ಶರಣ ಶಂಕರ ದಾಸಿಮಯ್ಯನವರು | ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

Loading

12 ನೇ ಶತಮಾನದಲ್ಲಿ ಬಾಳಿ ಬದುಕಿದ ಒಬ್ಬೊಬ್ಬ ಶರಣರ ಚರಿತ್ರೆ ಅಮೋಘವಾದುದಾಗಿದೆ. ಕಾಯಕಯೋಗಿಗಳಾದ ಅವರು ಕಾಯಕದಿಂದಲೇ ಜೀವನ್ಮುಕ್ತಿಹೊಂದಿದವರು. ಕಾಯಕಯೋಗದಿಂದ ಶಿವಯೋಗ ಸಾಧಿಸಿದ ಮಹಾತ್ಮರವರು. ಕಾಯಕ ಮತ್ತು ಲಿಂಗಪೂಜೆ ಇವರ ಬಾಹ್ಯ ಮತ್ತು ಅಂತರಂಗದ ಪರಂಜ್ಯೋತಿಗಳಾಗಿದ್ದವು. ಕಾಯಕದಿಂದ ದೊರೆತ ಅನುಭಾವ ಲಿಂಗಪೂಜೆಯಿಂದ ದೊರೆತ ಅನುಭಾವ ದಿಂದ ಶರಣರು ಅನಿರ್ವಚನೀಯವಾದ ಪರಮಾನಂದ ಅನುಭವಿಸಿದವರು. ಅಂತಹ ಶಿವಶರಣರಲ್ಲಿ ಶರಣ ಶಂಕರ ದಾಸಿಮಯ್ಯ ನವರು ಒಬ್ಬರು.

ನದಿಗಳೆಲ್ಲವೂ ಹರಿದು ಸಮುದ್ರವನ್ನು ಸೇರುವಂತೆ ಎಲ್ಲ ಶರಣರು ಬಸವಣ್ಣನೆಂಬ ಸಾಗರವನ್ನೇ ಕೂಡಿದರು. ಬಸವಣ್ಣನೆಂಬ ಚುಂಬಕ ಶಕ್ತಿ ಉತ್ತರ-ದಕ್ಷಿಣ ಧ್ರವಗಳನ್ನೆಲ್ಲ ತನ್ನತ್ತ ಸೆಳೆದುಕೊಂಡಿದ್ದು 12 ನೇ ಶತಮಾನದ ಜೋದ್ಯ. ಅದಕ್ಕೆಂದೇ ಬಸವಣ್ಣನವರು 12 ನೇ ಶತಮಾನದ ಯುಗದ ಉತ್ಸಾಹ ಎಂದು ಕರೆಯಿಸಿಕೊಂಡರು. ಮಲ್ಲಿಕಾರ್ಜುನ ಪಂಡಿತಾರಾಧ್ಯರಂತಹ ಶೈವಾಚಾರ್ಯರು ಈ ಯುಗದ ಉತ್ಸಾಹದೊಂದಿಗೆ ಅನುಸಂಧಾನಗೊಂಡಿದ್ದು ಎಷ್ಟು ಸತ್ಯವೋ ಅಷ್ಟೇ ಸತ್ಯ. ಶರಣ ಶಂಕರ ದಾಸಿಮಯ್ಯನಂತರ ಬ್ರಾಹ್ಮಣ ಕಾಶಿಯ ವಿಶ್ವನಾಥನನ್ನು ಕಲ್ಯಾಣದ ಬಸವಣ್ಣನವರಲ್ಲಿ ದರ್ಶಸಿ ಕಾಶಿಯಾತ್ರೆ ಕೈ ಬಿಟ್ಟು ಕಲ್ಯಾಣ ಕ್ಷೇತ್ರಕ್ಕೆ ಆಗಮನಿಸಿದ್ದು, ಬಸವಣ್ಣನವರೊಂದಿಗೆ ಅನುಸಂಧಾನಗೊಂಡಿದ್ದು ಅಷ್ಟೇ ಸತ್ಯ. ಇವೆಲ್ಲಾ ಯುಗದ ಸತ್ಯಗಳು.

ಶಂಕರ ದಾಸಿಮಯ್ಯನವರ ಪೂರ್ವದ ಹೆಸರು “ಗೋವಿಂದಭಟ್ಟ (ದೇವ) ಎಂಬುದಾಗಿತ್ತು. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಂದಗಲ್ಲು (ಸ್ಕಂಶಿಲೆ) ಗ್ರಾಮ ಇವರ ಜನ್ಮಸ್ಥಳ. ಮುಂದೆ ಗೋವಿಂದಭಟ್ಟ (ದೇವ) ಕಾಶಿಯಾತ್ರೆಗೆಂದು ಪತ್ನಿ ದುಮ್ಮವೆಯ ಜೊತೆಗೆ ಹೊರಟು ಕೃಷ್ಣಾ ನದಿ ತೀರದಲ್ಲಿ ಇರುವ ನವಿಲೆ ಯಲ್ಲಿ ತಂಗುತ್ತಾರೆ. ನವಿಲೆ ಎಂಬ ಈ ಊರು ಚಾಲುಕ್ಯರ ಆಡಳಿತಕ್ಕೆ ಒಳಪಟ್ಟ ಊರಾಗಿತ್ತು. ಇದನ್ನು ಮಯೂರಪುರ ಎಂದೂ ವರ್ಣಿಸಲಾಗಿದೆ. ಇದು ಸಮೃದ್ಧವಾದ ಊರಾಗಿದ್ದು, ಇಲ್ಲಿ ಜಡೆಯ ಶಂಕರ ಎಂಬ ದೊಡ್ಡ ದೇವಾಲಯವಿದೆ. ಚಾಲುಕ್ಯ ವಾಸ್ತುಶಿಲ್ಪದಿಂದ ನಿರ್ಮಿಸಲ್ಪಟ್ಟ ಒಂದು ಸುಂದರವಾದ ಪ್ರಸಿದ್ಧ ದೇವಾಲಯ ಇದಾಗಿದೆ. ಜಡೆಯ ಶಂಕರಲಿಂಗ ಎಲ್ಲಾ ಲಿಂಗದಂತಲ್ಲಾ, ಅದೊಂದು ವಿಶೇಷ ಲಿಂಗವಾಗಿದೆ. ಆ ಲಿಂಗಕ್ಕೆ ಹಿಂದೆ ಹನ್ನೊಂಡು ಜಡೆಗಳನ್ನು ಕೆತ್ತಲಾಗಿದೆ. ಕಂದಗಲ್ಲಿ (ಸ್ಕಂದಶಿಲೆ) ನ ಗೋವಿಂದಭಟ್ಟ (ದೇವ) ನವಿಲೆಯ ಜಡೆಯಶಂಕರನ ಆರಾಧ್ಯ ಭಕ್ತನಾಗುತ್ತಾನೆ.

ಗೋವಿಂದಭಟ್ಟ (ದೇವ) ಶಂಕರದಾಸಿಮಯ್ಯನದಾದದ್ದು, ಅವನ ಪತ್ನಿ ದುಮ್ಮವ್ವೆ-ಶಿವದಾಸಿಯಾದುದು ಒಂದು ಸ್ವಾರಸ್ಯಕರ ಪ್ರಸಂಗದಿಂದ. ಬ್ರಾಹ್ಮಣರಾದ ಗೋವಿಂದಬಟ್ಟ ವೈದಿಕ ಧರ್ಮದ ನಿಯಮದಂತೆ ಚತುರಾಶ್ರಮ ಪದ್ಧತಿಯಂತೆ ಬ್ರಹ್ಮಚರ್ಯ, ಗೃಹಸ್ಥಾಶ್ರಮ, ಸನ್ಯಾಶ್ರಮ ಅಂತಾ ಬರುತ್ತವೆ. ಗೋವಿಂದಭಟ್ಟ ಬ್ರಹ್ಮಚರ್ಯ, ಗೃಹಸ್ಥಾಶ್ರಮ, ವಾನಪ್ರಸ್ತಾಶ್ರಮ ಮುಗಿಸಿ ಮೋಕ್ಷ ಪಡೆಯಲು ಸನ್ಯಾಸಾಶ್ರಮ ಸ್ವೀಕರಿಸಿ ದಂಪತಿ ಸಮೇತ ಕಾಶಿಗೆ ಹೊರಡುತ್ತಾರೆ. ಕಾಲ್ನಡಿಗೆಯಲ್ಲಿ ಹೋಗಬೇಕಾದ ಸಂದರ್ಭದಲ್ಲಿ ದಂಪತಿಗಳು ನವಿಲೆಯಲ್ಲಿ ತಂಗುತ್ತಾರೆ. ಮರುದಿನ ನವಿಲೆಯ ಜಡೆಯ ಶಂಕರಲಿಂಗನ ಪೂಜೆ ನೋಡುತ್ತಾ ಗೋವಿಂದಭಟ್ಟ ಮೈಮರೆತು ಬಿಡುತ್ತಾನೆ. ದುಮ್ಮವ್ವೆ ನಡೆಯಿರಿ. ಕಾಶಿಗೆ ಹೋಗೋಣ ಎಂದಾಗ ಗೋವಿಂದಭಟ್ಟ “ಕಾಶಿ ವಿಶ್ವನಾಥ ನವಿಲೆಯ ಜಡೆಯ ಶಂಕರಲಿಂಗನಲ್ಲೇ ಇದ್ದಾನೆ. ನಾನು ನವಿಲೆಯಲ್ಲೇ ಜಡೆಯ ಶಂಕರಲಿಂಗನನ್ನು ಆರಾಧಿಸುತ್ತಾ, ಪೂಜಿಸುತ್ತಾ ಮುಕ್ತಿಯನ್ನು ಪಡೆಯುತ್ತೇನೆ” ಎಂದು ಪತ್ನಿಗೆ ಹೇಳುತ್ತಾನೆ. ಕಾಶಿಗೆ ಹೋಗಬೇಕಾಗಿದ್ದ ದಂಪತಿಗಳು ಮರಳಿ ಕಂದಗಲ್ಲಿಗೆ ಹೋಗುತ್ತಾರೆ. ಅಲ್ಲಿಂದ ನಿತ್ಯವೂ ನವಿಲೆಗೆ ಬಂದು ಜಡೆಯ ಶಂಕರಲಿಂಗನನ್ನು ಪೂಜಿಸಿ, ಆರಾಧನೆ ಗೋವಿಂಧಭಟ್ಟ ತಿರುಗಿ ಕಂದಗಲ್ಲಿಗೆ ಬರುತ್ತಿದ್ದನು. ಭಾವಕ್ಕೆ ತಕ್ಕಂತೆ ಭಕ್ತಿಯನ್ನು ಧರಿಸಿ ಗೋವಿಂದಭಟ್ಟ ಜಡೆಯ ಶಂಕರ ಲಿಂಗವೇ ನನಗೆ ಗತಿ-ಮತಿ ಎಂದು ಭಾವಿಸಿದ್ದನು. ನಿತ್ಯವೂ ನದಿಯನ್ನು ದಾಟಿ ಕಂದಗಲ್ಲನಿಂದ ನವಿಲೆಗೆ ಬಂದು ಭಕ್ತಿ-ಭಾವದಿಂದ ಜಡೆಯ ಶಂಕರ ಲಿಂಗನನ್ನು ಪೂಜಿಸಿ, ಧ್ಯಾನವನ್ನು, ಪ್ರಾರ್ಥನೆಯನ್ನು ಮಾಡಿ ಆ ಲಿಂಗವನ್ನೇ ಆತ್ಮದಲ್ಲಿ ಧರಿಸಿ ಮೈಮರೆಯುತ್ತಿದ್ದನು. ಇದೇ ನಿತ್ಯ ದಿನಚರಿಯಾಗಿತ್ತು.

