ಶಿವಶರಣ ಬಾಲಸಂಗಣ್ಣನವರ ವಚನ ನಿರ್ವಚನ | ಶ್ರೀಮತಿ. ಶಾಲಿನಿ ರುದ್ರಮುನಿ, ಹುಬ್ಬಳ್ಳಿ.

Loading

ಕಾಬುದು ಜೀವನಲ್ಲ, ಕಾಣಿಸಿಕೊಂಬುದು ಪರಮನಲ್ಲ.
ಅಟ್ಟಿ ಮುಟ್ಟಿ ಹರಿದಾಡುವವು ಕರಣಂಗಳಲ್ಲ.
ಸುಖವನನುಭವಿಸುವವು ಇಂದ್ರಿಯಂಗಳಲ್ಲ.
ಇಂತೀ ಭೇದಂಗಳಲ್ಲಿ ಆರೆಂಬುದ ತಿಳಿದು
ಸಸಿ ವೃಕ್ಷಕ್ಕೆ ನೀರನೆರದಡೆ ಆ ನೀರ ಕುಡಿವುದು
ಬೇರೋ, ಮರನೋ? ಮೀರಿ ಬೆಳೆದ ಫಲವೋ?
ಎಂಬುದನರಿದು ತಿಳಿದಲ್ಲಿ,
ಅರಿದರುಹಿಸಿಕೊಂಬ ನಿರಿಗೆಯ ಬಲ್ಲ,
ಆತ ಕಮಠೇಶ್ವರಲಿಂಗವನೊಡಗೂಡಿದ ಶರಣ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-109/ವಚನ ಸಂಖ್ಯೆ-245)

ಶರಣ ಬಾಲಸಂಗಣ್ಣನವರು 12 ನೇ ಶತಮಾನದ ಒಬ್ಬ ಶರಣ ವಚನಕಾರ. ಇವರ ಬಗ್ಗೆ ಸಂಪೂರ್ಣ ಮತ್ತು ಖಚಿತವಾದ ಮಾಹಿತಿಗಳು ದೊರೆಯದಿದ್ದರೂ ಕೆಲವು ಪುರಾಣಗಳು, ಕಾವ್ಯಗಳು ಮತ್ತು ವಚನಗಳ ಆಧಾರದ ಮೇಲೆ ತಿಳಿದುಬರುವ ಸಂಗತಿಗಳೆಂದರೆ, ಬಾಲಸಂಗಣ್ಣನವರನ್ನು ಬಾಲಸಂಗಯ್ಯ ಎಂದೂ ಕರೆಯಲಾಗುತ್ತಿತ್ತು. ಕೆಲವು ಪ್ರಾಚೀನ ಗ್ರಂಥಗಳು ಇವರನ್ನು ಬಸವಣ್ಣನವರ ಪತ್ನಿಯಾದ ನೀಲಾಂಬಿಕೆ ಅವರ ಮಗ ಎಂದು ಹೇಳುತ್ತವೆ. ಮತ್ತೊಂದು ಅಭಿಪ್ರಾಯದ ಪ್ರಕಾರ ಇವರು ಗಂಗಾಂಬಿಕೆ ಅವರ ಮಗ. ಈ ವಿಷಯದಲ್ಲಿ ಇತಿಹಾಸಕಾರರ ನಡುವೆ ಭಿನ್ನಾಭಿಪ್ರಾಯಗಳಿವೆ. ಆದ್ದರಿಂದ ನಿಖರವಾಗಿ ಯಾರ ಮಗ ಎಂಬುದು ಖಚಿತವಾಗಿಲ್ಲ. ಕೆಲವು ವಚನಗಳು ಮತ್ತು ಕೃತಿಗಳ ಆಧಾರದ ಮೇಲೆ ಬಾಲಸಂಗಣ್ಣನವರು ಬಾಲ್ಯದಲ್ಲಿಯೇ ಅಥವಾ ಅತಿ ಚಿಕ್ಕ ವಯಸ್ಸಿನಲ್ಲಿಯೇ ಲಿಂಗೈಕ್ಯರಾದರು ಎಂದು ಊಹಿಸಲಾಗುತ್ತದೆ. ಬಾಲಸಂಗಣ್ಣನವರು “ಕಮಠೇಶ್ವರಲಿಂಗ” ಎನ್ನುವ ವಚನಾಂಕಿತದಿಂದ ಬರೆದ 8 ವಚನಗಳು ನಮಗ್ಗೆ ಇಲ್ಲಿಯವರೆಗೆ ಲಭ್ಯವಾಗಿವೆ.

