![]()
12 ನೆಯ ಶತಮಾನದ ಕಾಲಘಟ್ಟದಲ್ಲಿನ ಶರಣ ಶರಣೆಯರು ಒಂದೆಡೆ ಸೇರಿ ವಿಶ್ವಮಾನ್ಯವಾದ ವಚನಗಳನ್ನು ಮನುಕುಲಕ್ಕೆ ನೀಡಿದ್ದು ಅದ್ಭುತ ಸಾಧನೆಯೇ ಸರಿ. ವಿಶ್ವಗುರು ಬಸವಣ್ಣನವರ Out of the box thinking ವಿಚಾರಧಾರೆಯ ಫಲಶ್ರುತಿಯಾಗಿ ವಿಶಿಷ್ಟ ರೀತಿಯ ವಚನ ಕ್ರಾಂತಿ ನಡೆಯಿತು. ಆಗಿನ ಕಾಲದ ಸಮಾಜದ ಮೇಲ್ವರ್ಗದವರಿಗಷ್ಟೇ ಮೀಸಲಾಗಿದ್ದ ದೇವಸ್ಥಾನದ ಪ್ರವೇಶವನ್ನು ಅವರು ವಿರೋಧಿಸಿ ಪ್ರತಿಭಟನೆ, ಸತ್ಯಾಗ್ರಹ, ಬಲವಂತ ಮಾಡದೆ ದೇವರನ್ನೇ ಜನರ ಹತ್ತಿರ ಕೊಂಡೊಯ್ದರು. ಇಷ್ಟಲಿಂಗವನ್ನು ದಯಪಾಲಿಸಿ ದೇಹವನ್ನೇ ದೇಗುಲವಾಗಿಸಿದರು.
ಅನುಭವ ಮಂಟಪದಂತಹ ಉದಾತ್ತ ಪರಿಕಲ್ಪನೆಯಿಂದ ಸಮಾಜದ ಎಲ್ಲ ವರ್ಗದ ಕಾಯಕ ಜೀವಿಗಳನ್ನು ಒಂದೆಡೆ ಸೇರಿಸಿದರು. ಇವರ ವಿಚಾರಧಾರೆಯ ಆಕರ್ಷಣೆ, ಪ್ರಖರತೆ ಎಷ್ಟಿತ್ತೆಂದರೆ ದೂರದ ಅಫಘಾನಿಸ್ತಾನದಿಂದ ಮರುಳ ಶಂಕರ ದೇವರು ಬಂದರು, ಕಾಶ್ಮೀರದ ರಾಜ ಮಹಾದೇವ ಭೂಪಾಲ ಮೋಳಿಗೆ ಮಾರಯ್ಯನಾಗಿ ಕಟ್ಟಿಗೆ (ಸೌದೆ) ಮಾರುವ ಕಾಯಕವನ್ನು ಮಾಡುತ್ತಾ ವಚನ ರಚನೆ ಮಾಡಿದರು. ಮೋಳಿಗೆ ಮಹಾದೇವಿ ಕಾಶ್ಮೀರದೇಶದ ಮಹಾದೇವ ಭೂಪಾಲನ ರಾಣಿ ಕಾಯಕ ಮಾಡುತ್ತಾ ವಚನ ರಚನೆ ಮಾಡಿದರು. ಕಾಶಿಯ, ಮೂಲತಃ ಬ್ರಾಹ್ಮಣರಾದ, ಶಿವಲೆಂಕ ಮಂಚಣ್ಣನವರು ಬಂದರು. ಸೌರಾಷ್ಟ್ರದ ಆದಯ್ಯನವರು, ಆಂಧ್ರದ ಕಿನ್ನರಿ ಬೊಮ್ಮಯ್ಯನವರು ಬಂದರು, ಮಾಳವ ದೇಶದಿಂದ ಡೋಹರ ಕಕ್ಕಯ್ಯನವರು, ಕರ್ನಾಟಕ, ಆಂಧ್ರ, ತಮಿಳುನಾಡು ಮುಂತಾದ ಪ್ರದೇಶಗಳಿಂದ ಅನೇಕ ಶರಣ ಶರಣೆಯರು ಸೇರಿಕೊಂಡರು. ಶರಣ ಶರಣೆಯರು ತಮ್ಮ ಅನುಭವದ, ಅನುಭಾವದ ಸೂಳ್ನುಡಿಗಳನ್ನು ಮಂಡಿಸಿ, ಮಥಿಸಿ, ಒರೆಗೆ ಹಚ್ಚಿ ಅಮೃತ ಸಮಾನ ವಚನ ಭಂಡಾರವನ್ನೇ ಮನುಕುಲಕ್ಕೆ ನೀಡಿದರು.
ಶರಣ ಶರಣೆಯರು ಸಂಸಾರಿಗಳಾಗಿದ್ದುಕೊಂಡು ಉತ್ತಮ ಬದುಕು ಬದುಕಿ ತಮಗೆ ಜ್ಞಾತವಾದ ವಿಚಾರಗಳಿಗೆ ಅಕ್ಷರ ರೂಪ ನೀಡಿದರು. ಅವರೆಲ್ಲ ಆಡಿದಂತೆ ಬರೆದರು. ಬರೆದಂತೆ ಬದುಕಿದರು. ಅವರ ಅನೇಕ ವಚನಗಳು ಪ್ರಶೋತ್ತರ ರೂಪದಲ್ಲಿ ಇವೆ. ಅವರೇ ಪ್ರಶ್ನೆಗಳನ್ನು ಹುಟ್ಟು ಹಾಕಿ, ಚರ್ಚಿಸಿ ಕೊನೆಗೆ ಸಮರ್ಪಕ ಉತ್ತರಗಳನ್ನೂ ಕೂಡ ನೀಡಿದ್ದಾರೆ.
ಬಸವ ಪೂರ್ವೋತ್ತರ ಯುಗ ಅಥವಾ ಸಮಕಾಲೀನ ಯುಗದಲ್ಲಿ ರಚಿಸಲ್ಪಟ್ಟ ಮಹಾಕಾವ್ಯಗಳು ಆಯಾಯ ಕವಿಗಳ ಆಶ್ರಯದಾತ ರಾಜರನ್ನು ಹೊಗಳಿದ ಅಥವಾ ರಾಮಾಯಣ ಮಹಾಭಾರತದಂತಹ ಮಹಾಕಾವ್ಯಗಳಲ್ಲಿ ಬರುವ ಪಾತ್ರಗಳನ್ನ ರಾಜರುಗಳಿಗೆ ಹೋಲಿಸಿ ಬರೆದ ಗ್ರಂಥಗಳಾಗಿವೆ. ಆದರೆ ವಚನಗಳು ಅಗಮ್ಯ, ಅಪ್ರಮಾಣ ಶಿವನ ಬಗೆಗೆ ಬರೆದ ಸಾಹಿತ್ಯವಾಗಿವೆ.