ಒಂದು ದಿನ ಮನೆಯಲ್ಲಿ ಗೋವಿಂದಭಟ್ಟ ಯೋಗನಿದ್ರೆಯಲ್ಲಿದ್ದಾಗ ಜಡೆಯ ಶಂಕರನು ಜಂಗಮ ರೂಪದಲ್ಲಿ ಬಂದು ದರ್ಶನವನ್ನು ನೀಡುತ್ತಾನೆ. “ಅತ್ಯಂತ ಭಕ್ತಿ ಭಾವದಿಂದ ನನ್ನನ್ನು ಪೂಜಿಸುತ್ತಿರುವ ನೀನು ಶಿವದೀಕ್ಷೆಯನ್ನು ಪಡೆಯಬೇಕು” ಎನ್ನುತ್ತಾನೆ. ಹೀಗೆ ಗುರು ರೂಪದಲ್ಲಿ ಬಂದ ಆ ಜಂಗಮರೂಪಿ ಜಡೆಯ ಶಂಕರನು ತನ್ನ ಶಿಷ್ಯನಾದ ಗೋವಿಂದಭಟ್ಟನಿಗೆ ”ನಾನು ನಿನಗೆ ಲಿಂಗದೀಕ್ಷೆ ನೀಡುವೆ. ನೀನು ಶರೀರದ ಮೇಲೆ ವಿಭೂತಿ, ರುದ್ರಾಕ್ಷಿ ಧರಿಸು” ಎಂದಾಗ ಗೋವಿಂದಭಟ್ಟ ಜಂಗಮರೂಪಿ ಶಿವನಿಗೆ ಪ್ರಶ್ನಿಸುತ್ತಾನೆ. “ಈ ಶರೀರ ಮಲೀನವಾದದ್ದು, ಅಪವಿತ್ರವಾದುದು, ನಶ್ವರವಾದುದು, ಅರಿಷಡ್ವರ್ಗದಿಂದ ಕೂಡಿದ ಈ ದೇಹದ ಮೇಲೆ ಹೇಗೆ ನಾನು ಪವಿತ್ರವಾದ ಲಿಂಗ ಧರಿಸುವುದು? ಎಂದು ಪ್ರಶ್ನಿಸುತ್ತಾನೆ. ಆಗ ಜಂಗಮರೂಪಿ ಜಡೆಯ ಶಂಕರ ಶಿಷ್ಯನಿಗೆ ಹೇಳುತ್ತಾನೆ. ”ಲಿಂಗವೆಂದರೆ ಪ್ರಾಣಕ್ಕೂ ದೇಹಕ್ಕೂ ಒಡೆಯ. ಲಿಂಗವನ್ನು ಧರಿಸಿದರೆ ನೀನು ಜನನ-ಮರಣ ಭಾವದಿಂದ ಬಿಡುಗಡೆ ಹೊಂದುವೆ. ಈ ದೇಹ ಅಪವಿತ್ರವಲ್ಲ. ಇದು ಪ್ರಸಾದಕಾಯ. ದೇಹದ ಮೇಲೆ ಲಿಂಗ ರಿಸುವುದರಿಂದ ಅದು ಪವಿತ್ರವಾಗುತ್ತದೆ. ಅಂಗವೂ ಲಿಂಗವಾಗಿ ಪರಿವರ್ತಿತವಾಗುತ್ತದೆ” ಎಂದಾಗ ಗೋವಿಂದಭಟ್ಟನಿಗೆ ಈ ಕಾಯಜೀವದ ವಿಚಾರ ಅರ್ಥವಾಗಿ “ನೀವೇ ಗುರುವಾಗಿ ನನಗೆ ಲಿಂಗದೀಕ್ಷೆ ಕೊಡಿ ಎಂದು ಕೇಳಿಕೊಳ್ಳುತ್ತಾನೆ. ಜಂಗಮರೂಪಿ ಜಡೆಯ ಶಂಕರಲಿಂಗ ಗೋವಿಂದಭಟ್ಟನಿಗೆ ಲಿಂಗದೀಕ್ಷೆ ನೀಡುತ್ತಾನೆ. ಆ ಗುರು ಅವನಿಗೆ “ನೀನು ಈಗ ಶಿವನ ದಾ, ಶಂಕರದಾಸನಾದೆ”. ಎಂದಾಗ ಗೋವಿಂದಭಟ್ಟನ ಪೂರ್ವನಾಮ ಹೋಗಿ “ಶಂಕರದಾಸ, ಶಂಕರ ದಾಸಿಮಯ್ಯ ನೆಂದು ಮರುನಾಮಕರಣವಾಗುತ್ತದೆ. ಇದು ಮರುಹುಟ್ಟು. ಮುಂದೆ ತನ್ನ ಗುರುವಿನಿಂದ ಲಿಂಗದೀಕ್ಷೆ ಪಡೆದುಕೊಂಡ ನಂತರ ನ್ನ ಹೆಂಡತಿಗೂ ಲಿಂಗದೀಕ್ಷೆ ನೀಡಿ ಎಂದು ಗುರುವಿಗೆ ಶಂಕರದಾಸಿಮಯ್ಯ ಕೇಳಿಕೊಳ್ಳುತ್ತಾನೆ. ಆಗ ಗುರು ಶಂಕರದಾಸಿಮಯ್ಯನಿಗೆ ಹೇಳುತ್ತಾನೆ’ “ಇಲ್ಲ ನಾನು ದುಮ್ಮವ್ವೆಗೆ ಲಿಂಗದೀಕ್ಷೆ ನೀಡುವುದಿಲ್ಲ. ಆ ಅಧಿಕಾರ ನಿನಗೆ ನೀಡುತ್ತೇನೆ. ಶರಣಧರ್ಮದಲ್ಲಿ ಲಿಂಗದೀಕ್ಷೆ ಪಡೆದವರು ಇನ್ನೊಬ್ಬರಿಗೆ ಲಿಂಗದೀಕ್ಷೆ ಕೊಡಬಹುದು. ನಾನು ನಿನಗೆ ಗುರುವಾದೆ, ನೀನು ಈಗ ನಿನ್ನ ಹೆಂಡತಿಗೆ ಗುರುವಾಗಿ ಲಿಂಗದೀಕ್ಷೆ ನೀಡು” ಎಂದಾಗ ಶಂಕರದಾಸಿಮಯ್ಯ “ದುಮ್ಮವ್ವೆ” ಗೂ ಲಿಂಗದೀಕ್ಷೆ ನೀಡುತ್ತಾನೆ. ಅಂದಿನಿಂದ ಅವಳಿಗೆ ಶಿವದಾಸಿ ಎಂದು ಮರುನಾಮಕರಣವಾಗುತ್ತದೆ. ಆಗ ಶಂಕರದಾಸಿಮಯ್ಯ-ಶಿವದಾಸಿಯರು ನಿಜ ಶರಣ ಶರಣೆಯಾಗಿ ಮರುಹುಟ್ಟು ಪಡೆಯುತ್ತಾರೆ. ಶಂಕರದಾಸಿಮಯ್ಯ ಪುನಃ ಗುರುವಿಗೆ ಕೇಳಿಕೊಳ್ಳುತ್ತಾನೆ. “ನನಗೊಂದು ಕಾಯಕ ನೀಡು” ಎಂದಾಗ, “ನೀನು ಪೂಜೆ ಕಾಯಕ ಮಾಡು. ಹೊಲಿಗೆಯ ಕಾಯಕ ಮಾಡು. ಜಂಗಮಾರ್ಚನೆ, ಲಿಂಗಾರ್ಚನೆ ಮಾಡುತ್ತಾ, ಶಿವಗೋಷ್ಠಿಯಲ್ಲಿ ಪಾಲ್ಗೊಂಡು, ಮುಕ್ತಾತ್ಮನಾಗು” ಎನ್ನುತ್ತಾನೆ. ಹೀಗೆ ಶಂಕರದಾಸಿಮಯ್ಯನ ಮರುಹುಟ್ಟು ಅತ್ಯಂತ ಸ್ವಾರಸ್ಯಕರವಾಗಿದೆ. ಇವೆಲ್ಲ ವಿಚಾರಗಳು ಇವರ ವಚನಗಳಲ್ಲಿ ಸಿಗುತ್ತವೆ. ಇವರು ಬರೆದ ಐದು ವಚನಗಳಲ್ಲಿ ಒಂದು ವಚನವನ್ನಿಟ್ಟುಕೊಂಡು ನಾನು ಶಂಕರದಾಸಿಮಯ್ಯನವರ ಕಾಯ-ಕಾಯಕ, ಲಿಂಗಪೂಜಾ ನಿಷ್ಟೆ, ಅನುಭಾವ ಮುಂತಾದ ವಿಚಾರಗಳನ್ನು ಪ್ರಸ್ತುತ ಪಡಿಸುತ್ತಿರುವೆ.

ಶಂಕರದಾಸಿಮಯ್ಯನವರ ಕುರಿತು ವಿವರಗಳು ಹರಿಹರನ “ಶಂಕರ ದಾಸಿಮಯ್ಯನ ರಗಳೆ ಯ ತರುವಾಯ ಪಂಡಿತ ಮಲ್ಲಿಕಾರ್ಜುನನು ಭಾಮಿನಿ ಷಟ್ಪದಿಯಲ್ಲಿ ಬರೆದ ಶಂಕರದಾಸಿಮಯ್ಯನ ಪುರಾಣದಲ್ಲಿ ಸಿಗುತ್ತವೆ. 17 ನೇ ಶತಮಾನದಲ್ಲಿ ಬರೆಯಲ್ಪಟ್ಟ ಈ ಪುರಾಣವು ಕೇವಲ ಪುರಾಣವಾಗಿ ನಿಲ್ಲದೆ ಅದೊಂದು ಐತಿಹಾಸಿಕ, ಚಾರಿತ್ರಿಕ, ಸಾಂಸ್ಕೃತಿಕ ಕೃತಿಯಾಗಿ ನಿಲ್ಲುತ್ತದೆ.

