![]()

ಸಮಾಜದಲ್ಲಿ ಧರ್ಮ ಎನ್ನುವ ಪರಿಕಲ್ಪನೆ ಧಾರಣ ಶಕ್ತಿಯಾಗಿ ನಮ್ಮನ್ನು ಹಿಡಿದಿಡಲು ಪ್ರಯತ್ನಿಸುತ್ತದೆ. ವರ್ಗ, ವರ್ಣ, ಸೌಹಾರ್ದತೆ, ಸಹಬಾಳ್ವೆ ನಮ್ಮನ್ನು ವ್ಯಾಖ್ಯಾನಿಸುವತ್ತ ಧಾವಿಸುತ್ತವೆ. ವಚನಗಳ ತಾತ್ವಿಕ ಮೀಮಾಂಸೆ ಭಕ್ತ ಮತ್ತು ಶರಣ ಸಂಬಂಧದಲ್ಲಿ ಧ್ಯಾನಸ್ತ ಮನಸ್ಸಿನ ಒಳ ಆವರಣವಾಗಿದೆ. ಕಾಯಕದ ಮೂಲಕ ದೇವರನ್ನು ಕಾಣುವ ಶ್ರಮ ಸಂಸ್ಕೃತಿಗೆ ನ್ಯಾಯವನ್ನು ಒದಗಿಸುವ ಎತ್ತರಿಸುವ ಪೂಜಿಸುವ ಸಂಸ್ಕೃತಿ ಎಂದರೆ ಶರಣರದು.
ಕಾಯಕವನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಶರಣ ಮೇದಾರ ಕೇತಯ್ಯನವರು ಬಸವಣ್ಣನವರ ಆಪ್ತರೆಂದು ಜನಪದ ಮತ್ತು ಶರಣ ಸಾಹಿತ್ಯದಲ್ಲಿ ಉಲ್ಲೇಖವಾಗಿದೆ. ಬಸವಣ್ಣನವರನ್ನು ಗುರುವಾಗಿ ಜಂಗಮ ದಾಸೋಹದಲ್ಲಿ ತಮ್ಮನ್ನು ಸಮರ್ಪಸಿಕೊಂಡ ಶರಣರು ಇವರು. ಜನಪದರು ಕೇತಯ್ಯನವರನ್ನು ದಿಟ್ಟ ಶರಣರೆಂದು ಸ್ಮರಿಸಿದ್ದಾರೆ.
ಅಂದಿನ ಕಾಲಘಟ್ಟದಲ್ಲಿ ನಿರ್ಲಕ್ಷಕ್ಕೊಳಗಾದ ತಳ ಸಮುದಾಯದವರಾದ ಕೇತಯ್ಯನವರು ಐಕ್ಯಸ್ಥಲವನ್ನು ತಲುಪಿದ್ದ ಶರಣರೆಂದೇ ಜನಜನಿತವಾಗಿದ್ದಾರೆ. ಇವರಿಗೆ ಕೇತ, ಕೇತಿದೇವಾ, ಕೇತಯ್ಯ, ಕೇತತಂದೆ, ಕ್ಯಾತಯ್ಯ ಎಂಬ ಹೆಸರುಗಳಿವೆ. ಪತ್ನಿ ಸಾತವ್ವೆ. ಇವರ ಜನ್ಮಸ್ಥಳ ಬೇಲೂರು. “ಗವರೇಶ್ವರಲಿಂಗ” ವಚನಾಂಕಿತದಿಂದ ಇವರು ಬರೆದ 11 ವಚನಗಳು ಇಲ್ಲಿಯವರೆಗೆ ಲಭ್ಯವಾಗಿವೆ. ಕಾಯಕ ಮತ್ತು ದಾಸೋಹಕ್ಕೆ ಬೆಳಕನ್ನು ನೀಡಿದ ಹಠಯೋಗಿ.
ಮಲೆನಾಡ ಗಡಿಯೊಳಗೆ
ಉಳುಮೆ ಬೆಟ್ಟದ ಬೆಳೆಗೆ
ಬೇಲೂರು ಕೇತ ಮೇದಾರ
ಕಾಡೊಳಗೆ ಬೆಳೆದಾಡಿ ಕಲೆತ
ಶಿವ ಮತವ
ಬೆಟ್ಟಗುಡ್ಡಗಳ ಸೀಮೆಯಲ್ಲಿ ಅರಣ್ಯದ ಮಧ್ಯದಲ್ಲಿ ಬೇಲೂರು ಮೇದಾರ ಕೇತ ಶಿವಮತವನ್ನು ಪ್ರಚಾರ ಮಾಡುವ ಕಾಯಕ ಜೀವಿಯಾಗಿದ್ದರು. ಶಿವ ದೈವ ಶಕ್ತಿಯ ಜೊತೆಗೆ ಮೇದಾರ ಜನ ವರ್ಗದವರನ್ನು ಸಂರಕ್ಷಿಸುವ ಶರಣನಾಗಿದ್ದರು. ಕಾಯಕ ನಿಷ್ಠೆ ನೈತಿಕ ಮತ್ತು ಪ್ರಾಮಾಣಿಕ ದುಡಿಮೆ ಅವರ ಆದರ್ಶವಾಗಿತ್ತು. ಬಿದಿರಿನಿಂದ ಗೃಹೋಪಯೋಗಿ ಪರಿಕರಗಳನ್ನು ಮಾಡಿ ಮಾರುತಿದ್ದರು. ಈ ಕಾಯಕದಿಂದ ಬಂದ ಹಣದಿಂದ ದಾಸೋಹ ಮಾಡುತ್ತಿದ್ದರು.