ವಚನಗಳು ಒಂದು ರೀತಿಯಲ್ಲಿ ಫ್ರೀ ಹ್ಯಾಂಡ್ ಬರವಣಿಗೆ ಎನ್ನಬಹುದು. ಅಲ್ಲಿ ಛಂದಸ್ಸಿನ ಬಂಧವಿಲ್ಲ, ಹಳೆಗನ್ನಡದ ಹೊರೆಯಿಲ್ಲ, ಕಠಿಣ ಪದಗಳಿಗೆ ಜೋತು ಬಿದ್ದಿಲ್ಲ, ಇತ್ತ ಗದ್ಯವೂ ಅಲ್ಲದ ಪದ್ಯವೂ ಅಲ್ಲ ಅಚ್ಚ ಕನ್ನಡದ ಸಾಮಾನ್ಯ ಜನರಿಂದ ಮೂಡಿ ಬಂದ ಅನುಭವ ಸಾಹಿತ್ಯವಾಗಿವೆ ಎನ್ನಲು ಅಡ್ಡಿಯಿಲ್ಲ.
ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೂ ಸಮಾನ ಸ್ಥಾನಮಾನ ನೀಡಿ ಅವರಿಂದ ವಚನ ಬರವಣಿಗೆ ಮಾಡಿಸಿದ್ದು ವಚನ ಚಳುವಳಿಯ ಹೆಗ್ಗಳಿಕೆ ಎನ್ನಬಹುದು. ಶರಣ ಶರಣೆಯರು ತಮ್ಮ ವಚನಗಳನ್ನು ವಚನಾಂಕಿತದೊಂದಿಗೆ ಪೂರ್ತಿಗೊಳಿಸಿ ತಮ್ಮ ವಿಚಾರ ಧಾರೆಯ ಛಾಪನ್ನು ಮೂಡಿಸಿದ್ದಾರೆ.
ನೂರಾರು ವಚನಕಾರರ ವಚನಾಂಕಿತಗಳು ಬೇರೆ ಇದ್ದರೂ ಅವರು ಏಕ ದೇವೋಪಾಸನೆಯ ಪ್ರತಿರೂಪವಾದ ಶಿವನ ಬಗೆಗೆ ಹೇಳುತ್ತಾರೆ.
ದೌರ್ಭಾಗ್ಯದಿಂದ ಅನೇಕ ವಚನಗಳು ನಾಶ ಹೊಂದಿದ್ದರೂ ನಮಗೆ ಲಭ್ಯವಿರುವ ವಚನಗಳಲ್ಲಿನ ಪದಗಳ ಪ್ರಯೋಗದ ವೈಶಿಷ್ಟ್ಯತೆಯ ಬಗೆಗೆ ನನಗಸಿದ ವಿಚಾರಗಳನ್ನು ಮಂಡಿಸುವ ಪ್ರಯತ್ನ ಮಾಡಿದ್ದೇನೆ.
ವಚನಗಳಿಂದ ಆಯ್ದ ಪದಗಳು ಅಥವಾ ವಾಕ್ಯಗಳು ವಿಶ್ವವಿದ್ಯಾಲಯಗಳ ಲಾಂಛನ/ಧ್ಯೇಯ ವಾಕ್ಯಗಳಾಗಿವೆ ಎನ್ನುವದು ವಚನಗಳ ವೈಶಿಷ್ಟ್ಯತೆ ಎಷ್ಟಿದೆ ಎಂಬುದನ್ನ ತಿಳಿಸುತ್ತದೆ.
ಕರ್ನಾಟಕದಲ್ಲಿ 41 ಸರಕಾರೀ, 28 ಖಾಸಗಿ ಮತ್ತು 11 ಡೀಮ್ಡ್ ವಿಶ್ವವಿದ್ಯಾಲಯಗಳಿವೆ. ಅವುಗಳಲ್ಲಿ ಕೆಳ ಕಂಡ ವಿಶ್ವವಿದ್ಯಾಲಯಗಳಲ್ಲಿ ವಚನದ ಸಾಲುಗಳು ಲಾಂಛನದಲ್ಲಿ ಬಳಕೆಯಾಗಿರುವದು ನಮ್ಮ ವಚನಗಳ ವಿಶೇಷತೆ ಎನ್ನಬಹುದು.
- ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ:
ಉತ್ತರ ಕರ್ನಾಟಕದ ಹೆಗ್ಗಳಿಕೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಧ್ಯೇಯ ವಾಕ್ಯ “ಅರಿವೇ ಗುರು” ಎನ್ನುವದು ಶರಣ ಹಾವಿನಹಾಳ ಕಲ್ಲಯ್ಯನವರ & ಶರಣೆ ಮುಕ್ತಾಯಕ್ಕನವರ ವಚನದಿಂದ ಆರಿಸಿಕೊಂಡದ್ದಾಗಿದೆ.
ಅರಿವೆ ಗುರು, ಆಚಾರವೆ ಶಿಷ್ಯ, ಜ್ಞಾನವೆ ಲಿಂಗ,
ಪರಿಣಾಮವೆ ತಪ, ಸಮತೆಯೆಂಬುದೆ
ಯೋಗದಾಗು ನೋಡಾ.
ಈಸುವನರಿಯದೆ ವೇಷವ ಧರಿಸಿ,
ಲೋಚು ಬೋಳಾದಡೆ
ಮಹಾಲಿಂಗ ಕಲ್ಲೇಶ್ವರದೇವರು ನಗುವರು.
(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-465/ವಚನ ಸಂಖ್ಯೆ-1111)
ತನ್ನ ತಾನರಿದವಂಗೆ ಅರಿವೆ ಗುರು.
ಅರಿವರತು ಮರಹು ನಷ್ಟವಾದಲ್ಲಿ, ದೃಷ್ಟನಷ್ಟವೆ ಗುರು.
ದೃಷ್ಟನಷ್ಟವೆ ಗುರು ತಾನಾದಲ್ಲಿ,
ಮುಟ್ಟಿ ತೋರಿದವರಿಲ್ಲದಡೇನು?
ಸಹಜವ ನೆಲೆಗೊಳಿಸುವ ನಿರ್ಣಯ ನಿಷ್ಪತ್ತಿಯೆ ಗುರು ನೋಡಾ.
ಗುರು ತಾನಾದಡೂ ಗುರುವಿಡಿದಿರಬೇಕು
ಎನ್ನ ಅಜಗಣ್ಣನಂತೆ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-399/ವಚನ ಸಂಖ್ಯೆ-1113)
- ಕರ್ನಾಟಕದ ಸೂರತ್ಕಲ್ಲಿನ ಪ್ರತಿಷ್ಠಿತ ತಂತ್ರಜ್ಞಾನ ಸಂಸ್ಥೆ National Institute of Technology Karnataka ದ ಲಾಂಛನದಲ್ಲಿ,
- ಮೈಸೂರಿನ JSS Science and Technology University ಯ ಲಾಂಛನದಲ್ಲಿ.
- ಮೈಸೂರಿನ JSS Academy of Higher Education and Research ದ ಲಾಂಛನದಲ್ಲಿ.
- ವಿಜಯಪುರದ Bharatiya Lingayat Development Educational Association ದ ಲಾಂಛನದಲ್ಲಿ ‘ಕಾಯವೇ ಕೈಲಾಸ’ ಇದೆ.
ಬಸವಣ್ಣನವರ ವಚನವೊಂದರಲ್ಲಿ ‘ಕಾಯವೇ ಕೈಲಾಸ’ ಎಂದು ಬರುತ್ತದೆ.