ಹಿರಿಯ ಶರಣರಾದ ಶಂಕರದಾಸಿಮಯ್ಯನವರು ಬ್ರಾಹ್ಮಣ್ಯತ್ವವನ್ನು ನಿರಾಕರಿಸಿ ಶರಣ ಧರ್ಮವನ್ನು ಅಪ್ಪಿಕೊಂಡ ಈ ವಿಷಯವು ತುಂಬಾ ಮಹತ್ವವಾದುದು. ದಂಪತಿಗಳಿಬ್ಬರೂ ಲಿಂಗವಂರಾಗಿದ್ದು ತುಂಬಾ ವಿಶಿಷ್ಟ ಎನಿಸುತ್ತದೆ. ಇವರ ಗುರುತತ್ವ, ಲಿಂಗತತ್ವ, ಕಾಯಕ ತತ್ವ, ಪ್ರಸಾ ತತ್ವ ಮಹತ್ವವಾಗಿದೆ. ಶರಣ ಸಂಕುಲದಲ್ಲಿ ಸುಮಾರು ಏಳು ಜನ ಶರಣರು ಪ್ರಾಸಂಗಿಕವಾಗಿ ಶಂಕರದಾಸಿಮಯ್ಯನವರ ಕುರಿತು ಹೇಳಿದ್ದಾರೆ. ಬಸವಣ್ಣನವರಿಗೂ ಇವರಿಗೂ ವಯಸ್ಸಿನಲ್ಲಿ ಹಿರಿಯ ಅಂತರವಿದೆ. ಅದು ಅಜ್ಜಮೊಮ್ಮಗನ ಸಂಬಂದಂತಿದೆ. ಹೀಗಾಗಿ ಇವರು ಹಿರಿಯ ಶರಣರೆನಿಸಿಕೊಂಡಿದ್ದಾರೆ. ಮಡಿವಾಳ ಮಾಚಿದೇವರು, ಆಯ್ದಕ್ಕಿ ಲಕ್ಕಮ್ಮ, ಉರಿಲಿಂಗ ಪೆದ್ದಿಗಳು, ಬಸವಣ್ಣನವರು, ಚನ್ನಬಸವಣ್ಣನವರು, ಶಿವಯೋಗಿ ಸಿದ್ಧರಾಮೇಶ್ವರರು, ಸೊಡ್ಡಳ ಬಾಚರಸರಂತಹ ಪ್ರಮುಖ ವಚನಕಾರರೆಲ್ಲ ಶಂಕರದಾಸಿಮಯ್ಯನವರನ್ನು ತಮ್ಮ ವಚನಗಳಲ್ಲಿ ನೆನೆಸುತ್ತಾರೆ. ಅದರಲ್ಲೂ ಸೊಡ್ಡಳ ಬಾಚರಸರು ಇಡೀ ಶಂಕರ ದಾಸಿಮಯ್ಯನವರ ಜೀವನವನ್ನೇ ತಮ್ಮ ಬಂದು ವಚನದಲ್ಲಿ ಕಟ್ಟಿ ಕೊಟ್ಟಿದ್ದಾರೆ. ನಂತರ ಹರಿಹರನ ರಗಳೆಯಲ್ಲಿ ಬರುತ್ತದೆ. ತದನಂತರ ಪಂಡಿತ ಮಲ್ಲಿಕಾರ್ಜುನ 17 ನೇ ಶತಮಾನದಲ್ಲಿ ತನ್ನ ಭಾಮಿನಿ ಷಟ್ಫದಿಯ ಪುರಾಣಕ್ಕೆ ಬೆಳಕಿಗೆ ಬಾರದ ಶಂಕರ ದಾಸಿಮಯ್ಯನವರನ್ನು ಕೃತಿ ನಾಯಕನನ್ನಾಗಿ ಆರಿಸಿಕೊಂಡಿದ್ದು ವಿಶೇಷ. ಹೊಳೆಗುಂದಿಯ ಈ ಕವಿಗೆ ಪ್ರೇರಣೆ ನೀಡಿದವರು ಅದೇ ಬಳ್ಳಾರಿ ಜಿಲ್ಲೆಯ ಹಡಗಲಿ ತಾಲೂಕಿನ ಹೊಳೆಗುಂದಿ ಗ್ರಾಮದ ಪರಮಭಕ್ತನಾದ ವೀರಶಾಂತೇಶನೆಂಬವರು. ಇವರು ಪಂಡಿತ ಮಲ್ಲಿಕಾರ್ಜುನರಿಗೆ ಆಶ್ರಯ ನೀಡುತ್ತಾರೆ. ಆಗ ಹಡಗಲಿ ತಾಲೂಕಿನ ಚಿಪ್ಪಿಗರ ಕುಲದವರು ಬಂದು ನಮ್ಮ ಕುಲಗುರು ಶಂಕರದಾಸಿಮಯ್ಯನವರ ಚರಿತ್ರೆ ಪಂಡಿತ ಮಲ್ಲಿಕಾರ್ಜುನರಿಗೆ ಕೇಳಿಕೊಳ್ಳುತ್ತಾರೆ. ಆಗ ಇವರು “ಶಂಕರ ದಾಸಿಮಯ್ಯನ ಪುರಾಣ ಎಂಬ ಚರಿತ್ರೆಯನ್ನು ಕನ್ನಡ ಸಾಹಿತ್ಯಕ್ಕೆ ಬರೆದುಕೊಟ್ಟಿದ್ದಾರೆ.

ಶಂಕರದಾಸಿಮಯ್ಯನವರು “ನಿಜಗುರು ಶಂಕರದೇವ” ಎಂಬ ವಚನಾಂಕಿತದಲ್ಲಿ ಐದು ವಚನಗಳನ್ನು ರಚಿಸಿದ ಹಿರಿಯ ವಚನಕಾರರು. ಕಾಯಕ ತತ್ವದಲ್ಲಿ ತಮ್ಮನ್ನು ತೊಡಗಿಸಿಕೊಂಡು ಕಾಯಕದ ಅನುಭವಗಳನ್ನು ವಚನವಾಗಿರಿಸಿದ ಶರಣರಿವರು.

ವಚನ ಸಾಹಿತ್ಯ ಪರಂಪರೆಯನ್ನು ಅವಲೋಕಿಸಿದಾಗ ದಾಸಿಮಯ್ಯ ಹೆಸರಿನ ಐದು ಜನ ಶರಣರು ಕಂಡು ಬರುತ್ತಾರೆ.

  1. ದೇವರ ದಾಸಿಮಯ್ಯ: ಇವರು ಅಪ್ಪಟ ಸನ್ಯಾಸಿಗಳಾಗಿದ್ದು, ಕೃಷಿಕರು, ಶಿವನ ಆರಾಧಕರು ಆಗಿದ್ದರು. ಇವರು ಇಮ್ಮಡಿ ಜಯಸಿಂಹ ಮತ್ತು ಅವನ ರಾಣಿ ಸುಗ್ಗಲಾದೇವಿಯವರಿಗೆ ದೀಕ್ಷೆ ನೀಡಿದವರು.
  2. ಜೇಡರ ದಾಸಿಮಯ್ಯ: ಇವರು ಹಿರಿಯ ವಚನಕಾರರು ಶಂಕರದಾಸಿಮಯ್ಯನವರ ಸಮಕಾಲೀನರು ಮತ್ತು ರಾಮನಾಥ ಎಂಬ ಅಂಕಿತದಿಂದ 176 ವಚನಗಳನ್ನು ಬರೆದಿದ್ದಾರೆ. ಇವರ ಪತ್ನಿಯ “ದುಗ್ಗಳೆ”, ಇವರು ಎರಡು ವಚನಗಳನ್ನು ಬರೆದಿದ್ದಾರೆ.
  3. ಶಂಕರದಾಸಿಮಯ್ಯ: ಇವರು ಹಿರಿಯ ವಚನಕಾರ ಮತ್ತು ಶಿವಶರಣರು.ನಿಜಗುರು ಶಂಕರದೇವ ಎಂಬ ವಚನಾಂಕಿತದಲ್ಲಿ ಐದು ವಚನಗಳನ್ನು ಬರೆದಿದ್ದಾರೆ. ಇವರ ಜನ್ಮಸ್ಥಳ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸ್ಕಂಧಶಿಲೆ (ಕಂದಗಲ್ಲು). ಇವರದು ಸೂಜಿ ಕಾಯಕ (ಹೋಲಿಗೆ), ಬಟ್ಟಿಗಳಿಗೆ ಬಣ್ಣ ಹಾಕುವ (ಬಣಗಾರ) ಕಾಯಕ, ಇವರ ಪತ್ನಿಯ ಹೆಸರು ಶಿವದಾಸಿ (ದುಮ್ಮವ್ವೆ).
  4. ಶಿವದಾಸಿಮಯ್ಯ: ಇವರು ಶಂಕರದಾಸಿಮಯ್ಯನವರ ಸಹೋದರ ಎಂದು ತಿಳಿದು ಬರುತ್ತದೆ. ಇವರದೂ ಕೂಡ ಸಹೋದರನ ಜೊತೆಗೆ ಸೂಜಿ ಕಾಯಕ ಮತ್ತು ಬಟ್ಟಿಗಳಿಗೆ ಬಣ್ಣ ಹಾಕುವ ಕಾಯಕ.
  5. ವೀರ ಶಂಕರದಾಸಿಮಯ್ಯ: ಘನಗುರು ಶಿವಲಿಂಗ ರಾಮನಾಥ ಅಂಕಿತದಲ್ಲಿ ಒಂದು ವಚನ ರಚಿಸಿದ್ದಾರೆ. ವೀರೆಶ್ವವಾಚಾರ್ಯಮಾರ್ಗಿಯಾದ ಇವರು ಭವಿಯನ್ನು ಮುಟ್ಟಬಾರದೆಂಬ ವೀರವ್ರತಧಾರಿಯಾಗಿದ್ದರು. ಒಂದು ವೇಳೆ ಮುಟ್ಟಿದರೆ ತನ್ನ ದೇಹವನ್ನು ಅಗ್ನಿಗೆ ಅರ್ಪಿಸುವ ಪ್ರತಿಜ್ಞೆ ಮಾಡಿದ್ದರು. ತಮ್ಮ ವೀರಭಕ್ತಿಯ ಮೂಲಕ ಶಿವದರ್ಶನ ಪಡೆದುಕೊಂಡಿದ್ದರು. ಇಲ್ಲಿಯವರೆಗೆ ದೊರೆತಿರುವ ಇವರ ಒಂದೇ ಒಂದು ಸುಧೀರ್ಘ ವಚನದಲ್ಲಿ ಉತ್ತಮ ಕುಲ (ಬ್ರಾಹ್ಮಣ) ದವರನ್ನು ಉದಾಹರಣೆಗಳೊಂದಿಗೆ ಕಟುವಾಗಿ ಟೀಕಿಸಿದ್ದಾರೆ. ವ್ಯಕ್ತಿಗೆ ವರ್ಣ ಸೂತಕವಿಲ್ಲ ಎಂದು ಹೇಳುತ್ತ ಯಜ್ಞಯಾಗಾದಿಗಳ ಶುಷ್ಕ ಆಚರಣೆಗಳನ್ನು ಖಂಡಿಸಿದ್ದಾರೆ. ವೀರಶಂಕರದಾಸಿಮಯ್ಯನವರ ವಿಚಾರ ಸೋಮೇಶ್ವರ ಪುರಾಣ, ಶಿವತತ್ವ ಚಿಂತಾಮಣಿ, ಗುರುರಾಜಚಾರಿತ್ರ್ಯ, ವೀರಶೈವಾಮೃತ ಮಹಾಪುರಾಣ, ಬಸವೇಶ್ವರ ಪುರಾಣದ ಕಥಾಸಾಗರ, ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರ ರತ್ನಾಕರ ಮುಂತಾದ ಕಾವ್ಯಗಳಲ್ಲಿ ಕಂಡು ಬರುತ್ತದೆ.

ಪ್ರಸ್ತುತ ಶಂಕರದಾಸಿಮಯ್ಯನವರ ವ್ಯಕ್ತಿತ್ವ ಮತ್ತು ವಚನಗಳು ತುಂಬಾ ಮಹತ್ವದ್ದಾಗಿವೆ. ವಿಶೇಷವಾಗಿ ಶಂಕರದಾಸಿಮಯ್ಯನವರಿಗೆ ಹಣೆಯ ಮೇಲೆ ಕಣ್ಣಿನಂತಹ ಉಬ್ಬುಗಂಟು ಇತ್ತೆಂದು ಹೇಳಲಾಗುತ್ತದೆ. ಅವರನ್ನು ಜನರು ತ್ರಿನೇತ್ರನೆಂದು ಈ ಕಾರಣಕ್ಕೆ ಕರೆಯುತ್ತಿದ್ದ ಮಾಹಿತಿ ದೊರೆಯುತ್ತದೆ. ಆ ಉಬ್ಬುಗಂಟು ಮುಚ್ಚಿಕೊಳ್ಳಲು ಶಂಕರ ದಾಸಿಮಯ್ಯನವರು “ನಂದಿಯ ಮುಖವಾಡ” ವನ್ನು ಧರಿಸುತ್ತಿದ್ದರಂತೆ ಅದಕ್ಕಾಗಿ ಇವರನ್ನು ಮೊಗವಾಡಯ್ಯ ಎಂದು ಕರೆಯುತ್ತಿದ್ದರೆಂದು ತಿಳಿದು ಬರುತ್ತದೆ.