ಮೇದಾರ ಸಮುದಾಯದ ಜನರು ಹೆಚ್ಚಾಗಿ ಅಲೆಮಾರಿ ಜನಾಂಗದವರು. ಕಾಡಿನ ಬಿದಿರ ಮೆಳೆ ಇವರ ಜೀವನಕ್ಕೆ ಆಧಾರವಾಗಿತ್ತು. ಬೇಲೂರಿನಿಂದ ಕಲ್ಯಾಣಕ್ಕೆ ಬಂದು ಅನುಭವ ಮಂಟಪದಲ್ಲಿ ಮುಖ್ಯ ಅನುಭಾವಿಯಾಗಿ ಆತ್ಮೋನ್ನತಿಯನ್ನು ಪಡೆದುಕೊಂಡ ಶರಣರಾಗಿದ್ದರು.
ಕಾಯಕವೇ ಕೈಲಾಸ ತತ್ವದ ಪ್ರಾಮಾಣಿಕತೆಯನ್ನು ಕೇತಯ್ಯನವರು ಪಡೆದುಕೊಂಡಿದ್ದರು. ಕಾಯಕ ಶರಣರ ಉಪಜೀವನದಲ್ಲಿ ಅದೊಂದು ಆಧ್ಯಾತ್ಮ ದರ್ಶನದವದು. ಶ್ರಮ ಸಂಸ್ಕೃತಿಯ ಮೂಲಕ ಎಚ್ಚರಿಸುವ ಉದ್ಯೋಗದ ಸೃಷ್ಟಿ. ತಮ್ಮ ನಿತ್ಯ ಜೀವನದಲ್ಲಿ ಆತ್ಮೋನ್ನತಿಗೆ ಸಮರ್ಪಿಸಿಕೊಳ್ಳುವ ಅರ್ಪಿತ ಭಾವವದು. ಕಲ್ಯಾಣ ನಾಡಿನ ಶರಣರ ತತ್ವಗಳಿಂದ ಪ್ರೇರಿತರಾಗಿ ತಮ್ಮ ಹೆಂಡತಿಯ ಜೊತೆಗೂಡಿ ಬಿದಿರಿನ ಪರಿಕರಗಳನ್ನು ಮಾಡಿ ಕಲ್ಯಾಣದಲ್ಲಿ ಮಾರುತ್ತಿದ್ದರು. ಕಾಯಕದಿಂದ ಬಂದದ್ದನ್ನು ದಾಸೋಹ ಸೇವೆಗೈಯ್ದು ಉಳಿದದ್ದನ್ನು ಪ್ರಸಾದವಾಗಿ ಸ್ವೀಕರಿಸುತ್ತಿದ್ದರು. ತನು ಮನಗಳನ್ನು ಶಿವನಿಷ್ಠೆಯ ಮೂಲಕ ಸಮರ್ಪಿಸಿದ ಕಾಯಕದ ಶ್ರದ್ದೆ ಕೇತಯ್ಯ ಶರಣರದಾಗಿತ್ತು.
ಹೊಸ ಮತವೇ ಲಿಂಗವಾಗಿ ಕಸವೆಂಬ
ಕರಡಿಗೆಯ ಹಸನ ಮನವದಕೆ ಶಿವದಾರ
ದಾಸೋಹ ಉಣಿಸಲು ಶಿವಶರಣ
ಕೇತನಿಗೆ.
ಜನಪದದಲ್ಲಿ ಶಿವ ಸ್ನೇಹಿತ ಮತ್ತು ರೈತನಾಗಿ ಭೂಮಿಯನ್ನು ಉಳಿಮೆ ಮಾಡುವ ರೂಪಕ ಶಿವ. ಅಷ್ಟೇ ಅಲ್ಲದೆ ಸರಳ ಮತ್ತು ಬಹು ಶೀಘ್ರವಾಗಿ ವರ ನೀಡುವ, ಭಕ್ತನಿಗೆ ಕೋಪ ಬಂದಾಗ ಶಿವನ ಮೇಲೆ ಪ್ರೀತಿಯಿಂದ ಕೋಪಿಸಿಕೊಳ್ಳುವ ದೃಷ್ಟಾಂತಗಳು ಜನಪದದಲ್ಲಿವೆ. ಭಕ್ತರ ಕಷ್ಟಕ್ಕೆ ಓ ಗೊಡುವ ಧಾವಿಸುವ ದೈವ ಶಿವ. ಕೇತಯ್ಯನವರ ಕಾಯಕ ನಿಷ್ಠೆ ಖ್ಯಾತವಾಗುತ್ತಿರಲು ಶಿವ ಕೇತಯ್ಯರನ್ನು ಪರೀಕ್ಷಿಸಲು ಧಾವಿಸುತ್ತಾನೆ.
ಶಿಷ್ಟ ಮತ್ತು ಜನಪದ ಗೀತೆಗಳಲ್ಲಿ ಹೊನ್ನು ಹಣದ ಸಹಾಯ ಮಾಡಲು ಮುಂದಾಗುವ ಕಥನಗಳಿವೆ. ಹಸನಾದ ಕಾಯಕಕ್ಕೆ ಕರಡಿಗೆ ಬೇಕು. ಕೊರಳಲ್ಲಿ ಧರಿಸಲು ಶಿವದಾರಬೇಕು. ಶಿವ ಮತವೇ ಲಿಂಗವಾಗಿ ದಾಸೋಹ ವುಣಿಸಲು ಶಿವ ಮುಂದಾಗುವ ಸನ್ನಿವೇಶವಿದು. ಕಾಡಿನಲ್ಲಿ ಒಂದು ದಿನ ಕೇತಯ್ಯನವರು ಬಿದರನ್ನ ಕತ್ತರಿಸುವಾಗ ಅದರಿಂದ ಅಪಾರವಾದ ಹೊನ್ನು ಬೀಳಲು ಪ್ರಾರಂಭಿಸಿತು.
