![]()
ಸೂತಕ ಎಂದರೆ ಹಿಂದೂ ಸಂಪ್ರದಾಯದಲ್ಲಿ ಜನನ ಮತ್ತು ಮರಣ ಸಂಭವಿಸಿದ ನಂತರ ಕುಟುಂಬದವರಿಗೆ ಒಂದು ನಿರ್ದಿಷ್ಠ ಅವಧಿಯವರೆಗೆ ಆಚರಿಸುವ ಶೌಚ (ಅಶೌಚ) ಸ್ಥಿತಿ ಎಂದು ಹೇಳಲಾಗುತ್ತದೆ. ಕೆಲವು ಧಾರ್ಮಿಕ ಆಚರಣೆಗಳು, ದೇವಾಲಯ ಪ್ರವೇಶ, ಪೂಜೆ ಇತ್ಯಾದಿಗಳನ್ನು ಸಂಪ್ರದಾಯದ ಪ್ರಕಾರ ತಾತ್ಕಾಲಿಕವಾಗಿ ನಿರ್ಬಂಧಿಸಲಾಗುತ್ತದೆ. ಆದರೆ ಬಸವಾದಿ ಶರಣರು ಜನನ ಮತ್ತು ಮರಣಗಳು ಪ್ರಕೃತಿಯ ಸಹಜ ಪ್ರಕ್ರಿಯೆಗಳು. ಆದ್ದರಿಂದ ಜಾತಿ, ಸೂತಕ, ಅಶೌಚ ಇಂತಹ ಬಾಹ್ಯ ಆಚರಣೆಗಳ ಬದಲು ಶುದ್ಧ ಕಾಯಕ, ದಾಸೋಹ ಮತ್ತು ಇಷ್ಟಲಿಂಗದ ಆರಾಧನೆಗೆ ಹೆಚ್ಚು ಮಹತ್ವ ನೀಡೀದ್ದರು. ಸಮಾಜದ ಹಿತಕ್ಕೆ ವಿರುದ್ಧವಾದ, ಮಾನವೀಯ ಮೌಲ್ಯಗಳನ್ನು ಕಲೂಷಿತಗೊಳಿಸುವ ಆಚರಣೆಗಳು ಮತ್ತು ಅನಿಷ್ಟ ಪದ್ಧತಿಗಳನ್ನು ಸಾಮಾನ್ಯವಾಗಿ “ಸಾಮಾಜಿಕ ಸೂತಕಗಳು” ಎಂದು ಹೇಳಲಾಗುತ್ತದೆ. ಸಮಾಜದ ನಿಜವಾದ ಅಶೌಚವು ದೇಹಕ್ಕೆ ಸಂಬಂಧಿಸಿದ್ದಲ್ಲ. ಅಹಂಕಾರ, ಜಾತಿಭೇದ, ಲೋಭ, ಸುಳ್ಳು, ಅನ್ಯಾಯ ಮತ್ತು ಶೋಷಣೆಗಳೇ ಸಮಾಜವನ್ನು ಮಲೀನಗೊಳಿಸುವ “ನೈಜ ಸೂತಕಗಳು”. ಅದಕ್ಕೆ ಶೂನ್ಯ ಪೀಠಾದೀಶ ಅಲ್ಲಮ ಪ್ರಭುಗಳ ವಚನವೊಂದು ಹೀಗಿದೆ;
ಆವ ಜಾತಿಯಾದಡೂ ಆಗಲಿ,
ಪುರಾತನ ಚಾರಿತ್ರದಲ್ಲಿ ನಡೆದು,
ಗುರುಲಿಂಗಜಂಗಮಕ್ಕೆ, ಅರ್ಥಪ್ರಾಣಾಭಿಮಾನಮಂ ಕೊಟ್ಟು,
ಅಹಂಕಾರವಳಿದಿಹಂತಹ ಮಹಾತ್ಮರ
ಬಾಯ ತಂಬುಲವ ಮೆಲುವೆ,
ಬೀಳುಡಿಗೆಯ ಹೊದಿವೆ.
ಅವರ ಪಾದರಕ್ಷೆಗಳೆರಡನೂ,
ಮಂಡೆಯ ಮೇಲೆ ಹೊತ್ತುಕೊಂಡು ಬದುಕುವೆನಯ್ಯಾ.
ಆ ಗಣಂಗಳ ದಾಸನ ದಾಸ ನಾನು,
ಜನ್ಮ ಜನ್ಮದಲ್ಲಿ ಆಗುವೆ ಕಾಣಾ ಗುಹೇಶ್ವರಾ.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-338/ವಚನ ಸಂಖ್ಯೆ-917)
ಯಾವ ಜಾತಿಯವನಾದರೂ ಪರವಾಗಿಲ್ಲ. ಶರಣ ಧರ್ಮ ಮಾರ್ಗದಲ್ಲಿ ನಡೆಯುತ್ತಾ, ಗುರು, ಲಿಂಗ ಮತ್ತು ಜಂಗಮರಿಗೆ ತನ್ನ ಧನ, ಪ್ರಾಣ ಮತ್ತು ಪ್ರೀತಿಯನ್ನು ಸಮರ್ಪಿಸಿ, ಅಹಂಕಾರವನ್ನು ಸಂಪೂರ್ಣವಾಗಿ ತ್ಯಜಿಸಿರುವ ಮಹಾತ್ಮರು ಸೇವಿಸಿದ ತಾಂಬೂಲದ ಉಳಿಕೆಯನ್ನು ಸಹ ಪ್ರಸಾದವೆಂದು ಸ್ವೀಕರಿಸುವೆನು. ಅವರು ಬಳಸಿದ ಹಳೆಯ ಬಟ್ಟೆಯನ್ನೂ ಧರಿಸುವೆನು. ಅವರ ಪಾದರಕ್ಷೆಗಳನ್ನೂ ತಲೆಯ ಮೇಲೆ ಹೊತ್ತು ಗೌರವದಿಂದ ಬದುಕುವೆನು. ಅಂತಹ ಶಿವಗಣಗಳ ದಾಸರಿಗೂ ನಾನು ದಾಸನಾಗಿರಲು ಬಯಸುತ್ತೇನೆ. ಜನ್ಮ ಜನ್ಮಾಂತರದಲ್ಲಿಯೂ ಇದೇ ಭಾಗ್ಯ ದೊರೆಯಲಿ ಎಂದು ಗುಹೇಶ್ವರನಲ್ಲಿ ಪ್ರಾರ್ಥಿಸುತ್ತೇನೆ ಎನ್ನುತ್ತಾರೆ.