ಶಂಕರದಾಸಿಮಯ್ಯನವರು ಮುದೇನೂರಿಗೆ ಹೋಗಿ ಜೇಡರದಾಸಿಮಯ್ಯನವರ ಅಹಂಕಾರ ಅಳಿಸಿ ಹಾಕಿದ ಪ್ರಸಂಗವು ಶಂಕರದಾಸಿಮಯ್ಯ ಪುರಾಣದಲ್ಲಿ ಉಲ್ಲೇವಾಗಿದೆ. ಅದೇ ರೀತಿ ಢಕ್ಕೆಯ ಮಾರಯ್ಯ ಎಂಬ ಶರಣರು ಶಂಕರದಾಸಿಮಯ್ಯನವರ ಅಹಂಕಾರ ಮುರಿದ ವಿಚಾರವೂ ತಿಳಿದು ಬರುತ್ತದೆ. ಇಂತಹ ವಿಶೇಷ ವ್ಯಕ್ತಿತ್ವ ಹೊಂದಿದ ಶಂಕರ ದಾಸಿಮಯ್ಯನವರು ಬರೆದ ಐದು ವಚನಗಳಲ್ಲಿ ನಾನು ಒಂದು ವಚನದ ಕುರಿತು ವಿವೇಚನೆ ಮಾಡಿದ್ದೇನೆ.

ಕಾಯದ ಮದವಳಿದಲ್ಲದೆ ಮಾಯಾ ವಿಕಾರವಳಿಯದು.
ಮಾಯಾ ವಿಕಾರವಳಿದಲ್ಲದೆ ಭವನಾಶವಾಗದು.
ಭವನಾಶವಾದಲ್ಲದೆ ಲಿಂಗಸಂಬಂಧವಳವಡದು.
ಲಿಂಗಸಂಬಂಧವಳವಟ್ಟಲ್ಲದೆ ಸುಖವು ಸಾಧ್ಯವಾಗದು.
ಪರಮಸುಖ ಪರಿಣಾಮಕ್ಕೆ ಮಹಾನುಭಾವಿಗಳ ಸಂಗವೇ ಬೇಕು.
ಮಹಾನುಭಾವಿಗಳ ಸಂಗದಿಂದಲ್ಲದೆ ವಿಶ್ರಾಮವಿಲ್ಲ.
ಇಂತಪ್ಪ ಮಹಾನುಭಾವದ ಮೂರ್ತಿ
ಸಂಗನ ಬಸವಣ್ಣನ ಕೃಪೆಯಿಂದಲೆನಗೆ ನಿಜವು ಕಾಣಬಂದಿತ್ತು.
ಇದು ಕಾರಣ, ನಿಜಗುರು ಶಂಕರದೇವರ ಶರಣ
ಪ್ರಭುದೇವರ ಶ್ರೀ ಪಾದವ ಕಂಡು ನಿಶ್ಚಿಂತನಾದೆನಯ್ಯಾ.
(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-64/ವಚನ ಸಂಖ್ಯೆ-130)

ಶರಣ ಶಂಕರದಾಸಿಮಯ್ಯನವರ ಸುಧೀರ್ಘವೂ ಹಾಗೂ ವಿಶಿಷ್ಟವೂ ಆದ ವಚನವಿದು. ಇದನ್ನು ಅರ್ಥೈಸಲು ಮೂರು ಬಹುಮುಖ್ಯ ಪ್ರಶ್ನೆಗಳನ್ನು ಎತ್ತಿಕೊಂಡು ಈ ವಚನವನ್ನು ಮೂರು ಹಂತದಲ್ಲಿ ವಿವೇಚನೆಗೆ ಒಳಪಡಿಸಿದ್ದೇನೆ.

  1. ಮೊದಲನೆಯ ಪ್ರಶ್ನೆ: ಸುಖವು ಸಾಧ್ಯವಾಗುವುದು ಯಾವಾಗ?
  2. ಎರಡನೆಯ ಪ್ರಶ್ನೆ: ಸುಖವು ಸಾಧ್ಯವಾದಾಗ ಸುಖದ ಆ ಪರಿಣಾಮವನ್ನು ಅನುಭವಿಸಲು ಯಾವಾಗ ಸಾಧ್ಯ?
  3. ಮೂರನೆಯ ಪ್ರಶ್ನೆ: ಶಂಕರ ದಾಸಿಮಯ್ಯನವರು ಕಂಡ ಮಹಾ ಅನುಭಾವದ ಮೂರ್ತಿ ಯಾರು?

ಮೇಲ್ನೋಟಲಕ್ಕೆ ತುಂಬ ಸರಳವಾದ ವಚನವಿದು ಎನಿಸಿದರೂ ವಚನದ ಒಳಾರ್ಥ ಆಳವೂ ಗಹನವೂ ಆಗಿದೆ. ಶರಣರ ವಚನಾಧ್ಯಯನಕ್ಕೆ ಕೇವಲ ಬುದ್ಧಿಯಲ್ಲ ಹೃದಯವೂ ಬೇಕಾಗುತ್ತದೆ. ಶಿವಶರಣರ ಭಾವ, ಬದುಕು ಎರಡೂ ಸುಂದರವಾಗಿದ್ದವು ಬರಹ ದೊಡ್ಡದಲ್ಲ; ಬದುಕು ದೊಡ್ಡದು ಎಂಬಂತೆ ಶರಣರೆಲ್ಲರೂ ಬದುಕಿಗೆ ಬದ್ಧರಾಗಿ ನಡೆದವರು. ಹೀಗಾಗಿ 12 ನೇ ಶತಮಾನ ಶರಣರ ಭವ್ಯ ಬದುಕಿನ ಸುಂದರ ಚಿತ್ರಣವಾಗಿದೆ.

ಶಂಕರದಾಸಿಮಯ್ಯನವರು ನಾನು ಮೊದಲು ಎತ್ತಿಕೊಂಡ ಪ್ರಶ್ನೆಗೆ ತಮ್ಮ ವಚನದಲ್ಲಿ ಉತ್ತರವನ್ನು ಕೊಡುತ್ತಾರೆ. ಶಂಕರದಾಸಿಮಯ್ಯನವರ ಪ್ರಕಾರ ಸುಖವು ಸಾಧ್ಯವಾಗುವುದು ನಾಲ್ಕು ಹಂತಗಳಲ್ಲಿ:

  1. ಕಾಯದ ಮದವಳಿಯಬೇಕು.
  2. ಮಾಯಾ ವಿಕಾರ ಅಳಿಯಬೇಕು.
  3. ಭವ ನಾಶವಾಗಬೇಕು.
  4. ಲಿಂಗಸಂಬಂಧ ಅಳವಡಬೇಕು.

ಇಲ್ಲಿ ಶಂಕರದಾಸಿಮಯ್ಯನವರು ಜೀವಕಾಯದ ಹೊಲಿಗೆಯನ್ನು ಬಿಚ್ಚುತ್ತಾರೆ. ಕಾಯದ ಜೊತೆ ಲಿಂಗವನ್ನು ಹೊಲೆಯುತ್ತಾರೆ. ಇದು ಒಂದು ರೀತಿಯ ಸೂಜಿ ಕಾಯಕವೆ ಸರಿ ಜೀವಮೋಹಕಾಯಮೋಹಗಳ ಹೊಲಿಗೆಯನ್ನು ಬಿಚ್ಚಿ ಮುಕ್ತ ಮಾಡುವುದು, ಮುಕ್ತವಾಗುವ ಜೀವಕಾಯಕ್ಕೆ ಲಿಂಗಸಂಬಂಧ ಅಳವಡಿಸಿ ಬಿಚ್ಚದಂತೆ ಹೊಲಿಗೆ ಹಾಕುವುದು. ಈ ವಿಧಾನ ಅನನ್ಯವಾದುದು.

ಮಾನವರಿಗೆ ಸುಖವು ಸಾಧ್ಯವಾಗುವುದು ಕಾಯದ ಮದವಳಿದಾಗ. ಯಾವಾಗ ದೇಹಮೋಹದಿಂದ ಒಬ್ಬ ಸಾಧಕ ಅಥವಾ ಶರಣ ಬಿಡುಗಡೆಗೊಳ್ಳುವನೋ ಆಗ ಅವನಿಗೆ ದೇವಭಾವ ಮೂಡಲು ಸಾಧ್ಯ. ಅತ್ಯಂತಿಕ ಸುಖದ ಹಂತವೆಂದರೆ “ಲಿಂಗಸಂಬಂಧ ಅಳವಡುವುದು”. ಈ ಲಿಂಗಸಂಬಂಧ ಅಳವಡುವುದು ಅಷ್ಟು ಸುಲಭವಾದುದಲ್ಲ. ಈ ಪ್ರಕ್ರಿಯೆ ತುಂಬಾ ತಾಳ್ಮೆ, ಸಹನೆಯದ್ದಾಗಿದೆ, ಅದಕ್ಕೆ ಸಾಧಕನಿಗೆ ಸಮಯಾವಕಾಶ ಬೇಕಾಗುತ್ತದೆ. ಏಕಾ ಏಕಿ ಅದು ಸಂಭವಿಸಲು ಸಾಧ್ಯವಿಲ್ಲ.

ಲಿಂಗದಲ್ಲಿ ಲಿಂಗನಿಷ್ಠೆ ಬೆಳೆಯಬೇಕಾದರೆ ಕಾಯದ ಮದ ಅಳಿಯಬೇಕು ವ್ಯಕ್ತಿಯಲ್ಲಿ ಮುಖ್ಯವಾಗಿ ಸ್ಥೂಲ ಶರೀರ, ಸೂಕ್ಷ್ಮ ಶರೀರ, ಕಾರಣ ಶರೀರ ಎಂಬ ಮೂರು ಶರೀರಗಳಿವೆ. ಈ ಮೂರು ಶರೀರಗಳಲ್ಲಿ ಲಿಂಗ ಸಾಮರಸ್ಯವಾಗಬೇಕಾಗುತ್ತದೆ. ಸ್ಥೂಲ ಶರೀರ, ಸೂಕ್ಷ್ಮ ಶರೀರ, ಕಾರಣ ಶರೀರಗಳು ಐದು ಐದರಂತೆ ಹದಿನೈದು ಅಂಗಗಳ ಮೂಲಕ ಕಾರ್ಯನಿರ್ವಹಿಸುತ್ತದೆ.

  1. ಸ್ಥೂಲ ಶರೀರವು ಗು, ಗುಹ್ಯ, ಪಾದ, ಪಾಣಿ (ಹಸ್ತ), ಬಾಯಿ ಎನ್ನುವ ಐದು ಪಂಚಕರ್ಮೇಂದ್ರಿಯಗಳ ಮೂಲಕ ಕಾರ್ಯನಿರ್ವಹಿಸುತ್ತವೆ. ಪಂಚಕರ್ಮೇಂದ್ರಿಯಗಳು ಶುದ್ಧವಾಗಿರಬೇಕು ಅಂದಾಗ ಮೊದಲ ಹಂತದ ಶುದ್ಧಿಕ್ರಿಯ ನಡೆದಂತೆ.
  2. ಸೂಕ್ಷ್ಮ ಶರೀರವು ಮೂಗು, ನಾಲಿಗೆ, ಚರ್ಮ, ಕಣ್ಣು ಮತ್ತು ಕಿವಿ ಎನ್ನುವ ಪಂಚೇಂದ್ರಿಯಗಳ ಮೂಲಕ ಕಾರ್ಯ ನಿರ್ವಹಿಸುತ್ತದೆ. ಈ ಪಂಚೇಂದ್ರಿಯಗಳು ಶುದ್ಧವಾಗಿರಬೇಕು. ಅಂದಾಗ ಎರಡನೆಯ ಹಂತದ ಶುದ್ಧಿಕ್ರಿಯೆ ನಡೆದಂತೆ.
  3. ಕಾರಣ ಶರೀರವು ಮನಃ,ಚಿತ್ತ, ಬುದ್ಧಿ, ಅಹಂಕಾರ ಮತ್ತು ಜ್ಞಾನ ಎಂಬ ಭಾವೇಂದ್ರಿಯಗಳ ಮೂಲಕ ಕಾರ್ಯನಿರ್ವಹಿಸುತ್ತದೆ. ಈ ಭಾವೇಂದ್ರಿಯಗಳು ಶುದ್ಧವಾಗಿರಬೇಕು. ಅಂದಾಗ ಇದು ಮೂರನೆಯ ಹಂತದ ಶುದ್ಧಿ ಕ್ರಿಯೆಯಾಗುತ್ತದೆ.

