![]()
ವೇದಮೂರ್ತಿ ಸಂಗಣ್ಣ ಶರಣರು ಹನ್ನೆರಡನೆಯ ಶತಮಾನದ ಬಸವಣ್ಣನವರ ಸಮಕಾಲೀನರು. ಹಾಗೂ ಕಲ್ಯಾಣ ಕ್ರಾಂತಿಯ ಕಾಲ ಘಟ್ಟದ ಒಬ್ಬ ಪ್ರಮುಖ ಶರಣರಾಗಿದ್ದಾರೆ. ಅಲ್ಲದೆ ವಚನಗಳನ್ನು ಬರೆದು ವಚನಕಾರರೆನಿಕೊಂಡಿದ್ದಾರೆ. ವೇದ, ಆಗಮ ಶಾಸ್ತ್ರಗಳಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಇವರು ಬಸವಣ್ಣನವರ ತತ್ವಗಳಿಂದ ಆಕರ್ಷಿತರಾಗಿ ಶರಣ ಚಳುವಳಿಯಲ್ಲಿ ಸಕ್ರೀಯವಾಗಿ ಪಾಲ್ಗೊಂಡವರು. ಇವರ ಕಾಲ ಸುಮಾರು ಕ್ರಿ. ಶ. 1160 ರಲ್ಲಿ ಬದುಕಿದ್ದರು ಎಂದು ಇತಿಹಾಸಕಾರರು ಗುರುತಿಸಿದ್ದಾರೆ. ಇವರ ಕಾಯಕ – ಇವರು ಮೂಲತಃ ವೇದಾಗಮ ಪಂಡಿತರಾಗಿದ್ದರು. ವೇದ, ಶಾಸ್ತ್ರ ಹಾಗೂ ಪುರಾಣಗಳ ಆಳವಾದ ಅಧ್ಯಯನಗೈದ ಜ್ಞಾನಿಗಳು. ವೇದಗಳ ಆಳವಾದ ಅಧ್ಯಯನ ಜ್ಞಾನವಿದ್ದ ಕಾರಣ ಇವರಿಗೆ “ವೇದಮೂರ್ತಿ” ಎಂಬ ಗೌರವದ ಹೆಸರು ಬಂದಿದೆ.
ವೈಚಾರಿಕ ತತ್ವಜ್ಞಾನಗಳ ಹಿನ್ನೆಲೆಯಲ್ಲಿ ವೇದಮೂರ್ತಿ ಸಂಗಣ್ಣ ಶರಣರ ವಿಚಾರಗಳನ್ನು ನೋಡಿದರೆ ವೇದಾಗಮ ಪಂಡಿತರಾಗಿದ್ದರೂ ಕೇವಲ ಗ್ರಂಥಜ್ಞಾನಕ್ಕೆ ಸೀಮಿತರಾಗಿರದೆ, ಕರ್ಮಕಾಂಡವನ್ನು ವಿರೋಧಿಸಿ ಶರಣ ಧರ್ಮದ ವಿಚಾರಧಾರೆಗಳ ಜ್ಞಾನಮಾರ್ಗವನ್ನು ಅಪ್ಪಿಕೊಂಡಿದ್ದರು ಒಪ್ಪಿಕೊಂಡಿದ್ದರು. ಇವರು ತಮ್ಮ ಜ್ಞಾನ ಚಿಂತನೆಗಳ ಮೂಲಕ ವಚನ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅಲ್ಲದೆ ಶರಣ ಚಳುವಳಿಯಲ್ಲಿ ಪಾಂಡಿತ್ಯ ಮತ್ತು ಕ್ರಾಂತಿಕಾರಿ ವಿಚಾರಗಳನ್ನು ಸಮೀಕರಿಸಿದ ವಚನಕಾರರಲ್ಲಿ ವೇದಮೂರ್ತಿ ಸಂಗಣ್ಣನವರು ಪ್ರಮುಖ ಸ್ಥಾನವನ್ನು ಪಡೆದಿದ್ದಾರೆ.
ಇವರು “ಲಲಾಮಭೀಮಸಂಗಮೇಶ್ವರಲಿಂಗ” ಎಂಬ ವಚನಾಂಕಿತದಲ್ಲಿ ವಚನ ರಚಿಸಿದ್ದಾರೆ. ಈಗ ಇವರು ಬರೆದ 10 ವಚನಗಳು ದೊರಕಿವೆ. ವಚನಗಳು ಆಧ್ಯಾತ್ಮಿಕ, ತಾತ್ವಿಕ ಚಿಂತನೆಗಳಿಂದ ಕೂಡಿವೆ.