ಅಂಗದೊಳಗಿಪ್ಪುದು ಲಿಂಗವಲ್ಲ,
ಅಂಗದ ಹೊರಗಿಪ್ಪುದು ಲಿಂಗವಲ್ಲ.
ಎಲ್ಲ ಅಂಗಂಗಳನೊಳಕೊಂಡಿಪ್ಪ ಲಿಂಗ,
ಹೋಗುತ್ತ ಬರುತ್ತ ಇಪ್ಪುದಲ್ಲ!
ಚಲನೆಯಿಲ್ಲದ ಅಚಲವಪ್ಪ ಲಿಂಗಕ್ಕೆ,
ಹೋಯಿತ್ತು ಎಂಬ ಸಂದೇಹವಿಲ್ಲವೆಂದನಂಬಿಗರ ಚೌಡಯ್ಯ.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-8/ವಚನ ಸಂಖ್ಯೆ-13)
ಲಿಂಗವು ಕೇವಲ ಶರೀರದ ಒಳಗಿರುವ ಯಾವುದೋ ವಸ್ತುವಲ್ಲ. ಅದು ಕೇವಲ ದೇಹದ ಹೊರಗೆ ಧರಿಸಿರುವ ಒಂದು ಚಿಹ್ನೆಯೂ ಅಲ್ಲ. ನೈಜ ಲಿಂಗವು ದೇಹದ ಪ್ರತಿಯೊಂದು ಅಂಗದಲ್ಲಿಯೂ, ಜೀವದ ಪ್ರತಿಯೊಂದು ಅಂಶದಲ್ಲಿಯೂ ವ್ಯಾಪಿಸಿರುವ ಪರಶಿವನ ತತ್ತ್ವವಾಗಿದೆ. ಆ ಲಿಂಗವು ಬರುವುದೂ ಇಲ್ಲ, ಹೋಗುವುದೂ ಇಲ್ಲ. ಅದು ಕಾಲ, ಸ್ಥಳಗಳಿಗೆ ಸೀಮಿತವಾಗಿರುವುದಿಲ್ಲ. ಹೀಗಾಗಿ ಲಿಂಗವು ಅಚಲ, ನಿತ್ಯ ಮತ್ತು ಸರ್ವವ್ಯಾಪಿ. ಆದ್ದರಿಂದ ಅದು ಕಳೆದುಹೋಯಿತು, ಬಿಟ್ಟುಹೋಯಿತು ಅಥವಾ ದೂರವಾಯಿತು ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅದಕ್ಕೆಂದು ಲಿಂಗವು ಕೇವಲ ಧರಿಸುವ ವಸ್ತುವಾಗಿರದೆ, ಅದು ಪರಶಿವನ ಚೈತನ್ಯ ಸ್ವರೂಪವಾಗಿರುತ್ತದೆ. ದೇವರು ದೇಹದ ಒಳಗೆ ಮತ್ತು ಹೊರಗೆ ಎಂಬ ದ್ವೈತ ಭಾವನೆಯನ್ನು ಮೀರಿ, ಸರ್ವವ್ಯಾಪಿಯಾಗಿದ್ದಾನೆ. ಪರಶಿವನು ನಿತ್ಯ, ಅಚಲ ಮತ್ತು ಅವಿನಾಶಿ. ಲಿಂಗದ ನಿಜವಾದ ಅನುಭವವು ಅಂತರAಗದಲ್ಲಿ ಉಂಟಾಗಬೇಕು ಎಂಬುದು ಈ ವಚನದ ತಾತ್ಪರ್ಯವಾಗಿದೆ.
ಕಲ್ಲದೇವರ ಪೂಜೆಯ ಮಾಡಿ, ಕಲಿಯುಗ[ದಿ]
ಕತ್ತೆಗಳಾಗಿ ಹುಟ್ಟಿದರು.
ಮಣ್ಣದೇವರ ಪೂಜಿಸಿ ಮಾನಹೀನರಾದರು.
ಮರವು ದೇವರೆಂದು ಪೂಜಿಸಿ ಮಣ್ಣ ಕೂಡಿದರು.
[ಇಂತಪ್ಪ] ದೇವರ ಪೂಜಿಸಿ ಸ್ವರ್ಗಕ್ಕೇರದೆ ಹೋದರು!