ಒಟ್ಟಾರೆ ಇದು ಒಬ್ಬ ವ್ಯಕ್ತಿಯ ಶರೀರ / ಕಾಯದ ಒಂದು ಸಮಗ್ರ ನೋಟ,

ಶಂಕರ ದಾಸಿಮಯ್ಯನವರ ಪ್ರಕಾರ ಕಾಯದ ಮದವಳಿದಲ್ಲದೆ ಲಿಂಗಸಬಂಧವಾಗದು ಎಂಬುದರ ಅರ್ಥ “ಈ ಶರೀರತ್ರಯೆಗಳಿಗೆ ಅಂಟಿಕೊಂಡಿರುವ ವಿಷಯ ವಾಸನೆಗಳು ದೂರವಾಗಬೇಕು” ಎಂಬುದಾಗಿದೆ.

ಯಾವಾಗ ಸಾಧಕ ತನ್ನ ಸ್ಥೂಲಶರೀರದಲ್ಲಿ ಇಷ್ಟಲಿಂಗವನ್ನು ಧರಿಸುವನೋ ಆಗ ಇಷ್ಟಲಿಂಗವನ್ನು ಪೂಜಿಸುತ್ತಾ ಪೂಜಿಸುತ್ತಾ ಒಂದೊಂದೆ ವಿಷಯವಾಸನೆಯನ್ನು ಕಳಚಿಕೊಳ್ಳುತ್ತಾನೆ. ಆಗ ಅವನು ತ್ಯಾಗಾಂಗ ಹೊಂದುತ್ತಾನೆ. ಹೀಗಾಗಿ ಇಷ್ಟಲಿಂಗ ಪ್ರಾಣಲಿಂಗವಾಗುತ್ತದೆ. ಯಾವಾಗ ಸೂಕ್ಷ್ಮ ಶರೀರವು ಪ್ರಾಣಲಿಂಗ ಧರಿಸುವುದೋ ಆಗ ವ್ಯಕ್ತಿ / ಸಾಧಕ ಉಣ್ಣುವುದು, ಉಡುವುದು, ಮಲಗುವುದು ಒಟ್ಟಾರೆ ಭೋಗಿಸುವುದೆಲ್ಲವೂ ಲಿಂಗಮಯವಾಗುತ್ತದೆ. ಆಗ ಸ್ಥೂಲ ಶರೀರ “ಭೋಗಾಂಗ” ವಾಗುತ್ತದೆ. ಈ ಜ್ಞಾನ ಉಂಟಾಗುವುದರಿಂದ ಪ್ರಾಣಲಿಂಗವನ್ನು “ಜ್ಞಾನಲಿಂಗ” ಎನ್ನಲಾಗುವುದು. ಇದು ಎರಡನೆಯ ಹಂತದ ಶುದ್ಧೀಕ್ರಿಯ ಆಗಿದೆ.

ಮೂರನೆಯ ಹಂತಕ್ಕೆ ಬಂದಾಗ ಕಾರಣ ಶರೀರದಲ್ಲಿ ಪ್ರಾಣಲಿಂಗವು ಭಾವಲಿಂಗವಾಗುತ್ತದೆ. ಇದು ತುಂಬಾ ಮಹತ್ವದ ಹಂತ. ಇಲ್ಲಿ ವ್ಯಕ್ತಿ / ಸಾಧಕ ಲಿಂಗಾಂಗ ಸಾಮಾರಸ್ಯ ಹೊಂದುತ್ತಾನೆ. ಇದು ಅತ್ಯಂತ ಮಹತ್ವದ ಹಂತ. ಶಿವಯೋಗದ ಉಚ್ಛ ಸ್ಥಿತಿ. ಇಲ್ಲಿ ಲಿಂಗವು (ಕಾಯ) ಎಲ್ಲ ಮದವನ್ನು ಕಳಿಚಿಕೊಂಡು ಯೋಗಾಂಗವಾಗುತ್ತದೆ.

ಯಾವಾಗ ಲಿಂಗಚೇತನವು ಮೂರೂ ಶರೀರಗಳಲ್ಲಿ ಸಂಚರಿಸಿದಾಗ ಅವುಗಳು ಶುದ್ಧವಾಗುತ್ತವೆ. ಕಾಯ ಮದವನ್ನು ಕಳೆದುಕೊಂಡು ತ್ಯಾಗಾಂಗ, ಭೋಗಾಂಗ ಯೋಗಾಂಗಗಳಾಗುತ್ತವೆ. ಆಗ ಕಾಯಕ್ಕೆ ಲಿಂಗಸಂಬಂಧ ಅಳವಡುತ್ತದೆ. ಇದು ತುಂಬಾ ಧೀರ್ಘವಾದ ಪಯಣವಾಗಿದೆ. ಶಿವಯೋಗದ ನೆಲೆಗೆ ಏರಿ ಪರಮಸುಖವನ್ನು, ಲಿಂಗಸುಖವನ್ನು ಹೊಂದುವುದಾಗಿದೆ. ಈ ಹಂತವನ್ನು ತಿಳಿದವರಾದ ಶಂಕರದಾಸಿಮಯ್ಯನವರು “ಕಾದ ಮದವಳಿದಲ್ಲದೆ ಲಿಂಗಸುಖವು” ದೊರೆಯದು ಎಂದು ಸ್ಪಷ್ಟವಾಗಿ ಹೇಳುತ್ತಾರೆ. ಇದು ಸುಖ ದೊರೆಯುವ ಮೊದಲ ಹಂತವೆಂದು ಶಂಕರದಾಸಿಮಯ್ಯನವರ ಪ್ರಾಯೋಗಿಕ ತಿಳುವಳಿಕೆಯಾಗಿದೆ.

ಎರಡನೆಯ ಹಂತ ಮಾಯಾವಿಕಾರ ಅಳಿದಾಗ ಲಿಂಗಸುಖ ದೊರೆಯುತ್ತದೆ ಎಂಬುದಾಗಿದೆ. ತುಂಬಾ ಕೂತೂಹಲಕಾರಿಯಾದ ಸಂಗತಿ ಎಂದರೆ ಜೀವ ಮತ್ತು ಜೀವಾತ್ಮದ ನಿರ್ಮಾಣ ಜೀವಾತ್ಮ ಶಿವ (ಅರಿವು/ಜ್ಞಾನ) ನ ಒಂದು ಅಂಶವಾಗಿದ್ದು, ಈ ಜೀವಾತ್ಮಕ್ಕೆ ಅಜ್ಞಾನದ ಕತ್ತಲೆಯು ಮುಸುಕಿಕೊಳ್ಳುತ್ತದೆಯೋ ಆಗ ಅದು ಕೇವಲ ಲಿಂಗ ಎನಿಸಿಕೊಳ್ಳುತ್ತದೆ. ಮಹಾಘನಲಿಂಗವು ವಿಶ್ವಚೈತನ್ಯವಾಗಿ ಮಾರ್ಪಡುವಾಗ “ಶ್ವೇತ ಮತ್ತು ಕೃಷ್ಣ” ಎಂಬ ಕಪ್ಪು-ಬಿಳುಪಿನ ಎರಡು ವರ್ಣಲೋಕಗಳನ್ನು ಸೃಷ್ಟಿಸುತ್ತದೆ. ಇದನ್ನೇ Scientific ಭಾಷೆಯಲ್ಲಿ White Holes” ಅಥವಾ ಪ್ರಕಾಶವಲಯ ಎಂದೂ “Black Holes” ಎನ್ನುತ್ತಾರೆ. ಅಂದರೆ White Holes” ಮತ್ತು Black Holes” ನ್ನು ತಮೋವಲಯ ಎಂದು ಕರೆಯಲಾಗಿದೆ.

ಈ ಎರಡೂ ವಲಯದಿಂದ ಎರಡು ಪ್ರತ್ಯೇಕ ಶಕ್ತಿಗಳು ಉತ್ಪತ್ತಿ ಆಗುತ್ತವೆ. ಪ್ರಕಾಶವಲಯದಿಂದ ಸತ್ವಗುಣ ಜಾಗೃತವಾಗಿ ತ್‌ಶಕ್ತಿಯ ಉತ್ಪತ್ತಿಯಾಗುತ್ತದೆ. ಇದೇ ದೈವೀಚೇತನ (ಶಕ್ತಿ) ವಾಗಿದ್ದು ಇದನ್ನು Positive Energy” ಎಂದು, ತಮೋವಲಯದಿಂದ ರಜೋಗುಣ ಜಾಗೃತವಾಗಿ ತಮೋಶಕ್ತಿ ಯ ಉತ್ಪತ್ತಿಯಾಗುತ್ತದೆ. ಇದೇ ದೈತ್ಯಚೇತನ (ಶಕ್ತಿ) ವಾಗಿದ್ದು ಇದನ್ನು Negative Energy” ಎಂದೂ ಆಧುನಿಕ ಪರಿಭಾಷೆಯಲ್ಲಿ ಈ ಎರಡು ಶಕ್ತಿಗಳನ್ನು ಕರೆಯಲಾಗಿದೆ.

ಬಸವಾದಿ ಶಿವಶರಣರು ಈ ತಮೋಶಕ್ತಿಯನ್ನು “ಮಾಯೆ” ಎಂದು ಕರೆದರು. ಆ ಮಾಯೆಯೆ ಅಂತರಂಗ ಮತ್ತು ಶರೀರಾದಿ ಇಂದ್ರಿಯಗಳಲ್ಲಿ ದುಷ್ಟಭಾವ, ದುಷ್ಟಗುಣ ಮತ್ತು ದೃಷ್ಟಕ್ರಿಯೆಗಳನ್ನು ಉಂಟು ಮಾಡುತ್ತದೆ. ಇವೆಲ್ಲವುಗಳು ಜೀವಾತ್ಮನಿಗೆ ತ್ರಿಮಲ, ತಾಪತ್ರಯ, ಅಷ್ಟಮದ, ಸಪ್ತವ್ಯಸನ, ಅರಿಷಡ್ವರ್ಗ, ಪಂಚಕ್ಲೇಶ, ತ್ರಿವಿಧಾವಸ್ಥೆ, ತ್ರಿದೋಷ, ಷಡ್ಭಾವ ಮತ್ತು ಭವರೋಗವಾಗಿ ಕಾಡುತ್ತವೆ. ಇಂತಹ ಮಾಯಾವಿಕಾರಗಳನ್ನು ಕಳೆದುಕೊಂಡಾಗ ಮಾತ್ರ ಲಿಂಗಸಂಬಂಧ ಅಳವಡಲು ಸಾಧ್ಯ ಮತ್ತು ಲಿಂಗಸುಖ ಸಿಗಲು ಸಾಧ್ಯ ಎಂಬ ವಿಚಾರವನ್ನು ಶಂಕರದಾಸಿಮಯ್ಯನವರು “ಮಾಯಾ ವಿಕಾರವಳಿಯದೆ ಲಿಂಗಸುಖ” ಸಾಧ್ಯವಿಲ್ಲ ಎನ್ನುತ್ತಾರೆ.