ಶರಣ ನಿದ್ರೆಗೈದಡೆ ಜಪ ಕಾಣಿರೊ,
ಶರಣನೆದ್ದು ಕುಳಿತಡೆ ಶಿವರಾತ್ರಿ ಕಾಣಿರೊ,
ಶರಣ ನಡೆದುದೆ ಪಾವನ ಕಾಣಿರೊ,
ಶರಣ ನುಡಿದುದೆ ಶಿವತತ್ವ ಕಾಣಿರೊ,
ಕೂಡಲಸಂಗನ ಶರಣನ ಕಾಯವೆ ಕೈಲಾಸ ಕಾಣಿರೊ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-246/ವಚನ ಸಂಖ್ಯೆ-873)
ಕಾಯಕದಲ್ಲಿ ನಿರತನಾದಡೆ,
ಗುರುದರ್ಶನವಾದಡೂ ಮರೆಯಬೇಕು,
ಲಿಂಗಪೂಜೆಯಾದಡೂ ಮರೆಯಬೇಕು,
ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು.
ಕಾಯಕವೆ ಕೈಲಾಸವಾದ ಕಾರಣ.
ಅಮರೇಶ್ವರಲಿಂಗವಾಯಿತ್ತಾದಡೂ ಕಾಯಕದೊಳಗು.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-436/ವಚನ ಸಂಖ್ಯೆ-1165)
- ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಲಾಂಛನದಲ್ಲಿ ಮಾತೆಂಬುದು ಜ್ಯೋತಿರ್ಲಿಂಗ ಎಂದು ಉಲ್ಲೇಖಿಸಲಾಗಿದೆ.
ಇದನ್ನು ಅಲ್ಲಮಪ್ರಭುಗಳ ಮಾತೆಂಬುದು ಜ್ಯೋತಿರ್ಲಿಂಗ, ಸ್ವರವೆಂಬುದು ಪರತತ್ವ,ತಾಳೋಷ್ಠ ಸಂಪುಟವೆಂಬುದು ನಾದಬಿಂದುಕಳಾತೀತ.
ಗುಹೇಶ್ವರನ ಶರಣರು ನುಡಿದು ಸೂತಕಿಗಳಲ್ಲ ವಚನದಿಂದ ಆರಿಸಿಕೊಂಡದ್ದಾಗಿದೆ.
- ಬೀದರ ವಿಶ್ವವಿದ್ಯಾಲಯದ ಲಾಂಛನದಲ್ಲಿ ಜ್ಞಾನದ ಬಲದಿಂದ ಅಜ್ಞಾನದ ಕೇಡು ಎಂದು ನಮೂದಿಸಲಾಗಿದೆ. ಇದು ವಿಶ್ವಗುರು ಬಸವಣ್ಣನವರ ವಚನದಿಂದ ಆರಿಸಿಕೊಂಡಿದ್ದು.
ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ,
ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯಾ,
ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯಾ,
ಪರುಷದ ಬಲದಿಂದ ಅವಲೋಹದ ಕೇಡು ನೋಡಯ್ಯಾ,
ಕೂಡಲಸಂಗನ ಶರಣರ ಅನುಭಾವದ ಬಲದಿಂದ
ಎನ್ನ ಭವದ ಕೇಡು ನೋಡಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-235/ವಚನ ಸಂಖ್ಯೆ-842)
ಸಾಮಾನ್ಯ ಅರ್ಥದ ಕೆಲ ಪದಗಳನ್ನು ಶರಣರು ತಮ್ಮ ವಚನಗಳಲ್ಲಿ ಬಳಸಿ ಅವಕ್ಕೊಂದು ಉದಾತ ಅರ್ಥ ನೀಡಿದ್ದಾರೆ. ಒಂದು ಉದಾಹರಣೆ ನೀಡಬೇಕೆಂದರೆ ಅಲ್ಲಮಪ್ರಭುಗಳ ಈ ವಚನ ಗಮನಿಸೋಣ. ಬಯಲು ಎನ್ನುವ ಒಂದು ಪದವನ್ನು 14 ಬಾರಿ ಬಳಸಿ ಪಾರಮಾರ್ಥದ ವಿವರಣೆ ನೀಡಿದ್ದಾರೆ.
ಬಯಲು ಬಯಲನೆ ಬಿತ್ತಿ ಬಯಲು ಬಯಲನೆ ಬೆಳೆದು
ಬಯಲು ಬಯಲಾಗಿ ಬಯಲಾಯಿತ್ತಯ್ಯಾ.
ಬಯಲ ಜೀವನ ಬಯಲ ಭಾವನೆ,
ಬಯಲು ಬಯಲಾಗಿ ಬಯಲಾಯಿತ್ತಯ್ಯಾ.
ನಿಮ್ಮ ಪೂಜಿಸಿದವರು ಮುನ್ನವೆ ಬಯಲಾದರು
ನಾ ನಿಮ್ಮ ನಂಬಿ ಬಯಲಾದೆ ಗುಹೇಶ್ವರಾ.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-197/ವಚನ ಸಂಖ್ಯೆ-639)
ಗದುಗಿನ ತೋಂಟದಾರ್ಯಮಠದ ಪೂಜ್ಯರಾದ ಶ್ರೀ. ಡಾ ಸಿದ್ದರಾಮ ಸ್ವಾಮೀಜಿಗಳು ಹೇಳುವ ಹಾಗೆ:
“ಬಸವಾದಿ ಶಿವಶರಣರು ಪ್ರತಿಪಾದಿಸಿದ ಲಿಂಗಾಯತ ದರ್ಶನದಲ್ಲಿ ಬಯಲು, ನಿರ್ವಯಲು, ಬರಿಬಯಲು, ಬಚ್ಚಬರಿಯ ಬಯಲು ಮುಂತಾದ ಪಾರಿಭಾಷಿಕ ಪದಗಳು ವಿಶೇಷ ಗಮನ ಸೆಳೆಯುತ್ತವೆ. ಶೂನ್ಯ, ನಿಶ್ಶೂನ್ಯ, ಸರ್ವಶೂನ್ಯ ನಿರಾಲಂಬ ಮುಂತಾದ ಪರ್ಯಾಯ ಪದಗಳಿಂದ ಇವು ಗುರುತಿಸಲ್ಪಡುವವು. ಶರಣರು ಪರವಸ್ತುವನ್ನು ಬಯಲು ಎಂದು ಹೆಸರಿಸಿದ್ದಾರೆ. ಅವರ ದೃಷ್ಟಿಯಲ್ಲಿ ಪರವಸ್ತು ಕಾರ್ಯರೂಪವಾದ ವಿಶ್ವ ಹಾಗು ಕಾರಣ ರೂಪವಾದ ಮಹಾಲಿಂಗ ಇವೆರಡಕ್ಕೂ ಮೂಲವಾದುದು. ಅಂದರೆ ಅದು ಕಾರ್ಯವೂ ಅಲ್ಲ, ಕಾರಣವೂ ಅಲ್ಲ. ಅದು ಏನೂ ಅಲ್ಲದ್ದರಿಂದ ಮತ್ತು ಅದರೊಳಗೆ ಏನೂ ಇಲ್ಲದ್ದರಿಂದ ಅದು ಬರಿಬಯಲು. ವ್ಯಕ್ತಿಯು ಅಧ್ಯಾತ್ಮ ಸಾಧನೆಯ ಮೂಲಕ ಇಂತಹ ಬಯಲಿನಲ್ಲಿ (ಪರವಸ್ತು) ತನ್ನನ್ನು ಸಂಪೂರ್ಣವಾಗಿ ಲೀನಗೊಳಿಸಿ ಅದರಲ್ಲಿ ಸಮರಸವಾಗುವುದಕ್ಕೆ ಬಯಲಿನಲ್ಲಿ ಬಯಲಾಗುವುದು ಎನ್ನುವರು.’
