ಶರಣೆ ಕಾಲಕಣ್ಣಿಯ ಕಾಮಮ್ಮ | ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

Loading

ಸಂಕ್ಷಿಪ್ತ ಪರಿಚಯ:
ಲಿಂಗ ತಾರತಮ್ಯ ತೀವ್ರವಾಗಿದ್ದ ಕಾಲಘಟ್ಟದಲ್ಲಿ ಮಹಿಳೆಯಲ್ಲಿ ತಾನೂ ಒಂದು ಚೇತನ ಎಂಬ ಅರಿವನ್ನು ಹುಟ್ಟು ಹಾಕಿದ್ದು 12 ನೇ ಶತಮಾನದ ಕಾಲ. ಇದೊಂದು ಅರಿವಿನ ಸ್ಫೋಟ. ಇದೇ ನಿಜವಾದ ಸ್ತ್ರೀ ಸಮಾನತೆ ಮತ್ತು ಸ್ವಾತಂತ್ರ್ಯದ ದ್ಯೋತಕ. ಮಹಾಮಾನವತಾವಾದಿ ಬಸವಣ್ಣನವರು ಮಹಿಳಾ ಸ್ವಾತಂತ್ರ್ಯದ ಹರಿಕಾರರು.

ಶರಣೆ ಕಾಲಕಣ್ಣಿಯ ಕಾಮಮ್ಮನವರು 12 ನೇ ಶತಮಾನದಲ್ಲಿ ಜೀವಿಸಿದ್ದ ಶರಣೆಯಾಗಿದ್ದಾರೆ. ಇವರು ದಲಿತ ಸಮುದಾಯದ ಮಹಿಳೆ. ಕೊರವ, ಕೊಂಚೆಕೊರವ ಸಮುದಾಯದಿಂದ ಬಂದವರು. ಅಂದು ಈ ಜನಾಂಗವನ್ನು ಪಶುಗಳಿಗಿಂತ ಕೀಳಾಗಿ ಕಾಣುತ್ತಿದ್ದರು. ದಲಿತ ಮಹಿಳೆಯರ ಸ್ಥಿತಿಯಂತೂ ಇನ್ನೂ ಶೋಚನೀಯವಾಗಿತ್ತು. ಇಂತಹ ಮಹಿಳೆಯರಿಗೆ ಅರಿವನ್ನು ನೀಡುವ ಪಾಠಶಾಲೆ ಅನುಭವ ಮಂಟಪವಾಗಿತ್ತು. ಅನುಭವ ಮಂಟಪದ ಧ್ಯೇಯವೇ ಇದಾಗಿತ್ತು. ಅಕ್ಕ ನಾಗಮ್ಮನವರು ಕಾಮಮ್ಮನವರನ್ನು ಅನುಭವ ಮಂಟಪಕ್ಕೆ ಕರೆತಂದರು. ಕಾಮಮ್ಮನವರು ತಮ್ಮ ಮನದ ಸಂಶಯ ಕಳೆದುಕೊಂಡು ಅನುಭಾವಿಗಳಾಗಿ ಪರಿವರ್ತಿತರಾಗುತ್ತಾರೆ. ಕಾಲಕಣ್ಣಿಯ ಕಾಮಮ್ಮನವರು ಹಗ್ಗ ಹೊಸೆಯುವ ಕಾಯಕ ಕೈಗೊಂಡಿದ್ದರು. “ಕಣ್ಣಿ” ಎಂದರೆ ಗೂಟಕ್ಕೆ ದನಕರುಗಳನ್ನು ಕಟ್ಟಲು ನಾರಿನಿಂದ ಹೊಸೆಯುವ ಹಗ್ಗ. “ಯಮಪಾಶ” ಎನ್ನುವ ಇನ್ನೊಂದು ಹೆಸರೂ ಇದೆ. ಕಾಮಮ್ಮನವರು ನಿತ್ಯ ಲಿಂಗಾರ್ಚನೆ ಮಾಡಿ ನಾರು ತಂದು ಹಗ್ಗ ಹೊಸೆದು ಮಾರಿ ಬಂದ ಧನದಿಂದ ದಾಸೋಹ ಮಾಡುತ್ತಿದ್ದರು. ಅನುಭವ ಮಂಟಪದಲ್ಲಿ ಅಕ್ಕ ನಾಗಮ್ಮ, ನೀಲಾಂಬಿಕೆ, ಗಂಗಾಂಬಿಕೆ, ಲಕ್ಕಮ್ಮ, ಸತ್ಯಕ್ಕ, ರೆಮ್ಮವ್ವೆ, ಅಕ್ಕಮ್ಮ, ಮೋಳಿಗೆ ಮಹಾದೇವಿ, ಅಕ್ಕ ಮಹಾದೇವಿ ಮುಂತಾದ ಶರಣೆಯರ ಅನುಭಾವ ಕೇಳಿ ಚರ್ಚಿಸಿ, ಸಂವಾದ ಮಾಡಿ ಅನುಭಾವದ ಎತ್ತರವನ್ನು ಅನುಭವಿಸಿದವರು ಇವರು. ಕಾಲಕಣ್ಣಿಯ ಕಾಮಮ್ಮ ಅನೇಕ ವಚನಗಳನ್ನು ಬರೆದಿರಬಹುದು. ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ನಾಶವಾಗಿರಬಹುದು ಎಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಸಧ್ಯ “ನಿರ್ಭಿತ ನಿಜಲಿಂಗ” ಎಂಬ ಅಂಕಿತದಲ್ಲಿ ಒಂದು ವಚನ ಲಭ್ಯವಿದೆ.

