![]()

ಹಂಜರ ಬಲ್ಲಿತ್ತೆಂದು ಅಂಜದೆ ಓದುವ ಗಿಳಿಯೆ,
ಎಂದೆಂದೂ ಅಳಿಯೆನೆಂದು
ಗುಡಿಗಟ್ಟಿದೆಯಲ್ಲಾ, ನಿನ್ನ ಮನದಲ್ಲಿ.
ಮಾಯಾಮಂಜರ ಕೊಲುವಡೆ ನಿನ್ನ ಹಂಜರ ಕಾವುದೆ
ಕೂಡಲಸಂಗಮದೇವನಲ್ಲದೆ?
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-46/ವಚನ ಸಂಖ್ಯೆ-163)
ವಚನ ಚಳುವಳಿಯ ತಾತ್ವಿಕ ಚೌಕಟ್ಟುಗಳು ರೂಪಕ ಮತ್ತು ಪ್ರತಿಮೆಗಳ ಮೇರು ಸಾದೃಶ್ಯವನ್ನು ಬಿಂಬಿಸುತ್ತವೆ. ಗಿಳಿ ಎಂಬ ತಾತ್ವಿಕ ಪರಿಕಲ್ಪನೆ ಜೀವಾತ್ಮದ ಶಕ್ತಿಯಾಗಿ ಜ್ಞಾನಾನುಸಂಧಾನ ಬಯಸುತ್ತದೆ. ಬಸವಣ್ಣನು ಪ್ರಭುವಿನಂತೆ ಬೆರಗನ್ನು ಮುಂದೆ ಮಾಡುವುದಿಲ್ಲ. ಭಕ್ತನಾಗಿಯೇ ಬೆರಗನ್ನು ಅವಲೋಕಿಸುತ್ತಾನೆ. ಮಾಯೆಗೆ ವಶವಾದ ಅಜ್ಞಾನಕ್ಕೆ ಎಚ್ಚರಿಕೆಯನ್ನು ಕೊಡುತ್ತಾ ಅಪ್ಪಿಕೊಳ್ಳುತ್ತಾ “ಹಂಜರ ಬಲ್ಲಿತ್ತೆಂದು ಅಂಜದೆ” ಎಂದು ಅರಿವು ಮತ್ತು ಮಾಯೆಯ ಮಧ್ಯದಲ್ಲಿ ಜೀವಾತ್ಮವೆಂಬ ಗಿಳಿಯು ವಾಸವಾಗಿದೆ. ಈ ದೇಹವು ನಿಸರ್ಗದ ಸಂವೇದನೆಗಳನ್ನು ಅಂತರ್ಗತವಾಗಿ ಸಿಕೊಂಡಿದೆ. ಗಿಳಿ ಎಂದು ಹೆಸರಿಸಿದಾಗ ಜ್ಞಾನದ ಪ್ರಜ್ಞೆಯು ಈ ದೇಹದಲ್ಲಿ ಪ್ರವೇಶಿಸಿ ಗಿಳಿಯ ಸ್ವಭಾವವನ್ನು ಪ್ರತಿಕ್ರಿಯಿಸುತ್ತದೆ. ಅಜ್ಞಾನವೆಂಬ ಮಾಯೆಯು ಮನಸ್ಸಿನ ಒಡೆತನವನ್ನು ಅಪೇಕ್ಷಿಸುತ್ತದೆ.
“ಗುಡಿಗಟ್ಟಿದೆಯಲ್ಲಾ” ಇಂದ್ರಿಯ ಸಂವೇದನೆಗಳಿಗೆ ವಶವಾದ ಮನಸ್ಸಿಗೆ ಆತ್ಮ ಬೋಧೆಯನ್ನು ಬಸವಣ್ಣನವರು ನೀಡುತ್ತಾನೆ. ಗಿಳಿ ಗುಡಿ ಮಾಯಾ ಪಂಜರಗಳು ಭ್ರಮಾತ್ಮಕ ಸಂಕೇತಗಳಾಗಿವೆ. ಲೋಕ ಚಾಪಲ್ಯವನ್ನು ತಿರಸ್ಕರಿಸಿ ದೇಹ ಚಾಪಲ್ಯವನ್ನು ನಿರಾಕರಿಸಬೇಕು. ಹಂಜರದಿಂದ ಆವೃತವಾದ ಅರಿವು ಗಿಳಿಯಾಗುತ್ತದೆ. ಗಿಳಿ ಮಾನಸಿಕ ವಿವರಗಳೊಂದಿಗೆ ಪ್ರವೇಶ ಪಡೆಯುತ್ತದೆ. ವಿಕೇಂದ್ರೀಯ ಮನಸ್ಥಿತಿಯಲ್ಲಿ ಅದು ಸ್ಥಾನ ಪಡೆಯುತ್ತದೆ. ಆಧ್ಯಾತ್ಮಿಕ ಪ್ರವಾಹದಲ್ಲಿ ಧುಮ್ಮಿಕ್ಕುವ ಮಾಯೆಯನ್ನು ಕೊಂದಾಗ ಮಾತ್ರ ಕೂಡಲಸಂಗಮನಾಥನನ್ನು ಕಾಣಲು ಸಾದ್ಯವಾಗುವುದು. ಓದುವ ಗಿಳಿಯಾಗಲು ಸಾಮರಸ್ಯದ ಆಶಯದ ತತ್ವ ಅದಾಗುತ್ತದೆ.
ಬಸವಣ್ಣನವರ ಈ ಸಾಂಕೇತಿಕ ಭಾಷೆಯ ಒಳನೋಟಗಳು ಪಕ್ಷಿ ಭಾಷೆಯ ಅನುಸಂಧಾನದೊಂದಿಗೆ “ಗಿಳಿಯು ಪಂಜರದೊಳಿಲ್ಲ” ಮಾತಿನ ತರ್ಕಕ್ಕೂ ಪ್ರವೇಶ ಪಡೆಯಲು ಸಾಧ್ಯವಾಗುತ್ತದೆ.
ಡಾ. ಸರ್ವಮಂಗಳ ಸಕ್ರಿ.
ಅಧ್ಯಕ್ಷರು. ಜಾಗತಿಕ ಲಿಂಗಾಯತ ಮಹಾ ಸಭಾ
ಮಹಿಳಾ ಘಟಕ-ರಾಯಚೂರು ಜಿಲ್ಲೆ
ರಾಯಚೂರು.
ಮೋಬೈಲ್ ಸಂ. 94499 46839.
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ:
- ಮೋಬೈಲ್ ನಂ. 97413 57132
- e-Mail ID: info@vachanamandara.in and admin@vachanamandara.in





Total views : 67055