![]()

ಮಹಾರಾಷ್ಟ್ರದ ಅಂದಿನ ಉಮದಿ ಇಂದಿನ ಉಮರಾಣಿಯಲ್ಲಿ ವಿಶ್ವಕರ್ಮ ಸಮುದಾಯದ ಅನಂತರಾಯ ಮತ್ತ ಶಿರಸಮ್ಮ ದಂಪತಿಯ ಏಕೈಕ ಪುತ್ರಿಯೇ ಲಿಂಗಮ್ಮನವರು. ಕ್ರಿ. ಶ. 1146 ರಲ್ಲಿ ಹುಟ್ಟಿದ ಆ ಹೆಣ್ಣು ಶಿಶು ಹಾಲು ಕುಡಿಯತ್ತಿರಲಿಲ್ಲವಂತೆ. ಸ್ಥಳೀಯ ವೀರಮಲ್ಲಯ್ಯ (ಶಾಂತವೀರ) ನವರು ಮಗು ಜನಸಿದ 13 ನೆ ದಿನಕ್ಕೆ ವಿಭೂತಿ ಮತ್ತು ಲಿಂಗಧಾರಣೆಗೈದ ಬಳಿಕ ಹಾಲು ಸೇವಿಸಲಾರಂಭಿಸಿತಂತೆ. ಹೀಗಾಗಿ “ಲಿಂಗಮ್ಮ” ಎಂದು ನಾಮಕರಣ ಮಾಡುತ್ತಾರೆ. ಕ್ರಮೇಣ ಮಾತಾ ಪಿತರು ಲಿಂಗ ಪೂಜೆಯ ನಿಷ್ಠರಾಗಿದ್ದಕ್ಕೆ ಲಿಂಗಭಕ್ತೆಯಾದರು. ಚಿಕ್ಕವಳಿದ್ದಾಗ ಕೆಸರಿನಿಂದ ಶಿವಲಿಂಗ ಮಾಡಿ ಪೂಜಾ ಸಾಮಗ್ರಿಗಳೊಂದಿಗೆ ಆಡುತ್ತಿದ್ದರಂತೆ. ಸೊನ್ನಲಗಿಯಲ್ಲಿ ಶಿವಯೋಗಿ ಸಿದ್ದರಾಮರು ಎಲ್ಲೆಂದರಲ್ಲಿ ಲಿಂಗ ಸ್ಥಾಪಿಸಿದ್ದನ್ನು ತಿಳಿದು ಅವರನ್ನು ದೃಷ್ಠಿಯೋಗದ ಗುರುವನ್ನಾಗಿ ಸ್ವೀಕರಿಸಿದರು. ಸಿದ್ದರಾಮರ ಮಾರ್ಗದರ್ಶನದಂತೆ ಕಲ್ಯಾಣಕ್ಕೆ ತೆರಳಿದರು. ಹೋಗುವಾಗ ಕಾಮುಕರ ಕಣ್ಣಿಗೆ ಬೀಳದಂತೆ ವೃದ್ಧೆಯ ವೇಷ ಹಾಕಿ ಜೋಳಿಗೆ ಹಿಡಿದು ಸಂಚರಿಸಿದ್ದರಂತೆ. ಕಲ್ಯಾಣ ಸಮೀಪದ ನಾರಾಯಣಪುರ ತಲುಪಿ, ಬಡವಿ ಮಹಾದೇವಿ ಶರಣೆಯ ಕುಟೀರದಲ್ಲಿ ನೆಲೆಸಿದ್ದರಂತೆ. ಇತ್ತೀಚೆಗೆ ಅಲ್ಲಿನ ಗುಣತೀರ್ಥವಾಡಿಯಲ್ಲಿ ಪುರಾತನ ಬೃಹತ್ಗವಿ ಪತ್ತೆಯಾಗಿದೆ. ಅದು “ಲಿಂಗಮ್ಮಬವರ ತಪೋತಾಣ” ವೆಂದು ಗುರುತಿಸಲಾಗಿದೆ. ಅದರ ಸುತ್ತಲೂ ಬಿಲ್ವವನವಿತ್ತು. ಅಲ್ಲಿಯೇ ಲಿಂಗಮ್ಮನವರು 21 ದಿನಗಳ ಕಾಲ ಲಿಂಗಾನುಷ್ಠಾನಗೈದರೆಂದು ಹಾಗೂ ಅನೇಕ ಪವಾಡಗಳು ಜರುಗಿದವು ಎಂದು ಪ್ರತೀತಿ ಇದೆ. ತದನಂತರ ಆ ಬಿಲ್ವವನ ಬಾಳೆವನವಾಗಿ ಮಾರ್ಪಟ್ಟಿತು. ಅಲ್ಲಿಯೇ ದಾನಮ್ಮನವರ ಸ್ಮಾರಕ ನಿರ್ಮಿಸಲಾಯಿತಂದು ತಿಳಿಯಲಾಗುತ್ತದೆ. ಕಾಲಾನಂತರ ತೋಟದ ಮಾಲಿಕರು ಆ ಸ್ಮಾರಕವನ್ನು ತೆರುವುಗೊಳಿಸಿದ್ದಾರೆ. ನಂತರದ ವಾರರಸುದಾರರು ಅಲ್ಲಿನ ವೃಕ್ಷವೊಂದರ ನೆರಳಿನಲ್ಲಿ ಶಿವಲಿಂಗ ಕಟ್ಟೆಯನ್ನು ನಿರ್ಮಿಸಿದ್ದಾರೆ. ಅದುವೆ ಲಿಂಗಮ್ಮನವರು ಅನುಷ್ಠಾನಗೈದ ಸ್ಥಳವೆಂದು ಹೇಳುತ್ತಾರೆ.
ಲಿಂಗಮ್ಮ ಆ ವನದಲ್ಲಿ ನೆಲೆಸಿದಾಗ ತ್ರಿಕಾಲ ಇಷ್ಟಲಿಂಗ ಪೂಜೆ ನಿರತಳಾಗಿದ್ದರು. ದಾಸೋಹ ಗೈಯ್ಯುತ್ತಿದ್ದಳು. ದಾಸೋಹ ತಯಾರಿಸಲು ಸ್ವತಃ ತಾವೇ ಸೌದೆ ಸಂಗ್ರಹಿಸಿ ಅಡುಗೆ ಬೇಯಿಸುತ್ತಿದ್ದರು. ಅದನ್ನು ಗಮನಿಸಿದ ಮೋಳಿಗೆ ಮಾರಯ್ಯನವರು ಒಂದಿನ ರಾತ್ರಿ ಲಿಂಗಮ್ಮನವರಿಗೆ ತಿಳಿಯದಂತೆ ಅವಳ ಕಡಿಮೆ ಪ್ರಮಾಣದ ಸೌಧೆಯಲ್ಲಿ ತಾನು ಹೊತ್ತು ತಂದ ಸೌಧೆಯನ್ನು ಸೇರಿಸಿ ದೊಡ್ಡ ಕಟ್ಟಾಗಿಸಿ ಹೋಗಿದ್ದರಂತೆ. ಬೆಳಿಗ್ಗೆ ಗಮನಿಸಿದ ಲಿಂಗಮ್ಮ ಅಚ್ಚರಿಗೊಂಡು ನಂತರ ಮಾರಯ್ಯ ನೆರವಾಗಿದ್ದನ್ನು ಮನವವರಿಕೆ ಮಾಡಿಕೊಂಡರಂತೆ.
ಆನೆಂಬುದಿಲ್ಲ, ನೀನೆಂಬುದಿಲ್ಲ,
ಸ್ವಯವೆಂಬುದಿಲ್ಲ, ಪರವೆಂಬುದಿಲ್ಲ,
ಅರಿವೆಂಬುದಿಲ್ಲ, ಮರವೆಂಬುದಿಲ್ಲ,
ಒಳಗೆಂಬುದಿಲ್ಲ, ಹೊರಗೆಂಬುದಿಲ್ಲ,
ಕೂಡಲಚೆನ್ನಸಂಗಯ್ಯನೆಂಬ ಶಬ್ದ ಮುನ್ನಿಲ್ಲ.