ಶರಣ ವೇದಮೂರ್ತಿ ಸಂಗಣ್ಣನವರ ವಚನಾಂಕಿತ ಅತ್ಯಂತ ವಿಶಿಷ್ಠ ಅರ್ಥವನ್ನು ನೀಡುತ್ತದೆ. “ಲಲಾಮ” ಎಂದರೆ ಮುಂದಲೆಯ ಆಭರಣ, ಬೈತಲೆಮಣೆ, ಬೈತಲೆ ಬೊಟ್ಟು, ತಿಲಕ, ತಿಲಕ ಪ್ರಾಯವಾದುದು, ಶ್ರೇಷ್ಠವಾದುದು, ಒಡೆಯ, ಸ್ವಾಮಿ, ಬಾವುಟ, ಧ್ವಜ, ತುದಿ, ಅಗ್ರ ಎನ್ನುವ ಅರ್ಥವನ್ನು ಕೊಡುತ್ತದೆ. ಭೀಮ ಎಂದರೆ ಶಕ್ತಿ, ಬಲ ಎನ್ನುವ ಅರ್ಥಗಳಿವೆ. ಇನ್ನು ಸಂಗಮೇಶ್ವರಲಿಂಗ ಎನ್ನುವುದು ಅಂತರಂಗ ಮತ್ತು ಬಹಿರಂಗದ ಲಿಂಗಾಂಗ ಸಂಯೋಗದ ತತ್ವವನ್ನು ತಿಳುತ್ತದೆ. ಹಾಗಾಗಿ ಅಂತರಂಗ ಬಹಿರಂಗದ ಸಂಯೋಗ ಅಥವಾ ಲಿಂಗಾಂಗ ಸಂಯೋಗವು ಬಲಶಾಲಿ ಹಾಗೂ ತಿಲಕಪ್ರಾಯವಾದುದು ಎನ್ನುವ ಸ್ಥೂಲ ಅರ್ಥ ನೀಡುತ್ತದೆ.
ಇವರು ಯಜ್ಞ ಯಾಗಗಳ ವಿರೋಧಿಯಾಗಿದ್ದರು. ಯಜ್ಞ ಯಾಗಾದಿಗಳನ್ನು ಟೀಕಿಸುತ್ತ ಜ್ಞಾನ ಸಾಧನೆಯ ರೀತಿಯನ್ನು ವಿವರಿಸುತ್ತಾರೆ. ಗದ್ಯದ ಲಕ್ಷಣಗಳನ್ನು ಅಳವಡಿಸಿಕೊಂಡ ವಚನಗಳಲ್ಲಿ ಅನೇಕ ಸಂಸ್ಕೃತೋಕ್ತಿಗಳನ್ನು ಹಾಗೂ ವೇದದ ಸಾಲುಗಳನ್ನು ಬಳಸಿಕೊಂಡು ತತ್ವಗಳನ್ನು ವಿವರಿಸಿದ್ದಾರೆ. ಅಲ್ಲದೆ ಶಾಸ್ತ್ರೀಯ ಪರಿಭಾಷೆಗಳನ್ನೂ ಬಳಸಿದ್ದಾರೆ. ಜ್ಞಾನ ಕೇವಲ ಕೆಲವರ ಗುತ್ತಿಗೆ ಮಾತ್ರವಲ್ಲ ಅದು ಸರ್ವರ ಸೊತ್ತೂ ಹೌದು ಎಂಬುದನ್ನು ಒತ್ತಿ ಹೇಳಿರುವರು. ಕೇವಲ ಬಾಹ್ಯ ಆಚರಣೆಗಳಿಗಿಂತ ಅಂತರಂಗದ ಶುದ್ಧಿ ಮತ್ತು ಜ್ಞಾನ ಸಾಧನೆ ಮುಖ್ಯ ಅನ್ನುವದನ್ನು ಹೇಳಿದ್ದಾರೆ. ಏಕದೇವೋಪಾಸನೆಯೂ ಇಲ್ಲಿ ಮುಖ್ಯ ಎಂಬುದನ್ನು ವಚನಗಳ ಮೂಲಕ ಪ್ರತಿಪಾದಿಸಿರುವರು. ಇವರ ಪ್ರಸಿದ್ಧ ವಚನದ ಸಾಲು ಹೀಗಿದೆ-
ಕೃತಯುಗದಲ್ಲಿ ಕುಂಜರಯಾಗಕ್ಕೆ
ತ್ರೇತಾಯುಗದಲ್ಲಿ ಅಶ್ವಯಾಗಕ್ಕೆ
ದ್ವಾಪರದಲ್ಲಿ ಮಹಿಷಯಾಗಕ್ಕೆ, ಕಲಿಯುಗದಲ್ಲಿ ಅಜಯಾಗಕ್ಕೆ
ಇಂತೀ ವೇದಗಳಿಂದ ವೇದವೇದ್ಯರೆ ನೀವು?
