![]()
ವಚನ:
ಆವ ಕಾಯಕವಾದಡೂ ಸ್ವಕಾಯಕವ ಮಾಡಿ,
ಗುರು ಲಿಂಗ ಜಂಗಮರ ಮುಂದಿಟ್ಟು,
ಒಕ್ಕುದ ಹಾರೈಸಿ, ಮಿಕ್ಕುದ ಕೈಕೊಂಡು,
ವ್ಯಾಧಿ ಬಂದಡೆ ನೆರಳು, ಬೇನೆ ಬಂದಡೆ ಒರಲು,
ಜೀವ ಹೋದಡೆ ಸಾಯಿ, ಇದಕ್ಕಾ ದೇವರ ಹಂಗೇಕೆ,
ಭಾಪು ಲದ್ದೆಯ ಸೋಮಾ?
(ಸಮಗ್ರ ವಚನ ಸಂಪುಟ-9/2001/ಪುಟ. ಸಂ-8/ವಚನ. ಸಂ. 20)
ಅನುಭವ ಮಂಟಪದ ಅನುಭಾವಿ ಶರಣರು ಲದ್ದೆಯ ಸೋಮಯ್ಯನವರು. ಇವರು ಬೀದರ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಲಾದಾ ಗ್ರಾಮದವರು. ಮಡದಿ ಹೆಸರು ಮಂಗಮ್ಮ. ಹುಲ್ಲು ಮಾರುವ ಕಾಯಕ ಕೈಕೊಳ್ಳುವ ಇವರು ತಮ್ಮ ಗ್ರಾಮದಲ್ಲಿ ಹುಲ್ಲು ಕೊಯಿದು ಹುಲಸೂರಿನಲ್ಲಿ ತಂದು ಮಾರುತ್ತಿದ್ದರು. ಹುಲಸೂರು ಗ್ರಾಮದಲ್ಲಿ ಇವರ ಹೆಸರಿನಲ್ಲಿ ಗುಡಿಯೊಂದು ಇದೆ. ಇವರ ಅಂಕಿತನಾಮ “ಲದ್ದೆಯ ಸೋಮ” ಒಂದು ವಚನ ಮಾತ್ರ ಇಲ್ಲಿಯವರೆಗೆ ಲಭ್ಯವಾಗಿದೆ.
ನಿರ್ವಚನ:
ಸಿಕ್ಕ ಒಂದೇ ವಚನದಿಂದ ವಚನಕಾರರ ವ್ಯಕ್ತಿತ್ವ ಅರ್ಥ ಮಾಡಿಕೊಳ್ಳಬಹುದು. ಅವರು ತಲುಪಿರುವ ಆಧ್ಯಾತ್ಮಿಕ ಮತ್ತು ವೈಚಾರಿಕ ನಿಲುವನ್ನು ನಾವು ತಿಳಿದುಕೊಳ್ಳಬಹುದು. ಶರಣರು ಕಾಯಕ ದಾಸೋಹ ತತ್ವದ ಮುಖಾಂತರ ಆಧ್ಯಾತ್ಮಿಕ ನಿಲುವು ಪಡೆದುಕೊಂಡವರು.
ಇಲ್ಲಿ ಲದ್ದೆಯ ಸೋಮಯ್ಯ ಶರಣರೂ ಸಹ ಕಾಯಕ ಮಾಡುವವರಿಗೆ ಯಾವುದರ ಹಂಗು ಮತ್ತು ಯಾರ ಹಂಗು ಇರುವದಿಲ್ಲ, ಇರಬಾರದು ಎಂಬುದಾಗಿದೆ. ತನಗೆ ಸರಿ ಕಾಣುವ ಯಾವ ಕಾಯಕವಾದರೂ ಸರಿ ಅದು ಸ್ವತಂತ್ರವಾಗಿರಬೇಕೆಂಬುದಾಗಿದೆ. ಸ್ವತಂತ್ರವಾದ ಕಾಯಕದಲ್ಲಿ ಪರಕೀಯ ಭಾವನೆ ಇರುವದಿಲ್ಲ, ಯಾರ ಹಂಗು ಗುಲಾಮಿತನ, ಹೇಳಿದಂತೆ ಕೇಳಬೇಕೆಂಬ ಯಾವ ಬಂಧನಗಳು ಇಲ್ಲಿ ಇರುವದಿಲ್ಲ. ಹಾಗೆಂದ ಮಾತ್ರಕ್ಕೆ ಅದು ಸ್ವೇಚ್ಛಾಚಾರವಲ್ಲ, ನಾನು ಎಂಬ ಅಹಂಕಾರ ಇಲ್ಲಿ ಬರಬಾರದು. ಅದು ದಾಸೋಹಕ್ಕಾಗಿ ಎಂಬ ಅರಿವಿನೊಳಗೆ ನಡೆಯಬೇಕು ಎನ್ನುವರು.
