ಶರಣ ಅಜಗಣ್ಣ ತಂದೆಗಳ ವಚನ  ನಿರ್ವಚನ | ಶ್ರೀಮತಿ. ಶಾಲಿನಿ ರುದ್ರಮುನಿ, ಹುಬ್ಬಳ್ಳಿ.

Loading

ವಚನ;
ಅಂತರಂಗದಲ್ಲಿ ಆಯತವನರಿದವಂಗೆ,
ಬಹಿರಂಗದಲ್ಲಿ ಹಮ್ಮೆಲ್ಲಿಯದಯ್ಯಾ.
ಅಂತರಂಗದಲ್ಲಿ ಅನುಮಿಷನಾಗಿ
ನಿರಂತರ ಲಿಂಗಸುಖಿ ನೋಡಯ್ಯಾ.
ಸರ್ವೇಂದ್ರಿಯ ಸಮ್ಮತವಾಯಿತ್ತು
ಮಹಾಘನ ಸೋಮೇಶ್ವರ ಮುಂತಾಗಿ.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-115/ವಚನ ಸಂಖ್ಯೆ-295)

ನಿರ್ವಚನ;
ಅಜಗಣ್ಣ ತಂದೆಯವರ ವಚನಗಳು ತತ್ವಜ್ಞಾನ, ಜ್ಞಾನಮಾರ್ಗ ಮತ್ತು ಆರೂಢ ಸ್ಥಿತಿಯನ್ನು ಬಿಂಬಿಸುತ್ತವೆ. ಇಷ್ಟಲಿಂಗ ಪೂಜೆ, ಸದ್ಭಕ್ತಿ ಮತ್ತು ಕಾಯಕದ ಮಹತ್ವವನ್ನು ಇವರ ವಚನಗಳಲ್ಲಿ ಕಾಣಬಹುದು.

ತನ್ನ ಅಂತರಂಗದ ಸತ್ಯವನ್ನು, ಆತ್ಮಸ್ವರೂಪವನ್ನು ಅರಿತವನಿಗೆ ಹೊರಗಿನ ಆಡಂಬರ, ಅಹಂಕಾರ, ಪ್ರದರ್ಶನಗಳ ಅವಶ್ಯಕತೆ ಇರುವುದಿಲ್ಲ. ಅವನು ಪ್ರತಿಕ್ಷಣವೂ ಶಿವಸ್ಮರಣೆಯಲ್ಲಿ, ಲಿಂಗಾನುಭವದಲ್ಲಿ ನೆಲೆಸಿರುತ್ತಾನೆ. ಆಗ ಅವನ ಮನಸ್ಸು, ಬುದ್ಧಿ ಹಾಗೂ ಇಂದ್ರಿಯಗಳೆಲ್ಲವೂ ಸಮನ್ವಯಗೊಂಡು ದೈವಿಕ ಶಾಂತಿಯನ್ನು ಅನುಭವಿಸುತ್ತವೆ.

ಅಂತರಂಗದಲ್ಲಿ ಆಯತವನರಿದವಂಗೆ” ಇಲ್ಲಿ “ಆಯತ” ಎಂದರೆ ನಿಜಸ್ವರೂಪ, ಆತ್ಮತತ್ವ, ಅಂತರಂಗದ ಸತ್ಯ. ತನ್ನೊಳಗಿನ ಚೈತನ್ಯವನ್ನು, ಆತ್ಮಜ್ಯೋತಿಯನ್ನು ಕಂಡುಕೊಂಡವನಿಗೆ ಜೀವನದ ನಿಜವಾದ ಗುರಿ ಏನು? ನ್ನುವ ಸ್ಪಷ್ಟ ಉತ್ತರ ಗೋಚರಿಸುತ್ತದೆ. ಹೊರಗಿನ ಜಗತ್ತನ್ನು ಗೆಲ್ಲುವ ಮೊದಲು ಮನುಷ್ಯ ತನ್ನನ್ನೇ ಅರಿಯಬೇಕು ಎಂಬ ಸಂದೇಶ ಇಲ್ಲಿದೆ. ರಾಷ್ಟ್ರಕವಿ ಡಾ. ಜಿ. ಎಸ್.‌ ಶಿವರುದ್ದಪ್ಪನವರು ಹೇಳಿದಂತೆ, “ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮುಳ್ಳುಗಳ ಗುಡಿಯೊಳಗೆ” ಎಂಬ ಧ್ವನಿ ಈ ವಚನದಲ್ಲಿಯೂ ಕೇಳಿಸುತ್ತದೆ.