ಈ ಅಂಕಿತದ ಅರ್ಥ ಮತ್ತು ಹಿನ್ನೆಲೆಯ ಬಗ್ಗೆಯೂ ವಿದ್ವಾಂಸರಲ್ಲಿ ವಿವಿಧ ಅಭಿಪ್ರಾಯಗಳಿವೆ. ಬಾಲಸಂಗಣ್ಣನವರು ವಯಸ್ಸಿನಲ್ಲಿ ಕಿರಿಯರಾಗಿದ್ದರೂ ಶಿವಭಕ್ತಿ, ಆಧ್ಯಾತ್ಮಿಕ ಚಿಂತನೆ ಮತ್ತು ಜೀವನದ ಸತ್ಯಗಳನ್ನು ತಮ್ಮ ವಚನಗಳಲ್ಲಿ ವ್ಯಕ್ತಪಡಿಸಿರುವುದರಿಂದ ಅವರು ಶರಣ ಸಾಹಿತ್ಯದಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ. ಅವರ ವಚನಗಳಲ್ಲಿ ಬಾಲ ಮನಸ್ಸಿನ ಮುಗ್ಧತೆ, ಸರಳತೆ ಮತ್ತು ಆಳವಾದ ಭಕ್ತಿಭಾವಗಳು ಕಾಣಿಸುತ್ತವೆ.

ಪ್ರಸ್ತುತ, ಈ ವಚನದಲ್ಲಿ “ಮರದ ಬೇರು ಕಾಣುವುದಿಲ್ಲ. ಆದರೆ ಬೇರಿನ ಬಗ್ಗೆ ತಿಳಿದಿರುವವನಿಗೆ ಇಡೀ ಮರದ ಜೀವಶಕ್ತಿ ಅದರ ಎಲೆ ರೆಂಬೆಕೊಂಬೆ ಕಾಂಡಗಳಲ್ಲಿ ಇದೆ ಎಂದು ತಿಳಿದಿರುತ್ತಾನೆ. ಹಾಗೆ ಆತ್ಮವನ್ನು ಅರಿತವನಿಗೆ ದೇವರು ಹೊರಗಿನ ರೂಪದಲ್ಲಿ ಅಲ್ಲ, ಒಳಗಿನ ಚೈತನ್ಯದಲ್ಲಿ ಇದ್ದಾನೆಂಬ ಪರಮಾತ್ಮನ ಅರಿವು ಇರುತ್ತದೆ” ಎನ್ನುವುದನ್ನು ನಿರೂಪಣೆ ಮಾಡಲಾಗಿದೆ.