ಇದನ್ನು ನೋಡಿ ಮುಂದಿನ ಮಳೆಗೆ ಹೋಗಿ ಇದರಿಂದ ಕತ್ತರಿಸಲು ಮುಂದಾದಾಗ ಮತ್ತೆ ಹೊನ್ನು ಮೇಲೆ ಬೀಳಲು ಶುರುವಾಯಿತು. ಆಗ ಕೇತಯ್ಯನವರು ಇದೇನು ಶಿವ ಶಿವ ಹುಳುಗಳು.
ಬಂಗಾರದ ಹುಳು ಹತ್ತಿ ಭಂಗವಾಗಿದೆ
ಬಿದಿರು ಕಂಗಳಿಗೆ ಬೇಡ ಹೊಲೆಯಿಂದ
ದಾಸೋಹ ಸಂಗ ಜೋಡಣೆಗೆ ಕುಂದೆಂದ
ಶರಣರ ಪ್ರಕಾರ ಹೊನ್ನು ಭಕ್ತಿ ಮತ್ತು ಕಾಯಕದಿಂದ ದೂರವಿರಿಸುವ ಅಹಂಕಾರವನ್ನು ಹೆಚ್ಚಿಸುವ ಮೋಹವದು. ಹೀಗಾಗಿ ಹೊನ್ನನ್ನು ಸೂತಕದಂತೆ ನೋಡಿದಂತವರು. ಈ ಕಂಗಳಿಗೆ ಹೊಲೆಯಿದ್ದಂತೆ ಬಿದಿರಿಗೆ ಹೊನ್ನ ಹುಳು ಹತ್ತಿದೆ ಇದರಿಂದ ದಾಸೋಹವೆ? ಮತ್ತೊಂದು ಗಿಡದ ಬಿದಿರನ್ನು ಕಡಿದರೂ ಮುತ್ತುಗಳ ಉದರಲು ಪ್ರಾರಂಭಿಸಿದವು. ಮೆಳೆ ಮೆಳೆ ತಿರುಗಿದರೂ ಕೂಡ ಗಳವೊಂದು ಬಿದಿರಿಲ್ಲ. ಮೆಳೆ ತುಂಬ ನೋಡಿ ಮುತ್ತು ಮಣಿ ಮಾಣಿಕ್ಯವ ಮಳ ಮಳಿಸಿ ಹೊಲೆ ಎಂದ. ಮತ್ತೆ ಮರು ಪ್ರಯತ್ನದಿಂದ ರಭಸ ದಿಂದ ಬಿದಿರನ್ನು ಕಿತ್ತಿದಾಗ ಬಿದಿರಿನ ಮೊನೆ ದೇಹಕ್ಕೆ ನಾಟಿ ರಕ್ತ ಸ್ರಾವವಾಯಿತು. ದೇಹದ ನೋವಿಗಿಂತ ಅಂದಿನ ದಾಸೋಹದ ಚಿಂತೆ ಕಾಡಿತು. ಸೂರ್ಯ ಮುಳುಗುವ ದರೊಳಗೆ ಜಂಗಮ ದಾಸೋಹವಾಗಬೇಕಾಗಿತ್ತು.
ಹಾರದಿರು ಪಡುಗಡಲ. ಏರಿ ಇಳಿಯುವ
ರವಿಯೆ ಮಾರ ಹರನಾಣೆ ಎನ್ನಾಣೆ
ಶಿವ ಶರಣ ಧೀರ ಕಾಯಕದ ಮನದಾಣೆ
ಸೂರ್ಯ ಮುಳುಗುವ ಪಶ್ಚಿಮ ದಿಕ್ಕಿನಲ್ಲಿ ಪ್ರಕೃತಿಯ ಕಲರವ ಸ್ಥಬ್ದವಾಗುವ ಸಮಯವದು. ಶರಣ ಮೇದಾರ ಕೇತಯ್ಯನವರು ಸೂರ್ಯ ನೀ ಮುಳುಗ ಬೇಡ. ನೀ ಮುಳುಗಿದರೆ ಶಿವನ ಮೇಲಾಣೆ. ಶರಣರ ಕಾಯಕದ ಮೇಲಾಣೆ. ಈ ಸಾಧಕರ ನೈತಿಕ ಕಾಯಕ ಲೋಕಹಿತದ ಪರಿಶ್ರಮವದು. ಕೇತಯ್ಯ ಶರಣರ ಕಾಯಕ ಶ್ರದ್ದೆ ನಿಷ್ಠೆಗೆ ಸೂರ್ಯನು ತಲೆಬಾಗಿದನು. ಅಂದರೆ ಬಸವ ತತ್ವ ನಿಸರ್ಗ ತತ್ವವಾಗಿ ಶರಣರನ್ನು ಪ್ರೇರೇಪಿಸುವ ಪ್ರಾಮಾಣಿಕ ಹಂತವದು. ತಮ್ಮ ದೇಹದ ಮೇಲೆ ಆದ ನೋವನ್ನು ಪರಿಗಣಿಸದೆ ಪತ್ನಿ ಸಾತವ್ವರಿಗೆ ಈ ಬಿದಿರಿನಿಂದ ಮರ ಬುಟ್ಟಿ ಹೆಣೆದು ಮಾರಾಟ ಮಾಡಿ ಹಣ ತೆಗೆದುಕೊಂಡು ಬಾ. ಸೂರ್ಯ ಮುಳುಗುವುದರೊಳಗೆ ದಾಸೋಹ ಸೇವೆ ಮಾಡಬೇಕು. ದೇಹದ ನೋವನ್ನು ಪರಿಗಣಿಸದೆ ಪತ್ನಿಕೆ ಹೇಳಿದರು. ಅದರಂತೆ ಸಾತವ್ವ ಮಾಡಿದರು. ನಂತರ ತಮ್ಮ ಎದೆಗೆ ಚುಚ್ಚಿದ ಬಿದಿರೆನ್ನು ತೆಗೆ ಎಂದು ಆದೇಶಿಸಿದರು. ಪತ್ನಿ ಅದರಂತೆ ಮಾಡಿದಳು. ತಕ್ಷಣ ಕೇತಯ್ಯನವರ ಪ್ರಾಣ ಹೋರಟು ಹೋಯಿತು.
