![]()

ವಚನ:
ದಾಕ್ಷಿಣ್ಯದ ಭಕ್ತಿ, ಕಲಿಕೆಯ ವಿರಕ್ತಿ,
ಮಾತಿನ ಮಾಲೆಯ ಬೋಧೆ,
ತೂತ ಜ್ಞಾನಿಗಳ ಸಂಸರ್ಗ.
ಬೀತಕುಂಭದಲ್ಲಿ ಅಮೃತವ ಹೊಯಿದಿರಿಸಲಿಕ್ಕೆ
ಅದು ಎಷ್ಟು ದಿವಸ ಇರಲಾಪುದು
ಇಂತಿವ ಕಳೆದುಳಿದು ನಡೆನುಡಿ ಸಿದ್ಧಾಂತವಾಗಿ ಕೂಡಬೇಕು
ಸದ್ಯೋಜಾತಲಿಂಗವ.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂ.248/ವಚನ ಸಂಖ್ಯೆ-699)
At the outset, ಈ ವಚನದ ಸಾರ ಒಂದೇ ಸಾಲಿನಲ್ಲಿ ಹೇಳುವುದಾದರೆ “ಮಾತಿಗಿಂತ ಬದುಕು ದೊಡ್ಡದು”
ಶರಣ ಸಾಹಿತ್ಯ ಪರಂಪರೆಯ ಗಂಭೀರ ತಾತ್ವಿಕ ಧಾರೆಯನ್ನು ನೆನಪಿಸುವ ಈ ವಚನ “ಸದ್ಯೋಜಾತಲಿಂಗ” ಎಂಬ ಉಲ್ಲೇಖದಿಂದ ಶರಣ ಪಥದ ದರ್ಶನದ ಆಂತರಿಕ ಆತ್ಮಸಾಧನೆಯ ಭಾವನೆ ಸ್ಪಷ್ಟಪಡಿಸುತ್ತಿದೆ. ಅಂದರೆ ಮೇಲ್ಮೈಯ ಭಕ್ತಿಯದು ಕೇವಲ ಕಲಿತ ಜ್ಞಾನದಿಂದ ಬಂದ ವಿರಕ್ತಿ, ನಕಲಿ ಉಪದೇಶ, ನಕಲಿ ಜ್ಞಾನಿಗಳ ಸಂಗ, ಇವೆಲ್ಲವೂ ಒಡೆದ ಕುಂಭದಲ್ಲಿ ಅಮೃತವನ್ನು ಇಟ್ಟಂತೆ. ಅದು ಶಾಶ್ವತವಾಗುವುದಿಲ್ಲ. ಆದ್ದರಿಂದ ಈ ಬಾಹ್ಯ ಆಚರಣೆಗಳನ್ನು ಬಿಟ್ಟು, ನಡೆ, ನುಡಿ ಒಂದಾಗಬೇಕು. ಆಚಾರ ಮತ್ತು ವಿಚಾರ ಏಕವಾಗಬೇಕು. ಅದರಲ್ಲೇ ಸತ್ಯದ ಲಿಂಗಾನುಭವಿದೆ ಎಂಬ ತಾತ್ವಿಕತೆಯೆ ಈ ವಚನ.
“ದಾಕ್ಷಿಣ್ಯದ ಭಕ್ತಿ” ಅಂದರೆ ಸ್ವಾರ್ಥದ ಅಥವಾ ಪ್ರದರ್ಶನದ ಭಕ್ತಿ, ತೋರಿಕೆಯ ಪೂಜೆ, ಲಾಭಕ್ಕಾಗಿ ಮಾಡುವ ಧರ್ಮ, ಹೆಸರಿಗಾಗಿ ಮಾಡುವ ದಾನ, ಇವೆಲ್ಲವೂ ನಿಜಭಕ್ತಿಯಲ್ಲ. ಭಕ್ತಿ ಎಂದರೆ ಆತ್ಮಸಮರ್ಪಣೆ, ಶರಣಾಗತಿ. ಆದರೆ ಇಲ್ಲಿ ಅದು ಸಾಮಾಜಿಕ ಮುಖವಾಡವಾಗಿದೆ.
