
ಬಸವೋತ್ತರ ಕಾಲದಲ್ಲಿ ಪಂಚಗಣಾಧೀಶರು ಕೆರೆಕುಂಟೆ ಗೋಕಟ್ಟೆಗಳನ್ನು ಕಟ್ಟಿಸುವ ಮೂಲಕ ರೈತಾಪಿಗಳಿಗೆ, ಗೋವಳಿಗರಿಗೆ, ಶ್ರಮಜೀವಿಗಳಿಗೆ ಅನ್ನಾಹಾರ ಮತ್ತು ಅಧ್ಯಾತ್ಮ ಗುರುಬೋಧೆ ನೀಡಿದವರು.
- ಕೂಲಹಳ್ಳಿ ಮದ್ದಾನೇಶ.
- ಅರಸೀಕೆರೆಯ ಕೋಲಶಾಂತೇಶ.
- ಹರಪನಹಳ್ಳಿ ಕೆಂಪೇಶ(ಕಣಗಲಿ ಕೆಂಪೇಶ).
- ಕೊಟ್ಟೂರು ಗುರುಬಸವ (ಕೊಟ್ಟೂರೇಶ, ಕೊಟ್ರೇಶ).
- ನಾಯಕನಹಟ್ಟಿ ತಿಪ್ಪೇಸ್ವಾಮಿ (ಹಟ್ಟಿ ತಿಪ್ಪಯ್ಯ, ತಿಪ್ಪೇಶ).
ಎಂಬ ಈ ಪಂಚಗಣಾಧೀಶರು ಹದಿನಾಲ್ಕು ಹಾಗೂ ಹದಿನೈದನೇ ಶತಮಾನದಲ್ಲಿ ಜನಪದರ ಆದರ್ಶ ಸಾಂಸ್ಕೃತಿಕ ನಾಯಕರಾಗಿ ಆಗಿಹೋಗಿದ್ದು, ಬಸವಾದಿ ಪ್ರಮಥರ ಸಾಂಸ್ಕೃತಿಕ ಆಶಯಗಳಿಗಾಗಿ ದುಡಿದು ಅಮರ ದೈವಗಳಾಗಿ ಜೀವಸಮಾಧಿಯಾಗಿದ್ದಾರೆ. ಹಲವಾರು ಜಾನಪದ ಕಾವ್ಯಗಳ ಹುಟ್ಟುವಳಿಗೂ ಇವರು ಮೆರೆದ ಪವಾಡ ಸಾಹಸಗಳು ವಸ್ತುವನ್ನು ಒದಗಿಸಿವೆ.
ಕೂಲಹಳ್ಳಿ ಮದ್ದಾನೇಶ ಮತ್ತು ಬೇಡರ ದೇವದಾಸಿ ಕನಕಮ್ಮನ ಮಗನಾದ ಗುಮ್ಮಗೋಳ – ಕೂಲಹಳ್ಳಿ ಗೋಣಿಬಸಪ್ಪನು ಮಾದಿಗಲಿಂಗಾಯತರೆನ್ನಿಸಿದ ಬಾಲಬಸವರು ಎಂಬ ಜಂಗಮಧಾರೆಯ ಹುಟ್ಟುವಳಿಗೆ ಕಾರಣನಾದವನು. ಪಂಚಗಣಾಧೀಶರ ಕೊಂಡಿಯೊಂದಿಗೆ ಬೆಸೆದುಕೊಂಡಿರುವ ಗೋಣಿಬಸವ ಮಾದಿಗರಿಗೆ ನಾಲ್ಕುಪಾದದ ಭಿಕ್ಷಾಜೋಳಿಗೆ ಯೋಗದಂಡ ಬಸವದೀಕ್ಷೆ ನೀಡಿ ಬಾಲಬಸವರೆಂದು ಕರೆದನು. ಇವರೆಲ್ಲರನ್ನು ಕುರಿತು ಜನಪದರು ಕಾವ್ಯಗಳನ್ನು ಮತ್ತು ತತ್ವಪದಗಳನ್ನು ಕಟ್ಟಿ ಹಾಡುತ್ತಾ ಬಂದಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ ಜೀವಸಮಾಧಿಯಾಗಿರುವ ಕಾಯಕ ಯೋಗಿ ತಿಪ್ಪೇಸ್ವಾಮಿ ಜಾತ್ರೆಗೆ ನಮ್ಮೂರು ಮತ್ತು ಸುತ್ತಮುತ್ತಲಿನ ಸಾವಿರಾರು ಜನ ಹೋಗಿಬರುವುದನ್ನು ನಾನು ಬಾಲ್ಯದಿಂದಲೂ ನೋಡುತ್ತಿದ್ದೇನೆ. ತತ್ವಪದಗಳನ್ನು ಹಾಡುವ ಕಲಾವಿದರೊಂದಿಗೆ ನನ್ನ ಅಮ್ಮ ಕದರಮ್ಮ ತಿಪ್ಪೇಸ್ವಾಮಿ ಕುರಿತ ಪದಗಳಿಗೆ ದನಿಗೊಟ್ಟವಳು.
