ಶರಣ ಮಾದಾರ ಧೂಳಯ್ಯನವರ ವಚನ ವಿಶ್ಲೇಷಣೆ | ಡಾ. ಶಿವಲೀಲಾ ಬಸವರಾಜ, ಕಾಳಗಿ.

Loading

12 ನೇ ಶತಮಾನದಲ್ಲಿ ಕಲ್ಯಾಣದಲ್ಲಿ ನೆಲೆಸಿದ್ದ 770 ಅಮರಗಣಂಗಳಲ್ಲಿ ಮಾದಾರ ಧೂಳಯ್ಯನವರು ಒಬ್ಬರಾಗಿದ್ದಾರೆ. ಇವರು ಕಲ್ಯಾಣಕ್ಕೆ ಬರುವ ಪೂರ್ವದಲ್ಲಿನ ಜೀವನದ ಸ್ಪಷ್ಟವಾದ ಮಾಹಿತಿ ದೊರೆತಿರುವುದಿಲ್ಲ. ಸುಪ್ರಸಿದ್ಧ ಕವಿಗಳಾದ ಹರಿಹರ, ಭೀಮಕವಿ, ಸಿದ್ಧನಂಜೇಶ, ಷಡಕ್ಷರದೇವ ಮುಂತಾದವರು. ಮಾದಾರ ಧೂಳಯ್ಯನವರು ಒಬ್ಬ ಮಹಾನ ಕಾಯಕ ಶರಣ ಜೀವಿ ಎಂಬುದನ್ನು ಉಲ್ಲೇಖಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ಇವರ ಅಂಗೋದರದ ಮಹಾತ್ಮೆಯನ್ನು ಪ್ರಾಸಂಗಿಕವಾಗಿ ಒತ್ತಿ ಹೇಳಿದ್ದಾರೆ. ತ. ಸು. ಶಾಮರಾಯರ ಶಿವಶರಣರ ಕಥಾರತ್ನಕೋಶದಲ್ಲಿ ಮಾದಾರ ಧೂಳಯ್ಯನವರ ಜೀವನದ ಬಗ್ಗೆ ಪ್ರಸ್ತಾಪಿಸಿರುತ್ತಾರೆ. ಶರಣ ಧೂಳಯ್ಯನವರು ಪ್ರಾಂಜಲ ಮನಸ್ಸಿನ ಸತ್ಯ, ಶುದ್ಧ ಕಾಯಕಜೀವಿ. ಚಪ್ಪಲಿ ಹೊಲೆಯುವ ಕಾಯಕವನ್ನು ನಿಷ್ಠೆಯಿಂದ ಮಾಡುತ್ತ ಪ್ರತಿದಿನ ತಪ್ಪದೆ ಅನುಭವ ಮಂಟಪದಲ್ಲಿ ನಡೆಯುತ್ತಿದ್ದ ಆಧ್ಯಾತ್ಮಿಕ ಗೋಷ್ಠಿಯಲ್ಲಿ ಭಾಗವಹಿಸುತ್ತಿದ್ದರು. “ಕಾಮಧೂಮ ಧೂಳೇಶ್ವರ” ಎಂಬ ವಚನಾಂಕಿತದ ಇವರ 106 ವಚನಗಳು ಲಭ್ಯವಾಗಿವೆ. ಕಾಯಕದಲ್ಲಿಯೇ ಶಿವನನ್ನು ಸಾಕ್ಷಾತ್ಕರಿಸಿಕೊಂಡದ್ದನ್ನು, ಕಾಯಕದ ಮಹತ್ವ, ಭಕ್ತಿ, ಜ್ಞಾನ, ನಿಜದನೆಲೆಯ ಬಗ್ಗೆ ಶರಣರನ್ನು ಸ್ತುತಿಸುವಂತಹ ಅಲಂಕಾರಿಕ ಶೈಲಿಯ ಅವರ ಕೆಲವು ವಚನಗಳು ಬೆಡಗಿನ ವಚನಗಳಾಗಿವೆ. ಸತ್ಯದ ದಾರಿಯಲ್ಲಿ ನಡೆದು ಕಾಯಕದಲ್ಲಿಯೇ ಕೈಲಾಸ ಕಂಡ ಮಾದಾರ ಧೂಳಯ್ಯನವರ ಒಂದು ವಚನ ಈ ಕೆಳಗಿನಂತಿದೆ.

