ಶಿವಶರಣ ಮಾದಾರ ಚೆನ್ನಯ್ಯನವರ ವಚನ ನಿರ್ವಚನ | ಡಾ. ಸಾರಿಕಾದೇವಿ ಎಲ್. ಕಾಳಗಿ, ಕಲಬುರಗಿ.

ನಡೆನುಡಿ ಸಿದ್ಧಾಂತವಾದಲ್ಲಿ, ಕುಲ ಹೊಲೆ ಸೂತಕವಿಲ್ಲ.
ನುಡಿ ಲೇಸು, ನಡೆಯಧಮವಾದಲ್ಲಿ,
ಅದು ಬಿಡುಗಡೆಯಿಲ್ಲದ ಹೊಲೆ.
ಕಳವು ಪಾರದ್ವಾರಂಗಳಲ್ಲಿ ಹೊಲಬನರಿಯದೆ,
ಕೆಟ್ಟು ನಡೆವುತ್ತ, ಮತ್ತೆ ಕುಲಜರೆಂಬ ಒಡಲವರುಂಟೆ?
ಆಚಾರವೆ ಕುಲ, ಅನಾಚಾರವೆ ಹೊಲೆ,
ಇಂತೀ ಉಭಯವ ತಿಳಿದರಿಯಬೇಕು.
ಕೈಯುಳಿ ಕತ್ತಿ ಅಡಿಗೂಂಟಕ್ಕಡಿಯಾಗಬೇಡ,
ಅರಿ ನಿಜಾ[ತ್ಮ]ರಾಮ ರಾಮನಾ.
(ಸಂಕೀರ್ಣ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-447 /ವಚನ ಸಂಖ್ಯೆ-1153)

ಶಿವಶರಣ ಮಾದಾರ ಚೆನ್ನಯ್ಯನವರು 12 ನೇ ಶತಮಾನದ  ಶ್ರೇಷ್ಠ ವಚನಕಾರರು ಮತ್ತು ಇವರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವಿಯಲ್ಲಿ ಜನಿಸಿದರು ಎಂದು ತಿಳಿದು ಬರುತ್ತದೆ. ಇವರು ಬಸವಣ್ಣನವರ ಹಿರಿಯ ಸಮಕಾಲೀನರಾಗಿದ್ದರು. ಇವರು ಅನುಭವ ಮಂಟಪದ ಅನುಭಾವಿಗಳಾಗಿದ್ದರು. ಇವರು ತಮಿಳುನಾಡಿನ ಕರಿಕಾಲ ಚೋಳರಾಜನ ಕುದುರೆ ಲಾಯದಲ್ಲಿ ಹುಲ್ಲು ಕತ್ತರಿಸುವ ಕಾಯಕವನ್ನು ಮಾಡುತ್ತಿದ್ದರು. ಇವರು ಚರ್ಮಕಾರ ಸಮುದಾಯಕ್ಕೆ ಸೇರಿದವರಾಗಿದ್ದರು. ಇವರು ಶಿವಭಕ್ತರಾಗಿದ್ದರು. ಶಿವನಿಗೆ, ರಾಜನು ಪ್ರತಿ ದಿನ ಅರ್ಪಿಸುವ ನೈವೇದ್ಯಕ್ಕಿಂತ, ಶರಣ ಚೆನ್ನಯ್ಯ ಮತ್ತು ಆತನ ಪತ್ನಿ ಭಕ್ತಿಯಿಂದ ಅರ್ಪಿಸಿದ ಅಂಬಲಿ ಹೆಚ್ಚು ಪ್ರಿಯವಾಗಿತ್ತು. ಶಿವನು ಪ್ರತಿ ನಿತ್ಯ ಚೆನ್ನಯ್ಯನವರು ಭಕ್ತಿಯಿಂದ ಅರ್ಪಿಸುವ ಅಂಬಲಿಯನ್ನು ಕುಡಿದು ತೃಪ್ತನಾಗುತ್ತಿದ್ದನು. ಕೊನೆಗೆ ರಾಜನಿಗೆ ಚೆನ್ನಯ್ಯನವರ ಭಕ್ತಿಯ ಶ್ರೇಷ್ಠತೆಯ ಅರಿವಾಗಿ, ಅವರಿಗೆ ನಮಸ್ಕರಿಸಿ, ಅವರ ಭಕ್ತಿಯನ್ನು ಕೊಂಡಾಡಿದರು. ಮುಂದೆ ಈ ಶರಣ ದಂಪತಿಗಳಿರ್ವರು ಕಲ್ಯಾಣಕ್ಕೆ ಬಂದು ತಮ್ಮ ಕಾಯಕ ಮುಂದುವರೆಸಿಕೊಂಡು ಅಲ್ಲಿಯೇ ನೆಲೆಸಿದರು. ಅವರು ಶಿವಯೋಗಗೈದ ನೆಲೆಯು ಇಂದು ಅಂಬಲಿಗುಂಡಎಂದು ಪ್ರಸಿದ್ಧವಾಗಿದೆ. ಬಸವಣ್ಣನವರು ತಮ್ಮ ವಚನಗಳಲ್ಲಿ ಚೆನ್ನಯ್ಯನವರನ್ನು ಅತ್ಯಂತ ಭಕ್ತಿಪೂರ್ವಕವಾಗಿ ಅಪ್ಪನು ನಮ್ಮ ಮಾದಾರ ಚೆನ್ನಯ್ಯ ಎಂದು ಸ್ಮರಿಸಿದ್ದಾರೆ. ಇಲ್ಲಿಯವರೆಗೆ, ಇವರ  ಕೇವಲ 10 ವಚನಗಳು ಮಾತ್ರ ಲಭ್ಯವಾಗಿವೆ. ಇವರು ತಮ್ಮ ವಚನಗಳಲ್ಲಿ ಕೈಯುಳಿ ಕತ್ತಿ ಅಡಿಗೂಂಟಕ್ಕಡಿಯಾಗಬೇಡ ಅರಿ ನಿಜಾ[ತ್ಮ]ರಾಮ ರಾಮನಾ ಎಂಬ ಅಂಕಿತವನ್ನು ಬಳಸಿದ್ದಾರೆ.

