ಶರಣ ಕರುಳ ಕೇತಯ್ಯನವರ ವಚನ ನಿರ್ವಚನ | ಡಾ. ಎಂ. ಮಕ್ತುಂಬಿ, ಭಾಲ್ಕಿ.

Loading

ದ್ರವ್ಯಶೀಲ ಧನಶೀಲ ತನುಶೀಲ ಆತ್ಮಶೀಲ
ಇಂತಿವರೊಳಗಾದ ನಾನಾ ಶೀಲಂಗಳೆಲ್ಲವೂ
ಓಸರಿಸಿದಲ್ಲಿ ಭಾಷೆ ಹೋಯಿತ್ತು.
ಕಳ್ಳನ ತಾಯ ಕಣಿಯ ಕೇಳ ಹೋದಂತೆ.
ಅಲ್ಲಿಗಲ್ಲಿಗೆ ಹೋಗದೆ, ಎಲ್ಲರ ಕೂಡಿ
ಎನಗೊಂದರಲ್ಲಿ ಇರೆಂದು ಕೇಳುವ ಆತ್ಮಗಳ್ಳನ ಶೀಲ
ಮನಕ್ಕೆ ಮನೋಹರ ಶಂಕೇಶ್ವರ ಲಿಂಗವ
ಮುಟ್ಟದೆ ಹೋಯಿುತ್ತು.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-15/ವಚನ ಸಂಖ್ಯೆ-33)

ದ್ರವ್ಯ ಅಂದರೆ ಸಂಪತ್ತು.  ಧನ ಅಂದರೆ ಹಣ. ತನು ಅಂದರೆ ಶರೀರ. ಆತ್ಮ ಅಂದರೆ ಅಂತರಂಗ. ಶೀಲ ಅಂದರೆ ನಡವಳಿಕೆ. ಹೀಗೆ ನಾನಾ ರೀತಿಯ ಶೀಲಗಳಿವೆ. ಮನುಷ್ಯರು ಶೀಲಗಳನ್ನು ಪಾಲಿಸಿಕೊಂಡು ಬಂದಿದ್ದಾರೆ. ಒಂದು ಶೀಲವನ್ನು ನಿಯಮ ಬದ್ಧವಾಗಿ ಪಾಲಿಸಬೇಕು. ನಿಯಮ ಮೀರಿದರೆ ಶೀಲ ಹೋಯಿತು. ಕಳ್ಳನ ತಾಯಿ ಕಣಿಯನ್ನು ಕೇಳಿ, ಮಗನಿಗೆ ಕಳ್ಳತನ ಮಾಡಲು ಕಳಿಸಿದಂತೆ. ಅಂದರೆ ಮಾಡುವದೆ ಕೆಟ್ಟ ಕೆಲಸ. ಅದಕ್ಕೆ ತಾಯಿ ಯಾವ ಸಮಯಕ್ಕೆ ಹೋಗಬೇಕು ಎಂದು ಭವಿಷ್ಯ ಕೇಳಿದಳಂತೆ. ಅಂದರೆ ಗಾದೆ ಮಾತು ಹೀಗಿದೆ “ಆಚಾರ ಮಾಡೋಕೆ, ಬದನೆಕಾಯಿ ತಿನ್ನೋಕೆ” ಎಂಬಂತೆ ಆಯಿತು. ಮಗನನ್ನು ಒಳ್ಳೆಯ ನಡೆನುಡಿಗಳನ್ನು ಕಲಿಸಬೇಕು. ಅಲ್ಲಿಗಲ್ಲಿಗೆ ಹೋಗದೆ, ಅಂದರೆ ಬೇರೆ ಬೇರೆ ದೇವರಲ್ಲಿಗೆ ಹೋಗದೆ ಏಕದೇವ ಉಪಾಸನೆ ಮಾಡಬೇಕು. ಎಲ್ಲಿರಿಗೆ ಶೀಲ ಮಾಡು ಎಂದು ಹೇಳಿ ಆತ ಆತ್ಮಗಳ್ಳತನ ಮಾಡಿದರೆ ದೇವರು ಮೆಚ್ಚುವದಿಲ್ಲ. ಮನಕ್ಕೆ ಮನೋಹರ  ಶಂಕೇಶ್ವರ ಲಿಂಗವ ಮುಟ್ಟದೆ ಹೋಗುವದು ಎಂದು ಬಹಳ ಮಾರ್ಮಿಕವಾಗಿ ಹೇಳಿದ್ದಾರೆ.

