ಶೋಷಣೆಯ ಮಾಧ್ಯಮವಾಗಿ ದಾನ | ಡಾ. ಸತೀಶ ಕೆ. ಇಟಗಿ, ಮುದ್ದೇಬಿಹಾಳ.

Loading

ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ.
ಸುಳಿದು ಬೀಸುವ ವಾಯು ನಿಮ್ಮ ದಾನ.
ನಿಮ್ಮ ದಾನವನುಂಡು ಅನ್ಯರ ಹೊಗಳುವ
ಕುನ್ನಿಗಳೆನೇನೆಂಬೆ, ರಾಮನಾಥ.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-266/ವಚನ ಸಂಖ್ಯೆ-735)

ಈ ವಚನದಲ್ಲಿ ವಚನಕಾರ ಜೇಡರ ದಾಸಿಮಯ್ಯನವರು ದಾನದ ನಿಜವಾದ ಅರ್ಥ ಯಾವುದೆಂದು ಪ್ರಶ್ನಿಸುತ್ತಾರೆ. ಭೂಮಿ (ಇಳೆ), ಬೆಳೆ, ಗಾಳಿ, ನೀರು, ಪ್ರಕೃತಿ ಇವೆಲ್ಲವೂ ಸೃಷ್ಠಿಕರ್ತನಾದ ಪರಶಿವನ ದಾನ, ದೇಣಿಗೆಗಳು. ಯಾವುದನ್ನೂ ಮಾನವರು ಸೃಷ್ಟಿಸಿಲ್ಲ. ಆದಾಗ್ಯೂ ದೇವರು ಕೊಟ್ಟಿದ್ದನ್ನು ತನ್ನದೆಂದು ಅಹಂಕಾರ ಪಡುವ ಹಾಗೂ ಉದಾರತೆಯಿಂದ ಮೆರೆಯುತ್ತ, ಹೊಗಳಿಸಿಕೊಳ್ಳುವುದು ದುರಹಂಕಾರಿಗಳ ಸ್ವಭಾವವಾಗಿದೆ ಎಂದು ಹೇಳುತ್ತಾರೆ. ದೇವರು ದಯಪಾಲಿಸಿದ ದಾನವನ್ನೇ ಮತ್ತೆ ದೇವರಿಗೆ ಅರ್ಪಿಸಿ, ಅದು ತನ್ನದೆಂದು ಹೊಗಳಿಸಿಕೊಳ್ಳುವ ಮೂರ್ಖರಲ್ಲಿ ತಾನು ಸೇರಲಾರೆ ಎಂದು ದಾಸಿಮಯ್ಯನವರು ನುಡಿಯುತ್ತಾರೆ. ಜಗತ್ತಿನ ಎಲ್ಲ ಸಂಪತ್ತು ದೇವರು ನೀಡಿದ ದಾನ. ಮನುಷ್ಯನು ಅದರ ಮಾಲೀಕನಲ್ಲ. ತನ್ನ ಸ್ವತ್ತೆಂದು ತಿಳಿಯದೆ, ಕೇವಲ ಪಾಲಕ, ಪೋಷಕನೆಂದು ಅರಿಯಬೇಕು. ದಾನ ಮಾಡಿದ ನಂತರ ಪ್ರಶಂಸೆ, ಹೆಸರು ಅಥವಾ ಪ್ರತಿಷ್ಠೆಯನ್ನು ಬಯಸುವುದು ಆಧ್ಯಾತ್ಮಿಕ ದೃಷ್ಟಿಯಿಂದ ಸೂಕ್ತವಲ್ಲ. ನಿಜವಾದ ದಾನವು ಅಹಂಕಾರ ರಹಿತವಾಗಿರಬೇಕು.

ಮೂಲತಃ ಪರೋಪಕಾರ ಮತ್ತು ಮಾನವೀಯತೆಯ ಸಂಕೇತವೆ ದಾನ. ಆದರೆ ಕೆಲವು ಸಂದರ್ಭಗಳಲ್ಲಿ ಅದನ್ನು ಶೋಷಣೆಯ ಸಾಧನವಾಗಿಯೂ ಬಳಸಲಾಗುತ್ತಿದೆ. ದಾನದ ಹೆಸರಿನಲ್ಲಿ ಶ್ರೀಮಂತರು ತಮ್ಮ ಸಾಮಾಜಿಕ ಪ್ರಭಾವ ಮತ್ತು ಅಧಿಕಾರವನ್ನು ಉಳಿಸಿಕೊಳ್ಳಲು ಪ್ರಯತ್ನಿಸುವ ಘಟನೆಗಳೆ ಹೆಚ್ಚಾಗಿವೆ. ಬಡವರನ್ನು ಸ್ವಾವಲಂಬಿಗಳನ್ನಾಗಿಸುವ ಬದಲು ದಾನದ ಮೇಲೆ ಅವಲಂಬಿತರನ್ನಾಗಿಸಿ ಶೋಷಿಸುವುದು ಒಂದು ರೂಪವಾಗಿದೆ. ಧಾರ್ಮಿಕ ಅಥವಾ ರಾಜಕೀಯ ಲಾಭಕ್ಕಾಗಿ ದಾನವನ್ನು ಬಳಸಿಕೊಂಡು ಜನರ ಮೇಲೆ ಪ್ರಭಾವ ಬೀರುವ ಪ್ರಯತ್ನಗಳು ಕಂಡುಬರುತ್ತವೆ. ಕಾರ್ಮಿಕರಿಗೆ ನ್ಯಾಯಯುತ ವೇತನ ನೀಡದೆ, ನಂತರ ದಾನದ ಮೂಲಕ ಉದಾರತೆಯ ಚಿತ್ರಣ ಮೂಡಿಸುವುದು ಪರೋಕ್ಷ ಶೋಷಣೆಯ ಉದಾಹರಣೆಯಾಗಿದೆ. ಸಮಾಜದಲ್ಲಿ ಅಸಮಾನತೆಯನ್ನು ನಿವಾರಿಸುವ ಬದಲು, ದಾನವು ಕೆಲವೊಮ್ಮೆ ಆ ಅಸಮಾನತೆಯನ್ನೇ ಮುಂದುವರಿಸುವ ಸಾಧನವಾಗಬಹುದು. ಆದ್ದರಿಂದ ದಾನವು ನ್ಯಾಯ, ಸಮಾನತೆ ಮತ್ತು ಸ್ವಾವಲಂಬನೆಯನ್ನು ಉತ್ತೇಜಿಸಿದಾಗ ಮಾತ್ರ ಸಮಾಜಕ್ಕೆ ನಿಜವಾದ ಒಳಿತನ್ನು ತರುತ್ತದೆ. ಇಲ್ಲದಿದ್ದರೆ ಅದು ಶೋಷಣೆಯ ಮಾಧ್ಯಮವಾಗುವ ಸಾಧ್ಯತೆಯೂ ಇದೆ.

