿಂತನೆಗಳನ್ನು ಬೆಳೆಸಬೇಕು ಎಂಬ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ. ಕೃಷಿಯನ್ನು ಅವರು ಕೇವಲ ಜೀವನೋಪಾಯವಲ್ಲದೆ, ಸಮಾನತೆ, ನೈತಿಕತೆ ಮತ್ತು ಸಾಮಾಜಿಕ ಜವಾಬ್ದಾರಿಯ ಸಂಕೇತವಾಗಿ ಚಿತ್ರಿಸಿದ್ದಾರೆ.
ಇಂದಿನ ಯಾಂತ್ರಿಕ ಮತ್ತು ವ್ಯಾಪಾರಮಯ ಜೀವನದಲ್ಲಿ ಪ್ರಕೃತಿ ಹಾಗೂ ಕೃಷಿಯ ಮೌಲ್ಯ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ, ವಚನ ಸಾಹಿತ್ಯದ ಕೃಷಿ ಚಿಂತನೆಗಳು ಮಾನವ ಸಮಾಜಕ್ಕೆ ದಾರಿದೀಪವಾಗಿವೆ. ಪರಿಸರ ಸಂರಕ್ಷಣೆ, ಶ್ರಮಕ್ಕೆ ಗೌರವ ಮತ್ತು ಸರಳ ಜೀವನದ ಆದರ್ಶಗಳನ್ನು ವಚನಗಳು ನಮಗೆ ಕಲಿಸುತ್ತವೆ. ಹೀಗಾಗಿ ವಚನ ಸಾಹಿತ್ಯವು ಕೃಷಿಯ ಮಹತ್ವವನ್ನು ಕೇವಲ ಆರ್ಥಿಕ ದೃಷ್ಟಿಯಿಂದ ಮಾತ್ರವಲ್ಲದೆ, ಆಧ್ಯಾತ್ಮಿಕ ಹಾಗೂ ಮಾನವೀಯ ದೃಷ್ಟಿಕೋನದಲ್ಲಿಯೂ ಉನ್ನತ ಮಟ್ಟಕ್ಕೆ ಎತ್ತಿ ಹಿಡಿದಿದೆ.
ವಚನಸಾಹಿತ್ಯ ಮಂದಾರ ಫೌಂಡೇಶನ್ (ರಿ) ವೇದಿಕೆಯಿಂದ ಪ್ರತೀ ಶನಿವಾರ ಆಯೋಜನೆ ಮಾಡಲಾಗುವ ಅಂತರರಾಷ್ಟ್ರೀಯ ಅಂತರ್ಜಾಲ ಉಪನ್ಯಾಸ ಮಾಲಿಕೆಯಲ್ಲಿ ಇದೇ ವಿಷಯದ ಕುರಿತು ದಿನಾಂಕ 30.05.2026, ಶನಿವಾರದಂದು ಡಾ. ಮೌನೇಶ್ವರಿ ಕಮ್ಮಾರ ಅವರು ಮಾತನಾಡಿದ ವಿಡೀಯೋವನ್ನು ವೀಕ್ಷಿಸಬಹುದು.
ಡಾ. ಮೌನೇಶ್ವರಿ ಕಮ್ಮಾರ,
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು,
ಮಾನವ ವಿಕಾಸ ಮತ್ತು ಕುಟುಂಬ ಅಧ್ಯಯನ ವಿಭಾಗ,
ಸಮುದಾಯ ವಿಜ್ಞಾನ ಮಹಾವಿದ್ಯಾಲಯ,
ಕೃಷಿ ವಿಶ್ವವಿದ್ಯಾಲಯ,
ಧಾರವಾಡ – 580 005
ಮೊಬೈಲ್ ಸಂಖ್ಯೆ: 94486 31170
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ:
- ಮೋಬೈಲ್ ನಂ. 9741 357 132
- e-Mail ID: info@vachanamandara.in / admin@vachanamandara.in






Total views : 65581