
ಅನಿಮಿಷ ಎಂದರೆ ಕಣ್ಣು ಮಿಟುಕಿಸದವನು ಅಥವಾ ಅರೆನಿಮಿಷವೂ ಕಣ್ಣು ಮುಚ್ಚದವನು (ದೇವರು/ದೇವತೆ) ಎಂದರ್ಥ. ಇದು “ಅ” (ಇಲ್ಲ) ಮತ್ತು “ನಿಮಿಷ” (ಕಣ್ಣು ಮಿಟುಕಿಸುವುದು) ಎಂಬ ಪದಗಳಿಂದ ಬಂದಿದೆ.
ಪ್ರಮುಖ ಅರ್ಥಗಳು ಮತ್ತು ಸಂದರ್ಭಗಳು:
- ದೇವತೆಗಳು: ಕಣ್ಣು ಮಿಟುಕಿಸದ ಕಾರಣ ದೇವತೆಗಳನ್ನು ಅನಿಮಿಷರೆಂದು ಕರೆಯಲಾಗುತ್ತದೆ.
- ಅರ್ಥ: ಅರೆನಿಮಿಷವೂ ಕಣ್ಣು ಮಿಟುಕಿಸದ, ದೃಷ್ಟಿ ಸ್ಥಿರವಾಗಿರುವ ಸ್ಥಿತಿ.
- ಅನಿಮಿಷ ಯೋಗಿ: ಅಲ್ಲಮಪ್ರಭುದೇವರಿಗೆ ದೀಕ್ಷೆ ನೀಡಿದ ಗುರುಗಳನ್ನು “ಅನಿಮಿಷ ಯೋಗಿ” ಎಂದು ತಿಳಿದು ಬರುತ್ತದೆ.
ಈ ಪದವನ್ನು ಸಾಮಾನ್ಯವಾಗಿ ಜಾಗರೂಕತೆ, ದೈವಿಕತೆ ಅಥವಾ ದೀರ್ಘಕಾಲದ ತೀವ್ರವಾದ ದೃಷ್ಟಿಯನ್ನು ಸೂಚಿಸಲು ಬಳಸಲಾಗುತ್ತದೆ.
ಸಿಂಗಿರಾಜನ “ಬಸವರಾಜ ಚರಿತ್ರೆ” ಮತ್ತು ಮುರುಗಿ ದೇಶಿಕೇಂದ್ರನ ಹಮ್ಮಿರ ಕಾವ್ಯಗಳಲ್ಲಿ ಅನಿಮಿಷರು ಪಟ್ಟದಕಲ್ಲಿನ ಚಾಲುಕ್ಯರಾಜನ ವಂಶದವರೆಂದು ಹೇಳಲಾಗಿದೆ. ಅನಿಮಿಷನ ತಂದೆಯ ಹೆಸರನ್ನು ತ್ರೈಲೋಕ್ಯ ಚೂಡಾಮಣಿ ಹಾಗೂ ತಾಯಿಯನ್ನು ಮಹಿರ್ಲೋಕೆ ಎಂದು ಹೆಸರಿಸಲಾಗಿದೆ. ಹಾಗೂ ಅವರ ಬಾಲ್ಯದ ಹೆಸರು ವಸುದೀಶ ಎಂದೂ ನಮೂದಿಸಿದೆ. 12 ನೆ ಶತಮಾನದ ವಿಶ್ವಗುರು ಬಸವಣ್ಣನವರ ಕಾಲದಲ್ಲಿ ಜೀವಿಸಿದ ಅನಿಮಿಷ (ವಸುದೀಶ), ಅವರ ತಾಯಿ ಪಟ್ಟದಕಲ್ಲಿನ ಲೋಕನಾಥನನ್ನು ಆರಾಧಿಸುತ್ತಿದ್ದರೆಂದು ಹಮ್ಮೀರ ಕಾವ್ಯದಿಂದ ತಿಳಿಯಬಹುದಾಗಿದೆ. ಆ ರಾಜ್ಯವು ಮಲಪ್ರಭಾ ನದಿಯ ಸುತ್ತಲೂ ಆವರಿಸಿತ್ತು. ಕೃಷ್ಣಾ ನದಿಯ ತೀರದ ಕಪ್ಪಡಿ ಕ್ಷೇತ್ರವನ್ನೂ ಒಳಗೊಂಡಿತ್ತು. ಐತಿಹಾಸಿಕ ವಸುದೀಶ (ಅನಿಮಿಷ) ಬಸವಣ್ಣನವರ ಸಮಕಾಲೀನರು.