ದಾನ” ಎಂಬ ಪದವು ಸಂಸ್ಕೃತದ “ದಾ” (ಕೊಡುವುದು) ಎಂಬ ಧಾತುವಿನಿಂದ ಬಂದಿದೆ. ಅಂದರೆ, ನಿಸ್ವಾರ್ಥವಾಗಿ ಕೊಡುವ ಕ್ರಿಯೆಯೇ ದಾನ. ಧಾರ್ಮಿಕ ದೃಷ್ಟಿಯಿಂದ ಪುಣ್ಯ ಸಂಪಾದನೆ ಮತ್ತು ಪರೋಪಕಾರಕ್ಕಾಗಿ ಮಾಡುವ ಅರ್ಪಣೆಯೇ ದಾನವಾಗಿರುತ್ತದೆ. ಶರಣ ತತ್ವದ ಪ್ರತಿಪಾದನೆ ಎಂದರೆ:

  • ದುಡಿದು ಸಂಪಾದಿಸಿ, ಅಗತ್ಯಕ್ಕಿಂತ ಹೆಚ್ಚಿರುವುದನ್ನು ಅಹಂಕಾರವಿಲ್ಲದೆ ಸಮಾಜದೊಂದಿಗೆ ಹಂಚಿಕೊಳ್ಳುವುದೇ ನಿಜವಾದ ದಾನ, ಅದನ್ನೇ ದಾಸೋಹ ಎಂದು ಕರೆಯಲಾಗಿದೆ.
  • ಪ್ರತಿಫಲದ ಅಪೇಕ್ಷೆಯಿಲ್ಲದೆ, ಕರುಣೆ ಮತ್ತು ಸಾಮಾಜಿಕ ಹೊಣೆಗಾರಿಕೆಯ ಮನೋಭಾವದಿಂದ ತನ್ನಲ್ಲಿರುವ ಸಂಪನ್ಮೂಲಗಳನ್ನು ಇತರರ ಹಿತಕ್ಕಾಗಿ ಅರ್ಪಿಸುವ ಕ್ರಿಯೆಯೇ ದಾನ.

ಅಸಹಾಯಕ ಸಮಾಜದಲ್ಲಿನ ದುರ್ಬಲರಿಗೆ ನೆರವಾಗಿ ಸಮಾನತೆ ಮತ್ತು ಸಹಕಾರವನ್ನು ಬೆಳೆಸುವ ಸಾಧನ ಅದಾಗಿರುತ್ತದೆ. ಬಸವಣ್ಣನವರು ಪ್ರತಿಪಾದಿಸಿದಂತೆ, ದುಡಿಮೆಯಿಂದ ಗಳಿಸಿದ ಸಂಪತ್ತನ್ನು ಅಗತ್ಯವಿರುವವರೊಂದಿಗೆ ಹಂಚಿಕೊಳ್ಳುವುದೇ ದಾಸೋಹ. ಇಲ್ಲಿ ದಾನಕ್ಕಿಂತ ಕಾಯಕ, ದಾಸೋಹಕ್ಕೆ ಹೆಚ್ಚಿನ ಮಹತ್ವ ಕಲ್ಪಿಸಿದ್ದಾರೆ. ಪ್ರತಿಷ್ಠೆ, ಪ್ರದರ್ಶನಕ್ಕಾಗಿ ಹಾಗೂ ಪ್ರತಿಫಲಕ್ಕಾಗಿ ನೀಡುವ ದಾನವನ್ನು ಬಸವಾದಿ ಶರಣರು ಎಂದಿಗೂ ಒಪ್ಪುವುದಿಲ್ಲ. ದಾನವು ಸ್ವಯಂಪ್ರೇರಿತವಾಗಿರಬೇಕು, ಅದರಿಂದ ಪ್ರತಿಫಲ ಅಥವಾ ಕೀರ್ತಿಯನ್ನು ನಿರೀಕ್ಷೀಸಬಾರದು, ಅರ್ಹರಿಗೆ ಮತ್ತು ಅಗತ್ಯವಿರುವವರಿಗೆ ಗೈದ ದಾನ ತಲುಪುವಂತಿರಬೇಕು. ದಾನವು ಸ್ವೀಕರಿಸುವವರ ಗೌರವಕ್ಕೆ ಯಾವುದೇ ಧಕ್ಕೆಯಾಗಬಾರದು. ಸಮಾಜದ ಒಳಿತಿಗೆ ಕಾರಣವಾಗಬೇಕು. ಹೀಗೆ ಮೊದಲಾದವುಗಳು ದಾನದ ಸಾಮಾನ್ಯ ಗುಣಲಕ್ಷಣಗಳಾಗಿರುತ್ತವೆ.