ಇರುಳೆಲ್ಲ ಸಾತವ್ವ ಹೊರಳಾಡಿ ಪತಿ ನೆನೆದು
ಮರಳು ನಾ ನಿನ್ನು ಗೋಳಿಡಲು ಎಲೆ ಜೀವ
ತರುಳಾಗಿ ಮಾಡು ಕಾಯಕವ
ರಾತ್ರಿ ಎಲ್ಲಾ ಸಾತವ್ವ ಪತಿಯನ್ನು ನೆನೆದು ರೋಧಿಸಿದಳು. ಜನಪದರಲ್ಲಿ ಈ ಸತಿಪತಿ ಭಾವವು ಆಧ್ಯಾತ್ಮದ ಅನುಸಂಧಾನವದು. ಪರಸ್ಪರ ಗೌರವ ಶಿವಶಕ್ತಿಯ ಸಮಾಗಮವೆಂಬ ನಂಬಿಕೆ ದಾಂಪತ್ಯ ಜೀವನಕ್ಕೆ ಭದ್ರ ಪವಿತ್ರವಾದ ಅಡಿಪಾಯವಾಗುತ್ತದೆ. ಅಲ್ಲಮ ಪ್ರಭುಗಳ ಈ ವಚನ ಇದೇ ಅರ್ಥವನ್ನು ವ್ಯಾಖ್ಯಾನಿಸುತ್ತದೆ.
ಸತಿ ಭಕ್ತೆಯಾದಡೆ ಹೊಲೆಗಂಜಲಾಗದು,
ಪತಿ ಭಕ್ತನಾದೆಡೆ ಕುಲಕಂಜಲಾಗದು.
ಸತಿ_ಪತಿಯೆಂಬ ಅಂಗಸುಖ ಹಿಂಗಿ,
ಲಿಂಗವೇ ಪತಿಯಾದ ಬಳಿಕ
ಸತಿಗೆ ಪತಿಯುಂಟೆ? ಪತಿಗೆ ಸತಿಯುಂಟೆ?
ಹಾಲುಂಡು ಮೇಲುಂಬರೆ ಗುಹೇಶ್ವರಾ?
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-52/ವಚನ ಸಂಖ್ಯೆ-148)
ದಾಂಪತ್ಯ ಪವಿತ್ರತೆಯ ಸಂಕೇತ. ಲಿಂಗವೇ ಪತಿಯಾದಾಗ ಗುರುವಿನ ಮೂಲಕ ಭಕ್ತ ಮತ್ತು ಭಗವಂತನ ಸಮರಸವನ್ನು ಸೂಚಿಸುತ್ತದೆ. ಲೌಕಿಕ ಪ್ರೀತಿಯಲ್ಲಿ ಸಂಸಾರದ ಸುಖ ದುಃಖಗಳು ಗಟ್ಟಿಯಾದಾಗ ಪರಮಾನಂದವನ್ನು ಕಾಣಲು ಸಾಧ್ಯ. ಶರಣ ಸಂಕುಲ ಕರುಳ ಬಳ್ಳಿಯ ಸಂಬಂಧಕ್ಕಿಂತ ಹೆಚ್ಚು. ಮೇದಾರ ಕೇತಯ್ಯ ಮತ್ತು ಬಸವಣ್ಣನವರು ಏಕಾತ್ಮವಾದ ಪ್ರಸಂಗ ಇಲ್ಲಿ ಬರುತ್ತದೆ. ಕವಿಗಳು ಹೇಳಿದ ಈ ಪವಾಡ ಕಥೆ ಕಾಯಕ ಸಂಸ್ಕೃತಿಯ ಮೇರುತನ ರೋಮಾಂಚನ ಕಾರಿ ವಾಸ್ತವ ಸತ್ಯವಾಗಿದೆ.