(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-450/ವಚನ ಸಂಖ್ಯೆ-1020)
ಈ ವಚನದಲ್ಲಿ ಚನ್ನಬಸವಣ್ಣನವರು ಪರಮಾತ್ಮನ ಪರಿಪೂರ್ಣ ತತ್ವವನ್ನು ವಿವರಿಸುತ್ತಾರೆ. ದೇವರ ಅನುಭವದ ಸ್ಥಿತಿಯಲ್ಲಿ “ನಾನು”, “ನೀನು” ಎಂಬ ಭೇದಭಾವ ಇರುವುದಿಲ್ಲ. “ಇದು ನನ್ನದು”, “ಅದು ಪರರದು” ಎನ್ನುವ ಸ್ವಾರ್ಥಭಾವವೂ ಅಳಿದುಹೋಗುತ್ತದೆ. ಜ್ಞಾನ–ಅಜ್ಞಾನ, ಒಳ–ಹೊರ ಎಂಬ ಎಲ್ಲ ದ್ವಂದ್ವಗಳೂ ಅಲ್ಲಿ ಲಯವಾಗುತ್ತವೆ. ಆಧ್ಯಾತ್ಮಿಕ ಅನುಭವದ ಪರಮ ಸ್ಥಿತಿಯಲ್ಲಿ ಎಲ್ಲವೂ ಒಂದೇ ಸತ್ಯವಾಗಿ ಕಾಣುತ್ತದೆ. ಅಂಥ ಸ್ಥಿತಿಯಲ್ಲಿ ಉಳಿಯುವುದು ಕೇವಲ “ಕೂಡಲಚೆನ್ನಸಂಗಯ್ಯ” ಎಂಬ ನಿರಾಕಾರ ಶಿವನ ಅನುಭವ ಮಾತ್ರ. ಅಂದರೆ ಅಂತರಾತ್ಮ ಮತ್ತು ಪರಮಾತ್ಮದ ಏಕತ್ವವೇ ಜೀವನದ ಪರಮಸತ್ಯ ಎಂದು ವಚನ ಸಾರುತ್ತದೆ.
ಅಪರಿಮಿತ ಇಷ್ಟಲಿಂಗ ಭಕ್ತೆಯಾಗಿ ದಾಸೋಹದಿಂದ ಪವಾಡಗೈಯುತ್ತಿದ್ದ ಲಿಂಗಮ್ಮನವರ ಭೇಟಿಗೆ ಸ್ವತಃ ಬಸವಣ್ಣನವರೇ ಧಾವಿಸಿದ್ದರು. ತಮ್ಮ ಶರಣ–ಶರಣೆಯರ ಬಳಗೊಂದಿಗೆ ಲಿಂಗಮ್ಮನವರನ್ನು ವಾದ್ಯಮೇಳದೊಂದಿಗೆ ಕಲ್ಯಾಣಕ್ಕೆ ಕರೆತಂದರಂತೆ. ಸಿರಿವಂತರು, ರಾಜಾದಿರಾಜರು ನೀಡಿದ ದಾನವನ್ನು ಲಿಂಗಮ್ಮನವರು ತಮ್ಮ ತುಂಬಿದ ಜೋಳಿಗೆಯಿಂದ ಇತರರಿಗೆ ಕಣ್ಣು ಮುಚ್ಚಿ ದಾನಗೈಯ್ಯುತ್ತಿದ್ದರು. ಆ ಉದಾರತೆ ಅರಿತ ಬಸವಣ್ಣನವರು ಅನುಭವ ಮಂಟಪದಲ್ಲಿ ಪ್ರಸ್ತಾಪಸಿದಾಗ ಸ್ವತಃ ಅಲ್ಲಮ್ಮ ಪ್ರಭುಗಳೇ “ವರದಾಯಿನಿ ದಾನಮ್ಮ” ಳೆಂದು ಬಿರುದು ಪ್ರಾಪ್ತಿಸಿದ್ದರು. ನಂತರ ಬಸವಣ್ಣನವರು ಲಿಂಗಮ್ಮ ಬದಲಾಗಿ ದಾನಮ್ಮನೆಂದು ಕರೆಯಲು ಸೂಚಿಸಿದರಂತೆ. ಒಮ್ಮೆ ಅನುಭವ ಮಂಟಪದ ಚರ್ಚೆಯಲ್ಲಿ ತೊಡಗಿದಾಗ ಶರಣೆ ದಾನಮ್ಮನವರಿಗೂ ವಚನ ರಚಿಸುವಂತೆ ಅಲ್ಲಮರು ಭಿನೈಸಿದಾಗ, “ತಾನು ರಚಿಸದೆ, ರಚಿಸಲ್ಪಟ್ಟ ವಚನ ಭಾಂಡಾರವನ್ನು ಪ್ರಚಾರಗೊಳಿಸುತ್ತೆನೆ” ಎಂದು ದಾನಮ್ಮನವರು ಉತ್ತರಿಸಿದ್ದರಂತೆ.