ವೇದಯಾಗಕ್ಕೆ ವಧೆಯುಂಟೆ?
ಇಂತೀ ಭೇಧವನರಿಯದೆ ಶಾಪಹತರುಗಳಿಗೆ
ಸರ್ವಜ್ಞಾತೃದೃಷ್ಟವಪ್ಪುದೆ?
ಇಂತೀ ವೇದವೇದ್ಯರು ಶಾಸ್ತ್ರಸಂಪನ್ನರು.
ಪುರಾಣಪೂರ್ವಜ್ಞಾನಯುತರು,
ಸಕಲಾಗಮಕ್ಕತೀತರುಎಮ್ಮವರು,
ಲಲಾಮಭೀಮಸಂಗಮೇಶ್ವರಲಿಂಗದೊಳಗಾದಶರಣರು
(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-46/ವಚನ ಸಂಖ್ಯೆ-98)
ಸಾಂಪ್ರದಾಯಿಕ ವೈದಿಕ ಧರ್ಮದಲ್ಲಿದ್ದ ಪ್ರಾಣಿಬಲಿ ಹಾಗೂ ಯಜ್ಞಯಾಗಾದಿಗಳನ್ನು ತೀವ್ರವಾಗಿ ಟೀಕಿಸಿದ್ದಾರೆ. ವೇದಯಾಗಕ್ಕೆ ವಧೆಯುಂಟೇ? ಎಂದು ಪ್ರಶ್ನಿಸುವ ಮೂಲಕ ಹಿಂಸೆಯನ್ನು ಆಧರಿಸಿದ ಧರ್ಮ ಆಚರಣೆಯನ್ನು ನಿರಾಕರಿಸಿದ್ದಾರೆ. ಹೀಗೆ ಯಜ್ಞ ಯಾಗಾದಿಗಳ ಖಂಡನೆಯನ್ನು ಉಗ್ರವಾಗಿ ಮಾಡಿರುವದನ್ನು ಕಾಣಬಹುದು.
ಲಿಂಗಾಯತ ಧರ್ಮವನ್ನು ತರ್ಕಬದ್ಧವಾಗಿ ಪ್ರತಿಪಾದಿಸಿರುವರು.
ಪೂರ್ವ ಚಿಂತನೆಯಿಂದ ಕಂಡು,
ಉತ್ತರಚಿಂತನೆಯಿಂದ ಖಂಡಿಸಿ,
ಲಕ್ಷಾಲಕ್ಷವೆಂಬ ಬೀಜಾಕ್ಷರದ ಪ್ರಣವದ
ಮೂಲಾಕ್ಷರದ ಚತುರ್ಭೇದವನರಿದು
ಪಂಚಾಕ್ಷರಿ ಮುಂತಾದ ಷಡಕ್ಷರಿಯೊಳಗಾದ
ಐವತ್ತೊಂದನೆಯ ಅಕ್ಷರದಲ್ಲಿ ನಿರ್ವಾಹವೇದ
ಮುಂತಾದ ಶಾಸ್ತ್ರದೊಳಗಾದ,
ಪುರಾಣಾಗಮಂಗಳೆಲ್ಲವೂ ನಾನಾರೆಂಬುದ ತಿಳಿವುದಕಿಕ್ಕಿದ ಭಿತ್ತಿ.
ತನ್ನ ತಾನರಿದ ಮತ್ತೆ ಮಿಕ್ಕಾದ ಉಳುಮೆ ತನಗನ್ಯಭಿನ್ನವಿಲ್ಲ.
