ಶರಣ ಗುಪ್ತ ಮಂಚಣ್ಣನವರ ವಚನ ವಿಶ್ಲೇಷಣೆ | ಶ್ರೀಮತಿ. ಶಾಲಿನಿ ರುದ್ರಮುನಿ, ಹುಬ್ಬಳ್ಳಿ.

Loading

ಉಳಿಯ ಹಿಡಿಯಲ್ಲಿ ಕಲೆ ಮಾಡಿಸಿಕೊಂಡ ದೇವರಿಗೆ
ಅಳಿವು ಉಳಿವಲ್ಲದೆ,
ಉಳಿಗೆ ಹೊರಗಾದ ಅಳಿಯದವನನರಿಯಾ,
ನಾರಾಯಣಪ್ರಿಯ ರಾಮನಾಥ.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-119/ವಚನ ಸಂಖ್ಯೆ-298)

ಶರಣ ಗುಪ್ತ ಮಂಚಣ್ಣನವರು 12 ನೇ ಶತಮಾನದ ಪ್ರಮುಖ ಶಿವಶರಣರು ಮತ್ತು ವಚನಕಾರರು. ಇವರು ಬಸವಣ್ಣನವರ ಚಿಂತನೆಗಳನ್ನು ಅನುಸರಿಸಿದರೂ ತಮ್ಮನ್ನು ಬಹಿರಂಗವಾಗಿ ಮುಂದಿರಿಸದೆ, ಸರಳ ಮತ್ತು ನೇರವಾದ ವಚನಗಳ ಮೂಲಕ ಸಮಾಜಕ್ಕೆ ಮಾರ್ಗದರ್ಶನ ನೀಡಿದರು.

ಇವರು ಬಿಜ್ಜಳ ರಾಜನ ಕೋಶಾಗಾರದಲ್ಲಿ ಕರಣಿಕ (ಲೆಕ್ಕಿಗ) ಆಗಿ ಕೆಲಸ ಮಾಡುತ್ತಿದ್ದರು. ಇವರು “ನಾರಾಯಣಪ್ರಿಯ ರಾಮನಾಥ” ವಚನಾಂಕಿತದಿಂದ ಬರೆದ ಸುಮಾರು 100 ವಚನಗಳು ಇಲ್ಲಿಯವರೆಗೆ ಲಭ್ಯವಿವೆ. “ದೇವರ ಭಕ್ತಿ ಬಾಹ್ಯ ಆಡಂಬರದಲ್ಲಲ್ಲ; ಸತ್ಯ, ಪ್ರಾಮಾಣಿಕತೆ ಮತ್ತು ಸದುಪಚಾರದ ಬದುಕಿನಲ್ಲಿದೆ” ಎಂಬ ಸಂದೇಶವನ್ನು ಗುಪ್ತ ಮಂಚಣ್ಣನವರ ವಚನಗಳು ಸಾರುತ್ತವೆ.

ಆರಣ ಗುಪ್ತ ಮಂಚಣ್ಣನವರ ಪ್ರಸ್ತುತ ಈ ವಚನವು ರೂಪದಿಂದ ಅರೂಪದ ಕಡೆಗೆ, ಮೂರ್ತಿಯಿಂದ ಚೈತನ್ಯದ ಕಡೆಗೆ, ಆಚರಣೆಯಿಂದ ಅನುಭವದ ಕಡೆಗೆ ಮಾನವನನ್ನು ಕರೆದೊಯ್ಯುತ್ತದೆ. ಇಲ್ಲಿ “ಉಳಿ” ಅಂದರೆ ಕಟ್ಟಿಗೆ ಮತ್ತು ಕಲ್ಲು ಕೆತ್ತುವ ಸಾಧನ. ಶಿಲ್ಪಿ ಕಲ್ಲಿಗೆ ಉಳಿಯಿಂದ ಹೊಡೆದು ದೇವರಮೂರ್ತಿ ಮಾಡುತ್ತಾನೆ. ಉಳಿಯ ಹೊಡೆತದಿಂದ ಮಾಡಿದ ದೇವರ ಮೂರ್ತಿ ಬಹಿರಂಗದ ಪೂಜೆಗೆ ತಯಾರಾಗಬಹುದು ಆದರೆ ಮನದೊಳಗಿನ ಶಿವಭಾವ ಶಾಶ್ವತ. ದೇವರನ್ನು ಕಲ್ಲಿನಲ್ಲಿ ಮಾತ್ರ ಕಾಣಲಾರದೇ ಕರುಣೆಯಲ್ಲಿ, ಅರಿವಿನಲ್ಲಿ, ಆತ್ಮಾನುಭವದಲ್ಲಿ ಕಾಣು ಎಂಬುದೇ ಈ ವಚನದ ಸಂದೇಶ.