ಪೋಷಕರ ಉದ್ದೇಶಿತ ಮದುವೆಯನ್ನು ನಿರಾಕರಿಸಿ ಕಲ್ಯಾಣಕ್ಕೆ ತೆರಳಿದ ದಾನಮ್ಮನವರ ಮದುವೆ ಕಾರ್ಯ ಪೂರೈಸಲು ಸ್ವತಃ ಶರಣರೇ ಸಿದ್ದತೆಗೊಳಿಸಿದರಂತೆ. ತನ್ನ ಮದುವೆ ನಿರ್ಧಾರವನನ್ನು ವೀರವಿರಾಗಿನಿ ಅಕ್ಕಮಹಾದೇವಿಯವರ ಜೊತೆ ಚರ್ಚಿಸಿ ಒಪ್ಪಿಗೆ ಸೂಚಿಸಿದ್ದರಂತೆ. ಅಂತೆಯೇ ಶಿವಭಕ್ತನಾದ ಸೋಮಲಿಂಗನವರೊಂದಿಗೆ ಕ್ರಿ.ಶ. 1164 ರಲ್ಲಿ ಸಂಖತೀರ್ಥ ಎಂಬಲ್ಲಿ ವಿವಾಹವೋತ್ಸವ ಜರುಗಿಸಿದರು. ಇವರೊಂದಿಗೆ 550 ಕ್ಕೂ ಹೆಚ್ಚು ನವಜೋಡಿಗಳ ಸಾಮೂಹಿಕ ವಿವಾಹ ಜರುಗಿತ್ತಂತೆ. ಅದರ ಜವಾಬ್ಧಾರಿಯನ್ನು ಯುಸೂಬ್ ಎಂಬ ಮಾಂಡಲಿಕ ದೊರೆ ನಿರ್ವಹಿಸಿದ್ದನಂತೆ. ಆ ಕ್ಷೇತ್ರವೀಗ ಅಪಾರ ಶ್ರದ್ಧಾ ಭಕ್ತಿಯದ್ದಾಗಿದ್ದು ಎಂದೂ ಬತ್ತದ ಪವಿತ್ರ ನೀರಿನ ಹೊಂಡಕ್ಕೆ ಸಾಕ್ಷಿಯಾಗಿದೆ.