ನಿರ್ವಚನ:
ಶಿವಶರಣ ಮಾದಾರ ಚೆನ್ನಯ್ಯ ಅವರು “ನಡೆ-ನುಡಿ” ಮತ್ತು “ಸೂತಕ (ಅಶುದ್ಧತೆ)” ಎಂಬ ಪರಿಕಲ್ಪನೆಗಳ ಕುರಿತು ಅತ್ಯಂತ ಕ್ರಾಂತಿಕಾರಿ ಮತ್ತು ವೈಚಾರಿಕವಾಗಿ ಈ ವಚನದಲ್ಲಿ ಮಾತನಾಡಿದ್ದಾರೆ.

ಒಬ್ಬ ವ್ಯಕ್ತಿಯ ಮಾತು (ನುಡಿ) ಮತ್ತು ಅವನ ಬದುಕು ಅಥವಾ ನಡವಳಿಕೆ (ನಡೆ) ಒಂದೇ ಆಗಿದ್ದರೆ, ಅಂದರೆ ಸತ್ಯ ಮತ್ತು ಪ್ರಾಮಾಣಿಕತೆಯಿಂದ ಕೂಡಿದ್ದರೆ, ಅದನ್ನೇ ಸಿದ್ಧಾಂತ ಎನ್ನಲಾಗುತ್ತದೆ. ಅಂತಹ ವ್ಯಕ್ತಿಯಲ್ಲಿ ಯಾವುದೇ ಅಶುದ್ಧತೆ ಅಥವಾ ಸೂತಕ ಇರುವುದಿಲ್ಲ. ಒಬ್ಬ ವ್ಯಕ್ತಿಯ ಒಳ್ಳೆಯ ನಡತೆ, ಶಿಸ್ತು ಮತ್ತು ಸದಾಚಾರವೇ ಆತನ ನಿಜವಾದ ಕುಲ ಅಥವಾ ಜಾತಿ. ಅನಾಚಾರವೇ ಹೊಲೆ. ಕೆಟ್ಟ ನಡತೆ, ಅಮಾನವೀಯತೆ ಮತ್ತು ದುರ್ಗುಣಗಳೇ ನಿಜವಾದ ಹೊಲೆ ಅಥವಾ ಅಸ್ಪೃಶ್ಯತೆ. ಕೆಟ್ಟ ಕೆಲಸ ಮಾಡುವವನು ಎಷ್ಟೇ ಮೇಲ್ಜಾತಿಯಲ್ಲಿ ಹುಟ್ಟಿದ್ದರೂ ಅವನು ಹೊಲೆಯನೇ. ಆದರೆ ಸದಾಚಾರ ಇರುವವನು ಯಾವುದೇ ಕುಲದವನಾಗಿದ್ದರೂ ಅವನು ಕುಲಜನೇ ಅಂದರೆ ಆತ ಶ್ರೇಷ್ಠನೇ.

