![]()
ವಚನ ಸಾಹಿತ್ಯದ ಉತ್ಕೃಷ್ಟತೆ ಪ್ರಾರಂಭವಾದದ್ದು 12 ನೇ ಶತಮಾನದ ಧಾರ್ಮಿಕ ಮತ್ತು ಸಾಂಸ್ಕೃತಿಕ ರಾಜಕೀಯ ಜೀವನಗಳಲ್ಲಿ ಬದಲಾವಣೆ ತರುವ ಉದ್ದೇಶವದು. ವಚನಗಳ ಸ್ಪಷ್ಟ ಬರವಣಿಗೆ ಅನನ್ಯ ಪದ ಪ್ರಯೋಗಗಳ ಪುನರ್ಸೃಷ್ಟಿ ಅಂದಿನ ವೈಚಾರಿಕ ನೆಲೆಯಲ್ಲಿ ತನ್ನ ಅಸ್ತಿತ್ವವನ್ನು ತೋರಿಸಿಕೊಂಡದ್ದು ಇದೇ ಕಾಲದಲ್ಲಿ. ವರ್ಗ ಮತ್ತು ವರ್ಣಗಳಲ್ಲಿ ಆತ್ಮವಿಶ್ವಾಸ ಮೂಡಿಸಿ ಸ್ವಾಭಿಮಾನದ ಬದುಕನ್ನು ನೀಡಿತ್ತು. ಬಸವಣ್ಣನವರ ಮುಂದಾಳತ್ವದಲ್ಲಿ ಕೈಗೊಂಡ ವ್ಯಕ್ತಿ ಕಲ್ಯಾಣ, ಸಮಾಜ ಕಲ್ಯಾಣ, ತತ್ವ ಕಲ್ಯಾಣದ ಚಳುವಳಿಯನ್ನು ಹುಟ್ಟು ಹಾಕಿತು. ವ್ಯಕ್ತಿ ಕಲ್ಯಾಣವು ಸ್ತ್ರೀಯರಿಗೆ ದುರ್ಬಲರಿಗೆ ಹಿಂದುಳಿದ ವರ್ಗಗಳಿಗೆ ಬೆಂಬಲ ನೀಡುವುದು. ಸಮುದಾಯದ ಜನರ ಯೋಗಕ್ಷೇಮವನ್ನು ನೀಡಿ ಬೆಂಬಲಿಸುವುದಾಗಿದೆ. ತತ್ವ ಕಲ್ಯಾಣ ಭಕ್ತಿಯ ವಾತಾವರಣವನ್ನು ಹೆಚ್ಚಿಸುವುದು. ದೇವರ ಬಗ್ಗೆ ಪಾರಮಾರ್ಥಿಕತೆಯ ಅರಿವನ್ನು ಹೆಚ್ಚಿಸುವುದಾಗಿತ್ತು.
ವ್ಯಕ್ತಿ ಹಾಗು ಸಮಾಜ ಕಲ್ಯಾಣಕ್ಕಾಗಿ ಅವರು ಆಯ್ಕೆ ಮಾಡಿಕೊಂಡ ವೇದಿಕೆ ಜನಪರ ಆಂದೋಲನವಾಗಿತ್ತು. ಹಾಗಾಗಿ ಶರಣ ಚಳುವಳಿ ಸಾಹಿತ್ಯಿಕ ಚಳುವಳಿಯ ಜೊತೆಗೆ ಅದು ಕೆಳವರ್ಗದ ವಚನಕಾರರ ಸಾಮಾಜಿಕ ಸಮಸ್ಯೆಗಳು ಬಸವತತ್ವ ಪ್ರೇರಿತ ಹೆಜ್ಜೆಯನಿಟ್ಟಿತ್ತು. ಜನಪರ ಕ್ರಾಂತಿಗೆ ಮನುಷ್ಯರೇ ಮುಖ್ಯವಾದರೂ ಕೂಡ ಮನುಷ್ಯರೆಂದರೆ ಸಮಾಜ ಸಮಾಜವೆಂದರೆ ಮನುಷ್ಯರೆಂದು ತಿಳಿದುಕೊಂಡಿದ್ದರು. ಬಸವ ತತ್ವ ಎಷ್ಟೇ ಪ್ರಗತಿಪರವಾಗಿದ್ದರೂ ಕೂಡ ಸಾಮಾನ್ಯ ವಿಮರ್ಶೆಗೆ ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಭೂತಕಾಲದ ಚಿಂತನೆಗಳನ್ನು ಸ್ವೀಕರಿಸುತ್ತಾ ವರ್ತಮಾನ ಕಾಲದ ಆಳದಲ್ಲಿ ಬಿಡಿಬಿಡಿಯಾಗಿ ಅವಲೋಕಿಸಬೇಕು. ಅಂದಾಗ ಕೆಳಸಮುದಾಯದ ವಚನಕಾರರ ಸತ್ವವನ್ನು ಗ್ರಹಿಸಲು ಸಾಧ್ಯವಾಗುತ್ತದೆ. ಶರಣರ ದಲಿತ ಪ್ರಜ್ಞೆಯನ್ನು ಎರಡು ಭಾಗಗಳ ಮೂಲಕ ಸ್ಪಷ್ಟಪಡಿಸಬಹುದು.
- ಕಂಬಳಿ ನಾಗದೇವ, ಸಂಬೋಳಿ ನಾಗಿದೇವ, ಶಿವನಾಗಿಮಯ್ಯ ಶರಣರು ಒಂದೇ ಎಂದು ವಿಶ್ಲೇಷಿಸುವ ಅಗತ್ಯವಿದೆ.
- ಅಸ್ಪೃಶ್ಯರಿಗೆ ದೇವಾಲಯ ಸಂಸ್ಕೃತಿ ಮತ್ತು ಸಂಘರ್ಷದ ಒಳನೋಟಗಳ ಪರಿಚಯಿಸು ತ್ತದೆ. ಈ ಘಟ್ಟದಲ್ಲಿ ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯನಂಥ ವಚನಕಾರರ ಜೀವನದ ವ್ಯತ್ಯಾಸಗಳು ಒಂದೇ ತರನಾಗಿ ಕಂಡರೂ ಅವು ಸಾಮಾಜಿಕ ಸೂಕ್ಷ್ಮತೆಯಲ್ಲಿ ಬೇರೆ ಬೇರೆ. ಕೆಳ ಸಮುದಾಯದ ಶರಣರ ಕ್ರಾಂತಿಕಾರಿಕ ವಿಚಾರಗಳನ್ನು “ಉಳ್ಳವರು ಶಿವಾಲಯವ ಮಾಡುವರು ನಾನೇನ ಮಾಡಲಿ ಬಡವನಯ್ಯ” ಎಂಬ ಧೋರಣೆ ನಿರ್ಮಾಣವಾಗಿದ್ದನ್ನು ಗಮನಿಸಬೇಕು.