ಶರಣ ಕರುಳ ಕೇತಯ್ಯನವರ ವಚನದ ಅಂಕಿತ “ಮನಕ್ಕೆ ಮನೋಹರ ಶಂಕೇಶ್ವರಲಿಂಗ”. ಅವರ ಬಗ್ಗೆ ಶಾಂತಲಿಂಗ ದೇಶಿಕರ “ಭೈರವೇಶ್ವರ ಕಾವ್ಯದ ಕಥಾಮಣಿಸೂತ್ರರತ್ನಾಕರ” ದಲ್ಲಿ ಬರುವಂತೆ ಭವಿಯ ಸೋಂಕಲಾಗದು ಅನರ್ಪಿತವ ಸ್ವೀಕರಿಸಲಾಗದು ಎಂಬ ನೇಮವನ್ನು ಪಾಲಿಸುತ್ತಿದ್ದರು ಎಂಬುದು ತಿಳಿದು ಬರುತ್ತದೆ.

ಶರಣ ಕರುಳ ಕೇತಯ್ಯನವರು ಬಸವಣ್ಣನವರ ಸಮಕಾಲೀನರು. ಅವರ ತಂದೆ ತಾಯಿಯವರ ಹಾಗೂ ಅವರ ಪೂರ್ವಾಶ್ರಮದ ಬಗ್ಗೆ ಪರಿಚಯ ಸಿಗುವುದಿಲ್ಲ. ಅವರು ಎಂಟು ವಚನಗಳನ್ನು ಬರೆದಿದ್ದಾರೆ. ಅವರು ಅಲಕ್ಷ್ಯಿಸಿರುವ ವಚನಕಾರರ ಪಟ್ಟಿಯಲ್ಲಿ ಸೇರುತ್ತಾರೆ. ಇಷ್ಟಲಿಂಗ ನಿಷ್ಠಾವಂತ ಶರಣರು. ಶ್ರದ್ಧೆ ಭಕ್ತಿಯುಳ್ಳವರು. ಕುಂತಲ್ಲಿ, ನಿಂತಲ್ಲಿ, ಹೋದಲ್ಲಿ, ತಾವು ಹಾಕಿಕೊಂಡ ನಿಯಮದ ಕಡೆ ಲಕ್ಷವಿಡುತ್ತಾರೆ.

ಒಂದು ದಿವಸ ಶರಣ ಕೇತಯ್ಯನವರ ಕನಸಿನಲ್ಲಿ ಲಿಂಗ ಪೂಜೆ ಮಾಡಿ ಹಾಲು ಲಿಂಗಕ್ಕೆ ಅರ್ಪಿಸದೆ ಹಾಗೆ ಗಟಗಟನೆ ಕುಡಿದು ಬಿಡುತ್ತಾರೆ. ತನ್ನ ನಿಯಮ ತಪ್ಪಿತ್ತಲ್ಲ ಎಂದು ಕನಸಿನಲ್ಲಿಯೇ ತಳಮಳ ಪಡುತ್ತಾರೆ. ಚಿಂತಾಕ್ರಾಂತರಾಗಿ ಪಶ್ಚಾತ್ತಾಪ ಪಡುತ್ತಾರೆ. ಕೊನೆಗೆ ಕನಸಿನಲ್ಲಿಯೇ ಪ್ರಾಣ ಬಿಡುತ್ತಾರೆ. ಆವಾಗ ಲಿಂಗವು ಅವರ ವೀರಭಕ್ತಿಯ ಕಂಡು ಇದೇಕೆ? ಹೀಗೆ ಮಾಡಲು ಕಾರಣವೇನು? ಎಂದು ಕೇಳಿದಾಗ ಕನಸಿನಲ್ಲಿ ನಾನು ಪಾಲಿಸುತ್ತಿದ್ದ ನಿಯಮ ತಪ್ಪಿದೆ. ಅದಕ್ಕೆ ಕನಸಿನಲ್ಲಿಯೇ ಪ್ರಾಣ ಬಿಟ್ಟಿದ್ದೇನೆ. ಎಚ್ಚೆತ್ತಾಗ ಜಾಗ್ರತ ಅವಸ್ಥೆಯಲ್ಲಿ ನಿಯಮ ತಪ್ಪಿದರೆ ತಾನು ಹಾಕಿಕೊಂಡ ವ್ರತ ತಪ್ಪಿದಡೆ ಜಾಗ್ರತ ಅವಸ್ಥೆಯಲ್ಲಿ ಪ್ರಾಣ ಬಿಡುತ್ತಿದ್ದೆ. ಕನಸಿನಲ್ಲಿ ನಿಯಮ ಉಲ್ಲಂಘನೆಯಾಗಿದ್ದರಿಂದ ಕನಸಿನಲ್ಲಿಯೇ ಪ್ರಾಣ ಬಿಟ್ಟಿರುವೆ.