ಕೆಳಗಿನ ಮೂರು ವಚನಗಳನ್ನು ನಾವು ಉದಾಹರಣೆಯಾಗಿ ತೆಗೆದುಕೊಳ್ಳೋಣ ಮತ್ತು ದೇವರ ನಿಲುವಿನ ಬಗ್ಗೆ ಏನು ಹೇಳಿದ್ದಾರೆ ನೋಡೋಣ.
ನೆಲದ ಮರೆಯ ನಿಧಾನದಂತೆ, ಮುಗಿಲ ಮರೆಯಲಡಗಿದ ಮಿಂಚಿನಂತೆ
ಬಯಲ ಮರೆಯಲಡಗಿದ ಮರೀಚನಂತೆ
ಕಂಗಳ ಮರೆಯಲಡಗಿದ ಬೆಳಗಿನಂತೆ_ಗುಹೇಶ್ವರಾ ನಿಮ್ಮ ನಿಲವು!
(ಸಮಗ್ರ ವಚನ ಸಂಪುಟ: ಒಂದು-2016/ಪುಟ ಸಂಖ್ಯೆ-138/ವಚನ ಸಂಖ್ಯೆ-4)
ನೆಲದ ಮರೆಯ ನಿಧಾನದಂತೆ,
ಫಲದ ಮರೆಯ ರುಚಿಯಂತೆ,
ಶಿಲೆಯ ಮರೆಯ ಹೇಮದಂತೆ,
ತಿಲದ ಮರೆಯ ತೈಲದಂತೆ,
ಮರದ ಮರೆಯ ತೇಜದಂತೆ,
ಭಾವದ ಮರೆಯ ಬ್ರಹ್ಮವಾಗಿಪ್ಪ
ಚೆನ್ನಮಲ್ಲಿಕಾರ್ಜುನನ ನಿಲವನರಿಯಬಾರದು.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-93/ವಚನ ಸಂಖ್ಯೆ-263)
ಕಲ್ಲೊಳಗೆ ಹೊನ್ನುಂಟು, ಮರದೊಳಗೆ ಅಗ್ನಿಯುಂಟು,
ಹಾಲೊಳಗೆ ತುಪ್ಪವುಂಟು, ಅಂತರಾಮಿಯಲ್ಲಿ ಶಿವನಿಹನು.
ಇದೇನು ಕಾರಣ ಕತ್ತಲೆ? ಕಾಣಬಾರದು,
ತೋರಬಲ್ಲ ಗುರು ಸುಳಿಯನು,
ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-334/ವಚನ ಸಂಖ್ಯೆ-1137)
ನಾವು ಸಾಮಾನ್ಯವಾಗಿ ಬಳಸುವ ಚೇಷ್ಟೆ (ನಗೆಚಾಟಿಕೆ, ತಿಳಿಹಾಸ್ಯ ) ಎನ್ನುವ ಪದವನ್ನು ಶರಣರು ಯಾವ ಅರ್ಥದಲ್ಲಿ ಬಳಸಿ ಆಧ್ಯಾತ್ಮದ ಮಹತಿ ಮೆರೆದಿದ್ದಾರೆ ನೋಡಿ.
ಲೋಕದ ಚೇಷ್ಟೆಗೆ ರವಿ ಬೀಜವಾದಂತೆ,
ಕರಣಂಗಳ ಚೇಷ್ಟೆಗೆ ಮನವೇ ಬೀಜ.
ಎನಗುಳ್ಳುದೊಂದು ಮನ.
ಆ ಮನ ನಿಮ್ಮಲ್ಲಿ ಸಿಲುಕಿದ ಬಳಿಕ
ಎನಗೆ ಭವವುಂಟೆ ಚೆನ್ನಮಲ್ಲಿಕಾರ್ಜುನಾ?
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-334/ವಚನ ಸಂಖ್ಯೆ-1137)
ಸೂರ್ಯ ಇಲ್ಲದೆ ಈ ಜಗತ್ತನ್ನು ಕಲ್ಪಿಸಲಿಕ್ಕಾಗದು. ಸೂರ್ಯ ಇದ್ದಾನೆಂದೇ ಸಸ್ಯಲೋಕ, ಪ್ರಾಣಿಲೋಕ ಮತ್ತು ಪಕ್ಷಿಲೋಕಗಳು ಜೀವಂತವಾಗಿವೆ. ಜಗತ್ತಿನ ಎಲ್ಲ ಪ್ರಕ್ರಿಯೆಗಳಿಗೆ ಸೂರ್ಯನೇ ಮೂಲಕಾರಣ ಎಂಬುದು ವೈಜ್ಞಾನಿಕ ಸತ್ಯ. ಪ್ರತಿಯೊಂದು ಜೀವಿಯ ಬದುಕಿಗೂ ಸೂರ್ಯ ಬೇಕೇಬೇಕು. ಅದೇ ರೀತಿ ಕರಣಗಳ ವರ್ತನೆಗೆ ಮನವೇ ಮೂಲಕಾರಣವಾಗುತ್ತದೆ.
ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧಗಳ ಜ್ಞಾನ ಕೊಡುವ ಕಿವಿ, ಚರ್ಮ, ಕಣ್ಣು, ನಾಲಗೆ ಮತ್ತು ಮೂಗು ಎಂಬ ಪಂಚಜ್ಞಾನೇಂದ್ರಿಯಗಳೇ ಪಂಚಕರಣೇಂದ್ರಿಯಗಳು. ಮನಸ್ಸು, ಬುದ್ಧಿ, ಚಿತ್ತ ಮತ್ತು ಅಹಂಕಾರ ಎಂಬ ಈ ನಾಲ್ಕು ಅಂತರಿಂದ್ರಿಯಗಳಿಗೆ ಅಂತಃಕರಣ ಚತುಷ್ಟಯ ಎನ್ನುತ್ತಾರೆ. ಕಾಯ, ವಾಕ್ಕು (ನುಡಿ) ಮತ್ತು ಮನಸ್ಸಿಗೆ ತ್ರಿಕರಣಗಳೆನ್ನುತ್ತಾರೆ. ಕಾಯವಿಕಾರ ಮತ್ತು ಮನೋವಿಕಾರಗಳಿಗೆ ಕರಣೇಂದ್ರಿಯಗಳೇ ಕಾರಣವಾಗಿವೆ. ಇದು ಮನೋವೈಜ್ಞಾನಿಕ ಸತ್ಯ. ಕರಣೇಂದ್ರಿಯಗಳನ್ನೆಲ್ಲ ಹತೋಟಿಯಲ್ಲಿಡದೆ ಮನಸ್ಸು ಪರಿಶುದ್ಧವಾಗದು. ಕರಣೇಂದ್ರಿಯಗಳನ್ನು ಜಾಗೃತಗೊಳಿಸದಂತೆ ಮನಸ್ಸನ್ನು ನಿಯಂತ್ರಿಸಬೇಕು. ಮನಸ್ಸನ್ನು ದೇವರಲ್ಲಿ ಸಿಲುಕಿಸಿದಾಗ ಕರಣವೃತ್ತಿಗಳು ಅಡಗುವವು. ಹಾಗೆ ಮನಸ್ಸನ್ನು ಸಿಲುಕಿಸುವುದರ ಮೂಲಕ ಕರಣಗಳನ್ನೆಲ್ಲ ಲಿಂಗಾರ್ಪಿತ ಮಾಡಿದಾಗ ಮನಸ್ಸು ನಿರಾಳವಾಗುವುದು. ಹೀಗೆ ದೇವರಿಗೆ ಮನವನ್ನು ಅರ್ಪಿಸುವುದಕ್ಕೆ ಕರಣಾರ್ಪಣ ಎನ್ನುತ್ತಾರೆ. ಮನಸ್ಸನ್ನು ದೇವರಲ್ಲಿ ಸಿಲುಕಿಸಿದ ಬಳಿಕ ಭವವಿಲ್ಲ ಎಂದು ಅಕ್ಕ ಹೇಳುತ್ತಾಳೆ.