ಬಸವಣ್ಣನವರ ಆಪ್ತ ಗೌರವದ ವ್ಯಕ್ತಿ ಶರಣ ಶಿವನಾಗಮಯ್ಯ. ಇವರನ್ನು ಸಂಬೋಳಿ ನಾಗಿದೇವರೆಂದು, ಕಂಬಳಿ ನಾಗದೇವ ಎಂದು ಗುರುತಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಅಡಗಂಟಿ ಎಂಬ ಗ್ರಾಮದಲ್ಲಿ ವಾಸವಾಗಿದ್ದರು ಎಂಬ ಅಭಿಪ್ರಾಯಗಳಿವೆ. ಛಲವಾದಿಗಳು ಗಂಟೆ ಬಟ್ಟಲನ್ನು ಕೊಯ್ಯುವಾಗ ಬಿಳಿಯ ಕಂಬಳಿ ಒಯ್ಯುವ ಸಂಪ್ರದಾಯವಿದೆ. ಆದರೆ ಕೆಲ ಸಂಶೋಧಕರ ಪ್ರಕಾರ ಶಿವನಾಗಮಯ್ಯನವರು ಕುರಿ ಉಣ್ಣೆಯನ್ನು ತಂದು ಶಿವಭಕ್ತರ ಕೈಂಕರ್ಯಕ್ಕೆ ಕಂಬಳಿ ನೇಯ್ಯುತ್ತಿದ್ದರಂತೆ. ಈಗಲೂ ಶೈವರ ಮದುವೆ, ಮುಂಜಿ, ನಾಮಕರಣ, ಅಂತ್ಯಸಂಸ್ಕಾರದಂತಹ ಧಾರ್ಮಿಕ ಆಚರಣೆಗಳಲ್ಲಿ ಕಂಬಳಿ ಬಳಸುತ್ತಾರೆ. ಇವರ ಕಾಲ ಕ್ರಿ. ಶ. 1160. ಈ ಶರಣರ ಮೂರು ವಚನಗಳು ಮಾತ್ರ ಲಭ್ಯವಾಗಿವೆ. ವಚನಾಂಕಿತ “ನಾಗಪ್ರಿಯ ಚೆನ್ನರಾಮೇಶ್ವರ” ಆಗಿದೆ. ಶರಣ ಶಿವನಾಗಮಯ್ಯ ಕುರಿತು ಜಾನಪದ ಹಾಡುಗಾರರು ಹೀಗೆ ಸ್ಮರಿಸಿದ್ದನ್ನು ಕಾಣಬಹುದು.
ಕಲ್ಯಾಣದ ಊರಾಗ ಕಂಬಳಿ ಮಠದಾಗ
ಕಂಬಳಿ ನಾಗಿದೇವ ಶರಣರು ಶಿವಲಿಂಗ
ಬನ್ನಿರೆ ಕಂಬಳಿ ನಾಗದೇವ ಅವರೆಂಥ
ಶರಣರು ಧರ್ಮದ ಮೂರ್ತಿ ಎನಿಸ್ಯಾರ
ಶಿವಲಿಂಗ ಎನ್ನಿರಿ
ಈ ಜಾನಪದ ಹಾಡು ಕಲ್ಯಾಣ ಪಟ್ಟಣದ ಕಂಬಳಿಮಠದ ಮಹಾನ್ ಶರಣರಾದ ಕಂಬಳಿ ನಾಗಿದೇವ ಅವರ ಕುರಿತಾದ ಭಕ್ತಿಪೂರ್ವಕ ಸ್ತುತಿಯಾಗಿದೆ. ಇಲ್ಲಿ ಜಾನಪದರು ನಾಗಿದೇವ ಅವರನ್ನು ಕೇವಲ ಒಬ್ಬ ಶರಣರನ್ನಾಗಿ ಮಾತ್ರವಲ್ಲದೆ, ಶಿವನ ಸಾಕಾರ ರೂಪ ಮತ್ತು ಧರ್ಮದ ಸಾಕಾರ ಮೂರ್ತಿ ಎಂದು ಅತ್ಯಂತ ಗೌರವದಿಂದ ಬಣ್ಣಿಸಿದ್ದಾರೆ. ಭಕ್ತಾದಿಗಳು ಒಟ್ಟಾಗಿ ಬಂದು ಈ ಮಹಾತ್ಮರನ್ನು ಸ್ಮರಿಸುತ್ತಾ, ಶಿವನಾಮವನ್ನು ಪಠಿಸಬೇಕೆಂದು ಈ ಸಾಲುಗಳು ಆಮಂತ್ರಣ ನೀಡುತ್ತವೆ. ನಾಗಿದೇವ ಅವರ ಆಧ್ಯಾತ್ಮಿಕ ಶಕ್ತಿಯು ಅತೀಂದ್ರಿಯವಾದುದು ಮತ್ತು ಅವರು ಜನರಲ್ಲಿ ಧಾರ್ಮಿಕ ಜಾಗೃತಿ ಮೂಡಿಸಿದ ಪರಿಯನ್ನು ಈ ಹಾಡು ಶ್ಲಾಘಿಸುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಈ ಮೂಲವು ಒಬ್ಬ ಪವಿತ್ರ ಶರಣರ ದೈವತ್ವ ಮತ್ತು ಅವರ ನೈತಿಕ ತತ್ವಗಳನ್ನು ಆಚರಿಸುವ ಸ್ತೋತ್ರದಂತಿದೆ.
ಕಲ್ಯಾಣ ಪಟ್ಟಣ ಬಸವಾದಿ ಶರಣರ ಕಾರ್ಯಕ್ಷೇತ್ರ ಹಾಗೂ ಭಕ್ತಿಯ ತವನಿಧಿ. ಈ ಪವಿತ್ರ ಧರ್ಮಪೀಠದಲ್ಲಿ ಕಂಬಳಿಮಠದ ಶಿವನಾಗಿಮಯ್ಯನವರನ್ನು ಶಿವಲಿಂಗಮೂರ್ತಿಯಂತೆ ಕಂಡಿದ್ದಾರೆ. 12 ನೇ ಶತಮಾನದ ಮನುಮುನಿ ಎಂಬ ಶರಣ ಮೊದಲು ಜೈನರಾಗಿದ್ದು ನಂತರ ಶರಣ ಧರ್ಮ ಸ್ವೀಕರಿಸಿದ್ದರು. ಕಂಬಳಿ ನಾಗಿದೇವರ ವ್ಯಕ್ತಿತ್ವವನ್ನು ತಮ್ಮ ಒಂದು ವಚನದಲ್ಲಿ ಸ್ಪಷ್ಟಪಡಿಸಿ ಗೌರವಿಸಿದ್ದಾರೆ.
ಬಂದವನಿವನಾರು, ಕಂಬಳಿಯ ಕಂಥೆಯ ತೊಟ್ಟು,
ಆಪ್ಯಾಯನ ಹಿಂಗದ ಕರಕರ್ಪರವ ಹಿಡಿದು,
ದೆಸೆವರಿವ ದಶದಂಡವ ಹಿಡಿದು,
ಮನೆ ಮನ ಮಂದಿರದ ಬಾಗಿಲಲ್ಲಿ ನಿಂದು,
ಇಂದ್ರಿಯಂಗಳೆಂಬ ತೃಷ್ಣೆ ಭಿಕ್ಷವಂ ಬೇಡಿ,
ಬೇಡಿದ ದನಿಯ ಕೇಳಿ ಎದ್ದವೈದು ನಾಯಿ.
ಹಮ್ಮಿ ಕಚ್ಚಿತ್ತು ಕಾಲ, ಮತ್ತೊಂದಡರಿ ಅಂಗವ ಹಿಡಿಯಿತ್ತು.
ಮತ್ತೊಂದು ಒಡಗೂಡಿ ಕೈಯ ಕಚ್ಚಿತ್ತು.
ಮತ್ತೊಂದು ಬೆರಸಿ, ನಾಸಿಕವ ಓಸರವಿಲ್ಲದೆ ಹಿಡಿಯಿತ್ತು.