ಅಂದಿನ ಅಖಂಡ ವಿಜಯಪುರ ಜಿಲ್ಲೆಯ ಬದಾಮಿ ತಾಲೂಕಿನ ಮಲಪ್ರಭಾ ನದಿಯ ದಂಡೆಯ ಮೇಲಿರುವ ಪಟ್ಟದಕಲ್ಲು ವಸುಧೀಶ (ಅನಿಮಿಷ) ರು ಹುಟ್ಟಿ ಬೆಳೆದ ಊರು. ಆ ಊರಿನಿಂದ 25–30 ಮೈಲುಗಳ ದೂರ ಇರುವುದೇ ಕಪ್ಪಡಿ ಕ್ಷೇತ್ರ. ಅಲ್ಲಿ ಬಸವಣ್ಣವರು ತಮ್ಮ ಸಾಧನೆಯಲ್ಲಿ ಆತ್ಮ ಸಾಕ್ಷಾತ್ಕಾರ ಪಡೆದ ನಂತರವೇ ಅಲ್ಲಿಂದ ತೆರಳಿದ್ದಾರೆ. ಅಲ್ಲಿರುವಾಗಲೆ ವಸುದೀಶ (ಅನಿಮಿಷ) ಅವರಿಂದ ಲಿಂಗದೀಕ್ಷೆ ಪಡೆದನೆಂದು ಹೇಳಲಾಗುತ್ತಿದೆ. ತದನಂತರ ಕೆಲವು ಕಾಲದವರೆಗೆ ಪಟ್ಟದಕಲ್ಲಿನಲ್ಲಿ ಉಳಿದು ಲಿಂಗಾನುಸಂಧಾನದಲ್ಲಿ ತಕ್ಕ ಮಟ್ಟಿಗೆ ಪ್ರಗತಿಯನ್ನು ಸಾಧಿಸಿದ ಬಳಿಕ ಈಗಿನ ಶಿವಮೊಗ್ಗಾ ಜಿಲ್ಲೆಯ ಬಳ್ಳಿಗಾವಿಯ ಪ್ರದೇಶಕ್ಕೆ ತೆರಳಿ, ಅನಿಮಿಷನ ಕೊಪ್ಪಲು ಎಂದೇ ಈಗಲೂ ಕರೆಯಲ್ಪಡುವ ತಾಣದಲ್ಲಿ ಶಿವಯೋಗಾನುಸಂಧಾನದಲ್ಲಿದ್ದರೆಂದು ತಿಳಿದುಬರುತ್ತದೆ. ಅದೇ ಬಳ್ಳಿಗಾವಿ ಪ್ರದೇಶವು ಅಲ್ಲಮ ಪ್ರಭುದೇವರ ಹುಟ್ಟೂರಾಗಿತ್ತು. ಸ್ವತಃ ಅಲ್ಲಮ ಪ್ರಭುಗಳು ತಮ್ಮ ವಚನವೊಂದರಲ್ಲಿ ಅನಿಮಿಷರನ್ನು ಕುರಿತು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ;
ಆದಿಯ ಲಿಂಗವ ತೋರಿದ
ಅನಿಮಿಷನ ಕಂಡೆನಯ್ಯಾ ಇಂದು.
ಕೃತಯುಗದ ಸ್ಕಂದನೆಂಬ
ಗಣೇಶ್ವರನ ಕಂಡೆನಯ್ಯಾ ಇಂದು.
ತ್ರೇತಾಯುಗದ ನೀಲಲೋಹಿತನೆಂಬ
ಗಣೇಶ್ವರನ ಕಂಡೆನಯ್ಯಾ ಇಂದು.
ದ್ವಾಪರಯುಗದ ವೃಷಭನೆಂಬ
ಗಣೇಶ್ವರನ ಕಂಡೆನಯ್ಯಾ ಇಂದು.
ಕಲಿಯುಗದಲ್ಲಿ ಅನಿಮಿಷಬಸವನೆಂಬ
ಗಣೇಶ್ವರನ ಕಂಡೆನಯ್ಯಾ ಇಂದು.