ವಚನ:
ಎನ್ನ ಕರಣಂಗಳ ಲಿಂಗದಲ್ಲಿ ಕಟ್ಟುವೆ
ಗುರುಲಿಂಗಜಂಗಮದ ಕಾಲ ಕಟ್ಟುವೆ
ವ್ರತಭ್ರಷ್ಟರ ನಿಟ್ಟೊರಸುವೆ
ಸುಟ್ಟು ತುರುತುರನೆ ತೂರುವೆ,
ನಿರ್ಭೀತ ನಿಜಲಿಂಗದಲ್ಲಿ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-287/ವಚನ ಸಂಖ್ಯೆ-748)

ನಿರ್ವಚನ:
ನಿರ್ಭಿಡೆಯ ಸ್ವಭಾವದ ಕಾಮಮ್ಮನವರು ಇಂದ್ರಿಯ ನಿಗ್ರಹ ಕುರಿತು, ವ್ರತಭ್ರಷ್ಠರ ಕುರಿತು ಹೊಸದಾದ ಪರಿಭಾಷೆಯಲ್ಲಿ ಕಠೋರ ಉಕ್ತಿಯಲ್ಲಿ ನುಡಿದಿರುವುದು ಸಹಜವಾಗಿ ಈ ವಚನದಲ್ಲಿ ಅಭಿವ್ಯಕ್ತವಾಗಿದೆ. ಕರಣಂಗಳ ಚೇಷ್ಟೆಗೆ ಕಡಿವಾಣ ಹಾಕಬೇಕೆಂದರೆ ಅಂಗಕರಣಂಗಳು ಲಿಂಗಕರಣಂಗಳಾಗಬೇಕು. ಕಾರಣ ಕರಣಂಗಗಳನ್ನೆಲ್ಲಾ ಲಿಂಗದಲ್ಲಿ ಕಟ್ಟಿ ಹಾಕುವೆ ಎಂಬ ದೃಢತೆ ಮೆಚ್ಚುವಂತಹದ್ದು. ಗುರು-ಲಿಂಗ-ಜಂಗಮರು ತನ್ನನ್ನು ಅಗಲಿ ಹೋಗದಂತೆ ಅವರ ಕಾಲ ಕಟ್ಟುವೆ ಎಂಬಲ್ಲಿ ಗುರು-ಲಿಂಗ-ಜಂಗಮ ಆರಾಧನೆಯ ತೀವ್ರತೆಯನ್ನು ವ್ಯಕ್ತಪಡಿಸುತ್ತಾರೆ. “ವ್ರತಭ್ರಷ್ಠರ ನಿಟ್ಟೊರೆಸುವೆ ಸುಟ್ಟು ತುರತುರನೆ ತೂರುವೆ” ಎಂಬಲ್ಲಿ ವ್ರತನಿಷ್ಠೆಯ ತೀವ್ರತೆ ಇದೆ. ಕಾಮಮ್ಮನವರ ಭಾಷಾ ಕಸುವು ಅವರ ನಿರ್ಭೀತತೆಯನ್ನು ತೋರುತ್ತದೆ. “ಕಟ್ಟುವೆ” ಎಂಬ ಪದಪ್ರಯೋಗ ಅವರ ಕಾಯಕವನ್ನು ಸೂಚಿಸುವ ಪದವಾಗಿ ಬಳಸಿಕೊಂಡಿದ್ದನ್ನು ಇಲ್ಲಿ ವಿಶೇಷವಾಗಿ ಗಮನಿಸಬಹುದಾಗಿದೆ. ಮನಸ್ಸು-ಅಂತರಂಗವನ್ನು ಲಿಂಗದಲ್ಲಿ ಕಟ್ಟುವ ಪರಿಕಲ್ಪನೆ ತುಂಬಾ ವಿಶಿಷ್ಟವಾದುದು. ಗುರು-ಲಿಂಗ-ಜಂಗಮರನ್ನು ಪೂಜಿಸದ ವ್ರತಭ್ರಷ್ಠರನ್ನು “ನಿಟ್ಟೊರೆಸುವೆ” “ಸುಟ್ಟು ತುರತುರನೆ ತೂರುವೆ” ಎಂಬ ಆಕ್ರೋಷದ ಭಾವ ಅವರೊಳಗಿರುವ ಗುರು-ಲಿಂಗ-ಜಂಗಮದ ಅಂತಃಕರಣ ನಿಜಪೂಜೆಗೆ ಅವರಿಗಿರುವ ನಿಷ್ಠೆಯ ಪ್ರತೀಕವಾಗಿದೆ.

ಡಾ. ಪುಷ್ಪಾವತಿ ಶಲವಡಿಮಠ,
ಕನ್ನಡ ಉಪನ್ಯಾಸಕರು,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು,
ಹಾನಗಲ್ಲ, ಹಾವೇರಿ ಜಿಲ್ಲೆ.
ಮೋಬೈಲ್.‌ ಸಂ. 97407 38330.

  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನಸಾಹಿತ್ಯ ಮಂದಾರ ಫೌಂಡೇಶನ್ ಸಂಚಾಲಕರನ್ನು ಸಂಪರ್ಕಿಸಬೇಕಾದ:
    • ಮೋಬೈಲ್ ನಂ. 9741 357 132
    • e-Mail ID: info@vachanamandara.in / admin@vachanamandara.in

Leave a Reply