ಮತ್ತೊಂದು ಭಿಕ್ಷೆಗೆ ತಪ್ಪದೆ ಬಾಯ ಹಿಡಿಯಿತ್ತು.
ಭಿಕ್ಷದಾಟ ತಪ್ಪಿತ್ತು, ಕಂಬಳಿಯಣ್ಣ ಕಂಬಳಿಯಲ್ಲಿ ಅಳಿದ.
ಇದಕಿನ್ನು ಬೆಂಬಳಿಯ ಹೇಳಾ,
ಗುಡಿಯೊಡೆಯ ಗುಮ್ಮಟನಾಥನ
ಅಗಮ್ಯೇಶ್ವರಲಿಂಗವೆ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-395/ವಚನ ಸಂಖ್ಯೆ-1050)
ಈ ವಚನದಲ್ಲಿ ಬರುವ ಪಾರಿಭಾಷಿಕ ಶಬ್ದಗಳ ಅರ್ಥ:
ಕರ್ಪರ: ಭಿಕ್ಷಾಪಾತ್ರೆ.
ತೃಷ್ಣೆ: ನೀರಡಿಕೆ, ಆಸೆ.
ಓಸರ: ಹಿಂಜರಿಕೆ, ನಿಧಾನವಾಗಿ ಮರೆಯಾಗು.
ಕಂಬಳಿ ನಾಗಿದೇವಯ್ಯನವರು ಶರಣ ಚಳುವಳಿಯ ಬಹು ಶ್ರೇಷ್ಠ ಶರಣರು. ಬಸವಣ್ಣನವರಿಂದ ಹಿಡಿದು ಅನೇಕ ಶರಣರು ಶರಣ ಶಿವನಾಗಿಮಯ್ಯನವರನ್ನು ಸ್ಮರಿಸಿ ಕಾಯಕದ ಶ್ರೇಷ್ಠತೆಯನ್ನು ಕೊಂಡಾಡಿದ್ದಾರೆ. ಸಂಭೋಳಿ ಸಂಭೋಳಿ ಎನ್ನುತ್ತಾ ಇಂಬಿನಲ್ಲಿ ಇದ್ದೇನೆ. ನಿಮ್ಮ ನಾಮ ವಿಡಿದ ಅನಾಮಿಕ ನಾನು. ಈ ಸಮಾಜಕ್ಕೆ ಅಪರಿಚಿತ ಎಂದು ಸ್ಮರಿಸಿದ್ದಾರೆ. ಶರಣ ಮನುಮುನಿಯವರು ಸಹಿತ ಕಂಬಳಿ ಕಂತೆಯ ತೊಟ್ಟು ಬಂದವರನ್ನು ಗೌರವಿದ್ದಾರೆ. ಕಂಬಳಿ ಎಂದರೆ ಕೇವಲ ಹೊದಿಕೆಯಲ್ಲ. 12 ನೇ ಶತಮಾನದ ಶರಣರ ಸಾಮಾಜಿಕ ಸಮಾನತೆ, ಕಾಯಕದ ಗೌರವ, ಆತ್ಮ ಶುದ್ದಿಯ ತತ್ವಗಳ ಸಾಕಾರ ರೂಪವದು.
ಅಂದು ಶರಣರು ಕಂಬಳಿ ನಾಗಿದೇವರನ್ನು ಮೇಲ್ವರ್ಗ ಸಮಾಜ ಜಾತಿಯ ಹಂಗು ಹಿಡಿದು ಅವಮಾನಿಸಿತ್ತು. ತನ್ನ ಕೈಯನ್ನು ಅಯುಧವಾಗಿಸಿಕೊಂಡು ತಮ್ಮ ರಕ್ಷಣೆಗೋಸ್ಕರ ದಶದಂಡವನ್ನು ಉಪಯೋಗಿಸುತ್ತಿದ್ದರು. ಕೋಲು ಅಥವಾ ದಂಡ ದುಷ್ಟರನ್ನು ಶಿಕ್ಷಿಸಲು ಬಳಸುವ ಆಯಧವಾಗಿತ್ತು. ಮನುಷ್ಯರನ್ನು ಹೊಡೆಯಲು ಮಾತ್ರವಲ್ಲದೆ ಜಾತಿ ಪ್ರತಿಷ್ಠೆ, ಅಹಂ ಉಳ್ಳವರನ್ನು ಓಡಿಸಲು ಈ ಆಯುಧ ಅಸ್ತ್ರವಾಗಿತ್ತು. ಜಾತಿ ಪ್ರತಿಷ್ಠೆಯ ವರ್ಗವು ನಾಯಿಗಳಂತೆ ಬೆನ್ನಟ್ಟಿ ಹಿಂಸಿಸಿದ್ದರು. ಅಷ್ಟೇ ಅಲ್ಲ ನಾಗಿದೇವರ ಐದು ಇಂದ್ರಿಯಗಳನ್ನು ಕೊಚ್ಚಿ ಹಿಂಸಿಸಿದ್ದರು. ಇವರ ಆತ್ಮಶುದ್ದಿಯ ಭಿಕ್ಷೆ ಕಂಬಳಿಯಲ್ಲಿ ಅರೆಜೀವವಾಗಿತ್ತು. ಬೆಂಬಿಡದೆ ಕಾಡಿದ ಈ ನಾಯಿಗಳ ಬಗ್ಗೆ ಬೇಸರದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಅನೇಕ ವಚನಗಳು ಕಂಬಳಿ ನಾಗಿದೇವರ ನಿಜವಾದ ವ್ಯಕ್ತಿತ್ವವನ್ನು ನೋಡಲು ಸಾಧ್ಯವಾಗುತ್ತದೆ.
ಹರಿಹರ ಕವಿಯ ಬಸವರಾಜದೇವರ ರಗಳೆಯಲ್ಲಿ ಕಂಬಳಿ ನಾಗದೇವನೆಂಬ ಹಿರಿಯ ಮಹೇಶ್ವರನ ಮನೆಯ ಪೊಕ್ಕು ಸಂಗ ಪ್ರಸಾದವನಿರಿಸಿ ಕೈಕೊಳ್ಳುತ್ತಾರೆ. ಬಸವ ಪುರಾಣ (ಹತ್ತನೇ ಸ್ಥಲ) ಅಜ್ಞಾತಕವಿ ವಿರಚಿತ ಬಸವಪವಾಡ ಬಸವೇಶ್ವರ ಕಾವ್ಯದಲ್ಲಿ ಈ ಶರಣರ ಬಗ್ಗೆ ಪ್ರತಿಪಾದನೆಯನ್ನು ಕಾಣಬಹುದು.
12 ನೇ ಶತಮಾನದ ಶರಣ ಸಂಸ್ಕೃತಿ ರಾಜಕೀಯ ವ್ಯವಸ್ಥೆಗಿಂತ ಪ್ರಬಲತೆಯನ್ನು ಬಿಂಬಿಸಿತ್ತು. ಬಸವಣ್ಣನವರು ಸಾಮಾಜಿಕ ವ್ಯವಸ್ಥೆಯಲ್ಲಿ ಬದಲಾವಣೆಯನ್ನು ತರುವುದರ ಜೊತೆಗೆ ಅಸ್ಪೃಶ್ಯ ಶರಣರ ಅನುಭವಗಳು ಶರಣ ಪ್ರಜ್ಞೆಯಿಂದ ಕೂಡಿದ ಬಂಡಾಯ ಧೋರಣೆ ವಚನಗಳಾಗಿ ಹೊರ ಬಂದವು. ಹೀಗಾಗಿ ಮಾನವೀಯ ಮೌಲ್ಯಗಳ ಜೊತೆಗೆ ಮನುಷ್ಯ ಸಂಬಂಧಗಳನ್ನು ಕಟ್ಟಿಕೊಂಡ ಶರಣರು ಇವರಾಗಿದ್ದರು. ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಉರಿಲಿಂಗಪೆದ್ದಿ ಇವರು ಪ್ರಮುಖರು. ಕಂಬಳಿ ನಾಗಿದೇವ, ಸಂಬೋಳಿ ಶಿವನಾಗಿದೇವನಾಗಿ ದೇವನಾದದ್ದು ಬಸವಣ್ಣನವರ ಸಂಪರ್ಕಕ್ಕೆ ಬಂದ ಮೇಲೆ ಸಾಧ್ಯವಾಗಿತ್ತು.
ಲಿಂಗಾರ್ಚನೆಯ ಮಾಡುವ ಮಹಿಮರೆಲ್ಲರೂ
ಸಲಿಗೆವಂತರಾಗಿ ಒಳಗೈದಾರೆ;
ಆನು ದೇವಾ ಹೊರಗಣವನು.
“ಸಂಬೋಳಿ ಸಂಬೋಳಿ” ಎನುತ್ತ ಇಂಬಿನಲ್ಲಿ ಇದೇನೆ.
ಕೂಡಲಸಂಗಮದೇವಾ
ನಿಮ್ಮ ನಾಮವಿಡಿದ ಅನಾಮಿಕ ನಾನು.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-267/ವಚನ ಸಂಖ್ಯೆ-934)
ಶರಣ ಧರ್ಮ ಗೌರವ ಆದರ್ಶದ ಮೇಲೆ ನಿಂತಿದ್ದರೂ ಈ ಆದರ್ಶಗಳಲ್ಲಿ ಪ್ರತಿಭಟನೆಯ ತಿಕ್ಕಾಟ ಕಾಣುತ್ತೇವೆ. ಲಿಂಗಾರ್ಚನೆಯ ತತ್ವಕ್ಕೆ ಜೀವವಿದೆ. ಲಿಂಗದ ಅಸ್ತಿತ್ವವನ್ನು ಕಾಣುವುದು ಉತ್ತಮ ಕುಲದವರೆಂದು ಹೇಳುವ ಮೂಲಕ ದೇವರ ಹೆಸರಿನಲ್ಲಿ ನಡೆಯುವ ವಂಚನೆ ಬಹಿರಂಗಗೊಳ್ಳುವ ಅವಶ್ಯಕತೆ ಅಂದಿತ್ತು. ಬಸವಣ್ಣನವರು ತಾವು ಶ್ರೇಷ್ಠವೆಂದು ಎಲ್ಲಿಯೂ ಹೇಳಿಲ್ಲ. ತಮ್ಮನ್ನು ಕನಿಷ್ಠವೆಂದು ಸಂಬೋಳಿ ಸಂಭೋಳಿ ಎಂದು ಹೇಳುವ ದೃಷ್ಟಾಂತಗಳು ಸಾಕಷ್ಟಿವೆ. ದಲಿತರ ಆಲಯ ಪ್ರವೇಶದ ಸಂಧರ್ಭದಲ್ಲಿ ಮಾದಾರ ಚೆನ್ನಯ್ಯ ಶಿವನೊಂದಿಗೆ ಅಂಬಲಿಯನ್ನುಂಡದ್ದನ್ನು ನೆನಪಿಸಿಕೊಳ್ಳಬಹುದು. ಏಕೆಂದರೆ ಭಕ್ತಿಯ ಮೂಲಕ ಸಮಾಜವನ್ನು ಎಚ್ಚರಿಸಿ ಸಾಮಾನ್ಯರಿಗೆ ಅಭಯ ಆಶ್ರಯವನ್ನು ನೀಡಬೇಕಾಗಿತ್ತು. ಸಹಾನುಭೂತಿ ಗೌರವಗಳು ಶರಣ ಧರ್ಮದ ಜೀವಾಳ. ಇಂತಹ ಆತ್ಮೀಯ ಘಟನೆಗಳು ನಮ್ಮನ್ನು ಶಕ್ತಿಶಾಲಿಯಾಗಿಸುತ್ತದೆ. ಅಂದು ಸಮಾಜದಲ್ಲಿ ಶಿವನಾಗಿಮಯ್ಯನಂತ ಶರಣರು ಆಸ್ಪೃಶ್ಯ ಶಾಪದಿಂದ ನೊಂದರೂ ಹೊಸ ಸಮಾಜ ನೇತಾರನ ಕುರಿತು ದೈವತ್ವದ ಕನಸುಗಳನ್ನು ಕಾಣಲಾರಂಬಿಸಿದ್ದರು. ಅದುವೇ ಲಿಂಗ ಧಾರಣೆಯ ವ್ಯವಸ್ಥೆಯಾಗಿತ್ತು. ಅಂಗದಲ್ಲಿ ಲಿಂಗ ಕಾಣಬೇಕಾದರೆ ಲಿಂಗದಲ್ಲಿ ಅಂಗವನ್ನು ಸಮರಸಗೊಳಿಸುವ ವ್ಯಕ್ತಿಯ ಸತ್ಯ ಶೋಧ ವಾಗಿತ್ತು.
ಅಂಗದ ಮೇಲೆ ಲಿಂಗವಿದ್ದ ಬಳಿಕ,
ಲಿಂಗಹೀನರ ಬೆರಸಲಾಗದು.
ಅಂಗದ ಮೇಲೆ ಲಿಂಗವಿದ್ದ ಬಳಿಕ,
ಲಿಂಗ ಮುಂತಾಗಿ ಎಲ್ಲಾ ಕ್ರೀಗಳನ್ನು ಗಮನಿಸಬೇಕಲ್ಲದೆ,
ಅಂಗ ಮುಂತಾಗಿ ಗಮನಿಸಲಾಗದು.
ಲಿಂಗ ಸಂಬಂಧಿಯಾಗಿ ಅಂಗ
ಮುಂತಾಗಿಪ್ಪವರು ಈ ಲಿಂಗಕ್ಕೆ ದೂರವಯ್ಯಾ
ನಾಗಪ್ರಿಯ ಚೆನ್ನರಾಮೇಶ್ವರಾ.
(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-66/ವಚನ ಸಂಖ್ಯೆ-133)
ಜಾತಿಯ ಹಂಗಿಲ್ಲದೆ ಕೊರಳಲ್ಲಿ ಲಿಂಗಧಾರಣೆ ಮಾಡಿದವರು. ಇದು ಸಮಾನತೆಯನ್ನು ದೇವೋಪಾಸನೆ ಕಲ್ಲಾದರೂ ಶರಣ ಧರ್ಮದೆಡೆಗೆ ವಾಲಲು ಪ್ರರೇಪಿಸಿತು. ಇಷ್ಟ ಲಿಂಗವನ್ನು ಧರಿಸಿ ಶರಣ ಧರ್ಮದ ಅನುಭಾವಿಗಳಾದರು. ವೈದಿಕ ವ್ಯವಸ್ಥೆಯ ಆಧೀನರು ತಮ್ಮ ಜಾತಿಯೇ ಶ್ರೇಷ್ಠವೆಂದು ಅಂದು ಸಾರಿದ್ದರು. ಆದರೆ ಶಿವನಾಗಿಮಯ್ಯನವರು ಇವರನ್ನು ಲಿಂಗಹೀನರೆಂಬುದನ್ನು ಗಮನಿಸಬೇಕು. ಶರಣ ಧರ್ಮ ಅನೇಕ ತಾತ್ವಿಕ ಮೊತ್ತಗಳನ್ನು ಉಲ್ಲೇಖಸಿದರೂ ಕೆಲವೊಂದು ನಿರ್ಣಯಗಳು ಸಮಾಜಮುಖಿ ಚಿಂತನೆಯನ್ನು ಬಿಂಬಿಸುತ್ತವೆ.