ದಾನದ ಪ್ರಬೇಧಗಳು:

  • ಅನ್ನದಾನ – ಹಸಿದವರಿಗೆ ಆಹಾರ ನೀಡುವುದು.
  • ಜಲದಾನ – ಕುಡಿಯುವ ನೀರು, ಬಾವಿ, ಕೆರೆ, ಕೊಳಗಳನ್ನು ನಿರ್ಮಿಸಿ ಜನರಿಗೆ ನೀರಿನ ಸೌಲಭ್ಯ ಕಲ್ಪಿಸುವುದು.
  • ಬಟ್ಟೆ ಹಾಗೂ ಗೋವನ್ನು ದಾನ ಮಾಡುವುದು.
  • ಭೂ ಮತ್ತು ಸುವರ್ಣದಾನ- ಚಿನ್ನ ಅಥವಾ ಅಮೂಲ್ಯ ವಸ್ತುಗಳನ್ನು ದಾನ ಮಾಡುವುದು.
  • ವಿದ್ಯಾದಾನ- ಶಿಕ್ಷಣ ಮತ್ತು ಜ್ಞಾನವನ್ನು ಉಚಿತವಾಗಿ ನೀಡುವುದು.
  • ಔಷಧ ಮತ್ತು ಚಿಕಿತ್ಸೆಯ ನೆರವು ನೀಡುವುದು.
  • ಅಭಯದಾನ- ಭಯಮುಕ್ತ ಜೀವನ, ರಕ್ಷಣೆ ಮತ್ತು ಆಶ್ರಯ ನೀಡುವುದು.
  • ದೇವಾಲಯ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ದೀಪಗಳನ್ನು ಅರ್ಪಿಸುವುದಕ್ಕೆ ದೀಪದಾನ.

ಹೀಗೆ ನೂರೆಂಟು ದಾನಗಳ ಪ್ರಬೇಧಗಳನ್ನು ಪಟ್ಟಿಮಾಡಬಹುದು.

12 ನೇ ಶತಮಾನದಲ್ಲಿ ಬಸವಣ್ಣ ಮತ್ತು ಅವರ ಸಮಕಾಲಿನ ಶರಣರು ದಾನದ ಕಲ್ಪನೆಯನ್ನು ಹೊಸ ದೃಷ್ಟಿಯಿಂದ ಅವಲೋಕಿಸಿ ವಿಭಿನ್ನಭಾವದಿಂದ ಪ್ರತಿಪಾದಿಸಿದರು. ಅವರು ಕಾಯಕ (ಪ್ರಾಮಾಣಿಕ ದುಡಿಮೆ) ಮತ್ತು ದಾಸೋಹ (ದುಡಿಮೆಯಿಂದ ಬಂದ ಸಂಪತ್ತನ್ನು ಅಗತ್ಯವಿರುವವರೊಂದಿಗೆ ಹಂಚಿಕೊಳ್ಳುವುದು) ಎಂಬ ತತ್ವವನ್ನು ಪ್ರಚುರಪಡಿಸಿದರು. ಅವರ ದೃಷ್ಟಿಯಲ್ಲಿ, ಶ್ರಮವಿಲ್ಲದೆ ಸಂಪಾದಿಸಿದ ಸಂಪತ್ತಿನಿದ ಮಾಡುವ ದಾನಕ್ಕಿಂತ, ಸ್ವಂತ ದುಡಿಮೆಯಿಂದ ಗಳಿಸಿದ ಸಂಪತ್ತನ್ನು ನಿಸ್ವಾರ್ಥವಾಗಿ ಹಂಚಿಕೊಳ್ಳುವುದು ಶ್ರೇಷ್ಠವಾಗಿತ್ತು.

ಕರಿಯನಿತ್ತಡೆ ಒಲ್ಲೆ, ಸಿರಿಯನಿತ್ತಡೆ ಒಲ್ಲೆ.
ಹಿರಿದಪ್ಪ ರಾಜ್ಯವನಿತ್ತಡೆ ಒಲ್ಲೆ.
ನಿಮ್ಮ ಶರಣರ ಸೂಳ್ನುಡಿಯ
ಒಂದರೆಘಳಿಗೆಯಿತ್ತಡೆ
ನಿಮ್ಮನಿತ್ತೆ ಕಾಣಾ! ರಾಮನಾಥ.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-275/ವಚನ ಸಂಖ್ಯೆ-773)

ಈ ವಚನದಲ್ಲಿ ಜೇಡರ ದಾಸಿಮಯ್ಯವರು ಐಹಿಕ ಸಂಪತ್ತು, ಅಧಿಕಾರ ಮತ್ತು ವೈಭವವನ್ನು ತಿರಸ್ಕರಿಸಿ, ಶರಣ ಧರ್ಮದ ಮಹತ್ವವನ್ನು ಎತ್ತಿಹಿಡಿದಿದ್ದಾರೆ. ಯಾವುದೇ ಐಶ್ವರ್ಯವನ್ನಾಗಲಿ, ಹೊಳೆಯುವ ಸಿರಿಸಂಪತ್ತನ್ನಾಗಲಿ ನನಗೆ ಬೇಡ. ಇಡೀ ರಾಜ್ಯವನ್ನೇ ಕೊಟ್ಟರೂ ನನಗೆ ಆಸೆಯಿಲ್ಲ. ಆದರೆ ನಿಮ್ಮ ಶರಣರ ಮನೆಯ ಒಂದೇ ಒಂದು ಬಾಗಿಲಿನ ಮೆಟ್ಟಿಲಿನಲ್ಲಿ (ಒಂದರೆ ಘಳಿಗೆ) ಸೇವೆ ಮಾಡುವ ಅವಕಾಶ ದೊರೆತರೆ, ಅದನ್ನೇ ನಿಮಗೆ ಅರ್ಪಿಸಿದ ಜೀವನವೆಂದು ಭಾವಿಸುತ್ತೇನೆ. ಏಕೆಂದರೆ ಶರಣರ ಸತ್ಸಂಗ ಮತ್ತು ಸೇವೆಯೇ ಪರಶಿವನ ಸಾಕ್ಷಾತ್ಕಾರಕ್ಕೆ ದಾರಿಯಾಗಿದೆ. ಧನ, ಅಧಿಕಾರ, ರಾಜ್ಯ ಎಲ್ಲವೂ ಕ್ಷಣಿಕ. ಶರಣರ ಸೇವೆ ಮತ್ತು ಸತ್ಸಂಗವೇ ಶಾಶ್ವತವಾದ ಆಧ್ಯಾತ್ಮಿಕ ಸಂಪತ್ತು. ಆದರೆ ದೇವರನ್ನು ಕಾಣುವ ಹಾಗೂ ಸಾಕ್ಷತ್ಕಾರ ಹೊಂದುವ ಮಾರ್ಗವು ವೈಭವದಿಂದ ಕೂಡಿದ್ದಲ್ಲ. ಸದ್ವಿಚಾರ, ಕಾಯಕ ಮತ್ತು ಮತ್ತು ಶರಣರ ಸಹವಾಸದಿಂದ ಮಾತ್ರ ಸಾಧ್ಯ. ಹೀಗಾಗಿ ಸಂಪತ್ತು ಮತ್ತು ಅಧಿಕಾರಕ್ಕಿಂತ ಶರಣರ ಸತ್ಸಂಗವೇ ಶ್ರೇಷ್ಠವಾಗಿದೆ ಎಂದು ಈ ವಚನದ ಸಾರವಾಗಿರುತ್ತದೆ.