ಎನ್ನ ಕಂಡವರನೂ, ನಿನ್ನ ಕಂಡವರನೂ,
ಇಂದು ಕಂಡೆ ಕಾಣಾ, ಗುಹೇಶ್ವರಾ.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-325/ವಚನ ಸಂಖ್ಯೆ-890)
“ಸದ್ಧರ್ಮ ದೀಪಿಕೆ” ಎಂಬ ಮಾಸಪತ್ರಿಕೆಯ ಸಂಪಾದಕರಾಗಿದ್ದ ಲಿಂಗೈಕ್ಯ ಶ್ರೀ ಚನ್ನಮಲ್ಲಿಕಾರ್ಜುನಪ್ಪನವರು ದೀರ್ಘ ಐತಿಹಾಸಿಕ ಸಂಶೋಧನೆಯ ನಂತರ ಪ್ರಕಟಿಸಿದ “ಬಸವೇಶ್ವರನ ಕಾಲ” ಎಂಬ ಗ್ರಂಥದಲ್ಲಿ ಬಸವಣ್ಣನವರು ಬನವಾಸಿಯ ಸಮೀಪದ ಬಳ್ಳಿಗಾವಿಯಲ್ಲಿ ಕೆಲ ದಿಗಳವರೆಗೆ ತಂಗಿದ್ದರೆಂಬ ಸಂಗತಿಯನ್ನು ಬೆಳಕಿಗೆ ತಂದಿದ್ದಾರೆ. ಅಂದ್ರೆ ಅವರು ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾದ ಬಳಿಕ ರಾಜಧರ್ಮದ ಕಾರ್ಯ ನಿಮಿತ್ತ ಬಳ್ಳಿಗಾವಿಗೆ ತೆರಳಿದ್ದರು ಎಂಬುದು ಸ್ಪಷ್ಟವಾಗುತ್ತದೆ. ಹಾಗೂ ಬಿಜ್ಜಳನ ಸಾಮ್ರಾಜ್ಯ ಅಲ್ಲಿಯವರೆಗೆ ವಿಸ್ತರಿಸಿತ್ತು ಎಂದೂ ತಿಳಿಯುತ್ತದೆ.
ಅರಸು ಸುಪತ್ತಿಗೆಯಲ್ಲಿದ್ದರೂ ವಸುದೀಶನು ನಿತ್ಯ ಶಿವಪೂಜೆ ಇಲ್ಲದೆ ಅನ್ನ ನೀರು ಸೇವಿಸುತ್ತಿರಲಿಲ್ಲ. ಒಮ್ಮೆ ಸಂಚಾರಕ್ಕೆ ಹೋದಾಗ ಶ್ವೇತಾಶ್ವವನ್ನೇರಿ ಸಾಗುತ್ತಿದ್ದ ಬಸವಣ್ಣನವರನ್ನು ಗಮನಿಸಿ ಕಳವಳಗೊಂಡನು. ವಸುಧೀಶರನ್ನು ನೋಡಿದ ಬಸವಣ್ಣನವರು ತಮ್ಮಲ್ಲಿದ್ದ ಇಷ್ಟಲಿಂಗವನ್ನೇ ನೀಡಿದರಂತೆ. ಅದನ್ನು ಪೂಜಿಸಿದ ಬಳಿಕವೇ ಪ್ರಸಾದ ಸ್ವೀಕರಿಸಲು ಹೇಳಿ ಹೋದರೆಂದು ಕೆಲವು ಸಾಹಿತ್ಯ ಮೂಲಗಳಿಂದ ತಿಳಿಯಬಹುದಾಗಿದೆ.