ಬಹಿರಂಗದಲ್ಲಿ ಹಮ್ಮೆಲ್ಲಿಯದಯ್ಯಾ” ಮ್ಮು ಎಂದರೆ ಅಹಂಕಾರ, ಡಂಭಾಚಾರ ಪ್ರದರ್ಶನ ಎಂಬರ್ಥ. ತನ್ನೊಳಗಿನ ಸತ್ಯವನ್ನು ಕಂಡವನು ತನ್ನ ಜ್ಞಾನವನ್ನು ಪ್ರದರ್ಶಿಸುವುದಿಲ್ಲ. ಅವನಿಗೆ ಖ್ಯಾತಿಯ ಹಸಿವು ಇರುವುದಿಲ್ಲ. ಕನ್ನಡದ ಪ್ರಸಿದ್ದ ಗಾದೆಯ ಮಾತಿನಂತೆ “ಫಲವಿತ್ತ ರೆಂಬೆ ಬಾಗುತ್ತದೆ, ಗೊನೆ ಹೊತ್ತ ಬಾಳೆ ಬಾಗುತ್ತದೆ, ತೆನೆ ಹೊತ್ತ ದಂಟು ಬಾಗುತ್ತದೆ, ಏನೇನೂ ಇಲ್ಲದುದು ಬೀಗುತ್ತದೆ” ಅಂದರೆ, ಏನೂ ಇಲ್ಲದವರು, ಸಾಧನೆ ಮಾಡದವರು ಮಾತ್ರ ಅಹಂಕಾರದಿಂದ ಬೀಗುತ್ತಾರೆ. ಹಾಗೆ ಹಣ್ಣುಗಳಿಂದ ತುಂಬಿದ ಮರ ಗ್ಗಿ ನಿಲ್ಲುವಂತೆ, ನಿಜಜ್ಞಾನಿಯೂ ವಿನಯದಿಂದ ವಿನಮ್ರತೆಯಿಂದ ಬದುಕುತ್ತಾನೆ, “ತಿಳಿದವನು ಮೌನಿಯಾದ, ತಿಳಿಯದವನು ಮಾತುಗಾರನಾದ.” ಎನುವ ಹಾಗೆ ಜ್ಞಾನ ಬೆಳೆದಷ್ಟೂ ಅಹಂಕಾರ ಕರಗುತ್ತದೆ.

ಅಂತರಂಗದಲ್ಲಿ ಅನುಮಿಷನಾಗಿ”ಅನುಮಿಷ” ಎಂದರೆ ಕ್ಷಣಮಾತ್ರವೂ ವಿಚಲಿತವಾಗದೆ ಜಾಗೃತಿಯಿಂದ ಇರುವುದು. ಇದೊಂದು ಧ್ಯಾನಸ್ಥ ಸ್ಥಿತಿ. ಮನಸ್ಸು ಹೊರಗಿನ ಆಕರ್ಷಣೆಗಳಲ್ಲಿ ಅಲೆದಾಡದೆ ತನ್ನ ಕೇಂದ್ರದಲ್ಲಿ ನೆಲೆಸುವುದು. ಶರಣರ ದೃಷ್ಟಿಯಲ್ಲಿ ಭಕ್ತಿ ಎಂದರೆ ಕೆಲವು ನಿಮಿಷಗಳ ಪೂಜೆ ಅಲ್ಲ, ಬದುಕಿನ ಪ್ರತಿಕ್ಷಣದಲ್ಲಿಯೂ ಜಾಗೃತರಾಗಿರುವುದು ಎಂದರ್ಥ.