ಗುರು ಲಿಂಗ ಜಂಗಮರಿಗಾಗಿ ಅಂದರೆ ಸಮಾಜಮುಖಿಯಾಗಿ ಅದು ನಡೆಯಬೇಕು. ತಾನು ಬದುಕಬೇಕು ಎಂಬಾಸೆ ಮಾತ್ರವಲ್ಲ, ಇನ್ನೊಬ್ಬರೂ ಬದುಕಬೇಕೆಂಬ ಹಿರಿಯಾಸೆ ಇರಬೇಕು. ಅದಕ್ಕಾಗಿಯೆ “ಒಕ್ಕುದ ಹಾರೈಸಿ ಮಿಕ್ಕುದ ಕೈಕೊಂಡು” ಎನ್ನುತ್ತಾರೆ. ಮೊದಲು ದಾಸೋಹ ಮಾಡಬೇಕು, ಉಳಿದುದನ್ನು ತಾನು ಕೈಕೊಳ್ಳಬೇಕೆಂಬುದು ಲದ್ದೆಯ ಸೋಮಯ್ಯ ಶರಣರ ನಿಲುವಾಗಿದೆ. ಇಂತಹ ಕಾಯಕ ದಾಸೋಹ ಧರ್ಮದಿಂದ ನಡೆಯುತ್ತಿರುವಾಗ ತನುವಿನಾಸೆ ಮಾಡದೆ ನಡೆಯಬೇಕೆಂಬ ಕಟುಸತ್ಯ ತಮ್ಮ ವಚನದ ಕೊನೆಯ ಎರಡು ಸಾಲುಗಳಲ್ಲಿ ಹಿಡಿದಿಟ್ಟಿರುವರು.
ಬೇನೆ, ನೋವು, ಸಾವು ಸಾಮಾನ್ಯ ಮತ್ತು ಸಹಜ ಕ್ರಿಯೆಗಳು. ಹುಟ್ಟಿದ ಜೀವಿಗೆ ಇವು ತಪ್ಪಿದ್ದಲ್ಲ. ಹಾಗೆಂದು ಅದರಲ್ಲಿ ಕುಳಿತು ಬಿಡುವದಲ್ಲ. “ಬಾರದು ಬಪ್ಪದು, ಬಪ್ಪದು ತಪ್ಪದು” ಎಂಬ ಬಸವಣ್ಣನವರ ಮಾತು ಒಪ್ಪಿಕೊಂಡ ಈ ಶರಣರು ಬರುವದು ಬಂದೇ ಬರುವದು, ಇದನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ. ಅಂದಾಗ ಆ ದೇವರ ಹಂಗು ಶರಣರಿಗಿಲ್ಲ ಎನ್ನುತ್ತಾ ಶರಣರ ಧೀರನಿಲುವು ಪರಿಚಯ ಮಾಡಿಕೊಡುವರು. ಈ ಶರಣರು ಅವರ ಆತ್ಮವಿಶ್ವಾಸ ಬದುಕಿನ ಧೈರ್ಯ ಕಾಯಕ ದಾಸೋಹಗಳ ನಿಷ್ಠೆ ಎಂತಹದೆಂಬುವುದನ್ನು ಇದರಿಂದ ತಿಳಿದುಕೊಳ್ಳಬಹುದು.
ಹೀಗೆ ಇಡೀ ವಚನ ಜೀವನದ ಗುರಿ ಸ್ಪಷ್ಟವಾಗಿ ತಿಳಿಸಿಕೊಡುತ್ತದೆ. ಜೀವನಕ್ಕೆ ಧೈರ್ಯ ತುಂಬುವದು. ಜೀವನದ ಅಂತಿಮ ಸತ್ಯ ತಿಳಿಸಿಕೊಡುವ ಈ ವಚನ ಅದರ ದಾರಿಯನ್ನು ಸ್ಪಷ್ಟವಾಗಿ ತೋರಿಸಿಕೊಟ್ಟಿದೆ. ಬರೆದವರು.
ಶ್ರೀಮತಿ.ಲಕ್ಷ್ಮಿ ಪಾಟೀಲ,
ಗೋದುತಾಯಿ ನಗರ,
ಕಲಬುರಗಿ.
ಮೋಬೈಲ್ ನಂ. 82175 98844
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ (ರಿ) ಸಂಚಾಲಕರನ್ನು ಸಂಪರ್ಕಿಸಬೇಕಾದ
- ಮೋಬೈಲ್ ನಂ. 9741 357 132
- e-Mail ID: info@vachanamandara.in.






Total views : 62562