ಪರಶಿವನ ಸಾನಿದ್ಯ ಪಡೆಯಲು ಭೌತಿಕ ಐಶ್ವರ್ಯದಿಂದ ಸಾಧ್ಯವಿಲ್ಲ. ಶರಣರ ಸೇವೆ, ಸದ್ವಿಚಾರ ಹಾಗೂ ಸತ್ಕಾರ್ಯದ ಭಕ್ತಿ ಕೈಂಕರ್ಯಗಳು ಮುಖ್ಯವೆಂದು ಜೇಡರ ದಾಸಿಮಯ್ಯನವರು ಪ್ರತಿಪಾದಿಸುತ್ತಾರೆ. ಶರಣ ಧರ್ಮದ ಮೂಲತತ್ವಗಳನ್ನು ಪ್ರಾಮಾಣಿಕವಾಗಿ ಪಾಲಿಸಿದರೆ, ದಾನದ ಹೆಸರಿನಲ್ಲಿ ಉಂಟಾಗುವ ಅನೇಕ ರೀತಿಯ ಶೋಷಣೆಯನ್ನು ತಡೆಯಬಹುದು. ಆದರೆ ಆ ತತ್ವಗಳನ್ನು ನಿಷ್ಠೆಯಿಂದ ಆಚರಿಸಿದಾಗ ಮಾತ್ರ ಸಾಧ್ಯವಾಗುತ್ತದೆ. ಶರಣ ಧರ್ಮದ ಕೆಲವು ಮೂಲತತ್ವಗಳು ಈ ನಿಟ್ಟಿನಲ್ಲಿ ಪ್ರಮುಖ ಪಾತ್ರವಹಿಸತ್ತವೆ. ಅವುಗಳೆಂದರೆ:

  • ಕಾಯಕವೇ ಕೈಲಾಸ – ದುಡಿಮೆಯಿಂದ ಗಳಿಸಿದ ಸಂಪತ್ತು ಶ್ರೇಷ್ಠವಾದದ್ದು. ಅನ್ಯಾಯದಿಂದ ಸಂಪಾದಿಸಿದ ಸಂಪತ್ತಿನಿದ ಮಾಡುವ ದಾನಕ್ಕೆ ಮೌಲ್ಯವಿಲ್ಲ.
  • ದಾಸೋಹ: ದಾನವು ಮೇಲಿನಿಂದ ಕೆಳಗೆ ಕೊಡುವ ಅನುಗ್ರಹವಲ್ಲ. ಅಗತ್ಯವಿರುವವರೊಂದಿಗೆ ಸಮಾನತೆಯಿಂದ ಹಂಚಿಕೊಳ್ಳುವ ಜೀವನದ ಮೌಲ್ಯಯುತವಾದ ಪದ್ಧತಿಯಾಗಿರುತ್ತದೆ. ಅದರಿಂದ ದಾನಿಯ ಅಹಂಕಾರ ಪಡೆಯುವಂತಿಲ್ಲ. ಮತ್ತು ಸ್ವೀಕರಿಸುವವರ ಹೀನಭಾವ ಹೊಂದುವತಿಲ್ಲ.
  • ಸಮಾನತೆ: ಶರಣ ಧರ್ಮದಲ್ಲಿ ಜಾತಿ, ಲಿಂಗ, ವರ್ಣ ಹಾಗೂ ಧನಸಂಪತ್ತಿನ ಆಧಾರದ ಮೇಲೆ ಭೇದಭಾವಕ್ಕೆ ಅವಕಾಶ ಇರುವುದಿಲ್ಲ. ಹೀಗಾಗಿ ದಾನವು ಅಧಿಕಾರದ ಸಾಧನವಾಗುವುದಿಲ್ಲ.

ಅಲ್ಲದೆ, ಅನುಭವ ಮಂಟಪದಲ್ಲಿ ಈ ಕುರಿತು ಜ್ಞಾನ, ಚರ್ಚೆ, ವಚನ ರಚನೆ ಮತ್ತು ಸಾಮಾಜಿಕ ಉತ್ತರದಾಯಿತ್ವಕ್ಕೆ ಮಹತ್ವ ನೀಡಿದ್ದರಿಂದ ಸಂಪನ್ಮೂಲಗಳ ಬಳಕೆಯಲ್ಲೂ ಪಾರದರ್ಶಕತೆ ಮತ್ತು ಹೊಣೆಗಾರಿಕೆಗೆ 770 ಅಮರ ಗಣಂಗಗಳ ಮೂಲಕ ಒತ್ತು ನೀಡಲಾಗಿತ್ತು. ಬಸವಾದಿ ಶರಣರು ಯಜ್ಞ, ಯಾಗ, ಉತ್ಸವ, ಪ್ರತಿಷ್ಠೆಯ ವೈಭವ, ಪ್ರದರ್ಶನಕ್ಕಾಗಿ ಮಾಡುವ ದಾನವನ್ನು ಟೀಕಿಸಿ, ಹಸಿದವರಿಗೆ ಅನ್ನ, ನಿರ್ಗತಿಕರಿಗೆ ನೆರವು ನೀಡುವುದನ್ನೇ ನಿಜವಾದ ಧರ್ಮವೆಂದು ಪ್ರತಿಪಾದಿಸಿದರು. ಅವರ ದೃಷ್ಟಿಯಲ್ಲಿ ದಾನಕ್ಕಿಂತ ದಾಸೋಹ ಮುಖ್ಯ. ದಾನದಲ್ಲಿ ದಾನಿ-ಯಾಚಕ ಎಂಬ ಅಸಮಾನ ಸಂಬಧ ಉಳಿಯುವ ಸಾಧ್ಯತೆ ಇದೆ. ಆದರೆ ದಾಸೋಹದಲ್ಲಿ ಎಲ್ಲರೂ ಶಿವನ ಮಕ್ಕಳು ಎಂಬ ಸಮಾನತೆಯ ಭಾವನೆ ಇರುತ್ತದೆ. ಈ ಕಾರಣದಿಂದ ದಾಸೋಹವು ದಾನದ ಹೆಸರಿನಲ್ಲಿ ನಡೆಯಬಹುದಾದ ಆರ್ಥಿಕ, ಸಾಮಾಜಿಕ ಮತ್ತು ಧಾರ್ಮಿಕ ಶೋಷಣೆಯನ್ನು ಬಹುಮಟ್ಟಿಗೆ ತಡೆಯುವ ಸಾಮರ್ಥ್ಯ ಹೊಂದಿದೆ. ಬಸವಣ್ಣನವರು ಪ್ರತಿಪಾದಿಸಿದ “ಕಾಯಕ ಮತ್ತು ದಾಸೋಹ” ತತ್ವವನ್ನು ಸಮಾಜವು ವ್ಯಾಪಕವಾಗಿ ಅಳವಡಿಸಿಕೊಂಡರೆ, ದಾನವು ಶೋಷಣೆಯ ಸಾಧನವಾಗದೆ ಸಮಾನತೆ, ಗೌರವ ಮತ್ತು ಸಾಮಾಜಿಕ ನ್ಯಾಯದ ಸಾಧನವಾಗುವ ಸಾಧ್ಯತೆ ಹೆಚ್ಚುತ್ತದೆ.