ಮನುಷ್ಯನ ಮಾತು ಮತ್ತು ಕೃತಿಗಳು ಬೇರೆ ಬೇರೆಯಾಗಿದ್ದರೆ, ಅವನು ಎಷ್ಟೇ ಮೇಲ್ಜಾತಿಯವನಾಗಿದ್ದರೂ, ಅವನ ಬದುಕು ವ್ಯರ್ಥ. “ಜನ್ಮನಾ ಜಾಯತೇ ಶೂದ್ರಃ ಸಂಸ್ಕಾರಾತ್‌ ದ್ವಿಜಮುಚ್ಯತೆ” ಎನ್ನುವಂತೆ ಅಂತಹವನು ನಿಜವಾದ ಸೂತಕದವನು. ಆತ ಕುಲಜನಾಗುವುದಿಲ್ಲ. ಮನುಷ್ಯ ಹುಟ್ಟಿನಿಂದ ಶ್ರೇಷ್ಠನಾಗುವುದಿಲ್ಲ, ಅವನು ಮಾಡುವ ಕೆಲಸ ಮತ್ತು ಅವನ ನಡತೆಯಿಂದ ಮಾತ್ರ ಶ್ರೇಷ್ಠನಾಗುತ್ತಾನೆ. ಹೊರಗಿನ ಆಚರಣೆಗಿಂತ ಒಳಗಿನ ಮನಸ್ಸು ಮತ್ತು ನಡವಳಿಕೆ ಶುದ್ಧವಾಗಿರಬೇಕು.

ಒಬ್ಬ ವ್ಯಕ್ತಿಯ ಒಳ್ಳೆಯ ನಡತೆ, ಶಿಸ್ತು ಮತ್ತು ಸದಾಚಾರವೇ ಆತನ ನಿಜವಾದ ಕುಲ ಅಥವಾ ಜಾತಿ. ಅನಾಚಾರವೇ ಹೊಲೆ. ಕೆಟ್ಟ ನಡತೆ, ಅಮಾನವೀಯತೆ ಮತ್ತು ದುರ್ಗುಣಗಳೇ ನಿಜವಾದ ಹೊಲೆ ಅಥವಾ ಅಸ್ಪೃಶ್ಯತೆ. ಯಾರ ನಡವಳಿಕೆ ಶುದ್ಧವಾಗಿದೆಯೋ ಅವರಿಗೆ ಯಾವುದೇ ಜಾತೀಯ ಸೂತಕ ತಟ್ಟುವುದಿಲ್ಲ ಎಂದು ವಾದಿಸುತ್ತಾರೆ. ಅಂದರೆ, ಶೀಲವೇ ಮುಖ್ಯ ಹೊರತು ಹುಟ್ಟಿದ ಕುಲವಲ್ಲ.

ಯಾರು ತಮ್ಮ ಬದುಕಿನಲ್ಲಿ ನಡೆ ಮತ್ತು ನುಡಿ ಇವೆರಡು ಸಿದ್ಧಾಂತಗಳನ್ನು ಒಂದಾಗಿಸಿಕೊಂಡು ನಡೆಯುತ್ತಾರೆಯೋ, ಅವರಿಗೆ ಯಾವುದೇ ಕುಲದಲ್ಲಿ ಹುಟ್ಟಿದರು ಕೂಡ ಹೊಲೆ ಎಂಬ ಸೂತಕವಿರುವುದಿಲ್ಲ. ಇಂತೀ ಈ ಉಭಯಗಳೆರಡನ್ನು ತಿಳಿದು ಅರಿತುಕೊಂಡು, ನಡೆದು ನಿಜಾತ್ಮರಾಮ ರಾಮನ ಕೃಪೆ ಪಡೆಯಲು ಭಕ್ತಿ ಮತ್ತು ಒಳ್ಳೆಯ ನಡತೆ ಬೇಕೇ ಹೊರತು, ನಾನು ಈ ಕುಲದವನು ಎಂಬ ಹಠ (ಛಲ) ಅಥವಾ ಅಹಂಕಾರ ಸಲ್ಲದು ಎಂದು ಹೇಳಿದ್ದಾರೆ. ಮನುಷ್ಯ ಹುಟ್ಟಿನಿಂದ ಶ್ರೇಷ್ಠನಾಗುವುದಿಲ್ಲ, ಅವನು ಮಾಡುವ ಕೆಲಸ ಮತ್ತು ಅವನ ನಡತೆಯಿಂದ ಮಾತ್ರ ಶ್ರೇಷ್ಠನಾಗುತ್ತಾನೆ ಎಂದು ಈ ವಚನ ಸಾರುತ್ತದೆ.

ಡಾ. ಸಾರಿಕಾದೇವಿ ಎಲ್.ಕಾಳಗಿ,
ಸಹಾಯಕ ಪ್ರಾಧ್ಯಾಪಕರು,
ಕನ್ನಡ ಅಧ್ಯಯನ ಮತ್ತು ಸಂಶೋಧನ ವಿಭಾಗ,
ಶರಣಬಸವ ವಿಶ್ವವಿದ್ಯಾಲಯ, ಕಲಬುರಗಿ.
ಮೋಬೈಲ್. ಸಂ.83108 53782

  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ:
    • ಮೋಬೈಲ್ ನಂ. 9741 357 132.
    • e-Mail ID: admin@vachanamandara.in | info@vachanamandara.in

Loading

Leave a Reply