ಕಲ್ಲಿನಲ್ಲಿ ಕಟೆದ ದೇವರ ಮೂರ್ತಿ ತುಂಬಾ ಸುಂದರವಾಗಿರಬಹುದು. ಜನ ಭಕ್ತಿಯಿಂದ ಪೂಜೆಯನ್ನೂ ಮಾಡಬಹುದು. ಅದು ಅವರವರ ನಂಬಿಕೆಯ ಮತ್ತು ಶ್ರದ್ಧೆಯ ಪ್ರತೀಕ. ಅದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ. ಆದರೆ ಅದು ಕಲ್ಲಿನಿಂದ ಮಾಡಲ್ಪಟ್ಟ ಶಿಲ್ಪ. ಒಂದು ದಿನ ಅದು ಒಡೆಯಬಹುದು, ಹಾಳಾಗಬಹುದು, ಮಣ್ಣಾಗಬಹುದು, ಮೂರ್ತಿಯ ಬಣ್ಣ ಕುಂದಬಹುದು. ಆದರೆ ಒಬ್ಬ ಹಸಿದವನಿಗೆ ಅನ್ನ ಹಾಕಿದ ಒಳ್ಳೆಯ ಮನಸ್ಸು? ಅದು ಜನರ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತೆ.‌ ‌

ದೇವರೂ ಕೂಡ ಮಾನವ ನಿರ್ಮಿತವೆ, ಅದು Text Culture. ದೇವರಿಗೆ ರೂಪ ಕೊಡುವವನು ಮನುಷ್ಯ, ಆ ರೂಪ ಕಾಲಬದ್ಧವಾಗಿದೆ. ಹಾಗಾಗಿ ಶರಣರು “ಮಾನವನು ಮಾಡಿದ ರೂಪವೇ ದೇವರ ಪರಿಪೂರ್ಣತೆಯೆ? ಇದೇ ಸತ್ಯವೇ?” “ಅಳಿವು ಉಳಿವಲ್ಲದೆ” ಎಂದು ಇದರ ವೈಚಾರಿಕತೆಯನ್ನು ಪ್ರಶ್ನಿಸುತ್ತಾರೆ. ಇದು ಒಂದು ಪ್ರಶ್ನೆ ಮಾತ್ರ. ಇದನ್ನು ಒಪ್ಪುವುದು ಬಿಡಿವುದು ಅವರವರ ಭಾವಕ್ಕನುಗುಣವಾಗಿದೆ. ಹಾಗಾದರೆ ರೂಪವಿರುವ ಎಲ್ಲವೂ ಹುಟ್ಟುತ್ತದೆ, ಬೆಳೆದು ಬದಲಾಗುತ್ತದೆ ಒಂದು ದಿನ ನಾಶವಾಗುತ್ತದೆ. ಕಲ್ಲಿನ ಮೂರ್ತಿಗೂ ಇದೇ ನಿಯಮ. ಇದು ಬೌದ್ಧ, ಉಪನಿಷತ್ ಹಾಗೂ ಶರಣ ತತ್ವಗಳಲ್ಲಿರುವ “ಅನಿತ್ಯ” ದ ಚಿಂತನೆಗೆ ಹತ್ತಿರವಾಗಿದೆ.

“ಉಳಿಗೆ ಹೊರಗಾದ ಅಳಿಯದವನನರಿಯಾ” ಉಳಿಯಿಂದ ಕಲೆಯಾದ ದೇವರು ಮಾನವನು ನಿರ್ಮಿಸಿದ ಮೂರ್ತಿ. ಅದು ಕಲ್ಲು, ಲೋಹ, ಮರ ಇವುಗಳಿಂದ ದೇವರ ರೂಪ ಮಾಡುತ್ತಾನೆ ಮಾನವ.ಅದು ಕಾಲಕ್ಕೆ ಒಳಪಟ್ಟದ್ದು, ಸ್ಥಳಕ್ಕೆ ಸೀಮಿತವಾದದ್ದು. ಮಾನವ ಕಲ್ಪನೆಯ ಫಲವು ಮೂರ್ತಿ ರೂಪ. ಯಾವ ಶಿಲ್ಪಿಯ ಕೈಗೂ ಸಿಗದವನು, ಯಾವ ರೂಪಕ್ಕೂ ಸೀಮಿತನಾಗದವನು ಮನಸ್ಸಿನ ಅನುಭವದಲ್ಲಿ ಮಾತ್ರ ಅರಿವಾಗುವವನು ಅವನೇ ನಿಜದ ದೇವರು, ಪರಮಾತ್ಮ, ಶಿವ. ಶರಣರು ಹೇಳುವ ಶಿವ, ಕಲ್ಲಿನೊಳಗಷ್ಟೇ ಇಲ್ಲ, ದೇವಸ್ಥಾನದಲ್ಲಷ್ಟೇ ಇಲ್ಲ. ಜೀವ ಜಗತ್ತಿನೆಲ್ಲೆಡೆ ಇರುವ ಚೈತನ್ಯ. ಅವನು ಶಾಶ್ವತ. ಅವನಿಗೆ ಹುಟ್ಟು, ಸಾವು, ಉಳಿವು, ಅಳಿವು ಇಲ್ಲ.

ಶರಣ ಗುಪ್ತ ಮಂಚಣ್ಣನವರು ಇಲ್ಲಿ ಬಾಹ್ಯ ಮೂರ್ತಿಪೂಜೆಯ ಇತಿ-ಮಿತಿಯನ್ನು ತೋರಿಸಿ, ಅಂತರಂಗದ ನಿರಾಕಾರ ಶಿವತತತ್ವದ ಕಡೆಗೆ ಮನಸ್ಸು ತಿರುಗಿಸುತ್ತಾರೆ. ಅರ್ಥಾತ್ ದೇವತ್ವವು ವಸ್ತುವಿನಲ್ಲಿ ಅಲ್ಲ, ಅನುಭವದಲ್ಲಿದೆ. ಆತ್ಮಾನುಭವದ ಮಹತ್ವವಿಲ್ಲಿ ಜೀವಾಳ. ಭಕ್ತಿಯನ್ನು ಹೊರಗಿನ ಆಚರಣೆಗಳಿಂದ ಒಳಗಿನ ಜಾಗೃತಿಯ ಕಡೆಗೆ ಕರೆದೊಯ್ಯುತ್ತದೆ. ದೇವರನ್ನು ಕಣ್ಣಿನಿಂದ ನೋಡುವುದಕ್ಕಿಂತ, ಹೃದಯದಿಂದ ಅನುಭವಿಸಬೇಕು ಎಂಬ ಸಂದೇಶ ಇಲ್ಲಿದೆ.‌

ಶರಣ ಗುಪ್ತ ಮಂಚಣ್ಣನವರು ಮೂರ್ತಿಪೂಜೆಯನ್ನು ಸಂಪೂರ್ಣ ನಿರಾಕರಿಸುತ್ತಿಲ್ಲ. ಆದರೆ ಮೂರ್ತಿಯನ್ನೇ ಪರಮಸತ್ಯವೆಂದು ನಂಬುವುದನ್ನು ಪ್ರಶ್ನಿಸುತ್ತಾರೆ. ಮೂರ್ತಿ ಕೇವಲ ಒಂದು ಸಂಕೇತ, ಒಂದು ಸಾಧನ, ಒಂದು ಧ್ಯಾನದ ದಾರಿ. ಆದರೆ ಅಂತಿಮ ಸತ್ಯ ಅಲ್ಲ. ಇದು ಅತ್ಯಂತ ಪ್ರಗತಿಪರ ಚಿಂತನೆ.

ಅಲ್ಲಮಪ್ರಭುಗಳು ಹೇಳುವ “ಗುಹೇಶ್ವರ” ಕೂಡ ನಿರಾಕಾರ ಅನುಭವದ ಶಿವ. ಅವರಿಗೆ ಶಿವನು ಕಾಣದ ಬೆಳಕು, ಮಾತಿಗೆ ಸಿಗದ ಅನುಭವ. ಸರಳ ಪದಗಳಲ್ಲಿ ಅಪಾರ ತತ್ವ ಸಾರುವ ವಚನ “ಉಳಿ” ಎಂಬ ಪ್ರತಿಮೆಯಿಂದಲೆ ಮಾನವಕಲೆ, ಮೂರ್ತಿಪೂಜೆ, ನಾಶವಾಗುವ, ಕುಂದುವ, ನಿರಾಕಾರತತ್ವ ಇವೆಲ್ಲವನ್ನು ಕಟ್ಟಿಕೊಡಲಾಗಿದೆ. ಇದು ವಚನದ ವೈಶಿಷ್ಟ್ಯ.

