![]()

ವಚನ:
ಸಿಂಹ ಮದಕರಿಯ ಮೇಲೆ ಹಾರುವುದಲ್ಲದೆ,
ಮದಮಹಿಷಿಯ ಮೇಲೆ ಹಾರುವುದೆ ಅಯ್ಯಾ?
ಪಕ್ಷಿ ಆಕಾಶದಲ್ಲಿ ಹಾರುವುದಲ್ಲದೆ,
ಪಂಜರದಲ್ಲಿ ಹಾರದು ನೋಡಯ್ಯಾ!
ನಮ್ಮ ಕಪಿಲಸಿದ್ಧಮಲ್ಲೇಶನನರಿವವರು
ಜ್ಞಾನದ ಮೇಲೆ ಹಾರುವರಲ್ಲದೆ
ಅಜ್ಞಾನದ ಮೇಲೆ ಹಾರರು.
(ಸಮಗ್ರ ವಚನ ಸಂಪುಟ: ನಾಲ್ಕು-2021/ವಚನ ಸಂಖ್ಯೆ-1239)
ಶಿವಯೋಗಿ ಸಿದ್ಧರಾಮೇಶ್ವರರು ಭಕ್ತಿ, ಕಾಯಕ, ದಾಸೋಹ ಮತ್ತು ಸಮಾನತೆಯ ಆದರ್ಶಗಳನ್ನು ಜನರಿಗೆ ಬೋಧಿಸಿದ ಮಹಾನ್ ಶರಣರು. ಅವರ ವಚನಗಳು ಮಾನವೀಯತೆ, ಆತ್ಮಜ್ಞಾನ ಮತ್ತು ಸಾಮಾಜಿಕ ಸಮರತೆಯ ಮೌಲ್ಯಗಳನ್ನು ಪ್ರತಿಪಾದಿಸುವ ಮೂಲಕ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ಅಮೂಲ್ಯ ಕೊಡುಗೆಯನ್ನು ನೀಡಿವೆ. ಇಂದಿನ ಸಮಾಜಕ್ಕೂ ಅವರ ಚಿಂತನೆಗಳು ಪ್ರಸ್ತುತ ಮತ್ತು ಪ್ರೇರಣಾದಾಯಕವಾಗಿವೆ.
ಈ ವಚನವೂ ಕೂಡ ಅದೇ ನಿಟ್ಟಿನಲ್ಲಿ ಅಂದರೆ ಈ ವಚನ ಮೂಲ ಆಶಯವೆ, ನಿಜವಾದ ಜ್ಞಾನಿಗಳು ಮತ್ತು ಶಿವಾನುಭಾವಿಗಳು ತಮ್ಮ ಚಿಂತನೆ, ಸಾಧನೆಯ ಬಗ್ಗೆ ಮತ್ತು ಜ್ಞಾನ ಸಂಪಾದಿಸುವುದರಲ್ಲಿ, ಸತ್ಯದ ಅನುಸಂಧಾನದಲ್ಲಿ ಜೊತೆಗೆ ಆತ್ಮಾನುಭವದ ಅನ್ವೇಷಣೆಯಲ್ಲಿ ನಿರತರಾಗಿರುತ್ತಾನೆ. ಅವರು ಅಜ್ಞಾನ, ಮೂಢನಂಬಿಕೆ, ಸಂಕುಚಿತತೆ ಮತ್ತು ಕ್ಷುದ್ರ ಕ್ಷುಲ್ಲಕ ವಿಚಾರಗಳಲ್ಲಿ ಎಂದು ತನ್ನನ್ನು ತಾನು ತೊಡಗಿಕೊಳ್ಳುವುದಿಲ್ಲ ಎಂಬುದಾಗಿದೆ.
ಸಿಂಹವು ತನ್ನ ಶೌರ್ಯವನ್ನು ಪ್ರದರ್ಶಿಸೋದಕ್ಕೆ ಬಲಿಷ್ಠ ಆನೆಯನ್ನೇ ಎದುರಿಸುತ್ತದೆ. ದುರ್ಬಲ ಎಮ್ಮೆಯ ಮೇಲೆ ತನ್ನ ಪರಾಕ್ರಮವನ್ನು ತೋರಿಸುವುದಿಲ್ಲ. ಪಕ್ಷಿಯ ಸ್ವಭಾವ ಆಕಾಶದಲ್ಲಿ ಹಾರುವುದು, ಪಂಜರದೊಳಗಿದ್ದಾಗ ತನ್ನ ನಿಜವಾದ ಸಾಮರ್ಥ್ಯವನ್ನು ತೋರಿಸಲಾರದು. ಅದೇ ರೀತಿ ಕಪಿಲಸಿದ್ಧಮಲ್ಲೇಶ್ವರನ ಅನುಭವ ಪಡೆದ ಜ್ಞಾನಿಗಳು ಜ್ಞಾನದ ವಿಶಾಲ ಗಗನದಲ್ಲೇ ಸಂಚರಿಸುತ್ತಾರೆ. ಅಜ್ಞಾನ, ಮೂಢನಂಬಿಕೆ ಮತ್ತು ಸಂಕುಚಿತತೆಯ ಬಂಧನದಲ್ಲಿ ಅವರು ಸಿಲುಕುವುದಿಲ್ಲ.