ಅಂದು ಸಮಾಜದಲ್ಲಿ ಹದಗೆಟ್ಟ ವ್ಯವಸ್ಥೆಯನ್ನು ಸರಿಪಡಿಸುವ ಸಮರ್ಥಿಸುವ ಜವಾಬ್ದಾರಿ ಅಣ್ಣನವರದಾಗಿತ್ತು. ಏಕೆಂದರೆ ಜೈನ ಮತ್ತು ವೈದಿಕ ಧರ್ಮಗಳ ವಿಭಿನ್ನ ದ್ವಂದ್ವಗಳನ್ನು ಮುಂದಿಟ್ಟುಕೊಂಡು ಧರ್ಮ ಸಂಸ್ಕೃತಿ ಸಾರುವಂತಾಗಿದೆ. ಏಕ ಸತ್ಯದ ನಿರ್ಣಯ ಮಾಡಬೇಕಾಗಿತ್ತು.
ಅಸ್ಪೃಶ್ಯರೆಂದು ಗುರುತಿಸಿಕೊಂಡ ಈ ಜನ ವರ್ಗದವರಿಗೆ ಮಹೇಶ್ವರನ ಸ್ಥಾನವನ್ನು ನೀಡಬೇಕಾಗಿತ್ತು. ಅಂಗದ ಮೇಲೆ ಲಿಂಗದ ದೀಕ್ಷೆಯನ್ನು ನೀಡಿ ಲಿಂಗವಂತರನ್ನಾಗಿಸುವ ಕರ್ತವ್ಯ ಪ್ರಜ್ಞೆ ಇತ್ತು. ಹೀಗಾಗಿ ಸಮಾಜಿಕವಾಗಿ ಅನ್ಯಾಯಕ್ಕೆ ಒಳಗಾದ ಈ ವರ್ಗಕ್ಕೆ ಊರೊಳಗೆ ಇರಲು ಅವಕಾಶ ಕಲ್ಪಿಸುತ್ತಾರೆ. ಅವರಿಗೆ ಮೂಲ ವೇದಿಕೆ ನೀಡುತ್ತಾರೆ. ಅವರಲ್ಲಿ ಶಿವನಾಗಿಮಯ್ಯನವರೂ ಒಬ್ಬರು. ಧರ್ಮದಲ್ಲಿ ಆಧ್ಯಾತ್ಮಿಕ ಮತ್ತು ಮಾನಸಿಕ ಸುಖ ಬೆಸೆದುಕೊಂಡಿರುತ್ತದೆ. ಈ ಸುಖದ ಪಕ್ವತೆಯನ್ನು ವಿಭಿನ್ನ ವಿಚಾರಗಳ ಮೂಲಕ ಸಮರ್ಥಿಸುವ ಪರಿ ಹೀಗಿದೆ.
ಘನಸುಖ ಮಹಾಸುಖವಮುಟ್ಟಲು,
ಸಮಸುಖಂಗಳ ಸುಖಿಸಬಲ್ಲ,
ಸುಖವನಲ್ಲಿಯೇ ಕೊಯ್ದು ಸೂಡ ಕಟ್ಟಬಲ್ಲ,
ನಾಗಪ್ರಿಯ ಚೆನ್ನರಾಮೇಶ್ವರಾ,
ನಿಮ್ಮ ಶರಣನು ಸುಖಿಸ ಬಲ್ಲ ಸುಖವನು.
(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-66/ವಚನ ಸಂಖ್ಯೆ-134)
ಲಿಂಗ, ವಿಭೂತಿ, ರುದ್ರಾಕ್ಷಿಗಳು ಕಾಯದ ಮೇಲೆ ಧರಿಸುವ ಅರಿವಿನ ಲಾಂಛನಗಳು. ಭಕ್ತಿಯ ಘನತೆಯನ್ನು ಹೆಚ್ಚಿಸುವ ಪರಿಕ್ರಮಗಳು. ಭಕ್ತಿಯ ರೋಮಾಂಚನದ ಅನುಭೂತಿಯನ್ನು ಪಡೆದುಕೊಳ್ಳಲು ಅಂದು ಸಾಧ್ಯವಾಗದ ಕತ್ತಲೆಯ ಲೋಕವಾಗಿತ್ತು. ಅಷ್ಟಾವರಣ, ಷಟ್ಸ್ಥಲ, ಪಂಚಾಚಾರಗಳ ತಾತ್ವಿಕ ಸುಖ ಪಡೆದುಕೊಳ್ಳಲು ಹೋರಾಟ ಮಾಡಿದ್ದು ಶರಣರ ಜೀವನ ಚರಿತ್ರೆಗಳು ಹೇಳುತ್ತವೆ. ಅಂತ್ಯಜರನ್ನು, ಅಸ್ಪೃಶ್ಯರನ್ನು ಕನಿಷ್ಠರಾಗಿ ಕಂಡಂತಹ ಸಂದರ್ಭದಲ್ಲಿ ಶರಣ ಧರ್ಮದ ಮೌಲ್ಯಗಳನ್ನು ನೀಡಿ ಮೇಲೆತ್ತಿ ಧರ್ಮದ ಘನ ಸುಖವನ್ನು ನೀಡಿ ಅಂತ್ಯಜರನ್ನು ಮುಖ್ಯವಾಹಿನಿಗೆ ತಂದವರು ಶರಣರಾಗಿದ್ದರು.
ಸತ್ಯಮಿಥ್ಯಗಳು ಅಂತ್ಯಜರ ನೋವಿನ ತರಂಗಗಳನ್ನು ಸೃಷ್ಟಿಸುತ್ತವೆ. ನಿತ್ಯ ಅವಮಾನದಲ್ಲಿ ಸತ್ತು ಹುಟ್ಟುವ ಇಂತಹ ಸಮುದಾಯಕ್ಕೆ ಬಸವ ತತ್ವಗಳು ಸರಳ ಸಂತೋಷ, ಆಹ್ಲಾದವನ್ನು ನೀಡಿತು. ಹೀಗಾಗಿ ಅಂತರಿಕ ಅರಿವಿನ ಮಹಾಸುಖ ಬಸವ ತತ್ವವಾಗಿತ್ತು.