ಒಂದೊಮ್ಮೆ ವಸುದೀಶನು ಕಟ್ಟಿದ ಕುದುರೆ ತಪ್ಪಿಸಿಕೊಂಡು ಓಡಿ ಹೋಗುತ್ತದೆ. ಅದು ಮರಳಿ ಸಿಗದೆ ನಿರಾಶೆಗೊಳಿಸುತ್ತದೆ. ಇದನ್ನರಿತ ವಸುದೀಶ ಅರಸುತನದ ಸುಪ್ಪತ್ತಿಗೆ ಶಾಶ್ವತವಲ್ಲ. ಒಂದಿನ ಕುದುರೆ ಓಡಿ ಹೋದಂತೆ ನಮ್ಮಿಂದ ಮಾಯವಾಗುತ್ತದೆ ಎಂದು ತಿಳಿದು ವೈರಾಗ್ಯ ಹೊಂದಲು ನಿರ್ಧರಿಸುತ್ತಾರೆ. ಬಸವಣ್ಣನವರಿಂದ ದಯಪಾಲಿಸಿದ ಇಷ್ಟಲಿಂಗ ಪೂಜೆಯಲ್ಲಿ ಸಂತೃಪ್ತಿ ಕಾಣಲಾರಂಬಿಸಿದರು ಎಂದೂ ಹೇಳಲಾಗುತ್ತದೆ. ಅದಕ್ಕೆ ಅಲ್ಲಮಪ್ರಭು ತಮ್ಮ ಗುರುವಿನ ಗುರು ಶ್ರೇಷ್ಠ ಗುರು ಎಂಬ ಅರ್ಥದಲ್ಲಿ ಸಂಬೋಧಿಸಿ ತಮ್ಮ ವಚನವೊಂದರಲ್ಲಿ ಹೀಗೆ ಹೇಳಿದ್ದಾರೆ;
ಗುರುವಿನ ಪ್ರಾಣ, ಲಿಂಗದಲ್ಲಿ ಲೀಯವಾದ ಬಳಿಕ
ಆ ಲಿಂಗವೆನ್ನ ಕರಸ್ಥಲಕ್ಕೆ ಬಂದಿತ್ತು ನೋಡಾ.
ಇದ್ದಾನೆ ನೋಡಾ,
ಎನ್ನ ಗುರು ಅನಿಮಿಷನು, ಎನ್ನ ಕರಸ್ಥಲದಲ್ಲಿ.
ಇದ್ದಾನೆ ನೋಡಾ,
ಎನ್ನ ಗುರು ಅನಿಮಿಷನು ಎನ್ನ ಜ್ಞಾನದೊಳಗೆ,
ಎನ್ನ ಗುರುವಿನ ಗುರು ಪರಮಗುರು
ಸಂಗನಬಸವಣ್ಣ ಎನ್ನ ಕಂಗಳ ಮುಂದೆ!
ಗುಹೇಶ್ವರನ ಸಾಕ್ಷಿಯಾಗಿ,
ಎನ್ನ ಮೇಲೆ ಗುರು ದ್ರೋಹವಿಲ್ಲ
ಕಾಣಾ ಗುಹೇಶ್ವರ.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-431/ವಚನ ಸಂಖ್ಯೆ-1160)
ಈ ವಚನದಲ್ಲಿ ಅಲ್ಲಮನ ಗುರುವಾದ ಅನಿಮಿಷರಿಗೆ ಬಸವಣ್ಣ ಲಿಂಗವಿತ್ತಿದ್ದರ ಬಗ್ಗೆ ಸ್ಪಷ್ಟವಾಗುತ್ತದೆ. ಹೀಗಾಗಿ ಬಸವಣ್ಣನು ಗುರುವಿನ ಗುರುವಾಗಿದ್ದರೆಂಬುದು ತಿಳಿದುಬರುತ್ತದೆ. ಇನ್ನೊಂದಡೆ ಸ್ವತಃ ಬಸವಣ್ಣನವರು ಹೀಗೆ ಹೇಳಿದ್ದಾರೆ;
ಎನ್ನ ಕರಸ್ಥಲದ ಲಿಂಗವ ಅನಿಮಿಷ ಕೊಂಡನು,
ಅನಿಮಿಷನ ಕರಸ್ಥಲದ ಲಿಂಗವ ನೀವು ಕೊಂಡಿರಿ.
ನಿಮ್ಮ ಕರಸ್ಥಲವೆ ಪರಸ್ಥಲವಾಯಿತ್ತು,
ಕುರುಹಳಿದಲ್ಲಿ ಕುರುಹ ಕೊಂಬ ಪರಿ ಎಂತಯ್ಯಾ?