ಜಗದ್ಭರಿತವಾದ ಪರಶಿವನೊಳಗೆ ಕಿಂಕರನಾದ
ಶಿವಭಕ್ತನೆ ಶ್ರೇಷ್ಠನೆಂದಾತ ನಮ್ಮ ಅಂಬಿಗರ ಚೌಡಯ್ಯ.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-40/ವಚನ ಸಂಖ್ಯೆ-98)
ಕೇವಲ ಕಲ್ಲಿನ ಮೂರ್ತಿಯನ್ನೇ ದೇವರೆಂದು ಭಾವಿಸಿ, ಅದರ ತತ್ತ್ವವನ್ನು ಅರಿಯದೆ ಪೂಜಿಸಿದರೆ ಆಧ್ಯಾತ್ಮಿಕ ಪ್ರಗತಿ ಅಸಾಧ್ಯ. ಮಣ್ಣಿನಿಂದ ನಿರ್ಮಿಸಿದ ಮೂರ್ತಿಯನ್ನೇ ಸತ್ಯವೆಂದು ತಿಳಿದು ಆರಾಧಿಸಿದರೆ ನಿಜವಾಗಿಯೂ ಆಧ್ಯಾತ್ಮಿಕ ಗೌರವ ಕಳೆದು ಹೋಗುತ್ತದೆ. ಕಟ್ಟಿಗೆಯಿಂದ ತಯ್ಯಾರಿಸಿದ ಮೂರ್ತಿಯನ್ನೇ ದೇವರೆಂದು ನಂಬಿದರೆ, ದೇಹವು ಮಣ್ಣಾಗುವಂತೆ ಅವರ ಆಧ್ಯಾತ್ಮಿಕ ಬದುಕೂ ವ್ಯರ್ಥವಾಗುತ್ತದೆ. ಅಂತಹ ಬಾಹ್ಯ ಆರಾಧನೆಗಳಿಂದ ಸ್ವರ್ಗ ಅಥವಾ ಮೋಕ್ಷ ದೊರೆಯುವುದಿಲ್ಲ. ಜಗದಗಲ ವ್ಯಾಪಿಸಿರುವ ಪರಶಿವನನ್ನು ಅಂತರಂಗದಲ್ಲಿ ಅನುಭವಿಸಿ, ಶಿವನ ಸೇವಕನಾಗಿ ಬದುಕುವ ಶಿವಭಕ್ತನೇ ಶ್ರೇಷ್ಠರು. ಅದಕ್ಕೆಂದು ಜಡವಸ್ತುವನ್ನು ದೇವರೆಂದು ಪೂಜಿಸುವುದಕ್ಕಿಂತ ಅದರ ಹಿಂದಿರುವ ಪರತತ್ತ್ವವನ್ನು ಅರಿಯುವುದು ಮುಖ್ಯ. ಕಲ್ಲು, ಮಣ್ಣುಗಳ ಮತ್ತು ಕಟ್ಟಿಗೆಯ ಮೂರ್ತಿಗಳನ್ನು ಪೂಜೆಸುವುದರಿಂದ ಮೋಕ್ಷ ಲಭಿಸುವುದಿಲ್ಲ. ದೇವರು ಎಲ್ಲೆಡೆ ವ್ಯಾಪಿಸಿರುವ ಚೈತನ್ಯದ ಸ್ವರೂಪ. ದೇವರ ಅನುಭವ ಅಂತರಂಗದಲ್ಲಿ ಆಗಬೇಕು. ಅದುವೇ ನಿಜವಾದ ಶಿವಭಕ್ತಿ ಹಾಗೂ ಆಧ್ಯಾತ್ಮಿಕ ಶ್ರೇಷ್ಠತೆಯ ಮಾರ್ಗವೆಂದು ಅಂಬಿಗರ ಚೌಡಯ್ಯನವರ ಈ ವಚನದ ಆಶಯ.
ಮಾಯೆಯ ಬಸುರಲ್ಲಿ ಬಂದಾತ ಮಹೇಶ,
ದೇವಕಿಯ ಬಸುರಲ್ಲಿ ಬಂದಾತ ವಿಷ್ಣು,
ಹೂವಿನ ಬಸುರಲ್ಲಿ ಬಂದಾತ ಬ್ರಹ್ಮ,
ಮರುತದೇವಿಯ ಬಸುರಲ್ಲಿ ಬಂದಾತ [ಅರುಹ].
ಇವರು ದೇವರೆಂದು ನಂಬಿ ಪೂಜಿಸಿದಡೆ ಭವ ಅಳಿಯದು,
ಮುಕ್ತಿಯಾಗದೆಂದಾತನಂಬಿಗರ ಚೌಡಯ್ಯ.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-87/ವಚನ ಸಂಖ್ಯೆ-230)
ಮಹೇಶನು ಮಾಯೆಯ ಗರ್ಭದಿಂದ ಹುಟ್ಟಿದನೆಂದು ಹೇಳುತ್ತಾರೆ. ವಿಷ್ಣು ಶ್ರೀಕೃಷ್ಣನಾಗಿ ದೇವಕಿಯ ಗರ್ಭದಲ್ಲಿ ಜನಿಸಿದನು ಎಂದು ಪುರಾಣಗಳು ಸಾರುತ್ತವೆ. ಬ್ರಹ್ಮನು ಕಮಲದಿಂದ ಉದ್ಭವಿಸಿದನೆಂದು ತಿಳಿಯಲಾಗಿದೆ. ಮರುತದೇವಿಯ ಬಸುರಲ್ಲಿ ಬಂದಾತ ಅರುಹ. ಇನ್ನಿತರ ದೇವತೆಗಳ ಜನ್ಮದ ಬಗ್ಗೆಯೂ ಅನೇಕ ಪುರಾಣ ಕಥೆಗಳು ಇವೆ. ಇವರು ದೇವರೆಂದು ನಂಬಿ ಪೂಜಿಸಿದಡೆ ಭವ ಅಳಿಯದು, ಮುಕ್ತಿಯಾಗದು. ಈ ಅವತಾರ ಕಥೆಗಳನ್ನು ಮಾತ್ರ ನಂಬಿ, ಅವುಗಳ ಬಾಹ್ಯ ಪೂಜೆಯಲ್ಲಿಯೇ ತೊಡಗಿಕೊಂಡರೆ ಜನನ, ಮರಣದ ಚಕ್ರ (ಭವ ಬಂಧನ) ನಿವಾರಣೆಯಾಗುವುದಿಲ್ಲ. ಹಾಗೂ ಮುಕ್ತಿಯೂ ದೊರೆಯುವುದಿಲ್ಲವೆಂದು ಚೌಡಯ್ಯನವರು ಪ್ರತಿಪಾದಿಸಿದ್ದಾರೆ. ಹೀಗಾಗಿ ಪುರಾಣ ಕಥೆಗಳನ್ನು ತಿಳಿದುಕೊಂಡರೆ ಸಾಕಾಗುವುದಿಲ್ಲ. ಬಾಹ್ಯ ದೇವತಾ ಆರಾಧನೆಗಳಿಂದಲೂ ಮೋಕ್ಷ ಪ್ರಾಪ್ತಿಸುವುದಿಲ್ಲ. ಶರಣರ ತತ್ವದಲ್ಲಿ ಇಷ್ಟ ಲಿಂಗಾನುಭವ, ಗುರು-ಲಿಂಗ-ಜಂಗಮ ಸೇವೆ, ಕಾಯಕ ಮತ್ತು ದಾಸೋಹವೆಂಬ ತ್ರಿವಿಧದ ತತ್ವಗಳ ಆಚರಣೆಯೇ ಮುಕ್ತಿಯ ಮಾರ್ಗ. ದೇವರನ್ನು ಹೊರಗೆ ಹುಡುಕುವುದಕ್ಕಿಂತ ಅಂತರಂಗದಲ್ಲಿ ಅನುಭವಿಸಬೇಕು ಎಂಬುದು ಈ ವಚನ ಸಾರವಾಗಿದೆ.
ವೇದಂಗಳೆಲ್ಲ ಬ್ರಹ್ಮನೆಂಜಲು,
ಶಾಸ್ತ್ರಂಗಳೆಲ್ಲ ಸರಸ್ವತಿಯೆಂಜಲು,
ಆಗಮಂಗಳೆಲ್ಲ ರುದ್ರನೆಂಜಲು,
ಪುರಾಣಂಗಳೆಲ್ಲ ವಿಷ್ಣುವಿನೆಂಜಲು,
ನಾದಬಿಂದು ಕಳೆಗಳೆಂಬವು ಅಕ್ಷರತ್ರಯದೆಂಜಲು,
ಅಕ್ಷರತ್ರಯಂಗಳು ಪ್ರಕೃತಿಯ ಎಂಜಲು.
ಇಂತಿವೆಲ್ಲವ ಹೇಳುವರು ಕೇಳುವರು
ಪುಣ್ಯ ಪಾಪಂಗಳೆಂಜಲೆಂದಾತನಂಬಿಗರ ಚೌಡಯ್ಯ.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-93/ವಚನ ಸಂಖ್ಯೆ-249)
ವೇದಗಳೆಲ್ಲ ಬ್ರಹ್ಮನಿಂದ ಸೃಷ್ಠಿಯಾದವು, ಶಾಸ್ತ್ರಗಳು ಸರಸ್ವತಿಯ ಜ್ಞಾನ ಕಮಂಡಲದಿಂದ ಉತ್ಪತ್ತಿಯಾದವು. ಆಗಮಗಳು ರುದ್ರನ ಉಪದೇಶದಿಂದ ಹುಟ್ಟಿದವು, ಪುರಾಣಗಳು ವಿಷ್ಣುವಿನ ಮಹಿಮೆಯನ್ನು ಸಾರುತ್ತವೆ ಎಂದು ಹೇಳುತ್ತಾರೆ. ನಾದ, ಬಿಂದು ಮತ್ತು ಕಲೆಗಳು ‘ಓಂ‘ (ಅ, ಉ, ಮ) ಎಂಬ ಅಕ್ಷರತ್ರಯದಿಂದ ಉದ್ಭವಿಸಿದವು ಎಂದು ತತ್ತ್ವಜ್ಞಾನಿಗಳು ವಿವರಿಸುತ್ತಾರೆ. ಆ ಅಕ್ಷರತ್ರಯವೂ ಪ್ರಕೃತಿಯ ಅಭಿವ್ಯಕ್ತಿ ಎಂದು ಇನ್ನೊಂದು ತತ್ತ್ವವನ್ನು ಪ್ರತಿಪಾದಿಸುತ್ತಾರೆ. ಈ ಎಲ್ಲ ವಿಚಾರಗಳನ್ನು ಹೇಳುವವರು, ಕೇಳುವವರು ತಮ್ಮದೇ ರೀತಿಯಲ್ಲಿ ಪುಣ್ಯ-ಪಾಪದ ಲೆಕ್ಕಾಚಾರದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಚೌಡಯ್ಯರು ಸೂಚಿಸುತ್ತಾರೆ. ಕೇವಲ ಮಾತು, ವಾದ ಹಾಗೂ ಗ್ರಂಥಪಠಣದಿಂದ ಆತ್ಮ ಸಾಕ್ಷಾತ್ಕಾರ ಸಾಧ್ಯವಿಲ್ಲ ಎಂಬುದೇ ಅವರ ಆಶಯ. ವೇದ, ಶಾಸ್ತ್ರ, ಆಗಮ, ಪುರಾಣ ಎಲ್ಲವೂ ಜ್ಞಾನ ಮಾರ್ಗವನ್ನು ತೋರಿಸಬಹುದು. ಆದರೆ ಅವೇ ಅಂತಿಮವಲ್ಲ. ಗ್ರಂಥಗಳ ಕುರಿತು ವಾದಿಸುವುದಕ್ಕಿಂತ ಅವುಗಳ ಸಾರವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ. ಅನುಭವವಿಲ್ಲದ ಗ್ರಂಥ ಜ್ಞಾನವು ಮೋಕ್ಷಕ್ಕೆ ಕಾರಣವಾಗುವುದಿಲ್ಲ. ಶರಣರ ದೃಷ್ಟಿಯಲ್ಲಿ ಅನುಭವ, ಇಷ್ಟಲಿಂಗೋಪಾಸನೆ, ಕಾಯಕ ಮತ್ತು ದಾಸೋಹವೇ ನಿಜವಾದ ಧರ್ಮ.