ನಿರಂತರ ಲಿಂಗಸುಖಿ ನೋಡಯ್ಯಾ” ಇಲ್ಲಿ “ಲಿಂಗಸುಖ” ಎಂದರೆ ಇಂದ್ರಿಯ ಸುಖವಲ್ಲ, ಇದೇ ಆತ್ಮಶಾಂತಿ ಅಥವಾ ಪರಿಪೂರ್ಣತೆ ಅಥವಾ ಅಂತರಂಗದ ಆನಂದ. ಹೊರಗಿನ ವಸ್ತುಗಳಿಂದ ದೊರೆಯುವ ಸಂತೋಷ ಕ್ಷಣಿಕ. ಆದರೆ ಆತ್ಮಸಾಕ್ಷಾತ್ಕಾರದಿಂದ ಬರುವ ಸುಖ ಶಾಶ್ವತ. ಮನಸ್ಸು ಒಂದು ಕಡೆ, ಮಾತು ಇನ್ನೊಂದು ಕಡೆ, ಕರ್ಮ ಮತ್ತೊಂದು ಕಡೆ ಇದ್ದರೆ ವ್ಯಕ್ತಿಯಲ್ಲಿ ಸಂಘರ್ಷ ಉಂಟಾಗುತ್ತದೆ. ಆದರೆ ಆತ್ಮಜ್ಞಾನ ಬಂದಾಗ, ಕಣ್ಣು ಸತ್ಯವನ್ನು ನೋಡುತ್ತದೆ, ಕಿವಿ ಸತ್ಯವನ್ನು ಕೇಳುತ್ತದೆ, ನಾಲಿಗೆ ಸತ್ಯವನ್ನು ನುಡಿಯುತ್ತದೆ, ಕೈಗಳು ಸತ್ಕಾರ್ಯ ಮಾಡುತ್ತವೆ. ಇಂದ್ರಿಯಗಳೆಲ್ಲವೂ ಒಂದೇ ದಿಕ್ಕಿನಲ್ಲಿ ಚಲಿಸುತ್ತವೆ. ಇದೇ ಶರಣರು ಹೇಳುವ ಒಳಹೊರಗೊಂದಾಗುವ ಭಾವಸ್ಥಿತಿ.

ಈ ವಚನವು ಸ್ಪಷ್ಟಪಡಿಸುದೇನೆಂದರೆ ಆತ್ಮಜ್ಞಾನದಿಂದ ವಿನಯತೆ ಬರುತ್ತದೆ. ವಿನಯದಿಂದ  ಜಾಗೃತಿ ಉಂಟಾಗುತ್ತದೆ. ವಿನಯದಿಂದ ಆನಂದ, ಆ ಆನಂದವೇ ಏಕತ್ವ ಅಥವಾ ಐಕ್ಯತ್ವದ ಭಾವ ಸಮನ್ವಯಗೊಳ್ಳುತ್ತದೆ ಎಂಬ ಆಧ್ಯಾತ್ಮಿಕ ಪಯಣವನ್ನು ಚಿತ್ರಿಸುತ್ತದೆ. ಅಜಗಣ್ಣ ತಂದೆಗಳು ಇಲ್ಲಿ ಹೊರಗಿನ ಆಚರಣೆಗಿಂತ ಒಳಗಿನ ಪರಿವರ್ತನೆಗೆ ಮಹತ್ವ ನೀಡಿದ್ದಾರೆ. ಇದು ಶರಣ ಚಳವಳಿಯ ಮೂಲ ಆಶಯ.

ದೇವರನ್ನು ಹುಡುಕುವ ಮೊದಲು ತನ್ನೊಳಗಿನ ಅಜ್ಞಾನವನ್ನು ದೂರಮಾಡು. ಅಂತರಂಗದ ಬೆಳಕು ಹೊತ್ತಾಗ ಹೊರಗಿನ ಕತ್ತಲೆ ತನ್ನಷ್ಟಕ್ಕೆ ತಾನೇ ಮಾಯವಾಗುತ್ತದೆ. ಈ ವಚನವನ್ನು ಕೇವಲ ಧಾರ್ಮಿಕ ನೆಲೆಯಲ್ಲಿ ಮಾತ್ರವಲ್ಲ  ಇದು ಮಾನವ ಮನೋವಿಜ್ಞಾನದ ಆಳವಾದ ಸತ್ಯವನ್ನು ಕೂಡ ಹೇಳುತ್ತದೆ. ಇವತ್ತು ಜ್ಞಾನಕ್ಕಿಂತ ಪ್ರಚಾರ ಹೆಚ್ಚಾಗಿದೆ. ಸಾಧನೆಗಿಂತ ಪ್ರದರ್ಶನ ಹೆಚ್ಚಾಗಿದೆ. ಅಂತರಂಗಕ್ಕಿಂತ ಬಾಹ್ಯಸೌಂದರ್ಯಕ್ಕೆ ಮರಳಾಗುವುದೇ ಜಾಸ್ತಿ. ಇಂತಹ ಸಂದರ್ಭದಲ್ಲಿ ಈ ವಚನ ಹೇಳುವುದು ಇದನ್ನೆ. ಹೊರಗಿನ ಅಲಂಕಾರಕ್ಕಿಂತ ಒಳಗಿನ ಅರಿವು ಮುಖ್ಯ.” ಎಂದು. ದೀಪವು ತನ್ನ ಬೆಳಕನ್ನು ಎಂದು  ಘೋಷಿಸಿಕೊಳ್ಳುವುದಿಲ್ಲ. ಅದು ಸುಮ್ಮನೆ ಹೊಳೆಯುತ್ತದೆ. ಅದರ ಬೆಳಕೇ ಅದರ ಪರಿಚಯ. ಹಾಗೆಯೇ ಆತ್ಮಜ್ಞಾನಿಯು ತನ್ನ ಮಹತ್ವವನ್ನು ಹೇಳಿಕೊಳ್ಳುವುದಿಲ್ಲ; ಅವನ ಬದುಕೇ ಅವನ ಪರಿಚಯ,