ಶರಣ ಕರುಳ ಕೇತಯ್ಯನವರ ಭಕ್ತಿಗೆ ಶಿವ ಮೆಚ್ಚುತ್ತಾರೆ. ಅವರ ವಿಚಾರಕ್ಕೆ ಮಣಿಯುತ್ತಾರೆ. ಲಿಂಗಯ್ಯದೇವರು “ನೀನು ಭಕ್ತಿಯಿಂದ ನಡೆಸು, ಭಕ್ತಿ ಮಾರ್ಗದಲ್ಲಿ ನಡೆಯುವಾಗ ಏನೇ ತಪ್ಪಿದರೂ ಪಶ್ಚಾತ್ತಾಪ ಪಡಬೇಕು. ಪಶ್ಚಾತ್ತಾಪದಿಂದ ಕಣ್ಣಿರು ಬರಬೇಕು. ಆದರೆ ಪ್ರಾಣ ಬಿಡುವುದು ಯೋಗ್ಯವಲ್ಲ. ಭಕ್ತಿ ಮಾರ್ಗದಲ್ಲಿ  ಸಾವು ಖಚಿತವೆಂಬುದು ಅರಿವನ್ನಿಟ್ಟುಕೊಂಡು ನಡೆದು ಕೊಟ್ಟಷ್ಷು ಆಯುಷ್ಯ ಸಾರ್ಥಕ ಮಾಡಿಕೊಳ್ಳಬೇಕು. ಲಿಂಗದೇವರು ಕರುಣಿಸಿದನು ಎಂದು ಗೊತ್ತಾಗುತ್ತದೆ” ಎಂದು ತಿಳಿಸುತ್ತಾರೆ.

ಆನಂದವಾಗಿ ಬಾಳಿ ಶಂಕರೇಶ್ವರ ಲಿಂಗವೆಂಬ ಇಷ್ಷಲಿಂಗದಲ್ಲಿ ಬಯಲಾದರು ಎಂಬ ವಿಷಯ ಶಾಂತಲಿಂಗ ದೇಶಿಕರು ವಿವರವಾಗಿ ತಿಳಿಸುತ್ತಾರೆ. ಇದರಿಂದ ಶರಣರು ಆಚಾರಕ್ಕೆ ಎಷ್ಟು ಮಹತ್ವ ನೀಡುತ್ತಾರೆಂಬುದು ಗೊತ್ತಾಗುತ್ತದೆ. ನಡೆದಂತೆ ನುಡಿ, ನುಡಿದಂತೆ ನಡೆ ಇದ್ದುದರಿಂದಲೇ ಶರಣತ್ವಕ್ಕೆ ಬೆಲೆ ಬಂದಿದೆ. ಕನಸು ಜಾಗ್ರತ ಜೀವನದ ಕೈಗನ್ನಡಿ ಇದ್ದಂತೆ. ಕನಸಿನಲ್ಲಿಯೂ ತಪ್ಪು ಮಾಡಬಾರದು. ಜಾಗೃತಿ ಜೀವನ ಸ್ವಚ್ಛ ಭಾವಶುದ್ಧವಾಗಿ ಸದಾಚಾರ ಸದ್ಗುಣ ಸಂಪನ್ನನಿದ್ದರೆ ಕನಸು ಅದೆ ರೀತಿ ಇರುತ್ತದೆ. ಜಾಗೃತಿ ಜೀವನ ಒಳ್ಳೆಯದಾಗಿದ್ದರೆ ಕನಸು ಬಿಂಬಿಸುತ್ತದೆ.