ಹೂಗಾರ ಮಾದಣ್ಣ ನಾಡಿನ ಶರಣರಿಗೆ ಹೂವು ಪತ್ರೆ ಕೊಡುವ ಕಾಯಕದ ಶರಣ. ಊರಲ್ಲಿ ಏನೇ ನಡೆದರು ಕಲ್ಯಾಣದ ಶರಣರಿಗೆ ವಿಷಯ ಮುಟ್ಟಿಸುವ ಸುದ್ದಿ ವಾಹಕ. ಕೇತಯ್ಯನವರ ದುಃಖದ ಸಾವಿನ ಸುದ್ದಿಕಲ್ಯಾಣದ ಶರಣರಿಗೆ ಮಾದಯ್ಯನವರಿಂದ ತಲುಪಿತು. ಜನಪದರಲ್ಲಿ ಮೇದಾರ ಕೇತಯ್ಯನವರ ಸಾವಿನ ನಂತರವೂ ಅರ್ಥಗರ್ಭಿತ ಘಟನೆಗಳು ಉಂಟಾದವು. ಈ ಸುದ್ದಿಯಿಂದ ಬಸವಣ್ಣ ಲಿಂಗೈಕ್ಯರಾದರು. ಸಾವಿನಲ್ಲೂ ಈ ಶರಣರ ದೇಹ ಮತ್ತು ಪ್ರಾಣ ಒಂದಾದವು.
ಅಂತು ಬಸವನು ಹರಣ ಕುಂತಲ್ಲೇ ನೀಗಿದನು
ನಿಂತು ನೋಡಿದರು ಜಂಗಮರು. ಗೋಳಿಡುತ
ಬಂತಿಂದು ಕೇಡು ಜಗಕೆಂದು
ಕಲ್ಯಾಣ ನಾಡಿನ ನೇತಾರನ ಸಾವು ಶಾರೀರಿಕ ಅಂತ್ಯವಲ್ಲ. ಅನುಭಾವಿಕ ಪಯಣದ ಮೂಲಕ ಏಕವಾಗುವ ತಾದಾತ್ಮಕತೆ ಜನಪದರದು. ಸಾವಿನಲ್ಲಿ ಬಸವಣ್ಣ ಮತ್ತು ಶರಣ ಮೇದಾರ ಕೇತಯ್ಯರು ಭೇಟಿಯಾಗುವ ನಂಬಿಕೆ ಜನಪದರದು. ಈ ದೃಶ್ಯದಿಂದ ಮಡಿವಾಳ ಮಾಚಯ್ಯನವರು ನಿರಾಶೆ ಮತ್ತು ಆಘಾತಕ್ಕೊಳಗಾಗುತ್ತಾರೆ. ಗುರುವಾದ ಬಸವಣ್ಣನವರನ್ನು ಕಳೆದುಕೊಂಡೆ ಎಂಬ ಅತೀವವಾದ ಸಂಕಟ ಕಾಡುತ್ತದೆ. ಆದರೆ ಶರಣರ ಸಾವು ದೈವ ಭಕ್ತಿಯಿಂದ ಎಚ್ಚರವಾಗುವ ಅಂದರೆ ಯೋಗ ನಿದ್ರೆಯಲ್ಲಿ ವಿಶ್ರಾಂತಿ ಪಡೆದ ಶರಣರು ಮತ್ತೆ ಎಚ್ಚರಗೊಳ್ಳುವ ಸತ್ಯದ ವಾಸ್ತವತೆಯಾಗಿದೆ.
ಎನ್ನ ಕಾಯದ ಕಳವಳವ ನಿಲಿಸಿ, ಗುರುಲಿಂಗವ ತೋರಿದ,
ಎನ್ನ ಮನದ ವ್ಯಾಕುಳವ ನಿಲಿಸಿ, ಜಂಗಮಲಿಂಗವ ತೋರಿದ,
ಇಂತು ಅಂತರಂಗ ಬಹಿರಂಗದಲ್ಲಿ ತಾನೆಯಾಗಿ,
ಎನ್ನ ಪಾವನವ ಮಾಡಿದ,
ಅಮರಗಣಂಗಳು ಮುನಿದು ಎನ್ನ ಕೈಲಾಸಕ್ಕೆ ಒಯ್ದಡೆ,
ಸದ್ಯೋನ್ಮುಕ್ತಿಯ ತೋರಲೆಂದು ಮತ್ರ್ಯಕ್ಕೆ ಮರಳಿ ತಂದ
ಸಂಗನಬಸವಣ್ಣನೆ ಗುರುವೆನಗೆ, ಸಂಗನಬಸವಣ್ಣನೆ ಪರವೆನಗೆ.