ಅರಿದು ಚುಚ್ಚುವರೆಲ್ಲರೂ ದನದಟ್ಟೆ,
ಮರೆದು ಚುಚ್ಚುವರೆಲ್ಲರೂ ದನದಟ್ಟೆ,
ನಾ ಚುಚ್ಚುವುದೆಲ್ಲ ಸತ್ತ ಜೀವದನದಟ್ಟೆ,
ಅಟ್ಟೆಯ ಕೊಯ್ದು ಮೆಟ್ಟಿಸಿದ ಸತ್ಯರಿಗೆಲ್ಲಕ್ಕೂ
ಎನಗೆ ಬಟ್ಟಬಯಲ ತೋರಬೇಕೆಂದು,
ನಿಮ್ಮ ಬಟ್ಟೆಯಲ್ಲಿ ನೀವೆ ಹೋಗಿ,
ಎನ್ನ ಬಟ್ಟೆ ಕಾಮಧೂಮ ಧೂಳೇಶ್ವರನ ಬಟ್ಟೆಯೇ ಸಾಕು.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-454/ವಚನ ಸಂಖ್ಯೆ-1171)

ಅರಿವು-ಮರವು ಮನುಷ್ಯನ ಮೂಲ ಪ್ರವೃತ್ತಿ. ಅರಿದು-ಅರಿಯದೇ ಕೆಲವರು ಅಮಾಯಕ ಪ್ರಾಣಿಗಳಿಗೆ (ದನ) ಹೊಡೆಯುವುದು, ಹಿಂಸೆ ಕೊಡುವುದರ ಮೂಲಕ ಪ್ರಾಣವನ್ನು ತೆಗೆಯುತ್ತಾರೆ. ಇದನ್ನೇ ಶರಣೆ ಅಕ್ಕಮಹಾದೇವಿಯವರು ತಮ್ಮ ವಚನದಲ್ಲಿ ಈ ರೀತಿಯಾಗಿ ಹೇಳಿರುತ್ತಾರೆ.

ಜಾಲಗಾರನೊಬ್ಬ ಜಲವ ಹೊಕ್ಕು ಶೋಧಿಸಿ,
ಹಲವು ಪ್ರಾಣಿಯ ಕೊಂದು, ನಲಿನಲಿದಾಡುವ,
ತನ್ನ ಮನೆಯಲೊಂದು ಶಿಶು ಸತ್ತಡೆ
ಅದಕ್ಕೆ ಮರುಗುವಂತೆ ಅವಕೇಕೆ ಮರುಗ?
ಅದೆಂತೆಂದಡೆ;
“ಸ್ವಾತ್ಮಾನಮಿತರಂ ಚೇತಿ ಭಿನ್ನತಾ ನೈವ ದೃಶತಾಂ |
ಸರ್ವಂ ಚಿಜ್ಯೋತಿರೇವತಿ ಯಃ ಪಶ್ಯತಿ ಸ ಪಶ್ಯತಿ ||
ಎಂದುರಾಗಿ,
ಜಾಲಗಾರನ ದುಃಖ ಜಗಕ್ಕೆಲ್ಲ ನಗೆಗೆಡೆ,
ಇದು ಕಾರಣ, ಚನ್ನಮಲ್ಲಿಕಾರ್ಜುನಯ್ಯನ ಭಕ್ತನಾಗಿರ್ದು
ಜೀವಹಿಂಸೆ ಮಾಡುವ ಮಾದಿಗರನೇನೆಂಬೆನಯ್ಯಾ?
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-74/ವಚನ ಸಂಖ್ಯೆ-208)