ಈ ವಚನದಲ್ಲಿ ಬಾಲಸಂಗಣ್ಣನವರು ಜೀವಾತ್ಮ-ಪರಮಾತ್ಮ, ಇಂದ್ರಿಯಗಳು, ಮನಸ್ಸು ಮತ್ತು ದೇಹದ ನಡುವಿನ ಸಂಬಂಧವನ್ನು ಅತ್ಯಂತ ಸೂಕ್ಷ್ಮವಾಗಿ ವಿವರಿಸುತ್ತಾರೆ. ಕಾಣಿಸಿಕೊಳ್ಳುವ ದೇಹವೇ ಜೀವವಲ್ಲ. ಕಣ್ಣಿಗೆ ಕಾಣುವ ರೂಪವೇ ಪರಮಾತ್ಮನಲ್ಲ. ಓಡಾಡುವ ಕೈ, ಕಾಲು, ಮನಸ್ಸು, ಬುದ್ಧಿ ಇವುಗಳೇ ನಿಜವಾದ ಕರಣಗಳಲ್ಲ. ಸುಖ-ದುಃಖಗಳನ್ನು ಅನುಭವಿಸುವುದು ಕೇವಲ ಇಂದ್ರಿಯಗಳಲ್ಲ. ಇವುಗಳ ಹಿಂದೆ ಇರುವ ಚೈತನ್ಯ ಶಕ್ತಿಯೇ ನಿಜವಾದ ಸತ್ಯ. ಎಂಬ ಸ್ಪಷ್ಟ ನಿಲುವು ಕೊಡುತ್ತಾರೆ. ಇವತ್ತು ಮಾನವ ತನ್ನ ದೇಹವನ್ನೇ ತಾನು ಎಂದು ಸಂಭ್ರಮಿಸುತ್ತಾನೆ. ಹೆಚ್ಚಿನ ಹಣ ಸಂಪಾದನೆಯನ್ನೇ ಯಶಸ್ಸು ಎಂದು ಭಾವಿಸುತ್ತಾನೆ. ಇಂದ್ರಿಯ ಸುಖವನ್ನು ಸಂತೋಷವೆಂದು ಭ್ರಮಿಸುತ್ತಾನೆ. ಆದರೆ ನಿಜವಾದ ಸಂತೋಷ ಖುಷಿ ನಮ್ಮೊಳಗಿನಿಂದ ಬರುತ್ತದೆ. ಹೊರಗೆ ನಾವು ಎಷ್ಟೇ ಸಾಧನೆಗಳನ್ನು ಮಾಡಿದರೂ ಮನಸ್ಸಿಗೆ ಶಾಂತಿ ನೆಮ್ಮದಿ, ಇಲ್ಲದಿರುವುದಕ್ಕೆ ಇದೇ ಕಾರಣ.

ಶರಣ ಬಾಲಸಂಗಣ್ಣನವರು ಇಲ್ಲಿ ಧಾರ್ಮಿಕ ಆಚರಣೆಗಳಿಗಿಂತ ಆತ್ಮಜ್ಞಾನಕ್ಕೆ ಹೆಚ್ಚಿನ ಮಹತ್ವ ನೀಡಿದ್ದಾರೆ. ಸುಂದರ ಸರಳ ಶಬ್ದಗಳಲ್ಲಿ ಘನ ಅರ್ಥವನ್ನು ಅಡಗಿಸಿರುವ ಶರಣರ ವಚನಗಳು ನಿತ್ಯ ಜೀವನಕ್ಕೂ ಸೈ ಎನಿಸುವ ತತ್ವದರ್ಶನಗಳು.

“ಕಾಬುದು ಜೀವನಲ್ಲ, ಕಾಣಿಸಿಕೊಂಬುದು ಪರಮನಲ್ಲ” ಕಾಬುದು ಅಂದರೆ ಕಾಪಿಡುವುದು, ರಕ್ಷಿಸುವುದು, ಉಳಿಸಿಕೊಳ್ಳುವುದು ಎಂಬ ಅರ್ಥ. ಹಾಗೆ ಜೀವ ಅಂದರೆ ಆತ್ಮ, ನಿಜವಾದ ಜೀವತತ್ವ. ಕಾಣಿಸಿಕೊಂಬುದು ಸರಳಪದ. ಕಣ್ಣಿಗೆ ಕಾಣುವುದು, ಗೋಚರಿಸುವುದು ಎಂದು. ಪರಮ ಅಂದರೆ ಪರಮಾತ್ಮ, ಶಿವ ಅಥವಾ ಪರಮಸತ್ಯ ಎಂದು. ನಾವು ಕೇವಲ ದೇಹದ ಆರೈಕೆ, ಆಹಾರ, ಬಟ್ಟೆ, ಸೌಕರ್ಯಗಳ ಬಗ್ಗೆ ತುಂಬಾ ಕಾಳಜಿ ವಹಿಸುತ್ತೇವೆ. ಆದರೆ ಇದನ್ನು ಕಾಪಾಡಿಕೊಳ್ಳುವುದೇ ನಿಜವಾದ ಜೀವವಲ್ಲ ಎಂದಿದ್ದಾರೆ.