ದಾನದಿಂದಾಗುವ ಶೋಷಣೆಗಳು:

ಇತ್ತೀಚಿನ ಮಠಮಂದಿರಗಳಲ್ಲಿನ ದಾನದಿಂದಾಗುವ ಶೋಷಣೆಗಳು ಹಾಗೂ ಅಕ್ರಮ ಪ್ರಕರಣಗಳನ್ನು ಸಮತೋಲನದ ದೃಷ್ಟಿಯಿಂದ ವಿಶ್ಲೇಷಿಸಬೇಕಾಗಿದೆ. 12 ನೇ ಶತಮಾದಿಂದಲೂ ಅನೇಕ ಧಾರ್ಮಿಕ ಸಂಘ, ಸಂಸ್ಥೆಗಳು, ಶಿಕ್ಷಣ, ಆರೋಗ್ಯ, ಅನ್ನದಾನ ಮತ್ತು ಸಮಾಜ ಸೇವೆಯಲ್ಲಿ ಮಹತ್ವದ ಕೊಡುಗೆ ನೀಡುತ್ತವೆ. ರಾಜ ಮಹಾರಾಜರು ದಾನ ದೇಣಿಗೆ ನೀಡಿದ್ದರ ಫಲವಾಗಿ ಇಂದಿನ ಧಾರ್ಮಿಕ ಸ್ಥಳಗಳು ಹೆಮ್ಮರವಾಗಿ ಬೆಳೆದಿವೆ ಎಂದು ಘಂಟಾ ಘೋಷವಾಗಿ ಹೇಳಬೇಕಿಲ್ಲ. ಆದರೆ ಅವುಗಳ ಕುರಿತಾದ ಕುರುಹು ಮತ್ತು ಪುರಾವೆಗಳನ್ನು ನಾಶ ಪಡಿಸಿದ್ದು ವ್ಯಾಘ್ರ ಬೆಳವಣಿಗೆ ಎಂದು ಬಣ್ಣಿಸಬಹುದು. ಅವೆಲ್ಲವೂ ದಾನ ಮತ್ತು ದೇಣಿಗೆಗಳ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡ ಉದಾಹರಣೆಗಳು ಹೆಚ್ಚು ಕಂಡುಬದಿವೆ. ಅಂತಹ ಸಂದರ್ಭಗಳಲ್ಲಿ ಸಂಭವಿಸುವ ಶೋಷಣೆಯ ರೂಪಗಳೆಂದರೆ:

  • ಪುಣ್ಯದ ಹೆಸರಿನಲ್ಲಿ ದಾನ, ದೇಣಿಗೆಗೆ ಒತ್ತಡ -ಇಷ್ಟು ದಾನ ಮಾಡಿದರೆ ವಿಶೇಷ ಫಲ, ಮಾಡದಿದ್ದರೆ ಅನಿಷ್ಟ ಎಂಬ ನಂಬಿಕೆಗಳನ್ನು ಬಳಸಿಕೊಂಡು ದಾನಿಗಳ ಮೇಲೆ ಒತ್ತಡ ಹೇರುವುದು.
  • ದಾನಿಗಳ ಸಾಮರ್ಥ್ಯಕ್ಕಿಂತ ಹೆಚ್ಚಿನ ಹಣ ಅಥವಾ ವಸ್ತುಗಳನ್ನು ದೇಣಿಗೆಯಾಗಿ ಪಡೆಯಲು ಪ್ರೇರೇಪಿಸಿ, ಆರ್ಥಿಕವಾಗಿ ಶೋಷಿಸುವುದು.
  • ಪಾರದರ್ಶಕತೆಯ ಕೊರತೆ – ದಾನದ ಹಣವನ್ನು ಹೇಗೆ ಮತ್ತು ಯಾವ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ ಎಂಬ ಸ್ಪಷ್ಟ ಲೆಕ್ಕಪತ್ರ ಅಥವಾ ಸಾರ್ವಜನಿಕ ಮಾಹಿತಿ ಒದಗಿಸುವುದಿಲ್ಲ.
  • ವಿಶೇಷ ಸೇವೆಗಳ ವ್ಯಾಪಾರೀಕರಣ- ಹೆಚ್ಚಿನ ದೇಣಿಗೆ ನೀಡಿದವರಿಗೆ ವಿಶೇಷ ದರ್ಶನ, ಪೂಜೆ ಅಥವಾ ಸನ್ಮಾನ, ಗೌರವ ನೀಡುವುದು. ಇದರಿಂದ ಅಸಮಾನತೆಯ ಭಾವದೊಂದಿಗೆ ಶೋಷಣೆಯ ನೀತಿ ಹೆಚ್ಚುತ್ತಿದೆ.
  • ದುರ್ಬಲರ ಶೋಷಣೆ – ಸಂಕಷ್ಟದಲ್ಲಿರುವವರ ಭಾವನೆಗಳನ್ನು ಬಳಸಿಕೊಂಡು ದೇಣಿಗೆ ಸಂಗ್ರಹಿಸಿ, ತಮ್ಮ ಸ್ವಾರ್ಥಕ್ಕೆ ಬಳಸಿ, ಮರೆಮಾಚಿಸುವುದು.
  • ಉತ್ತರದಾಯಿತ್ವದ ಕೊರತೆ – ದೇಣಿಗೆಯ ಹಣವನ್ನು ವೈಯಕ್ತಿಕ ಅಥವಾ ಸಂಸ್ಥೆಯ ಅಸಂಬದ್ಧ ಖರ್ಚುಗಳಿಗೆ ಬಳಸಿದರೆ ಅದು ದುರುಪಯೋಗವಾಗುತ್ತದೆ ಎಂಬ ಸ್ಪಷ್ಟ ಅರಿವು ಇಲ್ಲದಿರುವುದು.
  • ಸಂಪತ್ತಿನ ಕೇಂದ್ರೀಕರಣ – ದಾನದಿಂದ ಅಪಾರ ಆಸ್ತಿ ಹಾಗೂ ಸಂಪತ್ತನ್ನು ಸಂಗ್ರಹಿಸಿ, ಸಾರ್ವಜನಿಕ ಹಿತಕ್ಕಾಗಿ ಬಳಸದೆ, ಸ್ವಾರ್ಥಕ್ಕಾಗಿ ಬಳಸಿಕೊಂಡು ದಾನ, ದೇಣಿಗೆಯ ನಿಧಿಯನ್ನು ದುರುಪುಯೋಗಪಡಿಸಿಕೊಳ್ಳುವುದು.

ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆಸತ್ಪಾತ್ರಕ್ಕೆ ಸಲ್ಲದಯ್ಯಾ,
ನಾಯ ಹಾಲು ನಾಯಿಗಲ್ಲದೆ ಪಂಚಾಮೃತಕ್ಕೆ ಸಲ್ಲದಯ್ಯಾ.
ನಮ್ಮ ಕೂಡಲಸಂಗನ ಶರಣರಿಗಲ್ಲದೆ
ಮಾಡುವ ಅರ್ಥ ವ್ಯರ್ಥ ಕಂಡಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-60/ವಚನ ಸಂಖ್ಯೆ-223)

ಈ ವಚನದಲ್ಲಿ ಬಸವಣ್ಣನವರು ಧನದ ಶುದ್ಧತೆ ಮತ್ತು ದಾನದ ಪಾವಿತ್ರ್ಯತೆ ಕುರಿತು ಅರಿವು ಮೂಡಿಸಿದ್ದಾರೆ. ಅನ್ಯಾಯ, ಶೋಷಣೆ, ವಂಚನೆ ಅಥವಾ ಪಾಪದ ಮಾರ್ಗದಿಂದ ಸಂಪಾದಿಸಿದ ಧನವು ಸತ್ಪಾತ್ರರಿಗೆ ಅರ್ಪಿಸಲು ಯೋಗ್ಯವಲ್ಲ. ಅಂತಹ ಧನವನ್ನು ಮೊದಲು ತನ್ನ ತಪ್ಪಿನ ಅರಿವಿನಿಂದ ಪ್ರಾಯಶ್ಚಿತ್ತಕ್ಕೆ ಬಳಸಬೇಕು. ಅಶುದ್ಧ ಸಂಪಾದನೆಯಿದ ಮಾಡಿದ ದಾನ ಧರ್ಮ ಕಾರ್ಯವಾಗುವುದಿಲ್ಲ. ಬಸವಣ್ಣನವರು ಇದನ್ನು ಒಂದು ಸುಂದರ ಉಪಮೆಯ ಮೂಲಕ ವಿವರಿಸುತ್ತಾರೆ. ನಾಯಿಯ ಹಾಲು ನಾಯಿ ಮರಿಗಳಿಗೆ ಮಾತ್ರ ಯೋಗ್ಯ. ಅದನ್ನು ಪಂಚಾಮೃತ ತಯಾರಿಸಲು ಬಳಸುವುದಿಲ್ಲ. ಅದೇ ರೀತಿ ಪಾಪದಿಂದ ಬಂದ ಧನವನ್ನು ಧರ್ಮದ ಹೆಸರಿನಲ್ಲಿ ಕೊಟ್ಟರೂ ಅದು ಪವಿತ್ರವಾಗುವುದಿಲ್ಲ. ಕೂಡಲಸಂಗನ ಶರಣರಿಗೆ ಸಲ್ಲುವ ದಾಸೋಹ ಅಥವಾ ಅರ್ಪಣೆ ಶುದ್ಧ ಕಾಯಕದಿಂದ ಗಳಿಸಿದ ಧನದಿಂದಲೇ ಆಗಬೇಕು, ಇಲ್ಲದಿದ್ದರೆ ಅದು ವ್ಯರ್ಥವೆಂದು ಉಪದೇಶಿಸಿದ್ದಾರೆ. ಧನದ ಪ್ರಮಾಣಕ್ಕಿಂತ ಅದರ ಸಂಪಾದನೆಯ ಶುದ್ಧತೆ ಮುಖ್ಯ. ಅನ್ಯಾಯದ ಕೃತ್ಯ ಎಸಗಿ ಸಂಪಾದನೆ ಮಾಡಿದ ದಾನ ಧರ್ಮವಲ್ಲ. ಪಾಪದ ಧನ ಮೊದಲು ಪ್ರಾಯಶ್ಚಿತ್ತಕ್ಕೆ ಬಳಸಬೇಕು. ಸತ್ಪಾತ್ರರಿಗೆ ಅರ್ಪಿಸುವ ದಾಸೋಹವು ಕಾಯಕದಿಂದ ಗಳಿಸಿದ ಶುದ್ಧ ಸಂಪಾದನೆಯಿದ ಮಾತ್ರ ಇರಬೇಕು. ಈ ವಚನವು “ಕಾಯಕವೇ ಕೈಲಾಸ” ಮತ್ತು ದಾಸೋಹ, ಶುದ್ಧ ಸಂಪಾದನೆಯೇ ಶುದ್ಧ ದಾನಕ್ಕೆ ಆಧಾರ ಎಂಬ ಬಸವ ತತ್ವವನ್ನು ಪ್ರತಿಪಾದಿಸುತ್ತದೆ.