ಗುಪ್ತವಾಗಿ ಶಿವನನ್ನು ಧ್ಯಾನಿಸುವ ಅಸಾಮಾನ್ಯ ಶಿವನಾಗಿಮಯ್ಯನನ್ನು ವೈದಿಕರು ಅವಮಾನಿಸಿದ್ದು ಇದೆ. ಹೊಲೆಯರು ಊರು ಪ್ರವೇಶ ಮಾಡಿದರೆ ತಮ್ಮ ಹೆಜ್ಜೆ ಗುರುತುಗಳನ್ನು ಅಳಿಸಲೆಂದು ಬೆನ್ನಿಗೆ ಪೊರಕೆ ಕಟ್ಟಿಕೊಂಡು ಊರು ಸ್ವಚ್ಛಗೊಳಿಸಬೇಕಾಗುತ್ತಿತ್ತು. ಉಗುಳು ಬಂದರೆ ನೆಲದ ಮೇಲೆ ಉಗಿಯದೆ ಅದನ್ನು ಉಗಿಯಲಿಕ್ಕೆ ಮಡಿಕೆ ಕಟ್ಟಿಕೊಂಡು ಸಂಬೋಳಿ ಸಂಬೋಳಿ ಎಚ್ಚರ ಎಚ್ಚರ ಎಂದು ಊರಿಗೆ ಬಂದು ಸ್ವಚ್ಛ ಮಾಡಿ ಹೋಗುತ್ತಿದ್ದರು. ಸಂಭೋಳಿ ಎಂಬ ಧ್ವನಿ ಕೇಳಿದ ಕೂಡಲೇ ಊರಿನವರೆಲ್ಲರೂ ಮನೆಯೊಳಗೆ ಹೋಗಿ ಬಾಗಿಲು ಹಾಕಿಕೊಳ್ಳುವಷ್ಟು ಅಮಾನವೀಯ ಅಸ್ಪೃಶ್ಯತೆ ಅಂದಿತ್ತು. ದಲಿತ ವ್ಯಕ್ತಿಯೊಬ್ಬನ ಸ್ವಾಭಿಮಾನದ ಸತ್ಯದ ಪ್ರತಿಕ್ರಿಯೆ ಶಿವನಾಗಿಮಯ್ಯನವರ ಜೀವನದಲ್ಲಿ ಕಾಣಲು ಸಾಧ್ಯವಾಗುತ್ತದೆ.
ಕಂಬಳಿ ನಾಗಿದೇವರು ಶಿವಶರಣರಾದ ಚರ್ಚೆ. ಶರಣ ಸಾಹಿತ್ಯದಲ್ಲಿ ಇತಿಹಾಸವನ್ನು ನಿರ್ಮಿಸಿದೆ. ಒಂದು ಸಲ ಬಸವಣ್ಣನವರು ರಾಜಬೀದಿಯಲ್ಲಿ ತಮ್ಮ ನಡೆದಿರುತ್ತಾರೆ. ಶಿವ ಭಕ್ತರ ಸ್ತುತಿಯ ಕಂಪನ ಬಸವಣ್ಣನರ ಕಿವಿಗೆ ಬೀಳುತ್ತದೆ. ಈ ಅಸ್ಪೃಶ್ಯ ಕೇರಿಯಲ್ಲಿ ಶಿವ ಸ್ತುತಿ ಅದು ಶಿವನಾಗಿಮಯ್ಯನವರ ಮನೆಯಿಂದ ಬಸವೇಶ್ವರರಿಗೆ ಆರೋಗಣೆ ಬಸವರಾಜನಿಗೆ ಆರೋಗಣೆ ಸಕಲ ಪುರಾತನರಿಗೆ ಆರೋಗಣೆ ಬಸವಣ್ಣನವರ ಸ್ತುತಿಯ ಕುರಿತು ಝೇಂಕಾರ ಅಣ್ಣನರ ಕಿವಿಗೆ ತಲುಪುತ್ತಲೇ ಅವರು ಭಾವುಕರಾಗಿ ಶಿವನಾಗಮಯ್ಯನವರ ಮನೆಯೊಳಗೆ ಪ್ರವೇಶಿಸುತ್ತಾರೆ. ಅವರ ಭಕ್ತಿಯ ಏಕಾಗ್ರತೆಯ ವಾತಾವರಣವನ್ನು ಕಂಡು ಬಹು ಸಂತೋಷ ಪಡುತ್ತಾರೆ. ಬಸವಣ್ಣ ಮತ್ತು ಬಸವ ಬಳಗದ ಶರಣರಿಗೆ ಪ್ರಸಾದ ವ್ಯವಸ್ಥೆಯ ಆತಿಥ್ಯವಾಗುತ್ತದೆ. ಇದು ಊರ ತುಂಬಾ ಸುದ್ದಿಯಾಗಿ ರಾಜಸಭೆಗೆ ದೂರು ಹೋಗುತ್ತದೆ. ಆದರೆ ಶಿವಭಕ್ತ ಶೂದ್ರನಾದರೂ ಆತ ವಿಪ್ರನಿಗೆ ಸಮ. ಶಿವನಲ್ಲಿ ಭಕ್ತಿ ಇರದವರು ಕರ್ಮಾಚಾರದ ವಿಪ್ರನು ಚಾಂಡಾಲನಿಗಿಂತ ಕಡೆ. ಎಂಬ ವಾದ ಪ್ರತಿವಾದಗಳು ಬರುತ್ತವೆ. ಅಸ್ಪೃಶ್ಯ ಶರಣರ ಈ ಸಂವಾದಗಳು ವಚನ ಸಾಹಿತ್ಯದಲ್ಲಿ ದಾಖಲಿಸಲ್ಪಟ್ಟಿವೆ.
ಇಂತಹ ನಿಷ್ಠೆಯ ಶರಣರು ತಮ್ಮ ಮೂಲ ಪೂರ್ವಾಶ್ರಮದ ಜಾತಿಗಳನ್ನು ಮರೆತು ಲಿಂಗವಂತರಾಗಿ ಬದುಕನ್ನು ಸ್ವೀಕರಿಸಿದ್ದರು. ಹೀಗಾಗಿ ವೈದಿಕಶಾಹಿ ಧರ್ಮದವರ ಕೆಂಗಣ್ಣಿಗೆ ಕಾರಣರಾಗಿದ್ದರು. ಶಿವನಾಗಿಮಯ್ಯನು ಹೊಲೆಯನಲ್ಲ ಎಂಬುದಕ್ಕೆ ಆಧಾರವೇನು? ಬಸವಾದಿ ಶರಣರು ಧರ್ಮನಾಶ ಮಾಡುತ್ತಿದ್ದಾರೆ. ಚಾತುರ್ವರ್ಣ ಧರ್ಮ ಪಾಲನೆಯೇ ರಾಜ ಧರ್ಮವೆಂದು ಧರ್ಮಶಾಸ್ತ್ರ ಹೇಳುತ್ತದೆ. ಶಿವನಾಗಿಮಯ್ಯ ಅಂತ್ಯಜನಾಗಿ ಅವನು ಉತ್ತಮ ಕುಲದವನಾಗಲು ಹೇಗೆ ಸಾಧ್ಯ (ಅದಕ್ಕೆ ಆಧಾರವೇನು) ಉತ್ತಮ ಶಿವಭಕ್ತ ಎನ್ನುವುದಕ್ಕೆ ಶಾಸ್ತ್ರಗಳಲ್ಲಿ ಪ್ರಮಾಣ ಸಿಗುವುದಿಲ್ಲ. ಪ್ರತ್ಯಕ್ಷ ಕಂಡು ಪ್ರಾಮಾಣಿಸಿ ನೋಡಲು ಸಾಧ್ಯ ಎಂದು ಬಿಜ್ಜಳ ಬಸವಣ್ಣನವರಿಗೆ ಹೇಳುತ್ತಾನೆ. ಶಿವಭಕ್ತರ ಮೈಯಲ್ಲಿ ರಕ್ತದ ಬದಲು ಹಾಲು ಸುರಿಯುವುದೇ? ಅತಿರೇಖದ ಮಾತುಗಳು ಬೇಡ ಬಸವಣ್ಣ ಸಮಾಜ ಕ್ಷೇಮವಾಗಿದ್ದರೆ ಸಾಕು. ಬಸವಣ್ಣ-ಶಿವಭಕ್ತರ ಮೈಯಿಂದ ಹಾಲು ಸುರಿಯದಿರ್ದರೆ ಕೂಡಲಸಂಗನ ಶರಣರಿಗೆ ದೂರವಾಗುವೆನು.