ಒಬ್ಬ ರೈತ ತನ್ನ ಹೊಲದ ಬೇಲಿಯನ್ನು ಚೆನ್ನಾಗಿ ಭದ್ರಪಡಿಸಿ ಕಾಪಾಡುತ್ತಾನೆ. ಆದರೆ ಒಳಗೆ ಬೆಳೆ ಬೆಳೆಸದಿದ್ದರೆ ಬೇಲಿ ಇದ್ದು ಏನು ಪ್ರಯೋಜನ? ಹಾಗೆಯೇ, ಕಣ್ಣಿಗೆ ಕಾಣುವ ವಸ್ತುಗಳು, ದೇವರ ಮೂರ್ತಿಗಳು, ಬಾಹ್ಯ ಆಚರಣೆಗಳನ್ನೇ ಪರಮಾತ್ಮ ಎಂದು ಭಾವಿಸಿದರೆ ಅದು ಸಂಪೂರ್ಣ ಸತ್ಯವಲ್ಲ. ಇಲ್ಲಿ ದೇಹವು ಬೇಲಿಯಂತಿದೆ, ಆತ್ಮಜ್ಞಾನವು ಬೆಳೆ ಇದ್ದಂತೆ. ಬೇಲಿಯನ್ನು ಮಾತ್ರ ಕಾಪಾಡಿ ಬೆಳೆಯನ್ನು ಮರೆತರೆ ಪ್ರಯೋಜನವಿಲ್ಲ. ಈ ಸಾಲಿನಲ್ಲಿ ಬಾಲಸಂಗಣ್ಣನವರು ದೇಹವೇ ಎಲ್ಲವೂ ಅಲ್ಲ. ಕಣ್ಣಿಗೆ ಕಾಣುವುದೇ ಅಂತಿಮ ಸತ್ಯವಲ್ಲ. ನಿಜವಾದ ಜೀವ ಮತ್ತು ಪರಮಾತ್ಮನ ಅರಿವು ಒಳಗಿನ ಆತ್ಮದ ಅನುಭವದಿಂದ ಬರಬೇಕು ಎಂದು ತಿಳಿಸುತ್ತಾರೆ.

“ಅಟ್ಟಿ ಮುಟ್ಟಿ ಹರಿದಾಡುವವು ಕರಣಂಗಳಲ್ಲ” ಇಲ್ಲಿ ಅಟ್ಟಿ ಮುಟ್ಟಿ ಅಂದರೆ ಎಲ್ಲವನ್ನು, ಸ್ಪರ್ಶಿಸುವುದು ಮುಟ್ಟುವುದು ಎಂದು. ಹರಿದಾಡುವವು ಅಂದರೆ ಅಲೆದಾಡುವವು, ಸಂಚರಿಸುವವು. ಕರಣಗಳಾದ ಮನಸ್ಸು, ಬುದ್ಧಿ, ಚಿತ್ತ, ಅಹಂಕಾರ ಆಂತರಿಕ ಜಗತ್ತನ್ನು ತಿಳಿಯುವ ಸಾಧನಗಳು. ನಮ್ಮ ಪಂಚೇಂದ್ರಿಯಗಳು ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ, ಮನಸ್ಸು ಇವು ಬಾಹ್ಯ ಜಗತ್ತಿನ್ನು ಅರಿಯುವ ಸಾಧನಗಳು. ವಿವಿಧ ವಿಷಯಗಳನ್ನು ಗ್ರಹಿಸುತ್ತವೆ. ಆದರೆ ಅವು ಕೇವಲ ತಿಳಿಯುವ ಸಾಧನಗಳು ಮಾತ್ರ. ಅವೇ ಪರಮಸತ್ಯವಲ್ಲ. ಸಾಮಾನ್ಯವಾಗಿ ನಾವು “ನಾನು ನೋಡುತ್ತಿದ್ದೇನೆ”, “ನಾನು ಕೇಳುತ್ತಿದ್ದೇನೆ” ಎಂದು ಭಾವಿಸುತ್ತೇವೆ.