ಶಿಲೆಯೊಳಗಣ ಪಾವಕನಂತೆ,
ಉದಕದೊಳಗಣ ಪ್ರತಿಬಿಂಬದಂತೆ,
ಬೀಜದೊಳಗಣ ವೃಕ್ಷದಂತೆ,
ಶಬ್ದದೊಳಗಣ ನಿಶ್ಶಬ್ದದಂತೆ,
ಗುಹೇಶ್ವರಾ ನಿಮ್ಮ ಶರಣ ಸಂಬಂಧ.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-7/ವಚನ ಸಂಖ್ಯೆ-1)
ಈ ವಚನದಲ್ಲಿ ಅಲ್ಲಮಪ್ರಭುವರು ದೇವರು ಮತ್ತು ಶರಣರ ಸಂಬಂಧವನ್ನು ಅತ್ಯಂತ ಸೂಕ್ಷ್ಮವಾಗಿ ವಿವರಿಸಿದ್ದಾರೆ. ಕಲ್ಲಿನೊಳಗೆ ಬೆಂಕಿ ಅಡಗಿರುವಂತೆ, ನೀರಿನೊಳಗೆ ಪ್ರತಿಬಿಂಬ ಕಾಣುವಂತೆ, ಬೀಜದೊಳಗೆ ದೊಡ್ಡ ಮರ ಅಡಗಿರುವಂತೆ, ಶಬ್ದದೊಳಗೆ ನಿಶ್ಶಬ್ದ ಅಡಗಿರುವಂತೆ — ದೇವರು ಶರಣರ ಅಂತರಂಗದಲ್ಲಿ ಅಡಗಿದ್ದಾನೆ ಎಂದು ಹೇಳುತ್ತಾರೆ. ಅಂದರೆ ಭಗವಂತನು ಹೊರಗಿಲ್ಲ; ಆತನು ಭಕ್ತನ ಮನಸ್ಸಿನಲ್ಲೇ ಸೂಕ್ಷ್ಮವಾಗಿ ನೆಲೆಸಿದ್ದಾನೆ. ಶರಣನು ಆತ್ಮಶುದ್ಧಿ ಮತ್ತು ಭಕ್ತಿಯಿಂದ ಬದುಕಿದಾಗ ದೇವರ ಸಾನ್ನಿಧ್ಯವನ್ನು ಅನುಭವಿಸಬಹುದು. ದೇವರು ಮತ್ತು ಶರಣರ ಸಂಬಂಧವು ಬಹಳ ಆಂತರಿಕ, ಅವಿಭಾಜ್ಯ ಮತ್ತು ಆಧ್ಯಾತ್ಮಿಕವಾದದ್ದು ಎಂಬ ಸಂದೇಶವನ್ನು ಈ ವಚನ ನೀಡುತ್ತದೆ.
ವಿವಾಹವಾದ ಬಳಿಕ ವಚನ ಸಾಹಿತ್ಯ ಮತ್ತು ಶರಣ ಧರ್ಮದ ಪ್ರಚಾರಕ್ಕಾಗಿ ಸತಿ-ಪತಿ ಒಟ್ಟಾಗಿ ಲೋಕ ಸಂಚಾರದಲ್ಲಿ ತೊಡಗಿದರು. ಒಮ್ಮೆ ರಾಮೇಶ್ವರಕ್ಕೆ ತೆರಳಿದಾಗ ಅಲ್ಲಿಯ ಚೋಳ ರಾಜರ ಮಾಂಡಲಿಕನಿಗೆ ಲಿಂಗ ದೀಕ್ಷೆ ನೀಡಿ, ಇಷ್ಟಲಿಂಗ ಪೂಜೆಗೆ ತೊಡಗಿಸಿದ್ದರು ಎಂದು ತಿಳಿದು ಬರುತ್ತದೆ. ಬಹುಮನಿ ಸುಲ್ತಾನನಿಗೆ ವಿಭೂತಿ ಧಾರಣೆಗೊಳಿಸಿ, ಲಿಂಗಪ್ರಜ್ಞೆ ಬೆಳೆಸಿದ್ದರು ಎಂದು ತಿಳಿದು ಬರುತ್ತದೆ. ಇತ್ತ ಕಲ್ಯಾಣ ಕ್ರಾಂತಿ ಸಂಭವಿಸುತ್ತಿದ್ದಂತೆ ಬಸವಣ್ಣನವರು ಕೂಡಲಸಂಗಮದಲ್ಲಿ ಬಂದು ನೆಲೆಸಿದ್ದನ್ನು ತಿಳಿದ ದಾನಮ್ಮನವರು ಅವರ ದರ್ಶನಕ್ಕೆ ತೆರಳುತ್ತಿದ್ದಂತೆ ಅತ್ತ ಮಾತಾ ಪಿತರು ಇಹಲೋಕ ತ್ಯಜಿಸಿದ ಮಾಹಿತಿ ತಿಳಿದು ತನ್ನೂರಿನತ್ತ ತೆರಳುತ್ತಾರೆ. ನಂತರ ಮನೆ ಮಠ ತೊರೆದು ದೂರದ ಗುಡ್ಡವೊಂದರ ಸೋಮನಾಥನ ಮಂದಿರಲ್ಲಿ ನೆಲೆಸುತ್ತಾರೆ. ಅಲ್ಲಿ ತ್ರಿಕಾಲ ಇಷ್ಟಲಿಂಗ ಪೂಜೆ, ಗುರು ಲಿಂಗ ಜಂಗಮ ಆರಾಧನೆ ಹಾಗೂ ದಾಸೋಹದಲ್ಲಿ ತೊಡಗುತ್ತಾರೆ.