ಹಣ್ಣುಗಳಿಂದ ತುಂಬಿದ ಮಾವಿನ ಮರ ಕೆಳಗೆ ಬಾಗುತ್ತದೆ. ಖಾಲಿ ಕೊಂಬೆಗಳು ಮಾತ್ರ ಮೇಲಕ್ಕೆ ಎದ್ದಿರುತ್ತವೆ. ಜ್ಞಾನವೂ ಹಾಗೆಯೇ.ನಿಜವಾದ ಜ್ಞಾನ ವಿನಯವನ್ನು ಉಂಟುಮಾಡುತ್ತದೆ; ಅಜ್ಞಾನ ಅಹಂಕಾರವನ್ನು ಬೆಳೆಸುತ್ತದೆ. ಒಬ್ಬ ಶ್ರೇಷ್ಠ ಸಂಗೀತಗಾರನು ಸ್ವರದೊಂದಿಗೆ ಒಂದಾಗುವಾಗ ತನ್ನನ್ನು ಮರೆತುಬಿಡುತ್ತಾನೆ. ಆ ಕ್ಷಣದಲ್ಲಿ ಅವನು ತನ್ನ ವಿದ್ವತ್ ಪ್ರದರ್ಶನ ಮಾಡುವುದಕ್ಕಿಂತ ಸಂಗೀತವೇ ಅವನಿಗೆ ಪ್ರಧಾನವಾಗಿ ಸಂಗೀತ ಮಾತ್ರ ಅವನೊಳಗೆ ಲೀನವಾಗಿ ಹರಿಯುತ್ತದೆ. ಇದನ್ನೆ  ಲಿಂಗಸುಖದ ಅನುಭವಕ್ಕೆ ಸಮಾನವಾದ ಆಧ್ಯಾತ್ಮಿಕ ಸ್ಥಿತಿ ಎನ್ನಬಹುದು. ಇಂದಿನ ಧಾವಂತ  ಜಗತ್ತಿನ ಬದುಕಿನಲ್ಲಿ ಒತ್ತಡ, ಆತಂಕ, ಸ್ಪರ್ಧೆ, ಐಡೆಂಟಿಟಿ ನಮ್ಮನ್ನು ಗುರುತಿಸಿಕೊಳ್ಳುವ  ಹಂಬಲ ಇವು ಹೆಚ್ಚಾಗುತ್ತಿವೆ.