ಒಂದು ವಿದ್ಯುತ್ ಬಲ್ಬ್ ಬೆಳಕು ಕೊಡುತ್ತದೆ. ಆದರೆ ಬೆಳಕಿನ ಮೂಲ ಅದರ ಹಿಂದೆ ಇರುವ ವಿದ್ಯುತ್ ಶಕ್ತಿ. ಅದೇ ರೀತಿ ಕಣ್ಣು ನೋಡುತ್ತದೆ. ಕಿವಿ ಕೇಳುತ್ತದೆ. ಮನಸ್ಸು ಯೋಚಿಸುತ್ತದೆ‌. ಹೊರ ಜಗತ್ತಿನಲ್ಲಿ ಅಲೆದಾಡುವ ಇಂದ್ರಿಯಗಳನ್ನೇ ಪರಮಸತ್ಯವೆಂದು ಭಾವಿಸಬಾರದು. ಅವು ಸ್ವತಃ ಕೆಲಸ ಮಾಡುವುದಿಲ್ಲ. ಅವುಗಳ ಹಿಂದೆ ಚೈತನ್ಯ ಅಥವಾ ಮನಸ್ಸು‌ ಅಥವಾ ಬುದ್ದಿಯು ಕೆಲಸ ಮಾಡಿಸುತ್ತದೆ. ನಿಜವಾದ ಅರಿವಿನ ಮೂಲ ಅವುಗಳ ಹಿಂದೆ ಇರುವ ದೈವಿಕ ಚೈತನ್ಯ ಮಾತ್ರ.

“ಸುಖವನನುಭವಿಸುವವು ಇಂದ್ರಿಯಂಗಳಲ್ಲ” ಇಂದ್ರಿಯಗಳು ಸುಖದ ಸಾಧನಗಳಷ್ಟೇ. ನಿಜವಾದ ಸುಖವನ್ನು ಅನುಭವಿಸುವುದು ಮನಸ್ಸು‌ ಮಾತ್ರ. ಅಂದರೆ, ಕಣ್ಣು ಸುಂದರವಾದುದನ್ನು ನೋಡಬಹುದು, ಕಿವಿ ಮಧುರ ಸಂಗೀತವನ್ನು ಕೇಳಬಹುದು, ನಾಲಿಗೆ ರುಚಿಕರವಾದ ಆಹಾರವನ್ನು ಸವಿಯಬಹುದು. ಆದರೆ ನಿಜವಾದ ಸುಖದ ಅನುಭವವು ಕೇವಲ ಇಂದ್ರಿಯಗಳ ಮಟ್ಟದಲ್ಲೇ ನಡೆಯುವುದಿಲ್ಲ. ಈಗ ಒಂದೇ ಸಿಹಿತಿಂಡಿಯನ್ನು ಇಬ್ಬರಿಗೆ ಕೊಟ್ಟರೆ. ಒಬ್ಬನು ಸಂತೋಷದಿಂದ ತಿನ್ನುತ್ತಾನೆ. ಮತ್ತೊಬ್ಬನು ದುಃಖದಲ್ಲಿದ್ದರೆ ಅದೇ ಸಿಹಿತಿಂಡಿಯ ರುಚಿ ಅವನಿಗೆ ಅಷ್ಟಾಗಿ ಅನುಭವವಾಗುವುದಿಲ್ಲ. ಇಲ್ಲಿ ನಾಲಿಗೆ ಒಂದೇ ಕೆಲಸ ಮಾಡುತ್ತಿದೆ. ಆದರೆ ಸುಖ ಅಥವಾ ದುಃಖವನ್ನು ನಿರ್ಧರಿಸುವುದು ಮನಸ್ಸು ಮತ್ತು ಒಳಗಿನ ಸ್ಥಿತಿ. ಸುಖದ ನಿಜವಾದ ಅನುಭವ ಮನಸ್ಸು, ಚೈತನ್ಯ ಮತ್ತು ಆತ್ಮದ ಮಟ್ಟದಲ್ಲಿ ಉಂಟಾಗುತ್ತದೆ. ರುಚಿಕರವಾದ ಊಟದಲ್ಲೇ ಸುಖವಿಲ್ಲ. ಸುಂದರ ದೃಶ್ಯದಲ್ಲೇ ಸುಖವಿಲ್ಲ. ಮಧುರ ಶಬ್ದದಲ್ಲೇ ಸುಖವಿಲ್ಲ. ಸುಖದ ಮೂಲ ನಮ್ಮ ಒಳಗೇ ಇದೆ. ಸುಖವು ಹೊರಗಿನ ವಸ್ತುಗಳಲ್ಲಿ ಅಥವಾ ಇಂದ್ರಿಯಗಳಲ್ಲಿ ಇಲ್ಲ; ಅದು ಒಳಗಿನ ಮನಃಶಾಂತಿ ಮತ್ತು ಆತ್ಮಾನುಭವದಲ್ಲಿದೆ.