ಮುಂದೆ ವೈದಿಕ ಗುಂಪುಗಳು ಬಿಜ್ಜಳ ದೊರೆಗೆ ಚಾಡಿ ಹೇಳಿ ಶಿವನಾಗಿಮಯ್ಯನವರನ್ನು ಪರೀಕ್ಷಿಸಲು ಮುಂದಾಗುವರು. ನಾಗಿದೇವ ದೊರೆ ಬಿಜ್ಜಳ ಮತ್ತು ಅಲ್ಲಿ ನೆರೆದ ಜನರ ಮುಂದೆ ವೈರಿಗಳನ್ನು ತಪ್ಪಿತಸ್ಥರನ್ನು ಶಿಕ್ಷಿಸುವ ಕೈಗಳಿಂದ ಮೈ ಕೊರೆಸುವ ಸಾಹಸವೇ? ಮುಂದಿನ ತೀರ್ಮಾನದಂತೆ ನಾಗಿಮಯ್ಯನವರನ್ನು ದಂಡಿಸುವ ಹುನ್ನಾರ ಕುತಂತ್ರ ಪ್ರಾರಂಭವಾಗುತ್ತದೆ. ಊರಿನ ಚಾಂಡಾಲನನ್ನು ಮುಂದೆ ಮಾಡಿ ಚಾಂಡಾಲನಿಂದ ಪರೀಕ್ಷೆ ಪ್ರಾರಂಭವಾಗುತ್ತದೆ. ಚಾಂಡಾಲ – ದೊರೆಗಳ ಯುದ್ಧ ಭೂಮಿಯಲ್ಲಿ ಸಾವಿರಾರು ಸೈನಿಕರನ್ನು ಕೊಂದಿರುವೆ. ಆಗ ನನಗೆ ಏನು ಅನ್ನಿಸಲಿಲ್ಲ. ನನ್ನ ಹೆಂಡತಿ ಸತ್ತರು ದುಃಖವಾಗಲಿಲ್ಲ. ನನ್ನ ಮಗಳ ಸಾವಾದರೂ ಕಣ್ಣಲ್ಲಿ ನೀರು ಬರಲಿಲ್ಲ. ಆದರೆ ಈ ಶರಣರ ಮೈಯನ್ನು ಕೊರೆಯಲು ನನ್ನ ಕೈ ಮೇಲೆ ಎತ್ತಲಾಗುತ್ತಿಲ್ಲ. ಈಗ ಇವರ ಪಾದವನ್ನು ಹಿಡಿಯಬೇಕೆನಿಸುತ್ತದೆ. ಮುಂದೆ ವೈದಿಕ ಗುಂಪಿನವರು ಚಾಂಡಾಲನನ್ನು ಸರಿಸಿ ತಾವೇ ನಾಗಿಮಯ್ಯನವರ ಮೈಯನ್ನು ಕೊರೆಯಲು ಸಿದ್ದರಾಗುತ್ತಾರೆ.
ಬಸವಣ್ಣ – ಚಂಡಾಲರಿಗಿಂತ ಕೀಳಾದಿರಿ ನೀವು ಶರಣರ ಮೈಯಲ್ಲಿ ಹರಿಯುತ್ತಿರುವುದು ರಕ್ತವಲ್ಲ ಕರುಣೆ, ಅದಕ್ಕೆ ಹಾಲೆರೆದರೆ ತಪ್ಪೇನು? ಯಾವಾಗಲೂ ಸತ್ಯ ಸದಾಚಾರಕ್ಕೆ ಗೆಲುವು. ಸಮಾಜದಲ್ಲಿ ಮೇಲ್ವರ್ಗದವರ ಪ್ರಾಬಲ್ಯ ಅಂದು ಶರಣರು ವಿರೋಧಿಸಿದರು. ಅಸ್ಪೃಶ್ಯರಿಗೆ, ಮಹಿಳೆಯರಿಗೆ, ದಮನಿತರಿಗೆ ನ್ಯಾಯವನ್ನು ಕೊಡುವ ವಚನಗಳ ಬರವಣಿಗೆ ಬಂಡಾಯ ಧೋರಣೆಯನ್ನು ಅಭಿವ್ಯಕ್ತಿಸಿದರು.
ಶಿವನಾಗಮಯ್ಯನವರು ಸಮಾಜ ತಮ್ಮಂತವರನ್ನು ಉಪೇಕ್ಷಿಸುತ್ತದೆ ಎಂದು ಹೇಳದೇ ಲಿಂಗ ದೇಹಿ ಎಂದು ಪ್ರಾಮಾಣಿಸಿ ಹೇಳುವ ಸಮರ್ಥನೆಯದು
ಹುಟ್ಟಿದಾಕ್ಷಣ ಲಿಂಗಸ್ವಾಯತವ ಮಾಡಿ,
ಶಿಶುವ ತನ್ನ ಶಿಶುವೆಂದು ಮುಖವ ನೋಡುವುದು ಸದಾಚಾರ,
ಅದಲ್ಲದೆ, ಬರಿಯ ವಿಭೂತಿಯ ಪಟ್ಟವ ಕಟ್ಟಿ,
ಗುರುಕಾರುಣ್ಯವಾಯಿತ್ತೆಂದು
ಅನುಸರಣೆಯಲ್ಲಿ ಆಡಿಕೊಂಬುದು ಕ್ರಮವಲ್ಲ.
ಅದೇನು ಕಾರಣವೆಂದಡೆ,
ತಾ ಲಿಂಗದೇಹಿಯಾದುದಕ್ಕೆ ಕುರುಹು,
ಲಿಂಗವುಳ್ಳವರೆಲ್ಲರ ತನ್ನವರೆನ್ನಬೇಕಲ್ಲದೆ,
ಲಿಂಗವಿಲ್ಲದವರ ತನ್ನವರೆಂದಡೆ,
ತನ್ನ ಸದಾಚಾರಕ್ಕೆ ದ್ರೋಹವಹುದು,
ಸಮಯಾಚಾರಕ್ಕೆ ಮುನ್ನವೇ ಸಲ್ಲ.
ಇದು ಕಾರಣ, ಲಿಂಗಸ್ವಾಯತವಾಗಿಹುದೇ ಪಥವಯ್ಯಾ,
ನಾಗಪ್ರಿಯ ಚೆನ್ನರಾಮೇಶ್ವರಾ.