ಲಲಾಮಭಿಮಸಂಗಮೇಶ್ವರಲಿಂಗವಲ್ಲದಿದೆರೆಡೆಯಲ್ಲ.
(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-48/ವಚನ ಸಂಖ್ಯೆ-102)
ಕೇವಲ ಆಡಂಬರ ಭಕ್ತಿಯನ್ನು ತೋರುವವರನ್ನು, ಲಿಂಗನಿಷ್ಠೆ ಇಲ್ಲದವರನ್ನು ಮತ್ತು ಅಂತವರ ಸೋಗಲಾಡಿತನವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ವಚನ – ನಿರ್ವಚನ :
ವೇಳೆಯನರಿದು ಧ್ವನಿದೋರುವ ತಾಮ್ರಚೂಡಂಗೆ ಅದಾವ ಜ್ಞಾನ?
ಮಧುರರಸಂಗಳಿದ ಠಾವನರಿದೆಯಿದುವ ಪಿಪೀಲಿಕಂಗೆ ಅದಾವ ಜ್ಞಾನ?
ತಾನುಂಡು ನೆನೆದಡೆ ಶಿಶು ತೃಪ್ತಿಯಹ ಕೂರ್ಮಂಗೆ ಅದಾವ ಜ್ಞಾನ?
ಅರಿದು ನಡೆದಡೆ ವೇದವೇದ್ಯನು, ಅರಿದುನಡೆದಡೆ ಶಾಸ್ತ್ರ ಸಂಬಂಧಿ,
ಅರಿದು ನಡೆದಡೆ ಪುರಾಣಪುಣ್ಯವಂತನು,
ಅರಿದು ನಡೆದಡೆ ಸಕಲಾಗಮಭರಿತನು.
ಇಂತೀ ಪಂಚಾಕ್ಷರಿಯ ಮೂಲ ಷಡಕ್ಷರಿಯ ಭೇದ.
ಜಗಕ್ಕಾಧಾರವಾರೆಂಬುದ ಏಕಮೇವನದ್ವಿತೀಯನೆಂಬುದ ತಿಳಿದು,
ಸೋಹಂ ಕೋಹಂ ಎಂಬುದ ತಿಳಿದು,
ಆ ನಿಜವೆ ವಸ್ತುವಿಗೊಡಲೆಂಬುದ ಪ್ರಮಾಣಿಸಿ,
ನುಡಿದು ನಡೆಯ ಬಲ್ಲವನೆ ವೇದವೇದ್ಯನು ಕಾಣಾ,
ಲಲಾಮಭೀಮಸಂಗಮೇಶ್ವರಲಿಂಗವು ತಾನಾದ ಶರಣ.
(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-50/ವಚನ ಸಂಖ್ಯೆ-106)
ವಚನದ ತಾತ್ಪರ್ಯ:
ಪ್ರಸ್ತುತ ವಚನವು ನಿಜವಾದ ಯೋಗ್ಯ ಜ್ಞಾನಿಯು ಪರತತ್ವದ ಪರಮಜ್ಞಾನದ ಪರವಸ್ತು ಯಾರೆಂಬುದನ್ನು ನಿರೂಪಿಸುವದಾಗಿದೆ. ನಿಸರ್ಗದಲ್ಲಿ ಕೆಲವು ಪ್ರಾಣಿ, ಪಕ್ಷಿ, ವನಸ್ಪತಿಗಳಿಗೆ ಅವುಗಳ ಜೀವನ ಕ್ರಮ ಸುಗಮವಾಗಿ ಸಾಗಲೆಂದು ವಿಶೇಷವಾದ ಗುಣವನ್ನು ದಯಪಾಲಿಸಿರುವನು. ಅದೆಲ್ಲವೂ ನಿಸರ್ಗದ ಸಹಜ ಕೊಡುಗೆಯಾಗಿದೆ. ಅದರ ಆಧಾರದಲ್ಲಿಯೇ ಈ ವಚನದಲ್ಲಿ ಕೆಲವು ಉದಾಹರಣೆಗಳನ್ನು ತೆಗೆದುಕೊಂಡು ನಿತ್ಯಸತ್ಯ ಜ್ಞಾನ ಯಾವುದೆಂಬುದನ್ನು ಪ್ರತಿಪಾದಿಸಲಾಗಿದೆ.