ಮೀನುಗಾರನು ತನ್ನ ಜೀವನೋಪಾಯಕ್ಕಾಗಿ ನೀರಿನಲ್ಲಿ ಬಲೆ ಹಾಕಿ ಅನೇಕ ಜೀವಿಗಳನ್ನು (ಮೀನು) ಹಿಡಿದು ಕೊಲ್ಲುತ್ತಾನೆ. ಆ ಜೀವಿಗಳ ನೋವು, ಸಾವು ಅವನಿಗೆ ಕಾಣುವದಿಲ್ಲಾ. ಆದರೆ ಅವನ ಮನೆಯಲ್ಲಿ ತನ್ನ ಮಗು ಸತ್ತರೆ ಅದಕ್ಕೆ ದು:ಖ ಪಡುತ್ತಾನೆ. ಇತರ ಜೀವಿಗಳ ನೋವನ್ನು ಅರಿಯದವನು, ತನ್ನ ನೋವಿಗೆ ಮಾತ್ರ ಏಕೆ ಮರುಗ? ಎಂದು ವೈರಾಗ್ಯನಿಧಿ ಅಕ್ಕಮಹಾದೇವಿಯವರು ಪ್ರಶ್ನಿಸುತ್ತಾರೆ. ತನ್ನ ಜೀವವನ್ನು ಹೇಗೆ ಪ್ರೀತಿಸುತ್ತೇವೂ, ಹಾಗೆಯೇ ಎಲ್ಲಾ ಜೀವಿಗಳನ್ನು ಪ್ರೀತಿಸಬೇಕು.

ಎಲ್ಲಾ ಜೀವಿಗಳಿಗೂ ಬದುಕುವ ಹಕ್ಕಿದೆ. ಪ್ರಪಂಚದಲ್ಲಿನ ಸರ್ವ ಜೀವರಾಶಿಗಳಲ್ಲಿಯ ಪರಮಾತ್ಮನಿದ್ದಾನೆ. ಎಲ್ಲಾ ಜೀವಿಗಳನ್ನು ತನ್ನಂತೆ ಕಾಣುವವನೇ ನಿಜವಾದ ಭಕ್ತನು. ಪ್ರಾಣಿ ಹಿಂಸೆ, ಪ್ರಾಣಿ ವಧೆಯನ್ನು ಶರಣರು ತೀವ್ರವಾಗಿ ಖಂಡಿಸಿರುವುದು ಪ್ರಾಸಂಗಿಕ ವಿವರಣೆಯಾದರೆ, ತಾತ್ವಿಕವಾಗಿ ಹೇಳುವುದಾದರೆ, ಸಮಾಜದಲ್ಲಿ ಜನರು ತಿಳಿದು ತಿಳಿಯದೆಯೋ ಇನ್ನೊಬ್ಬರನ್ನು ಟೀಕಿಸುವುದು, ನಿಂದಿಸುವುದು, ವ್ಯಂಗ್ಯ ಮಾತನಾಡುವುದರ ಮೂಲಕ ಮನಸ್ಸಿಗೆ ನೋವುಂಟು ಮಾಡುತ್ತಾರೆ. ಲೋಕದ ಡೋಂಕು ನಿವೇಕೆ ತಿದ್ದುವಿರಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ, ಎಂಬ ವಚನದಲ್ಲಿ ಬಸವಣ್ಣನವರು ಇತರರ ತಪ್ಪುಗಳನ್ನು ಟೀಕಿಸುವುದಕ್ಕಿಂತ ಮೊದಲು ತನ್ನಲ್ಲಿರುವ ತಪ್ಪುಗಳನ್ನು ಮತ್ತು ದೋಷಗಳನ್ನು ತಿದ್ದುಕೊಳ್ಳಬೇಕೆಂದು ತಿಳಿಸಿರುತ್ತಾರೆ. 