ಶರಣ ಕರುಳ ಕೇತಯ್ಯನವರ ಹಿಂದೆ ಬಳಕೆಯಾದ ಕರುಳ ಪದ ಏಕೆ ಬಂತು ಎಂದು ವಿದ್ವಾಂಸರು ಚರ್ಚೆ ಮಾಡಿದ್ದಾರೆ. ಅನೇಕ ಶರಣರು ಕೇತಯ್ಯಗಳ ಹೆಸರಿನಿಂದ ಇರುವದರಿಂದ ಅವರಿಗೆ ಕರುಳ ಕೇತಯ್ಯ ಎಂದು ಹೆಸರು ಬಂತು.

ಶೀಲ ಶೀಲವೆಂದು ಗರ್ವಿಸಿ ನುಡಿವುತಿಪ್ಪರು,
ಶೀಲವಾವುದೆಂದರಿಯರು.
ಇದ್ದುದ ವಂಚನೆಯ ಮಾಡಿದಿಪ್ಪುದೆ ಶೀಲ,
ಇಲ್ಲದಿದ್ದುದಕ್ಕೆ ಕಡನ ಬೇಡದಿಪ್ಪುದೆ ಶೀಲ,
ಪರಧನ ಪರಸತಿಗೆಳಸದಿಪ್ಪುದೆ ಶೀಲ,
ಪರದೈವ ಪರಸಮಯಕ್ಕೆಳಸದಿಪ್ಪುದೆ ಶೀಲ,
ಗುರುನಿಂದೆ ಜಂಗಮನಿಂದೆಯ ಕೇಳದಿಪ್ಪುದೆ ಶೀಲ,
ಕೂಡಲಚೆನ್ನಸಂಗನ ಶರಣರ ಬರವಿಂಗೆ
ಮುಯ್ಯಾಂತು ಪರಿಣಾಮಿಸ ಬಲ್ಲರೆ ಅಚ್ಚಶೀಲ.
(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-72/ವಚನ ಸಂಖ್ಯೆ-180)

ಈ ವಚನದಲ್ಲಿ ಶೀಲದ ಬಗ್ಗೆ ತುಂಬ ಚೆನ್ನಾಗಿ ಚಿಙ್ಮಯಜ್ಞಾನಿ ಚೆನ್ನಬಸವಣ್ಣನವರು ಹೇಳಿದ್ದಾರೆ. ಪರಸತಿ ಅಂದರೆ ಬೇರಯವರ ಹೆಂಡತಿಯನ್ನು ಕಾಮ ದೃಷ್ಟಿಯಿಂದ ನೋಡಬಾರದು. ಪರಧನ ಅಂದರೆ ಬೇರೆಯವರ ಹಣ ಯಾವತ್ತೂ ನಮ್ಮದೆಂದು ಭಾವಿಸಬಾರದು. ಪರರ ಸಮಯಕ್ಕೆ ಬಂಧು ಆಗದವರು, ಪರದೈವ ಅಂದರೆ ಬೇರೆ ಬೇರೆ ದೇವರನ್ನ ಪೂಜಿಸಬಾರದು. ಏಕದೇವೋಪಸನೆ ಮಾಡಬೇಕು ಎಂದು ಹೇಳಿದ್ದಾರೆ.

ಗಂಡು ಮೋಹಿಸಿ ಹೆಣ್ಣು ಹಿಡಿದಡೆ
ಅದು ಒಬ್ಬರ ಒಡವೆ ಎಂದು ಅರಿಯಬೇಕು.
ಹೆಣ್ಣು ಮೋಹಿಸಿ ಗಂಡು ಹಿಡಿದಡೆ
ಉತ್ತರವಾವುದೆಂದರಿಯಬೇಕು?
ಈ ಎರಡು ಉಭಯ
ಕಳೆದು ಸುಖಿ ತಾನಾಗಬಲ್ಲಡೆ
ನಾಸ್ತಿನಾಥನು ಪರಿಪೂರ್ಣನೆಂಬೆ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-300/ವಚನ ಸಂಖ್ಯೆ-775)

ಸಾಮಾನ್ಯವಾಗಿ ಗಂಡು ಮೋಹಿಸುವದು ಲೋಕರೂಢಿ. ಗಂಡು ದರ್ಪದಿಂದ ಮದುವೆ ಆಗುತ್ತಾನೆ. ಹೆಣ್ಣು ಮೋಹಿಸಿದರೆ ಅದಕ್ಕೆ ಯಾವ ಉತ್ತರವು ಇಲ್ಲ. ಗಂಡು ಹೆಣ್ಣು ಎಂಬ ಭೇದವಳಿಯಬೇಕು. ಹೆಣ್ಣಿನ ಶೀಲದ ಬಗ್ಗೆ ಸಂದೇಹ ಪಡಬಾರದು. ಮಾನವರಾದ ಮೇಲೆ ಉಭಯದ ಭೇದ ಅಳಿಯಬೇಕು ಎಂದು ಶರಣೆ ಧೂಪದ ಗೊಗ್ಗವ್ವೆ ಶರಣೆ ಹೇಳಿದ್ದಾರೆ.

