ಎಣ್ಣೆ ಬೇರೆ  ಬತ್ತಿ ಬೇರೆ | ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ | ಶ್ರೀಮತಿ. ಸುನಿತಾ ಮೂರಶಿಳ್ಳಿ, ಧಾರವಾಡ.

Loading

ಎಣ್ಣೆ ಬೇರೆ  ಬತ್ತಿ ಬೇರೆ,
ಎರಡೂ ಕೂಡಿ ಸೊಡರಾಯಿತ್ತು.
ಪುಣ್ಯ ಬೇರೆ ಪಾಪ ಬೇರೆ,
ಎರಡೂ ಕೂಡಿ ಒಡಲಾಯಿತ್ತು.
ಮಿಗಬಾರದು ಮಿಗದಿರಬಾರದು
ಒಡಲಿಚ್ಚೆಯ ಸಲಿಸದೆ ನಿಮಿಷವಿರಬಾರದು.
ಕಾಯಗುಣವಳಿದು ಮಾಯಾ ಜ್ಯೋತಿ
ವಾಯು ಕೂಡುವ ಮುನ್ನ
ಭಕ್ತಿ ಮಾಡಬಲ್ಲಾತನೆ ದೇವ ಗುಹೇಶ್ವರಾ.
(ಸಮಗ್ರ ವಚನ ಸಂಪುಟ: ಎರಡು-2021/ವಚನ ಸಂಖ್ಯೆ-1239)

ಒಂದು ಶಬ್ದಾತೀತವಾದ ಅನುಭಾವಿಕ ವಿಷಯವನ್ನು ನಿರೂಪಿಸುವಲ್ಲಿ ಎರಡು ವೈರುಧ್ಯತೆಗಳ ಮಧ್ಯೆ ಒಂದು ಬೆಡಗನ್ನು ಸೃಷ್ಟಿಸಿ ತನ್ಮೂಲಕ ವಿಷಯ ಪ್ರಸ್ತಾವನೆ ಮಾಡುವಲ್ಲಿ ಅಲ್ಲಮ ಪ್ರಭುಗಳು ನಿಸ್ಸೀಮರು. ಸೃಷ್ಟಿಯ ಸಕಲ ಚರಾಚರಗಳಲ್ಲಿಯೂ ದೃಷ್ಟಿಗೆ ಅಗೋಚರವಾದ ಒಂದು ಸೂಕ್ಷ್ಮ ಸಂಬಂಧವಿದೆ. ಅದನ್ನೇ ಅಲ್ಲಮ ಪ್ರಭುಗಳು ಹೀಗೆ ವ್ಯಕ್ತಪಡಿಸಿದ್ದಾರೆ.

ಎತ್ತಣ ಮಾಮರ ಎತ್ತಣ ಕೋಗಿಲೆ,
ಎತ್ತಣಿಂದೆತ್ತ ಸಂಬಂಧವಯ್ಯಾ.
ಬೆಟ್ಟದ ನೆಲ್ಲಿಕಾಯಿ ಸಮುದ್ರದ ಉಪ್ಪು,
ಎತ್ತಣಿಂದೆತ್ತ ಸಂಬಂಧವಯ್ಯಾ.
ಗುಹೇಶ್ವರ ಲಿಂಗಕ್ಕೆಯೂ ನಮಗೆಯೂ,
ಎತ್ತಣಿಂದೆತ್ತ ಸಂಬಂಧವಯ್ಯಾ.
(ಸಮಗ್ರ ವಚನ ಸಂಪುಟ: ಎರಡು-2021/ವಚನ ಸಂಖ್ಯೆ-59)

ಎಂಬ ವಚನದಲ್ಲಿ ಹೇಗೆ ಈ ಸೃಷ್ಟಿಯಲ್ಲಿ ಒಂದಕ್ಕೊಂದು ಸಂಬಂಧವಿರದ ಎರಡು ವಸ್ತುಗಳು ಒಂದು ಸಾರ್ಥಕ್ಯದ, ಅಮೃತತ್ವದ ರಸಕ್ಕೆ ಕಾರಣವಾಗುವವೋ ಅದನ್ನು ಯಾರೂ ಅರಿಯರು. ಲಿಂಗ ಸಂಬಂಧವೂ ಹಾಗೆ ಬಯಲಿಂದ ಬಂದು ಬಯಲಾಗುವ, ಲಿಂಗದಿಂದ ಉದಯಿಸಿ ಮತ್ತೆ ಲಿಂಗದಲಿ ಐಕ್ಯವಾಗುವ ಮಧ್ಯದ ಕಾಯ ಜೀವದ ಹೊಲಿಗೆಯ ಭೇದ ಅರಿತವರೆ ಲಿಂಗಸಂಬಂಧಿಗಳು ಶರಣರು ಎಂಬ ಉದಾತ್ತವಾದ ಚಿಂತನೆ ಇಲ್ಲಿ ವ್ಯಕ್ತಪಡಿಸುವರು.