ಕಾಯಮಾಯದ ಹೋಲಿಗೆ ಬಿಚ್ಚುವಲ್ಲಿ ಶಂಕರದಾಸಿಮಯ್ಯನವರ ವಿಚಾರಗಳು ಅವರು ಏರಿದ ಆಧ್ಯಾತ್ಮಿಕ ಎತ್ತರವನ್ನು ತೋರ್ಪಡಿಸಿವೆ. ಕಾಯಮಾಯೆಯ ಕುರಿತು ವೈರಾಗ್ಯನಿಧಿ ಅಕ್ಕಮಹಾದೇವಿಯವರಿಗೆ ಇರುವ ಜ್ಞಾನ ಶಂಕರದಾಸಿಮಯ್ಯನವರಿಗೂ ಇರುವುದು ಕಂಡು ಬರುತ್ತದೆ.

ಎನ್ನ ಕಾಯ ಮಣ್ಣು,ಜೀವ ಬಯಲು,
ಆವುದ ಹಿಡಿವೆನಯ್ಯಾ.
ದೇವಾ, ನಿಮ್ಮನಾವ ಪರಿಯಲ್ಲಿ ನೆನೆವೆನಯ್ಯಾ?
ಎನ್ನ ಮಾಯೆಯನು ಮಾಣಿಸಯ್ಯಾ
ಚೆನ್ನಮಲ್ಲಿಕಾರ್ಜುನಾ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-38/ವಚನ ಸಂಖ್ಯೆ-92)

ಎನ್ನ ಮಾಯದ ಮದವ ಮುರಿಯಯ್ಯಾ,
ಎನ್ನ ಕಾಯದ ಕತ್ತಲೆಯ ಕಳೆಯಯ್ಯಾ,
ಎನ್ನ ಜೀವದ ಜೊಂಜಡವ ಮಾಣಿಸಯ್ಯಾ.
ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯಾ,
ಎನ್ನ ಸುತ್ತಿದ ಪ್ರಪಂಚವ ಬಿಡಿಸು ನಿಮ್ಮ ಧರ್ಮಾ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-41/ವಚನ ಸಂಖ್ಯೆ-102)

ಇಂತಹ ವಚನಗಳಲ್ಲಿ ಅಕ್ಕಮಹಾದೇವಿಯವರು ಕಾಯಜೀವಮಾಯೆಯ ಹೊಲಿಗೆ ಬಿಡಿಸಿಕೊಳ್ಳುವ ಪರಿಯಂತೆ ಶಂಕರದಾಸಿಮಯ್ಯನವರ ಆಧ್ಯಾತ್ಮಿಕ ತಪಸ್ಸು ತೀವ್ರವಾಗಿತ್ತು ಎಂಬುದು ತಿಳಿದು ಬರುತ್ತದೆ. ಅದೇ ವಿಧಾನದಲ್ಲಿ ಚನ್ನಬಸವಣ್ಣನವರು ನುಡಿಯುತ್ತಾರೆ;

ತನುವಿನ ಸ್ವಾರ್ಥಕ್ಕೆ ಪದಾರ್ಥದ ಪೂರ್ವಾಶ್ರಯವ ಕಳೆದು,
ಲಿಂಗಕ್ಕೆ ಕೊಟ್ಟು ಕೊಂಬುದು ಶುದ್ಧ ಪ್ರಸಾದ.
ಮನದ ಸ್ವಾರ್ಥಕ್ಕೆ ರುಚಿಯ ಪೂರ್ವಾಶ್ರಯವ ಕಳೆದು,
ಲಿಂಗಕ್ಕೆ ಕೊಟ್ಟು ಕೊಂಬುದು ಶುದ್ಧ ಪ್ರಸಾದ.
ಈ ಉಭಯ ಕ್ರಿಯಾಭಾವವಳಿದುಳಿದ ಪ್ರಸಿದ್ಧ ಪ್ರಸಾದವ
ಕೂಡಲಚನ್ನಸಂಗಾ ನಿಮ್ಮ ಶರಣಬಲ್ಲ.
(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-40/ವಚನ ಸಂಖ್ಯೆ-100)

ತನುವಿನ ಸ್ವಾರ್ಥ, ಮನದ ಸ್ವಾರ್ಥ ಕಳಚಿಕೊಂಡು ಎಲ್ಲವನ್ನೂ ಲಿಂಗಕ್ಕೆ ಅರ್ಪಿಸಿ ಶುದ್ಧವಾದುದೇ ಪ್ರಸಿದ್ಧ ಪ್ರಸಾದ ಎಂಬಲ್ಲಿಯೂ ತನುಮನ ವಿಕಾರ ಕಳೆದುಕೊಳ್ಳುವ ಭಾವವೇ ವ್ಯಕ್ತವಾಗಿದೆ. ಅಲ್ಲಮ ಪ್ರಭುಗಳ ವಚನದಲ್ಲಿಯೂ ಜೀವಕಾಯದ ವಿವರಗಳು ಕಂಡು ಬರುತ್ತವೆ.

ಎಣ್ಣೆ ಬೇರೆ ಬತ್ತಿ ಬೇರೆ;
ಎರಡೂ ಕೂಡಿ ಸೊಡರಾಯಿತ್ತು.
ಪುಣ್ಯ ಬೇರೆ ಪಾಪ ಬೇರೆ;
ಎರಡೂ ಕೂಡಿ ಒಡಲಾಯಿತ್ತು.
ಮಿಗಬಾರದು, ಮಿಗದಿರಬಾರದು,
ಒಡಲಿಚ್ಛೆಯ ಸಲಿಸದೆ ನಿಮಿಷವಿರಬಾರದು.
ಕಾಯಗುಣವಳಿದು ಮಾಯಾಜ್ಯೋತಿ
ವಾಯುವ ಕೊಡುವ ಮುನ್ನ,
ಭಕ್ತಿಯ ಮಾಡಬಲ್ಲಡೆ ಆತನೆ ದೇವ ಗುಹೇಶ್ವರಾ.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-29/ವಚನ ಸಂಖ್ಯೆ-71)

ಕಾಯಗುಣ ಕಳೆದುಕೊಳ್ಳುವ, ಮಾಯೆಯನ್ನು ಗೆಲ್ಲುವ ಪರಿಯೇ ದೇವನಾಗುವ ಹಂತವೆಂದು ಎಲ್ಲ ಶರಣಶರಣೆಯರು ಹೇಳುವಂತೆ ಶಂಕರದಾಸಿಮಯ್ಯನವರ ಜೀವಕಾಯಮಾಯೆಯ ತತ್ವಮೀಮಾಂಸೆ ಗಹನವಾದುದಾಗಿದೆ.

ಮೂರನೆಯ ಹಂತದಲ್ಲಿ ಭವನಾಶವಾಗದೆ ಲಿಂಗಸುಖ ಸಾಧ್ಯವಿಲ್ಲ ಎನ್ನುವ ಶಂಕರದಾಸಿಮಯ್ಯನವರು ಯಾರು ಜನನಮರಣ ದುಃಖಗಳಿಂದ ದೂರವಾಗುವುದಿಲ್ಲವೋ ದಿನನಿತ್ಯದ ಬವಣೆಗಳನ್ನು ಕಳೆದುಕೊಳ್ಳುವುದಿಲ್ಲವೋ ಅಂತಹವರಿಗೆ ಲಿಂಗಸುಖ ದೊರೆಯದು. ಇವೆಲ್ಲವುಗಳಿಂದ ದೂರ ನಿಲ್ಲುವುದೇ ನಿರ್ಲಿಪ್ತ ಸ್ಥಿತಿ, ನಿಮೋಹತತ್ವ ಇದೇ ಶಂಕರದಾಸಿಮಯ್ಯನವರ ಪ್ರಕಾರ ಭವನಾಶ ವಾಗಿದೆ. ಇದನ್ನು ಸಾಧಿಸಿಕೊಂಡಾಗ ಲಿಂಗಸುಖ ದೊರೆಯುವುದು ಎಂಬುದು ಶಂಕರದಾಸಿಮಯ್ಯನವರ ವಿಚಾರ.

ನಾಲ್ಕನೆಯ ಹಂತ ಅಂಗ ಲಿಂಗವಾಗುವುದು. ಲಿಂಗಾಂಗ ಸಾಮರಸ್ಯ ಹೊಂದುವುದು. ಈ ಹಂತದಲ್ಲಿ ಸಾಧಕನು ಸರ್ವಾಂಗಲಿಂಗಮಯ ತತ್ವ ಸಾಧಿಸಿರುತ್ತಾನೆ. ಲಿಂಗಸಂಬಂಧ ಇಟ್ಟುಕೊಂಡು ಶಿವಯೋಗದ ತುತ್ತ ತುದಿಗೇರುತ್ತಾನೆ. ಅನಿರ್ವಚನೀಯ ಸುಖ, ಆನಂದ ಅನುಭವಿಸುತ್ತಿರುತ್ತಾನೆ. ಅಂಗ ಬೇರೆ ಅಲ್ಲ ಲಿಂಗ ಬೇರೆ ಅಲ್ಲಾ ಎಂಬ ಉಭಯ ಜ್ಞಾನ ಅಳಿದು ಲಿಂಗದೊಂದಿಗೆ ಅವಿನಾಭಾವ ಸಂಬಂಧ ಇಟ್ಟುಕೊಂಡಾಗ ಸಾಧಕ ಶಿವಯೋಗಿಯಾಗುತ್ತಾನೆ. ಅದು ಪರಮಸುಖದ ಹಂತ. ಇದನ್ನೇ ಶಂಕರದಾಸಿಮಯ್ಯನವರು ಲಿಂಗಸಂಬಂಧವಳವಟ್ಟಲ್ಲದೆ ಸುಖವು ಸಾಧ್ಯ ಎಂದು ಶಂಕರದಾಸಿಮಯ್ಯನವರ ವಚನದ ಪ್ರಾರಂಭಿದ ನಾಲ್ಕು ಸಾಲುಗಳು ಅರ್ಥೈಸುತ್ತವೆ.

ವ್ಯೋಮ ಮೂರ್ತಿ ಅಲ್ಲಮ ಪ್ರಭುಗಳು ಲಿಂಗಸುಖದ ವಿಚಾರವಾಗಿ ಇದನ್ನೇ ಹೇಳುತ್ತಾರೆ;

ಲಿಂಗವನರಿಯದೆ ಏನನರಿದಡೆಯೂ ಫಲವಿಲ್ಲ,
ಲಿಂಗವನರಿದ ಬಳಿಕ ಮತ್ತೇನನರಿದಡೆಯೂ ಫಲವಿಲ್ಲ,
ಸರ್ವಕಾರಣ ಲಿಂಗವಾಗಿ,
ಲಿಂಗವನೆ ಅರಿದರಿದು ಲಿಂಗಸಂಗವನೆ ಮಾಡುವೆ,
ಲಿಂಗಸುಖದೊಳು ಓಲಾಡುವೆ ಗುಹೇಶ್ವರಾ.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-565/ವಚನ ಸಂಖ್ಯೆ-1482)

ಪ್ರಭುಗಳ ದೃಷ್ಟಿಯಲ್ಲೂ ಲಿಂಗವ್ಯಸನವೆಂಬುದು ಪರಮಸುಖದ ಸೋಪಾನ. ಇಂದಿನ ಪ್ರಗತಿಯ ಯಶೋಗಾಥೆ ಏನೇ ಇರಲಿ ಲಿಂಗಜ್ಞಾನವಿಲ್ಲದೆ ಎಲ್ಲವೂ ನಿಃಶೂನ್ಯವೆನಿಸುವುದು. ಪ್ರಭುಗಳೂ ಸಹ ತಮ್ಮ ವಚನದಲ್ಲಿ ಲಿಂಗಜ್ಞಾನ ಮನಸ್ಸಿನ ಸಮಸ್ಥಿತಿಗೆ ಕಾರಣವಾಗುವುದು. ಪರಿಪೂರ್ಣವಾಗುವುದರತ್ತ ಸಾಗುವ ಸಾಧಕನಿಗೆ ಲಿಂಗವನ್ನು ಅರಿತ ಬಳಿಕ ಮತ್ತೆ ಏನನ್ನೂ ಅರಿಯುವ ಅವಶ್ಯಕತೆ ಇಲ್ಲ ಎನ್ನುತ್ತಾರೆ. ಲಿಂಗಜ್ಞಾನಿಯಾದವನು ಇಹಪರಗಳ ನಿಜಗತಿಯನ್ನು ತಿಳಿದವನಾಗಿ ನಿರ್ಲಿಪ್ತನಾಗಿರುತ್ತಾನೆ. ಸಮಚಿತ್ತ, ಸಮಸ್ಥಿತಿ, ಸಮಭಾವ, ಸಮರತಿ ಎಲ್ಲದಕೂ ಲಿಂಗವೆ ಕಾರಣವಾಗುವುದರಿಂದ ಲಿಂಗವನೆ ಅರಿತು, ಲಿಂಗದ ಸಂಗ ಮಾಡಿ, ಲಿಂಗಸುಖದೊಳಗೆ ಓಲಾಡುವ ಪರಮೋಚ್ಛ ಸುಖ ಮತ್ತೊಂದಿಲ್ಲ ಎನ್ನುತ್ತಾರೆ.