ಇದೆ ವಿಚಾರಧಾರೆಯ ಜಾಡಿನಲ್ಲಿ ಕಾಶಿಯಿಂದ ಬಂದು ಕಲ್ಯಾಣದಲ್ಲಿ ಶರಣನಾದ ಶಿವಲೆಂಕ ಮಂಚಣ್ಣನವರು ಏನು ಹೇಳುತ್ತಾರೆ ನೋಡೋಣ
ಸಕಲ ಗಂಧಕ್ಕೆ ವಾಯುವೆ ಬೀಜ,
ಸಕಲ ಉತ್ಪತ್ಯಕ್ಕೆ ಅಪ್ಪುವೆ ಬೀಜ.
ಸಕಲ ಪ್ರಕೃತಿಗೆ ಜೀವವೆ ಬೀಜ.
ಇಂತೀ ಭೇದವನರಿತಲ್ಲಿ,
ಆತ್ಮನ ವಿವರ ಹೆರೆಹಿಂಗಿದಲ್ಲದೆ, ನಿಜತತ್ವ ಪರಮನಲ್ಲ.
ಪರಮ ಪರತತ್ವವ ಕೂಡಿ ಬೆರಸಿದಲ್ಲಿ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಸ್ವಯಂಭುವಾದ.
(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-88/ವಚನ ಸಂಖ್ಯೆ-203)
ಎಲ್ಲ ರೀತಿಯ ಪರಿಮಳ ಅಥವಾ ಸುಗಂಧ ಅಥವಾ ದುರ್ಗಂಧ ಹರಡಲು ಮತ್ತು ಅದರ ಮೂಲಕ್ಕೆ ವಾಯು (ಗಾಳಿ) ಹೇಗೆ ಬೀಜಪ್ರಾಯವೋ (ಕಾರಣವೋ), ಹಾಗೆಯೇ ಸೃಷ್ಟಿಯ ಉತ್ಪತ್ತಿಗೆ ನೀರು (ಅಪ್ಪು), ಪ್ರಕೃತಿಗೆ ಜೀವವೇ ಕಾರಣವಾಗಿದೆ. ಈ ಸೃಷ್ಟಿಯ ಭೇದ-ಭಾವಗಳನ್ನು ಮತ್ತು ತತ್ವಗಳನ್ನು ಅರಿತು, ಪರಮಾತ್ಮನ ಸ್ವರೂಪದೊಂದಿಗೆ ನಮ್ಮನ್ನು ಬೆರೆಸಿದಾಗ ನಿಜವಾದ ಜ್ಞಾನ ಪ್ರಾಪ್ತಿಯಾಗುತ್ತದೆ ಎಂಬುದನ್ನು ಈ ವಚನವು ತಿಳಿಸುತ್ತದೆ.
ನಮ್ಮ ಸುತ್ತುಮುತ್ತಲು ಜರುಗುವ ಆಗುಹೋಗುಗಳ ಬಗ್ಗೆ ಕುತೂಹಲ ವಹಿಸಿ, ಗಮನಿಸಿ ವಿಶ್ಲೇಷಿಸಿ ಅಧ್ಯಾತ್ಮದ ಹರಹನ್ನು ಹೇಗೆ ಹರಡಿದ್ದರೆ ಎಂದು ನೋಡುವದಾದರೆ.
ಮುತ್ತು ನೀರಲಾಯಿತ್ತು,
ವಾರಿಕಲ್ಲು ನೀರಲಾಯಿತ್ತು.
ಉಪ್ಪು ನೀರಲಾಯಿತ್ತು.
ಉಪ್ಪು ಕರಗಿತ್ತು, ವಾರಿಕಲ್ಲು ಕರಗಿತ್ತು.
ಮುತ್ತು ಕರಗಿದುದನಾರೂ ಕಂಡವರಿಲ್ಲ.
ಈ ಸಂಸಾರಿಮಾನವರು ಲಿಂಗವಮುಟ್ಟಿ
ಭವಭಾರಿಗಳಾದರು.
ನಾ ನಿಮ್ಮ ಮುಟ್ಟಿ ಕರಿಗೊಂಡೆನಯ್ಯಾ
ಚೆನ್ನಮಲ್ಲಿಕಾರ್ಜುನಯ್ಯಾ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-118/ವಚನ ಸಂಖ್ಯೆ-337)
ಇಲ್ಲಿ ಅಕ್ಕಮಹಾದೇವಿ ನೀರಿನಲ್ಲಿ ಹುಟ್ಟುವ ವಸ್ತುಗಳನ್ನು ಅರಿವಿಗೆ ಹೋಲಿಸಿ ಹೇಳುತ್ತಾರೆ.
ಮುತ್ತು, ವಾರಿಕಲ್ಲು(ಆನೇಕಲ್ಲು) ಮತ್ತು ಮುತ್ತು, ಇವು ಮೂರು ಕೂಡ ನೀರಿನಲ್ಲೇ ರೂಪುಗೊಂಡಿದ್ದು. ಆದರೆ ವಾರಿಕಲ್ಲು ಮತ್ತು ಉಪ್ಪು ನೀರಿನಲ್ಲಿ ಕರಗಿ ಹೋಗುತ್ತದೆ. ಆದರೆ ಮುತ್ತು ಮಾತ್ರ ಕರಗುವುದಿಲ್ಲ. ಅಂದರೆ ಮುತ್ತು ಅರಿವಿನ ಸಂಕೇತ. ಅದರ ಶುಭ್ರತೆ ಮತ್ತು ಗಟ್ಟಿತನವನ್ನು ಇಲ್ಲಿ ಅರಿವು ಎಂದು ಹೇಳಬಹುದು. “ಅರಿವೇ ಗುರು” ಎಂದು ಬಸವಣ್ಣನವರು ಹೇಳಿದಂತೆ ಉಪ್ಪು ವಾರಿಕಲ್ಲಿನಂತೆ ಈ ಸಂಸಾರಿಗಳು ಕರಗಿ ಹೋದರು. ನಾನು ನಿಮ್ಮನ್ನು ಮುಟ್ಟಿ ಕರಿಗೊಂಡೆನು ಎಂದು ಚೆನ್ನಮಲ್ಲಿಕಾರ್ಜುನನಲ್ಲಿ ಹೇಳಿಕೊಳ್ಳುತ್ತಾಳೆ. ಅಕ್ಕಮಹಾದೇವಿಯು ಮುತ್ತಿನಂತೆ ಅರಿವಿನ ಸಂಕೇತ. ಆದ್ದರಿಂದಲೇ ಅವರು ಇಂದಿಗೂ ಅವಳ ವಚನಗಳ ಮೂಲಕ ಗಟ್ಟಿಯಾಗಿ ನೆಲೆ ನಿಂತಿರುವುದು.