ಇಂಗಳಗಿಯಲ್ಲಿ ದೊರೆತ ಶಾಸನದಲ್ಲಿ “ಗುಡ್ಡವ್ವೆ” ಎಂದು ನಮೂದಿಸಿದೆ. ಅಲ್ಲಿನ ಘನಮಠದ ಪ್ರಭು ನಾಗರಸ, ಬಿಜ್ಜರಸ ಅವರು ಭಕ್ತಿ ಮತ್ತು ಗೌರಾವಾರ್ಥ ಗುಡ್ಡವ್ವೆ ಶರಣೆಗೆ ಮನೆ, ಭೂಮಿ ಹಾಗೂ ಹೂದೋಟ ನೀಡಿದ್ದು ಉಲ್ಲೇಖವಿದೆ. ಗುಡ್ಡದಲ್ಲಿ ನೆಲೆಸಿದ ಅವ್ವೆ, ತಾಯಿ ಎಂದು ಶಾಸನಕಾರರು ಗುಡ್ಡದವ್ವೆ ಎಂದು ನಮೂದಿಸಿದ್ದಿದೆ. ತನ್ನ 75 ನೆ ವಯಸ್ಸಿಗೆ ಕ್ರಿ. ಶ. 1221 ರಲ್ಲಿ ಗುರುವಾರ ಸೂರ್ಯಾಸ್ತದಲ್ಲಿ ಲಿಂಗ ಪೂಜಾನುಷ್ಠಾನದಲ್ಲಿ ನಿರತರಾದ ದಾನಮ್ಮನವರು ಲಿಂಗದಲ್ಲಿ ಲೀನರಾದರು. ಅವರ ಸಮಾದಿಯನ್ನು ಮಾಂಡಲಿಕ ಅರಸ ಸಾಯಿದೇವ ವರದಾಯಿನಿ ಗುಡಿ ಕಟ್ಟಿಸಿ ಉಂಬಳಿ ಕೊಟ್ಟನೆಂದು ಶಾಸನದಲ್ಲಿ ಪ್ರಸ್ತಾಪಿಸಲಾಗಿದೆ. ದಾನಮ್ಮನವರ ಕುರಿತು ಒಟ್ಟು 21 ಶಾಸನಗಳು ದೊರೆತಿವೆ.
ಬಸವಣ್ಣನವರ ಸಮಕಾಲಿನ ಶರಣೆಯಾದರೂ ವಚನ ರಚಿಸಿದ ಕುರುಹುಗಳು ಇಲ್ಲಿಯವರೆಗೆ ಸಿಕ್ಕಿಲ್ಲ. ಹರಿಹರನ ರಗಳೆಯಲ್ಲಿ ವರದಾಯಿನಿ ದಾನಮ್ಮ, ಭೀಮಕವಿಯ ಬಸವ ಪುರಾಣದಲ್ಲಿ ದಾನಮ್ಮದೇವಿಯ ಕಥೆ ನಿರೂಪಣೆಯಾಗಿದೆ. 1926 ರಲ್ಲಿ ರಾವ್ಬಹಾದ್ದೂರ ಡಾ. ಫ. ಗು. ಹಳಕಟ್ಟಿಯವರು ತಮ್ಮ ಶಿವಾನುಭವ ಪತ್ರಿಕೆಯಲ್ಲಿ ವರದಾಯಿನಿ ದಾನಮ್ಮಳ ಅಸ್ತಿತ್ವದ ಕುರಿತು ಸಂಶೋಧನ ಲೇಖನ ಪ್ರಕಟಿಸಿದ್ದಾರೆ.