ಈ ವಚನದಲ್ಲಿ ಎರಡು ಉಪಮೆಗಳನ್ನ ನೋಡುತ್ತೇವೆ. ಒಂದು ಸಿಂಹ-ಆನೆ, ಮತ್ತೊಂದು ಪಕ್ಷಿ-ಆಕಾಶ. ಸಿಂಹ ಧೈರ್ಯ, ಆತ್ಮವಿಶ್ವಾಸ ಮತ್ತು ಶಕ್ತಿಯ ಸಂಕೇತ. ನಿಜವಾದ ವೀರನು ದುರ್ಬಲನ ಮೇಲೆ ತನ್ನ ಬಲ ಪ್ರದರ್ಶಿಸುವುದಿಲ್ಲ. ಅವನು ದೊಡ್ಡ ಸವಾಲುಗಳನ್ನು ಸ್ವೀಕರಿಸುತ್ತಾನೆ.
ಮೊದಲನೇಯ ಉಪಮೆಯಲ್ಲಿ ಕ್ಷುಲ್ಲಕ ವಿಚಾರಗಳನ್ನ ಮದ ಮಹಿಷಿಗೆ ಹೊಲಿಸುತ್ತಾ, ಜ್ಞಾನಿಗಳು ಸಣ್ಣ ಸಣ್ಣ ವಿಚಾರಗಳಲ್ಲಿ ಕಾಲಹರಣ ಮಾಡುವುದಿಲ್ಲ ಎಂದು ಈ ವಚನದ ಮೂಲಕ ಶಿವಯೋಗಿ ಸಿದ್ಧರಾಮೇಶ್ವರರು ಸ್ಪಷ್ಟಪಡಿಸುತ್ತಾರೆ. ಜ್ಞಾನಿಗಳು ಸತ್ಯದ ಹುಡುಕಾಟದಂತಹ ಮಹತ್ತಾದ ಗುರಿಗಳ ಕಡೆಗೆ ತನ್ನ ಸಾಧನೆಯಲ್ಲಿ ಅವಿರತರಾಗಿರುತ್ತಾರೆ. ಆತ್ಮಸಾಕ್ಷಾತ್ಕಾರವೇ ಅವರ ಗುರಿ.
ಈ ವಚನದಲ್ಲಿ ಉಲ್ಲೇಖವಾದ ಎರಡನೆಯ ಉಪಮೆಯಗಳಾದ ಪಕ್ಷಿ ಮತ್ತು ಆಕಾಶಗಳ ಮೂಲಕ ಪಕ್ಷಿಯ ಸ್ವಾತಂತ್ರ್ಯ ಆಕಾಶದಲ್ಲಿದೆ, ಪಂಜರದಲದಲ್ಲಿ ಬಂಧನಕ್ಕೊಳಗಾದ ಪಕ್ಷಿ ಅದರ ಸಹಜತೆಯ ಹಾರುವಿಕೆಯನ್ನ ಕುಂಠಿತಗೊಳಿಸುತ್ತದೆ ಎನ್ನುವುದನ್ನು ನಿರೂಪಣೆ ಮಾಡುತ್ತಾರೆ. ಇಲ್ಲಿ ಆಕಾಶ ಅಂದರೆ ಜ್ಞಾನ, ವಿವೇಕ, ಅನುಭವ. ಪಂಜರ ಅಂದರೆ ಅಜ್ಞಾನ, ಅಹಂಕಾರ, ಮೂಢನಂಬಿಕೆಯನ್ನ ಸೂಚಿಸುತ್ತದೆ. ಜ್ಞಾನಿಯ ಮನಸ್ಸು ವಿಶಾಲವಾಗಿರುತ್ತದೆ. ಸಂಕುಚಿತ ಧಾರ್ಮಿಕತೆ, ಜಾತಿ, ಅಹಂಕಾರ ಮತ್ತು ಅಂಧಾನುಕರಣದ ಬಂಧನ ಅವನನ್ನು ಹಿಡಿದುಕೊಳ್ಳಲಾರದು.