ಸಂಗನಬಸವಣ್ಣನ ಕರುಣದಿಂದ, ಘನಕ್ಕೆ ಘನಮಹಿಮ ಅಲ್ಲಮಪ್ರಭುವಿನ
ಶ್ರೀಪಾದವ ಕಂಡು ಬದುಕಿದೆನು ಕಾಣಾ, ಗವರೇಶ್ವರಾ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-525/ವಚನ ಸಂಖ್ಯೆ-1395)
ಬಸವಣ್ಣನವರ ಮುಂದಾಳತ್ವದಲ್ಲಿ ಅಧ್ಯಾತ್ಮದ ಅಭಿವ್ಯಕ್ತಿ ಸ್ವಾತಂತ್ರ‍್ಯವನ್ನು ಬಳಸಿಕೊಂಡವರೆಂದರೆ ಕೆಳವರ್ಗದ ದುಡಿಮೆಯನ್ನು ನಂಬಿದಂತಹ ಆಯಗಾರರೆಂದು ಹೇಳಬಹುದು. ಶರಣರ ಭಕ್ತಿ ಸ್ವಾತಂತ್ರ‍್ಯ ಏಕಮುಖವಾಗಿ ಪ್ರಕಟವಾಗುವುದಿಲ್ಲ. ಜನಪದರ ಪವಾಡ ಕಥನಗಳಿಂದ ಪುರಾಣಗಳಿಂದ ಸದಾ ಬದಲಾವಣೆ ಹೊಂದಿರುತ್ತದೆ. “ಎನ್ನ ಕಾಯದ ಕಳವಳ ನಿಲ್ಲಿಸಿ ಗುರು ಲಿಂಗವ ತೋರಿದ.” ಶರಣರ ಕಾಯಕ ಧರ್ಮದ ಮೂಲಕ ಮುಖಾಮುಖಿಯಾದರೂ ಬಸವಣ್ಣನೇ ಗುರುವೆಂದು ಭಕ್ತಿಯ ಬಂಧುತ್ವವನ್ನು ಆತ್ಮೀಯವಾಗಿ ಸ್ವೀಕರಿಸಲು ಸಾಧ್ಯವಾಗುತ್ತದೆ. ಶಿವ ಸ್ವರೂಪಿ ಬಸವಣ್ಣನವರು ಇಲ್ಲಿ ತತ್ವಮಯವಾಗಿದ್ದಾರೆ. ಕಾಯಕದ ಬಗ್ಗೆ ಇರುವ ಅಳಲು ಆತಂಕ ವ್ಯಾಮೋಹವನ್ನು ದೂರ ಮಾಡಿದಾತ. ಮನದ ಕಳವಳವನ್ನು ನೀಗಿಸಿದಾತ. ಅರಿವೇ ಗುರು ಶರಣರ ನಿಲುವು ಲಿಂಗವು ವ್ಯಕ್ತಿಯ ಹೊರಗಿನ ಸ್ವಾತಂತ್ರವನ್ನು ಪ್ರೇರೇಪಿಸುತ್ತದೆ. ಅರಿವಿನಲ್ಲಿ ಬಸವಣ್ಣನವರನ್ನು ಕಂಡಂತಹ ಶರಣರು ಪ್ರಗತಿ ಸ್ವತಂತ್ರತೆ ಗೌರವದ ಅಡಿಪಾಯಕ್ಕೆ ಕಾರಣಕರ್ತ ಬಸವಣ್ಣನವರಾಗಿದ್ದರು. ಗುರು–ಲಿಂಗ ಎರಡನ್ನು ವ್ಯಕ್ತಿಯ ಮಟ್ಟದಲ್ಲಿ ನೋಡಲು ಸಾಧ್ಯವಿಲ್ಲ. ಜಂಗಮ ಎನ್ನುವ ಕುರುಹನ್ನು ಕೊಟ್ಟಿದ್ದಾನೆ. ಇಡೀ ಸಮಾಜವೇ ಬಸವಣ್ಣನಾಗಿರುವಾಗ ಜಂಗಮ ಎಂಬ ಶಬ್ದಕ್ಕೆ ಹಿರಿದಾದ ಗೌರವವನ್ನು ಶರಣರು ಕೊಟ್ಟಿದ್ದಾರೆ. ನಮ್ಮ ಉತ್ಪತ್ತಿಯನ್ನು ಉಳಿದವರ ಜೊತೆ ಹಂಚಿ ಉಣ್ಣುವುದು ಪರಸ್ಪರ ಸೌಹಾರ್ದತೆಯೊಂದಿಗೆ ಸುತ್ತಣದ ಸಮಾಜವನ್ನು ಹಸನಾಗಿಸುವುದಾಗಿದೆ. ಇದೆ ಜಂಗಮಸೇವೆಯ ದಾಸೋಹ. ಆದರೆ ಇಂದು ಜಂಗಮಸೇವೆ ತೋರಿಕೆ ಪ್ರತಿಷ್ಠೆಯಾಗಿ ಶರಣಧರ್ಮೀಯರನ್ನು ಹಿಂಸಿಸುತಿಸುತ್ತದೆ. ಜಂಗಮ ಮತ್ತು ಅದಕ್ಕೆ ಅಂಟಿರುವ ದಾಸೋಹದ ಕುರುಹುಗಳನ್ನು ಮರೆತಿದ್ದೇವೆ. ಆದರೆ ಕೇತಯ್ಯನವರು ಹೇಳುವಂತೆ ಅಂತರಂಗದಲ್ಲಿ ಬಹಿರಂಗದಲ್ಲಿ ಪಾವನ ಮಾಡಿದಾತ ಅಣ್ಣನಾಗಿದ್ದ ಪ್ರಾಣ ಲಿಂಗದ ಬೆಳಕು ಲಿಂಗವಾಗಿಹನು ಅಣ್ಣ. ಬಸವಣ್ಣನೆಂಬ ಶಬ್ದ ಶಕ್ತಿ ಸ್ವರೂಪದ ಸನ್ನಿವೇಶವಾಗಿದೆ. ಗುರು ಲಿಂಗ ಜಂಗಮ ಶರಣ ಧರ್ಮದ ಮಂತ್ರಗಳಾಗಿ ಏಕ ದೇವೋಪಾಸನೆಯ ತತ್ವ ನಮ್ಮನ್ನು ಸದಾ ಪ್ರೇರೇಪಿಸುತ್ತದೆ.