ಹೆದರದಿರು ಮನವೆ, ಬೆದರದಿರು ತನುವೆ,
ನಿಜವನರಿತು ನಿಶ್ಚಿಂತನಾಗಿರು.
ಫಲವಾದ ಮರನ ಕಲ್ಲಲಿ ಇಡುವುದೊಂದು ಕೋಟಿ,
ಎಲವದ ಮರನ ಇಡುವರೊಬ್ಬರ ಕಾಣೆ.
ಭಕ್ತಿಯುಳ್ಳವರ ಬೈವರೊಂದುಕೋಟಿ,
ಭಕ್ತಿಯಿಲ್ಲದವರ ಬೈವರೊಬ್ಬರ ಕಾಣೆ.
ನಿಮ್ಮ ಶರಣರ ನುಡಿಯೆ ಎನಗೆ ಗತಿ, ಸೋಪಾನ,
ಚೆನ್ನಮಲ್ಲಿಕಾರ್ಜುನಾ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-151/ವಚನ ಸಂಖ್ಯೆ-472)

ಫಲವಾದ ಮರನ ಕಲ್ಲಲಿ ಇಡುವುದೊಂದು ಕೋಟಿ, ಎಲವದ ಮರನ ಇಡುವರೊಬ್ಬರ ಕಾಣೆ, ಭಕ್ತಿಯುಳ್ಳವರ ಬೈವರೊಂದು ಕೋಟಿ, ಭಕ್ತಿಯಿಲ್ಲದವರ ಬೈವರೊಬ್ಬರ ಕಾಣೆಎನ್ನುವ ವೈರಾಗ್ಯನಿಧಿ ಅಕ್ಕಮಹಾದೇವಿಯವರ ವಚನದ ಎರಡು ಸಾಲುಗಳಲ್ಲಿ ಸಮಾಜದ ಜನರ ಮನಸ್ಥಿತಿಯನ್ನು ಉಲ್ಲೇಖಿಸಿದ್ದಾರೆ. ಲೋಕದಲ್ಲಿ ಹುಟ್ಟಿದ ಬಳಿಕ ಸ್ತುತಿ ನಿಂದನೆಗಳು ಬರುವುದು ಸಹಜ ಒಳ್ಳೆಯವರು, ಸಜ್ಜನರು, ಭಕ್ತರಾದರು ನಿಂದೆ, ಪ್ರಶಂಸೆಗಳಿಗೆ ಅಂಜದೆ ಭಕ್ತಿ ಮತ್ತು ಧರ್ಮದ ಮಾರ್ಗದಲ್ಲಿ ನಡೆಯಬೇಕೆಂದು ತಿಳಿಸಿದ್ದಾರೆ. ಇದನ್ನರಿತ   ಮಾದಾರ ಧೂಳಯ್ಯನವರು ತಾನು ಮಾತ್ರ ಪ್ರಾಣಿ ಹಿಂಸೆ ಮಾಡದೆ ಸತ್ತ ದನದ ಚರ್ಮವನ್ನು ಹದ ಮಾಡಿ ಸತ್ಯದ ದಾರಿಯಲ್ಲಿ ನಡೆಯುವ ಶರಣರ ಪಾದರಕ್ಷೆಗಳನ್ನು ತಯಾರಿಸುವ ಕಾಯಕ ಮಾಡುತ್ತೇನೆಂದು ಒತ್ತಿ ಹೇಳುತ್ತಾರೆ. ಮಾದಾರ ಧೂಳಯ್ಯನವರು ಇನ್ನೊಬ್ಬರಿಗೆ ನೋವನ್ನುಂಟು ಮಾಡದಿರುವ ಮೃದು ಹೃದಯ, ಕರುಣಾಮಯಿ ವ್ಯಕ್ತಿತ್ವದವರೆಂಬುದು ವ್ಯಕ್ತವಾಗುತ್ತದೆ. ಶ್ರದ್ಧೆ ಭಕ್ತಿಯಿಂದ ಕಾಯಕದಲ್ಲಿ ನಿರತನಾದಾಗ ಶಿವನೇ ಪ್ರತ್ಯಕ್ಷನಾದರೂ ಲೆಕ್ಕಿಸದೇ ಕಾಯಕದಲ್ಲಿಯೇ ಕೈಲಾಸಕಂಡರು.