ಬೆಟ್ಟದ ಲಿಂಗವ ಹಿರಿದುಮಾಡಿ,
ತನ್ನ ಇಷ್ಟಲಿಂಗವ ಕಿರಿದು ಮಾಡುವ ಮೂಳ ಹೊ…ರಿರಾ,
ಅಣುರೇಣುತೃಣಕಾಷ್ಠ, ಮೊದಲಾದ
ಬ್ರಹ್ಮಾಂಡ ಪರಿಪೂರ್ಣವಾದ
ಮಹಾಲಿಂಗವೆ ಅಂಗಕ್ಕೆ ಗುರುವು ಎಂದು ಸಂಬಂಧಿಸಿ
ಸರ್ವಸಂ[ಕು]ಲವ ತೋರಿದ ಬಳಿಕ,
ಇಂತಪ್ಪ ಮೋಕ್ಷಕ್ಕೆ ಕಾರಣವಾದ ಲಿಂಗವನು ಅಡಿಮಾಡಿ
ನಟ್ಟ ಕಲ್ಲಿಂಗೆ ಅಡ್ಡಬೀಳುವ
ಹೊ…ರಿಗೆ ಲಿಂಗ ಕಟ್ಟುವುದು ಕಿರಿದು,
ಗೊಡ್ಡೆಮ್ಮೆಗೆ ಲಿಂಗವದು ಕರ ಲೇಸು.
ಇಂಥ ಮೂಳ ಹೊ…ರು, ಶಿವಭಕ್ತರೆಂದು ನುಡಿವ ಭ್ರಷ್ಟರನು
ಕತ್ತೆಯನೇರಿಸಿ ಕೆರಹಿನಟ್ಟೆಯಲಿ ಹೊಡೆಯೆಂದಾತ
ನಮ್ಮ ಅಂಬಿಗರ ಚೌಡಯ್ಯನೆಂಬ ನಿಜಶರಣನು.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-75/ವಚನ ಸಂಖ್ಯೆ-198)
ಬೆಟ್ಟದ ಲಿಂಗವ ಹಿರಿದುಮಾಡಿ, ತನ್ನ ಇಷ್ಟಲಿಂಗವ ಕಿರಿದುಮಾಡುವ ಮೂಳಹೊ…ರಿರಾ, ಬೆಟ್ಟದ ಮೇಲಿರುವ ಅಥವಾ ದೇವಾಲಯದಲ್ಲಿರುವ ದೊಡ್ಡ ಕಲ್ಲಿನ ಲಿಂಗವನ್ನೇ ಶ್ರೇಷ್ಠವೆಂದು ಭಾವಿಸಿ, ತನ್ನ ದೇಹದ ಮೇಲೆ ಧರಿಸಿರುವ ಇಷ್ಟಲಿಂಗವನ್ನು ಕೀಳಾಗಿ ಕಾಣುವವರು ನಿಜಾವಾಗಿಯೂ ಮೂಢರು ಹಾಗೂ ಅಜ್ಞಾನಿಗಳು. ಗುರುವು ನೀಡಿದ ಇಷ್ಟಲಿಂಗವು ಕೇವಲ ಒಂದು ಸಣ್ಣ ಲಿಂಗವಲ್ಲ. ಅದು ಅಣುವಿನಿಂದ ಬ್ರಹ್ಮಾಂಡದವರೆಗೆ ವ್ಯಾಪಿಸಿರುವ ಪರಶಿವನ ಸಂಕೇತವಾಗಿದೆ. ಅದರ ಮೂಲಕ ಜೀವ ಮತ್ತು ಶಿವನ ಸಂಬಂಧವನ್ನು ಗುರು ಸ್ಥಾಪಿಸುತ್ತಾನೆ. ಮೋಕ್ಷದ ಮಾರ್ಗವಾದ ಇಷ್ಟಲಿಂಗವನ್ನು ನಿರ್ಲಕ್ಷಿಸಿ, ಕೇವಲ ಕಲ್ಲಿನ ಲಿಂಗದ ಮುಂದೆ ನಮಸ್ಕರಿಸುವುದು ಆಧ್ಯಾತ್ಮಿಕ ಇಷ್ಟಲಿಂಗದ ತತ್ತ್ವವನ್ನು ಅರ್ಥಮಾಡಿಕೊಳ್ಳದವರಿಗೆ ಲಿಂಗಧಾರಣೆ ಮಾಡಿಸುವುದು ವ್ಯರ್ಥ. ಅಂತಹವರಿಗೆ ಲಿಂಗ ಕಟ್ಟುವುದಕ್ಕಿಂತ, ಗೊಡ್ಡೆಮ್ಮೆ ಎಂಬ ಮೂಢ ಪ್ರಾಣಿಯ ಕುತ್ತಿಗೆಗೆ ಕಟ್ಟಿವುದೇ ಲೇಸು. ಇಲ್ಲಿ ವ್ಯಕ್ತಿತ್ವದ ಘನೆತೆಯನ್ನು ಅವಮಾನಿಸುವ ಉದ್ದೇಶವಲ್ಲ. ತತ್ತ್ವವನ್ನು ಅರಿಯದ ಮನೋಭಾವದ ವಿರುದ್ಧದ ತೀಕ್ಷ್ಣ ವಿಮರ್ಶೆ. ಅಂತಹ ಅಜ್ಞಾನಿಗಳನ್ನು ಶಿವಭಕ್ತರು ಎಂದು ಹೊಗಳುವವರನ್ನೂ ಚೌಡಯ್ಯನವರು ಖಂಡಿಸುತ್ತಾರೆ. ಕೊನೆಯ ಸಾಲಿನ “ಕತ್ತೆಯನೇರಿಸಿ ಕೆರಹಿನಟ್ಟೆಯಲಿ ಹೊಡೆ” ಎಂಬುದು ರೂಪಕಾತ್ಮಕ ಅಭಿವ್ಯಕ್ತಿ. ಅಂದರೆ, ಅಂತಹ ತಪ್ಪು ಕಲ್ಪನೆಗಳನ್ನು ಸಮಾಜದಿಂದ ಕಠಿಣವಾಗಿ ತಿದ್ದಬೇಕು ಎಂಬ ಸಂದೇಶವಾಗಿದೆ. ಅದಕ್ಕೆಂದು ಇಷ್ಟಲಿಂಗವೇ ಶರಣರ ಆಧ್ಯಾತ್ಮಿಕ ಜೀವನದ ಕೇಂದ್ರ. ದೇವರು ದೂರದ ದೇವಾಲಯದಲ್ಲ ಇರುವುದಿಲ್ಲ. ಭಕ್ತನ ಅಂಗಸಂಗದಲ್ಲಿರುವ ಇಷ್ಟಲಿಂಗದಲ್ಲಿಯೇ ಅನುಭವಿಸಬೇಕಾದವನು. ಬಾಹ್ಯ ಪೂಜೆಗಿಂತ ಅಂತರಂಗದ ಲಿಂಗಾನುಭವವೇ ಶ್ರೇಷ್ಠ. ಗುರು ನೀಡಿದ ಲಿಂಗದ ಮಹತ್ವವನ್ನು ಅರಿಯದೆ ಕೇವಲ ಬಾಹ್ಯ ಆರಾಧನೆಯಲ್ಲಿ ತೊಡಗುವುದು ಅಜ್ಞಾನಕ್ಕೆ ಸಮಾನ.
ಕಂಥೆ ತೊಟ್ಟವ ಗುರುವಲ್ಲ,
ಕಾವಿ ಹೊತ್ತವ ಜಂಗಮವಲ್ಲ,
ಶೀಲ ಕಟ್ಟಿದವ ಶಿವಭಕ್ತನಲ್ಲ,
ನೀರು ತೀರ್ಥವಲ್ಲ, ಕೂಳು ಪ್ರಸಾದವಲ್ಲ.
ಹೌದೆಂಬವನ ಬಾಯ ಮೇಲೆ
ಅರ್ಧಮಣದ ಪಾದರಕ್ಷೆಯ ತೆಗೆದುಕೊಂಡು
ಮಾಸಿ ಕಡಿಮೆಯಿಲ್ಲದೆ ತೂಗಿ ತೂಗಿ ಟೊಕ ಟೊಕನೆ
ಹೊಡೆ ಎಂದಾತ ನಮ್ಮ ಅಂಬಿಗರ ಚೌಡಯ್ಯ.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-37/ವಚನ ಸಂಖ್ಯೆ-89)
ಕೇವಲ ಕಂಥೆ (ಧಾರ್ಮಿಕ ವಸ್ತ್ರವಾದ ಖಾವಿ) ಧರಿಸಿದ ಮಾತ್ರಕ್ಕೆ ಯಾರೂ ಗುರುವಾಗುವುದಿಲ್ಲ. ಕಾವಿ ಬಟ್ಟೆ ಧರಿಸಿದ ಮಾತ್ರಕ್ಕೆ ಜಂಗಮನಾಗುವುದಿಲ್ಲ. ಬಾಹ್ಯವಾಗಿ ಶೀಲವಂತನಂತೆ ಕಾಣಿಸಿಕೊಂಡ ಮಾತ್ರಕ್ಕೆ ನಿಜವಾದ ಶಿವಭಕ್ತನಾಗುವುದಿಲ್ಲ. ಸಾಮಾನ್ಯ ನೀರು ತೀರ್ಥವಾಗುವುದಿಲ್ಲ, ಸಾಮಾನ್ಯ ಊಟ ಪ್ರಸಾದವಾಗುವುದಿಲ್ಲ. ಅವುಗಳಿಗೆ ಆಧ್ಯಾತ್ಮಿಕ ಅರ್ಥ ಮತ್ತು ಪಾವಿತ್ರ್ಯ ಇರಬೇಕು. ಈ ಸುಳ್ಳು ಕಲ್ಪನೆಗಳನ್ನು “ಹೌದು” ಎಂದು ಒಪ್ಪುವವನಿಗೆ ಬುದ್ಧಿ ಹೇಳಬೇಕು ಎಂಬುದನ್ನು ಚೌಡಯ್ಯನವರ ರೂಪಕವಾಗಿ ತೀಕ್ಷ್ಣ ಭಾಷೆಯಲ್ಲಿ ಹೇಳಿದ್ದಾರೆ. ಇದು ಅಂಧಶ್ರದ್ಧೆ ಮತ್ತು ಅಧಾರ್ಮಿಕತೆಯ ವಿರುದ್ಧದ ತೀವ್ರ ಖಂಡನೆಯಾಗಿದೆ.