“ಅಮರ ಗಣಂಗಳು ಮುನಿದು ಎನ್ನ ಕೈಲಾಸಕ್ಕೆ ಒಯ್ದಡೆ” ಶರಣ ಧರ್ಮ ದ್ವೈತ ಅದ್ವೈತ ವಿಶಿಷ್ಟಾದ್ವೈತ ತತ್ವಗಳಿಗಿಂತ ವಿಭಿನ್ನ ಮತ್ತು ವಿನೂತನವಾದದ್ದು. ಹೀಗಾಗಿ ಶರಣ ತತ್ವ ವಿಶ್ವ ಮಾನ್ಯತೆ ಪಡೆದು ನಮ್ಮ ಧರ್ಮವನ್ನು ಅಭಿಮಾನಿಸಿದೆ. ಎನಗಿಂತ ಕಿರಿಯರಿಲ್ಲ ಶಿವ ಭಕ್ತರಿಗಿಂತ ಹಿರಿಯರಿಲ್ಲ. ಈ ತತ್ವ ಅಮರಕಣಧೀಶ್ವರಿಗು ಅನ್ವಯಿಸುತ್ತದೆ. 770 ಅಮರಗಣಂಗಳು ಲಕ್ಷದ ಮೇಲೆ ತೊಂಬತ್ತಾರು ಸಾವಿರ ಜಂಗಮರನ್ನು ಕಾಣುವ ದಿವ್ಯ ದೃಷ್ಟಿ ಪಡೆದಿದ್ದರು. ಮೇದಾರ ಕೇತಯ್ಯನವರ ಜೀವನದಲ್ಲಿ ಕಲ್ಯಾಣದ ಶರಣರನ್ನು ಕಾಣುವಂತೆ ಅವರ ವಚನದಲ್ಲಿ ಅಮರ ಗಣಂಗಳನ್ನು ಉಲ್ಲೇಖಿಸಿದ್ದಾರೆ. ಬಸವಣ್ಣನವರೊಂದಿಗೆ ಅನುಭವ ಮಂಟಪದಲ್ಲಿ ಶರಣರ ಚರ್ಚೆಗಳಲ್ಲಿ ಪಾಲ್ಗೊಂಡಂಥ ಶರಣ ಪರಂಪರೆಯ ವಾರಸುದಾರರು ಇವರು.
ಇಂತಹ ಅಮರ ಗಣಂಗಳವರು ನನ್ನ ಮೇಲೆ ಕೋಪಿಸಿಕೊಂಡು ಕೈಲಾಸಕ್ಕೆ ಕಳುಹಿಸಿದರು. ಸದ್ಯೋನ್ಮುಕ್ತಿಯ ತೋರಲೆಂದು ಮರ್ತ್ಯಕೆ ಮರಳಿ ತಂದ ಸಂಗಮ ಬಸವಣ್ಣನೆ ಗುರುವೆನಗೆ. ಗುರುವಾದ ಬಸವಣ್ಣನವರು ಎಲ್ಲವೂ ಪರ್ವಸ್ವ. ಆದರೆ ಸಾವಿನ ಬಂಧನದಿಂದ ತಕ್ಷಣ ಮುಕ್ತವಾಗುವ ಐಹಿಕ ಸ್ಥಿತಿ. ಸಂಸಾರಿಕ ಬಂಧನಗಳಿಂದ ಸಂಪೂರ್ಣ ಸ್ವತಂತ್ರವಾಗುವ ಲೋಕದ ಆಮಿಷಗಳನ್ನು ಕಳಚಿ ಮುಕ್ತಿ ಪಡೆಯುವುದು. (ಶರಣರಲ್ಲಿ ಐಕ್ಯಸ್ಥಲದ ಅನುಸಂಧಾನವದು). ಆತ್ಮ ಸಾಕ್ಷಾತ್ಕಾರದ ಸಮರ್ಪಣೆಯಾಗುವುದು. ಜೀವನ್ಮುಕ್ತಿ, ಐಕ್ಯ, ಮೋಕ್ಷ ಪದಗಳು ವಿರುದ್ಧವಾಗಿ ಕಂಡರೂ ಇದರಲ್ಲಿ ಕೇತಯ್ಯನವರಿಗೆ ಬಸವಣ್ಣ ಲೀಲಾ ಪುರುಷ ವಿಸ್ಮಯ ಮತ್ತು ಬೆರಗು. ಆದರೆ ಇಲ್ಲಿ ಅಲ್ಲಮರ ಬೆರಗಲ್ಲ ಕೇತಯ್ಯನವರ ಜೀವನ ಮುಕ್ತಿಯದು.
ಬಸವಣ್ಣನವರನ್ನು ಪರ ಎನ್ನುವುದು ಘನಕ್ಕೆ ಘನ ಮಹಿಮ ಎಂಬ ಮಾನಸಿಕ ಭಕ್ತಿಯ ಒತ್ತಾಸೆಯಾಗಿ ಪ್ರೇರೇಪಿಸುತ್ತದೆ. ಆದರೆ ಬಸವಣ್ಣ ಶರಣ ಸಿದ್ದಾಂತದ ಆಲದ ಗಿಡದ ತಾಯಿ ಬೇರು. ಶರಣ ಸಂಕುಲವೆಲ್ಲ ಬಿಳಲು ಬೇರುಗಳಾಗಿ ಆಶ್ರಯಿಸಿದ್ದು ರೋಮಾಂಚನದ ಅನುಭೂತಿಯದು. ಕೇತಯ್ಯನವರ ಧಾರ್ಮಿಕ ಪ್ರಜ್ಞೆ ಇಷ್ಟಕ್ಕೆ ಅಂತ್ಯವಲ್ಲ. ಜೀವನ್ಮುಕ್ತಿಯಿಂದ ಕಾಯ ನಿರ್ಮಲಯವಾಯಿತು. ಪ್ರಾಣ ಪವಿತ್ರವಾಯಿತು ಎಂದು ಹೇಳದೆ ಮನ ಬುದ್ಧಿ ಇಂದ್ರಿಯಗಳ ಸೀಮೆಯನ್ನು ದಾಟಿ ತಾನೇ ಶರಣನಾಗಿ ನಿಲ್ಲುವ ಜೀವನ್ಮುಕ್ತಿಯ ಸಮಯ ಅದಾಗಿತ್ತು.