“ಕಲಿಕೆಯ ವಿರಕ್ತಿ” ಎನ್ನುವ ಸಾಲಿನಲ್ಲಿ ಪುಸ್ತಕಗಳಿಂದ ಕಲಿತ ವೈರಾಗ್ಯ, ಅನುಭವವಿಲ್ಲದೆ ಜಗತ್ತೆ ಸುಳ್ಳು, ಎಲ್ಲವೂ ಮಾಯೆ, ಎಂದು ಹೇಳುತ್ತಾ ತಿರುಗುವ ಎಡಬಿಡಂಗಿಗಳ ವೇದಾಂತ ಎನ್ನುವ ಅರ್ಥವಿದೆ. ಬರಿ ಬೌದ್ಧಿಕ ಪ್ರದರ್ಶನ, ಕೋಪ, ಅಹಂಕಾರ, ಆಸೆ ಎಲ್ಲವೂ ಮೈಗೂಡಿಸಿಕೊಂಡು, ಮಾತಿನಲ್ಲಿ ಮಾತ್ರ ವೈರಾಗ್ಯ ಹೇಳುವದನ್ನೆ ಕಲಿಕೆ ವಿರಕ್ತಿ ಎಂಬುವುದು. ಪುಸ್ತಕ ಓದಿ ಜ್ಞಾನಿಯಂತೆ ಮಾತನಾಡುವುದು.
“ಮಾತಿನ ಮಾಲೆಯ ಬೋಧೆ” ಇದು ಒಂದು ಅಲಂಕೃತ ಉಪನ್ಯಾಸ, ಸೊಗಸಾದ ಮಾತು, ಶಬ್ದ ವೈಭವ, ಕಾವ್ಯಮಯ ಪ್ರವಚನ ಮಾತ್ರ. ಆದರೆ ಜೀವನದಲ್ಲಿ ಅನುಷ್ಠಾನವಿಲ್ಲದಿರುವುದು. ಯಾವುದನ್ನು ಅಳವಡಿಸಿಕೊಳ್ಳದೆ ಮಾತಿನಲ್ಲೇ ಮನೆ ಕಟ್ಟುವವರು. “ಮಾತಿನ ಮಾಲೆ” ಏನ್ನುವ ಶಬ್ದ ಪ್ರಯೋಗವನ್ನು ಸುಂದರ ರೂಪಕವಾಗಿ ಚಿತ್ರಿಸಲಾಗಿದೆ. ಮಾಲೆ ಹೂಗಳಿಂದ ಸುಂದರವಾಗಿರಬಹುದು, ಆದರೆ ಸುಗಂಧವಿಲ್ಲದಿದ್ದರೆ ಅದರ ಬೆಲೆಯು ಕಡಿಮೆ. ಅನುಭವವಿಲ್ಲದ ಬೋಧನೆ. ಸಿಹಿ ಮಾತುಗಳಲ್ಲಿ ಉಪದೇಶ ಕೊಡುವುದು ನಿರರ್ಥಕ ಎಂಬುವ ತಾತ್ಪರ್ಯ ಈ ಸಾಲಿನಲ್ಲಿದೆ.
“ತೂತ ಜ್ಞಾನಿಗಳ ಸಂಸರ್ಗ” ಈ ವಚನದಲ್ಲಿ ಬರುವ “ತೂತ” ಪದಕ್ಕೆ ಎಂದರೆ ಸೊನ್ನೆ, ಶೂನ್ಯ ಎನ್ನುವ ಪಾರಿಭಾಷಿಕ ಅರ್ಥವಿದೆ. ನಕಲಿ ಗುರುಗಳು, ಅನುಭವವಿಲ್ಲದ ಜ್ಞಾನಿಗಳು,
ಬಾಹ್ಯ ವೇಷಧಾರಿಗಳು. ನಕಲಿ ಜ್ಞಾನಿಗಳ ಜೊತೆ ಇರುವುದರಿಂದ ನಿಜವಾದ ಆತ್ಮಜ್ಞಾನ ಆತ್ಮೋನ್ನತಿ ಆಗುವುದಿಲ್ಲ ಎಂಬ ಚಿತ್ರಣವಿದೆ ಈ ವಚನದ ಮೂರನೇ ಸಾಲಿನಲ್ಲಿ.