(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-66/ವಚನ ಸಂಖ್ಯೆ-135)
ಲಿಂಗದೀಕ್ಷೆಯು ಲಿಂಗಾಯತ ಧರ್ಮದಲ್ಲಿ ಒಂದು ಪವಿತ್ರ ಧರ್ಮದ ವಿಧಿ ವಿಧಾನವದು. ಹುಟ್ಟಿನಿಂದ ಸಾಯುವವರೆಗೆ ಅಂಗ–ಲಿಂಗದೊಂದಿಗೆ ತನ್ನನ್ನು ಸಮರ್ಪಿಸಿಕೊಳ್ಳುವುದು, ಲಿಂಗದೊಂದಿಗೆ ಅಧ್ಯಾತ್ಮದ ಮೂಲಕ ಏಕವಾಗಿ ಬಾಳನ್ನು ಸ್ವೀಕರಿಸುವುದಾಗಿದೆ. ಹುಟ್ಟಿದ ಮಗು ಲಿಂಗವನ್ನು ಸ್ವಾಯತವ ಮಾಡಿಕೊಂಡರೆ ಆ ಮಗು ಲಿಂಗಾಯಿತ ಧರ್ಮದ ಶಿಶುವಾಗುತ್ತದೆ. ಈ ಕಾಯವೆಲ್ಲ ಲಿಂಗವೇ ಆಗಿ ಧಾರ್ಮಿಕತೆಯನ್ನು ಪ್ರೇರೇಪಿಸುತ್ತದೆ. ಲಿಂಗಾಚಾರ ಮನದ ಸ್ವಾರ್ಥಭಾವವನ್ನು ತೊಡೆದು ಸದಾಚಾರಿಯಾದಾಗ ಆ ಶಿಶು ಶರಣ ಧರ್ಮದ ಶಿಶುವಾಗುತ್ತದೆ.
ಸದಾಚಾರಿ ಸದ್ಭಕ್ತ ವಿಭೂತಿಯನ್ನು ಧರಿಸುವುದರಿಂದ ಆಧ್ಯಾತ್ಮಿಕ ಶಕ್ತಿ ಅಭಿಸುತ್ತದೆ. ವಿಭೂತಿ ಧಾರಣೆಯಿಂದ ಸಚ್ಚಾರಿತ್ರ ಧರ್ಮ ಪ್ರವರ್ತಕ ನಿಷ್ಕಲ್ಮಶ ಮನದ ಪ್ರತಿ ಬಿಂಬವನ್ನು ಗುರುತಿಸುವ ಶಕ್ತಿ ಭಸಿತಕ್ಕಿದೆ. ಶರಣ ಶಿವನಾಗಿಮಯ್ಯ ಹೇಳಿದಂತೆ ಲಿಂಗ ದೇಹಿಯ ಕುರುಹು ಭಸಿತಕ್ಕಿದೆ. ಲಿಂಗ ಉಳ್ಳವರೆಲ್ಲರೂ ಲಿಂಗಾಯತರು.
ಅಂದು ಸಮಾಜದಲ್ಲಿ ಸದಾಚಾರ ಧರ್ಮವನ್ನು ಹೆಚ್ಚಿಸಬೇಕಾಗಿತ್ತು. ಅಂಗದ ಮೇಲಿನ ಲಿಂಗ ದೇಹಶುದ್ದಿ, ಮನಶುದ್ದಿಯ ಸಮ್ಮಿಶ್ರಣ ಪ್ರತಿಫಲನವದು. ಸಮಾನತೆ ಅಶೌಚದ ಜಾತಿಯ ಹಂಗಿರದ ಅಪಮಾನಗಳಿಲ್ಲದ ಶ್ರೇಷ್ಠ ಧರ್ಮ ಲಿಂಗಾಯಿತ ಧರ್ಮವೆಂಬುದನ್ನು ಗಮನಿಸಬೇಕು. ಬಸವಣ್ಣನವರ ಈ ವಚನ
ಲಿಂಗವ ಪೂಜಿಸಿ ಫಲವೇನಯ್ಯಾ,
ಸಮರತಿ ಸಮಕಳೆ ಸಮಸುಖವನರಿಯದನ್ನಕ್ಕ?
ಲಿಂಗವ ಪೂಜಿಸಿ ಫಲವೇನಯ್ಯಾ,
ಕೂಡಲಸಂಗಮದೇವರ ಪೂಜಿಸಿ
ನದಿಯೊಳಗೆ ನದಿ ಬೆರೆಸಿದಂತಾಗದನ್ನಕ್ಕ?
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-265/ವಚನ ಸಂಖ್ಯೆ-930)
ಈ ರೀತಿಯ ಸನ್ನಿವೇಶಗಳ ಸಮರ್ಥನೆಯನ್ನು ಬಸವಣ್ಣನವರ ವಚನದ ಆಶಯದಲ್ಲಿ ಕಾಣಲು ಸಾಧ್ಯ. ಅರಿವಿನ ಕ್ರಾಂತಿ ಆಚಾರ ಕ್ರಾಂತಿಯಾಗಬೇಕು. ಸಮರತಿ, ಸಮಕಳೆ, ಸಮಸುಖ ನಮ್ಮದಾಗಿಸಿಕೊಳ್ಳಬೇಕಾದರೆ ವರ್ಗ, ವರ್ಣ, ಕಲಹಗಳು ಸಾಮಾನ್ಯವಾಗಿ ನಮ್ಮನ್ನು ಕಾಡುತ್ತಿರುತ್ತವೆ. ನದಿಯೊಳಗೆ ನದಿ ಬೆರೆತರೆ ಸಾಗರವೇ ಆಗುತ್ತದೆ. ಕಲ್ಯಾಣದ ಶರಣರು ಅಸ್ಪೃಶ್ಯರೊಂದಿಗೆ ಏಕವಾಗಿ ಆಲಯದ ಲಿಂಗವನ್ನು ಕರಸ್ಥಲಕ್ಕೆ ಕೊಟ್ಟಾಗ ಮಾನವಪ್ರಜ್ಞೆ ವಿಶ್ವಪ್ರಜ್ಞೆಯಾಗುವುದರತ್ತ ಸಾಗಿದ್ದನ್ನು ಗಮನಿಸಬೇಕು. ಅಲಕ್ಷಿತ ವಚನಕಾರರ ವ್ಯಕ್ತಿತ್ವ ಮತ್ತು ವಚನಗಳು ಚರ್ಚೆಯಾಗಿಲ್ಲ. ಸಾಕಷ್ಟು ವಚನಗಳು ಚರ್ಚೆಯಾದರೂ ಪ್ರಮುಖ ವಚನಕಾರರ ವಚನಗಳು ಮಾತ್ರ ಚರ್ಚೆಯಾಗುತ್ತವೆ. ಶರಣರ ಚಳುವಳಿ ಪ್ರತಿಭಟನೆಯ ಸಾಹಿತ್ಯ ಪ್ರಕಾರಗಳಿಗೆ ಸೀಮಿತವಾಗಿ ನಿಂತಿವೆ ಎಂಬುದನ್ನು ಗಮನಿಸಬೇಕು. ಇದನ್ನು ಮೀರಿ ಶಿವನಾಗಿಮಯ್ಯನವರ ವ್ಯಕ್ತಿತ್ವ ಶರಣ ಸಾಹಿತ್ಯದಲ್ಲಿ ಗಮನ ಸೆಳೆಯುತ್ತದೆ.
ಡಾ. ಸರ್ವಮಂಗಳ ಸಕ್ರಿ.
ಕನ್ನಡ ಉಪನ್ಯಾಸಕರು (ನಿ).
ಅಧ್ಯಕ್ಷರು. ಜಾಗತಿಕ ಲಿಂಗಾಯತ ಮಹಾ ಸಭಾ
ಮಹಿಳಾ ಘಟಕ-ರಾಯಚೂರು ಜಿಲ್ಲೆ
ರಾಯಚೂರು.
ಮೋಬೈಲ್ ಸಂ. 94499 46839.
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ:
- ಮೋಬೈಲ್ ನಂ. 9741 357 132
- e-Mail ID: info@vachanamandara.in / admin@vachanamandara.in






Total views : 62472