ಹದ ಮಣ್ಣಲ್ಲದೆ ಮಡಕೆಯಾಗಲಾರದು.
ವ್ರತಹೀನನ ಬೆರೆಯಲಾಗದು.
ಬೆರೆದಡೆ ನರಕ ತಪ್ಪದು
ನಾನೊಲ್ಲೆ ಬಲ್ಲೆನಾಗಿ, ಕುಂಭೇಶ್ವರಾ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-299/ವಚನ ಸಂಖ್ಯೆ-772)

ಮಣ್ಣು ಹದವಿದ್ದಾಗ ಮಾತ್ರ ಗಡಿಗೆ ಮಾಡಲು ಬರುತ್ತದೆ. ಮಣ್ಣಿನಲ್ಲಿ ಕಸ, ಹರಳು ಏನಾದರು ಬೆರೆತರೆ ಮಡಿಕೆ ಮಾಡಲು ಸಾಧ್ಯವೇ ಇಲ್ಲ. ನಮ್ಮ ಅಂತರಂಗದಲ್ಲಿ ಪರಿಶುದ್ಧತೆ ಇರಬೇಕು. ಮನ ಘನಮನವಾಗಬೇಕು. ಅಂದಾಗ ಮಾತ್ರ ಶಿವಾರ್ಪಿತ ಬದುಕು. ನಮ್ಮಲ್ಲಿ ದುರಾಶೆ, ದುರ್ಗುಣ, ದುರಾಚಾರ ತುಂಬಿಕೊಂಡಾಗ ಈ ದೇಹವೆಂಬ ಮಡಿಕೆಗೆಯಾವ ಬೆಲೆಯು ಇಲ್ಲ. ಮನಸ್ಸು ಭಾವ ಹದವಾಗಬೇಕು. ಮಡಿಕೆ ಸುಂದರವಾಗಬೇಕಾದರೆ ಮಣ್ಣು ಹದವಾಗಬೇಕು. ಅದೇ ನಮ್ಮ ಅಂತರಂಗ ಕೂಡಾ ಪಕ್ವವಾಗಬೇಕೆಂದು ಶರಣೆ ಕುಂಬಾರ ಗುಂಡಯ್ಯಗಳ ಪುಣ್ಯಸ್ತ್ರೀ ಕೇತಲದೇವಿಯವರು ಹೇಳುತ್ತಾರೆ.

ಹೀಗೆ ಅನೇಕ ಶರಣರು ಶೀಲದ ಬಗ್ಗೆ ಹೇಳಿದ್ದಾರೆ. ಅಚಣೆಗಳು ವಚನಗಳ ಮೂಲಕ ತಿಳಿದುಕೊಳ್ಳುವದು ಬಹಳಷ್ಟಿದೆ. ನಿಯಮ ಬದ್ದತೆ ಬೇಕು. ಅವುಗಳನ್ನು ಪಾಲಿಸುವುದು ಬಹಳ ಮುಖ್ಯ.

ಡಾ. ಎಮ್. ಮಕ್ತುಂಬಿ,
ಅಧ್ಯಕ್ಷರು,
ಶಬನಮ್‌ ಎಜ್ಯುಕೇಶನ್‌ ಮತ್ತು ಚಾರಿಟೇಬಲ್‌ ಟ್ರಸ್ಟ್‌ (ರಿ).
ಭಾಲ್ಕಿ, ಬೀದರ ಜಿಲ್ಲೆ.
ಮೋಬೈಲ್‌ ನಂ. 92420 56469

  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನಸಾಹಿತ್ಯ ಮಂದಾರ ಫೌಂಡೇಶನ್ ದ ಸಂಚಾಲಕರನ್ನು ಸಂಪರ್ಕಿಸಬೇಕಾದ
    • ಮೋಬೈಲ್ ನಂ. 9741 357 132
    • e-Mail ID: info@vachanamandara.in / admin@vachanamandara.in

Leave a Reply