ಮುತ್ತು ನೀರೊಳಗೆ ಹುಟ್ಟಿ ಮರಳಿ ನೀರಾಗದಂತೆ,
ತಿಳಿಯ ಕಾಸಿದ ತುಪ್ಪ ಕ್ಷೀರವಾಗದಂತೆ,
ತೊಟ್ಟುಬಿಟ್ಟ ಹಣ್ಣು ಹೂಮಿಡಿಯಾಗದಂತೆ,
ಸಂಸಾರದಲ್ಲಿ ಹುಟ್ಟಿ ಆದ ಹೊದ್ದದೆ,
ಸ್ವಯಂಪ್ರಕಾಶ ಲಿಂಗದ ಬೆಳಗಿನಲ್ಲಿ ಬೆಳೆದು,
ತಲ್ಲೀಯವಾಗಿರ್ದರಯ್ಯಾ
ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣರು.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-394/ವಚನ ಸಂಖ್ಯೆ-1068)
ಮುತ್ತು ಚಿಪ್ಪಿನೊಳಗಿನ ನೀರಿನ ಹನಿಯಿಂದಲೇ ಸೃಷ್ಟಿಯಾದರೂ, ಒಮ್ಮೆ ಮುತ್ತಾದ ಮೇಲೆ ಅದು ಮತ್ತೆ ಕರಗಿ ನೀರಾಗಲು ಸಾಧ್ಯವಿಲ್ಲ. ಅದು ತನ್ನದೇ ಆದ ಶ್ರೇಷ್ಠ ಮೌಲ್ಯವನ್ನು ಪಡೆದುಕೊಳ್ಳುತ್ತದೆ. ಹಾಲು ಮೊಸರಾಗಿ, ಮೊಸರು ಮಜ್ಜಿಗೆಯಾಗಿ, ಕಡಗೋಲಿನಿಂದ ಕಡೆದಾಗ ಬೆಣ್ಣೆಯಾಗಿ, ಕೊನೆಗೆ ಕಾಯಿಸಿದಾಗ ತುಪ್ಪವಾಗುತ್ತದೆ. ಒಮ್ಮೆ ತುಪ್ಪವಾದ ಮೇಲೆ ಅದು ಎಷ್ಟೇ ಪ್ರಯತ್ನಿಸಿದರೂ ಮತ್ತೆ ಹಾಲಾಗಲು (ಕ್ಷೀರ) ಸಾಧ್ಯವಿಲ್ಲ. ಇದು ಪರಿಪೂರ್ಣ ಬದಲಾವಣೆಯ ಸಂಕೇತ. ಮರದಲ್ಲಿ ಚೆನ್ನಾಗಿ ಪಕ್ವವಾಗಿ ಕೆಳಗೆ ಬಿದ್ದ ಹಣ್ಣು, ಮತ್ತೆ ಮರಳಿ ಹೋಗಿ ತೊಟ್ಟು ಸೇರಿಕೊಂಡು ಹೂವು ಅಥವಾ ಕಾಯಾಗಲು ಸಾಧ್ಯವೇ ಇಲ್ಲ. ನಾವೆಲ್ಲರೂ ಈ ಸಂಸಾರ (ಲೌಕಿಕ ಪ್ರಪಂಚ) ಎಂಬ ಮಾಯೆಯಲ್ಲಿಯೇ ಹುಟ್ಟಿದ್ದೇವೆ. ಆದರೆ ಶರಣರು ಈ ಪ್ರಪಂಚದಲ್ಲಿದ್ದರೂ ಇಲ್ಲಿನ ಆಸೆ, ಆಮಿಷ, ಕೋಪ, ಮತ್ಸರಗಳಿಗೆ ಒಳಗಾಗುವುದಿಲ್ಲ. ಅವರು ದೇವರ ಅಥವಾ ಜ್ಞಾನದ ಬೆಳಕಿನಲ್ಲಿ ಮುಳುಗಿರುತ್ತಾರೆ. ಮುತ್ತು, ತುಪ್ಪ ಮತ್ತು ಹಣ್ಣಿನಂತೆ ಅವರು ಒಮ್ಮೆ ಆಧ್ಯಾತ್ಮಿಕ ಜ್ಞಾನವನ್ನು ಪಡೆದ ಮೇಲೆ, ಮತ್ತೆ ಲೌಕಿಕ ಜಗತ್ತಿನ ಸಾಮಾನ್ಯ ಮನುಷ್ಯರಂತೆ ಬದಲಾಗುವುದಿಲ್ಲ. ಅವರು ಸದಾ ದೈವತ್ವದಲ್ಲಿ ಲೀನವಾಗಿರುತ್ತಾರೆ.
ವೀರ ವಿರಾಗಿಣಿ ಅಕ್ಕನವರು ಸಂಗ ಎನ್ನುವ ಸಾಮಾನ್ಯ ಪದ ಬಳಸಿ ವಿವಿಧಾರ್ಥಗಳನ್ನು ನೀಡಿ ಆಧ್ಯಾತ್ಮದ ಅನುಭೂತಿ ನೀಡಿದ ಪರಿ ಅಪರಿಮಿತ ಎಂದು ನಾನು ಭಾವಿಸುತ್ತೇನೆ.
ಸಂಗದಿಂದಲ್ಲದೆ ಅಗ್ನಿ ಹುಟ್ಟದು,
ಸಂಗದಿಂದಲ್ಲದೆ ಬೀಜ ಮೊಳೆದೋರದು,
ಸಂಗದಿಂದಲ್ಲದೆ ಹೂವಾಗದು,
ಸಂಗದಿಂದಲ್ಲದೆ ಸರ್ವಮುಖದೋರದು.