ಧನಕ್ಕೆ ಮನವನೊಡ್ಡಿದಡೇನು?
ಮನಕ್ಕೆ ಧನವನೊಡ್ಡಿದಡೇನು?
ತನು, ಮನ, ಧನವ ಮೀರಿ ಮಾತಾಡಬಲ್ಲಡೆ
ಆತ ನಿಸ್ಸೀಮನು, ಆತ ನಿಜೈಕ್ಯನು.
ತನು ಮನ ಧನವನುವಾದಡೆ,
ಕೂಡಲಸಂಗಮದೇವನೊಲಿವ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-59/ವಚನ ಸಂಖ್ಯೆ-216)

ಈ ವಚನದಲ್ಲಿ ಬಸವಣ್ಣನವರು ತನು (ದೇಹ), ಮನ (ಮನಸ್ಸು), ಧನ (ಸಂಪತ್ತು) ಇವುಗಳ ಮೇಲಿನ ಆಸಕ್ತಿಯನ್ನು ಮೀರಿ ಆತ್ಮ ಸಾಕ್ಷಾತ್ಕಾರವನ್ನು ಹೊಂದುವ ಮಾರ್ಗವನ್ನು ವಿವರಿಸುತ್ತಾರೆ. “ಧನಕ್ಕೆ ಮನವ ನೋಡಿದರೇನು? ಮನಕ್ಕೆ ಧನವ ನೋಡಿದರೇನು?” ಎಂಬ ಪ್ರಶ್ನೆಯ ಮೂಲಕ, ಧನ ಮತ್ತು ಮನಸ್ಸು ಒಂದನ್ನೊದು ಆಳುವ ಸ್ಥಿತಿಯನ್ನು ಪ್ರಶ್ನಿಸುತ್ತಾರೆ. ಮನಸ್ಸು ಧನದ ಹಿಂದೆ ಓಡಿದರೂ, ಧನ ಮನಸ್ಸನ್ನು ಆಳಿದರೂ, ಎರಡೂ ಬಂಧನವೇ. ತನು, ಮನ, ಧನ ಎಂಬ ಮೂರು ಮಿತಿಗಳನ್ನು ದಾಟಿ, ಅವುಗಳ ಮೇಲೆ ಅಂಟಿಕೊಳ್ಳದೆ ಬದುಕುವವನೇ ನಿಸ್ಸೀಮನು (ಮಿತಿಯಿಲ್ಲದವನು) ಮತ್ತು ನಿಜೈಕ್ಯವನ್ನು ಪಡೆದವನು. ಅಂದರೆ, ಅವನು ಪರಮಾತ್ಮನೊಂದಿಗೆ ಐಕ್ಯ ಸ್ಥಿತಿಯನ್ನು ಹೊಂದುತ್ತಾನೆ. ತನು-ಮನ-ಧನವನ್ನು ಕೂಡಲಸಂಗಮದೇವನಿಗೆ ಸಮರ್ಪಿಸಿ, ಅವುಗಳನ್ನು ಧರ್ಮಮಾರ್ಗದಲ್ಲಿ ಬಳಸಿದಾಗ ಪರಶಿವನ ಕೃಪೆ ದೊರೆಯುತ್ತದೆ ಎಂದು ಬಸವಣ್ಣನವರು ಉಪದೇಶಿಸಿದ್ದಾರೆ. ಧನವು ಮನಸ್ಸನ್ನು ಆಳಬಾರದು; ಮನಸ್ಸು ಧನದ ದಾಸನಾಗಬಾರದು. ದೇಹ, ಮನಸ್ಸು ಮತ್ತು ಸಂಪತ್ತಿನ ಮೇಲಿನ ಅಹಂಕಾರ ಹಾಗೂ ಮಮಕಾರವನ್ನು ಮೀರಬೇಕು. ತನು, ಮನ, ಧನವನ್ನು ಪರಶಿವನ ಸೇವೆ, ಕಾಯಕ ಮತ್ತು ದಾಸೋಹಕ್ಕೆ ಅರ್ಪಿಸಿದಾಗ ನಿಜವಾದ ಆಧ್ಯಾತ್ಮಿಕ ಪ್ರಗತಿ ಸಾಧ್ಯ. ಇದೇ ಕೂಡಲಸಂಗಮದೇವನ ಅನುಗ್ರಹವನ್ನು ಪಡೆಯುವ ಮಾರ್ಗವೆಂಬುದು ಈ ವಚನದ ಸಾರವಾಗಿರುತ್ತದೆ.

ಭಂಡವ ತುಂಬಿದ ಬಳಿಕ
ಸುಂಕವ ತೆತ್ತಲ್ಲದೆ ಹೋಗಬಾರದು.
ಕಳ್ಳ ನಾಣ್ಯ ಸಲುಗೆಗೆ ಸಲ್ಲದು.
ಕಳ್ಳನಾಣ್ಯವ ಸಲಲೀಯರಯ್ಯಾ.
ಭಕ್ತಿಯೆಂಬ ಭಂಡಕ್ಕೆ ಜಂಗಮವೇ ಸುಂಕಿಗ.
ಕೂಡಲಸಂಗಮದೇವಾ.            
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-54/ವಚನ ಸಂಖ್ಯೆ-198)