ಮೈಸೂರು ದೊರೆ ಹಜರತ್ ಹೈದರಾಲಿ ಖಾನ್ ಮತ್ತು ಆತನ ಹೆಂಡತಿ ಫಾತಿಮಾಬಿ ಅವರು, ಪುತ್ರ ಸಂತಾನಕ್ಕಾಗಿ ನಾಯಕನಹಟ್ಟಿ ತಿಪ್ಪೇಸ್ವಾಮಿಯ ಜೀವಸಮಾಧಿಗೆ ಮೊರೆ ಹೋದರು. ಹಟ್ಟಿ ತಿಪ್ಪೇಸ್ವಾಮಿಯ ಅನುಗ್ರಹದಿಂದ ಪಡೆದ ಮಗನಿಗೆ ತಿಪ್ಪೇಸುಲ್ತಾನ್ ಎಂಬ ಹೆಸರು ಕಟ್ಟಿದರು. ಹೀಗೆ ಟಿಪ್ಪೂ ಸುಲ್ತಾನ್ ಹುಟ್ಟನ್ನು ಪವಾಡೀಕರಿಸಿ ಹೇಳುವ ಜಾನಪದ ಕಥೆಯೊಂದು ಪ್ರಚಲಿತದಲ್ಲಿದೆ. ನಾಯಕನಹಟ್ಟಿ ತಿಪ್ಪೇಸ್ವಾಮಿಯ ಹೊರಮಠ (ತಿಪ್ಪೇಸ್ವಾಮಿಯ ಜೀವಸಮಾಧಿ) ಗುಡಿಯನ್ನು ಗುಂಬಜ್ ಮಾದರಿಯಲ್ಲಿ ನಿರ್ಮಿಸಲಾಗಿದೆ. ಇದು ಹೈದರ್ ಮತ್ತು ಟಿಪ್ಪೂ ಕೊಡುಗೆ.
ಗುಡಿ, ಚರ್ಚು, ದರ್ಗಾ, ಬಸದಿ, ಜೀವಸಮಾಧಿ ಮುಂತಾದವುಗಳಿಗೆ ಭಾವಿಕರು ಹರಕೆ ಹೊತ್ತು ಧಾರ್ಮಿಕ ಶ್ರದ್ಧೆಯನ್ನು ತೋರಿಸುವಂತೆಯೇ ಹೈದರ್- ಫಾತಿಮಾ- ಟಿಪ್ಪೂ ಕೂಡಾ ಶ್ರದ್ಧೆಯಿಂದ ನಡೆದುಕೊಳ್ಳುತ್ತಿದ್ದರು. ಅವರ ಧಾರ್ಮಿಕ ಶ್ರದ್ಧೆಯು ಯಾವತ್ತೂ ಅನ್ಯ ಧರ್ಮೀಯರ ಭಾವನೆಗಳನ್ನು ಮತೀಯ ಸಂಘರ್ಷಕ್ಕೆಳೆಸಲು ಪ್ರಚೋದಿಸಲಿಲ್ಲ. ಬದಲಾಗಿ ಪರಸ್ಪರ ಅನ್ಯ ಧರ್ಮೀಯರನ್ನು ಸೌಹಾರ್ದತೆಯಿಂದ ಒಂದೆಡೆ ಬೆಸೆಯುವ ಬಗೆಯದ್ದಾಗಿತ್ತು.
ವೈಜ್ಞಾನಿಕ ಅಥವಾ ಚಾರಿತ್ರಿಕ ಸತ್ಯಾಸತ್ಯತೆ ಏನೇ ಇರಲಿ ನಾಯಕನಹಟ್ಟಿ ತಿಪ್ಪೇಸ್ವಾಮಿಯನ್ನು ಮೊರೆಹೋಗಿ ಪ್ರಾರ್ಥಿಸಿದ ಬಳಿಕ ಹೈದರಾಲಿ ಮತ್ತು ಫಾತಿಮಾ ದಂಪತಿಗೆ ಗಂಡುಮಗು ಹುಟ್ಟಿದನೆಂದು, ಆ ಮಗುವಿಗೆ ತಿಪ್ಪೇ ಸುಲ್ತಾನ್ ಎಂಬ ಹೆಸರು ಕರೆದರೆಂದು ಜನಪದರು ಕಟ್ಟಿರುವ ಐತಿಹ್ಯದಿಂದ ನಮಗೆ ತಿಳಿದುಬರುತ್ತದೆ.