ಬೆಳಗಿನ ಜಾವದಲ್ಲಿ ದಿನನಿತ್ಯ ಸರಿಯಾದ ಸಮಯಕ್ಕೆ “ವೇಳೆಯನರಿದು ಧ್ವನಿದೋರುವ ತಾಮ್ರಚೂಡಂಗೆ ಅದಾವ ಜ್ಞಾನ?” ಕೋಳಿ ಕೂಗಿ ಬೆಳಗಾಯಿತೆಂದು ಸೂಚಿಸುವ ಜ್ಞಾನ ಪಡೆದಿದೆಯೆಂದರೆ ಅದು ತಾನಾರೆಂದು ತನ್ನ ನಿಜದರಿವಿನ ನಿತ್ಯಜ್ಞಾನದಲ್ಲಿ ಅದು ಭೌತಿಕ ಜ್ಞಾನ. ಅದರಂತೆ “ಮಧುರರಸಂಗಳಿದ ಠಾವನರಿದೆಯಿದುವ ಪಿಪೀಲಿಕಂಗೆ ಅದಾವ ಜ್ಞಾನ?’ ಸಿಹಿಯು (ರುಚಿಯಾದ ಪದಾರ್ಥ) ಯಾವ ಸ್ಥಾನದಲ್ಲಿದೆಯೆಂದು ತನ್ನ ವಾಸನಾ ಸಾಮರ್ಥ್ಯದಿಂದ ಇರುವೆಗಳು ಅರಿತು ಅಲ್ಲಿಗೆ ಹೋಗಿ ರುಚಿಸುವುದು. “ತಾನುಂಡು ನೆನೆದಡೆ ಶಿಶುತೃಪ್ತಿಯಹ ಕೂರ್ಮಂಗೆ ಅದಾವ ಜ್ಞಾನ?” ಅಂದರೆ ತನ್ನಿಂದ ದೂರದಲ್ಲಿ ಮರಳಿನ ಗುಂಡಿಯಲ್ಲಿರುವ ತನ್ನ ಮರಿಯನ್ನು ಆಮೆ ಸ್ಮರಿಸಿಕೊಂಡರೆ ಅದರ ಮರಿಯು ತೃಪ್ತಿ ಹೊಂದುವುದೆಂಬುದು ಕೂಡ ಭವದ ಬದುಕಿನ ಬಾಹ್ಯ ಜ್ಞಾನವೇ ಹೊರತು ಅದು ನಿಜದರಿವಿನ ನಿತ್ಯಜ್ಞಾನವಲ್ಲ.
“ಅರಿದು ನಡೆದಡೆ ವೇದವೇದ್ಯನು” ವೇದ ಪುರಾಣಗಳ ಪಾಂಡಿತ್ಯ ಎಷ್ಟೇ ಪಡೆದಿರಲಿ ವಾಕ್ಚಾತುರ್ಯದಿಂದ ಪ್ರತಿಪಾದಿಸಲಿ ಅದು ಬಾಹ್ಯ. ತನ್ನ ತಾನರಿದು ಭವದ ಯಾವುದೇ ವಿಷಯ ಬಂಧನಕ್ಕೆ ಒಳಗಾಗದೇ ನಿತ್ಯ ನಿರ್ಲಿಪ್ತನಾಗಿ ಇದ್ದು ಇಲ್ಲದಂತೆ ಇರುವವನೇ ವೇದವೇದ್ಯನು. “ಅರಿದುನಡೆದಡೆ ಶಾಸ್ತ್ರ ಸಂಬಂಧಿ” ಪುರಾಣದ ಪುಣ್ಯವಂತನು, ಸಕಳಾಗಮಭರಿತನು ಅಂದರೆ ಅರಿತಂತೆ ನಡೆಯುವ ಕ್ರಿಯಾಜ್ಞಾನ ಪರಿಪೂರ್ಣನು. ಪರವಸ್ತುವೇ ಆಗಿರುವನು. ಇಂತಹ ನಿರ್ಲಿಪ್ತತೆಯನ್ನು ಸಾಧಿಸಿದ ನಿರವಯಿಯೇ ಪಂಚಾಕ್ಷರಿಯ ಮೂಲ ಅಂದರೆ “ನಮಃ ಶಿವಾಯ” ದ ಮೂಲ ಅಂದರೆ ನಮಃ ನಮನ. ಕಣ್ಣಿಗೆ ಕಾಣುವ ಪ್ರಪಂಚವು ನನ್ನದಲ್ಲ. ಶಿವಾಯ ಅಂದರೆ ಎಲ್ಲವೂ ಪ್ರಣವ ಸ್ವರೂಪ ಶಿವನದು ಎಂದು ಸಮರ್ಪಣಾಭಾವ ಸಂಪನ್ನನಾಗುವುದು. ತಾನೂ ಕೂಡ ಪರಶಿವನೇ ಅವನ ಸ್ವರೂಪನೇ ಆಗಿರುವೆನೆಂಬುದು. ಅಂದರೆ ಶಿವನೇ ತಾನು, ತಾನೇ ಶಿವನೆಂಬುದಲ್ಲಿ ಜೀವ-ಶಿವರ ಅಂತರವು ಷಡಕ್ಷರಿಯ ಭೇದವೆಂದರೆ “ಓಂ ನಮಃ ಶಿವಾಯ” ದಲ್ಲಿ “ಓಂ” ಕಾರವು ವಿಕಸನ ಕ್ರಿಯೆಗೆ ಮೂಲ ಪ್ರಣವವಾದ ಮೂರು ಬೀಜಾಕ್ಞರ ಪ್ರಣವಾಕ್ಷರ “ಓಂ” ಕಾರದಲ್ಲಿ ಅ+ಉ+ಮ ಗಳೊಂದಿಗೆ ಎರಡು ಸ್ವರ ಒಂದು ವ್ಯಂಜನ ಕೂಡಿ “ಓಂಕಾರ” ವಾಗಿದೆ. ಉತ್ಪತ್ತಿ, ಸ್ಥಿತಿ, ಲಯ ಈ ಮೂರೂ ಸ್ಥಿತಿಗಳನ್ನು ಒಳಗೊಂಡು ಲೀಲಾಮೂರ್ತಿಯಾಗಿದೆ. ಅಂದರೆ ಪರಶಿವತ್ವವೆಂಬುದು ಹೇಗೆ ತಾನಾರು? ತಾನೆಲ್ಲಿಂದ ಬಂದಿರುವೆನೆಂದು ತನ್ನಲ್ಲಿ ತಾನರಿತ ತಾನೇ ಆ ಪರಶಿವ. ಪರಶಿವನೇ ತಾನೆಂಬ ನಿಜೈಕ್ಯದಲ್ಲಿ ನಿಶ್ಚಿಂತನಾದವನೇ ನಿಜವಾದ ಜ್ಞಾನಿ. ಪರಮಜ್ಞಾನಿ ಪರಿಪೂರ್ಣನೆಂಬುದರಲ್ಲಿಯೇ ಸೋಹಂ, ಕೋಹಂ ಅಂದರೆ ನಾನೇ ನೀನು, ನೀನೇ ನಾನೆಂಬುದನ್ನು ಪರವಸ್ತುವಿನ ಪರಮತ್ವವನ್ನು ವೇದವೇದ್ಯ ಶರಣ ಸಂಗಣ್ಣನು ಇಲ್ಲಿ ಪ್ರಮಾಣಿಸಿದ್ದಾರೆ.
ಡಾ. ಗೀತಾ. ಎಸ್. ಡಿಗ್ಗೆ (ಏಳಂಗಡಿ)
ಕನ್ನಡ ಸಹಾಯಕ ಪ್ರಾಧ್ಯಾಪಕರು,
ಕನ್ನಡ ವಿಭಾಗ, ಭಾಷೆ ಮತ್ತು ಸಾಹಿತ್ಯ ಸಂಕುಲ,
ಪುಣ್ಯಶ್ಲೋಕ್ ಅಹಿಲ್ಯಾದೇವಿ ಹೊಳ್ಕರ್ ಸೊಲ್ಲಾಪುರ ವಿಶ್ವವಿದ್ಯಾಲಯ,
ಸೊಲ್ಲಾಪುರ.
ಮೊಬೈಲ್ ಸಂ. 99758 13477
ಇ-ಮೇಲ್: geetadigge01@mail.com
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ದ ಸಂಚಾಲಕರನ್ನು ಸಂಪರ್ಕಿಸಬೇಕಾದ:
- ಮೋಬೈಲ್ ನಂ. 97413 57132
- e-Mail ID: info@vachanamandara.in / admin@vachanamandara.in




Total views : 71572