ಕೊಡುವವರು ಕೊಂಬವರೊಳಗೆ ಸಿಲುಕಿದ ಬಳಿಕ
ಕೊಂಬವರು ಕೊಡುವವರೊಳಗೆ ಸಿಲುಕಿದ ಬಳಿಕ,
ಕೂಡಲಸಂಗಮದೇವಪ್ರಭುವೆ,
ನಿಮ್ಮ ಕರಸ್ಥಲದ ಲಿಂಗವೆನಗೆ
ಸಾಧ್ಯವಹ ಪರಿಯೆಂತಯ್ಯಾ
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-315/ವಚನ ಸಂಖ್ಯೆ-1080)
ಎಂದು ಅಲ್ಲಮಪ್ರಭುದೇವರಿಗೆ ಹೇಳಿದ್ದಾರೆ.
ಅಲ್ಲದೆ ಅವಿರಳ ಜ್ಞಾನಿಯೆನಿಸಿದ ಚನ್ನಬಸವಣ್ಣನವರೂ ಸಹ ಅಲ್ಲಮಪ್ರಭುವಿನೊಂದಿಗೆ ಲಿಂಗ ಕಾರುಣ್ಯ ಪೂರೈಸಿದ ಗುರುವಿನ ಕುರಿತು ಚರ್ಚಿಸುವಾಗ ಈ ರೀತಿ ವಾದಿಸಿದ್ದಾರೆ;
ಗುರುವಿಲ್ಲದ ಲಿಂಗ ನಿನಗೆಲ್ಲಿದಯ್ಯಾ?
ಕೊಂದೆ ನಿಮ್ಮಯ್ಯನ, ಕೊಂಡೆ ಲಿಂಗವನು!
ಅಂದು ಅನುಮಿಷ ನಿನಗೆ ಗುರುವಾದುದನರಿಯಾ?
ಕೂಡಲ ಚನ್ನಸಂಗಯ್ಯನಲ್ಲಿ
ಮೂರು ಲೋಕವರಿಯೆ ಅಲ್ಲಮ ಪ್ರವತಗೇಡಿ.
(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-566/ವಚನ ಸಂಖ್ಯೆ-1219)
ಈ ವಚನದಲ್ಲಿ ಅಲ್ಲಮರಿಗೆ ಗುರು ಇಲ್ಲದೆ ನಿನಗೆ ಲಿಂಗ ದೊರೆತಿಲ್ಲ. ಗುರು ಕಾರುಣ್ಯವ ಮಾಡಿದ ಗುರುವೋರ್ವ ನಿನಗೆ ಇದ್ದ. ಆ ಗುರುವಿನ ನಿಜವಾದ ಹೆಸರನ್ನು ನೀ ಕೊಂದೆ. ಆ ಹೆಸರನ್ನು ಮರೆಮಾಡಿದ್ದಿಯಾ. ಲಿಂಗ ಕಾರುಣ್ಯ ದಯಪಾಲಿಸಿದ ಸ್ವತಃ ನಿನ್ನ ಗುರುವಾಗಿದ್ದ ಅನಿಮಿಷ ಎಂಬುದನ್ನು ನೀ ಅರಿಯೇ ಎಂದು ಅರುಹಿದ್ದಾರೆ.
ಅಂಗೈಯಲ್ಲಿ ಲಿಂಗವ ಹಿಡಿದು ನೇರ ದೃಷ್ಠಿಯನ್ನಿಟ್ಟು ಚಿತ್ತ ಮತ್ತು ಪ್ರಾಣ ಸಮರಸವಾಗಿ ನಿರೀಕ್ಷಿಸಿ ಶಿವಯೋಗದಲ್ಲಿ ತಲ್ಲೀನವಾದ ಕಾರಣ ವಸುದೀಶರಿಗೆ ಅನಿಮಿಷಯ್ಯನೆಂದು ಕರೆಯಲಾಯಿತು. ಕ್ರಮೇಣ ವೈರಾಗ್ಯ ತಾಳಿ, ಅನೇಕ ವರ್ಷಗಳವೆರೆಗ ಗುಹೆಯಲ್ಲಿ ನೆಲೆಸಲು ಆರಂಭಿಸಿತ್ತಾರೆ. ಅವರಿದ್ದ ಗುಹೆಗೆ ಬಂದ ಅಲ್ಲಮನು ಗೊಗ್ಗಯ್ಯರಿಂದ ಅವರನ್ನು ತಿಳಿದು ಗುಹೆ ಪ್ರವೇಶಿಸಿ, ಅನಿಮಷಯೋಗಿಯ ಕಂಡು ಹೀಗೆ ಹೇಳುತ್ತಾರೆ;
ಕಾಣ ಬಾರದ ಗುರುಕಣ್ಣಿಗೆ ಗೋಚರವಾದಡೆ:-
ಹೇಳಲಿಲ್ಲದ ಬಿನ್ನಪ, ಮುಟ್ಟಲಿಲ್ಲದ
ಹಸ್ತಮಸ್ತಕಸಂಯೋಗ.