ಹಟ್ಟಿ ತಿಪ್ಪಯ್ಯನ ಜೀವಸಮಾಧಿಗೆ ಶ್ರದ್ಧೆಯಿಂದ ನಡೆದುಕೊಳ್ಳುತ್ತಿದ್ದ ದೊರೆ ಹೈದರಾಲಿಯು ನಾಯಕನಹಟ್ಟಿ ತಿಪ್ಪೇಸ್ವಾಮಿಯ ಹೊರಮಠದ (ತಿಪ್ಪೇಸ್ವಾಮಿಯ ಜೀವಸಮಾಧಿ) ಗುಡಿಯನ್ನು ಗುಂಬಜ್ ಮಾದರಿಯಲ್ಲಿ ಕಟ್ಟಿಸುತ್ತಾನೆ. ಆ ಮೂಲಕ ದೇಶಿ ಯೋಗ ಸಾಧಕರ- ತತ್ವಪದಕಾರರ ನೆಲೆಯನ್ನಾಗಿ ನಾಯಕನಹಟ್ಟಿಯನ್ನು ಅಭಿವೃದ್ಧಿಪಡಿಸುತ್ತಾನೆ. ಪ್ರತಿವರ್ಷ ನಾಯಕನಹಟ್ಟಿಯಲ್ಲಿ ನಡೆಯುವ ಜಾತ್ರೆ ಮತ್ತು ರಥೋತ್ಸವದಲ್ಲಿ ಸರ್ವ ಧರ್ಮಗಳ ಲಕ್ಷಾಂತರ ಜನ ಪಾಲ್ಗೊಳ್ಳುತ್ತಾರೆ. ಹಟ್ಟಿ ತಿಪ್ಪೇಸ್ವಾಮಿಯ ಜೀವಸಮಾಧಿಯು (ಗುಡಿ) ಧಾರ್ಮಿಕ ಸಾಮರಸ್ಯದ ತಾಣವಾಗಿ ಕರ್ನಾಟಕದಲ್ಲಿಯೇ ಹೆಸರುವಾಸಿಯಾಗಿದೆ. ಇದು ಹೈದರಾಲಿ ಖಾನ್ ನೀಡಿದ ಕೊಡುಗೆ. ಅಪ್ಪನಿಂದ ಬಳುವಳಿಯಾಗಿ ಬಂದ ಅನ್ಯಧರ್ಮ ಸಮತಾ ಭಾವವನ್ನು ಟಿಪ್ಪೂ ಸುಲ್ತಾನ್ ತನ್ನ ಆಡಳಿತದಲ್ಲಿ ಅಳವಡಿಸಿಕೊಂಡು ಅನೇಕ ಹಿಂದೂ ಧಾರ್ಮಿಕ ಕೇಂದ್ರಗಳಿಗೆ ಕೊಡುಗೆಗಳನ್ನು ನೀಡುತ್ತಲೂ ಸ್ವಯಂ ಧಾರ್ಮಿಕ ಶ್ರದ್ಧೆ ತೋರುತ್ತಲೂ ಪೋಷಿಸುತ್ತಾನೆ. ಇಂತಹ ನಡೆಗಳ ಮೂಲಕ ಧಾರ್ಮಿಕ ವೈರಭಾವನೆಗಳ ಕಂದಕಗಳನ್ನು ಮುಚ್ಚಿಹಾಕಿದ್ದಾರೆ ಹೈದರಾಲಿ ಖಾನ್ ಮತ್ತು ಟಿಪ್ಪೂ ಸುಲ್ತಾನ್.
ಡಾ. ವಡ್ಡಗೆರೆ ನಾಗರಾಜಯ್ಯ,
#12, ಮಡಿಲು, 8 ನೇ ಅಡ್ಡರಸ್ತೆ,
ಆರ್. ಆರ್. ಲೇ ಔಟ್, ಜ್ಞಾನಭಾರತಿ ಅಂಚೆ,
ಬೆಂಗಳೂರು – 560 056
ಮೋಬೈಲ್ ಸಂ. 87227 24174
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ:
- ಮೋಬೈಲ್ ನಂ. 97413 57132
- e-Mail ID: info@vachanamandara.in | admin@vachanamandara.in
![]()






Total views : 57623