ಈ ವಚನವು ನಮಗೆ ಮೂರು ಮಾರ್ಗದರ್ಶನಗಳನ್ನು ನೀಡುತ್ತದೆ, ಒಂದು ನಿಮ್ಮನ್ನು ನೀವು ಅರಿತುಕೊಳ್ಳಿ. ಎರಡನೇಯದ್ದು ಅಹಂಕಾರದಿಂದ ವರ್ತಿಸಬೇಡಿ. ಮೂರನೇಯದ್ದು ಪ್ರತಿಕ್ಷಣವೂ ಜಾಗೃತಿಯಿಂದ ಜೀವಿಸಿ ಎಂಬುದಾಗಿದೆ. ಇವು ಮಾನಸಿಕ ಆರೋಗ್ಯಕ್ಕೂ, ಸಾಮಾಜಿಕ ಸೌಹಾರ್ದಕ್ಕೂ, ಆಧ್ಯಾತ್ಮಿಕ ಬೆಳವಣಿಗೆಗೂ ಅಗತ್ಯವಾದ ಮೌಲ್ಯಗಳು. ಕುವೆಂಪು ಅವರ ಸಾಲುಗಳು ಈ ವಚನದ ಆಶಯವನ್ನು ನೆನಪಿಸುತ್ತವೆ, “ಒಳಗೊಂದು ಬೆಳಕಿದೆ, ಅದನ್ನುಬೆಳಗಿಸು ಮಾನವನೇ.” ಹಾಗೆಯೇ ಕವಿ ನಂಜರಾಜ್ ಅರಸ್ ಅವರು1966ರಲ್ಲಿ ಬಿಡುಗಡೆಯಾದ ತೂಗುದೀಪ ಎನ್ನುವ ಚಲನಚಿತ್ರಕ್ಕೆ ಬರೆದ ಭಾವಗೀತೆಯಲ್ಲಿ ಬರುವ “ಮನವೇ ಮಂದಿರ ನ್ಯಾಯ ದೇಗುಲ, ಚೆಲುವೆ ದೇವರು, ಒಲವೇ ದೀವಿಗೆ” ಎಂಬ ಸಾಲು ಇಲ್ಲಿಅತ್ಯಂತ ಪ್ರಸ್ತುತವಾಗಿದೆ. ಶರಣರ ಭಾಷೆಯಲ್ಲಿ ಹೇಳುವುದಾದರೆಒಳಗೆ ಶಿವನನ್ನು ಕಂಡವನಿಗೆ ಹೊರಗೆ ತೋರಿಸುವ ಅಗತ್ಯವಿಲ್ಲ, ಅಂತರಂಗದ ಅನುಭವವೇ ಅವನ ಮುಖದ ಶಾಂತಿಯಾಗಿ, ಮಾತಿನ ಮಧುರತೆಯಾಗಿ, ಬದುಕಿನ ಸತ್ಯತೆಯಾಗಿ ಅರಳುತ್ತದೆ.

ಅಜಗಣ್ಣ ತಂದೆಗಳ ಈ ವಚನವು ಆತ್ಮಜ್ಞಾನ, ವಿನಯ, ನಿರಂತರ ಜಾಗೃತಿ ಮತ್ತು ಅಂತರಂಗದ ಆನಂದ ಎಂಬ ನಾಲ್ಕು ಮಹತ್ವದ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ತನ್ನೊಳಗಿನ ಸತ್ಯವನ್ನು ಅರಿತವನಿಗೆ ಹೊರಗಿನ ಹಮ್ಮೆ ಇರುವುದಿಲ್ಲ. ಅವನು ಪ್ರತಿಕ್ಷಣವೂ ಲಿಂಗಾನುಭವದಲ್ಲಿ ನೆಲೆಸಿ ಇಂದ್ರಿಯಗಳ ಸಮನ್ವಯದಿಂದ ಬದುಕುತ್ತಾನೆ. ಆದ್ದರಿಂದ ಈ ವಚನವು ಕೇವಲ ಭಕ್ತಿಯ ಸಂದೇಶವಲ್ಲ, ಅಂತರಂಗದ ಪರಿಪಕ್ವತೆ ಮತ್ತು ಸಮಗ್ರ ಮಾನವತ್ವದ ಘೋಷಣೆಯಾಗಿದೆ.

ಶ್ರೀಮತಿ. ಶಾಲಿನಿ ರುದ್ರಮುನಿ,
# 20, ರಾಜೀವನಗರ,ಎರಡನೇ ಹಂತ, ಎರಡನೇ ತಿರುವು, 
ಪೋಲಿಸ್ ವಸತಿಗೃಹ ರಸ್ತೆ, 
ವಿದ್ಯಾನಗರ,
ಹುಬ್ಬಳ್ಳಿ – 580031
ಮೊಬೈಲ್ ಸಂಖ್ಯೆ: 78921 69644

  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ:
    • ಮೋಬೈಲ್ ನಂ. 9741 357 132
    • e-Mail ID: info@vachanamandara.in / admin@vachanamandara.in

Leave a Reply