ಆಧಾರ ಗ್ರಂಥಗಳು (References):
- ಅಥಣಿ, ವಿ. ಜಿ. (2018). ಮಹಾಶರಣೆ ಶ್ರೀ ಗುಡ್ಡಾಪುರ ದಾನಮ್ಮದೇವಿ ಚರಿತ್ರೆ (5 ನೇ ಮುದ್ರಣ). ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನ.
- ಇಂಗಳಗಿ, ಎಂ. ಎಸ್. (2015). ಗುಡ್ಡಾಪುರ ದಾನೇಶ್ವರಿ ಮಹಾತ್ಮೆ ಮತ್ತು ಪವಾಡಗಳು. ಪ್ರಗತಿ ಗ್ರಾಫಿಕ್ಸ್ ಅಂಡ್ ಪ್ರಕಾಶನ.
- ಡಾ. ಕಲಬುರ್ಗಿ, ಎಂ. ಎಂ (1998). ಶರಣರ ಜೀವನ ಚರಿತ್ರೆ ಮತ್ತು ಕಲ್ಯಾಣ ಕ್ರಾಂತಿ. ಕನ್ನಡ ವಿಶ್ವವಿದ್ಯಾಲಯ, ಹಂಪಿ.
- ಕುಲಕರ್ಣಿ, ಬಿ. ಆರ್. (2020). ಮಹಾರಾಷ್ಟ್ರದ ಕನ್ನಡ ಶರಣ ಪುಣ್ಯಕ್ಷೇತ್ರಗಳು. ಜಯಶ್ರೀ ಪ್ರಕಾಶನ.
- ಗುಡ್ಡಾಪುರ ಶ್ರೀ ದಾನಮ್ಮದೇವಿ ದೇವಸ್ಥಾನ ಟ್ರಸ್ಟ್. (2023). ಶ್ರೀ ಕ್ಷೇತ್ರ ಗುಡ್ಡಾಪುರ ಮಹಾತ್ಮೆ ಮತ್ತು ಭಕ್ತರ ಕೈಪಿಡಿ. ಶ್ರೀ ದಾನೇಶ್ವರಿ ಮುದ್ರಣಾಲಯ.
- ಪಾಟೀಲ, ಎಸ್. ಬಿ. (2021). ಉತ್ತರ ಕರ್ನಾಟಕದ ಪಾದಯಾತ್ರೆ ಸಂಸ್ಕೃತಿ ಮತ್ತು ಗುಡ್ಡಾಪುರ ಜಾತ್ರೆ. ಕನ್ನಡ ಜನಪದ ಅಧ್ಯಯನ ಪತ್ರಿಕೆ, 8 (2), 45–58.
- ಬಡಿಗೇರ, ಸಿ. ಎಂ. (2017). ಶಿವಶರಣೆ ಲಿಂಗಮ್ಮ ಹಾಗೂ ದಾನಮ್ಮದೇವಿ ಐತಿಹಾಸಿಕ ಹಿನ್ನೆಲೆ. ನವಕರ್ನಾಟಕ ಪ್ರಕಾಶನ.
- ಬಿರಾದಾರ, ಎಂ. ಜಿ. (2014). ಶರಣರ ಸಾಹಿತ್ಯ ಮತ್ತು ಸಾಮಾಜಿಕ ಕೊಡುಗೆ. ಸಮಾಜ ಪುಸ್ತಕಾಲಯ.
ಡಾ. ಸತೀಶ ಕೆ. ಇಟಗಿ,
ಪತ್ರಿಕೋದ್ಯಮ ಉಪನ್ಯಾಸಕ
ಅಂಚೆ: ಕೋಳೂರ – 586 129
ತಾ: ಮುದ್ದೇಬಿಹಾಳ, ಜಿ: ವಿಜಯಪುರ.
ಮೋಬೈಲ್ ಸಂ: 92412 86422
ಈ-ಮೇಲ್: satshitagi10@gmail.com
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ (ರಿ) ದ ಸಂಚಾಲಕರನ್ನು ಸಂಪರ್ಕಿಸಬೇಕಾದ:
- ಮೋಬೈಲ್ ನಂ. 9741 357 132
- e-Mail ID: info@vachanamandara.in / admin@vachanamandara.in




Total views : 63747