ಈ ವಚನವು ಕೇವಲ ಆಧ್ಯಾತ್ಮಿಕ ಉಪದೇಶ ಮಾತ್ರವಲ್ಲ. ಅದು ಮಾನಸಿಕ ಮತ್ತು ಸಾಮಾಜಿಕ ಸ್ಥಿರತೆಯನ್ನು ಕಾಪಿಡುವ ಬಗ್ಗೆ ತಿಳಿಸುತ್ತದೆ. ಶಿವಯೋಗಿ ಸಿದ್ಧರಾಮೇಶ್ವರರ ಪ್ರಕಾರ ಜ್ಞಾನವಿಲ್ಲದ ಭಕ್ತಿ ಕುರುಡನಂತೆ. ವಿವೇಕವಿಲ್ಲದ ಆಚರಣೆ ಪಂಜರದಂತೆ. ಆತ್ಮಜ್ಞಾನವಿಲ್ಲದ ಜೀವನ ಬಂಧನದಂತೆ. ಆದ್ದರಿಂದ ನಿಜವಾದ ಸಾಧಕನು ಸದಾ ಜ್ಞಾನದ ಮಾರ್ಗವನ್ನು ಕಂಡುಕೊಳ್ಳಬೇಕು.
ಇಂದಿನ ಡಿಜಿಟಲ್ ಯುಗದಲ್ಲಿ ಮಾಹಿತಿ ತಂತ್ರಜ್ಞಾನ ಅಪಾರವಾಗಿದೆ. ಆದರೆ ಮೌಲ್ಯದ ಕೊರತೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು ಹರಡುವಿಕೆ, ಮೂಢನಂಬಿಕೆಗಳು ಹೊಸ ಹೊಸ ರೂಪದಲ್ಲಿ ಹುಟ್ಟುತ್ತಲಿವೆ. ಮನುಷ್ಯ ವ್ಯಕ್ತಿ ಚಿಂತನೆಯ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಿದ್ಧಾನೆ. ಇಂತಹ ಸಂದರ್ಭದಲ್ಲಿ ಈ ವಚನ ಸೂಕ್ತವಾಗಿದೆ. ಆತ್ಮಾವಲೋಕನ ಮಾಡಿಕೊಂಡಾಗ ನಮಗೆ, ಜ್ಞಾನದ ಆಕಾಶದಲ್ಲಿ ಹಾರುತಿರು ಮನವೆ, ಅಜ್ಞಾನದ ಪಂಜರದಲ್ಲಿ ಸೆರೆಯಾಗಬೇಡ. ಜ್ಞಾನದ ರೆಕ್ಕೆಗೆ ಪಂಜರದ ಬಾಗಿಲು ತೆರೆದರೂ ಭಯದಿಂದ ಹಕ್ಕಿಗೆ ಹಾರೋಕಾಗಲ್ಲ. ಆಕಾಶ ವಿಶಾಲವಾಗಿ ಮೋಡಗಳು ದಾರಿ ತೋರಿಸುವಾಗ ಒಂದು ಕಿರಣ ಹೇಳತ್ತೆ “ನಿನ್ನ ರೆಕ್ಕೆಗಳ ನೆನಪಿಸಿಕೋ” ಅಜ್ಞಾನದ ಕಂಬಿಗಳು ಕರಗಿದಾಗ ಹಕ್ಕಿ ಹಾರುತ್ತೆ. ಅಂದರೆ ಸ್ವಾತಂತ್ರ್ಯವು ಹೊರಗಲ್ಲ, ಒಳಗಿನ ಜ್ಞಾನದಲ್ಲಿದೆ.
ಶ್ರೀಮತಿ. ಶಾಲಿನಿ ರುದ್ರಮುನಿ,
# 20, ರಾಜೀವನಗರ, ಎರಡನೇ ಹಂತ, ಎರಡನೇ ತಿರುವು,
ಪೋಲಿಸ್ ವಸತಿಗೃಹ ರಸ್ತೆ,
ವಿದ್ಯಾನಗರ,
ಹುಬ್ಬಳ್ಳಿ – 580031
ಮೊಬೈಲ್ ಸಂಖ್ಯೆ – 78921 69644
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ:
- ಮೋಬೈಲ್ ನಂ. 9741 357 132
- e-Mail ID: info@vachanamandara.in / admin@vachanamandara.in






Total views : 65581