ಚೆನ್ನಮಲ್ಲಿಕಾರ್ಜುನಯ್ಯಾ
ನಿಮ್ಮ ಶರಣರ ಅನುಭಾವ ಸಂಗದಿಂದಾನು
ಪರಮಸುಖಿಯಾದೆನಯ್ಯಾ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-134/ವಚನ ಸಂಖ್ಯೆ-377)
ಈ ಜಗತ್ತಿನಲ್ಲಿ ಯಾವುದೇ ಕಾರ್ಯವಾಗಬೇಕಾದರೂ ಅದಕ್ಕೆ ಸಂಗ ಅತ್ಯವಶ್ಯ. ಅಗ್ನಿಯುಂಟಾಗಲಿಕ್ಕೆ ಎರಡು ಕಲ್ಲುಗಳ, ಎರಡು ಒಣ ಕಟ್ಟಿಗೆಗಳು/ಕೊಂಬೆಗಳು ಸಂಗ/ ಸಂಪರ್ಕ ಅನಿವಾರ್ಯ. ಪರಸ್ಪರ ಘರ್ಷಣೆಯಿಂದ ಅಗ್ನಿ ಹುಟ್ಟುತ್ತದೆ. ಬೀಜ ತನ್ನಿಂದ ತಾನೇ ಬೆಳೆದು ವೃಕ್ಷವಾಗಲಿಕ್ಕೆ ಸಾಧ್ಯವಿಲ್ಲ. ಅದಕ್ಕೆ ಭೂಮಿಯ ಮಣ್ಣಿನ ಸಂಗ ಅನಿವಾರ್ಯ. ಬೀಜ ಕೇಳುವುದು ಮಣ್ಣಿನ ಸಂಗವನ್ನು. ಅದರ ಫಲವಾಗಿ ಬೀಜ ಮೊಳಕೆವೊಡೆದು ಬೇರೂರಿ ಗಿಡವಾಗಿ ಮರವಾಗಿ ಮೊಗ್ಗರಳಿ, ಕಾಯಾಗಿ ಹಣ್ಣು ನೀಡುತ್ತದೆ. ಒಂದು ಗಿಡದಲ್ಲಿ ಹೂವರಳಲು ಅದರ ಮಣ್ಣಿನೊಂದಿಗೆ ನೀರಿನೊಂದಿಗೆ ಸಂಗವೂ (ಪರಾಗಸ್ಪರ್ಶ) ಅಷ್ಟೇ ಮುಖ್ಯಪಾತ್ರ ವಹಿಸುತ್ತದೆ. ಅಷ್ಟೇ ಅಲ್ಲ ಸಂಗವಿಲ್ಲದಿದ್ದರೆ ಏನೂ ಸಾಧ್ಯವಿಲ್ಲ. ಗೆಳೆತನಕ್ಕೂ, ದಾಂಪತ್ಯಕ್ಕೊ, ತಿಳಿದವರ ಸಂಪರ್ಕಕ್ಕೂ ಸಂಗ ಮುಖ್ಯ ಆದ್ದರಿಂದ ಅಕ್ಕ ಹೇಳುತ್ತಾರೆ ಸಂಗವಿಲ್ಲದೇ ಇದ್ದರೆ ಸರ್ವ ಸುಖ ಅನುಭವಸಲಿಕ್ಕೆ ಸಾಧ್ಯವಿಲ್ಲ ಎಂದು. ನಿಮ್ಮ ಮಹಾ ಅನುಭಾವಿಗಳ ಸಂಗದಿಂದ ನಾನು ಕೇವಲ ಸುಖಿಯಲ್ಲ ಪರಮಸುಖಿಯಾದೆನಯ್ಯ ಎನ್ನುತ್ತಾರೆ.
ಶರಣ-ಶರಣೆಯರು ಅಂದಿನ ಕಾಲದ ಸಾಮಾನ್ಯ ಕನ್ನಡ ಪದಗಳನ್ನೇ ವಚನಗಳಲ್ಲಿ ಬಳಸಿದ್ದರೂ ಅವುಗಳ ಒಳಾರ್ಥಗಳು ಸೋಜಿಗ ಹುಟ್ಟಿಸುತ್ತವೆ. ಸರಿಯಾಗಿ ಅರ್ಥೈಸದಿದ್ದಲ್ಲಿ ಅಪಾರ್ಥಕ್ಕೆಡೆ ಮಾಡುವದು ನಿಶ್ಚಿತ. ಕೆಲ ಉದಾಹರಣೆ ನೀಡಬಹುದಾದರೆ:
ಬಸವಣ್ಣನವರ ವಚನದಲ್ಲಿ ಹೇಳುವಂತೆ ಹಾವು ತಿಂದವರ ನುಡಿಸಬಹುದು. ಇಲ್ಲಿ ಹಾವು ಯಾರಿಗೆ ಕಡಿದಿರುತ್ತದೋ ಅಥವಾ ಕಚ್ಚಿರುತ್ತದೋ ಅಂಥವರಿಗೆ ಎಂದು ಅರ್ಥೈಸಬೇಕು. ಸಿದ್ಧರಾಮೇಶ್ವರರು ಹೇಳುವ ಕಪಿಲಸಿದ್ಧ ಮಲ್ಲಿಕಾರ್ಜುನನ ನುಂಗಿದವರೆಲ್ಲ ಅಂದರೆ ಅವರನ್ನು ಪೂಜಿಸಿದವರು ಸಾಕ್ಷಾತ್ಕಾರ ಮಾಡಿಕೊಂಡವರು ಎಂದು ಅರ್ಥೈಸಬೇಕು. ಅಲ್ಲಮ ಪ್ರಭುಗಳಾದಿಯಾಗಿ ಶರಣ ಶರಣೆಯರು ಬರೆದಿರುವ ಬೆಡಗಿನ ವಚನಗಳದ್ದೇ ಒಂದು ತೂಕ. ಒಂದೆರಡು ವಚನಗಳನ್ನು ಉದಾಹರಿಸುವದಾದರೆ, ತಳವಾರ ಕಾಮಿದೇವಯ್ಯನವರ ಒಂದು ವಚನ.
ಮೂರ ಮುದುಡಿಸಿ ಆರನಡಗಿಸಿ
ಎಂಟ ಗಂಟಿಕ್ಕಿ ನಾಲ್ಕು ಸೆರಗ ಹಾಸಿ
ಎರಡರಲ್ಲಿ ಬಂಧಿಸಿ ಒಂದುಗೂಡಿ
ಮಂಡೆಯ ಮೇಲೆತ್ತಿದವಂಗೆ
ಮತ್ತೆ ಅವು ಹಿಂಗುವ ಠಾವಿಲ್ಲ,
ಕಾಮಹರಪ್ರಿಯ ರಾಮನಾಥಾ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-134/ವಚನ ಸಂಖ್ಯೆ-377)
ತ್ರಿಗುಣಗಳನ್ನು ಮೀರಿ, ಅರಿಷಡ್ವರ್ಗಗಳನ್ನು ನಶಿಸಿ, ಅಷ್ಟಮದಗಳನ್ನು ಮೆಟ್ಟಿ, ನಾಲ್ಕು ಅಂತಃಕರಣಂಗಳನ್ನ ಒಂದುಗೂಡಿಸಿ ಕುಂಡಲಿನಿ ಶಕ್ತಿಯನ್ನು ಬ್ರಹ್ಮರಂಧ್ರ ಸ್ಥಾನಕ್ಕೇರಿಸಿದವನಿಗೆ ಮತ್ತೆ ಇವು ಯಾವುಗಳೂ ಸಾಧಕನನ್ನು ಭಾಧಿಸಲಾರವು ಎಂಬುದು ತಾತ್ಪರ್ಯ.
ನೀರೊಳಗಣ ಜ್ಯೋತಿ ಮೇರುವ ನುಂಗಿತ್ತು.
ದೂರ[ದ] ಧಾತು ಸಾರಾಯದೊಳಡಗಿತ್ತು.
ಪುರದೊಳಗೈವರ ಶಿರವರಿದು,
ಪರಿಮಳದೋಕುಳಿಯನಾಡಿತ್ತ ಕಂಡೆ.