ಹಾಗೆಯೆ ಪ್ರಸ್ತುತ ಈ ವಚನವೂ ಕೂಡ ವೈರುಧ್ಯಗಳ ನಡುವೆ ಒಂದು ಸಂಬಂಧವನ್ನು ಕಲ್ಪಿಸುತ್ತದೆ. ಎಣ್ಣೆ ಹಾಗೂ ಬತ್ತಿಗಳು ಎರಡೂ ಬೇರೆಯೇ ಆದ ವಸ್ತುಗಳು ಒಂದಕ್ಕೊಂದು ಸಂಬಂಧವಿಲ್ಲ ಆದರೂ ಅವು ಬೆಳಗಿ ಪ್ರಭೆಯನ್ನು ಸೃಷ್ಟಿಸುವವು. ಪುಣ್ಯ ಪಾಪಗಳು ಎರಡೂ ಈ ಒಡಲಿನ ಅವಿಭಾಜ್ಯ ಅಂಗಗಳು. ಸದ್ವಿಚಾರ, ಸದ್ಗುಣ, ಸನ್ನಡತೆ, ಸತ್ಸಂಗ, ಸದಾಚಾರ ಪುಣ್ಯವನ್ನು ಪೋಷಿಸಿದರೆ ಅದು ಪುಣ್ಯದೊಡಲು. ಇದಕ್ಕೆ ವೈರುಧ್ಯವಾಗಿದ್ದಲ್ಲಿ ಪಾಪಕ್ಕೆಡೆ ಮಾಡುವದು. ಈ ಎರಡೂ ಒಂದೇ ಒಡಲಿನ ಎರಡು ವಿಭಿನ್ನ ಮುಖಗಳು. ಅತಿರೇಕವೂ ಇರದ ಅತ್ಯಲ್ಪವೂ ಅಲ್ಲದಂತೆ ಒಂದು ಸಮವಾದ ಹದವಾದ ಮಿತಿಯಲ್ಲಿ ಒಡಲಿನ ಇಚ್ಛೆಗಳನ್ನು ಈಡೇರಿಸಿಕೊಳ್ಳಬೇಕು. ಇದು ವೈಚಾರಿಕ, ವೈಜ್ಞಾನಿಕ ಭಾವ. ಆಧ್ಯಾತ್ಮಿಕ  ಸಾಧನೆಗಾಗಿ  ಈ ಭೌತಿಕ ದೇಹವನ್ನು ರಕ್ಷಿಸಿಕೊಳ್ಳುವದೂ ಕೂಡ ಅಷ್ಟೇ ಮುಖ್ಯವಾಗಿದೆ. ಈ ದೇಹವು ಒಂದಿಲ್ಲಾ ಒಂದು ದಿನ ಮತ್ತೆ ಪಂಚಭೂತಗಳಲ್ಲಿ ಲೀನವಾಗುವದು ಎಂಬ ಅರಿವಿನ ಎಚ್ಚರ ಸಾಧಕನಿಗೆ ಇರಬೇಕು. ಈ ಕಾಯ ನಶಿಸುವುದರೊಳಗೆ, ಅಂತ್ಯವಾಗುವದರೊಳಗೆ ಬದುಕಿನ ಸಾರ್ಥಕತೆಯನ್ನು ಕಾಣಬೇಕು. ಭಕ್ತಿ ಎಂಬ ಸಾಧನದಿಂದ ಈ ಭವಸಾಗರವನ್ನು ದಾಟಬೇಕು. ಅಂದಾಗ ಆತ ದೇವರಾಗಲು ಸಾಧ್ಯ. ಅಂದರೆ ಶರಣನಾಗಲು ಸಾಧ್ಯ. ಅರಿದೆಡೆ ಶರಣ ಮರೆದಡೆ ಮಾನವ ಎಂಬಂತೆ ಅರಿವಿನಲ್ಲಿ ಎಚ್ಚರವಾಗಿರುವ ಶರಣನೇ ದೇವರು. “ನಾ ದೇವನಲ್ಲದೆ ನೀ ದೇವನೆ” ಎಂದು ಪ್ರಶ್ನಿಸುವ ಅಲ್ಲಮರ ವಚನವೂ ಇಲ್ಲಿ ಪೂರಕವಾಗಿದೆ. ಅಲ್ಲಮರ ಈ ವಚನಧ್ವನಿ ಹೀಗಿರಬಹುದು ಎಂಬುದು ನನ್ನ ಅರಿವಿನ ಮಿತಿಯಲ್ಲಿ ಹೇಳಲೆತ್ನಿಸಿರುವೆ.

ಶ್ರೀಮತಿ. ಸುನಿತಾ ಮೂರಶಿಳ್ಳಿ,
“ಶಿವಶಕ್ತಿ” ಮಂಜುನಾಥಪುರ,
ಮಾಳಮಡ್ಡಿ, ಧಾರವಾಡ.
ಫೋ ನಂ. 99864 37474

  • ಓದುಗರು ತಮ್ಮ ಅನಿಸಿಕೆಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನಸಾಹಿತ್ಯ ಮಂದಾರ ಫೌಂಡೇಶನ್‌ (ರಿ) ದ ಸಂಚಾಲಕರನ್ನು ಸಂಪರ್ಕಿಸಬೇಕಾದ:
    • ಮೋಬೈಲ್ ನಂ. 97413 57132
    • e-Mail ID: info@vachanamandara.in / admin@vachanamandara.in

Leave a Reply