ಚನ್ನಬಸವಣ್ಣನವರು ಪರಮಸುಖ ಲಿಂಗಸಂಬಂಧದಿಂದಲೇ ದೊರಕುತ್ತದೆ ಎನ್ನುತ್ತಾರೆ.

ಅಂಗದಿಂದ ಲಿಂಗಸುಖ,
ಲಿಂಗದಿಂದ ಅಂಗಸುಖ,
ಅಂಗ ಲಿಂಗ ಸಂಗದಿಂದ ಪರಮಸುಖ.
ಈ ಅಂಗ ಲಿಂಗ ಸುಖವನು
ಕೂಡಲಚೆನ್ನಸಂಗಯ್ಯನಲ್ಲಿ
ಲಿಂಗೈಕ್ಯ ಬಲ್ಲ.
(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-266/ವಚನ ಸಂಖ್ಯೆ-666)

ಲಿಂಗೈಕ್ಯ ನಾಗುವುದು ಎಂದರೆ ಚನ್ನಬಸವಣ್ಣನವರ ದೃಷ್ಟಿಯಲ್ಲೂ ಲಿಂಗಾಂಗ ಸಾಮರಸ್ಯ ಸಾಧಿಸುವುದು, ಶಿವಯೋಗ ತತ್ವಕ್ಕೆ ಏರುವುದು ಎಂದರ್ಥ. ಹೀಗೆ ಅಂಗನು ಲಿಂಗಸುಖ ಹೊಂದುವುದಕ್ಕೆ ಕಾಯಮದ, ಮಾಯಾವಿಕಾರ, ಭವನಾಶ, ದ್ವೆತ್ವಭಾವ ಎಲ್ಲವನ್ನೂ ಕಳೆದುಕೊಂಡು ಸುಖವನ್ನು ಹೊಂದಬಹುದು ಎಂಬುದನ್ನು ಶಂಕರದಾಸಿಮಯ್ಯನವರು ಹೇಳಿದ್ದನ್ನೇ ಅಲ್ಲಮ ಪ್ರಭುಗಳ, ಚನ್ನಬಸವಣ್ಣನವರ ವಚನಗಳು ಪೂರಕವಾಗಿ ನಿಲ್ಲುತ್ತವೆ.

ಶಂಕರದಾಸಿಮಯ್ಯನವರ ವಚನದಲ್ಲಿ ಎರಡನೇಯ ಹಂತದ ವಿವರವನ್ನು ಎರಡನೆಯ ಪ್ರಶ್ನೆಯನ್ನೆತ್ತಿಕೊಂಡು ವಿವರಿಸಬಹುದು; ಲಿಂಗಸಂಗದಿಂದ ದೊರೆತ ಸುಖದ ಪರಿಣಾಮವನ್ನು ಅನುಭವಿಸಲು ಯಾವಾಗ ಸಾಧ್ಯ? ಎಂಬುದೇ ಆ ಎರಡನೆಯ ಪ್ರಶ್ನೆ. “ಲಿಂಗಸಂಬಂಧ ಅಳವಟ್ಟ ಮೇಲೆ ಸುಖ ಸಿಗುವುದು” ಎಂದು ಹೇಳುವ ಶಂಕರದಾಸಿಮಯ್ಯನವರು ಮುಂದುವರೆದು ದೊರೆತ ಸುಖವನ್ನು ಅನುಭವಿಸಬೇಕು. ಎಂದರೆ ಸಮಾನ ಮನಸ್ಥಿತಿಯವರು ಬೇಕಾಗುತ್ತದೆ. ತನಗೆ ಸಿಕ್ಕ ಸುಖ ಅವರಿಗೂ ಸಿಕ್ಕಾಗ ಆ ಸುಖದ ಅನುಭವವನ್ನು ಹಂಚಿಕೊಳ್ಳಲು ಸಮಾನಮನಸ್ಸುವುಳ್ಳವರ ಸಂಗ ಬೇಕು ಎನ್ನುತ್ತಾರೆ ಶಂಕರದಾಸಿಮಯ್ಯನವರು. ಲಿಂಗಸುಖ ಅನುಭವವಾದರೆ ಅದನ್ನು ವಿವರಿಸಿ ಹೇಳುವುದೇ ಅನುಭಾವವಾಗುತ್ತದೆ. ಅದಕ್ಕೆಂದೇ ದೇವರದಾಸಿಮಯ್ಯನವರು ಪರಮಸುಖ ಪರಿಣಾಮಕ್ಕೆ ಮಹಾನುಭವಿಗಳ ಸಂಗವೇ ಬೇಕು ಮಹಾನುಭಿಗಳ ಸಂಗದಿಂದಲ್ಲದೆ ವಿಶ್ರಾಮವಿಲ್ಲ” ಎನ್ನುತ್ತಾರೆ.

ಈ ವಿಚಾರವನ್ನು ಸೂಕ್ಷ್ಮವಾಗಿ ಗ್ರಹಿಸಿದರೆ 12 ನೇ ಶತಮಾನದಲ್ಲಿದ್ದ ಅನುಭವ ಮಂಟಪ” ಕೇವಲ ವಚನಗಳ ರಚನೆ, ಚರ್ಚೆ ಇವುಗಳಿಗೆ ಮೀಸಲಾಗಿದೆ. ಇಲ್ಲಿ ಶಿವಯೋಗದ ಪ್ರಾತ್ಯಕ್ಷಿಕೆಗಳು ಡೆಯುತ್ತಿದ್ದವು. ಇಷ್ಟಲಿಂಗಪೂಜೆ ಶಿವಯೋಗ ಸಾಧನೆಗಳು ಅನುಭವ ಮಂಟಪದಲ್ಲಿ ಸಾಮೂಹಿಕವಾಗಿ ನಡೆಯುತ್ತಿದ್ದವು ಎಂಬುದರ ಸ್ಪಷ್ಟವಾದ ಚಿತ್ರಣ ದೊರೆಯುತ್ತದೆ. ಶರಣರು ಸಾಂಘಿಕವಾಗಿ ಶಿವಯೋಗ ಸಾಧಿಸುತ್ತಾ ಅದರ ಸುಖವನ್ನು ಪರಿಣಾಮಿಸುತ್ತಿದ್ದರು ಎಂಬುದು ತಿಳಿದು ಬರುತ್ತದೆ. ಸಂಗ ಸುಖದ ಕುರಿತು ವೈರಾಗ್ಯನಿಧಿ ಅಕ್ಕಮಹಾದೇವಿಯವರು ತಮ್ಮ ವಚನಗಳಲ್ಲಿ ಸ್ಪಷ್ಟಪಡಿಸಿದ್ದಾರೆ. ಅಂದರೆ ಉಡುತಡಿಯಿಂದ ಕಲ್ಯಾಣಕ್ಕೆ ಬಂದ ಅಕ್ಕನವರು ಅನುಭವ ಮಂಟಪದಲ್ಲಿ ನಡೆಯುತ್ತಿದ್ದ “ಸಾಮೂಹಿಕ ಶಿವಯೋಗ” ದಲ್ಲಿ ಪಾಲ್ಗೊಂಡಿರುವುದು ಖಚಿತವಾಗುತ್ತದೆ.

ಸಂಗದಿಂದಲ್ಲದೆ ಅಗ್ನಿ ಹುಟ್ಟದು,
ಸಂಗದಿಂದಲ್ಲದೆ ಬೀಜ ಮೊಳೆದೋರದು,
ಸಂಗದಿಂದಲ್ಲದೆ ಹೂವಾಗದು.
ಸಂಗದಿಂದಲ್ಲದೆ ಸರ್ವಸುಖದೋರದು.
ಚೆನ್ನಮಲ್ಲಿಕಾರ್ಜುನಯ್ಯಾ,
ನಿಮ್ಮ ಮಹಾನುಭಾವಿಗಳ ಸಂಗದಿಂದಲಾನು
ಪರಮಸುಖಿಯಾದೆನಯ್ಯಾ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-134/ವಚನ ಸಂಖ್ಯೆ-377)

ಅಯ್ಯಾ,ನಿಮ್ಮ ಅನುಭಾವಿಗಳ ಸಂಗದಿಂದ
ಎನ್ನ ತನು ಶುದ್ಧವಾಯಿತ್ತು.ಅಯ್ಯಾ,
ನಿಮ್ಮ ಅನುಭಾವಿಗಳ ಸಂಗದಿಂದ
ಎನ್ನ ಮನ ಶುದ್ಧವಾಯಿತ್ತು.
ಅಯ್ಯಾ, ನಿಮ್ಮ ಅನುಭಾವಿಗಳ ಸಂಗದಿಂದ
ಎನ್ನ ಪ್ರಾಣ ಶುದ್ಧವಾಯಿತ್ತು.
ಅಯ್ಯಾ, ನಿಮ್ಮ ಅನುಭಾವಿಗಳು
ಎನ್ನ ಒರೆದೊರೆದು ಆಗು ಮಾಡಿದ ಕಾರಣ
ಚೆನ್ನಮಲ್ಲಿಕಾರ್ಜುನಯ್ಯಾ
ನಿಮಗಾನು ತೊಡಿಗೆಯಾದೆನು.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-10/ವಚನ ಸಂಖ್ಯೆ-27)

ಅದೇ ರೀತಿಯಾಗಿ ಅನುಭವ ಮಂಟಪದಲ್ಲಿ ಅನುಭಾವ ನಡೆಯುವುದರ ಕುರಿತು ಚನ್ನಬಸವಣ್ಣನವರ ವಚನವೂ ಸಾಕ್ಷಿಯಾಗುತ್ತದೆ.