ಸಾರಿರ್ದ ಬ್ರಹ್ಮನ ಓಲಗ ಹರೆಯಿತ್ತು,
ಘೋರ ರುದ್ರನ ದಳ ಮುರಿಯಿತ್ತು_ಗುಹೇಶ್ವರಾ.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-83/ವಚನ ಸಂಖ್ಯೆ-235)
‘ನೀರು’ ಎಂದರೆ ನಮ್ಮ ದೇಹದಲ್ಲಿರುವ ಮೂಲಾಧಾರ ಚಕ್ರ (ಜಲ ತತ್ವ) ಅಥವಾ ಸಂಸಾರದ ಮಾಯೆ. ‘ಜ್ಯೋತಿ’ ಎಂದರೆ ಸುಪ್ತವಾಗಿರುವ ಜ್ಞಾನಾಗ್ನಿ ಅಥವಾ ಕುಂಡಲಿನಿ ಶಕ್ತಿ. ‘ಮೇರು’ ಎಂದರೆ ಬೆಟ್ಟದಂತಿರುವ ಮನುಷ್ಯನ ಅಹಂಕಾರ ಮತ್ತು ಅಜ್ಞಾನ. ದೇಹದ ಅಂತರಂಗದಲ್ಲಿ ಜ್ಞಾನದ ಜ್ಯೋತಿ (ಕುಂಡಲಿನಿ) ಜಾಗೃತಗೊಂಡಾಗ, ಅದು ಬೆಟ್ಟದಷ್ಟಿರುವ ಅಹಂಕಾರ ಮತ್ತು ಅಜ್ಞಾನವನ್ನು ಸಂಪೂರ್ಣವಾಗಿ ಸುಟ್ಟು ಭಸ್ಮ ಮಾಡುತ್ತದೆ (ನುಂಗಿಬಿಡುತ್ತದೆ). ‘ದೂರದ ಧಾತು’ ಎಂದರೆ ಲೌಕಿಕ ಜಗತ್ತಿನಲ್ಲಿ ನಮಗೆ ಸಿಗದ, ಬಹಳ ದೂರವೆನಿಸುವ ಪರಮಾತ್ಮ ತತ್ವ ಅಥವಾ ಪರಮ ಜ್ಞಾನ. ‘ಸಾರಾಯ’ ಎಂದರೆ ಶುದ್ಧವಾದ ಅಮೃತ ಅಥವಾ ಆತ್ಮದ ಸಾರ. ಎಲ್ಲೋ ದೂರದ ಆಕಾಶದಲ್ಲಿದ್ದಾನೆ ಎಂದುಕೊಳ್ಳುವ ಭಗವಂತ ಅಥವಾ ಪರಮ ತತ್ವವು, ಬೇರೆಲ್ಲೂ ಇಲ್ಲ; ಸಾಧಕನಿಗೆ ತನ್ನ ಸ್ವಂತ ಆತ್ಮದ ಸಾರದಲ್ಲಿಯೇ (ಅಂತರಂಗದಲ್ಲಿಯೇ) ಅದು ಅಡಗಿರುವುದು ಗೋಚರವಾಗುತ್ತದೆ. ‘ಪುರ’ ಎಂದರೆ ನಮ್ಮ ಮನುಷ್ಯ ದೇಹ. ‘ಐವರು’ ಎಂದರೆ ನಮ್ಮನ್ನು ಸದಾ ಲೌಕಿಕ ಜಗತ್ತಿಗೆ ಎಳೆಯುವ ಪಂಚೇಂದ್ರಿಯಗಳು (ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ). ‘ಶಿರವರಿದು’ ಎಂದರೆ ಅವುಗಳ ತಲೆಯನ್ನು ಕಡಿಯುವುದು ಅಥವಾ ಅವುಗಳ ಅಹಂಕಾರ/ನಿಯಂತ್ರಣವನ್ನು ನಾಶ ಮಾಡುವುದು. ‘ಪರಿಮಳದೋಕುಳಿ’ ಎಂದರೆ ದೈವಿಕ ಆನಂದದ ಹೋಲಿ ಆಟ. ಸಾಧಕನು ತನ್ನ ದೇಹವೆಂಬ ಪುರದಲ್ಲಿರುವ ಪಂಚೇಂದ್ರಿಯಗಳ ಆಸೆಗಳನ್ನು, ಲೌಕಿಕ ಹಂಬಲಗಳನ್ನು ಸಂಪೂರ್ಣವಾಗಿ ಗೆದ್ದು (ಶಿರವರಿದು), ತನ್ನ ಅಂತರಂಗದಲ್ಲಿ ಉಕ್ಕಿ ಹರಿಯುವ ದೈವಿಕ ಜ್ಞಾನದ ಆನಂದದ ಓಕುಳಿಯಲ್ಲಿ (ಹೋಲಿ ಆಟದಲ್ಲಿ) ಮುಳುಗೇಳುತ್ತಾನೆ. ‘ಬ್ರಹ್ಮನ ಓಲಗ ಹರೆಯಿತ್ತು’ ಎಂದರೆ ಸೃಷ್ಟಿ ಕಾರ್ಯ ಅಥವಾ ಹುಟ್ಟು-ಸಾವಿನ ಚಕ್ರ ಕೊನೆಗೊಂಡಿತು ಎಂದರ್ಥ. ‘ರುದ್ರನ ದಳ ಮುರಿಯಿತ್ತು’ ಎಂದರೆ ಲಯ (ನಾಶ) ಮಾಡುವ ಕಾಲದ ಶಕ್ತಿ ಅಥವಾ ಸಂಸಾರದ ಭಯ ನಾಶವಾಯಿತು ಎಂದರ್ಥ. ಅಂತರಂಗದ ಜ್ಞಾನೋದಯವಾದಾಗ ಸಾಧಕನಿಗೆ ಜನನ (ಬ್ರಹ್ಮ) ಮತ್ತು ಮರಣದ (ರುದ್ರ) ಚಕ್ರದಿಂದ ಮುಕ್ತಿ ಸಿಗುತ್ತದೆ. ಸೃಷ್ಟಿ-ಸ್ಥಿತಿ-ಲಯಗಳೆಂಬ ಪ್ರಕೃತಿಯ ನಿಯಮಗಳು ಆತನನ್ನು ಬಂಧಿಸಲು ಸಾಧ್ಯವಾಗುವುದಿಲ್ಲ. ಅವನು ಗುಹೇಶ್ವರನಲ್ಲಿ ಒಂದಾಗಿ ಕಾಲಾತೀತನಾಗುತ್ತಾನೆ.
ಶರಣ ಶರಣೆಯರು ಬಳಸಿರುವ ಕೆಲ ವೈಶಿಷ್ಟ್ಯ ಪದಗಳು ಬೇರೆಲ್ಲೋ ಸಿಗದವು ಎಂದರೆ ಮೃಡ, ತುಂಡುಲ, ಕ್ರೀ, ಪರುಷ, ಮರ್ತ್ಯಲೋಕ, ಅಗ್ಗವಣಿ, ಹೊದಕುಳಿ, ಭಾಂಡ, ಭಾಜನ ಇತ್ಯಾದಿ.
ಶ್ರೀ. ಪ್ರಕಾಶರಾಜಗೋಳಿ
ಮೋಬೈಲ್. ಸಂ. 9845755672
ಇ-ಮೇಲ್: pcrajagoli@gmail.com
ಗ್ರಂಥ ಋಣ:
- ಮರುಳ ಶಂಕರ ದೇವರು ಅನುಭಾವಯಾತ್ರೆ – ಡಾ ದಯಾನಂದ ಈ ನೂಲಿ
- ವಚನಗಳಲ್ಲಿ ವೈಜ್ಞಾನಿಕ ಚಿಂತನೆಗಳು – ಡಾ ವಿಜಯಕುಮಾರ ಕಮ್ಮಾರ
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ (ರಿ) ದ ಸಂಚಾಲಕರನ್ನು ಸಂಪರ್ಕಿಸಬೇಕಾದ:
- ಮೋಬೈಲ್ ನಂ. 9741 357 132
- e-Mail ID: info@vachanamandara.in / admin@vachanamandara.in





Total views : 69585