ಕಾಯಕದಲ್ಲಿ ನಿರತನಾದಡೆ,
ಗುರುದರ್ಶನವಾದಡೂ ಮರೆಯಬೇಕು,
ಲಿಂಗಪೂಜೆಯಾದಡೂ ಮರೆಯಬೇಕು,
ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು.
ಕಾಯಕವೆ ಕೈಲಾಸವಾದ ಕಾರಣ.
ಅಮರೇಶ್ವರಲಿಂಗವಾಯಿತ್ತಾದಡೂ ಕಾಯಕದೊಳಗು
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-436/ವಚನ ಸಂಖ್ಯೆ-1165)

ಕಾಯಕದಲ್ಲಿ ನಿರತನಾದಡೆ ಗುರುದರುಶನವಾದರೂ ಮರೆಯಬೇಕು ಲಿಂಗ ಪೂಜೆಯಾದಡೂ ತೊರೆಯಬೇಕು, ಜಂಗಮ ಮುಂದಿದ್ದಡೂ ಹಂಗು ಹರಿಯಬೇಕು ಕಾಯಕವೇ ಕೈಲಾಸವಾದ ಕಾರಣಎಂಬ ಶರಣರು ನೀಡಿದ ಕಾಯಕ ತತ್ವಕ್ಕೆ ಬದ್ಧರಾದ ಧೂಳಯ್ಯನವರ ವಚನ ಈ ಕೆಳಗಿನಂತಿದೆ.

ಅಟ್ಟಿಯ ಚುಚ್ಚುವ ಉಳಿಯ ಮೊನೆಯಲ್ಲಿ,
ಪ್ರತ್ಯಕ್ಷವಾದ ಪರಮೇಶ್ವರನ ಕಂಡು,
ಇತ್ತಲೇಕಯ್ಯಾ, ಕಾಯದ ತಿತ್ತಿಯ ಹೊತ್ತಾಡುವನ ಮುಂದೆ?
ನಿನ್ನ ಭಕ್ತರ ಠಾವಿನಲ್ಲಿಗೆ ಹೋಗಿ ಅವರ ಮುಕ್ತಿಯ ಮಾಡು.
ನೀ ಹೊತ್ತ ಬಹುರೂಪ[ದಿ] ತಪ್ಪದೆ
ರಜತ ಬೆಟ್ಟದ ಮೇಲಕ್ಕೆ ಹೋಗು,
ಕಾಮಧೂಮ ಧೂಳೇಶ್ವರನ ಕರುಣದಿಂದ ನೀನೇ ಬದುಕು.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-453/ವಚನ ಸಂಖ್ಯೆ-1167)

ಶರಣ ಮಾದಾರ ಧೂಳಯ್ಯನವರ ಕಾಯಕ ನಿಷ್ಠೆಯನ್ನು ಎತ್ತಿ ತೋರುವಂತಹ ಸ್ವಾರಸ್ಯಕರವಾದ ವಚನ ಇದಾಗಿದೆ. ಶಿವನನ್ನು ಮೀರಿ ಶಿವಶರಣರ ಹಿತಮುಖ್ಯ. ಸರ್ವಜನರ ಹಿತಕ್ಕಾಗಿ ಶ್ರಮಿಸುವ ಶರಣರ ತತ್ವ ಅದ್ಭುತವಾದದ್ದು, ಧೂಳಯ್ಯನವರು ತನ್ನ ಕಾಯಕದಲ್ಲಿ ನಿರತನಾದಾಗ ಶಿವನು ಪ್ರತ್ಯಕ್ಷನಾದರೆ, ಇತ್ತಲೇಕೆ ಬಂದಿರುವೆ? ಎಂದು ಶಿವನನ್ನೇ ಪ್ರಶ್ನೆಮಾಡುತ್ತಾರೆ. ನಿನಗಾಗಿ ಪ್ರಾರ್ಥಿಸುವ ನಿನ್ನ ಭಕ್ತರ ಹತ್ತಿರ ಹೋಗು. ಅವರಿಗೆ ಮುಕ್ತಿಕೊಡು ಎಂದು ಶಿವನಿಗೆ ಹೇಳುತ್ತಾರೆ. ಶರಣರಿಗೆ ತಮ್ಮ ಕಾಯಕವೇ ಪೂಜೆ (ದೇವರು), ಸತ್ಯ ಶುದ್ಧರಾಗಿ ಕಾಯಕ ಮಾಡುವ ಸದ್ಭಕ್ತಂಗೆ ಮರ್ತ್ಯಲೋಕವೇ ಕೈಲಾಸ, ಕಾಯಕದಿಂದ ಕೈಲಾಸವೆನ್ನದೆ ಕಾಯಕದಲ್ಲಿಯೇ ಕೈಲಾಸ ಕಂಡವರು ಶರಣರು.