ಇವತ್ತು ಧರ್ಮದ ಹೆಸರಿನ ಬಾಹ್ಯ ಪ್ರದರ್ಶನವೇ ಜಾಸ್ತಿಯಾಗಿ ದೊಡ್ಡ ದೇವಸ್ಥಾನಗಳು, ಅದರ ವೈಭವದ ಆಚರಣೆಗಳು, ಢಾಂಬಿಕ ಭಕ್ತಿ ಪ್ರದರ್ಶನಗಳು ಹಿಂದೆಂದಿಗಿಂತಲೂ ಹೆಚ್ಚಾಗಿವೆ. ಆದರೆ, ಕರುಣೆ ಕಡಿಮೆಯಾಗುತ್ತಿದೆ. ಮಾನವೀಯತೆ ಕ್ಷೀಣಿಸುತ್ತಿದೆ. ಶರಣ ಗುಪ್ತ ಮಂಚಣ್ಣನವರ ಈ ವಚನದ ಮೂಲಕ ಹೇಳುವ ಸಂದೇಶವೆಂದರೆ “ದೇವರನ್ನು ರೂಪದಲ್ಲಿ ಮಾತ್ರ ಹುಡುಕಬೇಡ; ಜೀವದಲ್ಲಿ ಹುಡುಕು.” ಎಂದು.

ಇಂದಿನ ಧಾವಂತ ಬದುಕಿನಲಿ ಮಾನವ ಹೊರಗಿನ ಗದ್ದಲದಲ್ಲಿ ಬದುಕುತ್ತಿದ್ದಾನೆ ಎನ್ನುವುದು ಈ ವಚನದ ಒಳನೋಟ ಕಲಿಸುತ್ತದೆ. ಮಾನವತೆಯ ಮೌಲ್ಯ ಕಲ್ಲಿನ ದೇವರನ್ನು ಕಾಪಾಡುವಷ್ಟೇ ಆಗದೆ ಜೀವದ ಮೌಲ್ಯ, ಪ್ರಕೃತಿಯ ಮೌಲ್ಯ, ಪ್ರೀತಿಯ ಮೌಲ್ಯ ಕಾಪಾಡಬೇಕು ಎಂಬ ಕಳಕಳಿಯಿದೆ.

ಶರಣ ಗುಪ್ತ ಮಂಚಣ್ಣನವರು ದೇವರನ್ನು ಕೇವಲ ಕಲ್ಲಿನ ವಿಗ್ರಹಗಳಲ್ಲಿ ಹುಡುಕಬಾರದು, ಬದಲಾಗಿ ಮನುಷ್ಯನ ಒಳ್ಳೆಯ ನಡತೆ, ಸತ್ಯ, ಪ್ರಾಮಾಣಿಕತೆ ಮತ್ತು ಸದಾಚಾರದಲ್ಲಿ ದೇವರನ್ನು ಕಾಣಬೇಕು ಎಂದು ಬೋಧಿಸಿದ್ದಾರೆ. ಕಳ್ಳತನ, ಮೋಸ, ದುಷ್ಟಾಚಾರಗಳನ್ನು ಗುಪ್ತ ಮಂಚಣ್ಣನವರು ದೇವರನ್ನು ಕೇವಲ ಕಲ್ಲಿನ ವಿಗ್ರಹಗಳಲ್ಲಿ ಹುಡುಕಬಾರದು, ಬದಲಾಗಿ ಮನುಷ್ಯನ ಒಳ್ಳೆಯ ನಡತೆ, ಸತ್ಯ, ಪ್ರಾಮಾಣಿಕತೆ ಮತ್ತು ಸದಾಚಾರದಲ್ಲಿ ದೇವರನ್ನು ಕಾಣಬೇಕು ಎಂದು ಬೋಧಿಸಿದ್ದಾರೆ. ಅವರ ಪ್ರಕಾರ ನಿಜವಾದ ಭಕ್ತಿ ಎಂದರೆ ಉತ್ತಮ ಜೀವನ ಮತ್ತು ಉತ್ತಮ ನಡೆನುಡಿ.

ಶ್ರೀಮತಿ. ಶಾಲಿನಿ ರುದ್ರಮುನಿ,
# 20, ರಾಜೀವನಗರ, ಎರಡನೇ ಹಂತ, ಎರಡನೇ ತಿರುವು, 
ಪೋಲಿಸ್ ವಸತಿಗೃಹ ರಸ್ತೆ, 
ವಿದ್ಯಾನಗರ,
ಹುಬ್ಬಳ್ಳಿ – 580031
ಮೊಬೈಲ್ ಸಂಖ್ಯೆ – 78921 69644

  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ:
    • ಮೋಬೈಲ್ ನಂ. 9741 357 132
    • e-Mail ID: info@vachanamandara.in / admin@vachanamandara.in

Leave a Reply