“ಬೀತಕುಂಭದಲ್ಲಿ ಅಮೃತ” ಬೀತಕುಂಭ ಎಂದರೆ ಒಡೆದ ಮಡಕೆ. ಇದನ್ನು ವಚನದಲ್ಲಿ ಒಂದು ಸುಂದರ ರೂಪಕವಾಗಿ ಬಳಸಲಾಗಿದೆ. ಒಡೆದ ಮಡಕೆಗೆ ಅಮೃತ ಹಾಕಿದರೆ ಅದು ವ್ಯರ್ಥವಾಗಿ ಸೋರಿ ಹೋಗುತ್ತದೆ. ಹಾಗೆಯೇ ಸುಳ್ಳಿನ ಜೀವನದಲ್ಲಿ ಧರ್ಮ, ಅಹಂಕಾರದಲ್ಲಿ ಜ್ಞಾನ, ಪ್ರದರ್ಶನದಲ್ಲಿ ಭಕ್ತಿ ಇವು ಯಾವುವು ಉಳಿಯುವುದಿಲ್ಲ.
“ನಡೆನುಡಿ ಸಿದ್ಧಾಂತವಾಗಿ ಕೂಡಬೇಕು” ಇದು ವಚನದ ಹೃದಯದ ಸಾಲು. ನಡೆ, ನುಡಿ, ಸಿದ್ಧಾಂತದಲ್ಲಿ ನುಡಿಯುವುದು ಒಂದು, ನಡೆಯುವುದು ಮತ್ತೊಂದು ಆಗಬಾರದು. ಜೀವನವೇ ತತ್ವವಾಗಬೇಕು. ಆದ್ದರಿಂದ ಏನು ಮಾತಾಡುತ್ತೇವೆಯೋ ಅದನ್ನೇ ಬದುಕಬೇಕು. ಒಳ್ಳೆಯತನ ಜೀವನದಲ್ಲಿ ಕಾಣಬೇಕು. ಅಂತರಂಗ ಮತ್ತು ಬಹಿರಂಗ ಎರಡೂ ಒಂದೇ ಆಗಿರಬೇಕು. ಅದೇ ನಿಜವಾದ ಧರ್ಮ ಅಂತ ವಚನ ಹೇಳುತ್ತದೆ.
ವಿಶ್ವಗುರು ಬಸವಣ್ಣನವರು ಹೇಳುವಂತೆ:
ಭಕ್ತಿ ಸುಭಾಷೆಯ ನುಡಿಯ ನುಡಿವೆ,
ನುಡಿದಂತೆ ನಡೆವೆ,
ನಡೆಯೊಳಗೆ ನುಡಿಯ ಪೂರೈಸುವೆ,
ಮೇಲೆ ತೂಗುವ ತ್ರಾಸು ಕಟ್ಟಳೆ ನಿಮ್ಮ ಕೈಯಲ್ಲಿ.
ಒಂದು ಜವೆ ಕೊರತೆಯಾದಡೆ
ಎನ್ನನದ್ದಿ ನೀನೆದ್ದು ಹೋಗು, ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-115/ವಚನ ಸಂಖ್ಯೆ-441)
ಈ ವಚನ ನಡೆ-ನುಡಿ ಸಿದ್ಧಾಂತದ ಒಳನೈತಿಕತೆಯನ್ನು ಒತ್ತಿ ಹೇಳುತ್ತದೆ.