“ಇಂತೀ ಭೇದಂಗಳಲ್ಲಿ ಆರೆಂಬುದ ತಿಳಿದು” ಈ ಎಲ್ಲಾ ಭೇದಗಳ ಹಿಂದೆ ಇರುವ ಮೂಲತತ್ತ್ವವನ್ನು ಅರಿಯಬೇಕು. “ನಾನು ಯಾರು?” ಎಂಬ ಪ್ರಶ್ನೆಗೆ ಉತ್ತರ ಹುಡುಕಬೇಕು.

“ಸಸಿ ವೃಕ್ಷಕ್ಕೆ ನೀರನೆರದಡೆ ಆ ನೀರ ಕುಡಿವುದು ಬೇರೋ, ಮರನೋ? ಮೀರಿ ಬೆಳೆದ ಫಲವೋ?” ಇದು ಬಹಳ ಸುಂದರವಾದ ಉಪಮೆ. ನಾವು ಮರದ ಬೇರುಗಳಿಗೆ ನೀರು ಹಾಕುತ್ತೇವೆ. ಆದರೆ ಪ್ರಶ್ನೆ ನೀರನ್ನು ಕುಡಿಯುವುದು ಬೇರಾ? ಕಾಂಡನಾ? ಎಲೆಗಳೇ? ಹಣ್ಣುಗಳಾ? ವಾಸ್ತವದಲ್ಲಿ ನೀರಿನ ಲಾಭ ಇಡೀ ಮರಕ್ಕೆ ತಲುಪುತ್ತದೆ. “ಎಂಬುದನರಿದು ತಿಳಿದಲ್ಲಿ” ಈ ರಹಸ್ಯವನ್ನು ಅರಿತಾಗ, ಎಲ್ಲವೂ ಒಂದೇ ಚೈತನ್ಯದ ಅಭಿವ್ಯಕ್ತಿ ಎಂಬ ಅರಿವು ಬರುತ್ತದೆ.