ಮನ ಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ
ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ
ಸದ್ಭಕ್ತಂಗೆ ಎತ್ತ ನೋಡಿದಡತ್ತ ಲಕ್ಷ್ಮಿ ತಾನಾಗಿಪ್ಪಳು
ಮಾರಯ್ಯಪ್ರಿಯ ಅಮರೇಶ್ವರಲಿಂಗದ ಸೇವೆಯುಳ್ಳನ್ನಕ್ಕರ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-273/ವಚನ ಸಂಖ್ಯೆ-723)

ಸತ್ಯ ಶುದ್ಧಕಾಯಕ ಮಾಡುವ ಸದ್ಭಕ್ತರಿಗೆ ಎತ್ತ ನೋಡಿದಡತ್ತ ಲಕ್ಷ್ಮಿ (ಸಂಪತ್ತು) ತಾನೇ ತಾನಾಗಿಪ್ಪಳು” ಎಂಬ ದೃಢ ನಂಬಿಕೆ ಶರಣರದಾಗಿತ್ತು.

ಬಯಲು ಅನುಭವ ಪಡೆದ ಶರಣರು ತೋರಿದ ದಾರಿಯಲ್ಲಿ ನಡೆಯುವುದೇ ಶ್ರೇಷ್ಠ ಜೀವನವೆಂಬುದನ್ನು ಮನಗಂಡು ಸತ್ಯ ಪಥದಲ್ಲಿ ನಡೆದು ಜೀವನ ಸಾರ್ಥಕಗೊಳಿಸಿಕೊಂಡವರು ಶರಣ ಮಾದಾರ ಧೂಳಯ್ಯನವರು. 

ಡಾ. ಶಿವಲೀಲಾ ಬಸವರಾಜ,
ಸಮಾಜಶಾಸ್ತ್ರ ಸಹ ಪ್ರಾಧ್ಯಾಪಕರು,
ಸರಕಾರಿ ಪ್ರಥಮ ದರ್ಜೆ ಕಾಲೇಜು,
ಕಾಳಗಿ.
Mob No. 94488 30116
sbvk2009@gmail.com

ಆಧಾರ ಗ್ರಂಥಗಳು:

  • ಸಮಗ್ರ ವಚನ ಸಂಪುಟ: 8
  • ಅನುಪಮ ಶರಣರು | ಡಾ. ಬಿ ಮಹಾದೇವಪ್ಪ | ಅರಿವು ಆಚಾರ ಪ್ರಕಟನಾಲಯ ಯಾದಗಿರಿ | 2000.
  • ಅಕ್ಕನ ಸಂಪದ: ಅಕ್ಕ ಅನ್ನಪೂರ್ಣ | ಬಸವ ಸಂಪದ ಪ್ರಕಾಶನ ಬೀದರ್ | 2017.
  • ಭಕ್ತನ ನಿಜದ ನೆಲೆ: | ಭಾರತಿ ಎಂ. ಕೆಂಪಯ್ಯ | ಜಯಬಸವ ಭಾರತಿ, ಪ್ರಕಾಶಕರು ಶರಣನಗರ್ ಬೀದರ್ | 2025.
  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನಸಾಹಿತ್ಯ ಮಂದಾರ ಫೌಂಡೇಶನ್ ದ ಸಂಚಾಲಕರನ್ನು ಸಂಪರ್ಕಿಸಬೇಕಾದ
    • ಮೋಬೈಲ್ ನಂ. 9741 357 132
    • e-Mail ID: info@vachanamandara.in / admin@vachanamandara.in

Leave a Reply