ಶರಣ ಅವಸರದ ರೇಕಣ್ಣನವರ ಪ್ರಸ್ತುತ ವಚನ ಕಪಟ ಭಕ್ತಿ ವಿರೋಧಿ, ಅನುಭವಾಧಾರಿತ ಆತ್ಮಧರ್ಮದ ತತ್ವಸಿದ್ಧಾಂತಗಳನ್ನು ನಿರೂಪಣೆ ಮಾಡುತ್ತದೆ. ಶರಣತತ್ವದಲ್ಲಿ ಲಿಂಗ ಹೊರಗಿನ ವಸ್ತುವಲ್ಲ, ಒಳಗಿನ ಅಥವಾ ಅಂತರಂಗದ ಚೈತನ್ಯ. ಅದನ್ನು ಅರಿಯಲು ಶುದ್ಧ ಬದುಕು, ಸತ್ಯಶುದ್ಧ ನಡೆ, ಅನುಭವಜ್ಞಾನ ಅಗತ್ಯ. ಕಪಟ ಧರ್ಮದ ಮೇಲೆ ತೀಕ್ಷ್ಣ ವ್ಯಂಗ್ಯವನ್ನು ಸರಳ ಪದಗಳಲ್ಲಿ ಅತ್ಯಂತ ಸುಂದರವಾಗಿ ಶರಣ ಅವಸರದ ರೇಕಣ್ಣನವರು ಕಟ್ಟಿಕೊಟ್ಟಿದ್ಧಾರೆ. ಸಮಾಜದ ಕ್ರೌರ್ಯ, ಮಾನವೀಯತೆಯ ಕೊರತೆ, ಆಧ್ಯಾತ್ಮಿಕ ವ್ಯಾಪಾರ ಮಾಡುವ ನಕಲಿ ನಕಲಿ ಗುರುಗಳು, ವ್ಯಾಪಾರೀಕರಣಗೊಂಡ ಧರ್ಮ ಈ ಎಲ್ಲವನ್ನು ವಚನದ ಮೂಲಕ ಅವಸರದ ರೇಕಣ್ಣನವರೂ ಸೇರಿದಂತೆ ಅನೇಕ ಶರಣರು ಶತಮಾನಗಳ ಹಿಂದೆಯೇ ಪ್ರಶ್ನಿಸಿದಾರೆ.
ಶರಣರು ಸರಳ ಜೀವನ, ಪ್ರಾಮಾಣಿಕತೆ, ಕರುಣೆ, ಮೌನಸೇವೆ, ಬದುಕೇ ಭಕ್ತಿ ಎನುವಂತಿರಬೇಕು ಎಂದು ತಿಳಿಸುತ್ತಾ ಬದುಕುವುದನ್ನು ತೋರಿಸಿಕೊಟ್ಟಿದ್ದಾರೆ. ಒಟ್ಟಿನಲ್ಲಿ
ಆಧ್ಯಾತ್ಮವು ಮಾತಲ್ಲ, ಅದು ಜೀವನವಾಗಬೇಕು. ಸತ್ಯ ಭಕ್ತಿ ಎಂದರೆ ಅಂತರಂಗ ಶುದ್ಧಿ, ನಡೆ-ನುಡಿ ಏಕತೆ, ಅನುಭವದ ಜ್ಞಾನ. ಆಗ “ಸದ್ಯೋಜಾತಲಿಂಗ” ಅಂದರೆ ತಕ್ಷಣದ ದೈವಾನುಭವ ಸಾಧ್ಯವಾಗುತ್ತದೆ. ಇದೇ ಈ ವಚನದ ಬೆಳಕು.
ಶ್ರೀಮತಿ. ಶಾಲಿನಿ ರುದ್ರಮುನಿ,
# 20, ರಾಜೀವನಗರ, ಎರಡನೇ ಹಂತ, ಎರಡನೇ ತಿರುವು,
ಪೋಲಿಸ್ ವಸತಿಗೃಹ ರಸ್ತೆ,
ವಿದ್ಯಾನಗರ,
ಹುಬ್ಬಳ್ಳಿ – 580031
ಮೊಬೈಲ್ ಸಂಖ್ಯೆ – 78921 69644
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ:
- ಮೋಬೈಲ್ ನಂ. 9741 357 132
- e-Mail ID: info@vachanamandara.in / admin@vachanamandara.in






Total views : 65581