“ಘನಕ್ಕೆ ಘನ ಅಲ್ಲಮಪ್ರಭುವಿನ ಶ್ರೀಪಾದವ ಕಂಡು ಬದುಕಿದೆನು ಕಾಣಾ ಗವರೇಶ್ವರ.” ಶಿವ ಸ್ವರೂಪಿ ಬಸವಣ್ಣನವರೊಂದಿಗೆ ಏಕವಾದ ಉನ್ಮತ್ತತೆಯಲ್ಲಿ ವಿಶ್ವದ ಅರಿವಿನ ಆಚೆ ಮಹಾಘನ ಚೈತನ್ಯಮೂರ್ತಿ ಅಲ್ಲಮ ಪ್ರಭುಗಳಾಗಿದ್ದಾರೆ. ಈ ಇಬ್ಬರೂ ಶರಣರ ಮಹಾ ಶಕ್ತಿ ನನ್ನದಾಯಿತು. ಲೋಕಶಕ್ತಿಯ ಒಡೆಯ ಘನ ಚೈತನ್ಯ ಬಸವಣ್ಣ ಮಹಾಶಕ್ತಿ ಅಲ್ಲಮ ಪ್ರಭುಗಳ ಶ್ರೀಪಾದ ಶರಣರನ್ನು ಸ್ತುತಿಸಿ ಹೇಳುವ ಗೌರವಿಸುವ ಪದವದು. ಬಸವಣ್ಣನವರ ಸ್ವಾಮೀಪ್ಯದಲ್ಲಿ ದ್ವೈತ ಭಕ್ತನಾಗಿ ಕನವರಿಸಿಕೊಳ್ಳುವ ವಾಸ್ತವತೆ ಇಲ್ಲಿದೆ. ಅಲ್ಲಮ ಇಲ್ಲಿ ವ್ಯಕ್ತಿಯಾಗದೆ. ದ್ವೈತ ಮಾರ್ಗದ ಸೇವಕನಂತೆ ಶ್ರೀ ಪಾದವ ಕಂಡು ಬದುಕಿದೆ. ಬಸವ ಮತ್ತು ಅಲ್ಲಮರು ಶರಣ ಧರ್ಮದ ದಾರ್ಶನಿಕರು. ಬಸವಣ್ಣ ದೇವನಾದರೆ ಪ್ರಭು ಮಹಾ ಬೆಳಗಿನೊಳಗೆ ಲೀನವಾದ ಸಾಮರಸ್ಯದ ಸ್ಥಿತಿಯಾಗಿದೆ.
ಕೇತಯ್ಯನವರಿಗೆ ಬಸವಣ್ಣ ಗುರುವನ್ನು ತತ್ವವಾಗಿಸಿ ಹೇಳಿದ್ದು ಒಂದಾದರೆ ಕಾಯಕದಲ್ಲಿ ಮರಣವನ್ನಪ್ಪಿದಾಗ ಬಸವಣ್ಣ ಎನ್ನನು ಕೈಲಾಸಕ್ಕೆ ಬಂದ ನನ್ನನ್ನು ರಕ್ಷಿಸಿದ. ಹೀಗಾಗಿ ಬಸವಣ್ಣ ನಿರಾಕಾರ ಶಿವ. ಮೇದಾರ ಕೇತಯ್ಯನಿಗೆ ಪ್ರಭು ಸಖ ಭಕ್ತನಾಗಿ ಪ್ರಭುವಿನ ಪಾದವ ಕಂಡು ನಾ ಬದುಕಿದೆ ಎಂಬ ಆರ್ಥತೆ ಈ ಶರಣರದ್ದಾಗಿದೆ.
ಮೇದಾರ ಕೇತಯ್ಯನಂತ ಶರಣರ ಶ್ರಮ ಸಂಸ್ಕೃತಿ ದೇಹ ಶ್ರಮಸಮರ್ಪಣಾ ಭಕ್ತಿಯ ಕಾಯಕ ತತ್ವವದಾಗಿದೆ. ಇಲ್ಲಿ ಬಸವಣ್ಣನವರೇ ದೇವರು. ಸಮಾಜ ವೈಚಾರಿಕತೆಯ ಅನುಸಂಧಾನವಾಗಿದೆ. ಶರಣರು ತಮ್ಮ ವೈಯಕ್ತಿಕ ವೃತ್ತಿ ಬದುಕಿನ ಅನುಭವಗಳನ್ನು ಪ್ರಾಸಂಗಿಕವಾಗಿ ಬಳಸಿಕೊಂಡಿದ್ದಾರೆ.
ಡಾ.ಸರ್ವಮಂಗಳ ಸಕ್ರಿ,
ಲೇಖಕರು.
ಅಧ್ಯಕ್ಷರು/ಜಾಗತಿಕ ಲಿಂಗಾಯತ ಮಹಾ ಸಭಾ/ಮಹಿಳಾ ಘಟಕ ರಾಯಚೂರು ಜಿಲ್ಲೆ/
ರಾಯಚೂರು.
ಮೋಬೈಲ್ ಸಂ. 94499 46839.
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ (ರಿ) ದ ಸಂಚಾಲಕರನ್ನು ಸಂಪರ್ಕಿಸಬೇಕಾದ:
- ಮೋಬೈಲ್ ನಂ. 9741 357 132
- e-Mail ID: info@vachanamandara.in and admin@vachanamandara.in





Total views : 69307