ಹಾಲ ನೇಮ, ಹಾಲ ಕೆನೆಯ ನೇಮ,
ಕೆನೆ ತಪ್ಪಿದ ಬಳಿಕ ಕಿಚ್ಚಡಿಯ ನೇಮ,
ಬೆಣ್ಣೆಯ ನೇಮ, ಬೆಲ್ಲದ ನೇಮ,
ಅಂಬಲಿಯ ನೇಮದವರನಾರನೂ ಕಾಣೆ,
ಕೂಡಲಸಂಗನ ಶರಣರಲ್ಲಿ
ಅಂಬಲಿಯ ನೇಮದಾತ ಮಾದಾರ ಚೆನ್ನಯ್ಯ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-63/ವಚನ ಸಂಖ್ಯೆ-232)
ಈ ವಚನದಲ್ಲಿ ವಿಶ್ವಗುರು ಬಸವಣ್ಣರು ಆಹಾರದ ಮೂಲಕ ಮಾನವರ ಜೀವನಶೈಲಿ ಮತ್ತು ಮನೋಭಾವದ ಭಿನ್ನತೆಯನ್ನು ಮಾರ್ಮಿಕವಾಗಿ ವಿವರಿಸುತ್ತಾರೆ. ಕೆಲವರು ಹಾಲಿನಂತಹ ಉತ್ತಮ ಆಹಾರವನ್ನೇ ಬಯಸುತ್ತಾರೆ. ಇನ್ನೂ ಕೆಲವರು ಅದರ ಕೆನೆಯನ್ನೇ ಬಯಸುತ್ತಾರೆ. ಮತ್ತೆ ಕೆಲವರಿಗೆ ಅದಕ್ಕಿಂತ ಕಡಿಮೆ ಗುಣಮಟ್ಟದ ಆಹಾರವೂ ಸಾಕಾಗುತ್ತದೆ. ಕೆಲವರು ಬೆಣ್ಣೆ, ಬೆಲ್ಲದಂತಹ ರುಚಿಕರ ಆಹಾರವನ್ನೇ ಬಯಸುತ್ತಾರೆ. ಆದರೆ ಮೃಷ್ಟಾನ್ನಕ್ಕಿಂತ ಶ್ರೇಷ್ಠವಾದ ಅಂಬಲಿಯನ್ನು ತೃಪ್ತಿಯಿಂದ ಸ್ವೀಕರಿಸುವವರು ವಿರಳ. ಕೂಡಲಸಂಗಮದೇವನ ಶರಣರಲ್ಲಿ ಮಾದಾರ ಚೆನ್ನಯ್ಯ ಮಾತ್ರ ಅಂಬಲಿಯಂತಹ ಸರಳ ಆಹಾರದಲ್ಲಿಯೇ ಸಂತೃಪ್ತನಾಗಿ ಬದುಕಿದ ಮಹಾನ್ ಶರಣನೆಂದು ಬಸವಣ್ಣರು ಕೊಂಡಾಡಿದ್ದಾರೆ. ಜೀವನದಲ್ಲಿ ಆಡಂಬರಕ್ಕಿಂತ ಸರಳತೆ ಶ್ರೇಷ್ಠ. ಆಹಾರದ ವೈಭವಕ್ಕಿಂತ ಶುದ್ಧ ಕಾಯಕದಿಂದ ಸಂಪಾದಿಸಿದ ಆಹಾರವೇ ಪವಿತ್ರ. ನಿಜವಾದ ಶರಣನು ತೃಪ್ತಿಯಿಂದ ಬದುಕುತ್ತಾನೆ. ವೈಭವವನ್ನು ಬಯಸುವುದಿಲ್ಲ. ಹೀಗಾಗಿ ಮಾದಾರ ಚೆನ್ನಯ್ಯನವರು ಕಾಯಕ, ಸಂತೃಪ್ತಿ ಮತ್ತು ವಿನಯಕ್ಕೆ ಆದರ್ಶವಾಗಿದ್ದಾರೆ.
ನೆಲನೊಂದೆ ಹೊಲಗೇರಿ ಶಿವಾಲಯಕ್ಕೆ,
ಜಲವೊಂದೆ ಶೌಚಾಚಮನಕ್ಕೆ,
ಕುಲವೊಂದೆ ತನ್ನ ತಾನರಿದವಂಗೆ,
ಫಲವೊಂದೆ ಷಡುದರ್ಶನ ಮುಕ್ತಿಗೆ,
ನಿಲವೊಂದೆ, ಕೂಡಲಸಂಗಮದೇವಾ,
ನಿಮ್ಮನರಿದವಂಗೆ,
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-248/ವಚನ ಸಂಖ್ಯೆ-879)
ಹೊಲಗೇರಿಯಾಗಲಿ, ಶಿವಾಲಯವಾಗಲಿ ಎರಡಕ್ಕೂ ಭೂಮಿಯೇ ಆಧಾರವಾಗಿದೆ. ಭೂಮಿಯು ಯಾರನ್ನೂ ಭೇಧ- ಭಾವದಿಂದ ಕಾಣುವುದಿಲ್ಲ. ಶರೀರ ಕಾಯದ ಶುದ್ಧಿಗೆ ಬಳಸುವ ನೀರೂ, ಪೂಜೆಯ ಆಚಮನಕ್ಕೆ ಬಳಸುವ ನೀರೂ ಎರಡೂ ಒಂದೇ ಆಗಿರುತ್ತದೆ. ನೀರಿಗೆ ಯಾವುದೇ ಜಾತಿ ಅಥವಾ ಪವಿತ್ರ,ಅಪವಿತ್ರ ಎಂಬ ಭೇದ ಇರುವುದಿಲ್ಲ. ತನ್ನ ಆತ್ಮ ಸ್ವರೂಪವನ್ನು ಅರಿತವನಿಗೆ ಎಲ್ಲರೂ ಒಂದೇ ಕುಲದವರು. ಆತ್ಮಕ್ಕೆ ಜಾತಿ ಅಥವಾ ಕುಲ ಎಂಬ ಭೇದವಿಲ್ಲ. ಯಾವ ದರ್ಶನ ಅಥವಾ ತತ್ವಶಾಸ್ತ್ರವನ್ನು ಅನುಸರಿಸಿದರೂ, ಅದರ ಅಂತಿಮ ಗುರಿ ಮುಕ್ತಿ ಪಡೆಯವುದೇ ಆಗಿದೆ. ಕೂಡಲಸಂಗಮದೇವನನ್ನು ನಿಜವಾಗಿ ಅರಿತವರಿಗೆ ಪರಮಗತಿಯೂ ಒಂದೆ. ಅವರು ಎಲ್ಲ ಭೇದಗಳನ್ನು ಮೀರಿ ಪರಶಿವನಲ್ಲಿ ಐಕ್ಯರಾಗುತ್ತಾರೆ. ಅವನಲ್ಲಿ ಶಾಶ್ವತವಾದ ನೆಲೆ ಪಡೆಯುತ್ತಾರೆ. ಹೀಗಾಗಿ ಭೂಮಿ, ನೀರು, ಆತ್ಮ ಮತ್ತು ಪರಮಸತ್ಯ ಎಲ್ಲವೂ ಒಂದೇ ಎಂಬ ಏಕತ್ವ ಭಾವದಿಂದ ಭಾವಿಸಬೇಕಿದೆ. ಜಾತಿ, ಕುಲ, ಧರ್ಮ ಮತ್ತು ಬಾಹ್ಯ ಭೇದಗಳು ಮಾನವನು ಸೃಷ್ಠಿಸಿಕೊಂಡ ಕಾಲ್ಪನಿಕ ಬೆಳವಣಿಗೆಗಳು ಮಾತ್ರ. ಆತ್ಮಜ್ಞಾನ ಪಡೆದವನಿಗೆ ಎಲ್ಲರೂ ಸಮಾನರು. ಎಲ್ಲ ನಿಜವಾದ ಆಧ್ಯಾತ್ಮಿಕ ಮಾರ್ಗಗಳ ಗುರಿ ಮುಕ್ತಿಯೇ ಆಗಿರುತ್ತದೆ ಎಂಬುದೆ ಈ ವಚನದ ತಾತ್ಪರ್ಯವಾಗಿರುತ್ತದೆ.
ಆಕರ ಗ್ರಂಥಗಳು:
- ಡಾ. ಫ. ಗು. ಹಳಕಟ್ಟಿ, (ಸಂ.). (1970). ಸಮಗ್ರ ವಚನ ಸಂಪುಟ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
- ಡಾ. ಎಂ. ಎಂ. ಕಲಬುರ್ಗಿ, (ಸಂ.). (2001). ವಚನ ಸಾಹಿತ್ಯ. ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.
- ವಿಶ್ವಗುರು ಬಸವಣ್ಣನವರ ವಚನಗಳು(2000), ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.
- ಅಂಬಿಗರ ಚೌಡಯ್ಯನವರ ವಚನಗಳು (2000). ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.
- ಡಾ. ಎಂ.ಎಂ. ಕಲಬುರ್ಗಿ, (1993). ವಚನ ದರ್ಶನ. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
- ಡಾ. ಆರ್.ಸಿ. ಹಿರೇಮಠ, (ಸಂ.) (2000) ವಚನ ಸಾಹಿತ್ಯದ ವಿವಿಧ ಆಯಾಮಗಳು,ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.
- ಡಾ. ಶಾಂತಿನಾಥ ದೇಸಾಯಿ. (ಸಂ.). (1990). ವಚನ ಸಾಹಿತ್ಯ ಚರಿತ್ರೆ. ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.
- ಡಾ. ನಾಗರಾಜ, ವಿ. (2005). ವಚನ ಚಳವಳಿ ಮತ್ತು ಸಾಮಾಜಿಕ ಪರಿವರ್ತನೆ. ಕನ್ನಡ ವಿಶ್ವವಿದ್ಯಾಲಯ, ಹಂಪಿ.
- ಸಿ. ಪಿ. ಸಿದ್ಧಾಶ್ರಮ, ಅಂಬಿಗರ ಚೌಡಯ್ಯ (2018), ಪ್ರಚಾರ ಪುಸ್ತಕ ಮಾಲೆ-326, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.
- ಡಾ. ಟಿ. ಆರ್. ಚಂದ್ರಶೇಖರ, ಬಸವ ಪ್ರಣೀತ ಲಿಂಗಾಯತ ಧರ್ಮ (2024), ನೀಲಗಂಗಾ ಪ್ರಕಾಶನ, ಬರಗುಂಡಿಯವರ ಓಣಿ, ಗುಳೇದಗುಡ್ಡ, ಜಿ: ಬಾಗಲಕೋಟ.
ಡಾ. ಸತೀಶ ಕೆ. ಇಟಗಿ
ಪತ್ರಿಕೋದ್ಯಮ ಉಪನ್ಯಾಸಕ
ಅಂಚೆ: ಕೋಳೂರ – 586 129
ತಾ: ಮುದ್ದೇಬಿಹಾಳ, ಜಿ: ವಿಜಯಪುರ.
ಮೊ: 92412 86422
ಈ-ಮೇಲ್: satshitagi10@gmail.com
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ (ರಿ) ದ ಸಂಚಾಲಕರನ್ನು ಸಂಪರ್ಕಿಸಬೇಕಾದ:
- ಮೋಬೈಲ್ ನಂ. 9741 357 132
- e-Mail ID: info@vachanamandara.in / admin@vachanamandara.in




Total views : 71489