ಹೂಸಲಿಲ್ಲದ ವಿಭೂತಿಯ ಪಟ್ಟ,
ಕೇಳಲಿಲ್ಲದ ಕರ್ಣಮಂತ್ರ.
ತುಂಬಿ ತುಳಕದ ಕಲಶಾಭೀಷೇಕ, ಆಗಮವಿಲ್ಲದ ದೀಕ್ಷೆ,
ಪೂಜೆಗೆ ಬಾರದ ಲಿಂಗ, ಸಂಗವಿಲ್ಲದ ಸಂಬಂಧ.
ಸ್ವಯವಪ್ಪ ಅನುಗ್ರಹ, ಅನುಗೊಂಬಂತೆ
ಮಾಡಾ ಗುಹೇಶ್ವರಾ.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-398/ವಚನ ಸಂಖ್ಯೆ-1065)
ಪ್ರಭುದೇವರು ತನ್ನ ಗುರುವಾದ ಅನಿಮಿಷಯೋಗಿಯಿಂದ ಗುಹೆಯೊಳಗೆ ಲಿಂಗವ ಪಡೆದದ್ದರಿಂದ ಆ ಲಿಂಗಕ್ಕೆ ಗುಹೆಯ ಈಶ್ವರ, ಗುಹೇಶ್ವರವೆಂದು ಹೆಸರಿಟ್ಟು, ತಮ್ಮ ವಚನಾಂಕಿತವನ್ನಾಗಿಸಿಕೊಂಡರು.
ಡಾ. ಸತೀಶ ಕೆ. ಇಟಗಿ,
ಪತ್ರಿಕೋದ್ಯಮ ಉಪನ್ಯಾಸಕ,
ಅಂಚೆ: ಕೋಳೂರ – 586 129.
ತಾ: ಮುದ್ದೇಬಿಹಾಳ, ಜಿ: ವಿಜಯಪುರ.
ಮೊ: 92412 86422
ಈ-ಮೇಲ್: satshitagi10@gmail.com
ಈ ಲೇಖನದ ಮೂಲಗಳು:
- ಶೂನ್ಯ ಸಂಪಾದನೆಯ ರಹಸ್ಯ, ಸಂಪುಟ-1: ಗೂಳೂರು ಸಿದ್ಧವೀರಣ್ಣೊಡೆಯ.
- ಶರಣರು ಕಂಡ ಬಸವಣ್ಣ, ಸಾಹಿತ್ಯ ಸಮಿತಿ, ಧಾರವಾಡ(1976): ಎಚ್ ಡಿ ಚಂದನಗೌಡರ.
- ಅನುಪಮ ಯೋಗಿ ಅನಿಮಿಷ, ಬಯಲು (2020): ಎಚ್. ವಿ. ಜಯಾ.
- ಅನುಭವ ಮಂಟಪ ಲಿಂಗಾಯತ ಧರ್ಮದ ಹೃದಯ”, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಬೆಂಗಳೂರು (2002): ರೆ|| ಸಿ. ಡಿ. ಉತ್ತಂಗಿ ಚನ್ನಪ್ಪ.
- ಲಿಂಗವಂತ ಧರ್ಮಸ್ಥಾಪಕ ಬಸವಣ್ಣನವರು, ಸಾಗರ (2007): ಬಸವಾನಂದರು.
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ (ರಿ) ದ ಸಂಚಾಲಕರನ್ನು ಸಂಪರ್ಕಿಸಬೇಕಾದ:
- ಮೋಬೈಲ್ ನಂ. 9741 357 132
- e-Mail ID: info@vachanamandara.in / admin@vachanamandara.in
![]()






Total views : 59234