“ಅರಿದರುಹಿಸಿಕೊಂಬ ನಿರಿಗೆಯ ಬಲ್ಲ, ಆತ ಕಮಠೇಶ್ವರಲಿಂಗವ ನೊಡಗೂಡಿದ ಶರಣ” ಈ ಸತ್ಯವನ್ನು ಅನುಭವಿಸಿ ಬದುಕುವವನೇ ನಿಜವಾದ ಶರಣ. ಅವನು ಕಮಠೇಶ್ವರಲಿಂಗದೊಂದಿಗೆ ಒಂದಾಗುತ್ತಾನೆ. ಇದು ಇಡೀ ವಚನದ ತತ್ವ. ಒಂದು ಗಂಭೀರ ಆಧ್ಯಾತ್ಮಿಕ ಸಂದೇಶವೆಂದರೆ “ಬರಿ ರೂಪವನ್ನು ಹಿಡಿಯಬೇಡ, ರೂಪದ ಹಿಂದೆ ಇರುವ ತತ್ತ್ವವನ್ನು ಅರಿತುಕೋ” ಎಂಬುದಾಗಿದೆ.

ಒಬ್ಬ ರೈತ ಹೊಲದಲ್ಲಿ ಪ್ರತಿದಿನ ಮರದ ಎಲೆಗಳಿಗೆ ನೀರು ಸಿಂಪಡಿಸುತ್ತಿದ್ದ. ಆದರೂ ಮರ ಒಣಗುತಿತ್ತು. ಒಬ್ಬ ಜ್ಞಾನಿ ಹೇಳಿದ “ಎಲೆಗಳಿಗೆ ಅಲ್ಲ, ಬೇರುಗಳಿಗೆ ನೀರು ಹಾಕು” ಅಂತ. ರೈತ ಹಾಗೆ ಮಾಡಿದಾಗ ಮರ ಮತ್ತೆ ಹಸಿರಾಯಿತು. ಹಾಗೆಯೇ ನಾವು ಹೊರಗಿನ ಅಲಂಕಾರ, ಸಂಪತ್ತು, ಪ್ರತಿಷ್ಠೆಗಳಿಗೆ ಮಾತ್ರ ಗಮನಕೊಟ್ಟರೆ ಜೀವನ ಒಣಗುತ್ತದೆ. ಆತ್ಮಜ್ಞಾನ, ಭಕ್ತಿ, ಸತ್ಯ, ಕಾಯಕ ಎಂಬ ಬೇರುಗಳಿಗೆ ನೀರುಣಿಸಿದಾಗ ಜೀವನ ಹಸಿರಾಗುತ್ತದೆ. ಈ ದೇಹ, ಇಂದ್ರಿಯ, ಮನಸ್ಸು ಇವೆಲ್ಲ ಸಾಧನಗಳು ಮಾತ್ರ. ಅವುಗಳ ಹಿಂದೆ ಇರುವ ಚೈತನ್ಯವೇ ನಿಜವಾದ ಜೀವ. ಮರದ ಬೇರುಗಳಿಗೆ ನೀರು ಹಾಕಿದಂತೆ ಆತ್ಮತತ್ವವನ್ನು ಅರಿತವನೇ ಪರಮಾತ್ಮನೊಂದಿಗೆ ಒಂದಾಗುತ್ತಾನೆ ಎಂಬ ಜೀವನ ಅರ್ಥವನ್ನು ಸರಳವಾಗಿ ಮನಸ್ಸಿಗೆ ಮುಟ್ಡುವ ಹಾಗೆ ಕೆಲವೇ ಪದಗಳಲ್ಲಿ ವಿವರಿಸಿದ ಬಗೆ ಅದ್ಭುತ. ಇದು ವಚನಕಾರರ ಶಕ್ತಿ.

ಶ್ರೀಮತಿ. ಶಾಲಿನಿ ರುದ್ರಮುನಿ,
# 20, ರಾಜೀವನಗರ, ಎರಡನೇ ಹಂತ, ಎರಡನೇ ತಿರುವು, 
ಪೋಲಿಸ್ ವಸತಿಗೃಹ ರಸ್ತೆ, 
ವಿದ್ಯಾನಗರ,
ಹುಬ್ಬಳ್ಳಿ – 580031
ಮೊಬೈಲ್ ಸಂಖ್ಯೆ: 78921 69644

  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ:
    • ಮೋಬೈಲ್ ನಂ. 9741 357 132
    • e-Mail ID: info@vachanamandara.in / admin@vachanamandara.in

Leave a Reply