ಮಂಡೆ ಮಾಸಿದಡೆ ಮಹಾಮಜ್ಜನವ ಮಾಡುವುದು;
ವಸ್ತ್ರ ಮಾಸಿದಡೆ ಮಡಿವಾಳರಿಕ್ಕುವುದು;
ಮನದ ಮೈಲಿಗೆಯ ತೊಳೆಯಬೇಕಾದಡೆ
ಕೂಡಲಚನ್ನಸಂಗಯ್ಯನ ಶರಣರ
ಅನುಭಾವವ ಮಾಡುವುದು.
(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-730/ವಚನ ಸಂಖ್ಯೆ-1487)

ಹೀಗೆ ಶಿವಯೋಗದ ನೆಲೆ ಕಾಣುವ ಪ್ರಕ್ರಿಯೆ, ಅನುಭಾವದ ವಿಚಾರ ಹಂಚಿಕೆ ಅನುಭವ ಮಂಟಪದಲ್ಲಿ ನಿತ್ಯ ನಿರಂತರವಾಗಿರುವುದು ಕಂಡು ಬರುತ್ತದೆ. ಅನುಭಾವವು Theory ಆಗಿದ್ದರೆ ಶಿವಯೋಗವು Practical ಅಂದರೆ ಪ್ರಯೋಗಾತ್ಮಕವಾಗಿತ್ತು. ಇವೆರಡೂ ಸಂಗ ಮತ್ತು ಸಂಘಟನೆಯಿಂದಲೇ ಮುನ್ನೆಲೆಗೆ ಬಂದಿದ್ದವು. ಅದ್ದರಿಂದಲೇ ದೂರದೂರದ ದೇಶಪ್ರದೇಶಗಳಿಂದ ಶರಣರು ಇವುಗಳಲ್ಲಿ ಪಾಲ್ಗೊಳ್ಳಲು ಬಂದಿರುವುದು ಖಚಿತವಾಗುತ್ತದೆ. ಒಟ್ಟಿನಲ್ಲಿ ಶಂಕರದಾಸಿಮಯ್ಯನವರು “ಪರಮಸುಖ ಪರಿಣಾಮಕ್ಕೆ ಮಹಾನುಭಾವಿಗಳ ಸಂಗವೇ ಬೇಕು” ಎಂದು ಉಲ್ಲೇಖಿಸಿರುವುದನ್ನು ನೋಡಿದರೆ ಇವರು ಸಹ ಲಿಂಗಾಂಗ ಸಾಮರಸ್ಯದ, ಶಿವಯೋಗದ, ಅನುಭಾವದ ಸಂಗಸುಖ ಅನುಭವಿಸಿದ್ದರು ಎಂಬುದು ಸ್ಪಷ್ಟವಾಗಿ ತಿಳಿದು ಬರುತ್ತದೆ. ಹೀಗೆ ಕಂಡುಕೊಂಡ “ಪರಮಸುಖ ಪರಿಣಾಮಕ್ಕೆ ಮಹಾನುಭಾವಿಗಳ ಸಂಗವೇ ಬೇಕು; ಅವರ ಸಂಗದಿಂದಲ್ಲದೆ ವಿಶ್ರಾಮವಿಲ್ಲ” ಎಂದು ಲಿಂಗಸುಖದ ಪರಿಣಾಮ ಇವರ (ಮಹಾನುಭಾವಿಗಳ) ಸಂಗದಿಂದ ಸಾಧ್ಯವೆಂದು ಶಂಕರದಾಸಿಮಯ್ಯನವರು ಹೇಳುತ್ತಾರೆ.

ಶಂಕರ ದಾಸಿಮಯ್ಯನವರ ವಚನದ ಮೂರನೆಯ ಹಂತಕ್ಕೆ ಬಂದು ತಲುಪುವುದಾದರೆ, ಮೂರನೆಯ ಪ್ರಶ್ನೆಯನ್ನು ಪರಾಮರ್ಶೆ ಮಾಡಬೇಕಾಗುತ್ತದೆ. ಶಂಕರದಾಸಿಮಯ್ಯನವರು ಕಂಡ ಮಹಾ ಅನುಭಾವದ ಮೂರ್ತಿ ಯಾರು? ಎಂದರೆ ಮಹಾನುಭಾವಮೂರ್ತಿ ಅವರಿಗೆ ಬಸವಣ್ಣನವರೆ ಆಗಿದ್ದಾರೆ. ಅನುಭವ ಮಂಟಪದ ರೂವಾರಿ ಬಸವಣ್ಣನವರಾದರೆ ಅನುಭವ ಮಂಟಪದ ಪ್ರಥಮ ಅಧ್ಯಕ್ಷರು ಅಲ್ಲಮಪ್ರಭುಗಳು ಇವರಿಬ್ಬರೂ ಮಹಾನ್ ಚೇತನರು. ಸಮಾಜೋದ್ಧಾರದಲ್ಲಿ ಬಸವಣ್ಣನವರ ಭಕ್ತಿ ಮರೆಯಾಗಬಾರದೆಂದು ಅಲ್ಲಮ ಪ್ರಭುಗಳು ಬಸವಣ್ಣನವರಿಗೆ ಆಸರೆಯಾದರೆ, ವೈರಾಗ್ಯದ ಭರದಲ್ಲಿ ಅಲ್ಲಮ ಪ್ರಭುಗಳ ಜ್ಞಾನ ಅಲಿಪ್ತವಾಗಬಾರದೆಂದು ಅವರನ್ನು ಶೂನ್ಯಪೀಠದ ಅಧ್ಯಕ್ಷರನ್ನಾಗಿಸಿ ಆಸರೆಯಾದವರು ಬಸವಣ್ಣನವರು. ಹೀಗಾಗಿ ಜ್ಞಾನ ಮತ್ತು ಭಕ್ತಿ ಎರಡೂ ಅನುಭವ ಮಂಟಪದ ಎರಡು ಕಣ್ಣುಗಳಾದವು. ಆ ಎರಡು ಕಣ್ಣುಗಳೆ ಅಲ್ಲಮ ಪ್ರಭು ಮತ್ತು ಬಸವಣ್ಣನವರು. ಹೀಗಾಗಿ ಈ ಎರಡು ಶಕ್ತಿಗಳನ್ನು ಗುರುತಿಸಿದ ದಿವ್ಯದೃಷ್ಟಿ ಶಂಕರದಾಸಿಮಯ್ಯನವರದಾಗಿತ್ತು ಅದಕ್ಕಾಗಿ ಅವರಿಗೆ ಮಹಾನುಭಾವದಮೂರ್ತಿ ಸಂಗನಬಸವಣ್ಣ ನಾದರೆ ಅಲ್ಲಮ ಪ್ರಭುಗಳು ಜ್ಞಾನದ ಜ್ಯೋತಿಯಾಗಿದ್ದಾರೆ. ಬಸವಣ್ಣನವರ ನಿಲುವು ಗುರುತಿಸಿದ್ದರಿಂದಲೇ ಶಂಕರದಾಸಿಮಯ್ಯನವರು “ಇಂತಪ್ಪ ಮಹಾನುಭಾವದಮೂರ್ತಿ ಸಂಗನಬಸವಣ್ಣನ ಕೃಪೆಯಿಂದಲೆನೆಗೆ ನಿಜವು ಕಾಣಬಂದಿತ್ತು” ಎಂದಿದ್ದಾರೆ. ಬಸವಣ್ಣನವರು ಯಾಕೆ ಅನುಭಾವ ಮೂರ್ತಿಗಳಾಗುತ್ತಾರೆ? ಎಂಬುದಕ್ಕೆ ಚಿಙ್ಮಯಜ್ಞಾನಿ ಚೆನ್ನಬಸವಣ್ಣನವರು ತುಂಬಾ ಸುಂದರವಾದ ಉತ್ತರ ನೀಡುತ್ತಾರೆ;

ಪವನ ಸಾಧಕರೆಲ್ಲ ಕಳವಳಿಸಿ ಹೋದರು.
ವಿದ್ಯೆಸಾಧಕರೆಲ್ಲಾ ಬುದ್ಧಿಗೇಡಿಯಾದರು.
ತತ್ವ ಸಾಧಕರೆಲ್ಲ ಭಕ್ತಿ ಹೀನರಾದರು.
ಲಿಂಗಸಾಧಕರೆಲ್ಲ ಅಂಗಹೀನರಾದರು.
ಪ್ರಸಾದಸಾಧಕರೆಲ್ಲ ವ್ರತಗೇಡಿಗಳಾದರು.
ಕೊಡಲಚೆನ್ನಸಂಗಯ್ಯಾ ನಿಮ್ಮಲ್ಲಿ ಶರಣ ಬಸವಣ್ಣ
ಜಂಗಮ ಸಾಧಕನಾಗಿ ಸ್ವಯಲಿಂಗವಾದ.
(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-32/ವಚನ ಸಂಖ್ಯೆ-77)

ಈ ಒಂದೇ ಒಂದು ವಚನವೇ ಸಾಕು ಎಲ್ಲಾ ಸಾಧಕರಿಗಿಂತ ಬಸವಣ್ಣ ಸ್ವಯಲಿಂಗಿಯಾಗಿ ಮಹಾನುಭಾವಮೂರ್ತಿ ಎಂಬುದಕ್ಕೆ ಇಂತಹ ಎಲ್ಲ ವಿಚಾರಗಳು ಶಂಕರದಾಸಿಮಯ್ಯನವರಿಗೆ ಗೊತ್ತಿರುವುದರಿಂದಲೇ ಮಹಾನುಭಾವಮೂರ್ತಿ ಸಂಗನಬಸವಣ್ಣ ನಿಜಗುರು, ಶಂಕರದೇವರು, ಜ್ಞಾನಪ್ರಭೆ ಪ್ರಭುದೇವರು ಎಂದು ಉಲ್ಲೇಖಿಸುತ್ತಾ ಧನ್ಯತೆ ಹೊಂದಿದ್ದಾರೆ. ತಮ್ಮ ವಚನಗಳಲ್ಲಿ ಬಸವಣ್ಣ, ಚೆನ್ನಬಸವಣ್ಣ, ಪ್ರಭುದೇವ ಹೀಗೆ ಪ್ರಮುಖ ಶರಣರ ಸ್ಮರಣೆ ಮಾಡಿದ್ದಾರೆ. ಶಂಕರದಾಸಿಮಯ್ಯನವರ ಒಂದೇ ಒಂದು ವಚನ ಸುಧೀರ್ಘವಾದ ಶರಣರ ಎಲ್ಲಾ ತತ್ವ ಸಿದ್ಧಾಂತಗಳ ಮೂರ್ತಿರೂಪವಾಗಿರುವುದನ್ನು ಪೂರಕ ವಚನಗಳನ್ನಾಧರಿಸಿ ವಿಶ್ಲೇಷಿಸುವ ಪ್ರಯತ್ನ ಮಾಡಿದ್ದೇನೆ.

ಶಿವಶರಣರ ಪರಂಪರೆಯಲ್ಲಿ ಶಂಕರದಾಸಿಮಯ್ಯನವರಿಗೂ ಒಂದು ಮಹತ್ವದ ಸ್ಥಾನವಿದೆ. ಶಂಕರದಾಸಿಮಯ್ಯನವರ ಆಧ್ಯಾತ್ಮ ಸಾಧನೆ ಶರಣ ಜೀವನ ಸ್ಮರಣೀಯವಾಗಿದೆ. ಶಿವಶಿಂಪಿ ಲಿಂಗಾಯತ ಸಮಾಜದವರು ಇವತ್ತಿಗೂ ಕಂದಗಲ್ಲಿಗೆ ಬಂದು ಶಂಕರ ದಾಸಿಮಯ್ಯನವರ ಸ್ಮರಣೆ ಮಾಡುತ್ತಾರೆ.

ಡಾ. ಪುಷ್ಪಾವತಿ ಶಲವಡಿಮಠ,
ಕನ್ನಡ ಉಪನ್ಯಾಸಕರು
ಸರ್ಕಾರಿ ಪ್ರಥಮ ದರ್ಜೆ ಕಾಲೇಜು,
ಹಾನಗಲ್ಲ,
ಹಾವೇರಿ ಜಿಲ್ಲೆ.
ಮೋಬೈಲ್‌ ಸಂ. 97407 38330.

  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ:
    • ಮೋಬೈಲ್ ನಂ. 9741 357 132
    • e-Mail ID: info@vachanamandara.in / admin@vachanamandara.in

Leave a Reply