ಈ ವಚನದಲ್ಲಿ ಬಸವಣ್ಣನವರು ಭಕ್ತಿ, ದಾಸೋಹ ಮತ್ತು ಜಂಗಮಸೇವೆಯ ಮಹತ್ವವನ್ನು ಒಂದು ವ್ಯಾಪಾರದ ರೂಪಕದ ಮೂಲಕ ವಿವರಿಸುತ್ತಾರೆ. ವ್ಯಾಪಾರಿ ತನ್ನ ಭಾಂಡ (ಸರಕು) ತುಂಬಿಸಿಕೊಡ ನಂತರ ಸರ್ಕಾರಕ್ಕೆ ಸುಂಕವನ್ನು ಪಾವತಿಸದೆ ಅನ್ಯಾಯವೆಸಗಲು ಹಾಗೂ ವಂಚಿಸಲು ಸಾಧ್ಯವಿಲ್ಲ. ಅದೇ ರೀತಿ, ಮನುಷ್ಯನು ಜೀವನದಲ್ಲಿ ಸಂಪತ್ತು, ಜ್ಞಾನ ಮತ್ತು ಸೌಭಾಗ್ಯವನ್ನು ಪಡೆದ ನಂತರ ಸಮಾಜಕ್ಕೆ ತನ್ನ ಪಾಲಿನ ಸೇವೆಯನ್ನು ಮಾಡಬೇಕು. ಅದೇ ಸಮಯದಲ್ಲಿ, ಕಳ್ಳ ನಾಣ್ಯವನ್ನು ಯಾರೂ ಸ್ವೀಕರಿಸುವುದಿಲ್ಲ. ಅಂದರೆ, ಕಪಟ ಭಕ್ತಿ, ಅನ್ಯಾಯದಿಂದ ಗಳಿಸಿದ ಧನ ಅಥವಾ ಪ್ರದರ್ಶನಕ್ಕಾಗಿ ಮಾಡುವ ದಾನ ದೇವರಿಗೆ ಮೆಚ್ಚುಗೆಯಾಗುವುದಿಲ್ಲ. ಬಸವಣ್ಣನವರ ಪ್ರಕಾರ ಭಕ್ತಿಯೇ ನಿಜವಾದ ಭಾಂಡ (ಸಂಪತ್ತು) ಮತ್ತು ಜಂಗಮ ಸೇವೆಯೇ (ದಾಸೋಹ) ಆ ಭಕ್ತಿಗೆ ಕಟ್ಟಬೇಕಾದ ಸುಂಕ. ಅಂದರೆ, ಭಕ್ತಿಯು ಕೇವಲ ಮನಸ್ಸಿನಲ್ಲಿರದೆ, ಅದು ಜಂಗಮ ಸೇವೆ, ದಾಸೋಹ, ಕಾಯಕ ಮತ್ತು ಸಮಾಜೋಪಯೋಗಿ ಕಾರ್ಯಗಳ ಮೂಲಕ ವ್ಯಕ್ತವಾಗಬೇಕು. ಆಗ ಮಾತ್ರ ಕೂಡಲಸಂಗಮದೇವನ ಕೃಪೆ ದೊರೆಯುತ್ತದೆ. ಜೀವನದಲ್ಲಿ ಪಡೆದಿರುವುದಕ್ಕೆ ಸಮಾಜದ ಋಣವನ್ನು ತೀರಿಸಬೇಕು. ಕಪಟ ಭಕ್ತಿ ಅಥವಾ ಅನ್ಯಾಯದ ಸಂಪಾದನೆಯಿದ ಮಾಡಿದ ಸೇವೆ ಸ್ವೀಕಾರಾರ್ಹವಲ್ಲ. ಭಕ್ತಿ ಕ್ರಿಯಾರೂಪಕ್ಕೆ ಇಳಿದಾಗಲೇ ಅದು ಸಾರ್ಥಕವಾಗುತ್ತದೆ. ಜಂಗಮ ಸೇವೆ ಮತ್ತು ದಾಸೋಹವೇ ನಿಜವಾದ ಭಕ್ತಿಯ ಲಕ್ಷಣ ಎಂದು ಬಸವಣ್ಣನವರು ಈ ವಚನದಲ್ಲಿ ಬೋಧಿಸಿದ್ದಾರೆ.

ಆಕರ ಗ್ರಂಥಗಳು:

  1. ಬಸವಣ್ಣನವರ ವಚನಗಳು – ಸಂಪಾದಕರು: ಡಾ. ಎಂ. ಎಂ. ಕಲಬುರ್ಗಿ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.
  2. ಬಸವಣ್ಣ: ವ್ಯಕ್ತಿ ಮತ್ತು ವಿಚಾರ – ಡಾ. ಎಂ. ಎಂ. ಕಲಬುರ್ಗಿ.
  3. ಬಸವ ಧರ್ಮ ದರ್ಶನ – ಡಾ. ಎಚ್. ತಿಪ್ಪೇರುದ್ರಸ್ವಾಮಿ.
  4. ಶರಣ ಸಂಸ್ಕೃತಿ – ಡಾ. ಜಿ. ಎಸ್. ಶಿವರುದ್ರಪ್ಪ.
  5. Basava, Vachanas, translated by A. K. Ramanujan, Speaking of Śiva, Penguin Classics, 1973.
  6. Basava and His Times, M. M. Kalburgi, Kannada University, Hampi.
  7. Speaking of Basava, K. Ishwaran, Lingayat Religion and Culture in South Asia, Westview Press.

ಡಾ. ಸತೀಶ ಕೆ. ಇಟಗಿ,
ಪತ್ರಿಕೋದ್ಯಮ ಉಪನ್ಯಾಸಕ,
ಅಂಚೆ: ಕೋಳೂರ – 586 129.
ತಾ: ಮುದ್ದೇಬಿಹಾಳ, ಜಿ: ವಿಜಯಪುರ.
ಮೊ: 92412 86422
ಈ-ಮೇಲ್:‌ satshitagi10@gmail.com

  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನಸಾಹಿತ್ಯ ಮಂದಾರ ಫೌಂಡೇಶನ್‌ (ರಿ) ದ ಸಂಚಾಲಕರನ್ನು ಸಂಪರ್ಕಿಸಬೇಕಾದ:
    • ಮೋಬೈಲ್ ನಂ. 9741 357 132
    • e-Mail ID: info@vachanamandara.in / admin@vachanamandara.in

Leave a Reply